ತಂತ್ರಜ್ಞಾನ ‘ಟೀಚಿಂಗ್ ಏಡ್’ಮಾತ್ರವಾಗಲಿ

-ರಂಗನಾಥ ಕಂಟನಕು0ಟೆ

ಹೊಸ ವಿಚಾರಗಳನ್ನು ಯೋಜನೆಗಳನ್ನು ರೂಪಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದರ ಭಾಗವಾಗಿ ಕೊರೊನೋತ್ತರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯನ್ನೂ ಮುರಿದು ಕಟ್ಟಿ ಮುಂದಿನ ಜನಾಂಗಕ್ಕೆ ಸಜ್ಜುಗೊಳಿಸಿಕೊಡಬೇಕಿದೆ.

ಕೊರೋನ ವೈರಾಣು ರೋಗ ಹಬ್ಬುವುದನ್ನು ನಿಯಂತ್ರಿಸಲು ಕಳೆದ ಮಾರ್ಚ್ ತಿಂಗಳಿನಲ್ಲಿ ಶಾಲಾ ಕಾಲೇಜುಗಳಿಗೆ ದಿಢೀರ್ ಆಗಿ ಮತ್ತು ಅನಿರ್ದಿಷ್ಟ ಕಾಲದವರೆಗೆ ಸರ್ಕಾರ ರಜೆ ಘೋಷಣೆ ಮಾಡಿತು. ನಂತರ ಉನ್ನತ ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ಬೋಧಿಸುವಂತೆ ಆದೇಶ ಹೊರಡಿಸಿತು. ಆ ಮೂಲಕ ಅಪೂರ್ಣವಾಗಿದ್ದ ಪಠ್ಯಗಳನ್ನು ಮುಗಿಸಲು ಆನ್‌ಲೈನ್ ಮೊರೆ ಹೋಗಲಾಯಿತು. ಇಂಜಿನಿಯರಿOಗ್ ಮತ್ತು ವಿವಿಧ ಪದವಿ ತರಗತಿಗಳ ವಿದ್ಯಾರ್ಥಿಗಳು ಇದರ ನೆರವನ್ನು ಪಡೆದುಕೊಳ್ಳಲು ಸೂಚಿಸಲಾಯಿತು.

ಇದರ ಲಾಭವನ್ನು ಕೆಲವು ವಿದ್ಯಾರ್ಥಿಗಳು ಮಾತ್ರ ಪಡೆದುಕೊಳ್ಳಲು ಸಾಧ್ಯವಾಯಿತು. ಬಹುಸಂಖ್ಯಾತ ವಿದ್ಯಾರ್ಥಿಗಳು ಈ ಅವಕಾಶದಿಂದ ದೂರವೇ ಉಳಿದರು. ಯಾಕೆಂದರೆ ಆನ್‌ಲೈನ್ ಮೂಲಕ ಶಿಕ್ಷಣ ಪಡೆದುಕೊಳ್ಳಲು ಅಗತ್ಯವಿರುವ ತಾಂತ್ರಿಕ ಪರಿಕರಗಳು ವಿದ್ಯಾರ್ಥಿಗಳ ಬಳಿಯಿರಲಿಲ್ಲ. ಹಾಗಾಗಿ ಆನ್‌ಲೈನ್ ಶಿಕ್ಷಣದ ಪ್ರಯೋಜನ ಪಡೆದುಕೊಳ್ಳಲು ಅವರಿಗೆ ಸಾಧ್ಯವೇ ಆಗಲಿಲ್ಲ. ಅನೇಕ ಕಾಲೇಜುಗಳಲ್ಲಿ ಆನ್‌ಲೈನ್ ಬೋಧನೆ ಆರಂಭಿಸಲೂ ಸಾಧ್ಯವಾಗಲಿಲ್ಲ. ಇನ್ನು ಆನ್‌ಲೈನ್ ಪಾಠ ಕೇಳಿದವರು ಕೂಡ ಅದರಿಂದ ಕಲಿಕೆ ಪರಿಣಾಮಕಾರಿಯಾಗಿ ಸಾಧ್ಯವಾಗುವುದರ ಬಗೆಗೆ ವಿಶ್ವಾಸ ವ್ಯಕ್ತಪಡಿಸಲಿಲ್ಲ. ಅನೇಕ ವಿದ್ಯಾರ್ಥಿಗಳು ಆನ್‌ಲೈನ್ ಬೋಧನೆಯನ್ನು ರದ್ದುಪಡಿಸಿ ತರಗತಿಗಳ ಮೂಲಕ ಬೋಧನೆಯನ್ನು ಆರಂಭಿಸುವAತೆಯೂ ಒತ್ತಾಯಿಸಿದರು.

ಈ ಬಗೆಗೆ ಮಾಧ್ಯಮಗಳು ಅಭಿಯಾನವನ್ನೂ ನಡೆಸಿದವು. ಸದ್ಯದಲ್ಲಿ ಈ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಪ್ರಕ್ರಿಯೆ ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನದ ಮಹತ್ವದ ಬಗೆಗೆ ಹೊಸ ಚರ್ಚೆಯನ್ನಂತೂ ಹುಟ್ಟಿ ಹಾಕಿದೆ. ಕಲಿಕೆಯಲ್ಲಿ ತಂತ್ರಜ್ಞಾನ ಪ್ರಮಾಣ ಎಷ್ಟಿರಬೇಕು? ತಂತ್ರಜ್ಞಾನವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಹೇಗೆ ಬಳಸಬೇಕು? ಎಂಬ ಪ್ರಶ್ನೆಗಳನ್ನು ಮುಂದೆ ತಂದಿದೆ.

ಮತ್ತೆ ಈಗ ಜೂನ್ ಜುಲೈನಲ್ಲಿ ಆರಂಭವಾಗಬೇಕಿದ್ದ ಹೊಸ ಶೈಕ್ಷಣಿಕ ಸಾಲಿನ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಯಾವಾಗ ಆರಂಭವಾಗುತ್ತವೆ ಎಂಬುದರ ಬಗೆಗೆ ಯಾರಲ್ಲೂ ಖಚಿತ ಮಾಹಿತಿಗಳಿಲ್ಲ. ಸಹಜವಾಗಿಯೇ ಪೋಷಕರಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕವಿದೆ. ಮಕ್ಕಳನ್ನು ಶಾಲೆಗಳಿಗೆ ಕಳಿಸುವುದರ ಬಗೆಗೆ ಪೋಷಕರಿಗೆ ಸಮ್ಮತಿಯಿಲ್ಲ. ಹಾಗೆಯೇ ಆನ್‌ಲೈನ್ ಬೋಧನೆ ಬಗೆಗೂ ಸಹಮತವಿಲ್ಲ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಅನಿಶ್ಚಿತತೆಯಿದೆ. ಇಂತಹ ವೇಳೆಯಲ್ಲಿ ಕೆಲವು ಖಾಸಗಿ ಶಾಲೆಗಳು ಪ್ರವೇಶಾತಿ ಪ್ರಕ್ರಿಯೆ ನಡೆಸಿ ಆನ್‌ಲೈನ್ ಮೂಲಕವೇ ಕಲಿಸುವ ಚಟುವಟಿಕೆ ಆರಂಭಿಸಿವೆ. ಅಚ್ಚರಿಯ ಸಂಗತಿಯೆOದರೆ ಪೂರ್ವ ಪ್ರಾಥಮಿಕ ಶಾಲೆಗಳ ಎಲ್‌ಕೆಜಿ ಯುಕೆಜಿ ವಿದ್ಯಾರ್ಥಿಗಳಿಗೂ ಆನ್‌ಲೈನ್ ಮೂಲಕ ಕಲಿಸಲಾರಂಭಿಸಿವೆ!

ಈ ನಡುವೆ ಮೊದಲಿನಂತೆ ತರಗತಿ ಕೇಂದ್ರಿತ ಶಿಕ್ಷಣ ನೀಡುವುದಕ್ಕೆ ಬದಲಾಗಿ ಆನ್‌ಲೈನ್ ಮೂಲಕವೇ ಶಿಕ್ಷಣ ನೀಡುವ ಮಾತುಗಳು ಕೇಳಿಬರುತ್ತಿವೆ. ಇವು ‘ಕರ‍್ಯಯೋಜನೆ’ಯಾಗಿ ಜಾರಿಗೆ ಬಂದರೆ, ಆನ್‌ಲೈನ್ ಶಿಕ್ಷಣ ಕ್ರಮವನ್ನೇ ಅಧಿಕೃತಗೊಳಿಸಿ ಇಲ್ಲವೇ ಸಾಂಸ್ಥಿಕಗೊಳಿಸಿ ಅದನ್ನೇ ಶಿಕ್ಷಣ ವ್ಯವಸ್ಥೆಯಾಗಿಸಿದರೆ, ಅದು ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸದ್ಯದಲ್ಲಿ ಜನರು ಒತ್ತಡ ಹೇರಿದ್ದರಿಂದ ಸರ್ಕಾರ ಐದನೆಯ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ ಮೂಲಕ ಕಲಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆದೇಶಿಸಿದೆ.

ಇಂತಹ ಹೊತ್ತಿನಲ್ಲಿ ಆನ್‌ಲೈನ್ ಶಿಕ್ಷಣದ ಬಗೆಗೆ ಕೆಲವು ಸಂಗತಿಗಳನ್ನು ಪರಿಶೀಲಿಸುವುದು ಅಗತ್ಯವೆನಿಸುತ್ತದೆ. ಮೊದಲಿಗೆ ಇಂದು ಎಲ್ಲೆಡೆ ತಂತ್ರಜ್ಞಾನದ ವಿರಾಟ್ ದರ್ಶನವಾಗುತ್ತಿದ್ದರೂ ನಮ್ಮ ದೇಶದಲ್ಲಿ ಎಲ್ಲರಿಗೂ ತಂತ್ರಜ್ಞಾನದ ಎಲ್ಲ ಪರಿಕರಗಳು ಸಮನಾಗಿ ದೊರೆತಿಲ್ಲ. ಜನರ ವರ್ಗ, ಜಾತಿ, ಪ್ರದೇಶ, ಗ್ರಾಮ-ನಗರ, ಲಿಂಗ ಸಾಮರ್ಥ್ಯಕ್ಕೆ ತಕ್ಕಂತೆ ಮಾತ್ರ ದೊರೆಯುತ್ತಿವೆ. ಅಂದರೆ ಬಹುಸಂಖ್ಯಾತ ಜನರಿಗೆ ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳಲು ಬೇಕಾದ ಗುಣಮಟ್ಟದ ತಂತ್ರಜ್ಞಾನ ಪರಿಕರಗಳು ಲಭ್ಯವಿಲ್ಲ. ಇದು ‘ಡಿಜಿಟಲ್ ಡಿವೈಡ್’ನ ಪರಿಣಾಮವೇ ಆಗಿದೆ. ಅಂದರೆ ಯಾವುದೇ ತಂತ್ರಜ್ಞಾನ ಹೊರಗಿನಿಂದ ಬಂದರೂ ಅಥವಾ ಇಲ್ಲಿಯೇ ಆವಿಷ್ಕಾರವಾದರೂ ಕೂಡ ಅದು ನಮ್ಮ ದೇಶದಲ್ಲಿ ಕೆಲವರಿಗೆ ಬೇಗ ಲಭ್ಯವಾಗಿ ಬಹುಸಂಖ್ಯಾತರಿಗೆ ಅವು ಲಭ್ಯವಾಗದೇ ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸಿಸುತ್ತವೆ. ಅದು ಕಂಪ್ಯೂಟರ್ ತಂತ್ರಜ್ಞಾನದ ವಿಚಾರದಲ್ಲಿಯೂ ನಿಜ. ಆನ್‌ಲೈನ್ ಶಿಕ್ಷಣ ಇದನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ.

ಆನ್‌ಲೈನ್ ಶಿಕ್ಷಣವನ್ನು ಕಡ್ಡಾಯಗೊಳಿಸಿದರೆ ಪೋಷಕರ ಮತ್ತು ಮಕ್ಕಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಪೋಷಕರನ್ನು ಗ್ರಾಹಕರನ್ನಾಗಿಸಿ ಪರಿಕರಗಳ ಖರೀದಿಗೆ ಒತ್ತಾಯಿಸುತ್ತವೆ. ಇದು ಆರ್ಥಿಕವಾಗಿ ಹೊರೆಯೆನ್ನಿಸಿ ವಿಪರೀತ ಮಾನಸಿಕ ಹಿಂಸೆಗೆ ಕಾರಣವಾಗುತ್ತದೆ. ಇದು ಕಲಿಕೆಗೆ ನೆರವಾಗುವುದಕ್ಕಿಂತ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಬೃಹತ್ ಉದ್ಯಮಗಳ ಮಾರುಕಟ್ಟೆ ವಿಸ್ತರಣೆಗೆ ನೆರವಾಗಿ ಅವರ ಲಾಭದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಮಕ್ಕಳನ್ನು ಪೋಷಕರನ್ನು ಖಾಯಂಆಗಿ ಪರಾವಲಂಬಿಗಳನ್ನಾಗಿಸುತ್ತದೆ.

ಇನ್ನು ಎರಡನೆಯ ಸಂಗತಿಯೆOದರೆ ಒಂದು ವೇಳೆ ಎಲ್ಲರಿಗೂ ತಂತ್ರಜ್ಞಾನದ ಪರಿಕರಗಳು ಲಭ್ಯವಾದಾಗಲೂ ಈಗಿರುವ ತರಗತಿಗಳ ಕೂಡುಕಲಿಕೆಗಿಂತ ಆನ್‌ಲೈನ್ ಕಲಿಕೆ ಸೃಜನಶೀಲವಾಗಿ ಸಾಧ್ಯವಾಗುತ್ತದೆ ಎಂಬುದರ ಖಚಿತತೆ ಇಲ್ಲ. ಹೆಚ್ಚು ಹೊತ್ತು ಕಂಪ್ಯೂಟರ್ ಇಲ್ಲವೇ ಮೊಬೈಲ್‌ಗಳ ಎದುರು ಕೂತು ಕಲಿಯಲು ಮಕ್ಕಳು ನಡೆಸುವ ಪ್ರಯತ್ನ, ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮಕ್ಕಳ ಮಾನಸಿಕ ರ‍್ತನೆಗಳಲ್ಲಿಯೇ ವ್ಯತ್ಯಾಸವಾಗಲೂಬಹುದು. ಈಗಾಗಲೇ ಮೊಬೈಲ್ -ಟಿವಿಗಳಿಗೆ ಅಡಿಕ್ಟ್ ಆಗಿರುವ ಮಕ್ಕಳು ಮತ್ತಷ್ಟು ಅವುಗಳ ಬಳಕೆಯಿಂದ ಬೌದ್ಧಿಕ ವಿಕಾಸವಾಗುವ ಬದಲು ಮಾನಸಿಕ ಬಿಕ್ಕಟ್ಟು ಆರಂಭವಾಗಬಹುದು. ಇದು ಶಿಕ್ಷಣದ ಹೆಸರಿನಲ್ಲಿ ಮಕ್ಕಳನ್ನು ಮಾನಸಿಕ ಅಸ್ವಸ್ಥರನ್ನಾಗಿಸುವಂತೆಯೂ ಮಾಡಬಹುದು. ಅವರ ಕ್ರಿಯಾಶೀಲತೆಯನ್ನು ನಾಶವಾಗಿಸಲೂಬಹುದು.

ಮೂರನೆಯದಾಗಿ ನಮ್ಮಲ್ಲಿ ಶಿಕ್ಷಣ ವ್ಯವಸ್ಥೆಯು ಖಾಸಗಿ ಮತ್ತು ಸರ್ಕಾರಿ ಎಂಬ ಎರಡು ಬಗೆಗಳಲ್ಲಿ ಒಡೆದುಹೋಗಿದೆ. ಖಾಸಗಿ ಸಂಸ್ಥೆಗಳ ಮೂಲಭೂತ ಸೌಲತ್ತುಗಳು ಮತ್ತು ಸರ್ಕಾರಿ ಸಂಸ್ಥೆಗಳ ಸೌಲತ್ತುಗಳ ನಡುವೆ ಸಾಕಷ್ಟು ಅಂತರವಿದೆ. ಖಾಸಗಿ ಸಂಸ್ಥೆಗಳು ಅಗತ್ಯವಿರುವ ಎಲ್ಲ ಸೌಲತ್ತುಗಳನ್ನು ಒದಗಿಸಬಹುದು ಮತ್ತು ಅವುಗಳನ್ನು ಉತ್ತಮವಾಗಿ ನಿರ್ವಹಿಸಲೂಬಹುದು. ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮೂಲಭೂತ ಸವಲತ್ತುಗಳು ಇಲ್ಲ. ಇದ್ದರೂ ಅವುಗಳ ನಿರ್ವಹಣೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಸವಲತ್ತುಗಳನ್ನು ಬಳಸಿ ಆನ್‌ಲೈನ್ ಮೂಲಕ ಬೋಧಿಸುವ ವ್ಯವಸ್ಥೆ ಪ್ರಾಥಮಿಕ ಹಂತದಿAದ ಉನ್ನತ ಹಂತದವರೆಗೂ ಸರ್ಕಾರಿ ಸಂಸ್ಥೆಗಳಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

ಈ ದುಃಸ್ಥಿತಿಯನ್ನು ನಿವಾರಿಸದಿದ್ದರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವಿನ ಕಂದರ ಇನ್ನಷ್ಟು ಹೆಚ್ಚುತ್ತದೆ. ಇದನ್ನು ಮಾಡದೇ ಆನ್‌ಲೈನ್ ಶಿಕ್ಷಣವನ್ನು ಸಾರ್ವಜನಿಕಗೊಳಿಸಿದರೆ ಅಂತಿಮವಾಗಿ ಬಲಿಪಶುಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಕ ಕಲಿಯುವ ವಿದ್ಯಾರ್ಥಿಗಳೇ ಆಗಿರುತ್ತಾರೆ. ಇದರಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ನಡುವಿನ ಅಂತರ ಮತ್ತಷ್ಟು ಹೆಚ್ಚುತ್ತದೆ. ಹಾಗಾಗಿ ಮೂಲಭೂತ ಸವಲತ್ತುಗಳ ಸಮಾನ ಅವಕಾಶಗಳೇ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲದಾಗ ಆನ್‌ಲೈನ್ ಬೋಧನೆ ಮತ್ತಷ್ಟು ಅಸಮಾನತೆಯನ್ನೇ ಬೆಳೆಸುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಕಡೆಗೆ ನಮ್ಮ ಶಿಕ್ಷಣದ ಆಡಳಿತ ವ್ಯವಸ್ಥೆ ಗಮನಹರಿಸಬೇಕು.

ಅಲ್ಲದೆ ‘ಜ್ಞಾನ’ ಎನ್ನುವುದನ್ನು ಕೇವಲ ‘ಮಾಹಿತಿ’ ಎಂದು ತಿಳಿದವರು ಮಾತ್ರ ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಬಹುದಷ್ಟೇ. ‘ಕಲಿಕೆ’ ಎನ್ನುವುದು ಕೇವಲ ಮಾಹಿತಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಮಾತ್ರವಲ್ಲ. ಅದು ಸುದೀರ್ಘ ಕಲಿಕೆಯ ಪ್ರಕ್ರಿಯೆ. ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿತ್ಯ ಪಡೆಯುವ ಅನುಭವ. ಅದು ಕಲಿಕೆಯ ಪರಿಸರದಲ್ಲಿ ಸಮಾಜದ, ಬೋಧಕರ, ಸ್ನೇಹಿತರ, ಪೋಷಕರೆಲ್ಲರ ನೆರವಿನಿಂದ ಕೂಡಿ ಕಲಿಯುವುದಾಗಿರುತ್ತದೆ. ಅಂತಹ ಕಲಿಕೆ ನಿತ್ಯವೂ ಅಗೋಚರವಾಗಿ ಸಂಭವಿಸುತ್ತ ಬೌದ್ಧಿಕ ವಿಕಾಸವಾಗುತ್ತಿರುತ್ತದೆ.

ಕಲಿಕೆಯ ಪ್ರಕಿಯೆಯಲ್ಲಿ ಬೋಧಕರು ಮತ್ತು ವಿದ್ಯಾರ್ಥಿಗಳ ನಡುವೆ ಒಂದು ನಂಟಿರುತ್ತದೆ. ಅಂತಹ ನಂಟಿಲ್ಲದೆ ಅಲ್ಲಿ ಕಲಿಕೆಯೇ ಸಾಧ್ಯವಾಗದು. ನಂಟು, ನಂಬಿಕೆ, ವಿಶ್ವಾಸಗಳ ಕನೆಕ್ಟಿವಿಟಿ ಸಾಧ್ಯವಿಲ್ಲದೇ ಹೋದರೆ ಕಲಿಕೆಯೇ ಸಾಧ್ಯವಿಲ್ಲ. ಆನ್‌ಲೈನ್ ಬೋಧನೆ ಮತ್ತು ಕಲಿಕೆಯಲ್ಲಿ ಇಂತಹ ಕನೆಕ್ಟಿವಿಟಿಗೆ ಅವಕಾಶವೇ ಇರುವುದಿಲ್ಲ. ನಿರ್ಜೀವ ಯಂತ್ರದ ಮುಂದೆ ಕುಳಿತು ಶಿಕ್ಷಕರು ಬೋಧಿಸಬೇಕು; ವಿದ್ಯಾರ್ಥಿಗಳು ಕೇಳಬೇಕು. ಇಲ್ಲವೇ ಈ ಮೊದಲೇ ರೆಕಾರ್ಡ್ ಮಾಡಿರುವ ಆಡಿಯೋ ವಿಡಿಯೋಗಳನ್ನು ಪ್ಲೇ ಮಾಡಬಹುದು. ಇಲ್ಲಿ ಬೋಧನೆ ಮತ್ತು ಕಲಿಕೆ ಎರಡೂ ಏಕಮುಖವಾಗಿರುತ್ತದೆ. ಅರ್ಥವಾಗದ ಸಂಗತಿಗಳನ್ನು ಮರುಪ್ರಶ್ನೆಗಳ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಬೋಧಕರು ಕಲಿಯುವವರ ಕಣ್ಣೊಳಗಿನ ಮತ್ತು ಹೃದಯಗಳ ಭಾವನೆಗಳ ಜೊತೆಗೆ ನಂಟು ಸಾಧಿಸಿ ಬೋಧಿಸುತ್ತಿರುತ್ತಾರೆ. ವಿದ್ಯಾರ್ಥಿಗಳೂ ಕೂಡ ಅಂತಹದ್ದೇ ಭಾವನೆಗಳ ಜೊತೆಗೆ ನಂಟು ಹೊಂದಿರುತ್ತಾರೆ. ಅಂತಹ ಒಂದು ಸಾವಯುವ ಸಂಬAಧವನ್ನೇ ಆನ್‌ಲೈನ್ ಶಿಕ್ಷಣ ಪದ್ಧತಿ ನಾಶಮಾಡುತ್ತದೆ.

ಶಿಕ್ಷಣ ಕೇವಲ ಯಾಂತ್ರಿಕ ಕೆಲಸವಾಗದೆ ಅದೊಂದು ಸಂವೇದನಾಶೀಲ ಚಟುವಟಿಕೆ. ಅಲ್ಲದೆ ಆನ್‌ಲೈನ್ ಬೋಧನೆ ವಿಪರೀತ ಔಪಚಾರಿಕತೆಯನ್ನು ಅಪೇಕ್ಷಿಸುತ್ತದೆ. ಮಕ್ಕಳಿಗೆ ಯಾವುದೇ ವಿಚಾರಗಳನ್ನು ಅರ್ಥೈಸುವಾಗ ಅನೌಪಚಾರಿಕ ಸಂಗತಿಗಳ ಮೂಲಕ ಕಲಿಸಲಾಗುತ್ತಿರುತ್ತದೆ. ಆದ್ದರಿಂದ ಕಲಿಸುವವರು ಮತ್ತು ಕಲಿಯುವವರಿಬ್ಬರೂ ತಮ್ಮ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾರೆ. ಅದರಲ್ಲಿಯೂ ಎಡಬಲವಾಗಿ ಸಮಾಜ ಛಿದ್ರವಾಗಿರುವ ಹೊತ್ತಿನಲ್ಲಿ ಅಧ್ಯಾಪಕರು ಆನ್‌ಲೈನ್ ಬೋಧನೆಯಲ್ಲಿ ಪ್ರಭುತ್ವಗಳ ಧರ್ಮಗಳ ಬಗೆಗೆ ಕೊಂಚ ವಿಮರ್ಶಾತ್ಮಕವಾಗಿರಲು ಸಾಧ್ಯವಿಲ್ಲ. ಹಾಗೆ ವಿಮರ್ಶೆ ಮಾಡದೆ ವಿದ್ಯಾರ್ಥಿಗಳಲ್ಲಿ ವೈಚಾರಿಕತೆ ಬೆಳೆಸಲು ಸಾಧ್ಯವೇ ಇಲ್ಲ. ಮಕ್ಕಳಲ್ಲಿ ವೈಚಾರಿಕತೆ ಬೆಳೆಯದಿದ್ದರೆ ಶಿಕ್ಷಣವೇ ಒಂದು ವ್ಯರ್ಥ ಚಟುವಟಿಕೆಯಾಗುತ್ತದೆ.

ಈ ಕಾಲದಲ್ಲಿ ಆನ್‌ಲೈನ್ ಶಿಕ್ಷಣ ವೈಚಾರಿಕ ವಿರೋಧಿಯಾಗಿ ಮೌಢ್ಯ ಬಿತ್ತುವ ದೊಡ್ಡ ಸಾಧನವಾಗಿಬಿಡುವ ಅಪಾಯವಿದೆ. ಕವಿ ಬ್ರೆಕ್ಟ್ ಹೇಳಿದಂತೆ ‘ಹೊಸ ಆಂಟೆನಾಗಳು ಬಿತ್ತುತ್ತಿರುವುದು ಹಳೆ ಮೂರ್ಖತನಗಳನ್ನೇ’. ಅಂದರೆ ನಮ್ಮಲ್ಲಿ ಮಾಧ್ಯಮಗಳು ಮೌಢ್ಯವನ್ನೇ ಬಿತ್ತುತ್ತಿವೆ. ಅದನ್ನೇ ನಾಳೆ ಆನ್‌ಲೈನ್ ತರಗತಿಗಳೂ ಮಾಡಬಹುದಲ್ಲವೇ?

ಹಾಗೆಂದು ಇಂದು ತಂತ್ರಜ್ಞಾನವನ್ನು ದಿಕ್ಕರಿಸಿ ಬದುಕುವುದು ಯಾರಿಗೂ ಸಾಧ್ಯವಿಲ್ಲ. ಯಾವ ಕ್ಷೇತ್ರವೂ ತಂತ್ರಜ್ಞಾನವನ್ನು ಬದಿಗೆ ಸರಿಸಿ ಉಳಿಯಲು ಸಾಧ್ಯವೂ ಇಲ್ಲ. ಶಿಕ್ಷಣ ಕ್ಷೇತ್ರಕ್ಕಂತೂ ಸಾಧ್ಯವೇ ಇಲ್ಲ. ಅಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅತ್ಯವಶ್ಯಕ. ಅದರಲ್ಲಿಯೂ ಕೊರೊನಾ ಕಾಲದಲ್ಲಿ ಇದು ಇನ್ನಷ್ಟು ಮುಖ್ಯವೆನ್ನಿಸಿದೆ. ಇಂದು ಇದನ್ನು ತಾತ್ಕಾಲಿಕ ವ್ಯವಸ್ಥೆಯಾಗಿ ಬಳಸಬೇಕೇ ಹೊರತು ಅದನ್ನು ನಿಡುಗಾಲದಲ್ಲಿ, ಕೊರೊನೋತ್ತರ ಕಾಲದಲ್ಲಿಯೂ ಮುಂದುವರೆಸಬಾರದು. ಸದ್ಯ ಆನ್‌ಲೈನ್ ತರಗತಿಗಳ ಮೂಲಕ ಪಠ್ಯಗಳನ್ನು ಮುಗಿಸಿ ವಿದ್ಯಾರ್ಥಿಗಳ ತಕ್ಷಣದ ಅಗತ್ಯವನ್ನು ಪೂರೈಸಬೇಕಾಗಿದೆಯೇ ಹೊರತು ಅದನ್ನೇ ಅಧಿಕೃತಗೊಳಿಸಬಾರದು. ಹಾಗೇ ಅದನ್ನೆ ಅಧಿಕೃತಗೊಳಿಸುವತ್ತ ಸಾಗಿದರೆ ಶಿಕ್ಷಣದ ಮೂಲ ಉದ್ದೇಶವೇ ಈಡೇರುವುದಿಲ್ಲ.

ಒಂದOತೂ ನಿಜ ಶಿಕ್ಷಕರ ಅಧ್ಯಾಪಕರ ದೌರ್ಬಲ್ಯಗಳು ಮತ್ತು ಶಿಕ್ಷಣ ವ್ಯವಸ್ಥೆಯ ದುಃಸ್ಥಿತಿ ಎರಡನ್ನೂ ತೆರೆದಿಟ್ಟಿದೆ. ನಾಲ್ಕುಗೋಡೆಯ ಒಳಗೆ ಪಾಠ ಮಾಡುವುದಕ್ಕೂ ಸಾರ್ವಜನಿಕರ ಎದುರು ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕವಾಗಿ ಪಾಠ ಮಾಡಲು ಅನೇಕ ಅಧ್ಯಾಪಕರು ಅಂಜುತ್ತಿದ್ದಾರೆ. ಇನ್ನೂ ಕೆಲವರು ಯಾವುದೇ ಅಳುಕಿಲ್ಲದೆ ‘ತಮ್ಮತನ’ವನ್ನು ಹೊರಹಾಕಿ ಜನರನ್ನು ಬೆಚ್ಚಿಬೀಳಿಸಿದ್ದಾರೆ. ಶಿಕ್ಷಣದ ಗುಣಮಟ್ಟ ಹೇಗಿದೆ ಎಂಬುದನ್ನು ಸಾರ್ವಜನಿಕರು ಮೌಲ್ಯ ಮಾಪನ ಮಾಡುವುದಕ್ಕೆ ಇದು ಒಂದು ಸದವಕಾಶವೂ ಆಗಿದೆ.

ಹಾಗಾಗಿ ಶಿಕ್ಷಣದ ಮೂಲ ಉದ್ದೇಶದ ಈಡೇರಿಕೆಗೆ ಪೂರಕವಾಗಿ ತಂತ್ರಜ್ಞಾನವನ್ನು ‘ಟೀಚಿಂಗ್ ಏಡ್’ ತರಹ ಬಳಕೆ ಮಾಡಿಕೊಳ್ಳಬೇಕೇ ಹೊರತು ಅದೇ ಒಂದು ಬದಲಿ ವ್ಯವಸ್ಥೆಯಾಗಬಾರದು. ಬೋಧಕರ ಜಾಗಕ್ಕೆ ಬಂದು ಕೂರಬಾರದು. ಮಾನವರನ್ನು ಸಂವೇದನಾ ಶೂನ್ಯರನ್ನಾಗಿಸಬಾರದು. ಈಗಾಗಲೇ ಒಂದು ವರ್ಗದ ಜನರು ಯಂತ್ರಗಳಾಗಿ ಬದಲಾಗಿರುವ ಹೊತ್ತಿನಲ್ಲಿ ಅದರಿಂದ ಬಿಡುಗಡೆ ಪಡೆಯಲು ಬೇಕಾದ ದಾರಿಗಳನ್ನು ಶೋಧಿಸುವ ಪ್ರಯತ್ನ ನಡೆಯುತ್ತಿದೆ. ಅಂತಹ ಹೊತ್ತಿನಲ್ಲಿ ದುರಿತ ಕಾಲವನ್ನು ದುರ್ಬಳಕೆ ಮಾಡಿಕೊಂಡು ‘ಶಿಕ್ಷಣ’ದ ನೆಪದಲ್ಲಿ ವೈಚಾರಿಕತೆ ಮತ್ತು ನೈಜ ಮಾನವ ಸಂವೇದನೆಗಳನ್ನು ಶಿಕ್ಷಣ ಸಂಸ್ಥೆಗಳು ಕೊಲ್ಲಬಾರದು. ಅದಕ್ಕೆ ಸರ್ಕಾರಗಳು ಉದ್ಯಮಗಳು ಅವಕಾಶ ನೀಡಬಾರದು. ವಿಶೇಷವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಈ ಹೊತ್ತಿನಲ್ಲಿ ‘ಲಜ್ಜೆ’ಯ ಎಲ್ಲೆಯನ್ನು ಮೀರಬಾರದು. ಯಾಕೆಂದರೆ ಅವು ‘ಶಿಕ್ಷಣ’ ಸಂಸ್ಥೆಗಳು.

ಮನುಷ್ಯರಿಗಾಗಿ ತಂತ್ರಜ್ಞಾನ ಇರಬೇಕಾಗಿದೆಯೇ ಹೊರತು ತಂತ್ರಜ್ಞಾನಕ್ಕಾಗಿ, ಲಾಭಕ್ಕಾಗಿ ಮನುಷ್ಯರನ್ನು ಬಲಿಕೊಡಬಾರದು. ರೊಬೊಟಿಕ್ ಸಂವೇದನೆಯೇ ಮಾನವ ಸಂವೇದನೆಯಾಗಬಾರದು. ಮಾನವರ ಸಮಾಜವನ್ನು ಸಂವೇದನಾಶೀಲವಾಗಿ ನಿಜಾರ್ಥದಲ್ಲಿ ನಾಗರಿಕಗೊಳಿಸುವ ದಾರಿಗಳತ್ತ ಯೋಚಿಸಬೇಕಿದೆ. ಕೊರೊನಾ ಬಿಕ್ಕಟ್ಟು ಈ ಬಗ್ಗೆ ಆಲೋಚಿಸಲು ಅವಕಾಶ ಕಲ್ಪಿಸಿದೆ. ಈಗ ಚಿಂತಿಸಿ ಹೊಸ ವಿಚಾರಗಳನ್ನು ಯೋಜನೆಗಳನ್ನು ರೂಪಿಸಿ ಹೊಸ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಅದರ ಭಾಗವಾಗಿ ಕೊರೊನೋತ್ತರ ಕಾಲದಲ್ಲಿ ಶಿಕ್ಷಣ ವ್ಯವಸ್ಥೆಯನ್ನೂ ಮುರಿದು ಕಟ್ಟಿ ಮುಂದಿನ ಜನಾಂಗಕ್ಕೆ ಸಜ್ಜುಗೊಳಿಸಿಕೊಡಬೇಕಿದೆ.

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುOಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.