ತಂತ್ರಜ್ಞಾನ ಶತಮಾನದಲ್ಲಿ ಕನ್ನಡ

ನುಡಿಸಮುದಾಯವೊಂದು, ಅದರಲ್ಲೂ ಕನ್ನಡದಂತಹ `ಮಾಡುಗತನವಿಲ್ಲದ’ ನುಡಿಸಮುದಾಯವೊಂದು ಟೆಕ್ನಾಲಜಿಯ ಈ ಶತಮಾನವನ್ನು ಹೇಗೆ ಎದುರಿಸಬೇಕು, ಯಾವ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು ಅನ್ನುವುದು ನಾವು ನಿನ್ನೆಯೇ ಚರ್ಚಿಸಬೇಕಿದ್ದ ತುರ್ತು ವಿಷಯ ಎಂದು ನಾನು ಭಾವಿಸುವೆ.

ನುಡಿಸಮುದಾಯವೊಂದು ಹೊರಗಿನ ಯಾವುದೇ ನುಡಿಯ, ಸಂಸ್ಕೃತಿಯ ಪ್ರಭಾವವಿಲ್ಲದೇ ತನ್ನಷ್ಟಕ್ಕೆ ತಾನೇ ಸೀಮಿತವಾಗಿ ಉಳಿಯುವಂತಹ ರಾಜಕೀಯದ ಏರ್ಪಾಡುಗಳಿದ್ದಲ್ಲಿ ಹೊರ ಪ್ರಪಂಚದಲ್ಲಿ ಆಗುವ ಯಾವುದೇ ಕ್ರಾಂತಿಕಾರಕ ಬದಲಾವಣೆ ಅದರ ಮೇಲೆ ಹೆಚ್ಚಿನ ಪರಿಣಾಮ ಬೀರದು. ಆದರೆ ಈ ರೀತಿ ಪ್ರಪಂಚದ ಯಾವುದೇ ನುಡಿಸಮುದಾಯಗಳು ಇರಲು ಸಾಧ್ಯವಿಲ್ಲ. ಔದ್ಯೋಗಿಕ ಕ್ರಾಂತಿಯ ಹಿಂದಿನ ದಿನಗಳಲ್ಲೂ ಈ ರೀತಿ ಹೊರತಾಗಿ ಇರಲು ಸಾಧ್ಯವಿರಲಿಲ್ಲ. ಈಗಿನ `ಮನೆಮನೆ ಮನಮನ’ ತಲುಪುವ ಟೆಕ್ನಾಲಜಿ ಅವಲಂಬನೆಯ ಪ್ರಪಂಚದಲ್ಲಿ ಎಲ್ಲರಿಂದ ಹೊರತಾಗಿರುವುದು ಅಸಾಧ್ಯವೇ ಸರಿ. ಹಾಗಿದ್ದರೆ ನುಡಿಸಮುದಾಯವೊಂದು, ಅದರಲ್ಲೂ ಕನ್ನಡದಂತಹ `ಮಾಡುಗತನವಿಲ್ಲದ’ ನುಡಿಸಮುದಾಯವೊಂದು ಟೆಕ್ನಾಲಜಿಯ ಈ ಶತಮಾನವನ್ನು ಹೇಗೆ ಎದುರಿಸಬೇಕು, ಯಾವ ರೀತಿಯ ತಯಾರಿಗಳನ್ನು ಮಾಡಿಕೊಳ್ಳಬೇಕು ಅನ್ನುವುದು ನಾವು ನಿನ್ನೆಯೇ ಚರ್ಚಿಸಬೇಕಿದ್ದ ತುರ್ತು ವಿಷಯ ಎಂದು ನಾನು ಭಾವಿಸುವೆ.

ಟೆಕ್ನಾಲಜಿ ಕುರಿತು ಮಾತನಾಡುವಾಗ ಬದಲಾವಣೆಯ ವೇಗದ ಕುರಿತು ಮಾತನಾಡದಿರಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಸೈನ್ಸ್ ಫಿಕ್ಷನ್ ಕತೆಗಳಲ್ಲಿ ಮಾತ್ರ ಕಾಣಬಹುದಾಗಿದ್ದ ವಸ್ತುಗಳು ಇಂದು ನಾವು ದಿನನಿತ್ಯ ಬಳಸುವ ಉಪಕರಣಗಳಾಗಿಬಿಟ್ಟಿವೆ. ಹಿಂದೆ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಕಾಣುತ್ತಿದ್ದ, ಅಂಗೈಯಲ್ಲೇ ಕುಳಿತು ಪುಟಾಣಿ ಪರದೆಯ ಮೇಲೆ ಬೇಕಾದ ಮಾಹಿತಿಯನ್ನೆಲ್ಲ ತೋರಿಸುತ್ತಿದ್ದ ಸಾಧನಗಳು ಈಗ ಎಲ್ಲರ ಕೈಗೂ ಮೊಬೈಲ್ ಫೋನಿನ ರೂಪದಲ್ಲಿ ಬಂದು ಕುಳಿತಿವೆ.

ಚಾಲಕನಿಲ್ಲದೇ ಓಡುವ ಕಾರು, ಮುಖ ನೋಡಿ ತೆರೆದುಕೊಳ್ಳುವ ಫೋನ್, ಮಾತಿನಲ್ಲೇ ಅಪ್ಪಣೆ ಪಡೆದು ನಿಮಗೆ ಬೇಕಾದ ಕೆಲಸ ಮಾಡುವ ವಾಯ್ಸ್ ಅಸಿಸ್ಟೆಂಟು, ಟ್ರಾಫಿಕ್ ದಟ್ಟಣೆ ಇಲ್ಲದ ದಾರಿಯಲ್ಲೇ ನಿಮ್ಮನ್ನು ಕರೆದೊಯ್ಯಬಲ್ಲ ಮ್ಯಾಪ್ ನಾವಿಗೇಟರು ಹೀಗೆ ದಿನೇದಿನೇ ಟೆಕ್ನಾಲಜಿ ತನ್ನ ವಿಶ್ವರೂಪವನ್ನು ತೆರೆಯುತ್ತಿದೆ. ಇದೊಂದು ಹಲಮುಖವುಳ್ಳ, ದೀರ್ಘವಾದ ಚರ್ಚೆಯ ವಿಷಯವಾಗಿರುವುದರಿಂದ ಎಲ್ಲದಕ್ಕೂ ಇಳಿಯದೇ ಈ ಬರಹದಲ್ಲಿ ಮುಖ್ಯವಾಗಿ ಕಂಪ್ಯೂಟಿಂಗ್-ಗೆ ಸಂಬಂಧಪಟ್ಟ ಎರಡು ತಳಮಟ್ಟದ ತಂತ್ರಜ್ಞಾನಗಳ ಬಗ್ಗೆ ಮತ್ತು ಅವು ಉಂಟುಮಾಡಬಹುದಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಚರ್ಚಿಸುತ್ತೇನೆ.

ಯಂತ್ರಜಾಣ್ಮೆ ಮತ್ತು ಯಂತ್ರಕಲಿಕೆ

ಇಪ್ಪತ್ತೊಂದನೇ ಶತಮಾನದಲ್ಲಿ ಮಾನವ ಸಮಾಜದ ಭವಿಷ್ಯ ರೂಪಿಸಲಿರುವ ಅವಳಿ ತಂತ್ರಜ್ಞಾನಗಳೆಂದರೆ ಯಂತ್ರಜಾಣ್ಮೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಮತ್ತು ಯಂತ್ರಕಲಿಕೆ (ಮೆಶೀನ್ ಲರ್ನಿಂಗ್). ಇಂದಿನ ದಿನಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಟೆಕ್ನಾಲಜಿ ಆಧಾರಿತ ಹೊಸ-ಉದ್ಯಮಗಳು (ಸ್ಟಾರ್ಟ್ ಅಪ್) ಹುಟ್ಟಿಕೊಳ್ಳುತ್ತಿರುವುದು ಈ ಎರಡು ತಂತ್ರಜ್ಞಾನಗಳ ಆಧಾರದ ಮೇಲೆಯೇ.

ಏನಿದು ಯಂತ್ರಜಾಣ್ಮೆ? ಕಂಪ್ಯೂಟರುಗಳು ನಡೆಸುವ ಎಲ್ಲ ಕೆಲಸಗಳನ್ನೂ ನಾವು `ಜಾಣ್ಮೆ’ ಬೇಡುವ ಕೆಲಸಗಳೆಂದು ಕರೆಯಲು ಬರುತ್ತದೆಯೇ?

ಉದಾ 1: ಮನುಷ್ಯರೊಡನೆ ಚೆಸ್ ಆಡಿ ಗೆಲ್ಲಬಲ್ಲ ಕಂಪ್ಯೂಟರ್ ಪ್ರೊಗ್ರಾಮ್.

ಇದು ಖಂಡಿತ `ಜಾಣ್ಮೆ’ಯುಳ್ಳ ಕೆಲಸ ಎಂದು ನಮಗೆ ಮೇಲು ನೋಟಕ್ಕೆ ಅನ್ನಿಸಿದರೂ, ಇದು ನಿಜಕ್ಕೂ ಯಂತ್ರಜಾಣ್ಮೆಯನ್ನು ಬೇಡುವ ಕೆಲಸವಲ್ಲ. ಚೆಸ್ ಆಟಕ್ಕೆ ನಿಗದಿತವಾದ ನಿಯಮಗಳಿದ್ದು ಆಟದಲ್ಲಿ ಬಳಕೆಯಾಗುವ ವಿಧ ವಿಧವಾದ ತಂತ್ರಗಳೂ ಜಟಿಲವಾದ ಆದರೆ ನಿಖರವಾದ ನಿಯಮಗಳಿಗೆ ಒಳಪಟ್ಟಿವೆ. ಹಾಗಾಗಿ ಇವನ್ನು ಒಂದು ಕಟ್ಟುನಿಟ್ಟಿನ ಕಂಪ್ಯೂಟರ್ ಆಲ್ಗಾರಿದಮ್ ಒಳಗೆ ಅಳವಡಿಸಲು ಸಾಧ್ಯವಿದೆ.

ಉದಾ 2: ಒಂದು ಚಿತ್ರವನ್ನು ನೋಡಿ ಅದರಲ್ಲಿ ಯಾವುದಾದರೂ ವಾಹನವಿದೆಯೇ ಎಂದು ಹೇಳುವ ಪ್ರೋಗ್ರಾಮ್.

ಇದು ಮೇಲುನೋಟಕ್ಕೆ ತುಂಬ ಸರಳವೆನಿಸುವ ಕೆಲಸ. ಆದರೆ, ಇದು ಕಂಪ್ಯೂಟರ್ ಆಲ್ಗಾರಿದಮ್ ಒಳಗೆ ಸುಲಭವಾಗಿ ಅಳವಡಬಲ್ಲ ಕೆಲಸವಲ್ಲ. ಏಕೆಂದರೆ ನಾವು ಒಂದು `ವಾಹನ’ವನ್ನು ಪತ್ತೆ ಹಚ್ಚಲು ಬಳಸುವ ನಿಯಮಗಳು ತುಂಬ ನೇರ ಅಥವಾ ಕಟ್ಟು ನಿಟ್ಟಿನದಲ್ಲ. ಏಕೆಂದರೆ, `ವಾಹನ’ ಎನ್ನುವುದು ಒಂದು ನಿರ್ದಿಷ್ಟ ವಸ್ತುವಾಗಿರದೇ ಒಂದು `ಬಗೆ’ಯಾಗಿದೆ. ಒಂದು `ಬಗೆ’ಯನ್ನು ಪತ್ತೆ ಹಚ್ಚಲು ನಮ್ಮ ಮಿದುಳು ಬಳಸುವ ವಿಧಾನ ಕೊಂಚ ಸಡಿಲವಾದುದು. ಮತ್ತು ಈ ವಿಧಾನ ಏನೆಂದು ನಾವು ಸರಿಯಾಗಿ ಯಾರಿಗೂ ವಿವರಿಸಲಾರೆವು. ವಾಹನದ ಗಾತ್ರ, ಬಣ್ಣ, ತಿರುಗಿರುವ ದಿಕ್ಕುಗಳೇನೇ ಇದ್ದರೂ ನಾವು ಕ್ಷಣಾರ್ಧದಲ್ಲಿ ಪತ್ತೆ ಹಚ್ಚಬಲ್ಲೆವು. ಹೀಗೆ, ಯಾವ ಕೆಲಸಗಳಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಹೇಳಲು ಬರುವುದಿಲ್ಲವೋ, ಅಂತಹ ಕೆಲಸಗಳನ್ನು ಮಾಡಲು `ಜಾಣ್ಮೆ’ಯ ಅಗತ್ಯವಿದೆ ಎಂದು ಹೇಳುತ್ತೇವೆ. ಮತ್ತು ಇಂತಹ ಜಾಣ್ಮೆಯನ್ನು ಒಂದು ಯಂತ್ರಕ್ಕೆ ನಾವು ಕೊಟ್ಟಾಗ, ಅದಕ್ಕೆ `ಯಂತ್ರಜಾಣ್ಮೆ’ (ಕೃತಕ ಬುದ್ಧಿಮತ್ತೆ) ಎಂದು ಕರೆಯುತ್ತೇವೆ.

ಮನುಷ್ಯರ ಜಾಣ್ಮೆಗೆ ಇರುವ ಇನ್ನೊಂದು ಮುಖವೆಂದರೆ `ಕಲಿಯುವ’ ಸಾಮಥ್ರ್ಯ. ಕಂಪ್ಯೂಟರುಗಳು ತಾವೇ ಏನೂ ಕಲಿಯಲಾರವು ಎನ್ನುವುದೇ ರೂಢಿಯಿಂದ ಬಂದ ಅಭಿಪ್ರಾಯ. `ಯಂತ್ರಕಲಿಕೆ’ ಎನ್ನುವ ತಂತ್ರವು ಈ ಅಭಿಪ್ರಾಯವನ್ನು ಬುಡಮೇಲು ಮಾಡುತ್ತದೆ. ಮೇಲಿನ `ವಾಹನ ಪತ್ತೆಹಚ್ಚುವ’ ಉದಾಹರಣೆಯಲ್ಲಿ, `ವಾಹನ’ ಹೇಗಿರುತ್ತದೆ ಎನ್ನುವುದನ್ನು ಆಲ್ಗಾರಿದಮ್-ಗೆ ಕಲಿಸಬೇಕಷ್ಟೇ? ಇದನ್ನು ಹೇಗೆ ಕಲಿಸಲಾಗುತ್ತದೆ? ಹೀಗೆ: ಆಲ್ಗಾರಿದಮ್-ಗೆ `ಕಲಿಯುವ ಮೋಡ್’ ಇರುತ್ತದೆ. ಈ ಮೋಡ್-ನಲ್ಲಿ ಅದಕ್ಕೆ ವಾಹನ ಇರುವ ಮತ್ತು ಇಲ್ಲದ ಲಕ್ಷಾಂತರ ಚಿತ್ರಗಳನ್ನು ತೋರಿಸಿಲಾಗುತ್ತದೆ (ಅಂದರೆ ಸ್ಯಾಂಪಲ್ ಡೇಟಾವನ್ನು ಕೊಡಲಾಗುತ್ತದೆ). ಮತ್ತು ಯಾವುದರಲ್ಲಿ ವಾಹನ ಇದೆ ಮತ್ತು ಯಾವುದರಲ್ಲಿ ಇಲ್ಲ ಎನ್ನುವುದನ್ನೂ ಹೇಳಲಾಗುತ್ತದೆ. ಇದರ ಮೂಲಕ ಆಲ್ಗಾರಿದಮ್ ತನಗೆ ತಾನೇ `ವಾಹನ’ ಎಂಬ ಬಗೆಯ ಗುಣಲಕ್ಷಣಗಳನ್ನು ತನ್ನದೇ ಗಣಿತದ ನಿಯಮಗಳಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ತರುವಾಯ, ಅದಕ್ಕೆ ವಾಹನ ಪತ್ತೆ ಹಚ್ಚುವ ಕೆಲಸವನ್ನು ನೀಡಲಾಗುತ್ತದೆ. ಅದು ತನ್ನ ಕೆಲಸ ನಿರ್ವಹಿಸುತ್ತಿರುವಾಗಲೂ ನಿರಂತರವಾಗಿ ತನ್ನ ಒಳನಿಯಮಗಳನ್ನು ತಿದ್ದಿಕೊಳ್ಳುತ್ತಾ ತಾನೇ ತಾನಾಗಿ ಉತ್ತಮಗೊಳ್ಳುತ್ತಾ ಹೋಗುತ್ತದೆ. ಇದನ್ನೇ `ಯಂತ್ರ ಕಲಿಕೆ’ ಎನ್ನುತ್ತೇವೆ.

ಯಂತ್ರಜಾಣ್ಮೆ ಮತ್ತು ಯಂತ್ರಕಲಿಕೆಯ ತಂತ್ರಗಳನ್ನು ಇಂದು ಹಲವಾರು ಬಗೆಯ ಕೆಲಸಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಡ್ರೈವರು ಇಲ್ಲದೇ ತಾನೇ ಓಡುವ ಬಂಡಿಗಳು (ಅಟಾನಮಸ್ ವೆಹಿಕಲ್ಸ್), ರೋಗಿಗಳ ಬೇನೆಯನ್ನು ಕರಾರುವಾಕ್ಕಾಗಿ ಪತ್ತೆ ಹಚ್ಚಬಲ್ಲ ಸ್ಕ್ಯಾನರುಗಳು, ಯಾವ ಕಂಪನಿಯಲ್ಲಿ ಹಣ ಹೂಡಬೇಕೆಂದು ತಾನೇ ನಿರ್ಧರಿಸುವ ಅಲ್ಗಾರಿದಮಿಕ್ ಇನ್ವೆಸ್ಟರುಗಳು ಹೀಗೆ ಊಹೆಗೂ ನಿಲುಕದ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈ ಅವಳಿ ತಂತ್ರಜ್ಞಾನಗಳು ಪ್ರವೇಶ ಪಡೆದುಕೊಂಡು ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಇದರಿಂದಾಗಿ ಈ ಕೆಲಸಗಳ ನಿರ್ವಹಣೆ ಹೆಚ್ಚು ಕ್ಷಮತೆಯಿಂದಲೂ ಮತ್ತು ಅಗ್ಗವಾಗಿಯೂ ಜರುಗುತ್ತಿವೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು

ಯಂತ್ರಜಾಣ್ಮೆ ಮತ್ತು ಯಂತ್ರಕಲಿಕೆಯ ತಂತ್ರಜ್ಞಾನಗಳು ಮಾನವ ಸಮಾಜದ ಮೇಲೆ ವಿಶಾಲವಾದ ಮತ್ತು ಆಳವಾದ ಪರಿಣಾಮಗಳನ್ನು ಉಂಟಮಾಡಲಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಇಸ್ರೇಲಿನ ಪ್ರಸಿದ್ಧ ಇತಿಹಾಸಜ್ಞ ಮತ್ತು ಭವಿಷ್ಯತಜ್ಞ ಯುವಲ್ ನೋವಾ ಹರಾರಿಯವರು ಬಯೊಟೆಕ್ನಾಲಜಿ ಮತ್ತು ಯಂತ್ರಜಾಣ್ಮೆಯ ಸಶಕ್ತವಾದ ಬಳಕೆಯು ಇಪ್ಪತ್ತೊಂದನೇ ಶತಮಾನದಲ್ಲಿ ಮಾನವ ಸಮಾಜದಲ್ಲಿ ಹಿಂದೆಂದೂ ಕಾಣದಿರುವ ಅಸಮಾನತೆಗಳನ್ನು ಸೃಷ್ಟಿಸಬಲ್ಲುದು ಎಂದು ಅಭಿಪ್ರಾಯ ಪಡುತ್ತಾರೆ. ಯಾವ ವರ್ಗಗಳು ಈ ತಂತ್ರಜ್ಞಾನಗಳ ಪ್ರಯೋಜನವನ್ನು ಮೊದಲು ಪಡೆದುಕೊಂಡು ಅವನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುತ್ತಾರೋ ಅವರು ಅಪರಿಮಿತವಾದ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳನ್ನು ಪಡೆದುಕೊಂಡು ಉಳಿದವರನ್ನು ಶೋಷಿಸಲು ಸಾಧ್ಯವಿದೆ ಎನ್ನುವ ವಾದವನ್ನು ಮಂಡಿಸುತ್ತಾರೆ. ಹಾಗೆಯೇ ಎಲ್ಲ ಕೆಲಸಗಳಿಗೂ ಹೆಚ್ಚು ಹೆಚ್ಚು ಈ ತಂತ್ರಜ್ಞಾನಗಳು ಬಳಕೆಯಾದಂತೆಲ್ಲ, ಯಾವ ಕೆಲಸಕ್ಕೂ ಬೇಕಾಗದ, ಆರ್ಥಿಕವಾಗಿ ಯಾವ ಕೊಡುಗೆಯನ್ನೂ ನೀಡಲಾರದ `ದಂಡ ಪಿಂಡ’ಗಳ ವರ್ಗವೊಂದು ನಿರ್ಮಾಣವಾಗಬಹುದು ಎಂದೂ ಎಚ್ಚರಿಸುತ್ತಾರೆ.

ಅದೇನೇ ಇರಲಿ, ಇಷ್ಟಂತೂ ನಿಜ. ಹಿಂದೆ ಜರುಗಿದ ಕೈಗಾರಿಕಾ ಕ್ರಾಂತಿಗಳಿಂದ ದೈಹಿಕ ಶ್ರಮ ಬೇಡುವ ಕೆಲಸಗಳಿಗೆ ಮನುಷ್ಯರ ಅಗತ್ಯ ಹೇಗೆ ಕಡಿಮೆಯಾಗುತ್ತಾ ಬಂದಿತೋ ಹಾಗೆಯೇ ಯಂತ್ರಜಾಣ್ಮೆಯ ಕ್ರಾಂತಿಯಿಂದ ಒಂದಿಷ್ಟು ಜಾಣ್ಮೆ ಬೇಡುವ ಕೆಲಸಗಳಿಗೂ ಮನುಷ್ಯರ ಅಗತ್ಯ ಕಡಿಮೆಯಾಗುವುದಂತೂ ನಿಜ. ಇದರಿಂದಾಗಿ ಮನುಷ್ಯರು ಹೊಸ ಹೊಸ ಕೌಶಲಗಳನ್ನು ಬೆಳೆಸಿಕೊಳ್ಳದೇ ಹೋದಲ್ಲಿ ಬಹುದೊಡ್ಡ ಮಟ್ಟದಲ್ಲಿ ನಿರುದ್ಯೋಗವನ್ನು ಎದುರಿಸಬೇಕಾಗಬಹುದು. ಹಿಂದಿನ ಕಾಲದಂತೆ ಒಮ್ಮೆ ಒಂದು ಕೌಶಲವನ್ನು ಕಲಿತು ಅದನ್ನೇ ಬಳಸಿಕೊಂಡು ಇಡೀ ಜೀವನ ನಿರ್ವಹಣೆ ಮಾಡುವುದು ಸಾಧ್ಯವಾಗದೇ ಹೋಗಬಹುದು. ಉಳಿವಿಗಾಗಿ, ಉದ್ಯೋಗಕ್ಕಾಗಿ, ಎಲ್ಲರೂ ಪ್ರತಿ ಹತ್ತು ವರ್ಷಕ್ಕೊಮ್ಮೆ ತೀರ ಹೊಸದಾದ ಕೌಶಲವೊಂದನ್ನು ಕಲಿತು ರೂಢಿಸಿಕೊಳ್ಳಬೇಕಾಗಬಹುದು. ಒಟ್ಟಿನಲ್ಲಿ ವಿದ್ಯೆ, ಜ್ಞಾನ, ಕೌಶಲಗಳು ಮತ್ತು ಸದಾ ಕಲಿಯಬಲ್ಲ ಸಾಮಥ್ರ್ಯಗಳು ಒಂದು ಲಕ್ಷುರಿ ಎನಿಸಿಕೊಳ್ಳದೆ, ಉಳಿವು ಅಳಿವನ್ನು ನಿರ್ಧರಿಸುವ ಅಗತ್ಯಗಳಾಗುವುದಂತೂ ಖಂಡಿತ. ಈ ಕ್ರಾಂತಿಗೆ ಒಗ್ಗಿಕೊಳ್ಳಲು ಪಶ್ಚಿಮದ ದೇಶಗಳು ಈಗಾಗಲೇ ತಯಾರಾಗುತ್ತಿವೆ.

ಕನ್ನಡಿಗರೇನು ಮಾಡಬೇಕು?

ಜಾಗತಿಕ ಸಮಾಜವು ತಲುಪಿರುವ ಇಂಥ ಒಂದು ಪರ್ವ ಕಾಲದಲ್ಲಿ, ಕನ್ನಡ ಸಮಾಜದ ಸ್ಥಿತಿಗತಿಯೇನು ಮತ್ತು ಭವಿಷ್ಯವನ್ನು ಸಮರ್ಥವಾಗಿ ಎದುರಿಸಲು ನಾವೇನು ಮಾಡಬಹುದು ಎಂದು ಯೋಚಿಸುವಾಗ ಮೊದಲಿಗೆ ನಮ್ಮ ಇಂದಿನ ಸ್ಥಿತಿಗತಿಯನ್ನು ಕೊಂಚ ಅವಲೋಕಿಸಬೇಕು.

ಇಂದಿನ ಸ್ಥಿತಿಗತಿ

ತಂತ್ರಜ್ಞಾನದ ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಕನ್ನಡ ಸಮಾಜದೊಳಗೆ ಆಗಬೇಕಾದಷ್ಟು ಪ್ರಮಾಣದಲ್ಲಿ ಚರ್ಚೆಗಳಾಗುತ್ತಿಲ್ಲ. ಇತ್ತೀಚಿನ ಮತ್ತು ಮುಂಬರುವ ದಿನಗಳಲ್ಲಿ ವೃತ್ತಿಗೆ ಬೇಕಾದ ಕೌಶಲಗಳಿಗೂ ಮತ್ತು ನಮ್ಮ ಶಿಕ್ಷಣ ವ್ಯವಸ್ಥೆಯೊಳಗೆ ಕಲಿಸುತ್ತಿರುವ ವಿಷಯಗಳಿಗೂ ನಡುವೆ ಇರುವ ಕಂದಕ ದೊಡ್ಡದಾಗುತ್ತಿದೆ. ತಂತ್ರಜ್ಞಾನದಲ್ಲಿ ತಳಮಟ್ಟದ ಸಂಶೋಧನೆಗಳನ್ನು ನಡೆಸಲು ಪ್ರೋತ್ಸಾಹವಾಗಲೀ, ಮೂಲ ಸೌಕರ್ಯಗಳಾಗಲೀ ಸಮರ್ಪಕವಾಗಿ ದೊರೆಯುತ್ತಿಲ್ಲ. ಖಾಸಗಿ ಟೆಕ್ನಾಲಜಿ ಕಂಪೆನಿಗಳು ಸ್ಥಳೀಯ ಜನತೆಯ ಒಟ್ಟಾರೆ ಅರಿವು ಮತ್ತು ಕೌಶಲಗಳನ್ನು ಬೆಳೆಸುವಲ್ಲಿ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಇವೇ ಕಂಪೆನಿಗಳು ಇಂಗ್ಲಿಶ್ ಸಂವಹನದ ಮೇಲೆ ಅನಗತ್ಯವಾದ ಒತ್ತನ್ನು ಕೊಡುತ್ತಾ ಸಹಜ ಪ್ರತಿಭೆಯನ್ನು ಹುಡುಕುವಲ್ಲಿ ಮತ್ತು ಪೋಷಿಸುವಲ್ಲಿ ಸಂಪೂರ್ಣವಾಗಿ ಸೋತಿವೆ.

ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಅತೀ ಹೆಚ್ಚು ಕನ್ನಡಿಗರಿಗೆ ತಲುಪಿಸಲು ಕನ್ನಡದಲ್ಲೇ ಸಂಪನ್ಮೂಲಗಳನ್ನು ಉಂಟು ಮಾಡುವ ಕಡೆಗೆ ಸರಕಾರವಾಗಲೀ, ಖಾಸಗಿ ವಲಯದವರಾಗಲೀ ಅಥವಾ ಶೈಕ್ಷಣಿಕ ಸಂಸ್ಥೆಗಳಾಗಲೀ ಸರಿಯಾದ ಗಮನ ಇದುವರೆಗೆ ನೀಡಿಲ್ಲ. ಜಾಗತಿಕವಾಗಿ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಾ ಬರುತ್ತಿರುವ ಹೊರಗುತ್ತಿಗೆ ಅಥವಾ ಔಟ್ ಸೋರ್ಸಿಂಗ್ ಅನ್ನೇ ಇನ್ನೂ ನೆಚ್ಚಿಕೊಂಡು ಸ್ಕಿಲ್ಸ್ ಇಲ್ಲದ ಇಂಜಿನಿಯರುಗಳನ್ನು ತಯಾರು ಮಾಡಲಾಗುತ್ತಿದೆ.

ಮಾಡಬೇಕಾದ ಕೆಲಸಗಳು

ಈ ಮೇಲಿನ ಸಮಸ್ಯೆಗಳನ್ನು ನೋಡಿದಾಗ ಟೆಕ್ನಾಲಜಿಯ ಸಾಗರದಲ್ಲಿ ಮುಳುಗದೇ ತೇಲಲು, ಈಜಲು, ಮೀನ ಹಿಡಿಯಲು ಬೇಕಿರುವ ತಯಾರಿ ಮಾಡಿಕೊಳ್ಳಲೇಬೇಕಾದ ತುರ್ತು ನಮ್ಮ ಮುಂದಿದೆ. ಏನು ಮಾಡಬೇಕಿದೆ ಅಂದರೆ…

ಶೈಕ್ಷಣಿಕ ವಲಯಗಳಲ್ಲಿ ಕನ್ನಡ ಮತ್ತು ಇಂಗ್ಲಿಶ್ ನುಡಿಗಳ ಜೊತೆಜೊತೆಯ ಬಳಕೆಗೆ ಪ್ರೋತ್ಸಾಹ ನೀಡಬೇಕು. ಜಾಗತಿಕ ಮಟ್ಟದಲ್ಲಿ ಸಂವಹನಕ್ಕಾಗಿ ಇಂಗ್ಲಿಶಿನ ಅಗತ್ಯವನ್ನು ಒಪ್ಪಿಕೊಂಡರೂ, ತಂತ್ರಜ್ಞಾನ ವಿಷಯಗಳ ಚರ್ಚೆ, ಕಮ್ಮಟಗಳು, ಸೆಮಿನಾರುಗಳಲ್ಲಿ ಕನ್ನಡವನ್ನು ಹೆಚ್ಚುಹೆಚ್ಚು ಬಳಸುತ್ತಾ ಕನ್ನಡದಲ್ಲಿ ತಂತ್ರಜ್ಞಾನ ವಿಷಯಗಳನ್ನು ಚರ್ಚಿಸಲು ಬೇಕಾದ ಪದ ಸಂಪತ್ತನ್ನು ಕ್ರಮೇಣ ಕಟ್ಟಿಕೊಳ್ಳಬೇಕು.

ಖಾಸಗಿ ಕಂಪೆನಿಗಳು ಹಲನುಡಿಗತನವನ್ನು (ಮಲ್ಟಿ ಲಿಂಗ್ವಲಿಸಮ್) ಬೆಂಬಲಿಸುವಂಥ ಸಾಂಸ್ಥಿಕ ರಚನೆಯನ್ನು (ಆರ್ಗನೈಸೇಶನಲ್ ಸ್ಟ್ರಕ್ಚರು) ಕಟ್ಟಿಕೊಳ್ಳಬೇಕು. ಜಾಗತಿಕ ಸಂವಹನಕ್ಕೆ ಬೇಕಾದ ಅನ್ಯಭಾಷೆಗಳನ್ನು ಕಲಿತ ಒಂದು ವರ್ಗವನ್ನು ಇಟ್ಟುಕೊಂಡು, ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಕೆಲಸ ಮಾಡುವ ವರ್ಗವನ್ನು ಕನ್ನಡದಲ್ಲೇ ಪರಸ್ಪರ ಸಹಯೋಗಿಸಲು ಪ್ರೋತ್ಸಾಹಿಸಿ ಅದಕ್ಕೆ ಬೇಕಾದ ಸವಲತ್ತುಗಳನ್ನು ನೀಡಬೇಕು.

ಈಗಾಗಲೇ ಉದ್ಯಮದಲ್ಲಿ ಒಂದು ಮಟ್ಟದ ಯಶಸ್ಸನ್ನು ಗಳಿಸಿರುವ ಟೆಕ್ಕಿಗಳು ಕನ್ನಡದಲ್ಲೇ ಟೆಕ್ನಾಲಜಿಗೆ ಸಂಬಂಧಪಟ್ಟ ಚರ್ಚಾತಾಣಗಳನ್ನು ಕಟ್ಟಿ, ಹೊಸದಾಗಿ ಕೆಲಸಕ್ಕೆ ಸೇರಿ ಹೊಸ ಟೆಕ್ನಾಲಜಿಗಳ ಸವಾಲನ್ನು ಎದುರಿಸುತ್ತಿರುವವರಿಗೆ ನೆರವಾಗಬೇಕು.

ಶೈಕ್ಷಣಿಕ ವಲಯಕ್ಕೂ ಮತ್ತು ಉದ್ಯಮಕ್ಕೂ ನಡುವೆ ಗಟ್ಟಿಯಾದ ಸೇತುವೆಯನ್ನು ಕಟ್ಟಬೇಕು. ಕಂಪೆನಿಗಳು ತಮ್ಮ ಸಿ.ಎಸ್.ಆರ್. ಬಜೆಟ್ಟಿನ ಒಂದು ಭಾಗವನ್ನು ಬಳಸಿಕೊಂಡು, ಸ್ಥಳೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕನ್ನಡ-ಇಂಗ್ಲಿಶುಗಳೆರಡನ್ನೂ ಬಳಸಿ ತರಬೇತಿಯನ್ನು ನಿಯಮಿತವಾಗಿ ನೀಡುತ್ತಲಿರಬೇಕು.

ಪುಸ್ತಕ ಪ್ರಕಾಶಕರು ತಾಂತ್ರಿಕ ಕೋರ್ಸುಗಳ ಪಠ್ಯಗಳಿಗೆ ಸರಳ ಕನ್ನಡದ ನೆರವಿನ ಪುಸ್ತಕಗಳನ್ನು ಹೊರತರಬೇಕು. ಇದರಿಂದ ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಹಾಯವಾಗುತ್ತದೆ. ಇಂಗ್ಲಿಶಿನ ಪಠ್ಯಗಳನ್ನು ಬಹುಪಾಲು ವಿದ್ಯಾರ್ಥಿಗಳು ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದಬಲ್ಲರು ಎನ್ನುವುದು ಕಟುಸತ್ಯ.

ಈಗಾಗಲೇ ಉದ್ಯಮದಲ್ಲಿ ಒಂದು ಮಟ್ಟದ ಯಶಸ್ಸನ್ನು ಗಳಿಸಿರುವ ಟೆಕ್ಕಿಗಳು ಕನ್ನಡದಲ್ಲೇ ಟೆಕ್ನಾಲಜಿಗೆ ಸಂಬಂಧಪಟ್ಟ ಚರ್ಚಾತಾಣಗಳನ್ನು ಕಟ್ಟಿ, ಹೊಸದಾಗಿ ಕೆಲಸಕ್ಕೆ ಸೇರಿ ಹೊಸ ಟೆಕ್ನಾಲಜಿಗಳ ಸವಾಲನ್ನು ಎದುರಿಸುತ್ತಿರುವವರಿಗೆ ನೆರವಾಗಬೇಕು.

ಸಿಲಿಕಾನ್ ವ್ಯಾಲಿ ಮುಂತಾದ ಕಡೆ ಸ್ಟಾರ್ಟ್‍ಅಪ್ ಕಂಪೆನಿಗಳನ್ನು ಕಟ್ಟಿ ಯಶಸ್ವಿಯಾಗಿರುವ ಕನ್ನಡಿಗರು, ಸ್ಟಾರ್ಟ್‍ಅಪ್ ಕಂಪೆನಿಗಳನ್ನು ಕಟ್ಟುವ ಮತ್ತು ನಡೆಸುವ ಬಗ್ಗೆ ಕನ್ನಡದಲ್ಲೇ ಪುಸ್ತಕಗಳ ಮೂಲಕ ಮತ್ತು ಸಾಮಾಜಿಕ ತಾಣಗಳಲ್ಲಿ ಹೆಚ್ಚುಹೆಚ್ಚು ಮಾಹಿತಿಯನ್ನು ದೊರಕಿಸಿ ಕೊಡಬೇಕು.

ಈ ಮೇಲಿನವು ಈ ಹೊತ್ತಿಗೇ ಮಾಡಬೇಕಾಗಿರುವ ಕೆಲವು ಕೆಲಸಗಳಾಗಿವೆ. ಈ ಬಗೆಯ ಕೆಲವು ತಕ್ಷಣದ ಏರ್ಪಾಟುಗಳನ್ನು ಈ ಹೊತ್ತಿನಲ್ಲಿ ಮಾಡಿಕೊಂಡರೆ, ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ನಾವು ಬದುಕುವ ಬಗೆಯನ್ನೇ ಬದಲಿಸಲಿರುವ ಈ ತಂತ್ರಜ್ಞಾನದ ಅಬ್ಬರವನ್ನು ಒಂದು ನುಡಿಸಮುದಾಯವಾಗಿ ನಾವು ಕೂಡ ಎದುರಿಸಬಹುದು, ಅದರ ಅವಕಾಶಗಳನ್ನು ಕೈವಶ ಮಾಡಿಕೊಂಡು ಮುನ್ನಡೆಯಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಅನ್ನುವುದೇ ಪ್ರಶ್ನೆ.

*ಲೇಖಕರು ಚಿತ್ರದುರ್ಗ ಮೂಲದವರು; ಬೆಂಗಳೂರಿನ ನಿವಾಸಿ. ಮೈ ಲ್ಯಾಂಗ್ ಬುಕ್ಸ್ ಡಿಜಿಟಲ್ ಅನ್ನುವ ಸಂಸ್ಥೆಯ ಸಿ.ಇ.ಒ.

Leave a Reply

Your email address will not be published.