ತಂಬಾಕು ಪುರಾಣವು

ಉಪ್ಪು ತಿಂದವ ನೀರು ಕುಡಿಯಲೇಬೇಕು, ಹಾಗೆಯೇ ತಂಬಾಕು ತಿನ್ನುವವ ಉಗುಳಲೇಬೇಕು.

ತಂಬಾಕು ಸೇವನೆಯಿಂದ ದೇಹಕ್ಕೆ ಹಾನಿ, ಕ್ಯಾನ್ಸರ್ ರೋಗಕ್ಕೆ ಆಹ್ವಾನ. ಅದು ನಿಮ್ಮನ್ನು ಕೊಲ್ಲುತ್ತದೆ. ಹೀಗೆಂದು ನಮ್ಮ ಘನ ಸರಕಾರ ಪ್ರಸಾರ ಮಾಧ್ಯಮಗಳಿಂದ ಎಷ್ಟೊಂದು ಪ್ರಚಾರ ಮಾಡುತ್ತಿದೆ. ಅದಕ್ಕಾಗಿ ನೂರೆಂಟು ಕೋಟಿ ಖರ್ಚು ಮಾಡುತ್ತ್ತಿದೆ. ಅದೆಲ್ಲ ಸರಿ. ಆದರೆ ಅದೇ ವೇಳೆಗೆ ನಮ್ಮ ರಾಜ್ಯದ ಉತ್ತರ ಗಡಿಭಾಗದಲ್ಲಿ ತಂಬಾಕಿನ ಸಮೃಧ್ಧಫಸಲು ಹಾಗು ಇದನ್ನು ಬೆಳೆಯುವ ರೈತರು ಎಂಟೂ ಬೆರಳುಗಳಿಗೆ ಚಿನ್ನದ ಉಂಗುರ ಹಾಕಿಕೊಂಡು, ಬುಲ್ಲೆಟ್ ಮೋಟಾರು ಸೈಕಲ್ ಮೇಲೆ ಮೆರೆದಾಡುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಘನವೇತ್ತ ಸರಕಾರದ ‘ನೀನು ಓಡು ನಾನು ನಿನ್ನನ್ನು ಹಿಡಿಯುತ್ತೇನೆ’ ಎಂಬ ಕಾರ್ಯನೀತಿ ಹಾಗು ಇದರ ಹಿಂದಿನ ಮರ್ಮ ತಿಳಿಯಲಿಲ್ಲ. ನಾನು ಅಮಾಯಕನಂತೆ ನನ್ನ ಮಿತ್ರನಿಗೆ, ‘ಸರಕಾರ ತಂಬಾಕು  ಬೆಳೆಯುವುದನ್ನೇ ಯಾಕೆ ಸಂಪೂರ್ಣವಾಗಿ ನಿಷೇಧ ಮಾಡಬಾರದು’ ಎಂದು ಕೇಳಿದೆ. ಅರ್ಥಶಾಸ್ತ್ರ ಪ್ರಾಧ್ಯಾಪಕನಾದ ಆತ ನನ್ನ ಮಾತು ಕೇಳಿ ಗಹಗಹಿಸಿ ನಕ್ಕ. ‘ಗುಗ್ಗು, ಇದರಲ್ಲಿ ಅರ್ಥಕಾರಣವಿರುತ್ತದೆ. ನಿಮ್ಮಂತಹ ಸಾಮಾನ್ಯರಿಗೆ ಇದು ತಿಳಿಯುವ ಮಾತಲ್ಲ’. ‘ಅಂದರೆ ಸರಕಾರಕ್ಕೆ ಬಹಳಷ್ಟು ಆದಾಯ ಬರುತ್ತದೆ ಎಂದು…’ ನನ್ನ ಮಾತು ಇನ್ನೂ ಮುಗಿದಿರಲಿಲ್ಲ, ನನ್ನ ಮಿತ್ರ ಅದನ್ನು ಅರ್ಧದಲ್ಲಿಯೆ ತಡೆದು, ‘ಈ ರಾಜಕಾರಣಿಗಳಿಗೆ ದೇಶದ ಕಾಳಜಿ ಎಂದಾದರು ಇದೆಯಾ? ಸರಕಾರಕ್ಕೆ ಆದಾಯ ಬರಲಿ ಬಿಡಲಿ ಅದರಲ್ಲಿ ಅವರಿಗೆ ಎಳ್ಳಷ್ಟೂ ಆಸಕ್ತಿ ಇರುವುದಿಲ್ಲ. ಅವರಿಗೆ ತಮ್ಮ ಪಾರ್ಟಿ ಫಂಡು ಹಾಗು ತಮ್ಮ ಜೇಬು ಭರ್ತಿ ಮಾಡುವದರ ಬಗ್ಗೆ ಮಾತ್ರ ಕೊರಗು ಇರುತ್ತದೆ. ನಿನಗೆ ಗೊತ್ತಾ, ತಂಬಾಕು ಹಾಗು ಮದ್ಯದ ಲಾಬಿಯಿಂದ ರಾಜಕಾರಣಿಗಳಿಗೆ ಧನ ಧಾರಾಳವಾಗಿ ಹರಿದುಬರುತ್ತದೆ. ಹೀಗಾಗಿ ತಂಬಾಕು ಬೆಳೆಗಾರರ ಹಿತಾಸಕ್ತ್ತಿಯನ್ನು ರಾಜಕಾರಣಿಗಳು ಕಾಪಾಡಲೇಬೇಕಾಗುತ್ತದೆ. ಇದೇ ಅದರ ಹಿಂದೆ ಇರುವ ಅರ್ಥರಾಜಕಾರಣ’ ಎಂದು ನುಡಿದು ನಕ್ಕ.

ಇತ್ತೀಚೆಗೆ ಬೆಚ್ಚಿಬೀಳುವಂತಹ ಸಮಾಚಾರ ಹೊರಗೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್.ಒ.), ತಂಬಾಕು ಉತ್ಪನ್ನಗಳ ಸೇವನೆಗಳಿಂದ ಬರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಭಾರತಕ್ಕೆ ಪ್ರತಿ ವರ್ಷ 1.04 ಲಕ್ಷ ಕೋಟಿಗಳಷ್ಟು ಆರ್ಥಿಕ ಹೊರೆ ಬೀಳುತ್ತದೆ ಎಂದೂ ಪ್ರತಿ ವರ್ಷ ಸುಮಾರು ಹತ್ತು ಲಕ್ಷ ಜನರು ತಂಬಾಕಿಗೆ ಬಲಿಯಾಗುತ್ತಾರೆಂದು ತನ್ನ ವರದಿಯಲ್ಲಿ ಹೇಳಿದೆ. ಈ ಅಂಕಿಸಂಖ್ಯೆಗಳು ಎಷ್ಟು ವಿಶ್ವಾಸಾರ್ಹ ಎಂಬುದನ್ನು ನಾವು ವಿಚಾರ ಮಾಡಬೇಕಾಗಿದೆ. ಇದರ ಹಿಂದೆ ದೊಡ್ಡ ದೊಡ್ಡ ದೇಶಗಳ ಹಿತಾಸಕ್ತಿ ಎಷ್ಟು ಅಡಗಿದೆ ಎಂಬುದನ್ನೂ ಕಂಡು ಹಿಡಿಯಬೇಕಾಗಿದೆ.

ತಂಬಾಕು ಬೆಳೆಯುವುದರಲ್ಲಿ ಪ್ರಪಂಚದಲ್ಲಿಯೆ ಭಾರತ ಮೂರನೇ ಸ್ಥಾನದಲ್ಲಿದೆ. ವರ್ಷಕ್ಕೆ ಎಂಟು ಸಾವಿರ ಮೆಟ್ರಿಕ್ ಟನ್ ತಂಬಾಕು ಬೆಳೆಯನ್ನು ನಮ್ಮ ದೇಶದಲ್ಲಿ ಬೆಳೆಯಲಾಗುತ್ತಿದೆ. ತಂಬಾಕಿನ (ಹೊಗೆಸೊಪ್ಪು) ಮೂಲಸ್ಥಾನ ದಕ್ಷಿಣ ಅಮೆರಿಕಾ. ಹದಿನೈದನೆ ಶತಮಾನದಲ್ಲಿ ಇದರ ಶೋಧವಾಯಿತು. ಅಲ್ಲಿಂದ ಇದು ಅರಬರಿಗೆ, ಅರಬರಿಂದ, ಮೊಗಲರಿಗೆ ಪರಿಚಯವಾಯಿತು. ವರ್ಸಲ ಎಂಬ ಪೋರ್ತಗೀಜನು 1609ನೇ ಇಸ್ವಿಯಲ್ಲಿ ಅಕ್ಬರ ಬಾದಶಹಾನಿಗೆ ತಂಬಾಕು ಹಾಗು ರತ್ನ ಖಚಿತ ಚಿಲುಮೆಯನ್ನು ಕಾಣಿಕೆಯಾಗಿ ಕೊಟ್ಟನಂತೆ. ನಂತರ ಇದು ನಮ್ಮ ಜನರ ಅವಿಭಾಜ್ಯ ಜೀವನ ಸಂಗಾತಿಯಾಯಿತು.

ನಮ್ಮ ದೇಶದ ಜನಕ್ಕೆ ಈ ಮೊದಲು ಕುದುರೆ ಜೂಜು, ಬೇಟೆಯಾಟ, ಪಗಡೆಯಾಟ ಬಿಟ್ಟರೆ ಮತ್ತೆ ಯಾವ ಹವ್ಯಾಸವಿರಲಿಲ್ಲ. ಕಾಲಕ್ರಮೇಣ ತಂಬಾಕು ಶಿಷ್ಟಾಚಾರದ ಒಂದು ಭಾಗವಾಯಿತು.  ಅತಿಥಿಗಳಿಗೆ ಅದನ್ನು ಕೊಟ್ಟು ಸ್ವಾಗತಿಸುವುದು ಸಂಪ್ರದಾಯವಾಯಿತು.

ಕಾಲಾಂತರದಲ್ಲಿ, ಕೆಲ ಸೃಜನಶೀಲರೂ ರಸಿಕರೂ ಆದ ವೈಜ್ಞಾನಿಕರು ತಂಬಾಕಿನ ಉಪ ಉತ್ಪನ್ನಗಳಾದ ಬೀಡಿ ಹಾಗು ನಶ್ಯಪುಡಿಗಳನ್ನು ಶೋಧ ಮಾಡಿ, ಚಟಗಾರರು ಅವರನ್ನು ಯಾವಾಗಲು ಸ್ಮರಿಸುವಂತೆ ಮಾಡಿದರು. ಏಕೆಂದರೆ ನಮ್ಮ ದೇಶದ ಜನಕ್ಕೆ ಈ ಮೊದಲು ಕುದುರೆ ಜೂಜು, ಬೇಟೆಯಾಟ, ಪಗಡೆಯಾಟ ಬಿಟ್ಟರೆ ಮತ್ತೆ ಯಾವ ಹವ್ಯಾಸವಿರಲಿಲ್ಲ. ಕಾಲಕ್ರಮೇಣ ತಂಬಾಕು ಶಿಷ್ಟಾಚಾರದ ಒಂದು ಭಾಗವಾಯಿತು.  ಅತಿಥಿಗಳಿಗೆ ಅದನ್ನು ಕೊಟ್ಟು ಸ್ವಾಗತಿಸುವುದು ಸಂಪ್ರದಾಯವಾಯಿತು.

ಉಪ್ಪು ತಿಂದವ ನೀರು ಕುಡಿಯಲೇಬೇಕು, ಹಾಗೆಯೇ ತಂಬಾಕು ತಿನ್ನುವವ ಉಗುಳಲೇಬೇಕು. ನವಾಬಿ ಶೈಲಿಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ, ಸೋಮಾರಿಗಳಾಗಿದ್ದ, ರಸಿಕ ತಂಬಾಕು ಪ್ರಿಯರಿಗೆ ಮೇಲೆ ಎದ್ದು ಹೊರಗೆ ಹೋಗಿ ಉಗುಳಲಿಕ್ಕೆ ಬೇಸರವಾಗತೊಡಗಿತು. ಅವಶ್ಯಕತೆಯು ಆವಿಷ್ಕಾರದ ಜನನಿಯಂತೆ. ಅದಕ್ಕಾಗಿ ಪೀಕದಾನಿಗಳು (ಉಗುಳು ಪಾತ್ರೆ) ಹುಟ್ಟಿದವು. ಈ ಪೀಕದಾನಿಗಳು ಕಲಾಕುಸುರಿನಿಂದ, ಬಿದರಿ ಕೆಲಸಗಳಿಂದ ಕೂಡಿದ ಅನನ್ಯ ಕೃತಿಗಳಾಗಿರುತ್ತಿದ್ದವು. ಅವರವರ ಅಂತಸ್ತಿನ ಪ್ರಕಾರ ಪೀಕದಾನಿಗಳಿರುತ್ತಿದ್ದವು. ಮೊಗಲ ಬಾದಶಾಹ ಬಂಗಾರದ ಪೀಕದಾನಿಗಳನ್ನು ಉಪಯೋಗಿಸುತ್ತಿದ್ದರೆ, ಮಾಂಡಲೀಕ ರಾಜರು-ಸರದಾರರು ಬೆಳ್ಳಿಯ ಹಾಗು ಜನ ಸಾಮಾನ್ಯರು ಹಿತ್ತಾಳೆಯ ಪೀಕದಾನಿಗಳನ್ನು ಉಪಯೋಗಿಸುತ್ತಿದ್ದರು.

ನಾನು ಒಮ್ಮೆ ಸಕ್ಕರೆ ಕಾರಖಾನೆಯೊಂದರ ಸಭೆಯೊಂದರಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರದ ಮಂತ್ರಿ ಮಹಾಶಯರೊಬ್ಬರು ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಸಕ್ಕರೆ ಬೆಲೆಯನ್ನು ನಿಗದಿ ಮಾಡುವ ಬಗ್ಗೆ ಗಂಭೀರ ಹಾಗು ಕಾವೇರಿದ ಚರ್ಚೆ ನಡೆಯುತ್ತಿತ್ತು. ಆದ ರೆ ಬಿಂದಾಸ್ತ ಸ್ವಭಾವದ ಆ ಮಂತ್ರಿಗಳು ಪ್ರತಿ ಹತ್ತು ನಿಮಿಷಗಳಿಗೆ ಶೌಚಾಲಯಕ್ಕೆ ಹೋಗಿ ಬರುತ್ತಿದ್ದರು. ಸಭೆಯಲ್ಲಿದ್ದವರಿಗೆ ಅದು ಮುಜುಗರ ತಂದರೂ, ಮಂತ್ರಿಗಳು ಅದಕ್ಕೆ ಕ್ಯಾರೆ ಅನ್ನಲಿಲ್ಲ. ಈ ಬಗ್ಗೆ ನನ್ನ ಮಗ್ಗಲು ಕೂತವರಿಗೆ ಕೇಳಿದಾಗ, ಆತ ಹೇಳಿದ್ದನ್ನು ಕೇಳಿ ನಾನು ದಂಗಾದೆ. ಮಂತ್ರಿಗಳಿಗೆ ತಂಬಾಕಿನ ಚಟವಂತೆ. ಕವಳ ಉಗುಳಲು ಮೇಲಿಂದ ಮೇಲೆ ಶೌಚಾಲಯಕ್ಕೆ ಹೋಗುತ್ತಾರೆ ಎಂದು ಹೇಳಿದಾಗ, ನನಗೆ ಬಿ.ವಿ.ಕಾರಂತರ ನೆನಪು ಬಂದಿತು. ಕಾರಂತರಿಗೆ ಮದ್ಯದ ವ್ಯಸನ. ನಾಟಕದ ರಿಹರ್ಸಲ್ ನಡೆದಾಗ, ಅಥವಾ ಯಾವುದೋ ಸಭೆ ನಡೆದಾಗ ಅವರು ಕೂಡ ತಮ್ಮ ಚಟವನ್ನು ನಡುನಡುವೆ ಶೌಚಾಲಯಕ್ಕೆ ಹೋಗಿ ಪೂರ್ಣ ಮಾಡಿಕೊಳ್ಳುತ್ತಿದ್ದರಂತೆ.

“ಮೀನು ಬೇಟೆಯಾಡಲು ನಾನು ನಮ್ಮ ಹಳೆಯ ಸಂಪ್ರದಾಯದಂತೆ, ಕೊಕ್ಕೆಗೆ ಮಳೆಹುಳುವನ್ನಾಗಲಿ, ಮಾಂಸದ ತುಂಡನ್ನಾಗಲೀ ಸಿಗಿಸುವುದಿಲ್ಲ. ನಾನು ಕೊಕ್ಕೆಗೆ ತಂಬಾಕಿನ ಚೂರನ್ನು ಸಿಗಿಸುತ್ತಿದ್ದೆ. ಮೀನು ತಂಬಾಕು ತಿನ್ನುತ್ತಿತ್ತು. ತಂಬಾಕು ತಿಂದವನು ಉಗುಳಲೇ ಬೇಕು. ಉಗುಳಲು ಮೀನು ಮೇಲೆ ಬರುತ್ತಿತ್ತು. ಆಗ ನಾನು ಈ ಡೊಣ್ಣೆಯಿಂದ ಅದರ ತಲೆಗೆ ಹೊಡೆಯುತ್ತಿದ್ದೆ. ಅದು ಸತ್ತುಹೋಗುತ್ತಿತ್ತು”. ಎಷ್ಟೊಂದು ಸರಳ ಉಪಾಯ!

ಒಬ್ಬ ಮೀನುಗಾರ ದೊಡ್ಡದೊಡ್ಡ ಮೀನುಗಳನ್ನು ಬುಟ್ಟಿಯಲ್ಲಿ ಹಾಕಿಕೊಂಡು, ಕೈಯಲ್ಲಿ ದೊಣ್ಣೆಯೊಂದನ್ನು ಹಿಡಿದುಕೊಂಡು ಹೊರಟಿದ್ದ. ಬುಟ್ಟಿ ಮೀನುಗಳಿಂದ ತುಂಬಿ ತುಳುಕುತ್ತಿತ್ತು. ಮಧ್ಯ ಮಾರ್ಗದಲ್ಲಿ ಅವನ ಮಿತ್ರ ಭೆಟ್ಟಿಯಾದ, ಗೆಳೆಯನ ಬುಟ್ಟಿಯಲ್ಲಿ ಇಷ್ಟೊಂದು ಮೀನುಗಳನ್ನು ನೋಡಿ ಮಿತ್ರನಿಗೆ ಆಶ್ಚರ್ಯವಾಗಿ ವಿಚಾರಿಸಿದ. ಆಗ ಮೀನುಗಾರ, “ಮೀನು ಬೇಟೆಯಾಡಲು ನಾನು ನಮ್ಮ ಹಳೆಯ ಸಂಪ್ರದಾಯದಂತೆ, ಕೊಕ್ಕೆಗೆ ಮಳೆಹುಳುವನ್ನಾಗಲಿ, ಮಾಂಸದ ತುಂಡನ್ನಾಗಲೀ ಸಿಗಿಸುವುದಿಲ್ಲ. ನಾನು ಕೊಕ್ಕೆಗೆ ತಂಬಾಕಿನ ಚೂರನ್ನು ಸಿಗಿಸುತ್ತಿದ್ದೆ. ಮೀನು ತಂಬಾಕು ತಿನ್ನುತ್ತಿತ್ತು. ತಂಬಾಕು ತಿಂದವನು ಉಗುಳಲೇ ಬೇಕು. ಉಗುಳಲು ಮೀನು ಮೇಲೆ ಬರುತ್ತಿತ್ತು. ಆಗ ನಾನು ಈ ಡೊಣ್ಣೆಯಿಂದ ಅದರ ತಲೆಗೆ ಹೊಡೆಯುತ್ತಿದ್ದೆ. ಅದು ಸತ್ತುಹೋಗುತ್ತಿತ್ತು”. ಎಷ್ಟೊಂದು ಸರಳ ಉಪಾಯ!

ಚಟ್ಟಕ್ಕೆ ಹೋದರೂ ಚಟ ಬಿಡುವುದಿಲ್ಲ ಎಂಬ ಗಾದೆ ಮಾತಿದೆ. ಅದರಲ್ಲು ತಂಬಾಕಿನ ಚಟದವರ ವೈಶಿಷ್ಟ್ಯವೇ ಬೇರೆ. ಅವರಿಗೆ ಮಾನ ಮರ್ಯಾದೆ ಪ್ರಶ್ನೆ ಇರುವುದಿಲ್ಲ. ಲೋಕದ ಭಯವಿರುವುದಿಲ್ಲ. ದಿನವೆಲ್ಲ ತಂಬಾಕವನ್ನು ಎಮ್ಮೆ ಹುಲ್ಲು ಮೆಲ್ಲಾಡಿಸುವಂತೆ ಮೆಲ್ಲುತ್ತಲೇ ಇರುತ್ತಾರೆ. ಇಲ್ಲದಿದ್ದರೆ ಅವರ ದವಡೆಗಳಲ್ಲಿ ವಿಚಿತ್ರವಾದ ನವೆ ಉಂಟಾಗುತ್ತದೆ. ತಂಬಾಕು ತಿಂದರೆ ಅದರ ಉಪಶಮನವಾಗುತ್ತದೆಯಂತೆ. ಹೆಚ್ಚಿನ ಶಾಸ್ತ್ರೀಯ ಸಂಗೀತಗಾರರು ತಂಬಾಕು ಸೇವಿಸಲಾರದೇ ತಮ್ಮ ಕಾರ್ಯಕ್ರಮವನ್ನು ಪ್ರಾರಂಭಿಸುವುದಿಲ್ಲ. ತಂಬಾಕು ತಿನ್ನದಿದ್ದರೆ ಷಡ್ಜವೇ ಹತ್ತುವದಿಲ್ಲ ಎಂದು ಗೋಳಿಡುತ್ತಾರೆ.

ನಮ್ಮ ಹೊಲದ ರೈತನಿಗೆ ತಂಬಾಕು ತಿನಬೇಡ ಎಂದು ಉಪದೇಶ ಮಾಡಿ ಅದರ ದುಷ್ಪರಿಣಾಮಗಳನ್ನು ತಿಳಿಸಿಹೇಳಿದೆ. ಆತನಿಗೆ ಈಗ 75 ವರ್ಷ. ಈಗಲೂ ಅಡಿಕೆಬೆಟ್ಟನ್ನು ಹಲ್ಲಿನಿಂದ ಎರಡೆರಡು ತುಂಡು ಮಾಡಿ ಸಂಡಿಗೆ ತಿಂದ ಹಾಗೆ ಕರಮ ಕುರಮ ಎಂದು ತಿನ್ನುತ್ತಾನೆ. ‘ಅಲ್ರೀ ಅಪ್ಪಾರ ನನಗ ತಿಳಿವಳಿಕೆ ಬಂದಾಂಗಿಂದ ತಂಬಾಕು ತಿನ್ನಲೀಕತ್ತಿನ್ರಿ. ನನಗ ಏನ ಧಾಡಿ ಆಗೇದ? ಎಲ್ಲಾ ಸುಳ್ಳ್ರಿ. ತಿಂದದ್ದು ಪಚನ ಮಾಡಿಕೊ ತಾಕತ ಇತ್ತಂದರ ಏನು ಆಗೂದಿಲ್ಲ. ಅಲ್ಲ್ರಿ ಅಪ್ಪಾರ ಅನ್ನಾ ರೊಟ್ಟಿ ತಿಂದವರಿಗೂ ಕ್ಯಾನ್ಸರ ಆಗೇ ಆಗೂದಿಲ್ಲೇನ್ರಿ.? ಇದಕ್ಕೇನಂತೀರಿ?’.

ನನಗೆ ಅವನು ಹೇಳುವುದರಲ್ಲಿ ಸತ್ಯವಿದೆ ಎನಿಸಿತು. ಈ ಸಂದರ್ಭದಲ್ಲಿ ಜೇಸನ್ ರೀಟ್ಮನ್ನ ನಿರ್ದೇಶನದ ‘ಥಾಂಕ್ಯು ಫಾರ್ ಸ್ಮೋಕಿಂಗ್’ ಎಂಬ ಚಲನಚಿತ್ರ ನೆನಪಿಗೆ ಬರುತ್ತದೆ. ಈ ಚಿತ್ರದ ನಾಯಕ ನಿಕ್ ನೇಲರ ಸಿಗರೇಟಿನ ಪರವಾಗಿ ತನ್ನ ವಿಚಿತ್ರವಾದ ವಾದ ಮಂಡಿಸುತ್ತಾನೆ. ತಂಬಾಕು ಹಾಗು ಅದರ ಉಪ ಉತ್ಪನ್ನಗಳಿಗೆ ನಿಷೇಧ ಮಾಡಬೇಕೆಂಬ ಪ್ರಸ್ತಾಪ ಬಂದಾಗ, ‘ಎರೊಪ್ಲೇನು, ಕಾರು, ಹಾಗು ಸಕ್ಕರೆಗಳನ್ನು ಕೂಡ ನಿಷೇಧಿಸಿರಿ. ಅವುಗಳ ಮೇಲೆ ಅಪಾಯ ಸೂಚಕ ಚಿಹ್ನೆ ಹಾಕಿರಿ. ಏಕೆಂದರೆ ಒಂದು ವರ್ಷದಲ್ಲಿ ತಂಬಾಕು ಸೇವನೆ ಮಾಡುವವರಿಗಿಂತ, ವಿಮಾನ, ಕಾರು ಅಪಘಾತದಲ್ಲಿ ಹೆಚ್ಚು ಜನ ಸಾಯುತ್ತಾರೆ. ವೈದ್ಯರ ಪ್ರಕಾರ ಸಕ್ಕರೆ ಕೂಡ ಅತ್ಯಂತ ಅಪಾಯಕಾರಿ ಆದ ವಿಷ, ಅಲ್ಲವೇ’ ಎಂಬ ವಿತಂಡ ವಾದ ಮಾಡುತ್ತಾನೆ.

ನಮ್ಮ ಭಾರತೀಯ ದಂತಕಥೆಗಳಲ್ಲಿ ಅಕಬರ ಬೀರಬಲ್ಲರು ಬರಲೇ ಬೇಕಲ್ಲವೇ? ಒಮ್ಮೆ ಅಕಬರ ಬಾದಶಹಾ, ಸಂಚಾರಕ್ಕಾಗಿ ಹೊರಟಾಗ ದಾರಿಯಲ್ಲಿ ಓರ್ವ ಕುಬ್ಜಳಾದ ಹೆಣ್ಣುಮಗಳನ್ನು ಕಂಡನಂತೆ. ಆಕೆ ಅತ್ಯಂತ ಕುರೂಪಿಯಾಗಿದ್ದಳು. ಇದ್ದಲಿ ನಾಚಿಸುವ ಹಾಗೆ ಕಪ್ಪು ಬಣ್ಣದವಳಾಗಿದ್ದಳು. ಆಕೆಯ ಡೊಣ್ಣೆ ಮೂಗು, ಅಲ್ಲಲ್ಲಿ ಹರಿದಿತ್ತು. ಮೆಳ್ಳುಗಣ್ಣು ಬೇರೆ. ಅಂಗೈ ಅಗಲದ ಕಿವಿಗಳು ಹರಿದು ಜೋತಾಡುತ್ತಿದ್ದವು. ಹುಬ್ಬುಗಳ ಮೇಲಿನ ದಪ್ಪ ದಪ್ಪ ಕೂದಲುಗಳು ಕಸಬರಿಗೆಯ ಸೂಡಿನಂತಿದ್ದವು. ಮೇಲಾಗಿ ಈ ಸ್ತ್ರಿ ಗರ್ಭಿಣಿಯಾಗಿದ್ದಳು. ಅಕಬರ ಬಾದಶಹಾ ಇಷ್ಟು ಕುರೂಪಿ ಹೆಂಗಸನ್ನೇ ನೋಡಿರಲಿಲ್ಲ. ಅದರಲ್ಲೂ ಈ ಹೆಣ್ಣು ಬಸಿರು ಇದ್ದುದು ಅವನಿಗೆ ಮತ್ತಷ್ಟು ಆಶ್ಚರ್ಯ ತಂದಿತ್ತು.

ಈ ಅಮೃತಮತಿಯನ್ನು ಬಸಿರು ಮಾಡಿದ ಆ ಮೋಹನಾಂಗನ  ಬಗ್ಗೆ ಕುತೂಹಲವುಂಟಾಯಿತು. ಬೀರಬಲ್ಲನಿಗೆ ಆತನನ್ನು ಶೋಧಿಸಲು ಹೇಳಿದ. ಆದರೆ ಇದರ ಕುರಿತು ಯಾರನ್ನೂ ಚೌಕಾಶಿ ಮಾಡಬಾರದು, ಕೇಳಲು ಬಾರದು ಎಂಬ ಕರಾರು ಹಾಕಿದ. ಆಗಲಿ ಎಂದ ಬೀರಬಲ್ಲ ನಾಲ್ಕು ದಿನಗಳ ನಂತರ ಒಬ್ಬ ಮನುಷ್ಯನನ್ನು ಹಿಡಿದುಕೊಂಡು ರಾಜನ ಮುಂದೆ ತಂದು ನಿಲ್ಲಿಸಿದ. ಅಷ್ಟಾವಕ್ರನೂ, ತುಂಬಾ ಕುರೂಪಿಯೂ ಆದ ಈತನನ್ನು ತಾನು ಹೇಗೆ ಶೋಧಿಸಿದೆ ಎಂಬುದನ್ನು ಹೇಳತೊಡಗಿದ.

ಬೀರಬಲ್ಲ, ಊರ ತುಂಬ ಅಡ್ಡಾಡಿ ಕೊನೆಗೆ ಹತಾಶನಾಗಿ ನಗರದ ಹೊರಗೆ ಹರಿಯುತಿದ್ದ ನದಿಯ ದಂಡೆಯ ಹತ್ತಿರ ಬಂದನಂತೆ. ಕಡು ಬೇಸಿಗೆ ದಿನ. ನದಿಯೆಲ್ಲ ಬತ್ತಿ ಹೋಗಿತ್ತು. ಊರಿನ ಚರಂಡಿಯಿಂದ ಕಲ್ಮಶ ತುಂಬಿದ ನೀರು ನದಿಗೆ ಬಂದು ಕೂಡುತ್ತಿತ್ತು. ಅದು ಮುಂದೆ ಹರಿದು ಹೋಗದೆ, ಅಲ್ಲಿಯೇ ಪಸರಿಸಿತ್ತು. ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿ ದುರ್ವಾಸನೆ ಮೂಗಿಗೆ ರಾಚುತ್ತಿತ್ತು. ಊರಿನ ಮಲಮೂತ್ರ ತುಂಬಿದ ಈ ನೀರಿನಲ್ಲಿ ಈ ಅಷ್ಟಾವಕ್ರ ನಿಂತಿದ್ದನಂತೆ. ಬೀರಬಲ್ಲನಿಗೆ ಇಷ್ಟು ಮಲಿನವಾದ ಸ್ಥಳದಲ್ಲಿ ಈ ಮಹಾಶಯ ಏನು ಮಾಡುತ್ತಾನೆಂದು ಕುತೂಹಲದಿಂದ ಅಲ್ಲಿಗೆ ಹೋಗಿ ನೋಡಿದನಂತೆ. ಅ ಮನುಷ್ಯ ಹೊಂಡದಲ್ಲಿದ್ದ ಆ ಮಲೆತು ನಿಂತಿದ್ದ ನೀರನ್ನು ತೆಗೆದುಕೊಂಡು, ತನ್ನ ಅಂಗೈಯಲ್ಲಿದ್ದ ಸುಣ್ಣಕ್ಕೆ ಕೂಡಿಸಿ ತಂಬಾಕಿನಲ್ಲಿ ಮಿಶ್ರಣ ಮಾಡಿ, ಅದನ್ನು ಚೆನ್ನಾಗಿ ತಿಕ್ಕಿತಿಕ್ಕಿ ಹದಕ್ಕೆ ತಂದು ಬಾಯಲ್ಲಿ ಇಟ್ಟು ಮೆಲ್ಲುತ್ತಿದ್ದನಂತೆ. ಕೊಳಕಿನ ಮೇಲೆ ಗೆಲವು ಸಾಧಿಸಿದ ಇವನೇ ಆ ಕುರೂಪಿಯ ಪತಿ ಎಂದು ಬೀರಬಲ್ ಕಂಡುಕೊಂಡನಂತೆ.

ತಂಬಾಕು ಚಟದವರು, ಮೇಲಿನ ಅಷ್ಟಾವಕ್ರನ ಗುಣವನ್ನು ಹಾಗು ಮನೋಭಾವನೆಯನ್ನು ಹೊಂದಿರುತ್ತಾರೆ. ಈ ಸಂತತಿಯವರು ಹೇಸಿಗೆ ಹೊಲಸುಗಳನ್ನು ಗೆದ್ದುಬಿಟ್ಟಿರುತ್ತಾರೆ. ಇವರು ಶೌಚಕೂಪದಲ್ಲಿ ಆನಂದದ ಸಮಾಧಿಯಲ್ಲಿದ್ದಾಗ ಅಲ್ಲಿದ್ದ ನೀರನ್ನು ಕೈಯಲ್ಲಿ ತೆಗೆದುಕೊಂಡು ಸುಣ್ಣದಲ್ಲಿ ಮಿಶ್ರಣ ಮಾಡಿ ಅಲ್ಲಿಯೆ ತಂಬಾಕು ಜಗೆಯುತ್ತಾರೆ. ಅವರು ಅಸಹ್ಯಪಟ್ಟುಕೊಳ್ಳುವುದೇ ಇಲ್ಲ.

ಅಕಬರ ರಾಜ, ಬೀರಬಲ್ಲನಿಗೆ ಯಾವ ಜಾಗೀರು ಹಾಕಿ ಕೊಟ್ಟನೋ? ಆದರೆ ಇಷ್ಟು ಮಾತ್ರ ನಿಜ. ತಂಬಾಕು ಚಟದವರು, ಮೇಲಿನ ಅಷ್ಟಾವಕ್ರನ ಗುಣವನ್ನು ಹಾಗು ಮನೋಭಾವನೆಯನ್ನು ಹೊಂದಿರುತ್ತಾರೆ. ಈ ಸಂತತಿಯವರು ಹೇಸಿಗೆ ಹೊಲಸುಗಳನ್ನು ಗೆದ್ದುಬಿಟ್ಟಿರುತ್ತಾರೆ. ಇವರು ಶೌಚಕೂಪದಲ್ಲಿ ಆನಂದದ ಸಮಾಧಿಯಲ್ಲಿದ್ದಾಗ ಅಲ್ಲಿದ್ದ ನೀರನ್ನು ಕೈಯಲ್ಲಿ ತೆಗೆದುಕೊಂಡು ಸುಣ್ಣದಲ್ಲಿ ಮಿಶ್ರಣ ಮಾಡಿ ಅಲ್ಲಿಯೆ ತಂಬಾಕು ಜಗೆಯುತ್ತಾರೆ. ಅವರು ಅಸಹ್ಯಪಟ್ಟುಕೊಳ್ಳುವುದೇ ಇಲ್ಲ. ಇನ್ನು ಕೆಲವರಿಗೆ ಶೌಚಕೂಪಕ್ಕೆ ಹೋಗುವ ಮುನ್ನ ತಂಬಾಕು ಬೇಕೇಬೇಕು. ಅದು ವಿರೇಚಕನಂತೆ ಕೆಲಸ ಮಾಡುತ್ತದೆಯಂತೆ.

ತಂಬಾಕಿನ ಅತಿ ಹತ್ತಿರದ ನೆಂಟನಾದ ನಶ್ಯಪುಡಿಯ ಬಗ್ಗೆ ಈ ವೇಳೆಯಲ್ಲಿ ಹೇಳದಿದ್ದರೆ ಹೇಗೆ? ನಶ್ಯಪುಡಿ ಮಡಿಗೆ ಬರುತ್ತದೆ ಎಂಬುದನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ನಾನು ಈ ಸಮಸ್ಯೆ ಪರಿಹಾರಕ್ಕಾಗಿ ಬಾಗಲಕೋಟೆಯ, ವೇದೋಪನಿಷತ್‍ಗಳನ್ನು ಆಪೋಷಣೆ ಮಾಡಿದ ಪಂಡಿತ ಜಯತೀರ್ಥಾಚಾರ್ಯ ಕದರಮಂಡಲಗಿಯವರಿಗೆ ಕೇಳಿದೆ. ಈ ಆಚಾರ್ಯರ ಸೊಂಟದಲ್ಲಿ ಚಕ್‍ಪಕ್ ಹೊಳೆಯುವ ಬೆಳ್ಳಿಯ ನಶ್ಯದ ಡಬ್ಬ ಯಾವಾಗಲೂ ಇರುತ್ತದೆ. ಹೋಮ ಹವನದ ವೇಳೆಯಲ್ಲಾಗಲೀ, ದೇವಪೂಜೆಯ ಕೈಂಕರ್ಯದಲ್ಲಿದ್ದ್ದಾಗ ಆಗಲೀ ಆಚಾರ್ಯರು ಅದರ ಸದುಪಯೋಗ ಮಾಡಿಕೊಳ್ಳುತ್ತಾರೆ. ‘ ಆಚಾರ್ಯರೆ, ತಂಬಾಕು ಹದಿನೈದನೇ ಶತಮಾನದ್ದು. ಅದೂ ಕೂಡ ಮ್ಲೆಛರಿಂದ ಬಂದದ್ದು. ವೇದದಲ್ಲಿ, ಪುರಾಣದಲ್ಲಿ ಇದರ ಅಥವಾ ಇದರ ಉಪ ಉತ್ಪನ್ನವಾದ ನಶ್ಯದ ಉಲ್ಲೇಖ ಕಂಡು ಬಂದಿಲ್ಲ. ಮತ್ತೆ ಅದು ಹೇಗೆ ಮಡಿಗೆ ಸಲ್ಲುವದು?’ ಎಂದು ವಿನಮ್ರನಾಗಿ ಕೇಳಿದೆ. ಆಚಾರ್ಯರ ಕೋಪ ನೆತ್ತಿಗೇರಿತು. ಸಂಸ್ಕೃತ ಭೂಯಿಷ್ಠ ಬೈಗುಳಗಳು ಸುರು ಆದವು: ‘ಧಡ್ಡಾ, ರಂಡೆಗಂಡಾ, ಛಿದ್ರಾನ್ವೇಷಕಾ, ನೀನೂ ಆ ತಲೆಕೆಟ್ಟ ಬುಧ್ಧಿಜೀವಿಗಳ ಹಂಗ ಮಾತಾಡ್ತಿಯಲ್ಲೋ’

‘ಇಲ್ಲ್ರಿ ಆಚಾರ್ಯರೆ, ನಾನು ಸಾರ್ವಜನಿಕ ಕ್ಷೇತ್ರದೊಳಗ ಅಡ್ಡಾಡು ಮನುಷ್ಯ. ಜನ ನನಗ ಕೇಳತಾರ. ನಾ ಅವರಿಗೆ ಉತ್ತರಾ ಹೇಳಬೇಕಲ್ಲ? ಅದಕ್ಕ ಶಂಕಾ ನಿವಾರಣಿಗೆ ನಿಮಗ ಕೇಳಿದೆ, ತಪ್ಪು ತಿಳಿಕೋಬ್ಯಾಡ್ರಿ’.

‘ಹೌದ, ಹಂಗಾರ ಕೇಳು. ನಮ್ಮ ಮಧ್ವರ ಬೀಜಮಂತ್ರ ಯಾವುದು? ಹರಿ ಸರ್ವೋತ್ತಮ ವಾಯು ಜೀವೋತ್ತಮ ಹೌದಲ್ಲೊ. ಅಗ್ನಿಯಿಂದ ವಸ್ತುಗಳು ಪವಿತ್ರ ಆಗ್ತವಲ್ಲಾ, ಅದೇ ರೀತಿ ಪ್ರಾಣದೇವರ ಸಂಪರ್ಕದಿಂದ ಜಗತ್ತಿನ ಎಲ್ಲಾ ಚರಾಚರ ವಸ್ತುಗಳು ಶುಧ್ಧ ಆಗ್ತಾವ. ನಶ್ಯವನ್ನ ನಮ್ಮ ನಾಶಿಕದಿಂದ ಒಳಗ ಸೇವಿಸ್ತೀವಿ, ಈ ಪ್ರಕ್ರಿಯಾಕ್ಕ ಪ್ರಾಣದೇವರು ಬೇಕೇಬೇಕು. ಪ್ರಾಣದೇವರು ಅಂದರ ವಾಯುದೇವರು. ವಾಯುದೇವರು ಮುಟ್ಟಿದ್ದೆಲ್ಲ ಶುಧ್ಧ ಚಿನ್ನ, ಎಲ್ಲಾ ಪವಿತ್ರ. ಅಂದ ಮ್ಯಾಲೆ ನಶ್ಯ ಹಾಕಿಕೊಳ್ಳಲಿಕ್ಕೆ ಯಾವ ಧರ್ಮಸಿಂಧುವಿನ ಅಡಚಣಿ ಬರೂದಿಲ್ಲ’.

ಆಚಾರ್ಯರು ನ್ಯಾಯ, ವೇದಾಂತ, ಮೀಮಾಂಸೆ, ವ್ಯಾಕರಣಶಾಸ್ತ್ರವನ್ನು ವಿದ್ಯಾಮಠದಲ್ಲಿ ಕಲಿತುಬಂದವರಲ್ಲವೆ? ಹುಲು ಮಾನವನಾದ ನಾನು ಅವರ ಮುಂದೆ ಯಾವ ಲೆಕ್ಕ? ಮೌನ ವಹಿಸಿದೆ.

*ಲೇಖಕರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್; ತಮಿಳುನಾಡಿನ ತಿರುಪೂರಿನಲ್ಲಿ ಆರ್ಕಿಟೆಕ್ಟ್ ಸಂಸ್ಥೆ ನಡೆಸುತ್ತಾರೆ. ನೂರಕ್ಕು ಹೆಚ್ಚು ಕಥೆಗಳು ಪ್ರಕಟಗೊಂಡಿವೆ. ಮರಾಠಿ, ಇಂಗ್ಲಿಷ ಹಾಗು ಹಿಂದಿಯಿಂದ ಭಾಷಾಂತರ ಮಾಡುತ್ತಾರೆ. ಹಿಂದುಸ್ತಾನಿ ಸಂಗೀತ, ಕಥಕ ನೃತ್ಯ ಹಾಗು ಇತಿಹಾಸದಲ್ಲಿ ಆಸಕ್ತಿ.

Leave a Reply

Your email address will not be published.