ತೊಗಲುಬೊಂಬೆ ಪ್ರದರ್ಶನ ಪಂಚವಟಿ ಪ್ರಸಂಗ

ಹಾಸನ ಜಿಲ್ಲೆಯ ತೊಗಲುಬೊಂಬೆ ಕಲಾವಿದ ‘ಗುಂಡುರಾಜು’ ಅವರು ಕಳೆದ 55 ವರ್ಷಗಳಿಂದ ಈ ಅಪರೂಪದ ಜನಪದ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಶಸ್ತಿ ವಿಜೇತ ಹಿರಿಯ ಜನಪದ ಕಲಾವಿದರಾದ ಹನುಮಮ್ಮ ಮತ್ತು ಗೊಂಬೆ ರಾಮಯ್ಯರವರ ಪುತ್ರರಾದ ಗುಂಡುರಾಜು ಅವರ ಕುಟುಂಬ ಕಳೆದ ಎಂಟು ದಶಕಗಳಿಂದ ಈ ಕಲೆಯಲ್ಲಿ ನಿರತವಾಗಿದೆ. ದೇಶವಿದೇಶಗಳಲ್ಲಿ ತಮ್ಮ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿರುವ ಗುಂಡುರಾಜು ಕರ್ನಾಟಕ ಜನಪದ ಯಕ್ಷಗಾನ ಅಕಾಡೆಮಿಯ ‘ಜ್ಞಾನವಿಜ್ಞಾನ’ ಪ್ರಶಸ್ತಿ, ಕರ್ನಾಟಕ ಜನಪದ ಪರಿಷತ್ತಿನ ಪ್ರಶಸ್ತಿ, ಕರ್ನಾಟಕ ರಂಗಸಂಗೀತ ಪರಿಷತ್ತಿನ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಎಸ್.ಕೆ.ಕರೀಂ ಖಾನ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಪಂಚವಟಿ -ವಾಲಿ ಸುಗ್ರೀವರ ಕಾಳಗ.

ಚಿತ್ರಕೂಟದಿಂದ ರಾಮ, ಲಕ್ಷ್ಮಣ, ಸೀತೆ ಪಂಚವಟಿಗೆ ಬಂದಿದ್ದಾರೆ. ಒಂದು ದಿನ ಹಣ್ಣುಗಳನ್ನು ತರಲೆಂದು ಲಕ್ಷ್ಮಣ ಹೋಗುತ್ತಾನೆ. ಅಲ್ಲಿ ಶೂರ್ಪನಖಿಯ ಮಗ ಶಂಬೂಕನು ಸೂರ್ಯದೇವನನ್ನು ಕುರಿತು ತಪಸ್ಸನ್ನು ಆಚರಿಸುತ್ತಿರುತ್ತಾನೆ. ಅಲ್ಲಿಗೆ ಲಕ್ಷ್ಮಣನು ಬರುತ್ತಾನೆ. ಸೂರ್ಯನಿಂದ ವರವಾಗಿ ಅಂತರಿಕ್ಷದಿಂದ ಬರುತ್ತಿದ್ದ ಖಡ್ಗ ಲಕ್ಷ್ಮಣನ ಕೈಗೆ ದೊರೆಯುತ್ತದೆ. ಅದರ ಹರಿತವನ್ನು ಪರೀಕ್ಷೆ ಮಾಡಲು ಲಕ್ಷ್ಮಣನ ಒಂದು ಬಿದಿರು ಮೆಳೆಗೆ ಹೊಡೆಯುತ್ತಾನೆ. ಆ ಮೆಳೆಯೊಳಗೆ ತಪಸ್ಸು ಮಾಡುತ್ತಿದ್ದ ಶಂಬೂಕನು ಲಕ್ಷ್ಮಣನ ಖಡ್ಗಕ್ಕೆ ಸಿಕ್ಕು ಮರಣ ಹೊಂದುತ್ತಾನೆ.

ಮಗನಿಗಾಗಿ ಆಹಾರವನ್ನು ತಂದ ಶೂರ್ಪನಖಿ ಮಗನ ಸಾವಿಗೆ ಯಾರು ಕಾರಣರೆಂದು ಋಷಿ ಮುನಿಗಳನ್ನು ಪೀಡಿಸಿ ತಿಳಿದುಕೊಳ್ಳುತ್ತಾಳೆ. ತನ್ನ ಮಗನನ್ನು ಕೊಂದ ಲಕ್ಷ್ಮಣನ ಮೇಲೆ ಸೇಡು ತೀರಿಸಿಕೊಳ್ಳಲು ಹೋಗಿ, ರಾಮ ಲಕ್ಷ್ಮಣರಿಂದ ಅವಮಾನಿತಳಾಗುತ್ತಾಳೆ. ಲಕ್ಷ್ಮಣನಿಂದ ಮೂಗು ಕೊಯ್ಯಿಸಿಕೊಂಡು ತನಗಾದಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಅಣ್ಣ ರಾವಣನ ಮೊರೆ ಹೋಗುತ್ತಾಳೆ. ಸೀತೆಯ ಸೌಂದರ್ಯವನ್ನು ವರ್ಣಿಸಿ ಅವಳನ್ನು ಅಪಹರಿಸಲು ಒತ್ತಾಯಿಸಿತ್ತಾಳೆ. ಮಾರೀಚನ ಸಹಾಯದಿಂದ ರಾವಣ ಸೀತೆಯನ್ನು ಅಪಹರಿಸುತ್ತಾನೆ.

ಸೀತೆಯನ್ನು ಹುಡುಕುತ್ತಾ ಬಂದ ರಾಮ ಲಕ್ಷ್ಮಣರಿಗೆ ಜಟಾಯು ಸಂಧಿಸುತ್ತಾನೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೋದ ಸಂಗತಿ ರಾಮನಿಗೆ ತಿಳಿಸುತ್ತಾನೆ. ನಂತರ ರಾಮನಿಗೆ ಸುಗ್ರೀವನ ಸಖ್ಯವಾಗಿ ರಾಮ ವಾಲಿಯ ಸಂಹಾರ ಮಾಡುತ್ತಾನೆ. ಹನುಮಂತನಿಂದ ಸೀತಾನ್ವೇಷಣೆಯಾಗುತ್ತದೆ. ಲಂಕೆಯ ಅಶೋಕವನದಲ್ಲಿ ಸೀತೆ ಬಂಧಿಯಾಗಿರುವ ವಿಷಯ ತಿಳಿದು ರಾಮ ಲಕ್ಷ್ಮಣರು ವಾನರಸೈನ್ಯದೊಂದಿಗೆ ಲಂಕೆಯ ಮೇಲೆ ಯುದ್ಧ ಮಾಡುತ್ತಾರೆ. ಯುದ್ಧದಲ್ಲಿ ರಾವಣನ ಸಂಹಾರವಾಗಿ ಸೀತೆಯು ಬಂಧನದಿಂದ ವಿಮುಕ್ತಳಾಗುತ್ತಾಳೆ.

ದಿನಾಂಕ: 17.01.2020 ಶುಕ್ರವಾರ, ಸಂಜೆ 6 ಕ್ಕೆ
ಸ್ಥಳ: ಬಿಐಸಿ ಆಡಿಟೋರಿಯಮ್, ದೊಮ್ಮಲೂರು, ಬೆಂಗಳೂರು.

Leave a Reply

Your email address will not be published.