ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ

ಸನತ್ ಕುಮಾರ ಬೆಳಗಲಿ

ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ದೇಶದ ಬಹುಸಂಖ್ಯಾತ ಸಮುದಾಯದ ಮೇಲಿದೆ. ಮುಸಲ್ಮಾನರ ತಬ್ಬಲಿತನ ಮಾಯವಾಗಬೇಕಾದರೆ ಅವರಿಗೆ ತಾಯ್ತನದ ಸ್ಪರ್ಶ ನೀಡುವ ಮನಸ್ಸು ಬಹುಸಂಖ್ಯಾತ ಸಮುದಾಯದ ಮೇಲ್ವರ್ಗಗಳಲ್ಲಿ ಮೂಡಬೇಕಾಗಿದೆ.

ನಾನು ಅವಿಭಜಿತ ಬಿಜಾಪುರ ಜಿಲ್ಲೆಯ ಹಳ್ಳಿಯೊಂದರಿಂದ ಬಂದವನು. ಲಿಂಗಾಯತರು, ಕುರುಬರು, ಜೈನರು, ಬ್ರಾಹ್ಮಣರು ಮತ್ತು ಮುಸಲ್ಮಾನರು ಜೊತೆಯಾಗಿ ಬದುಕಿದ ದಿನಗಳನ್ನು ಕಣ್ಣಾರೆ ಕಂಡವನು. ಬಿಜಾಪುರದಿಂದಸಂಯುಕ್ತ ಕರ್ನಾಟಕ ನೌಕರಿ ಸೇರಿ ಹುಬ್ಬಳ್ಳಿಗೆ ಬಂದಾಗಲೂ ಮುಸಲ್ಮಾನರು ನಮ್ಮ ಮನೆಯ ಅಕ್ಕಪಕ್ಕದಲ್ಲಿ ಇದ್ದರು. ಅವರ ರಮಜಾನ್, ಮೊಹರಮ್ ಬಂದರೆ ನಮ್ಮ ಮನೆಗೆ ಊಟದ ತಟ್ಟೆಗಳು ಬರುತ್ತಿದ್ದವು. ನಮ್ಮ ಮನೆಯಲ್ಲಿ ದೀಪಾವಳಿ, ಯುಗಾದಿ ಮಾಡಿದರೆ ಅವರ ಮನೆಗೆ ಊಟದ ತಟ್ಟೆಗಳು ಹೋಗುತ್ತಿದ್ದವು. ಬಾಲ್ಯದಲ್ಲಿ ಮೊಹರಮ್ ಕುಣಿತದಲ್ಲಿ ಲಿಂಗಾಯತ, ಕುರುಬರು, ನಾಯಕರ ಹುಡುಗರನ್ನು ಕಂಡವನು. ಬಸವನ ಬಾಗೇವಾಡಿ ಬಸವಣ್ಣನ ಜಾತ್ರೆಯಲ್ಲಿ, ಹುಬ್ಬಳ್ಳಿಯ ಸಿದ್ಧಾರೂಢರ ತೇರು ಎಳೆಯುವಾಗ ಮುಸ್ಲಿಮರ ಸಂಭ್ರಮ ನೋಡಿದವನು.

ಆದರೆ ಅಂದಿನ ದಿನಗಳು ಈಗ ನೆನಪು ಮಾತ್ರ. ಮುಸಲ್ಮಾನರು ಮತ್ತು ಇತರ ಸಮುದಾಯಗಳ ನಡುವೆ ಸಂಶಯದ ಗೋಡೆಯೊಂದು ಎದ್ದು ನಿಂತಿದೆ. ಇದು ತಾನಾಗಿ ಎದ್ದು ನಿಂತಿಲ್ಲ. ರಾಜಕೀಯ ಉದ್ದೇಶಗಳಿಗಾಗಿ ಕಂದಕ ತೂಡಿ ನಿಲ್ಲಿಸಿದ ಗೋಡೆ ಇದು. ಆಗ ಲಿಂಗಾಯತರು, ಕುರುಬರು, ನಾಯಕರು ಎಂದೆಲ್ಲ ಕರೆಯಲ್ಪಡುತ್ತಿದ್ದವರು ಈಗ ಹಿಂದೂ ಬೋರ್ಡನ್ನು ಕೊರಳಿಗೆ ಹಾಕಿಕೊಂಡಿದ್ದಾರೆ. ನಗರ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿ ಹಿಂದಿನಂತಿಲ್ಲ.

ಸೀತೆ ತನ್ನ ಪಾತಿವ್ರತ್ಯದ ಅಗ್ನಿಪರೀಕ್ಷೆಗೆ ಗುರಿಯಾದಂತೆ ಮುಸಲ್ಮಾನರು ನಿತ್ಯವೂ ತಮ್ಮ ರಾಷ್ಟ್ರಭಕ್ತಿಯನ್ನು ಸಾಬೀತು ಪಡಿಸುತ್ತ ದೇಶದಲ್ಲಿ ಬದುಕಬೇಕಾಗಿದೆ. ಎಲ್ಲೇ ಬಾಂಬ್ ಸ್ಫೋಟವಾದರೂ ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಅಮಾಯಕ ಮುಸಲ್ಮಾನರು ಅಂಟಿಸಿಕೊಳ್ಳಬೇಕಾಗಿದೆ. ಉದಾಹರಣೆಗೆ ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿಯ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಫೋಟವಾದಾಗ ಜಿಹಾದಿಗಳ ಕೈವಾಡ ಎಂದು ಒಂದು ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಕೆಲ ಅಮಾಯಕರ ಬಂಧನವೂ ನಡೆಯಿತು. ಆದರೆ ಪ್ರಕರಣದ ತನಿಖೆ ನಡೆದ ನಂತರ ಬಯಲಾದದ್ದು ಬಲಪಂಥೀಯ ಕೋಮುವಾದಿ ಶಕ್ತಿಗಳ ಕೈವಾಡ. ಸ್ಫೋಟ ಮಾಡಿ ಅದನ್ನು ಒಂದು ಅಲ್ಪಸಂಖ್ಯಾತ ಸಮುದಾಯದ ತಲೆಗೆ ಕಟ್ಟಲು ಸಂಚು ಹೆಣೆಯಲಾಗಿತ್ತು. ಸಂಚು ಬಯಲಾಗಿ ಸದರಿ ಕೋಮುವಾದಿ ಸಂಘಟನೆಗಳ ಕಾರ್ಯಕರ್ತರ ಬಂಧನವೂ ನಡೆಯಿತು.

ತೊಂಬತ್ತರ ದಶಕದಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ನೆಲಸಮಗೊಂಡ ನಂತರ ಬಹುಮುಖಿ ಭಾರತದ ಪರಿಸ್ಥಿತಿ ಬದಲಾಗಿದೆ. ಧರ್ಮದ ಆಧಾರದಲ್ಲಿ ಭಾರತೀಯರನ್ನು ವಿಭಜಿಸುವಲ್ಲಿ ಕೋಮುವಾದಿ ಶಕ್ತಿಗಳು ಯಶಸ್ವಿಯಾಗಿವೆ. ವಿಭಜನೆಯ ಮೊದಲ ಬಲಿಪಶುಗಳು ಅಲ್ಪಸಂಖ್ಯಾತರಾಗಿದ್ದಾರೆ, ಅದರಲ್ಲೂ ಮುಸಲ್ಮಾನರ ಪರಿಸ್ಥಿತಿ ದಾರುಣವಾಗಿದೆ. ಆರ್ಥಿಕವಾಗಿ ಸಾಮಾಜಿಕವಾಗಿ ಅವರ ಜೀವನ ಮಟ್ಟ ಕುಸಿದಿದೆ. ಆದರೆ ಅದನ್ನು ಬಾಯಿ ಬಿಟ್ಟು ಹೇಳುವ ಕೇಳುವ ಸ್ಥಿತಿಯಲ್ಲೂ ಅವರಿಲ್ಲ. ಏಕೆಂದರೆ ಈಗ ಅವರ ಮುಂದಿರುವ ಸವಾಲು ಬೇರೆಯದಾಗಿದೆ.

ಇದು ಒಂದು ಉದಾಹರಣೆ ಮಾತ್ರ. ಗೊಹತ್ಯೆ ನಿಷೇಧ, ದನಗಳ ಸಾಗಾಟ, ಲವ್ ಜಿಹಾದ್, ಮುಂತಾದ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಮೇಲೆ ದಾಳಿ ಹಲ್ಲೆಗಳು ನಡೆಯುತ್ತಲೇ ಇವೆ. ಮನೆಯ ಫ್ರಿಡ್ಜ್ ನಲ್ಲಿ ಗೋವಿನ ಮಾಂಸ ತಂದಿಡಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿಸಿ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬ ಅಮಾಯಕ ವ್ಯಕ್ತಿಯ ಹತ್ಯೆ ನಡೆಯಿತು. ಇಂಥ ಒಂದಲ್ಲ ಎರಡಲ್ಲ ನೂರಾರು ಉದಾಹರಣೆಗಳನ್ನು ಕೊಡಬಹುದು.

ಮುಸಲ್ಮಾನರ ದಾರುಣ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ನ್ಯಾಯಮೂರ್ತಿ ರಾಜೀಂದರ ಸಾಚಾರ ಹಾಗೂ ನ್ಯಾಯಮೂರ್ತಿ ರಂಗನಾಥ ಮಿಶ್ರಾ ನೇತೃತ್ವದ ಸಮೀತಿಗûಳು ಆಳವಾದ ಮತ್ತು ಸಮಗ್ರವಾದ ಅಧ್ಯಯನ ನಡೆಸಿ ವಾಸ್ತವ ಪರಿಸ್ಥಿತಿಗೆ ಕನ್ನಡಿ ಹಿಡಿದಿವೆ. ಕೇಂದ್ರ ಸರ್ಕಾರದ ನೌಕರಿಗಳಲ್ಲಿ ಶೇಕಡಾ 2 ರಷ್ಟು ಕೂಡ ಮುಸಲ್ಮಾನರಿಲ್ಲ. ನಿರಕ್ಷರತೆ ಸಮುದಾಯದದಲ್ಲಿ ತಾಂಡವವಾಡುತ್ತಿದೆ. ಬಹುತೇಕ ಮುಸಲ್ಮಾನ ಯುವಕರು ಸರಕಾರಿ ನೌಕರಿಗಳನ್ನು ಅವಲಂಬಿಸದೇ ಗ್ಯಾರೇಜುಗಳಲ್ಲಿ, ಸೈಕಲ್ ರಿಪೇರಿ ಮಾಡುವ ಅಂಗಡಿಗಳಲ್ಲಿ, ಹೊಟೇಲುಗಳಲ್ಲಿ, ಬೀಡಿ ಮತ್ತಿತರ ಸಣ್ಣಪುಟ್ಟ ಕೈಗಾರಿಕೆಗಳಲ್ಲಿ ಹಗಲೂ ರಾತ್ರಿ ದುಡಿಯುತ್ತಾರೆ. ಯಾರೋ ಒಬ್ಬಿಬ್ಬರು ಅಜೀಮ್ ಪ್ರೇಮಜಿ ಅಂಥವರು ಇರಬಹುದು. ಆದರೆ ಶೇಕಡಾ 99 ರಷ್ಟು ಮುಸಲ್ಮಾನರು ಕಡು ಬಡತನದಲ್ಲಿ ಇದ್ದಾರೆ.

ಭಾರತದಲ್ಲಿ ಬಲಪಂಥೀಯ ಕೋಮುವಾದಿ ಶಕ್ತಿಗಳು ಬಲಿಷ್ಠವಾಗಿ ಇಡೀ ಭಾರತೀಯ ಸಮಾಜ ಕೋಮುವಾದೀಕರಣಗೊಳ್ಳುತ್ತಿರುವ ದಿನಗಳಲ್ಲಿ ಮುಸಲ್ಮಾನರ ಬೇಡಿಕೆ ಆರ್ಥಿಕ ಸಾಮಾಜಿಕ ನ್ಯಾಯವಲ್ಲ. ಭಾರತದಲ್ಲಿ ಸುರಕ್ಷಿತವಾಗಿ ಬದುಕುವಂಥ ವಾತಾವರಣ ಬೇಕೆಂಬುದು ಅವರ ಬೇಡಿಕೆಯಾಗಿದೆ. ನಿತ್ಯವೂ ಕೋಮುವಾದಿ ಶಕ್ತಿಗಳಿಂದ ರಕ್ಷಣೆ ನೀಡಿದರೆ ಸಾಕು ಹೇಗೋ ಬದುಕು ಕಟ್ಟಿಕೊಳ್ಳುತ್ತೇವೆ ಎಂಬುದು ಅವರ ಆಗ್ರಹವಾಗಿದೆ.

ಅಲ್ಪಸಂಖ್ಯಾತರ ಅದರಲ್ಲೂ ಮುಸಲ್ಮಾನರ ಶೋಚನೀಯ ಪರಿಸ್ಥಿತಿಯ ಬಗ್ಗೆ ಸ್ವಾತಂತ್ರ್ಯ ನಂತರ ಅನೇಕ ತಜ್ಞರ ಸಮಿತಿಗಳು ಅಧ್ಯಯನ ಮಾಡಿ ವರದಿಗಳನ್ನು ನೀಡಿವೆ. 2006ರಲ್ಲಿ ನ್ಯಾಯಮೂರ್ತಿ ರಾಜೀಂದರ ಸಾಚಾರ ನೇತೃತ್ವದ ಸಮಿತಿ ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಮುಸಲ್ಮಾನರ ಪರಿಸ್ಥಿತಿ ದಲಿತರಿಗಿಂಥ ಹೀನಾಯ ವಾಗಿದೆ. ಅವರ ಜನಸಂಖ್ಯೆಗೆ ಅನುಗುಣವಾಗಿ ಸರಕಾರಿ ನೌಕರಿಯಲ್ಲಿ ನ್ಯಾಯವಾದ ಪಾಲು ಅವರಿಗೆ ಸಿಕ್ಕಿಲ್ಲ. ನಂತರ ರಚಿಸಲ್ಪಟ್ಟ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಅವರ ನೇತೃತ್ವದ ಸಮಿತಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮುಸಲ್ಮಾನರಿಗೆ ಶೇಕಡಾ 10 ರಷ್ಟು ಮೀಸಲು ನೀಡಬೇಕೆಂದು ಶಿಫಾರಸು ಮಾಡಿತ್ತು.

ಅನ್ಯಾಯಕ್ಕೊಳಗಾದ ಮುಸಲ್ಮಾನ ಸಮುದಾಯಗಳಿಗೆ ಮೀಸಲು ಸೌಕರ್ಯ ಒದಗಿಸಲು ನ್ಯಾಯಮೂರ್ತಿ ಸಾಚಾರ ಮತ್ತು ನ್ಯಾಯಮೂರ್ತಿ ರಂಗನಾಥ ಮಿಶ್ರಾ ವರದಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದರೂ ಶಿಫಾರಸುಗಳು ಸರ್ಕಾರದ ಕಡತಗಳಲ್ಲಿ ದೂಳು ತಿನ್ನುತ್ತ ಬಿದ್ದಿವೆ.

ಆದರೆ ಕೆಲವು ಮತೀಯವಾದಿ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಮಾಡುತ್ತಿರುವ ಆರೋಪವೇ ಬೇರೆ. ಅವರ ಪ್ರಕಾರ ಸರ್ಕಾರ ಮುಸಲ್ಮಾನರ ಬಗ್ಗೆ ತುಷ್ಟೀಕರಣ ನೀತಿ ಅನುಸರಿಸುತ್ತ ಬಂದಿದೆ ಎಂಬುದು ಅವರ ಆಕ್ಷೇಪವಾಗಿದೆ. ಇದಕ್ಕೆ ಅವರ ಕೊಡುವ ಉದಾಹರಣೆ ಶಾಬಾನು ಪ್ರಕರಣದಲ್ಲಿ ರಾಜೀವ ಗಾಂಧಿ ಸರ್ಕಾರ ಅನುಸರಿಸಿದ ಹಾಗೂ ಕೈಗೊಂಡ ಕ್ರಮಗಳಾಗಿವೆ.

ಭಾರತದ ಮುಸಲ್ಮಾನರು ಹಿಂದುಗಳಿಗೆ ಇರುವ ಯಾವ ನಾಗರಿಕ ಸೌಕರ್ಯವನ್ನು ಕೇಳದೇ ಎರಡನೇ ದರ್ಜೆಯ ಪ್ರಜೆಗಳಂತೆ ಇರಬೇಕುಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇ ಸರ ಸಂಘಚಾಲಕರಾದ ಮಾಧವ ಸದಾಶಿವ ಗೊಳ್ವಲಕರ್ (ಗುರೂಜಿ) ಪ್ರತಿಪಾದಿಸಿದ್ದಾರೆ. ಅವರ ಸಿದ್ಧಾಂತವನ್ನು ನಂಬುವ ಪಕ್ಷ ಅಧಿಕಾರದಲ್ಲಿರುವದರಿಂದ ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಆಧುನಿಕ ಭಾರತವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಒಂದು ಬಹುದೊಡ್ಡ ಸಮುದಾಯದಲ್ಲಿ ಭೀತಿಯ ವಾತಾವರಣ ನಿರ್ಮಾಣ ಮಾಡಲಾಗಿದೆ.

ಮುಸಲ್ಮಾನರ ಮತ ಪಡೆದು ಅಧಿಕಾರಕ್ಕೆ ಬರುವ ಪಕ್ಷಗಳು ಕೂಡ ಮುಸ್ಲಿಂ ರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲು ಹಿಂದೇಟು ಹಾಕುತ್ತಿವೆ. ರಾಜ್ಯಗಳ ಶಾಸನ ಸಭೆಗಳಲ್ಲಿ, ಲೋಕಸಭೆಯಲ್ಲಿ ಮುಸಲ್ಮಾನರ ಪ್ರಾತಿನಿಧ್ಯ ಅತ್ಯಂತ ಕಡಿಮೆ. ಸ್ವಾತಂತ್ರ್ಯ ನಂತರ ವರ್ಷದಿಂದ ವರ್ಷಕ್ಕೆ ಶಾಸನ ಸಭೆಗಳಲ್ಲಿ ಅವರ ಪ್ರಾತಿನಿಧ್ಯ ಕುಸಿಯುತ್ತಲೇ ಇದೆ.

ಭೀತಿಯ ವಾತಾವರಣದಿಂದಾಗಿ ಹೊಸ ಪೀಳಿಗೆಯ ಬಹುತೇಕ ಮುಸಲ್ಮಾನ ಯುವಕರಲ್ಲಿ ಒಂದು ವಿಧದ ಒಂಟಿತನ ಅಥವಾ ತಬ್ಬಲಿತನ ಕಾಡುತ್ತಿದೆ. ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಬಾಬಾಸಾಹೇಬ ಅಂಬೇಡ್ಕರ್ ನಡುವೆ ನಡೆದ ಮಾತುಕತೆಯೊಂದು ನೆನಪಿಗೆ ಬರುತ್ತಿದೆ.

ಲಂಡನ್ ದುಂಡು ಮೇಜಿನ ಸಭೆಗೆ ಹೋಗಿ ವಾಪಸಾದ ನಂತರ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಮುಖಮುಖಿಯಾದ ಸಂದರ್ಭದಲ್ಲಿ ಗಾಂಧೀಜಿ ಅಂಬೇಡ್ಕರ್ ಅವರಿಗೆ ನಿಮಗೆ ಮಾತೃಭೂಮಿ ಇದೆಎಂದು ಹೇಳುತ್ತಾರೆ. ಮಾತಿಗೆ ತಿರುಗೇಟು ನೀಡಿದ ಅಂಬೇಡ್ಕರ್ ನನಗೆ ಮಾತೃಭೂಮಿ ಇದೆ ಎನ್ನುತ್ತೀರಿ. ಆದರೆ ಮತ್ತೆ ಮತ್ತೆ ಹೇಳುತ್ತೇನೆ ನನಗೆ ಮಾತೃಭೂಮಿ ಇಲ್ಲ. ನಾಯಿ ಬೆಕ್ಕುಗಳಿಗಿಂತ ಕೀಳಾಗಿ ಕಾಣುವ ಕುಡಿಯಲು ಹನಿ ನೀರು ಕೊಡದ ಇದನ್ನು ನನ್ನ ತಾಯಿ ನೆಲವೆಂದು ಹೇಗೆ ಕರೆಯಲಿ?” ಎಂದು ವಾಪಸು ಪ್ರಶ್ನಿಸುತ್ತಾರೆ. ಭಾರತದ ಮುಸಲ್ಮಾನರ ಪರಿಸ್ಥಿತಿಯೂ ಇಂದು ಅದೇ ಆಗಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ ತಂದು ಅವರ ನಾಗರಿಕತ್ವವನ್ನೇ ಅಪಹರಣ ಮಾಡುವ ಹುನ್ನಾರ ನಡೆದಿರುವ ದಿನಗಳಲ್ಲಿ ಮುಸಲ್ಮಾನರಿಗೆ ಆರ್ಥಿಕ ಸಾಮಾಜಿಕ ನ್ಯಾಯಕ್ಕಿಂತ ಮುಖ್ಯವಾಗಿ ನಿಂತ ನೆಲ ಕುಸಿಯದಂತೆ ಸುರಕ್ಷಿತವಾಗಿರಬೇಕಾಗಿದೆ.

ಇಲ್ಲಿನ ಮುಸಲ್ಮಾನರು ಅರಬ್ ದೇಶಗಳಿಂದ ಬಂದವರಲ್ಲ. ಅವರು ಒತ್ತಾಯದಿಂದ ಮತಾಂತರ ಆದವರೂ ಅಲ್ಲ. ಈಗ ಹಿಂದು ಎಂದು ಹೆಸರು ಬದಲಿಸಿಕೊಂಡ ಶ್ರೇಣೀಕೃತ ಜಾತಿ ವ್ಯವಸ್ಥೆಯ ಅಡಿಗೆ ಸಿಕ್ಕು ಹುಡಿ ಹುಡಿಯಾಗಿ ಹೋದವರು ಬಂಧನದಿಂದ ಬಿಡುಗಡೆ ಪಡೆಯಲು ಮುಸಲ್ಮಾನರಾದವರು. ಮಾತನ್ನು ಸ್ವಾಮಿ ವಿವೇಕಾನಂದರು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ಹಿಂದೆ ಮತಾಂತರವಾದವರನ್ನು ಮರಳಿ ಹಿಂದು ಧರ್ಮಕ್ಕೆ ಮರು ಮತಾಂತರ ಮಾಡಿದರೂ ಅವರು ಇಲ್ಲಿ ಬಂದು ಯಾವ ಜಾತಿಯಲ್ಲಿ ಆಸರೆ ಪಡೆಯಬೇಕು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಪ್ರಶ್ನೆಗೆ ಉತ್ತರ ನೀಡಲಾಗದವರಿಗೆ ಮರು ಮತಾಂತರದ ಬಗ್ಗೆ ಮಾತಾಡುವ ಹಕ್ಕಿಲ್ಲ.

ಇದು ಒಂದು ಮುಖವಾದರೆ ಮುಸಲ್ಮಾನರ ಬದುಕಿಗೆ ಸಂಬಂಧಿಸಿದ ಇನ್ನೊಂದು ಮುಖವೂ ಇದೆ. ಹೊಸ ಬದಲಾವಣೆ ಮತ್ತು ಸುಧಾರಣೆಗೆ ಸಮುದಾಯ ಸ್ಪಂದಿಸುತ್ತಿಲ್ಲ. ಮುಖ್ಯವಾಹಿನಿಗೆ ಬರುತ್ತಿಲ್ಲ ಎಂಬ ಆರೋಪಗಳೂ ಇವೆ. ಆದರೆ ಭಾರತೀಯ ಸಂಗೀತ, ಕಲೆ, ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ ಸಮುದಾಯವಿದು. ನವ ಭಾರತದ ನಿರ್ಮಾಣದಲ್ಲಿ ಸಮುದಾಯದ ಜನರ ಬೆವರೂ ಹರಿದಿದೆ. ಇವರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ದೇಶದ ಬಹುಸಂಖ್ಯಾತ ಸಮುದಾಯದ ಮೇಲಿದೆ. ಮುಸಲ್ಮಾನರ ತಬ್ಬಲಿತನ ಮಾಯವಾಗಬೇಕಾದರೆ ಅವರಿಗೆ ತಾಯ್ತನದ ಸ್ಪರ್ಶ ನೀಡುವ ಮನಸ್ಸು ಬಹುಸಂಖ್ಯಾತ ಸಮುದಾಯದ ಮೇಲ್ವರ್ಗಗಳಲ್ಲಿ ಮೂಡಬೇಕಾಗಿದೆ.

ಭಾರತದ ನೂರಾ ಮೂವತ್ತೈದು ಕೋಟಿ ಪ್ರಜೆಗಳಲ್ಲಿ ಮುಸಲ್ಮಾನರೂ ಸೇರಿದ್ದಾರೆ ಎಂಬುದನ್ನು ಒಪ್ಪಿಕೊಂಡು ಇರುವದೆಲ್ಲವನ್ನು ಹಂಚಿಕೊಂಡು ಪರಸ್ಪರ ಜೊತೆಯಾಗಿ ಬದುಕಿದರೆ ಭಾರತ ಒಂದಾಗಿ ಉಳಿಯುತ್ತದೆ.

*ಲೇಖಕರು ಹಿರಿಯ ಪತ್ರಕರ್ತರು, ಸಾಮಾಜಿಕ ಕಳಕಳಿಯ ಅಂಕಣಕಾರರು.

Leave a Reply

Your email address will not be published.