ದಮನಿತ ಸಮುದಾಯದ ಸುಧಾರಣೆ: ಔದಾರ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ

ಬಿ.ಪೀರ್ಬಾಷ

ಮುಸ್ಲಿಂ ಸಮುದಾಯದಲ್ಲಿ ಮತಮೌಢ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಾಮುದಾಯಿಕ ಅಭದ್ರತೆಯ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಮತಶ್ರದ್ಧೆಯನ್ನು ಭದ್ರಗೊಳಿಸುವ ಕಾರ್ಯವನ್ನು ಮುಸ್ಲಿಂ ಮೂಲಭೂತವಾದ ಮಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಮುಸ್ಲಿಮೇತರರಿಗಿಂತ ಮುಸ್ಲಿಂ ಉದಾರವಾದಿ ಹಾಗೂ ವಿಚಾರವಾದಿಗಳ ಪಾತ್ರ ಬಹು ಮಹತ್ವದ್ದು.

ರಾಷ್ಟ್ರೀಯ ಪರಂಪರೆ

ಮುಸ್ಲಿಂ ಸಮುದಾಯದ ಸುಧಾರಣೆಯ ಮಾತು ಬಂದಾಗ ಮೊದಲಿಗೆ ನೆನಪಾಗುವವರು ಸರ್ ಸೈಯದ್ ಅಹಮ್ಮದ್ ಖಾನ್. ಪ್ರಥಮ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಶರು ಹತ್ತಿಕ್ಕಿದ ಬಳಿಕ, ರಾಜಕೀಯ ಹೋರಾಟದ ಮೂಲಕ ಸಮುದಾಯದ ಹಿತ ಕಾಪಾಡುವ ಭರವಸೆಯೇ ಇಲ್ಲದಂತಾಗಿ ಸಮುದಾಯವನ್ನು ಶೈಕ್ಷಣಿಕವಾಗಿ ಬಲಪಡಿಸಬೇಕೆಂಬ ಉದ್ದೇಶದಿಂದ ಅಲಿಘಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ, ಮಹತ್ವದ ಸುಧಾರಕ ಇವರು. ರಾಜಕೀಯ ರಂಗದಿಂದ ದೂರವಿದ್ದು ಶೈಕ್ಷಣಿಕ ಅಭಿವೃದ್ದಿ ಸಾಧಿಸಬೇಕೆಂಬ ಇವರ ನಿಲುವನ್ನು ಅಲ್ಲಗಳೆದು, ರಾಜಕೀಯ ಜಾಗೃತಿ ಮತ್ತು ಶೈಕ್ಷಣಿಕ ಪ್ರಗತಿ ಇವೆರಡನ್ನೂ ಸಮಾನವಾಗಿ ಸಾಧಿಸಬೇಕೆಂಬ ಧೋರಣೆಯಿಂದ ಮುಸ್ಲಿಂ ಸಮುದಾಯದ ಸುಧಾರಣೆಗೆ ಇನ್ನಷ್ಟು ತೀವ್ರತೆಯನ್ನು ಒದಗಿಸಿದವರು ಇನ್ನೊಬ್ಬ ಸುಧಾರಣಾವಾದಿ ಚಿಂತಕ ಸೈಯದ್ ಮೀರ್ ಅಲಿ.

ಮುಸ್ಲಿಂ ಮಹಿಳೆಯರೂ ಆಧುನಿಕ ಶಿಕ್ಷಣವನ್ನು ಪಡೆಯಬೇಕೆಂಬ ಒತ್ತಾಸೆಯಿಂದಮುಸ್ಲಿಂ ಮಹಿಳಾ ಅಸೋಸಿಯೇಷನ್ಸ್ಥಾಪಿಸಿ, ಪುರುಷರಿಗೆ ಸಮಾನವಾದ ಮಹಿಳೆಯ ಹಕ್ಕನ್ನು ಪ್ರತಿಪಾದಿಸಿದವರು ಬೇಗಂ ರೋಖಿಯಾ ಎಂಬ ಹೆಣ್ಣು ಮಗಳು. 20ನೇ ಶತಮಾನದ ಮೊದಲ ದಶಕದಲ್ಲಿಯೇಸಖಾವತ್ ಮೆಮೋರಿಯಲ್ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ ಈಕೆ ಕಾಲದಲ್ಲಿಯೇ ಪರ್ದಾ ಪದ್ಧತಿಯನ್ನು ವಿರೋಧಿಸಿ, ಮುಸ್ಲಿಂ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕರೆತಂದವರು.

ಇವರ ಆಶಯಕ್ಕೆ ಇನ್ನಷ್ಟು ಬಲ ತುಂಬಿದವರು ಸೈಯದ್ ಮಮ್ತಾಜ್ ಅಲಿ. ಮಹಿಳೆಯರು ಗಂಡಸರಿಗೆ ಸಮಾನ ಎಂದು ಆಂದೋಲನವನ್ನೇ ಆರಂಭಿಸಿ, ಮುಸ್ಲಿಂ ಹೆಣ್ಣುಮಕ್ಕಳನ್ನು ಪುರುಷರಿಗೆ ಸಮಾನವಾಗಿ ಎತ್ತಿಕಟ್ಟಿದ್ದಕ್ಕೆ ಮೌಲ್ವಿಗಳ ವಿರೋಧವನ್ನು ಎದುರಿಸಿದ ಇವರು ಪತ್ರಿಕಾ ರಂಗದಲ್ಲಿಯೂ ಮಹಿಳೆಯರು ಮುಂದೆ ಬರಬೇಕೆಂದು, ತಮ್ಮ ಮಡದಿಯ ಸಂಪಾದಕತ್ವದಲ್ಲಿ ಪತ್ರಿಕಾ ಪ್ರಕಟಣೆಯನ್ನು ಆರಂಭಿಸಿದವರು.

ಇವರಂತೆಯೇ, ಕೇರಳದಲ್ಲಿ ಸಾಹಿತ್ಯ ಮತ್ತು ಪತ್ರಿಕಾ ರಂಗಗಳೆರಡರಲ್ಲಿಯೂ ಆಧುನಿಕ ವಿಚಾರಗಳನ್ನು ಪ್ರತಿಪಾದಿಸಿದವರು ವಕ್ಕಂ ಮೊಹಮ್ಮದ್ ಖಾದಿರ್ ಮೌಲ್ವಿ. ಮೌಲಾನ ಅಬ್ದುಲ್ ಕಲಾಂ ಆಜಾದರಂತೂ, ಆಧುನಿಕ ಶಿಕ್ಷಣದ ಮೂಲಕ ಮುಸ್ಲಿಂ ಸಮುದಾಯದಲ್ಲಿ ಧರ್ಮನಿರಪೇಕ್ಷತೆಯ ಮೌಲ್ಯಗಳನ್ನು ಮತ್ತು ರಾಷ್ಟ್ರೀಯತೆಯ ಪ್ರಜ್ಞೆಯನ್ನು ಬಲವಾಗಿ ಪ್ರತಿಪಾದಿಸಿದವರು. ಮುಸ್ಲಿಂ ಸಮುದಾಯದ ಸುಧಾರಣೆಯ ಚರ್ಚೆಯ ಸಂದರ್ಭದಲ್ಲಿ, ಸಮುದಾಯದ ಒಳಗಿನ ಸುಧಾರಣಾವಾದಿ ಪರಂಪರೆಯನ್ನು ನೆನಪಿಗೆ ತಂದುಕೊಳ್ಳಲೇಬೇಕು.

ಧರ್ಮದ ಹೆಸರಿನ ಮತಾಂಧ ವಿಕೃತಿ

ತಾಲಿಬಾನ್ನಂತಹ ಮತಾಂಧ ಸಂಘಟನೆಯು ಇಸ್ಲಾಮಿನ ಆಶಯವನ್ನು ವಿಕೃತಗೊಳಿಸುವ ಮೂಲಕ ತನ್ನ ಹಿಂಸಾ ವಿಶಿಷ್ಟ ಕಾರ್ಯಾಚರಣೆಯ ಮೂಲಕ ಸಮಕಾಲೀನ ಜಾಗತಿಕ ರಾಜಕೀಯದ ಚರ್ಚೆಯ ಮುಂಚೂಣಿಗೆ ಬಂದಿರುವ ಸಂದರ್ಭದಲ್ಲಿ, ಒಂದೂವರೆ ಶತಮಾನದ ಹಿಂದೆಯೇ ಭಾರತದಲ್ಲಿ ನಡೆದ ಮುಸ್ಲಿಂ ಸಮಾಜ ಸುಧಾರಣೆಯ ಸ್ವರೂಪವನ್ನು ನೆನಪಿಸಿಕೊಳ್ಳಬೇಕಿದೆ.

ಇಸ್ಲಾಂ ಎಂದರೆ ಶಾಂತಿ ಎನ್ನುವ ಮೂಲಾರ್ಥವನ್ನೇ ವಿಕಾರಗೊಳಿಸಿ ಇಸ್ಲಾಮನ್ನು ಹಿಂಸೆಯ ಮೂಲಕ ಸಮೀಕರಣಗೊಳ್ಳುವಂತೆ ಮಾಡಿದ ಇಸ್ಲಾಮಿಕ್ ಮೂಲಭೂತವಾದದ ಅವಿವೇಕದ ಅತಿರೇಕಗಳೇ ಜಗತ್ತಿನ ಸಾಮಾನ್ಯ ಜನತೆಯ ದುಸ್ಥಿತಿಗೆ ನಾಂದಿ ಹಾಡಿದ್ದನ್ನು ಅಲ್ಲಗಳೆಯುವಂತಿಲ್ಲ. ಭಾರತದ ಸಂದರ್ಭದಲ್ಲಿ ಅತಿರೇಕ ಯಾವತ್ತೂ ಅನ್ವಯವಾಗದಿದ್ದರೂ ಇಲ್ಲಿಯ ಮೂಲಭೂತವಾದಿ ಮುಸ್ಲಿಂ ರಾಜಕಾರಣವು ದೇಶದ ಮುಸ್ಲಿಂ ಜನತೆಯ ಅಭಿವೃದ್ಧಿಯ ಹಿನ್ನಡೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದನ್ನಂತೂ ಅಲ್ಲಗಳೆಯಲಾಗದು.

ದಮನದ ಕಾರ್ಯಯೋಜನೆಗಳು

ಮತೀಯ ಅತಿರೇಕಗಳ ಸಮಾನ ಸಂಘರ್ಷದಲ್ಲಿ ದೇಶ ವಿಭಜನೆಯಾದ ಬಳಿಕ ಮಾಡದ ತಪ್ಪಿಗೆ ಕಳಂಕವನ್ನು ಹೊತ್ತುಕೊಂಡ ಮುಸ್ಲಿಂ ಜನಸಮುದಾಯ ನಂತರದ ಮುಕ್ಕಾಲು ಶತಮಾನಗಳ ಕಾಲ ನಿರಂತರವಾಗಿ ಅನುಮಾನ, ಅಪಮಾನಗಳೊಂದಿಗೆ ದಮನಕ್ಕೂ ಈಡಾಗುತ್ತಾ ಬಂದಿರುವುದು ಚಾರಿತ್ರಿಕ ವಾಸ್ತವ. ಸ್ವಾತಂತ್ರೋತ್ತರ ಸಂದರ್ಭದಲ್ಲಿ ಸಮಕಾಲೀನ ರಾಜಕೀಯ ಸಂದಿಗ್ಧತೆಗಳನ್ನು ದುರುಪಯೋಗ ಪಡಿಸಿಕೊಂಡ ಭಾರತದ ಕೋಮುವಾದವು ಪ್ರಭುತ್ವವನ್ನು ಸ್ಥಾಪಿಸುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದು ಶತಮಾನದ ಮಹತ್ವದ ಘಟ್ಟ ಎಂಬುದಾಗಿ ಪರಿಗಣಿಸಲೇಬೇಕು. ಹಿಂದೂ ಎನ್ನುವದರ ವಿರುದ್ಧ ಪದ ಮುಸ್ಲಿಂ ಎಂಬಂತೆ ಸಾಂಸ್ಕøತಿಕವಾಗಿ ಅಪಮೌಲ್ಯವನ್ನು ಸ್ಥಾಪಿಸಿ, ‘ಹಿಂದೂ ಪ್ರಭುತ್ವದಲ್ಲಿಮುಸ್ಲಿಂ ದಮನ ಬಹಿರಂಗ ಸಮರ್ಥನೆ ಹಾಗೂ ಪ್ರತಿಪಾದನೆಗಳು ನಡೆಯುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸುಧಾರಣೆಯ ವಾದವು ಸಮುದಾಯದ ನೆಲೆಯಲ್ಲಿ ಅನಿವಾರ್ಯ ಹಾಗೂ ಅಗತ್ಯದ್ದು ಎಂದೆನಿಸಿದಂತೆಯೇ ಭಾರತದಪ್ರಜಾಪ್ರಭುತ್ವ ಅಸಹಾಯಕ ಮಾರ್ಗವೆಂದೂ ಭಾವಿಸಬೇಕು.

ಭಾರತದ ಮುಸ್ಲಿಂ ಸಮುದಾಯಕ್ಕೆ ಸಾಮಾಜಿಕಆರ್ಥಿಕವಾಗಿ ಮಾತ್ರವಲ್ಲ, ರಾಜಕೀಯವಾಗಿಯೂ ಒದಗಿರುವ ದುರ್ಗತಿಯು ಸಮುದಾಯದ ದಯನೀಯತೆಯನ್ನು ಮಾತ್ರ ಮನನ ಮಾಡಿಕೊಡುವುದಿಲ್ಲ. ಬದಲಾಗಿ ಸಾಂವಿಧಾನಿಕ ಮೌಲ್ಯಗಳ ಅಧಃಪತನವನ್ನೂ ಮನಗಾಣಿಸುತ್ತದೆ. ಮುಸ್ಲಿಂ ಸಮುದಾಯವನ್ನು ಅದರ ಒಳಗಿನಿಂದ ಸುಧಾರಿಸುವ ಅನಿವಾರ್ಯತೆಯು ಸಮುದಾಯದ ಅನಿವಾರ್ಯತೆಯೇನೋ ಹೌದು. ಆದರೆ, ‘ಮುಸ್ಲಿಂ ದುರ್ಗತಿಯು ಪ್ರಜಾಪ್ರಭುತ್ವದ ಸೂಚ್ಯಂಕವೂ ಆಗಿರುವ ಬಗ್ಗೆ ಯೋಚಿಸಬೇಕಾದವರು ಯಾರು ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ.

2019 ಲೋಕಸಭೆಯ ಕೆಲ ಸಂಖ್ಯಾವಿವರಗಳನ್ನು ಗಮನಿಸಬೇಕು. ದೇಶದ ಜನಸಂಖ್ಯೆಯಲ್ಲಿ 14.2ರಷ್ಟಿರುವ ಮುಸ್ಲಿಮರಲ್ಲಿ, ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವವರ ಸಂಖ್ಯೆ, ಕೇವಲ 27. ಅದರಲ್ಲೂ ದೇಶದ ಸರಕಾರವನ್ನೇ ನಡೆಸುತ್ತಿರುವ, ಆಳುವ ಪಕ್ಷವನ್ನು ಪ್ರತಿನಿಧಿಸುವ ಮುಸ್ಲಿಂ ಸದಸ್ಯರ ಸಂಖ್ಯೆ, ಶೂನ್ಯ. ಕಳೆದ ಅವಧಿಯಲ್ಲೂ ಆಳುವ ಪಕ್ಷದಲ್ಲಿದ್ದ ಮುಸ್ಲಿಂ ಸದಸ್ಯರ ಸಂಖ್ಯೆ ಶೂನ್ಯವೆ. ಸಂಖ್ಯಾವಿವರಗಳು, ಏನನ್ನು ಸೂಚಿಸುತ್ತಿವೆ?

ಅನ್ಯಮತದ್ವೇಷದ ಸಾಧನೆಯ ಸೂಚಕವಾಗಿ ಮತೀಯವಾದವು ವಿವರಗಳೊಂದಿಗೆ ಸಂಭ್ರಮಿಸಬಹುದು. ಆದರೆ, ಪ್ರಜಾ ಪ್ರಾತಿನಿಧ್ಯದ ಮೂಲಕ ಜನ ಸಮುದಾಯಗಳ ಒಳಗೊಳ್ಳುವಿಕೆಯ ಸಂವಿಧಾನದ ಆಶಯಗಳ ಬಗ್ಗೆ ಯೋಚಿಸುವುದಾದರೆ ಇದನ್ನು ದುರಂತವೆನ್ನಲೇಬೇಕು. ಹಿನ್ನೆಲೆಯಲ್ಲಿ, ಮುಸ್ಲಿಂ ಸಮುದಾಯದ ಪ್ರಾತಿನಿಧ್ಯವು ಸೂಕ್ತ ಪ್ರಮಾಣದಲ್ಲಿ ಸಾಧ್ಯವಾಗುವ ನಿಟ್ಟಿನ ಅಗತ್ಯ ಸುಧಾರಣೆಯೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವ ಕಣ್ಣೋಟದ ಮೂಲಕ ಸಾಧ್ಯವಾಗಬೇಕು. ಇದಕ್ಕೆ ಪೂರಕವಾಗಿ ಸಮುದಾಯದ ಒಳಗಿನಿಂದ ಪ್ರಯತ್ನಗಳು ನಡೆಯುವುದಾದರೆ ಅದು ನಮ್ಮ ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ನಡೆಯೇ ಆಗಿರುತ್ತದೆ.

ಇತ್ತೀಚಿಗಷ್ಟೇ, ಒಕ್ಕೂಟ ಸರಕಾರವನ್ನು ನಡೆಸುತ್ತಿರುವ ಪಕ್ಷದ ನಾಯಕರೊಬ್ಬರು, “ಯು.ಪಿ.ಎಸ್.ಸಿ. ಜೆಹಾದ್ಎಂಬ ನುಡಿಗಟ್ಟನ್ನು ಸಾರ್ವಜನಿಕವಾಗಿ ಬಳಸಿದರು. ಭಾರತದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳು ಉತ್ತೀರ್ಣರಾದದ್ದು ಅವರ ಕಣ್ಣನ್ನು ಕೆಂಪಾಗಿಸಿ ಹೀಗೆ ಹೇಳ ಹಚ್ಚಿತು. ಮಾತಿನ ಅರ್ಥ ಸ್ಪಷ್ಟವಾಗೇ ಇತ್ತು. ದೇಶದ ಆಡಳಿತ ವಲಯದಲ್ಲಿಯೂ ಮುಸ್ಲಿಮರು ಪರೀಕ್ಷೆ ಬರೆದು ಅರ್ಹತೆಯ ಮೂಲಕ ಬರುವುದೂ ಅವರಿಗೆ ಬೇಡವಾಗಿತ್ತು. ಇದು ಹಾಗೆ ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರ ಅಭಿಪ್ರಾಯ ಮಾತ್ರವಾಗಿರದೇ, ಪಕ್ಷದ ನಿಲುವೂ ಹೌದೆಂದು ಬೇರೆ ಹೇಳಬೇಕಾಗಿಲ್ಲ. ಸಂಗತಿ ಏನನ್ನು ಸಾಬೀತು ಪಡಿಸುತ್ತಿದೆ?

6ರಿಂದ 14 ವಯಸ್ಸಿನ ಮುಸ್ಲಿಂ ಮಕ್ಕಳಲ್ಲಿ ನಾಲ್ಕನೆಯ ಒಂದು ಭಾಗ ಶಾಲೆ ಸೇರುತ್ತಿಲ್ಲ ಅಥವಾ ಶಾಲೆಯಿಂದ ಕಳಚಿಕೊಳ್ಳುತ್ತಿದೆ. ಇವರಲ್ಲಿ ಎಸ್.ಎಸ್.ಎಲ್.ಸಿ ವರೆಗೆ ತಲುಪುವವರ ಪ್ರಮಾಣ ಶೇ.17 ಮಾತ್ರ. ಸಾಕ್ಷರತೆಯ ರಾಷ್ಟ್ರೀಯ ಸರಾಸರಿ ಶೇ.74.4 ಆಗಿದ್ದರೆ ಮುಸ್ಲಿಮರ ಸಾಕ್ಷರತೆಯ ಪ್ರಮಾಣ 57.3 ಮಾತ್ರ. ಉನ್ನತ ಶಿಕ್ಷಣ ಪಡೆದವರ ಪ್ರಮಾಣವಂತೂ ಶೋಚನೀಯ. ಅದರಲ್ಲೂ ಹೇಗೋ ಸೆಣಸಾಡಿ ಬೆರಳೆಣಿಕೆಯ ಕೆಲವರು ಸ್ಪರ್ಧಾ ಪರೀಕ್ಷೆ ಬರೆದೂ, ಉದ್ಯೋಗಾವಕಾಶಗಳು ಗಗನ ಕುಸುಮವಾದರೆ, ಶಿಕ್ಷಣ ಮುಂದುವರಿಸುವಲ್ಲಿ ಉತ್ಸಾಹ ಬಂದೀತಾದರೂ ಹೇಗೆ? ಯಾಕೆ ಹೀಗಾಗುತ್ತಿದೆ? ಸಮಸ್ಯೆಯ ಬೇರುಗಳು ಕೇವಲ ಸಮುದಾಯದಲ್ಲಿ ಮಾತ್ರ ಇದೆಯೇ, ಅಥವಾ ದೇಶದ ರಾಜಕೀಯ ಮತ್ತು ಸಾಂಸ್ಕøತಿಕ ಹಿತಾಸಕ್ತಿಗಳ ಉತ್ಪನ್ನವೇ ಎಂಬುದನ್ನೂ ಗಮನಿಸುವಂತಾಗಬೇಕು.

ಮುಸ್ಲಿಂ ಸಮುದಾಯದ ಶೈಕ್ಷಣಿಕ ಮಟ್ಟ ದಿನೇದಿನೇ ಕುಸಿಯುತ್ತಿದೆ. ಹೀಗಾಗದಂತಿರಲು ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಸುಧಾರಣಾ ಪ್ರಯತ್ನಗಳು ಸಾಧ್ಯವಾಗಬೇಕು ಎಂಬುದೇನೋ ನಿಜ. ಆದರೆ ಸಮುದಾಯದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವ ಉತ್ಸಾಹ ಮತ್ತು ಅಂತಹ ಸಾಧನೆಯ ಮೂಲಕ ವೈಯುಕ್ತಿಕ ಭವಿಷ್ಯವನ್ನು, ಸಾಮಾಜಿಕ ಹಿತವನ್ನು ಸಾಧ್ಯವಾಗಿಸುವ ಭರವಸೆ ಕುಂದುತ್ತಿರುವುದು ಹಿನ್ನಡೆಗೆ ಕಾರಣವಾಗುತ್ತಿರುವುದನ್ನೂ ಗಮನಿಸಬೇಕು.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಿಂತ ಮುಸ್ಲಿಮರ ಶೈಕ್ಷಣಿಕ ಮಟ್ಟವು ತೀರಾ ಕೆಳಗಿದೆ ಎಂದು ಸಾಚಾರ್ ವರದಿ ಅಂಕಿ ಅಂಶಗಳ ಸಮೇತ ತೋರಿಸಿ, ಮಾಡಿದ ಶಿಫಾರಸುಗಳು ನೆನೆಗುದಿಗೆ ಬಿದ್ದಿವೆ. ಹೀಗಿರುವಾಗ, ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ಅನುಸರಿಸಬೇಕಾದ ಸುಧಾರಣಾತ್ಮಕ ಕ್ರಮಗಳೇನು ಎಂಬುದನ್ನು ಹೊಸದಾಗಿ ಯೋಚಿಸಬೇಕಾಗಿದೆ.

ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಮಾತ್ರವಲ್ಲ, ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ತುಳಿತ ಇಲ್ಲವೆಂತಲ್ಲ. ಇತ್ತೀಚೆಗಷ್ಟೇ, ಎಲ್ಲ ಅರ್ಹತೆ ಮತ್ತು ಜ್ಯೇಷ್ಠತೆ ಇದ್ದರೂ, ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸ್ಸಾಗದ ನ್ಯಾಯಮೂರ್ತಿಯವರ ಅನರ್ಹತೆಗೆ ಕಾರಣವಾಗಿರುವುದು ಅವರಿಗಿರುವ ಮುಸ್ಲಿಂ ಹೆಸರಲ್ಲವೆಂದು ಹೇಳಲಾದೀತೇ? ಇನ್ನು ಮಾಧ್ಯಮ ಕ್ಷೇತ್ರದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಕಲ್ಪನೆಯನ್ನೂ ಮಾಡುವಂತಿಲ್ಲ. ಅಂದರೆ ಕ್ಷೇತ್ರದಲ್ಲಿ ಅರ್ಹ ಮುಸ್ಲಿಂ ಪತ್ರಕರ್ತರು ಇಲ್ಲವೆಂಬ ತೀರ್ಮಾನವನ್ನು ಯಾರು ಮಾಡಿಯಾರು.

ಅದಿರಲಿ, ದೇಶದ ಪ್ರಭುತ್ವ ವ್ಯವಸ್ಥೆಯ ಅಂಗರಕ್ಷಕನಾಗಿ ಮಾರ್ಪಟ್ಟಿರುವ ಮಾಧ್ಯಮ ಕ್ಷೇತ್ರವು ಮುಸ್ಲಿಮರ ಪಾಲಿಗಿಲ್ಲವಾದರೆ ಹೋಗಲಿ, ಯಾವಜಾತಿಸಮುದಾಯದ ಏಕಸ್ವಾಮ್ಯದಲ್ಲಿದೆ ಎಂಬುದು ಹೇಳಲೇಬೇಕಿಲ್ಲ. ಇಂತಹ ಬಿಕ್ಕಟ್ಟು, ಆತಂಕದ ವಾಸ್ತವಗಳಲ್ಲಿ ಮುಸ್ಲಿಂ ಸಮುದಾಯದ ಒಳಗಿನಿಂದ ಸುಧಾರಣೆಯಾಗಬೇಕಿದೆ, ನಿಜ. ಆದರೆ, ಅಜ್ಞಾತ ಅಸ್ತ್ರಗಳಿಂದ ಸಮುದಾಯದ ಚೈತನ್ಯವೇ ಉಡುಗಿ ಹೋಗುವಂತೆ ಎಸಗಲಾಗಿರುವ ಘಾತವನ್ನು ಸರಿಪಡಿಸುವುದು ಹೇಗೆ? ಇದು ಕೇವಲ ಒಳಗಿನಿಂದ ಸಾಧ್ಯವಾಗುವುದೋ ಅಥವಾ ಹೊರಗಿನ ಹೊಣೆಗಾರಿಕೆಯೂ ಇದೆಯೋ ಎಂಬುದನ್ನೂ ಕಂಡುಕೊಳ್ಳಲು ಸಾಧ್ಯವಾಗಬೇಕು. ಮುಸ್ಲಿಂ ಸಮುದಾಯದಲ್ಲಿ ಸುಧಾರಣೆಯ ಅಗತ್ಯವಂತೂ ಇದ್ದೇ ಇದೆ. ಆದರೆ ಇದು ಸಮುದಾಯದ ಹಿತದೃಷ್ಟಿಯಿಂದ ಎಂಬಂತೆ ಮಾಡುವ ಔದಾಂರ್iದ್ದಾಗಿರದೇ, ರಾಷ್ಟ್ರದ ಹಿತಾಸಕ್ತಿಯ ನೆಲೆಯಲ್ಲಿ ನಿರ್ಧರಿಸಲ್ಪಟ್ಟರೆ ಮಾತ್ರವೇ ಅದು ಪ್ರಾಮಾಣಿಕ ಮತ್ತು ಸಮರ್ಥನೀಯವಾದೀತು.

ಸಮುದಾಯದ ಚಿಂತಕರ ಹೊಣೆಗಾರಿಕೆ

ಮುಸ್ಲಿಂ ಸಮುದಾಯದಲ್ಲಿ ಮತ ಮೌಢ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಾಮುದಾಯಿಕ ಅಭದ್ರತೆಯ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಮತಶ್ರದ್ಧೆಯನ್ನು ಭದ್ರಗೊಳಿಸುವ ಕಾರ್ಯವನ್ನು ಮುಸ್ಲಿಂ ಮೂಲಭೂತವಾದ ಮಾಡುತ್ತಲೇ ಇದೆ. ಆಧುನಿಕ ಶಿಕ್ಷಣದ ಬದಲಿಗೆಮದ್ರಸಾಗಳ ಮೂಲಕ ಧಾರ್ಮಿಕ ಶಿಕ್ಷಣವನ್ನು ನೀಡಲು ಮತಾಂಧ ಸಂಸ್ಥೆಗಳು ಮುಂದಾಗುತ್ತಿವೆ. ಇಂತಹ ಸಂದರ್ಭದಲ್ಲಿ ಮುಸ್ಲಿಮೇತರರಿಗಿಂತ ಮುಸ್ಲಿಂ ಉದಾರವಾದಿ ಹಾಗೂ ವಿಚಾರವಾದಿಗಳ ಪಾತ್ರ ಬಹು ಮಹತ್ವದ್ದು.

ಯಾವುದೇ ಆತಂಕಿತ ಸಮುದಾಯವು ಎಷ್ಟೇ ಹಿತದ ಸಲಹೆಯನ್ನು ನೀಡಿದರೂ ತಾನು ಅನ್ಯ ಎಂದು ಭಾವಿಸಿದವರಿಗಿಂತತನ್ನವರೆಂದು ಪರಿಗಣಿಸುವ ಧಾರ್ಮಿಕ ಅನನ್ಯತೆಯನ್ನು ಮಾನ್ಯ ಮಾಡುವುದೇ ಹೆಚ್ಚು. ಹಿನ್ನೆಲೆಯಲ್ಲಿ ಮುಸ್ಲಿಂ ಅನನ್ಯತೆಯನ್ನು ಹೊಂದಿರುವ ಚಿಂತಕರು ಸಮುದಾಯದ ಒಳಸ್ತರಗಳಲ್ಲಿ ಪ್ರವೇಶ ಪಡೆದು ಸಮುದಾಯ ಸುಧಾರಣೆಯ ಹೊಣೆಗಾರಿಕೆ ನಿಭಾಯಿಸುವುದು ಅದು ಹೇಗೆ ರಾಷ್ಟ್ರೀಯವೋ ಹಾಗೆಯೇ ನೈತಿಕ ಕರ್ತವ್ಯವೂ ಆಗಿದೆ, ಮಾತ್ರವಲ್ಲ, ಧಾರ್ಮಿಕ ಸಂವೇದನೆಗೆ ತಾಕುವ ನಿಟ್ಟಿನಲ್ಲಿ ಹೇಳುವುದಾದರೆ ಅದು ತಮ್ಮ ಧಾರ್ಮಿಕ ಕರ್ತವ್ಯದಲ್ಲಿ ಮೊದಲನೆಯದ್ದೂ ಆಗಿರುತ್ತದೆ.

ದೇಶ, ಸರಕಾರ ಯಾವುದೇ ಇರಲಿ, ದೇಶದ ದುಡಿಯುವ ಜನತೆಯ ಬದುಕಿಗೆ ಭದ್ರತೆಯನ್ನು ನೀಡುವುದು, ದಮನಿತರನ್ನು ವಿಮೋಚನೆಗೊಳಿಸುವುದು, ಅಬಲ, ಅಲ್ಪಸಂಖ್ಯಾತ ಸಮುದಾಯಗಳಿಗೆ ರಕ್ಷಣೆಯನ್ನು ನೀಡುವುದು ಆಯಾ ರಾಷ್ಟ್ರೀಯ ಹಿತಾಸಕ್ತಿಯ ಅಧ್ಯತೆಯ ಕ್ರಿಯೆಯಾಗಿರುತ್ತದೆ. ಅಂತೆಯೇ ಭಾರತದಲ್ಲಿ ದೇಶದ ಎಲ್ಲ ರೈತ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವುದು, ದಲಿತ, ಮಹಿಳಾ ಜನ ವಿಭಾಗಗಳ ಲಿಂಗಾಧಾರಿತ, ಜಾತಿ ಆಧಾರಿತ ದಮನವನ್ನು ಕೊನೆಗೊಳಿಸುವುದು ಹೇಗೆ ರಾಷ್ಟ್ರಹಿತಾಸಕ್ತಿಯ ಕಾರ್ಯವಾಗುವುದೋ ಹಾಗೆಯೇ, ಅಭದ್ರ, ಆತಂಕಿತ, ಧಾರ್ಮಿಕ ಅನನ್ಯತೆ ಮೂಲದ ಸಂತ್ರಸ್ತ ಸಮುದಾಯದ ಭದ್ರತೆ ಮತ್ತು ಪ್ರಗತಿಯನ್ನು ಸಾಧ್ಯವಾಗಿಸುವುದೂ ರಾಷ್ಟ್ರೀಯ ಕರ್ತವ್ಯವೇ ಆಗುತ್ತದೆ. ಕರ್ತವ್ಯವನ್ನು ಪ್ರಭುತ್ವ ಮನಗಾಣದೇ ಹೋದರೆ ಅದು ಪಾತಕ. ಸಾಧ್ಯತೆಗೆ ಒಳಪಡದಿದ್ದರೆ ಅದು ಘಾತಕ.

ಮುಸ್ಲಿಮರನ್ನೂ ಒಳಗೊಂಡಂತೆ ಯಾವೊಂದು ಜಾತಿ ಧಾರ್ಮಿಕ ಸಮುದಾಯವು ಅಭಿವೃದ್ಧಿಯಿಂದ ವಂಚಿತಗೊಳ್ಳದಿರುವುದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಮಹಾಕಾರ್ಯ. ಕಾರ್ಯದಲ್ಲಿ ಆಯಾ ಸಮುದಾಯವು ಅದರಲ್ಲೂ ಮುಸ್ಲಿಂ ಸಮುದಾಯವು ಸ್ವಯಂ ಇಚ್ಛೆಯಿಂದ ತೆರೆದುಕೊಳ್ಳುವುದು, ಅದರ ವಿವೇಕ ಮತ್ತು ಸ್ವಹತ್ಯೆಯಿಂದ ಬಚಾವಾಗುವ ಎಚ್ಚರದ ಆಯ್ಕೆಯಾಗಬಲ್ಲದು.

*ಲೇಖಕರು ಮೂಲತಃ ಹೂವಿನಹಡಗಲಿಯವರು; ಕವಿ, ಪತ್ರಕರ್ತ, ರಂಗ ನಿರ್ದೇಶಕ, ಮತ್ತು ಹೋರಾಟಗಾರ. ಜಾಲಿ ಹೂಗಳ ನಡುವೆ, ಜೀವ ಬಂತು ಹಾದಿಗೆ, ಅಕ್ಕ ಸೀತಾ ನಾನು ನಿನ್ನಂತೆ ಶಂಕಿತ, ಉರಿಯ ಬೆಳಕು ಬಂಗಾಳ, ಸಮಾಜವಾದಿ ಹೋರಾಟಗಾರರ ಸಂದರ್ಶನ ಇವರ ಕೃತಿಗಳು. ಈಗ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ವಾಸ.

Leave a Reply

Your email address will not be published.