ಡೀಪ್‍ಫೇಕ್ ಪ್ರಜಾತಂತ್ರ: ಸುಳ್ಳುಸುದ್ದಿ ಸುಳಿಯಲ್ಲಿ ಚುನಾವಣೆ

ಅನುವಾದ: ನಾ ದಿವಾಕರ

ಡೀಪ್‍ಫೇಕ್ ಎನ್ನಲಾಗುವ ತಂತ್ರ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದ್ದರೂ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಎಲ್ಲ ಕ್ಷೇತ್ರಗಳಲ್ಲೂ ಬಳಕೆಯಾಗುತ್ತಿದೆ. ಮೂಲ ಭಾವಚಿತ್ರದಲ್ಲಿರುವ ವ್ಯಕ್ತಿಯ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿಯ ಭಾವಚಿತ್ರವನ್ನು ಅಳವಡಿಸುವ ಮೂಲಕ ನಕಲಿ ಸುದ್ದಿಗಳನ್ನು ಹರಡುವ ಈ ತಂತ್ರಜ್ಞಾನ ಇದೀಗ ಚುನಾವಣಾ ರಾಜಕಾರಣದಲ್ಲೂ ವ್ಯಾಪಕವಾಗಿ ಬಳಸಲಾಗುತ್ತಿದ್ದು ರಾಜಕೀಯ ವೈರಿಗಳ ವಿರುದ್ಧ ಬಳಸುವ ಪ್ರಬಲ ಅಸ್ತ್ರವಾಗಿ ಪರಿಣಮಿಸಿದೆ.

  • ಡೀಪ್‍ಫೇಕ್ ತಂತ್ರಜ್ಞಾನದ ಬಳಕೆ ವಿಶ್ವದಾದ್ಯಂತ ಚುನಾವಣಾ ಪ್ರಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಬಹುಶಃ ಪ್ರಜಾಸತ್ತಾತ್ಮಕ ಚುನಾವಣೆಗಳ ವಿಶ್ವಾಸಾರ್ಹತೆಗೇ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ.  ಆಡಳಿತಾರೂಢ ಪಕ್ಷಗಳ ನೀತಿಗಳು ಮತ್ತು ಸಾಮಾಜಿಕ ಸ್ಥಿತ್ಯಂತರಗಳು ಸಹ ಇದರ ಪ್ರಭಾವಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
  • ಈ ಹಿನ್ನೆಲೆಯಲ್ಲಿ ರಾಜಕೀಯ ಜಾಹೀರಾತುಗಳಿಗೆ ಒಂದು ಹೊಸ ನೈತಿಕ ಕಾರ್ಯಸೂಚಿಯನ್ನು ರೂಪಿಸುವ ಅವಶ್ಯಕತೆ ಇರುವುದಲ್ಲದೆ ಆನ್‍ಲೈನ್ ವೇದಿಕೆಗಳಲ್ಲೂ ಇದನ್ನು ಅನುಸರಿಸಬೇಕಿದೆ. ಈ ಸಮಸ್ಯೆ ಸುಲಭವಾಗಿ ಅಂತಾರಾಷ್ಟ್ರೀಯ ವ್ಯಾಪ್ತಿ ಹೊಂದಿರುವುದರಿಂದ ಜಾಗತಿಕ ಮಟ್ಟದಲ್ಲಿ ಒಮ್ಮತದಿಂದ ಇದರ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ.
  • ಆನ್ ಲೈನ್ ವೇದಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ರಾಜಕೀಯ ವಿಚಾರಗಳನ್ನು ಚರ್ಚೆ ಮಾಡುವ ಸಂದರ್ಭದಲ್ಲಿ ವ್ಯಕ್ತಿಗಳು ಮತ್ತು ಸಮುದಾಯಗಳು ಉನ್ನತ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಅಮೆರಿಕದ 46ನೆಯ ನೂತನ ಅಧ್ಯಕ್ಷರು ಆಯ್ಕೆಯಾಗಲಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಚುನಾವಣಾ ಪ್ರಚಾರ ಮತ್ತು ಮತದಾನ ಪ್ರಕ್ರಿಯೆಯನ್ನು ಸುರಕ್ಷಿತವಾಗಿ ನಡೆಸುವ ಬಗ್ಗೆ ಇರುವ ಆತಂಕಗಳ ನಡುವೆಯೇ ಅಷ್ಟೇ ಗಂಭೀರವಾದ ಮತ್ತೊಂದು ಪ್ರಶ್ನೆ ಎಂದರೆ ಮತದಾನದಲ್ಲಿನ ಕೃತಕ ಬುದ್ಧಿಮತ್ತೆಯ ಬಳಕೆಯು ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದು. ವಿಶೇಷವಾಗಿ ಡೀಪ್‍ಫೇಕ್ ತಂತ್ರಜ್ಞಾನದ ಭೀತಿಯೂ ಆವರಿಸಿದ್ದು ಇದು ಚುನಾವಣಾ ಪ್ರಕ್ರಿಯೆಯ ಮೇಲೆ ಎಂದೂ ಕಾಣದಂತಹ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ. ಇದು ಚುನಾವಣೆಗಳ ವಿಶ್ವಾಸಾರ್ಹತೆಗೇ ಧಕ್ಕೆ ಉಂಟುಮಾಡುತ್ತಿದ್ದು, ಆಡಳಿತ ನೀತಿಯ ನಿರೂಪಣೆ ಮತ್ತು ಪ್ರಜಾತಾಂತ್ರಿಕ ಸಮಾಜದ ಮೇಲೆ ಪ್ರಭಾವ ಬೀರಲಿದೆ.

ಕೃತಕ ಬುದ್ಧಿಮತ್ತೆಯ ಮೂಲಕ ನಿರ್ವಹಿಸಲಾಗುವ ಡೀಪ್‍ಫೇಕ್ ತಂತ್ರಜ್ಞಾನ 2020ರ ಅಮೆರಿಕದ ಚುನಾವಣೆಗಳ ಮೇಲೆ ಪ್ರಕ್ಷುಬ್ಧ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆಗಳಿವೆ. ಮನೆಗಳಲ್ಲಿರುವವರಿಗೆ ಮನರಂಜನೆ ನೀಡುವ ಸಲುವಾಗಿ ನೈಜತೆಯನ್ನು ನಕಲು ಮಾಡಿ ತೋರುವ ತಂತ್ರಜ್ಞಾನವಾಗಿ ರೂಪುಗೊಂಡ ಡೀಪ್‍ಫೇಕ್ ತಂತ್ರಜ್ಞಾನ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯೊಂದಿಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಪ್ರಭಾವ ಬೀರುತ್ತಿದೆ.

ಇಂದು ಮುಕ್ತವಾಗಿಯೇ ಚಾಲ್ತಿಯಲ್ಲಿರುವ ಡೀಪ್‍ಫೇಸ್ ಲ್ಯಾಬ್ ಮತ್ತು ಫೇಸ್‍ವ್ಯಾಪ್ ಎನ್ನುವ ಸಾಫ್ಟ್‍ವೇರ್‍ಗಳು ಎಲ್ಲರಿಗೂ ಕ್ಲೌಡ್ ಕಂಪ್ಯೂಟಿಂಗ್ ಮಾಡಲು ಅವಕಾಶವನ್ನು ನೀಡುತ್ತಿವೆ.  ಯಾವುದೇ ಪೂರ್ವ ಸಿದ್ಧತೆ ಇಲ್ಲದೆಯೂ ಅತ್ಯಾಧುನಿಕ ಯಂತ್ರಗಳ ಮೂಲಕ ಈ ತಂತ್ರಜ್ಞಾನವನ್ನು ಕಲಿತು, ಗ್ರಾಫಿಕ್ಸ್ ಮೂಲಕ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ.

ಚಿಂತೆಗೀಡುಮಾಡುವ ವಿಚಾರವೆಂದರೆ ಈ ತಂತ್ರಜ್ಞಾನ ಎಷ್ಟು ಶೀಘ್ರಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರೆ ಮುಂಬರುವ ದಿನಗಳಲ್ಲಿ ಈ ಡೀಪ್‍ಫೇಕ್ ವಿಡಿಯೋಗಳು ನೈಜ ವಿಡಿಯೋಗಳಿಂದ ಭಿನ್ನವಾಗಿ ಕಾಣುವುದೇ ಇಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯ ಈ ಮಹತ್ತರ ಪರಿಣಾಮಗಳನ್ನು ನಾವು ಜನರೇಟೀವ್ ಅಡ್ವರ್ಸಿಯಲ್ ನೆಟ್‍ವಕ್ರ್ಸ್ ಎನ್ನುವ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಗುರುತಿಸಬಹುದು. ಈ ತಂತ್ರಜ್ಞಾನದ ಮೂಲಕ ಏರ್ಪಡಿಸಲಾಗುವ ಜಾಲಗಳು ಕಲ್ಪನೆಯಿಂದ ಕ್ರಿಯಾತ್ಮಕತೆಗೆ ಸುಲಭವಾಗಿ ಪರಿವರ್ತನೆಯಾಗುತ್ತವೆ. ವೈರಲ್ ತಂತ್ರಜ್ಞಾನದಲ್ಲಿ ಆಗುವಂತೆಯೇ ಡೀಪ್‍ಫೇಕ್ ವಿಡಿಯೋಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುತ್ತಿರುವುದರಿಂದ ಈ ಪ್ರಕ್ರಿಯೆ ಸುಲಭವಾಗಿ ಹರಡುವ ಸಾಧ್ಯತೆಗಳಿವೆ.

ಕೋವಿಡ್-19 ಸಂದರ್ಭದಲ್ಲಿ ನಾವು ನೋಡಿರುವಂತೆ, ಸುಳ್ಳು ಸುದ್ದಿಗಳು ಸಾಂಕ್ರಾಮಿಕ ರೋಗದಂತೆ ಹರಡುವುದಕ್ಕೆ ಯಾವುದೇ ಅಧಿಕೃತತೆಯೂ ಅವಶ್ಯವಿರುವುದಿಲ್ಲ. ಈ ಸಂದೇಶಗಳು ಎಷ್ಟೇ ಅಪಾಯಕಾರಿಯಾಗಿದ್ದರೂ, ದ್ವೇಷಪೂರಿತವಾಗಿದ್ದರೂ, ಸುರಕ್ಷತೆಯೇ ಇಲ್ಲದಿದ್ದರೂ ಇವು ಕೇಳುಗರನ್ನು ಸುಲಭವಾಗಿ ತಲುಪುವ ಸಾಧ್ಯತೆಗಳೇ ಹೆಚ್ಚು. ಡೀಪ್‍ಫೇಕ್ ತಂತ್ರಜ್ಞಾನದ ಮೂಲಕ ಸುಳ್ಳು ಸುದ್ದಿಗಳ್ನು ಮತ್ತು ಮಾಹಿತಿಗಳನ್ನು ಕೃತಕವಾಗಿ ಸೃಷ್ಟಿಸಲಾಗುವ ಅಧಿಕೃತ ಮೂಲಗಳ ಹೆಸರಿನಲ್ಲಿ ಹರಡಲಾಗುತ್ತದೆ. ಹಾಗಾಗಿ ಈ ಸುಳ್ಳು ಸುದ್ದಿಗಳು ಜನರನ್ನು ಸುಲಭವಾಗಿ ದಿಕ್ಕುತಪ್ಪಿಸುವುದೇ ಅಲ್ಲದೆ, ಸುಳ್ಳು ಮಾಹಿತಿಯನ್ನು ಹರಡುವ ಮೂಲಕ, ನಿಮ್ಮ ಕಣ್ಣನ್ನು ನೀವೇ ನಂಬಲಾರಿರಿ ಎನ್ನುವ ಪದಗಳಿಗೆ ಹೊಸ ಅರ್ಥವನ್ನೇ ಕಲ್ಪಿಸಿಬಿಡುತ್ತವೆ.  ದ ಬ್ರೂಕಿಂಗ್ ಇನ್ಸ್‍ಟಿಟ್ಯೂಟ್ ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರ ಅನುಸಾರ ಡೀಪ್‍ಫೇಕ್‍ಗಳು ಪ್ರಜಾತಾಂತ್ರಿಕ ಸಂಕಥನಗಳನ್ನು ವಿರೂಪಗೊಳಿಸುವುದೇ ಅಲ್ಲದೆ ಜನಸಾಮಾನ್ಯರಲ್ಲಿ ಸಾರ್ವಜನಿಕ ಸಂಸ್ಥೆಗಳಲ್ಲಿರುವ ವಿಶ್ವಾಸಾರ್ಹತೆಯನ್ನೂ ಕಡಿಮೆ ಮಾಡುತ್ತವೆ.

ಡೀಪ್ ಫೇಕ್‍ಗಳು ಹೇಗೆ ಚುನಾವಣಾ ಅಸ್ತ್ರಗಳಾಗುತ್ತವೆ?

ಡೀಪ್ ಫೇಕ್‍ಗಳನ್ನು ಚುನಾವಣೆಗಳಲ್ಲಿ ಒಂದು ಅಸ್ತ್ರವನ್ನಾಗಿ ಹೇಗೆ ಬಳಸಬಹುದು? ಆರಂಭದಲ್ಲಿ ಕೆಲವು ಕುಹಕ ಪ್ರವರ್ತಕರು ಸುಳ್ಳು ಆರೋಪಗಳನ್ನು ಮತ್ತು ನಕಲಿ ಮಾಹಿತಿಯನ್ನು ಹರಡಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾರೆ. ಉದಾಹರಣೆಗೆ ಒಬ್ಬ ಅಭ್ಯರ್ಥಿ ಅಧಿಕೃತವಾಗಿ ನೀಡುವ ಭಾಷಣವನ್ನು ತಿರುಚುವ ಮೂಲಕ ಆತನ ಚಾರಿತ್ರ್ಯ, ಅರ್ಹತೆ, ಸಾಮಥ್ರ್ಯ ಮತ್ತು ಮಾನಸಿಕ ಆರೋಗ್ಯವನ್ನೇ ಪ್ರಶ್ನಾರ್ಹವಾಗುವಂತೆ ಮಾಡಲಾಗುತ್ತದೆ. ವೀಕ್ಷಕರಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಕಾಲ್ಪನಿಕ ವಿಚಾರಗಳನ್ನು ಸೃಷ್ಟಿಸಲೂ ಡೀಪ್‍ಫೇಕ್‍ಗಳನ್ನು ಬಳಸಲು ಸಾಧ್ಯವಾಗುತ್ತದೆ. ಹಾಗಾಗಿ ವಿವಾದಾಸ್ಪದವಾದ, ದ್ವೇಷಪೂರಿತವಾದ ಹೇಳಿಕೆಗಳನ್ನು ಕೃತಕವಾಗಿ ಸೃಷ್ಟಿಸಿ ರಾಜಕೀಯ ವಿಭಜನೆಗೆ ಕಾರಣವಾಗುವುದು ಅಥವಾ ಹಿಂಸೆಯನ್ನು ಪ್ರಚೋದಿಸುವುದೂ ಸಾಧ್ಯವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇತರ ದೇಶಗಳಲ್ಲಿ ಡೀಪ್‍ಫೇಕ್‍ಗಳನ್ನು ಬಳಸುವ ಮೂಲಕವೇ ಸರ್ಕಾರಗಳನ್ನು ಅಸ್ಥಿರಗೊಳಿಸಲಾಗಿದೆ ಮತ್ತು ರಾಜಕೀಯ ಪ್ರಕ್ರಿಯೆಗಳನ್ನು ಪ್ರಕ್ಷುಬ್ಧಗೊಳಿಸಲಾಗಿದೆ.

  • ಗೇಬನ್‍ನಲ್ಲಿ ನಾಯಕ ಅಲಿ ಬಾಂಗೋ ಅವರು ದೇಶದ ಅಧ್ಯಕ್ಷರು ಅಧಿಕಾರದಲ್ಲಿ ಮುಂದುವರೆಯಲು ಶಕ್ಯರಾಗಿಲ್ಲ, ಅನಾರೋಗ್ಯಪೀಡಿತರಾಗಿದ್ದಾರೆ ಎಂದು ಹೇಳಿಕೆ ನೀಡಿರುವ ನಕಲಿ ವಿಡಿಯೋ ಒಂದನ್ನು ಪ್ರಸಾರ ಮಾಡಿದ ನಂತರ ಅಲ್ಲಿನ ಸೇನೆ ಕ್ಷಿಪ್ರಕ್ರಾಂತಿಗಾಗಿ ಪ್ರಯತ್ನಿಸಿ ವಿಫಲವಾಗಿತ್ತು.
  • ಮಲೇಷಿಯಾದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋ ಒಂದು ಸಾಕಷ್ಟು ವಿವಾದ ಸೃಷ್ಟಿಸಿದ್ದು ಇದು ನಕಲಿಯೋ ಅಸಲಿಯೋ ಎಂದು ತಿಳಿದುಬಂದಿಲ್ಲ. ಇದರಿಂದ ಆ ಸಚಿವರ ಗೌರವ ಮತ್ತು ಜನಪ್ರಿಯತೆಗೆ ಚ್ಯುತಿ ಬಂದಿದೆ.
  • ಬೆಲ್ಜಿಯಂನಲ್ಲಿ ಒಂದು ರಾಜಕೀಯ ಗುಂಪು ಬೆಲ್ಜಿಯಂನ ಪ್ರಧಾನಮಂತ್ರಿಯವರು ಕೋವಿಡ್ ಪಿಡುಗು ಪರಿಸರ ನಾಶಕ್ಕೆ ಕಾರಣವಾಗಿದೆ ಎಂದು ಹೇಳುವ ಮತ್ತು ಹವಾಮಾನ ಬದಲಾವಣೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ನಕಲಿ ಭಾಷಣವೊಂದನ್ನು ಪ್ರಸಾರ ಮಾಡಿತ್ತು.

ಸತ್ಯ ಗೆಲ್ಲಲೂಬಹುದು

ಇವತ್ತಿನ ಸಂದರ್ಭದಲ್ಲಿ ನಮಗೆ ಡೀಪ್‍ಫೇಕ್ಸ್ ಸಮಸ್ಯೆಯನ್ನು ಎದುರಿಸಲು ಅವಶ್ಯವಾದ ಸಾಧನಗಳಿಲ್ಲ.  ಪ್ಯೂ ಸಂಶೋಧನಾ ಕೇಂದ್ರದ ಪ್ರಕಾರ ಅಮೆರಿಕದ ಶೇ 66ರಷ್ಟು ಪ್ರಜೆಗಳು, ನಕಲಿ ಮಾಹಿತಿ ಮತ್ತು ವಿಚಾರಗಳು ರಾಜಕೀಯ ವಾಸ್ತವಗಳ ನಡುವೆಯೇ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತವೆ ಎಂದು ಹೇಳುತ್ತಾರೆ. ಇನ್ನೂ ಆಘಾತಕಾರಿ ಸಂಗತಿ ಎಂದರೆ ಸರಿಯಾದ ಮಾಹಿತಿಯನ್ನು ಪರಿಶೀಲಿಸಲು ನಡೆಸುವ ನಮ್ಮ ಪ್ರಯತ್ನಗಳು ಆ ಕ್ಷಣಕ್ಕೆ ಉಪಯುಕ್ತವಾಗಿ ಕಂಡರೂ ನಂತರದಲ್ಲಿ ನಕಲಿ ಮಾಹಿತಿಯನ್ನೇ ಪುಷ್ಟೀಕರಿಸುವುದರಲ್ಲಿ ಯಶಸ್ವಿಯಾಗುತ್ತವೆ. ಕೃತಕ ಬುದ್ಧಿಮತ್ತೆ ಮತ್ತು ಪ್ರಜಾತಂತ್ರ ಒಟ್ಟಿಗೆ ಇರಬೇಕೆಂದರೆ ನಾವು ಯಾವುದು ಸತ್ಯ ಎನ್ನುವುದನ್ನು ಸಮಾನ ಗ್ರಹಿಕೆಯ ಮೂಲಕ ಅರ್ಥಮಾಡಿಕೊಂಡು, ಮಾಹಿತಿಯನ್ನು ಹಂಚಿಕೊಳ್ಳುವ ವಾತಾವರಣದ ಮೂಲಕ ವಿಭಿನ್ನ ಅಭಿಪ್ರಾಯಗಳನ್ನು, ಹೇಳಿಕೆಗಳನ್ನು ಸುರಕ್ಷಿತವಾಗಿ ಪ್ರಕಟಿಸಲು ಪ್ರಯತ್ನಿಸಬೇಕು.

 ಇಂದು ಅತ್ಯಗತ್ಯವಾಗಿ ಬೇಕಿರುವುದೆಂದರೆ, ರಾಜಕೀಯ ಜಾಹೀರಾತಿನಲ್ಲಿ ಮತ್ತು ಆನ್ ಲೈನ್ ವೇದಿಕೆಗಳಲ್ಲಿ ಕೃತಕ ಬುದ್ಧಿಮತ್ತೆಗೆ ಒಂದು ನೈತಿಕ ಕಾರ್ಯಸೂಚಿಯನ್ನು ರೂಪಿಸುವುದು. ಈ ಸಮಸ್ಯೆ ದೇಶದ ಗಡಿಗಳನ್ನೂ ದಾಟಿ ಪ್ರಭಾವ ಬೀರುವುದರಿಂದ ಈ ಕಾರ್ಯಸೂಚಿಗೆ ಜಾಗತಿಕ ಸಹಮತ ಮತ್ತು ಒಮ್ಮತವನ್ನು ರೂಪಿಸಿ ಕ್ರಿಯಾಶೀಲರಾಗುವುದು ಅಗತ್ಯ. ವಿಶ್ವ ಆರ್ಥಿಕ ವೇದಿಕೆಯ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಮುಂತಾದ ಪ್ರಯತ್ನಗಳ ಮೂಲಕ ತಂತ್ರಜ್ಞರನ್ನು ಒಂದುಗೂಡಿಸಿ ಈ ವೇದಿಕೆಗಳನ್ನು ನೈತಿಕತೆಯ ನೆಲೆಯಲ್ಲಿ ಪರಿಣಾಮಕಾರಿಯಾಗಿ ಬಳಸಲು ಮುಂದಾಗಿರುವುದು ಸ್ವಾಗತಾರ್ಹ.

ಸ್ಥಳೀಯ ಮಟ್ಟದಲ್ಲಿ ಶಾಸನ ಸಭೆಗಳು ಕ್ಯಾಲಿಫೋರ್ನಿಯಾ ಅನುಸರಿಸುತ್ತಿರುವ ನೀತಿಯನ್ನೇ ಅನುಸರಿಸುತ್ತಿದ್ದು ಚುನಾವಣೆ ಸಂದರ್ಭದಲ್ಲಿ ಡೀಪ್‍ಫೇಕ್‍ಗಳನ್ನು ನಿಷೇಧಿಸಲಾಗುತ್ತಿದೆ. ಫೇಸ್ ಬುಕ್ ಸಹ ಈ ಹೋರಾಟದಲ್ಲಿ ಭಾಗಿಯಾಗಿದ್ದು ವಿಕೃತಗೊಳಿಸಲಾದ ಮಾಹಿತಿಯನ್ನು ನಿಷೇಧಿಸಲು ಮುಂದಾಗಿದೆ. ಇಂಥವನ್ನು ಕಂಡುಹಿಡಿಯಲು ಸೂಕ್ತ ತಂತ್ರಜ್ಞಾನವನ್ನೂ ಸೃಷ್ಟಿಸುತ್ತಿದೆ.

ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಡೀಪ್‍ಫೇಕ್‍ಗಳನ್ನು ವಿಫಲಗೊಳಿಸಲು ನಮಗೆ ಯಾವುದೇ ಹೊಸ ತಂತ್ರಜ್ಞಾನ ಅಥವಾ ನಿಯಂತ್ರಣಾ ಸಾಧನಗಳ ಬದಲಾವಣೆಗಳು ಅಗತ್ಯವಿಲ್ಲ. ಬದಲಾಗಿ ಸಮುದಾಯಗಳು ಮತ್ತು ವ್ಯಕ್ತಿಗಳು ನೇರವಾಗಿ ಕ್ರಮ ಕೈಗೊಂಡು ಆನ್ ಲೈನ್‍ನಲ್ಲಿ ಬರುವ ರಾಜಕೀಯ ವಿದ್ಯಮಾನಗಳೊಡನೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಮತ್ತು ಹೇಗೆ ಮಾಹಿತಿಯನ್ನು ಸೃಷ್ಟಿಸುತ್ತೇವೆ ಎನ್ನುವ ಪ್ರಜ್ಞೆಯೊಂದಿಗೆ ಉನ್ನತ ಮಾನದಂಡಗಳನ್ನು ರೂಪಿಸಬಹುದು. ಮತದಾರರು ನೈಜ ಮಾಹಿತಿಗಾಗಿ, ಸತ್ಯಸಂಧತೆಯ ಮಾಹಿತಿಗಾಗಿ ಮತ್ತು ಸತ್ಯಕ್ಕಾಗಿ ಆಗ್ರಹಿಸಿ ಆನ್ ಲೈನ್ ಸಂಕಥನಗಳಲ್ಲಿ ಭಾಗವಹಿಸಲು ನಿರ್ಧರಿಸಿದೆ ಹೋದಲ್ಲಿ ಯಾವುದೇ ಬದಲಾವಣೆ ಸಾಧ್ಯವಾಗುವುದಿಲ್ಲ. ಏಕೆಂದರೆ ಆನ್ ಲೈನ್ ವೇದಿಕೆಗಳಲ್ಲಿ ವ್ಯಕ್ತಿ ನಿಷ್ಠೆಯೇ ಪ್ರಧಾನವಾಗಿದ್ದು ವಾಸ್ತವತೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ನಮಗೆ ಬೇಕೋ ಬೇಡವೋ, ಡೀಪ್‍ಫೇಕ್ಸ್ ನಮ್ಮ ನಡುವೆ ಇರುತ್ತದೆ. ನವೆಂಬರ್ 2020 ಈ ನಿಟ್ಟಿನಲ್ಲಿ ಮಹತ್ತರ ಅವಧಿಯಾಗಿದ್ದು ಕೃತಕ ಬುದ್ಧಿಮತ್ತೆಯಿಂದ ಉಂಟಾಗುತ್ತಿರುವ ಅಪಾಯದ ವಿರುದ್ಧ ನಾವು ಎದ್ದು ನಿಲ್ಲುವ ನಿಟ್ಟಿನಲ್ಲಿ ನಾವು ಸಾಮೂಹಿಕ ಕ್ರಮ ಕೈಗೊಳ್ಳಬೇಕಿದೆ.

ಮೂಲ: ವರ್ಲ್ಡ ಎಕಾನಾಮಿಕ್ ಫೋರಮ್

Leave a Reply

Your email address will not be published.