ತಮಿಳುನಾಡಿನ ಕಳವಳಕಾರಿ ಹಣಕಾಸು ಸ್ಥಿತಿ

ಟಿ.ಆರ್.ಚಂದ್ರಶೇಖರ

ತಮಿಳುನಾಡಿನ ಸರ್ಕಾರ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ತರುವ ಮುಕ್ತ ಮನಸ್ಸು ತೋರಿದೆ. ಇದೇ ರೀತಿಯ ಪಾರದರ್ಶಕತೆಯನ್ನು ಕರ್ನಾಟಕ ಸರ್ಕಾರ ತೋರುವುದೆಂದು..?

ತಮಿಳುನಾಡಿನ ಹಣಕಾಸು ಮಂತ್ರಿ ಪಳನಿವೇಲು ತ್ಯಾಗರಾಜನ್ ಅವರು ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಶ್ವೇತಪತ್ರವನ್ನು ಬಿಡುಗಡೆ ಮಾಡುತ್ತಾ ಇಂದು ರಾಜ್ಯದಲ್ಲಿ ಭಯಹುಟ್ಟಿಸುವ ರೀತಿಯಲ್ಲಿರುವ ಹಣಕಾಸು ಪರಿಸ್ಥಿತಿಗೆ ಹಿಂದಿನ ಎಐಎಡಿಎಂಕೆ ಸರ್ಕಾರ ಕಾರಣ ಎಂದು ಘೋಷಿಸಿದ್ದಾರೆ. ‘ರೆವಿನ್ಯೂ ಸಂಗ್ರಹವು ನೆಲಕಚ್ಚಿದೆ. ರೆವಿನ್ಯೂ ಇಲ್ಲದೆ ಸರ್ಕಾರವೊಂದು ತನ್ನ ಸಮಸ್ಯೆಗಳನ್ನು ನಿರ್ವಹಿಸುವುದು ಕಷ್ಟಎಂಬುದು ಅವರ ಸ್ಪಷ್ಟ ನುಡಿ.

ತಮಿಳುನಾಡಿನ ವಿತ್ತೀಯ ಕೊರತೆಯು ಅಪಾಯಕಾರಿ ಮಟ್ಟಕ್ಕೆ ಬೆಳೆಯವುದಕ್ಕೆ ಅಲ್ಲಿ ಏರಿಕೆಯಾಗುತ್ತಿರುವ ರೆವಿನ್ಯೂ ಕೊರತೆಯು ಕಾರಣ. ‘ಇದು ಸುಸ್ಥಿರವಲ್ಲದ ಮತ್ತು ಕಳವಳಕಾರಿಯಾಗಿ ಸ್ಥಿತಿಯನ್ನು ಸೂಚಿಸುತ್ತದೆಎಂದಿರುವ ತ್ಯಾಗರಾಜನ್ ಅವರುಬೃಹತ್ ಕುಳಿಯಲ್ಲಿ ಬಿದ್ದಿರುವ ಹಣಕಾಸು ಬಿಕ್ಕಟ್ಟನ್ನು ಸರಿಪಡಿಸಲು ಪ್ರಮುಖವಾದ ರಾಚನಿಕ ಬದಲಾವಣೆಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಶ್ವೇತಪತ್ರದಲ್ಲಿ ತೋರಿಸಿರುವಂತೆ 2020-21ರಲ್ಲಿ ರೆವಿನ್ಯೂ ಕೊರತೆಯು ರೂ. 61,320 ಕೋಟಿ. ಇದು ಸದರಿ ವರ್ಷದ ವಿತ್ತೀಯ ಕೊರತೆಯಾದ ರೂ. 92,305 ಕೋಟಿಯ ಅರ್ಧಕ್ಕಿಂತ ಅಧಿಕವಾಗಿದೆ.

ಪ್ರಸ್ತುತ ವಿತ್ತೀಯ ಕೊರತೆಯು ಸುಸ್ಥಿರ ಸ್ಥಿತಿಯಲ್ಲಿಲ್ಲ. ಏಕೆಂದರೆ ಇದರ ಒಂದು ಭಾಗವು ರೆವಿನ್ಯೂ ಕೊರತೆಯನ್ನು ತುಂಬಲು ಬಳಸಲಾಗುತ್ತಿದೆ. ರಾಜ್ಯದಲ್ಲಿನ ವಿತ್ತೀಯ ಕೊರತೆಯಲ್ಲಿ ರೆವಿನ್ಯೂ ಕೊರತೆಯ ಪಾಲು 2017-18 ರಿಂದ ಅಧರ್ಕ್ಕಿಂತ ಅಧಿಕವಾಗಿ ನಡೆದಿದೆ. ರಾಜನ್ ಪ್ರಕಾರ ಸರ್ಕಾರವು ಎತ್ತಿದ ಸಾಲವು ಬಂಡವಾಳ ವೆಚ್ಚಕ್ಕೆ ಸಂದಾಯವಾಗದೆ ಚಾಲ್ತಿ ವೆಚ್ಚಕ್ಕೆ ಬಳಕೆಯಾಗಿದೆ.

ಹಣಕಾಸು ಬಿಕ್ಕಟ್ಟನ್ನು ತೇಪೆ ಹಚ್ಚುವ ಕೆಲಸದಿಂದ ಸರಿಪಡಿಸುವುದು ಸಾಧ್ಯವಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಡಿಎಂಕೆ ಸರ್ಕಾರವು ವ್ಯವಸ್ಥಿತವಾದ ಬದಲಾವಣೆಗಳನ್ನು ಅನುಷ್ಠಾನಗೊಳಿಸುತ್ತದೆ ಎಂದು ಹೇಳಿದ್ದಾರೆ ಹಣಕಾಸು ಸಚಿವರು. ‘ಇಂದಿನ ರೆವಿನ್ಯೂ ಕೊರತೆಯು ಭಯಭೀತಿ ಹುಟ್ಟಿಸುವ ಮಟ್ಟದಲ್ಲಿದೆಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಶ್ವೇತಪತ್ರದ ಪ್ರಕಾರ ಪ್ರಸ್ತುತ ರಾಜ್ಯದ ಒಟ್ಟು ಋಣ ರೂ. 5.7 ಲಕ್ಷ ಕೋಟಿಯಾಗಿದೆ. ಅಂದರೆ ಪ್ರತಿಯೊಬ್ಬ ತಮಿಳಿಯನ್ನರ ತಲಾ ಋಣ ರೂ. 70,000ವಾಗುತ್ತದೆ. ಇದಲ್ಲದೆ ಸಾರಿಗೆ ಸಂಸ್ಥೆ, ವಿದುಚ್ಛಕ್ತಿ ವಲಯಗಳ ನಷ್ಟ ಮತ್ತು ಬಡ್ಡಿ ಪಾವತಿ ಬಾಬ್ತು ಪ್ರತಿಯೊಬ್ಬ ತಮಿಳಿಯನ್ನರ ಮೇಲೆ ರೂ. 1.10 ಲಕ್ಷ ಹೊರೆಯಿದೆ.

ತ್ಯಾಗರಾಜನ್ ಪ್ರಕಾರ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ನಂತರ ಪಾವಿಸಬೇಕಾದ ಜಾಮೀನು (ಗ್ಯಾರಂಟಿ) ನೀಡಿರುವ ಮೊತ್ತಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂರನೆಯ ಸ್ಥಾನದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಇಂಧನ ವಲಯಕ್ಕೆ ಸರ್ಕಾರ ನೀಡಿರುವ ಜಾಮೀನು ಮೊತ್ತವಾಗಿದೆ.

ಕ್ರಮ ಸಂಖ್ಯೆ ವರ್ಷಗಳು ಆದಾಯ ಕೊರತೆ ವಿತ್ತೀಯ ಕೊರತೆ
1 2014-15 6048 27162
2 2015-16 11985 32682
3 2016-17 12964 56171
4 2017-18 21594 39840
5 2018-19 23549 47335
6 2019-20 35909 60179
7 2020-21 61320 92305

ಇಂಧನ ಮತ್ತು ಸಾರಿಗೆ ವಲಯಗಳಿಗೆ ಸರ್ಕಾರವು ನೀಡಿರುವ ಜಾಮೀನಿನ ಮೊತ್ತವು 2020-21ರಲ್ಲಿ ರೂ. 91,818.44 ಕೋಟಿಯಾಗಿದೆ ಮತ್ತು ಇದರಲ್ಲಿ ಇಂಧನ ವಲಯದ ಬಾಕಿಯೇ ರೂ. 82,916.90 ಕೋಟಿಯಾಗುತ್ತದೆ.

Leave a Reply

Your email address will not be published.