ತಗರ ಪವಾಡ

ಡಾ.ಜಾಜಿ ದೇವೇಂದ್ರಪ್ಪ

ಕನ್ನಡ ಮತ್ತು ತೆಲುಗಿನಲ್ಲಿ ಹದಿನೆಂಟನೆ ಶತಮಾನದವರೆಗೂ ಅನೇಕ ಕಾವ್ಯಗಳು ಬಸವಣ್ಣನವರನ್ನು ದಾಖಲಿಸಿಕೊಂಡು ಬಂದಿವೆ. ಅಂತಹ ಸಾಲಿಗೆ ಸೇರುವ ವಿಶಿಷ್ಟ ಕೃತಿ ತಗರ ಪವಾಡ.

ಹನ್ನೆರಡನೆ ಶತಮಾನ ಸಮಾಜೋಸಾಹಿತ್ಯಿಕ ನೆಲೆಯಿಂದ ಕನ್ನಡ ನಾಡಿನಲ್ಲಿ ಕ್ರಾಂತಿಯ ಕಾಲ. ಪ್ರತಿರೋಧದ ಕಾಲದ ಪ್ರವರ್ತಕ ವಚನಕಾರ ಬಸವಣ್ಣನವರು. ವಚನ ಸಾಹಿತ್ಯಕಾಲ ಕೇವಲ ಸಾಂಸ್ಕøತಿಕ ಪಲ್ಲಟದ ಕಾಲ ಮಾತ್ರವಲ್ಲ, ಅದೊಂದು ರಾಜಕಾರಣದ, ಪ್ರಭುತ್ವದ ವಿರುದ್ಧ ಸಂಘರ್ಷಕ್ಕೆ ಇಳಿದ ಕಾಲ. ದೃಷ್ಟಿಯಿಂದ ವಚನ ಸಾಹಿತ್ಯ ಕಾಲವನ್ನು ರಾಜಕೀಯ, ಆರ್ಥಿಕ ನೆಲೆಯಿಂದ ನೋಡಬೇಕು.

ಬಸವಣ್ಣನವರ ರಾಜಕೀಯ ತತ್ವವನ್ನು ಸರಿಯಾದ ಗ್ರಹಿಕೆಯಲ್ಲಿ ಅರ್ಥೈಸಬೇಕು. ಭಾರತದ ಶ್ರೇಷ್ಠ ಫಿಲಾಸಫರ್ನ್ನಾಗಿ, ಭಾರತೀಯ ರಾಜಕಾರಣದ ಮುನ್ನೆಲೆಯ ಚಿಂತಕನನ್ನಾಗಿ ಬಸವಣ್ಣನವರನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲೇಬೇಕು. ತನ್ನ ಮುತ್ಸದ್ದಿ ರಾಜಕೀಯ ಸೈದ್ಧಾಂತಿಕ ನಿಲುವುಗಳಿಂದ ಜನಪರ ಸಂವಿಧಾನವನ್ನು ಜಾತಿ, ವರ್ಗ ರಾಹಿತ್ಯ ಮನೋಧೋರಣೆಯನ್ನು ಹೋರಾಟದ ಮುಖೇನ ರೂಪಿಸಿದ ಬಸವಣ್ಣನವರು ಕಾರ್ಮಿಕ ನಾಯಕನಾಗಿ, ಜನಪರ ಹೋರಾಟಗಾರನಾಗಿ, ಸಮುದಾಯಗಳ ಅಸ್ಮಿತೆಯನ್ನು ರಕ್ಷಿಸುವವನಾಗಿ, ಆರ್ಥಿಕತಜ್ಞನಾಗಿ ಇದೆಲ್ಲಕ್ಕೂ ಮಿಗಿಲಾಗಿ ಪ್ರಜಾತಂತ್ರದ ಆಶಯಗಳನ್ನು ನಿರಂಕುಶ ಕಾಲದಲಿ ರೂಪಿಸಿದ ತಾತ್ವಿಕ ರಾಜಕಾರಣಿಯಾಗಿ ಚಿಂತಿಸಿದ ಫಲವಾಗಿಯೇ ಮುಂದೆ ಹದಿನೆಂಟನೇ ಶತಮಾನದವರೆಗೂ ಅನೇಕ ಕವಿಗಳು ಆತನ ಚಿಂತನೆಗಳನ್ನು ತಮ್ಮ ಪುರಾಣಕಾವ್ಯಕಥನಗಳಲ್ಲಿ ಬಹುವಾಗಿ ದಾಖಲಿಸಿದರು.

ಬಸವಣ್ಣನವರು ತಮ್ಮ ಕಾಲದಲ್ಲಿ ಮಾಡಿದ ಜನೋಪಯೋಗಿ ಕೆಲಸಗಳನ್ನು, ಕೆಲವು ಘಟನೆಗಳನ್ನು ಮುಂದೆ ಬಂದ ಹಲವು ಕವಿಗಳು ಮನಸಾರೆ ಮೆಚ್ಚಿದ ದಾಖಲೆಗಳು ಬಸವಣ್ಣನ ಪ್ರಗತಿಪರ ಚಿಂತನೆಗಳಿಗೆ ಸಾಕ್ಷಿಯಾಗಿವೆ. ಹರಿಹರ, ಪಾಲ್ಕುರಿಕೆ ಸೋಮನಾಥ, ಭೀಮಕವಿ ಗಳಷ್ಟೇ ಅಲ್ಲ, ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಹದಿನೆಂಟನೆ ಶತಮಾನದವರೆಗೂ ಅನೇಕ ಸಣ್ಣಪುಟ್ಟ ಕಾವ್ಯಗಳು ಬಸವಣ್ಣನವರನ್ನು ದಾಖಲಿಸಿಕೊಂಡು ಬಂದಿವೆ. ಅಂತಹ ಸಾಲಿಗೆ ಸೇರುವ ವಿಶಿಷ್ಟ ಕೃತಿ ತಗರ ಪವಾಡ.

ತಗರ ಪವಾಡ ಕೃತಿಯು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿಯ ಶ್ರೀ ಗಂಗೆಸಿದ್ದಯ್ಯ, ಚಿಕ್ಕನಾಯಕನಹಳ್ಳಿಯ ರೇವಣಸಿದ್ದೇಶ್ವರ ಮಠದ ಶ್ರೀ ರೇವಪ್ಪಯ್ಯ ಒಡೆಯರ್ ಅವರ ಸಂಗ್ರಹದಲ್ಲಿತ್ತು. ತಗರ ಪವಾಡದ ಹಸ್ತಪ್ರತಿ ಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದರು. ನಲವತ್ತು ವರುಷಗಳ ಹಿಂದೆ ಜಾನಪದ ವಿದ್ವಾಂಸರಾದ ಸಿ.ಕೆ. ಪರಶುರಾಮಯ್ಯ ಅವರು ಬಿಡಿಯಾಗಿ ಪ್ರಕಟಿಸಿದ್ದರು. 2004ರಲ್ಲಿ ಡಾ.ಎಂ.ಎಂ.ಕಲಬುರ್ಗಿ ಅವರ ಪರಿಶ್ರಮ, ಪರಿಷ್ಕಾರದಿಂದ ಡಾ.ಎಫ್.ಟಿ.ಹಳ್ಳಿಕೇರಿ, ಸಿ.ಕೆ.ಪರಶುರಾಮಯ್ಯ, ಡಾ.ಕಲಬುರ್ಗಿ ಸಂಪಾದಿಸಿದ್ದಾರೆ. ಕೃತಿಯು ಬಿಡುಗಡೆಯ ಸಮಾರಂಭಕ್ಕೆ ನಾನು ಹೋಗಿದ್ದೆ. 2004ರಲ್ಲಿ ತುರುವೆಕೆರೆಯಲ್ಲಿ ಇಡೀ ಕುರುಬ ಸಮುದಾಯ ಡೊಳ್ಳಿನ ಮೆರವಣಿಗೆಯಲ್ಲಿ ತಗರ ಪವಾಡ ಕೃತಿಯನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿದ ಅಮೋಘ ದೃಶ್ಯ ಮಾಸಿಲ್ಲ.

ತಗರ ಪವಾಡ ಶಾಂತಮುತ್ತಯ್ಯನೆಂಬ ಕುರುಬರ ದೈವ, ಸಾಂಸ್ಕøತಿಕ ನಾಯಕನ ಸುತ್ತ ರಚನೆಯಾಗಿದೆ. ಇದೇ ಕೃತಿಯಲ್ಲಿ ಬರುವ ಒಂದು ಪ್ರಸಂಗ ಅಣ್ಣ ಬಸವಣ್ಣನವರ ಸಾಮಾಜಿಕ ಕಳಕಳಿಯ ನೆಲೆಯಲ್ಲಿ ವಿವರಿಸುತ್ತದೆ. ಕಲ್ಯಾಣದಲ್ಲಿ ಕಿನ್ನರಿ ಬೊಮ್ಮಯ್ಯನೆಂಬ ಶರಣ ಬಿಜ್ಜಳನ ರಾಣಿಯ ಆಭರಣ ಮಾಡುತ್ತಿದ್ದ, ಸಂಬಂಧ ರಾಜನಿಗೂ ಕಿನ್ನರಯ್ಯನಿಗೂ ಒಂದು ಮನಸ್ತಾಪವಾಯಿತು. ಇದರಿಂದ ಅಕ್ಕಸಾಲಿ ವೃತ್ತಿಯನ್ನೇ ತ್ಯಜಿಸಿ ಶರಣ ಕಿನ್ನರಿಯಿನ್ನಿಡಿದು ಜೀವನ ನಡೆಸುತಿದ್ದ. ಇದೇ ಕಲ್ಯಾಣದಲ್ಲಿ ಬೊಪ್ಪಯ್ಯ ಎಂಬ ವಿಟನೊಬ್ಬ ಮೈಚಟ ತೀರಿಸಿಕೊಳ್ಳಲು ಚೆನ್ನೆ ಎಂಬ ವೇಶ್ಯೆಯನ್ನು ಸಮಾಗಮವಾಗಲು ಆಕೆಗಾಗಿ ಒಂದು ತಗರನ್ನು ಕೊಂಡು ಆಕೆಯ ಮನೆಗೆ ಹೋಗುವಾಗ ಅದು ತಪ್ಪಿಸಿಕೊಂಡು ತ್ರಿಪುರಾಂತಕ ದೇವಾಲಯಕ್ಕೆ ಓಡಿತು. ಗುಡಿಯಲ್ಲಿ ಕಿನ್ನರಯ್ಯನಿದ್ದ, ಬೊಪ್ಪಯ್ಯ ಕುರಿ ಕೇಳಿದರೂ ಕೊಡಲಿಲ್ಲ. ಬದಲಾಗಿ ಹಣಕೊಟ್ಟ. ಹಣ ವೇಶ್ಯೆ ಚೆನ್ನೆ ಬೇಡವೆಂದಳು. ತಗರೇ ಬೇಕೆಂದಳು. ವ್ಯಘ್ರಗೊಂಡ ಚೆನ್ನೆ ತಮ್ಮಂದಿರನ್ನು ಕಳಿಸಿ ಯುದ್ಧ ಮಾಡಿಸಿದಾಗ ಕಿನ್ನರಯ್ಯ ಅವರನ್ನು ಕೊಂದ. ಅವಳು ಬಿಜ್ಜಳನಿಗೆ ದೂರು ನೀಡಲಾಗಿ ಸೈನ್ಯ ತ್ರಿಪುರಾಂತಕ ದೇವಾಲಯಕ್ಕೆ ಆಕ್ರಮಣ ಮಾಡಿತು. ಆಗಲೂ ಕಿನ್ನರಿ ಬೊಮ್ಮಯ್ಯ ಅವರನ್ನು ಸಂಹರಿಸಿದ. ಸುದ್ದಿಯನ್ನು ತಿಳಿದ ಬಿಜ್ಜಳ ಕೋಪಗೊಂಡು ಬಸವಣ್ಣ ನವರನ್ನು ಕರೆದು

ಕೇಳೋ ಬಸವರಾಜ ನಿಮ್ಮಯ ಶರಣರು

ಬೀಳಹೊಯ್ದರು ಎಮ್ಮ ಬಲವ

ಹೇಳಲಳವೆ ನಿಮ್ಮ ಕಣ್ಣಿಗೆಯೆಂದು

ಇಳೆಗೊಡೆಯನು ಎದ್ದು ನುಡಿದ

ನಿಮ್ಮ ಶರಣರಿಂದ ತೊಂದರೆಯಾಗುತ್ತಿದೆಯೆಂದು ಬಿಜ್ಜಳ ಬಸವನಿಗೆ ಗದರಿಸಿದ. ಸಮಾಜಮುಖಿ ಚಿಂತಕನಾದ ಬಸವಣ್ಣ ಕಿನ್ನರಿ ಬೊಮ್ಮಯ್ಯನ ಕೆಲಸವನ್ನು ಸಮರ್ಥಿಸಿಕೊಂಡನು. ಶರಣ ಕಿನ್ನರಿ ಬೊಮ್ಮಯ್ಯನೊಬ್ಬನ ಮೇಲೆ ಸೈನ್ಯವನ್ನು ಕಳಸಿದೆಯಲ್ಲ ಬಿಜ್ಜಳ ಇದು ರಾಜನಿಗೆ ಅಪಕೀರ್ತಿ ಎಂದು ಉತ್ತರಿಸಿದ, ಆಗ ಕೊಂಡೆಯ ಮಂಚಣ್ಣನನ್ನು ಕಿನ್ನರಯ್ಯನಲ್ಲಿಗೆ ಕಳಿಸಿ ತಗರಿನ ಕುರಿತು ವಿಚಾರಿಸಲು, ತಗರನ್ನು ಕೊಂಡುಕೊಂಡಿರುವುದಾಗಿ ಇದಕ್ಕೆ ಶಿವನಿಂದ ಸಾಕ್ಷಿ ಹೇಳಿಸುವೆನೆಂದು ಹೇಳಿದ. ಬಿಜ್ಜಳ ತ್ರಿಪುರಾಂತಕ ದೇವಾಲಯಕ್ಕೆ ಬಂದು, ತುಂಬಿದ ಸಭೆಯಲಿ ್ಲ ಕಿನ್ನರಯ್ಯನ ಪರವಾಗಿ ಶಿವನೇ ಬಂದು ಸಾಕ್ಷಿ ನುಡಿದದ್ದನ್ನು ಬೆರಗಾಗಿ ನಿಮ್ಮ ಶರಣರು ಮಹಿಮರೆಂದು ಒಪ್ಪಿಕೊಂಡು ಹೋದ. ಆಗ ತಗರನ್ನು ಹೂಗಳಿಂದ ಅಲಂಕರಿಸಿ ಅದಕ್ಕೆಶಂಭುಎಂದು ಹೆಸರಿಟ್ಟರು. ಮುಂದೆ ತಗರು ಮನೆ ಮನೆಯಲ್ಲಿ ತಿಂದುಕೊಬ್ಬಿ ಕಂಡಕಂಡವರಿಗೆ ಇರಿಯಲಾರಂಭಿಸಿತು. ದೇವಾಲಯದ ಪೂಜೆಯನ್ನು ಕೆಡಿಸತೊಡಗಿತು. ಆಗ ಕಿನ್ನರಿ ಬೊಮ್ಮಯ್ಯ ಕುರಿಯನ್ನು ಮಹಾಭಕ್ತನಾದ ಸರವೂರು ಶಾಂತಯ್ಯನ ಕುರಿಹಿಂಡಿನಲ್ಲಿ ಬಿಟ್ಟುಬಂದನು. ಹೀಗಿರುವಾಗ

ಹಟ್ಟಿಕೊಟ್ಟದ ರಟ್ಟಿ ಮತದ ಕುಲದೋರು

ಕಟ್ಟಾಣಿಯಿಲ್ಲ ಕಂಬಿಯೊಳು

ಪಟ್ಟಣದೊಳು ಗಟ್ಟಿಮೊಸರು ಕ್ಷೀರವ ಮಾರಿ

ಶೆಟ್ಟಿವರ್ತಕರೊಪ್ಪುತಿರಲು

ಕಲ್ಯಾಣದಲ್ಲಿ ರಟ್ಟಮತ ಕುರುಬರು ಹಾಲು ಮೊಸರು ಮಾರುವುದರಲ್ಲಿ ಕಾಯಕನಿರತರಾಗಿದ್ದರು. ಇವರ ಸತ್ಯಶುದ್ಧ ಕಾಯಕವನ್ನು ಪರೀಕ್ಷಿಸಲು ಪರಮಶಿವನು ಮಲ್ಲಶೆಟ್ಟಿ, ಸಿದ್ಧಶೆಟ್ಟಿ ಎಂಬ ಹೆಸರಿನಿಂದ ವ್ಯಾಪಾರದಲ್ಲಿ ನಿರತರಾಗಿರುತ್ತಾರೆ.

ಕಲ್ಯಾಣದಲ್ಲಿ ಒಂದು ದಿನ ಕುರುಬರು ಸತ್ತ ಕುರಿಯನ್ನು ಮಾರುತ್ತಿದ್ದಾರೆಂದು ಆರೋಪಿಸಿ ಮಲ್ಲಶೆಟ್ಟಿ, ಸಿದ್ಧಶೆಟ್ಟಿಗಳು ಎಲ್ಲಾ ವ್ಯಾಪಾರಿಗಳನ್ನು ಸೇರಿಸಿ, ವಿರೋಧಿಸಿ, ಕುರುಬರನ್ನು ಕಲ್ಯಾಣ ಪಟ್ಟಣದಿಂದ ಬಹಿಷ್ಕಾರ ಮಾಡಿ ಹೊರಹಾಕಿದರು. ಕುರುಬರು ಅಡವಿಯಲ್ಲಿ ಜೀವನ ಮಾಡುತ್ತಿದ್ದರು. ಹನ್ನೆರಡು ವರುಷದ ನಂತರ ಸಿದ್ಧಶೆಟ್ಟಿಯು ಸರವೂರು ಶಾಂತಯ್ಯನೇ ಇದಕ್ಕೆ ಸೂಕ್ತವೆಂದು ಹೇಳಿಹೋದ. ಕುರುಬ ಸಮುದಾಯವೆಲ್ಲ ಸರವೂರ ಶಾಂತಯ್ಯನಲ್ಲಿಗೆ ಬಂದು ತಮ್ಮ ಕಷ್ಟಗಳ ಹೇಳಿದರು. ಅದೇ ಸಮಯಕ್ಕೆ ಕಿನ್ನರಯ್ಯನ ತಗರು ಸತ್ತಿತೆಂಬ ಸುದ್ದಿ ಬಂತು.

ಸತ್ತ ತಗರಿಗೆ ಅಲಂಕಾರ ಮಾಡಿಸಿ ಶಾಂತಯ್ಯ ಕಲ್ಯಾಣಕ್ಕೆ ಸಮುದಾಯದೊಡನೆ ಬಂದನು. ಇದನ್ನು ಮಲ್ಲಶೆಟ್ಟಿ ತಡೆದನು. ಸಿಟ್ಟಿಗೆದ್ದ ಶಾಂತಯ್ಯನುಬಸವ ಹುಟ್ಟಲು ತೀರ್ಥ ಪ್ರಸಾದವಾದವು ಸತ್ತ ಕುರಿಯನ್ನು ಬದುಕಿಸುವೆನೆಂದು ಶಪಥ ಮಾಡಿದ. ಸುದ್ದಿ ತಿಳಿದ ಬಸವಣ್ಣ ಎಲ್ಲ ಭಕ್ತರು ಪವಾಡ ನೋಡಲು ಬರಬೇಕೆಂದು ಹೇಳಲಾಗಿ ಚೆನ್ನಬಸವಣ್ಣ, ಚೆನ್ನಯ್ಯ, ಸಿದ್ಧರಾಮ, ನುಲಿಯ ಚಂದಯ್ಯ, ಕೊಂಡಗುಳಿ ಕೇಶಿರಾಜ, ಗುಂಡಬ್ರಹ್ಮ ಯ್ಯಾದಿ ಶರಣ ಸಮೂಹ ಬಂದರು. ಪವಾಡ ಆಗದೆಂದು ಬಿಜ್ಜಳ, ಕೊಂಡೆ ಮಂಚಣ್ಣ ನಗುತ್ತಿದ್ದರು. ಬಸವಣ್ಣನ ಕೃಪೆಯಿಂದ ಎಲ್ಲವೂ ಆಗುವುದೆಂದು ಶರಣರು ನಂಬಿದರು. ಶಿವಭಕ್ತ ಶಾಂತಯ್ಯನಿಂದ ಇದು ಸಾಧ್ಯವೆಂದು ಬಸವಣ್ಣನವರು ಶಾಂತಯ್ಯನನ್ನು ಕರೆದು ಆತನ ಹಣೆಗೆ ವಿಭೂತಿಯನ್ನು ಹಚ್ಚಿದರು. ಆಗ ಶಾಂತಯ್ಯ ಅದೇ ಭಸ್ಮವನ್ನು ತಗರು (ಕುರಿ)ಗೆ ಹಚ್ಚಿ ತೀರ್ಥ ಪ್ರಸಾದ ಮೈಮೇಲೆ ಹಾಕಲು ಎದ್ದು ನಿಂತಿತು. ಬಸವಣ್ಣ ಶಾಂತಯ್ಯನನ್ನು ಮುದ್ದಾಡಿ ಏನು ಬೇಕೆಂದನು. ಶಾಂತಯ್ಯ ಏನೂ ಬೇಡ ಕುರುಬರೆಲ್ಲ ಕಲ್ಯಾಣಕ್ಕೆ ಮರುಪ್ರವೇಶ ಮಾಡಿಸು ಎನ್ನಲಾಗಿ, ಬಸವಣ್ಣ ಕುರುಬರೆಲ್ಲಾ ಕಲ್ಯಾಣಕ್ಕೆ ಬರಬೇಕೆಂದನು, ದೇಶದೇಶದ ಕುರುಬರೆಲ್ಲಾ ಬಂದರು. ನೀವು ಹಾಲುಮತದವರಾಗಿ ಮೆರೆಯಿರಿ, ಶಾಂತಯ್ಯನ ಭಕ್ತರಾಗಿ ಮೆರೆಯಿರಿ ಎಂದನು. ಶಾಂತಯ್ಯ ಗುರುವಾದ ಕಲ್ಯಾಣದಲ್ಲಿ ಆತನಿಗೆ ರಾಜಮನ್ನಣೆ ದೊರೆಯಿತು.

ಇದೊಂದು ಭಕ್ತಿಮಾರ್ಗದ ಕತೆಯೆನಿಸಿದರೂ, ತಗರ ಪವಾಡ ಕೃತಿಯ ಆಳದಲ್ಲಿ ಕುರುಬ ಸಮಾಜವೊಂದು ಪುರಪ್ರವೇಶದಿಂದ ಬಹಿಷ್ಕಾರಗೊಂಡಿದ್ದನ್ನು ಚಾರಿತ್ರಿಕವಾಗಿ ಹೇಳುತ್ತದೆ. ಬಸವಣ್ಣನ ಜಾತ್ಯಾತೀತ ಮನೋಭಾವದಿಂದ, ಸರವೂರ ಶಾಂತಯ್ಯನಂತಹ ಶರಣರ ಹೋರಾಟದ ಸಹಭಾಗಿತ್ವದಲ್ಲಿ ಸಮುದಾಯವು ತನ್ನ ಜೀವಿಸುವ, ನೆಲೆಸುವ ಹಕ್ಕನ್ನು ಬಿಜ್ಜಳನಂತಹ ಪ್ರಭುತ್ವದಲ್ಲಿ ಕೊಂಡೆ ಮಂಚಣ್ಣ ನಂತಹ ಪುರೋಹಿತಶಾಹಿಯ ವಿರುದ್ಧ ಸೆಟೆದುನಿಂತು ಪ್ರಜಾತಾಂತ್ರಿಕವಾಗಿ ಗೆಲುವು ಪಡೆದ ರೋಚಕ ಘಟನೆ ಚಾರಿತ್ರಿಕವಾದುದು. ಹೀಗೆ ಶಾಂತಯ್ಯನ ಮುಖೇನ ಬಸವಣ್ಣನವರು ಕುರುಬ ಸಮಾಜದ ಮೇಲಿದ್ದ ಕಲ್ಯಾಣ ಪಟ್ಟಣದ ಬಹಿಷ್ಕಾರವನ್ನು ಹೋರಾಟದ ಮೂಲಕ ಮುಕ್ತಗೊಳಿಸಿದ ಸಂಗತಿ ಪ್ರಮುಖವಾದದ್ದು.

*ಲೇಖಕರು ಗಂಗಾವತಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರು.

Leave a Reply

Your email address will not be published.