‘ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ’ ಘಟಕಗಳು ಎಷ್ಟು ಪ್ರಯೋಜನಕಾರಿ?

ಕಸ ಸುಟ್ಟು ವಿದ್ಯುತ್ ಉತ್ಪಾದಿಸಿ ಲಾಭ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಸಾಕಷ್ಟು ಖಾಸಗಿ ಸಂಸ್ಥೆಗಳು ಮುಂದೆ ಬಂದವು. ಏನಾದರೂ ಮಾಡಿಕೊಳ್ಳಿ, ಆದರೆ ನಮ್ಮ ನಗರಗಳಲ್ಲಿ ಕಸ ಮಾತ್ರ ಕಾಣದಂತೆ ಮಾಡಿ ಎಂದು ಈ ಸಂಸ್ಥೆಗಳಿಗೆ ಸರ್ಕಾರ ಮತ್ತು ಪಾಲಿಕೆಗಳು ಎಲ್ಲ ರೀತಿಯ ಸವಲತ್ತುಗಳನ್ನು ನೀಡಿ, ಕೈ ತೊಳೆದುಕೊಂಡುಬಿಟ್ಟವು.

ಕೆಲ ದಿನಗಳ ಹಿಂದೆ ನನ್ನ ಮಗಳ ಜೊತೆ ನಾನು ವಾಲ್-ಈ ಎನ್ನುವ ಒಂದು ಕಾರ್ಟೂನ್ ಸಿನೆಮಾವನ್ನು ನೋಡಿದೆ. ಮಕ್ಕಳ ಸಿನೆಮಾ ಎಂದು ಅರ್ಧ ಮನಸ್ಸಿನಿಂದ ನೋಡಲು ಕುಳಿತ ನನಗೆ ದೊಡ್ಡ ಆಘಾತ ಕಾದಿತ್ತು! ಇಂದಿಗೆ ಏಳು ಶತಕಗಳ ಮುಂದೆ ಭವಿಷ್ಯದಲ್ಲಿ ನಡೆವ ಕತೆ ಅದು. ಇಡೀ ಭೂಮಿಯ ತುಂಬಾ ಎತ್ತ ನೋಡಿದರೂ ಅತ್ತ ಕಸದ ರಾಶಿಯೇ ತುಂಬಿದೆ; ಒಂದೇ ಒಂದು ನರಪಿಳ್ಳೆಯೂ ಇಲ್ಲ; ಜೀವ ಜಂತುಗಳು ವಾಸಿಸಲು ಯೋಗ್ಯವಲ್ಲದ ಇಂತಹ ಸಂದರ್ಭದಲ್ಲಿ ಮನುಷ್ಯರೆಲ್ಲರೂ ಭೂಮಿಯನ್ನು ತ್ಯಜಿಸಿ ಬೇರೆ ಒಂದು ಬಾಹ್ಯಾಕಾಶ ನೌಕೆಯಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಒಂದೇ ಒಂದು ಜಿರಳೆ ಮತ್ತು ವಾಲ್-ಈ ಎನ್ನುವ ಒಂದು ರೋಬೋಟ್ ಬಿಟ್ಟರೆ ಭೂಮಿಯ ಮೇಲೆ ಇರುವ ಪ್ರತಿ ಅಂಗುಲವೂ ಕಸ, ತ್ಯಾಜ್ಯ ವಸ್ತುಗಳಿಂದ ತುಂಬಿರುತ್ತದೆ. ಜೀವಿಗಳ ಯಾವುದಾದರೂ ಕುರುಹನ್ನು ಅರಸಿ ತರಲು ಭೂಮಿಗೆ ಬಂದ ಇನ್ನೊಂದು ರೋಬೋಟ್ ಮತ್ತು ವಾಲ್-ಈ ಮಧ್ಯೆ ಒಂದು ಪ್ರೇಮ ಕತೆ ನಡೆಯುತ್ತಿದ್ದರೂ, ಒಬ್ಬ ಕತೆಗಾರಳಾಗಿ ನನ್ನ ಮನಸೆಲ್ಲಾ ಇಂತಹ ಒಂದು ಸಂದರ್ಭವನ್ನು ಕಲ್ಪಿಸಿಕೊಂಡ ಕತೆಗಾರನ ಬಗ್ಗೆ ಯೋಚಿಸುತಿತ್ತು. ಈ ಮಟ್ಟಕ್ಕೆ ಅತಿಶಯೋಕ್ತಿಯೇ ಎಂದು ಮೂಗುಮುರಿದೆ ಕೂಡ.

ಆದರೆ ಇತ್ತೀಚೆಗೆ ಪರಿಸರ ಮತ್ತು ಅರಣ್ಯ ಸಂರಕ್ಷಣಾ ಮಂತ್ರಿ ಮಂಡಲದ ವರದಿ ನೋಡಿದಾಗ ಮೇಲೆ ಹೇಳಿದ ಕತೆ ಅತಿಶಯೋಕ್ತಿ ಅಲ್ಲ ಎನಿಸಿತು!

ಈ ವರದಿಯ ಪ್ರಕಾರ ನಮ್ಮ ದೇಶದಲ್ಲಿ ಪ್ರತಿದಿನ 2.5 ಲಕ್ಷ ಟನ್ ಗಳಷ್ಟು ಕಸ ಉತ್ಪತ್ತಿ ಆಗುತ್ತಿದೆಯಂತೆ. ಇದು 2030ರಲ್ಲಿ 4.5 ಲಕ್ಷ ಟನ್ ಅಗಲಿದೆಯಂತೆ ಮತ್ತು 2050ರಲ್ಲಿ 11.5 ಲಕ್ಷ ಟನ್ ಆಗಬಹುದಂತೆ!

ಕೃತ್ರಿಮ ವಸ್ತುಗಳನ್ನು ತಯಾರಿಸುವ ಶಕ್ತಿ ಹೊಂದಿದ ಮನುಷ್ಯನನ್ನು ಬಿಟ್ಟರೆ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಬೇರೆ ಯಾವ ಜೀವಿಯೂ ಹೊಣೆಯಲ್ಲ. ಆದರೆ ಅದರ ಪರಿಣಾಮವನ್ನು ಮಾತ್ರ ಎಲ್ಲ ಜೀವಿಗಳೂ ಎದುರಿಸಬೇಕಾಗಿದೆ. ಪರಿಸರ ಪ್ರೇಮಿಗಳು ಇದರ ಬಗ್ಗೆ ಬೊಬ್ಬೆ ಹಾಕುತ್ತಲೇ ಇದ್ದಾರೆ. ಆದರೆ ಈ ಸಮಸ್ಯೆಗೆ ಇದುವರೆಗೂ ಪರಿಣಾಮಕಾರಿಯಾದ ಪರಿಹಾರ ಸಿಕ್ಕಿಲ್ಲ. ಬೇರೆ ಸಮಸ್ಯೆಗಳಂತೆ ಈ ಸಮಸ್ಯೆಗೂ ಪಾಶ್ಚ್ಯಾತ್ಯ ರಾಷ್ಟ್ರಗಳನ್ನು ಅನುಕರಿಸಿ ಸರ್ಕಾರ ಮತ್ತು ಮಹಾನಗರ ಪಾಲಿಕೆಗಳು ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ (Waste Energy,WtE) ಮಾಡುವ ಯೋಜನೆಯನ್ನು ಮಂಡಿಸಿದವು. ಕಸ ಸುಟ್ಟು ವಿದ್ಯುತ್ ಉತ್ಪಾದಿಸಿ ಲಾಭ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಸಾಕಷ್ಟು ಖಾಸಗಿ ಸಂಸ್ಥೆಗಳು ಮುಂದೆ ಬಂದವು. ಏನಾದರೂ ಮಾಡಿಕೊಳ್ಳಿ, ಆದರೆ ನಮ್ಮ ನಗರಗಳಲ್ಲಿ ಕಸ ಮಾತ್ರ ಕಾಣದಂತೆ ಮಾಡಿ ಎಂದು ಈ ಸಂಸ್ಥೆಗಳಿಗೆ ಸರ್ಕಾರ ಮತ್ತು ಪಾಲಿಕೆಗಳು ದುಂಬಾಲು ಬಿದ್ದು ಎಲ್ಲ ರೀತಿಯ ಸವಲತ್ತುಗಳನ್ನು ನೀಡಿ, ಕೈ ತೊಳೆದುಕೊಂಡುಬಿಟ್ಟವು. ಆದರೆ ಒಂದು ಲೆಕ್ಕದ ಪ್ರಕಾರ ಸುಮಾರು ನಲವತ್ತರಿಂದ ಎಪ್ಪತ್ತು ಘಟಕಗಳಿಗೆ ಪರವಾನಗಿ ಸಿಕ್ಕಿದ್ದರೂ ಸದ್ಯಕ್ಕೆ ನಮ್ಮ ದೇಶದಲ್ಲಿ ಕಾರ್ಯ ನಡೆಸುತ್ತಿರುವ ಘಟಕಗಳು ಬೆರಳೆಣಿಕೆಯಷ್ಟು ಮಾತ್ರವೇ!

ಮಿತಿಮೀರಿ ಸಂಗ್ರಹವಾಗುತ್ತಿರುವ ತ್ಯಾಜ್ಯಕ್ಕೆ ಇಂತಹ ಘಟಕಗಳು ನಿಜವಾಗಿಯೂ ಪರಿಹಾರವೇ? ಇವುಗಳ ಸೋಲಿಗೆ ಕಾರಣವೇನು? ಇದರಲ್ಲಿ ಸಮಾಜಮುಖಿಗಳಾದ ನಮ್ಮನಿಮ್ಮಂತಹ ಜನಸಾಮಾನ್ಯರ ಪಾತ್ರವೇನು?

ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ ಘಟಕ’ ಎಂದರೇನು?

ಮಹಾನಗರಗಳಲ್ಲಿ ಪ್ರತಿದಿನವೂ ಶೇಖರಣೆಯಾಗುವ ಟನ್ ಗಟ್ಟಲೆ ಕಸವನ್ನು ಸುಟ್ಟು, ಅದರ ಶಾಖದಿಂದ ನೇರವಾಗಿ ವಿದ್ಯುತ್ ಶಕ್ತಿ ಅಥವಾ ಮೀಥೇನ್, ಮೆತನಾಲ್, ಎಥನಾಲ್ ಮುಂತಾದ ಕೃತ್ರಿಮ ಇಂಧನಗಳನ್ನು ಉತ್ಪಾದಿಸುವ ಪ್ರಕ್ರಿಯೆಯನ್ನು ಆಧರಿಸಿದ ಘಟಕಗಳಿಗೆ ‘ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ ಘಟಕ’ಗಳು ಎನ್ನುತ್ತಾರೆ.

ಈ ಘಟಕಗಳಲ್ಲಿ ಸಾಮಾನ್ಯವಾಗಿ ನಿರ್ದಿಷ್ಟ ತಾಪಮಾನದಲ್ಲಿ ಭಸ್ಮ ಮಾಡುವ ಯಂತ್ರಗಳಿಂದ (incinerator) ಸುಡುವುದು (thermal combustion), ಜೀವ-ರಾಸಾಯನಿಕ ಕ್ರಿಯೆ (biochemical), ಉಷ್ಣ-ರಾಸಾಯನಿಕ ಕ್ರಿಯೆ (ಥೆರ್ಮೋಕೆಮಿಕಲ್) ಮತ್ತು ವಿದ್ಯುದ್ರಾಸಾಯನಿಕ ಕ್ರಿಯೆ (electrochemical) ಎಂಬ ನಾಲ್ಕು ಪ್ರಕ್ರಿಯೆಗಳನ್ನು ಕಾಣಬಹುದು. ಕೊಳೆತು ಗೊಬ್ಬರವಾಗದ, ಮರುಬಳಕೆ ಮಾಡಲು ಬಾರದಂತಹ ವಸ್ತುಗಳನ್ನು ಸುಮಾರು 850 ಡಿಗ್ರಿ ಸೆಂ. ಅಥವಾ ಹೆಚ್ಚಿನ ಉಷ್ಣತೆಯಲ್ಲಿ ಸುಟ್ಟಾಗ ಸಿಗುವ ಉಷ್ಣತೆಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸಲಾಗುವುದು. ಸುಮಾರು ಒಂದು ಟನ್ ಕಸದಿಂದ 600 ಕಿಲೋವಾಟ್ ನಿಂದ ಒಂದು ಮೆಗಾವಾಟ್ ವರೆಗೆ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದು. ತಳದಲ್ಲಿ ಉಳಿಯುವ ಲೋಹದ ತುಂಡುಗಳು ಶುದ್ಧವಾಗಿ ಮರುಬಳಕೆಗೆ ಅರ್ಹವಾಗಿರುತ್ತವೆ. ಅಲ್ಲದೆ ಭಸ್ಮವಾಗದ ಸುಟ್ಟ ಕರಕಲು, ಬೂದಿ ಇತ್ಯಾದಿ ಉಳಿಕೆಗಳನ್ನು ರಸ್ತೆ ನಿರ್ಮಾಣದಲ್ಲಿ ಬಳಸಬಹುದು. ಈ ಘಟಕಗಳು ಹವಾಮಾಲಿನ್ಯದ ದೃಷ್ಟಿಯಿಂದ ಕಲ್ಲಿದ್ದಲು ಘಟಕಗಳಿಗಿಂತ ಕಡಿಮೆ ಅಪಾಯಕಾರಿ ಆದರೂ ಪ್ರಾಕೃತಿಕ ಅನಿಲಗಳ ಘಟಕಗಳಿಗಿಂತ ಹೆಚ್ಚು ಅಪಾಯಕಾರಿ ಆಗಿವೆ. ಆದರೆ ಸರಿಯಾದ ರೀತಿಯಲ್ಲಿ ಕಸವನ್ನು ಸುಡುವುದು ಮತ್ತು ಹೊರಬೀಳುವ ಅನಿಲಗಳ ಸೋಸುವಿಕೆಯಿಂದ ಇದನ್ನು ನಿಯಂತ್ರಿಸಬಹುದು.

ಈ ಘಟಕಗಳಿಂದ ಪ್ರಯೋಜನಗಳೇನು?

1. ವಿದೇಶಗಳಲ್ಲಿ ಇದೊಂದು ಬಳಕೆಯಲ್ಲಿರುವ ಯಶಸ್ವಿ ತಾಂತ್ರಿಕತೆ.

2. ಪರಿಸರಕ್ಕೆ ಹಾನಿಯುಂಟುಮಾಡುವ ಗ್ರೀನ್‍ಹೌಸ್ ಅನಿಲಗಳ (Water vapor, Carbon dioxide, Methane, Nitrous oxide, Ozone, Hydrofluorocarbons… etc) ಬಿಡುಗಡೆಯನ್ನು ನಿಯಂತ್ರಿಸಬಹುದು.

3. ನವೀಕರಿಸಲಾಗದ ಇಂಧನಗಳ ಮೇಲಿನ ಅವಲಂಬನೆ ಕಡಿಮೆಯಾಗುವುದು.

4. ಶುದ್ಧವಾದ ಇಂಧನ/ಶಕ್ತಿಯನ್ನು ಒದಗಿಸುವುದು.

5. ತಡೆಯಿಲ್ಲದ ವಿದ್ಯುತ್ ಶಕ್ತಿ ಒದಗಿಸುವುದು.

6. ಕಸ ಒಟ್ಟುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಯಬಹುದು.

7. ಮರುಬಳಕೆಯಾಗದ ವಸ್ತುಗಳಿಂದ ಶಕ್ತಿಯನ್ನು ವಸೂಲು ಮಾಡಬಹುದು.

8. ಘನ ತ್ಯಾಜ್ಯಗಳ ವಿಲೇವಾರಿಯ ನಿರ್ವಹಣೆಯನ್ನು ಸುಲಭ ಮಾಡುವುದು.

ಕರ್ನಾಟಕದಲ್ಲಿ ಘಟಕಗಳ ಸ್ಥಿತಿಗತಿ

1987ರಿಂದ ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳಲ್ಲಿ ಒಟ್ಟು 15 ತ್ಯಾಜ್ಯದಿಂದ ವಿದ್ಯುತ್ ಉತ್ಪನ್ನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಇವುಗಳಲ್ಲಿ ಬಹುಪಾಲು ಘಟಕಗಳು ಸದ್ಯಕ್ಕೆ ಮುಚ್ಚಿವೆ.

ಆದರೆ ಸರ್ಕಾರ, ಪಾಲಿಕೆಗಳು ಇದರ ಸಫಲತೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ಕರ್ನಾಟಕ ಪವರ ಕಾರ್ಪೋರೇಶನ್ ಲಿಮಿಟೆಡ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ 3WAYSTE ಎನ್ನುವ ಫ್ರೆಂಚ್ ಕಂಪನಿಗೆ ಚಿಕ್ಕನಾಗಮಂಗಲದಲ್ಲಿ ಇಂತಹ ಘಟಕ ತೆರೆಯಲು ಪರವಾನಗಿ ನೀಡಿವೆ. ಈ ಕಂಪನಿಯು ಈಗಾಗಲೇ ಕಾರ್ಯ ಆರಂಭಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಇದು ಮುಂದೆ ಹೋಗಿದೆ. ಈ ಕಂಪನಿಯು ಮೂವತ್ತು ವರ್ಷಗಳ ಅವಧಿಯಲ್ಲಿ ವಿದ್ಯುತ್ ಶಕ್ತಿ ಉತ್ಪನ್ನದ ಜೊತೆಗೆ ಮಿಶ್ರಗೊಬ್ಬರ ಕೂಡ ತಯಾರಿಸಲಿದೆ. ಈ ಘಟಕದಿಂದ ಉತ್ಪನ್ನವಾಗುವ ವಿದ್ಯುತ್ತಿಗೆ ಕೆ.ಪಿ.ಸಿ.ಎಲ್. ಪ್ರತಿ ಯೂನಿಟ್ ಗೆ 7.08 ರೂಪಾಯಿಗಳನ್ನು ತೆರಲಿದೆ.

ಮಂಡೂರು ಹಳ್ಳಿಯಲೊಂದು ವಿದ್ಯುತ್ ಕೊಠಡಿಯನು  ಸ್ಥಾಪಿಸುವ ಯೋಜನೆ ಚಾಲನೆಯಲ್ಲಿದೆ. ಆದರೆ ಈ ಎಲ್ಲ ಯೋಜನೆಗಳು ನಗರದ ನಿವಾಸಿಗಳ ಮತ್ತು ಪರಿಸರಪ್ರೇಮಿಗಳ ನಿರಂತರ ಪ್ರತಿಭಟನೆಯಿಂದ ಕುಂಟುತ್ತಲೇ ಇವೆ. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕೂಡ ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಘನ ತ್ಯಾಜ್ಯದಿಂದ 25 ಮೆಗಾ ವಾಟಗಳ ಉತ್ಪನ್ನಕ್ಕೆ ಅನುಮತಿ ನೀಡಿದೆಯಾದರೂ ಸದ್ಯಕ್ಕೆ ಯಾವ ಸಂಸ್ಥೆಗಳೂ ಬಂಡವಾಳ ಹೂಡಲು ಮುಂದೆ ಬಂದಿಲ್ಲ. ಈಗಾಗಲೇ ಹಣ ಹೂಡಿರುವ ಕಂಪನಿಗಳು ಯಶಸ್ವಿಯಾಗಿಲ್ಲ. ಇಷ್ಟೆಲ್ಲಾ ತೊಡಕುಗಳಿದ್ದರೂ ಹಲವಾರು ಹೊಸ ಹೊಸ ಘಟಕಗಳು ಕರ್ನಾಟಕದಾದ್ಯಂತ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ.

ವಿಫಲತೆಗೆ ಕಾರಣವೇನು?

ಎಷ್ಟೆಲ್ಲಾ ಪ್ರಯೋಜನಗಳಿದ್ದರೂ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಕ ಘಟಕಗಳು ನಮ್ಮ ದೇಶದಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲದಿರುವುದಕ್ಕೆ ಮುಖ್ಯವಾದ ಕಾರಣಗಳು:

1. ಇಪ್ಪತ್ತು ವರ್ಷಗಳಷ್ಟು ಹಳೆಯ ತಾಂತ್ರಿಕತೆಯಾದರೂ ಕಾರ್ಯಗತಗೊಳಿಸುವ ಮುನ್ನ ನಮ್ಮ ದೇಶದ ವಾತಾವರಣಕ್ಕೆ ಅಗತ್ಯವಿರುವ ಸಂಶೋಧನೆ ನಡೆಸದಿರುವುದು.

2. ಕಸ ಹುಟ್ಟುವ ಮೂಲ ಸ್ಥಳಗಳಾದ ಮನೆಗಳು, ಹೋಟೆಲ್ಲುಗಳು, ಕಾರ್ಖಾನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಒಣ ಮತ್ತು ಹಸಿ ಅಥವಾ ಮರು ಬಳಕೆ ಮಾಡಬಹುದಾದ ಮತ್ತು ಮಾಡಲಾಗದ ತ್ಯಾಜ್ಯಗಳ ವಿಂಗಡನೆ ಮಾಡದಿರುವುದು ಅತಿ ದೊಡ್ಡ ಸಮಸ್ಯೆಯಾಗಿದೆ. ಇತರ ದೇಶಗಳಲ್ಲಿ ಜೈವಿಕವಾಗಿ ಕೊಳೆಸಬಹುದಾದ ತ್ಯಾಜ್ಯದ ಪ್ರಮಾಣ ಶೇಕಡಾ 30 ಇದ್ದರೆ ನಮ್ಮ ದೇಶದಲ್ಲಿ ಇದರ ಪ್ರಮಾಣ ಶೇಕಡಾ 60 ರಿಂದ ಎಪ್ಪತ್ತು ಇರುತ್ತದೆ. ಆದ್ದರಿಂದ ಈ ಘಟಕಗಳ ದಕ್ಷತೆ ಕ್ಷೀಣಿಸುತ್ತದೆ.

3. ಪಿವಿಸಿ ಮತ್ತು ಹಸಿ ತ್ಯಾಜ್ಯವನ್ನು 850 ಡಿಗ್ರಿ ಸೆಂ. ಗಿಂತ ಕಡಿಮೆ ಉಷ್ಣತೆಯಲ್ಲಿ ಸುಡುವುದರಿಂದ ಕ್ಯಾನ್ಸರ್ ಉಂಟು ಮಾಡುವ ಡಯಾಕ್ಸಿನ್ ಮತ್ತು ಫ್ಯೂರನ್ ಅನಿಲಗಳ ಬಿಡುಗಡೆಯಾಗುತ್ತದೆ. ಇದು ಇಂತಹ ಘಟಕಗಳ ನೆರೆಹೊರೆಯಲ್ಲಿ ವಾಸಿಸುವ ಜನರಿಗೆ ಮತ್ತು ವನ್ಯಜೀವಿಗಳಿಗೆ ಮಾರಣಾಂತಿಕವಾಗಿದೆ.

4. ಸರಿಯಾದ ಉಷ್ಣತೆಯಲ್ಲಿ ಸುಟ್ಟರೂ ಇದರ ಇತರೆ ಉಪ ಉತ್ಪನ್ನಗಳು ತೀವ್ರವಾದ ಅನಿಯಂತ್ರಿತ ವಾಯುಮಾಲಿನ್ಯಕ್ಕೆ ಎಡೆ ಮಾಡುತ್ತವೆ.

5. ಘನತ್ಯಾಜ್ಯ ಪೂರಕವಸ್ತುಗಳನ್ನು ಘಟಕಗಳಲ್ಲಿ ಸುಡುವ ಮುನ್ನ ಹಿಸುಕಿ ಕುಗ್ಗಿಸುವುದರಿಂದ ಹಾನಿಕಾರಕ ವಸ್ತುಗಳನ್ನು ಬೇರ್ಪಡಿಸುವುದು ಅಸಾಧ್ಯವಾಗಿಬಿಡುತ್ತದೆ.

6. ಸರಿಯಾಗಿ ವಿಂಗಡಿಸದ, ಮಿಶ್ರಿತವಾದ ಪೂರಕವಸ್ತು ಬಳಸುವ ಘಟಕಗಳಲ್ಲಿ ತ್ಯಾಜ್ಯವನ್ನು ಸುಡಲು ಹೆಚ್ಚುವರಿ ಇಂಧನ ಬಳಸುವ ಸಂದರ್ಭ ಬರುತ್ತದೆ. ಇದರಿಂದ ಒಂದು ಯೂನಿಟ್ ವಿದ್ಯುತ್ ಗೆ ಸುಮಾರು 7 ರೂಪಾಯಿ ಆಗುತ್ತದೆ. ಇದ್ದಿಲು ಮತ್ತು ನೈಸರ್ಗಿಕ ಅನಿಲಗಳಿಂದ ತಯಾರಿಸುವ ವಿದ್ಯುತ್ ಪ್ರತಿ ಯೂನಿಟ್ ಗೆ 3 ರಿಂದ ನಾಲ್ಕು ರೂಪಾಯಿ ಆಗುತ್ತದೆ. ಹಾಗಾಗಿ ಇದು ದುಬಾರಿ ಆಗುತ್ತದೆ.

ಜನಸಾಮಾನ್ಯರು ಏನು ಮಾಡಬಹುದು?

ಮೊದಲನೆಯದಾಗಿ ಪಾಲಿಥಿನ್ ಕವರುಗಳ ಬಳಕೆಯನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಬಳಸಿದರೂ ಅಡಿಗೆ ಅಥವಾ ಹಸಿ ತ್ಯಾಜ್ಯ ಮತ್ತು ಒಣ ಅಥವಾ ಮರುಬಳಕೆ ಮಾಡಬಹುದಾದಂತಹ ತ್ಯಾಜ್ಯದ ವಿಂಗಡಣೆಯ ಬಗ್ಗೆ ಮನೆಮನೆಗಳಲ್ಲಿ, ಶಾಲೆಗಳಲ್ಲಿ, ಹೊಟೇಲುಗಳಲ್ಲಿ, ಕಾರ್ಖಾನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸುವುದು ಮತ್ತು ಹೀಗೆ ಮಾಡದೇ ಇರುವುದರ ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರಿಂದ ದಂಡ ವಸೂಲು ಮಾಡುವುದು. ಎರಡನೆಯದಾಗಿ ಸಾಧ್ಯವಾದಷ್ಟು ಮನೆಯಂಗಳದಲ್ಲಿ ಸಣ್ಣಪುಟ್ಟ ಗಿಡಗಳನ್ನು ಬೆಳೆಸಿ ಅವುಗಳಿಗೆ ಬೇಕಾದ ಗೊಬ್ಬರವನ್ನು ಅಡಿಗೆಮನೆಯ ಕಸದಿಂದ ಮನೆಯಲ್ಲೇ ತಯಾರಿಸಿಕೊಳ್ಳುವುದು. ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಾನಿಕ್ ಸಾಮಾನುಗಳು ಅಥವಾ ಆಟಿಕೆಗಳು ಮುರಿದರೆ, ಕೆಟ್ಟುಹೋದರೆ ತಕ್ಷಣ ಕಸದ ಬುಟ್ಟಿಗೆ ಎಸೆದು ಹೊಸದನ್ನು ಕೊಳ್ಳುವ ಮೊದಲು ಹಳೆಯದನ್ನೇ ಸರಿಪಡಿಸಲು ಸಾಧ್ಯವಾದಷ್ಟು ಪ್ರಯತ್ನಿಸುವುದು.

ಸೂಕ್ತ ಪರಿಹಾರವೇ?

ಮಹಾನಗರಗಳಲ್ಲಿ ಊರ ಹೊರಗೆ ಮತ್ತು ಊರ ಒಳಗೂ ದೊಡ್ಡ ದೊಡ್ಡ ಪ್ರಮಾಣದಲ್ಲಿ ಕಸದ ರಾಶಿ ಒಟ್ಟುವುದರಿಂದ ಅಷ್ಟೊಂದು ಜಾಗ ವ್ಯರ್ಥವಾಗುವುದಲ್ಲದೆ ಕಸ ಕೊಳೆತು, ಗಬ್ಬು ವಾಸನೆ ಮತ್ತು ರೋಗ ರುಜಿನಗಳು ಹರಡುವುವು. ಇದರಿಂದ ತಪ್ಪಿಸಿಕೊಳ್ಳಲು ಇಂತಹ ಘಟಕಗಳು ಖಂಡಿತ ಸೂಕ್ತ ಪರಿಹಾರವೇ ಆದರೂ, ಇವುಗಳ ಕಾರ್ಯನಿರ್ವಹಣೆ ಸರಿಯಾದ ರೀತಿಯಲ್ಲಿ ಆಗದಿರುವುದರಿಂದ ಸದ್ಯಕ್ಕೆ ಇವು ಹುಟ್ಟು ಹಾಕಿರುವ ತೊಂದರೆಗಳೇ ಹೆಚ್ಚಾಗಿವೆ. ನಮ್ಮ ದೇಶದಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಕ ಘಟಕಗಳು ಪರಿಣಾಮಕಾರಿಯಾಗಬೇಕಾದರೆ ಇಂತಹ ಘಟಕಗಳನ್ನು ಕಾರ್ಯಗತಗೊಳಿಸುವ ಮೊದಲು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಂಶೋಧನೆ ನಡೆಯಬೇಕಿದೆ.

ಘನತ್ಯಾಜ್ಯವನ್ನೇ ಪೂರಕವಸ್ತುವನ್ನಾಗಿ ಮಾಡಿಕೊಂಡಿರುವ ಇಂತಹ ಘಟಕಗಳಿಂದ ಪರಿಸರಕ್ಕೆ, ಜನಜೀವನಕ್ಕೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಗಂಭೀರವಾದ ಆಲೋಚನೆಗಳು ನಡೆಯಬೇಕಿದೆ. ನಮ್ಮ ಜನರಲ್ಲಿ ಕಸದ ವಿಂಗಡಣೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಬೇಕಿದೆ. ಹೆಚ್ಚು ಪರಿಣಾಮಕಾರಿಯಾದ ರೀತಿಯಲ್ಲಿ ಕಸದ ವಿಲೇವಾರಿಯ ನಿರ್ವಹಣೆ ಆಗಬೇಕಿದೆ. ಒಂದು ನಗರದಲ್ಲಿ ‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದಕ ಘಟಕ’ ತೆರೆಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಮೊದಲು ಅಲ್ಲಿನ ಜನಸಂಖ್ಯೆ, ಪ್ರತಿದಿನ ಉತ್ಪನ್ನವಾಗುವ ತ್ಯಾಜ್ಯದ ಪ್ರಮಾಣ ಮತ್ತು ಗುಣಮಟ್ಟ (ಹಸಿ ಮತ್ತು ಒಣ ಕಸದ ಶೇಕಡವಾರು ಸಂಯೋಜನೆ), ಜನರಲ್ಲಿ ಕಸ ವಿಂಗಡಣೆಯ ಬಗ್ಗೆ ಇರುವ ತಿಳಿವಳಿಕೆ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸರ್ಕಾರ ಮತ್ತು ನಗರ ಪಾಲಿಕೆಗಳು ಸರಿಯಾದ ಮುಂದಾಲೋಚನೆಯಿಲ್ಲದೆ, ಕಸ ವಿಂಗಡಿಸುವ ಸಿದ್ಧತೆಗಳಿಲ್ಲದೆ, ಜನರಲ್ಲಿ ಅರಿವು ಮೂಡಿಸದೆ ಅವಸರದಲ್ಲಿ ‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದಕ ಘಟಕ’ಗಳಿಗೆ ಪರವಾನಗಿ ಕೊಡಕೂಡದು. ಪೂರ್ವಭಾವಿಯಾಗಿ ಎಲ್ಲ ರೀತಿಯ ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕಾಗಿದೆ. ಇಲ್ಲವಾದರೆ ಈ ಘಟಕಗಳು ಪರಿಸರಕ್ಕೆ ಅಪಾಯಕಾರಿಯಾಗಿವೆ. ಪ್ರತಿಯೊಂದು ಯೋಜನೆಯೂ ಸದುದ್ದೇಶದಿಂದ ಆರಂಭವಾಗುತ್ತವೆಯಾದರೂ ಅವುಗಳ ಯಶಸ್ಸಿಗೆ ಪ್ರಜ್ಞಾಪೂರ್ವಕ ನಾಗರಿಕರ ನಿರಂತರ ಸಹಕಾರದ ಅಗತ್ಯವಿದೆ.

ಇದನ್ನೆಲ್ಲಾ ಯೋಚಿಸದೆ ಕಸ ಕಣ್ಮರೆಯಾದರೆ ಸಾಕು ಎಂದು ಅವಸರದಲ್ಲಿ ಪಾಲಿಕೆಗಳು ಇದನ್ನು ಒಂದು ಸುಲಭವಾದ ಮಾರ್ಗ ಎಂದು ತಿಳಿದು ಕೈತೊಳೆದುಕೊಳ್ಳುತ್ತಿರುವುದು ವಿಷಾದನೀಯ.

*ಲೇಖಕಿ ಭಾರತೀಯ ವಾಯುಪಡೆಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. ಕಥೆ, ಕವಿತೆ, ಲೇಖನ ಬರೆಯುತ್ತಾರೆ. ಪ್ರಸ್ತುತ ಕೇಂದ್ರ ಸರ್ಕಾರದ ರಾಷ್ಟ್ರೀಯ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಉದ್ಯೋಗಿ. ಮೂಲತಃ ಶಿವಮೊಗ್ಗೆ ಬಳಿಯ ಹನುಮಂತಾಪುರದವರು, ಬೆಂಗಳೂರಿನಲ್ಲಿ ವಾಸ.

Leave a Reply

Your email address will not be published.