ತಲೆಮಾರುಗಳ ಅಂತರ

ತಲೆಮಾರುಗಳ ಅಂತರ ಹೊಸದೇನಲ್ಲ; ಕಾಲಾನುಸಾರ ಎಲ್ಲ ಪೀಳಿಗೆಗಳ ಅನುಭವಕ್ಕೂ ಬಂದಿರುತ್ತದೆ. ಈ ಅಂತರದ ದೆಸೆಯಿಂದ ಹೊಸ ಪೀಳಿಗೆಯಲ್ಲಿ ಒಂದು ಬಗೆಯ ಪುಳಕ ಉಂಟಾದರೆ, ಹಳೆಯ ತಲೆಮಾರು ಮತ್ತೊಂದು ರೀತಿಯ ಕಳವಳಕ್ಕೆ ಈಡಾಗುತ್ತದೆ. ಪ್ರತಿಯೊಂದು ತಲೆಮಾರು ಹೊಸ ಮತ್ತು ಹಳೆಯ ಪೀಳಿಗೆಯ -ಎರಡೂ ಬಗೆಯ ಅನುಕೂಲ, ಅನಾನುಕೂಲಗಳಿಗೆ ಒಡ್ಡಿಕೊಳ್ಳುವುದು ಅನಿವಾರ್ಯ; ಇಂದು ನಳನಳಿಸುವ ಕಿರಿಯ ಪೀಳಿಗೆಯೇ ನಾಳಿನ ಹಳಹಳಿಸುವ ಹಿರಿಯ ತಲೆಮಾರು!

ಹಾಗಾದರೆ ಆಧುನಿಕ ತಂತ್ರಜ್ಞಾನದ ಪ್ರವಾಹದಲ್ಲಿ ತೇಲಾಡುತ್ತಿರುವ ಈ ಯುಗದ ವಿಶೇಷವೇನು? ವೇಗವೇ ಯುಗಧರ್ಮ, ಸ್ಥಿತ್ಯಂತರವೇ ಸ್ಥಿರ ಎನ್ನಬಹುದಾದ ಕಾಲಘಟ್ಟವಿದು. ಪೀಳಿಗೆಗಳ ನಡುವಿನ ಅಂತರವನ್ನು ಅರಿಯುವ, ಅಂದಾಜಿಸುವ, ಅನುಸಂಧಾನ ಮಾಡುವ ಹೊತ್ತಿಗೆ ಸುತ್ತಲಿನ ಬದುಕು ಮತ್ತೊಂದು ಮಜಲಿಗೇರಿರುತ್ತದೆ. ಅಂತರವೇ ಅಳತೆಗೆ ಸಿಗದಿದ್ದರೆ ಅದನ್ನು ದಾಟುವುದೆಂತು? ಇಂತಹ ಸಂದಿಗ್ಧ ಸಂದರ್ಭಕ್ಕೆ ಸಾಕ್ಷಿಯೂ ಭಾಗಿಯೂ ಆಗಿರುವ ಹಳೆಯ ಪೀಳಿಗೆ ತನ್ನೆಲ್ಲ ಕಸರತ್ತುಗಳನ್ನು ಪ್ರಯೋಗಿಸಿ ಪ್ರಸ್ತುತತೆ ಉಳಿಸಿಕೊಳ್ಳಲು ಪರಿಶ್ರಮಿಸುತ್ತಿದೆ. ಇನ್ನೊಂದೆಡೆ ಈ ಅಂತರದ ಬಗ್ಗೆ ಗಮನಹರಿಸುವ ವ್ಯವಧಾನ, ಸಮಯ, ಅಗತ್ಯ, ಒಳತೋಟಿ… ಯಾವುದೂ ಇಲ್ಲದ ನವಪೀಳಿಗೆ ಒಂದೇ ಸವನೇ ಮುಂದಕ್ಕೋ ಹಿಂದಕ್ಕೋ ಓಡುತ್ತಲೇ ಇದೆ.

ಇತ್ತೀಚೆಗಿನ ಒಂದು ಪ್ರಕರಣವನ್ನು ಹಂಚಿಕೊಳ್ಳುವುದಾದರೆ…

ಆತ ಹಳೆಯ ತಲೆಮಾರಿನ ತಂದೆ; ತಾನು ಯುವಕನಾಗಿದ್ದಾಗ ಅನೇಕ ವಿಷಯಗಳಲ್ಲಿ ತನ್ನ ಹಿರಿಯರಿಗಿಂತ ಬಹುಮುಂದೆ ಸಾಗಿದ್ದವ, ಸದಾ ಹೊಸತನ್ನು ಬಾಚಿಕೊಳ್ಳುವ ಹುರುಪುಳ್ಳವ. ಹೀಗಾಗಿ ತರ್ಕದ ಪ್ರಕಾರ ಆತ ಮತ್ತು ಆತನ ಮುಂದಿನ ಪೀಳಿಗೆಯ ನಡುವಿನ ಅಂತರ ಬಹಳ ಕಿರಿದಾಗಿರಬೇಕಿತ್ತು. ಆದರೆ ವಾಸ್ತವದಲ್ಲಿ ಹಾಗಾಗಿಲ್ಲ.

ಅಪ್ಪಟ ಗ್ರಾಮೀಣ ಹಿನ್ನೆಲೆಯಿಂದ ಬಂದ ಅಪ್ಪ ಸ್ವಸಾಮಥ್ರ್ಯ, ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಒಂದು ಮಟ್ಟ ಮುಟ್ಟಿದ್ದ. ಎರಡು ದಶಕಗಳ ಹಿಂದೆಯೇ ಈ ತಂದೆ ಕಂಪ್ಯೂಟರ್ ಲೋಕಕ್ಕೆ ತೆರೆದುಕೊಂಡಾಗ ಆತನ ಮಗ ಇನ್ನೂ ಈ ಲೋಕಕ್ಕೇ ಬಂದಿರಲಿಲ್ಲ! ಒಮ್ಮೆ ಆ ಮಗನಿಗೆ ಈ ತಂದೆ ಒಂದು ವಾಟ್ಸಾಪ್ ಚಿತ್ರಸಂದೇಶ ಕಳುಹಿಸಿದ. ಮೈಮೇಲೆ ಬಟ್ಟೆಯೂ ಇಲ್ಲದ ಹಳ್ಳಿಯ ಬಡಮಕ್ಕಳು ಸಂತಸದಿಂದ ಕುಣಿದಾಡುತ್ತಿರುವ ಚಿತ್ರವದು. ಅದರ ಕೆಳಗೆ ಬರೆದಿದ್ದ ಟಿಪ್ಪಣಿಯ ತಾತ್ಪರ್ಯ: ‘ಮೊಬೈಲ್, ಆಟಿಕೆ, ಪಿಜಾ, ಕಾರು… ಯಾವುದೂ ಇಲ್ಲ. ಹಣದಿಂದ ಸಂತೋಷ ಖರೀದಿಸಲಾಗದು ಎಂಬುದಕ್ಕೆ ಇದು ಜೀವಂತ ನಿದರ್ಶನ’.

ಮಗ ಮರುಕ್ಷಣವೇ ಜಗತ್ತಿನ ಅತ್ಯಂತ ಬೆಲೆ ಬಾಳುವ ಫೆರಾರಿ ಕಾರಿನ ಚಿತ್ರ ರವಾನಿಸುವ ಮೂಲಕ ಉತ್ತರಿಸಿದ. ಚಿತ್ರದ ಕೆಳಗೆ, ‘ಹಣದಿಂದ ಹರ್ಷ ಖರೀದಿಸಲಾಗದು ಎನ್ನುತ್ತಾರೆ. ಪರವಾಗಿಲ್ಲ, ನಾನು ಫೆರಾರಿ ಕಾರಿನ ಒಳಗೆ ಕುಳಿತೇ ದುಃಖಿಸುವೆ’ ಎಂದು ಬರೆದಿದ್ದ! ಮುಂದುವರೆದು, ‘ಹಣದಿಂದ ನೆಮ್ಮದಿ ಸಿಗುವುದಿಲ್ಲ ಎಂದು ಭಾವಿಸುವವರು ತಮ್ಮೆಲ್ಲಾ ಹಣವನ್ನು ನನ್ನ ಬ್ಯಾಂಕ್ ಖಾತೆಗೆ ವರ್ಗಾಯಿಸಿ’ ಎಂದು ಸಂಭಾಷಣೆ ಮುಕ್ತಾಯಗೊಳಿಸಿದ!

ಇದನ್ನು ‘ತಲೆಮಾರಿನ ಅಂತರ’ ಪರಿಧಿಗೆ ಸೀಮಿತಗೊಳಿಸಿ, ಬಿಡಿ ಪ್ರಸಂಗವೆಂದು ಉಪೇಕ್ಷಿಸುವುದೇ ಅಥವಾ ನಮ್ಮ ತಲೆಮಾರಿನ ಬೌದ್ಧಿಕ ಸಂಸ್ಕಾರಕ್ಕೆ ನಿಲುಕದ ‘ಅಲೆ’ ಎಂದು ಕುಲುಮಬೇಕೇ?

ಈ ಸಂಚಿಕೆಯಲ್ಲಿ ಹುಟ್ಟುಹಾಕಿರುವ ಮುಖ್ಯಚರ್ಚೆಯೊಳಗೆ ಉತ್ತರದ ಕಿಡಿಗಳು ಹೊಳೆದಾವು ಎಂದು ಆಶಿಸುವೆ.

Leave a Reply

Your email address will not be published.