ನಡೆದು ನೋಡಿದ ಮೇಲುಕೋಟೆ

ನಡೆದು ನೋಡು ಕರ್ನಾಟಕ ಸರಣಿಯ ಎರಡನೆಯ ನಡಿಗೆ ಮೇಲುಕೋಟೆ ಕಡೆಗೆ ಸಾಗಿತು ಫೆಬ್ರವರಿ 8ರ ಮುಂಜಾನೆ. ಮಂಡ್ಯ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರೇಗೌಡ ಸಭಾಂಗಣದಲ್ಲಿ ನಡಿಗೆಯ ಉದ್ಘಾಟನಾ ಸಮಾರಂಭ ಏರ್ಪಾಡಾಗಿತ್ತು. ಮಂಡ್ಯ ಜಿಲ್ಲೆಯಲ್ಲಿ ಸಮಾಜಮುಖಿಗಳಾಗಿ ಬದುಕಿದ ನಿತ್ಯ ಸಚಿವ ಕೆ.ವಿ.ಶಂಕರೇಗೌಡ, ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಮತ್ತು ಲೇಖಕ ಎಚ್.ಎಲ್.ಕೇಶವಮೂರ್ತಿ ಅವರ ಸ್ಮರಣೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಲೇಖಕ ಪ್ರೊ.ಜಯಪ್ರಕಾಶಗೌಡರು ಮಾತನಾಡಿ ಈ ಮಹಾನೀಯರು ಮಂಡ್ಯಕ್ಕೆ ನೀಡಿದ ಕೊಡುಗೆ ಸ್ಮರಿಸಿದರು. ರಂಗ ನಿರ್ದೇಶಕ ರಘುನಂದನ ಸಮಾಜಮುಖಿ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಸಾಹಿತಿ ಎಂ.ಕರಿಮುದ್ದೀನ್ ನಡಿಗೆಗೆ ಚಾಲನೆ ನೀಡಿದರು.

ಕಾರ್ಯಕ್ರಮದ ನಂತರ ನಡಿಗೆ ತಂಡ ಮಂಡ್ಯ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧೀಭವನಕ್ಕೆ ತಲುಪಿತು. ಅಲ್ಲಿಂದ ಸಾಗಿದ್ದು ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಪಿ.ಇ.ಎಸ್ ಆವರಣಕ್ಕೆ. ಅಲ್ಲಿ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಚೌಡಯ್ಯ ಅವರೊಂದಿಗೆ ಸಮಕಾಲೀನ ಶಿಕ್ಷಣ ವ್ಯವಸ್ಥೆ ರಾಜಕೀಯ ವಿದ್ಯಮಾನ ಕುರಿತಂತೆ ಚರ್ಚೆ ನಡೆಯಿತು.

ನಂತರ ನಡಿಗೆ ತಂಡ ಹೊರಟಿದ್ದು ಮೇಲುಕೋಟೆ ರಸ್ತೆಯಲ್ಲಿರುವ ವಿ.ಸಿ. ಫಾರಂ ತೋಟಗಾರಿಕಾ ಕಾಲೇಜಿಗೆ. ವಿಶ್ವೇಶ್ವರಯ್ಯ ನಾಲೆ ಸಮೀಪದಲ್ಲೇ ಇರುವ ಈ ಸಂಸ್ಥೆ ಮೈಸೂರು ಮಹಾರಾಜರ ಕಾಲದಲ್ಲೇ ಆರಂಭವಾಗಿತ್ತು. ಮಂಡ್ಯ ಜಿಲ್ಲೆಗೆ ಕಾವೇರಿ ನೀರು ಹರಿದು ಬಂದಾಗ ಆ ನೆಲದಲ್ಲಿ ಕಬ್ಬು ಮತ್ತು ಭತ್ತ ಬೆಳೆಯುವುದನ್ನು ರೈತರಿಗೆ ಕಲಿಸಿದ್ದು ಇದೇ ಸಂಸ್ಥೆ. ಅಂದು ಮಂಡ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬ್ರಿಟಿಷ್ ಇಂಜಿನಿಯರ್ ಕೋಲ್‍ಮನ್ ಈ ಪ್ರದೇಶದ ಜನರಿಗಾಗಿ ಸಕ್ಕರೆ ಕಾರ್ಖಾನೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿ.ಸಿ.ಫಾರಂನಲ್ಲಿ ಹೊಸ ರಾಗಿ ತಳಿಗಳ ಆವಿಷ್ಕಾರಕ್ಕೆ ಕಾರಣರಾದ ರಾಗಿ ಲಕ್ಷ್ಮಯ್ಯ ಅವರ ಬಗ್ಗೆ ಮತ್ತು ಹೊಸ ರಾಗಿ ಮತ್ತು ಭತ್ತದ ತಳಿಗಳ ಬಗ್ಗೆ ವಿವರ ತಿಳಿದುಕೊಂಡು ಮೇಲುಕೋಟೆ ತಲುಪುವಷ್ಟರಲ್ಲಿ ವೇಳೆಗ ಸಂಜೆ ಆಗಿತ್ತು. ಅಲ್ಲಿ ನಡಿಗೆ ತಂಡದ ಸ್ಥಳೀಯ ಸಂಚಾಲಕ ನಾಗರಾಜ್ ತಂಗುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದ್ದರು.

ಮೇಲುಕೋಟೆಯ ಪು.ತಿ.ನರಸಿಂಹಚಾರ್ ರಂಗಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಾಡಾಗಿತ್ತು. ರಾವಣ ವಧೆ ಪ್ರಸಂಗವನ್ನು ತಾಳ ಮದ್ದಳೆ ಮೂಲಕ ಕಲಾತ್ಮಕವಾಗಿ ಪ್ರಸ್ತುತ ಪಡಿಸಿದವರು ಡಾ.ಉಮಾಕಾಂತ ಭಟ್ಟ ಮತ್ತು ತಂಡ.

ನಡಿಗೆಯ ಎರಡನೆಯ ದಿನ ಮುಂಜಾನೆ 6ಕ್ಕೆ ನಮ್ಮ ತಂಡ ಕಲ್ಯಾಣಿಯ ಮೆಟ್ಟಿಲುಗಳ ಮೇಲೆ ಹಕ್ಕಿಗಳ ನಿನಾದದಲ್ಲಿ ತೇಲುತ್ತಿತ್ತು. ನಸುಕಿನಲ್ಲಿ ನಮಗೆ ಮೇಲುಕೋಟೆ ತೋರಿಸಲು ಬಂದವರು ಪರಿಸರ ಪ್ರೇಮಿ ಮ್ಯಾನ್ ಮನು. ಮೇಲುಕೋಟೆ ವೈಷ್ಣವರ ಧಾರ್ಮಿಕ ಪಟ್ಟಣ. ಇಲ್ಲಿರುವ ಅನೇಕ ದೇವಸ್ಥಾನಗಳು, ನೂರಾರು ಕಲ್ಯಾಣಿಗಳು ರಾಮಾನುಜರ ಧಾರ್ಮಿಕ ಸಂಸ್ಕೃತಿಯನ್ನು ಸಾಕ್ಷೀಕರಿಸುತ್ತವೆ. ಬದಲಾವಣೆಯ ಕೆನ್ನಾಲಿಗೆಗೆ ಸಿಕ್ಕು ಶಿಥಿಲಾವಸ್ಥೆಯಲ್ಲಿರುವ ಇಲ್ಲಿನ ಧಾರ್ಮಿಕ ನೆಲೆಗಳನ್ನು ಪುನಶ್ಚೇತನ ಮಾಡಲು ಇನ್‍ಫೋಸಿಸ್ ಪ್ರತಿಷ್ಠಾನ ಮುಂದಾಗಿರುವುದರಿಂದ ಎಲ್ಲೆಲ್ಲೂ ಕಾಮಗಾರಿಯ ಭರಾಟೆ.

ಸುಮಾರು ಮೂರು ಗಂಟೆ ಕಾಲ ಮೇಲುಕೋಟೆ ಸುತ್ತಿ ಬಂದು ಸುಬ್ಬಣ್ಣ ಮೆಸ್ಸಿನ ಪುಳಿಯೋಗರೆ ಸವಿದು ಮತ್ತೆ ಹೆಜ್ಜೆ ಹಾಕಿದ್ದು ಹೊಸ ಜೀವನ ದಾರಿ ಎಂಬ ಸ್ವಯಂ ಸೇವಾ ಸಂಸ್ಥೆಗೆ. ಮೇಲುಕೋಟೆಗೆ 6 ಕಿ,ಮೀ. ದೂರವಿರುವ ಚಿನಕುರುಳಿ ರಸ್ತೆಯ ಈ ಹೊಲಕ್ಕೆ ತೆರಳುವ ವೇಳೆಗೆ ನಮ್ಮ ಮಾರ್ಗದರ್ಶಕ ಜಯಪ್ರಕಾಶಗೌಡರು ಹತ್ತಾರು
ಸಾಂಸ್ಕೃತಿಕ ಹಾಗೂ ರೈತ ಕಾರ್ಯಕರ್ತರೊಂದಿಗೆ ಸರ್ಕಲ್ ಸಭೆ ಆರಂಭಿಸಿದ್ದರು.

ಸಂಸ್ಥೆಯ ಅಧ್ಯಕ್ಷ ಸಂತೋಷ ಕೌಲಗಿ ಇತಿಹಾಸಕ್ಕೆ ಜಾರುತ್ತಿರುವ ಬದುಕನ್ನು ಹಿಡಿದು ಕಟ್ಟುವ ಸಾಹಸಕ್ಕೆ ಕೈ ಹಾಕಿದ್ದಾರೆ. ಇಲ್ಲಿರುವ ಸುಮಾರು ಇಪ್ಪತ್ತು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಮತ್ತು ಖಾದಿ ಬಟ್ಟೆ ತಯಾರಿಕೆ ನಡೆಸುವ ಇವರು ಇಲ್ಲಿ ಹೊಸ ಬದುಕು ಕಲಿಯಲು ಇಚ್ಚಿಸುವ ನಗರವಾಸಿಗಳಿಗೆ ಕ್ರ್ಯಾಷ್ ಕೋರ್ಸ್ ರೀತಿಯ ತರಗತಿಗಳನ್ನು ನಡೆಸುತ್ತಾರೆ. ಅಲ್ಲಿಂದ ಮುಂದೆ ಸುಡುಬಿಸಿಲಿನಲ್ಲಿ ಹೊಲಗದ್ದೆ, ಹಳ್ಳಕಂದರಗಳನ್ನು ಹಾದು ಸುಮಾರು ಐದು ಕಿಲೋಮೀಟರ್ ನಡೆದು ಕಲ್ಲುಬಂಡೆಗಳಿಂದ ನಿರ್ಮಾಣಗೊಂಡ ಪುರಾತನ ಸಮಾಧಿಯೊಂದನ್ನು ನೋಡಿದೆವು. ಬರುವಾಗ ಜೀವನದಾರಿ ತೋಟದಲ್ಲಿ ವನಭೋಜನ. ನಂತರ ಮೇಲುಕೋಟೆಯಲ್ಲಿ ಜನಪದ ಸೇವಾ ಟ್ರಸ್ಟ್‍ನ ಅನಾಥ ಶಿಶುಪಾಲನಾ ಕೇಂದ್ರ ಮತ್ತು ಅವರ ಬಟ್ಟೆ ಹೊಲಿಗೆ ಕೇಂದ್ರಕ್ಕೆ ಭೇಟಿ.

ಸಂಜೆ ಪುತಿನ ರಂಗಮಂದಿರದಲ್ಲಿ ಇಂದಿರಾ ಗೋಪಿನಾಥಶಾಸ್ತ್ರಿ ಅವರ ಗಮಕ ಕಾರ್ಯಕ್ರಮ ಆಲಿಸಿದ ನಂತರ ವಸತಿಗೃಹದಲ್ಲಿ ಮಂಡ್ಯ ಶೈಲಿಯ ಘಮಘಮ ಆಹಾರ ಅದ್ದೂರಿಯಾತ್ತು.

ಮುಂಜಾನೆ ಮತ್ತೆ ಸುಬ್ಬಣ್ಣ ಮೆಸ್ಸಿನ ದೋಸೆ, ಸಿಹಿ ಪೊಂಗಲ್ ಸವಿದು ಕೆರೆತೊಣ್ಣೂರಿನತ್ತ ಸಾಗಿತು ನಡಿಗೆ ತಂಡ. ಕೆರೆತೊಣ್ಗೂರು ಒಂದು ದೊಡ್ಡ ಜಲಸಂಗ್ರಾಹಾಗಾರ. ಅಷ್ಟೇ ಅಲ್ಲದೆ ರಾಮಾನುಜರಿಗೆ ಅಂದಿನ ರಾಜರು ಇಲ್ಲಿ ನೆಲೆ ಕಲ್ಪಿಸಿ ವೈಷ್ಣವ ಧರ್ಮ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿರುವ ಎರಡು ಪುರಾತನ ದೇವಾಲಯಗಳಲ್ಲಿ ಕಂಡುಬರುವ ವಾಸ್ತುಶಿಲ್ಪ ಅಂದಿನ ಧಾರ್ಮಿಕ ಬದುಕನ್ನು ಕಟ್ಟಿಕೊಡುತ್ತದೆ. ಅಲ್ಲಿಂದ ಮುಂದೆ ಕುಂತಿಬೆಟ್ಟಕ್ಕೆ ತೆರಳಿ ಅಲ್ಲಿನ ಫ್ರೆಂಚ್ ರಾಕ್‍ಗಳ ಮೇಲೇರಿ ಕಿರುಚಾರಣ ಮುಗಿಸಿದೆವು. ಕಡೆಯ ಸತ್ಕಾರವಾಗಿ ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ ಅವರ ನೇತೃತ್ವದಲ್ಲಿ ಕುವೆಂಪು ಪ್ರೌಢಶಾಲೆಯಲ್ಲಿ ಬಿಸಿಯಾದ ಊಟ ಏರ್ಪಾಟಾಗಿತ್ತು.

ಸಮಾಜಮುಖಿಯ ಮುಂದಿನ ನಡಿಗೆ ಮಡಿಕೇರಿ ಕಡೆಗೆ, ಏಪ್ರಿಲ್ 12 ರಿಂದ 14ರವರೆಗೆ.

Leave a Reply

Your email address will not be published.