ಡಿಜಿಟಲ್ ಯುಗದಲ್ಲಿ ಡೇಟಾ ಬಂಗಾರ

ಕೋವಿಡ್-19 ಉಂಟು ಮಾಡಿರುವ ಸಮಸ್ಯೆಗಳಂತೆ, ಹಲವು ಹೊಸ ಅವಕಾಶಗಳು ಕೂಡಾ ಸೃಷ್ಟಿಯಾಗುತ್ತಿವೆ. ಇದರಿಂದಾಗಿ ಸಾವಿರಾರು ಹೊಸ ಉದ್ಯೋಗವಕಾಶಗಳು ದೇಶ-ವಿದೇಶಗಳಲ್ಲಿ ಸೃಷ್ಟಿಯಾಗುತ್ತಿವೆ. ಇಂತಹ ಹೊಸ ಉದ್ಯೋಗವಕಾಶಗಳನ್ನು ಬಳಸಿಕೊಳ್ಳಲು ಆಸಕ್ತ ಕನ್ನಡಿಗರು ಮುಂದಾಗಬೇಕು.

-ಡಾ.ಉದಯ ಶಂಕರ ಪುರಾಣಿಕ

2020ರಿಂದ ವಿಶ್ವ ಎದುರಿಸುತ್ತಿರುವ ಕೋವಿಡ್-19ರ ಸಂಕಷ್ಟದಿಂದಾಗಿ ಉದ್ಯೋಗ ಮತ್ತು ವಾಣಿಜ್ಯ ಕ್ಷೇತ್ರಗಳ ಮೇಲೆ ಹೆಚ್ಚಿನ ಪರಿಣಾಮವಾಗುತ್ತಿದೆ. ಬದುಕು ಕಟ್ಟಿಕೊಳ್ಳಲು ನಡೆದಿರುವ ಪ್ರಯತ್ನಗಳ ನಡುವೆ, ಇತ್ತೀಚೆಗೆ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಯಾವ ಉದ್ಯೋಗ ದೊರೆಯುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಕೋವಿಡ್-19 ಉಂಟು ಮಾಡಿರುವ ಸಮಸ್ಯೆಗಳಂತೆ, ಹಲವು ಹೊಸ ಅವಕಾಶಗಳು ಕೂಡಾ ಸೃಷ್ಟಿಯಾಗುತ್ತಿವೆ. ಇದರಿಂದಾಗಿ ಸಾವಿರಾರು ಹೊಸ ಉದ್ಯೋಗವಕಾಶಗಳು ದೇಶ-ವಿದೇಶಗಳಲ್ಲಿ ಸೃಷ್ಟಿಯಾಗುತ್ತಿವೆ. ಇಂತಹ ಹೊಸ ಉದ್ಯೋಗವಕಾಶಗಳನ್ನು ಬಳಸಿಕೊಳ್ಳಲು ಆಸಕ್ತ ಕನ್ನಡಿಗರು ಮುಂದಾಗಬೇಕು.

ಮಾಹಿತಿ ತಂತ್ರಜ್ಞಾನ ಎಂದ ತಕ್ಷಣ ಹಲವರಿಗೆ ಡೇಟಾ ಕುರಿತು ನೆನಪಾಗುತ್ತದೆ. ಕಂಪ್ಯೂಟರ್ ಹಾರ್ಡ್ ಡಿಸ್ಕ್ ಸಾಮಥ್ರ್ಯ ಟೆರಾಬೈಟ್ (ಒಂದು ಟೆರಾಬೈಟ್ ಅಂದರೆ ಸುಮಾರು 1000 ಗಿಗಾ ಬೈಟ್)ನಲ್ಲಿರಬೇಕು ಎನ್ನುವುದರಿಂದ ಹಿಡಿದು ಮೊಬೈಲ್ ಫೋನ್, ಇಂಟರ್‍ನೆಟ್ ಸಂಪರ್ಕ, ಬ್ರಾಡ್‍ಬ್ಯಾಂಡ್, ಹೀಗೆ ಹಲವು ಕಡೆಯಲ್ಲಿ ಡೇಟಾ ಕುರಿತು ಚರ್ಚೆ ಸಾಮಾನ್ಯವಾಗಿದೆ.

ಆದರೆ ವಿಶ್ವಾದಂತ್ಯ ಎಷ್ಟೊಂದು ಡೇಟಾ ಸೃಷ್ಟಿಯಾಗುತ್ತಿದೆ ಮತ್ತು ಸಂಗ್ರಹವಾಗುತ್ತಿದೆ ಎಂದು ನೋಡಿದಾಗ, ನಾವು ಡಿಜಿಟಲ್ ಯುಗದಲ್ಲಿ ಮಾತ್ರವಲ್ಲ ಡೇಟಾ ಯುಗದಲ್ಲಿ ಕೂಡಾ ಇದ್ದೇವೆ ಎಂದು ಅರಿವಾಗುತ್ತದೆ. ವಿಶ್ವದ ಡೇಟಾ ಸಂಗ್ರಹ ಮಾಧ್ಯಮ ಕ್ಷೇತ್ರದಲ್ಲಿ ಸೀಗೇಟ್ ಸಂಸ್ಥೆಗೆ ಪ್ರಮುಖ ಸ್ಥಾನವಿದೆ. ಈ ಸಂಸ್ಥೆಯು ಮಾರ್ಚ್ 2021ರಲ್ಲಿ ಒಟ್ಟು 3 ಝೆಟಾಬೈಟ್ ಸಾಮಥ್ರ್ಯದ ಹಾರ್ಡ್‍ಡ್ರೈವ್ ಸ್ಟೋರೇಜ್ ಮಾರಾಟ ಮಾಡಿದ ದಾಖಲೆಯನ್ನು ಮಾಡಿತು. ಮೆಗಾಬೈಟ್, ಗಿಗಾಬೈಟ್ ಮತ್ತು ಟೆರಾಬೈಟ್ ಕುರಿತು ಕೇಳಿರುವವರಿಗೆ, ಏನಿದು ಝೆಟಾಬೈಟ್ ಎನ್ನುವ ಪ್ರಶ್ನೆ ಮೂಡುವುದು ಸಹಜ.

ಒಂದು ಝೆಟಾಬೈಟ್ ಅಂದರೆ 107 ಕೋಟಿ 37 ಲಕ್ಷ 41 ಸಾವಿರದ 824 ಟೆರಾಬೈಟ್‍ನಷ್ಟು ಹಾರ್ಡ್‍ಡ್ರೈವ್ ಡೇಟಾ ಸ್ಟೋರೇಜ್ ಸಾಮಥ್ರ್ಯವೆಂದಾಗುತ್ತದೆ. ಸೀಗೇಟ್ ಸಂಸ್ಥೆಗೆ ಒಂದು ಝೆಟಾಬೈಟ್ ಸಾಮಥ್ರ್ಯದ ಹಾರ್ಡ್‍ಡ್ರೈವ್ ಡೇಟಾ ಸ್ಟೋರೇಜ್ ಮಾರಾಟ ಮಾಡಲು 36 ವರ್ಷಗಳು ಬೇಕಾದವು. ನಂತರದ ನಾಲ್ಕು ವರ್ಷಗಳಲ್ಲಿ ಈ ಸಂಸ್ಥೆಯು 2 ಝೆಟಾಬೈಟ್ ಸಾಮಥ್ರ್ಯದ ಹಾರ್ಡ್‍ಡ್ರೈವ್ ಡೇಟಾ ಸ್ಟೋರೇಜ್ ಮಾರಾಟ ಮಾಡಿದರೆ, ನಂತರದ ಎರಡು ವರ್ಷಗಳಲ್ಲಿ ಈ ಸಂಸ್ಥೆಯು 3 ಝೆಟಾಬೈಟ್ ಸಾಮಥ್ರ್ಯದ ಹಾರ್ಡ್‍ಡ್ರೈವ್ ಡೇಟಾ ಸ್ಟೋರೇಜ್ ಮಾರಾಟ ಮಾಡಿದೆ.

3 ಝೆಟಾಬೈಟ್ ಡೇಟಾ ಎಂದರೆ ಎಷ್ಟು ಎಂದು ತಿಳಿದುಕೊಳ್ಳಲು ಕೆಲವು ಉದಾಹರಣೆಗಳನ್ನು ಬಳಸೋಣ. 60 ಶತಕೋಟಿಗಳಷ್ಟು ವಿಡಿಯೋ ಗೇಮ್‍ಗಳನ್ನು ಸಂಗ್ರಹಿಸಬಹುದು. ಒಂದು ಕ್ಷಣವೂ ವ್ಯರ್ಥ ಮಾಡದೆ ಇಷ್ಟೂ ವಿಡಿಯೋ ಗೇಮ್‍ಗಳನ್ನು ಆಡಲು ಒಬ್ಬ ಮನುಷ್ಯನಿಗೆ 86,700 ಶತವರ್ಷಗಳು ಬೇಕಾಗುತ್ತದೆ. ನೀವು ಚಲನಚಿತ್ರ ಪ್ರೇಮಿಯಾದರೆ, 54 ಲಕ್ಷ ವರ್ಷಗಳವರೆಗೂ ನೋಡಬಹುದಾದಷ್ಟು 4ಕೆ ಚಲನಚಿತ್ರಗಳನ್ನು ಸಂಗ್ರಹಿಸಿಡಬಹುದು.

ಸುಮಾರು 20 ವರ್ಷಗಳ ಹಿಂದೆ, ವಿಶ್ವಾದಂತ್ಯ ಒಂದು ವರ್ಷದಲ್ಲಿ ಸೃಷ್ಟಿಯಾಗುತ್ತಿದ್ದ ಡೇಟಾ, ಈಗ ಸುಮಾರು ಒಂದು ಗಂಟೆಯಲ್ಲಿ ಸೃಷ್ಟಿಯಾಗುತ್ತಿದೆ. ವರ್ಷ 2025ರ ಹೊತ್ತಿಗೆ ವಿಶ್ವಾದಂತ್ಯ 175 ಝೆಟಾಬೈಟ್‍ಗಳಷ್ಟು ಡೇಟಾ ಸೃಷ್ಟಿಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಹಾಗಾದಾಗ ಡೇಟಾವನ್ನು ಮೆಗಾಬೈಟ್, ಗಿಗಾಬೈಟ್ ಅಥವಾ ಟೆರಾಬೈಟ್‍ಗಳಲ್ಲಿ ಹೇಳುವುದರ ಬದಲಾಗಿ ಝೆಟಾಬೈಟ್‍ಗಳ ಲೆಕ್ಕದಲ್ಲಿ ಹೇಳುವುದು ಸಾಮಾನ್ಯವಾಗಲಿದೆ.

ವಿಶ್ವಾದಂತ್ಯ ಪ್ರತಿವರ್ಷ ಇಷ್ಟು ಅಗಾಧ ಪ್ರಮಾಣದಲ್ಲಿ ಡೇಟಾ ಸೃಷ್ಟಿಯಾಗುತ್ತಿದೆ ನಿಜ. ಆದರೆ ಇದರಲ್ಲಿ ಶೇಕಡಾ 32ರಷ್ಟು ಡೇಟಾ ಮಾತ್ರ ಬಳಕೆಯಾಗುತ್ತಿದೆ. ಉಳಿದ ಶೇಕಡಾ 68ರಷ್ಟು ಡೇಟಾ ಸಂಗ್ರಹದಲ್ಲಿದ್ದರೂ ಬಳಕೆಯಾಗದೆ ಉಳಿದಿದೆ. ಇಂತಹ ಡೇಟಾವನ್ನು ಸಂಸ್ಕರಿಸಿ, ವಾಣಿಜ್ಯ ಬಳಕೆಗೆ ಅನುವು ಮಾಡಿಕೊಡುವ ಕ್ಷೇತ್ರದಲ್ಲಿ ಕೆಲಸ ಮಾಡುವ ಅಥವಾ ನವೋದ್ಯಮ ಸ್ಥಾಪಿಸುವ ಉದ್ದೇಶವಿರುವ ಕನ್ನಡಿಗರಿಗೆ ಸಾಕಷ್ಟು ಅವಕಾಶಗಳಿವೆ.

ಇ-ಮೇಲ್, ಎಸ್‍ಎಮ್‍ಎಸ್, ಅನ್ವಯಿಕ ತಂತ್ರಾಂಶಗಳು, ಆಡಿಯೋ, ವಿಡಿಯೋ, ಚಿತ್ರಗಳು, ಸಿಸಿಟಿವಿ, ಸೆನ್ಸರ್‍ಗಳು ಹೀಗೆ ವಿವಿಧ ಮೂಲಗಳಿಂದ ದೊರೆಯುವ ಅಪಾರ ಪ್ರಮಾಣದ ಡೇಟಾವನ್ನು ಸಂಗ್ರಹಿಸಿ, ಸಂಸ್ಕರಿಸಿ, ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ಪರಿವರ್ತಿಸುವುದು ಒಂದು ಅವಕಾಶವಾದರೆ, ಸಂಸ್ಕರಿಸಿದ ಡೇಟಾವನ್ನು ವಿಶ್ಲೇಷಣೆ ಮಾಡಿ, ಸೂಕ್ತ ಸಲಹೆಗಳನ್ನು ನೀಡುವ ಡೇಟಾ ವಿಜ್ಞಾನ ಕ್ಷೇತ್ರವು ಮತ್ತೊಂದು ಅವಕಾಶವಾಗಿದೆ.

ಹಾರ್ಡ್‍ಡ್ರೈವ್ ಸ್ಟೋರೇಜ್ ಮಾರಾಟ ಮತ್ತು ಸರ್ವಿಸ್ ಕ್ಷೇತ್ರದಲ್ಲಿರುವವರಿಗೆ, ಝೆಟಾಬೈಟ್‍ಗಳಷ್ಟು ಡೇಟಾವನ್ನು ಸಂಗ್ರಹಿಸಡಲು ಅಭಿವೃದ್ಧಿಯಾಗುತ್ತಿರುವ ಹೆಚ್‍ಎಎಮ್‍ಆರ್‍ನಂತಹ ಅಧುನಿಕ ತಂತ್ರಜ್ಞಾನಗಳಲ್ಲಿ ಅಗತ್ಯ ಕೌಶಲಗಳನ್ನು ಕಲಿತು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಅವಕಾಶವಿದೆ. ಹೆಚ್‍ಎಎಮ್‍ಆರ್ ಅಂದರೆ ಹೀಟ್ ಅಸಿಸ್ಟೆಡ್ ಮ್ಯಾಗನೆಟಿಕ್ ರೆಕಾರ್ಡಿಂಗ್ ತಂತ್ರಜ್ಞಾನವೆಂದಾಗಿದೆ.

ಅಂದಹಾಗೆ ಭಾರತದಲ್ಲಿ ಡೇಟಾ ವಿಜ್ಞಾನವನ್ನು ಬ್ಯಾಂಕಿಂಗ್, ಆರೋಗ್ಯಸೇವೆ, ಕೃಷಿ, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಬಳಸಲು ಹಲವಾರು ಸಂಸ್ಥೆಗಳು ಮುಂದಾಗಿವೆ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಭಾರತದಲ್ಲಿ ಸಾವಿರಾರು ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ. ಆದರೆ ಇಂತಹ ಅವಕಾಶಗಳು ನಮ್ಮ ವಿದ್ಯಾರ್ಥಿಗಳಿಗೆ ಹೆಚ್ಚಾಗಿ ದೊರೆಯಬೇಕಾದರೆ, ಕೋವಿಡ್-19ರಿಂದ ಬದಲಾಗಿರುವ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಡೇಟಾ ವಿಜ್ಞಾನವನ್ನು ಕುರಿತ ಪಠ್ಯಕ್ರಮವನ್ನು ಉನ್ನತೀಕರಣಗೊಳಿಸುವುದು ಅತ್ಯಗತ್ಯವಾಗಿದೆ.

ವಿಶ್ವಾದಂತ್ಯ ಪ್ರತಿದಿನ ಅಪಾರ ಪ್ರಮಾಣದಲ್ಲಿ ಡೇಟಾ ಸೃಷ್ಟಿಯಾಗುತ್ತಿದೆ, ಬಳಕೆಯಾಗುತ್ತಿದೆ ಮತ್ತು ಸಂಗ್ರಹವಾಗುತ್ತಿದೆ. ಆದರೆ ಡೇಟಾ ಸುರಕ್ಷತೆ ಕುರಿತು ಅಗತ್ಯ ತಂತ್ರಜ್ಞಾನಗಳನ್ನು ಬಳಸುವವರ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಡೇಟಾವನ್ನು ಕದಿಯುವ, ದುರ್ಬಳಕೆ ಮಾಡುವ ಅಪರಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉದಾಹರಣೆಗೆ, ಕೊರೊನಾ ಕುರಿತು ಲಸಿಕೆ ಅಭಿವೃದ್ಧಿ ಮಾಡುತ್ತಿದ್ದ ಸಂಸ್ಥೆಗಳ ಮೇಲೆ ಸೈಬರ್ ದಾಳಿ ಮಾಡಿ, ಲಸಿಕೆಯನ್ನು ಕುರಿತ ಡೇಟಾವನ್ನು ಕದಿಯಲು ಚೀನಾ ಮೂಲದ ಅಪರಾಧಿಗಳು ಪ್ರಯತ್ನಿಸುವುದು ಇನ್ನೂ ನಿಂತಿಲ್ಲ.

ಇದೇ ರೀತಿ ಉದ್ಯಮಗಳು, ಸಂಶೋಧನೆ ಕೇಂದ್ರಗಳು, ಸರ್ಕಾರದ ಇಲಾಖೆಗಳು, ಬ್ಯಾಂಕುಗಳು, ರಕ್ಷಣಾ ಪಡೆಗಳು, ಮಾಧ್ಯಮ ಸಂಸ್ಥೆಗಳು, ವಿದ್ಯುತ್ ವಿತರಣಾ ವ್ಯವಸ್ಥೆ ಹೀಗೆ ವಿವಿಧ ಕಡೆ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಸೈಬರ್ ದಾಳಿಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳು, ನಕಲಿ ಆಡಿಯೋ, ವಿಡಿಯೋ, ಸಂದೇಶಗಳನ್ನು ಸೃಷ್ಟಿಸುವುದು, ಮಹಿಳೆಯರು ಮತ್ತು ಮಕ್ಕಳಿಗೆ ಕಿರುಕುಳ ನೀಡುವುದು, ನಕಲಿ ಉತ್ಪನ್ನಗಳ ಮಾರಾಟದ ಹೆಸರಿನಲ್ಲಿ ಹಣ ಪಡೆದು ವಂಚಿಸುವುದು, ಹೀಗೆ ಹಲವು ರೀತಿಯ ಅಪರಾಧಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ.

ಇಂತಹ ಕೃತ್ಯಗಳಿಂದ ಪ್ರತಿವರ್ಷ ಸೈಬರ್ ಅಪರಾಧಿಗಳು ಆರು ಸಾವಿರ ಕೋಟಿ ಡಾಲರ್‍ಗಿಂತ ಹೆಚ್ಚು ಹಣ ಗಳಿಸುತ್ತಿರುವುದು ಆತಂಕದ ವಿಷಯವಾಗಿದೆ.

ಹೀಗಾಗಿ ಡೇಟಾ ಸುರಕ್ಷತೆ ಕ್ಷೇತ್ರದಲ್ಲಿ ಕೂಡಾ ಸಾವಿರಾರು ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಈ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಮಾತ್ರವಲ್ಲದೆ ಇತರೆ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವ ಕಾರಣ, ರಾಜ್ಯದ ಶಿಕ್ಷಣ ಸಂಸ್ಥೆಗಳು ಇಂತಹ ಉದ್ಯೋಗವಕಾಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು ಅಗತ್ಯವಿದೆ. ಕೆಲವು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಸೈಬರ್ ಸುರಕ್ಷತೆ ಮತ್ತು ಸೈಬರ್ ವಿಧಿವಿಜ್ಞಾನ ಕುರಿತು ಕೋರ್ಸುಗಳನ್ನು ಪ್ರಾರಂಭಿಸಿವೆ. ಆದರೆ ಕೊರೊನಾದಿಂದ ಬದಲಾಗಿರುವ ಸನ್ನಿವೇಶಕ್ಕೆ ತಕ್ಕಂತೆ ಪಠ್ಯಕ್ರಮವನ್ನು ಉನ್ನತೀಕರಿಸುವುದು ತುರ್ತು ಅಗತ್ಯವಾಗಿದೆ.

ಕೊರೊನಾ ಸಂಕಷ್ಟದ ನಡುವೆ ಉದ್ಯೋಗ ಸಿಗುವುದಿಲ್ಲವೆನ್ನುವಂತಹ ನಕಾರಾತ್ಮಕ ಚಿಂತನೆಗಳು ಮತ್ತು ಖಿನ್ನತೆಯ ಬದಲಾಗಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸೋಣ.

*ಲೇಖಕರು ಇಂಜಿನಿಯರಿಂಗ್‍ನಲ್ಲಿ ಮೂರು ಡಾಕ್ಟರೇಟ್ ಪದವಿ ಪಡೆದಿದ್ದಾರೆ; ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಪರಿಣತರು, ವಿಜ್ಞಾನ-ತಂತ್ರಜ್ಞಾನ ಬರಹಗಾರರು, ಪ್ರಸ್ತುತ ಕನ್ಸೆಲ್‍ಟೆನ್ಸಿ ಸಂಸ್ಥೆಯಲ್ಲಿ ಡೇಟಾ ವಿಜ್ಞಾನ ವಿಭಾಗದ ಮುಖ್ಯಸ್ಥರು.

Leave a Reply

Your email address will not be published.