ಜ್ಯೋತಿಷಿಗಳು ಬಿಚ್ಚಿಟ್ಟ ರಹಸ್ಯಗಳು ಬೆಚ್ಚಿಬಿದ್ದ ಟಿವಿ ವೀಕ್ಷಕರು!

-ಬಾಲಚಂದ್ರ ಬಿ.ಎನ್.

ನಾಡಿನ ಜನರ ನಾಡಿಮಿಡಿತ, ಹೃದಯಬಡಿತ ಹಾಗೂ ವೀಕ್ಷಕರ ಮನೋಗತವನ್ನು ಇಡೀಯಾಗಿ ಅರಿತ ವಾಹಿನಿಯೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಅದರಲ್ಲಿ ಭಾಗವಹಿಸಿದ ಮೂವರು ಜ್ಯೋತಿಷಿಗಳು ಬಯಲು ಮಾಡಿದ ರಹಸ್ಯಗಳನ್ನು ಕೇಳಿದರೆ ನೀವೂ ಬೆಚ್ಚಿಬೀಳುತ್ತೀರಿ!

ನಮಸ್ಕಾರ ಪ್ರಿಯ ವೀಕ್ಷಕರೇ,

ಕಸ-ವಿಷ ವಿಶೇಷ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸ್ವಾಗತ.

ಕನ್ನಡಿಗರ ಸಾಕ್ಷಿ ಪ್ರಜ್ಞೆಯಾಗಿ, ದೇಶದ ಆಗುಹೋಗುಗಳನ್ನು ನಿಮ್ಮೆದುರಿಗಿಡುವ ಮಹತ್ತರ ಕರ್ತವ್ಯ ಹೊತ್ತು, ಅತ್ಯಂತ ಜವಾಬ್ದಾರಿಯುತವಾದ ನಮ್ಮ ಚಾನಲ್ ಈ ಕಾರ್ಯಕ್ರಮವನ್ನು ಮಾಡ್ತಾ ಇದೆ.

ಮೂರು ಜನ ಜ್ಯೋತಿಷಿಗಳು ನಮ್ಮ ದೇಶದ, ನಮ್ಮ ನಾಡಿನ ಭವಿಷ್ಯವನ್ನು ತಮ್ಮ ಪ್ರತಿಭೆಗಳ ಮೂಲಕ ನಿಮ್ಮ ಕಣ್ಮುಂದೆ ಬಯಲು ಮಾಡಲಿದ್ದಾರೆ.

ಮೊದಲನೆಯದಾಗಿ ಕವಡೆ ಜ್ಯೋತಿಷಿ ಕಣ್ಣನ್ ಅವರಿಗೆ ಸ್ವಾಗತ. ಇವರು ಕವಡೆ ಜ್ಯೊತಿಷ್ಯಾಸ್ತ್ರದಲ್ಲಿ ಮಾಡಿರುವ ಅಗಾಧ ಸಾಧನೆಗಾಗಿ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕಾರ್ಯಕ್ರಮಕ್ಕೆ ಸ್ವಾಗತ ಕಣ್ಣನ್ ಗುರೂಜಿಯವರೇ,

‘ನಮಸ್ಕಾರ, ನಾನು ಅಂದ್ರೆ ಕವಡೆ, ಕವಡೆ ಅಂದ್ರೆ ನಾನು’.

ಮೊದಲನೆಯದಾಗಿ ಗುರೂಜಿಯವರೆ, ದೇಶದೆಲ್ಲೆಡೆ ರೈತರು ಪ್ರತಿಭಟನೆ ಮಾಡ್ತಾ ಇರೋದ್ನಾ ನೋಡಿದೀರಾ. ನಮ್ಮ ಚಾನಲ್ಲಿನಲ್ಲಿ 24 ಅವರ್ ಎಲ್ಲರೂ ತುಂಬಾ ಸಂತೋಷವಾಗಿ ರಸ್ತೆಗಳಲ್ಲೇ ಉಂಡು ಮಲಗಿ, ಅಲ್ಲೇ ಪೊಲೀಸರೊಂದಿಗೆ ಕೋಲಾಟದಲ್ಲಿ ಭಾಗಿಯಾಗುತ್ತಾ ನೃತ್ಯ ಮಾಡ್ತಾ ಇರೋದನ್ನೂ ನೋಡಿದೀರಾ. ಸರ್ಕಾರದ ವಿರುದ್ಧ ರೈತರು ಮಾಡ್ತಾ ಇರೋ ಪ್ರತಿಭಟನೆಯ ಭವಿಷ್ಯದ ಬಗ್ಗೆ ನಿಮ್ಮ ಕವಡೆ ಶಾಸ್ತ್ರ ಏನು ಹೇಳುತ್ತೆ?

ಗುರುಗಳು ಕವಡೆಯನ್ನು ಗಿರಗಿರನೆ ತಿರುಗಿಸಿ ಚೆಲ್ಲಿದರು. ಅದನ್ನು ಮೂವತ್ತು ಸೆಕೆಂಡು ಝೂಮ್ ಮಾಡಿ ತೋರಿಸಲಾಯಿತು.

‘ನೋಡಿ ಆರು ಪ್ಲಸ್ ಆರು ಹದಿನಾರು… ಅದರಲ್ಲಿ ಅರ್ಧ ಎಂದರೆ ಒಂಬತ್ತು.

ಗುರೂಜಿ, ಆರು ಪ್ಲಸ್ ಆರು ಹನ್ನೆರಡಲ್ಲವೇ?

‘ಇದನ್ನು ಹಾಗೆಲ್ಲಾ ಲೆಕ್ಕ ಹಾಕಬಾರದು, ಮೋದಿ ಎಂದರೆ ನಿಮ್ಮ ಮನಸಿಗೆ ಬರೋದು ನರೇಂದ್ರ ಮೋದಿಯೋ? ನೀರವ್ ಮೋದಿಯೋ? ಗಾಂಧಿ ಜಯಂತಿಯನ್ನು ನಾವು ಅಕ್ಟೋಬರ್ ಎರಡರಂದು ಆಚರಿಸುತ್ತೇವೋ ಅಥವಾ ಏಪ್ರಿಲ್ ಒಂದರದು ಆಚರಿಸುತ್ತೇವೋ ಅನ್ನುವುದರ ಮೇಲೆ ಅದು ಯಾವ ಗಾಂಧಿ ಅಂತ ನಿರ್ಧಾರವಾಗೋದಿಲ್ಲವೇ…’

ಗುರೂಜಿ ಹೋಗ್ಲಿ ಬಿಡಿ… ಹದಿನಾರರಲ್ಲಿ ಅರ್ಧ ಅಂದರೆ ಒಂಬತ್ತು ಅಂತ ಹೇಳ್ತಾ ಇದ್ರಿ…

‘ಹಾ… ಅಂದರೆ ನವಗ್ರಹಗಳ ಕ್ರೂರದೃಷ್ಟಿ ಈ ದೇಶದ ಮೇಲೆ ತುಂಬಾ ಪ್ರಬಲವಾಗಿದೆ. ಈ ಪರಿಸ್ಥಿತಿ ಅನಿರ್ದಿಷ್ಟ ಕಾಲಕ್ಕೆ ಮುಂದುವರೆಯತ್ತೆ. ಜನರು ಮನಸು ಮಾಡಿದರೆ ಮಾತ್ರ ಇದನ್ನು ಬದಲಾಯಿಸಬಹುದು. ಆದರೆ ಅದು ಅತಿ ಶೀಘ್ರದಲ್ಲಿ ಆಗಬೇಕು ಅಂತ ನಮ್ಮ ಕವಡೆಗಳು ಹೇಳ್ತಾ ಇದೆ’.

ಧನ್ಯವಾದಗಳು ಕಣ್ಣನ್ ಗುರೂಜಿಯವರಿಗೆ. ಅಂದರೆ ಗುರೂಜಿಯವರು ದೇಶಕ್ಕೆ ತುಂಬಾ ಒಳ್ಳೇದಾಗುತ್ತೆ ಅಂತ ಹೇಳಿದ್ದಾರೆ. ರೈತರು ಬೀದಿಬೀದಿಯಲ್ಲಿ ಹಾಡೇಳಿಕೊಂಡು ಕುಣಿಯುವಂತಾ ಸಂಭ್ರಮದ ಪರಿಸ್ಥಿತಿ ಮುಂದುವರೆಯತ್ತೆ ಅಂತಾನೂ ಹೇಳಿದಾರೆ. ಅಂದರೆ ಕಣ್ಣನ್ ಗುರೂಜಿಯವರ ಪ್ರಕಾರ ದೇಶದ ಆಡಳಿತ ಸಮರ್ಥವಾಗಿದೆ. ನಮ್ಮ ಚಾನಲ್ ಕೂಡ ಮೊದಲಿನಿಂದಲೂ ಪದೇಪದೇ ಇದನ್ನೇ ಹೇಳ್ತಾ ಬಂದಿದೆ.

ಮುಂದಿನ ಜ್ಯೋತಿಷಿ ಗಿಳಿಶಾಸ್ತ್ರದ ಗಿರಿರಾಜ್ ಅವರು

ಗುರೂಜಿಯವರೇ, ಕಾರ್ಯಕ್ರಮಕ್ಕೆ ಸ್ವಾಗತ. ಇಷ್ಟರಲ್ಲೇ ನೀವು ಗಿಳಿಶಾಸ್ತ್ರದ ಯೂನಿವರ್ಸಿಟಿ ಆರಂಭಿಸುತ್ತಿದ್ದೀರಾ ಅನ್ನೋ ಸುದ್ದಿ ಎಲ್ಲಾ ಕಡೆ ಹರಿದಾಡ್ತಾ ಇದೆ. ಇಂಥಾ ಪ್ರಖ್ಯಾತರಾದ ನೀವು ನಮ್ಮ ಕಾರ್ಯಕ್ರಮಕ್ಕೆ ಬಂದಿರೋದು ತುಂಬಾ ಸಂತೋಷ.

‘ನಮಸ್ಕಾರ, ಗಿಳಿಶಾಸ್ತ್ರ ತುಂಬಾ ಪ್ರಾಚೀನ ಕಲೆ. ನೀವು ವಿಚಾರವಾದ, ವಿಜ್ಞಾನಕ್ಕೆ ಬೆಲೆ ಕೊಡುವುದಕ್ಕಿಂತ ಇಂಥಾ ನೆಲದ ಮಣ್ಣಿನ ವಿದ್ಯೆಗಳನ್ನು ಪ್ರೋತ್ಸಾಹಿಸಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೀನಿ. ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಗಿಳಿಶಾಸ್ತ್ರ ಯೂನಿವರ್ಸಿಟಿಗೆ ಅಡಿಗಲ್ಲು ಹಾಕಿದಾರೆ’.

ಸಂತೋಷ ಗುರೂಜಿ, ಪ್ರಸ್ತುತ ವಿಷಯಕ್ಕೆ ಬಂದರೆ…  ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳ, ಕಾರ್ಮಿಕ ಸಮಸ್ಯೆಗಳು ಮುಂತಾದವುಗಳ ಬಗ್ಗೆ ನಿಮ್ಮ ಗಿಳಿ ಏನು ಹೇಳುತ್ತೆ ಗುರೂಜಿ?

(ಪಂಜರದೊಳಗಿಂದ ಒಂದು ಗಿಳಿಯನ್ನು ಹೊರಬಿಡಲಾಯ್ತು. ಅದನ್ನು ಮೂವತ್ತು ಸೆಕೆಂಡು ಝೂಮ್ ಮಾಡಿ ತೋರಿಸಲಾಯಿತು. ಅದರ ಮುಂದೆ ಹತ್ತು ಕಾರ್ಡುಗಳನ್ನು ಹರವಿಡಲಾಯಿತು. ಅದರಲ್ಲೊಂದು ಕಾರ್ಡು ಆರಿಸುವಂತೆ ಗಿಳಿಯನ್ನು ಆತ ತಿವಿದ. ಟೀವಿ ಸ್ಕ್ರೀನಿನ ಮೇಲೆ ಚಿತ್ರೀಕರಣದ ವೇಳೆ ನಾವು ಯಾವುದೇ ಪ್ರಾಣಿ ಪಕ್ಷಿಗಳಿಗೆ ಹಿಂಸೆ ನೀಡಿರುವುದಿಲ್ಲ ಎಂಬ ಅಕ್ಷರಗಳು ಮೂಡಿಬಂತು)

‘ನೋಡಿ, ಈ ಗಿಳಿ ಮೂರು ಕಾರ್ಡುಗಳನ್ನು ಆರಿಸಿದೆ. ಒಂದರಲ್ಲಿ ಒಬ್ಬ ಕೊಬ್ಬಿದ ಧಡೂತಿ ಮನುಷ್ಯ ನರಪೇತಲನೊಬ್ಬನ ಕುತ್ತಿಗೆಯನ್ನು ಹಿಸುಕಿ ಸಾಯಿಸುತ್ತಿದ್ದಾನೆ. ಎರಡನೇ ಕಾರ್ಡಿನಲ್ಲಿ ಅಸ್ಥಿ ಪಂಜರಗಳ ಮಧ್ಯದಲ್ಲಿ ಬಡವಾಗಿರುವ ಮನುಷ್ಯನೊಬ್ಬ ದಣಿದು ಕುಳಿತಿದ್ದಾನೆ. ಮೂರನೇ ಕಾರ್ಡಿನಲ್ಲಿ ತೋಳವೊಂದು ಕುರಿಮರಿಗೆ ಮಮತೆಯಿಂದ ಹುಲ್ಲು ತಿನ್ನಿಸುತ್ತಾ ಇದೆ’.

ತುಂಬಾ ಚೆನ್ನಾಗಿದೆ ಗುರೂಜಿ, ನಿಮ್ಮ ಗಿಳಿ ಆರಿಸಿರುವ ಕಾರ್ಡುಗಳಲ್ಲಿರೋ ಚಿತ್ರ ನೋಡಿದರೇ, ನಿಮ್ಮ ವಿಶ್ಲೇಷಣೆಯ ಅವಶ್ಯಕತೆಯೇ ಬೇಕಿಲ್ಲ. ಅಷ್ಟು ಸ್ಪಷ್ಟವಾಗಿದೆ. ದೇಶದ ಪ್ರತಿಯೊಬ್ಬನೂ ಕೂಡ ಇನ್ನೊಬ್ಬರನ್ನು ಹಿಂಸಿಸುವಷ್ಟು ಸದೃಢನಾಗ್ತಾನೆ. ಕಾರ್ಮಿಕ ತಾನು ಅಸ್ಥಿಪಂಜರವಾಗುವರೆಗೂ ದುಡಿಯದಿದ್ದರೆ ಹಸಿದು ಸಾಯಬೇಕಾಗುತ್ತದೆ. ಮತ್ತೆ ಸಮಾಜದಲ್ಲಿರೋ ತಾರತಮ್ಯಗಳು ಹಂತಹಂತವಾಗಿ ನಾಶವಾಗಿ ಪ್ರೀತಿ ಮೂಡುತ್ತಿದೆ. ನಮ್ಮ ಚಾನಲ್ಲೂ ಕೂಡ ಮೊದಲಿನಿಂದ ಪದೇಪದೇ ಇದನ್ನೇ ಹೇಳ್ತಾ ಬಂದಿದೆ.

‘ಅಲ್ಲಮ್ಮ.. ನಾನು ಏನು ಹೇಳ್ಬೇಕೂಂತ ಇದೀನಿ ಅಂದ್ರೆ…’

ಅರ್ಥವಾಯ್ತು ಗುರೂಜಿ, ನೀವು ಕೂಡ ಇದನ್ನೇ ಹೇಳ್ಬೂಕೂಂತ ಇದ್ರಿ. ಸಮಯ ಆಗ್ತಾ ಇದೆ. ನಮ್ಮ ಮುಂದೆ ಮತ್ತೊಬ್ಬ ಜ್ಯೋತಿಷಿಗಳು ಹಾಜರಿದ್ದಾರೆ.

ನಮ್ಮ ದೇಶದ ಆರ್ಥಿಕ ಸಮಸ್ಯೆ, ಗಡಿ ಸಮಸ್ಯೆ, ಸಾಂಕ್ರಾಮಿಕದ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಮಾತನಾಡಲು ಇವತ್ತು ನಾಡಿನ ವಿಖ್ಯಾತ ತಾಳೆಗರಿ ಜ್ಯೋತಿಷಿಗಳಾದ ಲಫಡಾ ಲಘೋತ್ತಮ ಗುರೂಜಿ ಅವರು ಬಂದಿದಾರೆ. ಇವರು ತುಕಾಲಿ ಶಾಸ್ತ್ರಗಳ ಕುರಿತ ಅಧ್ಯಯನಕ್ಕಾಗಿ ಮಾದನಾಯನಕನ ಹಳ್ಳಿಯ ತಗಡ್ ಯೂನಿವರ್ಸಿಟಿಯಿಂದ ಡಾಕ್ಟರೇಟ್ ಪದವಿಯನ್ನು ಗಳಿಸಿದ್ದಾರೆ. ಜೊತೆಗೆ ಕಣಿ ಮತ್ತು ಹೋರಾ ಶಾಸ್ತ್ರಗಳ ತೌಲನಿಕ ಅಧ್ಯಯನ ಎಂಬ ಇವರ ಪುಸ್ತಕವನ್ನು ಮುಖ್ಯಮಂತ್ರಿಗಳೇ ಬಿಡುಗಡೆ ಮಾಡಿರುವುದನ್ನು ನಾಡಿನ ಜನತೆ ಮರೆತಿಲ್ಲ.

ಕಾರ್ಯಕ್ರಮಕ್ಕೆ ಸ್ವಾಗತ ಲಘೋತ್ತಮ ಗುರೂಜಿಯವರೇ.

‘ನಮಸ್ಕಾರ, ಸರ್ವೇ ಜನಾ ಸುಖಿನೋ ಭವಂತು… ವಸುದೈವ ಕುಟುಂಬಕಂ. ಅಂದರೆ ಸರ್ವೆ ಮಾಡುವ ಜನರೆಲ್ಲಾ, ಅಂದರೆ ನಿಮ್ಮ ಮೀಡಿಯಾದವರು, ಅಂದರೆ ವಸ್ತುನಿಷ್ಠವಾಗಿರದ ಸಮೀಕ್ಷೆಯನ್ನು ಮಾಡುವವರು ಸುಖವಾಗಿರಲಿ. ವಸುದೈವ ಕುಟುಂಬಕಂ. ವಸುಧೆ ಜನಸಂಖ್ಯೆ ಹೆಚ್ಚಾಗಿ ನರಳುತ್ತಿದ್ದಾಳೆ. ಇಡೀ ಪ್ರಪಂಚದಲ್ಲಿ, ಮುಖ್ಯವಾಗಿ ಭಾರತದಲ್ಲಿ ಕುಟುಂಬ ಯೋಜನೆ ಕಡ್ಡಾಯವಾಗಿ ಜಾರಿಗೆ ಬರಲಿ’.

ತುಂಬಾ ಅರ್ಥಪೂರ್ಣವಾಗಿವೆ ಗುರೂಜಿ ನಿಮ್ಮ ಆರ್ಯೋಕ್ತಿಗಳು,

‘ಇದರಲ್ಲಿ ನಂದೇನೂ ಇಲ್ಲಮ್ಮ. ಎಲ್ಲಾ ಈ ತಾಳೆಗರಿ ಶಾಸ್ತ್ರದಲ್ಲಿ ಬರೆದಿಟ್ಟುಬಿಟ್ಟಿದ್ದಾರೆ. ಅನುಭವಿಸಬೇಕಷ್ಟೇ… ಅವರವರ ಕರ್ಮ’.

ನಿಜ ಗುರೂಜಿ, ನಮ್ಮ ಚಾನಲ್ಲೂ ಕೂಡ ಮೊದಲಿನಿಂದ ಪದೇಪದೇ ಅದನ್ನೇ ಹೇಳುತ್ತಾ ಬಂದಿದೆ.

ಈಗ ಹೇಳಿ ಗುರೂಜಿ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿಮ್ಮ ತಾಳೆಗರಿಯಲ್ಲಿ ಏನು ಹೇಳಿದೆ?

‘ತಾಳೆಗರಿಗಳಲ್ಲಿ ಸಾವಿರಾರು ವರ್ಷಗಳ ಮುಂಚೆಯೇ ಎಲ್ಲವನ್ನೂ ಬರೆದಿಟ್ಟು ಬಿಟ್ಟಿದ್ದಾರೆ. ಆದರೆ ಅದನ್ನು ಓದೋಕೆ ಮಾತ್ರ ಯಾರಿಗೂ ಬರಲ್ಲ ಅಷ್ಟೇ. ನಮ್ಮಂತಹ ಮಹಾ ಮಹಾ ಪಂಡಿತರು ಮಾತ್ರ ನೂರಕ್ಕೆ ಶೇಕಡಾ ಒಂದರಷ್ಟು ಅರ್ಥ ಮಾಡಿಕೊಂಡು ಅದನ್ನು ಹೇಳಬಹುದು. ಅಷ್ಟಕ್ಕೇ ನನಗೆ ಪಿಎಚ್ಡಿ ಸಿಕ್ಕಿದೆ. ಇನ್ನು ಇದೇ ಥರಾ ಆಡಳಿತ ಇದ್ರೆ, ಮುಂದೊಂದು ದಿನ ಭಾರತ ರತ್ನ ಬಂದರೂ ಬರಬಹುದು. ನಮ್ಮ ತಾಳೆಗರಿ ಜ್ಞಾನ ಅಷ್ಟು ಅಗಾಧವಾದದ್ದು…

‘ಇರಲಿ, ಆರ್ಥಿಕ ಪರಿಸ್ಥಿತಿ ಅಂದ ತಕ್ಷಣ ನಿಮಗೆ ಕೆಳಮುಖವಾಗಿರುವ ಜಿಡಿಪಿ ಗ್ರಾಫ್ ಒಂದರ ಚಿತ್ರ ಬರುತ್ತೆ. ಕೆಳಮುಖವಾಗಿರುವ ಗ್ರಾಫ್ ಅಂದ ತಕ್ಷಣ ನಮ್ಮ ಕಣ್ಮುಂದೆ ನೇಗಿಲಿನ ಚಿತ್ರ ಬರುತ್ತೆ. ನೇಗಿಲು ಅಂದ್ರೆ ರೈತ. ನೇಗಿಲನ್ನು ಆಯುಧವಾಗಿ ಹಿಡಿದವನು ಬಲರಾಮ. ಅಂದರೆ ರೈತರು ಬಲ ಕಳೆದುಕೊಂಡು ರಾಮಸಾನ್ನಿಧ್ಯ ಸೇರ್ತಾರೆ ಅಂತರ್ಥ. ಕೃಷಿತೋ ನಾಸ್ತಿ ದುರ್ಭಿಕ್ಷಂ. ಕೃಷಿಯನ್ನೇ ನಂಬಿಕೊಂಡಿರುವವರು ದುರ್ಭಿಕ್ಷದಿಂದ ನೇಣು ಹಾಕಿಕೊಂಡು ನಾಸ್ತಿಯಾಗುತ್ತಾರೆ ಅಂತ ತಾಳೆಗರಿಯಲ್ಲಿ ಸಾವಿರಾರು ವರ್ಷಗಳ ಮುಂಚೆಯೇ ಹೇಳಿದೆ…’

ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಗುರೂಜಿ, ಅಂದ್ರೆ ಹೋರಾಟಗಳನ್ನು ಯಶಸ್ವಿಯಾಗಿ ಮುಗಿಸಲಾಗುತ್ತದೆ… ಐ ಮೀನ್ ಪರಿಹರಿಸಲಾಗುತ್ತದೆ.  ಪ್ರತಿಭಟನೆಗಳನ್ನು ನಿರ್ನಾಮ ಮಾಡುತ್ತಾರೆ… ಐಮೀನ್ ಸಮರ್ಥವಾಗಿ ನಿಯಂತ್ರಿಸುತ್ತಾರೆ ಅಂತ ಗುರೂಜಿ ಹೇಳಿದ್ರು. ನಮ್ಮ ಚಾನೆಲ್ ಕೂಡ ಮೊದಲಿನಿಂದ ಪದೇಪದೇ ಇದನ್ನೇ ಹೇಳ್ತಾ ಬಂದಿದೆ.

ಸೋ… ದೇಶದ ಗಡಿ ಸಮಸ್ಯೆ ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ಏನು ಹೇಳ್ತೀರಾ ಗುರೂಜಿ…

‘ಭಾನಗಡಿಯಲ್ಲಿ ಗಡಿ ಎಂಬ ಪದವಿದೆ. ಸಾಂಕ್ರಾಮಿಕದಲ್ಲಿ ಮಿಕ ಎಂಬ ಪದ ಇದೆ. ನೀವು ಒಂದನೇ ತಾರೀಕು ಈ ಪ್ರಶ್ನೆ ಕೇಳಿರುವುದರಿಂದ ಸಾಂಕ್ರಾಮಿಕದಿಂದ ಬೇರೆಡೆಗೆ ಮಿಕಗಳ ಗಮನ ಸೆಳೆಯಲು ಒಂದು ಭಾನಗಡಿಯನ್ನು ಉತ್ಪ್ರೇಕ್ಷಿಸಲಾಗುತ್ತಿದೆ ಎಂದು ಹೇಳಬಹುದು. ಬಲಾತ್ ಭೋಗಾಯ ಕಲ್ಪತೇ. ಅಂದರೆ ಭಯ ಪಡಿಸಿದರೆ ಮಾತ್ರ ಭೋಗಭಾಗ್ಯಗಳನ್ನು ಅನುಭವಿಸಬಹುದು. ಆದರೆ ಎಲ್ಲ ಮಿಕಗಳಿಗೂ ಶೀಘ್ರದಲ್ಲೇ ಭಾನಗಡಿಯ ಅರಿವಾಗಲಿದೆ’.

ಆದರೆ ಇವತ್ತು ತಾರೀಖು ಎರಡು ಗುರೂಜಿ!

‘ಅವರೆಡಕ್ಕೂ ತಾಳೆಗರಿಯ ಪ್ರಕಾರ ಒಂದೇ ಒಂದು ಸಂಖ್ಯೆ ವ್ಯತ್ಯಾಸವಲ್ಲವೇ. ಹಾಗಾಗಿ ಒಂದಲ್ಲ ಒಂದು ದಿನ ಇದು ನಡೆದೇ ನಡೆಯುತ್ತೆ’.

ತುಂಬಾ ಧನ್ಯವಾದಗಳು ಗುರೂಜಿ. ನಮ್ಮ ಚಾನಲ್ಲೂ ಕೂಡ ಮೊದಲಿನಿಂದ ಇದೇ ಹೇಳುತ್ತಾ ಬಂದಿದೆ. ದೇಶದಲ್ಲಿ ಹೊಸ ಅಲೆ ಏಳುತ್ತಾ ಇದೆ. ದೇಶದೆಲ್ಲೆಡೆ ಸಂಭ್ರಮದ ವಾತಾವರಣ ಮೂಡುತ್ತಾ ಇದೆ. ದೇಶದೆಲ್ಲೆಡೆ ಸಮೃದ್ಧತೆ ಮನೆ ಮಾಡಿದೆ. ಜೊತೆಗೆ ನಮ್ಮ ಚಾನಲ್ ಕೂಡ ಅತ್ಯಂತ ಜವಾಬ್ದಾರಿಯುತವಾಗಿ ತನ್ನ ಹೊಣೆಗಾರಿಕೆಯನ್ನು ನಿರ್ವಹಿಸುತ್ತಾ ಇದೆ. ಕಸ ವಿಷ ಕಾರ್ಯಕ್ರಮ ಮುಕ್ತಾಯವಾಗುವ ಸಮಯ ಹತ್ತಿರ ಬಂದಿದೆ.

ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮೆಲ್ಲರ ಅಚ್ಚುಮೆಚ್ಚಿನ ‘ಕೊಚ್ಚೆ-ರೊಚ್ಚು’ ಕಾರ್ಯಕ್ರಮ ಪ್ರಸಾರವಾಗಲಿದೆ. ವೀಕ್ಷಿಸುತ್ತಾ ಇರಿ.

Leave a Reply

Your email address will not be published.