ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!

ಅಬ್ದುಲ್ ಹೈ, ತೋರಣಗಲ್ಲು.

ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು ಬಿತ್ತಿದ. ಜನಿವಾರದ ಜುಟ್ಟೊಂದು, ‘ನಮ್ಮದು ಸನಾತನ ಧರ್ಮ, ನಮ್ಮದೇ ಶ್ರೇಷ್ಠ, ಇತರರದು ಕನಿಷ್ಠ, ಮುಸಲರು ಪರಕೀಯರು, ದೇಗುಲ ಪ್ರವೇಶದಿಂದ ದೂರವಿಡಿ, ಧರ್ಮಭ್ರಷ್ಟರಾದೀರಿ ಹುಷಾರ್…’ ಎಂದು ಭಾವನೆಗಳನ್ನು ಕೆರಳಿಸತೊಡಗಿತು. ಇಬ್ಬರನ್ನೂ ತಿರಸ್ಕರಿಸಿ ಸೌಹಾರ್ದ ಮೆರೆಯಿತು ನನ್ನೂರು!

ಊರು ಅಂದರೆ ಬರೀ ಮನೆಗಳ ಸಾಲುಗಳಲ್ಲ; ಮನುಷ್ಯರ, ಮನಸ್ಸುಗಳ ಇರುವಿಕೆ… ಪ್ರಕೃತಿ ಸೊಬಗಿನ ಸಿರಿ… ಜೀವ ಭಾವಗಳ ಕೂಟ.

ನನ್ನೂರಿನ ಪೂರ್ವಕ್ಕೆ ಬೂದುಗಣಿವೆ ಇದೆ. ಈ ಕಣಿವೆಯದು ಎರಡು ಸಾವಿರ ವರ್ಷಗಳ ಕಥನ. ಈಗ ಪುರಾತತ್ವ ಇಲಾಖೆಯ ರಕ್ಷಿತ ತಾಣ. ಪಶ್ಟಿಮಕ್ಕೆ ನುಗ್ಗೀ ಹಳ್ಳ, ಉತ್ತರಕ್ಕೆ ಹೈದರಾಲಿ ನಿರ್ಮಿತ ಕೆಂಪು ಕೆರೆ ಮತ್ತು ಸೌಳು ಗುಡ್ಡ. ಈ ಗುಡ್ಡಕ್ಕೂ ಒಂದು ಕಥೆಯಿದೆ: ಇಲ್ಲಿ ಯಥೇಚ್ಛವಾಗಿ ಸೌಳು ದೊರೆಯುತ್ತದೆ. ಸಾಬೂನು ಇಲ್ಲದ ಕಾಲದಲ್ಲಿ ಸುತ್ತಲ ಹತ್ತಾರು ಹಳ್ಳಿಗಳ ಅಗಸರು ಈ ಗುಡ್ಡದಲ್ಲಿ ದೊರೆಯುವ ಸೌಳು ಮಣ್ಣನ್ನು ಕತ್ತೆಗಳ ಮೇಲೆ ಹೇರಿಕೊಂಡು ಒಯ್ಯುತ್ತಿದ್ದರಂತೆ.

ಇನ್ನು ದಕ್ಷಿಣಕ್ಕೆ ಕೌಲ್ ಗುಡ್ಡ (ಜನರ ಬಾಯಲ್ಲಿ ಕಾವಲಿ ಗುಡ್ಡ ಅಥವಾ ಮಿಲಟರಿ ಗುಡ್ಡ). ಇಲ್ಲಿ ಮಿಲಿಟರಿ ನೆಲೆಯಿತ್ತಂತೆ. ಇದನ್ನೀಗ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಮುಂಚೆ ಈ ಬೆಟ್ಟದದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ‘ಕಲ್ಡಾ’ (ಹುಲ್ಲು) ಭಾರತೀಯ ಸೈನ್ಯದ ಕುದುರೆಗಳಿಗೆ ಉತ್ತಮ ಆಹಾರವಾಗಿತ್ತು; ಪ್ರತೀ ವರ್ಷ ಕಟಾವು ಮಾಡಿ ರೈಲುಗಳಲ್ಲಿ ರವಾನಿಸುತ್ತಿದ್ದರು. ನಮ್ಮೂರ ಜನರಿಗೆ ವರ್ಷದಲ್ಲಿ ಮೂರು ತಿಂಗಳು ಹುಲ್ಲು ಕೋಯ್ದು, ಪೆಂಡೆ ಕಟ್ಟಿ, ಬಂಡಿಗಳಲ್ಲಿ ಹೊತ್ತೊಯ್ದು ಮಿಲಿಟರಿ ಫಾರ್ಮ್ಗೆ ಹಾಕುವ ಕೆಲಸ ಸಿಗುತ್ತಿತ್ತು. ಈ ಹುಲ್ಲು ಸ್ವದೇಶ ಮತ್ತು ವಿದೇಶದ ಸುಗಂಧ ದ್ರವ್ಯಗಳ ತಯಾರಿಕಾ ಘಟಕಗಳಿಗೂ ರವಾನೆಯಾಗುವಷ್ಟು ಮಹತ್ವ ಪಡೆದಿತ್ತು. ಇಂಥ ಸಂಪತ್ಭರಿತ ಹುಲ್ಲುಗಾವಲು ಈಗ ಬಟಾಬಯಲಾಗಿದೆ!

ಈ ರೀತಿಯ ಸರಹದ್ದುಗಳ ನಡುವೆ ಮೈಚಾಚಿಕೊಂಡಿರುವ ಊರೇ ನನ್ನೂರು, ತೋರಣಗಲ್ಲು.

ವಿಜಯನಗರ ಸಾಮ್ರಾಜ್ಯಕ್ಕೆ ಬರುವ ಯಾತ್ರಿಕರನ್ನು ಸ್ವಾಗತಿಸುವ ಸಲುವಾಗಿ ಇಲ್ಲಿನ ಬೃಹತ್ ಕಲ್ಲುಗಳಿಗೆ ತೋರಣ ಕಟ್ಟುತ್ತಿದ್ದರಂತೆ. ಹಾಗೆ ತೋರಣ ಕಟ್ಟುವ ಕಲ್ಲು ತೋರಣಗಲ್ಲು ಅಂತಾಯಿತೆಂಬುದು ನನ್ನೂರ ಹೆಸರಿಗಿರುವ ಒಂದು ಐತಿಹ್ಯ. ಇನ್ನೊಂದು ವಿವರಣೆಯೂ ನನ್ನೂರಿಗಿದೆ: ಇಲ್ಲಿನ ಮೂಲ ನಿವಾಸಿಗರು ಸಂಗೀತ ವಾದ್ಯಗಳು, ಚಪ್ಪಲಿ, ಕೊರಲ್ಕಣ್ಣಿ, ನಡುಪಟ್ಟಿ, ಬಾರುಕೋಲು, ಚಾಟಿ ಮುಂತಾದ ಚರ್ಮದ ಪರಿಕರಗಳ ಕೆಲಸಗಳಿಗೆ ತೊಗಲು ಸಂಗ್ರಹಿಸಿ ತಾವೇ ವಾದ್ಯಗಳನ್ನು ತಯಾರಿಸುವುದರ ಜೊತೆಗೆ ಚರ್ಮವನ್ನು ಬೇರೆಡೆ ಸಾಗಿಸುವ ದಂಧೆ ಮಾಡುತ್ತಿದ್ದರಂತೆ. ಹಸಿ ತೊಗಲುಗಳನ್ನು ಒಣಗಿಸಲು ಇಲ್ಲಿನ ಕಲ್ಲುಗಳ ಮೇಲೆ ಹಾಸುತ್ತಿದ್ದರಂತೆ. ಹಾಗೆ ತೊಗಲು ಹಾಸುವ ಕಲ್ಲು ತೊಗಲಗಲ್ಲು ಆಗಿ, ನಂತರ ತೋರಣಗಲ್ಲು ಆಯಿತೆಂಬ ಪ್ರತೀತಿಯೂ ಇದೆ.

ಊರಿನ ಶಂಕರಲಿಂಗ ಬೆಟ್ಟದ ತಂಗಮ್ಮನ ಗುಂಡಿನಲ್ಲಿ ಕೆತ್ತಿರುವ ಜೈನ ಮುನಿ ತಪಸ್ಸಿಗೆ ಕುಳಿತ ಭಂಗಿಯು ಈ ಪ್ರದೇಶ ಹಿಂದೆ ಜೈನರ ಸಂಪರ್ಕಕ್ಕೆ ಒಳಪಟ್ಟ ಬಗ್ಗೆ ಕುರುಹು ನೀಡುತ್ತದೆ. ಗುಡ್ಡದ ಕೆಳಗಿನ ಬಲ ಭಾಗದಲ್ಲಿ ದೊರೆತಿರುವ ಪುರಾತನ ಕಾಲದ ಮಡಿಕೆಕುಡಿಕೆಗಳು, ವ್ಯವಸಾಯದ ಸಾಮಾಗ್ರಿಗಳು ಇಲ್ಲೊಂದು ಜನ ವಸತಿ ಪ್ರದೇಶ ಇತ್ತೆಂಬ ಊಹೆಗೆ ಇಂಬು ಕೊಡುತ್ತವೆ.

ಈ ಬೆಟ್ಟದ ಮೇಲೆ ನಾಲ್ಕು ದಿಕ್ಕಿಗೆ ಉಡೇವುಗಳನ್ನು ನಿರ್ಮಿಸಿದ್ದು ಈಗ ಮೂರು ಕಾಣೆಯಾಗಿ ಉಳಿದೊಂದು ಶಿಥಿಲಾವಸ್ಥೆಯಲ್ಲಿದೆ. ಇದು ಇಲ್ಲಿ ಪಾಳೇಗಾರರು ನೆಲೆಸಿದ್ದರ ಕುರುಹು. ಬೆಟ್ಟದ ಮೇಲಿನ ಶಂಕರಲಿಂಗನೇ ಗ್ರಾಮ ದೇವರು. ಊರ ಮಧ್ಯೆ ತುಂಗಭದ್ರ ಬಲದಂಡೆ ಕಾಲುವೆ ವರ್ಷದ ನಾಲ್ಕಾರು ತಿಂಗಳು ನೀರು ಹೊತ್ತು ಹರಿದರೂ ನನ್ನೂರಿಗೆ ಯಾವುದೇ ರೀತಿಯಲ್ಲಿ ಉಪಯೋಗವಿಲ್ಲರುವುದು ವಿಪರ್ಯಾಸ.

ಈ ಹಿಂದೆ ಒಣ ಬೇಸಾಯವೇ ನನ್ನೂರ ಬದುಕನ ಜೀವನಾಡಿಯಾಗಿತ್ತು. ಎರೆ ಮಣ್ಣಿನ ಹೊಲದಲ್ಲಿ ನವಣೆ ಪ್ರಮುಖ ಬೆಳೆ. ಆ ಸಾಲುಗಳ ಮಧ್ಯೆ ತರತರಹದ ಅಕ್ಕಡಿ ಕಾಳು ಬೆಳೆಯೋರು. ಉಳಿದಂತೆ ಹತ್ತಿ ಮತ್ತು ಬಿಳಿಜೋಳ ಬೆಳೆಯಲಾಗುತ್ತಿತ್ತು. ಕೆಲವರು ಸಂಡೂರು ಬೆಟ್ಟಗಳಿಂದ ಹತ್ತಿರದ ರೈಲು ನಿಲ್ದಾಣಕ್ಕೆ ಬರುವ ಕಬ್ಬಿಣದ ಅದಿರನ್ನು ವ್ಯಾಗನ್‌ಗಳಿಗೆ ಲೋಡಿಂಗ್ ಮಾಡಿ ಜೀವನ ಸಾಗಿಸುತ್ತಿದ್ದರು. ಇದಲ್ಲದೇ ನಮ್ಮ ಗ್ರಾಮದ ಸಾಹುಕಾರರಾದ ಅಂಗಡಿ ದೊಡ್ಡಪ್ಪನವರು ತಾವು ಬೆಳೆದ ಉಳ್ಳಾಗಡ್ಡಿ ಬೆಳೆಯ ಜೊತೆಗೆ ಸುತ್ತಲ ಹಳ್ಳಿಗಳ ರೈತರಿಂದ ಖರೀದಿಸಿ ಗೂಡ್ಸು ರೈಲುಗಳ ಮೂಲಕ ದೊಡ್ಡ ನಗರಗಳಿಗೆ ಸಾಗಿಸುವ ವ್ಯವಹಾರ ನಡೆಸುತ್ತಿದ್ದರು. ಈ ಕೆಲಸದಲ್ಲಿಯೂ ಜನ ಅನೇಕ ವರ್ಷ ಬದುಕು ಕಟ್ಟಿಕೊಂಡಿದ್ದರು.

ಸೈಯದ್ ವಸಾಬ್ ಸಾಬ್ ಅವರ ಸಾಮಿಲ್ ನನ್ನೂರಿನ ಪ್ರಥಮ ಉದ್ಯಮವಾಗಿತ್ತು. ಸುತ್ತಲಿನ ಹತ್ತಾರು ಹಳ್ಳಿಯ ರೈತರ ರೈತಾಪಿ ಸಾಮಾನುಗಳಿಗೆ, ಮನೆಗಳ ಮರಮುಟ್ಟುಗಳಿಗೆ ತುಂಬಾ ಸಹಕಾರಿಯಾಗಿ ಕೆಲಸ ನಿರ್ವಹಿಸಿದೆ. ಹತ್ತಾರು ಕೂಲಿ ಕುಟುಂಬಗಳು, ಬಾಗಿಲು ಚೌಕಟ್ಟು ಮಾಡುವ ಬಡಗಿಗಳು ಈ ಸಾಮಿಲ್ ಅವಲಂಬಿತರಾಗಿ ಬದುಕುತ್ತಿದ್ದರು.

ಎಲ್ಲಾ ಊರುಗಳಿಗಿರುವ ಅಗಸಿ ಬಾಗಿಲು ನಮ್ಮೂರಿಗಿಲ್ಲ; ಇಲ್ಲಿ ಅತಿಥಿಗಳಿಗೆ ಸದಾ ತೆರೆದ ಬಾಗಿಲು. ಅಂತೆಯೇ ಇಲ್ಲಿಯ ಜನರದ್ದೂ ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು. ಎಲ್ಲಾ ಜಾತಿ, ಧರ್ಮೀಯರು ಸಹಬಾಳ್ವೆಯಿಂದ ಬದುಕೋದು ನನ್ನೂರ ವಿಶೇಷ. ಹಬ್ಬಗಳನ್ನಂತೂ ಜೊತೆಯಾಗಿಯೇ ಆಚರಿಸುವುದು, ಆನಂದಿಸುವುದು.

ಈಗ ಊರಿನ ಹೊಲಗಳಲ್ಲಿ ಬೃಹತ್ ‘ಜಿಂದಲ್ ಉಕ್ಕಿನ ಕಾರ್ಖಾನೆ’ ಬಂದಿದೆ. ಬಹುತೇಕ ಜನರ ಬಳಿ ಹಣ ಹರಿದಾಡ್ತಾಯಿದೆ. ಭರಗುಟ್ಟುವ ಬೈಕುಗಳು, ಎಣಿಕೆ ಇಲ್ಲದಷ್ಟು ಕಾರುಗಳು… ಗುಡಿಸಲುಗಳು ಕಾಣೆಯಾಗಿ ಬಣ್ಣಬಣ್ಣದ ಬಂಗಲೆಗಳು ತಲೆಯೆತ್ತಿ ನಿಂತಿವೆ. ಮಣ್ಣಿನ ರಸ್ತೆಗಳೆಲ್ಲಾ ಮಾಯ! ಜೊತೆಗೆ ಮನುಜರ ಮನಸುಗಳು ಐಷಾರಾಮಿತನಕ್ಕೆ ಪಕ್ಕಾಗಿವೆ.

ಹೊಸದಾದ ಗ್ರಾಮ ಪಂಚಾಯತಿ ಕಟ್ಟಡ, ಸುಸಜ್ಜಿತ ಹೈಸ್ಕೂಲ್, ಒ.ಪಿ.ಜೆ. ವೃತ್ತಿ ತರಬೇತಿ ಸಂಸ್ಥೆ, ಮೂವತ್ತು ಹಾಸಿಗೆಯ ಸರ್ಕಾರಿ ದವಾಖಾನೆ, ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯ, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ಗ್ರಂಥಾಲಯ, ನಾಡ ಕಚೇರಿ, ಕುರಿ ಮತ್ತು ಉಣ್ಣೆ ವಿಸ್ತರಣಾ ಕೇಂದ್ರ, ಬ್ಯಾಂಕುಗಳು, ಕೃಷಿ ಸಂಪರ್ಕ ಕೇಂದ್ರ, ವಾರ್ಡಿಗೊಂದು ಅಂಗನವಾಡಿ ಕೇಂದ್ರ, ಆಹಾರ ಧಾನ್ಯದ ಉಗ್ರಾಣ… ಎಲ್ಲಾ ಹೊಂದಿದ ಶ್ರೀಮಂತ ಊರಾಗಿದೆ.

ನನ್ನೂರು ಒಂದನ್ನು ಪಡೆಯುತ್ತಾ ಇನ್ನೊಂದನ್ನು ಕಳೆದುಕೊಳ್ಳುತ್ತಿರುವ ಖೇದವೊಂದು ನನಗೆ ಕಾಡುತ್ತಿದೆ. ರಸ್ತೆ ಅಭಿವೃದ್ಧಿಯ ನೆವದಲ್ಲಿ ಮರಗಳ ಮಾರಣಹೋಮವಾಗಿದೆ. ಪ್ರಕೃತಿ ನಿರ್ಮಿತ ಜಾರೋ ಬಂಡೆ ಕಾಣೆಯಾಗಿದೆ. ಊರ ಹೊರಗಿನ ಆಲದ ಮರವೊಂದರ ಬಿಳಲು ತೊಟ್ಟಿಲಲ್ಲಿ ತೂಗುವ ಸಂಭ್ರಮ ಈಗಿಲ್ಲ; ಹರಿತ ಕೊಡಲಿ ಮರದ ಜಡೆಯನ್ನು ಕಡೆದಿದೆ. ಇವೆಲ್ಲಾ ಕಂಡು ಮನದಲ್ಲಿ ಕೋಲಾಹಲ.

ಅರ್ಥ ಕಳಕೊಂಡ ಭಾವೈಕ್ಯತೆಯ ಪೀರಲ ಹಬ್ಬ, ಕಣ್ಮರೆಯಾದ ಗ್ರಾಮೀಣ ಕ್ರೀಡೆಗಳು, ಜಂಗಲ್ ದನಗಳ ಗೋಧೂಳಿ, ಸೆಗಣೆಯ ತಿಪ್ಪೆಗಳು, ಹುಲ್ಲಿನ ಬಣಿವೆಗಳು, ಕುರಿ ಹಟ್ಟಿಗಳು, ತುಡುಗು ದನಗಳ ಬಂದೀಖಾನೆ, ಧಾನ್ಯ ಸಂಗ್ರಹಣೆಯ ಹಗೇವುಗಳು, ಈಜಾಡುತ್ತಿದ್ದ ತೆರೆದಬಾವಿಗಳು, ಮರಕೋತಿ ಆಟ, ಕೋಲಾಟ, ಬಯಲಾಟ, ಕಾರಹುಣ್ಣಿಮೆಯ ಎತ್ತುಗಳ ಓಟ, ಸೋಬಾನದ ಹಾಡುಗಳು, ಶ್ರಮಿಕ ಹೆಂಗಳೆಯರ ಗೀತೆಗಳು… ಆಧುನಿಕತೆಯ ಭರಾಟೆಯಲ್ಲಿ ಎಲ್ಲವೂ ಮಂಗಮಾಯವಾಗಿವೆ.

ಸಣ್ಣ ಊರಾಗಿದ್ದ ನನ್ನೂರು ಕಾರ್ಖಾನೆಯ ಕಾರಣಕ್ಕಾಗಿ ದೇಶದ ಎಲ್ಲಾ ಭಾಷಿಗರ ತಾಣವಾಗಿದೆ. ಗೊತ್ತಿಲ್ಲದ ಹೊಸ ಸಂಸ್ಕೃತಿಗಳ ಪರಿಚಯವಾಗುತ್ತಿದೆ. ಕನ್ನಡ ಅಮ್ಮನ ಭಾಷೆಯಾದರೆ, ಹಿಂದಿ ಉದರದ ಭಾಷೆಯಾಗಿದೆ. ನಮಗೆ ಹೊಸದಾದ ಹೋಳಿ ಹಬ್ಬ, ವಿಶ್ವಕರ್ಮ ಪೂಜಾ, ಷಟ್ ಪೂಜಾ… ಹೀಗೆ ಹೊಸಹೊಸ ಹಬ್ಬಗಳ ಆಗಮನವಾಗುತ್ತಿದೆ.

ನನ್ನೂರ ದಕ್ಷಿಣದ ಮಾರೆಮ್ಮ ಬಯಲಿನ ಬೆಟ್ಟಗಳು ಬಾರದ ಮಳೆಯಿಂದ ತನ್ನತನ ಕಳೆದುಕೊಂಡಿವೆ. ಮನುಷ್ಯನ ಸ್ಪರ್ಷದಿಂದ ಹಸಿರಸಿರಿ ಹಾರಿ ಬಸಿರಬೆಟ್ಟಗಳೆಲ್ಲಾ ಬೋಳಾಗಿವೆ. ಈ ಕಾಡ ಬಯಲಲ್ಲಿ ವಾಸವಾಗಿದ್ದ ಕಾಡುಹಂದಿ, ಮೊಲ, ಚಿರತೆ, ಚಿಗರೆಗಳು ವಿಶೇಷವಾಗಿ ಬಸವಿ ದನಗಳು, ನವಿಲು, ಗೊರವಂಕದಂತಹ ಪಕ್ಷಿಗಳು ಕಣ್ಮರೆಯಾಗಿವೆ. ಸದಾ ನೀರಿನಿಂದ ತುಂಬಿರುತ್ತಿದ್ದ ನೀರ್ಗೊಳ್ಳ ಮಾಯವಾಗಿದೆ. ಚಿಗರೆನಾಲೆ ಇಲ್ಲವಾಗಿದೆ. ಎಂದೆಂದೂ ಬತ್ತಿರದ ಮಾರೆಮ್ಮ ಬಾವಿ ಬರಿದಾಗಿದೆ.

ಪ್ರಕೃತಿಯಲ್ಲಿ ತಾನೇತಾನಾಗಿ ಬೆಳೆದು ನಮಗೆ ಪೌಷ್ಟಿಕತೆ ಪ್ರಸಾದಿಸುತ್ತಿದ್ದ ಕಾಡುಹಣ್ಣುಗಳಾದ ಕಾರೆ, ಬಾರೆ, ಕೌಳೆ, ಬಿಕ್ಕೆ, ಲೇಬಣ್ಣು, ಚಿಟ್ಟಿ ಜೇನು, ಹೆಜ್ಜೇನು ಕಳೆದುಹೋಗಿವೆ. ವಿವಿಧ ಜಾತಿಯ ಮರಗಳಿಂದ ತುಂಬಿದ್ದ ಕಾದಿಟ್ಟ ಅರಣ್ಯ ಕಡೆದಿಟ್ಟ ಕಾಡಾಗಿದೆ. ಬಾಲ್ಯದಲ್ಲಿ ಮಣ್ಣೆತ್ತುಗಳನ್ನು ಮಾಡುತ್ತಿದ್ದ ಜೇಡಿ ಮಣ್ಣಿನ ಬಿಂಚೆ ಕಳ್ಳಿ (ಹೊಂಡ), ಈಜಾಡುತ್ತಿದ್ದ ನೀರಕೊಳ, ವಡ್ಡರ ಬಂಡಿ, ಅಂಗಡೇರ ಬಾವಿ, ಶಿವಣ್ಣನವರ ಬಾವಿ, ಅಂಚೇರ ಬಾವಿ, ಊರ ನಟ್ಟನಡುವಿನ ಉಪ್ಪುನೀರು ಬಾವಿ, ಇಡೀ ಊರಿನ ಜೀವನಾಡಿಯಾಗಿದ್ದ ಸಿಹಿನೀರು ಬಾವಿ… ಏನೇನನ್ನೋ ಕಳೆದುಕೊಳ್ಳುತ್ತಿದ್ದೇವೆ. ನನ್ನೂರು ಮೂಲ ನೆಲೆಯಲ್ಲೇ ಬದಲಾಗುತ್ತಿದೆ; ಅಂತೆಯೇ ಜನರು ಕೂಡ.

ಇದರ ನಡುವೆಯೂ ನನ್ನೂರು ಭ್ರಾತೃತ್ವವನ್ನು ಉಳಿಸಿಕೊಂಡ ಊರಾಗಿದೆ. ಯಾವುದೇ ಹಬ್ಬಹರಿದಿನ ಬಂದರೂ, ಅದರಲ್ಲೂ ನಮ್ಮೂರ ‘ಶಂಕರಲಿಂಗ’ನ ಜಾತ್ರೆ ಬಂತೆಂದರೆ ಪರಸ್ಪರರನ್ನ ಆಹ್ವಾನಿಸಿ ಉಣಬಡಿಸೋದು ಅನಾದಿ ಕಾಲದ ನಡಾವಳಿಯಾಗಿದೆ. ಆಧುನಿಕತೆಯ ಪ್ರವೇಶ ಸಮನ್ವಯತೆಯ ಹಬ್ಬಗಳ ಅರ್ಥ ಮಸುಕಾಗುವಂತೆ ಮಾಡಿದ್ದು ಮನಸಿಗೆ ನೋವುಂಟು ಮಾಡಿದೆ.

ಹಬ್ಬಕ್ಕೂ ಮುಂಚೆ ದೇವಸ್ಥಾನಗಳಲ್ಲಿ ಪುರಾಣ, ಭಜನೆ, ಕೀರ್ತನೆ, ಅರಿಕಥೆ (ಹರಿಕಥೆಯಲ್ಲ!) ನಡೆಯುತ್ತಿದ್ದವು.  ಅವು ನಡೆಯುವಾಗ ಮುಸಲ್ಮಾನರು ಕೂಡ ಎಡೆ, ದಕ್ಷಿಣೆ, ಕಾಣಿಕೆ ಕೊಟ್ಟು ದಾಸೋಹಕ್ಕೆ ಸಹಕರಿಸುತ್ತಿದ್ದರು. ಇದ್ದವರು ಇಲ್ಲದವರಿಗೆ ಉಣಿಸುವ ಕಾಯಕಧರ್ಮ ಪಾಲನೆಯಾಗುತ್ತಿತ್ತು. ಇದು ಊರ ಪರಂಪರೆಯೂ ಹೌದಾಗಿತ್ತು.

ಇನ್ನು ರಂಜಾನ್ ಬಂತೆಂದರೆ ಗುಡಿಯೊಳಗಿನ ಮೈಕುಗಳ ಮೊಳಗುವಿಕೆಯ ಸದ್ದು ಕಡಿಮೆಯಾಗುತ್ತಿತ್ತು. ಮುಸಲರು ಮುಂಜಾನೆಯೆದ್ದು ಉಂಡವರು ರಾತ್ರಿಯವರೆಗೆ ಉಪವಾಸ. ‘ಒಂದೊತ್ತು’ ಆಚರಿಸುವ ಅವರಿಗೆ ಹಿಂದೂ ಬಾಂಧವರು ಮಸೀದಿಯ ಹತ್ತಿರ ಬಂದು ಹಣ್ಣುಹಂಪಲು ಹಂಚಿ ಪ್ರೀತಿಯಿಂದ ಆಲಂಗಿಸಿ ಅಭಿನಂದಿಸುವರು. ಹಬ್ಬದ ಕಡೇ ದಿನ ಪಲಾವು ಉಂಡು, ಪಾಯಸ ಕುಡಿದು, ಎದೆಗವುಚಿ ಶುಭ ಹಾರೈಸುವರು.

ಇದು ಅಕ್ಷರಗಳಿಗೆ ನಿಲುಕದ ಬಂಧ. ಬರಹಕ್ಕೆ ಸಿಗದಷ್ಟು ಚೆಂದ. ಇದು ಯಾರೋ ಹೇಳಿಕೊಟ್ಟ ಪಾಠವಲ್ಲ; ಈ ನೆಲದ ಗುಣವಾಗಿರುವುದು ಸತ್ಯ. ದಾಸರು, ಶರಣರು, ಬಸವಾದಿಗಳು, ಸೂಫಿ ಸಂತರು, ತತ್ವ ಪದಗಾರರು ಬಿತ್ತಿ-ಬೆಳೆದು ಉಡುಗೊರೆಯಾಗಿ ಬಿಟ್ಟುಹೋದ ಪರಂಪರೆ.

ಈಗ ಈ ಪರಂಪರೆಗೆ ಬೆಂಕಿ ಇಡುವ, ಧರ್ಮದ ಹೆಸರಲ್ಲಿ (ಎರಡೂ ಕಡೆ) ಒಡಕು ಉಂಟು ಮಾಡುವ ಮೂಢಮಂದಿಯ ಪ್ರವೇಶವಾಗಿದೆ. ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು ಬಿತ್ತಿದ.

ಇತ್ತ…

ಜನಿವಾರದ ಜುಟ್ಟೊಂದು, ‘ನಮ್ಮದು ಸನಾತನ ಧರ್ಮ, ನಮ್ಮದೇ ಶ್ರೇಷ್ಠ, ಇತರರದು ಕನಿಷ್ಠ, ಮುಸಲ%E