ಜ್ಯೋತಿಬಾ ಹೇಳಿದ ಕಥೆ

ಅಡಿಕೆ ಎಲೆ ಕುಟ್ಟಾಣಿ ಎತ್ತಿಕೊಂಡವನೇ ದತ್ತೂರಿ ಬೀಜ ಅದರಲ್ಲಿ ಸುರಿದು ಪುಡಿ ಮಾಡಿದ. ಅಲ್ಯುಮಿನಿಂ ಗ್ಲಾಸಿನಲ್ಲಿ ನೀರಿಗೆ ಬೆರಸಿ ಗಟಗಟ ಕುಡಿದ. ಅಂಗಳಕ್ಕೆ ಬಂದು ಅಂಗಾತ ಮಲಗಿಬಿಟ್ಟ.

ಜಿ.ಎನ್.ರಂಗನಾಥ ರಾವ್

`ಯುರೇಕಾ’

“ಸಿಕ್ತು ಕಣ್ರೋ, ರಾಮಿ ಸಿಕ್ತು ಕಣೋ, ಅಂತಃಕರಣ ಕರಿಗಿಸೋ ಮಾನವಾಸಕ್ತಿಯ ಕಥೆ… ಬೇಗ ಬಾರೋ… ಆ ಮುದಿ ಸಂಪಾದಕನ ಕೈಯ್ಯಲ್ಲಿಡೊ ಮೊದಲು ನಿಂಗೆ ಅದನ್ ಓದಿಹೇಳಬೇಕು” -ಎಂದವನೇ ಗೆಳೆಯ ಮೌನಿಯಾದ.

“ಹಲೋ.. ಹಲೋ..”

-ಇಲ್ಲ, ಸಂಪರ್ಕ ಕಡಿದು ಹೋಗಿದೆ. ಅವನ ಈ ಸಂಭ್ರಮ ಕಂಡು ನನಗೆ ಕಕ್ಕಾಬಿಕ್ಕಿ. ಅವನು ಇಷ್ಟೊಂದು ಉತ್ಸಾಹದಿಂದ ಇತ್ತೀಚೆಗಿನ ದಿನಗಳಲ್ಲಿ ಮಾತನಾಡಿದ್ದೇ ಇಲ್ಲ. ಅದೇನು ಉತ್ಸಾಹವೋ, ಉನ್ಮಾದವೋ?

ಫೋನ್ ಮಾಡಿದವನು ನನ್ನ ಜೀವದ ಗೆಳೆಯ. ಹಿರಿಯ ಪತ್ರಕರ್ತ ಮನು ಉರುಫ್ ಮನ್ಮಥ ರಾವ್. ಇತ್ತೀಚೆಗಿನ ದಿಗಳಲ್ಲಿ ತುಂಬಾ ಖಿನ್ನನಾಗಿದ್ದ.

ಕನಸಿನಲ್ಲಿ ಲೋಹಿಯಾ, ಗೋಪಾಲಗೌಡರು, ಜೆ.ಪಿ. ಎಲ್ಲಾ ಬರ್ತಾರೆ… ‘ಎನ್ರೀ ಪತ್ರತಕರ್ತರೇ ಏನ್ಮಾಡಿದ್ರೀ’ ಅಂತ ಕೇಳ್ತಾರೆ. ಅವರಿಗೆ ಮುಖ ತೋರಿಸೋಕೆ ನಾಚಿಕೆ ಆಗುತ್ತೆ ಕಣೋ ಎಂದು ಒಂದು ದಿವಸ ತುಂಬಾ ನೊಂದುಕೊಂಡಿದ್ದ. ತನ್ನಿಂದ ಸಮಾಜಕ್ಕೆ ಎನೂ ಮಾಡ್ಲಿಕ್ಕೆ ಆಗ್ತಾ ಇಲ್ಲ ಎಂದು ಪೇಚಾಡಿಕೊಂಡಿದ್ದ.

“ಈ ಇಂದ್ರಿಯ ಸಂವೇದಿ ಪತ್ರಿಕೋದ್ಯಮದ ಮುಂದೆ, `ಸಮಾಜದ ಕ್ಷೇಮ ಮತ್ತು ಸಮಾಜಕಲ್ಯಾಣ ಪತ್ರಿಕಾ ವ್ಯವಸಾಯದ ಮೂಲತತ್ತ್ವ’ ಎನ್ನುವ ನಿಜವಾದ ಪತ್ರಿಕೋದ್ಯಮ ಸೊರಗಿಹೋಗ್ತಿದೆ ಕಣೋ” ಎಂದು ತುಂಬ ಕಕ್ಕುಲಾತಿಯಿಂದ ನುಡಿದಿದ್ದ.

ಮನುವಿನ ಕೆಲವು ತನಿಖಾ ವರದಿಗಳು, `ಬಯಾಸ್ಡ್… ನೋ ಡಾಕ್ಯುಮೆಂಟರಿ ಎವಿಡೆನ್ಸ್’ ಕಾರಣಗಳಿಂದ ತಿರಸ್ಕತವಾಗಿದ್ದವು.

“ಏನ್ರೀ ಬಡ್ತಿ, ಬೈಲೈನು ಅಂತ ಗೋಳಾಡ್ತೀರಿ, ಒಂದಾದರೂ ಹ್ಯೂಮನ್ ಇಂಟರೆಸ್ಟ್ ಸ್ಟೋರಿ ಕೊಟ್ಟಿದೀರಾ ಸರ್ವಿಸ್ನಲ್ಲಿ” ಎಂದು ಸಂಪಾದಕ ಮಹಾಶಯ ಸಂಜೆ ಮೀಟಿಂಗಿನಲ್ಲಿ ಕುಟುಕಿದ್ದನಂತೆ. ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುವಂತೆ ಹೇಳಿದ, ಈ ಮಾತನ್ನು ತನಗೇ ಹೇಳಿದ್ದು ಎಂದುಕೊಂಡು ಮನು ಮತ್ತಷ್ಟು ಕುಗ್ಗಿಹೋಗಿದ್ದ. ಒಂದು ತಿಂಗಳ ಕೆಳಗೆ ವಿದರ್ಭಾದ ಯಾವುದೋ ಕುಗ್ರಾಮದಲ್ಲಿದ್ದೇನೆ ಎಂದು ಫೋನ್ ಮಾಡಿದ್ದ. ಅದಾದ್ಮೇಲೆ ಈಗಲೇ ಫೋನ್ ಮಾಡಿರೋದು. ಮನು ರೂಮಿಗೆ ಧಾವಿಸಿದೆ.

“ಮಧ್ಯೆ ಬಾಯಿ ಹಾಕ್ಬೇಡ”

ನಾನು ಬಸ್ಸಿಳಿದಾಗ ಬೆಳಿಗ್ಗೆ ಒಂಬತ್ತರ ಸಮಯ. ಚುಮುಚುಮು ಬಿಸಿಲು. ಬಸ್ ಸ್ಟಾಡಿನ ನಲ್ಲಿಯಲ್ಲೇ ಮುಖ ತೊಳೆದು, ಟೀ ಕುಡಿದು, ಮುಖ್ಯರಸ್ತೆಯಾಚೆ ಕವಲುಹಾದಿಯಲ್ಲಿದ್ದ ಕೈಮರದತ್ತ ಹೆಜ್ಜೆ ಹಾಕಿದೆ. ಯಾರೋ ನನ್ನ ಬೆಂಬತ್ತಿ ಬರುತ್ತಿರುವಂತೆ ಭಾಸವಾಯಿತು. ಕ್ಷಣ ನಿಂತು ಹಿಂದಿರುಗಿ ನೋಡಿದೆ.

ಸುಮಾರು ಎಪ್ಪತು-ಎಪ್ಪತ್ತೈದರ ಪ್ರಾಯದ ಮುದುಕ. ಕಸೆ ಅಂಗಿ, ಪಂಚೆ, ತಲೆಯಲ್ಲಿ ಮಹಾರಾಷ್ಟ್ರದ ಪಗಡಿ. ಕೆನ್ನೆತುಂಬ ಕಲ್ಲಿ ಮೀಸೆ. ಕಣ್ಣು ಕೆಂಡದುಂಡೆಗಳು. ಮುಖದಲ್ಲಿ ಶ್ರೀಮದ್ಗಾಂಭೀರ್ಯ…

“ಸರ..”

“ಎನು ಹೇಳಿ ಯಜಮಾನ್ರೇ”

“ನೀವು ಪೇಪರ್ ಮಂದಿ ಏನು?”

“ಹೌದು”

“ರೈತರ ಆತ್ಮಹತ್ಯಾ, ಶೇಟ್ಕರಿಮಂದಿ ಕಥೀ..”

“ಹೌದು ನಿಮಗೆ ಹೇಗೆ…?”

“ಬಿಡ್ರೀ… ಪೂರ್ವಜನ್ಮದ ವಾಸನಾ ಅನ್ರೀ… ಆ ಕೈಮರ ಇದ್ಯಲ್ಲ ಅದೇ ರಸ್ತೇಲಿ ಅರ್ಧ ತಾಸು ಹೋಗ್ರೀ… ಬಲಕ್ಕೊಂದಿ ಬಂಡಿ ಜಾಡು ಕಾಣಿಸ್ತದ… ಜಾಡಿನಲ್ಲಿ ಹತ್ತು ಮಿನಿಟು ನಡೀರ್ರೀ… ಹೊಲ ಮನಿ ಕಾಣಸ್ತಾವ. ಒಂದೊಂದು ಮನ್ಯಾಗೂ ಒಂದೊಂದು ಕಥೀ.. ಬಂದದ್ಕೆ ಫಾಯಿದಾ ಖಾತ್ರಿ ರೀ…”

ಭರ್ರನೆ ತಂಗಾಳಿ ತೀಡಿ ಕಣ್ಣಲ್ಲೇನೋ ಬಿದ್ದಂತಾಗಿ ಕರ್ಚೀಫಿಗೆ ತಡಕಾಡಿದೆ. ಕಣ್ಣೊರೆಸಿಕೊಂಡು ನೋಡುವಷ್ಟರಲ್ಲಿ ಆ ವೃದ್ಧ ಮಹಾಶಯರು ಕಣ್ಮರೆಯಾಗಿದ್ದರು. ಆಶ್ಚರ್ಯ! ಸುತ್ತಲೂ ನೋಡಿದೆ. ಎಲ್ಲೂ ಕಾಣದಾದರು.

ಯಾರಾದರಿರಲಿ, ಅವ ಒಬ್ಬ ಮಾತಾಡುವ ಕೈಮರ ಎಂದುಕೊಂಡು ಅವರು ಹೇಳಿದ ಬಂಡಿ ಜಾಡಿನಲ್ಲಿ ತಿರುಗಿದೆ. ಹೊಲಗದ್ದೆಗಳೆಲ್ಲ ಬಟಾಬಯಲು. ಬಾಯಾರಿ ಬಿರಿದ ಭೂಮಿ. ಕನ್ನಡಿಯಂಥ ಆಕಾಶದಲ್ಲಿ ಧಗಧಗಿಸುವ ಸೂರ್ಯ. ಕಳೆದ ಕೊಯ್ಲಿನಲ್ಲಿ ಉಳಿದ ಕೂಳೆಗಳು, ಅರೆಬರೆ ಸುಟ್ಟು ಕಪ್ಪಾದ ಕಬ್ಬಿನ ಕೂಳೆಗಳು ಬೆಂದ ಭೂಮಿಯ ಕುರುಹುಗಳಂತೆ ಕಾಣುತ್ತಿದ್ದವು. ಹೊಲದ ಬದುವಿಗಂಟಿಕೊಂಡಿದ್ದ ಕಾಲುಹಾದಿಯಲ್ಲಿ ಹೆಜ್ಜೆಹಾಕಿದಂತೆ ಕೂಗಳತೆಯ ದೂರದಲ್ಲೇ ವ್ಯಕ್ತಿಯೊಬ್ಬ ಕಾಲೆಳೆದುಕೊಂಡು ಹೋಗುತ್ತಿರುವುದು ಕಂಡಿತು. ದಾಪುಗಾಲು ಹಾಕಿ ವ್ಯಕ್ತಿಯನ್ನು ಸಮೀಪಿಸಿದೆ. ಸ್ವಗತದಲ್ಲಿ ನಡೆದಿದ್ದ ಆತನಿಗೆ ನಾನು ಸಮೀಪಿಸಿದ್ದು ತಿಳಿಯಲಿಲ್ಲ.

ಸುಮಾರು ನಲವತ್ತರ ಪ್ರಾಯ. ಖಾದಿ ಕುರ್ತಾ, ಧೋತಿ, ತಲೆಯಲ್ಲಿ ಮುಂಡಾಸು. ತುಟಿ ಮುಚ್ಚಿದ ಪೊತ್ತೆ ಮೀಸೆ, ಗುಳಿಬಿದ್ದ ಕಣ್ಣುಗಳು. ತನ್ನಲ್ಲೇ ಮಾತಾಡಿಕೊಳ್ಳುತ್ತಾ ನಡೆದಿದ್ದ. ಒಂದೆರಡು ಸಲ ಕಟಕಟ ಹಲ್ಲುಗಳ ಮಸೆದ. ಥಟ್ಟನೆ ಎಡಕ್ಕೆ ಹೊರಳಿ ಧಡಧಡ ಓಡಲಾರಂಭಿಸಿದ. ನನಗೆ ಅವನನ್ನು ಹಿಂಬಾಲಿಸುವುದು ಕಷ್ಟವಾಯಿತು. ಸಂಭಾಳಿಸಿಕೊಂಡು ಹೋಗುವಷ್ಟರಲ್ಲಿ ಕಣ್ಮರೆಯಾಗಿದ್ದ.

ಮತ್ತೆ ಸ್ವಲ್ಪ ದೂರ ನಡೆದೆ. ವಾಸದ ಮನೆಗಳು ಯಾವುವೂ ಕಾಣಿಸಲಿಲ್ಲ. ಮುಂದೆ ಹೋದಂತೆ ಒಣಗಿನಿಂತ ಮರಗಳ ತೋಪೊಂದು ಕಾಣಿಸಿತು. ತೋಪಿನ ಮಧ್ಯೆ ಒಂದು ಕಪಿಲೆ ಬಾವಿ. ಇಣುಕಿದೆ. ಅವನು ಬಾವಿಯಲ್ಲಿಳಿದು ನೀರುಕುಡಿಯುತ್ತಿದ್ದ. ಎರಡುಮೂರು ಬೊಗಸೆ ನೀರು ಕುಡಿದು ಮೇಲೆ ಬಂದ. ನಾನು ಮರೆಯಾಗಿ ನಿಂತೆ. ಅವನು ಬೋಳು ಮರಗಳ ಕೊಂಬೆಗಳ ಚಿತ್ತಾರ ನೆರಳು ಮೂಡಿದ್ದ ಮರ ಒಂದರ ಕೆಳಗೆ ಕುಳಿತ. ಸ್ವಗತ ಶುರುವಾಯಿತು…

ಕಲೆಕ್ಟರ್ ಸಾಹೇಬರನ್ನು ಭೇಟಿಮಾಡಿದಾಗ ಅವರಿನ್ನೂ ಚಹಾಪಾನ ಮುಗಿಸಿರಲಿಲ್ಲ.

“ಖರೇನ್ರೀ ಸಾಹೇಬ್ರಾ, ಈಗ ರೊಕ್ಕಿಲ್ಲಾರೀ.. ಪೂರಾ ಇಲ್ಲಾರೀ… ಕಂದಾಯ ಕಂತಿನಾಗ ಕೊಡ್ತೀನ್ರೀ.. ಹ್ಞೂಂ ಅನ್ರೀ ನನ್ನೊಡೆಯಾ ಬರಗಾಲ ಐತ್ರೀ..”

ಕಲೆಕ್ಟರ್ ಸಹೇಬರಿಗೆ ಸತ್ಯ ಕೇಳಿ ತಿಳಿಯೋ ಅಷ್ಟು ವೇಳ್ಯಾ ಇರಲಿಲ್ಲ.

“ಥ್ರೋ ಹಿಮ್ ಔಟ್”

-ಹೊರದಬ್ಬಿಸಿಕೊಂಡ್ ಹಿಂಗಾ ಬಂದೇನ್ರೀ… ಮಳೆ ಇಲ್ಲ, ಬೆಳೆ ಇಲ್ಲ, ಕಂದಾಯ ದುಪ್ಪಟು ಮಾಡಾರ. ಸಾಲಕ್ಕೆ ಮನಿ, ಹೊಲ ಲಿಲಾವಿಗೆ ತಂದಾರ…

ಮಳಿ ಇಲ್ದ ಪೈರೆಲ್ಲ ಸುಟ್ಟು ಸೀದ್‍ಹೋಗ್ಯಾವೋ ಯಪ್ಪಾ ಎಂದೆ…

ಕಾರಕೂನರ, ಸಾಹೇಬರ ಕೈಬೆಚ್ಚಗ ಮಾಡಿದ್ರ ನಸೀಬ್ ಚಲೋ ಇರ್ಲಿಕ್ಕ…

ಕುಲಕರ್ಣಿ ಸಾಹೇಬರ ಕಿವಿ ಕಚ್ಚಿದ. ಮನಿ, ಹೊಲ ಲಿಲಾವಿಗೆ ಬಂದಾಗ ತೋಟಾನ ಮಾರ್ವಾಡಿ ಮಂದಿಗೆ ಅಡಮಾನ ಮಾಡಿ ಸರ್ಕಾರಕ್ಕೆ ರೊಕ್ಕ ತುಂಬಿಸ್ದೆ… ಮುಂದಿನ ವರ್ಷ ಕಂದಾಯ, ಸಾಲದ ಬಡ್ಡಿ ತುಂಬಿಸ್‍ಲಿಕ್ಕೆ ಹೆಂಗಸರ ನಗಾ ಮಾರ್ದೆ. ಬಡ್ಡಿ ತುಂಬ್‍ಲಿಕ್ಕೆ ಮತ್ತ ಮಾರ್ವಾಡಿ ಮಂದಿ ಕಡೀಂದ ಸಾಲ ತೆಗ್ದೆ. ಈಗ ಆ ಮಂದಿ ಜಮೀನ್ ತಮದೆಂದು ಖಟ್ಲೆ ಹೂಡಾರೆ…

ಕಂಬಕಂಬಕೂ ತಾ…ತಾ…ಅನ್ನೋ ಕೈಗಳು.

ಎಲ್ಲಿಂದ ತರೋದು?

ಮಾರ್ವಾಡಿಗಳು ಈಗ ಸಮೀಪ ಸೇರಸಾಣಿಲ್ಲ. ಕಳೆದ ವರ್ಷ ಮಗಳ ನಗಾ ಮಾರಿ ಕಂದಾಯ ಕಟ್ಟಿದ್ದೆ. ಈಗ ಆಕಿ ಮಾವ ನಗಾನಾಣ್ಯ ದಾಗೀನ ಇಲ್ಲದ ಮನೀಗ ಬರಬ್ಯಾಡಂತ ಹೊರಹಾಕಾನ. ಒಂದು ತುಂಡು ಹೊಲಮನೀ ಸಲ್ವಾಗಿ ಆಕೀ ಬಾಳ್ಹಾಲ್ಮಾಡದ್ನಲ್ಲೋ ವಿಠೋಬಾ!

ಬರ್ರೀ ಬಂದ್ ನೀವಾ ನೋಡ್ರೀ….

ಎಂದು ಅನ್ಕೋತಾ ಲಗುಬಗು ಎಂದವನೇ ತೋಟದ ಆ ಬದೀಗ ಹೊಳ್ಳಿದ. ಅಲ್ಲಿ ಹಳದಿ ಹೂವಿನ ದತ್ತೂರ ಸಪೂರ ಬೆಳೆದು ನಿಂತಿತ್ತು. ಒಣಗಿದ ದತ್ತೂರ ಕಾಯಿಗಳನ್ನು ಬಿಡಿಸಿ ಅಂಗವಸ್ತ್ರದಾಗ ಗಂಟ್ ಕಟ್ಕೊಂಡ.

ಈ ವರ್ಷ ಕಂದಾಯ ಕಟ್ಟೂದಾರ ಹ್ಯಾಂಗ? ಈ ವರ್ಷದ ಬೇಸಾಯ ಹ್ಯಾಂಗ? ಬೀಜ, ಗೊಬ್ಬರ…

ನೀರೆತ್ತುವ ಬಾನಿ ತೂತು ಬಿದ್ದದ. ಮೇವಿಲ್ಲದ ಎತ್ತುಗಳು ನೇಗಿಲ ಎಳೀಲಾರವು. ಹೆಂಡತಿ ಮಕ್ಕಳ ಅರಿವಿ ಅಂಚಡಿ ಹರಿದು ಚಿಂದಿಯಾಗವ. ತೇಪಿ ಹಾಕಿ ಉಡ್ತಾ ಮಂದಿಗ ಮಾರಿ ತೋರಲು ನಾಚುವ ಹೆಣ್ತಿಮಕ್ಕಳು…

ಕಣಜ, ಹಗೇವು ಖಾಲ್ಯಾಗಿ ಸೊಪ್ಪುಸದೆ, ಗೆಡ್ಡಿಗೆಣಸಿನ ಮ್ಯಾಲ ಹೊಟ್ಟಿ ತುಂಬಿಸಲಿಕ್ಕ ಹತ್ತೇನಿ. ನನ್ನವ್ವ, ಸಾಯ್ತಿರೋ ಮುದ್ಕಿ ಅವಳ್ ಗಂಜೀಗೂ ಅಕ್ಕಿ ನುಚ್ಚಿಲ್ಲ. ಎತ್ತುಗಳನ್ನ ಮಾರಿದರೆ…

ಈ ದತ್ತೂರ ಪುಡಿಮಾಡಿ ನುಂಗಿದ್ರ ಎರಡ್ ಗಂಟೀಯೊಳಗ ಶಿವನಪಾದ.. ಮಕ್ಕಳು ಹ್ಯಾಂಗೋ ಬದುಕ್ಕೊತಾರ… ಅವ್ವ…?  ಅವ್ವನ್ನ, ಇವಳನ್ನ…

ಮಾತಾಡ್ಕೋತಾ ಅವನು ಮನಿ ಸೇರಿದ್ದ. ಅಂಗಳದಲ್ಲಿ ಗಾಡಿ. ಮೂಲೆಯಲ್ಲಿ ದನಗಳಿಗೆ ಹುಲ್ಲು ಮೇಯಿಸೋ ಚೌಕೀ… ಅಂಗಳದ ಮುಂದೆ ಹರಿವ ಮೋರಿ. ಕ್ರಿಮಿಕೀಟಗಳಿಂದ ತುಂಬಿದ ಮೋರಿ. ಅಂಗಳಕ್ಕೆ ಅಂಟಿಕೊಂಡಂತೆ ಹುಣಿಸೇ ಮರ. ನಿಂತು ನೋಡಿದ. ಮರದ ಕೆಳಗೆ ಆಟಾಡ್ತಿರೋ ಮಕ್ಕಳ ಗುಲ್ಲು.

ಸೆರೆ ಅಂಗಡಿ ಆಟ.

ಮಗಳು, ಐದನೆಯವಳೋ ಆರನೆಯವಳೋ ಕಲಗಚ್ಚಿನ ಬಾನಿ ಮುಂದಿಟ್ಕೊಂಡ್ ಸೆರೆ ಮಾರ್ತಿದಾಳೆ. ಮಕ್ಕಳು ರೊಕ್ಕಾಂತ ಹೆಂಚಿನ ಬೋಕಿಕೊಟ್ಟು ಸೆರೆ ತಗೊಂಡು ಕುಡ್ದು ತೂರಾಟ  ನಟಿಸ್ತರೋ ಮಕ್ಕಳು… ಅಲ್ಲೇ ಮನಿತಪ್ಪಿದ ಮಗಳು ಕುಳ್ಳು ತಟ್ತಿದಾಳೆ. ಹೇಲು, ಉಚ್ಚಿ, ಚರಂಡಿ ಮೇಲೆ ಗುಂಯ್ಗುಡೋ ನೊಣಗಳು…

ಒಳಕ್ಕ ಬಂದರ ಮೂಲೀಲಿ ಹುರಿಮಂಚದ ಮ್ಯಾಲ ಖೊಕ್…ಖೋಕ್ ಅಂತ ಕೆಮ್‍ಕೊಂಡ್ ಮಲಗಿರೋ ಅವ್ವ. ಅವಳ ತಲದಿಸೀಲಿ ಅರೆಉಂಡ ಗಂಜೀ ಬಟ್ಟಲು…

ಯಾಕಬೇ ಉಣಲಿಲ್ಲಾ?

ಕೇಳಬೇಕೆನಿಸಿತು. ಕೇಳಲಾಗದೆ ಅಡ್ಡಗೋಡೆಯಾಚೆಯ ಅಡಿಗೆಗೂಡಿನತ್ತ ಹೋದ. ನೆಲದಲ್ಲಿ ಉಳ್ಳಾಗಡ್ಡಿ ಸಿಪ್ಪೆಗಳು. ಕಾರಾ ರುಬ್ಬುವ ಒರಳು. ಹೊಗೆಹಿಡಿದ ಗೋಡೆ. ಗೋಡೆ ಗೂಡಿನಲ್ಲಿ ಸಾಲಾಗಿರುವ ಉಪ್ಪು, ಮೆಣಸು, ಹಲ್ಲುಪುಡಿ ಖಾಲಿ ಡಬ್ಬಗಳು. ಮಾಡಿನ ಗಳಕ್ಕೆ ತೂಗಿ ಬಿದ್ದಿರುವ ನಾಗಂದಿಗೆಯಲ್ಲಿ ತಂಗಳು ಭಕರಿ. ಮಾಡಿನಲ್ಲಿ ಕಿಚಕಿಚ ಶಬ್ದ ಮಾಡ್ತ ಹರಿದಾಡುವ ಹಲ್ಲಿಗಳು, ಇಲಿಗಳು. ಗೋಡೆಯ ಗೂಟಕ್ಕೆ ತೂಗಿಬಿದ್ದಿರುವ ಹರಿದ ಅಂಗಿಗಳು. ಮೂರು ಸುಗ್ಗಿಗಳ ಹಿಂದೆಯಷ್ಟೆ ಅರಿವಿಅಂಚಡಿ ಕೊಂಡದ್ದು.

ಕಣ್ಣಿಗೆ ಕಾವಳ ಬಂದಂಗಾತು.

ವಿಠೋಬಾ ಏನ್ ಗತಿ ಬಂತಪ್ಪ, ಎಲ್ಲವ್ವ, ಏನ್ಗತಿ ಬಂತವ್ವ…

“ಕಂದಾಯ ಬಾಕಿ ಚುಕ್ತಿ ಮಾಡ್ದಿದ್ದರ ಹೊಲಮನಿ ಹರಾಜು”

-ಕಲೆಕ್ಟರು ಗುಡುಗಿದ್ದರು.

“ಇಲ್ಲಾ ಹೊಲ ಮಾರು ರೊಕ್ಕ ಸಿಗತೈತಿ”

-ಕುಲಕರ್ಣಿಯವರು ಪುಕ್ಕಟೆ ಸಲಹೆ ಕೊಟ್ಟಿದ್ದರು.

ಹೊಲಮನಿ ಹರಾಜು… ಮಾರೋದು.. ಮಾನಹೋಗೋ ಹೊತ್ಬಂತಲ್ಲೋ ವಿಠೋಬಾ…

ಏನ್ ಗತಿ?

ಮಾನ ಸಂರಕ್ಷಣೆಗೆ ಉಳಿದಿರುವುದೊಂದೇ ದಾರಿ-

ಹೊಳೆ ಬೆಂಕಿ ವಿಷ ಚೂರಿ

ಅಡಿಕೆ ಎಲೆ ಕುಟ್ಟಾಣಿ ಎತ್ತಿಕೊಂಡವನೇ ದತ್ತೂರಿ ಬೀಜ ಅದರಲ್ಲಿ ಸುರಿದು ಪುಡಿ ಮಾಡಿದ. ಅಲ್ಯುಮಿನಿಂ ಗ್ಲಾಸಿನಲ್ಲಿ ನೀರಿಗೆ ಬೆರಸಿ ಗಟಗಟ ಕುಡಿದ. ಅಂಗಳಕ್ಕೆ ಬಂದು ಅಂಗಾತ ಮಲಗಿಬಿಟ್ಟ.

ಸಂಜೆಗತ್ತಲು ಗೌ ಅಂತಿತ್ತು. ಗಾಳಿಗೆ ಬುಡ್ಡಿ ದೀಪ ಹೊಯ್ದಾಡುತಿತ್ತು.

“ಅವ್ವ…ಅವ್ವಾ ಹೊಟ್ಯಾಗ ಬೆಂಕಿ ಬಿದ್ದೈತಿ ಅವ್ವಾ…”

“ಸಂಗ್ಯಾ… ಸಂಗಣ್ಣ, ಕರದ್ಯಾ ಮಗನ..” -ಎಂದು ಮುದುಕಿ ಏಳ್ತಾಬೀಳ್ತಾ ಅಂಗಳಕ್ಕೆ ಬಂತು.

“ಸಂಗ್ಯಾ, ಸಂಗಣ್ಣ” -ಮಗನ ಗಲ್ಲ ಹಿಡಿದು ಅಲ್ಲಾಡಿಸ್ತು. ಕಣ್ಬಿಡೋ ಮಗನ ಅಂತ ಭೋರಾಡಿತು, ಮಗನ ತಲೆಯನ್ನು ತೊಡೆಯ ಮೇಲಿರಿಸಿಕೊಂಡು.

“ಸಂಗ್ಯಾ, ಮಗ ನನ್ಗ ಮಾಫ್ ಮಡೋ… ನಿಂಗ ತಿಳೀದ್ಹಾಂಗ ಜ್ವಾಳ ಮಾರಿ ಕುಲಕರ್ಣಿಗೆ ಕೊಟ್ಟು ದೇವರ ಹರಕಿ ತೀರ್ಸಿದ್ದೆ.. ವಿಠೋಬಾನ ದಯಾ ನಿನ್ನ ಮ್ಯಾಲಿರ್ಲೀಂತ… ವಿಠೋಬಾ ಕಲೆಕ್ಟರ ಬಾಯಾಗ ಕುಂತು ಕಂದಾಯ ಕಂತನಲ್ಲಿ ಕೊಡು ಅಂತ ಹೇಳ್ಬಾರ್ದಿತ್ತಾ? ಆ ದೇವರಾ ಕಲೆಕ್ಟರ ಬಾಯಾಗ ಮಾತಾಡಬಾರದಿತ್ತಾ?’’

ಅವನ ತಲೆ ತಾಯಿಯ ತೊಡೆಯಿಂದ ನೆಲಕ್ಕೆ ಒರಗಿತು. ವಿಠೋಬಾ ಏನಾಗಿ ಹೋಯ್ತೋ… ದೇವರಾ ಏನಾಗಿ ಹೋಯ್ತೋ… ನಸೀಬು ಸರೀ ಇಲ್ಲಾಂತ ರೊಕ್ಕ ಇಸ್ಕೊಂಡ್ ದಗಾ ಮಾಡದ್ಯಲ್ಲೋ ಕುಲಕರ್ಣಿ….

ಮುದುಕಿ ರಾಗರಾಗವಾಗಿ ಪ್ರಲಾಪಿಸಿತು. ರೈತನ ಪರಿವಾರವೂ… ಹಟ್ಟಹಟ್ಟಿಯಲ್ಲೂ ರೈತರ ಹೆಂಡಿರು ಮಕ್ಕಳ ಆಕ್ರಂದನ. ಸುತ್ತಲ ಗಿರಿಕಂದರಗಳಿಗೆ ಅಪ್ಪಳಿಸಿ ಹಿಂದಿರುಗಿ ಬಂದು ಅನುರಣಿಸುತ್ತಿದ್ದ ಅಳು, ಆಕ್ರಂದನ.

ನೆಲದ ಈ ಅಂಚಿನಿಂದ ದಿಗಂತದ ಆ ಅಂಚಿನವರೆಗೆ ತೋರಣ ಶೃಂಗಾರದಂತೆ ತೂಗಾಡುವ ರೈತರ ದೇಹಗಳು.. ಅವ್ವ-ಅಪ್ಪ-ಹೆಂಡಿರು-ಮಕ್ಕಳ ಬತ್ತಲಾರದ ಗಂಗೆಕಣ್ಣುಗಳು…

“ಓಹ್, ಸಾಕು ನಿಲ್ಸಯ್ಯ.. ನನಗೆ ಮುಜುಗರವಾಗ್ತಿದೆ”

“ಯಾಕೋ?’

“ಮತ್ತಿನ್ನೇನಯ್ಯ, ಎರಡು ವರ್ಷದ ಹಿಂದೆ ನಾನು ಬರೆದ ವಿಜಾಪುರದ ವಿಶೇಷ ವರದೀನ ನೀನೀಗ ವಿದರ್ಭ ಡೇಟ್ ಲೈನಿನಲ್ಲಿ ಛಾಪಿಸಲಿಕ್ಕೆ ಹೊಂಟಿದೀಯ… ನನ್ನ ಆ ವರದಿಗೆ ಬೆಸ್ಟ್ ಹ್ಯೂಮನ್ ಇಂಟರೆಸ್ಟ್ ಸ್ಟೋರಿ ಅವಾರ್ಡೂ ಬಂದಿತ್ತು.. ಇದು  ಕೃತಿಚೌರ್ಯವಲ್ಲದೆ ಮತ್ತೇನು? ಇದಕ್ಕೆ ಏನು ನೀನು ಯುರೇಕಾ ಅಂತ ಸಂಭ್ರಮಿಸಿದ್ದು.”

“ರಾಮಿ, ರಾಮ್ಸಾಮಿ ಸ್ವಲಪ ತಾಳ್ಮೆ ಇರಲಿ. ಇದು ನನ್ನ ಕಥೇನೂ ಅಲ್ಲ ನಿನ್ನ ಕಥೇನೂ ಅಲ್ಲ. ದೇಶದ ಕಥೆ. ಜ್ಯೋತಿ ರಾವ್ ಫುಲೆ ಸ್ವತಃ ಕಣ್ಣಾರೆ ಕಂಡು ಬರೆದದ್ದು. ಅವರೇ ನನಗೆ ಹೇಳಿದ್ದು”

“ಸ್ಟುಪಿಡ್…ಯಾರದು ಜ್ಯೋತಿ ರಾವ್, ಆಕೀನೋ ಆತನೋ”

“ಆಕಿ ಅಲ್ಲ, ಆತ. ಜ್ಯೋತಿ ರಾವ್ ಫುಲೆ, ಜ್ಯೋತಿಬಾ ಅಂತ ಹತ್ತೊಂಬತ್ತನೇ ಶತಮಾನದ ದೊಡ್ಡ ಸಮಾಜ ಸುಧಾರಕರು. ಅಗ್ರರೇರಿಯನ್ ರಿಫಾರ್ಮರ್ ಕೂಡಾ. ವಿದರ್ಭದಲ್ಲಿ ನಾನು ಅವರನ್ನ ಡಿಸ್ಕವರ್ ಮಾಡ್ದೆ. ಅದಕ್ಕೇ ಯುರೇಕಾ ಅಂತ ಸಂಭ್ರಮಿಸಿದ್ದು… ಇವತ್ತಿನ ನಮ್ಮ ರೈತರ ಸಮಸ್ಯೆಗಳಿಗೆ ಅವರ ವಿಚಾರಗಳು ಸುಸಂಗತ ಅನಿಸುತ್ತೆ. ಅದು ಆಮೇಲೆ ಚರ್ಚೆ ಮಾಡೋಣ. ಈಗ ಅವರ ಬಾಯ್ನಲ್ಲೇ ಹೇಳ್ತೀನಿ ಕೇಳು…”

ಹಳ್ಳಿಹಳ್ಳಿಯಲ್ಲೂ ಸುತ್ತಾಡಿ ಕಂಡೆ… ಮನೆಗೊಬ್ಬ ರೈತನ ಆತ್ಮಹತ್ಯೆ. ನಮ್ಮ ರೈತರ ದಾರುಣ ಬದುಕು. ಅಂತಃಕರಣ ಬಾಯಿಗೆ ಬಂದಿತ್ತು… ಇದಕ್ಕೆ ಪರಿಹಾರವೇ ಇಲ್ಲವೇ ಅಂತ ಮಮ್ಮಲ ಮರುಗ್ತಾ ಸ್ಟೋರಿ ಫೈಲ್ ಮಾಡಲು ಬಸ್ ಸ್ಟಾಂಡಿನತ್ತ ನಡೆಯತೊಡಗಿದೆ. ಬೆಂದು ಕರಕಲಾದ ಹೊಲಗದ್ದೆ ತೀರದ ಕಾಲುಹಾದಿಗುಂಟ…

“ಸರ..”

ನಾನು ಬೆಚ್ಚಿ ಹಿಂದಿರುಗಿ ನೋಡಿದೆ. ಎರಡು ವಾರದ ಹಿಂದೆ ಊರಿಗೆ ಬಂದಿಳಿದಾಗ ಬಸ್ ಸ್ಟಾಂಡಿನಲ್ಲಿ ಭೇಟಿಯಾಗಿದ್ದ ಅದೇ ವ್ಯಕ್ತಿ. ಅದೇ ಪಗಡಿ… ಅದೇ ಕೆಂಡದಂಥ ಕಣ್ಣುಗಳು ಈಗ ಮೀಸೆ ಕೆಳಗಿಂದ ಮುಸಿಮುಸಿ ನಗ್ತಾ ಇದ್ದಹಾಗೆ.

“ಮತ್ತೆ ಯಾಕ ಹಿಂದ ಬಿದ್ದೀರಿ ಯಜಮಾನ್ರ?”

“ಇಲ್ರೀ…ಮತ್ತ ಕಥೀ ಸಿಕ್ತೇನ್ರೀ”

“ಏನ್ ಕಥೆಯೋ ವ್ಯಥೆಯೋ”

“ಮತ್ತಿನೀನ್ ಬಿಡ್ರೀ…ಛಲೋ ಆತು. ಅವಾರ್ಡು ಪವಾರ್ಡೂನೂ ಸಿಕ್ಕೀತು”

-ವೃದ್ಧರ ಮಾತಿನಲ್ಲಿ ಇರಿಯುವ ವ್ಯಂಗ್ಯ. ನನ್ನಿಂದ ಮಾತನಾಡಲಾಗಲಿಲ್ಲ.

“ರಾಯರ ನಿಮಗೀಗ ವ್ಯಥೀ ಅನಿಸ್ತದ, ಹೈರಾಣಾಗೀರಿ. ನಾನು ಹದಿನೆಂಟ್ನೂರ ಎಂಬತ್ಮೂರ್ನಾಗೇ (1883) ಈ ಕಥೀ ಬರದೀನ್ರೀ. ಈ ಸಂಗಣ್ಣನ ಕಥಿ, ಅವನ ಅಪ್ಪ, ಅಜ್ಜ, ಮುತ್ತಜ್ಜರ ಕಥಿ… ಎಲ್ಲಾರದ್ದೂ ಒಂದೇ ಪಾಡ…”

ಮಾನ ಸಂರಕ್ಷಣೆಗ ಉಳಿದಿರುವುದೊಂದೇ ದಾರಿ

ನೇಣು ಹೊಳೆ ಬೆಂಕಿ ವಿಷ ಚೂರಿ.

ಸುಲಿಗೆಕೋರ ಕುಲಕರ್ಣಿಗಳು, ಮಾರ್ವಾಡಿಗಳು, ಸಾಲ ತೀರಿಸಲಿಕ್ಕಾಗದ ಅಸಹಾಯಕ ರೈತರು, ಕಂದಾಯ ಬಾಕಿ ಅದೂಇದೂಂತ ಹೊಲಮನಿ ಲಿಲಾವಿಗೆ ತರೋ ನಿರ್ದಯಿ ಕಲೆಕ್ಟರುಗಳು…

ಆಗ ಇಲಿ ಪಾಷಾಣಕ್ಕೂ ರೊಕ್ಕ ಇಲ್ಲದ ದತ್ತೂರಿ ತಿಂದ್ ಹೆಣ ಆದರು. ಸಾಲುಸಾಲು ಹೆಣ ಆದರು. ನೆಲದ ಈ ಅಂಚಿನಿಂದ ದಿಗಂತದ ಆ ಅಂಚಿನವರೆಗೆ ಭಾರತ ಮಾತಾಗ ನೇಗಿಲಯೋಗಿಗಗಳ ಹೆಣದ ತೋರಣ…

ಹದಿನೆಂಟ್ನೂರ ಎಂಬತ್ಮೂರ್ನಾಗೆ ಲೇಖನ ಬರದೆ, ಪುಸ್ತಕ ಬರದೆ. ರಾಣಿ ಸರ್ಕಾರಕ್ಕೆ, ಕಲೆಕ್ಟರ್ ಸಾಹೇಬರು, ಗೌರ್ನರ್ ಮೂಲಕ ಅರ್ಜಿ ಬರದೆ. ರೈತರ ಸಹಾಯಕ್ಕೆ ಬನ್ನಿ ಅಂತ ಮೊರೆ ಇಟ್ಟ…

“ಒಂದ್ನಿಮಿಷ…”

ನಾನು ಅವರನ್ನ ತಡೆದೆ. ಎನೋ ಅಂತರ್ಬೋಧೆಯಾದಂತೆ….

“ನೀವು `ಶೇಟ್ಕಾರ್ಯಾಚ ಅಸೂಡ್- ದಿ ಕಲ್ಟಿವೇಟರ್ಸ್ ವಿಪ್‍ಕಾರ್ಡ್ ಗ್ರಂಥದ ಕರ್ತೃ, ಸತ್ಯಶೋಧಕ ಸಮಾಜದ ಜ್ಯೋತಿರಾವ್ ಫುಲೆ.. ಹ್ಞಾಂ.. ನೀವು ಜ್ಯೋತಿ ರಾವ್ ಫುಲೆ… ಜ್ಯೋತಿ ಬಾ ಫುಲೆ.. ಹೌದೇನ್ರೀ…”

“ತೊಳಸಂಬಳಸ ಮಾಡ್ಕೊಬೇಡ್ರೀ ರಾಯರ. ಹೌದೂಂದ್ರ ಹೌದು ಅಲ್ಲ ಅಂದ್ರ ಅಲ್ಲ. ಜ್ಯೋತಿ ಬಾ ಆತು, ಗಾಂಧಿ ಆತು, ಅಂಬೇಡ್ಕರ್ ಆತು, ಬ್ರಿಟಿಷರು ಹೋದರು, ಸ್ವಾತಂತ್ರ್ಯ ಬಂತು, ನೆಹರೂ ಬಂದರು, ಮೋದಿ ಬಂದರು ಆದರ…ಆದರಾ…”

“ನೀವು ಜ್ಯೋತಿಬಾ ಫುಲೆ ಹೌದೋ, ಖರೇ ಹೇಳ್ರೀ…”

ಸ್ವಲ್ಪ ಜಗ್ಗಿಸಿ ಕೇಳ್ದೆ.

“ನಾನೀಗ ಜ್ಯೋತಿ ಬಾ ಅಲ್ಲ..”

“ಮತ್ತ”

“ಬೇಕಾದರೆ `ಕಾಲಜ್ಞಾನ’ ಅನ್ನು”

-ಎಂದು ನನ್ನನ್ನೇ ದಿಟ್ಟಿಸಿದರು. ನನ್ನಿಂದ ಅವರ ದೃಷ್ಟಿ ಎದುರಿಸಲಾಗಲಿಲ್ಲ.

“ಮತ್ತ ರೈತರ ಆತ್ಮಹತ್ಯಾ…”

-ಅವನತನಾಗಿಯೇ ಕೇಳಿದೆ.

ಮಾನ ಸಂರಕ್ಷಣೆಗೆ ಉಳಿದಿರುವುದೊಂದೇ ದಾರಿ…

ಒಂದೇ ದಾರೀ…

ಒಂದೇ ದಾರೀ….

ದಿಕ್ಕುದಿಕ್ಕುಗಳಲಿ ಅನುರಣಿಸಿದ ದನಿ ಮತ್ತೆ ನನ್ನೆದೆಗೆ ಅಪ್ಪಳಿಸಿತ್ತು.

“ಮತ್ತ ಇದಕ್ಕ ಪರಿಹಾರ ಏನ್ರೀ…”

“ಕಂಗಾಲಾಗಬೇಡ ತಮ್ಮಾ… ಸಮಸ್ಯ ಬಗಿಹರಸೋ ಇಚ್ಛಾ ಯಾರಿಗೂ ಇಲ್ಲ. ಸಮಸ್ಯಾ ಇದ್ದರತಾನ ಆಳೋ ಮಂದಿ ಬೇಳೆ ಬೇಯೋದು…”

“ಹಾಗಾದ್ರೇ…”

“ಸಮಸ್ಯಾ ನೀ ಬಗಿಹರಸು…”

“ಹ್ಯಾಂಗ್ರೀ…”

“ತಮ್ಮಾ ಆಳೋ ಮಂದಿ ಆತ್ಮ ಸತ್ತದ ತಮ್ಮಾ. ಆಳೋ ಮಂದಿ ಜಡಾ ಆದ್ರ, ಇಂದ್ರಿಯಗಳು ಸಂವೇದನಾ ಕಳ್ಕೊಂಡರ ಮೂರನೇ ಕಣ್ಣು ತೆರೀಬೇಕಾಗ್ತದ.. ಮೂರನೇ ಕಣ್ಣು… ನೀನು ಮೂರನೇ ಕಣ್ಣು ನೀ ಆಗ್ತೀಯಾ?”

ನನ್ನೆದೆಯಲ್ಲಿ ಡವಡವ…

“ನನ್ನಿಂದ ಸಾಧ್ಯಾನಾ?”

“ಸಾಧ್ಯಾನಾ..” ಎಂದು ಗಹಗಹಿಸಿ ನಕ್ಕರು.

“ನಿನ್ನಿಂದ ಸಾಧ್ಯ ಎಲ್ಲಿಂದ ಬಂತು… ನೀನು ಫೋರ್ತ್ ಎಸ್ಟೇಟು.. ಹೇಳಿಕೇಳಿ ಹೆಸರಿನಾಗೆ ಎಸ್ಟೇಟ್ ಸೇರಿಸ್ಕೊಂಡಿರೋನು… ಹ್ಹ..ಹ್ಹ..ಹ್ಹ ಹೆಸರಿನಾಗೆ ಎಸ್ಟೇಟ ಒಡೆಯರು ನೀವು.. ಹ್ಹ…ಹ್ಹ..ಹ್ಹ..”

“ಹಾಗೆ ನಗಬ್ಯಾಡ್ರೀ…ಮತ್ತ ಇದಕ್ಕ ಪರಿಹಾರ?”

“ಕಾಯ ಬೇಕು”

“ಎಷ್ಟು ಕಾಲ?”

“ಕಾಲ ಕಾಯ್ತಾ ಇದೆ ತಮ್ಮಾ… ಕಾಲ ಕಾಯ್ತಾ ಇದೆ…

ಭೂ ತಾಯಿ ಹೊಡೆಮರಳೀ ಅಂಗಾತ ಹೊರಳಿ ಕೆಮ್ಮಣ್ಣಾಗೋ ಸುಮುಹೂರ್ತದ ವ್ಯಾಳ್ಯಾದ ನಿರೀಕ್ಷೆಯಲ್ಲಿ ಕಾಯ್ತಾ ಇದೆ.

ಮುಗಿಲಹಕ್ಕಿ ರೋಗಿಲ್ಲದ, ಕೇಡಿಲ್ಲದ ಹೊಚ್ಚಹೊಸಾ ಬೀಜ ತಂದು ಉದುರಿಸುವ ಸುಮುಹೂರ್ತಕ್ಕಾಗಿ ಕಾಯ್ತಾ ಅದ-

ಕಾಯ್ತಾ ಅದ…

ನವಮಾನವ ರೂಪಿಗಾಗಿ

ಕಾಯ್ತ ಅದ

ನವಮಾನವರೂಪಿಗಾಗಿ.

‘ತಾಯಿನಾಡು’ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಲೇಖಕರ ವೃತ್ತಿ ಜೀವನದ ಆರಂಭ. ‘ಪ್ರಜಾವಾಣಿ’ ಬಳಗದಲ್ಲಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿ ಬೋಧನೆ, ಅಂಕಣ ಬರಹದಲ್ಲಿ ನಿರತರು.

Leave a Reply

Your email address will not be published.