‘ಡಿಜಿಟಲ್‍ದಾಹ’ದ ಭ್ರಮಾಧೀನ ವಾಸ್ತವ

ವಾಸ್ತವದ ಬದುಕಿಗೆ ಪ್ರತಿಸ್ಪಂದಿಸಬೇಕಾದ ಹೊತ್ತಿನಲ್ಲಿ ಆಧುನಿಕ ತಂತ್ರಜ್ಞಾನವು ತರುಣ ತರುಣಿಯರಲ್ಲಿ ಅಪಕ್ವವೂ ಅಪ್ರಸ್ತುತವೂ ಆದ ಪ್ರತಿಸ್ಪಂದನಗಳನ್ನು ರೂಪಿಸುತ್ತಿದೆ. ಬೆಳೆಯುತ್ತಿರುವ ಮಿದುಳುಗಳು ಅವಾಸ್ತವಿಕ ಪ್ರಪಂಚದ ಮಾದರಿಗಳನ್ನು ಸ್ವೀಕರಿಸಿ ನಿಜಜೀವನದ ಸವಾಲುಗಳನ್ನು ಎದುರಿಸಲಾರದೆ ಸೋತು ಸುಣ್ಣವಾಗುತ್ತಿವೆ.

ಮದುವೆ ಸಮಾರಂಭ. ಗಂಡ, ಹೆಂಡತಿ, ಹತ್ತು ವರ್ಷದ ಮಗಳು, ಎರಡು ವರ್ಷದ ಮಗ ಒಟ್ಟಿಗೆ ಬಾಳೆಲೆಯ ಮುಂದೆ ಕೂತಿದ್ದಾರೆ. ಪುಟ್ಟ ಹುಡುಗನ ಕೈಲಿ ದೊಡ್ಡ ಮೊಬೈಲ್, ಆಗಾಗ್ಗೆ ಚಿತ್ರಗಳನ್ನು, ಹಾಡುಗಳನ್ನು ಬದಲಿಸಿಕೊಡೆಂದು ತಾಯಿಗೆ ಕೈಸನ್ನೆಯಲ್ಲಿ ಸೂಚಿಸುತ್ತಾನೆ. “ಈಗ ಬೇಡ, ಊಟಮಾಡಿ ಆಮೇಲೆ ನೋಡುವಿಯಂತೆ” ಅಂದರೆ ಹುಡುಗ ಕೇಳುತ್ತಿಲ್ಲ. ಮೊಬೈಲ್ ಕಿತ್ತಿಕೊಳ್ಳಹೋದರೆ ನೆರೆದವರ ಮುಂದೆ ರಂಪ ಮಾಡುತ್ತಾನೆ. ಎರಡು ವರ್ಷ ಆದರೂ ಇನ್ನೂ ಮಾತು ಬಂದಿಲ್ಲ. ಹುಡುಗನ ಸೋದರ ಮಾವ ಬಂದು ಮಾತನಾಡಿಸಿದರೂ ಹುಡುಗ ತಲೆ ಎತ್ತಿ ನೋಡಲೂ ಇಲ್ಲ. ಮುಗುಳ್ನಗಲೂ ಇಲ್ಲ. “ನನಗೆ ಇವನ ‘ಮೊಬೈಲು ಗೀಳು’ ಬಿಡಿಸುವುದು ಹ್ಯಾಗೆ ಅಂತ್ಲೇ ಚಿಂತೆಯಾಗಿದೆ, ಅಣ್ಣಾ ಅವನು ಇನ್ನೂ ಸರಿಯಾಗಿ ಮಾತು ಬೇರೆ ಆಡ್ತಾ ಇಲ್ಲ.”

ತಂತ್ರಜ್ಞಾನದ ಹೊಡೆತ

ಈಗೀಗ ತರಗತಿಗಳಲ್ಲಿ ಪಾಠ ಹೇಳುವುದು ಕಷ್ಟವಾಗುತ್ತಿದೆ. ಮೊಬೈಲ್ ಬಳಕೆ ನಿಷಿದ್ಧ ಎಂಬ ಕಾನೂನಿದ್ದರೂ ವಿದ್ಯಾರ್ಥಿಗಳು ಡೆಸ್ಕನ ಒಳಗೆ ಮೊಬೈಲಿಟ್ಟುಕೊಂಡು ಫೇಸ್‍ಬುಕ್, ವ್ಯಾಟ್ಸಪ್‍ನಲ್ಲಿ ತಲ್ಲೀನರು. ಪಾಠ ಕೇಳುತ್ತಿರುವಂತೆ ನಟಿಸುತ್ತಾ ನೂರಾರು ಸಂದೇಶ ರವಾನಿಸುತ್ತಾರೆ. ಪಾಠ ಟಿಪ್ಪಣಿ ಬರೆದುಕೊಳ್ಳುವ ಬದಲಿಗೆ ಮೊಬೈಲ್‍ನಿಂದ ಚಿತ್ರಹೊಡೆದು ಎಲ್ಲರಿಗೂ ರವಾನಿಸುತ್ತಾರೆ. ಭಾಷಣ-ಮನೋರಂಜನಾ ಕಾರ್ಯಕ್ರಮಗಳಲ್ಲಂತೂ ಯಾರ ಬಾಯಿಯೂ ಸುಮ್ಮನಿರುವುದಿಲ್ಲ. ವೇದಿಕೆಯ ಭಾಷಣ ಯಾರಿಗೂ ಬೇಡ? ಗುಸುಗುಸು ಮಣಮಣ ಮಾತು.

ನೃತ್ಯ ಕಾರ್ಯಕ್ರಮ, ಹಾಡು ಇದ್ದರಂತೂ ಮೊಬೈಲ್ ಬಳಕೆ ಅನಿವಾರ್ಯ. ರಿಯಾಲಿಟಿ ಶೋಗಳನ್ನು ನೋಡಿ ನೋಡಿ ವಿದ್ಯಾಲಯಗಳಲ್ಲೂ ಈಗೀಗ ಹಾಡಿಗೆ ಚಪ್ಪಾಳೆ ತಟ್ಟುವ, ಸಾಮೂಹಿಕವಾಗಿ ದನಿಗೂಡಿಸುವ ಸ್ಥಿತಿ ನಿರ್ಮಾಣವಾಗಿದೆ; ಜೊತೆಗೆ ಸ್ಟೆಪ್ ಹಾಕುವ, ಹುಚ್ಚೆದ್ದು ಕುಣಿವ ಪರಿಪಾಠ ಶುರುವಾಗಿದೆ. ಸಭ್ಯತೆ, ಶಿಷ್ಟಾಚಾರದ ಅರಿವು ಮಾಯವಾಗುತ್ತಿದೆ. “ಯಂತ್ರಗಳನ್ನು ಕಳಚೋಣ” ಎಂದು ಪ್ರಸನ್ನ ಬಡಕೊಳ್ತಾ ಇದ್ದಾರೆ. ಆದರೆ ನಮ್ಮ ತರುಣ ಜನಾಂಗ ಹಾಗೂ ಎಳೆಯ ಮಕ್ಕಳು ದೊಡ್ಡವರನ್ನು ಅನುಸರಿಸಿ ಯಂತ್ರಗಳಿಗೆ ಗುಲಾಮರಾಗಿ ಮಾನುಷರೂಪವಿರದ ‘ಯಂತ್ರ ಸಂಸ್ಕøತಿ’ಗಳ ಸೃಷ್ಟಿಕರ್ತರಾಗುತ್ತಿದ್ದಾರೆ.

ಅಂತರ್ಜಾಲ, ಕೃತಕ ಬುದ್ಧಿಶಕ್ತಿಯೂ ಸೇರಿದಂತೆ ನವ ಮಾಧ್ಯಮಗಳು ಬೆಳೆಯುವ ಎಳೆಯರ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಟೆಲಿವಿಶನ್ ಹಾಗೂ ಕ್ರೌರ್ಯದ ನಡುವೆ ಪರಸ್ಪರ ಸಂಬಂಧವಿದೆ ಎಂದು ಈಚಿನ ಅಧ್ಯಯನಗಳು ಸಾರಿ ಹೇಳುತ್ತವೆ. ಆಕ್ರಮಣಕಾರಿ ನಡವಳಿಕೆ ಎಂಬುದು ಸಹಜವಲ್ಲ, ಅದು ಕಲಿತ ನಡವಳಿಕೆ. ದೃಶ್ಯಮಾಧ್ಯಮಗಳ ನಿರಂತರ ಅವಲೋಕನದಿಂದ ಕಿರಿಯರು ಕ್ರೌರ್ಯವನ್ನು ಸಹಜವೆಂಬಂತೆ ಸ್ವೀಕರಿಸುತ್ತಿದ್ದಾರೆ. ಚಿಕಿತ್ಸಕ ಮನೋವಿಜ್ಞಾನಿ ಡಾ.ಮಾಲವಿಕ ಕಪೂರ್ ಅವರ ಅಭಿಪ್ರಾಯದಂತೆ ದೃಶ್ಯ ಮಾಧ್ಯಮಗಳನ್ನು ವಿವೇಚನಾರಹಿತವಾಗಿ ಅದರಲ್ಲೂ ಹಿಂಸೆತುಂಬಿದ ವಿಷಯಗಳನ್ನು ಪದೇಪದೇ ನೋಡುವುದರಿಂದ ಮಕ್ಕಳ ಸಹಜ ವಿಕಾಸ ಬಾಧಿತವಾಗುತ್ತದೆ.

ಈ ಕಾರ್ಯಕ್ರಮಗಳು ಮಕ್ಕಳ ಮನಸ್ಸು ಮತ್ತು ವಯಸ್ಸಿಗೆ ಹೊಂದುವಂಥದ್ದಾಗಿರುವುದಿಲ್ಲ. ತಡರಾತ್ರಿಯವರೆಗೂ ಟಿ.ವಿ. ವೀಕ್ಷಣೆ ಮಾಡುವುದರ ದೆಸೆಯಿಂದಾಗಿ ಮಕ್ಕಳು ಅಗತ್ಯವಾದಷ್ಟು ಪ್ರಮಾಣದಲ್ಲಿ ನಿದ್ರಿಸುವುದಿಲ್ಲ. ಇದರ ಪರಿಣಾಮವಾಗಿ ಸಿಡುಕ ಪ್ರವೃತ್ತಿ ಮೂಡುತ್ತದೆ.

ನಮ್ಮಲ್ಲಿ ದೃಶ್ಯಮಾಧ್ಯಮಗಳು ವಯಸ್ಸಿನ ಪರಿಗಣನೆಯಿಲ್ಲದೆ ಎಲ್ಲರಿಗೂ ಸಮಾನವಾಗಿ ದಕ್ಕುತ್ತಿವೆ. ಈ ಮಾಧ್ಯಮಗಳಲ್ಲಿ ಕಂಡುಬರುವ ಯಾವುದೇ ಒಂದು ಘಟನೆಯನ್ನು ವಿವಿಧ ವಯೋಮಾನದವರು ವಿವಿಧ ಬಗೆಗಳಲ್ಲಿ ಗ್ರಹಿಸಿ ನಾನಾ ಬಗೆಯಲ್ಲಿ ಸ್ಪಂದಿಸುತ್ತಾರೆ. ಈ ಗ್ರಹಿಕೆಗಳು ಹಾಗೂ ಸ್ಪಂದನೆಗಳಲ್ಲಿ ಏಕರೂಪತೆಯಿಲ್ಲ. ಹೀಗಾಗಿ ಯಾವುದೇ ಒಂದು ಮಗು ಮಾಧ್ಯಮದಿಂದ ತೀರ ತಪ್ಪಾದ ಸಂದೇಶವನ್ನು ಸ್ವೀಕರಿಸಿ ಅದಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಎಳೆಯರು ಸತತವಾಗಿ ಟೆಲಿವಿಶನ್ ವೀಕ್ಷಣೆ ಮಾಡುವುದರಿಂದ ಅವರಲ್ಲಿ ಸಂವಹನದಲ್ಲಿ ಕೊರತೆ, ಭಯ, ಸ್ವಲೀನತೆಯ ಲಕ್ಷಣಗಳು, ಆಕ್ರಮಣಶೀಲತೆ, ಕೋಪತಾಪ, ಸಿಡುಕುತನ ಕಾಣಿಸಿಕೊಳ್ಳಬಹುದು.

ನಮ್ಮಲ್ಲಿ ಹಿರಿಯರು ಮತ್ತು ಕಿರಿಯರು ಎಂಬ ಭೇದವಿಲ್ಲದೆ ನಡುಮನೆಯಲ್ಲಿ ಎಲ್ಲರೂ ಏಕಕಾಲಕ್ಕೆ ಒಂದೇ ಬಗೆಯ ವಾಹಿನಿಯ ಕಾರ್ಯಕ್ರಮಗಳನ್ನು ನೋಡುತ್ತೇವೆ. ಈ ಕಾರ್ಯಕ್ರಮಗಳು ಮಕ್ಕಳ ಮನಸ್ಸು ಮತ್ತು ವಯಸ್ಸಿಗೆ ಹೊಂದುವಂಥದ್ದಾಗಿರುವುದಿಲ್ಲ. ತಡರಾತ್ರಿಯವರೆಗೂ ಟಿ.ವಿ. ವೀಕ್ಷಣೆ ಮಾಡುವುದರ ದೆಸೆಯಿಂದಾಗಿ ಮಕ್ಕಳು ಅಗತ್ಯವಾದಷ್ಟು ಪ್ರಮಾಣದಲ್ಲಿ ನಿದ್ರಿಸುವುದಿಲ್ಲ. ಇದರ ಪರಿಣಾಮವಾಗಿ ಸಿಡುಕ ಪ್ರವೃತ್ತಿ ಮೂಡುತ್ತದೆ.

ಟಿ.ವಿ. ಕಾರ್ಯಕ್ರಮಗಳಲ್ಲಿ ಮುಳುಗಿದ ನಗರದ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಪಾಠ ಪ್ರವಚನಗಳು ರುಚಿಸುವುದಿಲ್ಲ. ಶಾಲೆಯ ಕೆಲಸಗಳಲ್ಲಿ ಆಸಕ್ತಿ ಉಳಿಯುವುದಿಲ್ಲ. ಈಗಲಂತೂ ಕೇಬಲ್, ಉಪಗ್ರ್ರಹ ತಂತ್ರಜ್ಞಾನ, ಮೊಬೈಲ್‍ನಲ್ಲೇ ಧಾರಾಳ ಹರಿದು ಬರುವ ಅಶ್ಲೀಲ ವಿಡಿಯೋಗಳು, ಯು ಟ್ಯೂಬ್, ನೆಟ್‍ಫ್ಲಿಕ್ಸ್ ಇತ್ಯಾದಿಗಳು ಧಾರಾಳವಾಗಿ ಮಕ್ಕಳ ಕೈಗೆ ಎಟಕುತ್ತಿವೆ. ಅಳುವ ಮಕ್ಕಳನ್ನು ಶಾಂತಗೊಳಿಸಲು, ಊಟಮಾಡಲೊಲ್ಲದ ಮಕ್ಕಳನ್ನು ಊಟಮಾಡುವಂತೆ ಪುಸಲಾಯಿಸಲು ಮೊಬೈಲ್ ಹಾಗೂ ವಿಡಿಯೊ ಗೇಮ್‍ಗಳನ್ನು ಇಂದು ತಾಯಂದಿರು ಬಳಸುತ್ತಿದ್ದಾರೆ.

ಮಕ್ಕಳು ಕೈ ಮೈ ಕೊಳೆಮಾಡಿಕೊಳ್ಳುತ್ತವೆ, ಬಟ್ಟೆ ಗಲೀಜು ಮಾಡಿಕೊಳ್ಳುತ್ತವೆ, ಬಿದ್ದು ಕೈಕಾಲು ಮುರಿದುಕೊಳ್ಳುತ್ತವೆ ಎಂಬ ಭಯದಿಂದ ಹೆತ್ತವರು ಮಕ್ಕಳನ್ನು ಟಿವಿ ಮುಂದೆ ಕೂರಿಸುತ್ತಾರೆ;

ಮಕ್ಕಳು ಸಹಜವಾಗಿಯೇ ಬಯಲಿನಲ್ಲಿ ಒಂದಷ್ಟು ಸಮಯ ಓಡಿ ಆಡಿ ದಣಿದು ಮನೆಗೆ ಬರಬೇಕು. ಆಟ ಮನೋರಂಜನೆಯಾಗಿರುವಂತೆಯೇ ಮೈಮನಗಳನ್ನು ಪುನಶ್ಚೇತನಗೊಳಿಸುತ್ತದೆ. ಆದರೆ ಮಕ್ಕಳು ಕೈ ಮೈ ಕೊಳೆಮಾಡಿಕೊಳ್ಳುತ್ತವೆ, ಬಟ್ಟೆ ಗಲೀಜು ಮಾಡಿಕೊಳ್ಳುತ್ತವೆ, ಬಿದ್ದು ಕೈಕಾಲು ಮುರಿದುಕೊಳ್ಳುತ್ತವೆ ಎಂಬ ಭಯದಿಂದ ಹೆತ್ತವರು ಮಕ್ಕಳನ್ನು ಟಿವಿ ಮುಂದೆ ಕೂರಿಸುತ್ತಾರೆ; ಆಟವಾಡಲು ಪ್ರೋತ್ಸಾಹಿಸುವುದಿಲ್ಲ. ಕ್ರೀಡೆಗಳು ಮಕ್ಕಳ ಒಟ್ಟು ವಿಕಾಸವನ್ನು ಉತ್ತೇಜಿಸುವ ಸಾಧನ. ಈ ಕೆಲಸವನ್ನು ಟೆಲಿವಿಶನ್ ಮಾಡಲಾರದು.

ನೋಟದಾಗೆ ನಗೆಯಿಲ್ಲ

ಮಕ್ಕಳು ಏನನ್ನು ನೋಡುತ್ತಾರೆ ಎಂಬುದು ಬಹಳಮುಖ್ಯವಾದ ಸಂಗತಿ. ‘ದೃಶ್ಯ ಹಿಂಸೆ’ ಎಂದಿಗೂ ಮಕ್ಕಳ ವಿಕಾಸಕ್ಕೆ, ಭವಿಷ್ಯಕ್ಕೆ ಮಾರಕ. ದುರಂತದ ಸಂಗತಿ ಎಂದರೆ ಇವತ್ತು ಬಹಳಷ್ಟು ಶಾಲೆಗಳು ಸ್ಮಾರ್ಟ್ ತರಗತಿಗಳನ್ನು ಆರಂಭಿಸಿವೆ. ಅಂತರ್ಜಾಲದ ತಂತ್ರಜ್ಞಾನವನ್ನು ತರಗತಿಗಳಲ್ಲಿ ತುಂಬಿ ‘ತಂತ್ರಜ್ಞಾನ ಜಾಣ’ರನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಶಾಲೆಗಳು ಹಾಗೂ ಸರಕಾರಗಳು ಬೀಗುತ್ತಿವೆ. ‘ಸಾಮಾಜಿಕ ಕಲಿಕೆ’ ‘ಭಾವನಾತ್ಮಕ ಕಲಿಕೆ’, ಜಾಗೃತ ಕಲಿಕೆ’ ಸ್ಟೆಮ್ (STEM) ‘ಅಧಿಕೃತ ಕಲಿಕೆ’ ‘ಜಾಗತಿಕ ಪ್ರಜ್ಞಾ ಕಲಿಕೆ’ ಮುಂತಾದ ಚಿತ್ತಾಕರ್ಷಕ ಹಣೆಪಟ್ಟಿ ಹೊತ್ತು ಶಿಕ್ಷಣ ಮಾರುಕಟ್ಟೆಯನ್ನು ಕೊಳ್ಳೆ ಹೊಡೆವ ಈ ಬಗೆಯ ಪ್ರಯತ್ನಗಳಿಂದು ಅಮೆರಿಕದಲ್ಲಿ ಬಾಗಿಲು ಮುಚ್ಚುತ್ತಿವೆ. ಆದರೆ ನಮ್ಮಲ್ಲಿ ಇವುಗಳ ಭರಾಟೆ ಈಗ ಹೆಚ್ಚಾಗಿದೆ!

ಹಿರಿಯರು ಏನು ಮಾಡಬೇಕು?

ನಮ್ಮ ಕಿರಿಯರು ಹೆಚ್ಚು ಹೆಚ್ಚು ಮಾನವ ಸಂಪರ್ಕದಲ್ಲಿರಲು ಮಾಡಬೇಕಾದುದೇನು? ‘ದೃಶ್ಯಗೀಳಿ’ನಿಂದ ಅವರನ್ನು ಹೊರಗೆ ತರುವುದು ಹೇಗೆ?

1. ಡಿಜಿಟಲ್ ಸಾಧನಗಳನ್ನು ಅತಿಯಾಗಿ ಅವಲಂಬಿಸದಂತೆ ಮಾಡಬೇಕು. ಮುಖ್ಯವಾಗಿ ಮಕ್ಕಳು 10-12 ವರ್ಷ ಪ್ರಾಯದವರಾಗುವವರೆಗೆ ಅವರಿಗೆ ಯಾವುದೇ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಕೊಡಕೂಡದು.

2. ಅತ್ಯಾಧುನಿಕ ಡಿಜಿಟಲ್ ಆಟಗಳು ಏನಿವೆಯೋ ಅವುಗಳ ಬದಲಿಗೆ ನಾವೆಲ್ಲ ಬಾಲ್ಯದಲ್ಲಿ ಆಡುತ್ತಿದ್ದ ಲಗೋರಿ, ಕೇರಂ, ಕುಂಟೋಬಿಲ್ಲೆ, ಕೆರೆ-ದಡ ಇತ್ಯಾದಿ ಆಟಗಳಿಗೆ ಪ್ರಾಶಸ್ತ್ಯ ನೀಡಬೇಕು.

3. ಮಕ್ಕಳ ಕೈಗೆ ಮೊಬೈಲ್, ಲ್ಯಾಪ್‍ಟಾಪ್, ಟ್ಯಾಬ್ಲೆಟ್ ಕೊಟ್ಟು ಹೆತ್ತವರು ತಂತಮ್ಮ ಕೆಲಸಗಳಲ್ಲಿ ವ್ಯಸ್ತರಾಗಬಾರದು. ಬದಲಾಗಿ ಧಾವಂತದ ನಡುವೆಯೂ ಬಿಡುವಿಲ್ಲದಾಗಲೂ ಬಿಡುವು ಮಾಡಿಕೊಂಡು ಮಕ್ಕಳ ಜೊತೆ ಆಟಪಾಠ, ಹಾಡು ಕುಣಿತ, ಸಂಭಾಷಣೆ ಇತ್ಯಾದಿಗಳಲ್ಲಿ ಹೆಚ್ಚು ತೊಡಗಬೇಕು. ದಿನನಿತ್ಯ ಮಕ್ಕಳು, ಅಪ್ಪ ಅಮ್ಮ ಒಂದು ಹೊತ್ತಾದರೂ ಒಟ್ಟುಸೇರಿ ಊಟ ಮಾಡುವ, ಪಟ್ಟಾಂಗ ಹೊಡೆಯುವ ಪರಿಪಾಠ ಜಾರಿಗೆ ತರಬೇಕು. ಈ ಅವಧಿಯಲ್ಲಿ ಟಿ.ವಿ. ಮೊಬೈಲ್ ಇತ್ಯಾದಿಗಳಿಂದ ಕಡ್ಡಾಯವಾಗಿ ದೂರ ಉಳಿಯಬೇಕು. ರಜಾದಿನಗಳಲ್ಲಿ ಮಕ್ಕಳ ಜೊತೆ ಶಾಪಿಂಗ್ ಸಭೆ ಸಮಾರಂಭ, ಮಾರುಕಟ್ಟೆ ಭೇಟಿ, ಗೆಳೆಯರ ಮನೆಗೆ ಭೇಟಿ, ಸಂಬಂಧಿಕರ ಮನೆಗಳಿಗೆ ಭೇಟಿ, ವಾಕಿಂಗ್ -ಈ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಂಡಲ್ಲಿ ಮಾನವ ಸಂಪರ್ಕ, ಮಾನವೀಯ ಸಂಬಂಧ ವೃದ್ಧಿಯಾಗುತ್ತವೆ. ಯಂತ್ರ ಮೋಹ ಮತ್ತು ‘ಅವೈಯಕ್ತಿಕತೆ’ ದೂರವಾಗುತ್ತದೆ.

ಇಂಥ ಪ್ರಯತ್ನಗಳನ್ನು ಸಂದೇಹದಿಂದಲೇ ಗಮನಿಸಬೇಕೆಂದು ಮನೋವಿಜ್ಞಾನಿಗಳು ಎಚ್ಚರಿಸುತ್ತಾರೆ. ಏಕೆಂದರೆ ತೀರ ಎಳೆಯ ಪ್ರಾಯದಲ್ಲೇ ಅಂತರ್ಜಾಲದ ಮೂಲಕ ಒದಗುವ ಲೈಂಗಿಕ ವಿಷಯಗಳು ಹಿತಕಾರಿಯಲ್ಲ, ಮಕ್ಕಳು ದೃಶ್ಯ ಮಾಧ್ಯಮದ ಬೆಂಬಲದಿಂದ ಪರಿಣಾಮಕಾರಿಯಾಗಿ ಕಲಿಯಬಹುದು, ಆದರೆ ಅದಕ್ಕಿಂತ 20ಪಟ್ಟು ಹೆಚ್ಚು ಚೆನ್ನಾಗಿ ಹೆತ್ತವರಿಂದ ಕಲಿಯುತ್ತವೆ. ಮಕ್ಕಳು ದಿನದಲ್ಲಿ ಎರಡು ಗಂಟೆಗಳಿಗಿಂತ ಅಧಿಕ ಪ್ರಮಾಣದಲ್ಲಿ ದೃಶ್ಯ ಮಾಧ್ಯಮಗಳನ್ನು ನೋಡಬಾರದು; ಎಳೆಯರ ಹಸನಾದ ಬದುಕನ್ನು ವಿದ್ಯುನ್ಮಾನ ಸಾಧನಗಳು ಕಿತ್ತುಕೊಳ್ಳ ಕೂಡದು.

ಭ್ರಮಾಧೀನ ವಾಸ್ತವ

ನಾವು ಹಿರಿಯರು ತಂತಮ್ಮ ಪ್ರಾಪಂಚಿಕ ಜಂಜಡಗಳಲ್ಲಿ ಮುಳುಗಿ ಎಳವೆಯಲ್ಲೇ ಮಕ್ಕಳ ಕೈಗೆ ಡಿಜಿಟಲ್ ಸಾಧನಗಳನ್ನು ಕೊಡುವ ಮೂಲಕ ವಾಸ್ತವ ಜಗತ್ತನ್ನು ಕಡೆಗಣಿಸಿ ‘ವರ್ಚುವಲ್ ವಾಸ್ತವ’ವನ್ನು ಅವರ ಮುಂದಿಡುತ್ತಿದ್ದೇವೆ. ಇದರ ಪರಿಣಾಮವಾಗಿ ಇಂದಿನ ಮಕ್ಕಳು ವಾಸ್ತವ ಯಾವುದು? ವರ್ಚುವಲ್ ವಾಸ್ತವ ಅಥವಾ ಭ್ರಮಾಧೀನ ಜಗತ್ತು ಯಾವುದು? ಎಂಬುದನ್ನು ಪ್ರತ್ಯೇಕಿಸಿ ನೋಡಲಾರದ ಸ್ಥಿತಿಗೆ ತಲುಪಿದ್ದಾರೆ.

ಒಂದು ಅಂಶವನ್ನು ನಾವು ಹಿರಿಯರು ಚೆನ್ನಾಗಿ ಮನಗಾಣಬೇಕು. ಅದೆಷ್ಟೇ ಅತ್ಯಾಧುನಿಕವಾಗಿದ್ದರೂ ತಂತ್ರಜ್ಞಾನ ನಿಜ ಜೀವನ ಕಲಿಕೆಗೆ ಇಂಬು ನೀಡಲಾರದು. ‘ಡಿಜಿಟಲ್ ವ್ಯಸನ’ಕ್ಕೆ ಒಳಗಾದ ಎಳೆಯ ಮಕ್ಕಳು ಹಾಗೂ ಯುವಜನತೆ ಹಲವಾರು ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವರಲ್ಲದೆ ಕಲಿಕೆಯ ಕೌಶಲಗಳನ್ನು ಕರಗತಮಾಡಿಕೊಳ್ಳುವಲ್ಲಿ ಹಿಂದೆಬೀಳುತ್ತಾರೆ. ಅನುಭೂತಿಪರ ಪರಸ್ಪರ ಸಂಬಂಧ ಕೌಶಲಗಳನ್ನು ಹಾಗೂ ಸಂವಹನ ಕೌಶಲಗಳನ್ನು ರೂಢಿಸಿಕೊಳ್ಳುವಲ್ಲಿ ಸೋಲುತ್ತಾರೆ.

ಟೆಲಿವಿಶನ್ ಕಾರ್ಯಕ್ರಮಗಳು, ಮೊಬೈಲ್‍ನಲ್ಲಿ ಹರಿದಾಡುವ ಸಂಗತಿಗಳು, ಜಾಲತಾಣಗಳು, ಯೂ ಟ್ಯೂಬ್ ಹಾಗೂ ಅಶ್ಲೀಲದೃಶ್ಯ ಸಾಹಿತ್ಯಕ್ಕೆ ಹೆಚ್ಚು ಹೆಚ್ಚು ಒಗ್ಗಿಕೊಳ್ಳುವುದರಿಂದ ಇಂಥದನ್ನು ಇನ್ನಷ್ಟು ಮತ್ತಷ್ಟು ನೋಡಬೇಕೆಂಬ ಹಸಿವು ಕೆರಳುತ್ತದೆ. ಈ ಸಾಮಗ್ರಿಗಳನ್ನು ಹೆಚ್ಚು ಹೆಚ್ಚು ನೋಡಿದಷ್ಟೂ ಜನರು ಹೆಚ್ಚು ಹೆಚ್ಚು ಜಡರಾಗುತ್ತಾರೆ. ಸೂಕ್ಷ್ಮ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಾರೆ. ಯಾವುದೇ ಸಾವು ನೋವು ದುಃಖ, ವಿಷಾದ, ಹಿಂಸಾತ್ಮಕತೆ ಯಾವುದೂ ನಮ್ಮನ್ನು ಬಾಧಿಸುವುದಿಲ್ಲ. ಜಡತ್ವವೊಂದೇ ನಮ್ಮಲ್ಲಿ ರೂಢಮೂಲವಾಗುತ್ತದೆ. ನಾವು ಏನನ್ನಾದರೂ ಪಡೆದುಕೊಳ್ಳುವುದಾದರೆ ಆಕ್ರಮಣಶೀಲತೆಯೊಂದೇ ಸರಿಯಾದ ಮಾರ್ಗ ಎಂಬ ಅಪಾಯಕಾರಿ ತೀರ್ಮಾನಕ್ಕೆ ಬಂದು ಬಿಡುತ್ತೇವೆ.

ಎರಡು ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳು ತಂತ್ರಜ್ಞಾನ ಬಳಕೆ ಮಾಡುವುದು ಅಪಾಯಕಾರಿ. ತಂತ್ರಜ್ಞಾನ ಎಂದಿಗೂ ಬೆಚ್ಚನೆಯ ಮತ್ತು ವಾತ್ಸಲ್ಯಭರಿತ ಮಾನವ ಸಂವಹನಕ್ಕೆ ಬದಲಿಯಾಗಲಾರದು.

ಮುಂದಿನ ದಿನಮಾನಗಳಲ್ಲಿ ‘ವಾಸ್ತವ’ ಹಾಗೂ ‘ಭ್ರಮಾಧೀನ ವಾಸ್ತವ’ದ ನಡುವಿನ ಸೂಕ್ಷ್ಮವಾದ ಗೆರೆ ಅಳಿಸಿ ಹೋಗುತ್ತದೆ. ಆದುದರಿಂದ ನಾವು ನಮ್ಮ ತರುಣ ಜನಾಂಗದ ಹಿತದೃಷ್ಟಿಯಿಂದ ನಮ್ಮ ‘ನಿಜಪ್ರಪಂಚ’ವನ್ನು ಉಳಿಸಲಾದರೂ ಭ್ರಮಾಧೀನ ವಾಸ್ತವವನ್ನು ಮಾರು ದೂರದಲ್ಲಿ ಇಡುವುದು ಅತ್ಯಾವಶ್ಯಕ.

ನಮ್ಮ ಮನೆಗಳಲ್ಲಿ ಹಾಗೂ ವಿದ್ಯಾಲಯಗಳಲ್ಲಿ ನಿಜವಾದ ಪಾಲನೆ ಪೋಷಣೆ ಆರೈಕೆ ಹಾಗೂ ಕಷ್ಟ ಸುಖಗಳ ಹಂಚಿಕೊಳ್ಳುವಿಕೆಯ ಕ್ರಿಯೆ ನಡೆದರೆ ತಂತ್ರಜ್ಞಾನ ನಮಗೆ ಕೇವಲ ತೋರಿಕೆಯ ಸಮಾಧಾನ ಒದಗಿಸುತ್ತದೆ. ಭಾವನಾತ್ಮಕ ನೆಲೆಯಲ್ಲಿ ವ್ಯಕ್ತಿ-ವ್ಯಕ್ತಿಯ ನಡುವೆ ನಡೆಯುವ ಸಾಮಾಜಿಕ ಸಂಬಂಧಗಳಲ್ಲಿ ನಮ್ಮ ಬುದ್ಧಿ, ಮನಸ್ಸುಗಳು ಪರಿಪಕ್ವವಾಗುತ್ತವೆ. ಆದರೆ ತಂತ್ರಜ್ಞಾನ ನಮ್ಮ ಎಳೆಯರ ಮನಸ್ಸುಗಳ ಮೇಲೆ ಯಾವ ಬಗೆಯ ಧನಾತ್ಮಕ ಪರಿಣಾಮ ಬೀರಬಹುದು ಎಂಬುದು ನಮಗಿನ್ನೂ ತಿಳಿದಿಲ್ಲ. ಅದರಲ್ಲೂ ಎರಡು ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಮಕ್ಕಳು ತಂತ್ರಜ್ಞಾನ ಬಳಕೆ ಮಾಡುವುದು ಅಪಾಯಕಾರಿ. ತಂತ್ರಜ್ಞಾನ ಎಂದಿಗೂ ಬೆಚ್ಚನೆಯ ಮತ್ತು ವಾತ್ಸಲ್ಯಭರಿತ ಮಾನವ ಸಂವಹನಕ್ಕೆ ಬದಲಿಯಾಗಲಾರದು.

ಈ ಶತಮಾನದ ಆರಂಭದಿಂದಲೂ ಡಿಜಿಟಲ್ ತಂತ್ರಜ್ಞಾನದ ಪರ ವಕಾಲತ್ತು ಮಾಡುತ್ತಲೇ ಬಂದವರು ಮಿದುಳಿನ ವಿಕಾಸದಲ್ಲಿ ವಿಡಿಯೋ ಗೇಮ್‍ಗಳು ಬೀರುವ ಧನಾತ್ಮಕ ಪ್ರಭಾವವನ್ನು ಕೊಂಡಾಡುತ್ತಾ ಬಂದಿದ್ದಾರೆ. ವಿಡಿಯೊ ಗೇಮ್‍ಗಳಿಂದ ಮಕ್ಕಳಲ್ಲಿ ಅವಧಾನ, ಏಕಾಗ್ರತೆ ಹಾಗೂ ಸಮಸ್ಯೆ ಪರಿಹಾರದ ಕೌಶಲಗಳು ವೃದ್ಧಿಯಾಗುತ್ತವೆ ಎನ್ನಲಾಗಿದೆ. ಇವುಗಳಿಂದ ಮಕ್ಕಳ ಕಂಪ್ಯೂಟರ್ ಸಾಕ್ಷರತೆ, ಗ್ರಾಫಿಕ್ಸ್, ವಿನ್ಯಾಸ ಹಾಗೂ ಆನಿಮೇಶನ್‍ಗಳನ್ನು ಗ್ರಹಿಸುವ ಶಕ್ತಿ ವರ್ಧಿಸುತ್ತದೆ ಎಂದು ಡಿಜಿಟಲ್ ಪರಿಣತರು ವಾದಿಸುತ್ತಾರೆ.

ಇವರಲ್ಲಿ ಶೇಕಡಾ 25 ಮಂದಿಗೆ ತಮ್ಮ ತಾಯ್ನುಡಿಯ ಪಠ್ಯವನ್ನು ನಿರರ್ಗಳವಾಗಿ ತಪ್ಪಿಲ್ಲದೆ ಓದಲು, ಓದಿಗ್ರಹಿಸಲು ಬರುವುದಿಲ್ಲ.

ಮಕ್ಕಳಲ್ಲಿ ಕಂಡುಬರುವ ಮಾಧ್ಯಮದ ಅತಿಯಾದ ಬಳಕೆ ಅಥವಾ ವ್ಯಸನದಿಂದಾಗಿ ಅವಧಾನ ಕೊರತೆಗಳು ಸಮಸ್ಯೆಗಳು, ವಿಪರೀತ ಚಟುವಟಿಕೆ, ಸಿಡುಕುತನ, ಚಾಂಚಲ್ಯ, ನಿದ್ರಾಹೀನತೆ ಹಾಗೂ ಬೊಜ್ಜುತನ ಕಂಡುಬರುತ್ತಿದೆ. ವಿಡಿಯೋ ಗೇಮುಗಳ ಬಳಕೆಯಿಂದ ಓದುಗಾರಿಕೆ ಅಪಾಯದಲ್ಲಿದೆ. ಭಾರತದಲ್ಲಿ 14ರಿಂದ 18ರ ಪ್ರಾಯದ ಒಳಗಿನವರಲ್ಲಿ ಹತ್ತರಲ್ಲಿ ಏಳು ಮಂದಿಯಲ್ಲಿ ಮೊಬೈಲ್ ಬಳಕೆ ಕಂಡುಬಂದಿದೆ. ಆದರೆ ಇವರಲ್ಲಿ ಶೇಕಡಾ 25 ಮಂದಿಗೆ ತಮ್ಮ ತಾಯ್ನುಡಿಯ ಪಠ್ಯವನ್ನು ನಿರರ್ಗಳವಾಗಿ ತಪ್ಪಿಲ್ಲದೆ ಓದಲು, ಓದಿಗ್ರಹಿಸಲು ಬರುವುದಿಲ್ಲ. ಆದುದರಿಂದ ಮಕ್ಕಳು ಪ್ರಜ್ಞಾವಂತರೂ ಜವಾಬ್ದಾರಿಸಹಿತರೂ ಆಗುವ ತನಕ ಮಾಧ್ಯಮ ಬಳಕೆಯ ವಿಷಯದಲ್ಲಿ ಪಾಲಕರು ಹೆಚ್ಚಿನ ವಿವೇಚನೆಯಿಂದ ವರ್ತಿಸಬೇಕೆಂದು ಮನೋವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.

ಜಾಗೃತಿ ಅಭಿಯಾನ

ನಮ್ಮ ಬದುಕಿನಲ್ಲಿ ತನ್ನ ಕಬಂಧ ಬಾಹುವನ್ನು ಚಾಚಿರುವ ಡಿಜಿಟಲ್ ತಂತ್ರಜ್ಞಾನ ವಾಸ್ತವವನ್ನು ಆಪೋಶನ ತೆಗೆದುಕೊಂಡು ‘ಮಿಥ್ಯಾ ವಾಸ್ತವ’ವನ್ನು ಸೃಷ್ಟಿಸುತ್ತಿದೆ. ಇದರ ಪರಿಣಾಮವಾಗಿ ಯಾವುದು ನಿಜ, ಯಾವುದು ನಿಜವಲ್ಲ ಎಂಬುದನ್ನು ವಿವೇಚಿಸಲಾರದ ಜನಾಂಗ ಸೃಷ್ಟಿಯಾಗುತ್ತಿದೆ. ವಾಸ್ತವದ ಬದುಕಿಗೆ ಪ್ರತಿಸ್ಪಂದಿಸಬೇಕಾದ ಹೊತ್ತಿನಲ್ಲಿ ಆಧುನಿಕ ತಂತ್ರಜ್ಞಾನವು ತರುಣ ತರುಣಿಯರಲ್ಲಿ ಅಪಕ್ವವೂ ಅಪ್ರಸ್ತುತವೂ ಆದ ಪ್ರತಿಸ್ಪಂದನಗಳನ್ನು ರೂಪಿಸುತ್ತಿದೆ. ಬೆಳೆಯುತ್ತಿರುವ ಮಿದುಳುಗಳು ಅವಾಸ್ತವಿಕ ಪ್ರಪಂಚದ ಮಾದರಿಗಳನ್ನು ಸ್ವೀಕರಿಸಿ ನಿಜಜೀವನದ ಸವಾಲುಗಳನ್ನು ಎದುರಿಸಲಾರದೆ ಸೋತು ಸುಣ್ಣವಾಗುತ್ತಿವೆ.

ಕೃತಕ ಬುದ್ಧಿಶಕ್ತಿಯ ಸಾಧನಗಳ ಸಮ್ಮುಖದಲ್ಲಿ ನಿಜವಾದ ತಂದೆ ತಾಯಿಗಳು ಯುವ ಜನಾಂಗಕ್ಕೆ ಅಪರಿಚಿತವಾಗಿರುವ ಈ ವಿಚಿತ್ರ ಯುಗದಲ್ಲಿ ಮಾನವ ಸಹಜ ಬದುಕನ್ನು ಮರಳಿ ನೆಲೆಗೊಳಿಸಲು ನಾವೇನು ಮಾಡಬಹುದು? ಖ್ಯಾತ ಶಿಶು ಮನೋವಿಜ್ಞಾನಿ ಡಾ.ಮಾಲವಿಕ ಕಪೂರ್ ಅವರ ಕೆಲವು ಸಲಹೆಗಳು ಈ ನಿಟ್ಟಿನಲ್ಲಿ ಮಾರ್ಗದರ್ಶಿಯಾಗಿವೆ.

1. ಯೂ ಟ್ಯೂಬ್, ಫೇಸ್ಬುಕ್, ಸ್ನ್ಯಾಪ್‍ಚ್ಯಾಟ್ ಮುಂತಾದವುಗಳು ಮಕ್ಕಳ ಮನೋವಿಕಾಸಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಸಿ ಹೇಳುವ ‘ಕಾಮನ್‍ಸೆನ್ಸ್,’ ‘ಹ್ಯೂಮೇನ್ ಟಿಕ್ನಾಲಜಿ’ ಮುಂತಾದ ಹಲವಾರು ಜಾಗೃತಿ ಕಾರ್ಯಕ್ರಮಗಳು ಇಂದು ನಮ್ಮ ನಡುವೆ ಇವೆ. ಶಾಲೆ ಕಾಲೇಜುಗಳು ಹಾಗೂ ಹೆತ್ತವರು ಇವುಗಳನ್ನು ಬಳಕೆ ಮಾಡಬಹುದು.

2. ಪಾಲಕರಲ್ಲಿ ಜಾಗೃತಿ ಮೂಡಿಸುವ, ಅವರಲ್ಲಿ ಸೂಕ್ಷ್ಮ ಸಂವೇದನಾಶೀಲತೆ ಬೆಳೆಸುವ, ಮಕ್ಕಳ ಲಾಲನೆ ಪಾಲನೆ ಹಾಗೂ ಮಕ್ಕಳ ಜೊತೆಗಿನ ಪರಿಣಾಮಕಾರಿ ಸಂವಹನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಮ್ಮ ಸಮಾಜದಲ್ಲಿ ಪದೇ ಪದೇ ನಡೆಯಬೇಕು.

3. ಪಾಲಕರು ಡಿಜಿಟಲ್ ದಾಹಕ್ಕೆ ಒಳಗಾದ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಡನೆ ಮಧುರ ಸಂಬಂಧ ಬೆಳೆಸಿಕೊಂಡು ಅವರಲ್ಲಿ ಬೆಳೆದಿರುವ ಗೀಳನ್ನು ನಿವಾರಣೆ ಮಾಡುವ ಕೇಂದ್ರಗಳಿಗೆ ಅಥವಾ ಮನೋ ಚಿಕಿತ್ಸಕರ ಬಳಿಗೆ ಕರೆದೊಯ್ಯಬೇಕು; ಮನೋಪರಿಣತರ ಮಾರ್ಗದರ್ಶನ ಹಾಗೂ ಸಲಹೆ ಸೂಚನೆ ಪಡೆಯಬೇಕು.

4. ತಂತ್ರಜ್ಞಾನಕ್ಕೆ ದಾಸರಾಗದ ಹಿರಿಯರು ತರುಣವೃಂದದ ಜೊತೆ ಬೆರೆತು ‘ಮಾಧ್ಯಮ ಮೋಹ’ದಿಂದ ಹೊರಗೆ ಬರುವ ದಾರಿಗಳನ್ನು ಕುರಿತು ಚರ್ಚಿಸುವ ವಾತಾವರಣ ಮೂಡಬೇಕು.

5. ಇಂದಿನ ತಲೆಮಾರಿನಲ್ಲಿ ಕಂಡುಬರುವ ‘ಡಿಜಿಟಲ್ ದಾಹ’ವನ್ನು ತಗ್ಗಿಸುವಲ್ಲಿ ಮತ್ತು ಸೂಕ್ಷ್ಮ ಸಂವೇದನಾಶೀಲತೆ ಬೆಳೆಸುವಲ್ಲಿ ಶಾಲೆ ಕಾಲೇಜುಗಳು ಸೂಕ್ತ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ಹಮ್ಮಿಕೊಳ್ಳಬೇಕು.

6. ಜೀವನ ಕೌಶಲಗಳ ಬಗ್ಗೆ ಎಲ್ಲ ವಿದ್ಯಾಲಯಗಳಲ್ಲೂ ಸಮರ್ಥ ಬೋಧನೆ ಹಾಗೂ ಪ್ರಾಯೋಗಿಕ ಜೀವನಾನುಭವ ಲಭ್ಯವಾಗಬೇಕು.

7. ಮೊಬೈಲ್, ಲ್ಯಾಪ್‍ಟ್ಯಾಪ್ ವಿಡಿಯೋ ಗೇಮ್‍ಗಳು ಹೀಗೆ ಮಕ್ಕಳು ಕೇಳಿದ್ದನ್ನೆಲ್ಲ ಒದಗಿಸುವುದು ಅವರ ಬೇಡಿಕೆಗಳನ್ನು ಪೂರೈಸುವುದು ತಂದೆ ತಾಯಿಗಳ ಪ್ರೀತಿಯ ಅಭಿವ್ಯಕ್ತಿಯಲ್ಲ. ಮಿತಿಗಳನ್ನು ನಿಗದಿಪಡಿಸುವುದೂ ಅಷ್ಟೇ ಮುಖ್ಯ. ಮಕ್ಕಳು ಈ ಮಿತಿಗಳನ್ನು ಅರಿತು, ಈ ಮಿತಿಗಳೊಳಗೇ ವ್ಯವಹರಿಸುವುದನ್ನು ಪಾಲಕರು ರೂಢಿಸಬೇಕು.

8. ಯುವ ಜನತೆಯ ಮುಂದೆ ಆರೋಗ್ಯಕರ ವ್ಯಕ್ತಿತ್ವದ ಮಾದರಿಗಳನ್ನು ಒಡ್ಡಿ, ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಅನುಭೂತಿ ಹಾಗೂ ಸಮಾಜಪರ ನಡವಳಿಕೆಗಳನ್ನು ಶಾಲೆ ಕಾಲೇಜುಗಳು ಹಾಗೂ ಹೆತ್ತವರು ಎಳೆಯರಲ್ಲಿ ರೂಢಿಸಲು ಮುಂದಾಗಬೇಕು.

ಎಲ್ಲ ಯಂತ್ರಗಳನ್ನು ಕಳಚಿ ಮತ್ತೆ ಗುಹೆಗಳತ್ತ ಹೆಜ್ಜೆಯಿಕ್ಕಲಾರೆವು. ಆದಿಮಾನವರಾಗಿ ಮತ್ತೆ ಎಲ್ಲವನ್ನೂ ಸೃಷ್ಟಿಸಲಾರೆವು. ಯಂತ್ರಜ್ಞಾನ, ತಂತ್ರಜ್ಞಾನ ಆಧುನಿಕೋತ್ತರ ಬದುಕಿನಲ್ಲಿ ಅನಿವಾರ್ಯವಾಗಿದೆ. ನಾವು ಬಳಸುವ ತಂತ್ರಜ್ಞಾನಕ್ಕೆ ದಾಸರಾಗದೆ, ತಂತ್ರಜ್ಞಾನವನ್ನು ನಮ್ಮ ಸಮಷ್ಟಿಯ ಹಿತಕ್ಕಾಗಿ ಅಡಿಯಾಳಾಗಿಸಿಕೊಂಡು ಹಿತಮಿತದಲ್ಲಿ ಬದುಕುವುದನ್ನು ಇನ್ನಾದರೂ ನಾವು ಹಿರಿಯರು ರೂಢಿಸಿಕೊಳ್ಳಲೇಬೇಕು. ಯಂತ್ರಜ್ಞಾನ ನಮಗೊದಗಿಸುವ ಸುಖಭೋಗಗಳನ್ನು ಅನುಭವಿಸುತ್ತಲೇ ‘ವೈರಾಗ್ಯ’ವನ್ನೂ ಕಲಿಯಬೇಕು. ಈ ಪಾಠ ನಮ್ಮಿಂದ ಮುಂದಿನ ತಲೆಮಾರಿಗೂ ವರ್ಗಾವಣೆಯಾಗಬೇಕು.

*ಲೇಖಕರು ಉಡುಪಿ ಜಿಲ್ಲೆಯ ಮಣೂರು ಗ್ರಾಮದವರು. ಕಳೆದ 37 ವರ್ಷಗಳಿಂದ ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಸಮನ್ವಯಾಧಿಕಾರಿಯಾಗಿ ಸೇವೆ.

Leave a Reply

Your email address will not be published.