ತುತ್ತೂರಿ ಮಾಧ್ಯಮ ಉತ್ತರದಾಯಿ ಆಗಲಿ!

-ಎನ್.ಆರ್.ವಿಶುಕುಮಾರ್

ನಲವತ್ತು ವರ್ಷಗಳ ಹಿಂದೆ ನಾವು ಪತ್ರಿಕೋದ್ಯಮ ಪದವಿ ತರಗತಿಗಳಲ್ಲಿ ಕಲಿಯುತ್ತಿದ್ದಾಗ, ಮಾಧ್ಯಮಗಳು ಎಂದೂ ಪಕ್ಷಪಾತಿಯಾಗಕೂಡದು, ಸುದ್ದಿಗಳನ್ನು ಇರುವಂತೆಯೇ ಹೇಳಬೇಕು; ತಿರುಚಬಾರದು, ಅತಿರಂಜಿತ ಮಾಡಬಾರದು, ಯಾವುದೇ ಕಾರಣಕ್ಕೂ ನಮ್ಮ ಅಭಿಪ್ರಾಯವನ್ನು ಸುದ್ದಿಯ ಒಳಕ್ಕೆ ತೂರಿಸಬಾರದು, ವಸ್ತುನಿಷ್ಠೆಯೇ ಸುದ್ದಿಯ ಜೀವಾಳವಾಗಿರಬೇಕು -ಹೀಗೆ ಸುದ್ದಿ ಬರೆಯುವ ಬಗ್ಗೆ ಹಲವಾರು ಮೂಲಪಾಠಗಳನ್ನು ಹೇಳಿಕೊಡುತ್ತಿದ್ದರು.

ಪತ್ರಿಕೋದ್ಯಮ ಪಾಠ ಕಲಿತ ನಲವತ್ತು ವರ್ಷಗಳ ನಂತರ ಈಗ ಮಾಧ್ಯಮ ಲೋಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿದರೆ ದಿಗಿಲಾಗುತ್ತದೆ. ಸುದ್ದಿಯನ್ನು ತಿರುಚಿ ಹೇಳಲಾಗುತ್ತಿದೆ. ಅತಿರಂಜಿಸಲಾಗುತ್ತಿದೆ. ಮಾಧ್ಯಮ ಸಂಸ್ಥೆಯ ಮೂಗಿನ ನೇರಕ್ಕೆ ಸುದ್ದಿ ಬರೆಯಲಾಗುತ್ತಿದೆ. ವಸ್ತುನಿಷ್ಠೆ ಎಂದರೆ ಏನು ಎಂದು ಕೇಳುವ ಹಂತ ತಲುಪಿಯಾಗಿದೆ. ಆದರೆ ವಿಪರ್ಯಾಸವೆಂದರೆ ಪಠ್ಯ ಪುಸ್ತಕದಲ್ಲಿ ಮಾತ್ರ ಮಾಧ್ಯಮ ಕಲಿಕೆಯ ಪಾಠಗಳು ಇನ್ನೂ ಹಿಂದಿನಂತೆಯೇ ಇವೆ. ಅಂದರೆ ಹೇಳಿಕೊಟ್ಟದ್ದಕ್ಕೂ, ಕಲಿತದ್ದಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲದ ವಿದ್ಯಮಾನಗಳು ಮಾಧ್ಯಮ ಲೋಕದಲ್ಲಿ ಈಗ ನಡೆಯುತ್ತಿವೆ.

ಇದಕ್ಕೆ ಏನೆಂದು ಕರೆಯೋಣ? ಮಾಧ್ಯಮ ಕ್ಷೇತ್ರದಲ್ಲಿ ಇಂಥ ಅಯೋಮಯ ಪರಿಸ್ಥಿತಿ ಇರುವಾಗ 2021ರಲ್ಲಿ ಇದರಿಂದ ಏನನ್ನು ನಿರೀಕ್ಷಿಸಬಹುದು? ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಬಣ್ಣಿಸಿಕೊಳ್ಳುತ್ತಿರುವ ಮಾಧ್ಯಮ ಕ್ಷೇತ್ರವು ಇತರೇ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಹಾದಿ ತಪ್ಪಿದಾಗ ಅದನ್ನು ತಿದ್ದುವ ಕಾರ್ಯ ಮಾಡಬೇಕೆನ್ನುವುದು ಒಪ್ಪಿತ ನೀತಿ. ಆದರೆ ಈಗ ಎಲ್ಲವೂ ತಿರುವು ಮುರುವಾಗಿ ಅಳುವ ಸರ್ಕಾರ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವುದಿರಲಿ ಅದನ್ನು ನೋಡಿಯೂ ಜಾಣಗುರುಡರಂತೆ ವರ್ತಿಸುವ ಮಾಧ್ಯಮಗಳೇ ಹೆಚ್ಚಾಗಿವೆ. ಕೆಲ ಮಾಧ್ಯಮಗಳಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಗಳ ತಪ್ಪನ್ನೇ ಸಮರ್ಥಿಸುವ ಮಟ್ಟಕ್ಕೆ ಇಳಿದುಬಿಟ್ಟಿವೆ.

ಮಾಧ್ಯಮಗಳು ಕಾವಲು ನಾಯಿಯ ಪಟ್ಟದಿಂದ ಕೆಳಗಿಳಿದು ಅಳುವ ಪಕ್ಷಗಳ ಸಾಕು ನಾಯಿಮರಿಗಳಂತೆ ಬಾಲ ಆಡಿಸಿಕೊಂಡು ಸುಳಿದಾಡುತ್ತಿವೆ. ಸಮಾಜಮುಖಿಯಾದ ನಮ್ಮ ಆಶಯದಂತೆ 2021 ರಲ್ಲಿ ಮಾಧ್ಯಮಗಳು ತನ್ನ ಗ್ರಾಹಕರಾದ ಓದುಗರ,

ಕೇಳುಗರ, ನೋಡುಗರ ಒಳಿತನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ಕಾರ್ಯ ನಿರ್ವಹಿಸಬೇಕು. ಜಾಹೀರಾತುದಾರರ, ಉದ್ಯಮಪತಿಗಳ, ರಾಜಕೀಯ ಪಕ್ಷಗಳ ಹಿತ ಕಾಪಾಡುವುದು ಮಾಧ್ಯಮಕ್ಕೆ ಎರಡನೇ ಆದ್ಯತೆಯಾಗಬೇಕು.

ಮೇಲುನೋಟಕ್ಕೆ ಸರಿ ಎಂದು ಕಾಣಿಸುತ್ತಿರುವುದನ್ನು ಯಾವ ಮುಲಾಜಿಗೂ ಮಣಿಯದೆ ಸರಿ ಎಂದು ಹೇಳಬೇಕು. ಮಾಲೀಕರ ಮರ್ಜಿಗೆ ಒಳಗಾಗದೆ ಬಹುಸಂಖ್ಯಾತ ಬಡ ಜನತೆಗೆ ಒಳಿತಾಗುವಂತಹ ಸುದ್ದಿಗಳನ್ನು ವಸ್ತುನಿಷ್ಠವಾಗಿ ಬರೆಯಬೇಕು. ಜನತೆಯ ಸಂಕಷ್ಟಗಳನ್ನು ಪರಿಹರಿಸುವಂತೆ ಸರ್ಕಾರಗಳಿಗೆ ಕಿವಿಮಾತು ಹೇಳಬೇಕು. ಮುಂದಿನ ಪೀಳಿಗೆಗೆ ಒಳಿತಾಗುವಂತಹ ನಿರ್ಧಾರಗಳನ್ನು ಯಾರ ಒತ್ತಡಕ್ಕೂ ಮಣಿಯದಂತೆ ಕೈಗೊಳ್ಳಲೇಬೇಕು ಎಂದು ಸರ್ಕಾರದ ಮೇಲೆ ಒತ್ತಾಯ ಹೇರಬೇಕು. ಮಾಧ್ಯಮ ಕ್ಷೇತ್ರದಲ್ಲಿರುವವರು ಅಧ್ಯಯನಶೀಲರಾಗಿರಬೇಕು. ಒಳಿತು ಕೆಡುಕುಗಳನ್ನು ಅರಿತು ಅದನ್ನು ನಿರ್ಭೀತಿಯಿಂದ ಹೇಳುವ ಮಾನಸಿಕ ಧೈರ್ಯವನ್ನು ರೂಡಿಸಿಕೊಳ್ಳಬೇಕು. ಜಾಗತಿಕ ವಿದ್ಯಮಾನಗಳನ್ನು ಅಧ್ಯಯನ ಮಾಡಿ ಅದನ್ನು ಸ್ಥಳೀಯ ವಿದ್ಯಮಾನಗಳ ಜೊತೆ ಹೋಲಿಕೆ ಮಾಡಿ ಅದರಿಂದ ನಮ್ಮ ಜನಸಮುದಾಯಕ್ಕೆ ಆಗುವ ಒಳಿತು ಕೆಡುಕುಗಳ ಬಗ್ಗೆ ವಸ್ತುನಿಷ್ಠ ವರದಿಗಳನ್ನು ಮಾಡಬೇಕು.

ರಾಷ್ಟ್ರೀಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರು ನಮ್ಮ ಸಂವಿಧಾನಕ್ಕೆ ಅನುಗುಣವಾಗಿ ನಮ್ಮ ದೇಶದ ವಿದ್ಯಮಾನಗಳು ನಡೆಯುತ್ತಿವೆಯೇ ಇಲ್ಲವೇ ಎನ್ನುವುದನ್ನು ಜನತೆಯ ಮುಂದಿಡಬೇಕು. ನಮ್ಮ ವೃತ್ತಿ ಧರ್ಮ ಅಂತಿಮವಾಗಿ ನಮ್ಮ ದೇಶದ ಬಡಜನತೆಯ ಪರವಾಗಿರಬೇಕು ಎನ್ನುವ ಎಚ್ಚರಿಕೆ ಸದಾ ಮನದಾಳದಲ್ಲಿ ಜಾಗೃತವಾಗಿರಬೇಕು. ತಮ್ಮ ಉದ್ಯಮಗಳ ಹಿತ ಕಾಪಾಡಿಕೊಳ್ಳಲು ಮಾಧ್ಯಮ ಕ್ಷೇತ್ರ ಪ್ರವೇಶಿಸಿರುವ ಉದ್ಯಮಿಗಳು ದೇಶ ಉಳಿದರೆ ನಾವು ಉಳಿಯುತ್ತೇವೆ ಎನ್ನುವ ಕಟು ವಾಸ್ತವವನ್ನು ಅರಿತು ದೇಶ ಉಳಿಸಲು ಸಂಕಲ್ಪ ತೊಡಬೇಕು. ತಾತ್ಕಾಲಿಕ ಲಾಭಕ್ಕಾಗಿ ಸರ್ಕಾರಗಳ ಪರ ತುತ್ತೂರಿ ಊದುವ ಮಾಧ್ಯಮಗಳು ಅಂತಿಮವಾಗಿ ತಮ್ಮ ಉತ್ತರದಾಯಿತ್ವ ಜನಗಳಿಗೆ ಇರಬೇಕು ಎನ್ನುವ ಪರಮ ಸತ್ಯಕ್ಕೆ ನಿಷ್ಠರಾಗಿ ಕಾರ್ಯ ನಿರ್ವಹಿಸಬೇಕು. ಈ ಎಲ್ಲ ನನ್ನ ಆಶಯಗಳು 2021ರಲ್ಲಿ ಈಡೇರಲಿ ಎಂದು ಬಯಸುತ್ತೇನೆ.

Leave a Reply

Your email address will not be published.