ಡಾ‘ನೀರ ಮೇಲಣ ಗುಳ್ಳೆ’ .ಜಿ.ಎಸ್.ಆಮೂರ ಆತ್ಮಕತೆ

ಮಾಲತಿ ಪಟ್ಟಣಶೆಟ್ಟಿ

ಇತ್ತೀಚೆಗೆ ಅಗಲಿದ ಕನ್ನಡದ ವಿಶಿಷ್ಟ ವಿಮರ್ಶಕ ಡಾ.ಜಿ.ಎಸ್.ಆಮೂರ ಅವರ ಬದುಕು-ಬರಹಗಳ ಮೆಲಕು ಹಾಕಿದ್ದಾರೆ ಧಾರವಾಡದಲ್ಲಿ ಅವರನ್ನು ಹತ್ತಿರದಿಂದ ಗಮನಿಸಿದ ಸಾಹಿತಿ ಮಾಲತಿ ಪಟ್ಟಣಶೆಟ್ಟಿ.

ನೀರ ಮೇಲಣ ಗುಳ್ಳೆ ಗ್ರಂಥವನ್ನು ಓದಿ ಮುಗಿಸಿದಾಗ ಅನ್ನಿಸಿತು… ಬೇರೆ ಆತ್ಮಕಥೆಗಳಿಗಿಂತ ಇದೆಷ್ಟು ಭಿನ್ನ! …ಯೋಚಿಸುತ್ತ ಕುಳಿತೆ. ಉಳಿದವುಗಳು ಆತ್ಮ ಸಮರ್ಥನೆ, ಸ್ವಪ್ರಶಂಸೆ, ತಪ್ಪುಗಳನ್ನು ತಿರುಚಿ ಬರೆದ ಹುಸಿಕಥನಗಳಿಂದ ತುಂಬಿರುತ್ತವೆ. ಇದು ಆತ್ಮವಂಚನೆಯಲ್ಲವೆ? ಡಾ.ಆಮೂರರ ಆತ್ಮಕಥೆಯು  ಒಂದು ಹೂ ಅರಳಿದಂತೆ; ಸಹಜ, ಸ್ವಾಭಾವಿಕ ಅಭಿವ್ಯಕ್ತಿ! ಈ ಹೂವಿನಿಂದ ಹೊರಸೂಸುವ ಸುಗಂಧವು ನಮ್ರತೆಯದು. ತನ್ನನ್ನು ರೂಪಿಸಿದ ಕೈಗಳನ್ನು, ಮನಸುಗಳನ್ನು ನೆನೆಯುವುದೇ ತನ್ನ ಗ್ರಂಥದ ಮೂಲ ಉದ್ದೇಶವೆಂದು ಮುನ್ನುಡಿಯಲ್ಲಿ ಲೇಖಕರು ನಿವೇದಿಸಿದ್ದಾರೆ.

ನಾರದರಂತೆ ನಾನೂ ತ್ರಿಲೋಕ ಸಂಚಾರಿಯಾಗಿ ಮೂರೂ ಲೋಕಗಳಲ್ಲಿ ಅಲೆದಿದ್ದೇನೆ ಎನ್ನುತಾರೆ. ಬೊಮ್ಮನಹಳ್ಳಿಯಿಂದ ಹಾವೇರಿ, ಧಾರವಾಡ, ಗದಗ ಮತ್ತು ಔರಂಗಾಬಾದ್ ಇವುಗಳ ಮಧ್ಯ ಅಲೆದದ್ದು ತನ್ನ ಹೊಟ್ಟೆಪಾಡಿಗಾಗಿ, ಜ್ಞಾನದ ಹಸಿವಿಗಾಗಿ, ಯೋಗ್ಯ ಸ್ಥಾನಮಾನಗಳನ್ನು ಗಳಿಸುವುದಕ್ಕಾಗಿ. ಹೋರಾಟವೇ ಅವರ ಪಾಲಿನ ಹಾದಿಯಾಗಿತ್ತು. ನಿವೃತ್ತಿಯ ನಂತರ ಶಾಂತಿ ಸಹನೆಗಳ ಮೂರ್ತಿ -ಪತ್ನಿ ಶಾಂತಾಳೊಂದಿಗಿನ ಧಾರವಾಡದ ‘ಜಾನಕಿ’ ಮನೆಯಲ್ಲಿ ನೆಮ್ಮದಿಯ ಬದುಕು. ಈಗ ಮುಂದುವರೆಯಿತು ಅವರ ಕನ್ನಡ ಸಾಹಿತ್ಯದ ಓದು, ಬರಹ.

ಇದು 34 ವರ್ಷಗಳ ಅಖಂಡ ತಪಸ್ಸಿನಂತಿತ್ತು. ಇದರ ಫಲವೇ 90 ಉತ್ತಮೋತ್ತಮ ಗ್ರಂಥಗಳ ರಚನೆ. ಬೆಳಗಿನ ವಾಯುವಿಹಾರ. ಆ ಬಳಿಕ ಓದೇ ಓದು, ಬರಹವೇ ಬರಹ. ಸಂಜೆಗೆ ವಿಶಾಲ ವೃಕ್ಷದಲ್ಲಿ ಚಿಲಿಪಿಲಿಗುಟ್ಟುವ ಪಕ್ಷಿಸಂಕುಲದಂತೆ ಗೆಳೆಯರು, ವಿದ್ಯಾರ್ಥಿಗಳು, ಸಾಹಿತಿಗಳು… ಪರವೂರ ಅತಿಥಿಗಳೊಂದಿಗೆ ಸಾಹಿತ್ಯದ ವಾದವಿವಾದ. ಇಷ್ಟು ಹೊತ್ತಿಗಾಗಲೇ ಅವರ ನಾಲ್ಕೂ ಮಕ್ಕಳು ವಿವಾಹವಾಗಿ ಉನ್ನತ ಹುದ್ದೆಯಲ್ಲಿದ್ದರು. ಎಲ್ಲವೂ ಸುಸೂತ್ರವಾಗಿತ್ತು. ಆದರೆ 2014ರ ಜುಲೈ 14ಕ್ಕೆ ಎಲ್ಲವನ್ನೂ ಬಂಧಿಸಿದ ಸೂತ್ರವೊಂದು ತುಂಡಾಯ್ತು; ಪತ್ನಿ ಶಾಂತಾ ತೀರಿಕೊಂಡರು!

ಪತ್ನಿ ಶಾಂತಾ ಇಲ್ಲದ ಬದುಕು ದುರ್ಭರವಾಗಿತ್ತು. ಜೋಲಿ ತಪ್ಪಿ ಬೀಳುತ್ತ, ಏಳುತ್ತ ಹೇಗೋ 5 ವರ್ಷದ ಏಕಾಕಿ ಜೀವನವನ್ನು ನಡೆಸಿದರು. ಮುಪ್ಪು ಮುತ್ತಿಗೆ ಹಾಕಿತು. ಮಕ್ಕಳು ತಂದೆಯನ್ನು ಬೆಂಗಳೂರಿಗೆ ಕರೆದೊಯ್ದರು. ಸದಾ ಬರೆಯುತ್ತಲೇ ಇರುವ ಲೇಖನಿ ಒಮ್ಮೆಲೇ ನಿಂತುಬಿಟ್ಟಿತು. ಅದು 2020ರ ಸೆಪ್ಟೆಂಬರ್ 28ರ ದಿನವಾಗಿತ್ತು. ಒಂದು ಸಾರ್ಥಕ ಬದುಕು ಹೀಗೆ ಅಂತ್ಯಗೊಂಡಿತ್ತು!

ಭಾಗ 1 -ಮನೆ

‘ನೀರ ಮೇಲಣ ಗುಳ್ಳೆ’ ಆತ್ಮಕಥೆಯನ್ನು ಆಮೂರರು ಸುವ್ಯವಸ್ಥಿತ ಯೋಜನೆಗಳಡಿ ಮೂರು ಭಾಗಗಳಲ್ಲಿ ವಿಭಜಿಸಿದ್ದಾರೆ. ಮೊದಲನೆಯ ಭಾಗವು `ಮನೆ’ ಕುರಿತದ್ದು. ತನ್ನನ್ನು ಪಾಲಿಸಿದ ಪೋಷಿಸಿದ, ಸ್ನೇಹ ಪ್ರೀತಿ ತೋರಿದ ಮೂವರು ಮಹಿಳೆಯರನ್ನು ಇಲ್ಲಿ ಹೃದಯಪೂರ್ವಕ ನೆನೆಯಲಾಗಿದೆ. ತಾಯಿ ಗಂಗಾಬಾಯಿ ಬೇಗನೇ ತೀರಿಕೊಂಡರು. ಧರ್ಮಪತ್ನಿ ಶಾಂತಾ ಒಬ್ಬ ಸುಶಿಕ್ಷಿತ, ಸುಶೀಲ ಪತ್ನಿಯಾಗಿ ಪತಿಯೊಂದಿಗೆ ಎಂದೂ ಜಗಳವಾಡಲಿಲ್ಲ. ತಾಯಿ ಗಂಗಾಬಾಯಿ ಮತ್ತು ಪತ್ನಿ ಶಾಂತಾ ಇವರ ವ್ಯಕ್ತಿತ್ವಗಳಲ್ಲಿ ಬಹಳ ಸಾಮ್ಯ ಇದೆ ಎಂದು ಆಮೂರರು ಕಂಡುಕೊಂಡಿದ್ದರು.

ಆದರೆ ದುರ್ದೈವದ ಸಂಗತಿಯೆಂದರೆ ತಾಯಿ ಗಂಗಾಬಾಯಿಯು ಮಗನ ಏಳಿಗೆಯನ್ನು ನೋಡಲಿಲ್ಲ. ಈ ವಿಷಯಕ್ಕೆ ಶಾಂತಾ ಸುದೈವಿ ಎನ್ನುತ್ತಾರೆ ಆಮೂರ. ಮಕ್ಕಳ, ಮೊಮ್ಮಕ್ಕಳ ಸುಖ ಸಂಭ್ರಮಗಳನ್ನು ಕಣ್ಣಲ್ಲಿ ತುಂಬಿಕೊಂಡು ಶಾಂತಾ ನಡೆದುಬಿಟ್ಟರು. ಮೂರನೆಯ ಮಹಿಳೆಯಾಗಿ ಎಲೊವಿಚ್ ಅವರಿಗೆ ವೈಚಾರಿಕ ಸಂಗಾತಿಯಾಗಿ ಸಿಕ್ಕದ್ದು ಅಚಾನಕವಾಗಿ. ಅಮೆರಿಕೆಯಲ್ಲಿ ಇರುವವರೆಗೆ ಡಾ.ಆಮೂರ ಅವರಿಗೆ ಎಲ್ಲ ರೀತಿಯಿಂದಲೂ ಸಹಾಯದ ಹಸ್ತ ನೀಡಿದ ಅಪರೂಪದ ಮಹಿಳೆ ಅವರಾಗಿದ್ದರು.

ಭಾಗ 2 -ವೃತ್ತಿ

ಮುಂಬೈ ವಿಶ್ವವಿದ್ಯಾಲಯದ ಸೇಂಟ್ ಝೇವಿಯರ್ ಕಾಲೇಜಿನಿಂದ ಇಂಗ್ಲಿಷ್ ಪ್ರಧಾನ ವಿಷಯವಾಗಿಸಿಕೊಂಡು ಬಿ.ಎನಲ್ಲಿ ಪ್ರಥಮ ಸ್ಥಾನ ಪಡೆದರು. ಆರ್ಥಿಕ ಪರಿಸ್ಥಿತಿಯಿಂದಾಗಿ ಎಂ.ಎ. ಮಾಡಲು ಹಿಂದೇಟು ಹಾಕಿದರು. ಆಗ ಇವರ ಆತ್ಮೀಯ ಗುರುಗಳು ಒತ್ತಾಯಪೂರ್ವಕ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕಲಿಯಲು ಆದೇಶವಿತ್ತರು. ಇಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ಪಾಸಾದರು. ಕುಮಟೆಯ ಕೆನರಾ ಕಾಲೇಜು ಆಮೂರರನ್ನು ಆದರಪೂರ್ವಕವಾಗಿ ಆಮಂತ್ರಿಸಿತು.

ಉತ್ತಮ ಶಿಕ್ಷಕರಾಗಲು ಹಗಲು, ರಾತ್ರಿಯ ಅಧ್ಯಯನ ನಡೆಯಿತು. ಇಲ್ಲಿ ಓದು ಅವರ ಜೀವನದ ಉಸಿರಿನಂತಿತ್ತು. ಬರಹವನ್ನು ಗಂಭೀರವಾಗಿ ಪ್ರಾರಂಭಿಸಲಿಲ್ಲ. ನಂಬಿಕೆ-ಮೋಸ, ಮಿತ್ರ-ಶತ್ರು, ಮುಗ್ಧತೆ-ಕುಟಿಲತೆ ಇವುಗಳ ತೂಗುಯ್ಯಾಲೆಯ ಜೀವನದಲ್ಲಿ ಸ್ವಪ್ರಯತ್ನ, ಸ್ವಸಾಮಥ್ರ್ಯದಿಂದ ತಮ್ಮ ದಾರಿಯನ್ನು ಕಟ್ಟಿಕೊಂಡು ಮುನ್ನಡೆದರು. ಕುಮಟೆಯಲ್ಲಿ 8 ವರ್ಷ, ಗದುಗಿನ ಜೆ.ಟಿ ಕಾಲೇಜಿನಲ್ಲಿಯ 4 ವರ್ಷಗಳ ಅಧ್ಯಾಪನದ ನಂತರ ಧಾರವಾಡಕ್ಕೆ ಬಂದದ್ದು ರೀಡರ್ ಆಗುವ ಆಶಯದೊಂದಿಗೆ. ಆಗದಿದ್ದಾಗ ಮಹಾರಾಷ್ಟ್ರದ ಮರಾಠಾವಾಡಾ ವಿಶ್ವವಿದ್ಯಾಲಯವು ಪ್ರೊಫೆಸರ್‍ಶಿಪ್ಪನ್ನು ಕೊಡುತ್ತೇವೆ ಬನ್ನಿ ಎಂದು ಆದರಪೂರ್ವಕ ಆಹ್ವಾನಿಸಿದಾಗ ಡಾ.ಆಮೂರರು ಹೊರಟುಬಿಟ್ಟರು. ಹೀಗೆ ಕನ್ನಡಿಗರು ಆಮೂರರನ್ನು ಕಳೆದುಕೊಂಡದ್ದು ದುರಾದೃಷ್ಟಕರ ಎಂದು ನನಗೆ ಅನಿಸಿದೆ. 

ಈ ಮೊದಲೇ ಪಿ.ಎಚ್.ಡಿ. ಸಂಪೂರ್ಣಗೊಳಿಸಿದ್ದರಿಂದ ಅಲ್ಲಿ ಸರಳವಾಗಿ ಪ್ರೊಫೆಸರ್ ಆದರು. ರಾಮನ ಪಾದವು ತಾಗಿದ ಕಲ್ಲು ಮೇಲೆದ್ದು ಅಹಲ್ಯೆಯಾಗಿ ನಿಂತಂತೆ ಮಾರಾಠಾ ವಿಶ್ವವಿದ್ಯಾಲಯವು ಉನ್ನತಿಯ ಮಾರ್ಗವನ್ನು ಹಿಡಿದಿತ್ತು. ಡಾ.ಆಮೂರರಿಗೆ ಹೆಚ್ಚಿನ ಸ್ಥಾನಮಾನಗಳು ಈ ಸಂದರ್ಭದಲ್ಲಿ ಸಾಲಾಗಿ ಬಂದವು. ಸೀನಿಯರ್ ಫುಲ್ ಬ್ರೈಟ್ ಸ್ಕಾಲರ್ ಶಿಪ್ಪು ಸಿಕ್ಕು ಅಮೆರಿಕೆಯಲ್ಲಿ ಸಂಶೋಧನೆಯನ್ನು ಕೈಕೊಂಡರು. ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿಯ ಸೆಮಿನಾರುಗಳಲ್ಲಿ ಪ್ರಬಂಧಗಳನ್ನು ಮಂಡಿಸಿ ಕನ್ನಡಿಗರಿಗೆ ಕೀರ್ತಿಯನ್ನು ತಂದರು. ಇದೇ ಸಂದರ್ಭದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದರು.

ಭಾಗ 3 -ಸಾಹಿತ್ಯ

ಡಾ.ಆಮೂರರಲ್ಲಿ ಕನ್ನಡ ಸಾಹಿತ್ಯದ ಪ್ರೀತಿಯು ಪ್ರವೇಶಿಸಿದ್ದು ಚಿಕ್ಕಂದಿನಲ್ಲಿ. ಗಳಗನಾಥರ ಸಾಹಿತ್ಯ ಮತ್ತು ‘ಸದ್ಬೋಧ ಚಂದ್ರಿಕೆ’ ಪತ್ರಿಕೆಗಳನ್ನು ಬಾಲ್ಯದಲ್ಲಿಯೇ ಓದಿಕೊಂಡಿದ್ದರು. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಇವರಿಗೇ ಪ್ರಥಮ ಬಹುಮಾನ. ಬಿ.ಎ. ಪದವಿಗಾಗಿ ಓದುವಾಗ Shಚಿಞesಠಿeಚಿಡಿe, Woಡಿಜsತಿoಡಿಣh , ಏeಚಿಣs, ಇಟioಣ, ಐಚಿತಿಡಿeಟಿಛಿe, ಮತ್ತು ಊuxಟeಥಿ ರಂಥ ದಿಗ್ಗಜ ಲೇಖಕರ ಓದಿನಲ್ಲಿ ತಮ್ಮ ವಿಮರ್ಶೆಗಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಂಡರು. 1985ರಲ್ಲಿ ನಿವೃತ್ತರಾಗಿ ಧಾರವಾಡದಲ್ಲಿ ನೆಲೆ ನಿಂತಾಗ, ಕನ್ನಡ ಸಾಹಿತ್ಯದಲ್ಲಿ ಪೂರ್ಣ ಪ್ರಮಾಣದ ಬರಹಗಾರರಾದರು.

ಜೀವನದ ಕೊನೆ ಘಳಿಗೆಯವರೆಗೂ ಅಧ್ಯಯನ ಮತ್ತು ಬರವಣಿಗೆಗಳು ಅವರ ಎರಡು ಕಣ್ಣುಗಳಾದವು. ಧಾರವಾಡದಲ್ಲಿದ್ದು 50ಕ್ಕೂ ಹೆಚ್ಚಿನ ಸಾಹಿತ್ಯ ಕೃತಿ ರಚನೆಯು ಒಂದು ತಪಸ್ಸಿನಂತಿದೆ. ಖ್ಯಾತ ವಿಮರ್ಶಕರಾಗಿ ಇವರು ತೋರಿದ ವಿಮರ್ಶಾ ಮಾರ್ಗಗಳು ಎಲ್ಲರಿಂದ ಮಾನ್ಯತೆ ಪಡೆದು ಗೌರವಿಸಲ್ಪಟ್ಟಿವೆ. ಕೆರೂರ ವಾಸುದೇವಾಚಾರ್ಯರು, ಬೇಂದ್ರೆ, ಕುವೆಂಪು, ಶ್ರೀರಂಗ, ಗೋಕಾಕ್, ಅನಂತಮೂರ್ತಿ, ಕಾರ್ನಾಡ್ ಮುಂತಾದವರ ಸಮಗ್ರ ಸಾಹಿತ್ಯಾವಲೋಕನದ ಗ್ರಂಥಗಳು ಕನ್ನಡ ಸಾಹಿತ್ಯ ಭಾಂಡಾರಕ್ಕೆ ಆಮೂರರು ಅರ್ಪಿಸಿದ ರತ್ನ ಮುತ್ತುಗಳಂತಿವೆ. 

ಇಂಥ ಅಗಾಧ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ನೃಪತುಂಗ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾದೆಮಿಗಳಿಂದ ಪ್ರಶಸ್ತಿ… ಹೀಗೆ ಪ್ರಶಸ್ತಿಗಳ ಸರಮಾಲೆಯು ಇವರನ್ನು ಅರಸಿಕೊಂಡು ಬಂತು. ಇಂಥ ಅಗಾಧ ಸಾಧನೆ, ಸ್ಥಾನಮಾನ, ಬಹುಮಾನ ಬಂದಿದ್ದರೂ ಡಾ.ಆಮೂರರು ತಮ್ಮನ್ನು ಪ್ರೀತಿಸಿದ, ಆದರಿಸಿದ ಆಪದ್ಬಾಂಧವರನ್ನು ಮರೆಯಲಿಲ್ಲ. ಇವರ ಋಣ ಸಂದಾಯಕ್ಕಾಗಿಯೇ ಆತ್ಮಕಥೆ ಬರೆದಿದ್ದೇನೆ, ನನ್ನದಲ್ಲ -ಎಂದು ಹೇಳುವ ಡಾ.ಆಮೂರರ ಸಜ್ಜನಿಕೆಗೆ, ಸಭ್ಯತೆಗೆ ಮತ್ತು ವಿನಮ್ರತೆಗೆ ನಾನು ತಲೆಬಾಗುತ್ತೇನೆ.

*ಲೇಖಕರು ಹುಟ್ಟಿದ್ದು ಕೊಲ್ಲಾಪುರ; ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಮಾಡಿ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು.

Leave a Reply

Your email address will not be published.