ತೆಲುಗನ್ನಡಿಗರ ನಿರೀಕ್ಷೆಗಳು

– ಎಂ.ಗಿರಿಜಾಪತಿ

63ನೇ ರಾಜ್ಯೋತ್ಸವದ ಸಂದರ್ಭದಲ್ಲಿಯೂ ನೆರೆರಾಜ್ಯ ಆಂಧ್ರಪ್ರದೇಶದೊಳಗಿನ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನಾಥ ಪ್ರಜ್ಞೆ ಅನುಭವಿಸುವ ಸ್ಥಿತಿ ಇದೆ.

ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಕರ್ನಾಟಕ ಆಂಧ್ರದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು ಸಹಜವಾಗಿಯೇ ಇದ್ದಾರೆ. ಇವರಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ ಆಚಾರ-ವಿಚಾರ, ಸಂಸ್ಕೃತಿಯೂ ನೆಲೆನಿಂತಿದೆ. ಇವರು ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದ ಕನ್ನಡ ಶಾಲೆಗಳಿಗೆ ಸೇರಿಸುತ್ತಾರೆ.

ಆಂಧ್ರಪ್ರದೇಶ ಇಬ್ಭಾಗಕ್ಕಿಂತ ಮುಂಚಿತ ಗಡಿ ಜಿಲ್ಲೆಗಳಾದ ಮೆಹಬೂಬನಗರ್, ಮೆದಕ್, ಹೈದ್ರಾಬಾದ್, ಕರ್ನೂಲ್, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 85ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳಿವೆ. ಇವತ್ತಿಗೂ ಈ ಶಾಲೆಗಳಲ್ಲಿ ಅಂದಾಜು 17,000ಕ್ಕೂ ಹೆಚ್ಚು ಮಕ್ಕಳು ಕನ್ನಡದಲ್ಲಿ ಅಭ್ಯಸಿಸುತ್ತಿದ್ದಾರೆ. ಆಂಧ್ರ ವಿಭಜನೆ ನಂತರ ಆಂಧ್ರದ ಗಡಿ ಜಿಲ್ಲೆಗಳಾದ ಕರ್ನೂಲ್, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 65ಕ್ಕಿಂತಲೂ ಹೆಚ್ಚು ಶಾಲೆಗಳಿವೆ. ಇನ್ನೂ ಹಲವಾರು ಕನ್ನಡ ಶಾಲೆಗಳು ಸರ್ಕಾರದ ನಿರ್ಲಕ್ಷ್ಯದಿಂದಲೇ ಮುಚ್ಚಲ್ಪಟ್ಟಿವೆ. ಇನ್ನೂ ಕೆಲವು ಅವನತಿ ಅಂಚಿನಲ್ಲಿವೆ. ಇಲ್ಲಿನ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ, ಸಿಬ್ಬಂದಿಗಳ ವರ್ಗಾವಣೆ, ಬಡ್ತಿಗಾಗಿ ಹೋರಾಟ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಇಲ್ಲಿನ ಕನ್ನಡಿಗರಿಗೆ ಕರ್ನಾಟಕ ಸರ್ಕಾರದ ನೈತಿಕ ಬೆಂಬಲ ಅತ್ಯಗತ್ಯ. ಕಾನೂನಾತ್ಮಕವಾಗಿ ಕರ್ನಾಟಕ ಸರ್ಕಾರ ತನಗೆ ಸಾಧ್ಯವಿರುವ ವ್ಯಾಪ್ತಿಯಲ್ಲಿ ಕನ್ನಡ ಶಾಲೆಗಳ ಜೊತೆಗೆ ಸಂಪರ್ಕ ಸಾಧಿಸಿ ಆಂಧ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಹೊರ ರಾಜ್ಯದ ಕನ್ನಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡಬೇಕು.

ಹೊರ ರಾಜ್ಯಗಳಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡಬೇಕು. ದ್ವಿಭಾಷಾ ಪ್ರಾಂತ್ಯಗಳಲ್ಲಿ ಕನ್ನಡ ಮತ್ತು ತೆಲುಗು ಎರಡು ಕಣ್ಣುಗಳಿದ್ದಂತೆ. ಆಂಧ್ರ ಸರ್ಕಾರಕ್ಕೆ ಒಳಪಟ್ಟ ತೆಲುಗು ಮತ್ತು ಕನ್ನಡ ಮಾಧ್ಯಮಗಳಲ್ಲಿ ಒಂದು ಭಾಷೆಗೆ ಸೀಮಿತವಾಗದೇ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎರಡೂ ಭಾಷೆಗಳನ್ನು ಬಳಸಿ ಬೋಧಿಸಬೇಕು. ಹೀಗಾದರೆ ಮಾತ್ರ ಬಹುಬೇಗ ಮಕ್ಕಳಿಗೆ ಅರ್ಥವಾಗುವ ಸಾಧ್ಯತೆ ಇದೆ. ಮುಖ್ಯವಾಗಿ ಆಂಧ್ರಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಜೀವಂತವಾಗಿ ಉಳಿಯಬೇಕಾದರೆ ಕರ್ನಾಟಕ ಸರ್ಕಾರವು ಕೆಲವು ಮುಖ್ಯ ನಿರ್ಣಯಗಳನ್ನು ಅನುಷ್ಠಾನಗೊಳಿಸಬೇಕು.

ಕರ್ನಾಟಕದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿ ಸೌಲಭ್ಯಗಳನ್ನು ಗಡಿ ಭಾಗದ ಮಕ್ಕಳಿಗೆ ಕಲ್ಪಿಸಿ ಅವರನ್ನು ಕರ್ನಾಟಕದ ವಿದ್ಯಾರ್ಥಿಗಳೆಂಬಂತೆ ಪರಿಗಣಿಸಬೇಕು. ಉದಾಹರಣೆಗೆ ಸಮವಸ್ತ್ರ ವಿತರಣೆ, ವಿದ್ಯಾರ್ಥಿವೇತನ, ಬೈಸಿಕಲ್, ಷೂ, ಬ್ಯಾಗ್, ಬಿಸಿಯೂಟ, ಉಚಿತ ಬಸ್‍ಪಾಸ್, ಪ್ರವಾಸ ಇನ್ನೂ ಮುಂತಾದ ಸೌಲಭ್ಯಗಳು.

ಆಂಧ್ರದ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಶೇಕಡಾ 5 ಮೀಸಲಾತಿ ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಈ ಮೀಸಲಾತಿ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಸಿಕ್ಕ ದಾಖಲೆಗಳಿಲ್ಲ. ಇದನ್ನು ಎಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಜಾರಿಗೊಳಿಸುವಂತೆ ಕ್ರಮಕೈಗೊಳ್ಳಬೇಕು.

ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಭಾರತದ ಯಾವುದೇ ಪ್ರಾಂತ್ಯದಲ್ಲಿ ಓದಿದ ಕನ್ನಡ ಮಕ್ಕಳಿಗೆ ಉದ್ಯೋಗದಲ್ಲಿ ಶೇಕಡಾ 5 ಮೀಸಲಾತಿಯನ್ನು ಕರ್ನಾಟಕದ ಸರ್ಕಾರ ಒದಗಿಸಿದೆ. ಕರ್ನಾಟಕದ ಮತ್ತು ಹೊರರಾಜ್ಯದಲ್ಲಿ ಕನ್ನಡ ಅಭ್ಯಸಿಸಿದ ಮಕ್ಕಳಿಗೆಲ್ಲಾ ಅನ್ವಯವಾಗುವ ಕಾರಣ ಆಂಧ್ರದ ಕನ್ನಡಿಗರಿಗೆ ಈ ಮೀಸಲಾತಿ ಸಾಕಾಗಲಾರದು; ಇವರಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.

ಆಂಧ್ರದ ಕನ್ನಡ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಈ ಭಾಗಗಳಲ್ಲಿಯೇ ಪದವಿಪೂರ್ವ, ಪದವಿ ಮತ್ತು ತಾಂತ್ರಿಕ ಶಿಕ್ಷಣ ಮುಂತಾದ ಶಿಕ್ಷಣ ನೀಡುವ ಅನುಕೂಲ ಒದಗಿಸಿದಾಗ ಕನ್ನಡ ಮಕ್ಕಳ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗುತ್ತದೆ.

ಆಂಧ್ರದ ಗಡಿಭಾಗದ ಕನ್ನಡ ವಿದ್ಯಾರ್ಥಿಗಳು ಕರ್ನಾಟಕದಲ್ಲಿನ ಉನ್ನತ ವ್ಯಾಸಂಗಕ್ಕೆ ಹೋಗಲು ಜಾತಿ ಮತ್ತು ವ್ಯಾಸಂಗ ಪ್ರಮಾಣ ಪತ್ರಗಳ ಕಾರಣದಿಂದ ಸೌಲಭ್ಯವಂಚಿತರಾಗುತ್ತಾರೆ. ಉದಾಹರಣೆಗೆ ಸಮಾಜಕಲ್ಯಾಣ ಇಲಾಖೆಯಿಂದ ಸಿಗುವ ವಿದ್ಯಾರ್ಥಿವೇತನಗಳಿಗೆ ಆಂಧ್ರದ ಪ್ರಮಾಣ ಪತ್ರಗಳನ್ನು ಸ್ವೀಕರಿಸುವುದಿಲ್ಲ; ಜಾತಿ ಆಧಾ ರದ ಮೇಲೆ ಸಿಗುವ ಮೀಸಲಾತಿಯಿಂದಲೂ ಈ ವಿದ್ಯಾರ್ಥಿಗಳು ವಂಚಿತರಾಗುತ್ತಾರೆ. ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸಿದ್ದರೂ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಅವಕಾಶ ಸಿಗುವುದಿಲ್ಲ. ಹಾಗಾಗಿ ಆಂಧ್ರದಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಮಗು ಆಂಧ್ರದ ಸೌಲಭ್ಯವಿಲ್ಲದೇ ಇತ್ತ ಕರ್ನಾಟಕದಲ್ಲಿಯೂ ಸೌಲಭ್ಯ ದೊರೆಯದೇ ಡೋಲಾಯಮಾನ ಸ್ಥಿತಿಯಲ್ಲಿ ಜೀವನ ಸಾಗಿಸಬೇಕಾಗುತ್ತದೆ.

ಆಂಧ್ರದ ಕನ್ನಡ ಶಿಕ್ಷಕರಿಗೆ ಕರ್ನಾಟಕದಿಂದ ತರಬೇತಿ ಮತ್ತು ಕರ್ನಾಟಕ ಸರ್ಕಾರದಿಂದ ಗೌರವ ಮಾನ್ಯತೆ (ಉತ್ತಮ ಶಿಕ್ಷಕರು) ದೊರಕಿಸಿಕೊಟ್ಟಾಗ ಅವರಿಗೆ ಉತ್ತೇಜನ ಸಿಗುತ್ತದೆ. ಕನ್ನಡಪರ ಸಂಘಟನೆಗಳು, ಕರ್ನಾಟಕದ ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪಠ್ಯಪುಸ್ತಕ ಪ್ರಾಧಿಕಾರ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಿಂದ ಇಲ್ಲಿನ ಕನ್ನಡಿಗರ ಮನೋಸ್ಥೈರ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ.

*ಲೇಖಕರು ಆಂಧ್ರದ ಅನಂತಪುರಂ ಜಿಲ್ಲೆಯ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷರು.

Leave a Reply

Your email address will not be published.