ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು ಪಾಲಿಸಿದ್ದಕ್ಕಾಗಿ.

ರಿಹರನ ರಗಳೆಯನ್ನು ಓದುತ್ತಿದ್ದರೆ ನಿಮ್ಮ ಎದೆಯೊಳಗೊಂದು ಡಮರು ನಿನಾದ ಚಿಮ್ಮಿ ಹೊಮ್ಮುತ್ತಲಿರುತ್ತದೆ ಎಂದರೆ ಉತ್ಪ್ರೇಕ್ಷೆಯಾಗದು. ಅವನ ಭಾಷೆ, ಲಯ, ಭಕ್ತಿಯ ತೀವ್ರತೆ ಅಂತಹದು. ಅವನ ಹೆಸರಿನಲ್ಲೇ ಶಿವನನ್ನು ಹೊತ್ತವನು. ಪೆರೆಯಾಳದೇವ- ಹೆರೆಯಾಳದೇವ-ಹರಿಹರದೇವ ಎಂಬುದು ಹರಿಹರನ ಹೆಸರಿನ ಮೂಲವಾಗಿರಬಹುದೆಂದು ಡಾ.ಕಲಬುರ್ಗಿಯವರು ಹೇಳುತ್ತಾರೆ. ಇದರರ್ಥ ಅರ್ಧಚಂದ್ರನನ್ನು ಧರಿಸಿದವ ಎಂದು. ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು ಪಾಲಿಸಿದ್ದಕ್ಕಾಗಿ. ನಿನ್ನ ಕೆರ್ಪಿಂಗೆ ಎನ್ನ ಶಿರಸರಿಯೆ? ಎಂದು ಮಾದರ ಚೆನ್ನಯನ ರಗಳೆಯಲ್ಲಿ ಚೋಳರಾಜನ ಬಾಯಿಂದ ಈ ಮಾತನ್ನು ಹೇಳಿಸುವುದಲ್ಲದೇ, ಮಾದರ ಚೆನ್ನನ ಕಾಲಿಗೆ ಬೀಳಿಸಿ ತನ್ನ ಶಿವನಿಷ್ಠೆಯನ್ನು ಮೆರೆಯುತ್ತಾನೆ.

ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಚಂಪೂ ಕಾವ್ಯ ರಚನೆಯೊಂದಿಗೆ ಸಾಹಿತ್ಯ ರಚನೆ ಆರಂಭಿಸಿದ ಹರಿಹರ, ಪಂಪಾ ಶತಕ, ರಕ್ಷಾ ಶತಕ ಮತ್ತು ಗಿರಿಜಾ ಕಲ್ಯಾಣ ಮಹಾ ಪ್ರಬಂಧಗಳನ್ನು ಬರೆದ.

ದ್ವಾರಸಮುದ್ರದ ವೀರ ಬಲ್ಲಾಳನ ಆಸ್ಥಾನದಲ್ಲಿ ಕರಣಿಕನಾಗಿದ್ದವನು, ಅಲ್ಲಿಯೇ ನೆಲೆನಿಲ್ಲದೆ, ರಾಜಸೇವೆಯನ್ನು ತೊರೆದು, ಹಂಪೆಯ ವಿರೂಪಾಕ್ಷನ ಸನ್ನಿಧಿಯನ್ನು ಸೇರುತ್ತಾನೆ. ರಾಜಭಕ್ತಿಯ ನಿರಾಕರಣೆಯೋ, ಸ್ವಾತಂತ್ರ್ಯದ ಅಪೇಕ್ಷೆಯೋ, ಅಥವಾ ಪೆಂಪಿನ ಹಂಪೆಯಾಳ್ದನ ಸೆಳೆತವೋ ಅವನ ಈ ನಡೆಗೆ ಇಲ್ಲಿ ಯಾವುದು ಮುಖ್ಯ ಕಾರಣವಾಗಿತ್ತೆಂದು ನಿರ್ಧರಿಸಲಾಗದು.

ಒಟ್ಟಿನಲ್ಲಿ ಅವನು ಬಂಡಾಯವೆದ್ದ ಮೊದಲ ಹಂತವಿದು. ಶುದ್ಧ ಶೈವ ಪರಂಪರೆಗೆ ಸೇರಿದವನು, ಸಾಂಪ್ರದಾಯಿಕತೆಯನ್ನು ನಿರಾಕರಿಸಿ ವಚನ ಚಳವಳಿಯ ಮೌಲ್ಯಗಳಿಂದ ಆಕರ್ಷಿತನಾಗಿ ವೀರಶೈವನಾಗಿದ್ದು ಎರಡನೆಯ ಹಂತ. ಇನ್ನು ಮೂರನೆಯ ಹಂತ, ಅವನ ಸಾಹಿತ್ಯಕೃಷಿಗೆ ಸಂಬಂಧಿಸಿದಂತೆ ಕಂಡುಬಂದರೂ, ಅವನ ಸ್ವಾತಂತ್ರ್ಯ ಮನೋಭಾವವನ್ನೇ ಎತ್ತಿ ಹಿಡಿಯುತ್ತದೆ. ಮೊದಲಿಗೆ ಶತಕಗಳನ್ನು ಬರೆದಾಗ ಅಕ್ಷರ ಛಂದಸ್ಸಿನ ವೃತ್ತಗಳನ್ನು ಬಳಸಿದ್ದವನು. ನಂತರ ಗಿರಿಜಾ ಕಲ್ಯಾಣದ ಹೊತ್ತಿಗೆ ಚಂಪೂ ಕಾವ್ಯವನ್ನು ರಚಿಸುತ್ತಾನೆ. ಇಲ್ಲಿಯೂ ಹಿಂದಿನ ಕವಿಗಳಂತೆ ರಾಮಾಯಣ, ಮಹಾಭಾರತಗಳನ್ನು ಆಧರಿಸಿದ ಕಾವ್ಯರಚನೆ ಮಾಡದೆ ಶಿವ ಪಾರ್ವತಿಯರ ವಿವಾಹ ಪ್ರಸಂಗದ ಕಥಾನಕವಿರುವ ನಾಯಿಕಾ ಪ್ರಧಾನ ರಚನೆಯನ್ನು ಮಾಡುತ್ತಾನೆ. ಸ್ತ್ರೀಯೊಬ್ಬಳ ಹೆಸರಿನಿಂದ ನಾಮಾಂಕಿತಗೊಂಡು, ಪುರುಷನನ್ನು ಸ್ತ್ರೀ ಸೋಲಿಸುವ ಕೃತಿ ಕನ್ನಡದಲ್ಲಿ ಇದೇ ಮೊದಲನೆಯದು. ಗಿರಿಜೆಯ ಬಾಲ್ಯ, ಯೌವ್ವನ, ವಿವಾಹಗಳ ಸುತ್ತ ಕಥಾನಕವಿದೆ. ಇದರಲ್ಲೂ ಅಕ್ಷರಗಳ ವೃತ್ತಗಳಿದ್ದರೂ ಹೆಚ್ಚಾಗಿ ಕಂದ ಪದ್ಯಗಳನ್ನೇ ಬಳಸಿದ್ದಾನೆ. ಭಾಷೆಯೂ ಹೆಚ್ಚು ಸರಳವಾಗಿದೆ. ಇದು ಅವನ ಮುಂದಿನ ಕ್ರಾಂತಿಕಾರಿ ನಡೆಗೆ ಪೂರ್ವಭಾವಿ ಸಿದ್ಧತೆ ಎನ್ನಬಹುದು.

ರಗಳೆಗಳನ್ನು ತನ್ನ ಮಾಧ್ಯಮವನ್ನಾಗಿ ಆಯ್ದುಕೊಳ್ಳುವ ಮೂಲಕ ಮಾರ್ಗ ಕಾವ್ಯವನ್ನು ತೊರೆದು ದೇಸೀ ಕಾವ್ಯ ರಚನೆಗೆ ತೊಡಗಿದ್ದು, ಇವನ ಸಂಪ್ರದಾಯವನ್ನು ಮೀರುವ ನಡೆ ಹಾಗೂ ಹೊಸ ಪರಂಪರೆಯನ್ನು ನಿರ್ಮಿಸುವ ಛಲವನ್ನು ತೋರುವ ಮೂರನೆಯ ಮತ್ತು ಮುಖ್ಯವಾದ ಹಂತವಾಗಿದೆ.

ಬೋನವಂ ಮಾಡುವೆಡೆ ದೇವಾರ್ಚನಾಸ್ಥಳಂ
ಏನೆಂಬೆನಲ್ಲಿ ಸಿಂಹಾಸನಂ ಕರತಳಂ
ನೆನೆವ ಘನ ಚಿಂತೆ ಸಕಲ ಸ್ತೋತ್ರವಭವಂಗೆ
ಮನದ ನಿರ್ಮಳವಗ್ಗವಣಿ ಮಹಾದೇವಂಗೆ
ಕೆಯ್ಯ ಕೀರೆಯೆ ಪರಿಮಳದ ಪುಷ್ಪವಭವಂಗೆ
ಸುಯ್ಯ ಕಂಪೆ ಗುಗ್ಗುಳ ಧೂಪವಾ ಮಹಿಮಂಗೆ
ನೋಟವೇ ಬೆಳಗಿನಾರತಿ ಶಂಕರಂಗಲ್ಲಿ
ಊಟವಲ್ಲಿಯೆ ಸಮೆದ ಬೋನದೋಗರವಲ್ಲಿ
ಇಂತಾರುವರಿಯದಂತಿರೆ ಶಿವನನರ್ಚಿಪಳು

ಚಂಪೂ ಕಾವ್ಯಗಳಲ್ಲಿ ವೈವಿಧ್ಯಕ್ಕಾಗಿ ವಿರಳವಾಗಿ ಬಳಸುತ್ತಿದ್ದ ರಗಳೆಗಳನ್ನು ತನ್ನ ಮುಖ್ಯ ಮಾಧ್ಯಮವನ್ನಾಗಿ ಮಾಡಿಕೊಂಡು ಹೊಸ ಕಾವ್ಯ ಮಾರ್ಗವನ್ನೇ ಸೃಷ್ಟಿಸಿದ. ಅವನು ರಚಿಸಿದ ರಗಳೆಗಳ ಸಂಖ್ಯೆ ಬಗ್ಗೆ ವಿವಾದಗಳಿದ್ದರೂ ನೂರಾರು ರಗಳೆಗಳನ್ನು ಬರೆದಿದ್ದಾನೆ ಎಂಬುದು ವಿದಿತ.

ಅತಿ ಪುರಾತನರನ್ನು ಕುರಿತು ತಮಿಳು ಶೇಕಿಳಾರ ಪೆರಿಯ ಪುರಾಣವನ್ನು ಬರೆದಂತೆ, ಹರಿಹರ ತಮಿಳುನಾಡಿನ ‘ಪುರಾತನ ರಗಳೆಗಳನ್ನು ಬರೆದಿದ್ದಾನೆ. ಇವುಗಳಿಗೆ ಪೆರಿಯ ಪುರಾಣವೇ ಆಧಾರ. ಆದರೆ ಕನ್ನಡ ನಾಡಿನ ಶಿವಭಕ್ತರ ರಗಳೆಗಳು ಅವನ ಸ್ವತಂತ್ರ ರಚನೆಗಳಾಗಿವೆ.

ಹರಿಹರನ ಎಲ್ಲ ರಗಳೆಗಳಲ್ಲೂ ಗುಪ್ತಭಕ್ತಿಯ ಕಥನವಿದೆ. ತನ್ನ ಭಕ್ತರ ಭಕ್ತಿಗೆ ಮೆಚ್ಚಿ, ಅವರನ್ನು ಪರೀಕ್ಷಿಸಿ, ಭಕ್ತರನ್ನು ಭೂಮಿಯ ಮೇಲೆ ಮೆರೆಸಿ, ಕೊನೆಗೆ ಕೈಲಾಸಕ್ಕೆ ಕರೆದುಕೊಂಡು ಹೋಗಿ, ಗಣಪದವಿಯನ್ನು ನೀಡುವುದು ಸಾಮಾನ್ಯವಾಗಿ ಎಲ್ಲ ರಗಳೆಗಳಲ್ಲಿ ಕಂಡು ಬರುವ ಸೂತ್ರ.

ಅರವತ್ಮೂರು ಪುರಾತನರ ರಗಳೆಗಳಲ್ಲಿ ಸ್ತ್ರೀ ಪುರುಷ ಭೇದವೆಣಿಸದೆ, ಶಿವಭಕ್ತರೊಂದಿಗೆ ಶಿವಭಕ್ತೆಯರ ಕಥಾನಕವನ್ನು ಮನೋಜ್ಞವಾಗಿ ಚಿತ್ರಿಸುತ್ತಾನೆ ಹರಿಹರ.

ಅವುಗಳಲ್ಲಿ ಒಂದು ರಗಳೆ, ಕಾರಿಕಾಲಮ್ಮೆಯ ರಗಳೆ. ಕರಿಕಾಲಮ್ಮೆ, ಕಾರೈಕಲ್ ಅಮ್ಮೆ ಎಂಬ ರೂಪಗಳೂ ರೂಢಿಯಲ್ಲಿದೆ. ಚೋಳನಾಡಿನಲ್ಲಿರುವ ಕಾರಿಕಾಲವೆಂಬ ಊರಿನ ತುಂಬಿದ ಮನೆಯೊಂದರಲ್ಲಿ ಗೃಹಿಣಿಯಾಗಿರುವ ಕಾರಿಕಾಲಮ್ಮೆ ಶಿವನ ಗುಪ್ತ ಭಕ್ತೆ. ಮನೆಯವರಾರಿಗೂ ಅವಳ ಭಕ್ತಿಯ ವಿಚಾರ ತಿಳಿಯದು. ಇಡೀ ರಗಳೆಯಲ್ಲಿ ಅತ್ಯುತ್ಕೃಷ್ಟ ವರ್ಣನೆಗಳಲ್ಲಿ ಈ ಭಾಗವೂ ಒಂದು:

‘ಕಂಡಾಗಳಾ ಹಣ್ಣ ಬಸಿರೊಳಗೆ ಬಂದಂತೆ
ಕಂಡು ಪರಮನ ಪರಮ ಹರ್ಷದೊಳಗಿದ್ದಂತೆ
ಭಾವಿಸಲ್ತೆಗೆದಳಾನಂದಮಂ ತೆಗೆವಂತೆ
ದೇವಲೋಕದ ಪರಸ್ಥಾನಮಂ ತೆಗೆವಂತೆ’

ಹೀಗಿರಲೊಂದು ದಿನ, ಅವಳ ಗಂಡ ಮಾಣಿಕ ಸೆಟ್ಟಿಗೆ ಯಾರೋ ಎರಡು ಮಾವಿನ ಹಣ್ಣುಗಳನ್ನು ಕಾಣಿಕೆಯಾಗಿ ಕೊಟ್ಟರು. ಅವನ್ನು ಮನೆಗೆ ತಂದ ಸೆಟ್ಟಿ, ಹೆಂಡತಿಯ ಕೈಗೆ ಕೊಟ್ಟು, ‘ಅತಿ ಸುರಕ್ಷಿತದಿಂದ ಬಯ್ತಿಡು’ ಎಂದು ಹಣ್ಣು ಮಾಗಿದ ಮೇಲೆ ತಿನ್ನಬಹುದೆಂದು ಎಣಿಸಿ, ಮತ್ತೆ ತನ್ನ ವ್ಯವಹಾರದಲ್ಲಿ ಮುಳುಗಿದನು.

ಇತ್ತ ಶಿವ ಇವಳ ಭಕ್ತಿಯನ್ನು ಭೂಮಿಯಲ್ಲಿ ಮೆರೆಸಬೇಕೆಂದು ಸಾಧುವಿನ ವೇಷ ಧರಿಸಿ ಮನೆಗೆ ಬರುತ್ತಾನೆ. ತಡೆಯಲಾರದ ಕಾರಿಕಾಲಮ್ಮೆ ಆ ಎರಡು ಹಣ್ಣುಗಳಲ್ಲಿ ಒಂದನ್ನು ಅವನಿಗೆ ಕೊಡುತ್ತಾಳೆ. ಹಣ್ಣನ್ನು ಪಡೆದ ಸಾಧು ವೇಷದ ಶಿವ ಹೊರಡುವುದಕ್ಕೂ, ಸೆಟ್ಟಿ ಮರಳುವುದಕ್ಕೂ ಸರಿಯಾಗುತ್ತದೆ. ಊಟಕ್ಕೆ ಕುಳಿತ ಸೆಟ್ಟಿ ಮಾವಿನ ಹಣ್ಣನ್ನು ಕೇಳುತ್ತಾನೆ. ಆಕೆ ಉಳಿದಿದ್ದ ಒಂದೇ ಒಂದು ಹಣ್ಣನ್ನು ತಂದುಕೊಡುತ್ತಾಳೆ. ಅವನು ‘ಇನ್ನೊಂದು ಹಣ್ಣೆಲ್ಲಿ ತಾರೆನಲ್’ ಎನ್ನಲು ಹೆದರಿದ ಕಾರಿಕಾಲೆಮ್ಮೆ ಏನೂ ಮಾಡಲು ತೋಚದೆ, ಇನ್ನೊಂದು ಹಣ್ಣನ್ನೂ ತಂದುಕೊಡುವವಳಂತೆ ನಟಿಸುತ್ತಾ, ‘ಕೆಯ್ಯೊಡನೆ ಹರಣಮಂ ಬೆರಿಸಿ ಕೆಯ್ಯಿಕ್ಕಿದಳ್’, ಹಣ್ಣಿಟ್ಟಿದ್ದ ಸ್ಥಳದಲ್ಲಿ ಕೈಯಲ್ಲಿಯೇ ಪ್ರಾಣವನ್ನಿಟ್ಟು ಕೈ ಹಾಕುತ್ತಾಳೆ. ಇಂದುಧರನು ಭಕ್ತೆಗೆ ಆಗುವ ಶಿಕ್ಷೆಯಿಂದ ಪಾರು ಮಾಡಬೇಕೆಂದು, ಅಂಜುತ್ತ ಒಂದು ಹಣ್ಣನ್ನು ಅಲ್ಲಿಯೇ ಇರಿಸಿದನು.

ಆ ಹಣ್ಣನ್ನು ತೆಗೆದು, ಪತಿಗೆ ನೀಡುತ್ತಾಳೆ. ಶಿವನ ಲೀಲೆ ಅವಳಗರಿವಾಗುತ್ತದೆ. ಅತ್ತ ಆ ಹಣ್ಣನ್ನು ನೋಡಿದ ಸೆಟ್ಟಿಯೂ ಇದು ತಾನು ಕೊಟ್ಟ ಹಣ್ಣಲ್ಲ ಎಂದರಿತು,

‘ಸೆಟ್ಟಿ ಕೈಮುಟ್ಟಿ ಮೈರೋಮಾಂಚನಮಾಗುತಿರೆ
ದಿಟ್ಟಿಸಲ್ಕಣ್ಗಳ್ಗೆ ಸವಿಗಳಂ ಸವಿಸುತಿರೆ
ಎಲ್ಲಿಯದು ಪೇಳೆನಗೆ ಕಾರಣಿಕೆ ಈ ಫಲಂ
ಪೇಳೆಲ್ ಮಹಾಪುರುಷೆ ಈ ಫಲಂ’

ಈ ನೆಲದ ಹಣ್ಣಲ್ಲ ಇದು ಎಂದು ಕೇಳಿದಾಗ, ಕಾರಿಕಾಲಮ್ಮೆ ನಡೆದುದೆಲ್ಲವನೂ ಹೇಳುತ್ತಾಳೆ. ಕೇಳಿ ನಡುಗಿದ ಸೆಟ್ಟಿ ಸತಿಯೆಂಬ ಭಾವವನ್ನು ತೊರೆದು,

‘ಎಲೆ ತಾಯಿ ಇನ್ನೆನ್ನ ಸತಿಯೆಂದು ನುಡಿಯೆಂ ಮಹಾಮಾಯೆ/ಇಂತು ಕರುಣಿಸಿ ಹರಂ ಪ್ರತ್ಯಕ್ಷವಪ್ಪನೇ, ಇಂತಪ್ಪ ಸತಿಯರುಂಟೇ ಶಿವಂ ಬರ್ಪನೇ ತಾಯೆ, ಕರುಣೆದೋರಿ ಕಾಪಾಡು, ನೀವೆ ಗುರುಸ್ಥಾನವೆಲೆ ತಾಯಿ, ಇನ್ನೆನ್ನ ಭವ ಬಂಧನವನುಡುಗಿಸೆಲೆ ತಾಯೆ’ ಎಂದು ಅವಳಿಗೆ ನಮಸ್ಕರಿಸುವನು. ಇಲ್ಲಿ ಹೆಣ್ಣನ್ನು ಗುರುವಾಗಿ ಸ್ವೀಕರಿಸುವ ಪ್ರಸಂಗ ಗುರುಸ್ಥಾನಕ್ಕೆ ಲಿಂಗಭೇದವಿಲ್ಲ ಎಂಬುದನ್ನು ಸಾರುತ್ತದೆ. ಆಗ ಕಾರಿಕಾಲಮ್ಮೆ ತನ್ನ ಮೀಸಲ ಮೋಹ ಮುರಿಯಿತು, ತನ್ನ ಭಕ್ತಿ ಹರಿಹಂಚಾಯಿತು, ‘ಪಲರರಿಯೆ ಭಕ್ತಿಯಂ ಸಾರಿ ಮಾಡಿದವರುಂಟೆ’ ಎಂದು ಆ ಫಲವನ್ನು ಸೆಟ್ಟಿಗೆ ಕೊಟ್ಟು, ‘ಇರೆನು ಇನ್ನಿರೆ ಜಗಕೆ ಎನ್ನುಮಂ ತೋರಿದಂ ನಡೆವೆ ನಾನಿಲ್ಲಿರೆಂ ಕೈಲಾಸಪುರದತ್ತ ನಡೆವೆ’ ಎನ್ನುತ್ತ ಭಸ್ಮವ ಧರಿಸಿ, ರುದ್ರಾಕ್ಷಿ ಕಟ್ಟಿಕೊಂಡು ಪುರಜನರೆಲ್ಲ ಕೌತುಕದಿಂದ ನೊಡುತ್ತಿರಲು, ಮನೆಬಿಟ್ಟು ಹೊರಟಳು.

‘ಪುರದ ಪುಣ್ಯವ್ರಜಂ ನೆರೆದು ಪೆರಮಡುವಂತೆ
ಪುರದ ಪರಮಾಯುಷ್ಯವಿರದೆ ಪೆರಮಡುವಂತೆ’

ಉತ್ತರ ದಿಕ್ಕಿಗೆ ಮುಖ ಮಾಡಿ, ಸಕಲ ಸುಖವನ್ನು ಕಡೆಗಣಿಸಿ ಬಿಸಾಡಿ ಹೊರಟಾಗ, ಬಾಂಧವರು, ಪುರಜನರು ಸುದ್ದಿ ತಿಳಿದು ಸೇರಿದರು. ಜಾಣರು ಅವಳ ರೂಪ ಯೌವನವನ್ನು ನೋಡಲು ಸೇರಿದರು-

‘ಪಾಪವುಳ್ಳರ್ಗೆ ಸಿಂಗರದಂತೆ ತೋರುತುಂ/ಪಾವಿಲ್ಲದವರ್ಗೆ ತಾಯಂತೆ ತೋರುತುಂ’ ಮಲ್ಲಿಗೆಯ ಬಳ್ಳಿಗೆ ಶಿವಭಕ್ತಿ ಅಡರಿದಂತೆ ಸಲ್ಲಲಿತ ಶಶಿಕಳೆಗೆ ನಿಷ್ಠೆಯೊದಗಿದ ರೀತಿ, ಭಕ್ತಿಲತೆ ನಡೆವಂತೆ, ಭಕ್ತಿ ವನಿತೆಯ ಆಗಮನದಂತೆ ನಡೆದಳು.

ಭಕ್ತಿಯಷ್ಟೇ ಸೌಂದರ್ಯವೂ ಅವಳಲ್ಲಿ ತುಂಬಿ ತುಳುಕಾಡುತ್ತಿತ್ತು. ಈ ಭಾಗದಲ್ಲಿ ಹರಿಹರ ಎಗ್ಗಿಲ್ಲದೆ ಕುಚ, ನಿತಂಬ, ನಾಭಿಮಂಡಲ ಹೀಗೆ ಅವಳ ದೇಹ ಸೌಂದರ್ಯವನ್ನು ವರ್ಣಿಸಿದ್ದಾನೆ, ಅನಗತ್ಯ ಎನಿಸುವಷ್ಟು. ಆದರೆ ಮುಂದೆ ಹೋದಂತೆ ಏಕಿಷ್ಟು ವರ್ಣಿಸಿದ್ದಾನೆ ಎನ್ನುವ ಅರಿವಾಗುತ್ತದೆ.

‘ಕದಪು ಶರ್ವಂ ನೋಳ್ಪ ದರ್ಪಣದ ತೆರದೊಳಿರೆ
ಕಣ್ಣೆರಡು ಚೆಲ್ವಿಂಗೆ ಕಣ್ಮೂಡಿದಂತೆ ಇರೆ’

ಕಾರಿಕಾಲಮ್ಮೆಯ ರೂಪರಾಶಿಗೆ ಮರುಳಾಗಿ ಕಾಮದ ಹಸಿವಿನಿಂದ ಜನ ಅವಳನ್ನು ಹಿಂಬಾಲಿಸುವದನ್ನು ನಿಲ್ಲಿಸುವುದಿಲ್ಲ. ಜನರ ನಿಲುವಿನಿಂದ ನೊಂದ ಕಾರಿಕಾಲಮ್ಮೆ,

‘ರಕ್ತಮಾಂಸಗಳ ಖಂಡದಿಂಡೆಗೆ ಮರುಳಾಗಿದ್ದೀರಲ್ಲಾ, ಅವಿಚಾರದಿಂದ ವರ್ತಿಸುತ್ತಿರುವಿರಲ್ಲಾ, ನಿಮಗೆ ಸುವಿಚಾರವೇ ಗೊತ್ತಿಲ್ಲವೇ? ಈ ಶರೀರದ ಹೊರಗಿನದಕ್ಕಿಂತ ಒಳಗೇನಿದೆಯೆಂದು ತಿಳಿದು ನೋಡಿರೋ. ನನ್ನ ದೇಹದ ಒಳಗಿರುವ ಕೊಳಕನ್ನು ಕಂಡರೆ ಹೇಸಿಕೊಳ್ಳುವಿರೋ. ಏನಿದೆ ಇದರಲ್ಲಿ? ಪಂಚಭೂತಗಳು ಸೇರಿ ಈ ಕಾಯವಾಗಿದೆ. ಎನ್ನ ರೂಪೆಲ್ಲ ಹೇಯ’ ಎಂದು ಬೋಧಿಸುತ್ತಾಳೆ. ಆದರೂ ಮರುಳಾದ ಜನ ಹಿಂಬಾಲಿಸುವುದನ್ನು ಬಿಡುವುದೇ ಇಲ್ಲ.

ಏನು ಹೇಳಿದರೂ, ‘ನಂಬದ ಉನ್ಮತ್ತ ಜನರು ನಾಚಿಕೆ ಇಲ್ಲದೆ ಬರುತ್ತಿಹರು’ ಎಂದು ತನ್ನ ಶರೀರದ ಮೇಲೆ ಬೇಸರ ಮೂಡಿ ‘ಪುರಹರಾ ಮಾಯ ತಮೋಹರಾ| ವೇಷವೆನ್ನಂ ಕೊಂದಪುದು ಪಂಚ ಶರಹರಾ’ ನನ್ನ ವೇಷವನ್ನು ಕಳಚಿಬಿಡು, ಕಾಮಹರನೆ ಎಂದು ಕೇಳಿಕೊಂಡಾಗ, ಶಿವನು ಅವಳಿಗೆ ಶಕ್ತಿಯನ್ನು ಕೊಟ್ಟನು. ಆಗ ಅವಳು ದೇಹವನ್ನು ಬಿಡಲು ನಿಶ್ಚಯಿಸಿ, ‘ವೈರಾಗ್ಯ ಶಸ್ತ್ರದಿಂದ ತನ್ನನ್ನು ತಾನು ಛೇದಿಸಿಕೊಂಡಳು. ಕಾಮಕ್ರೋಧ ಲೋಭಗಳನ್ನು ಬಿಡುವಂತೆ, ಪ್ರೇಮ, ಮದ, ಮತ್ಸರಗಳನ್ನು ಬಿಡುವಂತೆ, ಮಾಯೆ-ಮೋಹ-ಛಾಯೆ-ಚಂದವನ್ನು ಬಿಡುವಂತೆ, ತನ್ನ ಅವಯವಗಳನ್ನೆಲ್ಲ, ಛಲದಿಂದ ಚೆಲ್ಲಿದಳು.

‘ತಲೆಯುಳಿಯೆ ಮೆಯ್ಯಲ್ಲವೆಲುವಾಗಿ ನಿಲಲಿಂತೆ
ಕಲಿಯುಗದ ಹೊಲೆಗೆಟ್ಟು ಪುಣ್ಯವೇಳ್ತಪ್ಪಂತೆ
ನಡೆತಂದಳಪ್ರತಿಮ ವೈರಾಗ್ಯ ಸಂಯುಕ್ತೆ
ನಡೆತಂದಳೇಕ ನಿಷ್ಠೆಯ ಭಕ್ತಿಯನುರಕ್ತೆ’

ಸ್ಥೂಲ ಶರೀರವು ಇಲ್ಲವಾಗಿ, ಸೂಕ್ಷ್ಮತನು ಮಾತ್ರ ಉಳಿದಿತ್ತು. ಕಣ್ಣುಗಳು ಉಳಿದು, ದೇಹವೆಲ್ಲ ಎಲುಬಾಗಿ ಬಣ್ಣವೆಲ್ಲ ಅಳಿಯಲು, ‘ಲಘು ಜನವಲ್ಲಿ ಮರುಳೋ ಪಿಶಾಚಿಯೋ ಓಡೋಡೆನುತ್ತಲಿ, ಮರಳಿ ನೋಡಲಮ್ಮದೆಯೋಡಿತ್ತು ಜನವಲ್ಲಿ’ ಈಗ ತಾನೋಬ್ಬಳೇ ಆಗಿ ಸಂತಸದಿಂದ ಶಂಭುವನ್ನು ನೆನೆಯುತ್ತ-

ಕಾಡಿನಲ್ಲಿ ನಡೆದು ಬರುತ್ತಾ- ‘ಆಹಾ ಶಿವನೆ ನಿನ್ನ ನಾಟ್ಯಮಂ ತೋರೆನಗೆ’ ಎಂದು ತಾಂಡವ ನೃತ್ಯ ನೋಡಲು ಆಸೆ ಪಟ್ಟಳು. ಆಗ ಶಿವನು ಪ್ರತ್ಯಕ್ಷನಾಗಿ,

‘ನಿಂದು ನೋಡಲ್ಕೂಡೆ ಗಗನಮಂ ಮೀರಿದಂ
ಜಡೆ ನಭವನೆಡೆಗೊಂಡು ಪರ್ವಿ ಪಲ್ಲವಿಸುತಿರೆ
ಹೆಡೆಗಳಂ ಬಿರ್ಚಿಯುರಗಂಗಳಾಡುತ್ತಮಿರೆ
ಹಸ್ತಂಗಳೆಣ್ದೆಸೆಗೆ ನಟಣೆಯಿಂ ನಲಿಯುತಿರೆ
ವಿಸ್ತರದ ಚರಣ ಪಲ್ಲವವೆತ್ತಿ ಮೆರೆಯುತಿರೆ
ಮೇಲೆ ವಿಶ್ವಕ್ಸೇನನಲ್ಲಿ ತಿರ್ರನೆ ತಿರುಗೆ
ಕಾಲನೇವುರವಲ್ಲಿ ಝಣಝಣಸುತಂ ತಿರುಗೆ
ಡಮರುಗದ ನಾದಮುಂ ಢಣಢಣಮೆನುತ್ತಿರಲ್
ಅಮಮ ಘಂಟಾನಾದವಲ್ಲಿ ಢಣಢಣಮೆನಲ್
ಪುಲಿದೊವಲ್ ಫೊ0ಗೆಜ್ಜೆಗಳ ಘುಲಿರ್ಘುಲಿರೆನಲ್
ಚಲಿಸುವಂದುಗೆಯ ದನಿ ಘುಲುಘುಲುಕು ಘುಲುಕೆನಲ್’

ಹೀಗೆ ಶಿವನು ತಾಂಡವವನಾಡುತ್ತಿರಲು, ಕಾರಿಕಾಲಮ್ಮೆ ಹೆದರಿ ಸಾಕು ಎನ್ನುವಳು. ಅವಳ ಮೇಲೆ ಕರುಣೆಯುಕ್ಕಿ ನೃತ್ಯ ನಿಲ್ಲಿಸಿದ ಶಿವ, ನಡೆತಾಯೆ ಕೈಲಾಸಪುರಕೆ ಎಂದು ನುಡಿದು ಲಿಂಗದೊಳಗೆ ಕಣ್ಮರೆಯಾದನು. ಆಶ್ಚರ್ಯಚಕಿತಳಾಗಿ ನೋಡಲು ಶಿವಭಕ್ತರು ನಡೆದ ಹೆಜ್ಜೆಗುರುತುಗಳು ಕಂಡುಬರುತ್ತವೆ. ಇಂತಹ ಶರಣರ ಹೆಜ್ಜೆಗುರುತಗಳ ಮೇಲೆ ನಾನು ನಡೆಯಲಾರೆ, ಇವು ನನ್ನ ಶಿರದ ಮೇಲಿರಬೇಕು ಎಂದು ಚಿಂತಿಸಿ ತನ್ನ ಕೈಯ್ಯನ್ನೇ ಕಾಲು ಮಾಡಿಕೊಂಡು, ತಲೆಯ ಪಾದವಾಗಿಸಿಕೊಂಡು

‘ಎಲೆ ಶರಣರಡಿಗಳಿರ ಶಿವನಲ್ಲಿಗೊಯ್ಯಿರೇ/ಎಲೆ ಹಜ್ಜೆಗಳಿರ ಕೈಲಾಸಕ್ಕೆ ಕಳುಹಿರೇ/ಎಂದು ಶರಣರ ಹಜ್ಜೆಯೊಳ್ ನಂಬಿ ತಲೆಯಿಟ್ಟು/ಬಂದಳೊಂದೊಂದು ಗಳಿಗೆಗದೊಂದಡಿಯನಿಟ್ಟು/ಶಿವಭಕ್ತಿಯುಕ್ತಿ ತಲೆ ಕೆಳಕಾದ ಚೆಂದದಿಂ/ಶಿವನಿಷ್ಠೆ ಸೊರ್ಕಿ ತಲೆಯೂರಿತೆಂಬ ಅಂದದಿಂ’

ನಡೆಯತೊಡಗಿದಳು. ಇದೇ ದಾರಿಯಲ್ಲಿ ಆನೆಕುದುರೆಗಳನೇರಿ ಬರುತ್ತಿದ್ದ ನಂಬಿ ಚೇರಮರು, ನೀವು ಹೀಗೆ ನಡೆದರೆ ಕೈಲಾಸ ತಲುಪುವುದು ಎಂದಿಗೆ ಎನ್ನಲು, ದೂರವನ್ನು ನೆನೆದು ಕಣ್ಣೀರು ತುಂಬಿಕೊಳ್ಳುತ್ತಾಳೆ. ಅವಳಿಲ್ಲಿ ಅಳುತ್ತಿದ್ದರೆ, ಅಲ್ಲಿ ಶಿವನ ಸಿಂಹಾಸನ ನೆನೆಯುತ್ತದೆ. ಭಕ್ತಳ ಸ್ಥಿತಿಯರಿತು ಶಿವ ತನ್ನ ಮನದ ಕೈಯನ್ನು ಚಾಚಿ ಕೈಲಾಸಕ್ಕೆ ಕರೆದುಕೊಳ್ಳುತ್ತಾನೆ. ಕಾರಿಕಾಲಮ್ಮೆಯ ಭಯಂಕರ ರೂಪವನ್ನು ನೋಡಿ ಪಾರ್ವತಿ ಹೆದರಿ ದೇವಾ ಇದೊಂದು ಮರುಳು ಬಂದುದು ಎಲೆ ದೇವಾ ಎಂದಾಗ ಶಿವನಾಡುವ ಮಾತುಗಳು ಗಮನಾರ್ಹ:

‘ಅಲ್ಲಲ್ಲ ಎಲೆ ಗಿರಿಜೆ ಕಾರಿಕಾಲಮ್ಮೆಯರು/ಅಲ್ಲಲ್ಲ ಗೌರಿ ನಿಮ್ಮತ್ತೆ ನಮ್ಮವ್ವೆಯರು/ಎನ್ನಯ ಜನನಿಯೆನಗೆ ಹಣ್ಣಿತ್ತ ಹಿತವೆಯರು/ಎನ್ನವ್ವೆ ನಿಮ್ಮತ್ತೆ ಕಾರಿಕಾಲಮ್ಮೆಯರು’ ಕಾರಿಕಾಲಮ್ಮೆಯ ಕಾಲಿಗೆ ನಮಸ್ಕರಿಸುವಂತೆ ಪಾರ್ವತಿಗೆ ಹೇಳುತ್ತಾನೆ. ಇದನ್ನು ಕೇಳಿ ನೊಂದ ಕಾರಿಕಾಲಮ್ಮೆ ನನಗೆ ನೀವೆ ತಂದೆ- ತಾಯಿ ನೀವು ಹೀಗೆನ್ನಬಾರದೆಂದು ಶಿವನ ಕಾಲಿಗೆ ಬೀಳುವಳು. ಅವಳನ್ನು ಸಮಾಧಾನ ಪಡಿಸಿದ ಶಿವ’ ದೇಹವನ್ನು ಕಳಚಿ, ಕೈಯನ್ನೇ ಕಾಲು ಮಾಡಿಕೊಂಡು ನಡೆದವಳು ನೀನು ಜಗದ ತಾಯಿ ಎಂದು ಸಾರಿ ಗಣಪದವಿಯನ್ನು ನೀಡುತ್ತಾನೆ. ಇಲ್ಲಿ ಕಾರಿಕಾಲಮ್ಮೆ ಹೆಣ್ಣಾಗಿಯೂ ಎಲ್ಲ ಅಡೆತಡೆಗಳನ್ನು ದಾಟಿ ಗಣಪದವಿ ಪಡೆದ ರೋಚಕ ಕತೆ ಎಂಬುದು ಒಂದು ಕಡೆಯಾದರೆ, ಮತ್ತೊಂದೆಡೆ ಒಳಗೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂಬಂತೆ ಅನುಭಾವಕ್ಕೆ ಲಿಂಗವಿಲ್ಲ ಎಂಬುದನ್ನು ಹರಿಹರ ಸಾರಿದ್ದಾನೆ.

*ಲೇಖಕಿ ಕನ್ನಡ ಉಪನ್ಯಾಸಕಿ. ‘ಕನ್ನಡದ ನಾಟಕಕಾರ್ತಿಯರು: ಸಾಹಿತ್ಯಕ, ಸಾಂಸ್ಕೃತಿಕ ಶೋಧ’ ವಿಷಯದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಗಳಿಸಿದ್ದಾರೆ. ಮಹಿಳಾ ಸಾಹಿತ್ಯ, ರಂಗಭೂಮಿ, ಸ್ತ್ರೀವಾದಿ ವಿಮರ್ಶೆ, ಅನುವಾದ ಮತ್ತು ಕಾವ್ಯಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ನಾಟಕಗಳನ್ನು ರಚಿಸಿ ಸ್ವತಃ ನಿರ್ದೇಶಿಸಿದ್ದಾರೆ.

One Response to " ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

-ಕಾವ್ಯಶ್ರೀ ಎಚ್.

"

Leave a Reply

Your email address will not be published.