ತಿಂಗಳ ಓದುಗ

ಕಸ ಗುಡಿಸುವ ವ್ಯಕ್ತಿ ಕೂಡ ನಮಗೆ ಸ್ಫೂರ್ತಿ!

‘ಷ’ ಮತ್ತು ‘ಶ’ ಕುರಿತು ನಾನು ಸಂದೇಹ ವ್ಯಕ್ತಪಡಿಸಿ ಬರೆದ ಪತ್ರಕ್ಕೆ ರಂಗನಾಥ ಕಂಟನಕುಂಟೆ ಅವರು ದೀರ್ಘ ವಿವರಣೆ ನೀಡುವುದರ ಮೂಲಕ ನನ್ನ ಸಂದೇಹವನ್ನು ನಿವಾರಿಸಿದ್ದಾರೆ. ಅದಕ್ಕಾಗಿ ಅವರಿಗೆ ಮತ್ತು ‘ಸಮಾಜಮುಖಿ’ಗೆ ನನ್ನ ಕೃತಜ್ಞತೆಗಳು.

2018ರ ಜನವರಿಯಿಂದ ‘ಸಮಾಜಮುಖಿ’ ನಿಯತಕಾಲಿಕವನ್ನು ತಪ್ಪದೆ ಓದುತ್ತ ಬಂದಿರುವ ನಾನು, ಅದರಲ್ಲಿನ ಪ್ರತಿಯೊಂದು ಲೇಖನಗಳ ಕುರಿತಂತೆ, ಮನಸ್ಸಿನಲ್ಲಿಯೇ ಮೌಲ್ಯ ಮಾಪನ ಮಾಡುತ್ತಿರುತ್ತೇನೆ; ಪ್ರತಿ ಬಾರಿ ‘ಪ್ರತಿಬಿಂಬ’ ವಿಭಾಗಕ್ಕೆ ಪತ್ರ ಬರೆಯುವುದಿಲ್ಲ. ಕೆಲವು ಲೇಖನಗಳ ಕುರಿತು ಸಂದೇಹ ಉಂಟಾದಾಗ ಮತ್ತು ಇನ್ನು ಕೆಲವು ಲೇಖನಗಳನ್ನು ಬಹಳವಾಗಿ ಮೆಚ್ಚಿಕೊಂಡಾಗ, ಬರೆಯಲೇಬೇಕೆಂಬ ಒತ್ತಡ ಉಂಟಾದಾಗ ಮಾತ್ರ ಬರೆಯುತ್ತೇನೆ. ಮಾರ್ಚ್ 2019ರ ಸಂಚಿಕೆಯ ‘ಪ್ರತಿಬಿಂಬ’ದಲ್ಲಿ ಪ್ರಕಟವಾಗಿರುವ ಪ್ರೊ.ಶಿವರಾಮಯ್ಯನವರ ಪತ್ರ ಓದಿದ ಮೇಲೆ ನನಗೆ ಇಷ್ಟವಾಗುವ ಮತ್ತು ಇಷ್ಟವಾಗದಿರುವ ಎರಡೂ ಬಗೆಯ ಲೇಖನಗಳನ್ನು ಕುರಿತು ಬರೆಯುವ ಧೈರ್ಯ ಬಂದಿದೆ.

ಮೊದಲನೆಯದಾಗಿ, ಪ್ರೊ.ಶಿವರಾಮಯ್ಯನವರ ಪತ್ರ ಮುಂದೆ, ಹಳಗನ್ನಡ ಕಾವ್ಯಗಳ ಕುರಿತು ಬರೆಯುವವರಿಗೆ ಒಂದು ಎಚ್ಚರಿಕೆ ಗಂಟೆಯಾಗಿದೆ. ವಿಷಯ ಕುರಿತು ಆಳವಾಗಿ ತಿಳಿದ ಮೇಲಷ್ಟೇ ಬರೆಯುವಂತೆ ಎಚ್ಚರಿಸಿದೆ. ಎರಡನೆಯದಾಗಿ, ಪ್ರೊ.ಜಿ.ಶರಣಪ್ಪನವರ ‘ಮಿಲ್ಲರ್ ವರದಿಗೆ 100 ವರ್ಷ’ ಲೇಖನ ಮತ್ತು ‘ಪೌರತ್ವ ಮಸೂದೆ’ ಕುರಿತ ಮಾಧವ ಶೆಣೈ ಅವರ ಲೇಖನ -ಇವು ಅತ್ಯುತ್ತಮವಾಗಿ ಮೂಡಿಬಂದಿವೆ.

ನಾನು ಮುಖ್ಯವಾಗಿ ಹೇಳಲು ಹೊರಟಿರುವುದು ಶಶಿಧರ ಎಸ್.ಎಂ. ಅವರ ಉಷಾ ಪಾಡಿ ಸಂದರ್ಶನ ಕುರಿತು. ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಕುರಿತು ವಿದ್ಯಾರ್ಥಿಗಳಲ್ಲಿ ಮತ್ತು ಪೋಷಕರಲ್ಲಿ ಇನ್ನಿಲ್ಲದ ತಾತ್ಸಾರ ತುಂಬಿರುವ ಈ ಸಂದರ್ಭದಲ್ಲಿ, ಉಷಾ ಪಾಡಿಯವರು ಕನ್ನಡ ಮಾಧ್ಯಮದಲ್ಲಿ ಓದಿ ಐ.ಎ.ಎಸ್. ಮಾಡುವ ಮೂಲಕ ಕನ್ನಡ ಮಾಧ್ಯಮಕ್ಕೆ ಒಂದು ಹೊಸ ವ್ಯಾಖ್ಯೆಯನ್ನೆ ಬರೆದಿದ್ದಾರೆ. ಉಷಾ ಅವÀರು ನನಗೆ ಹತ್ತಿರವಾಗುವುದು ಅವರು ಕನ್ನಡ ಮಾಧ್ಯಮದಲ್ಲಿ ಓದಿ ಐ.ಎ.ಎಸ್. ಮಾಡಿದರು ಎಂಬುದರ ಜೊತೆಗೆ, ಅವರ ಆಲೋಚನಾ ಕ್ರಮ ಎಷ್ಟೊಂದು ಉನ್ನತವಾಗಿದೆ ಎಂಬುದರಿಂದ. ಅವರು ಆಡಿರುವ ಪ್ರತಿಯೊಂದು ಮಾತು ಅತ್ಯಂತ ಮೌಲ್ಯಯುತ, ಸ್ಫೂರ್ತಿದಾಯಕ.

‘ಬೀದಿಯಲ್ಲಿ ಕಸ ಗುಡಿಸುವ ವ್ಯಕ್ತಿ ಕೂಡ ನಮಗೆ ಸ್ಫೂರ್ತಿ’ ಎಂಬ ಮಾತಿನ ಹಿಂದಿರುವ ವಿನಯ, ‘ನಾನು ಕಂಡ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ಎಂದರೆ ಅದು ಅಬ್ದುಲ್ ಕಲಾಂ’ ಎಂಬ ಮಾತು, ‘ನಿಮ್ಮ ಬಗ್ಗೆ ನಿಮ್ಮಲ್ಲಿ ಅಪಾರವಾದ ಆತ್ಮವಿಶ್ವಾಸವಿರಲಿ, ಆಗ ಯಶಸ್ಸು ನಿಮ್ಮದಾಗುತ್ತದೆ.’ ಎಂಬ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟ ಮಾತು, ‘ಜನಪ್ರತಿನಿಧಿಗಳು ದುಷ್ಟರು ಎಂದು ಭಾವಿಸಿದರೆ ಅದು ಜನತೆಯನ್ನು ಅಗೌರವಿಸಿದಂತೆ’ ಎಂಬ ತರ್ಕಬದ್ಧ ಮಾತು -ಈ ಮುಂತಾದ ಅವರ ಮಾತುಗಳು ಯುವಜನತೆಗೆ ಒಂದು ದೊಡ್ಡ ಪ್ರೇರಣೆ. ತಾವು ಹೇಳಿದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿಂದ ಆ ಮಾತುಗಳಿಗೆ ಹೆಚ್ಚು ತೂಕವಿದೆ.

 -ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.

*  *   *  *  *

ಅರ್ಥಹೀನ, ಅನ್ ಎಥಿಕಲ್, ರಾಜ್ಯಾಂಗ ವಿರೋಧಿ!

ರಾಜಕೀಯ ನೈತಿಕತೆ ಕುರಿತು ‘ಸಮಾಜಮುಖಿ’ ಪತ್ರಿಕೆಯಲ್ಲಿ ಮಿತ್ರ ಬಿ.ಎಲ್.ಶಂಕರ್ ವಿಚಾರಪೂರಿತ ಲೇಖನ ಬರೆದಿದ್ದಾರೆ. ಆಡಳಿತ ನಡೆಸುವವರು, ಶಾಸಕರು, ಪಾರ್ಲಿಮೆಂಟ್ ಸದಸ್ಯರು ಪ್ರಜೆಗಳ ಮೇಲೆ ಸವಾರಿ ಮಾಡುವುದಕ್ಕಲ್ಲ; ನೇಮಕವಾಗಿರುವುದು ಜನತೆಯ ಸೇವಕರಂತೆ ಕೆಲಸ ಮಾಡಲು. ಇದು ರಾಜ್ಯಾಂಗದ ಆಶಯ ಎಂದು ಶ್ರೀಯುತರು ಹೇಳಿದ್ದಾರೆ.

ಕ್ರಿಮಿನಲ್ ಕೇಸು ಹೊತ್ತವರು, ಕೋಟ್ಯಧಿಪತಿಗಳು ಹಾಗೂ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳವರ ಶೇಕಡಾವಾರು ಹೆಚ್ಚುತ್ತಿರುವ ಬಗೆಗೂ ಮತದಾರರ ಗಮನ ಸೆಳೆದಿದ್ದಾರೆ. ಭ್ರಷ್ಟರು, ರಿಯಲ್ ಎಸ್ಟೇಟ್ ಏಜೆಂಟರು, ರಾಜಕಾರಣಿಗಳ ಮಕ್ಕಳು, ಮರಿಮಕ್ಕಳು ಮುಂತಾದವರು ನಮ್ಮ ಪ್ರತಿನಿಧಿಗಳಾಗುತ್ತಿದ್ದಾರೆ. ಎಂದೂ ಎಚ್ಚರಿಕೆಯ ಮಾತುಗಳನ್ನು ಹೇಳಿದ್ದಾರೆ.

ನಾನು ಒಂದು ಮೂಲಭೂತ ಪ್ರಶ್ನೆಯನ್ನು ಲೇಖಕರ ಮುಂದೆ ಇಡಬಯಸುತ್ತೇನೆ. ರಾಜಕೀಯ ಪಕ್ಷಗಳ ಪ್ರಸ್ತಾಪ ರಾಜ್ಯಾಂಗದಲ್ಲಿ ಒಂದು ಸಂದರ್ಭದಲ್ಲಿ ಮಾತ್ರ ಮಾಡಲಾಗಿದೆ. ರಾಜಕೀಯ ಪಕ್ಷಗಳು ಲೋಕಸಭೆಯಿಂದ ಹಿಡಿದು ಪಂಚಾಯಿತಿ ಚುನಾವಣೆಯವರೆಗೂ ತಮ್ಮ ಪಕ್ಷದ ಸದಸ್ಯರನ್ನು ನಿಲ್ಲಿಸುತ್ತಿವೆ. ಹಾಗಿದ್ದ ಮೇಲೆ ಜನಪ್ರತಿನಿಧಿಗಳು ಇಲ್ಲವೇ ಇಲ್ಲ ಎಂದು ಹೇಳಿದ ಹಾಗಾಯ್ತು. ಚುನಾವಣೆಗೆ ಎಲ್ಲ ಪಕ್ಷಗಳೂ ತಮ್ಮ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಕೂತೇ ತೀರ್ಮಾನಿಸುತ್ತವೆ. ಜನತೆ ಸೂಚಿಸುವ ಪ್ರತಿನಿಧಿ ಎಲ್ಲಿದ್ದಾನೆ. ಜಯಪ್ರಕಾಶ ನಾರಾಯಣರು ಹೇಳಿರುವಂತೆ ಗ್ರಾಮಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೆ ಜನರು ತಮ್ಮ ಪ್ರತಿನಿಧಿಗಳನ್ನು ನಿಲ್ಲಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಇದಕ್ಕಾಗಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಮತದಾರರ ಸಂಘಗಳನ್ನು ಸ್ಥಾಪಿಸಬೇಕು. ಮತದಾರ ತನ್ನ ಪ್ರತಿನಿಧಿ ಯಾರಾಗಬೇಕೆಂದು ತೀರ್ಮಾನ ಕೈಗೊಳ್ಳಬೇಕು.

ಪ್ರಸ್ತುತದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಪ್ರತಿನಿಧಿಗಳನ್ನು ಮತದಾರನನ್ನು ಕೇಳದೇ ಚುನಾವಣೆಗೆ ನಿಲ್ಲಿಸುತ್ತಾರೆ. ಆಯ್ಕೆಯಾಗಿ ಬಂದ ಇತರೆಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಜನಪ್ರತಿನಿಧಿಗಳಲ್ಲ. ಪ್ರತಿನಿಧಿಸುವವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳು. ಮತದಾರರ ಪ್ರತಿನಿಧಿಗಳಲ್ಲ. ರಾಜಕೀಯ ಪಕ್ಷಗಳ ಉಮೇದುವಾರರಾಗಿ ನಿಂತವರಿಗೆ ಮತದಾರ ಓಟು ಹಾಕುತ್ತಾನೆ ಮಾತ್ರ. ಹೀಗೆ ಗೆದ್ದು ಬಂದವರು ಪಕ್ಷಗಳ ಪ್ರತಿನಿಧಿಗಳೇ ಹೊರತು ಜನತಾ ಉಮೇದುವಾರರಲ್ಲ. ರಾಜ್ಯಾಂಗದ ಆಶಯವನ್ನು ಕಾರ್ಯಗತ ಕೂಡ ಮಾಡಬೇಕಾದ್ದು ಚುನಾವಣಾ ಆಯೋಗದ ಕರ್ತವ್ಯ. ಈಗ ನಡೆಸುತ್ತಿರುವ ಚುನಾವಣೆಗಳು ಅರ್ಥಹೀನ. ಅನ್ ಎಥಿಕಲ್, ರಾಜ್ಯಾಂಗ ವಿರೋಧಿ.

ಶ್ರೀಮಂತ ರೈತರ ಹಿತ ಕಾಯುವುದಕ್ಕಾಗಿ ಬಡವರನ್ನು ಲಾಠಿ ಏಟು ತಿನ್ನಲು ಬಳಸಿಕೊಳ್ಳುವುದಾಗಬಾರದು. ಬಡ ರೈತರಿಗೆ ಹೆಚ್ಚಿನ ಭೂಮಿ ದೊರೆಯುವಂತೆ ಮಾಡಲು ಸೀಲಿಂಗ್ ಲಿಮಿಟ್ ಇಳಿಸಬೇಕು. ನಿರ್ಗತಿಕ ಗ್ರಾಮೀಣ ಜನರಿಗೆ ತಲಾ 4-5 ಎಕರೆ ಭೂಮಿ ಕೊಡಿಸಬೇಕು ಎಂದೆಲ್ಲ ಬರೆದೆ.

ಪಂಚಾಯಿತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಸ್ಪರ್ಧಿಸಬಾರದು ಎಂಬ ನಿರ್ಣಯವನ್ನು ನಾವೆಲ್ಲ ಸೇರಿ ಎಂ.ವೈ. ಘೋರ್ಪಡೆಯವರು ಸ್ಥಳೀಯ ಸಂಸ್ಥೆಗಳ ಸಚಿವರಾಗಿದ್ದಾಗ ಮಾಡಿಸಿದೆವು. ಆದರೆ ಇಂದು ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲುತ್ತವೆ. ನಾಚಿಕೆ ಇಲ್ಲದೆ ಪಂಚಾಯಿತಿ ಚುನಾವಣೆಗಳಲ್ಲಿ ಇಷ್ಟು ಸೀಟು ಬಂತು, ಇಷ್ಟು ಪಂಚಾಯಿತಿಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಂಡಿದ್ದೇವೆಂದು ಪತ್ರಿಕೆಗಳಿಗೆ, ದೃಶ್ಯ ಮಾಧ್ಯಮಗಳಿಗೆ ಎಲ್ಲಾ ರಾಜಕೀಯ ಪಕ್ಷಗಳೂ ಎಗ್ಗಿಲ್ಲದೆ ಹೇಳಿಕೊಳ್ಳುತ್ತವೆ. ಇದಕ್ಕೆ ಇತಿಶ್ರೀ ಹಾಡಬೇಡವೇ?

ಇನ್ನು, ಕರ್ನಾಟಕದ ರೈತ ಸಂಘಟನೆಯ ಬಗೆಗೆ ಒಳ್ಳೆಯ ಲೇಖನ ಬರೆಯಲಾಗಿದೆ. ಆ ಮಾಹಿತಿಯ ಜೊತೆಗೆ ಇನ್ನೆರಡು ಮಾತುಗಳನ್ನು ಜೋಡಿಸಬೇಕೆಂದು ನನಗನಿಸುತ್ತದೆ. ನಂಜುಂಡಸ್ವಾಮಿಯವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರೈತರ ಶಿಕ್ಷಣ ಶಿಬಿರಗಳಿಗೆ ಅವರು ನನ್ನನ್ನು ಆಹ್ವಾನಿಸುತ್ತಿದ್ದರು. ನಾನು ಆ ಸಂದರ್ಭದಲ್ಲಿ ರೈತ ಚಳವಳಿಯ ಬಗೆಗೆ ಒಂದು 20 ಪುಟಗಳ ಪುಸ್ತಕವನ್ನು ಬರೆದು ಪ್ರಕಟಿಸಿದ್ದೆ.

ರೈತ ಸಂಘದಲ್ಲಿ ಶ್ರೀಮಂತ ರೈತರು, ಪ್ರಮುಖ ರೈತರು ಸಾಕಷ್ಟು ಸಂಖ್ಯೆಯಲ್ಲಿದ್ದರು. ಒಂದು ಎಕರೆ, ಎರಡು ಎಕರೆ ಜಮೀನುಳ್ಳವರೂ ಬಹು ಸಂಖ್ಯೆಯಲ್ಲಿದ್ದರು. ಒಂದು ಎಕರೆ, ಎರಡು ಎಕರೆಯವರನ್ನು ಬಳಸಿಕೊಂಡು ಶ್ರೀಮಂತ ರೈತರ ಹಿತ ಕಾಯುವ ಸಂಘ ಇದಾಗಬಾರದು. ಸಮಾರಾಧನೆಯಲ್ಲಿ ಒಂದು ಕೊಳಗ ಸಾರು ಮಾಡಿ ಅದರಲ್ಲಿ ಒಂದು ಕಂತೆ ಕರಿಬೇವಿನ ಸೊಪ್ಪು ಹಾಕಿ ಸಾರು ತಯಾರಾದಂತೆ ಆ ಕರಿಬೇವಿನ ಕಂತೆಯನ್ನು ಬಿಸಾಡಿ, ಸಾರನ್ನು ಬಳಸುವಂತೆ, ಈ ಶ್ರೀಮಂತ ರೈತರ ಹಿತ ಕಾಪಾಡಲು ಬಡರೈತರನ್ನೂ ಬಳಸಿಕೊಂಡು ಅವರ ಹಿತವನ್ನು ಕಡೆಗಣಿಸುವ ಸಂಭವ ಇರಬಹುದೆಂಬ ಸಂಶಯ ನನ್ನನ್ನು ಕಾಡುತ್ತಿತ್ತು. ಶ್ರೀಮಂತ ರೈತರ ಹಿತ ಕಾಯುವುದಕ್ಕಾಗಿ ಬಡವರನ್ನು ಲಾಠಿ ಏಟು ತಿನ್ನಲು ಬಳಸಿಕೊಳ್ಳುವುದಾಗಬಾರದು. ಬಡ ರೈತರಿಗೆ ಹೆಚ್ಚಿನ ಭೂಮಿ ದೊರೆಯುವಂತೆ ಮಾಡಲು ಸೀಲಿಂಗ್ ಲಿಮಿಟ್ ಇಳಿಸಬೇಕು. ನಿರ್ಗತಿಕ ಗ್ರಾಮೀಣ ಜನರಿಗೆ ತಲಾ 4-5 ಎಕರೆ ಭೂಮಿ ಕೊಡಿಸಬೇಕು ಎಂದೆಲ್ಲ ಬರೆದೆ.

ನಂಜುಂಡಸ್ವಾಮಿಯವರು, ‘ರೈತರ ಸಂಘ ಕಟ್ಟುವ ಈ ಸಂದರ್ಭದಲ್ಲಿ ಬಡ ರೈತ, ಶ್ರೀಮಂತ ರೈತ ಈ ಮಾತನ್ನೆಲ್ಲ ಪ್ರಸ್ತಾಪ ಮಾಡಲು ನಾನು ತೊಡಗಿದರೆ, ರೈತ ಸಂಘ ಕಟ್ಟುವುದಕ್ಕೆ ಆಗುವುದಿಲ್ಲ. ನಾನೊಂದು ಕೈಪಿಡಿ ಸಿದ್ಧಪಡಿಸಿದ್ದೇನೆ. ರೈತ ಸಂಘ ಬಲಗೊಂಡ ಮೇಲೆ ಈ ವಿಷಯಕ್ಕೆ ಆದ್ಯತೆ ನೀಡಲಾಗುವುದು’ ಎಂದು ನನಗೆ ಸಮಜಾಯಿಷಿ ನೀಡಿದರು. ರೈತ ಸಂಘ ಅಸ್ತಿತ್ವಕ್ಕೆ ಬಂತು ನಂಜುಂಡಸ್ವಾಮಿ ರೈತ ಸಂಘವನ್ನು ಒಂದು ಮಿಲಿಟಂಟ್ ಸಂಸ್ಥೆಯಾಗಿ ರೂಪಿಸಿದರು. ಶ್ರೀಮಂತ ರೈತರಿಗೆ ಅನೇಕ ಸೌಲಭ್ಯಗಳು ದೊರೆತವು. ಶ್ರೀಮಂತ ರೈತರ ಲಕ್ಷ ಮುಟ್ಟುವ ಸಾಲ ಮನ್ನಾ ಆಯಿತು. ಅವಧಿಗೆ ಅಗ್ಗದ ಬೆಲೆಯಲ್ಲಿ ಗೊಬ್ಬರ, ಕ್ರಿಮಿನಾಶಕಗಳು, ವ್ಯವಸಾಯ ಸಾಧನಗಳು, ಟ್ರ್ಯಾಕ್ಟರ್ ಗಳು, ಕಾಳು ಬೇರ್ಪಡಿಸುವ ಯಂತ್ರಗಳು, ಡ್ರೈಯರಗಳು, ಉಗ್ರಾಣಗಳು, ಕಾಳು ಕೊಯ್ಯುವ ಸಾಧನಗಳು ಎಲ್ಲ ದೊರೆತವು. ಸಾಲ ಮನ್ನಾ 4-8 ಸಾರಿ ಆಯಿತು. ಬಡರೈತನಿಗೂ ಸಾವಿರ ರೂ ಸಾಲ ಮನ್ನಾ ಆಗಿರಬಹುದು, ಸಬ್ಸಿಡಿ ಸಿಕ್ಕಿರಬಹುದು.

ಸಂಘದಲ್ಲಿ ಬೇರೆಬೇರೆ ಪಕ್ಷಗಳಿಗೆ ಸೇರಿದ ಸದಸ್ಯರಿರುವಾಗ ನೀವು ರೈತ ಸಂಘದಿಂದಲೂ ಉಮೇದುವಾರನನ್ನಾಗಿ ನಿಲ್ಲಸಿದರೆ ಬೇರೆಬೇರೆ ರಾಜಕೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿರುವ ಈ ಸ್ವಾರ್ಥ ಜನ ರೈತ ಸಂಘದ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಗಳಿವೆಯೇ? ಈ ಇಬ್ಬಂದಿ ಸದಸ್ಯರನ್ನು ರೈತ ಸಂಘ ಇಟ್ಟುಕೊಂಡು ಚುನಾವಣೆಗಳಲ್ಲಿ ಗೆಲ್ಲುವುದು ಸಾಧ್ಯವೇ?

ನಂಜುಂಡಸ್ವಾಮಿ ನಿಧನರಾದ ಮೇಲೆ, ರೈತ ಸಂಘ ಒಡೆಯಿತು. ಯಾವ ಸ್ವಾರ್ಥ ಈ ಬಲಶಾಲಿ ರೈತ ಸಂಘವನ್ನು ಎರಡಾಗಿ ಒಡೆಯಿತೋ ನನಗೆ ಗೊತ್ತಿಲ್ಲ. ಅಂತೂ ರೈತ ಸಂಘ ಬಡವಾಯಿತು. ಮೊದಲಿನ ಬದ್ಧತೆ ಕಣ್ಮರೆಯಾಯಿತು. ಬಡ ರೈತರನ್ನು ಮೇಲೆ ಎತ್ತುವ ಕೆಲಸ ಆರಂಭವಾಗಲೇ ಇಲ್ಲ. ಸಾಲ ಮನ್ನಾ ಬಿಟ್ಟು ಇನ್ನು ಬೇರೆ ಯಾವುದರಲ್ಲೂ ರೈತ ಸಂಘಟನೆಗೆ ಆಸಕ್ತಿಯಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷಗಳೇ ಸಂದರೂ ಬಡ ರೈತನ ಸ್ಥಿತಿಗತಿ ಮೊದಲಿನಂತೆಯೇ ಇದೆ. ಭೂಮಿ ವಂಚಿತರಾದವರ ಸಂಖ್ಯೆ ಅಪಾರವಾಗಿದೆ. ಅವರ ಬಗೆಗೆ ಯಾರಿಗೂ ಕಾಳಜಿ ಇಲ್ಲ. ಸ್ವಾರ್ಥ ಬೆಳೆದಾಗ ಇದೆಲ್ಲ ಸಹಜವಾಗಿ ನಡೆಯುವ ಪ್ರಕ್ರಿಯೆಗಳು.

ಎರಡನೆಯದಾಗಿ ರೈತ ಸಂಘದಲ್ಲಿರುವ ಶ್ರೀಮಂತ ರೈತರು, ಹೊಟ್ಟೆ ತುಂಬಿದ ರೈತರು ಒಂದಲ್ಲ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಇವರಿಗೆ ರೈತರಿಗೆ ಸಿಗುವ ಪುಕ್ಕಟೆ ಸಾಲವೂ ಬೇಕು; ರಾಜಕೀಯದಲ್ಲಿ ಸಿಗುವ ಅಧಿಕಾರ, ಅಂತಸ್ತು ದೋಚುವ ಅವಕಾಶ ಎಲ್ಲ ಬೇಕು. ಈ ಬಗೆಯ ಈ ರೀತಿಯ ಡೂವಲ್ ಮೆಂಬರ್‍ಷಿಪ್ ಕಿತ್ತು ಹಾಕಬೇಕಿತ್ತು, ಹಾಕಬೇಕು. ರೈತ ಸಂಘದ ಸದಸ್ಯನಾದವನು ರಾಜಕೀಯ ಪಕ್ಷಗಳ ಸದಸ್ಯನಾಗಿರಬಾರದು ಎಂಬ ನಿಬಂಧನೆ ಮಾಡಬೇಕು. ರಾಜಕೀಯ ಸಂಸ್ಥೆಗಳಲ್ಲೂ ಇದ್ದುಕೊಂಡು ರೈತ ಸಂಘದಿಂದ ದೊರೆಯಬಹುದಾದ ಲಾಭ ಪಡೆಯಲು ಹೊರಟರೆ ಅವನಿಗೆ ಬಡರೈತರ ಬಗೆಗೆ ಯಾವ ಕಾಳಜಿ ಇದ್ದೀತು?

ರೈತ ಸಂಘ ಪಾರ್ಲಿಮೆಂಟ್, ಶಾಸನ ಸಭೆ ಚುನಾವಣೆಗಳಲ್ಲೂ ತೊಡಗಲು ತೀರ್ಮಾನ ಮಾಡಿದ ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯ ದಿನಗಳಿಂದಲೂ ಚುನಾವಣೆಗೆ ನಿಲ್ಲುತ್ತಲೇ ಇದೆ. ಈ ಸಂಘದಲ್ಲಿ ಬೇರೆಬೇರೆ ಪಕ್ಷಗಳಿಗೆ ಸೇರಿದ ಸದಸ್ಯರಿರುವಾಗ ನೀವು ರೈತ ಸಂಘದಿಂದಲೂ ಉಮೇದುವಾರನನ್ನಾಗಿ ನಿಲ್ಲಸಿದರೆ ಬೇರೆಬೇರೆ ರಾಜಕೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿರುವ ಈ ಸ್ವಾರ್ಥ ಜನ ರೈತ ಸಂಘದ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಗಳಿವೆಯೇ? ಈ ಇಬ್ಬಂದಿ ಸದಸ್ಯರನ್ನು ರೈತ ಸಂಘ ಇಟ್ಟುಕೊಂಡು ಚುನಾವಣೆಗಳಲ್ಲಿ ಗೆಲ್ಲುವುದು ಸಾಧ್ಯವೇ?

ಆದ್ದರಿಂದ ರೈತ ಸಂಘದ ಸದಸ್ಯತ್ವವನ್ನು ಈ ಪಟ್ಟಭದ್ರ ಹಿತಾಸಕ್ತಿಗಳಿಗೆ ಕೊಡಬಾರದು ಎಂಬುದು ನನ್ನ ಖಚಿತಾಭಿಪ್ರಾಯ.

                                                                                                                                -ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

 

ತಿದ್ದುಪಡಿ

ಸಮಾಜಮುಖಿ ಮಾರ್ಚ್ ಸಂಚಿಕೆಯಲ್ಲಿ ಪ್ರಕಟವಾದ ‘ಕರ್ನಾಟಕ ಮತ್ತು ಮಹಾರಾಷ್ಟ್ರ ರೈತ ಚಳವಳಿಗಳ ವೈರುಧ್ಯಗಳು’ ಲೇಖನ ಬರೆದವರು ಮುಜಾಫರ್ ಅಸ್ಸಾದಿ. ಕಣ್ತಪ್ಪಿನಿಂದ ಅವರ ಹೆಸರು ತಪ್ಪಾಗಿ ಮುದ್ರಣವಾಗಿರುವುದಕ್ಕೆ ವಿಷಾದಿಸುತ್ತೇವೆ.
                                                                                                                                      -ಸಂ.

ಹ್ಯಾಟ್ಸಾಫ್

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡುವಾಗ ಪ್ರಯಾಣಿಕರ ಕೈಯಲ್ಲಿ ‘ಸಮಾಜಮುಖಿ’ ಪತ್ರಿಕೆ ನೋಡಿದೆ. ಪತ್ರಿಕೆಯಲ್ಲಿ ವಿಭಿನ್ನತೆ ಇತ್ತು. ಅದರಲ್ಲಿ ನಾಮದೇವ ಕಾಗದಗಾರ ಎಂಬ ಕಲಾವಿದರ ಚಿತ್ರಗಳು ಬಹಳಷ್ಟು ಹಿಡಿಸಿದವು. ಅವರ ಸುಲಭ ರೇಖೆಗಳು ಬರಹದ ತಿರುಳನ್ನೆ ಹಿಡಿದಿಟ್ಟುಕೊಂಡಿದ್ದವು. ಅವರ ರೇಖೆಗಳನ್ನು ಇನ್ನಷ್ಟು ಕಾಣುವಂತಾಗಲಿ. ‘ಸಾಮಾನ್ಯ ಕನ್ನಡಿಗನ ಅಸಾಮಾನ್ಯ ಚಿತ್ರಣಗಳು’ ಪತ್ರಿಕೆಯ ಘನತೆಯನ್ನು ಹೆಚ್ಚಿಸಿದ್ದವು. ಪತ್ರಿಕೆ ತುಂಬಾ ಚೆನ್ನಾಗಿ ಬಂದಿದೆ. ಪತ್ರಿಕೆಯ ಗುಣಮಟ್ಟ ಹಿಡಿಸಿತು. ಚಂದಾ ವಿವರಗಳನ್ನು ತೆಗೆದುಕೊಂಡಿರುವೆ. ಸದ್ಯದಲ್ಲಿ ಚಂದಾ ಹಣವನ್ನು ಕಳಿಸುವೆ. ಹ್ಯಾಟ್ಸಾಫ್… ಸಮಾಜಮುಖಿ.
 -ಆಶಾ ಭಟ್, ಶಿವಮೊಗ್ಗ.

ಬಾಲ್ಯಕ್ಕೆ ಮರಳಿದೆ

ಪೂರೀಗಾಲಿ ಮರಡೇಶಮೂರ್ತಿ ಅವರ ‘ನಮ್ಮೂರು’ ಲೇಖನ ನಿಜಕ್ಕೂ ಹಳ್ಳಿಗಾಡಿನಿಂದ ಬಂದವರ ಮನತಣಿಸುವಂತಿದೆ. ಈ ಲೇಖನ ಓದುತ್ತಿದ್ದಂತೆ ನನ್ನ ಮನ ಬಾಲ್ಯಕ್ಕೆ ಮರಳಿತು. ನಮ್ಮೂರಿನಲ್ಲಿ ಎಲ್ಲಾ ಜಾತಿಯವರು ಮತನಾಡುತ್ತಿದ್ದುದೇ ಮಾವಯ್ಯ, ಚಿನ್ನನ್ನ, ಪೆದ್ದನ್ನ, ಪಿನ್ನಮ್ಮ, ವದಿನಿ, ಅಣ್ಣಾ ಮುಂತಾಗಿ. ನಾನಂತು ಯಾರ್ಯಾರ ಮನೆಯಲ್ಲಿ ಊಟ ಮಾಡಿದ್ದೀನಿ ಗೊತ್ತಿಲ್ಲ. ನಮ್ಮೂರಿನ ಒಕ್ಕಲಿಗರ ನ್ಯಾತಪ್ಪನ ಹೆಂಡತಿ, ‘ಹೇ ರಾರ ನಾ ಗಡ್ಡ ತಿನಿ ಪೋ’ ಎಂದು ಅಕ್ಕರೆಯಿಂದ ಕರೆದು ಊಟ ಬಡಿಸುತ್ತಿದ್ದುದು ನೆನಪಿಗೆ ಬಂದು ಕಣ್ಣಾಲಿ ತೇವಗೊಂಡವು.
   -ದೇವರಾಜು ಕೆ. ಎನ್., ಬೆಂಗಳೂರು.                                                                                                                              

‘ಷ’ ಕಾರ ಉಳಿಸಿಕೊಳ್ಳಬೇಕು

ರಂಗನಾಥ ಅವರು ಕನ್ನಡ ಲಿಪಿಯನ್ನು ‘ತರ್ಕಬದ್ಧ’ಗೊಳಿಸುವ ಯತ್ನ ಮಾಡಿದ್ದಾರೆ. ಶ ಮತ್ತು ಷ ಕಾರಗಳನ್ನು ಅದಲು ಬದಲು ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಬರಹ ಮತ್ತು ಓದಿನ ನಡುವೆ ವ್ಯತ್ಯಾಸ ಇರುವುದು ಸರಿಯೇ ಎನ್ನುತ್ತಾರೆ. ಸೂರ್ಯನ ಉದಾಹರಣೆ ಕೊಟ್ಟಿದ್ದಾರೆ.
ಪ್ರತಿಯೊಂದು ಭಾಷೆಗೂ ಅದರದೇ ಆದ ವ್ಯೆಶಿಷ್ಟ್ಯ ಇರುತ್ತವೆ. ಅವನ್ನು ತರ್ಕಬದ್ಧ ಮಾಡಲು ಯತ್ನಿಸುವುದು ಸರಿಯಲ್ಲ. ಹೇಗೆ ಇದೆಯೋ ಹಾಗೆಯೇ ಸ್ವೀಕರಿಸಬೇಕು. ಅದರಲ್ಲಿ ತಪ್ಪು ಹುಡುಕುವುದು ಜಾಣತನ ಅಲ್ಲ. ಉದಾಹರಣೆಗೆ ಕನ್ನಡದಲ್ಲೇ ಬರಹ ಮತ್ತು ಉಚ್ಚಾರದ ಅತಾರ್ಕಿಕತೆ ಕಡೆ ಗಮನ ಹರಿಸಬೇಕು. ಸನ್ಮತಿ, ಸನ್ಮಾನ ಮತ್ತು ಜಗನ್ಮೋಹಿನಿ -ಈ ಶಬ್ದಗಳನ್ನು ಗಮನಿಸಿ. ಇಲ್ಲಿ ನಾವು ನ, ನಾ ಮತ್ತು ನೋ ಅಕ್ಷರ ಬರೆದಿದ್ದೇವೆ. ಮ ಒತ್ತು ಮೂರೂ ಶಬ್ಧಗಳಲ್ಲಿ ಅರ್ಧದಲ್ಲಿ ಇದೆ. ಆದರೂ ನಾವು ಬರೆದಂತೆ ಓದುತ್ತೇವೆಯೇ? ಮ, ಮಾ ಮತ್ತು ಮೋ ಎಂದು ಓದುತ್ತೇವೆ. ಇಲ್ಲಿ ತರ್ಕ ತರಲಿಕ್ಕೆ ಆಗುತ್ತದೆಯೇ? ಅದು ಕನ್ನಡದ ವ್ಯಶಿಷ್ಟ್ಯವೇ ಹೊರತು ತರ್ಕದೋಷವಲ್ಲ.

ಇಂಗ್ಲಿಷಿನಲ್ಲಿ GIRL ಎಂದು ಬರೆಯುತ್ತೇವೆ. ಆದರೆ ಅದನ್ನು ನಾವು ಗಿರ್ಲ್ ಎಂದು ಓದುವುದಿಲ್ಲ. ಗರ್ಲ್ ಎನ್ನುತ್ತೇವೆ. ಇಲ್ಲಿ ತರ್ಕದ ಪ್ರಶ್ನೆ ಬರುವುದಿಲ್ಲ, ಬರಲೂ ಬಾರದು. ಹಾಗೆಯೇ ಕರ್ನಲ್ ಗೆ ನಾವು ಬರೆಯುವ ಸ್ಪೆಲ್ಲಿಂಗಿನಲ್ಲಿ R ಅಕ್ಷರವೇ ಇಲ್ಲ! ಇವು ದೋಷಗಳೇ?

ಮತ್ತೆ ತಮಿಳಿನಲ್ಲಿ ಪ ಎನ್ನುವ ಒಂದೇ ಅಕ್ಷರವನ್ನು ಸಂದರ್ಭಕ್ಕೆ ತಕ್ಕಂತೆ ಪ, ಬ ಎಂದು ಉಚ್ಚರಿಸುತ್ತಾರೆ. ಅಲ್ಲಿ ಒತ್ತಕ್ಷರಗಳೇ ಇಲ್ಲ. ಒಂದು ಅಕ್ಷರದ ಮೇಲೆ ಚುಕ್ಕಿ ಇಟ್ಟರೆ ಅದು ಒತ್ತಕ್ಷರ ಆಗುತ್ತದೆ. ಉದಾಹರಣೆಗೆ ಅವರು ಅಮ್ಮ ಎಂದು ಬರೆಯಲು ಅಮಮ ಬರೆದು ಮೊದಲ ಮ ಮೇಲೆ ಒಂದು ಚುಕ್ಕೆ ಇಡುತ್ತಾರೆ. ಅದು ತಮಿಳು ಭಾಷೆಯ ವ್ಯಶಿಷ್ಟ್ಯ. ಇವುಗಳನ್ನು ಹೇಗೆ ರೂಢಿಯಲ್ಲಿ ಇವೆಯೋ ಹಾಗೆ ಕಲಿಯುವುದರಲ್ಲಿ ತಪ್ಪು ಇಲ್ಲ.

ಇಲ್ಲಿ ನಾನು ವಿಶದ ವಿಶಯ ಚರ್ಚಿಸುವ ಆಶಯ ಹೊಂದಿಲ್ಲ. ಶೇಷಶಾಯಿ ಯನ್ನು ನೀವು ಶೇ ಶ ಶಾ ಎಂದು ಬರೆದರೆ ಅದು ನಿಮ್ಮ ಖುಷಿ. ಆದರೆ ಅದು ಓದುಗರ ಕಣ್ಣಿಗೆ ಖಂಡಿತಾ ಕಿರಿಕಿರಿ ಅನ್ನಿಸುತ್ತದೆ. ಭಾಷೆಗಳನ್ನು ಅವು ಇರುವಂತೆ ಬಳಸಲು ಕಷ್ಟವೇನೂ ಇಲ್ಲ; ನಾವು ಷ ಕಾರವನ್ನು ಉಳಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.

ಮತ್ತೆ ಬರಹ ಉಚ್ಚಾರ ಒಂದೇ ಇರಬೇಕು ಎನ್ನುವುದಾದರೆ ನಾವು ಸನ್ಮತಿ, ಸನ್ಮಾನ ಜಗನ್ಮೋಹಿನಿಗಳನ್ನು ಹೀಗೆ ಬರೆಯಬೇಕಾಗುತ್ತದೆ. ಸನ್ಮತಿಗೆ ಮ ಕೆ ನ ಒತ್ತು… ಸನ್ಮಾನಕ್ಕೆ ಮಾ ಕೆ ನ ಒತ್ತು… ಜಗನ್ಮೋಹಿನಿಗೆ ಮೋ ಕೆ ನ ಒತ್ತು. ಇದು ಸಾಧುವೆ?
 -ಡಾ.ಭ.ನಾಗರಾಜ್, ಮೈಸೂರು.                                                                                                                                        

ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ವೃತ್ತಿತರಬೇತಿ

ಕನ್ನಡ ಪತ್ರಿಕೋದ್ಯಮದಲ್ಲಿ ಉತ್ಕ್ರಷ್ಟತೆ ಬಯಸುವ ಆಶಯದ ಹಿನ್ನೆಲೆಯಲ್ಲಿ ಇದೀಗ ಸಮಾಜಮುಖಿ ಪತ್ರಿಕೆಯು ಪತ್ರಿಕೋದ್ಯಮ ಓದುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ವೃತ್ತಿತರಬೇತಿ (ಇಂಟರ್ನ್‍ಶಿಪ್) ನೀಡಬಯಸಿದೆ.

ಪತ್ರಿಕೋದ್ಯಮವನ್ನು ಪದವಿ ಅಥವಾ ಸ್ನಾತಕೋತ್ತರ ಸ್ತರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜಮುಖಿ ಬಳಗ ವೃತ್ತಿ ತರಗತಿ ಮತ್ತು ತರಬೇತಿ ನೀಡಲಿದೆ. ಆಯ್ಕೆಯಾದವರಿಗೆ ತಿಂಗಳಿಗೆ ಕನಿಷ್ಠ ಇಪ್ಪತ್ತು ಘಂಟೆಗಳ ತರಬೇತಿ ನೀಡಲಾಗುವುದು. ಉತ್ತಮ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಭತ್ಯೆ ಕೂಡಾ ನೀಡಲಾಗುವುದು. ಆಸಕ್ತರು ತಮ್ಮ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇಮೇಲ್: samajamukhi2017@gmail.com
                                                                     

Leave a Reply

Your email address will not be published.