ಜೋ ಬೈಡೆನ್ ಮೊದಲ ೧೦೦ ಕನಸಿನ ದಿನಗಳು

ಅಧಿಕಾರಕ್ಕೆ ಬಂದ ಯಾವುದೇ ಪ್ರಧಾನಿ ಅಥವಾ ಅಧ್ಯಕ್ಷನ ಮೊದಲ 100 ದಿನಗಳು ಅತ್ಯಂತ ನಿರೀಕ್ಷೆಯ ದಿನಗಳಾಗಿರುತ್ತವೆ. ಈ ದಿನಗಳಲ್ಲಿ ಮಾಡಿದ ಶುರುವಾತು ಮುಂದಿನ ನಾಲ್ಕೈದು ವರ್ಷಗಳ ಆಡಳಿತಕ್ಕೆ ಮುನ್ಸೂಚನೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‍ರವರ ಮೊದಲ 100 ದಿನಗಳು ಅತ್ಯಂತ ಯಶಸ್ವಿ, ಕ್ರಾಂತಿಕಾರಕ ಹಾಗೂ ಆಶಾದಾಯಕರ ಆಗಿವೆ. ಹಿಂದಿನ ಅಧ್ಯಕ್ಷನ ಹೋಲಿಕೆಯಲ್ಲಿ ಈ ಮೊದಲ 100 ದಿನಗಳು ಬಿರುಬೇಸಿಗೆಯ ನಂತರ ತಂಪೆರೆದ ಮೊದಲ ಮಳೆಯಂತೆ ಅಮೆರಿಕದ ಜನರ ಬದುಕಿನಲ್ಲಿ ನೆಮ್ಮದಿ ಮತ್ತು ಭರವಸೆಯ ಬೆಳಕನ್ನು ಮೂಡಿಸಿವೆ.

ಚುನಾವಣೆಯ ಮುನ್ನ ‘ಬೋರಿಂಗ್ ಬೈಡೆನ್’ ಎಂಬ ಅಡ್ಡಹೆಸರು ಪಡೆದಿದ್ದ ಜೋ ಬೈಡೆನ್ ಮೊದಲ 100 ದಿನಗಳಲ್ಲಿ ಯಾವುದೇ ಅಬ್ಬರ, ಪ್ರಚಾರದ ಗೀಳು ಅಥವಾ ವಿದೇಶ ಪ್ರವಾಸ ಮಾಡದೆ ತಣ್ಣಗೆ ತಮ್ಮ ವೈಟ್ ಹೌಸ್‍ನಲ್ಲಿ ಕುಳಿತು ಅಮೆರಿಕದ ಆರ್ಥಿಕತೆಯನ್ನು ಮತ್ತೊಮ್ಮೆ ಕಟ್ಟುವಲ್ಲಿಗೆ ಗಮನ ಹರಿಸಿದ್ದಾರೆ. ಅಬ್ಬರವಿಲ್ಲದಿದ್ದರೂ ಬೈಡೆನ್‍ರವರು ತೆಗೆದುಕೊಂಡ ನಿರ್ಣಯಗಳು ಕ್ರಾಂತಿಕಾರಕ ಹಾಗೂ ದಿಟ್ಟ ಹೆಜ್ಜೆಗಳಾಗಿವೆ. ಇವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಹೆಸರಿಸಲಾಗಿದೆ.

  • 2021 ರ ಜನವರಿಯ ಹೊತ್ತಿಗಾಗಲೇ ಕೋವಿಡ್ ಲಸಿಕೆಗಳು ಲಭ್ಯವಿದ್ದರೂ ಇವುಗಳ ಉಪಯೋಗದ ಬಗ್ಗೆ ಯಾವುದೇ ಖಚಿತ ಯೋಜನೆಯಿರಲಿಲ್ಲ. ಬೈಡೆನ್‍ರವರು 100 ದಿನಗಳಲ್ಲಿ 100 ಮಿಲಿಯನ್ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಕೈತೆಗೆದುಕೊಂಡು ಗುರಿಯನ್ನು ಮೀರಿದ ಸಾಧನೆ ಮಾಡಿದ್ದಾರೆ. ಹೀಗೆಯೇ ಮುಂದುವರೆದರೆ ಮುಂದಿನ ಜುಲೈ ಅಂತ್ಯದವರೆಗೆ ಲಸಿಕೆ ಪಡೆಯಬಯಸುವ ಎಲ್ಲ ಅಮೆರಿಕನ್ನರಿಗೆ ಎರಡು ಬಾರಿ ಲಸಿಕೆ ನೀಡುವುದು ಮುಗಿದು 2021 ರ ಆಗಸ್ಟ್ ಸಮಯಕ್ಕೆ ಇಡೀ ಅಮೆರಿಕ ಕೋವಿಡ್ ಸಾಂಕ್ರಾಮಿಕವನ್ನು ಹಿಮ್ಮೆಟ್ಟಿಸಿದಂತಾಗುತ್ತದೆ. ಮುಂದಿನ ಸೆಪ್ಟೆಂಬರ್‍ನಿಂದಲೇ ಅಮೆರಿಕದ ಶಾಲೆ-ಕಾಲೇಜುಗಳೆಲ್ಲವೂ ಸಂಪೂರ್ಣವಾಗಿ ಮುಖಾಮುಖಿ ತರಗತಿ ನಡೆಸುವುದಾಗಿ ಹೇಳಿಕೊಂಡಿವೆ.
  • ಕೋವಿಡ್‍ನಿಂದಾಗಿ ನಿಸ್ತೇಜವಾಗಿದ್ದ ಅಮೆರಿಕದ ಆರ್ಥಿಕತೆಗೆ ಬೈಡೆನ್ ಮತ್ತೊಮ್ಮೆ ಸಹಾಯಧನದ ಲಸಿಕೆ ನೀಡಿದ್ದಾರೆ. ಅಮೆರಿಕದ ಎಲ್ಲರ ಖಾತೆಗೆ ಮತ್ತೊಮ್ಮೆ ಡಾಲರ್ 1,500ಗಳ ಸಹಾಯಧನ ನೀಡಿ ಆರ್ಥಿಕತೆಗೆ ಬೇಡಿಕೆಯ ಬೂಸ್ಟರ್ ಡೋಸ್ ನೀಡಿದ್ದಾರೆ.
  • ಇದೆಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದ ರಸ್ತೆ-ರೈಲು-ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಡಾಲರ್9 ಟ್ರಿಲಿಯನ್ ಮೊತ್ತದ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ. ಇದಕ್ಕೆ ಹೊರತಾಗಿ ಡಾಲರ್ 4 ಟ್ರಿಲಿಯನ್ ಹೂಡಿಕೆಯನ್ನು ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸಲು ವ್ಯಯಿಸಲಿದ್ದಾರೆ. ಮೂಲಭೂತ ಸೌಕರ್ಯಗಳಿಗಾಗಿ ಆಗಲಿರುವ ಈ ಖರ್ಚು ಮತ್ತು ಇದರ ಮೂಲಕ ಆಗಬಹುದಾದ ಸರಪಳಿ ಬೇಡಿಕೆ ನಿರ್ಮಾಣಕ್ಕೆ ಕಾರಣವಾಗಲಿದ್ದಾರೆ.
  • ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರು-ಪ್ರವೇಶವನ್ನು ಘೋಷಿಸಿದ್ದಲ್ಲದೆ 2030 ರ ಹೊತ್ತಿಗೆ ಅಮೆರಿಕ 2005 ರಲ್ಲಿ ಮಾಡುತ್ತಿದ್ದ ಗಾಳಿ ಮಾಲಿನ್ಯವನ್ನು ಶೇಕಡಾ 50 ರಷ್ಟು ಇಳಿಸುವುದಾಗಿ ಹೇಳಿದ್ದಾರೆ. ಇದು ಅಮೆರಿಕದಲ್ಲಿ ಸೌರ ವಿದ್ಯುತ್ ಸೇರಿದಂತೆ ಹಲವಾರು ಹಸಿರು ಇಂಧನ ಬಳಕೆಯ ಯೋಜನೆಗಳಿಗೆ ನಾಂದಿಯಾಗಲಿದ್ದು ಆರ್ಥಿಕತೆಯ ಚೇತರಿಕೆಗೆ ಇನ್ನಷ್ಟು ಸಹಕಾರಿಯಾಗಲಿದೆ.
  • ಅಮೆರಿಕದ ಬೇನೆಯಾಗಿರುವ ಗನ್ ಸಂಸ್ಕøತಿಗೆ ಹಲವು ಕಡಿವಾಣ ಘೋಷಿಸಿ ಹಿಂಸಾತ್ಮಕ ಘಟನೆಗಳನ್ನು ತಡೆಯುವಲ್ಲಿಗೆ ಮುಂದಾಗಿದ್ದಾರೆ. ಜಾಗತಿಕವಾಗಿ ಕುಂಠಿತವಾಗಿದ್ದ ಅಮೆರಿಕದ ಮುಂದಾಳತ್ವವನ್ನು ಮತ್ತೊಮ್ಮೆ ಹೆಗಲೇರಿಸುವುದಾಗಿ ಮಿತ್ರ ರಾಷ್ಟ್ರಗಳಿಗೆ ಬಲವಾದ ಸಂದೇಶ ನೀಡಿದ್ದಾರೆ. ಚೀನಾ ಮತ್ತು ರಷ್ಯಾಗಳ ಆಕ್ರಾಮಿಕ ಧೋರಣೆಗಳನ್ನು ಅತ್ಯಂತ ಕಟುವಾಗಿ ಟೀಕಿಸಿದ್ದಾರೆ. ನೇಟೋ ರಾಷ್ಟ್ರಗಳಿಗೆ ಅಭಯ ನೀಡಿದ್ದಾರೆ ಮತ್ತು ಭಾರತ-ಜಪಾನ್-ಆಸ್ಟ್ರೇಲಿಯಾ ನಡುವಿನ ಚತುಷ್ಪದಿ ಒಕ್ಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ.

ಬೈಡೆನ್‍ರವರ ಶೈಲಿ ನೀರಸ ಅಥವಾ ನಿದ್ರೆ ಬರಿಸುವಂತಹದ್ದು ಎಂಬ ಟೀಕೆಯಿದೆ. ಆದರೆ ತಣ್ಣಗೆ ಶ್ವೇತಭವನದಲ್ಲಿ ಕುಳಿತು ಬೈಡೆನ್ ಅಮೆರಿಕದ ನಾಯಕತ್ವ ಶೈಲಿಯನ್ನು ಜಾಗೃತಗೊಳಿಸಿದ್ದಾರೆ. ಎಲ್ಲಾ ವಿಷಯಗಳಲ್ಲೂ ಪರಿಣತರ ಸಮಿತಿಗಳನ್ನು ರಚಿಸಿ ಹಳಿತಪ್ಪಿದ ಗುರಿಗಳನ್ನು ತಹಬದಿಗೆ ತಂದಿದ್ದಾರೆ. ತಮ್ಮ ಮುಕ್ತ, ಪಾರದರ್ಶಿಕ ಹಾಗೂ ಕ್ರಿಯಾಶೀಲ ವೈಖರಿಗೆ ಅಪಾರ ಪ್ರಶಂಸೆಗೆ ಗುರಿಯಾಗುತ್ತಿದ್ದಾರೆ.

ಆಫ್ಘಾನಿಸ್ತಾನದಿಂದ ಅಮೆರಿಕ ಸೈನ್ಯದ ಹಿಂದೆಗೆತ

2001 ಸೆಪ್ಟೆಂಬರ್ 11 ರಂದು ಅಲ್‍ಖೈದಾ ಉಗ್ರರಿಂದ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಅಮೆರಿಕದ ಸೈನಿಕರು ಆಫ್ಘಾನಿಸ್ತಾನಕ್ಕೆ ಕಾಲಿಡಬೇಕಾಗಿ ಬಂದಿತ್ತು. ಕಳೆದ ಇಪ್ಪತ್ತು ವರ್ಷಗಳಿಂದ ಅಪಾರ ಮಿಲಿಟರಿ ಯಶಸ್ಸು ಸಾಧಿಸಿದ್ದರೂ ಅಮೆರಿಕಕ್ಕೆ ತಾಲಿಬಾನ್ ಸೈನ್ಯವನ್ನು ಸಂಪೂರ್ಣ ನಿರ್ನಾಮ ಮಾಡಲಾಗಿಲ್ಲ. ಈ ತಾಲಿಬಾನ್ ಸೈನಿಕರು ಕಾಬೂಲ್‍ನ ಸರ್ಕಾರಕ್ಕೆ ಮಗ್ಗುಲ ಮುಳ್ಳಾಗಿಯೇ ಉಳಿದು ಬಂದಿದ್ದಾರೆ. ಅಮೆರಿಕದ ಸೈನ್ಯ-ವಾಯುಸೈನ್ಯ-ಡ್ರೋನ್ ಪಡೆಗಳ ನೆರವಿಲ್ಲದೆ ಕಾಬೂಲ್ ಸರ್ಕಾರ ಮತ್ತು ಆಫ್ಘನ್ ಸೈನ್ಯ ತಾಲಿಬಾನನ್ನು ಎದುರಿಸಲಾಗದು ಎಂಬ ಪರಿಸ್ಥಿತಿಯೇ ಮುಂದುವರೆದಿದೆ.

ಅತೀವ ದೇಸಿ ಒತ್ತಡದ ಹಿನ್ನೆಲೆಯಲ್ಲಿ ಹಿಂದಿನ ಅಮೆರಿಕದ ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರು 2021 ರ ಮೇ ತಿಂಗಳಿನಲ್ಲಿ ಅಮೆರಿಕದ ಸೈನಿಕರನ್ನು ಸಂಪೂರ್ಣವಾಗಿ ಹಿಂತೆಗೆಯುವುದಾಗಿ ಒಪ್ಪಿದ್ದರು. ಇದು ತಾಲಿಬಾನ್ ಜೊತೆಗೆ ಕತಾರ್‍ನ ದೋಹಾದಲ್ಲಿ ನಡೆಯುತ್ತಿರುವ ಶಾಂತಿಸಂಧಾನದಲ್ಲಿ ಅಮೆರಿಕ ನೀಡಿದ ಆಶ್ವಾಸನೆಗಳಲ್ಲಿ ಒಂದಾಗಿತ್ತು. ಆದರೆ ಬೈಡೆನ್ ಅಧ್ಯಕ್ಷರಾದ ಮೇಲೆ ಈ ಸೈನಿಕ ಹಿಂದೆಗೆತ ಮರು-ವಿಶ್ಲೇಷಣೆಗೆ ಒಳಪಡುವುದೆಂದು ಎಣಿಸಲಾಗಿತ್ತು. ಈಗ ಅಧ್ಯಕ್ಷ ಬೈಡೆನ್‍ರವರು ಮತ್ತೊಮ್ಮೆ 2021 ರ ಸೆಪ್ಟೆಂಬರ್ 11 ರೊಳಗೆ ಅಮೆರಿಕದ ಸೈನ್ಯವನ್ನು ಸಂಪೂರ್ಣವಾಗಿ ಹಿಂದೆಗೆಯಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಇದರಿಂದ ಈ ವರ್ಷವೇ ಆಫ್ಘಾನಿಸ್ತಾನದ ರಾಜಕೀಯದಲ್ಲಿ ಬದಲಾವಣೆ ಆಗುವ ಸಾಧ್ಯತೆಯ ತಲ್ಲಣ ಶುರುವಾಗಿದೆ.

ಸೆಪ್ಟೆಂಬರ್ 11 ರ ನಂತರವೂ ಅಮೆರಿಕದ ಸೈನ್ಯದ ‘ಟ್ಯಾಕ್ಟಿಕಲ್’ ಬೆಂಬಲ ಆಫ್ಘನ್ ಸೇನೆಗೆ ಮುಂದುವರೆಯಬಹುದು. ಆದರೆ ಅಮೆರಿಕದ ಸೈನಿಕರು ಕಾಳಗದ ಮುಂಚೂಣಿಯಲ್ಲಿಲ್ಲ ಎಂಬುದೇ ತಾಲಿಬಾನರ ಮನೋಬಲ ಹೆಚ್ಚಿಸಬಲ್ಲುದು. ಅದೇ ರೀತಿಯಲ್ಲಿ ಒಳಜಗಳಕ್ಕೆ ಹೆಸರಾದ ಆಫ್ಘನ್ ಮುಖಂಡರು ತಾಲಿಬಾನ್ ಮತಾಂಧರನ್ನು ಎದುರಿಸುವ ಮನೋಬಲ ತೋರದೆ ಶರಣಾಗಬಹುದು. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಮೆರಿಕ, ಐರೋಪ್ಯ ರಾಷ್ಟ್ರಗಳು ಮತ್ತು ಭಾರತ ಆಫ್ಘಾನಿಸ್ತಾನದಲ್ಲಿ ಮಾಡಿದ ಹೂಡಿಕೆ ಮತ್ತು ಸಾಂಸ್ಥಿಕ ಕೊಡುಗೆಗಳು ತಾಲಿಬಾನರ ವಶವಾಗಬಹುದು.

ಅದೇನಿದ್ದರೂ ಅಮೆರಿಕವನ್ನು ದೂರದ ಆಫ್ಘಾನಿಸ್ತಾನದ ಯುದ್ಧದಲ್ಲಿ ಶಾಶ್ವತವಾಗಿ ಭಾಗವಹಿಸು ಎಂದು ಹೇಳಲಾಗದು. ಯಾರು ಗೆಲ್ಲುತ್ತಾರೆಯೋ ಸೋಲುತ್ತರೆಯೋ ಎಂಬುದು ನಂತರದ ಮಾತು. ಆದರೆ ಯುದ್ಧವೇನಿದ್ದರೂ ಆಫ್ಘನ್ನರ ಮಧ್ಯೆಯೇ ಆಗಬೇಕು. ಈ ಯುದ್ಧದಲ್ಲಿ ಇರಾನ್, ಪಾಕಿಸ್ತಾನ ಮತ್ತು ರಷ್ಯಾಗಳು ಭಾಗವಹಿಸುವ ಸಾಧ್ಯತೆ ಇದ್ದೇ ಇದೆ. ಆದಷ್ಟು ಬೇಗ ಭಾರತೀಯರು ಆಫ್ಘನ್ ನೆಲದಿಂದ ಕಾಲುಕೀಳದ ಹೊರತು ಬೇರೆ ದಾರಿ ತೋರುತ್ತಿಲ್ಲ.

ಭಾರತಬಾಂಗ್ಲಾದೇಶದ ಸಂಬಂಧದ ಮರುವ್ಯಾಖ್ಯಾನ

1971ರಲ್ಲಿ ಅಂದಿನ ಪಾಕಿಸ್ತಾನದಿಂದ ವಿಭಜನೆಗೊಂಡು ಸ್ವತಂತ್ರ ಬಾಂಗ್ಲಾದೇಶವಾಗಿ ರೂಪುಗೊಂಡ ಸಮಯದಿಂದಲೂ ಭಾರತ ದೇಶ ತನ್ನ ನೆರೆಯ ರಾಷ್ಟ್ರದೊಂದಿಗೆ ‘ದೊಡ್ಡಣ್ಣ’ನ ಪಾತ್ರವನ್ನೇ ವಹಿಸಿಕೊಂಡು ಬಂದಿದೆ. ಇದೀಗ 2021 ರಲ್ಲಿ ಬಾಂಗ್ಲಾದೇಶದ ವಿಮೋಚನೆಯ ಸುವರ್ಣ ಮಹೋತ್ಸವ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಸಂದರ್ಭದಲ್ಲಿ ಬಾಂಗ್ಲಾಗೆ ಭೇಟಿ ನೀಡಿ ಎಲ್ಲ ನೆರವಿನ ಘೋಷಣೆಯನ್ನು ಮಾಡಿ ಬಂದಿದ್ದಾರೆ.

ಆದರೆ ಬಾಂಗ್ಲಾದೇಶಕ್ಕೆ ಭಾರತದ ನೆರವಿನ ಅಗತ್ಯವಿದೆಯೇ..? ಹಿಂದೆ ಬಡದೇಶವಾಗಿದ್ದ ಬಾಂಗ್ಲಾ ಈಗ ತಲಾ ಆದಾಯದ ಹೋಲಿಕೆಯಲ್ಲಿ ಭಾರತವನ್ನು ಹಿಂದಿಕ್ಕಿದೆ. ಭಾರತದ ಡಾಲರ್ 1,800 ತಲಾ ಆದಾಯದ ಹೋಲಿಕೆಯಲ್ಲಿ ಬಾಂಗ್ಲಾದೇಶದ ತಲಾ ಆದಾಯ ಡಾಲರ್ 1,900 ರಷ್ಟಿದೆ. ಕೈಗಾರೀಕರಣ ಮತ್ತು ಆಧುನಿಕೀರಣಗಳಲ್ಲಿಯೂ ಬಾಂಗ್ಲಾದೇಶ ಪಕ್ಕದ ಭಾರತದ ರಾಜ್ಯಗಳಿಗೆ ಹೋಲಿಕೆಯಲ್ಲಿ ಮುಂದಿದೆ. ಕೋವಿಡ್ ನಿಯಂತ್ರಣ ಹಾಗೂ ಜನಸಾಮಾನ್ಯರ ಶಿಕ್ಷಣ-ಆರೋಗ್ಯದ ಸೂಚಿಯಲ್ಲಿಯೂ ಬಾಂಗ್ಲಾದೇಶ ಭಾರತವನ್ನು ಹಿಂದಿಕ್ಕಿದಂತೆ ತೋರುತ್ತಿದೆ. ಬಾಂಗ್ಲಾದೇಶದ ಗಾರ್ಮೆಂಟ್ ಉದ್ಯಮ ಭಾರತದ ಹತ್ತುಪಟ್ಟು ಹೆಚ್ಚಿದೆ.

ಇದ್ಯಾವುದೂ ಕೆಟ್ಟ ಸುದ್ದಿಯಲ್ಲ. ನೆರೆಯ ರಾಷ್ಟ್ರ ಆರ್ಥಿಕವಾಗಿ ಬೆಳದಷ್ಟೂ ಅಲ್ಲಿಂದ ಬರುವ ವಲಸಿಗರ ಸಂಖ್ಯೆ ಕಡಿಮೆಯಾಗಬಹುದು. ನೆರೆಯ ರಾಷ್ಟ್ರ ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಯೂ ಆಗಬಹುದು. ಇದುವರೆಗೆ ನಾವು ನೆರೆಯ ರಾಷ್ಟ್ರಗಳನ್ನು ನೋಡುವ ರೀತಿನೀತಿಯೇ ಬದಲಾಗಬೇಕಾಗಬಹುದು.

ಆಸ್ಕರ್ ಗೆದ್ದ ಚೀನಾ ಮೂಲದ ಮಹಿಳೆ ಕ್ಲೋಯಿ ಝಾವೋ

೨೦೨೦ನೇ ಇಸವಿಯಲ್ಲಿ ಪ್ರದರ್ಶನಗೊಂಡ ಚಲನಚಿತ್ರಗಳಿಗೆ ನೀಡಲಾಗುವ ಆಸ್ಕರ್ ಪ್ರಶಸ್ತಿ ಘೋಷಣೆಯಾಗಿದ್ದು ‘ನೋಮ್ಯಾಡ್‌ಲ್ಯಾಂಡ್’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅಂಥೋನಿ ಹಾಪ್‌ಕಿನ್ಸ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೆ ನೋಮ್ಯಾಡ್‌ಲ್ಯಾಂಡಿನ ಮುಖ್ಯ ನಟಿ ಪ್ರಾನ್ಸಿಸ್ ಮ್ಯಾಕ್‌ಡರ್ಮಾಂಡ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇದೇ ನೋಮ್ಯಾಡ್‌ಲ್ಯಾಂಡ್ ಚಿತ್ರದ ನಿರ್ದೇಶನಕ್ಕೆ ಚೀನಾ ಮೂಲದ ಕ್ಲೋಯಿ ಝಾವೋ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕ್ಲೋಯಿ ಝಾವೋರ ಯಶಸ್ಸನ್ನು ಚೀನಾದ ಮಾಧ್ಯಮಗಳು ಸಂಪೂರ್ಣವಾಗಿ ಬಹಿಷ್ಕರಿಸಿವೆ. ಅಮೆರಿಕ ಮತ್ತು ಪ್ರಜಾಪ್ರಭುತ್ವದ ಪರವಾಗಿರುವ ಝಾವೋ ಎಲ್ಲಿ ಚೀನಾದಲ್ಲಿನ ಮಾನವ ಹಕ್ಕುಗಳ ದಮನಕಾರಿ ನೀತಿಯನ್ನು ಟೀಕಿಸುವರೋ ಎಂದು ಚೀನಾ ಕಮ್ಯುನಿಸ್ಟ್ ಹಿಡಿತದ ಮಾಧ್ಯಮಗಳು ಮೊದಲೇ ಝಾವೋರವರನ್ನು ಕಪ್ಪು ಪಟ್ಟಿಗೆ ಸೇರಿಸಿವೆ.

Leave a Reply

Your email address will not be published.