ಠೇಂಕಾರಕ್ಕೆ ಜನರೇ ಉತ್ತರ ನೀಡಲಿದ್ದಾರೆ!

-ಹುರುಕಡ್ಲಿ ಶಿವಕುಮಾರ

“ಕಾಂಗ್ರೆಸ್ ಮುಕ್ತ ಭಾರತ” ಕುರಿತು ನಾವು ಮುಖ್ಯವಾಗಿ ಚರ್ಚಿಸಬೇಕಿರಲಿಲ್ಲ! ಆದರೂ ಈ ಕುರಿತು 11 ಜನರ ವಿಶ್ಲೇಷಣೆಗಳನ್ನು ಓದಿದೆ. ಈ ಎಲ್ಲಾ ವಿಶ್ಲೇಷಣೆಗಳ ಆಚೆಗೆ ಸಾಮಾನ್ಯ ಮತದಾರರ ಒಲವು ನಿಲುವುಗಳು ಬೇರೆಯೇ ಇವೆ.

ಮೊದಲನೆಯದಾಗಿ “ಕಾಂಗ್ರೆಸ್ ಮುಕ್ತ ಭಾರತ” ಎಂಬ ಸೊಲ್ಲೇ ತುಂಬಾ ಠೇಂಕಾರದಿಂದ ಕೂಡಿದೆ. ಸಾಮಾನ್ಯ ಮತದಾರರಿಗೆ ಈ ಸಂಗತಿ ತುಂಬಾ ಚೆನ್ನಾಗಿ ಗೊತ್ತಿರುವುದರಿಂದ ಅವರು ಕಳೆದ ಆರು ವರ್ಷಗಳಲ್ಲಿ ಅನೇಕ ಮುಖ್ಯ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಮತ ನೀಡುತ್ತಲೇ ಬಂದಿದ್ದಾರೆ. ಬಿಜೆಪಿ ಗೆದ್ದಿರಬಹುದು; ಆದರೆ ಕಾಂಗ್ರೆಸ್ ಮುಕ್ತ ಭಾರತ ಆಗಿಲ್ಲವಲ್ಲ!

ಎರಡನೆಯದಾಗಿ ಹತ್ತು ವರ್ಷಗಳ ಹಿಂದೆ `ಗುಜರಾತ್ ಮಾದರಿಯನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸಬೇಕಿದೆ’ ಎಂಬ ಸೊಲ್ಲನ್ನು ತೇಲಿ ಬಿಡಲಾಯಿತು. ಅಂದರೆ ಗುಜರಾತ್ ಮುಖ್ಯಮಂತ್ರಿ ಮೋದಿ ಗಮನಾರ್ಹ ಅಭಿವೃದ್ಧಿ ಸಾಧಿಸಿದ್ದಾರೆಂದೇ ಪುಂಗಿ ಊದಲಾಯಿತು. ಇದನ್ನು ನಂಬಿದ ಸಾಮಾನ್ಯ ಮತದಾರರು ಬಿಜೆಪಿಗೆ ಒಂದು ಅವಕಾಶ ನೀಡೋಣ ಎಂಬ ಪ್ರಾಯೋಗಿಕ ಮನಸ್ಥಿತಿಯಿಂದ ಬಿಜೆಪಿಗೆ ಅಧಿಕಾರ ನೀಡಿದರು. ಆದರೆ ನಿಧಾನವಾಗಿಯಾದರೂ ಮತದಾರರಲ್ಲಿ “ಬಿಜೆಪಿ ಸರ್ಕಾರ ಜನಪರ ಸರ್ಕಾರವಲ್ಲ” ಎಂಬ ನಂಬುಗೆ ಹುಟ್ಟುತ್ತಿದೆ. ಅದರ ಸ್ಪಷ್ಟ ಲಕ್ಷಣವೇ ರೈತ-ಕಾರ್ಮಿಕರ ನಿತ್ಯ ಹೋರಾಟಗಳು.

ಕಾಂಗ್ರೆಸ್ ಪಕ್ಷ ಕೂಡ ತಾನು ಮರಳಿ ಅಧಿಕಾರ ಗಳಿಸಲು ಹೆಚ್ಚು ಕಷ್ಟಪಡುವುದಿಲ್ಲ! ಬಿಜೆಪಿ ಸರ್ಕಾರದ ವೈಫಲ್ಯಗಳಿಂದಾಗಿ (ಬೇರೆ ಯಾವ ಪರ್ಯಾಯ ಪಕ್ಷವೂ ಪ್ರಬಲವಾಗಿಲ್ಲವಾಗಿ) ಕಾಂಗ್ರೆಸ್‍ಗೆ ಮತ ನೀಡುವುದು ಬಡ ಮತದಾರನಿಗೆ ಅನಿವಾರ್ಯವಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಕೂಡ ಯಾವ ಹೋರಾಟ, ಸಂಘಟನೆ, ರ್ಯಾಲಿ ಮಾಡದೆ ಬರಿ ಪತ್ರಿಕಾ ಹೇಳಿಕೆ ನೀಡುತ್ತಾ ಕಾದು ಕುಳಿತಿದೆ.

ನಮ್ಮೂರ ಸಾಮಾನ್ಯ ಮತದಾರರಿಬ್ಬರ ಒಂದು ಮುಖಾಮುಖಿಯನ್ನು ಇಲ್ಲಿ ಹೇಳಬಯಸುವೆ. 65 ವರ್ಷ ವಯಸ್ಸಿನ ಒಬ್ಬರಿಗೆ 35 ವರ್ಷ ವಯಸ್ಸಿನ ಒಬ್ಬರು “70 ವರ್ಷ ಅಧಿಕಾರದಲ್ಲಿ ಇದ್ದಿರಲ್ಲ, ಏನು ಮಾಡಿದಿರಿ?” ಎಂಬ ಬಿಜೆಪಿ ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಅವರು, ‘ಅಣೆಕಟ್ಟು ಕಟ್ಟಿಸಿದ್ದೇವೆ, ಆಸ್ಪತ್ರೆ ತೆರೆದಿದ್ದೇವೆ, ಬ್ಯಾಂಕ್ ತೆರೆದಿದ್ದೇವೆ…’ ಎಂದು ಕಾಂಗ್ರೆಸ್ ಉತ್ತರ ನೀಡಿದರು! ಈ ಮಾತುಕತೆ ಸರಾಗವಾಗಿ ಮೂಡಿ ಬರಲು ಕಾರಣವೇನೆಂದರೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಟಿವಿ ಮತ್ತು ಪತ್ರಿಕೆಗಳಲ್ಲಿ ಆಡುತ್ತಿರುವ ಮಾತುಗಳೇ ಆಗಿವೆ. ಅಂದರೆ ಇಂದು ಮಾಧ್ಯಮಗಳು ಜನರಿಗೆ ಮಾತಾಡುವುದನ್ನು ಕಲಿಸುತ್ತಿವೆ! ಹೀಗಾಗಿ ತಜ್ಞರ ವಿಶ್ಲೇಷಣೆಗಿಂತ ಸಾಮಾನ್ಯ ಮತದಾರರ ನೋವು, ಸಂಕಟ, ನಿರೀಕ್ಷೆ, ಪರಿಹಾರ ಬೇರೆಯೇ ಇದೆ. ಬೇರೆ ಯಾವ ಪಕ್ಷಗಳೂ ಮತದಾರರನ್ನು ಆಕರ್ಷಿಸುತ್ತಿಲ್ಲವಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಹಾಗಂತ ನಾನು ಕಾಂಗ್ರೆಸ್ ಅಲ್ಲ. ಆದರೆ ವಾಸ್ತವ ಸ್ಥಿತಿ ಹೀಗಿದೆ ಎಂದು ಹೇಳಬಯಸುವೆ.

ರಾಮಚಂದ್ರ ಗುಹಾ ಅವರ ಆರೋಪವನ್ನು ರಾಜಮೋಹನ ಗಾಂಧಿ ತಿರಸ್ಕರಿಸಿದ್ದಾರೆ. ಹಾಗೆಯೇ ಸುಧೀಂದ್ರ ಬುಧ್ಯ ಮತ್ತು ವೈ.ಎಸ್.ವಿ. ದತ್ತ ಮತ್ತಿತರರು ವಾಸ್ತವ ನೆಲೆಗಟ್ಟಿನಲ್ಲೇ ಚರ್ಚಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಎಂಬ ಬಿಜೆಪಿ ಠೇಂಕಾರಕ್ಕೆ ನಾವು ಆತಂಕಪಡಬೇಕಿಲ್ಲ. ಅದಕ್ಕೆ ಜನರೇ ಉತ್ತರ ನೀಡಲಿದ್ದಾರೆ.

Leave a Reply

Your email address will not be published.