ತೆರೆಗಳು

– ಪಿ. ಲಂಕೇಶ್

ಟಿಪ್ಪಣಿ

ಈ ನಾಟಕದಲ್ಲಿ ಹೆಚ್ಚು ನಿರ್ದೇಶನಗಳನ್ನು ಸೂಚಿಸಿಲ್ಲ. ಯಾಕೆಂದರೆ ನಿರ್ದೇಶಕರು ಪಾತ್ರಗಳ, ಸಂಭಾಷಣೆಯ ಕಾವಿಗೆ ತಕ್ಕಂತೆ ತಮ್ಮ ಕ್ರಿಯಾಶಕ್ತಿಯನ್ನು ಉಪಯೋಗಿಸಿಕೊಳ್ಳಲು ಅವಕಾಶವಿರಬೇಕು.

ಆದರೆ ಕೆಲವು ಸಾಮಾನ್ಯ ಸೂಚನೆಗಳನ್ನು ಕೊಡಬಹುದು. ತೆರೆಯೆದ್ದೊಡನೆ ರಂಗದ ಮೇಲೆ ಹೆಚ್ಚುಕಮ್ಮಿ ಏನೂ ಇರುವುದಿಲ್ಲ. “ವ್ಯಕ್ತಿ”ಯೊಬ್ಬ ಮಧ್ಯೆ ಇರುತ್ತಾನೆ. ಆತ ಓದುತ್ತಿರಬಹುದು, ಹಣ ಏಣಿಸುತ್ತಿರಬಹುದು. ಅವನ ಮೇಲೆ ಬೆಳಕಿರುತ್ತದೆ. ಇತರ ಸ್ಪಾಟ್‍ಗಳನ್ನು ಉಪಯೋಗಿಸತೊಡಗಿದಂತೆ “ಮೂವರು” ಗೋಚರಿಸುತ್ತಾರೆ. ಕ್ರಮೇಣ ಒಂದು ಟೇಬಲ್ ಮತ್ತು ಸ್ಟೂಲು (ಅವನ್ನೂ ಬಟ್ಟೆಯಲ್ಲಿ ಮುಚ್ಚಿ ನ್ಯೂಟ್ರಲ್ ಮಾಡಿದ್ದರೆ ವಾಸಿ) ಗಮನಕ್ಕೆ ಬರುತ್ತವೆ. ಹಿಂದುಗಡೆ ಸಾದಾ ತೆರೆ. ಹೀಗೆ ರಂಗ ಸರಳವಾಗಿದ್ದಾಗ ಮಾತ್ರ ನಾಟಕದ ಸ್ಥಳ, ವ್ಯಕ್ತಿತ್ವದ ಗೋಸುಂಬೆ ಸ್ಥಿತಿಯನ್ನು ನಿರೂಪಿಸಲು ಸಾಧ್ಯವಾಗುತ್ತದೆ.

ಇಲ್ಲಿಯ ರೂಪು (ಫಾರ್ಮ್) ಕೆಲವು ಮುಖ್ಯ ಅಂಶಗಳನ್ನವಲಂಬಿಸಿದೆ: “ವ್ಯಕ್ತಿ”ಯ ಮತ್ತು ಮಿಕ್ಕ ಮೂವರ ನಡುವಿನ ಉದ್ದೇಶಪೂರ್ಣ ಅನ್ಯೋನ್ಯತೆ ಮತ್ತು ವಿಷಮತೆ; ನಾಲ್ವರ ಪರಸ್ಪರ ಭಿನ್ನತೆ; ವ್ಯಕ್ತಿಯ ಘೋಷಿತ ಪ್ರತಿಷ್ಠೆ ಮತ್ತು ಆತನ ನಾಟಕೀಯ ಪತನ; ಮಿಕ್ಕವರ ಘೋಷಿತ ಶುದ್ಧೀಕರಣ ಮತ್ತು ನಿಜವಾದ ಸಣ್ಣತನ…

ಮುಖ್ಯ, ಇದನ್ನು ಮಹಾ ತಮಾಷೆಯ ನಾಟಕವನ್ನಾಗಿ ಪ್ರದರ್ಶಿಸಿಬಿಡುವುದು ಹೇಗೆ ತಪ್ಪೋ ಹಾಗೆಯೇ ಸತ್ತ ಗಾಂಭೀರ್ಯದಿಂದ ಅಭಿನಯಿಸುವುದು ಅಷ್ಟೇ ಪೆದ್ದುತನ.

ಕೃತಜ್ಞತೆ: ಈ ನಾಟಕವನ್ನು ಪ್ರಕಟಿಸಲು ಅನುಮತಿ ನೀಡಿದ ಇಂದಿರಾ ಲಂಕೇಶ್ ಅವರಿಗೆ ಕೃತಜ್ಞತೆಗಳು.

ಪಿ.ಲಂಕೇಶರ ತೆರೆಗಳು

ದುರಾಗ್ರಹದ ದರ್ಶನ, ಸದಾಗ್ರಹದ ಸಾಧ್ಯತೆ, ಅನುಗ್ರಹದ ಕಾಣ್ಕೆ
-ರಘುನಂದನ್

ಲಂಕೇಶರು ‘ತೆರೆಗಳು’ ನಾಟಕ ಬರೆದದ್ದು 1964ರಲ್ಲಿ, ಐವತ್ತನಾಲ್ಕು ವರ್ಷದ ಹಿಂದೆ. ಅಂದಿನಿಂದ ಇಂದಿನವರೆಗೆ ಈ ನಾಟಕ ಕನ್ನಡ ರಂಗಭೂಮಿಯಲ್ಲಿ ತಾಜಾ ಕೆಂಡದಂತೆ ನಿಗಿಯಾಡುತ್ತಿದೆ.

ಹಿಂದೆ ಮೇಷ್ಟರಾಗಿದ್ದವನಿರಬಹುದಾದ ಮಧ್ಯವಯಸ್ಕ ನೊಬ್ಬನಿರುವ ತಾವಿಗೆ ಮೂವರು ನುಗ್ಗಿ ಬರುತ್ತಾರೆ. ಆ ತಾವು, ಅವನ ಮನೆ, ಅಂಗಡಿ, ಕಚೇರಿ – ಯಾವುದೂ ಆಗಿರಬಹುದು. (ಹಾಗೆ ನುಗ್ಗಿಬರುವವರ ಸಂಖ್ಯೆ, ರಂಗಪ್ರಯೋಗವೊಂದರಲ್ಲಿ, ಮೂರಕ್ಕಿಂತ ಹೆಚ್ಚಿರುವುದು ಸಾಧ್ಯವಿದೆ ಅನ್ನುವುದನ್ನು ಇಲ್ಲಿ ಹೇಳಬೇಕು). ಬಂದ ಆ ಜನ, ತಾವು, ಹಿಂದೆ, ಅವನ ವಿದ್ಯಾರ್ಥಿಗಳಾಗಿದ್ದವರು ಎಂದು ಹೇಳಿಕೊಂಡು, ಅವನ ಮೇಲೆ ಅಸ್ಪಷ್ಟವಾದ, ವಿವರನಿಗೂಢವಾದ ಆರೋಪಗಳನ್ನು ಹೊರಿಸಿ, ಅವನ ಗತ ಮತ್ತು ವರ್ತಮಾನಗಳ ತನಿಖೆತಪಾಸಣೆ ಶುರುಮಾಡುತ್ತಾರೆ; ಅವನು ಎಸಗಿದ ಎಂದು ತಾವು ಹೇಳುವ ಆ ತಥಾಕಥಿತ ಪಾಪ ಮತ್ತು ಅಪರಾಧಗಳ ಬಗ್ಗೆ ಪಾಟೀಸವಾಲು ಹಾಕುತ್ತಾ, ಅವನನ್ನು ಬಗೆಬಗೆಯಾಗಿ ಕೆಣಕಿ, ಚುಚ್ಚಿ, ಕೆರಳಿಸುತ್ತಾರೆ; ಹಂಗಿಸಿ, ಹೀಯಾಳಿಸಿ, ತರುಬುತ್ತಾರೆ. ಆ ವ್ಯಕ್ತಿ ನರಳುತ್ತಾನೆ, ಹೆದರುತ್ತಾನೆ; ಒಮ್ಮೊಮ್ಮೆ ಕೆರಳುತ್ತಾನೆ; ಆ ಆಗಂತುಕರು, ಮಾತುಮಾತಿನ ವಿಚಾರಣೆಯಲ್ಲಿಯೆ, ತನಗೆ ಕೊಡುವ ಹಿಂಸೆಗೆ ಪ್ರತಿಯಾಗಿ, ತಾನೂ, ಅವರನ್ನು ಹಂಗಿಸಿ, ಕೆರಳಿಸಲು ನೋಡುತ್ತಾನೆ. ಆದರೆ, ಕೆರಳುವುದು, ಸಂ ಯಮ ಕಳೆದುಕೊಂಡು ಕೂಗಾಡುವುದು, ಸುಸ್ತುಹೊಡೆದು ತಗ್ಗುವುದು, ನರಳುವುದು, ಥರಥರ ನಡುಗುವುದೆಲ್ಲ ಅವನೇ. ಆಗಂತುಕರು, ನಿರ್ದಯೆಯ ಸಣ್ಣ ನಗೆ ಸೂಸುತ್ತಿದ್ದಾರೋ ತಾವು ಅನ್ನಿಸುವಂತೆ, ತಣ್ಣಗಿರುತ್ತಾರೆ – ಕಾಫ್ಕಾನ ಕಾದಂಬರಿಯ ಮುಖ್ಯಪಾತ್ರ ಏನನ್ನು ಕಾಡುವ ದಾಕ್ಷಿಣ್ಯಹೀನ ಪೆಡಂಭೂತ ಗಳಂತೆ.

‘ಮನೇಲಿ ಯಜಮಾನ್ರು ಇದಾರೋ?’ ಅನ್ನುವುದು ಆಗಂತುಕರು ಶುರುವಿಗೇ ಜಬರಿಸಿ ಕೇಳುವ ಪ್ರಶ್ನೆ. ಬಳಿಕ, ನಾಟಕದಲ್ಲಿ, ‘ಯಜಮಾನ’ನ ಪ್ರಸ್ತಾವ ಬೇರೆಬೇರೆ ರೀತಿಯಲ್ಲಿ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ, ಸುಮಾರು ಇಪ್ಪತ್ತು ಸಲ ಬರುತ್ತದೆ; ಆ ವ್ಯಕ್ತಿಯನ್ನು, ಮತ್ತು ನಮ್ಮನ್ನು, ಬಗೆಬಗೆಯಾಗಿ ಕಾಡುತ್ತದೆ. ಬಸವಣ್ಣನವರ ‘ಮನೆಯೊಳಗೆ ಮನೆಯೊಡೆಯನಿದ್ದಾನೋ, ಇಲ್ಲವೋ’ ಎಂದು ಶುರುವಾಗುವ ವಚನದ ಮಾರ್ದನಿಯಿದು ಅನ್ನುವುದು ಸ್ಪಷ್ಟವಿದೆ. ಆ ವ್ಯಕ್ತಿ ಆ ‘ಯಜಮಾನ’ನನ್ನು ಮುಗಿಸಿಬಿಟ್ಟಿದ್ದಾನೆ (ಅಥವಾ ಮುಗಿಸಿಬಿಟ್ಟಿದ್ದೇನೆ ತಾನು ಎಂಬ ಭ್ರಮೆಯಲ್ಲಿದ್ದಾನೆ) ಮತ್ತು ಅವನ ಜಾಗವನ್ನು ತಾನು ಆಕ್ರಮಿಸಿಕೊಂಡಿದ್ದಾನೆ ಎಂಬ ಧ್ವನಿ ಇದೆ ನಾಟಕದುದ್ದಕ್ಕೂ.

ಮನೆಯೊಳಗೆ ಮನೆಯೊಡೆಯನಿಲ್ಲ. ಹಾಗಿದ್ದರೂ, ಸಂಭಾವಿತರಂತೆ ಮೆರೆದಾಡುತ್ತಿದ್ದೇವೆ ನಾವೆಲ್ಲರೂ; ನಮ್ಮನಮ್ಮ ಬಾಳತಂಬೂರಿಯನ್ನು ಬರಿದೇ ಬಾರಿಸುತ್ತ, ತರವಲ್ಲದ ಸ್ವರ ಹೊರಡಿಸುತ್ತಿದ್ದೇವೆ; ಅದೇ ಸತ್ಯ, ಸುಖ ಎಂಬ ಭ್ರಮೆಯಲ್ಲಿ ದ್ದೇವೆ. ಇದು ಈ ನಾಟಕ ಧ್ವನಿಸುವ ಮೊದಲ ದೊಡ್ಡ ವ್ಯಂಗ್ಯ.

ಆ ವ್ಯಕ್ತಿಯ ಭ್ರಮೆಯ ಪುಗ್ಗಿಯನ್ನು ಸೂಜಿಯಿಂದಲ್ಲ, ದಬ್ಬಳದಿಂದ ಚುಚ್ಚಿ ಒಡೆವ ಆಗಂತುಕರು, ಅವನು ಮಾಡಿದ ಪಾಪ ಮತ್ತು ಅಪರಾಧಗಳಿಗಾಗಿ ಅವನ ಉರುಲುಹಾಕಲು ಅಣಿಯಾಗುತ್ತಾರೆ ಎಂಬ ಚಿತ್ರವತ್ ಅಭಿನಯದ ಸೂಚನೆಯೊಂದಿಗೆ ನಾಟಕ ಮುಗಿಯುತ್ತದೆ.

ಈ ನಾಟಕ ಧ್ವನಿಸುವ ಮತ್ತೊಂದು ದೊಡ್ಡ ವ್ಯಂಗ್ಯ ವಿರುವುದು ಇಲ್ಲಿ: ಆಗಂತುಕರ ಒಟ್ಟು ಧೋರಣೆ ಮತ್ತು ನಡವಳಿಕೆಯಲ್ಲಿ. ತಾವು ಆ ವ್ಯಕ್ತಿಯಂತೆ ಪಾಪಿ-ಅಪ ರಾಧಿಗಳಲ್ಲ, ನೈತಿಕವಾಗಿ ಪರಿಶುದ್ಧರು, ತಾವು ಎಂಥ ಜುಲುಮೆಮಾಡಿದರೂ ಅದು ನ್ಯಾಯಯುತ-ನೈತಿಕವಾದದ್ದು ಎಂದುಕೊಂಡವರಂತೆ ಇರುತ್ತಾರೆ ಅವರುಇಂದಿನ, ಮತ್ತು ಎಂದಿನ, ಯಾವುದೇ ಬಣ್ಣ, ಯಾವುದೇ ಬಣದ ದೈವಮತಧರ್ಮ ಮತ್ತು ರಾಜಕೀಯಮತ ಧರ್ಮದ ಗಣಾಚಾರದವರಂತೆ, ಸ್ವಯಂಘೋಷಿತ ರಕ್ಷಕರಂತೆ. ಆ ಸಮಯಸಾಧಕ ವ್ಯಕ್ತಿಯಂತೆ ತಾವು ಕೂಡ ಹುಲುಮಾನವರೇ, ಅವನಂಥವರೇ ಅನ್ನುವುದನ್ನು ಮರೆಯುತ್ತಾರೆ.

ಇಲ್ಲಿ ಬಳಸಿರುವ ಫೋಟೋಗಳು

ನಾಟಕದಲ್ಲಿನ ಆ ವ್ಯಕ್ತಿಗೆ ಹೆಸರಿಲ್ಲ; ಮಧ್ಯಯುಗೀನ ಇಂಗ್ಲಿಶ್ ನಾಟಕಗಳ ಎವ್ರಿಮ್ಯಾನ್ ಅವನು; ತಾತ್ತ್ವಿಕ-ಮಾನ ವಿಕವಾದ ಅರ್ಥದಲ್ಲಿ, ಕೇವಲ ಸಾಮಾನ್ಯ. ಆದರೆ, ತಾವು ಅವನಂತಲ್ಲ, ಅ-ಸಾಮಾನ್ಯರು ಎಂದು ಭ್ರಮಿಸಿಕೊಂಡಿರುವ ಆ ಆಗಂತುಕರಿಗೆ ಕಿಟ್ಟಿ, ಕಂಠಿ, ವಿಟ್ಟಿ ಎಂಬ, ತೋರಿಕೆಯ, ಹೆಸರುಗಳಿವೆ. ಆ ವ್ಯಕ್ತಿಯು ತನ್ನ ಬಗೆಗಿನೊಂದು ತೋರಿ ಕೆಯಲ್ಲಿ ತನ್ನ ತಾನು ಏಮಾರಿಸಿಕೊಂಡಿರುವಂತೆಯೆ, ಆಗಂತುಕರು ತಮ್ಮ ಬಗೆಗಿನ ಹಲವು ತೋರಿಕೆಯಲ್ಲಿ ತಮ್ಮನ್ನು ತಾವು ಏಮಾರಿಸಿಕೊಂಡಿದ್ದಾರೆ. ಕಡೆಗೆ ಎಲ್ಲವೂ ತೋರಿಕೆಯೆ, ಹುಸಿಯೆ.

ಹೀಗೆ, ನಮ್ಮ ಅರಿವನ್ನು ಒಂದರಮೇಲೊಂದರಂತೆ ಮುಸುಕಿರುವ ತೆರೆ-ಪರದೆಗಳನ್ನು ನಿರ್ದಾಕ್ಷಿಣ್ಯವಾಗಿ ಸರಿಸಿಹಾಕುತ್ತ, ಹರಿಹರಿದುಹಾಕುತ್ತದೆ ತೆರೆಗಳು ಎಂಬ ಈ ನಾಟಕ; ವ್ಯಕ್ತಿಗತವಾದ, ಹಾಗೂ ಸಾಮುದಾಯಿಕವಾದ, ಮನುಷ್ಯಜೀವಿಯ ಅಸಲಿನ ಅಲೆಗಳ ಕಾಣ್ಕೆಯನ್ನು ನೀಡಲು ಹವಣಿಸುತ್ತದೆ; ನಮ್ಮ ಮನಸ್ಸಿನಲ್ಲಿ ಅರಿವಿನ ಹಲವು ತೆರೆ ಎಬ್ಬಿಸುತ್ತದೆ. ತೆರೆಗಳು ಅನ್ನುವುದಕ್ಕೆ ಅಲೆಗಳು, ಪರದೆಗಳು ಎಂಬ ಎರಡೂ ಅರ್ಥಗಳಿವೆಯಲ್ಲವೆ?

ಈ ಲೇಖಕ್ಕಿರುವ ಸ್ಥಳಾವಕಾಶದ ಮಿತಿಯಲ್ಲಿ, ಅಸಂಗತತೆಯ ಸಾಹಿತ್ಯ ಮತ್ತು ಲೋಕದೃಷ್ಟಿ ಎಂಬ ಹಣೆಪಟ್ಟಿಯ ಬಗ್ಗೆ ಒಂದು ಮಾತು. ಆಧುನಿಕ ಯೂರೋಪಿನ ಸಾಹಿತ್ಯದಮಟ್ಟಿಗೆ, ಕಾಫ್ಕಾ, ಕಮೂ, ಬೆಕೆಟ್ ಮತ್ತು ಇಯೊನೆಸ್ಕೊ ಅವರು ಆ ಸಾಹಿತ್ಯ ಮತ್ತು ಲೋಕದೃಷ್ಟಿಯ ಅತಿಮುಖ್ಯ ಪ್ರತಿನಿಧಿಗಳು. ಅವರ ಆ ದೃಷ್ಟಿ ಅಧಿಭೌತಿಕ-ಅಧಿ ಆತ್ಮಿಕ (ಮೆಟಫಿಸಿಕಲ್-ಸ್ಪಿರಿ ಚುಯೆಲ್) ಆದದ್ದು; ಈ ವಿಶ್ವದಲ್ಲಿ ಮನುಷ್ಯಜೀವನ ಮತ್ತು ಮಾನಸಿಕತೆಗಿರುವುದು ಕವಡೆಕಾಸಿನ ಕಿಮ್ಮತ್ತು ಮಾತ್ರವೇ ಅನ್ನುವಂಥದು; ಜಗನ್ನಿಯಾಮಕವಾದ ಋತದಲ್ಲಿ ಮನುಷ್ಯತ್ತ್ವಕ್ಕೆ ಯಾವ ಸ್ಥಾನಮಾನವೂ ಇಲ್ಲವೇನೋ ಅನ್ನುವಂಥದು. ಅಥವಾ, ಇನ್ನೂ ನಿಖರವಾಗಿ, ಮನುಷ್ಯಜೀವನ ಮತ್ತು ಮಾನಸಿಕತೆಯ ಮಟ್ಟಿಗೆ, ಈ ವಿಶ್ವದಲ್ಲಿ ಋತವೊಂದಿದೆ ಅನ್ನುವುದೇ ಒಂದು ಭ್ರಮೆ ಇರಬಹುದೇನೋ ಅನ್ನುವಂಥದು. ಆ ದೃಷ್ಟಿಯಿಂದ ಇಡೀ ವಿಶ್ವದ ನಡೆಯೆ ಅಸಂಗತ ಎಂಬಂತಿದೆ ಅವರ ವಿಷಣ್ಣತೆ, ನಿರ್ವಿಣ್ಣತೆಗಳ ನಿಲುವು. ಅಲ್ಲಿ ಅನುಗ್ರಹದ ಸಾಧ್ಯತೆಯಿಲ್ಲ. ಹೆಚ್ಚೆಂದರೆ, ಸಣ್ಣಗೆ, ಅದರ ಹಂಬಲದ ಹತಾಶೆಯ ಮುಲುಗಿದೆ.

ಯೂರೋಪಿನ ಆ ನಾಲ್ವರ ನೋಟ ಮತ್ತು ಸಾಹಿತ್ಯಿಕ ಉದ್ದೇಶಗಳಿಗೆ ಹೋಲಿಸಿದರೆ, ಲಂಕೇಶರ ನೋಟ ಮತ್ತು ಸಾಹಿತ್ಯಿಕ ಉದ್ದೇಶ ಮಿತವಾದದ್ದು. ಅವರಲ್ಲಿ ಕಾಣುವುದು ನೈತಿ ಕ ವ್ಯಗ್ರತೆ, ವಿಷಣ್ಣತೆ, ಮತ್ತು ವ್ಯಂಗ್ಯ. ನೈತಿಕ-ಭೌತಿಕ ವಾಗಿರುವ (ಅಂದರೆ, ವ್ಯಾವಹಾರಿಕ ಲೋಕದಲ್ಲಿನ ಮಾರಲ್‍ಎಥಿಕಲ್ ನಡೆಯನ್ನು ಕುರಿತಾದ) ಲೌಕಿಕ-ಸಾಮಾಜಿಕ ನೋಟ ಅವರದ್ದು. ಆ ನೋಟ ಮನುಷ್ಯಜೀವಿಯ ನಡೆ ಮತ್ತು ನಡತೆಯನ್ನಷ್ಟೆ ನಿರುಕಿಸಿ ನೋಡುತ್ತದೆ; ವಿಶ್ವಋತದ ನಡೆಯನ್ನಲ್ಲ. ಆದ್ದರಿಂದ, ಲಂಕೇಶರಲ್ಲಿನ ಲೋಕ, ತಾತ್ತ್ವಿಕವಾಗಿ, ಅಸಂಗತವಾದ್ದಂತೂ ಅಲ್ಲ; ಏನಿದ್ದರೂ, ಅಲ್ಲಿಯ ಮನುಷ್ಯಜೀವಿಗಳು ತಾವು ನೀತಿಗೆಟ್ಟ ವರು, ಭ್ರಮಿತರು, ಅಷ್ಟೆ. ಹಾಗಾಗಿ, ಅವರ ಆ ವಿಶ್ವದಲ್ಲಿ ಅನುಗ್ರಹದ ಸಾಧ್ಯತೆ ಇದ್ದೇ ಇದೆ; ಅದರ ಹಂಬಲವಂತೂ ಆದ್ರ್ರವಾಗಿಯೆ ಇದೆ.

ಲಂಕೇಶ್ ಮೂಲಭೂತವಾಗಿ ಕವಿ. ಅವರ ಏಳೂ ಚಿಕ್ಕ ನಾಟಕಗಳು ನಾಟಕವೆಂಬ ಸಾಹಿತ್ಯಪ್ರಕಾರಕ್ಕೆ ಸೇರಿ
ದ ದೃಶ್ಯಕಾವ್ಯಗಳು ಮಾತ್ರವಲ್ಲ, ಶ್ರವ್ಯಕಾವ್ಯಗಳು ಕೂಡ ಹೌದು. ಅವರ ಆ ನಾಟಕಗಳನ್ನು ತಕ್ಕ ರೀತಿಯಲ್ಲಿ, ಸೂಕ್ಷ್ಮಜ್ಞತೆಯಿಂದ, ಸಂಪಾದಿಸಿ (ಅಂದರೆ, ಬೇಡವೆನಿಸುವ ಕೆಲವು ಮಾತು ಮತ್ತು ಸಾಲುಗಳನ್ನು ತೆಗೆದುಹಾಕಿ, ಕೆಲವು ಮಾತು, ಸಾಲು ಮತ್ತು ಕ್ರಿಯೆಗಳ ಸ್ಥಳಾಂತರ ಮಾಡಿ), ಭಾವದ ಎಲ್ಲ ಸೂಕ್ಷ್ಮಲಯಗಳನ್ನು ಪಾಲಿಸುತ್ತ, ಭಾವಪೂರ್ಣವಾಗಿ,ನಾಟಕೀಯವಾಗಿ ಓದಿದರೆ, ಅವು, ಒಂದೊಂದೂ, ನವ್ಯ, ಖಂಡಕಾವ್ಯವೇ ಆಗಿ ಕೇಳಿಸುತ್ತವೆ. ಹಾಗೆ ಮಾಡಿ, ಪುಳಕಗೊಂಡವನಾಗಿ ಈ ಮಾತಾಡಿದ್ದೇನೆ. ಇದಲ್ಲವೆ, ನರಕದರ್ಶನದಿಂದ ಭಾವಶುದ್ಧಿಗೊಳಗಾಗಿ ಪುಳಕಗೊಳ್ಳುವುದರ, ಮತ್ತು ನಮ್ಮನ್ನು ಪುಳಕಗೊಳಿಸುವುದರ, ಲಂಕೇಶ್ ಪರಿ?!

ನಮ್ಮ ಸುತ್ತಾ, ಮತ್ತು ನಮ್ಮನಮ್ಮೊಳಗೆಯೆ, ಇರುವ ದುರಾಗ್ರಹದ ದರ್ಶನ ನೀಡುತ್ತದೆ ಈ ನಾಟಕ; ಆ ದರ್ಶನದಾಚೆಗೆ, ನಮ್ಮಲ್ಲಿಯೆ ಇರುವ ಸದಾಗ್ರಹದ ಸಾಧ್ಯತೆಯನ್ನು ಸೂಚಿಸುತ್ತದೆ; ಕಡೆಗೆ, ಅನುಗ್ರಹದ ತಹತಹ ಮತ್ತು ಪುಳಕದ ಸಣ್ಣ ಕಾಣ್ಕೆಯನ್ನು ನೀಡುತ್ತದೆ. ಅಂಥ ದರ್ಶನ, ಸಾಧ್ಯತೆ ಮತ್ತು ಕಾಣ್ಕೆಗಳನ್ನು ಆಧು ನಿಕ ಕನ್ನಡ ಸಾಹಿತ್ಯದಲ್ಲಿ ಪ್ರಖರವಾಗಿ ತೋರಿದವರು ಲಂಕೇಶ್.

ಪಿ.ಲಂಕೇಶ್

ಜನನ, ಮಾರ್ಚ್ 8, 1935, ಶಿವಮೊಗ್ಗೆಗೆ 14.4 ಕಿ.ಮೀ. ದೂರದಲ್ಲಿರುವ ಕೊನಗವಳ್ಳಿ ಎಂಬ ಗ್ರಾಮದಲ್ಲಿ. ಶಿವಮೊಗ್ಗೆಯ ಕಾಲೇಜ್ (1953-55)ನಲ್ಲಿ ಇಂಟರ್ ಮೀಡಿಯಟ್; ಬೆಂಗಳೂರಿನ ಸೆಂಟ್ರಲ್ ಕಾಲೇಜ್ (1955-58)ನಲ್ಲಿ ಇಂಗ್ಲಿಷ್ ಆನರ್ಸ್; ಮೈಸೂರಿನ ಮಹಾರಾಜ ಕಾಲೇಜ್ (1958-59)ನಲ್ಲಿ ಇಂಗ್ಲಿಷ್ ಎಂ.ಎ.

1959ರಿಂದ 1962ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕ; ಆಮೇಲೆ ಸೆಂಟ್ರಲ್ ಕಾಲೇಜಿನಲ್ಲಿ ಮೂರು ವರ್ಷ (1962-65), ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಒಂದು ವರ್ಷ(1965-66) ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹನ್ನೆರಡು ವರ್ಷ (1966-78) ಅಧ್ಯಾಪಕ. 1978ರಲ್ಲಿ ‘ಪಲ್ಲವಿ’ ಚಿತ್ರ ಬಿಡುಗಡೆ. 1980ರಲ್ಲಿ ನಾಲ್ಕನೆಯ ಚಿತ್ರ ‘ಎಲ್ಲಿಂದಲೋ ಬಂದವರು’ ಬಿಡುಗಡೆ. 1980ರಲ್ಲಿ ‘ಲಂಕೇಶ್ ಪತ್ರಿಕೆ’ಯ ಆರಂಭ.

ಮರಣ, ಜನೆವರಿ 25, 2000.

                                    ತೆರೆಗಳು

ಮಧ್ಯವಯಸ್ಕನೊಬ್ಬ ರಂಗದ ಮೇಲಿರುವನು. ಮೂವರ ಪ್ರವೇಶ: ಒಬ್ಬ ಎತ್ತರ, ಇನ್ನೊಬ್ಬ ಸಾಮಾನ್ಯ, ಮತ್ತೊಬ್ಬ ಕುಳ್ಳ. ಇವರ ಪ್ರವೇಶಕ್ಕೆ ಬದಲು ಕತ್ತಲ ಪೊರೆ ಹರಿದು ತೋರಿಸಬಹುದು.
ಮಧ್ಯವಯಸ್ಕ ಇವರ ಇರವನ್ನು ಗಮನಿಸದೆ ಇರುವನು. ಮೂವರಲ್ಲೊಬ್ಬ ಶುರುಮಾಡುವನು.
ಕಂಠಿ : (ನಡು ಎತ್ತರ)
ನಮಸ್ಕಾರ.
(ವ್ಯಕ್ತಿ ಸುಮ್ಮನೆ ಇರುವನು)
ನಿಮಗೇ ಹೇಳಿದ್ದು, ನಮಸ್ಕಾರ.
ವ್ಯಕ್ತಿ : ಓ ಗಮನಿಸಲಿಲ್ಲ: ನಮಸ್ಕಾರ.
ಕಂಠಿ : ಇವರು ನನ್ನ ಸ್ನೇಹಿತರು.
ವ್ಯಕ್ತಿ : (ಆಸಕ್ತಿ ಇಲ್ಲದೆ)
ಸಂತೋಷ.
ಕಂಠಿ : ನಿಮಗೇ ಹೇಳಿದ್ದು: ಇವರು ನನ್ನ ಸ್ನೇಹಿತರು.
ವ್ಯಕ್ತಿ : ಸಂ-ತೋಷ.
ಕಂಠಿ : (ಕುಳ್ಳನಿಗೆ)
ಇವನ ಹೆಸರು ಕಿಟ್ಟಿ.
(ಎತ್ತರದವನಿಗೆ)
ಇವನು ವಿಟ್ಟಿ.
ಕಿಟ್ಟಿ, ವಿಟ್ಟಿ: ನಮಸ್ತೆ ಸಾರ್. ಶರಣು ಸಾರ್.
(ಮೌನ)
ಕಂಠಿ : ಮನೇಲಿ ಯಜಮಾನ್ರು ಇದಾರೋ?
ವ್ಯಕ್ತಿ : ಯಾವ ಯಜಮಾನ್ರು ಬೇಕಿತ್ತು ತಮಗೆ?
ವಿಟ್ಟಿ : ಎಷ್ಟು ಜನ ಯಜಮಾನ್ರು ಗೊತ್ತು ತಮಗೆ?
ವ್ಯಕ್ತಿ : ಇಲ್ಲಿ ಮಾತ್ರ ನಾನೇ ಯಜಮಾನ.
ಕಿಟ್ಟಿ : ಆನೇ ನೋಡಾಕ್ಬಂದು ಆಡು ನೋಡಿದಂಗಾತು.
ಕಂಠಿ : (ವಿಶೇಷ ಸಭ್ಯತೆಯಿಂದ)
ಮರೆತುಬಿಟ್ಟಿರೋ ಹಾಗೆ ಕಾಣುತ್ತೆ?
ವ್ಯಕ್ತಿ : ಇಲ್ಲ, ಇಲ್ಲ, ಮುಖಪರಿಚಯ ಚೆನ್ನಾಗೇ ಇದೆ-
ಕಂಠಿ : ಹೆಸರು ನೆನಪಾಗ್ತಿಲ್ಲ ಅಂತ ಕಾಣುತ್ತೆ.
ವ್ಯಕ್ತಿ : ಯೋಚಿಸ್ತಿದ್ದೇನೆ.
ಇವರ ಹೆಸರೇನಂದ್ರಿ?
ಕಂಠಿ : ಕಿಟ್ಟಿ.
ವ್ಯಕ್ತಿ : ಇನ್ನೊಂದ್ಸಲ ಹೇಳಿ.
ಕಂಠಿ : ಕಿಟ್ಟಿ.
ವ್ಯಕ್ತಿ : ಇವರು?
ಕಂಠಿ : ವಿಟ್ಟಿ.
(ಗಟ್ಟಿಯಾಗಿ)
ವಿಟ್ಟೀ.
ಕಿಟ್ಟಿ : (ವಿಟ್ಟಿಗೆ)
ಕೆಪ್ಪು?
ವಿಟ್ಟಿ : (ಕಿಟ್ಟಿಗೆ)
ಬೆಪ್ಪು?
ವ್ಯಕ್ತಿ : ನೆನಪಾಗ್ತಿದೆ, ನೆನಪಾಗ್ತಿದೆ. ನನ್ನ ವಿದ್ಯಾರ್ಥಿಗಳಾಗಿದ್ರಿ ಅಂತ ಕಾಣುತ್ತೆ ಅಲ್ವೆ?
ಕಂಠಿ : ಯಾವ ಊರಲ್ಲಿ ಹೇಳಿ?
ವ್ಯಕ್ತಿ : ಚಿಕ್ಕಮಗಳೂರು?
ಕಂಠಿ : ಉಹ್ಞೂಂ
ವ್ಯಕ್ತಿ : ಶಿವಮೊಗ್ಗ?
ಕಂಠಿ : ತಪ್ಪು.
ವ್ಯಕ್ತಿ : ಹಾಗಾದ್ರೆ ನೀವೇ ಹೇಳಿ.
ಕಿಟ್ಟಿ : ಅದಕ್ಕೆ ಅಲ್ಲವ್ರಾ ಬಂದದ್ದು?
ವಿಟ್ಟಿ : ನಿಮ್ಮನ್ನು ನೋಡಿದ್ದು ತುಂಬ ಸಂತೋಷ ಸಾರ್.
ವ್ಯಕ್ತಿ : ನನಗೆಷ್ಟು ಸಂತೋಷ ಗೊತ್ತ? ಮೇಷ್ಟ್ರಾದವನಿಗೆ ಅತ್ಯಂತ ಸಂತೋಷದ ವಿಚಾರ ಅವನ ಹಳೇ ವಿದ್ಯಾರ್ಥಿಗಳನ್ನು ನೋಡೋದು.
ಕಂಠಿ : ಅದರಲ್ಲೂ ನಮ್ಮಂಥೋರನ್ನ.
ವ್ಯಕ್ತಿ : ಹೌದು. ನಿಮ್ಮಂಥೋರ್ನ. ಅಲ್ಲಾ ಎಷ್ಟು ಬೆಳೆದುಬಿಟ್ಟಿದ್ದೀರ!
ಕಿಟ್ಟಿ : ನಾನೀ ಐದು ವರ್ಷದಾಗೆ ಒಂದು ಅಂಗುಲಾನೂ ಬೆಳೆದಿಲ್ಲ
ವ್ಯಕ್ತಿ : ಬೆಳವಣಿಗೆ ದೇಹದ್ದಿರಬಹುದು, ಬುದ್ಧೀದಿರಬಹುದು.
ಕಿಟ್ಟಿ : ನಾನು ಯಾವುದ್ರಾಗೆ ಬೆಳದ್ದೇನಿ ಅಂಬೋದು-
ವ್ಯಕ್ತಿ : ಅಂಬೋದು… ನಿನಗೇ ಗೊತ್ತಾಗೋಲ್ಲ. ಅದಕ್ಕೆ ಬೌದ್ಧಿಕ ಪರಿಪಕ್ವತೆ ಬೇಕು. ಕೇಳಿದ ಕೂಡಲೇ ಸಿಕ್ಕಿಬಿಡೋ ಅಂಥಾದ್ದಲ್ಲ ಅದು. ಪರಿಶ್ರಮವಿರಬೇಕು. ಒಂದು ವ್ಯಕ್ತಿಯದ್ದಲ್ಲ, ಒಂದು ಜನಾಂಗದ್ದಲ್ಲ, ಒಂದು ಗುಂಪಿನ ಪರಂಪರಾಗತ ಕೃಷಿಯಿಂದ ದೊರೆಯುವಂಥಾದ್ದು ಅದು. ಅದು ಲಭ್ಯವಾದರೆ ನೀನು ನಿನಗೆ ಅರ್ಥವಾಗುತ್ತೀ. ನನಗ್ಗೊತ್ತು- ಇವೆಲ್ಲ ನಿನಗೆ ಕಡು ಸಂಸ್ಕøತ. ಆದರೆ ನಿಮಗೆ- (ಕಂಠಿಗೆ)
ಕೊಂಚ ಅರ್ಥವಾಗುತ್ತೆ.
ಕಂಠಿ : ನಾನು ನಿಮ್ಮ ಕ್ಲಾಸಿನ ಮಾನಿಟರ್ ಆಗಿದ್ದೆ ಸಾರ್.
ವ್ಯಕ್ತಿ : ಮತ್ತೆ ತಪ್ಪು. ನನ್ನ ಕ್ಲಾಸಲ್ಲ. ನಿನ್ನ ಕ್ಲಾಸು.
ಕಂಠಿ : ಕ್ಷಮಿಸಿ ಸಾರ್, ನನ್ನ ಕ್ಲಾಸಿಗೆ ಮಾನಿಟರ್ ನಾನು. ನನ್ನ ಬುದ್ಧಿ ನೋಡಿ-
ವ್ಯಕ್ತಿ : ಅಥವಾ ನಿನ್ನ ಕೊಬ್ಬು ನೋಡಿ ಇರಬಹುದು.
(ನಗುವನು)
ಕಂಠಿ : ಇರಬಹುದು
(ವಿಟ್ಟಿ ತೋರಿಸಿ)
ಈತ ಕ್ಲಾಸಲ್ಲಿ ಏನಾಗಿದ್ದ ಹೇಳಿ?
ವ್ಯಕ್ತಿ : (ವಿಟ್ಟಿಗೆ)
ಹೇಳು. ನೀನೇ ಹೇಳು.
ವಿಟ್ಟಿ : ಬೋಲ್ಟ್.
ವ್ಯಕ್ತಿ : ಏನಂದೇ?
ವಿಟ್ಟಿ : ಬೋಲ್ಟ್. ಬಾಗಿಲು ಬೋಲ್ಟ್ ನಾನು ಕೈಹಾಕಿದ್ರೆ ಮಾತ್ರ ಬರ್ತಿತ್ತು.
ವ್ಯಕ್ತಿ : ಅದಕ್ಕೆ?
ವಿಟ್ಟಿ : ಬೋಲ್ಟ್.
ಕಂಠಿ : ಸರಿಯಾಗಿ ಹೇಳು
ವಿಟ್ಟಿ : ಬಾಗಿಲು ನಾನೇ ತೆಗೀತಿದ್ರಿಂದ ನನ್ನ ಹೆಸರು ಬೋಲ್ಟ್.
ವ್ಯಕ್ತಿ : ನೆನಪಿಲ್ಲ.
ಕಂಠಿ : ನೆನಪಾಗೋ ಹಾಗೆ ಹೇಳು.
ವಿಟ್ಟಿ : ಕ್ಲಾಸಲ್ಲೆಲ್ಲಾ ಚಿಳ್ಳೆಪಿಳ್ಳೆಗಳು. ನೀವು ಪಾಠ ಮಾಡ್ತಿದ್ರಿ. ಏಲ್ರೂ ಕೇಳ್ತಿದ್ರು, ಕುಮಾರಭಾಸ, ಬೀಯೆಮ್ ಶ್ರೀಕಂಠಶಾಸ್ತ್ರಿ, ಅಭಿನವ ರಂಪ, ಟಿ.ಎಸ್.ರಂಗಣ್ಣಯ್ಯ, ಹೀಗೆ ಇದ್ದಕ್ಕಿದ್ದ ಹಾಗೆ ಬಾಗಿಲ ಹತ್ರ ಶಬ್ದ ಆತು. ಆದ್ರೆ ನಿಮ್ಮ ಪಾಠ ಸಾಗೇ ಇತ್ತು. ಅದೆಂಥ ಪಾಠ! ಎಂಥ ಭಾಷಣ!.
ಕಂಠಿ : ಸರಿ. ಆಗ ಏನಾಯ್ತು ಹೇಳು.
ವಿಟ್ಟಿ : ಬಾಗಿಲು ತೆಗೆದೆ ನಾನು. ತೆಗೆದಕೂಡಲೇ ಒಳಗೆ ಬಂದದ್ದೇನು ಗೊತ್ತ- ಬುಲ್‍ಡಾಗ್!.
ವ್ಯಕ್ತಿ : ಏನು? ಏನು?
ವಿಟ್ಟಿ : (ಗಟ್ಟಿಯಾಗಿ)
ಡಾಗ್!
(ಮತ್ತಷ್ಟು ಗಟ್ಟಿಯಾಗಿ)
ಗೂಳಿ ನಾಯಿ!
ಕಂಠಿ : ಚೀರಬೇಡ, ಆಮೇಲೇನಾಯ್ತು ಹೇಳು.
ವಿಟ್ಟಿ : ಬೊಗಳೋಕೆ ಶುರುಮಾಡ್ತು. ಇದ್ದಕ್ಕಿದ್ದಂತೆ ಬೊಗಳ್ತಾ ನಿಲ್ತು. ಅದೂ ಎಲ್ಲಿ? ನಮ್ಮ ಕ್ಲಾಸಲ್ಲೊಂದು ಕಡೆ-ಎರಡು ಜಡೆ, ಮುದ್ದು ಮುಖ, ಫಳಫಳ ಕಣ್ಣು ಇದ್ವು ಗೊತ್ತಲ್ಲ- ಅಲ್ಲಿ, ಅಲ್ಲಿ ನಿಂತು ಕಿರುಚ್ತು-
ಕಂಠಿ : ಅದು ಹೇಗೆ? ಎಲ್ಲಾ ಶಿಲೆಯಲ್ಲಿ ಕೆತ್ತಿದ ಹಾಗಿದೆ-ದೇಶ ಅಂದ್ರೇನು: ಜಾತಿ, ಮತ, ಪಂಗಡಗಳ ವ್ಯಾಮೋಹವನ್ನು ಮೀರಿ ನಿಂತ ಒಂದು ಬಾಂಧವ್ಯದ ಸ್ಥಿತಿ; ದೇಶಪ್ರೇಮ ಅಂದ್ರೇನು: ಒಂದು ನಾಡಿನ ವ್ಯಕ್ತಿಗಳೆಲ್ಲ ನನ್ನವರು ಅಂದು ತಿಳಿದು ಅವರ ಸ್ವಾತಂತ್ರ್ಯಕ್ಕೆ ಚ್ಯುತಿ ಬಂದಾಗಲೆಲ್ಲ ಕೇಸರಿಯ ಹಾಗೆ ಹೋರಾಡೋದು; ನಿಷ್ಕಾಮ ಕರ್ಮಿಯಾಗಿ ಹೋರಾಡೋದು; ಆತನ ಹೆಸರಲ್ಲಿ ಹೋರಾಡೋದು. ಕಾಮ ಅಂದ್ರೇನು, ಕರ್ಮ ಅಂದ್ರೇನು, ಕಾಡು ಅಂದ್ರೇನು-
ಕಿಟ್ಟಿ : ಟ್ಯಾಕ್ಸ್ ಅಂದ್ರೇನು, ಫಾಕ್ಸ್ ಅಂದ್ರೇನು, ಹಾಕ್ಸ್ ಅಂದ್ರೇನು-
ವಿಟ್ಟಿ : ರಾಮ ಅಂದ್ರೇನು, ಕೃಷ್ಣ ಅಂದ್ರೇನು, ರಾವ್ ಅಂದ್ರೇನು-
ಕಂಠಿ : ಒಂದೇ, ಎರಡೇ, ಮೂರೇ, ನಾಕೇ, ಗುರುಗಳವಾಂತರಕಿಲ್ಲವು ಬ್ರೇಕೇ-
ಕಿಟ್ಟಿ : ಹಾಂಗೆನ್ನಲು ಹಯವದನಯ್ಯಂಗಾರಿ
ವಿಟ್ಟಿ : ನೀವಾಕ್ಷಣ ಕಣ್ಣಲಿ ಕೆಂಡವ ಕಾರಿ
ಕಂಠಿ : ಕ್ಲಾಸಿಂದಾತನ ಅಟ್ಟಿದಿರಿ-
ವಿಟ್ಟಿ : ಹರ್ಷದಿ ಟೇಬಲ್ ಕುಟ್ಟಿದಿರಿ-
(ನಗುವರು)
ಕಂಠಿ : ಅದ್ಸರಿ ಮೇಷ್ಟ್ರೆ-ಅಯ್ಯಂಗಾರಿ ಹೋದ, ಬಚಾವಾದ್ರಿ. ಹೋಗೋಲ್ಲ ಅಂದಿದ್ರೆ?
ವ್ಯಕ್ತಿ : ಆಬ್ಸೆಂಟ್ ಹಾಕ್ತಿದ್ದೆ.
ಕಂಠಿ : ಆವಾಗಲು ಹೋಗ್ದಿದ್ರೆ?
ವ್ಯಕ್ತಿ : ಜವಾನನ್ನ ಕರೀತಿದ್ದೆ.
ಕಂಠಿ : ಆಗ್ಲೂ ಹೋಗ್ದಿದ್ರೆ?
(ಮೌನ)
ವಿಟ್ಟಿ : ನೀವೇ ಹೋಗ್ತಿದ್ರಿ.
(ನಗುವರು)
ಕಂಠಿ : ಇರಲಿ ಸಾರ್, ಹೇಳಿ, ಈ ಮನೆಯ ಯಜಮಾನ್ರು ಎಲ್ಲಿ ಹೋಗಿದಾರೆ?
ವ್ಯಕ್ತಿ : ಆಗಲೇ ಹೇಳಿದೇನೆ.
ಕಿಟ್ಟಿ : ಮರೀತ್ರೀ ಇನ್ನೋಂದು ಪಟ್ಟ ಹೇಳ್ರೀ.
ವ್ಯಕ್ತಿ : ನೀನೊಬ್ಬ ಗುಗ್ಗು, ತೆಪ್ಪಗಿರು.
(ವಿಟ್ಟಿಗೆ)
ಹೇಳು, ಸ್ಪಷ್ಟವಾಗಿ ಹೇಳು, ನಾಯಿ ಬಂತು.
ಅಂದೆಯಲ್ಲ. ಆಮೇಲೇನಾಯ್ತು?
ವಿಟ್ಟಿ : (ಕಂಠಿಗೆ)
ಹೇಳಲಾ?
ಕಂಠಿ : ಒಂದು ಶರತ್ತಿನ ಮೇಲೆ ಹೇಳು: ಅವರು ಯಜಮಾನನ ವಿಚಾರ ಹೇಳಿದ್ರೆ ನೀನು ನಾಯಿ ವಿಚಾರ ಹೇಳ್ತಿ.
ವಿಟ್ಟಿ : ಹೌದು: ನೀವೇ ಮುಂಚೆ ಹೇಳಬೇಕು. ಈ ಮನೆ ಯಜಮಾನ ಎಲ್ಲಿ?
ವ್ಯಕ್ತಿ : ಇಲ್ಲ, ಇಲ್ಲ, ಆತ ಇಲ್ಲ.
ಕಂಠಿ : ಆದ್ರೆ ಸ್ವಾಮಿ, ನಾವು ಚಿಕ್ಕೋರಿದ್ದಾಗ ನೀವೇ ಹೇಳ್ತಿದ್ರಿ. ಈ ಮನೆ ಇಂಥ ಒಬ್ಬ ಪುಣ್ಯಾತ್ಮರದು ಅಂತ. ಇದರ ಹೊಸಿಲು ಸಾರಿಸಿ ರಂಗೋಲಿ ಹಾಕಿರ್ತಿದ್ರು. ಸಂಜೆ ದೀಪ ಹಚ್ಚಿರ್ತಿದ್ರು. ಒಂದು ಸಲ ನೀವು ಯಜಮಾನ್ರನ್ನೂ ತೋರಿಸಿದ ಹಾಗೆ ನೆನಪು.
ವ್ಯಕ್ತಿ : ಭ್ರಮೆ. ನಿಮ್ಮ ಭ್ರಮೆಯಿರಬಹುದು. ಪ್ರಯತ್ನಿಸಿದರೆ ಎಂಥ ಭ್ರಮೆಯನ್ನೂ ಹುಟ್ಟಿಸೋಕೆ ಸಾಧ್ಯ. ಮನಶ್ಯಾಸ್ತ್ರದ ಪ್ರಕಾರ-
ಕಂಠಿ : ಅದಿರ್ಲಿ, ಈಗ ಯಾರೂ ಇಲ್ಲ ಓನರ್ರೇ ಇಲ್ವೆ?
ವ್ಯಕ್ತಿ : ನಾನೇ.
ವಿಟ್ಟಿ : ಹಾಗಾದ್ರೆ…
ಕಂಠಿ : ನೀನು ಸುಮ್ಮನಿರು. ಕಿಟ್ಟಿ, ನೀನು ಬರಕೋ.
(ಕಿಟ್ಟಿ ನೋಟ್‍ಬುಕ್ ತೆಗೆದುಕೊಳ್ಳುವನು)
ಹೇಳಿ. ಇಲ್ಲಿ ಮನೆ ಯಜಮಾನರೊಬ್ಬರು ಮುಂಚೆ ಇದ್ದದ್ದು ಸುಳ್ಳೇ?
ವ್ಯಕ್ತಿ : ಹಾಗಂತ ತಿಳಿದಿದ್ದು ನಿಮ್ಮ ಭ್ರಮೆ.
ಕಂಠಿ : ಇಲ್ಲಿ ಮನೆಯಿದ್ದದ್ದು ಭ್ರಮೆ?
(ಕಿಟ್ಟಿ ಬರೆದುಕೊಳ್ಳುತ್ತಲೇ ಇದ್ದಾನೆ)
ಹೇಳಿ, ಇದು ಮನೆಯಲ್ಲ ಹಾಗಾದ್ರೆ? ನೀವು ಯಜಮಾನ್ರಲ್ಲ ಹಾಗಾದರೆ?
ವ್ಯಕ್ತಿ : (ವ್ಯಂಗ್ಯವಾಗಿ ನಕ್ಕು)
ನಿಮಗೂ ಕೊಂಚ ಬುದ್ಧಿ ಬಂದಿದೆ.
ಕಿಟ್ಟಿ : ನಾವು ನಿಮ್ಮಂಗೆ ಗಾಳಿ ಸಂಗ ಮಾಡ್ಳಿಲ್ರೀ. ನಮ್ಮ ಗೆಣೆಕಾರ್ರ ಚಾಲಾಕು ನಮಗೆ ಬಂದು. ನಮ್ಮ ಚಾಲಾಕು ಅವರಿಗೆ ಹೋತು.
ವ್ಯಕ್ತಿ : ಆಹಾ. ತಮ್ಮ ಸಂಗಾತಿಗಳ ವಿಚಾರ ಕೇಳಬಹುದೋ?
ಕಂಠಿ : ತಮಗೂ ಅವರ ಬುದ್ಧಿ ಬಂದುಬಿಡುತ್ತೆ.
ವ್ಯಕ್ತಿ : ಬರಲಿ, ಹೇಳಿ.
ವಿಟ್ಟಿ : ಸಿದ್ಧವಾಗಿ ಹಾಗಾದ್ರೆ: ನಮ್ಮ ಸ್ನೇಹಿತರು ಹೇಳಿದ್ರು, ನೀವು ಮೂವರು ಹೋಗ್ಬಿಟ್ಟು ಯಜಮಾನರ ಸ್ಥಿತಿ ಏನಾಯ್ತು ನೋಡ್ಕಂಡು ಬನ್ನಿ ಅಂತ. ಆಗಲಿ ಅಂತ ಬಂದ್ರೆ-ನೀವು!
ವ್ಯಕ್ತಿ : (ಮುನಿಸು)
ಯಾರವರು ನಿಮ್ಮ ಸ್ನೇಹಿತರು?
ಕಂಠಿ : ಸಿಟ್ಟು ಬೇಡ ಸ್ವಾಮಿ-ಯಜಮಾನ್ರು ನೀವೇ ಇರಬಹುದಲ್ಲವಾ?
ಕಿಟ್ಟಿ : ಎಗರಾಡಿದ್ರೆ ಯಾವದೂ ಸುಸೂತ್ರ ಆಗಾಕಿಲ್ಲ ಬಿಡ್ರಿ.
ವ್ಯಕ್ತಿ : ಮೊದಲು ವಿಷದಪಡಿಸಿ: ಯಾರು ನಿಮ್ಮ ಸ್ನೇಹಿತರು?
ಕಂಠಿ : ನಮ್ಮ ಸ್ನೇಹಿತರು ನಿಮ್ಮ ಸ್ನೇಹಿತರೂ ಆಗಬಾರದೇಕೆ?
ವ್ಯಕ್ತಿ : ಸಾಧ್ಯವಿಲ್ಲ.
ವಿಟ್ಟಿ : ನಿಮಗೆ ಅವರೆಲ್ಲ ಶತ್ರುಗಳೋ ಹಾಗಾದರೆ?
ವ್ಯಕ್ತಿ : ನನಗೆ ಎಂಥವರೂ ಅಲ್ಲ.
ಕಂಠಿ : ಹೇಳು-
(ವಿಟ್ಟಿಗೆ)
ನಮ್ಮ ಸ್ನೇಹಿತರ ವಿಚಾರ ಹೇಳು.
ವಿಟ್ಟಿ : ಊಹಿಸಿ: ಚಿತ್ರಗಳನ್ನು ಅಭ್ಯಾಸ ಮಾಡಿದರೆ, ಮನುಷ್ಯನ ನೆನಪು ನಿಲುಕಲಾರದಷ್ಟು ಹಿಂದಿನ ಕಲ್ಲುಗಳ ಮೇಲೆ ಈ ಸ್ನೇಹಿತರ ಚಿತ್ರಗಳಿವೆ; ಈ ಸ್ನೇಹಿತರ ಪಕ್ಕದಲ್ಲಿ ಅವರೆಲ್ಲರ ಸುತ್ತ ಕಾಡು- ಇಂಥ ಒಂದು ಚಿತ್ರ ಐವತ್ತು ಸಾವಿರ ವರ್ಷ ಹಳೆಯದು.
ಕಿಟ್ಟಿ : ಒಬ್ಬರಿಗೂ ಇನ್ನೊಬ್ಬರಿಗೂ ಭಯಂಕರ ಫರಕೈತೆ ಸಾಹೇಬ್ರೆ. ಕೆಲವರು ಗಾಳಿಯಲ್ಲೇ ವಾಸನೆ ಹಿಡಿದು ನಿಮ್ಮಂಥೋರ ಹತ್ರ ಕರಕೊಂಬರಬಲ್ಲರು. ಕೆಲವರು ನೆಲಕ್ಕೆ ಮೂಗು ಜೋಡಿಸಿ ಬ್ಯಾಟೆ ಹುಡುಕ್ಬಲ್ರು; ಮತ್ತು ಕೆಲವ್ರು ಭೂಮಿತಾಯಿ ಹೊಟ್ಟೆ ಬಗಿದು ನಿಮ್ಮಂಥೋರ್ನ ಹಿಡೀಬಲ್ರು; ಮಿಕ್ಕೋರೆಲ್ಲ ಸಣ್ಣಪುಟ್ಟ ಕೆಲಸ ಮಾಡ್ಕೊಂಡು ಮನೆ ಉಸ್ತುವಾರಿ ನೋಡ್ಕೋತಾ…
ವ್ಯಕ್ತಿ : ಗೊತ್ತಾಯ್ತು; ನಾಯಿ ಬಗ್ಗೆ ಮಾತಾಡ್ತಿದೀರ.
ವಿಟ್ಟಿ : ತೋಳ, ಶಿಳ್ಳೆನಾಯಿ, ಬುಲ್‍ಡಾಗ್, ಆಲ್ಶೇಶಿಯನ್, ಗ್ರೇಹೌಂಡ, ಟೆರ್ರಿಯರ್, ಬಾಕ್ಸರ್-
ಕಂಠಿ : (ಕಿಟ್ಟಿ ತೋರಿಸಿ)
ಈತನ ಅಡ್ಡ ಹೆಸರು ಬಾಕ್ಸರ್.
ವ್ಯಕ್ತಿ : ಅಂದ್ರೆ…
ಕಂಠಿ : ಅಂದ್ರೆ-ಬಾಕ್ಸರ್ ನಾಯಿ. ನೆಲಗುಮ್ಮ ನಾಯಿಗೂ ಬುಲ್‍ಡಾಗ್ ನಾಯಿಗೂ ಮಧ್ಯದ ಥಳಿ. ಶಿಸ್ತಿನಿಂದ ಕಾವಲು ಮಾಡುತ್ತೆ.
ವಿಟ್ಟಿ : ನನ್ನ ಹೆಸರು ಬೂದುನಾಯಿ ಸಾರ್- ಗ್ರೇಹೌಂಡ್, ತುಂಬ ಹಳೇ ಥಳಿ. ಆರು ಸಾವಿರ ವರ್ಷದ ಹಿಂದೆ ಈಜಿಪ್ಟಿನಲ್ಲಿದ್ದರಂತೆ, ಗ್ರೀಕ್ ನಾಗರಿಕತೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದರಂತೆ ನನ್ನ ಪೂರ್ವಿಕರು.
ಕಂಠಿ : ನಿಷ್ಠೆ ಸ್ವಾಮಿ- ಸ್ವಾಮಿನಿಷ್ಠೆಗೆ ಇವರನ್ನ ಬಿಟ್ಟರಿಲ್ಲ.
ಕಿಟ್ಟಿ : ಅದಕ್ಕೆ ಅಲ್ಲವ್ರಾ ನಮ್ಮ ಯಜಮಾನ್ರಿಗೇನಾಯ್ತೋ ಅಂತ ತಲಾಸ್‍ಗೆ ಬಂದದ್ದು.
ವ್ಯಕ್ತಿ : ನೀವು ಬಂದದ್ದಕ್ಕೆ ನಾನು ಕೃತಜ್ಞ.
ಕಿಟ್ಟಿ : ಹಹ್ಹಾ! ತಾನೆ ದಣಿ ಅಂತೆ!
ವಿಟ್ಟಿ : ಜಪ್ತಿಗೆ ಬಂದು ನಾವೆಂದೂ ಬರಿಗೈಲಿ ಹೋಗಿಲ್ಲ.
ಕಂಠಿ : ಜಪ್ತಿ ಅಲ್ಲ. ತನಿಖೆ. ಸರಿಯಾದ ಪದ ಹಾಕು.
ವ್ಯಕ್ತಿ : ಯಾಕೆ ತನಿಖೆ, ಏನಾಗಿದೆ ಈಗ, ಯಾವ ಅಪರಾಧ?
ಕಿಟ್ಟಿ : (ವಿಟ್ಟಿಗೆ)
ಒಳ್ಳೇ ಹಂದಿ ಸಾವಾಸ ಆತು ಕಣೋ.
ಕಂಠಿ : ನೆನಪು ಮಾಡಿಕೊಳ್ಳಿ.
ವ್ಯಕ್ತಿ : ಏನೂ ನೆನಪಾಗ್ತಿಲ್ಲ. ನಾವೇನೂ ಮಾಡಿಲ್ಲ. ಇಂಥ ಪ್ರಶ್ನೆ ಹಾಕೋಕೆ ಬದಲು ಇಲ್ಲಿಂದ ಹೊರಟುಹೋಗಬಹುದು.
ವಿಟ್ಟಿ : ನಾವೋ, ನೀವೋ?
ವ್ಯಕ್ತಿ : (ತಾತ್ವಿಕವಾದ ನಗೆಯೊಂದಿಗೆ)
ಎಲ್ರೂ ಒಂದಿನ ಹೋಗಬೇಕಾಗುತ್ತೆ.
ಕಿಟ್ಟಿ : ಇದೊಳ್ಳೆ ಹಂದಿ ಸಿಗ್ತಲ್ಲಪ್ಪೋ ನಮಗೆ!
ಕಂಠಿ : (ಸರಕ್ಕನೆ ಕಿಟ್ಟಿ ಬಳಿಗೆ ಹೋಗಿ ಹೊಡೆದು)
ಈಡಿಯಟ್ ಸಾಹೇಬ್ರು ಯೋಚನೆ ಮಾಡ್ತಿದಾರೆ ಗೊತ್ತಾಗೊಲ್ಲ- ಹುಚ್ಚುಹುಚ್ಚಾಗಿ ಕೊರಗುಟ್ತೀಯ?
ವ್ಯಕ್ತಿ : ಕೊಡಿ, ಕೊಡಿ ಹಾಗೆ ನಾಲ್ಕು.
ಕಂಠಿ : ಅಯೋಗ್ಯ, ಅಯೋಗ್ಯ ಬಡ್ಡೀಮಗನೆ!
ವ್ಯಕ್ತಿ : ಸೈರಣೆಗೂ ಮಿತಿ ಇದೆ.
(ಮೌನ)
ಹೌದು ಅಂತಿರೋ ಇಲ್ಲ ಅಂತಿರೋ?
ಕಂಠಿ : ಹೌದು
ವಿಟ್ಟಿ : ಏನಂದ್ರಿ?
ವ್ಯಕ್ತಿ : ಸೈರಣೆಗೂ ಒಂದು ಮಿತಿ ಇದೆ ಅಂದೆ- ಹೌದು ಅಂತಿರೋ ಇಲ್ಲ ಅಂತಿರೋ?
ವಿಟ್ಟಿ : ಹೌದು. ಹೌದು ಅಂತೀನಿ.
ವ್ಯಕ್ತಿ : ಬನ್ನಿ, ಹತ್ರ ಬನ್ನಿ. ಕೂತ್ಕೊಳ್ಳಿ. ಸ್ವಲ್ಪ ಹಣ್ಣಿದೆ- ಹಂಚಿಕೊಂಡು ತಿನ್ನೋಣ.
(ಕಿಟ್ಟಿಗೆ)
ಏನ್ರೀ, ಕುಳ್ಳಪ್ಪನೋರೆ. ಕೋಪ ಮಾಡಿಕೋಬೇಡ್ರಿ. ಕೋಪದಲ್ಲಿ ಏನೋ ಎರಡೇಟು ಕೊಟ್ರು ನಿಮ್ಮ- ನಿಮಗೆ ಅವರೇನಾಗಬೇಕು?
ಕಿಟ್ಟಿ : (ಕೋಪದಿಂದ ಸುಮ್ಮನಿರುವನು)
ವಿಟ್ಟಿ : ಅಣ್ಣ.
ವ್ಯಕ್ತಿ : ಅಣ್ಣ-ತಮ್ಮಂದಿರ ಜಗಳವೇನು ಬಿಡಿ-ಆಗುತ್ತೆ ಹೋಗುತ್ತೆ.
ಕಂಠಿ : ಮುತ್ತಿನಂಥ ಮಾತು. ತಮ್ಮನ್ನೋಡಿದ ಕೂಡಲೆ ಅನ್ನಿಸಿತ್ತು- ಬಹಳ ಪ್ರತಿಭಾವಂತ ಅಂತ.
ವಿಟ್ಟಿ : ತುಂಬ ಸಂಭಾವಿತರು ಅಂತ.
ವ್ಯಕ್ತಿ : ತುಂಬ ಕೃತಜ್ಞ, ಇವರೆ, ನೀವೇಕೆ ಇಲ್ಲೆ ಇದ್ದು ಬಿಡಬಾರದು?
ಕಂಠಿ : ಹೇಗೆ?
ವ್ಯಕ್ತಿ : ನನ್ನ ಜೊತೆಗೆ ಇರಬಹುದು. ನನ್ನ ಕೆಲಸದಲ್ಲಿ ಸಹಾಯ ಮಾಡಬಹುದು. ಆಫೀಸು, ಲೈಬ್ರರಿ, ತೋಟ-ನಿಮಗೆ ತಕ್ಕಲ್ಲಿ ನೀವು ಕೆಲಸ ಮಾಡಬಹುದು.
ಕಂಠಿ : ಅಲ್ಲಿ ಕೆಲಸ ಮುಗಿಸಿದ್ದರಿಂದಾನೇ ಈಗ ಬಂದಿರೋದು.
ವಿಟ್ಟಿ : ಸ್ವಾಮಿ, ಹೇಳಿ, ಈ ಮನೆಗೆ ಹೇಗೆ ಬಂದ್ರಿ ಅಂತ ಬೇಗ ಹೇಳಿಬಿಡಿ.
ಕಂಠಿ : ಯಜಮಾನ್ರು ಎಲ್ಲಿ ಹೇಳಿ. ಇಲ್ಲದಿದ್ರೆ ನಮ್ಮ ರೆಕಾರ್ಡ್ ತೆಗೀಬೇಕಾಗುತ್ತೆ.
ವ್ಯಕ್ತಿ : ನೀವು ಯಾರು?
ಕಂಠಿ : ವಿದ್ಯಾರ್ಥಿಗಳು ಅಂತೆ ನೀವೇ ಹೇಳಿದ್ರಿ?
ವ್ಯಕ್ತಿ : ಇಲ್ಲ, ಸಾಧ್ಯವಿಲ್ಲ.
ವಿಟ್ಟಿ : ನಾವು ತುಂಬ ನೊಂದಿದ್ದೇವೆ ಸಾರ್.
ಕಂಠಿ : ಕ್ಲಾಸಲ್ಲಿ ನಾಯಿ ಬೊಗಳೋದನ್ನ ನೋಡಿದ್ದೇವೆ.
ವಿಟ್ಟಿ : ಅದಕ್ಕೆ ತಕ್ಕ ಸ್ನೇಹ ಮಾಡಿದ್ದೇವೆ.
ವ್ಯಕ್ತಿ : ಆಮೇಲೆ?
ಕಂಠಿ : ತಾವು ಇಲ್ಲಿಗೆ ಬರ್ತಿದ್ದದ್ದು-
ವಿಟ್ಟಿ : ಯಜಮಾನ್ರನ್ನ ಖುಷಿಪಡಿಸೋಕೆ ಹಬ್ಬ ಮಾಡ್ತಿದ್ದದ್ದು-
ಕಿಟ್ಟಿ : ಖುಷಿಪಡ್ತಾರೆ ಅಂತ ತಿಳಿದದ್ದು.
ಕಂಠಿ : ಆವಾಗ್ಲೆಲ್ಲ ತಮಗೆ ಭಯ, ಸಂಶಯ, ಭ್ರಾಂತಿ-
ವ್ಯಕ್ತಿ : ನೀವು ಯಾರ ಬಗ್ಗೆ ಮಾತಾಡ್ತಿರೋದು?
ಕಂಠಿ : ನನ್ನ ಬಗ್ಗೆ ಸ್ವಾಮಿ.
ವ್ಯಕ್ತಿ : ನೇರವಾಗಿ ಮಾತಾಡು.
ಕಂಠಿ : ಎಲ್ಲರ ವಿಚಾರ ಅಂತಿಟ್ಕೊಳ್ಳಿ ಸ್ವಾಮಿ.
ವ್ಯಕ್ತಿ : ನೇರವಾಗಿ ಮಾತಾಡು.
ವಿಟ್ಟಿ : ಯಾಕೆ ಕೋಪ ಸ್ವಾಮಿ?
ಕಂಠಿ : ಸುಳ್ಳು ಹೇಳಿದ್ರೆ ನಮಗೆ ಚಪ್ಲಿಯಿಂದ ಹೊಡೀರಿ.
ವಿಟ್ಟಿ : ನಮ್ಮ ಕೈಕಾಲು ಕತ್ತರಿಸಿ ಹಾಕಿ.
ಕಂಠಿ : ನಮ್ಮ ಆಫೀಸಿಗೆ ಕಂಪ್ಲೇಂಟ್ ಕೊಡಿ.
ವ್ಯಕ್ತಿ : ಯಾವುದು ನಿಮ್ಮ ಆಫೀಸು?
ವಿಟ್ಟಿ : ಯಾಕೆ, ನೀರಿಲ್ಲದ ಊರಿಗೆ ವರ್ಗ ಮಾಡಿಸಬಹುದು ಅಂತ್ಲೋ?
ಕಂಠಿ : ಅಥವಾ, ಮೆಚ್ಚಿ, ಪ್ರಮೋಷನ್ ಕೊಡಿಸಬಹುದು ಅಂತಾನೋ?
(ಮೌನ)
ಮಾತಾಡಿ ಸಾರ್.
ವ್ಯಕ್ತಿ : ನಿಮಗೇನಾಗಿದೆ?
ಕಂಠಿ : ಡ್ಯೂಟಿ ಸಾರ್.
ವ್ಯಕ್ತಿ : ವಿವರವಾಗಿ ಮಾತಾಡಿ.
ಕಂಠಿ : ವಿವರವಾಗಿಯೂ ಅಷ್ಟೆ-ಡ್ಯೂಟಿ ಸಾರ್. ನಮ್ಮಂಥೋರಿಗೆ ಇಂಥ ಕೆಲಸ ಸಿಗೋದೇ ಕಮ್ಮಿ. ಸಿಕ್ಕರೆ ಸೊಗಸಾಗಿ ಮಾಡೋ ಹಠ.
ಕಿಟ್ಟಿ : ಲಗುಲಗು ಮುಗಿಸ್ರೀ-ಹೊತ್ತಾಗ್ತೈತಿ.
ಕಂಠಿ : ನೀನು ತೆಪ್ಪಗಿರು.
ಕಿಟ್ಟಿ : ಅದ್ಯಾಕೆ ತೆಪ್ಪಗಿರಬೇಕು? ಈ ಆಸಾಮಿ ತಾವ ಮಾತಾಡ್ತಾ ಬಂದ ಕೆಲ್ಸಾನೇ ಮರೆತಹಂಗೈತಿ.
ಕಂಠಿ : (ಗಟ್ಟಿಯಾಗಿ)
ಇವರು ಸಾಮಾನ್ಯ ಪಾರ್ಟಿ ಅಲ್ಲ-ಬಾಯಿ ಮುಚ್ಚಿಕೊಂಡಿರು.
ಕಿಟ್ಟಿ : ಇದ್ಯೆಲ್ಲ ನೋಡ್ತಾ ನನ್ನ ತಲೆ ಸಿಡುಕೊಳ್ತೈತಿ, ನನ್ನ ಕಾಲೆಲ್ಲ ಬಿದ್ಹೋಗ್ತೈತಿ, ನಂಗ ಒಪ್ಪಿಸಿಬಿಡ್ರಿ-ಕಣ್ಣು ಮುಚ್ಚಿ ತೆಗೆಯೋದ್ರಾಗೆ…
ಕಂಠಿ : ಶಟಪ್!
ಕಿಟ್ಟಿ : ಅದ್ಯಾಕಪ್ಪ ಭಲೆ ಜೋರು-
ಕಂಠಿ : ವಿಟ್ಟಿ, ಅವನ ಬಾಯಿಗೆ ಬಟ್ಟೆ ತುರುಕಿ ಕೈಕಟ್ಟು.
(ವಿಟ್ಟಿ ಹಾಗೇ ಮಾಡುವನು. ಆದರೆ ಕಿಟ್ಟಿ ಕ್ರಮೇಣ ಕೈ ಬಿಚ್ಚಿಕೊಳ್ಳುವನು)
ವ್ಯಕ್ತಿ : ಇದೀಗ ನೋಡಿ. ಇವನ ನಿಜವಾದ ಸ್ಥಿತಿ.
ಕಂಠಿ : ಲಫಂಗ ಸಾರ್.
ವ್ಯಕ್ತಿ : ಶುದ್ಧ ಲಫಂಗ.
ವಿಟ್ಟಿ : ಜನಕ್ಕೆ ಇವನಿಂದ ದುಗ್ಗಾಣಿ ಫಾಯಿದೆ ಇಲ್ಲ
ಕಂಠಿ : ಪಾರ್ಟಿಗೆ ಲಾಭವಿಲ್ಲ. ಇಹಕ್ಕಿಲ್ಲ, ಪರಕ್ಕಿಲ್ಲ.
ವಿಟ್ಟಿ : ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ನೋಡಿ.
ಕಂಠಿ : ತಮಗೀಗ ಸಮಾಧಾನವಾಯಿತೇ ಸಾರ್?
ವ್ಯಕ್ತಿ : ಶಿಕ್ಷೆ ಆಗಲಿ.
ಕಂಠಿ : ತಾವೇ ಸೂಚಿಸಿ- ಎಂಥ ಶಿಕ್ಷೆ ಕೊಡೋಣ ಹೇಳಿ.
ವ್ಯಕ್ತಿ : ಸುತ್ತ ಸೌದೆ ಹಾಕಿ ಸುಟ್ಟುಬಿಡೋಣ.
ಕಂಠಿ : ಅಥವಾ-
ವ್ಯಕ್ತಿ : ಗುದ್ದು ತೋಡಿ ಹೂತು ಬಿಡೋಣ.
ಕಂಠಿ : ಅಥವಾ?
ವ್ಯಕ್ತಿ : ಚರ್ಮ ಸುಲಿಸಿ ಸಾಯೋಕೆ ಬಿಡೋಣ.
ಕಂಠಿ : ಭೇಷ್, ಆಮೇಲೆ.
ವ್ಯಕ್ತಿ : ನಾನು ನೋಡ್ಕೋಳ್ತೇನೆ.
ಕಂಠಿ : ಧರ್ಮಕ್ಕೆ ವಿರುದ್ಧ ಅಲ್ಲವೇ ಅಂತ…
ವ್ಯಕ್ತಿ : ದುಷ್ಟರನ್ನು ಶಿಕ್ಷಿಸಬೇಕಾದ್ದು ಎಲ್ಲರ ಕರ್ತವ್ಯ.
ವಿಟ್ಟಿ : ಅದೆಲ್ಲ ಸಮ ಸಾರ್: ನಮ್ಮ ಆಫೀಸಿನಲ್ಲಿ ಏನು ಹೇಳೋದು ಅಂತ-
ವ್ಯಕ್ತಿ : ಯಾವ ಆಫೀಸು ಅಂತ ಹೇಳಿ ನಾನು ನೋಡ್ಕೋಳ್ತೇನೆ…
ಕಂಠಿ : ಗೆಸ್ ಮಾಡಿ-
ವ್ಯಕ್ತಿ : ಪೊಲೀಸ್?
ಕಂಠಿ : ಹ್ಯಾಗೆ ಹೇಳ್ತೀರಿ?
ವ್ಯಕ್ತಿ : ನಿಮ್ಮ ಮಾತಿನ ಶೈಲಿ ಹಾಗಿದೆ.
ಕಂಠಿ : ಆಮೇಲೆ?
ವ್ಯಕ್ತಿ : ಈ ಇಬ್ಬರೂ ಕಾನ್‍ಸ್ಟೇಬಲ್‍ಗಳ ಥರ ಇದಾರೆ. ಅವರ ಕೀಳು ನಡತೆ, ಒರಟುತನ ನೋಡಿದ್ರೆ ಪೊಲೀಸರಲ್ಲದೆ ಬೇರೆ ಇರೋಕೆ ಸಾಧ್ಯವಿಲ್ಲ. (ವಿಟ್ಟಿ ಕಿಟ್ಟಿಯ ಕೈ ಬಿಡುತ್ತಾನೆ. ಕಿಟ್ಟಿ ತನ್ನ ಬಾಯಿಯ ಬಟ್ಟೆ ತೆಗೆದುಕೊಳ್ಳುವ ಗೋಜಿಗೆ ಹೋಗದೆ ಎದೆಯ ಮೇಲೆ ಕೈಕಟ್ಟಿ ನಿಲ್ಲುತ್ತಾನೆ)
ವಿಟ್ಟಿ : ತಾವು ಯಾರೂಂತ ಗೊತ್ತಾಯ್ತು ಸ್ವಾಮಿ. ರಾಜಕಾರಣಿಗಳು.
ವ್ಯಕ್ತಿ : ರಾಜಕಾರಣಿ, ಪೊಲೀಸ್ ಸೇರಿದ್ರೆ ಮಹತ್ಕಾರ್ಯ ಮಾಡಬಹುದು.
ಕಂಠಿ : (ಸುಳ್ಳು ಸಭ್ಯತೆಯಿಂದ)
ತಮ್ಮಿಂದ ನಮಗೆ ಮಾರ್ಗದರ್ಶನ ಆಗಬೇಕು ಸಾರ್.
ವ್ಯಕ್ತಿ : (ಈತ ಇದ್ದಕ್ಕಿದ್ದಂತೆ ತನ್ನ ಶಕ್ತಿಯನ್ನು ಅರ್ಥ ಮಾಡಿಕೊಂಡವನ ಹಾಗೆ ಬಹಳ ಜೋರಿನಿಂದ ಮಾತನಾಡುತ್ತಾನೆ)
ಸಿದ್ಧ, ಮಾರ್ಗದರ್ಶನಕ್ಕೆ ಸಿದ್ಧ. ಈ ಮನೆಗೆ ನಾನು ಬಂದದ್ದೇನು ಸಾಮಾನ್ಯವೇ? ಯಜಮಾನನಿಗೆ ಯಾವಾಗಲೂ ಕಾಯಿಲೆ. ಪೂಜೆ, ಪುನಸ್ಕಾರದಲ್ಲಿ ಮಾತ್ರ ಎಲ್ಲಿಲ್ಲದ ಆಸಕ್ತಿ. ಅವನ ಪತ್ನಿಗೆ ಬೇರೆ ಆ ಜೋಬಧ್ರ ಮೋರೆ ನೋಡಿ ನೋಡಿ ರೋಸಿಹೋಗಿತ್ತು. ಹೆಂಗಸಿಗೆ ತಲೆ ರೋಸಿದ್ರೆ ಏನಾದ್ರೂ ಮಾಡಲು ಸಿದ್ಧ-
ಕಂಠಿ : ಅಲ್ಲವೆ, ಅಲ್ಲವೇ.
ವ್ಯಕ್ತಿ : ಆಳುಕಾಳು ಹೆಂಗಸು ಎಲ್ಲ ನನ್ನ ಸುತ್ತ ಮುತ್ತಿಕೊಂಡ್ರು. ನನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಲ್ಲೇ ನಿಂತೆ-
ವಿಟ್ಟಿ : ದೊಡ್ಡ ಸಾಧನೆ ಸಾರ್.
ಕಂಠಿ : ದೊಡ್ಡ ಸಾಧನೆ.
ವ್ಯಕ್ತಿ : ಹೆದರ್ಕೊಂಡು ಹೋದರೆ ಮೈಮೇಲೆ ಬರುತ್ತೆ, ಅಟ್ಟಿಸಿಕೊಂಡು ಹೋದ್ರೆ ಓಡಿಹೋಗುತ್ತೆ. ಏನು ಹೇಳಿ?
(ಕಂಠಿ, ವಿಟ್ಟಿ ಯೋಚಿಸುವಂತೆ ನಟಿಸುವರು)
ಬಿಸ್ಕತ್ ಹಾಕಿದ್ರೆ ಕೈ ನೆಕ್ಕುತ್ತೆ. ಮನೆ ಕಟ್ಟಿಸಿಕೊಟ್ರೆ ಪೂಜೆ ಮಾಡುತ್ತೆ. ಏನು?
ಕಂಠಿ,ವಿಟ್ಟಿ: ನಾಯಿ ಸಾರ್.
ವ್ಯಕ್ತಿ : ಫೂಲ್ ಹೇಳಿ. ಕನಸು ಕಟ್ಟುತ್ತೆ. ಒಂದಿದ್ದಲ್ಲಿ ಎರಡು ಕಾಣುತ್ತೆ.
ಕಂಠಿ : ಬಗೆಹರೀತಿಲ್ಲ ಸ್ವಾಮಿ.
ವ್ಯಕ್ತಿ : ಫೂಲ್ಸ್. ನೆಲ ಅಗೆಯುತ್ತೆ. ನಾಗರಿಕತೆ ಕಟ್ಟುತ್ತೆ. ದಾಸಾನುದಾಸನಾಗಿ ದುಡಿಯುತ್ತೆ. ಎರಡು ಒಳ್ಳೇ ಮಾತಾಡಿದ್ರೆ ವಿಧೇಯನಾಗಿರುತ್ತೆ. ಚಿನ್ನದ ಶಬ್ಧ ಕೇಳಿದ್ರೆ ಕಣ್ಣಗಲಿಸಿ ನಿಲ್ಲುತ್ತೆ. ಚಿನ್ನ ಇಲ್ಲದ ಹತ್ರ ಆತ್ಮ, ಮಹಾತ್ಮ ನೋಡುತ್ತೆ.
(ಮೌನ)
ಜನ.
(ನಗುವನು)
ಮಹಾಜನ.
(ನಗುವನು)
ಜನಸ್ತೋಮ.
ಕಂಠಿ : ಹೌದು ಸಾರ್.
ವ್ಯಕ್ತಿ : ಅದಕ್ಕೆ ಬುದ್ಧಿಯಿಲ್ಲ. ಅದಕ್ಕೇನೇ ಅದು-
(ಕಿಟ್ಟಿ ತೋರಿಸಿ)
ಈ ಸ್ಥಿತಿಗೆ ಬರುತ್ತೆ.
ಕಂಠಿ : ಇವನಿಗೇನು ಮಾಡೋಣ ಸಾರ್?
ವ್ಯಕ್ತಿ : ಹೂತುಬಿಡೋಣ.
ಕಂಠಿ : ಆಮೇಲೆ?
ವ್ಯಕ್ತಿ : ಹೊರಟುಹೋಗೋಣ.
ವಿಟ್ಟಿ : ಆಮೇಲೆ, ಎಲೆಕ್ಷನ್.
ವ್ಯಕ್ತಿ : (ಉತ್ಸಾಹದಿಂದ)
ಹೌದು ಎಲೆಕ್ಷನ್. ಅಧಿಕಾರ.
ವಿಟ್ಟಿ : ನಾನೊಬ್ಬ ದೊಡ್ಡ ಅಧಿಕಾರಿ.
ಕಂಠಿ : ನಾನೂ ಜಬರದಸ್ತ್ ಆಫೀಸರ್.
ವ್ಯಕ್ತಿ : ಎಲ್ಲ ಕಡೆ ಸುಭಿಕ್ಷ ನೆಲಸೋ ಹಾಗೆ ಮಾಡಬೇಕು.
ಕಂಠಿ : ವಾಕ್ ಸ್ವಾತಂತ್ರ್ಯ-ಪತ್ರಿಕಾ ಸ್ವಾತಂತ್ರ್ಯ.
(ಇಷ್ಟಾದ ಮೇಲೆ ಕಿಟ್ಟಿ ಬಾಯಿಯ ಬಟ್ಟೆ ತೆಗೆಯುವನು)
ಕಿಟ್ಟಿ : (ಅವರೆಲ್ಲ ಅವನ ಕಡೆ ತಿರುಗುವಂತೆ)
ಕತ್ತೆಬಾಲ!
(ಎಲ್ಲ ಸುಮ್ಮನೆ ನೋಡುತ್ತಿದ್ದಾರೆ)
ನಿಮ್ಮ ವಾಕ್‍ಸ್ವಾತಂತ್ರ್ಯ ಕತ್ತೆಬಾಲ – ಕುದುರೆ ಜುಟ್ಟು!
ವಿಟ್ಟಿ : ಯಾಕೋ- ಮತ್ತೆ ಬೇಕಾ ಗೂಸ?
ಕಿಟ್ಟಿ : ಮಹಾ ಗುಡ್ಡ ಕಡಿಯೋ ಬಡ್ಡೀಮಗ!
ಕಂಠಿ : ತೆಪ್ಪಗೆ ಬಿದ್ದಿರು.
ಕಿಟ್ಟಿ : ನಂಗ್ ಬ್ಯಾಸರ-
ಕಂಠಿ : ಅಲ್ಲ, ಕೊಬ್ಬು.
ಕಿಟ್ಟಿ : ಹಸವು – ಹೊಟ್ಟೆಲ್ಲ ಹಸವು-
ಕಂಠಿ : ಅಲ್ಲ, ತಿಕ್ಕಲು. ಪಿಟಕ್ಕೆನ್ನದೆ ಬಿದ್ದಿರು.
(ಆಶ್ಚರ್ಯಕರ ರೀತಿಯಲ್ಲಿ ಕಿಟ್ಟಿ ಸಮಾಧಾನದಿಂದ ಟೇಬಲ್ ಹಿಂದಿನ ಸ್ಟೂಲಿನ ಮೇಲೆ ಕೂತು ತಲೆ ಹಿಡಿದುಕೊಂಡು ತೆಪ್ಪಗಿರುತ್ತಾನೆ.)
ವಿಟ್ಟಿ. ನನ್ನದೊಂದು ಕವನ ಅನ್ನು.
ವ್ಯಕ್ತಿ : ಏನು, ನೀವು ಕವನ ಬರೀತೀರ?
ಕಂಠಿ : ಕೇಳಿ.
ವಿಟ್ಟಿ : ಭತ್ತ, ಜೋಳ ಬೆಳೆಯೋಕಿನ್ನು
ರಂಗಪ್ಪನೋರು ಸಜ್ಜು;
ಆದ್ರೆ ಈಸಿ ಛೇರ್ ಬಿಡೋಕೆ
ರಿಫ್ಯೂಸ್ ಮಾಡೋ ಬೊಜ್ಜು.
(ನಗುವರು)
ವ್ಯಕ್ತಿ : ಸೊಗಸಾಗಿದೆ ಅಪ್ಯಾಯಮಾನವಾಗಿದೆ.
ಕಂಠಿ : ಅಪ್ಯಾಯಮಾನ! ಅ.ನ.ಕೃ. ಹೇಳೋ ಹಾಗೆ…
ವ್ಯಕ್ತಿ : ಪದ್ಯ ಅಂದ್ರೆ ಹೀಗಿರಬೇಕು…
ಕಂಠಿ : ನಾನು ಕವನ ಕಟ್ಟೋದು ಕೈಬಿಡಬೇಕು ಅಂತದೇನಲ್ರಿ…
ವ್ಯಕ್ತಿ : ಉಂಟೆ? ಕಾವ್ಯ ಲೋಕಕ್ಕೆ ನಷ್ಟ… ಬಿಟ್ಟಿಬಿಟ್ಟು ನೀವು…
ಕಂಠಿ : ಬಿಟ್ಟು ವ್ಯಾಪಾರ ತೆರೆಯೋಣ ಅಂತ-
ವ್ಯಕ್ತಿ : ಮಾಡಿ. ಬೆಸ್ಟ್.
(ಗಟ್ಟಿಯಾಗಿ)
ಕ್ಯಾಪಿಟಲ್!
ಕಂಠಿ : ನಿಮ್ಮ ಕಡಿಂದ ಕೊಂಚ ಮರ್ಮ-
ವ್ಯಕ್ತಿ : (ಕಂಠಿಯನ್ನು ಬೇರೆ ಕರೆದುಕೊಂಡು ಹೋಗಿ ಅವನೊಂದಿಗೆ ಮಾತನಾಡುವನು)
ನೀವಾಗಿದ್ಕೇ ಹೇಳಿದೇನೆ.
ಕಂಠಿ : ಸೊಗಸಾಗಿದೆ-ಓವರ್ ಅಂಡ್ ಎಬೌ-
ವ್ಯಕ್ತಿ : ಟ್ರೆಂಡ್‍ಗೆ ತಕ್ಕಹಾಗೆ-ಇಪ್ಪತ್ತು ಮೂವತ್ತು ಪರ್ಸೆಂಟ್-
ಕಂಠಿ : ನಾನೂ ಹೀಗೆ ಮಡೋದು ಅಂತೀರಾ?
ವ್ಯಕ್ತಿ : ನಿರ್ವಾಹವೇ ಇಲ್ಲ-
ಕಂಠಿ : ಗಾಂಧೀಬಜಾರ್‍ನಲ್ಲಿ?
ವ್ಯಕ್ತಿ : ಗಿಲೀಟ್ ಸ್ವಾಮಿ, ಗಿಲೀಟ್!
ಕಂಠಿ : ಎತ್ಗೋತಾನೆ ರುದ್ರಪ್ಪನ್ನ ಪಟ್ಟಾಗಿ ಹಿಡ್ಕೊಳ್ಳೋದು-
ವ್ಯಕ್ತಿ : ಸಂಗಮ್ಮ- ಆ ಹುಚ್ಚುಮುಂಡೆ ಮರೀಬಾರದು.
ಕಂಠಿ : ಭಾಳ ಹರಾಮೀನಾ ಆಕೆ?
ವ್ಯಕ್ತಿ : ಕೇಳ್ತೀರ! ಛತ್ರಿಯಿಲ್ಲದೆ ಹೊರಡೋಲ್ಲ ಆಕೆ. ಮುಖಕ್ಕೆ ಬಣ್ಣ.
ಕಂಠಿ : ಕಣ್ಣಿಗೆ ಸುಣ್ಣ!
(ಇಬ್ಬರೂ ನಗುವರು: ಅರ್ಥಾತ್ ಕೃತಕ)
ವ್ಯಕ್ತಿ : ಇಷ್ಟಾದ್ರೆ, ನೋಡಿ ಆರು ತಿಂಗಳಲ್ಲಿ ನೀವೂ ಒಬ್ಬ ಮನುಷ್ಯ.
ಕಂಠಿ : ಆದ್ರೆ…… ಪಾರ್ಟಿಗೆ ಕೊಂಚ ತೊಂದರೆಯಾಗುತ್ತದಲ್ಲ-
ವ್ಯಕ್ತಿ : ಅಯ್ಯೋ ನಾನೂ ನಿಮ್ಮ ಕಡೆ ಬಂದುಬಿಡ್ತೇನೆ.
ಕಂಠಿ : ತುಂಬ ದ್ರೋಹ ಅಲ್ವಾ?
ವ್ಯಕ್ತಿ : ಒಳ್ಳೇ ಕೆಲಸಕ್ಕೆ ಏಳು ಸಮುದ್ರ ದಾಟಬೇಕಾಗುತ್ತೆ-
ಕಂಠಿ : ಕೀಳು ಸಮುದ್ರ ಕೂಡ ದಾಟಿ-
ವಿಟ್ಟಿ : ಅಲ್ಲೊಂದು ದೊಡ್ಡ ಆಲದಮರದ ಪೊಟರೆಯಲ್ಲಿ-
ಕಂಠಿ : ನೀನು ಸುಮ್ಮನಿರು.
(ವ್ಯಕ್ತಿಗೆ)
ದೊಡ್ಡ ಸಾಹಸ ಸ್ವಾಮಿ.
ವ್ಯಕ್ತಿ : ಹೊಟ್ಟೆ. ಹೊಟ್ಟೆ ನೋಡ್ಕೊಳ್ಳಿ.
ಕಂಠಿ : ಅಲ್ಲಿಂದಾನೇ ಎಲ್ಲ ಶುರುವಾಗೋದು.
ವಿಟ್ಟಿ : ಸಾರ್, ಈ…. ಈ…. ಗಡಿ…. ದಾಟಿ….
ವ್ಯಕ್ತಿ : ಗಡಿ ದಾಟಿ ಅಕ್ಕಿ ಹೊತ್ರೆ ಅವಕ್ಕೆ ಏನಂತಾರೆ ಗೊತ್ತೆ?
ವಿಟ್ಟಿ : ಹೇಳಿ ಸಾರ್.
ವ್ಯಕ್ತಿ : ಅಂತಾರೆ…. ಶುದ್ಧ ಕತ್ತೆ….
ವಿಟ್ಟಿ : ದಪ್ಪಕ್ಕಿನೋ ಸಣ್ಣಕ್ಕಿನೋ ಸಾರ್?
ವ್ಯಕ್ತಿ : ಸಣ್ಣಕ್ಕಿ ಹೊತ್ತ ಕತ್ತೆಗೆ ಹೆಚ್ಚು ಮರ್ಯಾದೆ….
ಕಂಠಿ : ಒಂದು ವೇಳೆ ಕತ್ತೆ ಬರೀ ಮರ್ಯಾದೆ ಹೊತ್ರೆ….
ವ್ಯಕ್ತಿ : ಅದು ಮರ್ಯಾದೆಯನ್ನೇ ತಿನ್ನಬೇಕಾಗುತ್ತೆ-
(ನಗುವರು)
ಕಂಠಿ : ತಮಗೆ ಇನ್ನು ಪ್ರಶಸ್ತಿ ಯಾಕೆ ಬರಲಿಲ್ಲ?
ವ್ಯಕ್ತಿ : ಯಾರಿಗೆ ಬೇಕು- ಬಚಾವಾದ್ರೆ ಸಾಕು.
ವಿಟ್ಟಿ : ಸ್ವಲ್ಪ ಪ್ರಭಾವ.
ಕಂಠಿ : ಕಿಲಕಿಲ ನಗೆ..
ವಿಟ್ಟಿ : ಜನಪ್ರಿಯ ತತ್ವಜ್ಞಾನ..
ಕಂಠಿ : ಈಗ ನೋಡಿ ನಮ್ಮ ಘನತೆ ಗೊತ್ತಾಯ್ತು!
(ಪ್ರಶಂಸಾತ್ಮಕ ನಗೆಯಿಂದ ಗಂಭೀರವಾಗುತ್ತ ಬರುತ್ತಾನೆ)
ತಾವು ಅಧ್ಯಾಪಕರ ಕೆಲಸ ಬಿಟ್ಟಿದ್ದು-
ವ್ಯಕ್ತಿ : ವ್ಯಾಪಾರ ಶುರುಮಾಡಿದ್ದು-
ವಿಟ್ಟಿ : ಈ ಮಧ್ಯೆ ಯಜಮಾನ್ರು ಸತ್ತದ್ದು.
ವ್ಯಕ್ತಿ : ಹಹಹ. ಮೆತ್ತಗೆ ಮಾತಾಡಿ. ವ್ಯಾಪಾರ ಬಚಾಯಿಸಿಕೊಳ್ಳೊಕೆ ಕಂಟ್ರಾಕ್ಟ್.
ಕಂಠಿ : ಕಂಟ್ರಾಕ್ಟ್ ಬಚಾಯಿಸಿಕೊಳ್ಳೋಕೆ ರಾಜಕೀಯ-
ವಿಟ್ಟಿ : ಮೇಲೆಲ್ಲಾ ಒಂದು-
ಕಂಠಿ : ಒಳಗೆ ಮತ್ತೊಂದು.
ಕಿಟ್ಟಿ : (ಕತ್ತೆತ್ತಿ)
ನಿನ್ನ ಭಂಡಬಾಳಿಗೆ ಬೆಂಕಿ ಬೀಳ!
ವ್ಯಕ್ತಿ : ನೀನು ಮಾತಾಡಬೇಡ.
ಕಂಠಿ : ಯಾಕೆ ಸ್ವಾಮಿ ಮಾತಾಡಬಾರದು?
ವಿಟ್ಟಿ : ವಾಕ್‍ಸ್ವಾತಂತ್ರ್ಯ ತಮಗೊಬ್ಬರಿಗೆ ಅಲ್ಲವಲ್ಲ?
ವ್ಯಕ್ತಿ : ಇದೇನು ನೀವು ಇದ್ದಕ್ಕಿದ್ದಂತೆ-
ಕಂಠಿ : ಹೇಳಿ, ಎಷ್ಟು ಇನ್‍ಕಂ ಟ್ಯಾಕ್ಸ್ ತಪ್ಪಿಸಿಕೊಂಡ್ರಿ?
ವ್ಯಕ್ತಿ : ಹೇಳೋಲ್ಲ. ನನಗೆ ಹೊತ್ತಾಗುತ್ತೆ. ಹೋಗಬೇಕು.
ವಿಟ್ಟಿ : ಇದು ತಮ್ಮ ಮನೆ ಸ್ವಾಮಿ.
ಕಂಠಿ : ಮನೆಯೊಡೆಯರ ಕೊಲೆ ಆದ ಮೇಲೆ- ತಮ್ಮ ಮನೆ.
ವ್ಯಕ್ತಿ : ನನ್ನ ತಲೆ ಕೆಟ್ಟು ಹೋಗ್ತಿದೆ. ನಿಮ್ಮ ಹತ್ರ ಮಾತಾಡ್ತಾ ಇದ್ರೆ ಹುಚ್ಚು ಹಿಡಿಯುತ್ತೆ. ಹೇಳಿ, ನೀವು ಯಾರು ಅಂತ ಯಾಕೆ ಮುಂಚೆ ಹೇಳ್ಳಿಲ್ಲ?.
ನೀವು ಗೂಡಾಚಾರ್ರು ಅಂತ ಯಾಕೆ ಹೇಳ್ಳಿಲ್ಲ.
ಕಂಠಿ : ಗೂಢಚಾರ್ರು ಅಂತ ಈಗ ಯಾರು ಹೇಳಿದ್ರು?
ವ್ಯಕ್ತಿ : ನನಗೆ ಹಾಗನ್ನಿಸುತ್ತೆ.
ಕಂಠಿ : ನಿಮಗೆ ಸಾವಿರ ಅನ್ಸುತ್ತೆ. ಕಂಡಕಂಡವರೆಲ್ಲ ವಿದ್ಯಾರ್ಥಿಗಳು ಅನ್ಸುತ್ತೆ. ಪೊಲೀಸ್ ಅನ್ಸುತ್ತೆ. ಗೂಢಚಾರ್ರು ಅನ್ಸುತ್ತೆ-ನಿಮಗೇನು ಘನತೆ ಅನ್ನೋದು ಎಳ್ಳುಕಾಳಿನಷ್ಟೂ ಇಲ್ಲವೇನ್ರಿ?
ವ್ಯಕ್ತಿ : ನಿಮ್ಮಂಥವರ ಸಹವಾಸ ಮಾಡಿದ ಮೇಲೆ ಘನತೆಯೆಲ್ಲಿ ಉಳಿಯುತ್ತೆ? ಪ್ರಾಮಾಣಿಕತೆ ಎಲ್ಲಿ ಉಳಿಯುತ್ತೆ? ನಾಯಿಗಳ ಸ್ನೇಹ ಮಾಡಿದ ಮೇಲೆ ತಾನೇ ನಿಮಗೆ ವಾಸನೆ ಹಿಡಿಯೋ ವಿದ್ಯೆ ಕರಗತವಾದ್ದು?
ವಿಟ್ಟಿ : ಅಂತು ನಾವು ನಿಮ್ಮನ್ನು ಕೆಡಿಸಿದೆವು ಅನ್ನಿ.
ವ್ಯಕ್ತಿ : ಪರಸ್ಪರ- ಕೊನೇಪಕ್ಷ ಪರಸ್ಪರ. ನಾನಿನ್ನು ಬರ್ತೇನೆ.
ವಿಟ್ಟಿ : ಬೇಡಿ-ಕೆಡ್ತೀರ-ಹೋಗಬೇಡಿ-
ವ್ಯಕ್ತಿ : ಹ್ಯಾಗೆ ಕೆಡ್ತೇನೋ ನೋಡಿಬಿಡ್ತೇನೆ-
(ಎಂದು ಹೋಗುವುದರಿಲ್ಲಿದ್ದಾಗ ವಿಟ್ಟಿ ಅವನ ರಟ್ಟೆ ಹಿಡಿದೆಳೆದು ಕೆನ್ನೆಗೆ ಹೊಡೆಯತೊಡಗುವನು)
ವ್ಯಕ್ತಿ : ನನ್ನ ಬಿಟ್ಟುಬಿಡ್ರಿ. ಆಮೇಲೆ ಬೇಕಾದರೆ ಸಿಕ್ತೇನೆ. ನನ್ನ ತಪ್ಪಿಲ್ಲ. ಬಿಟ್ಟು ಬಿಡಿ….
ಕಂಠಿ : ಸ್ಟಾಪ್ ಇಟ್. ಶುದ್ಧ ಕಟುಕನ ಹಾಗೆ ವರ್ತಿಸ್ತೀಯಾ- ಬುದ್ಧಿ ಜ್ಞಾನ ಇಲ್ಲ?
ವಿಟ್ಟಿ : ಕ್ಷಮಿಸಿ ಸಾರ್.
ಕಂಠಿ : ಸುಧಾರಿಸಿಕೊಳ್ಳಿ ಸಾರ್. ಸುಧಾರಿಸಿಕೊಳ್ಳಿ. ಕೈಕೆಳಗಿನ ಜನ ಹೀಗೆ ಎರ್ರಾಬಿರ್ರಿ ವರ್ತಿಸಿದರೆ ಆಮೇಲೆ ಕೆಟ್ಟ ಹೆಸರೆಲ್ಲ ನಮ್ಮ ಕೊರಳಿಗೆ. ನಾನಿಲ್ಲಿಗೆ ಬರುವಾಗಲೇ ತಯಾರು ಮಾಡಿಕೊಂಡು ಬಂದಿದ್ದೇನೆ- ಪಕ್ಕಾ ಗೂಂಡಾಗಳ ಹಾಗೆ ವರ್ತಿಸ್ತಿದಾರೆ, ನೋಡಿ.
(ಕಿಟ್ಟಿ ತೋರಿಸಿ)
ಈತ ಇದಾನಲ್ಲ, ನಸುಗುನ್ನಿಕಾಯಿನ ಥರ. ಮುಟ್ಟಿದರೆ ಮೈಯೆಲ್ಲ ನವೆ. ಹೋಗಲಿ ಅಂತ ಸಲಿಗೆ ಕೊಟ್ರೆ ಹ್ಯಾಗೆ ರೋಫ್ ಹಾಕಿದ ನೋಡಿದಿರಾ? ಲೋ ಕಕವಾ, ಏನು ಬರೆದಿದ್ದೀಯೋ ಸರಿಯಾಗಿ ಓದ್ಕೋ.
(ಕಿಟ್ಟಿ ಹಲ್ಲು ಕಿರಿಯುತ್ತಾ ಎದ್ದು ಮತ್ತೆ ಕೂರುತ್ತಾನೆ)
ಈತನ್ನೋಡಿ, ಈತನ ಕೊಬ್ಬಿದ ಅಂಗಾಂಗ ಕಂಡು ಕೆಲಸಕ್ಕೆ ತಗೊಂಡೆವು- ಬುದ್ಧೀನೂ ಬೆಳೆಸಿಕೊಳ್ಳೋಕೆ ಪ್ರಯತ್ನ ನಡೆಸಿದಾನೆ. ರಂಗಶೆಟ್ಟರ ಜೇಷ್ಠ ಪುತ್ರ-ಆದ್ರೂ ಮಗ್ಗಿ ಕಲಿಯೋಕೆ ಒಂದು ವರ್ಷ ತಗೊಂಡ. ಲೋ ಬಕ್ರಾ ಹೇಳು: ಹದಿಮೂರ ಆರಲ?
ವಿಟ್ಟಿ : ಹದಿಮೂರೊಂದ್ಲ ಹದಿಮೂರು, ಹದಿಮೂರೆರಡಲ ಇಪ್ಪತ್ತಾರು, ಹದಿಮೂರು ಮೂರಲ ಮೂವತ್ತೊಂಭತ್ತು-ಥೂ
(ಎಂದು ಕೈಕೊಡವಿಕೊಂಡು ಮತ್ತೆ ಆರಂಭದಿಂದ ಹೇಳಿ)
ಎಪ್ಪತೆಂಟು ಸಾರ್.
ವ್ಯಕ್ತಿ : (ಕೊಂಚ ಸಮಾಧಾನ ತಾಳಿ)
ಪರವಾಗಿಲ್ಲ ಅಂತ ಕಾಣುತ್ತೆ.
ಕಂಠಿ : ಮುಗುಳ್ನಗಿ ಸಾರ್. ಇದು ನಿಮ್ಮ ಮನೆ ಅಂತ ತಿಳ್ಕೊಳ್ಳಿ.
(ಈತನ ಧ್ವನಿ ಏರುತ್ತಾ ಹೋಗುತ್ತೆ)
ವ್ಯಕ್ತಿ : ನೀವು ಯಾರು ಹೇಳಿ.
ಕಂಠಿ : ಅದಿರ್ಲಿ ಮುಗುಳ್ನಗಿ ಸಾರ್.
ವ್ಯಕ್ತಿ : ನಿಮಗೇನು ಬೇಕು?
ಕಂಠಿ : ಅದಿರ್ಲಿ ಮುಗುಳ್ನಗಿ ಸಾರ್.
ವ್ಯಕ್ತಿ : ನಿಮ್ಮ ಆಫೀಸು ಯಾವುದು.
ಕಂಠಿ : ಅದಿರ್ಲಿ ಮುಗುಳ್ನಗಿ ಸಾರ್.
(ಕಟುವಾಗಿ, ಯಾಂತ್ರಿಕವಾಗಿ)
ವ್ಯಕ್ತಿ : ನನಗೆ ಗೊತ್ತಾಗುತ್ತೆ. ಹೇಳಿ. ನಿಮಗೇನು ಬೇಕು?
ಕಿಟ್ಟಿ : ಒಂದ್ಸರಿ ಪಸಂದಾಗಿ ನಗ್ರಿ ಅಂತ ಇದಾರಲ್ರೀ.
ಕಂಠಿ : ಲೋ. ಬಾಯಿಗೆ ಬೀಗ ಜಡ್ಕೋ.
ವ್ಯಕ್ತಿ : ದೊಡ್ಡೋರು ಮಾತಾಡೋವಾಗ ಸುಮ್ಮನಿರಬೇಕು.
ಕಂಠಿ : (ಕಿಟ್ಟಿಗೆ)
ಒಳ್ಳೇ ಮಾತು. ಬರಕೋ.
(ವ್ಯಕ್ತಿಗೆ)
ಈಗ ಕೊಲೆ ವಿಚಾರ-
ವ್ಯಕ್ತಿ : ಕೊಲೆಯಲ್ಲಿ ನಾನಾ ಬಗೆ ಇವೆ.
ಕಂಠಿ : (ಕಿಟ್ಟಿಗೆ)
ಬರಕೋ.
ವ್ಯಕ್ತಿ : ಯಜಮಾನ್ರು ಸತ್ತದ್ದು ನಿಜ.
ಕಂಠಿ : (ಬರವಣಿಗೆಯಿಂದ ತಲೆಯೆತ್ತಿ)
ಕಿಟ್ಟಿ : ಸತ್ತುದಲ್ರಿ- ಖುನಿ…
ಕಂಠಿ : ನೀನು ಸುಮ್ಮನಿರು. ಅವರಲ್ಲಿ ಸತ್ತ ಕೂಡಲೇ ಇಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ರಿ.
ವ್ಯಕ್ತಿ : ರಾಜೀನಾಮೆ ವಿಚಾರ ನಿಜ.
ವಿಟ್ಟಿ : ನಾಯಿ ಬೊಗಳಿದ್ದು ನಿಜ…
ಕಂಠಿ : ಹೆಮ್ಮೆಯಿಂದ ಬೀಗಿದ್ದು ನಿಜ.
ವ್ಯಕ್ತಿ : ಅದೆಲ್ಲ ಗೊತ್ತಿಲ್ಲ: ರಾಜೀನಾಮೆ ಕೊಟ್ಟೆ.
ಕಂಠಿ : (ವಿಟ್ಟಿಗೆ)
ನಿನ್ನ ಬುದ್ಧಿ ಉಪಯೋಗಿಸು. ಇವರು ಯಾಕೆ ರಾಜೀನಾಮೆ ಕೊಟ್ರು ಹೇಳು.
ವಿಟ್ಟಿ : ಪಾಠ ಹೇಳಿ ಹೇಳಿ ಬೇಸರವಾಗಿರಬೇಕು.
ಕಿಟ್ಟಿ : ನಾನು ಹೇಳ್ತನ್ರಿ. ನಾನು ಹೇಳ್ತನ್ರಿ-
ಕಂಠಿ : ತೆಪ್ಪಗಿರಯ್ಯ. ವಿಟ್ಟಿ ಹೇಳಿದ್ದು ನಿಜವೇ ಇವರೇ?
ವ್ಯಕ್ತಿ : ಸಂಪೂರ್ಣ ನಿಜವಲ್ಲ.
ಕಿಟ್ಟಿ : ನಂಗ್ಗೊತ್ರೀ. ನಂಗೊತ್ರೀ…
ಕಂಠಿ : ಹೇಳು.
ಕಿಟ್ಟಿ : ಕಾಲೇಜದಾಗೆ ಇವರ ಬ್ಯಾಳೇಕಾಳು ಬೇಯಾಕಿಲ್ಲ ಅಂತ-
ಕಂಠಿ : ನಿಜವೇ ಸ್ವಾಮಿ?
ವ್ಯಕ್ತಿ : ನಾನು ಹೋಗಬೇಕು-ಹೊತ್ತಾಗುತ್ತೆ.
ವಿಟ್ಟಿ : ಎಲ್ಲಿಗ್ರೀ ಹೋಗ್ತೀರಾ?
ವ್ಯಕ್ತಿ : ಅಂಗಡಿಗೆ.
ವಿಟ್ಟಿ : ಇವತ್ತು ಭಾನುವಾರ.
ವ್ಯಕ್ತಿ : ದೇವಸ್ಥಾನಕ್ಕೆ.
ವಿಟ್ಟಿ : ಅದು ತುಂಬ ಬ್ಯುಸಿ…
ವ್ಯಕ್ತಿ : ಸ್ನೇಹಿತರನ್ನು ನೋಡೋಕೆ..
ವಿಟ್ಟಿ : ಮೇಷ್ಟರೋ, ರಾಜಕಾರಣಿಗಳೋ, ವ್ಯಾಪಾರಿಗಳೋ, ಕೊಲೆಗಡುಕರೋ?
ಕಂಠಿ : ನೀನು ಸುಮ್ಮನಿರು. ಯಾವುದು ವಾಸಿ. ಚೀಟಿಂಗೋ ವ್ಯಾಪಾರವೋ?
ವ್ಯಕ್ತಿ : ಎಲ್ಲ ಒಂದು ರೀತಿ ವ್ಯಾಪಾರಾನೇ.
ವಿಟ್ಟಿ : ಹ್ಯಾಗೆ?
ಕಂಠಿ : ನೀನು ಸುಮ್ಮನಿರು. ಹ್ಯಾಗೆ?
ವ್ಯಕ್ತಿ : ಕೊಡೋದು, ತಗೊಳ್ಳೋದು.
ಕಂಠಿ : ಹ್ಯಾಗೆ, ಸರಿಯಾಗಿ ಹೇಳಿ.
ವ್ಯಕ್ತಿ : ಮಾತು, ವಸ್ತು, ಮನಸ್ಸು ಎಲ್ಲ ಕೊಟ್ಟು ತಗೊಳ್ಳೋದು.
ಕಂಠಿ : ಹ್ಯಾಗೆ, ಹ್ಯಾಗೆ, ಸರಿಯಾಗಿ ಹೇಳಿ.
ವ್ಯಕ್ತಿ : (ರೇಗಿ)
ನೀವು, ನೀವು, ಯಾವನೋ ಒಬ್ಬ ಗೌರ್ನಮೆಂಟ್ ಹೆಡ್ಡನಿಗೆ ಗುಲಾಮರಾಗಿ ಸಾಯ್ತ ಇರೋ ನೀವು, ಪಗಾರ ಪಡೀತ ಕೋಳಿಗಳ ಥರ ಮೆರೀತೀರಲ್ಲ, ಹಾಗೆ. ನಿಮ್ಮ ಮಾನ ಮರ್ಯಾದೆನೆಲ್ಲ ದುಗ್ಗಾಣಿಗೆ ಮಾರ್ಕೊಂಡು ದಾರೀಲಿ ಸಿಕ್ಕೋರ್ನೆಲ್ಲ ಪೀಡಿಸ್ತೀರಲ್ಲ ಹಾಗೆ. ಹ್ಯಾಗಂತೆ ಹ್ಯಾಗೆ. ಎಲ್ಲಾ ಬರೀ ವ್ಯಾಪಾರಾನ್ರೀ-ವ್ಯಾಪಾರ. ನಿಮ್ಮ ಪ್ರೇಮ-ಹಾ ಪ್ರಿಯಾ ಪ್ರಶಾಂತ ಹೃದಯ, ನಿಮ್ಮ ಕಾಮ- ಹಹ್ಹ ಹ್ಹಹ್ಹೀ; ನಿಮ್ಮ ವಿದ್ಯೆ, ವಿದ್ಯಾದಾನ..
(ಕಿಟ್ಟಿ ಎಲ್ಲವನ್ನೂ ಬರೆದುಕೊಳ್ಳುತ್ತಿರುವನು)
ಕಂಠಿ : ತಮ್ಮ ಕಾಲದಲ್ಲಿ ವಿದ್ಯೆ ವ್ಯಾಪಾರವಾಗಿರ್ಲಿಲ್ಲ ಅಂತ ಕಾಣುತ್ತೆ?
ವ್ಯಕ್ತಿ : ಅಷ್ಟೇ ಯಾಕೆ, ಹೇಳ್ರೀ. ನಾನು ಬ್ಲಾಕ್ ಮಾರ್ಕೆಟ್ ಮಾಡ್ತಿದ್ದು, ಕುದುರೆ ಜೂಜಾಡ್ತಿದ್ದದ್ದು, ಸುಳ್ತು ಹೇಳ್ತಿದ್ದು-
ವಿಟ್ಟಿ : ಕಂಠಿ-ಗೊತ್ತಾಯ್ತು ಬಿಡಿ-ಎಲ್ಲ ವ್ಯಾಪಾರ.
(ದೊಡ್ಡ ನಗೆ)
ವ್ಯಕ್ತಿ : ಯಾರು ನಕ್ಕದ್ದು?
ಕಂಠಿ : ವ್ಯಾಪಾರ ಅಂದ್ಮೇಲೆ ಇನ್‍ಕಮ್-ಟ್ಯಾಕ್ಸ್ ಇದ್ದೇ ಇರುತ್ತಲ್ಲ-
ವ್ಯಕ್ತಿ : ಯಾರು ನಕ್ಕದ್ದು-
ಕಂಠಿ : ನಿಮ್ಮ ಅಕೌಂಟ್ಸೆಲ್ಲ ಇಟ್ಟುಬಿಡಿ.
ವ್ಯಕ್ತಿ : ಇದು ಯಾವ ಸ್ಥಳ?
ವಿಟ್ಟಿ : ತಮಗೆ ಗೊತ್ತಿಲ್ಲದ್ದು ಯಾವುದೂ ಇರಲಿಲ್ಲ.
ವ್ಯಕ್ತಿ : ಅದು ಬೇಕಾಗಿಲ್ಲ; ನಾನೆಲ್ಲಿದೇನೆ?
ಕಂಠಿ : ತಮ್ಮ ಜ್ಞಾಪಕಶಕ್ತಿ ಇದ್ದಕ್ಕಿದ್ದಂತೆ ಹೊರಟುಹೋಯ್ತೇನು?
ವ್ಯಕ್ತಿ : ಅದು ನಿಮ್ಮಿಂದ. ನಿಮ್ಮ ಸಾವಾಸದಿಂದ. ಹೇಳಿ, ನಾನೆಲ್ಲಿದ್ದೇನೆ?
ವಿಟ್ಟಿ : ಕನಸಲ್ಲಿರಬಹುದು.
ವ್ಯಕ್ತಿ : ಯಾರ ಕನಸಲ್ಲಿ?
ಕಂಠಿ : ವಿಟ್ಟಿ ಕನಸಲ್ಲಿರಬಹುದು, ಕಿಟ್ಟಿ ಕನಸಲ್ಲಿರಬಹುದು.
ವಿಟ್ಟಿ : ನಿಮ್ಮ ಕನಸಲ್ಲಾದ್ರೂ ಸರಿ, ನನ್ನ ಕನಸಲ್ಲಾದ್ರೂ ಸರಿ.
ಕಂಠಿ : ಸ್ವರ್ಗದಲ್ಲಿರಬಹುದು, ನರಕದಲ್ಲಿರಬಹುದು.
ವ್ಯಕ್ತಿ : ಅಥವಾ?
ಕಂಠಿ : ಭೂಲೋಕದಲ್ಲಿರಬಹುದು.
ವ್ಯಕ್ತಿ : ಭೂಲೋಕ…
ಕಂಠಿ : ಹೌದು, ಭೂಲೋಕ… ಡೆಲ್ಲಿ, ಲಂಡನ್, ಹರಪನಹಳ್ಳಿ, ಬೆಂಗಳೂರು, ತೀರ್ಥಹಳ್ಳಿ, ಕೆಂಪೇಗೌಡ ರೋಡು, ಮಲ್ಲೇಶ್ವರಂ, ಗಾಂಧಿಬಜಾರು, ಜಯನಗರ, ನಾಗರತ್ನ, ಕೃಷ್ಣವೇಣಿ, ಪರಮೇಶ್ವರಪ್ಪ, ಕೃಷ್ಣಯ್ಯಂಗಾರ್, ಘಮಘಮ ಹೂವು, ಮಸಾಲೆದೋಸೆ, ಮಂಚೇಗೌಡ, ಪ್ರಜಾವಾಣಿ, ತಾಯಿನಾಡು, ನಿಜಲಿಂಗಪ್ಪ, ಲಿಬರ್ಟಿ, ರೆಕ್ಸ್, ಇಂಪೀರಿಯಲ್, ಸೀಮೆಯೆಣ್ಣೆ, ರೇಷನ್‍ಕಾರ್ಡು, ಕಬ್ಬನ್‍ಪಾರ್ಕ್, ಬ್ಲಾಕ್ ಮಾರ್ಕೇಟ್, ವಿಧಾನಸೌಧ, ಕಳ್ಳೆಕಾಯಿ, ಸೆಂಟ್ರಲ್‍ಜೈಲು, ಹುಚ್ಚಾಸ್ಪತ್ರೆ, ಸಂಗೀತ ಕಛೇರಿ, ಅಶ್ವಮೇಧ, ಆದರ್ಶ ಸ್ತ್ರೀ, ಕೃಷ್ಣಮೆನನ್…
(ಮೇಲಿನ ಮಾತಿನ ಸ್ವಾರಸ್ಯಕ್ಕಿಂತ ಹೆಚ್ಚಾಗಿ ‘ವ್ಯಕ್ತಿ’ಗೆ ಈ ಲೋಕದ ಗಾಳಿಯಿಂದ ಸಂತೋಷವಾಗಿ)
ವ್ಯಕ್ತಿ : ಆಹಾ, ಈಗ ನೋಡಿ, ಮನುಷ್ಯರ ಹಾಗೆ ಮಾತಾಡ್ತಿದೀರ.
ವಿಟ್ಟಿ : ಮೆಚ್ಚಿದಿರಲ್ಲ. ಸಂತೋಷ ಸಾರ್.
ಕಂಠಿ : ಕೃಷ್ಣಮೆನನ್ ಬಗ್ಗೆ ನಿಮ್ಮ ಅಭಿಪ್ರಾಯವೇನು?
ವ್ಯಕ್ತಿ : ಕ್ಷಮಿಸಿ, ಏನೂ ಹ್ಹೊಳೀತಿಲ್ಲ.
ವಿಟ್ಟಿ : ಕಾಂಗ್ರೆಸ್ ಪಾರ್ಟೀಲಿ ಒಳ್ಳೇರು ಇದಾರೆ ಕೆಟ್ಟೋರು ಇದಾರೆ- ಹೌದು ಅಂತಿರೋ ಅಲ್ಲ ಅಂತಿರೋ?
ವ್ಯಕ್ತಿ : ಹೌದು ಅಂತೀನಿ.
ಕಂಠಿ : ಯಾಕೆ ಸಾರ್ ಬೇಸರ-
ವಿಟ್ಟಿ : ಜೋಕ್ ಸಾರ್: ಮಿನಿಸ್ಟರೊಬ್ಬರ ಕಾರ್ನಲ್ಲಿ ಕೂತ್ಕೊಂಡು ತರಕಾರಿ ವ್ಯಾಪಾರ ಮಾಡ್ತಿದ್ರು-
ಕಂಠಿ : ಸರಿಯಾಗಿ ಹೇಳು: ಮಾರ್ತಾ ಇದ್ರೋ ಕೊಳ್ತಿದ್ದರೋ?
ವಿಟ್ಟಿ : ಹಹಹ! ಕೊಳ್ತಾ ಇದ್ರು.
(ಇದೆಲ್ಲ ನಡೆಯುವಾಗ ವ್ಯಕ್ತಿ ಸುಸ್ತಾಗಿ ನಿಂತಿರುವನು. ಆತ ಕ್ರಮೇಣ ಪೆದ್ದನಂತಾಗುವನು.)
ತರಕಾರಿ ಹಾಕಿಸಿಕೊಳ್ಳೋಕೆ ಬ್ಯಾಗುಗೀಗು ತಂದಿರಲಿಲ್ಲ. ಎಲ್ಲಿ ಹಾಕಿಸಿಕೊಳ್ಳೋದೂಂತ ಅವರು ತಡಕಾಡ್ತಿದ್ರು. ತರಕಾರಿ ಹೆಂಗ್ಸು ಹಾಕೇಬಿಟ್ಳು ಅವರ ಟೋಪೀಲಿ.
ಕಂಠಿ : ಅದಕ್ಕೆ ತಕ್ಕ ಸ್ಥಳ! ಹ ಹ ಹ! ಯಾಕೆ ಸಾರ್. ಪಿಟ್ ಅನ್ನದೆ ನಿಂತಿದೀರ?
ವ್ಯಕ್ತಿ : ನನಗೆ ಹೋಗೋಕೆ ಅನುಮತಿ ಕೊಡಿ.
ವಿಟ್ಟಿ : ನಾವು ನಿಮ್ಮ ಅತಿಥಿಗಳು ಸ್ವಾಮಿ. ನಮ್ಮನ್ನು ಬಿಟ್ಟು ಹೀಗೆ ಹೋಗಬಹುದೇ?
ವ್ಯಕ್ತಿ : ನಾವು ಅತಿಥಿಗಳಲ್ಲ.
(ಧ್ವನಿ ಬದಲಿಸಿ)
ಏನಾದರೂ ಆಗಿ ಹಾಳಾಗಿ ಹೋಗಿ-
ಕಂಠಿ : ಶಾಪ ಹಾಕೋದು ಕೂಡ ಸಭ್ಯತೆಯಲ್ಲ.
ವ್ಯಕ್ತಿ : ಸರಿ! ಶಾಪ ತಟ್ಟೊಲ್ಲ ತಾನೆ! ನಾನು ಹೋಗೋಕೆ ಬಿಡಿ.
ಕಂಠಿ : ತಲತಲಾಂತರದಿಂದ ತಪ್ಪಿಸಿಕೊಂಡು ಓಡ್ತಾನೇ ಇದೇವೆ ಸ್ವಾಮಿ- ಕಾಡಿಗೆ, ಶಾಸ್ತ್ರಕ್ಕೆ, ಸಂಕೇತಕೆ, ಒಂದು ಸಲವಾದ್ರೂ ನಿಂತು ಎದುರಿಸ ಬೇಡವೇ?
(ಅರ್ಧ ಅರ್ಥ ಹೊಳೆದು ವ್ಯಕ್ತಿ ಮಾತನಾಡುತ್ತಾನೆ)
ವ್ಯಕ್ತಿ : ಇದೆಲ್ಲೋ ಕೇಳಿದ ಹಾಗಿದೆ. ಇನ್ನೊಂದು ಸಲ ಹೇಳಿ?
ಕಂಠಿ : ಇನ್ನೊಂದು ಸಲ, ಮತ್ತೊಂದು ಸಲ ಅಂತ ಅದೃಷ್ಟಕ್ಕೆ ಬಿಡೋಕಾಗೋಲ್ಲ, ಎದುರಿಸಿಯೇ ಬಿಡೋಣ.
(ಈ ವೇಳೆಗೆ ಸರಿಯಾಗಿ ಕಿಟ್ಟಿ ತನ್ನ ಎದುರಿನ ಟೇಬಲ್ ಮೇಲೆ ಸುತ್ತಿಗೆಯಿಂದ ನ್ಯಾಯಾಧೀಶನ ಗತ್ತಿನಿಂದ ಕುಟ್ಟುತ್ತಾನೆ. ಇಡೀ ವಾತಾವರಣಕ್ಕೆ ಒಂದು ರೀತಿಯ ಕೀಳು ನ್ಯಾಯಾಲಯದ ಶೈಲಿ ಬರುತ್ತದೆ. ಕಂಠಿ, ವಿಟ್ಟಿ ತಕ್ಕ ಸ್ಥಾನದಲ್ಲಿರುತ್ತಾರೆ. ವ್ಯಕ್ತಿಗೆ ಕ್ರಮೇಣ ತಾನು ಆಪಾದಿತನೆಂಬ ಅರಿವುಂಟಾಗುತ್ತದೆ.)
ಕಿಟ್ಟಿ : ನೀನಿನ್ನು ಹೊಂಟೋಗಬೌದು ಅಂತ ಕಾಣಿಸತೈತೆ. ಅದಕ್ಕೆ ಮುಂಚೆ ಇಲ್ಲಿ ಹೇಳೋದು ಏನಾರಾ ಐತೋ?
ವ್ಯಕ್ತಿ : ಏನಂದ್ರಿ?
ಕಿಟ್ಟಿ : (ಕೆಮ್ಮಿ ಪ್ರಯತ್ನಪೂರ್ವಕವಾಗಿ ಗಿಲೀಟು ಕನ್ನಡದಲ್ಲಿ ಮಾತನಾಡುತ್ತಾ) ಅಂದದ್ದು ಇಷ್ಟೆ; ನೀವು ಹೋಗಬಹುದು. ಅದಕ್ಕೆ ಮುಂಚೆ ಹೇಳೋದಿದ್ರೆ ಹೇಳಿ.
ಕಂಠಿ : (ವಿವರಿಸುತ್ತ)
ಇವತ್ತಿನ ಅನುಭವದ ಬಗ್ಗೆ-
ವಿಟ್ಟಿ : ಇಷ್ಟೆಲ್ಲ ಆದಮೇಲೆ ಏನಾದ್ರೂ ಅನ್ನಿಸಿರಬೇಕಲ್ಲ?
ಕಂಠಿ : ಯಜಮಾನ್ರ ಬಗ್ಗೆ, ಅವರಾದ ಮೇಲೆ ಮಿಕ್ಕವರ ಬಗ್ಗೆ-
ವಿಟ್ಟಿ : ಕೊಲೆ ಬಗ್ಗೆ-
(ಕಿಟ್ಟಿ ಮತ್ತೆ ಸುತ್ತಿಗೆಯಿಂದ ಕುಟ್ಟುವನು)
ಕಿಟ್ಟಿ : ಹೇಳಿ.
ವ್ಯಕ್ತಿ : ನಾನು ಯಜಮಾನ್ರು ತುಂಬ ಸ್ನೇಹಿತರು. ಸ್ನೇಹದಲ್ಲಿ ಯಾರಾದರೊಬ್ಬರಿಗೆ ಮಹತ್ವಾಕಾಂಕ್ಷೆ-
ಕಿಟ್ಟಿ : ಮಾತ್ವಾ-ಮಾತ್ವಾ- ಏನದು?
ವ್ಯಕ್ತಿ : ಆ್ಯಂಬಿಷನ್.
ಕಿಟ್ಟಿ : ನೆಟ್ಟಗೆ ಹೇಳ್ರೀ.
ವ್ಯಕ್ತಿ : ಆಶೆ-ಆಶೆ-ಶುರುವಾದ್ರೆ-
ಕಂಠಿ : “ಆಶೆಯೇ ದುಃಖಕ್ಕೆ ಮೂಲ”.
(ಕಿಟ್ಟಿ ಸುತ್ತಿಗೆ ಉಪಯೋಗಿಸಿ- ನಿಶ್ಯಬ್ದ)
ವ್ಯಕ್ತಿ : ಎಲ್ಲ ನಿರ್ಮೂಲನವಾಗುತ್ತೆ. ಒಮ್ಮೆ ಅದು ಶುರುವಾಯ್ತು ಅಂದ್ರೆ ಮಿಕ್ಕ ವಿಚಾರಗಳೆಲ್ಲ ಮಾಸುತ್ತ ಬರುತ್ತೆ. ನನ್ನ ವಿಚಾರದಲ್ಲೂ ಹಾಗೇ ಆಯಿತು.
(ಇಷ್ಟರಲ್ಲಿ ಕೊಂಚ ಎಚ್ಚರಗೊಂಡು)
ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ ನಾನು ಮಾಡಿದ್ದೆಲ್ಲ ಸರಿ ಅನ್ಸುತ್ತೆ. ಎಲ್ಲರ ಹಾಗೆ ನಾಲ್ಕು ಕಾಸು ಮಾಡಿರಬಹುದು, ನಾಲ್ಕು ಸ್ನೇಹ ಗಿಟ್ಟಿಸಿರಬಹುದು; ನಾಲ್ಕು ಮನೆ ಕಟ್ಟಿಸಿರಬಹುದು, ಅದರಲ್ಲೇನು ತಪ್ಪು? ನೀವು ಯಾರೋ ಗೊತ್ತಿಲ್ಲ-ಲಫಂಗರೋ, ಮೂರ್ಖರೋ, ಪೊಲೀಸರೋ, ಗೂಢಚಾರರೋ-ಯಾರಾದ್ರೂ ಆಗಿರಿ- ಆದರೆ ನೀವು ನನ್ನ ಮಾತನ್ನು ನಂಬುವಷ್ಟನ್ನಾದರೂ ಮಾಡಬೇಕು.
(ಮಿಕ್ಕ ಮೂವರು ಆತನ ಮಾತನ್ನು ಲಕ್ಷಿಸದೆ ಬೇರೆ ಕಡೆ ನೋಡುತ್ತಿರುವರು)
ನಾನು ಬಾರತದ ಸತ್ಪ್ರಜೆ. ಈ ಭಾರತದ ಮೇಲೆ ಪದ್ಯ ಬರೆದಿದ್ದೇನೆ. ಬರೆದ ಪದ್ಯಗಳನ್ನು ವಿಮರ್ಶಿಸಿದ್ದೇನೆ. ಸಂಸಾರ ನಿಯಂತ್ರಣ ಮಾಡಿಸಿದ್ದೇನೆ. ಸೈನಿಕರಿಗೆ ಕೋಟು, ಕಾಲುಚೀಲ ಕಳಿಸಿದ್ದೇನೆ. ಭಾಷಣ ಕೊಟ್ಟಿದ್ದೇನೆ. ಒಟ್ಟಿನಲ್ಲಿ ಸ್ವಂತ ಕಷ್ಟದಿಂದ ಮುಂದೆ ಬಂದಿದ್ದೇನೆ. ಇವತ್ತು ನಾಲ್ಕು ಜನಕ್ಕೆ ನನ್ನ ಮಾತು ಅಂದ್ರೆ ಬೆಲೆಯಿದೆ, ನನ್ನ ಬಗ್ಗೆ ಗೌರವ ಇದೆ. ಒಂದು ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಯೊಬ್ಬನ ಯೋಗ್ಯತೆಯನ್ನು ಯಾವ ಮಾಪಕದಿಂದ ಸ್ವಾಮಿ ಗೊತ್ತು ಮಾಡೋದು? ನನ್ನ ಎದರು ಇವೊತ್ತು ಯಾವನು ನಿಂತು ಚುನಾವಣೇಲಿ ಗೆಲ್ತಾನೋ ಗೆಲ್ಲಲಿ ನೋಡೋಣ-
(ಇದ್ದಕ್ಕಿದ್ದಂತೆ ಅವರ ನಿರ್ಲಕ್ಷ್ಯ ಗೊತ್ತಾಗಿ)
ನಾನು ಹೇಳೋದು ಕೇಳಿಸ್ತಾ ಇದೆಯೆ?
(ಅವರು ತಿರುಗುವುದಿಲ್ಲ)
ರೀ, ನನ್ನ ಮಾತಿ ಕಿವಿಗೆ ಬೀಳ್ತಾ ಇದೆಯೆ?
(ಅವರು ತಿರುಗುವುದಿಲ್ಲ)
ನಿಮಗೇ ಹೇಳ್ತಿರೋದು-ನನ್ನ ಭಾಷಣ ಕೂಡ ನಿಶ್ಯಬ್ದವಾಗಿದೆಯೇ?
ಕಿಟ್ಟಿ : ನೀನಿನ್ನು ಹೊರಡಬಹುದು.
ವ್ಯಕ್ತಿ : ಹ್ಞಾ, ಹೋಗ್ಬಿಟ್ಟು ಬರ್ತೇನೆ… ಕೃತಜ್ಞ…
ಕಿಟ್ಟಿ : ಹೋಗಿ, ಬಿಟ್ಟಿ, ಬರ್ತೀಯೋ? ಅದಕ್ಕೇನೇ-ಹೇಳೋದು ನೀನೊಬ್ಬ ಸುಳ್ಳ-ಶುದ್ಧ ಸುಳ್ಳ ಅಂತ-
(ವ್ಯಕ್ತಿ ಹೋಗುತ್ತಿದ್ದಾಗ ವಿಟ್ಟಿ ಹಿಂದೆ ಹೋಗಿ ನಿಲ್ಲಿಸಿ)
ವಿಟ್ಟಿ : ಎಲ್ಲಿ ಈ ಕಡೆ ಹೋಗ್ತಿದ್ದೀಯ?
ವ್ಯಕ್ತಿ : ಮನೆಗೆ.
ವಿಟ್ಟಿ : ಮನೆಗೆ ಹೋಗುತ್ತಂತೆ ವ್ಯಕ್ತಿ-ಮನೆಗೆ!
(ನಗುವನು)
ಹೋ ಹೋ ಹೋ…
(ಕಿಟ್ಟಿ ಸುತ್ತಿಗೆಯಿಂದ ಕುಟ್ಟುವನು)
ಕಂಠಿ : ಹೋಗೋಕೆ ಮುಂಚೆ ಕೊನೇ ಆಶೆ ತಿಳಿಸಿ…
ವ್ಯಕ್ತಿ : (ದಿಗಿಲಿನಿಂದ)
ಎಲ್ಲಿಗೆ ಹೋಗೋಕ್ಮುಂಚೆ?
ಕಂಠಿ : ಸುಂದರ ಮಾತುಗಳ ಹಂದರಕ್ಕೆ ಹೋಗೋಕ್ಮುಂಚೆ…
ವಿಟ್ಟಿ : ತತ್ವಗಳ ಸುಪ್ಪತ್ತಿಗೆಗೆ……
ಕಂಠಿ : ಕ್ರೌರ್ಯಗಳ ಗುಟ್ಟಿಗೆ-
ವಿಟ್ಟಿ : ಕೊಲೆಯ ಆಳಕ್ಕೆ-
ಕಂಠಿ : ತರಗತಿಗಳ ನಿರ್ಮಾಣಕ್ಕೆ-
ವಿಟ್ಟಿ : ಯಜಮಾನರ ಪಲ್ಲಟಕ್ಕೆ-
(ಕಿಟ್ಟಿ ಸುತ್ತಿಗೆಯಿಂದ ಬಡಿಯುವನು)
ವ್ಯಕ್ತಿ : ನನಗೆ ಅರ್ಥವಾಗ್ತಿಲ್ಲ. ಮತ್ತೆ ತಪ್ಪು ಮಾಡೋದಿಲ್ಲ ಅಂತ ಬೇಕಾದ್ರೆ ಪ್ರಮಾಣ ಮಾಡಿ ಹೇಳ್ತೇನೆ-
ಕಿಟ್ಟಿ : (ಗತ್ತಿನಿಂದ ವ್ಯಂಗ್ಯವಾಗಿ)
ಮಾಡೊಲ್ಲ ಅಂತಂದ ಮೇಲೆ ಒಮ್ಮೆ ಮಾಡಿರಬೇಕಲ್ಲ.
ವ್ಯಕ್ತಿ : ಒಮ್ಮೆ ಅಲ್ಲ. ಸಾವಿರ ಸಲ ಮಾಡಿರಬಹುದು, ಒಪ್ಪಿಕೋತೇನೆ.
ಕಿಟ್ಟಿ : ಹುಟ್ಟು ಒಂದು ಸಲ, ಸಾವು ಒಂದು ಸಲ, ತಪ್ಪು ಒಂದು ಸಲ, ಶಿಕ್ಷೆ ಒಂದು ಸಲ-
ವಿಟ್ಟಿ : ಪೋಸ್ಟ್‍ಪೋನ್‍ಮೆಂಟ್ ಇಲ್ಲ-
ಕಂಠಿ : ಪ್ರಾಕ್ಸಿ ಇಲ್ಲ-
ಕಿಟ್ಟಿ : ಹೇಳಿ; ಕೊನೆ ಆಶೆ ಏನು?
ವ್ಯಕ್ತಿ : ಕೊನೆ ಆಶೆಯಂತೆ, ಕೊನೆ ಆಶೆ! ಅಂಥದ್ದೊಂದು ಇದ್ದಿದ್ರೆ ಎಂದೋ ತೃಪ್ತಿಪಟ್ಟು ತೊಲಗಿ ಹೋಗ್ತಿದ್ದೆ. ಎಲ್ಲವನ್ನೂ ಸರಳಗೊಳಿಸಿ ಜಡ್ಜ್‍ಮಾಡ್ತಿದೀರ. ನಿಮ್ಮಂಥ ಅಲ್ಪರಿಗೆ ಹೇಗೆ ಗೊತ್ತಾಗಬೇಕು? ತಿನ್ನೋದಕ್ಕೆ ರೊಟ್ಟಿ, ಹೊದಿಯೋಕೆ ಹಚಡ, ಮಾಡೋಕೆ ಕೆಲಸ, ಹೇಳಿಕೊಳ್ಳೋಕೆ ನಾಲ್ಕು ಅಭಿಪ್ರಾಯಗಳಿದ್ದರೆ ದೊಡ್ಡ ಮನುಷ್ಯರಾಗಿ ಮೆರೆದಾಡಬಲ್ಲಿರಿ ನೀವು! ಹಗಲು ಗೊತ್ತು ನಿಮಗೆ. ರಾತ್ರಿ ಗೊತ್ತು ನಿಮಗೆ- ಆ ಎರಡರ ನಡುವಿನ ಕೋಟಿ ಕೋಟಿ ಬಣ್ಣಗಳು, ಶಾಖಗಳು ನಿಮಗೆ ಹೇಗೆ ಗೊತ್ತಾಗಬೇಕು? ಹೇಗಾದರೂ ಗೊತ್ತಾಗಬೇಕು?
ಕಿಟ್ಟಿ : ಅದರಲ್ಲಿ ಕೊಲೆ ಸೇರಿರುತ್ತೋ?
ವ್ಯಕ್ತಿ : ಕೊಲೆ ಮಾಡಬಲ್ಲವ ಸೃಷ್ಟಿ ಮಾಡಬಲ್ಲ, ನೂರು ಸುಳ್ಳು ಹೇಳಬಲ್ಲವ ಒಂದು ಕಲ್ಯಾಣ ಮಾಡಬಲ್ಲ, ಅನೇಕ ಅಸತ್ಯಗಳ ಮೂಲಕ ಸತ್ಯದ ಬಾಗಿಲು ತಟ್ಟಿ-
ಕಿಟ್ಟಿ : ಕೇಳಿದ್ದಕ್ಕೆ ಉತ್ತರ ಹೇಳು: ಕೊಲೆ ಸೇರಿರುತ್ತೋ?
ವ್ಯಕ್ತಿ : (ಕಾವ್ಯದ ಶೈಲಿ ಬಿಟ್ಟು)
ಏಲ್ಲಿ?
ಕಿಟ್ಟಿ : “ಕೋಟಿ ಕೋಟಿ ಬಣ್ಣಗಳು, ಶಾಖಗಳು” ಅಂದ್ರಲ್ಲ- ಅದರಲ್ಲಿ…
ವ್ಯಕ್ತಿ : ಸೇರಿರುತ್ತೆ ಅಂದರೆ- ನನ್ನ ಪ್ರಕಾರ…
ಕಿಟ್ಟಿ : ಸಾಮಾನ್ಯವಾಗಿ ಎಲ್ಲರೂ ಒಪ್ಪೋ ಥರ- ನಿಮ್ಮ ಪ್ರಕಾರವೇ ಅಲ್ಲ-
ವ್ಯಕ್ತಿ : ಜನಸಾಮಾನ್ಯರ ದೃಷ್ಟಿ ಹಾಳಾಗಲಿ- ನನ್ನ ದೃಷ್ಟಿಯಲ್ಲಿ –
ಕಿಟ್ಟಿ : ನಿಮ್ಮ ದೃಷ್ಟಿಯಲ್ಲಿ ಅವರು ಹಾಳಾಗುತ್ತಾರೆ, ನೀವು ಅವರ ಕೈಯಲ್ಲಿ-
ವ್ಯಕ್ತಿ : ನನ್ನ ಮಾತೊಂದೂ ನಿಮಗೆ ತಿಳೀತಿಲ್ಲ-
ಕಿಟ್ಟಿ : ಆದರೆ, ನಮ್ಮದು ತಮಗೆ ತಿಳಿದ್ರೆ ಸಾಕು-
ವ್ಯಕ್ತಿ : ನಾನು ಹೇಳೋದು-
ಕಂಠಿ : ಸಾಕು. ಮಾತಾಡಿದ್ದು ಸಾಕು.
ವಿಟ್ಟಿ : ಕೊನೇ ಆಶೆ ಹೇಳಿ.
ವ್ಯಕ್ತಿ : ನನ್ನ ವಾದ ಇಷ್ಟೇ-
ಕಂಠಿ : ಅದೆಲ್ಲ ಬೇಕಿಲ್ಲ-
ವ್ಯಕ್ತಿ : ನಾನು ಮಾತಾಡೋದು ಬೇಡವೇ?
ಕಂಠಿ : ಸಾಕಷ್ಟು ಆಡಿದ್ದೀರಿ. ತಲೆದೂಗುವಂತೆ ಸದ್ದು ಮಾಡಿದ್ದೀರಿ. ಮೈಮರೆವ ಹಾಗಿ ಇಂಪಾಗಿ ಹಾಡಿದ್ದೀರಿ. ಆದ್ದರಿಂದ ಹೇಳಿ: ಕೊನೆಯ ಆಶೆ ಏನು?
ವ್ಯಕ್ತಿ : ಹಾಗಾದರೆ ಹೇಳಿಯೂ ಉಪಯೋಗವಿಲ್ಲ..
ಕಂಠಿ : ಉಪಯೋಗ-
ವಿಟ್ಟಿ : ಇಲ್ಲ.
ಕಿಟ್ಟಿ : ಉಪ-
ವಿಟ್ಟಿ : ಯೋಗ-
ಕಂಠಿ : ಇಲ್ಲ-
(ವಿಟ್ಟಿ ವ್ಯಕ್ತಿಯನ್ನು ಚಿಕ್ಕ ಸ್ಟೂಲಿನ ಮೇಲೆ ನಿಲ್ಲಿಸುವನು)
ವ್ಯಕ್ತಿ : (ಸಾವಿನ ವಾಸ್ತವತೆಯಿಂದ ನಡುಗಿ)
ಹಾಗಾದ್ರೆ ನನಗೆ ದಿಕ್ಕೇ ಇಲ್ಲವೇ? ನೀವು ನನ್ನ ಪ್ರಾಮಾಣಿಕತೆ ನೋಡಿಯಾದರೂ ಬಿಡುಗಡೆ ಮಾಡೋಲ್ಲವೇ?
(ಮೌನ)
ನಾನೊಬ್ಬ ದುರ್ಬಲ ಜೀವಿ. ನನಗೆ ಸಹಾಯ ಮಾಡಿ. ನನ್ನ ಜೀವ ಉಳಿಸಿ.
(ಮೂವರು ಆತನ ತಲೆಯ ಮೇಲೆ ನೇರಕ್ಕೆ ನೋಡುತ್ತಿರುವರು. ಮುಂದಿನ ಮಾತು ಮುಗಿಯುವ ಹೊತ್ತಿಗೆ ನೇಣಿನ ಕುಣಿಕೆ ನಿಧಾನಕ್ಕೆ ಬಂದು ನಿಲ್ಲುವುದು)
ರೀ, ನನ್ನ ಮಾತು ನಂಬೇಡಿ. ನನಗೆ ಸರಿಯಾಗಿ ಮಾತಾಡೋಕೆ ಬರೋಲ್ಲ. ಸರಿಯಾಗಿ ಯೋಚಿಸೋಕೆ ಬರೋಲ್ಲ. ನಾನು ದುರ್ಬಲ ಜೀವಿ.
ನನಗೆ… ನನಗೆ…
(ಅಷ್ಟರಲ್ಲಿ ಮಿಕ್ಕ ಮೂವರ ಮೇಲೆ ಕತ್ತಲು ಕವಿದಿದೆ. ವ್ಯಕ್ತಿ, ನೇಣು ಬೆಳಕಿನಲ್ಲಿ.)

– ತೆರೆ –

Leave a Reply

Your email address will not be published.