ತಮ್ಮ ಹಡಗು ತಾವೇ ಮುಳುಗಿಸಿಕೊಳ್ಳುವ ಕೆಲಸ ಯಾರು ತಾನೇ ಮಾಡಿಕೊಂಡಾರು?

-ಅನ0ತ ಚಿನಿವಾರ್

ಸ್ವಾತಂತ್ರ್ಯ ಬಂದ ಹೊಸತರಲ್ಲಿ ನಡೆದದ್ದು ಮೇಲರಿಮೆಯ ಜಾತಿ ರಾಜಕೀಯ; ಕಾಲಾಂತರದಲ್ಲಿ ಶುರುವಾಗಿದ್ದು ಶೋಷಿತ ಮನಸ್ಥಿತಿಯಿಂದ ಸಿಡಿದೆದ್ದ ರಾಜಕೀಯ. ಈಗ ನಡೆಯುತ್ತಿರುವುದು ಎರಡರ ನಡುವಿನ ಸಂಘರ್ಷ!

ಬರೀ ಮೂವತ್ಮೂರು ಸಾವಿರ. ಅಷ್ಟೇ.

ನೂರು ಕೋಟಿ ಜನರ ಪೈಕಿ 2011ರ ಸೆನ್ಸಸ್ಸಿನಲ್ಲಿ ನಮಗೆ ಯಾವುದೇ ಜಾತಿ-ಧರ್ಮಗಳಿಲ್ಲ ಅಂತ ಗುರುತಿಸಿಕೊಂಡವರ ಸಂಖ್ಯೆ ಅದು!

ನಲವತ್ತಾರು ಲಕ್ಷದ ಎಪ್ಪತ್ಮೂರು ಸಾವಿರದ ಮೂವತ್ನಾಲ್ಕು -ಇದು, 2011ರಿಂದ 2016ರವರೆಗೆ ನಡೆದ ವಿಶೇಷ ಸಾಮಾಜಿಕ-ಆರ್ಥಿಕ-ಜಾತಿ ಗಣತಿಯಲ್ಲಿ ದಾಖಲಾದ ಹಿಂದುಳಿದ ವರ್ಗದ ಜಾತಿಗಳ ಸಂಖ್ಯೆ!

ಜಾತಿ ಬಿಟ್ಟು ರಾಜಕಾರಣ ಮಾಡಿ ಅಂದರೆ ನಮ್ಮ ರಾಜಕಾರಣಿಗಳು ಕೇಳಲು ಸಾಧ್ಯವಾ? ರಾಜಕಾರಣಿಗಳ ಮಾತು ಬಿಡಿ; ಯಾವುದೇ ಚುನಾವಣೆ ಅಥವಾ ಮಂತ್ರಿಮOಡಲ ರಚನೆಯ ಸಂದರ್ಭ ಬಂದರೂ, ಎಲ್ಲ ಪತ್ರಿಕೆಗಳು-ಟೀವಿ ಚಾನಲ್ಲುಗಳು ಹಾಗೂ ರಾಜಕೀಯ ಪಂಡಿತರೂ ಪ್ರಮುಖವಾಗಿ ಚರ್ಚೆ ನಡೆಸುವುದೇ ಜಾತಿಯ ಬಗ್ಗೆ. ಯಾವ ಕ್ಷೇತ್ರದಲ್ಲಿ ಯಾವ್ಯಾವ ಜಾತಿಯವರು ಎಷ್ಟೆಷ್ಟಿದ್ದಾರೆ, ಯಾವ್ಯಾವ ಜಾತಿಯ ನಾಯಕರು ಟಿಕೆಟ್‌ಗಾಗಿ ಗುದ್ದಾಡುತ್ತಿದ್ದಾರೆ ಅನ್ನುವಲ್ಲಿ ಶುರುವಾಗುವ ಚರ್ಚೆ, ಫಲಿತಾಂಶ ಬಂದ ನಂತರ ಯಾವ ಜಾತಿಯ ಮತದಾರರನ್ನು ಯಾವ ಜಾತಿಯ ಅಭ್ಯರ್ಥಿ ಯಾವ ಕಾರಣಕ್ಕಾಗಿ ಸೆಳೆದುಕೊಂಡರು ಅಥವಾ ಕಳೆದುಕೊಂಡರು ಅನ್ನುವಲ್ಲಿಗೆ ಮುಟ್ಟುತ್ತದೆ.

ಸರ್ಕಾರ ರಚನೆಯ ಸಂದರ್ಭದಲ್ಲಿ ಮತ್ತೆ ಎಲ್ಲ ಕಡೆಯೂ ಜಾತಿ ಲೆಕ್ಕಾಚಾರಗಳೇ. ಸರ್ಕಾರ ರಚನೆಯಾದ ನಂತರವೂ ಅದು ನಿಲ್ಲುವುದಿಲ್ಲ; ಯಾವ್ಯಾವ ಆಯಕಟ್ಟಿನ ಜಾಗದ ಅಧಿಕಾರಿ ಯಾವ್ಯಾವ ಕಾರಣಕ್ಕೆ ವರ್ಗವಾದರು ಅನ್ನುವಲ್ಲಿಯೂ ಜಾತಿ ಮೂಗು ತೂರಿಸುತ್ತದೆ!

ರಾಜಕಾರಣಿಗಳು ಜಾತ್ಯತೀತರಾಗುವುದು ಸಾಧ್ಯವೇ ಇಲ್ಲ. ಪಕ್ಷಕ್ಕೆ ಜಾತ್ಯತೀತ ಅನ್ನುವ ಹಣೆಪಟ್ಟಿ ಹೊತ್ತುಕೊಂಡವರು, ಧರ್ಮವಷ್ಟೇ ಮುಖ್ಯ ಅನ್ನುವ ಮಂತ್ರ ತುಟಿಯಲ್ಲಿ ಇಟ್ಟುಕೊಂಡವರು, ಎಲ್ಲರೂ ಮಾಡುವುದು ಜಾತಿ ರಾಜಕಾರಣವನ್ನೇ!

ಯಾಕೆಂದರೆ ಜಾತಿ ನಮ್ಮ ಹೃದಯದಲ್ಲಿದೆ; ಮತ್ತು, ರಾಜಕಾರಣಿಗಳಿಗದು ಗೊತ್ತಿದೆ!

ನಾವೆಲ್ಲರೂ ಈ ನವಯುಗದಲ್ಲಿ ಜಾತಿಯನ್ನು ಮೀರಿಬಿಟ್ಟಿದ್ದೇವೆ ಅಂತ ಅದೆಷ್ಟೇ ಅಂದುಕೊOಡರೂ, ಎಲ್ಲರಲ್ಲೂ ಸುಪ್ತವಾಗಿ ನಮ್ಮ ನಮ್ಮ ಐಡೆಂಟಿಟಿಯ ಹಾಗೆ ಕೂತುಬಿಟ್ಟಿದೆ ಜಾತಿ. ಹಿಂದಿನ ಕಾಲದ ಹಾಗೆ ನಮ್ಮ ಸಾರ್ವಜನಿಕ ನಡವಳಿಕೆಗಳಲ್ಲಿ ಅದು ಕಾಣಲಿಕ್ಕಿಲ್ಲ ನಿಜ; ಕಾಲೇಜು ಕ್ಯಾಂಟೀನಿನಲ್ಲೋ, ಹೊಟೇಲುಗಳಲ್ಲೋ, ಬಸ್ಸು-ರೈಲು-ವಿಮಾನಗಳಲ್ಲೋ ನಮ್ಮ ಪಕ್ಕ ಯಾರು ಕೂತಿದ್ದಾರೆ, ಯಾವ ಜಾತಿಯವರು ಅಡುಗೆ ಮಾಡಿದ್ದಾರೆ ಅಂತೆಲ್ಲಾ ಲೆಕ್ಕ ಹಾಕಲು ಸಾಧ್ಯವಿಲ್ಲ ನಮಗೆ. ನಮ್ಮ ದೈನಂದಿನ ವ್ಯವಹಾರಗಳಲ್ಲಿ ನಮಗೆದುರಾಗುವ ಜನರನ್ನು ಇವರು ನಮಗಿಂತ ಮೇಲಿನವರೋ ಕೆಳಗಿನವರೋ ಎಂದು ಯೋಚಿಸಿ ಮಾತಾಡಿಸುವುದಿಲ್ಲ ನಾವು. ಕಣ್ಣಿಗೆ-ಮನಸ್ಸಿಗೆ ಇಷ್ಟವಾದ ಹುಡುಗಿಯೋ ಹುಡುಗನೋ ನಮಗೆ ಸಂಗಾತಿಯಾಗಿ ಬೇಕು ಅನ್ನಿಸಿದರೆ ಮದುವೆಯಾಗುವುದಕ್ಕೆ ಜಾತಿಯ ಹಿನ್ನೆಲೆ ನೋಡುವುದಿಲ್ಲ. ಗೆಳೆತನಗಳಲ್ಲಂತೂ ಬಹುಮಟ್ಟಿಗೆ ಜಾತಿಯ ಬಣ್ಣಗಳಿರುವುದಿಲ್ಲ.

ಆದರೂ, ರಾಜಕೀಯಕ್ಕೆ ಬಂದಾಗ ಮಾತ್ರ, ಜಾತಿ ಪರಮೋಚ್ಚ ಮಾನದಂಡವಾಗಿಬಿಡುತ್ತದೆ; ಓಟು ಪಡೆದುಕೊಳ್ಳುವವರಿಗೂ, ಓಟು ಹಾಕುವವರಿಗೂ. ಯಾಕೆ ಹೀಗೆ?

ಇದಕ್ಕೆ ಕಾರಣ, ನಿಸ್ಸಂದೇಹವಾಗಿ, ನಮ್ಮೊಳಗೆ ಪಟ್ಟಾಗಿ ಕೂತಿರುವ ಮೇಲರಿಮೆ ಅಥವಾ ಶೋಷಿತ ಭಾವದ್ದು!

ಎರಡೂ ತದ್ವಿರುದ್ಧ ಭಾವಗಳು, ಆದರೆ ರಾಜಕಾರಣದ ರಣಾಂಗಣದಲ್ಲಿ ಬೇರೆಲ್ಲ ಶಸ್ತಾçಸ್ತçಗಳಿಗಿಂತಲೂ ಅಪಾಯಕಾರಿಯಾಗಿ ಒಂದೇ ರೀತಿಯಲ್ಲಿ ಕೆಲಸ ಮಾಡಬಲ್ಲಂಥವು. ಸ್ವಾತಂತ್ರ÷್ಯ ಬಂದ ಹೊಸತರಲ್ಲಿ ನಡೆದದ್ದು ಮೇಲರಿಮೆಯ ಜಾತಿ ರಾಜಕೀಯ; ಕಾಲಾಂತರದಲ್ಲಿ ಶುರುವಾಗಿದ್ದು ಶೋಷಿತ ಮನಸ್ಥಿತಿಯಿಂದ ಸಿಡಿದೆದ್ದ ರಾಜಕೀಯ. ಈಗ ನಡೆಯುತ್ತಿರುವುದು ಎರಡರ ನಡುವಿನ ಸಂಘರ್ಷ!

`ಜಾತಿ ರಾಜಕಾರಣ’ ಅನ್ನುವುದೊಂದು ಲೆಕ್ಕಾಚಾರವಾಗಿಯೂ ಅಸ್ತçವಾಗಿಯೂ ಬೆಳೆದಿದ್ದು, ತಮ್ಮ ಹಕ್ಕಿಗಾಗಿ ಶೋಷಿತ ವರ್ಗಗಳು ಹೋರಾಡತೊಡಗಿದಾಗಲೇ. ಸ್ವಾತಂತ್ರ÷್ಯ ಬಂದಾಗ ಅಧಿಕಾರ ಹಸ್ತಾಂತರವಾಗಿದ್ದು, ವಸಾಹತುಶಾಹಿ ಬ್ರಿಟಿಷ್ ಪುರೋಹಿತರುಗಳಿಂದ ನಮ್ಮ ದೇಶದ ಮಡಿವಂತ ಮೇಲ್ವರ್ಗದವರ ಕೈಗೆ. ಅದಾದ ಮೇಲೆ, ನೆಹರೂ ಆಳ್ವಿಕೆಯುದ್ದಕ್ಕೂ ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಾಗಿದ್ದವರೂ ಬ್ರಾಹ್ಮಣರು ಅಥವಾ ಮೇಲ್ಜಾತಿಗಳವರೇ. ಕರ್ನಾಟಕದ ವಿಷಯಕ್ಕೆ ಬಂದರೆ, ಏಕೀಕರಣವಾಗುವ ಮೊದಲ ಹತ್ತು ವರ್ಷದವರೆಗೂ ಇಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರೆಲ್ಲರೂ, ಮೈಸೂರು ಪ್ರಾಂತ್ಯದಲ್ಲಿ ಪ್ರಬಲರಾಗಿದ್ದ ಒಕ್ಕಲಿಗರೇ. ಏಕೀಕರಣದ ನಂತರ 1956ರಿಂದ 1971 ರವರೆಗೂ ಆ ಪೀಠ ವೀರಶೈವರ ಸ್ವತ್ತಾಯಿತು.

ಅಂದರೆ, ರಾಜ್ಯದ ಎರಡು ಪ್ರಬಲ ಸಮುದಾಯಗಳೇ ಸುಮಾರು 24 ವರ್ಷ ಸತತವಾಗಿ ಅಧಿಕಾರ ನಡೆಸಿದರು. ಆ ಸರಣಿಯನ್ನು ಮೊದಲು ಮುರಿದದ್ದು, ದೇವರಾಜ ಅರಸರು. ಅವರು ಒಕ್ಕಲಿಗರು ಮತ್ತು ಲಿಂಗಾಯಿತರೊಳಗಡೆಯೇ ಇದ್ದ ಬಡವರ ಜೊತೆಗೆ ಹಿಂದುಳಿದ ವರ್ಗದವರು, ದಲಿತರನ್ನೆಲ್ಲಾ ಸೇರಿಸಿ ಒಂದು ಹೊಸ ಪ್ರಬಲ ಸಮೂಹಾಸ್ತçವನ್ನು ಹೊಸೆದಿಟ್ಟುಕೊಂಡರು. ಕುರ್ಚಿ ಅವರಿಗೊಲಿಯಿತು. ಈ ವಿಪ್ಲವದಿಂದಾಗಿಯೇ ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿAಗ್ ಥರದವರೂ ರಾಜ್ಯದ ಸಾರಥ್ಯ ವಹಿಸುವುದು ಸಾಧ್ಯವಾಯಿತು.

ದೇವರಾಜ ಅರಸರು ಸೃಷ್ಟಿಸಿಕೊಟ್ಟಿದ್ದ ಸಮೂಹಕ್ಕೆ ಅಹಿಂದ ಅನ್ನುವ ಇನ್ನೊಂದು ವಿಸ್ತöÈತ ಸ್ವರೂಪ ಕೊಟ್ಟು ಮೇಲಕ್ಕೇರಿದವರು ಸಿದ್ದರಾಮಯ್ಯ. ಆದರೂ, ಸ್ವಾತಂತ್ರಾ÷್ಯನAತರದ ಈ 74 ವರ್ಷಗಳಲ್ಲಿ ಒಕ್ಕಲಿಗರು ಮತ್ತು ಲಿಂಗಾಯಿತರು ಮತ್ತು ಬ್ರಾಹ್ಮಣರನ್ನು ಹೊರತು ಪಡಿಸಿ ಬೇರೆ ವರ್ಗ-ಜಾತಿಗಳವರು ಮುಖ್ಯಮಂತ್ರಿಯಾಗಿರುವುದು ಒಟ್ಟಾರೆ ಹನ್ನೊಂದು ವರ್ಷ ಮಾತ್ರ!

ಜಾತಿ ರಾಜಕಾರಣ ನಮ್ಮ ದೇಶಕ್ಕೇ-ನಮ್ಮ ಅಸ್ಮಿತೆಗೇ ಅಪಾಯಕಾರಿ ಅಂತ ನಾವು ನಿಟ್ಟುಸಿರಿಟ್ಟರೂ, ರಾಜಕಾರಣದ ಜೊತೆಗೆ ಅದನ್ನು ಸೇರಿಸದೆ ಚರ್ಚೆ ಮಾಡಲಾರದ ಸ್ಥಿತಿಗೆ ನಾವಿಂದು ಬಂದಿದ್ದರೆ ಅದಕ್ಕೆ ಕಾರಣವೇ ಈ ಇಂಬ್ಯಾಲೆನ್ಸ್? ಮೇಲರಿಮೆಯ ಕೈಯೇ ಮೇಲಾಗಿ ಶೋಷಿತ ಭಾವದ ಕಿಚ್ಚು ಶಮನವಾಗದಾದಾಗ, ಜಾತಿ ರಾಜಕಾರಣ ಭುಸುಗುಡುತ್ತದೆ.

ಏನಿದು ಮೇಲರಿಮೆ? ಯೋಚಿಸಿ ನೋಡಿ; ಬ್ರಾಹ್ಮಣರಿಗೆ ತಮ್ಮ ಬ್ರಾಹ್ಮಣ್ಯದ ಬುದ್ಧಿವಂತಿಕೆ ಬಗ್ಗೆ (ಮಂಚೂಣಿ ಮಾಧ್ಯಮಗಳ ಸಂಪಾದಕರ ಪಟ್ಟಿಯಲ್ಲಿ, ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ, ಜಾಗತಿಕ ಭಾರತೀಯ ಸಿಇಓಗಳ ಪಟ್ಟಿಯಲ್ಲಿ, ಅವರದೇ ಮೇಲುಗೈ!), ವೈಶ್ಯರಿಗೆ ತಮ್ಮ ವ್ಯಾಪಾರೀ ಚಾಕಚಕ್ಯತೆಯ ಬಗ್ಗೆ (ನಮ್ಮ ದೇಶದ ಹತ್ತು ಅತಿ ಶ್ರೀಮಂತರ ಪೈಕಿ ಕನಿಷ್ಠ ಏಳು ಜನ ಬನಿಯಾಗಳೇ – ಅಂಬಾನಿ, ಅದಾನಿ, ಮಿತ್ತಲ್, ಜಿಂದಲ್, ಬಿರ್ಲಾ, ಇತ್ಯಾದಿ!), ಲಿಂಗಾಯಿತರಿಗೆ ತಮ್ಮ ಶ್ರೇಷ್ಠತೆಯ ಬಗ್ಗೆ, ಒಕ್ಕಲಿಗರಿಗೆ ತಮ್ಮ ಒಕ್ಕಲುತನದ ಬಗ್ಗೆ ಅಪಾರವಾದ ಅಭಿಮಾನವಿರುತ್ತದೆ. ಅವರ ಸಹಜ ದಿನಚರಿಗಳಲ್ಲದು ಎದ್ದು ಕಾಣದಿದ್ದರೂ, ಹೃದಯದಲ್ಲಿ ಅದೊಂದು ಭಾವ ಜಾಗೃತವಾಗಿರುತ್ತದೆ.

ಚುನಾವಣೆಯ ಸಮಯದಲ್ಲಿ ಕೆಲಸ ಮಾಡುವುದು ಆ ಭಾವವೇ! ಅಭ್ಯರ್ಥಿಗಳ ಯೋಗ್ಯತೆಯ ಮಧ್ಯೆ ತೀರಾ ವ್ಯತ್ಯಾಸವೇನೂ ಇಲ್ಲ, ಎಲ್ಲಾ ಒಂದೇ ಅಂತನ್ನಿಸಿದಾಗ ಕೆಲಸ ಮಾಡುವುದು, `ಇವನು ನಮ್ಮವನು, ಇವನೇ ವಾಸಿ’ ಅನ್ನುವ ಮೇಲರಿಮೆ! ಇದಕ್ಕೆ ತದ್ವಿರುದ್ಧವಾದ, ಆದರೆ ಅಂಥದ್ದೇ ರಾಜಕೀಯ ಉದ್ದೇಶದ ಭಾವ, ಶೋಷಿತ ಭಾವ; ತಲತಲಾಂತರದಿAದಲೂ ತಾವು ಶೋಷಿತರಾಗಿದ್ದೇವೆ ಎಂಬ ಒಂದು ಕಲೆಕ್ಟಿವ್ ಕಾನ್ಷಿಯಸ್‌ನೆಸ್, ಮೇಲ್ಜಾತಿಯವರ ವಿರುದ್ಧ ಉಳಿದವರನ್ನು ಎತ್ತಿಕಟ್ಟುತ್ತದೆ.

ಇದಿಷ್ಟೇ ಆಗಿದ್ದರೆ ಜಾತಿ ರಾಜಕಾರಣವೆಂಬುದು ಈಗಿನಷ್ಟು ಕಗ್ಗಂಟೂ ಕಡುಶಾಪವೂ ಆಗುತ್ತಿರಲಿಲ್ಲ. ಸಾಮಾನ್ಯವಾಗಿ ಎಲ್ಲ ಜಾತಿ-ಸಮುದಾಯಗಳ ಶಕ್ತಿಯೂ ಸಂಚಯವಾಗುವುದು ಆ ಸಮುದಾಯದಲ್ಲಿ ಮೇಲೆದ್ದು ಬಂದ ಒಬ್ಬ ನಾಯಕನ ಸುತ್ತ. ಹಾಗಾಗಿಯೇ ಈ ಜಾತಿಯ ಆಟ ವಿಪರೀತ voಟಚಿಣiಟe! ಒಂದು ಜಾತಿ-ಒಂದು ಸಮುದಾಯದಲ್ಲಿ ಒಬ್ಬನೇ ನಾಯಕ ಇರಬೇಕೆಂದಿಲ್ಲವಲ್ಲ? ಮತ್ತು ಹಾಗೆ ಹುಟ್ಟಿಕೊಂಡ ನಾಯಕರೆಲ್ಲರೂ ಒಂದೇ ಪಕ್ಷದಲ್ಲಿರಬೇಕೆಂದೂ ಇಲ್ಲವಲ್ಲ? ಆದ್ದರಿಂದಲೇ ಎಲ್ಲ ಜಾತಿ-ಸಮುದಾಯ-ವರ್ಗಗಳೊಳಗಡೆಯೂ ಆಂತರಿಕ ಸುಳಿಗಳು ಹುಟ್ಟಿಕೊಳ್ಳುತ್ತವೆ. ಓಲೈಸುವಿಕೆಯೂ, ಭರ್ತ್ಸನೆಗಳೂ, ವಿಭಜನೆಗಳೂ ದಿನನಿತ್ಯದ ರಾಜಕಾರಣದಲ್ಲಿ ಎಡತಾಕುತ್ತವೆ.

ತಮ್ಮ ಉಳಿವಿಗಾಗಿ ಸರ್ಕಾರಗಳು ತಮ್ಮ `ಬಾಂಧವರು’ ಅಂತ ತಾವು ಗುರುತಿಸಿಕೊಂಡ ಜಾತಿ-ಸಮುದಾಯಗಳ ದೃಷ್ಟಿಯಲ್ಲೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಅದಕ್ಕೆದುರಾಗಿ ಉಳಿದವರು ತಮ್ಮತಮ್ಮ `ಬಾಂಧವರ’ ರಕ್ಷಣೆಗೂ-ಓಲೈಕೆಗೂ ಇಳಿಯುತ್ತಾರೆ. ಎಲ್ಲ ನಾಯಕರೂ ತಂತಮ್ಮ ಸಮುದಾಯದ ನಾಯಕರಾಗಷ್ಟೇ ಉಳಿಯುತ್ತಾರೆ. ಮುತ್ಸದ್ದಿತನ, ಸಮಷ್ಟಿಯ ನಾಯಕತ್ವ ಮರೆಯಾಗುತ್ತದೆ. `ಜಗದ್ಗುರು’ಗಳು ರಾಜಕೀಯದ ಹಿತ್ತಿಲಲ್ಲಿ ನಿಂತು ಜಾಗಟೆ ಬಾರಿಸುತ್ತಾರೆ, ಹೂಂಕರಿಸುತ್ತಾರೆ. ಪ್ರಜಾಪ್ರಭುತ್ವ ಹಳ್ಳಹಿಡಿಯುತ್ತದೆ.

ಈಗಾಗಿರುವುದು ಅಕ್ಷರಶಃ ಹೀಗೆಯೇ. ಸಿದ್ದರಾಮಯ್ಯ, ಈಶ್ವರಪ್ಪ, ಶ್ರೀರಾಮುಲು, ಜಾರಕಿಹೊಳಿ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್, ನಿರಾಣಿ, ಬೊಮ್ಮಾಯಿ -ಹೀಗೆ ಎಲ್ಲರೂ ತಂತಮ್ಮ ಜಾತಿಯ ಮಾಲೀಕತ್ವ ಪಡೆಯಲು ಹೊರಟಿರುವ ಮೇಲಾಟದಿಂದ ಯಾರೂ ಎಂದೂ ನೆಟ್ಟಗೆ ಪರಿಹರಿಸಲಾರದಂಥ ಮೀಸಲಾತಿಯ ಗದ್ದಲ ಶುರುವಾಗಿದೆ. ಅಭಿವೃದ್ಧಿ ಪ್ರಾಧಿಕಾರಗಳು, ಮಂಡಳಿಗಳು, ಉತ್ಸವಗಳು, ಮಠಗಳು ಜಾತಿ-ಉಪಜಾತಿಗೊಂದರAತೆ ತಲೆಯೆತ್ತುವ ಅಪಾಯ ಬಾಗಿಲು ಬಡಿಯುತ್ತಿದೆ. ಸ್ವಾಮೀಜಿಗಳು ಮುಖ್ಯಮಂತ್ರಿಗಳಿಗೇ ಬೆದರಿಕೆ ಹಾಕಿ ಮಂಡಿಯೂರಿಸುವ ಮಟ್ಟಕ್ಕೆ ಬಹಿರಂಗವಾಗೇ ರಾಜಕೀಯ ಅಖಾಡಕ್ಕಿಳಿದಿದ್ದಾರೆ.

ಇದು ನಮ್ಮ ರಾಜ್ಯಕ್ಕಷ್ಟೇ ಅಂಟಿದ ಶಾಪವೇನಲ್ಲ; ದೇಶಾದ್ಯಂತ ಎಲ್ಲ ಕಡೆಯೂ ಇದೇ ಕಥೆ. “ಈ ದೇಶದಲ್ಲಿನ್ನು ಉಳಿಯುವುದು ಎರಡೇ ಜಾತಿಗಳು; ಒಂದು ಬಡವರದ್ದು, ಇನ್ನೊಂದು -ಬಡತನ ಅಳಿಸಲು ಶ್ರಮಿಸುವವರದ್ದು” ಅಂತ ಈಗ್ಗೆ ಒಂದೂವರೆ ವರ್ಷದ ಹಿಂದೆ ತಾವು ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ಮೋದಿಯವರು ಘೋಷಿಸಿದ್ದೇನೋ ಹೌದು. ಅದು ಒಬ್ಬ ಪ್ರಧಾನಿ ಆಡಬಹುದಾದ ಮತ್ತು ಆಡಲೇಬೇಕಾದ ಆದರ್ಶದ ಮಾತು. ಆದರೆ ವಾಸ್ತವ ಅವರಿಗೆ ಗೊತ್ತಿಲ್ಲದ್ದೇನಲ್ಲ.

ಅವರು ಹಾಗೆ ಹೇಳಿದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕರು ‘ಮರಾಠಿ ಜನಾಂಗದವರಿಗೆ ನಾವು ಕೊಟ್ಟ ಮೀಸಲಾತಿಯನ್ನು ಕೋರ್ಟ್ ಮಾನ್ಯ ಮಾಡಿದೆ’ ಅನ್ನುವ ಖುಷಿಯಲ್ಲಿ ರಸ್ತೆಯಲ್ಲೆಲ್ಲಾ ಸಂಭ್ರಮ ಪಟ್ಟಿದ್ದರು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಸಾಲು ಸಾಲಾಗಿ ಅನೇಕ ಹಿಂದುಳಿದ ವರ್ಗದ ಜಾತಿಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ತರಾತುರಿಗೆ ಬಿದ್ದಿದ್ದರು. ಕರ್ನಾಟಕದ ಯಡಿಯೂರಪ್ಪನವರು ವೀರಶೈವ ಮಠಗಳಿಗೆ ಗುರುದಕ್ಷಿಣೆ’ ಕೊಡುವುದರಲ್ಲಿ ಮಗ್ನರಾಗಿದ್ದರು. ಇಷ್ಟು ಸಾಲದೆಂಬOತೆ ಸ್ವತಃ ಮೋದಿಯವರ ಸರ್ಕಾರವೇ 2021 ರ ಸೆನ್ಸಸ್ಸಿನಲ್ಲಿ ಜಾತಿ ಗಣತಿ ನಡೆಸುವ ಕೆಲಸಕ್ಕೆ ಕೈಹಾಕಿತ್ತು!

ಜಾತಿಗಣತಿಯೆಂಬುದು ಸದಾ ಎಲ್ಲ ಸರ್ಕಾರಗಳನ್ನೂ ದ್ವಂದ್ವಕ್ಕೆ ದೂಡುವ ಆಕರ್ಷಣೆ. ನೀತಿ ನಿರೂಪಣೆಗಳಿಗೆ ಅನುಕೂಲವಾಗಬೇಕೆಂದರೆ ಕರಾರುವಾಕ್ಕಾಗಿ ಜಾತಿಗಳ ಲೆಕ್ಕಾಚಾರ ಸಿಗಬೇಕು ಅನ್ನುವುದು ಎಲ್ಲ ರಾಜಕಾರಣಿಗಳೂ ಒಪ್ಪುವ ವಾದ. ಆದರೆ, ಜಾತಿಗಳ ಸರಿಯಾದ ಲೆಕ್ಕ ಸಿಕ್ಕರೆ ತಮ್ಮ ರಾಜಕಾರಣದ ಬುಡವೇ ಅಲುಗಾಡಬಹುದೇನೋ ಎಂಬ ಭಯ ಅವರನ್ನು ಹಾಗೆ ಮಾಡಗೊಡುವುದಿಲ್ಲ! ಮನ್‌ಮೋಹನ್‌ಸಿಂಗ್ ಅವರ ಸರ್ಕಾರ 2011ರಲ್ಲಿ ಶುರು ಮಾಡಿದ ಸೋಷಿಯೋ ಎಕನಾಮಿಕ್ ಅಂಡ್ ಕಾಸ್ಟ್ ಸೆನ್ಸಸ್ (Sಇಅಅ) ಅನ್ನುವ ವಿಶೇಷ ಸಮೀಕ್ಷೆಯ ಕೆಲಸ ಎಡಬಿಡಂಗಿಯAತಾಗಿದ್ದು ಇದೇ ಕಾರಣಕ್ಕೆ. 2011ರಿಂದ ಮೋದಿ ಸರ್ಕಾರ ಬಂದ ಎರಡು ವರ್ಷಗಳಾಗುವ ತನಕ -ಅಂದರೆ 2016ರ ತನಕ- ನಡೆದ ಈ ಸಮೀಕ್ಷೆಗಾಗಿ ಯುಪಿಎ ಮತ್ತು ಎನ್‌ಡಿಎ ಎರಡೂ ಸರ್ಕಾರಗಳು ಒಟ್ಟು ಖರ್ಚು ಮಾಡಿದ ದುಡ್ಡು, 4893 ಕೋಟಿ ರೂಪಾಯಿ! ಒಂದು ಬಿಡಿಗಾಸಿನ ಪ್ರಯೋಜನವೂ ಇಲ್ಲದ ವ್ಯರ್ಥ ಪ್ರಯತ್ನ ಅದು. ಯಾಕೆಂದರೆ, ಕನಿಷ್ಠ ಸಾಮಾಜಿಕ ಜ್ಞಾನವೂ ಇಲ್ಲದ, ಸರಿಯಾದ ತರಬೇತಿಯೂ ಇಲ್ಲದ ಸಿಬ್ಬಂದಿ ಆ ಸಮೀಕ್ಷೆ ನಡೆಸಿದ್ದರಿಂದಾಗಿ ಅದರಲ್ಲಿ 46 ಲಕ್ಷಕ್ಕೂ ಹೆಚ್ಚು ಹಿಂದುಳಿದ ವರ್ಗದ ಜಾತಿಗಳು ನಮೂದಾಗಿದ್ದವು! ಅನೇಕ ಜನರು ಜಾತಿಗೂ, ಉಪಜಾತಿಗೂ, ಜಾತಿಯ ವಿಭಿನ್ನ ಹೆಸರುಗಳಿಗೂ, ಸರ್‌ನೇಮ್‌ಗಳಿಗೂ, ಗೋತ್ರಕ್ಕೂ ವ್ಯತ್ಯಾಸ ಗೊತ್ತಿಲ್ಲದಂತೆ ಉತ್ತರ ಕೊಟ್ಟಿದ್ದರು! ನಮ್ಮ ರಾಜ್ಯದಲ್ಲೂ ಒಂದು ಇಂತಹದೇ ಸಮೀಕ್ಷೆ ನಡೆದಿತ್ತು; ಬಹುಶಃ ಅದರ ಹಣೆಬರಹವೂ ಹೀಗೇ ಇರಬೇಕು; ಹಾಗಾಗೇ ಅದರ ವಿವರಗಳು ಹೊರಬಂದಿಲ್ಲ, ಆ ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ.

ಈ ಸಲದ ಸೆನ್ಸಸ್ಸಿನಲ್ಲಿ ಕರಾರುವಾಕ್ಕಾಗಿ ಈ ಜಾತಿಗಣತಿಯ ಕೆಲಸ ಮಾಡಬಹುದಿತ್ತು; ಆಗ ಮೇಲ್ಜಾತಿಗಳ-ಹಿಂದುಳಿದ ವರ್ಗದವರ ಅನುಪಾತ ನಮ್ಮ ದೇಶದಲ್ಲಿ ಎಷ್ಟಿದೆ, ಅಧಿಕಾರ ಹಂಚಿಕೆ ಹೇಗಾಗಿದೆ ಅನ್ನುವುದರ ಸ್ಪಷ್ಟ ಚಿತ್ರ ಸಿಗುತ್ತಿತ್ತು. 1951ರ ಜನಗಣತಿಯ ನಂತರ ಇಂಥದ್ದೊAದು ಸೂಕ್ಷ÷್ಮ ಕೆಲಸಕ್ಕೆ ಕೈಹಾಕಿದ ಶ್ರೇಯಸ್ಸು ಮೋದಿ ಸರ್ಕಾರಕ್ಕೆ ಸಿಗುತ್ತಿತ್ತು. ಆದರೆ ಅದು ಆಗುತ್ತಿಲ್ಲ. “ಈಸಲ ಇಲ್ಲ” ಅಂತ ರಾಜನಾಥ್‌ಸಿಂಗ್ ಹೇಳಿ ಆಗಿದೆ.

ಅಂದರೆ, ಯಾವ ಜನಾಂಗದವರು ಎಷ್ಟು ಜನರಿದ್ದಾರೆ ಅನ್ನುವುದೇ ಗೊತ್ತಿಲ್ಲದ ಮಬ್ಬಿನಲ್ಲೇ ಫಲವತ್ತಾದ ಜಾತಿ ರಾಜಕಾರಣ ಮುಂದುವರೆಯುತ್ತದೆ! 1931ರ ಸೆನ್ಸಸ್ಸಿನ ಅಂಕೆಸAಖ್ಯೆಗಳ ಆಧಾರದಲ್ಲೇ (1951ರ ಸೆನ್ಸಸ್‌ನಲ್ಲಿ ನಡೆಸಿದ ಜಾತಿಗಣತಿಯ ವಿವರಗಳು ಪ್ರಕಟವಾಗಲೇ ಇಲ್ಲ) ಎಲ್ಲರೂ ತಂತಮ್ಮ ಸಂಖ್ಯೆ ಇಷ್ಟು, ತಂತಮ್ಮ ಆರ್ಥಿಕ ಸ್ಥಿತಿ ಹೀಗಿದೆ ಅಂತ ಘೋಷಿಸಿಕೊಂಡು ತಮಗಿಷ್ಟ ಬಂದ ರೀತಿಯ ಮೀಸಲಾತಿಗೆ ಹೋರಾಡುತ್ತಲೇ ಹೋಗುತ್ತಾರೆ! ರಾಜಕಾರಣದ ಸುಳಿಯೊಳಗೆ ಜಾತಿಗಳೂ-ಸೌಹಾರ್ದವೂ-ಪ್ರಗತಿಯೂ ತಿರುತಿರುತಿರುಗುತ್ತಾ ಇದ್ದಲ್ಲೇ ಉಳಿದುಬಿಡುತ್ತವೆ.

ಇದು ತಪ್ಪಬೇಕೆಂದರೆ, ಒಂದು ಸಮಗ್ರ ಜಾತಿ ಗಣತಿ ನಡೆದು, ಶಿಕ್ಷಣ-ಉದ್ಯೋಗ-ರಾಜಕೀಯ ಪ್ರಾತಿನಿಧ್ಯ ಎಲ್ಲದರಲ್ಲೂ ಆಯಾ ಜಾತಿಯ ಸಂಖ್ಯೆಗನುಗುಣವಾಗಿ ಮೀಸಲಾತಿ ಘೋಷಿಸುವುದೊಂದೇ ಮಾರ್ಗ! ಅಟ್‌ಲೀಸ್ಟ್, ಆಗ ಜಾತಿಜಾತಿಗಳ ನಡುವೆ ವಿಷಬಿತ್ತುವ ಮತ್ತು ಜಾತಿಗಳೊಳಗಿನ ಆಂತರಿಕ ಬೇಗುದಿಯಲ್ಲಿ ಬೇಳೆ ಬೇಯಿಸಿಕೊಳ್ಳುವ ರಾಜಕಾರಣವಾದರೂ ನಿಲ್ಲುತ್ತದೆ. ಜೊತೆಗೆ, ‘ಮೇಲರಿಮೆ-ಶೋಷಿತ ಭಾವ’ದ ಅಧಿಕಾರ ಹಂಚಿಕೆಯಲ್ಲಿ ಒಂದು ಸಮತೋಲನ ಬರುತ್ತದೆ!

ಆದರೆ, ತಮ್ಮ ಹಡಗನ್ನು ತಾವೇ ಮುಳುಗಿಸಿಕೊಳ್ಳುವ ಕೆಲಸ ಯಾರು ತಾನೇ ಮಾಡಿಯಾರು? ಅದು ಸಾಧ್ಯವಿಲ್ಲ ಅನ್ನುವ ಕಾರಣಕ್ಕೇ ಅದಕ್ಕೆ ಪರ್ಯಾಯವಾಗಿ ಹುಟ್ಟಿಕೊಂಡಿರುವುದು, ‘ಧರ್ಮ ರಾಜಕಾರಣ’!

ಖಿhe ಛಿhoiಛಿe is beಣತಿeeಟಿ muಡಿಜeಡಿ ಚಿಟಿಜ suiಛಿiಜe. ಧೈರ್ಯವಿರಲಿ, ಶಿಷ್ಟರಕ್ಷಣೆಗೆ ಯುಗಯುಗದಲ್ಲೂ ಬರುತ್ತೇನೆಂದವನೊಬ್ಬ ಬರುವವರೆಗೂ!

*ಲೇಖಕರ ಹುಟ್ಟೂರು ಭದ್ರಾವತಿ; ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆರಡರಲ್ಲಿ ಮೂರು ದಶಕಗಳಿಂದ ವೃತ್ತಿಪರ ಸೇವೆ ಸಲ್ಲಿಸಿದ್ದಾರೆ. ‘ಹೇ ರಾಮ್’ ನಾಟಕಕ್ಕೆ ಪಿ.ಲಂಕೇಶ್ ಪ್ರಶಸ್ತಿ ಲಭಿಸಿದೆ. ಮಾಧ್ಯಮ ಅಕಾಡೆಮಿ ಪುರಸ್ಕಾರಕ್ಕೆ ಭಾಜನರು.

Leave a Reply

Your email address will not be published.