ಡಿಲ್ಲಿಗೆ ಹೋದರೂ ಡೊಳ್ಳಿಗದೇ ಪೆಟ್ಟು!

ಅಪ್ಪನ ಕೃಷಿಯ ಹೊರತಾಗಿಯೂ ನಾವು ಮೂವರೂ ಕೃಷಿಕಾರ್ಮಿಕರಾಗಿದ್ದೇವೆ. ಆದಾಗ್ಯೂ ಇದು ನಮ್ಮ ಪರಿಸ್ಥಿತಿ; ಇಷ್ಟರಲ್ಲೆ ಆರಾಮವಿದ್ದೇವೆ. ಮಕ್ಕಳ ಓದು, ಉದ್ಯೋಗ, ಮನೆ.. ಭವಿಷ್ಯ ಎಂತೇನೋ ಗೊತ್ತಿಲ್ಲ.

ಅವನ ಹೆಸರು ಮಂಜುನಾಥ. ಆತ ಹೇಳಿದ್ದು: ‘ಪಿಯುಸಿ ನಂತರ ಮುಂದೆ ಓದುವ ಆಸೆಯೇನೋ ಇತ್ತು. ಆದರೆ, ಓದಲಾಗಲಿಲ್ಲ. ಬದುಕಿನ ಬಗ್ಗೆ ಏನೆಲ್ಲ ಕನಸುಗಳಿದ್ದವು. ಅವು ಕನಸಾಗಿಯೇ ಉಳಿದವು. ಯಾವುದೋ ಒಂದು ಅವಕಾಶ ಅನಿರೀಕ್ಷಿತ ಬದಲಾವಣೆ ತಂದೀತು ಎಂಬ ನಿರೀಕ್ಷೆಯೂ ಹುಸಿಯಾಯಿತು’.

ಇಂಥ ಮಾತು ಆಡುವಾಗಲೂ ಅವನಲ್ಲಿ, ದುಃಖವಾಗಲಿ, ಬೇಸರವಾಗಲಿ ಇರಲಿಲ್ಲ. ‘ನನ್ನ ಪ್ರಯತ್ನ ನಾನು ಮಾಡಿದೆ. ಕನಸು, ಪ್ರಯತ್ನ, ಫಲಾಫಲಗಳೇನೆ ಇರಲಿ. ಈಗ ಏನಿದೆಯೋ ಅದೇ ಮುಖ್ಯ ಎಂಬುದೀಗ ಅರ್ಥವಾಗಿದೆ. ಇದೇ ಬದುಕು.’ ಎನ್ನುವ ವ್ಯಾಖ್ಯಾನದೊಂದಿಗೆ ಮಾತು ಮುಗಿಸಿ ನಕ್ಕಿದ್ದ.

ಬದುಕಿನ ಪುನರಾವಲೋಕನ ಮಾಡಿಕೊಳ್ಳುತ್ತ ಆಡಿದ ಈ ಕೆಲ ಮಾತುಗಳು ಮಂಜುನಾಥನ ಬದುಕಿನ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ ಹುಟ್ಟಿಸಿದವು. ಈ ಸಾಮಾನ್ಯನ ಕಥೆ, ಅವನ ಮಾತಿನಲ್ಲಿ:

ನನ್ನ ಅಜ್ಜ ನಿಂಗಪ್ಪ ಅಣಜಿ ಪೂರ್ಣಾವಧಿ ಕೃಷಿಕನಾಗಿದ್ದ. ಆಗ ನಮ್ಮದು ಹದಿನೆಂಟು ಎಕರೆ ಹೊಲವಿತ್ತು. ಕೃಷಿಯಲ್ಲಿಯೇ ಜೀವನ ಆರಾಮವಾಗಿ ಸಾಗುತಿತ್ತು. ಅಜ್ಜ ದೊಡ್ಡಾಟದ ಕಲಾವಿದ. ಅಜ್ಜ ಅರ್ಜುನನ ಪಾತ್ರ ಮಾಡಿದ್ದ. ಕೃಷ್ಣಾರ್ಜುನರ ಕಾಳಗ, ಕುರುಕ್ಷೇತ್ರ ಮತ್ತು ಮದಗದ ಕೆರೆಗೆ ಬಲಿದಾನಗೈದ ಕೆಂಚಮ್ಮನ ಆಟಗಳು ಆಗ ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ಹೆಸರು ಮಾಡಿದ್ದವು. 2000ನೇ ಇಸ್ವಿಯಲ್ಲಿ ನಮ್ಮೂರಲ್ಲಿ ಆಡಿದ್ದ ಕೃಷ್ಣಾರ್ಜುನರ ಕಾಳಗದಲ್ಲಿ ನಾನೂ ಸಹ ಅಭಿಮನ್ಯು ಪಾತ್ರ ಮಾಡಿದ್ದೆ. ಅಜ್ಜನ ಕಾರಣದಿಂದಲೋ ಏನೋ ನನಗೂ ಅಭಿನಯ, ನೃತ್ಯ ಹಾಗೂ ಸಂಗೀತದಲ್ಲಿ ಆಸಕ್ತಿ ಬೆಳೆದುಬಂದಿತ್ತು.

ಪಿಯುಸಿ ಪಾಸಾದ ನಂತರ ಬಿಎ ಇಲ್ಲವೇ ಕಂಪ್ಯೂಟರ್ ಸೈನ್ಸ್ ಓದಬೇಕೆಂಬ ಹಂಬಲವಿತ್ತು. ಮನೆಯಲ್ಲಿ ಅದಕ್ಕೆ ಪೂರಕ ವಾತಾವರಣವಿಲ್ಲದ್ದರಿಂದ ಓದಿಗೆ ಶರಣು ಹೇಳಿದೆ. ಅಜ್ಜ 2001ರಲ್ಲಿ ತೀರಿಕೊಂಡ. ಅಜ್ಜನಿಗೆ ಅಪ್ಪನೂ ಸೇರಿ ಮೂವರು ಮಕ್ಕಳು. ಹಿರಿಯಳಾದ ಲಕ್ಕವ್ವ ಅತ್ತೆಗೆ ಅಜ್ಜ 5 ಎಕರೆ ಮಸಾರಿ ಜಮೀನು ಕೊಟ್ಟಿದ್ದ. ಅದನ್ನು ಸೇರಿದಂತೆ 13 ಎಕರೆಯ ಕಮತದ ಜವಾಬ್ದಾರಿ ಅಪ್ಪನ ಹೆಗಲಿಗೆ ಬಿದ್ದಿತ್ತು. ನಮ್ಮ ಕಾಕಾ ಲಕ್ಕಪ್ಪ ಮೊದಲಿನಿಂದಲೂ ಕೃಷಿಯಿಂದ ದೂರವೇ ಉಳಿದು, ರಾಣೇಬೆನ್ನೂರಿನಲ್ಲಿ ಚಹಾದ ಅಂಗಡಿ ನಡೆಸುತಿದ್ದ. ಆಗಲೇ ಕಮತದ ಆದಾಯದಲ್ಲೆ ಜೀವನ ನಡೆಸುವುದು ಕಷ್ಟಕರವಾಗಿತ್ತು. ಬಹುಶಃ ಕಾಕಾ ಚಹಾದ ಅಂಗಡಿ ತೆರೆಯಲು ಇದೂ ಕಾರಣವಾಗಿರಬಹುದು ಅನಿಸುತ್ತೆ.

ಕಮತದಲ್ಲಿ ಎಷ್ಟು ಜನ ದುಡಿದರೂ ಆದಾಯ ಮಾತ್ರ ಬರುವಷ್ಟೇ ಬರುತ್ತದೆ. ಆದ್ದರಿಂದ ಓದನ್ನು ನಿಲ್ಲಿಸಿದ ನನಗೆ ಚಹಾದಂಗಡಿಯಲ್ಲಿ ಕಾಕಾನಿಗೆ ಸಹಾಯಕನಾಗುವ ಜವಾಬ್ದಾರಿ ಕೊಟ್ಟರು. ರಾಣೇಬೆನ್ನೂರು, ನಂತರ ದೇವರಗುಡ್ಡದಲ್ಲಿ ನಾನು ನಾಲ್ಕು ವರ್ಷ ಚಹಾದಂಗಡಿ ಕೆಲಸಕಾರ್ಯಗಳನ್ನು ನಿಭಾಯಿಸಿದೆ. ದಿನಂಪ್ರತಿ ನೂರಾರು ಜನ ಅಂಗಡಿಗೆ ಬಂದು ಹೋಗುತಿದ್ದರು. ಒಬ್ಬೊಬ್ಬರದು ಒಂದೊಂದು ಸಮಸ್ಯೆ. ಕಷ್ಟಸುಖ ಹಂಚಿಕೊಳ್ಳುವವರ ಮಾತು ದಿನವೂ ಕಿವಿಗೆ ಬೀಳುತ್ತಿದ್ದವು. ಆ ಮೂಲಕ ನನ್ನ ತಿಳಿವಳಿಕೆಯೂ ಹೆಚ್ಚುತ್ತಿತ್ತು.

ಎಲ್ಲರನ್ನೂ ಗೌರವದಿಂದ ಕಾಣಬೇಕು, ಸೌಜನ್ಯದಿಂದ ಮಾತನಾಡಿಸಬೇಕು ಎಂಬುದನ್ನು ನಾನಲ್ಲಿ ಕಲಿತೆ.

ಈ ಮಧ್ಯೆ ಕಾಕಾ ಅಪ್ಪ ಸೇರಿ ಬ್ಯಾಂಕಿನಲ್ಲಿ ಸಾಲ ಮಾಡಿ ಟ್ರ್ಯಾಕ್ಟರ್ ಕೂಡ ತಂದರು. ನಮ್ಮ ಹೊಲಗಳ ಉಳುಮೆಯ ಜೊತೆಗೆ ಅಪ್ಪ ಬೇರೆ ರೈತರ ಹೊಲಗಳನ್ನೂ ಬಾಡಿಗೆಗೆ ಹೊಡೆದುಕೊಡುತಿದ್ದ. ಕೃಷಿಯ ಆದಾಯ ಕಂತಿಗೂ ಸಾಲದಾಗಿ ಅಪ್ಪ ಟ್ರ್ಯಾಕ್ಟರ್‍ನ್ನೆ ಹೆಚ್ಚು ದುಡಿಸಬೇಕೆಂದು ಅದಕ್ಕೆ ಹೆಚ್ಚು ಮಹತ್ವ ನೀಡಿ ಬಾಡಿಗೆ ಹೊಡೆಯತೊಡಗಿದ. ಇದರಿಂದ ಟ್ರ್ಯಾಕ್ಟರ್ ರಿಪೇೀರಿಗೆ ಬರತೊಡಗಿ ಆ ಹಣವೂ ಅದಕ್ಕೆ ಹೋಗತೊಡಗಿತು. ಹೀಗಾಗಿ ಅಪ್ಪ ಮತ್ತೆ ಎತ್ತು ತಂದು ಕೃಷಿಗೇ ನಿಂತ. ಇಷ್ಟರಲ್ಲೆ ಬದುಕು ದುಸ್ತರವಾದ್ದರಿಂದ ಟ್ರ್ಯಾಕ್ಟರ್ ಸಾಲ ಹಾಗೇ ಉಳಿಯಿತು.

ಚಾದಂಗಡಿಯಲ್ಲಿ ನನ್ನೊಂದಿಗೆ ಕಾಕಾ ಆಗಲಿ, ಅಪ್ಪ ಆಗಲಿ ಲಾಭನಷ್ಟದ ಚರ್ಚೆಯನ್ನೆ ಮಾಡುತ್ತಿರಲಿಲ್ಲ. ಆದ್ದರಿಂದ ಯಾವುದೇ ಜವಾಬ್ದಾರಿ ಇಲ್ಲದ ಆ ಕೆಲಸ ತೀರಾ ಯಾಂತ್ರಿಕವೆಂದೆನಿಸತೊಡಗಿ ಅದನ್ನು ಬಿಟ್ಟು ಮನೆಗೆ ಮರಳಿದೆ. ರಾಣೇಬೆನ್ನೂರಿನ ಸೋಪಿನ ಫ್ಯಾಕ್ಟರಿಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿದೆ. ಸೈನ್ಯಕ್ಕೆ ಸೇರುವ ಆಸೆಯೂ ಇತ್ತು. ಆ ದಿನಗಳಲ್ಲಿ ಗೆಳೆಯರೊಡಗೂಡಿ ಸೈನ್ಯಭರ್ತಿಯ ಶಿಬಿರಗಳಿಗೆ ಬೆಳಗಾವಿ, ಹಾವೇರಿಗೆ ಹೋಗಿ ಬಂದೆ. ಎತ್ತರದಲ್ಲಿ ಫೇಲ್ ಆಗಿದ್ದರಿಂದ ಅದೂ ಈಡೇರಲಿಲ್ಲ. ನಂತರ ಬ್ಯಾಡಗಿ ಪುರಸಭೆಯಲ್ಲಿ ವಾಟರ್ ಸಪ್ಲಾಯರ್ ಅಂತ ಗುತ್ತಿಗೆ ಆಧಾರದ ಕೆಲಸ ಸಿಕ್ಕಿತು. ಅಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ನನ್ನ ಗುತ್ತಿಗೆ ಅವಧಿ ಪೂರ್ಣಗೊಂಡು ಆ ಕೆಲಸ ಖಾಯಂ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಅದು ಹಾಗಾಗುವುದಿರಲಿ. ಕೆಲಸದಲ್ಲಿ ಮುಂದುವರೆಯಲೂ ಆಗದೇ ಅಲ್ಲಿಗೆ ಕೈಚೆಲ್ಲಿ ಕೂರಬೇಕಾಯ್ತು.

ಮೊದಲಿಂದಲೂ ಏನಾದರೂ ಸಾಧಿಸಬೇಕೆಂಬ ಹಂಬಲ ನನ್ನೊಳಗೇ ಬಾಧಿಸುತ್ತಿತ್ತು. ಊರಿನ ಹಬ್ಬಗಳಲ್ಲಿ ಏರ್ಪಡಿಸುತ್ತಿದ್ದ ಸಾಮಾಜಿಕ ನಾಟಕಗಳಲ್ಲಿ ನಾನೂ ಪಾತ್ರ ಮಾಡುತ್ತಿದ್ದೆ. ಹಾಸ್ಯಪಾತ್ರಗಳು ನನ್ನನ್ನು ಜನಪ್ರಿಯಗೊಳಿಸಿದ್ದವು. ಇದರಿಂದ ಉತ್ತೇಜಿತನಾದ ನಾನು ಈ ದೆಸೆಯಲ್ಲಿ ಏನಾದರೂ ಪ್ರಯತ್ನ ಮಾಡಬೇಕೆಂದುಕೊಂಡು ಬೆಂಗಳೂರು ಸೇರಿದೆ. ಅಲ್ಲಿ ಹಿಮಾಲಯ ಡ್ರಗ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತ ಅವಕಾಶಗಳಿಗಾಗಿ ಅಲೆದಾಡಿದೆ. ಗಾಂಧೀನಗರದ ನಿರ್ದೇಶಕರು, ನಿರ್ಮಾಪಕರು, ಕಲಾವಿದರಲ್ಲಿ ಪರಿಚಯ ಹೇಳಿಕೊಂಡು ಅವಕಾಶಕ್ಕಾಗಿ ಕೋರಿದೆ. ಯಾರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಅಲ್ಲಿಗೆ ನನ್ನೊಳಗಿನ ಕಲಾವಿದನಿಗೂ ದೊಡ್ಡ ನಮಸ್ಕಾರ ಹೇಳಿದೆ.

2012ರಲ್ಲಿ ಮತ್ತೆ ಊರಿಗೆ ಮರಳಿದೆ. ಸಾವಯವ ಗ್ರಾಮ ಯೋಜನೆಯಲ್ಲಿ ಸಹಾಯಕ ಕ್ಷೇತ್ರಾಧಿಕಾರಿಯಾಗಿ ಕೆಲಸ ಸಿಕ್ಕಿತು. ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಸಹಯೋಗದಲ್ಲಿ ಬ್ಯಾಡಗಿ ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ನಾನು ಕೆಲಸ ಮಾಡಬೇಕಿತ್ತು. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಈ ಪ್ರಯುಕ್ತ ಕೃಷಿ ಇಲಾಖೆ ಹಮ್ಮಿಕೊಂಡಿದ್ದ ತರಬೇತಿಯಲ್ಲೂ ನಾನು ಪಾಲ್ಗೊಂಡಿದ್ದೆ.

ಹೊಸ ಕೆಲಸ ನನ್ನಲ್ಲೂ ಹೊಸ ಹುರುಪು ತುಂಬಿತ್ತು. ರಾಮಗೊಂಡನಹಳ್ಳಿ ರೈತರಲ್ಲಿ ಸಾವಯವ ಕೃಷಿ ಬಗ್ಗೆ ಆಸಕ್ತಿ ಒಲವು ಮೂಡಿಸುವ ನಿಟ್ಟಿನಲ್ಲಿ ಭಾಳ ಮುತುವರ್ಜಿಯಿಂದ ಕೆಲಸ ಮಾಡಿದೆ. ಆದರೆ, ರೈತರ ನಿರಾಸಕ್ತಿ ನಿರಾಸೆ ತಂದರೆ, ಸುಳ್ಳು ದಾಖಲೆ ಸೃಷ್ಟಿಸಿ ಅನುದಾನ ಖರ್ಚು ಮಾಡಬೇಕಾದಂತಹ ವಿಲಕ್ಷಣ ಪರಿಸ್ಥಿತಿ ಆ ಕೆಲಸವನ್ನೂ ಕೈಬಿಡುವಂತೆ ಮಾಡಿತು.

ಇದೇ ಸಂದರ್ಭದಲ್ಲಿ ಅಪ್ಪ, ಕಾಕಾ ಬೇರೆಯಾದರು. ನಾವು ಬೇರೆ ಮನೆ ಮಾಡಿಕೊಂಡೆವು. 2015ರಲ್ಲಿ ಮದುವೆ ಆದೆ.

ಈಗ 3 ವರ್ಷದ ಮಗನಿದ್ದಾನೆ. ಲೋಹಿತ ಅಂತ ಅವನಿಗೆ ಹೆಸರಿಟ್ಟಿದ್ದೇವೆ. ಅಪ್ಪ ಕೃಷಿ ಮಾಡುತ್ತಿದ್ದಾನೆ. ಎರಡು ಎತ್ತು ಇವೆ. ನಮ್ಮ ಹೊಲದ ಕೆಲಸ, ಜೊತೆಗೆ ಬೇರೆ ರೈತರ ಕೆಲಸಗಳಿಗೂ ನಾವು ಹೋಗುತ್ತೇವೆ. ಕೃಷಿಯೊಂದನ್ನೆ ನೆಚ್ಚಿ ಬದುಕುವುದು ಕಷ್ಟವಾದ್ದರಿಂದ ಇದು ಅನಿವಾರ್ಯ.

ಈ ನಡುವೆ ಮತ್ತೆ ನೌಕರಿ ಹುಡುಕುವ ಪ್ರಯತ್ನ ಮಾಡಿದ್ದೆ. ಅದಕ್ಕೆ ನಮ್ಮವ್ವ ಡಿಲ್ಲಿಗೆ ಹೋದರೂ ಡೊಳ್ಳಿಗದೇ ಪೆಟ್ಟು ಅಂತೇನೋ ಹೇಳಿದಳು. ಅವ್ವ ಹೇಳಿದ್ದು ಸರಿ ಎನಿಸಿತು. ಅಂತ ಪ್ರಯತ್ನಕ್ಕೆ ಕೈಮುಗಿದು ಈಗ ಊರಲ್ಲೆ ರೈತರ ಕೆಲಸಕ್ಕೆ ಹೋಗುತ್ತಿದ್ದೇನೆ. ದಿನಕ್ಕೆ 250/300 ರೂ. ಕೂಲಿ ಕೊಡುತ್ತಾರೆ.

ಮೊದಲೆಲ್ಲ ಹಂಗಾಮಿನಲ್ಲಿ ಕೆಲಸವಿದ್ದು, ಬೇಸಿಗೆಯಲ್ಲಿ ಕೆಲಸವೆ ಇಲ್ಲದಂತಾಗುತ್ತಿತ್ತು. ಈಗೀಗ ನಮ್ಮೂರಲ್ಲಿ ಬಹಳಷ್ಟು ರೈತರು ರೇಷ್ಮೆ ಬೆಳೆಯತೊಡಗಿರುವುದರಿಂದ ಕೆಲಸಕ್ಕೆ ಬರವಿಲ್ಲ. ವಿಶ್ವಾಸದಿಂದ ಮಾಡಿಕೊಂಡು ಹೋಗಬೇಕಷ್ಟೆ.

ಬಸವ ವಸತಿ ಯೋಜನೆಯಲ್ಲಿ ಜನತಾ ಮನೆ ಕಟ್ಟಿಕೊಂಡಿದ್ದೇವೆ. ಸರ್ಕಾರದ ಅನುದಾನದ ಹೊರತಾಗಿ ಒಂದುವರೆ ಲಕ್ಷ ರೂ. ಖರ್ಚು ಬಂದಿತ್ತು. ಈ ಹಿನ್ನೆಲೆಯಲ್ಲಿ ಸಾಲ ಮಾಡಬೇಕಾಗಿಯೂ ಬಂತು. ಮಹಿಳಾ ಸ್ವಸಹಾಯ ಸಂಘ ಹಾಗೂ ಬ್ಯಾಂಕಿನಲ್ಲಿ 75 ಸಾವಿರ ರೂ. ಸಾಲ ಇದೆ. ಅಪ್ಪನ ಕೃಷಿಯ ಹೊರತಾಗಿಯೂ ನಾವು ಮೂವರೂ ಕೃಷಿಕಾರ್ಮಿಕರಾಗಿದ್ದೇವೆ. ಆದಾಗ್ಯೂ ಇದು ನಮ್ಮ ಪರಿಸ್ಥಿತಿ; ಇಷ್ಟರಲ್ಲೆ ಆರಾಮವಿದ್ದೇವೆ. ಮಕ್ಕಳ ಓದು, ಉದ್ಯೋಗ, ಮನೆ.. ಭವಿಷ್ಯ ಎಂತೇನೋ ಗೊತ್ತಿಲ್ಲ.

ಹೆಸರು: ಮಂಜುನಾಥ ಷಣ್ಮುಕಪ್ಪ ಅಣಜಿ, ವಯಸ್ಸು:33, ಉದ್ಯೋಗ: ಕೃಷಿಕಾರ್ಮಿಕ, ಜಾತಿ: ಲಿಂಗಾಯತ ಗಾಣಿಗ, ಪತ್ನಿ: ಲತಾ, ಮಗ: ಲೋಹಿತ, ತಂದೆ: ಷಣ್ಮುಕಪ್ಪ ತಾಯಿ: ಕಸ್ತೂರೆವ್ವ, ಅಕ್ಕ; ನೀಲಮ್ಮ, ಊರು: ಕೂನಬೇವು ತಾ. ರಾಣೇಬೆನ್ನೂರು. ಫೋ ನಂ.: 7483170206

Leave a Reply

Your email address will not be published.