ತಿದ್ದಿಕೊಳ್ಳುವ ಪ್ರಬುದ್ಧತೆಯ ಕೊರತೆ!

-ಡಾ.ಬಿ.ಎಲ್.ಶಂಕರ್

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರ್ಯಕರ್ತರು, ಮುಖಂಡರು ಮತ್ತು ಸಂಘಟನೆಯನ್ನು ಹೊಂದಿರುವ ಕಾಂಗ್ರೆಸ್ಸಿಗೆ ಪಕ್ಷವನ್ನು ಮರಳಿ ಹಳಿಗೆ ತರುವುದು ದೊಡ್ಡ ಸವಾಲೇನಲ್ಲ. ಆದರೆ, ಎಲ್ಲಿಂದ ಆರಂಭಿಸುವುದೆಂಬುದೇ ಚಿದಂಬರ ಪ್ರಶ್ನೆ!

ಒಂದು ಕಾಲದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಬಹಳ ಪ್ರಬಲರಾದ ಪ್ರಾದೇಶಿಕ ನಾಯಕರು ಇರುತ್ತಿದ್ದರು. ವ್ಯಾಪಕ ಜನಮನ್ನಣೆ ಪಡೆದಿದ್ದುದರ ಜೊತೆಗೆ ಸ್ಥಳೀಯರ ಭಾವನೆಗಳಿಗೆ ಸ್ಪಂದಿಸಿ ಕಾರ್ಯಕ್ರಮ ರೂಪಿಸುವ ಸಾಮರ್ಥ್ಯ ಪಡೆದಿದ್ದರು. ಕ್ರಮೇಣ ನಾನಾ ಕಾರಣಗಳಿಂದ ಅನೇಕ ರಾಜ್ಯಗಳಲ್ಲಿ ಇಂತಹ ಪ್ರಭಾವಶಾಲಿ ನಾಯಕರು ರಾಷ್ಟ್ರೀಯ ಪಕ್ಷಗಳ ಮುಖ್ಯವಾಹಿನಿಯಿಂದ ದೂರವಾಗಿ, ಜಾತಿ, ಮತ, ಪ್ರದೇಶ, ಭಾಷೆ, ಕುಟುಂಬ, ಸ್ವಾಭಿಮಾನ, ಪ್ರತಿಷ್ಠೆ ಮತ್ತಿತರ ಏನೇನೋ ಕಾರಣಗಳಿಂದಾಗಿ ತಮ್ಮದೇ ಸಂಘಟನೆ ಕಟ್ಟಿ, ಅನೇಕರು ಯಶಸ್ವಿಯೂ ಆದರು. ಇಂದು ಭಾರತದಲ್ಲಿ ನಾವು ಕಾಣುತ್ತಿರುವ ಹಲವಾರು ಯಶಸ್ವೀ ಪ್ರಾದೇಶಿಕ ಪಕ್ಷಗಳನ್ನು ನೋಡಿದಾಗ ಇದು ವೇದ್ಯವಾಗುತ್ತದೆ. ಇವುಗಳಲ್ಲಿ ಬಹುತೇಕ ಪಕ್ಷಗಳು ಒಂದೇ ಕುಟುಂಬದ ಸ್ವತ್ತಾಗಿರುವುದೂ ಬಹುದೊಡ್ಡ ವಿಪರ್ಯಾಸ!

ಜಾತಿ, ಮತ, ಹಣ, ವ್ಯಕ್ತಿ ನಿಷ್ಠೆ, ಮತಬ್ಯಾಂಕು ರಾಜಕಾರಣದಿಂದಾಗಿ ಪ್ರತಿಭಾವಂತರು ವ್ಯವಸ್ಥೆಯಿಂದ ಹೊರಗಿರಲು ಬಯಸುವಂತೆ ಮಾಡಿದೆಯೆಂ ದರೂ ತಪ್ಪಿಲ್ಲ. ರಾಜಕೀಯ ಪಕ್ಷಗಳು ಬಹುತೇಕ ಕುಟುಂಬದ ಆಸ್ತಿಯಾಗಿ, ರಾಜ್ಯದ, ರಾಷ್ಟ್ರದ ಹಿತಾಸಕ್ತಿಗಿಂತ ಚುನಾವಣೆ ಗೆಲ್ಲುವುದಕ್ಕೇ ಮಹತ್ವ ನೀಡಿ, ಗಣರಾಜ್ಯ (fedaral) ಕಲ್ಪನೆಯ ಅಡಿಪಾಯ (structure) ವನ್ನೇ ಅಲ್ಲಾಡಿಸುವ ಅಪಾಯದ ಸ್ಥಿತಿ ಎದುರಾಗಿದೆ.

ಕಾಂಗ್ರೆಸ್ ಪರಿಸ್ಥಿತಿಯ ಬೀಜಾಂಕುರ

ಕಾಂಗ್ರೆಸ್ ಪಕ್ಷದ ಇಂದಿನ ಪರಿಸ್ಥಿತಿಯ ಬೀಜಾಂಕುರವಾಗಿದ್ದು ೧೯೮೯ರಲ್ಲಿ. ಚುನಾವಣೆಯಲ್ಲಿ ಮತದಾರರ ಮನದಿಂಗಿತ ಅರ್ಥಮಾಡಿಕೊಂಡಿದ್ದರೆ; ಪಕ್ಷದ ಕಾರ್ಯಕರ್ತರ ಅಭಿಪ್ರಾಯಗಳಿಗೆ ಮನ್ನಣೆ ದೊರೆತಿದ್ದರೆ ಇಂದು ಈ ಸ್ಥಿತಿ ಖಂಡಿತವಾಗಿಯೂ ಇರುತ್ತಿರಲಿಲ್ಲ! ಕಾಂಗ್ರೆಸ್ ವಿಭಜನೆ ಬಳಿಕದ ೧೯೭೧ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರಕ್ಕೆರಲು ಶಕ್ತವಾದರೂ ೧೯೭೫ರ ತುರ್ತುಪರಿಸ್ಥಿತಿ ಹೇರಿಕೆಯಿಂದಾಗಿ ಮತ್ತೆ ಹಳಿತಪ್ಪಿದ್ದು ಇತಿಹಾಸ. ಭಿನ್ನ ರಾಜಕೀಯ ಸಿದ್ಧಾಂತಗಳ ಮಿಶ್ರಣವಾಗಿ ರೂಪುಗೊಂಡಿದ್ದ ಜನಾತಾಪಕ್ಷ, ತನ್ನ ಸೈದ್ಧಾಂತಿಕ ಸಂಘರ್ಷಗಳಿಂದ ಅಧಿಕಾರ ಕಳಕೊಂಡ ಪರಿಣಾಮವಾಗಿ ೧೯೮೦ರ ಲೋಕಸಭಾ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಇದು ಮುಂದೆ ೧೯೮೪ರಲ್ಲೂ ಪುನರಾವರ್ತನೆಯಾಯಿತು.

ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಅವನತಿಯ ಇತಿಹಾಸ ದಾಖಲೆ ಸೃಷ್ಟಿಸುತ್ತಾ ಇಲ್ಲಿವರೆಗೆ ಸಾಗಿಬಂದಿದೆ! ೧೯೮೯ರ ನಂತರ ಇಲ್ಲಿವರೆಗೂ ಕಾಂಗ್ರೆಸ್ ಸ್ವಂತ ಬಲದಲ್ಲಿ ಸರ್ಕಾರ ರಚನೆ ಸಾಧ್ಯವಾಗದಿರುವುದಕ್ಕೆ ಕಾರಣವಾದ ವಿಚಾರಗಳು ಇಂದಿಗೂ ಗೋಡೆಯ ಮೇಲಿನ ಸ್ಪಷ್ಟ ಬರಹದಂತಿದೆ; ಆದರೂ ಅದನ್ನು ಪ್ರಾಮಾಣಿಕ ದೃಷ್ಟಿಯಿಂದ ನೋಡಿ, ತಿದ್ದಿಕೊಳ್ಳುವ ವ್ಯವಧಾನವಾಗಲೀ, ಪ್ರಬುದ್ಧತೆಯಾಗಲೀ ನಾಯಕತ್ವಕ್ಕೆ ಬಂದಂತಿಲ್ಲ!  

೧೯೫೭ರ ಸಾರ್ವತ್ರಿಕ ಚುನಾವಣೆಯಲ್ಲಿ ನಂಬೂದರಿಪಾಡ್ ನೇತೃತ್ವದ ಮಾರ್ಕಿಸ್ಟ್ ಕಮ್ಯುನಿಸ್ಟ್ ಪಕ್ಷ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾರಮ್ಯಕ್ಕೆ ಮೊಟ್ಟಮೊದಲ ರಾಜಕೀಯ ಆಘಾತ ನೀಡಿತ್ತು. ಅಲ್ಲಿಂದಲೇ ಆರಂಭವಾಗಬೇಕಿದ್ದ ‘ನಡವಳಿಕೆಯಲ್ಲಿನ ತಿದ್ದುಪಡಿ’ ಈ ದಿನದವರೆಗೂ ಆಗದಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ! ಪ್ರತೀ ಚುನಾವಣಾ ಸೋಲಿನ ಬೆನ್ನಿನಲ್ಲೇ ಆತ್ಮಾವಲೋಕನದ ಮಾತುಗಳು ತೇಲಿಬರುತ್ತಿದ್ದರೂ ಬಹುಬೇಗನೇ ಮರೆಯಾಗುತ್ತಿದ್ದವು. ವಾಸ್ತವವಾಗಿ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ; ಯಾಕೆಂದರೆ, ಅಲ್ಲೂ ಓಲೈಕೆ ಪ್ರದರ್ಶನ; ಬಂದರೂ ಕಾಟಾಚಾರಕ್ಕೆಂಬಂತೆ ಇರುತ್ತಿತ್ತು! ರಾಜ್ಯ, ರಾಷ್ಟ್ರ ಹಿತಾಸಕ್ತಿಗಿಂತ ಈ ಓಲೈಕೆಯಲ್ಲೇ ಜನಪ್ರತಿನಿಧಿಗಳ ಗಮನ, ಶ್ರಮ, ಸಂಪನ್ಮೂಲ ಕರಗಿಹೋಗುತ್ತಿರುವುದು ಪ್ರಬುದ್ಧತೆಯೆಡೆಗೆ ಸಾಗುತ್ತಿರುವ ಭಾರತೀಯ ಪ್ರಜಾಪ್ರಭುತ್ವಕ್ಕೊಂದು ಕಪ್ಪುಚುಕ್ಕೆ ಮಾತ್ರವಲ್ಲ; ಅತ್ಯಂತ ಅಪಾಯಕಾರಿ ಬೆಳವಣಿಗೆ.

ಭಾರತೀಯ ಜನತಾಪಕ್ಷ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣ, ೩೭೦ನೇ ವಿಧಿ ರದ್ಧತಿ, ಸಮಾನ ನಾಗರಿಕ ನೀತಿಸಂಹಿತೆ ಮುಂತಾದ ವಿಚಾರಗಳನ್ನು ಮುಂದಿಟ್ಟಕೊಂಡು ರಾಷ್ಟ್ರಮಟ್ಟದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುವಲ್ಲಿ ಯಶಸ್ವಿಯಾಯಿತು. ಪಕ್ಷದ ಕಾರ್ಯಕರ್ತರ ನಿರಂತರ ನಿಷ್ಠೆ, ಸಂಘಟಿತ ಶ್ರಮ, ಪಕ್ಷ ಮತ್ತು ಸರ್ಕಾರದ ವಿಚಾರಗಳನ್ನು ಮತದಾರರ ಮಟ್ಟಕ್ಕೆ ತಲುಪಿಸುವ ವಿಧಾನವೂ ಮುಖ್ಯ ಪಾತ್ರವಹಿಸಿದ್ದನ್ನು ಮರೆಯಬಾರದು.

ಪ್ರತಿ ರಾಜ್ಯದಲ್ಲಿ ಜಾತಿ, ಪ್ರದೇಶ, ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಭಾವನೆಗಳು ತೀವ್ರವಾಗಿ ತಮ್ಮದೇ ಆದ ನಾಯಕತ್ವ ರೂಪುಗೊಳ್ಳುತ್ತಿರುವ ಪ್ರಕ್ರಿಯೆಯನ್ನು ಗಮನಿಸಿದ ಬಿ.ಜೆ.ಪಿ. ಅಂತಹ ಪ್ರಬಲ ನಾಯಕರನ್ನು ಪ್ರತೀ ರಾಜ್ಯದಲ್ಲಿ ಮುಂಚೂಣಿಗೆ ತಂದು (ಉದಾ: ಮಧ್ಯಪ್ರದೇಶದ ಶಿವರಾಜಸಿಂಗ್ ಚೌಹಾಣ್, ಛತ್ತೀಸ್‌ಗಢದ ರಮಣಸಿಂಗ್, ರಾಜಸ್ತಾನದ ಶ್ರೀಮತಿ. ವಸುಂಧರರಾಜೇ ಸಿಂಧಿಯಾ, ಬಿಹಾರದ ನೀತೀಶ್ ಕುಮಾರ್, ಹಿಮಾಚಲಪ್ರದೇಶದ ಧುಮಾಲ್, ಉತ್ತರಾಂಚಲದ ಖಂಡೂರಿ, ಪಂಜಾಬಿನ ಪ್ರಕಾಶ್ ಸಿಂಗ್ ಬಾದಲ್.. ಇತ್ಯಾದಿ.) ಜವಾಬ್ದಾರಿ ವಹಿಸಿದ ಕಾರಣದಿಂದಾಗಿ ಯಶಸ್ವಿಯಾಗಿರುವ ಸಾಕಷ್ಟು ಉದಾಹರಣೆ ನಮ್ಮ ಕಣ್ಣಮುಂದಿದೆ. ಅತ್ಯಂತ ಮುಖ್ಯವಾಗಿ; ಈಗಿನ ಪ್ರಧಾನಿಯವರು.

ವಂಶಾಡಳಿತವನ್ನು ತೀವ್ರವಾಗಿ ವಿರೋಧಿಸುತ್ತಿರುವುದು, ಭ್ರಷ್ಟಾಚಾರದ ವಿರುದ್ಧ ಗಟ್ಟಿಯಾಗಿ ಮಾತನಾಡುತ್ತಿರುವುದು, ಭಾವನಾತ್ಮಕ ವಿಚಾರಗಳನ್ನು ಬುದ್ಧಿವಂತಿಕೆಯಿಂದ ಮುಂಚೂಣಿಗೆ ತಂದಿರುವುದು ಮುಂತಾದ ಕಾರ್ಯವೈಖರಿಗಳು ಭಾ.ಜ.ಪ.ದ ಏಳಿಗೆಯಲ್ಲಿ ತಮ್ಮ ಕೊಡುಗೆ ನೀಡಿದ್ದು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳೂ ಗಮನಿಸಬೇಕಿದೆ. ಇದು ಭಾರತದ ರಾಜಕಾರಣದಲ್ಲಿ ನಿರ್ಲಕ್ಷಿಸಲಾಗದ ಬಹು ಮಹತ್ವದ ಬೆಳವಣಿಗೆಯೆಂದೇ ನನ್ನ ಅಭಿಪ್ರಾಯ.

ವಂಶಾಡಳಿತ ಅನಿವಾರ್ಯವೇ?

ಖಂಡಿತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಂಶಾಡಳಿತ ಅನಿವಾರ್ಯವಲ್ಲ. ಸಮಾಜವಾದಿ ಜಯಪ್ರಕಾಶ್ ನಾರಾಯಣರ ಸಾರಥ್ಯದಲ್ಲಿ ಸಂತತಿಯ ಆಡಳಿತದ ವಿರುದ್ಧ ಪಾಂಚಜನ್ಯ ಮೊಳಗಿಸಿದ ಮಾಜಿ ಸಮಾಜವಾದಿಗಳು ನೆಹರು-ಇಂದಿರಾ ಕುಟುಂಬ ನಾಚಿ ತಲೆತಗ್ಗಿಸುವ ಹಾಗೆ ಸಂತತಿಯ ಸಾಮ್ರಾಜ್ಯ ಪೋಷಿಸಿ ಬೆಳೆಯುತ್ತಿರುವುದು ಪರಿಸ್ಥಿತಿಯ ವಿಡಂಬನೆ! ಇಂದು ವಂಶಾಡಳಿತದ ಸಂದರ್ಭದಲ್ಲಿ ಕೇವಲ ನೆಹರು ಮನೆತನವನ್ನು ಮಾತ್ರ ಬೊಟ್ಟುಮಾಡಿ ತೋರಿಸಲಾಗುತ್ತಿದೆ. ಇದು ಪೂರ್ವಗ್ರಹವಾದ ವಿಚಾರ. ವಂಶಾಡಳಿತ ಈ ಮಟ್ಟದಲ್ಲಿ ಬೇರೂರಿದ ಕಾರಣಗಳನ್ನೊಮ್ಮೆ ಪರಿಶೀಲಿಸಿದರೆ ಕಂಡುಬರುವ ಚಿತ್ರಣವೇ ಬೇರೆ:

  • ಚುನಾವಣೆ ಸಮೀಪಿಸಿದೆ; ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಇದ್ದ ಅಭ್ಯರ್ಥಿ ನಿಧನನಾಗಿದ್ದಾನೆ ಇಲ್ಲವೆ ಆತ ರಾಜಕೀಯದಿಂದ ನಿವೃತ್ತಿಯಾಗಿದ್ದಾನೆ. ರಾಜಕೀಯ ಪಕ್ಷಗಳಿಗೆ ಗೆಲುವು ಮುಖ್ಯವಲ್ಲವೇ? ಆ ಕುಟುಂಬದ ಹಿರಿಯನ ‘ಗುಡ್‌ವಿಲ್’ ಅನುಕೂಲಕ್ಕೆ ಬಂದು ಹೊಸ ಅಭ್ಯರ್ಥಿ ಗೆಲ್ಲುತ್ತಾನೆ. ರಾಜಕೀಯ ಪಕ್ಷ ಪ್ರಯೋಗ ಮಾಡಿದರೆ ಹಿಂದಿನ ಅಭ್ಯರ್ಥಿಯ ಬೆಂಬಲಿಗರು ಸೇರಿದಂತೆ ಎಲ್ಲರೂ ಹೊಸ ಅಭ್ಯರ್ಥಿಗೆ ವಿರೋಧ ಮಾಡಿ ಆ ಪಕ್ಷದ ವಿರೋಧಿ ಅಭ್ಯರ್ಥಿ ಗೆದ್ದಿರುತ್ತಾನೆ!
  • ಅನೇಕ ಮತ ಕ್ಷೇತ್ರಗಳನ್ನು ನೋಡಿದರೆ; ಆ ಮತದಾರರು ಸಹ ಮಾನಸಿಕವಾಗಿ ತಮ್ಮ ನಾಯಕನ ಜೊತೆ ಮಿಳಿತಗೊಂಡಿರುತ್ತಾರೆ. ಆ ನಾಯಕನ ಮಕ್ಕಳು ವಿದ್ಯಾವಂತರು ಹಾಗೂ ಅರ್ಹತೆಯಿಲ್ಲದವರಾಗಿದ್ದರೂ ಅವರನ್ನೇ ಆಯ್ಕೆಮಾಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಕೆಲವು ವಂಶಗಳು ಇಂದಿಗೂ ತಮ್ಮ ಮಹತ್ವವನ್ನು ಕಾಯ್ದುಕೊಂಡಿವೆ. ಈ ವಂಶಾಡಳಿತವನ್ನು ತೊಲಗಿಸಲು ಪ್ರಬಲವಾದ ಮಾನಸಿಕ ಪರಿವರ್ತನೆ ಅಗತ್ಯ. ಇದು ಸಮಾಜದ ಆಳದಿಂದ ಬರಬೇಕು. ಹೇಗೆ? ಏನು? ಎಂಬುದನ್ನು ಸಮಾಜ ಶಾಸ್ತ್ರಜ್ಞರಷ್ಟೆ ಮಾರ್ಗದರ್ಶನ ನೀಡಬಹುದೇನೋ?
  • ಜಾತೀಯತೆಯಿಂದಾಗಿ ಈ ವಂಶಾಡಳಿತ ಹೆಚ್ಚು ಮಹತ್ವ ಪಡೆದುಕೊಂಡಿದೆ. ತಮ್ಮ ಜಾತಿಯ ವ್ಯಕ್ತಿ ಅತ್ಯುನ್ನತ ಅಧಿಕಾರದಲ್ಲಿ ಸದಾ ಇರಬೇಕು, ಅವನಿಗೆ ದೊರಕಿದ ಅಧಿಕಾರ ಅವನ ಮಗನ ಮೂಲಕ ತಮ್ಮ ಜಾತಿಗೆ ದೊರೆಯಬೇಕೆಂದು ನಮ್ಮ ಜನ ಯೋಚಿಸುತ್ತಾರೆ, ಇದನ್ನು ತಪ್ಪಿಸುವುದು ಹೇಗೆ?
  • ನಗರಪ್ರದೇಶದಲ್ಲೂ ಜಾತಿ ಭಾವನೆ ದೂರವಾಗಿಲ್ಲ. ಯೋಗ್ಯತೆಗೆ ಮಾನ್ಯತೆ ದೊರಕಿಲ್ಲ. ರಾಜಕೀಯ, ಅಧಿಕಾರಶಾಹಿ ಮತ್ತು ಸಂಪತ್ತು ಒಂದಕ್ಕೊಂದು ಬೆಸೆದುಕೊಂಡಿದೆ. ಇವು ಎಂದಿಗೂ ತಮ್ಮಲ್ಲೇ ಉಳಿಯಬೇಕೆಂದು ಆಯಾಯ ಜಾತಿ ಮತ್ತು ವರ್ಗಗಳು ತಮ್ಮತಮ್ಮಲ್ಲೇ ಯೋಚಿಸುವುದರಿಂದ ಅವರೆಂದೂ ಪಕ್ಷ, ಸಿದ್ಧಾಂತ ಮತ್ತು ದೇಶದ ಪರಿಸ್ಥಿತಿಯನ್ನು ಪರಿಗಣಿಸುವುದಿಲ್ಲ.
  • ಮಾಧ್ಯಮದವರು ಸಹ ಯಾವುದೇ ಕ್ಷೇತ್ರದ ಸಮೀಕ್ಷೆ ಮಾಡುವಾಗ ಅಭ್ಯರ್ಥಿ ಯೋಗ್ಯತೆಯ ಮೌಲ್ಯಮಾಪನ ಮಾಡುವುದಿಲ್ಲ. ಅವನು ಯಾವ ಜಾತಿ ಹಾಗೂ ಯಾರ ಮಗ ಎಂಬುದನ್ನು ‘ಹೈಲೈಟ್’ ಮಾಡುತ್ತಾರೆ. ಅಂದರೆ; ಪ್ರಜ್ಞಾವಂತ ಜನ ಸಹ ಜಾತಿ ಮತ್ತು ವಂಶವನ್ನು ಬಿಟ್ಟು ಯೋಚಿಸುವುದಿಲ್ಲ.

ಇವೆಲ್ಲಕ್ಕೂ ಪರಿಹಾರ ಅಧಿಕಾರ ವಿಕೇಂದ್ರೀಕರಣ (ಜeಛಿeಟಿಣಡಿಚಿಟisಚಿಣioಟಿ). ದಿವಂಗತ ರಾಜೀವ್ ಗಾಂಧಿಯವರ ಆಸಕ್ತಿಯಿಂದ ಸಂವಿಧಾನದ ೭೩ ಮತ್ತು ೭೪ನೇ ತಿದ್ದುಪಡಿಯಾಗಿ “ಪಕ್ಷರಹಿತ ಪಂಚಾಂiiತ್” ವ್ಯವಸ್ಥೆ ಜಾರಿಗೆ ಬಂತು. ಆದರೆ, ಮುಂದಿನ ಕೆಲವೇ ವರ್ಷಗಳಲ್ಲಿ ಇದೇ ಪಂಚಾಯತ್‌ರಾಜ್ ಕಾಯ್ದೆ ವಿವಿಧ ಹಂತಗಳಲ್ಲಿ ಸಡಿಲಗೊಂಡಾಗ “ಸಮಯಸಾಧಕ ರಾಜಕಾರಣ” ಎಲ್ಲವನ್ನೂ ಆಪೋಶನ ತೆಗೆದುಕೊಂಡದ್ದು ದುರಂತ! ೧೯೯೦ರ ದಶಕಗಳಿಂದೀಚೆಗೆ ರಾಜಕೀಯವೆಂಬುದು ಸೈದ್ಧಾಂತಿಕ ರಾಜಕಾರಣದಿಂದ ಸಮಯಸಾಧಕ ರಾಜಕಾರಣಕ್ಕೆ ತಿರುಗಿ ಮತಬ್ಯಾಂಕು ರಾಜಕಾರಣದಲ್ಲಿ ಬಂತು ನಿಂತಿದೆ. ಈ ಕೆಳಗಿನ ಎರಡು ಉದಾಹರಣೆಗಳು ಸಾಕು, ಸಮಯಸಾಧಕ ರಾಜಕಾರಣವೇನೆಂದು ಅರ್ಥಮಾಡಿಕೊಳ್ಳಲು:

೧.         ೭೩ ಮತ್ತು ೭೪ನೇ ಸಂವಿಧಾನ ತಿದ್ದುಪಡಿಯಾಗಿ “ಪಕ್ಷರಹಿತ ಪಂಚಾಂiiತ್” ವ್ಯವಸ್ಥೆಗೆ ನಾಂದಿಹಾಡಿತು; ಆ ಮೂಲಕ ನಿಜಾರ್ಥದಲ್ಲಿ ಅಧಿಕಾರ ವಿಕೇಂದ್ರೀಕರಣಕ್ಕೆ ದಾರಿಮಾಡಿಕೊಟ್ಟು, ತಮ್ಮ ಅಭಿವೃದ್ಧಿ ತಾವೇ ಸಾಧಿಸುವ ಅವಕಾಶವನ್ನು ಒದಗಿಸಿತು. ನಂತರದ ದಿನಗಳಲ್ಲಿ ಇದೇ ಪಂಚಾಯತ್‌ರಾಜ್ ಕಾಯ್ದೆ ಸಡಿಲಗೊಂಡಾಗ ಜನತಾ ಪರಿವಾರದವರು ಪ್ರತಿಭಟಿಸಲಿಲ್ಲ!

  1. ದೇವರಾಜ ಅರಸುರವರ ದೂರದರ್ಶಿತ್ವದಿಂದ ಭೂಸುಧಾರಣೆ ಕಾಯ್ದೆ ಜಾರಿಗೆ ಬಂತು. ಆದರೆ, ೧೯೯೪ರಲ್ಲಿ ಭೂಸುಧಾರಣೆ ಕಾಯ್ದೆ ದುರ್ಬಲಗೊಂಡಾಗ ಕಾಂಗ್ರೆಸ್‌ನವರು ಪ್ರತಿಭಟಿಸಲಿಲ್ಲ!

ಸೋನಿಯಾ ಗಾಂಧಿ ಕುಟುಂಬದ ಹೊರತಾಗಿ ಬೇರೆ ಯಾರನ್ನಾದರೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ನಾಯಕನೆಂದು ಒಪ್ಪುವರೇ? ಒಪ್ಪಿದರೆ ಕಾಂಗ್ರೆಸ್ ಪುನರುಜ್ಜೀವನ ಸಾಧ್ಯವೇ?

ನೆಹರು, ಗಾಂಧಿ ಪರಿವಾರದ ಹೊರತಾಗಿ, ಪಿ.ವಿ.ನರಸಿಂಹರಾವ್, ಡಾ.ಮನಮೋಹನ್ ಸಿಂಗ್, ಯಶಸ್ವೀ ನಾಯಕತ್ವವನ್ನು ಕೊಟ್ಟ ಉದಾಹರಣೆ ನಮ್ಮ ಮುಂದಿದೆ. ಕಾರ್ಯಕರ್ತರೂ, ಜನರೂ ಇದನ್ನು ಒಪ್ಪಿಕೊಂಡು ಬೆಂಬಲಿಸಿದ್ದಾರೆ ಕೂಡಾ. ನೆಹರು, ಗಾಂಧಿ ಕುಟುಂಬ ೧೯೮೯ ರಿಂದಲೂ ಸರ್ಕಾರದಿಂದ ದೂರವೇ ಇದೆ. ೧೯೯೧, ೨೦೦೪ ಮತ್ತು ೨೦೦೯ರಲ್ಲಿ ಕುಟುಂಬದವರೇ ಸರ್ಕಾರದ ನೇತೃತ್ವ ವಹಿಸುವ ಅವಕಾಶ ಇದ್ದಾಗಲೂ, ಅದರಿಂದ ದೂರ ಉಳಿದು, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡದ್ದು ನಿರ್ಲಕ್ಷಿಸುವ ವಿಷಯವಲ್ಲ. ಈಗ ರಾಹುಲ್ ಗಾಂಧಿಯೇ ‘ಗಾಂಧಿಯೇತರರು’ ಅಧ್ಯಕ್ಷರಾಗಲಿ ಎಂದು ಬಹಿರಂಗವಾಗಿ ಹೇಳಿರುವುದು ಗಮನಿಸಬೇಕಾದ ಅಂಶ.

ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಮಟ್ಟದಲ್ಲಿ ಸಮರ್ಥ ವಿರೋಧಿ ಒಕ್ಕೂಟವಾಗಿ ಹೊರಹೊಮ್ಮುವುದು ಸಾಧ್ಯವೇ?

ಪ್ರತಿಯೊಂದು ಪಕ್ಷವೂ (ಕುಟುಂಬ) ಮಹತ್ವಾಕಾಂಕ್ಷೆಯ ಉತ್ತುಂಗದಲ್ಲಿದ್ದು, ಇದು ಬಹುಶಃ ಇನ್ನೂ ಅನೇಕ ವರ್ಷಗಳ ಕಾಲ ಸಮರ್ಥ ವಿರೋಧಿ ಒಕ್ಕೂಟವಾಗಿ ಹೊರಹೊಮ್ಮಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಅನಾಯಾಸವಾಗಿ ಭಾರತೀಯ ಜನತಾ ಪಕ್ಷಕ್ಕೆ ಸಿಕ್ಕಿದೆ! ಪ್ರಾದೇಶಿಕ ಪಕ್ಷಗಳೂ ೧೯೮೯ ರಿಂದಲೂ ಕೇಂದ್ರ ಸರ್ಕಾರದಲ್ಲಿ ಪಾಲುದಾರರಾಗಿವೆ. ಆದರೆ ಯಾವುದೇ ರಾಷ್ಟ್ರೀಯ ಪಕ್ಷದ ಸಹಾಯವಿಲ್ಲದೆ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸುವಷ್ಟು ಶಕ್ತಿ ದೊರೆಯುವುದು, ಸ್ಥಳೀಯ ಹಿತಾಸಕ್ತಿಗಳ ಬಗ್ಗೆ ಸಹಮತ ಮೂಡಿಬರುವುದು ಸದ್ಯೋಭವಿಷ್ಯದಲ್ಲಿ ಸಾಧ್ಯವಾಗಲಾರದು.

ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ…? ಸದ್ಯಕ್ಕೆ ಬೇಡವೇ…?

ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲ ಪ್ರತಿಪಕ್ಷ ಅನಿವಾರ್ಯ. ಬಹುತ್ವದ ಭಾರತ ಉಳಿಸಲು, ಜಾತ್ಯತೀತವಾದ (ಸೆಕ್ಯುಲರಿಸಂ) ಸಿದ್ಧಾಂತವನ್ನು ಉಳಿಸಲು, ಶೋಷಿತರ, ನಿರ್ಲಕ್ಷಿತರ, ಅವಕಾಶ ವಂಚಿತರ ಧ್ವನಿಯಾಗಲು ಇಂದಿನ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಇತಿಹಾಸ ಇದರ ಪರವಾಗಿದೆ. ಹೋರಾಟದ, ತ್ಯಾಗದ ಹಿನ್ನೆಲೆಯಿದೆ. ಪರಿಪಕ್ವತೆಯಿರುವ, ಬದ್ಧತೆಯಿರುವ, ಶ್ರಮವಹಿಸಲು ಸಿದ್ಧವಿರುವ, ತಾಳ್ಮೆಯಿರುವ ನಾಯಕತ್ವವಷ್ಟೆ ಈಗ ಬೇಕಾಗಿರುವುದು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾರ್ಯಕರ್ತರು, ಮುಖಂಡರು ಮತ್ತು ಸಂಘಟನೆಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಪಕ್ಷವನ್ನು ಮರಳಿ ಹಳಿಗೆ ತರುವುದು ದೊಡ್ಡ ಸವಾಲೇನಲ್ಲ! ಆದರೆ, ಎಲ್ಲಿಂದ ಆರಂಭಿಸುವುದೆಂಬುದೇ ಚಿದಂಬರ ಪ್ರಶ್ನೆ! ಗುಂಪು ಕಟ್ಟುವ ಬದಲು ಪಕ್ಷ ಕಟ್ಟುವ ಮನಸ್ಸು ಮಾಡಬೇಕು. ಆಗ ಮಾತ್ರ ಕಾಂಗ್ರೆಸ್ ಎದುರಿಸುತ್ತಿರುವ ಈ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ, ಯಶಸ್ಸು ಕಾಣಲು ಸಾಧ್ಯ.

*ಲೇಖಕರು ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು.

 

Leave a Reply

Your email address will not be published.