ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ ಎತ್ತು ಹೊಗೆ ಉಗುಳುವುದಿಲ್ಲ!

-ಹುರುಕಡ್ಲಿ ಶಿವಕುಮಾರ

ರಂಗಪ್ಪನ ಜಾತ್ರೆ ಮುಗಿಸಿ ಊರಿಗೆ ಬರುವಷ್ಟರಲ್ಲೇ ಕತ್ತಲಾಗಿಬಿಡುತ್ತಿತ್ತು. ಆದರೆ ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದಿರ ಬೆಳಕು ಚೆಲ್ಲುತ್ತಾ ಬಂದು ಕತ್ತಲೆಯನ್ನು ಓಡಿಸುತ್ತಿದ್ದ. ಮರುದಿನ ಬೆಳಿಗ್ಗೆ ಬಣ್ಣದೋಕುಳಿ ಆಡಲು ಸನ್ನದ್ಧರಾಗಿ ನಮ್ಮೂರೆಲ್ಲಾ ನಿದ್ರೆಗೆ ಜಾರುತ್ತಿತ್ತು. ಇದು ಈಗಲೂ ಮುಂದುವರೆದೇ ಇದೆ. ಆದರೆ… ಕರೋನಾ ಹಾವಳಿಯಲ್ಲಿ ಈ ವರ್ಷ ಕ್ಯಾ ಕರೋನಾ…?

ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ, ಮುತ್ಕೂರು, ಕಿತ್ತನೂರು, ರಾಮೇಶ್ವರಬಂಡಿ, ತೆಲುಗೋಳಿ… ಹೀಗೆ ಹತ್ತಾರು ಹಳ್ಳಿಯ ರೈತಾಪಿ ಕುಟುಂಬಗಳಿಗೆ ಬಳ್ಳಾರಿ ಜಿಲ್ಲೆ ತಂಬ್ರಹಳ್ಳಿಯ ರಂಗಪ್ಪನ ಜಾತ್ರೆಯೆಂದರೆ ವರ್ಷಕ್ಕೊಮ್ಮೆ ಸಿಗುವ ಅತ್ಯಂತ ಸಂಭ್ರಮ ಸಡಗರದ ಹಬ್ಬವಾಗಿದೆ. ಈ ಹಬ್ಬ ಸಮೀಪಿಸುತ್ತಲೇ ತಂಬ್ರಹಳ್ಳಿಯಲ್ಲಿ ಹವ್ಯಾಸಿ ಕಲಾವಿದರಿಂದ ನಾಟಕ ಕಲಿಕೆ ಆರಂಭವಾಗುತ್ತದೆ. ಊರಿನ ಯುವಕರು ಯಾವುದಾದರೊಂದು ನಾಟಕ ಕೃತಿಯನ್ನು ಆಯ್ದಕೊಂಡು ಅದಕ್ಕೊಬ್ಬ ಹಾರ್ಮೋನಿಯಂ ಮಾಸ್ತರರನ್ನು ಖಾಯಂ ಮಾಡಿಕೊಂಡು ನಾಟಕದ ತಾಲೀಮು ಶುರು ಮಾಡುತ್ತಾರೆ. ಈ ನಾಟಕದ ಪಾತ್ರಧಾರಿಗಳು ನಾಟಕದ ಮಾತುಗಳನ್ನು ಪುಸ್ತಕದಲ್ಲಿ ಬರೆದುಕೊಳ್ಳುವುದು ಆ ಪುಸ್ತಕವನ್ನು ಹೊಲಕ್ಕೆ ಒಯ್ದು ಕಂಠಪಾಠ ಮಾಡುವುದು ಒಂದು ಸಂಭ್ರಮವಾದರೆ ಮತ್ತೊಂದು ಕಡೆ ಅಂದೇ ತಾಲೀಮಿನ ಮನೆಗೆ ಹೋಗಿ ಕಲಿತ ಮಾತುಗಳನ್ನು ಅಭಿನಯಿಸುವ ಉಮೇದು ಹೇಳತೀರದು.

ಈ ನಡುವೆ ಪಾತ್ರಧಾರಿಗಳಾಗಿ ಆಗಮಿಸುವ ನಟಿಯರೊಂದಿಗೆ ಹಾಡು ಹಾಡಿ ನರ್ತಿಸುವ ತಾಲೀಮಿನ ಮೋಜಿನ ಖುಷಿಯೇ ಬೇರೆ. ಉಳಿದಂತೆ ತಂಬ್ರಹಳ್ಳಿಯಲ್ಲಿ ಮನೆ ಮನೆಯ ಹೆಣ್ಣು ಮಕ್ಕಳಿಗೆ ದೂಳು ಕೊಡಹುವುದು, ಸುಣ್ಣ ಬಣ್ಣ ಬಳಿಯುವುದು ದಣಿವಿನ ಕೆಲಸವೇನೋ ಹೌದು. ಆದರೆ ಹಾಗೇ ದೂಳು ಕೊಡುಹುವಾಗ ಪರಸ್ಪರ ಹಾಸ್ಯ ಮಾಡುತ್ತಾ, ದೂರದ ಊರಿನ ಬೀಗರಿಗೆ ಮೊಬೈಲ್‍ನಲ್ಲೇ ಜಾತ್ರೆಗೆ ಆಹ್ವಾನ ನೀಡುತ್ತಾ ಹರಟೆ ಹೊಡೆಯುತ್ತಾ ಈ ಕೆಲಸದಲ್ಲೂ ಒಂದು ಸಂಭ್ರಮವನ್ನು ಕಾಣಬಯಸುತ್ತಾರೆ.

ಬಾಚಿಗೊಂಡನಹಳ್ಳಿಯಲ್ಲಿ ಆಗ ನಾಟಕವೇನೂ ಇರುವುದಿಲ್ಲ. ಆದರೆ ಹೋಳಿ ಹುಣ್ಣಿಮೆಯ ಬಣ್ಣ ಎರಚುವ ಸಡಗರ ಎಲ್ಲರಲ್ಲೂ ಗರಿಗೆದುರುತ್ತದೆ. ಮಕ್ಕಳು, ಯುವಕರು, ಮುದುಕರು ಕೂಡ ಈ ಬಣ್ಣದೋಕುಳಿಯಲ್ಲಿ ಮಿಂದೆದ್ದು ಕುಣಿದು ಕುಪ್ಪಳಿಸುವ ಕ್ಷಣಗಳಿಗಾಗಿ ಎದುರು ನೊಡುತ್ತಿರುತ್ತಾರೆ.

ಹೋಳಿ ಹುಣ್ಣಿಮೆ ಬರುವುದೇ ಒಂದು ಋತು ಪಲ್ಲಟದ ಕಾಲದಲ್ಲಿ. ಆಗ ಅದೇ ತಾನೆ ಚಳಿಗಾಲ ಹಿಂದಕ್ಕೆ ಸರಿದು ಬೇಸಿಗೆ ಕಾಲ ಆಗಮಿಸಿರುತ್ತದೆ. ಹೀಗಾಗಿ ಆ ಬಿಸಿಲೂ ಕೂಡ ಹಿತಕರವಾಗಿ ಎಲ್ಲರ ದೇಹವನ್ನು ನೇವರಿಸುತ್ತಿರುತ್ತದೆ. ರಂಗಪ್ಪನ ಜಾತ್ರೆ ತುಂಗಭದ್ರೆಯ ಹಿನ್ನೀರ ಸನಿಹದಲ್ಲಿಯೇ ಸಮಾವೇಶಗೊಳ್ಳುವುದರಿಂದ ಕಿತ್ತನೂರು, ಮತ್ಕೂರು, ಬಾಚಿಗೊಂಡನಹಳ್ಳಿಯ ಜನ ಈ ಜಾತ್ರೆಗೆ ನಡೆದುಕೊಂಡೇ ಬರುವವರಾದ್ದರಿಂದ ಈ ಹಿನ್ನೀರ ತೀರದ ಸುಖೋಷ್ಣ ಬಿಸಿಲನ್ನೂ ಕೂಡ ಆಹಾಹಾ… ಅಂತ ಅನುಭವಿಸುತ್ತಾ ನಡೆದು ಬರುತ್ತಾರೆ. ಗಂಡುಮಕ್ಕಳು, ಹೆಣ್ಣುಮಕ್ಕಳು, ಮಕ್ಕಳು… ಹೀಗೆ ಗುಂಪು ಗುಂಪಾಗಿ ಹರಟೆ ಹೊಡೆಯುತ್ತಾ, ನಗೆಪಟಾಕಿ ಹೊಡೆಯುತ್ತಾ ಬೆಟ್ಟದ ಕಡೆ ಯಾತ್ರೆ ಹೊರಡುತ್ತಾರೆ. ಅಲ್ಲಲ್ಲಿ ನಿಂತ ಹಿನ್ನೀರ ಹೊಂಡಗಳ ಬಳಿ ಸಭೆ ಸೇರಿದ್ದ ಬೆಳ್ಳಕ್ಕಿ, ಕೊಕ್ಕರೆ, ಬಕಪಕ್ಷಿಗಳ ಹಿಂಡು ಈ ಜನರ ಗುಂಪು ಕಂಡು ಆಕಾಶಕ್ಕೆ ಹಾರಿ ಗಸ್ತು ತಿರುಗುವುದೂ ಉಂಟು.

ಎಷ್ಟೋ ಜಾನಪದ ಆಚರಣೆಗಳು ನಶಿಸಿಹೋಗುತ್ತಿರುವ ಈ ಕಾಲದಲ್ಲಿ ಹೋಳಿ ಹಬ್ಬ ಮಾತ್ರ ಕೊಂಚವೂ ಮಂಕಾಗಿಲ್ಲ. ಕಾರಣವೇನೆಂದರೆ ಶಾಲಾ ಶಿಕ್ಷಣ ಎಲ್ಲೆಡೆ ವ್ಯಾಪಿಸಿದ್ದರಿಂದ ಅಲ್ಲಿ ಕಲಿತು ಬಂದ ಹದಿಹರೆಯದ ತರುಣರಿಗೆ ಈ ಹಬ್ಬದ ಬಣ್ಣ ಎರಚುವಿಕೆ ಅತ್ಯಂತ ಖುಷಿ ಕೊಡುವ ರಂಗುರಂಗಿನ ಹಬ್ಬವಾಗಿದೆ. ಹೀಗಾಗಿ ಬಾಚಿಗೊಂಡನಹಳ್ಳಿಯ ತರುಣರಿಗೆ ರಂಗಪ್ಪನ ಜಾತ್ರೆಯ ಸಂಭ್ರಮಕ್ಕೆ ಮತ್ತೊಂದು ಸಂಭ್ರಮವೂ ಸೇರಿಕೊಳ್ಳುತ್ತದೆ. 

ರಂಗಪ್ಪನ ದೇವಾಲಯ ಇರುವುದು ತುಂಗಭದ್ರೆಯ ಹಿನ್ನೀರ ತೀರದ ಒಂದು ಕಲ್ಲಿನ ಬೆಟ್ಟದ ಮೇಲೆ. ಈ ಬೆಟ್ಟದ ಬುಡದಲ್ಲಿ ಯಾವ ಜನವಸತಿ ಹಳ್ಳಿಯೂ ಇಲ್ಲ. ಈ ಬೆಟ್ಟದ 5 ಕಿ.ಮೀ ದೂರದ ವ್ಯಾಪ್ತಿಯಲ್ಲಿ 5-6 ಹಳ್ಳಿಗಳ ಜನವಸತಿ ಇದೆ. ಹೀಗಾಗಿ ಈ ಬೆಟ್ಟದ ಸುತ್ತಮುತ್ತ ಇರೋದು ಬರೀ ತೋಟಗಳು. ಯಾವ ದಿಕ್ಕಿಗೆ ನೋಡಿದರೂ ತೆಂಗು, ಕಬ್ಬು, ದಾಳಿಂಬೆ ತೋಟಗಳ ಚೆಲುವು ಕಂಗೊಳಿಸುತ್ತದೆ. ಇನ್ನಿತರ ಹೊಲಗಳಲ್ಲೂ ಮೆಕ್ಕೆಜೋಳ, ಸೂರ್ಯಕಾಂತಿ, ಹಲಸಂದಿ, ಭತ್ತದ ಬೆಳೆ ಹಚ್ಚ ಹಸಿರಾಗಿ ಕಣ್ಮನ ಸೆಳೆಯುತ್ತವೆ.

ರಂಗಪ್ಪನ ತೇರು ಸರಿಯಾಗಿ ಹೋಳಿಹುಣ್ಣಿಮೆಯೆಂದೇ ಜರಗುತ್ತದೆ. ಈ ಬೆಟ್ಟದ ಸುತ್ತಮುತ್ತಲಿನ ಹಳ್ಳಿಗಳಿಂದ ರೈತರು ಬಂಡಿ ಕಟ್ಟಿಕೊಂಡು ಜಾತ್ರೆಗೆ ಆಗಮಿಸುತ್ತಾರೆ. ತಮ್ಮ ಎತ್ತಿನ ಬಂಡಿಗೆ ಸವಾರಿ ಕಟ್ಟಿ, ಮೈ ತೊಳೆದ ಎತ್ತುಗಳ ಮೈಗೆ ವರ್ಣರಂಜಿತ ಜೂಲ ಹೊದಿಸಿ, ಕೊರಳಿಗೆ ಟಿಂಟಿಣಿನಾದದ ಗಂಟಿ ಕಟ್ಟಿ, ಎತ್ತುಗಳ ಹಣೆಗೂ ಕೂಡ ಕನ್ನಡಿ ಹಾಗೂ ಗೆಜ್ಜೆ ಗೊಂಚಲು ಕಟ್ಟಿ, ಕೊಂಬಿಗೆ ಕೆಂಪು ಬಣ್ಣ ಬಳಿದು ಕೋಡಣಸು ಹಾಕಿ ಶೃಂಗರಿಸಿರುತ್ತಾರೆ. ಈ ಜೂಲಗಳಲ್ಲಿ ನೇಯ್ಗೆ ಆದ ಎತ್ತುಗಳ ಚಿತ್ರವಂತೂ ಅಪ್ಪಟ ರೈತಾಪಿ ಪ್ರೀತಿಯ ಸಂಭ್ರಮವನ್ನು ತಾರಕಕ್ಕೇರಿಸುತ್ತದೆ. ಈ ಜೂಲಗಳನ್ನು ತಮಿಳುನಾಡಿನ ಭವಾನಿ ಟೆಕ್ಸ್‍ಟೈಲ್ಸ್ ಎಂಬ ಕಂಪನಿ ತಯಾರಿಸುತ್ತದೆ. ಇಲ್ಲಿಯ ಜಮಖಾನ ಏಜೆಂಟರು ಅಲ್ಲಿಂದ ಈ ಜೂಲ ತರಿಸಿ ಮಾರುತ್ತಾರೆ. ಕಳೆದ ಐವತ್ತು ವರ್ಷಗಳಿಂದಲೂ ನಾನು ಈ ಜೂಲದ ಚಿತ್ರ ನೋಡಿ ಅದರ ಜಾನಪದ ಸೊಗಡಿಗೆ ತಲೆದೂಗುತ್ತಲೇ ಇದ್ದೇನೆ. ಯಾವ ವ್ಯತ್ಯಾಸವೂ ಇಲ್ಲದ ಆ ಎತ್ತುಗಳ ಚಿತ್ರ ನೋಡಿದಾಗಲೆಲ್ಲ “ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ ಎತ್ತು ಹೊಗೆ ಉಗುಳುವುದಿಲ್ಲ” ಎಂಬ ಹೊಸ ಗಾದೆಮಾತು ಅನುರಣಿಸಿ ನಮ್ಮ ಇಂದಿನ ಕೃಷಿ ಬಿಕ್ಕಟ್ಟುಗಳನ್ನು ಮುಖಕ್ಕೆ ರಾಚಿದಂತಾಗುತ್ತದೆ. ಈಚೆಗೆ ಬರೀ ಎತ್ತಿನ ಬಂಡಿಯಷ್ಟೇ ಅಲ್ಲದೇ ಟ್ರ್ಯಾಕ್ಟರ್, ಲಾರಿ, ಬೈಕು, ಕಾರುಗಳಲ್ಲೂ ಜನರು ಆಗಮಿಸುತ್ತಾರೆ.

ಬೆಟ್ಟದ ಮೇಲಿನ ದೇವಾಲಯದಲ್ಲಿ ಭಕ್ತರ ವಾರ್ಷಿಕ ಹರಕೆಯಂತೆ ಕಾಯಿ ಕರ್ಪೂರದ ಪೂಜೆ ನೆರವೇರಿದ್ದರಿಂದ ದೇವಾಲಯದ ಸುತ್ತಲೂ ಕರ್ಪೂರದ ಕಂಪು ಮತ್ತು ಠಣ್ ಠಣ್ ಗಂಟೆಯ ನಾದ ಕೇಳಿ ಬರುತ್ತದೆ. ಅಲ್ಲಿ ಸೇರಿದ ಜನರೆಲ್ಲ ಅಲ್ಲಲ್ಲೇ ಕುಳಿತಿದ್ದೂ ದೂರದ ಪೂರ್ವ ದಿಕ್ಕಿನಲ್ಲಿ ಕಾಣುವ ಹೊಸಪೇಟೆ-ಸಂಡೂರಿನ ನೀಲಿಗಟ್ಟಿದ ಬೆಟ್ಟದ ಸಾಲನ್ನು ಕಣ್ತುಂಬಿಕೊಳ್ಳುತ್ತಾರೆ. ತುಂಗಭದ್ರಾ ಅಣೆಕಟ್ಟಿನ ಹಿನ್ನೀರು ಒಂದು ಕಡೆ ಹಾವಿನಂತೆ ಬಳುಕಿದರೆ ಮತ್ತೊಂದು ಕಡೆ ಅಚ್ಛೋದ ಸರೋವರದಂತೆ ಕಂಗೊಳಿಸುತ್ತಿರುತ್ತದೆ. ಹಿನ್ನೀರು ಬಯಲಾದ ಕಡೆಯಲ್ಲೆಲ್ಲ ಬೆಳೆದ ಕರಕಿ, ಜೇಕುಹುಲ್ಲಿನ ಹಾಸು ಎಂಥವರಿಗೂ ಹಾಯೆನಿಸುತ್ತದೆ. ಈ ಥರದ ಹಚ್ಚ ಹಸರಿನ ಬಯಲು ಮತ್ತು ಹಿನ್ನೀರ ಸರೋವರಗಳನ್ನು ಕಂಡಾಗ “ಮೇರೆಗಾಣದ ಕಾಲದೇಶದ ಚಿದಾಕಾಶಮಂ ತುಂಬಿದತ್ತೊಂದು ನೀಲ ಮೌನಂ” ಎಂಬ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಸಾಲುಗಳು ಥಟ್ಟನೆ ನೆನಪಾಗಿ ಮೈ ಜುಮ್ ಎನ್ನಿಸುತ್ತದೆ. ಪ್ರಕೃತಿಯ ವಿರಾಟ್ರೂಪದ ಮುಂದೆ ಮನುಷ್ಯ ಎಷ್ಟೊಂದು ಸಣ್ಣವನು ಎಂಬ ವಿನೀತಭಾವ ಆವರಿಸುತ್ತದೆ.

ಹೀಗೆ ಬೆಟ್ಟದ ಸಮತಟ್ಟಾದ ಕಲ್ಲಿನ ಮೇಲೆ ಕುಳಿತವರೆಲ್ಲರೂ ಉತ್ಸವಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಆರಂಭವಾಗುತ್ತಲೇ ಅದರ ಹಿಂದೆಯೇ ಬೆಟ್ಟವಿಳಿದು ತೇರಿನ ಬಳಿ ಬರುತ್ತಾರೆ. ಪಲ್ಲಕ್ಕಿಯಲ್ಲಿದ್ದ ಉತ್ಸವಮೂರ್ತಿಯನ್ನು ತೇರಿನಲ್ಲಿರಿಸಿ ನಂತರ ಜಯಘೋಷದೊಂದಿಗೆ ತೇರನ್ನು ಎಳೆಯುತ್ತಾರೆ. ಹ್ಞಾ… ತೇರನ್ನು ಎಳೆಯಲು ಅಲ್ಲಿ ರಸ್ತೆಯೇ ಇಲ್ಲ. ಅದೂ ಕೂಡ ಒಂದು ಬಿತ್ತಿ ಬೆಳೆಯುವ ಹೊಲವೇ ಆಗಿದೆ. ತಾತ್ಕಾಲಿಕವಾಗಿ ಆ ಹೊಲವನ್ನು ಬಿತ್ತಿರುವುದಿಲ್ಲ. ತೇರು ಎಳೆಯಲೆಂದೇ ಹೊಲವನ್ನು ಹಸನು ಮಾಡಿರುತ್ತಾರೆ. ರಥೋತ್ಸವದ ಮರುದಿನ ಬೇಟೆಗಿಡ ಉತ್ಸವವು ನಡೆಯುತ್ತದೆ. ಅಂದೇ ಒಂದು ಕಡೆ ಜಾನಪದ ಹಲಗೆ ಮೇಳವಿದ್ದರೆ ಮತ್ತೊಂದು ಕಡೆ ಟಗರಿನ ಕಾಳಗ ಇರುತ್ತದೆ. ಕಿತ್ತನೂರು, ಬನ್ನಿಗೋಳ ಗ್ರಾಮದಿಂದ ಆಗಮಿಸಿದ ಹಲಗೆ ಮೇಳದ ಬಡಿತವನ್ನು ನಾನು ತನ್ಮಯನಾಗಿ ನಿಂತು ನೋಡುತ್ತೇನೆ. ಆ ಗತ್ತು, ಆ ನಾದ, ಆ ಕಾಲಿನ ಗೆಜ್ಜೆಯ ಸಪ್ಪಳ ವ್ಹಾ… ಅದನ್ನು ನೋಡಿಯೇ ಸವಿಯಬೇಕು.

ಟಗರಿನ ಕಾಳಗವೂ ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ. ಕುರಿಗಾಹಿಗಳು ತಮ್ಮ ಕುರಿ ಹಿಂಡಿಗೆ ಬಿಟ್ಟುಕೊಂಡ ಟಗರುಗಳನ್ನು ವಿಶೇಷ ಕಾಳಜಿಯಿಂದ ಮೇಯಿಸಿರುತ್ತಾರೆ. ಹಾಗೆ ಮೇಯ್ದು ಗುಟುರು ಹಾಕುವ ಸೊಕ್ಕಿದ ಟಗರುಗಳು ಕಣದಲ್ಲಿ ಎದುರಾಳಿ ಟಗರಿಗೆ ಗುದ್ದಲೆಂದು ಮಾಡಿಕೊಳ್ಳುವ ತಯಾರಿ ಯುದ್ಧರಂಗವನ್ನೇ ನೆನಪಿಸುತ್ತದೆ. ಕಾಲು ಕೆದರಿ… ಹಿಂದಕ್ಕೆ ಸರಿದು… ಮುಂದಕ್ಕೆ ಓಡಿ ಒಮ್ಮಿಂದೊಮ್ಮಿಗೆಯೇ ಎದುರಾಳಿ ಟಗರಿನ ಹಣೆಗೆ ಡಿಕ್ಕಿ ಹೊಡೆಯುತ್ತವೆ. ಹಾಗೆ ಓಡಿ ಬಂದು ಭರದಿಂದ ಡಿಕ್ಕಿ ಹೊಡೆಯುವ ಟಗರುಗಳಿಗೆ ಏನೂ ಆಗುವುದಿಲ್ಲ! ಆ ಟಗರುಗಳು ಪರಸ್ಪರ ರೋಷಾವೇಶದಿಂದ ಡಿಕ್ಕಿ ಹೊಡೆಯಲು ಹವಣಿಸುತ್ತಿರುತ್ತವೆ. ಒಂದೊಮ್ಮೆ ಸೋತು ಹೋದ ಟಗರು ಪಕ್ಕಕ್ಕೆ ಸರಿದರೆ ಗೆದ್ದ ಟಗರು ಸುಮ್ಮನೆ ಬಿಡುವುದಿಲ್ಲ! ಅದರ ಬೆನ್ನಟ್ಟಿ ಗುದ್ದಲು ಹವಣಿಸುತ್ತದೆ. ಆಗ ಆ ಟಗರಿನ ಮಾಲೀಕರು ಜಾಗ್ರತೆವಹಿಸಿ ತಮ್ಮ ಟಗರನ್ನು ಕಣ್ಮರೆ ಮಾಡುತ್ತಾರೆ. ಆದರೂ ಗೆದ್ದ ಟಗರು ಸೋತ ಟಗರನ್ನು ಹುಡುಕುವ ಪರಿ ಎಂಥವರಲ್ಲೂ ಭಯ ಹುಟ್ಟಿಸುತ್ತದೆ. ಈ ಥರದ ಟಗರುಗಳಿಗೆ ಅವುಗಳ ಮಾಲೀಕರು ಕಾಳಗಕ್ಕೂ ಮುನ್ನ ತಂಬಾಕು ತಿನ್ನಿಸಿರುತ್ತಾರೆಂದು ಜನರು ಆಡಿಕೊಳ್ಳುತ್ತಾರೆ.

ಮತ್ತೊಂದು ಕಡೆ ಬೇಟೆಗಿಡದ ಉತ್ಸವದ ಮುಂದೆ ನಂದೀಕೋಲು ಸಮಾಳ ಮೊಳಗುತ್ತಿರುತ್ತವೆ. ನಾನು ಚಿಕ್ಕವನಿದ್ದಾಗ ಹೆಣ್ಣು ಮಕ್ಕಳೆಲ್ಲ ದವನ (ಸುವಾಸನಾಯುಕ್ತ ಗಿಡದ ಎಲೆದೇಟು) ಕೊಂಡುಕೊಂಡು ತಮ್ಮತಮ್ಮ ಜಡೆಯಲ್ಲಿ ಮುಡಿಯುತ್ತಿದ್ದರು. ಈಚೆಗೆ ಈ ದವನವೇ ಸಿಗುವುದಿಲ್ಲ! ಎಲ್ಲಿ ನೋಡಿದರೂ ಬರೀ ಬೆಂಡು ಬೆತ್ತಾಸಿನ ಅಂಗಡಿ, ಒಗ್ಗಾಣಿ ಮೆಣಸಿನಕಾಯಿ ಅಂಗಡಿ, ಸೋಡಾಪಾನಿಯ ಅಂಗಡಿ ಕಂಡು ಬರುತ್ತವೆ.

ಜಾತ್ರೆ ಎಂದರೆ ಬಹಳ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ತುಂಬ ಸಡಗರ. ಏಕೆಂದರೆ ಅಲ್ಲಿ ನೆರೆದಿರುವ ಅಂಗಡಿಗಳಲ್ಲಿ ಬೆಂಡೋಲೆ, ಝುಮುಕಿ, ನತ್ತು, ಬಳೆ, ಸರಗಳ ಬಿರುಸಿನ ವ್ಯಾಪಾರ ನಡೆದಿರುತ್ತದೆ. ಆಕರ್ಷಕ ಸೀರೆ, ಚೂಡೀದಾರ ತೊಟ್ಟು ಹೆಣ್ಣು ಮಕ್ಕಳು ಈ ಆಭರಣಗಳನ್ನು ಕೊಂಡುಕೊಳ್ಳುವುದರಲ್ಲಿ ಮತ್ತು ಚೌಕಾಸಿ ಮಾಡುವುದರಲ್ಲಿ ತನ್ಮಯರಾಗಿರುತ್ತಾರೆ. ಮಕ್ಕಳಂತೂ ತಮಗೆ ಬೇಕಾದ ಆಟಿಕೆ ಕೊಳ್ಳಲು ತಂದೆ ತಾಯಿಯರನ್ನು ಕಾಡುವುದೂ ಉಂಟು. ನಾವು ಚಿಕ್ಕವನಿದ್ದಾಗ ಕಿನ್ನಾಳದ ಕಲಾವಿದರು ತಯಾರಿಸಿದ ಗೊಂಬೆಗಳನ್ನು ಕೊಳ್ಳುತ್ತಿದ್ದೆವು. ಅವುಗಳಲ್ಲಿ ಎರಡೂ ಕೈ ಮತ್ತು ಎರಡೂ ಕಾಲುಗಳನ್ನು ಮುಂಚಾಚಿ ಕುಳಿತ ಹುಡುಗಿಯ ಗೊಂಬೆಗಳನ್ನು ಹುಡುಗಿಯರು ಕೊಂಡರೆ, ಸವಾರಿ ಬಂಡಿಯ ಗೊಂಬೆಯನ್ನು ಹುಡುಗರು ಕೊಳ್ಳುತ್ತಿದ್ದರು. ಹುಡುಗಿಯರು ಗೊಂಬೆಯ ಮುಖ, ಅದರಲ್ಲಿಯ ನಗು, ಕಿವಿಯೋಲೆ, ಬಾಚಿದ ತಲೆ, ತೊಟ್ಟ ಲಂಗಪೈಟು ನೋಡಿ ಆನಂದಿಸುತ್ತಿದ್ದರು. ಕೆಲವು ದಿನ ಹೀಗೆ ಆಟ ಆಡಿದ ಮೇಲೆ ಆ ಗೊಂಬೆಗಳು ಅಲ್ಲಿ ಇಲ್ಲಿ ಬಿದ್ದು ಮುರಿದುಹೋಗುತ್ತಿದ್ದವು. ಹಾಗೆ ಮುರಿದ ಗೊಂಬೆಗಳನ್ನು ಕೈಯಲ್ಲಿ ಹಿಡಿದು ನೋಡಿದರೆ ಆ ಗೊಂಬೆಗಳನ್ನು ದನಗಳ ಸಗಣಿಯಿಂದ ತಯಾರಿಸಿ ತೆಳುವಾದ ಬಟ್ಟೆ ಹೊದಿಸಿ ಅದಕ್ಕೆ ಬಣ್ಣ ಬಳಿದಿರುವುದು ಬಯಲಾಗುತ್ತಿತ್ತು!

ಹುಡುಗರು ಕೊಂಡ ಸವಾರಿ ಬಂಡಿಯ ಕಥೆಯೂ ಹೀಗೆಯೇ… ಅಂಥದೇ ಸವಾರಿ ಬಂಡಿಯಲ್ಲಿ ಕುಳಿತು ನಮ್ಮ ಕುಟುಂಬವೆಲ್ಲ ಜಾತ್ರೆಗೆ ಹೋಗುತ್ತಿದ್ದುದರಿಂದ ನನಗೆ ಆ ಸವಾರಿ ಬಂಡಿಯ ಪುಳಕ ಇಂದಿಗೂ ಅವರ್ಣನೀಯ ಆನಂದ ನೀಡುತ್ತದೆ. ನಾನು ಆ ಗೊಂಬೆ ಬಂಡಿಯಲ್ಲಿ ಚಿಕ್ಕಚಿಕ್ಕ ಹರಳು ಹಾಕಿ, ಒಂದು ಚಿಕ್ಕ ಹಗ್ಗ ಕಟ್ಟಿ ನಮ್ಮ ಮನೆಯಲ್ಲೆಲ್ಲಾ ಎಳೆದು ಆಡುತ್ತಿದ್ದೆ. ಬೀದಿಯಲ್ಲೂ ಆಡುತ್ತಿದ್ದೆ. ಕೆಲವು ಹುಡುಗರು “ಅಲ್ಲಿ ಬರುತೈತಿ ಸವಾರಿ ಬಂಡಿ… ಅದರಾಗ ಕುಂತಾಳ ಕೆಂಪನಮಿಂಡಿ” ಎಂಬ ಪೋಲಿ ಶಿಶುಪ್ರಾಸ ಹಾಡಿ ನನಗೆ ಬೇಸರ ತರಿಸುತ್ತಿದ್ದುದೂ ಉಂಟು.

ಹೀಗೆ ಈ ಜಾತ್ರೆಯ ಹಲವಾರು ಸಂತೋಷಗಳಲ್ಲಿ ನನಗೆ ಈಗಲೂ ತಮಾಷೆಯನ್ನಿಸಿ ನಗೆ ಉಕ್ಕಿಸುವ ಸಂಗತಿಯೊಂದನ್ನು ನಾನಿಲ್ಲಿ ಹೇಳಲೇ ಬೇಕು. ದೂರದ ವರದಾಪುರ, ಉಪನಾಯಕನಹಳ್ಳಿಗಳಿಂದ ಬರುವ ರೈತರು ತಮ್ಮೊಂದಿಗೆ ತಮ್ಮ ಮನೆಯ ನಾಯಿಯನ್ನೂ ಕರೆದುಕೊಂಡು ಬರುತ್ತಾರೆ. ತಮ್ಮತಮ್ಮ ಸವಾರಿ ಬಂಡಿಯ ಕೆಳ ಮುಂಭಾಗದಲ್ಲಿ ನೀರಿನ ಬಳಕೆಗಾಗಿ ಒಂದು ಖಾಲಿ ಕೊಡವನ್ನೂ ಕಟ್ಟಿರುತ್ತಾರೆ. ಆ ಬಂಡಿಯ ಕೆಳ ಹಿಂಭಾಗದಲ್ಲಿ ಆ ಮನೆಯ ನಾಯಿ ಬಂಡಿಯೊಂದಿಗೆ ಸಮನಾಗಿ ಹೆಜ್ಜೆ ಹಾಕುತ್ತಾ ಬರುತ್ತಿರುತ್ತದೆ. ನಮ್ಮ ಮನೆಯ ಮುಂದೆ ಕುಳಿತು ನಾನು ಈ ಸವಾರಿ ಬಂಡಿಯ ಗೆಜ್ಜೆ ನಾದವನ್ನು ಆಸ್ವಾದಿಸುತ್ತಾ ಕುಳಿತಿರುವಾಗ ಬಂಡಿಯ ಕೆಳಗೆ ನಡೆದು ಬರುವ ನಾಯಿಯನ್ನು ಕಂಡು ನಮ್ಮೂರ ಓಣಿಯ ನಾಯಿಗಳೆಲ್ಲಾ ಒಂದಾಗಿ ಸೇರಿ ಬೊಗಳುವುದನ್ನು ನೋಡುತ್ತೇನೆ. ಈ ನಾಯಿಗಳ ಬೊಗಳುವಿಕೆ ಮತ್ತು ಅವುಗಳ ಒಗ್ಗಟ್ಟಿನ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಈ ಪರ ಊರ ಬಂಡಿಯ ನಾಯಿ ತನ್ನ ಸುರಕ್ಷಿತ ತಾಣವೆಂದು ಆರಿಸಿಕೊಂಡದ್ದು ಆ ಸವಾರಿ ಬಂಡಿಯ ಹಿಂಬದಿಯ ಕೆಳಗಿನ ಜಾಗವನ್ನು! ಈ ಸವಾರಿ ಬಂಡಿ ಚಲಿಸಿದಂತೆಲ್ಲಾ ನಾಯಿಯೂ ಚಲಿಸುತ್ತದೆ. ಹೀಗಾಗಿ ಈ ಸವಾರಿ ಬಂಡಿಯೇ ಆ ನಾಯಿಗೆ ರಕ್ಷಣೆ ಒದಗಿಸುತ್ತದೆ. ಹೀಗಾಗಿ ನಮ್ಮೂರ ನಾಯಿಗಳ ಬೊಗಳುವಿಕೆಗೆ ಈ ಪರ ಊರಿನ ನಾಯಿ ಕಿಂಚಿತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ!

ಹೀಗೆ ರಂಗಪ್ಪನ ಜಾತ್ರೆ ಮುಗಿಸಿ ಊರಿಗೆ ಬರುವಷ್ಟರಲ್ಲೇ ಕತ್ತಲಾಗಿಬಿಡುತ್ತಿತ್ತು. ಆದರೆ ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದಿರ ಬೆಳಕು ಚೆಲ್ಲುತ್ತಾ ಬಂದು ಕತ್ತಲೆಯನ್ನು ಓಡಿಸುತ್ತಿದ್ದ. ಮರುದಿನ ಬೆಳಿಗ್ಗೆ ಬಣ್ಣದೋಕುಳಿ ಆಡಲು ಸನ್ನದ್ಧರಾಗಿ ನಮ್ಮೂರೆಲ್ಲಾ ನಿದ್ರೆಗೆ ಜಾರಿ ಬಿಡುತ್ತಿತ್ತು. ಇದು ಈಗಲೂ ಮುಂದುವರೆದೇ ಇದೆ. ಆದರೆ… ಕರೋನಾ ಹಾವಳಿಯಲ್ಲಿ ಈ ವರ್ಷ ಕ್ಯಾ ಕರೋನಾ…?

 

Leave a Reply

Your email address will not be published.