ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ

-ಕಮಲಾಕರ ಕಡವೆ

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರಗಳು ವ್ಯಾಪಕವಾಗಿ ಚರ್ಚಿತ ವಿಷಯಗಳು. ಪ್ರಶ್ನೆಗಳಿವೆ, ಉತ್ತರಗಳೂ ಇವೆ, ಆದರೆ ಸಮಸ್ಯೆ ಇದ್ದ ಹಾಗೇ ಇದೆ. ಇದರ ಅರ್ಥವೇನೆಂದರೆ, ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿಗಿಂತ, ಪರಿಹರಿಸದೇ ಜೀವಂತ ಇರಿಸುವ ಇಚ್ಛಾಶಕ್ತಿ ಪ್ರಬಲವಾಗಿದೆ.

ನಮ್ಮ ಸಮಾಜದಲ್ಲಿ -ಅಂದರೆ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತದಲ್ಲಿ ಕೂಡ- ಜ್ಞಾನಸೃಷ್ಟಿಯ ಪ್ರಶ್ನೆಯನ್ನು ಪದೇಪದೆ ಎತ್ತಲಾಗಿದೆ. ಈ ಪ್ರಶ್ನೆ ಉದ್ಭವಿಸಿರುವ ಸಂದರ್ಭ, ಸಾಂಸ್ಥಿಕ ಚೌಕಟ್ಟು, ಮತ್ತು ಪ್ರಶ್ನೆಯ ವಿಸ್ತಾರ ಪ್ರತಿ ಬಾರಿ ವಿಭಿನ್ನವಾಗಿದ್ದರೂ ಮೂಲಭೂತವಾಗಿ ನಮ್ಮ ಸಮಾಜದಲ್ಲಿ ಯಾರು, ಯಾವ ಜ್ಞಾನಸೃಷ್ಟಿಯನ್ನು ಯಾಕೆ ಮತ್ತು ಹೇಗೆ ಮಾಡಬೇಕು ಎಂದು ಮರಳಿಮರಳಿ ಕೇಳಲಾಗುತ್ತಿದೆ. ಅಲ್ಲದೇ ಆಗುತ್ತಿರುವ ಜ್ಞಾನಸೃಷ್ಟಿಯ ಉಪಯುಕ್ತತೆ, ಮೌಲ್ಯದ ಪ್ರಶ್ನೆಯನ್ನು ಸಹ -“ಸಮಾಜಮುಖಿ” ಪ್ರಮುಖವಾಗಿ ಎತ್ತಿರುವ ಪ್ರಶ್ನೆ- ಶಿಕ್ಷಣ ಹಾಗೂ ಇತರ ಕ್ಷೇತ್ರಗಳಲ್ಲಿ ನಿರಂತರವಾಗಿ ಪರಿಶೀಲಿಸಲಾಗಿದೆ.

ಉದಾಹಾರಣೆಗೆ ಸ್ವಾತಂತ್ರ್ಯೋತ್ತರ ಭಾರತದ ಹಲವಾರು ಶಿಕ್ಷಣ ಸಮಿತಿಗಳು, ವಿವಿಧ ಜ್ಞಾನಶಾಖೆಗಳಲ್ಲಿ ನಡೆದಿರುವ ವೃತ್ತಿಸಂಬಂಧಿತ ಚರ್ಚೆಗಳು ಈ ಪ್ರಶ್ನೆಯ ಬಗೆಬಗೆಯ ಮಗ್ಗಲುಗಳನ್ನು ಪರೀಕ್ಷಿಸಿವೆ. ಅದಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿ (ಅಂದರೆ ಸಮೂಹ ಮಾಧ್ಯಮಗಳು, ವಿವಿಧ ವೃತ್ತಿ ಸಂಘಟನೆಗಳ ವೇದಿಕೆಗಳು, ಸಭೆ-ಸಮಾರಂಭಗಳು ಅಥವಾ ಸಾರ್ವಜನಿಕ ಚರ್ಚೆಗಳು) ಇಡಿಯಾಗಿ, ಬಿಡಿಬಿಡಿಯಾಗಿ, ಗಂಭೀರವಾಗಿ, ವ್ಯಂಗ್ಯಾತ್ಮಕವಾಗಿ, ತಾರ್ಕಿಕರೀತ್ಯಾ, ಕಥನಸ್ವರೂಪದಲ್ಲಿ ಜ್ಞಾನಸೃಷ್ಟಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಚರ್ಚಿಸಲಾಗಿದೆ. ಹೀಗೆ ಸತತವಾಗಿ ಮನನದಲ್ಲಿರುವ ಈ ವಿಷಯದ ಕುರಿತು ಸಹಜವಾಗಿಯೇ ಅದೆಷ್ಟೋ ಮೌಲಿಕ ಯೋಚನೆಗಳು, ಯೋಜನೆಗಳು ಲಭ್ಯವಿವೆ. ಅವುಗಳನ್ನು ಮೇಲ್ನೋಟಕ್ಕೆ ಗಮನಿಸಿದರೂ ಯಾರನ್ನೂ ಆಶ್ಚರ್ಯಕ್ಕೀಡು ಮಾಡುವಷ್ಟು ಸೂಚನೆ-ಉಪಾಯಗಳು ಕಾಣಬರುತ್ತವೆ. ಹಾಗಾಗಿ, ಜ್ಞಾನಸೃಷ್ಟಿಗೆ ಸಂಬಂಧಿಸಿದಂತೆ ನಮ್ಮ ಸಮಾಜದಲ್ಲಿ, ದೇಶದಲ್ಲಿ, ಉತ್ತರಗಳ ಕೊರತೆಯಿಲ್ಲ.

ಹಾಗಾದರೆ ಈ ಉತ್ತರಗಳು ಯಾಕೆ ಜ್ಞಾನಸೃಷ್ಟಿಯ ಸಮಸ್ಯೆಯನ್ನು ಬಗೆಹರಿಸಲು ವಿಫಲವಾದವು ಎಂದು ನೋಡಿದಾಗ ಗಮನಕ್ಕೆ ಬರುವುದೇನೆಂದರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಇರುವ ಸವಾಲುಗಳು. ಹಾಗಾಗಿ, ಜ್ಞಾನಸೃಷ್ಟಿಯ ಸಮಸ್ಯೆ ಎನ್ನುವುದು ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವಲ್ಲಿನ ಸಮಸ್ಯೆಯಾಗಿ ಯಾಕೆ ಮಾರ್ಪಾಟಾಗುತ್ತದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದೂ ಸಹ ಹೊಸ ಪ್ರಶ್ನೆಯೇನಲ್ಲ. ಈ ಕುರಿತಾಗಿಯೂ ಸಾಕಷ್ಟು ಜಿಜ್ಞಾಸೆ, ಹೊಳಹು-ಪ್ರಮೇಯಗಳು ಬಂದಿವೆ. ಹಾಗೇ ಹಲವಾರು “ಪಿತೂರಿ ಸಿದ್ಧಾಂತ”ಗಳನ್ನೂ ಸಹ ಸೂಚಿಸಲಾಗಿದೆ -ಇದಕ್ಕೆಲ್ಲ ವಸಾಹತುಶಾಹಿ ಹಿನ್ನೆಲೆ ಕಾರಣ, ನವವಸಾಹತುಶಾಹಿ ಕಾರಣ, ಜಾತಿವ್ಯವಸ್ಥೆ ಕಾರಣ, ಬಂಡವಾಳಶಾಹಿ ಕಾರಣ, ಇವೇ ಮುಂತಾದ ಸಿದ್ಧಾಂತಗಳು. ಇವುಗಳನ್ನು ಪಿತೂರಿ ಸಿದ್ಧಾಂತವೆಂದು ಕರೆಯಲು ಕಾರಣ, ಪ್ರಸ್ತುತ ಸಮಸ್ಯೆಗೆ ಮತ್ತು ಈ ಎಲ್ಲ ವಿದ್ಯಮಾನಗಳಿಗೆ ಸಂಬಂಧ ಇಲ್ಲವೆಂದಲ್ಲ, ಆದರೆ ಅದೊಂದು ಸಮಗ್ರ ವಿವರಣೆಯಲ್ಲ.

ಇಲ್ಲಿಯವರೆಗಿನ ವಿಶ್ಲೇಷಣೆಯ ಮೂಲಕ ನಾನಿಲ್ಲಿ ಸೂಚಿಸಲು ಬಯಸುವುದೇನೆಂದರೆ ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರಗಳು ವ್ಯಾಪಕವಾಗಿ ಚರ್ಚಿತ ವಿಷಯಗಳು. ಪ್ರಶ್ನೆಗಳಿವೆ, ಉತ್ತರಗಳೂ ಇವೆ, ಆದರೆ ಸಮಸ್ಯೆ ಇದ್ದ ಹಾಗೇ ಇದೆ. ಇದರ ಅರ್ಥವೇನೆಂದರೆ, ಸಮಸ್ಯೆಯನ್ನು ಪರಿಹರಿಸುವ ಇಚ್ಛಾಶಕ್ತಿಗಿಂತ, ಪರಿಹರಿಸದೇ ಜೀವಂತ ಇರಿಸುವ ಇಚ್ಛಾಶಕ್ತಿ ಪ್ರಬಲವಾಗಿದೆ. ಜ್ಞಾನಸೃಷ್ಟಿಯಲ್ಲಿರುವ ಐಬುಗಳನ್ನು, ಕೊರತೆಗಳನ್ನು, ನಾವು ಮತ್ತೆ ಮತ್ತೆ ಎತ್ತಿ ಚರ್ಚಿಸುವುದೇ ಸರಿಯಾದ ದಾರಿ ಎನ್ನುವುದರಲ್ಲಿ ಪ್ರಶ್ನೆಯೇ ಇಲ್ಲ.

ಕೆಲವೊಮ್ಮೆ ಸಮಸ್ಯೆಯನ್ನು ನೇರ ನೋಟದ ಬದಲು, ವಿಪರೀತ ಕೋನದ ವಾರೆನೋಟದಲ್ಲಿ ಕಾಣುವುದರಲ್ಲಿಯೂ ಲಾಭವಿದೆ. ಆದ್ದರಿಂದ, ಈ ಪುಟ್ಟ ಟಿಪ್ಪಣಿಯಲ್ಲಿ ಜ್ಞಾನಸೃಷ್ಟಿಯ ಬಹುಮುಖ್ಯ ತಾಣವಾಗಿರುವ ವಿಶ್ವವಿದ್ಯಾಲಯಗಳ ಕುರಿತು ಮೇಲೆ ಹೇಳಿದ ಹಾಗಿನ ಒಂದು ವಾರೆನೋಟ ಹಾಯಿಸುವ ಪ್ರಯತ್ನ ಮಾಡುತ್ತೇನೆ. ಈ ವಾರೆನೋಟ ಬೀರುತ್ತಿರುವುದು ಒಂದು ಅಸಾಧ್ಯ, ಅಮೂರ್ತ, ಆದರ್ಶದ ನೆಲೆಯ ಮೇಲಿಂದ. ಹಾಗೆ ಮಾಡುವುದರ, ಮಾಡಬೇಕಿರುವುದರ ಕುರಿತು ಎರಡು ಮಾತು, ಮುಂದುವರಿಯುವ ಮುನ್ನ.

ಉತ್ತರವಿಲ್ಲದ ಪ್ರಶ್ನೆಗಳಿಗೆ ಸಾಧ್ಯವಿಲ್ಲದ ಉತ್ತರಗಳೇ ಸರಿಯಾದ ಪ್ರತಿಸ್ಪಂದನೆ ಎನ್ನುವುದು ಅಧಿಕಪ್ರಸಂಗತನ. ತೀರಾ ವಾಸ್ತವಿಕವಾಗಿ, ಸಾಧ್ಯತೆಯ ಚೌಕಟ್ಟಿನಲ್ಲಿ ಮಾತ್ರ ಯೋಚಿಸುವುದು ಸಹ ಒಂದು ತರಹದ ಸೀಮಿತತೆ ಮಾತ್ರವಲ್ಲ, ಕೆಲ ಸಂದರ್ಭಗಳಲ್ಲಿ ಹೊಂದಾಣಿಕೆಯ, ಶರಣಾಗತಿಯ, ಮಾರ್ಗವಾಗಿಬಿಡುವುದೂ ಸಾಧ್ಯವಿದೆ. ಸಾಧ್ಯತೆಯ ಬೇಡಿಯನ್ನು ತೊಡದೇ, ಕಾರ್ಯರೂಪಕ್ಕೆ ತರುವುದು ಹೇಗೆ ಎಂದು ಬೇಲಿ ಹಾಕಿಕೊಳ್ಳದೇ, ಚಿಂತನೆಯ ಅಂಚಿನವರೆಗೂ ಹೋಗುವ, ಅಂಚನ್ನು ಅಳಿಸಿ ಅಳಿಸಿ ಹಿಗ್ಗಿಸುವ, ಹಾಗೆ ಹಿಗ್ಗಿದ ನೆಲೆಗಳಿಂದ ಇರುವುದನ್ನು ಮುರಿದು, ಮುರಿದುದನು ಕಟ್ಟಿ, ಕಟ್ಟಿದ್ದನ್ನು ಬಿಚ್ಚಿ, ಬಿಚ್ಚಿದ್ದನ್ನು ಬಿಡಿಸಿ ನೋಡಿ, ಬೇಷರತ್ತಿನ ಶಿಸ್ತಿನಲ್ಲಿ ನಡೆಸುವ ಯೋಚನೆಗಳಿಗೆ ಅದರದೇ ಆದ ಸಾಧ್ಯತೆಗಳಿವೆ. ಇಂತಹ ಬೇಷರತ್ತಿನ ಯೋಜನೆಗಳನ್ನು ಕಲ್ಪಿಸಿ, ಯೋಚನೆಗಳನ್ನು ಸೂಚಿಸಿ, ನೋಡುವ ಚಿಂತನಾ ಪ್ರಯೋಗವಾಗಿ (ಣhoughಣ exಠಿeಡಿimeಟಿಣ) ಈ ವಾರೆನೋಟವಿದೆ. ಇದರ ಅರ್ಥ, ಈ ನೋಟದಿಂದ ಅಥವಾ ಇಂಥ ನೋಟದಿಂದಲೇ ಸಮಸ್ಯೆ ಬಗೆಹರಿಯಬಹುದು ಎಂದಲ್ಲ. ಆದರೂ ಹಾಗೆ ನೋಡಿದಾಗ ಜ್ಞಾನಸೃಷ್ಟಿಯ ಸಾಧ್ಯತೆಗೆ ಬೇರೆಯದೇ ಆಯಾಮ ದೊರಕೀತು ಎನ್ನುವ ಆಶಾವಾದ.  

ಜ್ಞಾನಸೃಷ್ಟಿ ಏಕೆ, ಹೇಗೆ, ಯಾರಿಗೆ, ಯಾರಿಂದ, ಯಾವುದು ಮುಂತಾದ ಎಲ್ಲ ಪ್ರಶ್ನೆಗಳ ಜೊತೆ ಎಲ್ಲಿ ಎನ್ನುವ ಪ್ರಶ್ನೆಯೂ ಇದೆ. ಹಾಗೆ ನೋಡಿದರೆ ಜ್ಞಾನಸೃಷ್ಟಿ ಬಾಳ್ವೆಯ ಅನಿವಾರ್ಯ ಅಂಗ; ಆದ್ದರಿಂದ ಇದನ್ನು ರೇಮಂಡ್ ವಿಲಿಯಮ್ಸನ ಅರ್ಥದಲ್ಲಿ `ಸಾಧಾರಣ’ ಅಥವಾ ಸರ್ವೇಸಾಮಾನ್ಯ (ಎಲ್ಲಕಡೆ ಎಲ್ಲಕಾಲದಲ್ಲೂ ಅಗುತ್ತಲಿರುವುದು) ಎಂದೂ ಹೇಳಬಹುದು. ಆ ಆಯಾಮವನ್ನು ಸದ್ಯ ಬದಿಗಿಟ್ಟು, ಔಪಚಾರಿಕ ಅಥವಾ ವೃತ್ತಿಪರ ಜ್ಞಾನಸೃಷ್ಟಿಯ ಸೂಕ್ತ ತಾಣ ಎಲ್ಲಿ ಎನ್ನುವ ಪ್ರಶ್ನೆಯನ್ನು ಚರ್ಚಿಸೋಣ. ಪ್ರತಿಯೊಂದು ಉದ್ಯೋಗವೂ, ಔದ್ಯೋಗಿಕ ಘಟಕವೂ, ಆಸ್ಪತ್ರೆಗಳು, ಕಂಪನಿಗಳು, ಮಾಧ್ಯಮಗಳು, ಕೃಷಿ, ಅಡುಗೆಮನೆ… ಹೀಗೆ ಜ್ಞಾನಸೃಷ್ಟಿ ಎಲ್ಲೆಡೆ ಆಗುತ್ತಿರುತ್ತದೆ. ಅದೊಂದು ಹಲವಾರು ಸಂಸ್ಥೆಗಳ ಮೂಲಕ ಸಾಧ್ಯವಾಗುವ ಪ್ರಕ್ರಿಯೆಯಾದ್ದರಿಂದ, ಅದು ಯಾವಾಗಲೂ ಆ ಸಂಸ್ಥೆಗಳಿಂದ ಮುತ್ತಲ್ಪಟ್ಟಿರುತ್ತದೆ ಕೂಡ. ಹೀಗೆ ಮುತ್ತಿಗೆ ಹಾಕುವ ಸಂಸ್ಥೆಗಳು ಜ್ಞಾನಸೃಷ್ಟಿಯನ್ನು ನಿರ್ದೇಶಿಸುತ್ತವೆ, ನಿರ್ಬಂಧಿಸುತ್ತವೆ, ಶರತ್ತು ಹಾಕುತ್ತವೆ.

ಹೀಗಿರುವಾಗ, ಜ್ಞಾನಸೃಷ್ಟಿ ಮುಕ್ತವಾಗಿರುವುದಿಲ್ಲ, ಆದ್ದರಿಂದ, ಅದು ಒಂದು ಅರ್ಥದಲ್ಲಿ ಜ್ಞಾನವೂ ಆಗಿರುವುದಿಲ್ಲ. ಅದು ಸಲಕರಣೆಯಷ್ಟೇ ಆಗಿಬಿಡುವ ಅಪಾಯ ನಮ್ಮ ಸುತ್ತಲೂ ಇದೆ ಎಂದು ನಾವು ಬಲ್ಲೆವು. ಜ್ಞಾನಸೃಷ್ಟಿ ಎನ್ನುವುದೊಂದು ಸಾರ್ವಜನಿಕ ಪ್ರಕ್ರಿಯೆ, ವ್ಯಕ್ತಿವಿಶಿಷ್ಟ ಯಾ ಸಂಸ್ಥಾವಿಶಿಷ್ಟ ಪ್ರಕ್ರಿಯೆ ಅಲ್ಲ. ಸರ್ವರಿಗಲ್ಲದಿದ್ದರೆ ಅದು ಜ್ಞಾನವಲ್ಲ. ಹಾಗಾಗಿ, ನಿರ್ದಿಷ್ಟ ಕೈಗಾರಿಕಾ ಘಟಕದ ಬಳಕೆಗಾಗಿ, ಉದಾಹರಣೆಗೆ, ಪ್ರಾಯೋಜಕತ್ವದಡಿ ಸೃಷ್ಟಿಯಾದದ್ದು ಸಲಕರಣೆಯೇ ವಿನಾ ಜ್ಞಾನವಲ್ಲ, ಎನ್ನುವ ಅತಿರೇಕದ ನೆಲೆಯಿಂದ ನಾನು ಯೋಚಿಸಬಯಸುತ್ತೇನೆ. ಹಾಗೆ ಯೋಚಿಸಿದಾಗ, ಒಂದರ್ಥದ ಜ್ಞಾನಸೃಷ್ಟಿ ಎಲ್ಲೆಡೆ ಆಗುತ್ತಿದ್ದರೂ, ಔಪಚಾರಿಕ, ಯೋಜಿತ, ಜ್ಞಾನಸೃಷ್ಟಿ, ಸರ್ವರ ಹಿತಾಸಕ್ತಿಗೆ ಮುಡಿಪಾದ ಸಾಂಸ್ಥಿಕ ತಾಣದಲ್ಲಿಯೇ, ಸಾಂಸ್ಥಿಕ ವ್ಯವಸ್ಥೆಯಲ್ಲಿಯೇ, ಸಾಧ್ಯ. ಆದ್ದರಿಂದ, ವಿಶ್ವವಿದ್ಯಾಲಯಗಳೇ ಸಾರ್ವಜನಿಕ ಹಿತಾಸಕ್ತಿಯ ಜ್ಞಾನಸೃಷ್ಟಿಗೆ ಸೂಕ್ತ ತಾಣ.

ನಮ್ಮ ಸಮಾಜದಲ್ಲಿ ವಿಶ್ವವಿದ್ಯಾಲಯ ಎನ್ನುವುದು ಒಂದು ಆಡಳಿತಾತ್ಮಕ ಘಟಕವೇ ವಿನಾ ಒಂದು ಸಾರ್ವಭೌಮ ಜ್ಞಾನಸೃಷ್ಟಿಯ ತಾಣವಲ್ಲ. ಜ್ಞಾನಸೃಷ್ಟಿ ಇರಲಿ, ಜ್ಞಾನಪ್ರಸರಣದ ವಿಷಯದಲ್ಲಿಯೂ ಇದಕ್ಕೆ ಸಾರ್ವಭೌಮತ್ವವಿಲ್ಲ. ಸಾರ್ವಭೌಮತ್ವದ ಕಲ್ಪನೆಯೇ ಅವಾಸ್ತವಿಕ ಎಂದು ನೀವು ಹೇಳಿದರೆ, ನಿಜವನ್ನೇ ಹೇಳಿರುತ್ತೀರಿ. ಒಂದು ಸಾರ್ವಭೌಮ ದೇಶದ ಘನ ಸರ್ಕಾರವೇ ಸ್ವಾಯತ್ತವಿಲ್ಲದಿರುವಾಗ, ವಿಶ್ವದ ಅತಿ ಬಲಾಢ್ಯ ದೇಶದ ಆಡಳಿತವೂ ಕಾರ್ಪೋರೇಟುಗಳ ಅಂಬೋಣದಂತಿರುವಾಗ, ಕರ್ನಾಟಕದ ವಿಶ್ವವಿದ್ಯಾಲಯಗಳು ಸ್ವಾಯತ್ತ ರೀತಿಯಲ್ಲಿ ಜ್ಞಾನಸೃಷ್ಟಿ ಮಾಡುವ ಸಾಮಥ್ರ್ಯ ಹೊಂದಿರಬೇಕು ಎಂದು ನಾವು ನಿರೀಕ್ಷೆ ಮಾಡಬೇಕು, ಹೌದು ಮಾಡಬೇಕು -ಇಲ್ಲದಿದ್ದರೆ ಏನಿದೆ ಭವಿಷ್ಯದಲ್ಲಿ?

ವಿಶ್ವವಿದ್ಯಾಲಯ ಸಾರ್ವಭೌಮತ್ವ ಹೊಂದಿದ್ದು, ಎಲ್ಲವನ್ನೂ, ಏನೆಲ್ಲವನ್ನೂ, ಎಲ್ಲರನ್ನೂ, ತನ್ನನ್ನೂ ಪ್ರಶ್ನಿಸುವ, ಪ್ರಶ್ನಿಸುತ್ತ ತನ್ನನ್ನು ತಾನು ಮರುರೂಪಿಸಿಕೊಳ್ಳುವ, ತನ್ಮೂಲಕ ಸಮಾಜವನ್ನು ಸತತವಾಗಿ ಮರುರೂಪಿಸಿಸುತ್ತ ಇರುವ ಘಟಕವಾದರೆ ಮಾತ್ರ ಸ್ವಾಯತ್ತ, ಸಾರ್ವಜನಿಕ ಉಪಯುಕ್ತತೆಯ, ಹೊಸ ಜ್ಞಾನಸೃಷ್ಟಿ ಸಾಧ್ಯ. ಹಲವು ವಿಶ್ವವಿದ್ಯಾಲಯಗಳು ಬಂಡವಾಳಶಾಹಿ-ಕೈಗಾರಿಕಾ ಸಂಕೀರ್ಣಗಳು ಬಯಸುವ ಜ್ಞಾನಸೃಷ್ಟಿಯ ತವರಾಗಿರುವುದೂ ಸಹ ಒಳ್ಳೆಯ ಮಾದರಿ ಅಲ್ಲ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಜ್ಞಾನಸೃಷ್ಟಿ ಎನ್ನುವುದು ಪರಾವಲಂಬಿಯಾಗಿಬಿಟ್ಟಿದೆ.

ಈ ಪ್ರಾಯೋಜಿತ ಜ್ಞಾನಸೃಷ್ಟಿಯ ಹಾವಳಿ ಮಾನವಿಕ ಜ್ಞಾನಶಾಖೆಗಳಲ್ಲಿ ಕೊಂಚ ಕಡಿಮೆ ಇರಬಹುದೇನೋ. ತಮ್ಮನ್ನು ಮುತ್ತಿಕೊಂಡಿರುವ ಎಲ್ಲ ಸಾಂಸ್ಥಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸತ್ಯದ ಅಥವಾ ಸಾರ್ವತ್ರಿಕ ಒಳಿತಿನ ಹಾದಿ ಹಿಡಿಯುವುದು ಯಾವ ಸಂಸ್ಥೆಗೂ ಕಷ್ಟಸಾಧ್ಯ. ಅಂದರೆ, ಸಾರ್ವಜನಿಕ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು -ಸಾರ್ವಜನಿಕ ಹಿತಾಸಕ್ತಿಗೆ ಅವು ನಿರ್ದಿಷ್ಟವಾಗಿ ಮುಡಿಪಾಗಿದ್ದರೂ ಸಹ- ಹೀಗೆ ಮುತ್ತುವರಿಯಲ್ಪಟ್ಟಿದ್ದರೆ, ಅವು ಅನಿರ್ಬಂಧಿತವಾಗಿ, ಬೇಷರತ್ತಾಗಿ, ಜ್ಞಾನಸೃಷ್ಟಿ ಮಾಡುವುದು ಅಸಾಧ್ಯ. ಆದ್ದರಿಂದಲೇ, ಈ ವಾರೆನೋಟ ನಿರ್ದಿಷ್ಟವಾಗಿ ಕಲ್ಪನೆಮಾಡಿಕೊಳ್ಳ ಬಯಸುವುದೆಂದರೆ ಅನಿರ್ಬಂಧಿತ ವಿಶ್ವವಿದ್ಯಾಲಯವನ್ನೇ.

ಹೊಸಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ, ಹಳೆಯ ವಿಶ್ವವಿದ್ಯಾಲಯಗಳಲ್ಲಿ ಬದಲಾವಣೆ, ವಿಷಯವಿಶಿಷ್ಟ ವಿಶ್ವವಿದ್ಯಾಲಯಗಳ ಆರಂಭ, ವಿಶ್ವವಿದ್ಯಾಲಯಗಳಿಗೆ ಹೊಸ ರೂಪುರೇಷೆಗಳ ಚರ್ಚೆಗಳು ನಡೆಯುತ್ತಿರುವ ಈ ದಿನಗಳಲ್ಲಿ ವಿಶ್ವವಿದ್ಯಾಲಯವನ್ನು ಒಂದು ಸಂಸ್ಥೆಯಾಗಿ ನೋಡುವ ಬದಲು ಅದನ್ನೊಂದು ಸಂಕಲ್ಪನೆಯಾಗಿ ಕಂಡರೆ ಹೇಗಿರಬಹುದು? ಇಲ್ಲಿ ಇಂತಹ ಒಂದು ಕಲ್ಪನೆಯ ವಿವರಣೆಯ ಪ್ರಯತ್ನವಿದೆ. ಇದು ಕಾರ್ಯಸಾಧುವೆ, ವ್ಯಾವಹಾರಿಕವೇ, ಕಾರ್ಯರೂಪಕ್ಕೆ ತರುವಾಗ ಎದುರಾಗಬಹುದಾದ ಸಮಸ್ಯೆಗಳೇನು ಎನ್ನುವತ್ತ ಗಮನ ಹರಿಸದೇ, ಪ್ರಸ್ತುತ ವ್ಯವಸ್ಥೆಯ ವಿಶ್ಲೇಷಣೆಯನ್ನೂ ಮಾಡದೇ, ಒಂದು ಚಿಂತನಾ ಪ್ರಯೋಗವನ್ನು ಮಾಡಲಾಗಿದೆ. ಈ ಚಿಂತನಾ ಪ್ರಯೋಗವು ವಿಶ್ವವಿದ್ಯಾಲಯವನ್ನು ಒಂದು ಅನಿರ್ಬಂಧಿತ, ಬೇಷರತ್ ಸಾರ್ವಜನಿಕ ಸಂಸ್ಥೆಯಾಗಿ ಕಲ್ಪಿಸಿಕೊಳ್ಳುತ್ತದೆ.

  1. ‘ವಿಶ್ವವಿದ್ಯಾಲಯ’ ಶಬ್ದದಲ್ಲಿ ವಿಶ್ವದ ಇಂಗಿತವೆಂದರೆ ಇದು ವಿಶ್ವದೆಲ್ಲರಿಗೂ ವಿದ್ಯೆಯನ್ನು ಸಿಗಮಾಡುವ ಜಾಗವೆಂದು ಅಥವಾ ವಿಶ್ವದ ಯಾರೇ ಆಗಲೀ ವಿದ್ಯೆಯ ಸೃಷ್ಟಿಯಲ್ಲಿ ಇಲ್ಲಿ ತೊಡಗಿಕೊಳ್ಳಬಹುದು. ಅಂದರೆ ವಿಶ್ವವಿದ್ಯಾಲಯವು ಎಲ್ಲರಿಗೂ ಮುಕ್ತವಿರಬೇಕು. ಆಸಕ್ತ ಮತ್ತು ಸಮರ್ಥ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಿನ್ನೆಲೆಗಳ ನಿರ್ಬಂಧನೆಗಳಿರದೆ ವಿದ್ಯಾರ್ಜನೆ/ವಿದ್ಯೋತ್ಪಾದನೆ ಮಾಡುವಂತಹ ವ್ಯವಸ್ಥೆ ಇದಾಗಬೇಕು. ಅಂದರೆ, ತಾನು ಪ್ರದಾನ ಮಾಡುವ ಪದವಿಗೆ ಬೇಕಾದ ಅರ್ಹತೆಗಳನ್ನು ಅಳೆಯುತ್ತ, ಪದವಿ ಪ್ರದಾನವನ್ನೇ ತನ್ನ ಸಾಂಸ್ಥಿಕ ಗುರಿಯಾಗಿಸಿಕೊಳ್ಳುವ ಬದಲು, ವಿದ್ಯಾರ್ಜನೆಯೇ ಅಥವಾ ವಿದ್ಯೆಯ ಸೃಷ್ಟಿಯೇ ವಿಶ್ವವಿದ್ಯಾಲಯದ ಕೇಂದ್ರವಾಗಬೇಕು.    
  2. ಇಲ್ಲಿ ಸಿಗುವ ಮತ್ತು ಸೃಷ್ಟಿಯಾಗುವ ವಿದ್ಯೆಯು ಯಾವುದೇ ಒಂದು ಅಥವಾ ಕೆಲವೇ ಸೀಮಿತ ಗುಂಪುಗಳ ಹಿತಾಸಕ್ತಿಯ ವಿದ್ಯೆಯಾಗದೇ, ಎಲ್ಲರ ಹಿತಾಸಕ್ತಿಯನ್ನು ಸಮಾನವಾಗಿ ಕಾಣುವ ವಿದ್ಯೆಯನ್ನು ಸಿಗಮಾಡುವ ಜಾಗವೆಂದಾಗಬೇಕು. ಆ ಸೀಮಿತ ಗುಂಪು ಉದ್ಯಮಿಗಳದಿರಬಹುದು, ಸರಕಾರದ್ದಿರಬಹುದು, ಅಥವಾ ಆಯಾ ಕಾಲಖಂಡದ ಯಜಮಾನಿ ಗುಂಪುಗಳು-ತಂತ್ರಶಾಸ್ತ್ರವೋ, ಸೇವಾ ಕ್ಷೇತ್ರವೋ-ತಮ್ಮ ಲಾಭ, ಹಿರಿಮೆಗರಿಮೆಗಳಿಗೆಂದು ಬಳಸುವ ಮಾಹಿತಿಯನ್ನೇ ವಿದ್ಯೆ ಎಂದು ಕರೆಯುವ ಬದಲು ನಿರಾಸಕ್ತ ವಿದ್ಯೆಯ ಸೃಷ್ಟಿ ಮತ್ತು ಪ್ರಸಾರ ವಿಶ್ವವಿದ್ಯಾಲಯದ ಗುರಿಯಾಗಿರಬೇಕು.
  3. ಇಲ್ಲಿ ಸಿಗುವ ಮತ್ತು ಸೃಷ್ಟಿಯಾಗುವ ವಿದ್ಯೆಯು ವಿಶ್ವಾತ್ಮಕ ಪ್ರಸ್ತುತತೆ ಹೊಂದಿರಬೇಕು. ಅಂದರೆ ಯಾವುದೇ ವಿಷಯವಾಗಿರಲಿ ಆ ಕುರಿತಾದ ಜ್ಞಾನ ವಿಶ್ವಾತ್ಮಕವಾಗಿರಬೇಕು, ಸಾರ್ವಕಾಲಿಕವಾಗಿರಬೇಕು. ವಿದ್ಯೆ ಎನ್ನುವುದೇ ವಿಶ್ವಾತ್ಮಕ; ಸಾರ್ವಕಾಲಿಕತೆ ಇರದಿದ್ದರೆ ಅದು ವಿದ್ಯೆಯೇ ಅಲ್ಲ, ಮಾಹಿತಿ ಆದೀತು. ತಂತಮ್ಮ ತುರ್ತು ಅಗತ್ಯಗಳ ಪೂರೈಕೆ ವಿದ್ಯೆಯಲ್ಲ. ಆದರೆ, ಎಲ್ಲರೂ, ಎಲ್ಲೆಲ್ಲಿಯೂ, ಎಲ್ಲಕಾಲಕ್ಕೂ ಎದುರಿಸಬಹುದಾದ ತುರ್ತು ಅಗತ್ಯಗಳ ಪೂರೈಕೆಗೆ ಸಂಬಂಧಿಸಿದ್ದು ಮಾತ್ರ ವಿದ್ಯೆ. ವಿಷಯ-ವಿಶಿಷ್ಟ ವಿಶ್ವವಿದ್ಯಾಲಯ ಸರಿಯಲ್ಲ. ಸಕಲ ವಿಷಯಗಳ ಕುರಿತು ವಿದ್ಯೆಯ ಸೃಷ್ಟಿ ಮತ್ತು ಪ್ರಸಾರ ಇರಬೇಕು.
  4. ಇಲ್ಲಿ ಸಿಗುವ ವಿದ್ಯೆಯು ವಿಶ್ವದ ಕುರಿತಾಗಿರಬೇಕು -ಅತೀತ, ಆಧ್ಯಾತ್ಮ, ಪರಲೋಕಗಳ ಕುರಿತಾದ ಜ್ಞಾನಕ್ಕೆ ಇಲ್ಲಿ ಜಾಗವಿರಬಾರದು. ವಿಶ್ವದ ಕುರಿತಾದ ವಿಶ್ವಾತ್ಮಕ ಸಾರ್ವಕಾಲಿಕ ಜ್ಞಾನ ವಿಶ್ವದೆಲ್ಲರಿಗೂ ಸಿಗುವ ಜಾಗವೇ ವಿಶ್ವವಿದ್ಯಾಲಯ. ಅತೀತ, ಆಧ್ಯಾತ್ಮ, ಪರಲೋಕಗಳ ಕುರಿತು ಜ್ಞಾನಾರ್ಜನೆಯ ಅಗತ್ಯ ಇಲ್ಲವೆನ್ನುವುದು ಇಲ್ಲಿನ ವಾದವಲ್ಲ. ಆದರೆ, ಅಂತಹ ಅಗತ್ಯಗಳಿಗೆ ವಿಶ್ವವಿದ್ಯಾಲಯದ ಬದಲು ಬೇರೆಯದೇ ಸಾಂಸ್ಥಿಕ ವ್ಯವಸ್ಥೆಯ ಆವಿಷ್ಕಾರ ಮಾಡಬಹುದು. ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ವಿಶ್ವಕ್ಕೆ ಸೀಮಿತ ವಿದ್ಯೆಯ ಆಲಯವಾಗಿರಬೇಕು.
  5. ವಿಶ್ವದೆಲ್ಲೆಡೆಯ ಮತ್ತು ವಿಶ್ವದ ಕುರಿತಾದ ಬಗೆಬಗೆಯ ಜ್ಞಾನವನ್ನು ಪ್ರತಿಯೊಬ್ಬರಿಗೂ ಸಿಗುವಂತಾಗಿಸಬೇಕು -ಆಯ್ದ, ಸೀಮಿತ ವಿಷಯ ಅಥವಾ ಸೀಮಿತ ಕುಶಲತೆಗಳನ್ನು ಮಾತ್ರ ಕಲಿಸುವಂತಿರಬಾರದು. ಅಂದರೆ, ಸೀಮಿತ ವಿಷಯಗಳ ಪ್ರಾವೀಣ್ಯ ಸೂಕ್ತವೇ ಆಗಿದ್ದರೂ, ವಿಶ್ವವಿದ್ಯಾಲಯ ಕೋಣೆಯೊಂದರ ಮೂಲೆಯೊಂದನ್ನು ಪ್ರಕಾಶಿಸುವ ಪ್ರವೃತ್ತಿಗೆ ಬದಲಾಗಿ ಪ್ರಾವೀಣ್ಯ ಮತ್ತು ವಿಶ್ವಾತ್ಮಕತೆಯನ್ನು ಜತೆಜತೆ ಸ್ಫುರಿಸುವಂತ ದೃಷ್ಟಿಕೋನ ಹೊಂದಿರಬೇಕು. ಯಾವುದೇ ಭೇದಭಾವವಿಲ್ಲದಂತ ವಿಶ್ವಾತ್ಮಕ ಆಸಕ್ತಿ, ದೃಷ್ಟಿಕೋನವನ್ನು ಪ್ರತಿಯೊಬ್ಬರಲ್ಲೂ ಜಾಗೃತಗೊಳಿಸುವಂತೆ ವಿದ್ಯೆಯನ್ನು ಕಲಿಸುವ ಜಾಗವಾಗಬೇಕು.
  6. ಇದು ಕುಶಲತೆಯನ್ನು ವಿದ್ಯೆಯಾಗಿಸುವಂತ ಅಂದರೆ ನಿರ್ದಿಷ್ಟ ಅರಿವನ್ನು ವಿಸ್ತರಿಸಿ ಅದಕ್ಕೆ ವಿಶ್ವಾತ್ಮಕತೆ ದೊರಕಿಸುವ ಜಾಗವಾಗಬೇಕು. ತನ್ಮೂಲಕ ಎಲ್ಲರನ್ನೂ ಅವರವರ ಮಂಡೂಕ ಕೂಪಗಳಿಂದ ಹೊರತಂದು ವಿಶ್ವಮಾನವರಾಗಿಸಬೇಕು.
  7. ಇಲ್ಲಿ ದೊರಕುವ ವಿದ್ಯೆಯು ವಿಶ್ವದಲ್ಲಿ ಕ್ರಿಯಾತ್ಮಕವಾಗಿರಲು ಸಹಾಯಕವಾಗಿರಬೇಕು.

ಮೇಲೆ ಸೂತ್ರರೂಪದಲ್ಲಿ ನಮೂದಿಸಿರುವ ಆಶಯಗಳಿಗೂ ನಮ್ಮ ನಡುವೆ ಈಗ ಇರುವ ಸಾರ್ವಜನಿಕ ವಿಶ್ವವಿದ್ಯಾಲಯಗಳ ಸ್ವರೂಪಕ್ಕೂ ವ್ಯತ್ಯಾಸವಿದೆ. ಮುಖ್ಯವಾಗಿ, ಈಗಿರುವ ವಿಶ್ವವಿದ್ಯಾಲಯಗಳ ಮೇಲಿರುವ ಹೊರೆ ಜ್ಞಾನಸೃಷ್ಟಿ ಅಥವಾ ಜ್ಞಾನ ಪ್ರಸರಣೆಗೆ ಸಂಬಂಧಿಸಿದ್ದಲ್ಲ. ಅದು ಒಂದು ಪ್ರದೇಶದ ಜನಸಮೂಹವನ್ನು ಶಿಕ್ಷಿತರಾಗಿಸುವ ಮತ್ತು ಅವರಿಗೆ ತುರ್ತಾಗಿ ಅವಶ್ಯವಿರುವ ಉದ್ಯೋಗ ಒದಗಿಸುವ ಗುರುತರ ಜವಾಬ್ದಾರಿ. ಈ ಜವಾಬ್ದಾರಿ ನಮ್ಮ ಸಮಾಜದಲ್ಲಿ ಜ್ಞಾನಸೃಷ್ಟಿಯಷ್ಟೇ, ಅಥವಾ ಇನ್ನೂ ಹೆಚ್ಚು, ತುರ್ತಿನದು, ಮಹತ್ವದ್ದು. ಅವು ಎದುರಿಸುವ ಸವಾಲುಗಳನ್ನು, ಸಮಸ್ಯೆಗಳನ್ನು ಜ್ಞಾನಸೃಷ್ಟಿಯ ಜೊತೆ ತಳುಕು ಹಾಕಿ ನೋಡುವುದರಲ್ಲಿ ಯಾವುದೇ ಪ್ರಯೋಜನ ಕಾಣದು. ಅವುಗಳನ್ನು ಇನ್ನೂ ಹೆಚ್ಚು ಜನರಿಗೆ, ಹೆಚ್ಚು ಉಪಯುಕ್ತಗೊಳಿಸುವುದು ಹೇಗೆ ಎನ್ನುವುದೇ ಒಂದು ಪ್ರತ್ಯೇಕ ಮತ್ತು ತುರ್ತಿನ ಪ್ರಶ್ನೆ.

ಈ ಟಿಪ್ಪಣಿಯ ಉಪಸಂಹಾರದ ರೂಪದಲ್ಲಿ, ನಾನು ಈ ಚಿಂತನಾ ಪ್ರಯೋಗದ ವಿಶ್ವವಿದ್ಯಾಲಯದ ಸಂಕಲ್ಪನೆಯನ್ನು ಲೋಕಸತ್ತೆಯೊಂದಿಗೆ ಜೋಡಿಸಬಯಸುತ್ತೇನೆ. ಯಾಕೆಂದರೆ, ಇಂತಹ ಅನಿರ್ಬಂಧಿತ ವಿಶ್ವವಿದ್ಯಾಲಯ, ಸ್ವಾಯತ್ತ, ವಿವೇಚನಾತ್ಮಕ, ವಿಮರ್ಶಾತ್ಮಕ (ಛಿಡಿiಣiಛಿಚಿಟ), ಸಾರ್ವಜನಿಕ-ಸಾರ್ವಕಾಲಿಕ ಜ್ಞಾನಸೃಷ್ಟಿಗೆ ಮುಡಿಪಾಗಿರುವ ವಿಶ್ವವಿದ್ಯಾಲಯವು ಲೋಕಸತ್ತಾತ್ಮಕ ಸಮಾಜದಲ್ಲಿ ಮಾತ್ರ ಸಾಧ್ಯ. ಅಥವಾ ಲೋಕಸತ್ತಾತ್ಮಕ ಸಮಾಜದ ಕಲ್ಪನೆಗೆ ಅನಿರ್ಬಂಧಿತ ವಿಶ್ವವಿದ್ಯಾಲಯವನ್ನು ಒಂದು ಸಂಕೇತವಾಗಿಯೂ ನೋಡಬಹುದು. 

*ಲೇಖಕರು ಮೂಲತಃ ಶಿರಸಿ ಬಳಿಯ ಕಡವೆ ಗ್ರಾಮದವರು; ಪ್ರಸ್ತುತ ಇಂಗ್ಲಿಷ್ ಪ್ರಾಧ್ಯಾಪಕರು, ಅಹ್ಮದ್‍ನಗರ, ಮಹಾರಾಷ್ಟ್ರ.

Leave a Reply

Your email address will not be published.