ಜೋರ್ಡಾನಿನ ಆಧುನಿಕ ಸಮಾಜ

ರಹಮತ್ ತರೀಕೆರೆ

ಜೋರ್ಡಾನ್ ಒಂದು ಅರಬ್ದೇಶ. ಜೋರ್ದಾನ್ ನದಿಯಿಂದ ಅದಕ್ಕೀ ಹೆಸರು ಬಂದಿದೆ. ರೋಮನ್ ಸಾಮ್ರಾಜ್ಯದ ಸ್ಮಾರಕ ಮತ್ತು ಕ್ರೈಸ್ತ ಯಾತ್ರಾಸ್ಥಳಗಳನ್ನು ತನ್ನ ಪೂರ್ವಜರ ಹೆಮ್ಮೆಯಾಗಿ, ಜಗತ್ತಿನ ನಾಗರಿಕತೆಗೆ ಸೇರಿದ ಸ್ಮಾರಕಗಳಾಗಿ ಜೋರ್ಡಾನಿಗರು ಕಾಪಿಟ್ಟುಕೊಂಡಿದ್ದಾರೆ. ಬಮಿಯಾನದ ಬುದ್ಧನನ್ನು ಕೆಡವಿದ ತಾಲಿಬಾನಿಗಳು ಇಲ್ಲಿಲ್ಲ!

ಜೋರ್ಡಾನಿನ ಅಮ್ಮಾನ್ ನಗರದಲ್ಲಿ ಇಳಿದಾಗ ಭೀಕರ ಮಳೆ ಸುರಿಯುತ್ತಿತ್ತು. ಇರಿಸಲು ಮತ್ತು ಗಾಳಿಗೆ ಏರ್ಪೋರ್ಟಿನ ಗಾಜುಬಾಗಿಲು ಲಡಲಡಿಸುತ್ತಿದ್ದವು. ಲಾಂಜಿನಲ್ಲಿದ್ದವರು ಗಾಬರಿಯಿಂದ ನಿಲ್ದಾಣದ ಒಳಭಾಗಕ್ಕೆ ಸರಿಯಬೇಕಾಯಿತು. ಮರುಭೂಮಿ ನಾಡುಗಳಲ್ಲಿ ಮಳೆ ಸುರಿವ ದೃಶ್ಯ ನನ್ನ ಪಾಲಿಗೆ ಹೊಸತು. ವಿವಿಧ ದೇಶಗಳ ಭೌಗೋಳಿಕತೆ ಹವಾಮಾನಗಳ ಬಗ್ಗೆ ಅರಿವಿಲ್ಲದ ನಾವು, ಮರುಭೂಮಿಗಳನ್ನು ರಣಬಿಸಿಲೊಳಗೆ ಸದಾ ಸುಡುವ ಕಾವಲಿಗಳು ಎಂದು ಗ್ರಹಿಸಿರುತ್ತೇವೆ. ಆದರೆ ಅಲ್ಲೂ ಮಳೆ ಬರುತ್ತದೆ. ಹೊಳೆ ಹರಿಯುತ್ತವೆ. ಹಿಮಸುರಿವ ಪರ್ವತಗಳಿರುತ್ತವೆ. ಜಂಗಲುಗಳಿರುತ್ತವೆ. ನಾವು ಎಷ್ಟೊ ದೇಶ ಧರ್ಮ ಸಂಸ್ಕøತಿ ಭಾಷೆಗಳ ಬಗ್ಗೆ, ಯಾರೊ ತಮ್ಮುದ್ದೇಶಕ್ಕೆ ಕಟ್ಟಿದ ಚಿತ್ರಗಳನ್ನು ಕುರುಡಾಗಿ ನಂಬಿ, ಮಮಕಾರಪೂರ್ವಗ್ರಹ ಬೆಳೆಸಿಕೊಂಡಿರುತ್ತೇವೆ. ಚಿತ್ರಗಳಿಗೆ ಕಾರಣವಾದ ಶಿಕ್ಷಣವ್ಯವಸ್ಥೆ, ಪುಸ್ತಕ, ಸಿದ್ಧಾಂತ, ಮಾಧ್ಯಮಗಳ ಹಿಂದಿನ ದೃಷ್ಟಿಕೋನ ಮತ್ತು ಹಿತಾಸಕ್ತಿಗಳನ್ನು ಪ್ರಶ್ನಿಸಿರುವುದಿಲ್ಲ. ಏಶ್ಯಾ ಮತ್ತು ಆಫ್ರಿಕಾಗಳ ಬಗ್ಗೆ ಯೂರೋಪು ತನ್ನ ವಸಾಹತುಶಾಹಿ ಆಳಿಕೆಗಾಗಿ, ಈಗಿನ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಉದ್ದೇಶದಿಂದ ಕಟ್ಟಿಕೊಟ್ಟಿರುವ ನಿರೂಪಣೆಗಳೆಲ್ಲ ಅರೆಸತ್ಯದವು. ಆಯಾ ಸಮಾಜ, ದೇಶ, ಸಂಸ್ಕತಿಗಳನ್ನು ನೇರ ಮುಖಾಮುಖಿ ಮಾಡದತನಕ ಕಟ್ಟಿಕೊಂಡ ಪೂರ್ವಗ್ರಹಗಳು ಭಗ್ನಗೊಳ್ಳುವುದಿಲ್ಲ.

ವಿಮಾನ ನಿಲ್ದಾಣದಿಂದ ನಮ್ಮ ವಸತಿಯಿದ್ದ `ಹೋಟೆಲ್ ಪ್ಯಾಲಸ್ಟೈನ್ಗೆ ಮಹಾನಗರದೊಳಗೆ ಒಂದು ತಾಸಿನ ಪಯಣ. ಸಣ್ಣಸಣ್ಣ ಬೆಟ್ಟಗಳ ಇಳಿಜಾರುಗಳಲ್ಲಿ ನಸುಹಳದಿ ಕಲ್ಲಿನಲ್ಲಿ ಕಟ್ಟಿದ ಮನೆಗಳು; ಮನೆಗಳ ನಡುವೆ ಆಲಿವ್ಗಿಡ; ಸೌದಿ ಅರೇಬಿಯಾದಲ್ಲಿ ಮಹಿಳೆಯರು ಕಾರು ಚಲಾವಣೆಯ ಪರವಾನಗಿಗೆ ಹೋರಾಟ ಮಾಡುತ್ತಿದ್ದರೆ, ಇಲ್ಲಿನ ರಸ್ತೆಗಳಲ್ಲಿದ್ದ ಬಹುತೇಕ ಕಾರುಗಳಲ್ಲಿ ಮಹಿಳೆಯರೇ ಚಾಲಕಿಯರಾಗಿದ್ದರು. ಸೌದಿಯಲ್ಲಿ ನೀರಿಗಿಂತ ತೈಲ ಅಗ್ಗ. ಆದರೆ ಎಲ್ಲರಿಗೂ ವಾಹನ ಚಲಾಯಿಸುವ ಸ್ವಾತಂತ್ರ್ಯವಿಲ್ಲಸಮುದ್ರದ ನಂಟಸ್ತನ ಉಪ್ಪಿಗೆ ಬಡತನ ಎಂಬಂತೆ. ಜೋರ್ಡಾನಿಗರು ಜಗತ್ತಿನಲ್ಲೇ ಅತ್ಯುತ್ತಮ ತಲಾದಾಯ ಹೊಂದಿದ್ದಾರೆ. ಜೋರ್ಡಾನಿನಲ್ಲಿ ಆಧುನಿಕೀಕರಣಗೊಂಡ ಸಮಾಜವಿರುವುದು ಕಂಡಿತು.

ಜೋರ್ಡಾನ್ ಒಂದು ಅರಬ್ದೇಶ. ಜೋರ್ದಾನ್ ನದಿಯಿಂದ ಅದಕ್ಕೀ ಹೆಸರು ಬಂದಿದೆ. ಆಫ್ರಿಕಾ ಬಿಟ್ಟರೆ ಭೂಮಿಯ ಮೇಲಿನ ಅತಿಪ್ರಾಚೀನ ಮನುಷ್ಯನ ಕುರುಹುಗಳು ಇಲ್ಲಿ ದೊರಕಿವೆ. ಕ್ರಿ.ಪೂ. 13ನೇ ಶತಮಾನದಷ್ಟು ಹಿಂದೆಯೇ ನಾಗರಿಕತೆ ರೂಪುಗೊಂಡ ನೆಲವಿದು. ಗ್ರೀಕರು ರೋಮನ್ನರು ಅರಬ್ಬರು ಪರ್ಶಿಯನ್ನರು ಒತ್ತೋಮನರು ಬ್ರಿಟಿಷರು ಇದನ್ನಾಳಿದರು. ಪ್ರಾಚೀನ ವ್ಯಾಪಾರಿ ಕಾರುವಾನುಗಳು ಜೆರುಸಲೇಂ, ಡೆಮಾಸ್ಕಸ್, ಇಸ್ತಾನ್ಬುಲ್, ಮೆಕ್ಕಾ, ಬಗ್ದಾದ್ ನಗರಗಳಿಗೆ ಹೋಗುವ ಹಾದಿ ಜೋರ್ಡಾನಿನ ಮೂಲಕ ಹಾಯುತ್ತದೆ. ಕಾರುವಾನುಗಳ ಸುಂಕವೇ ಜೋರ್ಡಾನ್ ದೊರೆಗಳ ಪ್ರಮುಖ ವರಮಾನವಾಗಿತ್ತು. ಈಗ ಸನ್ನಿವೇಶ ಬದಲಾಗಿದೆ.

ನಮ್ಮ ಹಂಪಿಯಂತೆ ತೋರುವ ಪ್ರಾಚೀನ ರೋಮನ್ ನಗರಗಳ ಅವಶೇಷಗಳು ಜೋರ್ಡಾನಿನಲ್ಲಿದ್ದು, ಅವು ಪ್ರವಾಸಿ ತಾಣವಾಗಿ ಖ್ಯಾತವಾಗಿವೆ. ಪ್ರಾಚೀನ ಪಾಳು ನಗರವಾದ ಗೆರೆಸಾದಲ್ಲಿ ನೀಲಾಗಸದ ಭಿತ್ತಿಯಲ್ಲಿ ನಿಂಬೆಬಣ್ಣದ ಶಿಲಾಸ್ಥಂಭಗಳಿದ್ದು, ಅವುಗಳ ತುದಿಗೆ ಲವಂಗದ ಮೊಗ್ಗು ಅರಳಿದಂತಿರುವ ಅಲಂಕಾರವು ಅದ್ಭುತವಾಗಿತ್ತು. ಇಲ್ಲಿ ಕ್ರೈಸ್ತಧರ್ಮದ ಅನೇಕ ಪವಿತ್ರ ಸ್ಥಾನಗಳಿವೆ. ಪ್ರವಾದಿ ಮೂಸೆಸ್ ಏರಿದ ಪವಿತ್ರ ಮೌಂಟ್ ನೆಬೊ ಅವುಗಳಲ್ಲಿ ಒಂದು. ಪರ್ವತದ ತುದಿಯಿಂದ ಜೋರ್ದಾನ್ ನದಿಬಯಲು, ಪ್ಯಾಲಸ್ತೇನ್ ಹಾಗೂ ಮೃತಸಮುದ್ರದ ದೃಶ್ಯ ಕಾಣುವುದು. ಹಸಿರಿನ ಹೆಸರಿಲ್ಲದ ಬೆಟ್ಟಗಳು ವಿಚಿತ್ರ ನಿರಾಶೆ ಕವಿಸುತ್ತವೆ. ಆದರೆ ಜಗತ್ತಿನ ಅತಿಪ್ರಾಚೀನ ನಾಗರಿಕತೆಯ ಕುರುಹುಗಳು ಇಂತಹ ಮರುಭೂಮಿಗಳಲ್ಲೇ ಹುಟ್ಟಿತು.

ರೋಮನ್ ಸಾಮ್ರಾಜ್ಯದ ಸ್ಮಾರಕ ಮತ್ತು ಕ್ರೈಸ್ತ ಯಾತ್ರಾಸ್ಥಳಗಳನ್ನು ತನ್ನ ಪೂರ್ವಜರ ಹೆಮ್ಮೆಯಾಗಿ, ಜಗತ್ತಿನ ನಾಗರಿಕತೆಗೆ ಸೇರಿದ ಸ್ಮಾರಕಗಳಾಗಿ ಜೋರ್ಡಾನಿಗರು ಕಾಪಿಟ್ಟುಕೊಂಡಿದ್ದಾರೆ. ಬಮಿಯಾನದ ಬುದ್ಧನನ್ನು ಕೆಡವಿದ ತಾಲಿಬಾನಿಗಳು ಇಲ್ಲಿಲ್ಲ. ನಾವು ಹೋದದಿನ ಕೆಲವು ಶಿಕ್ಷಕಿಯರು ಮಕ್ಕಳನ್ನು ಕರೆದುಕೊಂಡು ಗೆರೆಸಾಗೆ ಪ್ರವಾಸ ಬಂದಿದ್ದರು. ಯಾರೂ ಬುರುಕಾ ಹಾಕಿರಲಿಲ್ಲ. ಗುಲಾಬಿಯ ಪಕಳೆಗಳಂತಿದ್ದ ಮಕ್ಕಳ ಜತೆ ಮಾತಾಡಿದೆವು. ಎಲ್ಲ ದೇಶದ ಮಕ್ಕಳಂತೆ ಅವು ಧರ್ಮ ಜಾತಿ ದೇಶಗಳ ಸರಹದ್ದಿಲ್ಲದೆ ಮುಕ್ತವಾಗಿದ್ದವು.

ಹೋಟೆಲಿನಲ್ಲಿ ನಮಗೆ ಜೋರ್ಡಾನಿ ಮದುವೆ ನೋಡಲು ಸಿಕ್ಕಿತು. ಕ್ರೈಸ್ತವಧುವಿನಿಂತೆ ಮದುಮಗಳು ಶುಭ್ರಶ್ವೇತ ಪಾರದರ್ಶಕ ಉಡುಪಿನಲ್ಲಿದ್ದಳು. ಮದುಮಗ ಪಾಶ್ಚಿಮಾತ್ಯರಂತೆ ತ್ರಿಪೀಸ್ ಸೂಟ್ ಹಾಕಿದ್ದನು. ಸಹಜವಾಗಿಯೇ ಸುಂದರರಾಗಿದ್ದ ಮದುಮಕ್ಕಳನ್ನು ಮದುವೆಯ ಸಂಭ್ರಮವು ಮತ್ತಷ್ಟು ಚೆಂದವಾಗಿಸಿತ್ತು. ಅವರನ್ನು ಕರೆತರುವಾಗ ತರುಣರು ಸಾಲುಗಟ್ಟಿ ಕುಣಿದರು. ಟರ್ಕಿಯ ಮದುವೆಗಳಲ್ಲೂ ಒಬ್ಬ ದಫ್ ಬಾರಿಸುತ್ತ ಹಾಡು ಹೇಳುತ್ತಿದ್ದರೆ, ಉಳಿದ ತರುಣರು ಸರಪಳಿಯಂತೆ ಒಬ್ಬರ ಹಿಂದೆ ಒಬ್ಬರು ನಿಂತು ಹೆಜ್ಜೆಹಾಕುವ ರಿವಾಜಿದೆ. ಜಗತ್ತಿನ ಬೇರೆಬೇರೆ ಸಮಾಜಗಳಿಗೆ ಹೋದ ಇಸ್ಲಾಂ ಧಾರ್ಮಿಕ ಏಕರೂಪತೆ ಉಳಿಸಿಕೊಂಡಿತು. ಸಾಂಸ್ಕತಿಕವಾಗಿ ಮದುವೆ ಹಬ್ಬ ಉತ್ಸವಗಳ ವಿಷಯದಲ್ಲಿ ಸ್ಥಳೀಯ ಪರಂಪರೆಯನ್ನು ಉಳಿಸಿಕೊಂಡಿತು. ನಾವು ಮಲೇಶಿಯಾದಲ್ಲಿದ್ದಾಗ ಪ್ರಧಾನ ಮಂತ್ರಿಯು ಭತ್ತವನ್ನು ಕೊಯ್ಯುವ ತೆನೆಗಳಿಗೆ ಹಾಲೆರೆವ ಆಚರಣೆ ನಡೆಯುತ್ತಿತ್ತು. ಜಾಗತಿಕ ಹರಡಿಕೆಯುಳ್ಳ ಧರ್ಮಗಳಿಗೆ ವರ್ಣರಂಜಿತ ಸಾಂಸ್ಕತಿಕ ಬಹುತ್ವದ ಆಯಾಮವನ್ನು ಕಟ್ಟಿಕೊಟ್ಟಿರುವುದೇ ಸ್ಥಳೀಯತೆ. ಜೋರ್ಡಾನ್ ತನ್ನದೇ ಪ್ರಾಚೀನ ಪರಂಪರೆ ಉಳಿಸಿಕೊಂಡೂ ಆಧುನಿಕವಾಗಿದೆ.

ಜೋರ್ಡಾನ್ ಪ್ರಜಾಪ್ರಭುತ್ವ ಪದ್ಧತಿಯನ್ನೂ ರಾಜಪ್ರಭುತ್ವವನ್ನೂ ಒಟ್ಟಿಗೆ ಇಟ್ಟುಕೊಂಡಿದೆಇಂಗ್ಲೆಂಡಿನಂತೆ, ಭೂತಾನಿನಂತೆ. ಇಲ್ಲಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯಗಳ ಮೇಲೆ ಪ್ರಭುತ್ವದ ಹತೋಟಿ ಹೆಚ್ಚಿದೆ. ಇಸ್ಲಾಮನ್ನೂ ದೊರೆಯನ್ನೂ ಅಪಮಾನಿಸುವುದು ದೇಶದ್ರೋಹವಾಗಿದ್ದು, ಅದಕ್ಕೆ ಕಠಿಣ ಶಿಕ್ಷೆಗಳಿವೆ ಎಂದು ಕೇಳಿದ್ದೆ. ಹೀಗಿದ್ದೂ ರಾಜಪ್ರಭುತ್ವವಿರುವ ಜೋರ್ಡಾನಿನ ಜನ, ಪ್ರಜಾಸತ್ತೆಯಿರುವ ಪಾಕಿಸ್ತಾನಭಾರತಗಳಿಗೆ ಹೋಲಿಸಿದರೆ, ಧರ್ಮವನ್ನು ತಲೆ ಮೇಲೆ ಹೊತ್ತು ಕುಬ್ಜರಾಗಿಲ್ಲ ಅನಿಸಿತು. ಯೂರೋಪಿಗೆ ಸಮೀಪವಿರುವ ಟರ್ಕಿಜೋರ್ಡಾನುಗಳು ಪಾಶ್ಚಿಮಾತ್ಯ ಆಧುನಿಕತೆಗೆ ತೆರೆದುಕೊಂಡಿವೆ. ಟರ್ಕಿಯಲ್ಲಿ ಕಮಾಲ್ಪಾಶಾ ಅಧ್ಯಕ್ಷನಾಗಿದ್ದಾಗ, ಸಮಾಜದ ಆಧುನೀಕರಣವು ಒಂದು ಕ್ರಾಂತಿಯಂತೆ ನಡೆಯಿತು. ಆದರೆ ಆಧುನಿಕ ಸೂಟುಧರಿಸುವ ಈಗಿರುವ ಅಧ್ಯಕ್ಷ ಎರ್ದೊಗಾನ್ ಟರ್ಕಿಯನ್ನು ಸಾಂಪ್ರದಾಯಿಕವಾಗಿಸುವಂತೆ ತೋರುತ್ತಾರೆ.

ಒಮ್ಮೆ 50 ವರ್ಷಗಳ ಹಿಂದಿನ ಪಾಕಿಸ್ತಾನದ ಸಂಗೀತಗೋಷ್ಠಿ ಕವಿಗೋಷ್ಠಿ ಕ್ರಿಕೆಟ್ಪಂದ್ಯಗಳ ಚಿತ್ರಗಳನ್ನು ನೋಡುತ್ತಿದ್ದೆ. ಆಧುನಿಕ ವೇಷಧರಿಸಿದ ಬಿಚ್ಚುಗೂದಲಿನ ಹುಡುಗಿಯರು ಮಹಿಳೆಯರು ಅಲ್ಲಿ ಮುಕ್ತವಾಗಿ ಭಾಗವಹಿಸಿದ್ದರು. ಮುಸ್ಲಿಂ ರಾಷ್ಟ್ರಗಳಲ್ಲಿ ವಿಷಯದಲ್ಲೊಂದು ವೈರುಧ್ಯವಿದೆ. ಮುಕ್ತಸ್ವಾತಂತ್ರ್ಯವು ಸಾಮಾನ್ಯವಾಗಿ ಮೇಲ್ವರ್ಗದವರ ಸೌಲಭ್ಯವಾಗಿದೆ. ಮಧ್ಯ ಏಶಿಯಾದ ಅನೇಕ ದೇಶಗಳ ರಾಜಮನೆತದವರು ಪಾಶ್ಚಾತ್ಯ ದೇಶಗಳಲ್ಲಿ ಮನೆ ಮಾಡಿಕೊಂಡಿದ್ದಾರೆ. ತಮ್ಮ ಮಕ್ಕಳು ಅಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂದು ಇಚ್ಛಿಸುತ್ತಾರೆ. ಅಲ್ಲಿನ ವಿಲಾಸ ಜೀವನಕ್ಕೂ ತೆರೆದುಕೊಂಡಿದ್ದಾರೆ. ಆದರೆ ತಮ್ಮ ಸಮಾಜದ ಬಡವರು ಧರ್ಮಪಾಲನೆ ಮಾಡಬೇಕು, ಸಂಸ್ಕøತಿ ಪರಂಪರೆ ರಕ್ಷಿಸಬೇಕೆಂದು ಬಯಸುತ್ತಾರೆ. ಈಗ ಅಮೆರಿಕೆ ಯೂರೋಪಿನಲ್ಲಿರುವ ಬಹುತೇಕ ಅನಿವಾಸಿ ಭಾರತೀಯರ ಮನೋಧರ್ಮದಲ್ಲೂ ವೈರುಧ್ಯವಿದೆ.

ಪ್ರಜಾಪ್ರಭುತ್ವ ಸರ್ವಾಧಿಕಾರಿಗಳನ್ನೂ ಹುಟ್ಟಿಸಬಹುದು ಎನ್ನಲು ಪಾಕಿಸ್ತಾನ ಭಾರತ ಮ್ಯಾನ್ಮಾರ್ ಬೇಕಾದಷ್ಟು ನಿದರ್ಶನಗಳಿವೆ. ಇವಕ್ಕೆ ಹೋಲಿಸಿದರೆ, ಭೂತಾನ ಮಲೇಶಿಯಾ ಜೋರ್ಡಾನುಗಳ ರಾಜಪ್ರಭುತ್ವಗಳು ಹೆಚ್ಚು ಪ್ರಗತಿಶೀಲವಾಗಿವೆ. ಅಮ್ಮಾನಿನ ಹೋಟೆಲ್ ಅಂಗಡಿ ವಾಹನಗಳಲ್ಲ್ಲಿ ರಾಜ ಪರಿವಾರದ ಫೋಟೊಗಳಿದ್ದವು. ರಾಣಿ ಬುರುಖಾ ಧರಿಸಿರಲಿಲ್ಲ. ಮೊಣಕಾಲು ಕಾಣುವ ತುಂಡುಡುಗೆಯಿದ್ದ ಚಿತ್ರಗಳೂ ಇದ್ದವು. ಜೋರ್ಡಾನಿನಲ್ಲಿ ಮಹಿಳೆಯರಿಗೆ ಮತಾಧಿಕಾರವಿದೆ. ಆದರೂ ಇಲ್ಲಿನ ಕೌಟುಂಬಿಕ ಕಾನೂನುಗಳಲ್ಲಿ ಲಿಂಗತಾರತಮ್ಯ ಇದೆಯಂತೆ. ಇದೊಂದು ಏಶಿಯನ್ ಸಮಾಜಗಳ ಶಾಪ. ಎಂತಲೇ ಬಂಡವಾಳಶಾಹಿ ಆರ್ಥಿಕತೆಯಿರುವ ಯೂರೋಪುಅಮೆರಿಕಾಗಳು, ಆಫ್ರಿಕಾ ಮತ್ತು ಪೌರ್ವಾತ್ಯ ದೇಶಗಳ ಪಾಲಿಗ ಶೋಷಕವಾಗಿದ್ದರೂ, ನಾಗರಿಕ ಹಕ್ಕುಸ್ವಾತಂತ್ರ್ಯದ ವಿಷಯದಲ್ಲಿ ಮಾದರಿಯಾಗಿ ಏಶಿಯನರಿಗೆ ಕಾಡುತ್ತವೆ.

ವಸಾಹತುಶಾಹಿ ಆಕ್ರಮಣಗಳಿಂದ ಏಶಿಯಾಆಫ್ರಿಕಾಗಳನ್ನು ಗಾಯಗೊಳಿಸಿರುವ ಪಶ್ಚಿಮವು, ತನ್ನ ಆಧುನಿಕತೆ ವೈಚಾರಿಕತೆ ವಿಜ್ಞಾನ ತಂತ್ರಜ್ಞಾನಗಳಿಂದ ಸಾಂಪ್ರದಾಯಿಕ ಸಮಾಜಗಳಲ್ಲಿ ಬಿಡುಗಡೆಯ ಹರಿಕಾರನೂ ಆಗಿದೆಗೃಹಬಂಧನದಲ್ಲಿರುವ ಹುಡುಗಿಯನ್ನು ಕದಿಯಲು ಬಂದ ಕಳ್ಳ ಬಿಡುಗಡೆ ಮಾಡಿದಂತೆ. ಆಫಘಾನಿಸ್ತಾನವು ರಶ್ಯದ ಕಪಿಮುಷ್ಠಿಯಲ್ಲಿದ್ದಾಗ ಮುಕ್ತ ಸಮಾಜವಾಗಿತ್ತು. ಟೆಹರಾನ್ ಕಾಬೂಲುಗಳು ಒಂದು ಕಾಲಕ್ಕೆ ಮಹಿಳೆಯರ ಫ್ಯಾಶನ್ನಿನ ವೇದಿಕೆಗಳೂ ಆಗಿದ್ದವು. ರಶ್ಯವು ಹಿಂದೆಗೆದ ಬಳಿಕ, ಸ್ವಾತಂತ್ರ್ಯದ ಜತೆಗೆ ತಾಲಿಬಾನಿಗಳ ಹಿಂಸಾತ್ಮಕ ಸಾಂಪ್ರದಾಯಿಕತೆಯ ರಾಷ್ಟ್ರೀಯತೆ ಬಂದು ಕೂತಿತು. ಬೆಂಕಿಯಿಂದ ತಪ್ಪಿಕೊಂಡರೆ ಬಾಣಲೆಗೆ. ಈಗ ಅಮೆರಿಕ ಹೊರಗೆ ಹೋದೊಡನೆ ತಾಲಿಬಾನ್ ಮಹಿಳೆಯರನ್ನು ದಮನಿಸಲು ತನ್ನ ಹಲ್ಲುಗುರು ಹೊರತೆಗೆಯುತ್ತಿದೆ. ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಆಕ್ರಮಣಗಳಿಗೆ ಈಡಾದ ಆಫ್ರಿಕಾಏಶಿಯಾದ ದೇಶಗಳು, ಆಧುನಿಕತೆಗೆ ಪ್ರವೇಶಿಸುವಲ್ಲಿ ಮತ್ತು ಸಹಜ ಅಭಿವೃದ್ಧಿಯನ್ನು ಪಡೆಯುವಲ್ಲಿ ತಕ್ಕ ಅವಕಾಶವನ್ನೇ ಚರಿತ್ರೆಯಲ್ಲಿ ಪಡೆಯಲಿಲ್ಲ.

ಒಂದು ಸಂಜೆ ಅಮ್ಮಾನ್ ಶಹರಿನ ತಿರುಗಾಟಕ್ಕೆ ಹೋದೆವು. ಜನಸಂದಣಿಯಿಲ್ಲದ ರಸ್ತೆಗಳು. ಒಂದು ಕಾಫಿ ಅಂಗಡಿ ಕಂಡಿತು. ಕಾಫಿ ಸೀಮೆಯವನಾದ ನನಗಿದು ಸೆಳೆಯಿತು. ಜೋರ್ಡಾನಿನಲ್ಲಿ ಮದ್ಯಪಾನ ನಿಷೇಧವಿರುವುದರಿಂದ, ಸಿಗರೇಟು ಕಾಫಿ ವ್ಯಸನಗಳು ಹೆಚ್ಚುಗೊಂಡಿರಬಹುದು. ಅಂಗಡಿಯಲ್ಲಿ ಒಬ್ಬ ತರುಣನಿದ್ದನು. ನಮ್ಮಂತೇ ಮುಖ, ಬಣ್ಣ. ಅಂಗಡಿಯಲ್ಲಿ ತೆರೆದ ಚೀಲಗಳಲ್ಲಿ ನಾನಾ ದೇಶಗಳ ಕಾಫಿಬೀಜಗಳಿದ್ದವು. ನಾವು ಬ್ರೆಜಿಲ್ ಕಾಫಿ ಕೇಳಿದೆವು. ಆತ ಹುರಿದು ಪುಡಿಮಾಡಿ ಬಿಸಿನೀರಿನ ಯಂತ್ರದಲ್ಲಿ ಹಾಕಿ ಕೊಟ್ಟನು. ಕೊಟರೆಯಂತೆ ಗಟ್ಟಿಯಾದ ಘಸಿ. ಹಾಲು ಸಕ್ಕರೆಯಿಲ್ಲದ ಕಾಫಿ ಕುಡಿಯುವುದಾಗಲಿಲ್ಲ. ಅರ್ಧಂಬರ್ಧ ಕುಡಿದು ಬಿಟ್ಟುಬಿಟ್ಟೆವು. ಆತ ನಮ್ಮಿಂದ ಹಣ ತೆಗೆದುಕೊಳ್ಳಲಿಲ್ಲ. ನಾವು ಪ್ಯಾಲಸ್ಟೇನ್ ಪ್ರವಾಸಕ್ಕೆ ಬಂದವರೆಂದು ಅವನಿಗೆ ಅಭಿಮಾನ.

ಜೋರ್ಡಾನಿಗರಿಗೆ ಪ್ಯಾಲಸ್ಟೇನ್ ಬಗ್ಗೆ ಭಾವನಾತ್ಮಕ ಸಂಬಂಧವಿದೆ. ಒಂದು ಕಾಲಕ್ಕೆ ಇಡೀ ಇಸ್ರೇಲ್ಪ್ಯಾಲಸ್ಟೇನ್ ಒಳಗೊಂಡ ಇಡೀ ಭೂಪ್ರದೇಶವು ಜೋರ್ಡಾನಿನ ಆಳಿಕೆಗೆ ಒಳಪಟ್ಟಿತ್ತು. ಇಸ್ರೇಲ್ಹಮಾಸ್ ಸಂಘರ್ಷದಲ್ಲಿ ನೆಲೆ ಕಳೆದುಕೊಂಡ ಪ್ಯಾಲಸ್ಟೇನಿಯರು, ಜೋರ್ದಾನ್ ಹೊಳೆಯನ್ನು ದಾಟಿ ಜೋರ್ಡಾನಿಗೆ ಪ್ರವಾಹದಂತೆ ಬರತೊಡಗಿದರು. ನಿರಾಶ್ರಿತರನ್ನು ಜೋರ್ಡಾನ್ ಕೈಚಾಚಿ ಸ್ವೀಕರಿಸಿತು. ಜೋರ್ಡಾನಿಗರು ನೆರೆದೇಶವನ್ನು ಇಸ್ರೇಲ್ ಎಂದು ಕರೆಯುವುದಿಲ್ಲ. ಪ್ಯಾಲಸ್ತೇನ್ ಎಂದೇ ಕರೆಯುವರು. ನಮ್ಮ ಮಾರ್ಗದರ್ಶಕ ಮುಸ್ತಫಾ ಜೋರ್ಡಾನ್ಇಸ್ರೇಲ್ ಗಡಿಯಲ್ಲಿ ನಮ್ಮನ್ನು ಬೀಳ್ಕೊಡುವಾಗ `ನಿಮ್ಮ ಪ್ಯಾಲಸ್ತೈನ್ ಪ್ರವಾಸ ಸುಖಕರವಾಗಲಿಎಂದು ಹಾರೈಸಿದ. ಇಸ್ರೇಲಿನ ಅತಿಕ್ರಮಣ ವಿರೋಧಿಸುವುದು, ಪಾಲೆಸ್ತೇನಿನ ನ್ಯಾಯಬದ್ಧ ಹೋರಾಟ ಬೆಂಬಲಿಸುವುದು ತಮ್ಮ ಪವಿತ್ರ ಕರ್ತವ್ಯವೆಂದು ಜೋರ್ಡಾನ್ ಭಾವಿಸಿದೆ.

ಇಸ್ಲಾಮಿಕ್ ದೇಶಗಳಿಗೆ ಹೋದಾಗ, ಅಲ್ಲಿನ ಸಮಾಜವು ಭಾರತೀಯ ಮುಸ್ಲಿಂ ಸಮಾಜಕ್ಕಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನಾನು ಗಮನಿಸುತ್ತೇನೆ. ಸೌದಿ ಅರೇಬಿಯಾಕ್ಕೆ ಹೋಗಿ ಬಂದವರು ಧಾರ್ಮಿಕ ಸಾಮಾಜಿಕ ಕಟ್ಟುಪಾಡುಗಳ ವಿಷಯದಲ್ಲಿ ಭಾರತೀಯ ಮುಸ್ಲಿಮರು ಹೆಚ್ಚಿನ ಸ್ವತಂತ್ರರು ಎಂದು ಹೇಳಿರುವುದನ್ನು ಕೇಳಿರುವೆ. ಮುಸ್ಲಿಮರಿಗೆ ಪವಿತ್ರ ಯಾತ್ರಾಸ್ಥಳಗಳಿರುವ ದೇಶ ಸಾಮಾಜಿಕ ಮೌಲ್ಯಗಳ ವಿಷಯದಲ್ಲಿ ನಾಗರಿಕ ಹಕ್ಕುಸ್ವಾತಂತ್ರ್ಯದ ವಿಷಯದಲ್ಲಿ ಬಹಳ ಹಿಂದುಳಿದಿದೆ. ಅದರಲ್ಲೂ ಮಹಿಳೆಯರ ಹಕ್ಕಿನ ವಿಷಯದಲ್ಲಿ ಪುರುಷಪ್ರಧಾನವಾಗಿದೆ ಎಂದು ಓದಿರುವೆ. ಇದಕ್ಕೆ ಹೋಲಿಸಿದರೆ, ದುಬೈ ಜೋರ್ಡಾನ್ ಬಹರೈನ್ ಮಲೇಶಿಯಾ ಇಂಡೋನೇಶಿಯಾಗಳು ಹೆಚ್ಚು ಪ್ರಗತಿಪರ ಸಮಾಜಗಳನ್ನು ಹೊಂದಿವೆ.

ಮಲೇಶಿಯಾದಲ್ಲಿ ಮಹಿಳೆಯರು ಆಫಘನ್ ಮಹಿಳೆಯರಂತೆ ಬುರುಖಾ ಹಾಕದೆ, ತಲೆಗೂದಲು ಮುಚ್ಚುವ ಕರವಸ್ತ್ರ ಧರಿಸಿ, ಸಾರ್ವಜನಿಕ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಇರುವುದನ್ನು ಗಮನಿಸಬಹುದು. ಇವಕ್ಕೆ ಹೋಲಿಸಿದರೆ, ಭಾರತದ ಮುಸ್ಲಿಂ ಸಮಾಜವು ಅಭಿವೃದ್ಧಿ ಆಲೋಚನಕ್ರಮ ಹಾಗೂ ಆಧುನಿಕತೆ ವಿಷಯಗಳಲ್ಲಿ ಹಿಂದಿದೆ ಅನಿಸುತ್ತದೆ. ಭಾರತದ ಸಂಪ್ರದಾಯವಾದಿಗಳನ್ನು ಸೌದಿ ಅರೇಬಿಯಾ ಬದಲಿಗೆ, ಆಧುನಿಕ ಸಮಾಜಗಳಿರುವ ಜೋರ್ಡಾನ್, ಟರ್ಕಿ, ಮಲೇಶಿಯಾಗಳಿಗೆ ಪ್ರವಾಸ ಕರೆದೊಯ್ಯಬೇಕು ಎಂದೂ ಅನಿಸುತ್ತದೆ. ಯಾಕೆಂದರೆ, ಪೂರ್ವಗ್ರಹಗಳು ನೇರ ಮುಖಾಬಿಲೆ ಆಗದ ಹೊರತು ತೊಲಗುವುದಿಲ್ಲ.

Leave a Reply

Your email address will not be published.