ತಗ್ಗಿ ನಡೆಯಿರಿ ಎಂದು ಸೂಚಿಸಿದರೆ ತೆವಳಲು ಸಿದ್ಧವಾದ ಮಾಧ್ಯಮ!

ಭಾರತದ ಪತ್ರಿಕಾ ಇತಿಹಾಸದಲ್ಲಿ ಪತ್ರಿಕಾರಂಗವನ್ನು ಪ್ರವೇಶಿಸಿರುವ ಅನೇಕ ಮಹನೀಯರು ಉದ್ಯಮಿಗಳಾಗಿರುವುದು ವಿಶೇಷ. ಆದರೆ, ಅವರಿಗೆ ಪತ್ರಿಕೆಯ ಮೂಲಕ ಲಾಭಗಳಿಸುವುದಕಕ್ಕಿಂತ ಮಿಗಿಲಾಗಿ ಭಾರತೀಯ ಸಮಾಜವನ್ನು ಉದ್ಧರಿಸುವುದು ಮುಖ್ಯಗುರಿಯಾಗಿತ್ತು. ಈಗ ಮಾಧ್ಯಮ ಆಳುವವರ ಮತ್ತು ಉದ್ಯಮಿಗಳ ಬಣ್ಣದ ತಗಡಿನ ತುತ್ತೂರಿಯಾಗಿ ಪರಿವರ್ತನೆ ಹೊಂದಿದೆ!

-ಡಾ.ಎನ್.ಜಗದೀಶ್ ಕೊಪ್ಪ

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾವೃತ್ತಿಗೆ ಒಂದು ಘನತೆಯ ಸ್ಥಾನವಿತ್ತು. ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಜೊತೆ ಪತ್ರಿಕಾರಂಗವನ್ನು ಸಹ ಒಂದು ಆಧಾರಸ್ಥಂಭವಾಗಿ ಪರಿಗಣಿಸಲಾಗಿತ್ತು.

ಪ್ರಭುತ್ವ ಮತ್ತು ಸಮಾಜದ ಜನಸಾಮಾನ್ಯರ ನಡುವೆ ಸಂಪರ್ಕ ಸೇತುವೆಯಾಗಿ ಏಕಕಾಲಕ್ಕೆ ಇಡೀ ವ್ಯವಸ್ಥೆಯನ್ನು ಮತ್ತು ಸಮಾಜವನ್ನು ತಿದ್ದುವ ನೈತಿಕ ಜವಾಬ್ದಾರಿ ಪತ್ರಿಕಾರಂಗದ ಮೇಲಿತ್ತು. ಹಾಗಾಗಿ ಪತ್ರಿಕಾ ರಂಗದಲ್ಲಿ ಅಥವಾ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಅದು ಕೇವಲ ಉದ್ಯೋಗವಾಗಿರದೆ ಬದ್ಧತೆ, ಪಾರದರ್ಶಕತೆ ಮತ್ತು ನಿರ್ಭಾವುಕತೆಯಿಂದ ಕೂಡಿದ ಒಂದು ಘನತೆಯ ಹವ್ಯಾಸವಾಗಿತ್ತು. ಲಾಭ ಅಥವಾ ಅಧಿಕಾರ ಲಾಲಸೆಗಿಂತ ಸಮಾಜವನ್ನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಿದ್ದುವ ಹಾಗೂ ಸರಿದಾರಿಯಲ್ಲಿ ಕೊಂಡೊಯ್ಯವ ಗುರಿ ಎಲ್ಲಾ ಪತ್ರಕರ್ತರ ಕನಸಾಗಿತ್ತು. ಈ ಕಾರಣಕ್ಕಾಗಿ ಭಾರತದ ಪತ್ರಿಕಾರಂಗ 1990ರ ದಶಕದ ವರೆಗೆ ಲಾಭದಾಯಕ ಉದ್ಯಮವಾಗಿರದೆ, ಜನರ ನಂಬಿಕೆ ಮತ್ತು ವಿಶ್ವಾಸದ ಆಧಾರದ ಮೇಲೆ ನಡೆಯುವ ಸೇವಾ ವಲಯದಂತಿತ್ತು.

ಜಗತ್ತಿನಾದ್ಯಂತ ಆವರಿಸಿಕೊಂಡ ಜಾಗತೀಕರಣ ವ್ಯವಸ್ಥೆ ಮತ್ತು ಬದಲಾದ ತಂತ್ರಜ್ಞಾನದ ಹಾಗೂ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ಪತ್ರಿಕಾರಂಗವು ಭಾರತದಲ್ಲಿ ಪತ್ರಿಕೋದ್ಯಮವಾಗಿ ಬದಲಾಯಿತು. ಮುದ್ರಣ ಮಾಧ್ಯಮಗಳ ಜೊತೆಗೆ ಪೈಪೋಟಿಗೆ ಇಳಿದ ದೃಶ್ಯ ಮಾಧ್ಯಮಗಳು ಮನರಂಜನೆಯ ಜೊತೆಗೆ ಸುದ್ದಿ ಚಾನಲ್ ಗಳನ್ನು ಹುಟ್ಟು ಹಾಕುವುದರ ಮೂಲಕ ಈ ವಲಯಕ್ಕೆ ಬಲಿಷ್ಠ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ಎಳೆದುತಂದವು.

ಉದ್ಯಮದಲ್ಲಿ ಲಾಭವೇ ಮುಖ್ಯ ಗುರಿಯಾಗಿರುವಾಗ ಅಲ್ಲಿ ಸತ್ಯ, ನೈತಿಕತೆಯ ಪ್ರಶ್ನೆ ಉದ್ಭವಿಸುವುದಿಲ್ಲ. ಹಾಗಾಗಿ ಪತ್ರಿಕಾ ವೃತ್ತಿಯಲ್ಲಿದ್ದ ಸಂಪಾದಕರು ಮತ್ತು ಪತ್ರಕರ್ತರೆಲ್ಲರೂ ಈಗ ವ್ಯವಸ್ಥಾಪಕ ಹಾಗೂ ಗುಮಾಸ್ತರಾಗಿ ಪರಿವರ್ತನೆ ಹೊಂದಿದರು. ಇಂತಹವರಿಂದ ಬದಲಾವಣೆ ಅಥವಾ ನಿಜವಾದ ಪತ್ರಿಕಾರಂಗಕ್ಕಿದ್ದ ಬದ್ಧತೆ ಮತ್ತು ನೈತಿಕೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಇಡೀ ದೇಶದಲ್ಲಿ ಅಂದರೆ ಭಾರತ ಪತ್ರಿಕಾ ಮಂಡಳಿಯಲ್ಲಿ ನೋಂದಣಿಯಾಗಿರುವ ಒಂದು ಲಕ್ಷದ ಹತ್ತೊಂಬತ್ತು ಸಾವಿರ ಪತ್ರಿಕೆಗಳಲ್ಲಿ ಹಾಗೂ ಚಾಲ್ತಿಯಲ್ಲಿರುವ ಸುಮಾರು ಎಂಟನೂರು ದೃಶ್ಯ ಮಾಧ್ಯಮಗಳಲ್ಲಿ ಪತ್ರಿಕಾರಂಗದ ಘನತೆಯನ್ನು ಉಳಿಸಿಕೊಂಡಿರುವ ಸಂಸ್ಥೆಗಳ ಸಂಖ್ಯೆ ಕೇವಲ ಒಂದು ಡಜನ್ ಮಾತ್ರ ಇರಬಹುದು ಅಷ್ಟೇ. ಉಳೆದೆಲ್ಲವೂ ತಮ್ಮ ಸಂಸ್ಥಾಪಕ ಅಥವಾ ಮಾಲೀಕರ ಮನೋಧರ್ಮಕ್ಕೆ ಅನುಗುಣವಾಗಿ ಇಡೀ ದೇಶಾದ್ಯಂತ ಅವರವರ ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ಮುಖವಾಣಿಯಾಗಿವೆ.

ಎರಡು ದಶಕಗಳ ಹಿಂದೆ ದಿನಪತ್ರಿಕೆಯ ವಾಚಕರವಾಣಿಯಲ್ಲಿ ಆಡಳಿತ ವ್ಯವಸ್ಥೆಯ ಲೋಪದೋಷಗಳನ್ನು ಕುರಿತು  ಜನಸಾಮಾನ್ಯರು  ಪತ್ರ ಬರೆದರೆ ಸಚಿವರು ಅಥವಾ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಅವುಗಳಿಗೆ ಪ್ರತಿಕ್ರಿಯಿಸುವ ಕನಿಷ್ಠ ಸೌಜನ್ಯವನ್ನು ಹೊಂದಿದ್ದರು. ಈಗ ಪತ್ರವಿರಲಿ, ಪತ್ರಿಕೆಯಲ್ಲಿ ಸಂಪಾದಕೀಯ ಲೇಖನ ಬರೆದರೂ ಓದುವ ಗುಣವನ್ನು ನಮ್ಮ ವ್ಯವಸ್ಥೆ ಹೊಂದಿಲ್ಲ.

ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ಥಂಭಗಳಲ್ಲಿ ಪತ್ರಿಕಾರಂಗವೂ ಕೂಡ ಒಂದು ಎಂಬುದಕ್ಕೆ ಭಾರತದ ಇತಿಹಾಸದಲ್ಲಿ ಭವ್ಯವಾದ ಸ್ಥಾನವಿದೆ. 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನ ಇದ್ದ ಸುಮಾರು ಮುವತ್ತುಕೋಟಿ ಜನಸಂಖ್ಯೆಯಲ್ಲಿ ಶೇಕಡ 80 ರಷ್ಟು ಅನಕ್ಷರಸ್ಥರಿದ್ದರು. ಇಂತಹ ಶೋಚನೀಯ ಸ್ಥಿತಿಯಲ್ಲಿ ಬ್ರಿಟೀಷರ ವಿರುದ್ದ ಸ್ವಾತಂತ್ರ್ಯ ಚಳವಳಿಯನ್ನು ಜೊತೆ ಜೊತೆಗೆ ಸಾಮಾಜಿಕ ಕ್ರಾಂತಿಯನ್ನು ಬಾಲಗಂಗಾಧರ ತಿಲಕರು ‘ಕೇಸರಿ’ ಪತ್ರಿಕೆ, ಗಾಂಧೀಜಿ ‘ಯಂಗ್ ಇಂಡಿಯ’ ಮತ್ತು ‘ಹರಿಜನ’ ಪತ್ರಿಕೆ, ಅಂಬೇಡ್ಕರ್ ‘ಮೂಕ ನಾಯಕ’ ಪತ್ರಿಕೆ, ಮೌಲನಾ ಅಜಾದ್‍ರು ಉರ್ದು ವಾರಪತ್ರಿಕೆ ಮೂಲಕ ಗಣ್ಯರು ಜನತೆಯ ಬಳಿಗೆ ಕೊಂಡೊಯ್ದರು.

1915 ರಲ್ಲಿ ಗಾಂಧೀಜಿ ಬಹಿರಂಗವಾಗಿ ಹೋರಾಟ ಆರಂಭಿಸಿದ ಬಿಹಾರದ ಚಂಪಾರಣ್ಯ ಸತ್ಯಾಗ್ರಹಕ್ಕೆ ದೊಡ್ಡ ಬೆಂಬಲವಾಗಿ ಬಂಗಾಳಿ ಪತ್ರಿಕೆಗಳು ನಿಂತಿದ್ದನ್ನು ನಾವು ಮರೆಯುವಂತಿಲ್ಲ. ನೀಲಿ ಬೆಳೆಯನ್ನು ಬೆಳೆಯಲು ನಿರಾಕರಿಸಿದ ರೈತರನ್ನು ಬ್ರಿಟೀಷ್ ಸರ್ಕಾರ ಶೋಷಣೆ ಮಾಡುತ್ತಿದ್ದ ಬಗೆಯನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತಿಗೆ ಅನಾವರಣ ಮಾಡಿದ ಪತ್ರಿಕೆಗಳ ಧೋರಣೆಯಿಂದ ಸ್ವತಃ ಗಾಂಧೀಜಿ ಪ್ರಭಾವಿತರಾದರು. ಹಾಗಾಗಿ ಅವರು ಹೋರಾಟದ ಜೊತೆಯಲ್ಲಿ ಪತ್ರಿಕಾ ವೃತ್ತಿಯನ್ನು ಕೈಗೆತ್ತಿಗೊಂಡು ತಮ್ಮ ಹೋರಾಟದ ಸ್ವರೂಪಗಳು ಮತ್ತು ಧ್ಯೇಯಗಳನ್ನು ಜನತೆಗೆ ಮತ್ತು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು. ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಗಾಂಧೀಜಿ, ಅಂಬೇಡ್ಕರ್, ತಿಲಕರಂತಹ ಮಹನೀಯರ ಬರಹಗಳು ಸ್ಥಳಿಯ ಭಾಷೆಗೆ ಅನುವಾದಗೊಳ್ಳುವುದರ ಮೂಲಕ ಕೈಬರಹ ಮತ್ತು ಕಲ್ಲಚ್ಚಿನ ಪತ್ರಿಕೆಗಳ ಮೂಲಕ ಇಡೀ ದೇಶದ ಮೂಲೆ ಮೂಲೆ ತಲುಪಲು ಸಾಧ್ಯವಾಯಿತು.

ಈ ಕಾರಣಕ್ಕಾಗಿ ಭಾರತದಲ್ಲಿ ಪತ್ರಿಕೋದ್ಯಮವೆಂಬುದು ವ್ಯವಹಾರದ ಅಥವಾ ಲಾಭದ ಉದ್ಯಮವಾಗದೆ, ಜನರನ್ನು ಪ್ರೇರೇಪಿಸುವ, ಅವರನ್ನು ತಿದ್ದುವ ಹಾಗೂ ಸರ್ಕಾರಗಳ ತಪ್ಪುಗಳನ್ನು ಎತ್ತಿತೋರಿಸುವ ಆದರ್ಶ ಗುಣಗಳನ್ನು ಹೊಂದಿತ್ತು. ಇದರ ಪರಿಣಾಮವೆಂಬಂತೆ ಭಾರತದ ಸ್ವಾತಂತ್ರ್ಯಕ್ಕೆ ಮುನ್ನ ಮತ್ತು ನಂತರದ ದಿನಗಳಲ್ಲಿ ದೇಶಾದ್ಯಂತ ಆರಂಭಗೊಂಡ ಅನೇಕ ಪತ್ರಿಕೆಗಳಲ್ಲಿ ಇಂದಿಗೂ ಇಂತಹ ಉದಾತ್ತ ಗುಣಗಳನ್ನು ನಾವು ಕಾಣಬಹುದಾಗಿದೆ.

‘ದ ಹಿಂದೂ’ ದಿನಪತ್ರಿಕೆಯು ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ಮತ್ತು ಮೂವರು ವಿದ್ಯಾವಂತ ವಕೀಲರಿಂದ 1878ರಲ್ಲಿ ಮದ್ರಾಸ್ ನಗರದಲ್ಲಿ ಆರಂಭಗೊಂಡಿತು. ಕೊಲ್ಕತ್ತ ನಗರದಲ್ಲಿ 1922ರಲ್ಲಿ ಪ್ರಫುಲ್ಲ ಕುಮಾರ್ ಮತ್ತು ಗೆಳೆಯರಿಂದ ಆರಂಭಗೊಂಡ ‘ಆನಂದ ಬಜಾರ್’ ಪತ್ರಿಕೆ ಮತ್ತು 1982ರಲ್ಲಿ ಪ್ರಾರಂಭವಾದ ‘ದ ಟೆಲಿಗ್ರಾಪ್’ ಪತ್ರಿಕೆ, ಬಾಂಬೆ ನಗರದಲ್ಲಿ 1931ರಲ್ಲಿ ರಾಮನಾಥ ಗೋಯಂಕ ಎಂಬ ಮಾರ್ವಾಡಿ ಸಮುದಾಯದ ವ್ಯಕ್ತಿಯಿಂದ ಆರಂಭವಾದ ‘ಇಂಡಿಯನ್ ಎಕ್ಸ್ ಪ್ರೆಸ್’ ದಿನಪತ್ರಿಕೆ, ಬೆಂಗಳೂರು ನಗರದಲ್ಲಿ 1947ರಲ್ಲಿ ಅಬಕಾರಿ ಉದ್ಯಮಿ ಕೆ.ಎನ್.ಗುರುಸ್ವಾಮಿಯವರಿಂದ ಆರಂಭವಾದ ‘ಡೆಕ್ಕನ್ ಹೆರಾಲ್ಡ್’ ಹಾಗೂ ಹತ್ತು ತಿಂಗಳ ನಂತರ 1948ರಲ್ಲಿ ಕನ್ನಡದಲ್ಲಿ ಆರಂಭವಾದ ‘ಪ್ರಜಾವಾಣಿ’, ಉತ್ತರ ಕರ್ನಾಟಕದಲ್ಲಿ 1921ರಲ್ಲಿ  ಮೊಹರೆ ಹಣಮಂತರಾಯರು ಸಮಾನ ಮನಸ್ಕರ ಜೊತೆ ಹುಟ್ಟು ಹಾಕಿದ ಲೋಕ ಶಿಕ್ಷಣ ಟ್ರಸ್ಟ್ ವತಿಯಿಂದ ಆರಂಭವಾದ ‘ಸಂಯುಕ್ತ ಕರ್ನಾಟ’ -ಹೀಗೆ ಸ್ಥಳೀಯ ಭಾಷೆಗಳ ಅನೇಕ ಪತ್ರಿಕೆಗಳನ್ನು ಉದಾಹರಿಸಬಹುದು.

ಭಾರತದ ಪತ್ರಿಕಾ ಇತಿಹಾಸದಲ್ಲಿ ಪತ್ರಿಕಾರಂಗವನ್ನು ಪ್ರವೇಶಿಸಿರುವ ಅನೇಕ ಮಹನೀಯರು ಉದ್ಯಮಿಗಳಾಗಿರುವುದು ವಿಶೇಷ. ಆದರೆ, ಅವರಿಗೆ ಪತ್ರಿಕೆಯ ಮೂಲಕ ಲಾಭಗಳಿಸುವುದಕ್ಕಿಂತ ಮಿಗಿಲಾಗಿ ಭಾರತೀಯ ಸಮಾಜವನ್ನು ಉದ್ಧರಿಸುವುದು ಮುಖ್ಯಗುರಿಯಾಗಿತ್ತು. ಓದುಗರ ವಿಶ್ವಾಸ ಅವರಿಗೆ ಲಾಭವಾಗಿತ್ತು. ಜಾಹೀರಾತುಗಳು ಇಲ್ಲದಿರುವ ಕಾಲಘಟ್ಟದಲ್ಲಿಯೂ ಅವರು ಯಾವ ಕಾರಣಕ್ಕೂ ಮುಖಪುಟದಲ್ಲಿ ಕಾಲು ಪುಟಕ್ಕಿಂತ ಹೆಚ್ಚಿನ ಜಾಗದಲ್ಲಿ ಜಾಹೀರಾತು ಪ್ರಕಟವಾಗಬಾರದು ಎಂಬ ಧೋರಣೆಯುಳ್ಳವರಾಗಿದ್ದರು. ಆದರೆ ಇಂದು ಜಾಹೀರಾತುಗಳಿಗೆ ಇಡೀ ಪುಟಗಳನ್ನು ಮಾತ್ರವಲ್ಲದೆ, ಪತ್ರಿಕೆಯ ಶೀರ್ಷಿಕೆಯನ್ನು ಒತ್ತೆ ನೀಡುವ ಧೋರಣೆ ಅಸ್ತಿತ್ವದಲ್ಲಿದೆ.

ಹಿಂದೆ ಸುದ್ದಿಗಳ ನಡುವೆ ಜಾಹೀರಾತುಗಳಿರುತ್ತಿದ್ದವು. ಈಗ ಜಾಹೀರಾತುಗಳ ನಡುವೆ ಸುದ್ದಿಗಳಿರುತ್ತವೆ. ಸುದ್ದಿಯ ಗುಣಮಟ್ಟ, ವಿಶ್ಲೇಷಣೆ ಮತ್ತು ಅದರ ವ್ಯಾಪ್ತಿಯನ್ನು ಕುಗ್ಗಿಸಿ ಓದುಗರಿಗೆ ಮನರಂಜನೆಯ ಸರಕುಗಳಾಗಿ ಪತ್ರಿಕೆಗಳು ಮಾರಾಟವಾಗುತ್ತಿವೆ. ದೃಶ್ಯ ಮಾಧ್ಯಮಗಳು ಚಾಲ್ತಿಗೆ ಬಂದ ನಂತರ ಪತ್ರಿಕೋದ್ಯಮವೆನ್ನುವುದು ಆಳುವವರ ಮತ್ತು ಉದ್ಯಮಿಗಳ ಹಾಗೂ ರಾಜಕಾರಣಿಗಳ ಬಣ್ಣದ ತಗಡಿನ ತುತ್ತೂರಿಯಾಗಿ ಪರಿವರ್ತನೆ ಹೊಂದಿದೆ.

ಸದ್ಯದ ಭಾರತದಲ್ಲಿ ಮುದ್ರಣ ಮಾಧ್ಯಮವನ್ನು ಹೊರತು ಪಡಿಸಿದರೆ, ದೃಶ್ಯ ಮಾಧ್ಯಮಗಳು ವಿಶೇಷವಾಗಿ ಸುದ್ದಿಚಾನಲ್ ಗಳು ಮುಖೇಶ್ ಅಂಬಾನಿ, ಸುಭಾಶ್ ಚಂದ್ರ ಹಾಗೂ ದಕ್ಷಿಣ ಭಾರತದಲ್ಲಿ ಕಲಾನಿಧಿ ಮಾರನ್ ಇವರ ಒಡೆತನದಲ್ಲಿ ಶೇಕಡ ಎಂಬತ್ತರಷ್ಟು ಇದ್ದರೆ, ಇನ್ನು ಉಳಿದ ಶೇಕಡ ಇಪ್ಪತ್ತರಷ್ಟು ಮಾಧ್ಯಮಗಳು ಆಯಾ ರಾಜ್ಯಗಳ ಸಂಸದರು, ಸಚಿವರ ಮಾಲೀಕತ್ವದಲ್ಲಿವೆ. ತಮಗೆ ಬೇಕಾದ ವರದಿ ಪ್ರಸಾರ ಮಾಡುವುದು, ಬೇಡವಾದ ಸುದ್ದಿಯನ್ನು ಯಾವುದೇ ಮುಲಾಜಿಲ್ಲದೆ ನಿರಾಕರಿಸುವ ತಂತ್ರಗಾರಿಕೆ ಈಗಲೂ ಜಾರಿಯಲ್ಲಿದೆ. ಹಾಗಾಗಿ ಇಂದಿನ ವರ್ತಮಾನದ ಭಾರತದಲ್ಲಿ ಪತ್ರಿಕೋದ್ಯಮದ ಕಸುಬುದಾರಿಕೆಯ ಗುಣಲಕ್ಷಣಗಳು ಏನಾದರೂ ಉಳಿದಿದ್ದರೆ ಅದು ಮುದ್ರಣ ಮಾಧ್ಯಮದಲ್ಲಿ ಮಾತ್ರ.

ಇತ್ತೀಚೆಗಿನ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಭಾರತದ ಪತ್ರಿಕೋದ್ಯಮವನ್ನು ವಿಮರ್ಶೆಗೆ ಒಳಪಡಿಸಿದರೆ, ಬದ್ಧತೆ ಎನ್ನುವುದು ಪತ್ರಿಕಾ ರಂಗದಲ್ಲಿ ಕೇವಲ ಶೇಕಡಾ ಹತ್ತರಷ್ಟು ಉಳಿದಿದೆ ಎನ್ನಬಹುದು. ಇದಕ್ಕೆ ಉದಾಹರಣೆಯಾಗಿ ಮೂರು ಸಂಗತಿಗಳನ್ನು ನಾನಿಲ್ಲಿ ಓದುಗರ ಮುಂದಿಡಬಯಸುತ್ತೇನೆ.

ಘಟನೆ ಒಂದು: 1992 ರಿಂದ ನಿರಂತರ 28 ವರ್ಷಗಳ ಕಾಲ ಭಾರತದ ಸರ್ವೊಚ್ಚ ನ್ಯಾಯಾಲಯದಲ್ಲಿ ನಡೆದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸದ ಹಗರಣ ಕುರಿತಂತೆ ಕಳೆದ ವರ್ಷ ಮುಖ್ಯ ನ್ಯಾಯಮೂರ್ತಿ ಒಳಗೊಂಡ ಸಂವಿಧಾನ ಪೀಠವು ಒಂದು ರೀತಿಯಲ್ಲಿ ಎರಡು ಬಣಗಳಿಗೆ ತೃಪ್ತಿಯಾಗುವಂತೆ ಐತಿಹಾಸಿಕ ತೀರ್ಪು ನೀಡಿತು. ಈ ಸಂದರ್ಭದಲ್ಲಿ ಇನ್ನು ಮುಂದೆ  ಭಾರತದಲ್ಲಿ ಎರಡು ಧರ್ಮಗಳ ಪ್ರಾರ್ಥನಾ ಮಂದಿರಗಳು ಆಯಾ ಕಾಲಘಟ್ಟದ ಹಾಗೂ ಪ್ರಾದೇಶಿಕ ಜನತೆಯ ಭಾವೈಕ್ಯದ ಆಧಾರದ ಮೇಲೆ ಅಕ್ಕ ಪಕ್ಕ ಇದ್ದರೆ, ಅವುಗಳ ಅಸ್ತಿತ್ವವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಏರಬಾರದು ಎಂದು ಹೇಳಲಾಗಿತ್ತು.

ಆದರೆ, ಈ ಮಹತ್ವದ ಸಂಗತಿಯನ್ನು ಮರೆತ ಸಂಘ ಪರಿವಾರ ವಾರಾಣಸಿಯ ಕಾಶಿ ವಿಶ್ವನಾಥ ದೇಗುಲ ಹಿಂಭಾಗ ಇರುವ ಹಾಗೂ ಮಥುರಾದಲ್ಲಿ ಕೃಷ್ಣ ಮಂದಿರ ಸನಿಹ ಇರುವ ಮಸೀದಿಗಳ ಬಗ್ಗೆ ಮತ್ತೇ ತಕರಾರು ತೆಗೆದಿದೆ. ಇದು ಸಾಲದೆಂಬಂತೆ ಭಾರತೀಯ ಪುರಾತತ್ವ ಇಲಾಖೆಯು ವಾರಾಣಸಿ ನಗರದಲ್ಲಿ ಸಂಶೋಧನೆಗೆ ಅನುಮತಿ ನೀಡಿದೆ. ಈ ವಿಷಯದಲ್ಲಿ ಬಹುತೇಕ ಮಾಧ್ಯಮಗಳು ಮೌನ ವಹಿಸಿದ ಸಂಧರ್ಭದಲ್ಲಿ ‘ದ ಹಿಂದೂ’ ಇಂಗ್ಲಿಷ್ ದಿನಪತ್ರಿಕೆ ಸಂಪಾದಕಿಯ ಲೇಖನ ಬರೆದು ಸಂಘ ಪರಿವಾದ ತಪ್ಪುಗಳನ್ನು ಎತ್ತಿ ತೋರಿಸಿತು.

ಇಷ್ಟು ಮಾತ್ರವಲ್ಲದೆ, ಬಾಬರಿ ಮಸೀದಿ ಕೆಳಗೆ ರಾಮನ ಮಂದಿರವಿತ್ತು ಎಂದು ಕಳೆದ ಮೂರು ದಶಕಗಳಿಂದ ವಾದಿಸಿಕೊಂಡು ಬಂದ ಹಿಂದೂ ಮುಖಂಡರಿಗೆ ನಾಚಿಕೆಯಾಗುವಂತೆ, ರಾಮಮಂದಿರದ ನಿರ್ಮಾಣದ ಅಡಿಪಾಯಕ್ಕೆ ಅಯೋಧ್ಯೆಯಲ್ಲಿ ಆಳವಾದ ಗುಂಡಿಗಳನ್ನು ತೆಗೆದಾಗ ಅಲ್ಲಿ ದೊರೆತದ್ದು ಸರಯೂ ನದಿಯ ಜಲಮೂಲದ ತಾಣವೇ ಹೊರತು ರಾಮಮಂದಿರದ ಅವಶೇಷಗಳಲ್ಲ. ಈ ಸುದ್ದಿಯನ್ನು ಪ್ರಸಾರ ಮಾಡುವಲ್ಲಿ ಬಹುತೇಕ ಮಾಧ್ಯಮಗಳು ಹಿಂದುಳಿದವು. ಇದು ಪ್ರಜ್ಞಾವಂತ ನಾಗರಿಕರಲ್ಲಿ ಪತ್ರಿಕೋದ್ಯಮ ಕುರಿತಂತೆ ಜುಗುಪ್ಸೆಯನ್ನು ಹುಟ್ಟು ಹಾಕಿತು.

ಘಟನೆ ಎರಡು: ಕೊರೊನಾ ವೈರಸ್ ಕಳೆದ ವರ್ಷದ ಫೆಬ್ರವರಿಯಲ್ಲಿ ಭಾರತಕ್ಕೆ ಆವರಿಸಿತು. ಏಪ್ರಿಲ್ ಮಾಸದಲ್ಲಿ ಆತಂಕ ಹುಟ್ಟಿಸಿ ನಂತರ ಸ್ವಲ್ಪ ಪ್ರಮಾಣದಲ್ಲಿ ತಣ್ಣಗಾಗಿತ್ತು. ಕೊರೊನಾ ವೈರಸ್ ನ ಎರಡನೇ ಅಲೆಯು ಸದ್ಯದಲ್ಲೇ ಎದುರಾಗಲಿದೆ ಎಂದು ತಜ್ಞ ವೈದ್ಯರು ಹಾಗೂ ಅಂತರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಎಚ್ಚರಿಸಿದರೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಲಹೆಯನ್ನು ಸಂಪೂರ್ಣವಾಗಿ ಕಡೆಗಣಿಸಿತು. ಮಹಾ ಕುಂಭಮೇಳ, ರಥೋತ್ಸವ, ದೇವರ ಮೆರವಣಿಗೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರನ್ನು ಒಟ್ಟಿಗೆ ಸೇರಿಸಿ ಜನಸ್ತೋಮವನ್ನು ಕಂಡು ಸಂಭ್ರಮಿಸಿದ ರೀತಿ -ಇವೆಲ್ಲವೂ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾದವು. ಬೆರಳೆಣಿಕೆಯಷ್ಟು ಮಾಧ್ಯಮಗಳನ್ನು ಹೊರತು ಪಡಿಸಿದರೆ, ಇಂದು ಭಾರತ ಅನುಭವಿಸುತ್ತಿರುವ ದುರಂತಕ್ಕೆ ಮೋದಿ ಸರ್ಕಾರದ ವೈಫಲ್ಯ ಕಾರಣ ಎಂದು ಹೇಳುವ ನೈತಿಕ ತಾಕತ್ತು ಯಾರಿಗೂ ಇಲ್ಲವಾಗಿದೆ. ನರೇಂದ್ರ ಮೋದಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಭಾರತ ಇದೀಗ ಮೂರು ದಶಕಗಳ ಹಿಂದಿನ ಬಡತನದ ವ್ಯವಸ್ಥೆಗೆ ದೂಡಲ್ಪಟ್ಟಿದೆ.

ಘಟನೆ ಮೂರು: ಕೊನೆಯದಾಗಿ ಇದು ಕರ್ನಾಟಕಕ್ಕೆ ಸಂಬಂಧ ಪಟ್ಟ ಘಟನೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದರೆ ಅಭಿವೃದ್ಧಿಗೆ ಸಹಕಾರವಾಗುತ್ತದೆ ಎಂದು ಬೊಬ್ಬೆಯಿಟ್ಟ ರಾಜ್ಯ ಬಿ.ಜೆಪಿ. ನಾಯಕರು ಇಂದು ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದ್ದರೂ ತಮ್ಮ ಪಂಚೆಂದ್ರಿಯಗಳನ್ನು ಮುಚ್ಚಿ ಕುಳಿತಿದ್ದಾರೆ. ರಾಜ್ಯದ ತೆರಿಗೆ ಪಾಲನ್ನು (ಜಿ.ಎಸ್.ಟಿ.) ಈವರೆಗೆ ನೀಡಿಲ್ಲ. ಕೋವಿಡ್ ಸಮಸ್ಯೆಯಿಂದ ಜನತೆ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪುತ್ತಿದ್ದರೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕುರಿತಂತೆ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳು ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ.

ಮಾಧ್ಯಮಗಳು ನಿರ್ವಹಿಸಬೇಕಾದ ಜವಾಬ್ದಾರಿಯನ್ನು ನ್ಯಾಯಾಲಯಗಳು ಸಮರ್ಪಕವಾಗಿ ನಿರ್ವಹಿಸಿದವು. ಸುಪ್ರಿಂ ಕೋರ್ಟ್ ಹಾಗೂ ರಾಜ್ಯ ಹೈಕೋರ್ಟುಗಳ ಮಧ್ಯ ಪ್ರವೇಶದಿಂದ ರಾಜ್ಯದ ಜನತೆಗೆ ಲಸಿಕೆ ಹಾಗೂ ಆಮ್ಲಜನಕ ದೊರೆಯುವಂತಾಯಿತು. ಕೇವಲ ಸಾವಿನ ವರದಿಯನ್ನು ಪ್ರಕಟಿಸಿದರೆ ಮಾತ್ರ ಅದು ಪತ್ರಿಕೋದ್ಯಮವಲ್ಲ. ಸಾವಿನ ಹಿಂದಿನ ಘಟನೆಗಳ ಮೇಲೆ ಬೆಳಕು ಚೆಲ್ಲಿದಾಗ ಮಾತ್ರ ಸುಧಾರಣೆ ಸಾಧ್ಯ. ಅಂತಹ ಮಾನವೀಯ ನೆಲೆಯ ಪತ್ರಿಕೋದ್ಯಮ ನಶಿಸಿಹೋಗಿ ಮೂರು ದಶಕವಾಯಿತು.

1980ರ ದಶಕದಲ್ಲಿ ಗುಂಡೂರಾವ್ ಸರ್ಕಾರದ ವಿರುದ್ಧ ಧ್ವನಿಯೆತ್ತಿ ರಾಜ್ಯದ ಜನತೆಯನ್ನು ಎಚ್ಚರಿಸಿ ಸರ್ಕಾರದ ಬದಲಾವಣೆಗೆ ಕಾರಣವಾದ ಲಂಕೇಶ್ ಪತ್ರಿಕೆ ಮತ್ತು ಪಿ.ಲಂಕೇಶರು ಇಂದಿಗೂ ನಮಗೆ ಮಾದರಿಯಾಗಿದ್ದಾರೆ. ಅವರು ತಮ್ಮ ಕೊನೆಯ ದಿನಗಳಲ್ಲಿ ಅಂದರೆ 1998ರ ಸಮಯದಲ್ಲಿ ಪತ್ರಿಕೋದ್ಯಮ ಕುರಿತು ಆಡಿದ “ತಗ್ಗಿ ಬಗ್ಗಿ ನಡೆಯಿರಿ ಎಂದರೆ, ಪತ್ರಕರ್ತರು ಉಳ್ಳವರ ಕಾಲು ಬಳಿ ತೆವಳಲು ಆರಂಭಿಸಿದ್ದಾರೆ” ಎಂಬ ಮಾತು ಈಗ ನಿಜವಾಗಿದೆ. ಪ್ರಸಿದ್ಧ ದೇಗುಲಗಳ ಸುತ್ತ ಉರುಳುಸೇವೆ ಮಾಡುತ್ತಾ ಭಜನೆ ಮಾಡುವ ಭಕ್ತರ ರೀತಿಯಲ್ಲಿ ಇಂದಿನ ಬಹುತೇಕ ಮಾಧ್ಯಮಗಳು ಉಳ್ಳವರ ಭಜನೆಯಲ್ಲಿ ನಿರತವಾಗಿವೆ.

*ಲೇಖಕರು ಮಂಡ್ಯ ಜಿಲ್ಲೆ ಕೊಪ್ಪ ಗ್ರಾಮದವರು; ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದ ಅನುಭವೀ ಪತ್ರಕರ್ತರು, ಮೈಸೂರಿನಲ್ಲಿ ವಾಸ.

Leave a Reply

Your email address will not be published.