ದಲಿತ ಚಳವಳಿಗಾರರು ಮರೆತ ಅಂಬೇಡ್ಕರ್ ಆರ್ಥಿಕ ಚಿಂತನೆ

ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ದಲಿತನಾಗಿ ಹುಟ್ಟಿರದಿದ್ದರೆ ಅಥವಾ ದಲಿತ ನೇತಾರನಾಗಿ ಹೊರಹೊಮ್ಮದಿದ್ದರೆ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ನಮ್ಮನ್ನು ಕಾಡಿದ್ದುಂಟು. 1920ರ ದಶಕದಲ್ಲಿಯೇ ಅಮೆರಿಕೆಯ ಕೊಲಂಬಿಯಾ ಹಾಗೂ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎರಡರಿಂದಲೂ ಡಾಕ್ಟರೇಟ್ ಪಡೆದಿದ್ದ ಅಂಬೇಡ್ಕರ್, 20ನೇ ಶತಮಾನದ ಅಗ್ರಗಣ್ಯ ಅರ್ಥಶಾಸ್ತ್ರಜ್ಞರಾಗಿ ಹೆಸರು ಪಡೆಯುತ್ತಿದ್ದರು. ಕೇವಲ ಭಾರತದಲ್ಲಿಯೇ ಅಲ್ಲ ಬದಲಿಗೆ ಇಡೀ ವಿಶ್ವದಲ್ಲಿಯೇ ಅತ್ಯಂತ ಗೌರವಾನ್ವಿತ ಹಣಕಾಸು ತಜ್ಞರಾಗುತ್ತಿದ್ದರು. ನಂತರದ ದಶಕಗಳಲ್ಲಿ ಅರ್ಥಶಾಸ್ತ್ರದಲ್ಲಿ ಅಂಬೇಡ್ಕರ್‍ರವರ ಸಾಧನೆ ಕಡಿಮೆಯೆಂದೇನೂ ಅಲ್ಲ. ಆದರೆ ಒಮ್ಮೆ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಆಗಿ ತದನಂತರ ಭಾರತದ ದಲಿತ ಜನಾಂಗದ ನೇತೃತ್ವ ವಹಿಸಿಕೊಂಡ ಮೇಲೆ ಅಂಬೇಡ್ಕರ್ ಅವರ ಅರ್ಥಶಾಸ್ತ್ರ ಪರಿಣತಿ ಹಿನ್ನೆಲೆಗೆ ಸರಿಯಿತು ಅಷ್ಟೇ.

ಅಮೆರಿಕ ಹಾಗು ಇಂಗ್ಲೆಂಡಿನಲ್ಲಿ 1920ರ ಮತ್ತು 1930ರ ದಶಕಗಳಲ್ಲಿ ಕಮ್ಯುನಿಸ್ಟ್ ವಾದದ ಹಾಗೂ ಸಮಾಜವಾದದ ಬಗ್ಗೆ ತೀವ್ರತರವಾದ ಚರ್ಚೆ ನಡೆದಿತ್ತು. ಅದೇ ತೆರನಾಗಿ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಬಂಡವಾಳಶಾಹಿ ವಾದದ ಬಗೆಗಿನ ಚರ್ಚೆಗೆ ಕೂಡಾ ಅಂಬೇಡ್ಕರ್ ಸಾಕ್ಷಿಯಾಗಿದ್ದರು. ನಂತರದ ದಿನಗಳಲ್ಲಿ ಲೆನಿನ್-ಸ್ಟಾಲಿನ್ನರ ಸೋವಿಯತ್ ರಾಷ್ಟ್ರ ಹಾಗೂ 1950ರ ದಶಕದ ಚೀನಿ ಕಮ್ಯುನಿಸ್ಟ್ ಪದ್ಧತಿಗಳನ್ನು ಅವರು ಆಳವಾಗಿ ಅಧ್ಯಯನ ಮಾಡಿದ್ದರು. ಈ ಆಡಳಿತ ಪದ್ಧತಿಗಳ ಸಾಧಕ-ಬಾಧಕಗಳ ಬಗ್ಗೆ ಮುಚ್ಚುಮರೆಯಿಲ್ಲದಂತೆ ಮಾತನಾಡುತ್ತಿದ್ದ ಅಂಬೇಡ್ಕರ್ ಕ್ಯಾಪಿಟಲಿಸಂ ಬಗ್ಗೆ ಕೂಡಾ ಅಷ್ಟೇ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಎರಡು ಬಗೆಯಲ್ಲಿ ಅಂಬೇಡ್ಕರ್ ವಿಚಾರಧಾರೆಗೆ ಅಪಚಾರವಾಗುವ ಬೆಳವಣಿಗೆಗಳನ್ನು ನಾವು
ಕಂಡಿದ್ದೇವೆ. (1) ಅಂಬೇಡ್ಕರ್ ಅವರು ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಒಲವುಳ್ಳವರಾಗಿದ್ದರು ಅಥವಾ ಕಮ್ಯುನಿಸ್ಟ್ ಸಿದ್ಧಾಂತದ ಬಗ್ಗೆ ಸಹಾನುಭೂತಿಯುಳ್ಳವರಾಗಿದ್ದರು ಎಂಬುದು ಮೊದಲ ಅಪಪ್ರಚಾರ. (2) ಕಮ್ಯುನಿಸ್ಟ್ ಸಿದ್ಧಾಂತವುಳ್ಳ ಪತ್ರಿಕೆಗಳು ಮತ್ತು ಸಂಘಸಂಸ್ಥೆಗಳು ಅಂಬೇಡ್ಕರ್ ಭಾವಚಿತ್ರ ಬಳಸಿಕೊಳ್ಳುವುದರಿಂದ ಒಳಗೊಂಡು ಅಂಬೇಡ್ಕರ್ ವಿಚಾರಧಾರೆಗೂ ಕಮ್ಯುನಿಸ್ಟ್ ವಿಚಾರಧಾರೆಗೂ ಸಾಮ್ಯ ಇದೆಯೆಂದು ಸಾಧಿಸಹೊರಟಿರುವುದು ಎರಡನೆಯ ಅಪಪ್ರಚಾರ.

ಮೊದಲನೆಯ ಅಪಪ್ರಚಾರವನ್ನು ಅಂಬೇಡ್ಕರ್ ಮೊಮ್ಮಳಿಯ ಆನಂದ ತೇಲ್ತುಂಬ್ಡೆ ಹಾಗೂ ಮುಂಬಯಿಯ ಎಕನಾಮಿಕ್ ಮತ್ತು ಪೊಲಿಟಿಕಲ್ ವೀಕ್ಲಿ ಮಾಡುತ್ತಿದ್ದರೆ ಎರಡನೆಯ ಅಪಪ್ರಚಾರವನ್ನು ಹಲವಾರು ದೇಸಿ ಸಂಘಸಂಸ್ಥೆಗಳು ಹಾಗು ಕಮ್ಯುನಿಸ್ಟ್ ಸಂಘಟನೆಗಳು
ಮಾಡುತ್ತಿವೆ. ಈ ಎರಡೂ ಬೆಳವಣಿಗೆಗಳು ಖಂಡನಾರ್ಹ. ಕಮ್ಯುನಿಸ್ಟ್ ಸಿದ್ಧಾಂತ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಅಂಬೇಡ್ಕರ್‍ರವರು ಕಮ್ಯುನಿಸ್ಟ್ ಸಿದ್ಧಾಂತದ ಹಾಗೂ ಆಡಳಿತಪದ್ಧತಿಯ ಬಗ್ಗೆ ಎಳ್ಳಷ್ಟೂ ಸಹಾನುಭೂತಿ ವ್ಯಕ್ತಪಡಿಸಿರಲಿಲ್ಲ. ಬದಲಾಗಿ ಈ ಸಿದ್ಧಾಂತದಿಂದ ದಲಿತ ಸಮಾಜಕ್ಕೆ ಹಾನಿಯೇ ಹೊರತು ಯಾವುದೇ ಒಳಿತು ಆಗಲಾರದೆಂದು ಗಟ್ಟಿಯಾಗಿ ನಂಬಿದ್ದರು.

ತಮ್ಮ ರಿಪಬ್ಲಿಕನ್ ಪಕ್ಷವು ಎಂದಿಗೂ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಖ್ಯ ಮಾಡಲಾರದೆಂದೂ ಹಾಗೂ “ಅದಕ್ಕೆ ಸರಳ ಕಾರಣವೇನೆಂದರೆ ನನಗೆ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದಿರುವುದು” ಎಂದು ಅಂಬೇಡ್ಕರ್ ಹೇಳಿದ್ದರು. “ಭಾರತೀಯ ಕಮ್ಯುನಿಸ್ಟ್ ಪಕ್ಷವು ಮೊದಲು ಡಾಂಗೆ ಮತ್ತಿತರ ಬ್ರಾಹ್ಮಣ ಹುಡುಗರ ಕೈಯಲ್ಲಿತ್ತು. ಅವರು ಮರಾಠರು ಮತ್ತು ಪರಿಶಿಷ್ಟ ಜಾತಿಯವರನ್ನು ತಮ್ಮೆಡೆಗೆ ಸೆಳೆಯಲು ಪ್ರಯತ್ನಿಸಿದ್ದರು. ಆದರೆ ಅವರಿಗೆ ಮಹಾರಾಷ್ಟ್ರದಲ್ಲಿ ಗೆಲುವು ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಬ್ರಾಹ್ಮಣ ವಟುಗಳಾಗಿದ್ದರು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಕಟ್ಟುವ ಜವಾಬ್ದಾರಿಯನ್ನು ಅವರಿಗೆ ಕೊಟ್ಟು ರಷ್ಯನ್ನರು ತಪ್ಪು ಮಾಡಿದ್ದರು. ರಷ್ಯನ್ನರಿಗೆ ಭಾರತದಲ್ಲಿ ಕಮ್ಯುನಿಸಂ ಬೇಕಿರಲಿಲ್ಲ ಅಥವಾ ಅವರು ಇದನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ” ಎಂದೂ ಅಂಬೇಡ್ಕರ್ ಹೇಳಿದ್ದಾರೆ.

ಭಾರತೀಯ ಕಮ್ಯುನಿಸ್ಟರಿಗೆ ಕೂಡಾ ಅಂಬೇಡ್ಕರ್ ರವರ ಬಗ್ಗೆ ಯಾವುದೇ ಪ್ರೀತಿ ಉಕ್ಕಿದಂತೆ ಕಾಣುವುದಿಲ್ಲ. 1952ರ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕ ಎಸ್.ಎ.ಡಾಂಗೆಯವರು ಕೇಂದ್ರ ಮುಂಬಯಿಯ ಮೀಸಲು ಕ್ಷೇತ್ರದಲ್ಲಿ ಅಂಬೇಡ್ಕರ್‍ರವರನ್ನು ಸೋಲಿಸಲು
ಕರೆಕೊಟ್ಟಿದ್ದರು. ಅಂಬೇಡ್ಕರ್‍ಗೆ ಮತ ನೀಡುವುದಕ್ಕಿಂತ ತಮ್ಮ ಮತವನ್ನು ಹಾಳು ಮಾಡುವುದೇ ಮೇಲೆಂದು ತಮ್ಮ ಕಾರ್ಯಕರ್ತರಿಗೆ ತಿಳಿಹೇಳಿದ್ದರು. 1952ರ ಆ ಚುನಾವಣೆಯಲ್ಲಿ ಸೋತ ಅಂಬೇಡ್ಕರ್ ತಮ್ಮ ಸೋಲಿಗೆ ಕಮ್ಯುನಿಸ್ಟ್ ವಿರೋಧಿ ಪ್ರಚಾರವೇ ಕಾರಣವೆಂದು ದೂರಿದ್ದರು.

ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ಭಾರತದ ಸಂವಿಧಾನವನ್ನು ಹೀಯಾಳಿಸುವುದನ್ನು ಕೂಡಾ ಅಂಬೇಡ್ಕರ್ ಪ್ರತಿಭಟಿಸಿದ್ದರು. “ಭಾರತ ಸಂವಿಧಾನವು ಕೆಟ್ಟ ಸಂವಿಧಾನವೇನಲ್ಲ. ಆದರೆ ಕಮ್ಯುನಿಸ್ಟರಿಗೆ ತಮ್ಮ ಪಕ್ಷದ ಕಾರ್ಯಕರ್ತರ ಸರ್ವಾಧಿಕಾರದ ಸಂವಿಧಾನ ಬೇಕಿತ್ತು ಅಥವಾ ಅವರಿಗೆ ಸಂಸದೀಯ ಪ್ರಜಾಪ್ರಭುತ್ವದ ಸಂವಿಧಾನ ಬೇಕಿರಲಿಲ್ಲ.” ಎಂದೂ ಹೇಳಿದ್ದರು. ಸೋಶಿಯಲಿಸ್ಟರಿಗೆ ಕೂಡಾ ಸಂವಿಧಾನ ಒಪ್ಪದೇ ಹೋಗಿತ್ತು. ಅವರಿಗೆ ತಾವು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಪರಿಹಾರ ನೀಡದೆಯೂ ಖಾಸಗಿ ಆಸ್ತಿಗಳನ್ನು ರಾಷ್ಟ್ರೀಕರಣ ಮಾಡುವುದು ಬೇಕಿತ್ತು.

ಎರಡನೆಯದಾಗಿ ಅವರಿಗೆ ಮೂಲಭೂತ ಹಕ್ಕುಗಳನ್ನು ಯಾವುದೇ ನಿರ್ಬಂಧನೆಗೆ ಒಳಪಡಿಸುವುದು ಬೇಕಿರಲಿಲ್ಲ. ಏಕೆಂದರೆ ಸೋಶಿಯಲಿಸ್ಟರೇನಾದರೂ ಅಧಿಕಾರಕ್ಕೆ ಬರದಿದ್ದರೆ ಸರ್ಕಾರವನ್ನು ಅನಿರ್ಬಂಧಿತವಾಗಿ ಟೀಕಿಸುವ ಹಾಗೂ ಕಿತ್ತುಹಾಕುವ ಸ್ವಾತಂತ್ರ್ಯ ಅವರಿಗೆ ಬೇಕಿತ್ತು ಎಂದು ಅಂಬೇಡ್ಕರ್ ಟೀಕಿಸಿದ್ದರು. ಕಮ್ಯುನಿಸ್ಟರು ತಮ್ಮ ಗುರಿ ಮುಟ್ಟಲು ಹಿಂಸಾಚಾರಕ್ಕೆ ಇಳಿಯುವುದನ್ನು ಕಟುವಾಗಿ ಟೀಕಿಸಿದ್ದ ಅಂಬೇಡ್ಕರ್ ಕಮ್ಯುನಿಸ್ಟರು ಜೀವನಮೌಲ್ಯಗಳನ್ನು ಗಾಳಿಗೆ ತೂರಿದ್ದನ್ನು ಟೀಕಿಸಿದ್ದರು. “ಅವರು ಖಾಸಗಿ ಆಸ್ತಿ ಹಕ್ಕನ್ನು ಹಾಳುಗೆಡವಿದ್ದರು. ತಮ್ಮ  ಗುರಿ ಮುಟ್ಟಲು ಅವರೆಷ್ಟು ಜನರನ್ನು ಕೊಂದಿದ್ದಾರೆ..? ಯಾವುದೇ ಪ್ರಾಣಹಾನಿಯಾಗದಂತೆ ಅವರು ಖಾಸಗಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿರಲಿಲ್ಲವೇ..?” ಎಂದು ಅಂಬೇಡ್ಕರ್ ಪ್ರಶ್ನಿಸಿದ್ದರು. ಕಮ್ಯುನಿಸಂನಲ್ಲಿ ಪಕ್ಷದ ಕಾರ್ಯಕರ್ತರ ಸರ್ವಾಧಿಕಾರವನ್ನು ಅವರು ಟೀಕಿಸಿದ್ದರು. “ಸರ್ವಾಧಿಕಾರವೆಂದರೆ ಸ್ವಾತಂತ್ರ್ಯಹೀನತೆ ಅಥವಾ ಸಂಸದೀಯ ಪ್ರಜಾಪ್ರಭುತ್ವವಿಲ್ಲದಿರುವುದು ಎಂದು ಹೇಳುತ್ತಾರೆ. ಆದರೆ ಅದು ತಪ್ಪು. ಪ್ರಜಾಪ್ರಭುತ್ವದಲ್ಲಿಯೂ ಸ್ವಚ್ಛಂದತೆಯಿಲ್ಲ. ಇದುವೇ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಮೂಲ ಭಿನ್ನತೆ. ಪ್ರಜಾಪ್ರಭುತ್ವದಲ್ಲಿ ನಿಮಗೆ ಕಾನೂನು ಪಾಲಿಸಬೇಕಾದ ಕರ್ತವ್ಯದ ಜೊತೆಗೆ ಅದನ್ನು ಟೀಕಿಸುವ ಸ್ವಾತಂತ್ರ್ಯ ಕೂಡಾ ನೀಡಲಾಗಿದೆ. ಆದರೆ ಸರ್ವಾಧಿಕಾರದಲ್ಲಿ ನೀವು ಕೇವಲ ಕಾನೂನು ಪಾಲನೆಯ ಕರ್ತವ್ಯ ಹೊಂದಿರುತ್ತೀರಿ, ಅದನ್ನು ಟೀಕಿಸುವ ಸ್ವಾತಂತ್ರ್ಯ ನಿಮ್ಮ ಬಳಿಯಿರುವುದಿಲ್ಲ” ಎಂದು ಅಂಬೇಡ್ಕರ್ ತಿಳಿ ಹೇಳಿದ್ದರು.

  • ಅಂಬೇಡ್ಕರ್‍ರವರ ಆರ್ಥಿಕ ಚಿಂತನೆಯನ್ನು ಅವರ ಎಲ್ಲ ಪುಸ್ತಕಗಳಲ್ಲಿ ಕಾಣಬಹುದು. ಅವರ ಡಾಕ್ಟೊರಲ್ ಥೀಸಿಸ್‍ನಿಂದ ಹಿಡಿದು 1956ರಲ್ಲಿ ಅವರು ರಚಿಸಿದ ‘ಬುದ್ಧ ಅಥವಾ ಕಾರ್ಲ್‍ಮಾರ್ಕ್ಸ್’ ಎಂಬ ಪ್ರಬಂಧದವರೆಗೂ ಎಲ್ಲ ಬರಹಗಳಲ್ಲಿ ಆಳವಾದ ಚಿಂತನೆಯುಳ್ಳ ಅರ್ಥಶಾಸ್ತ್ರಜ್ಞನೊಬ್ಬನ ಪರಿಚಯವಾಗುತ್ತದೆ. ಅವರ ಆರ್ಥಿಕ ಚಿಂತನೆಯ ಕೆಲವು ಹೊಳಹುಗಳು ಇಲ್ಲಿವೆ. ವ್ಯಾಪಕ ಮತ್ತು ಕ್ಷಿಪ್ರ ಕೈಗಾರೀಕರಣವೇ ಕೃಷಿ ಸಮಸ್ಯೆಗೆ ಪರಿಹಾರವೆಂದು ಅಂಬೇಡ್ಕರ್ ನಂಬಿದ್ದರು. ಕೈಗಾರೀಕರಣದಿಂದ ಕೃಷಿ ಅವಲಂಬಿತರ ಸಂಖ್ಯೆ ಕಡಿಮೆಯಾಗುವುದಲ್ಲದೆ ಕೃಷಿ ಹಿಡುವಳಿಗಳ ಪಾಲಾಗುವಿಕೆಯೂ ತಪ್ಪುವ ಸಂಭವವಿದೆ ಎಂದು ಅವರು ಬರೆದಿದ್ದಾರೆ. ಕೈಗಾರೀಕರಣದಿಂದ ಹೆಚ್ಚಿನ ಬಂಡವಾಳ ಶೇಖರಣೆಯಾಗಿ ಕೃಷಿಯಲ್ಲಿಯೂ ಬಂಡವಾಳ ಹೂಡಿಕೆ ಹಾಗೂ ಯಾಂತ್ರೀಕರಣ ಸಾಧ್ಯವಾಗುತ್ತದೆ. ಇದರಿಂದ ಸಹಜವಾಗಿ ದೊಡ್ಡ ಹಿಡುವಳಿಗಳಿಗೆ ಬೇಡಿಕೆ ಬರುತ್ತದೆ ಎಂದೂ ಅಂಬೇಡ್ಕರ್ ಹೇಳಿದ್ದಾರೆ.
  •  ಕೃಷಿ ವಲಯವು ಅರೆ-ಉದ್ಯೋಗದ ಪಾರ್ಶಿಕ ನಿರುದ್ಯೋಗವನ್ನು ಮರೆಮಾಚುತ್ತಿದೆಯೆಂದು ಮೊಟ್ಟಮೊದಲಿಗೆ ಅಂಬೇಡ್ಕರ್ ಹೇಳಿದ್ದರು. 1954ರಲ್ಲಿ ನೊಬೆಲ್ ಪುರಸ್ಕೃತ ಅರ್ಥರ್ ಲುಯಿಸ್‍ರವರು ಈ “ಅಂಡರ್ ಎಂಪ್ಲಾಯ್‍ಮೆಂಟ್” ಪರಿಣಾಮವನ್ನು ವಿಶದಪಡಿಸುವ ದಶಕಗಳ ಮೊದಲಿಗೆ ಅಂಬೇಡ್ಕರ್ ಈ ಅರೆ-ಉದ್ಯೋಗದ ಅಥವಾ “ಮಾರುವೇಷದ ನಿರುದ್ಯೋಗ”ವನ್ನು ತಮ್ಮ 1918ರ ಪ್ರಬಂಧದಲ್ಲಿ ಮಂಡಿಸಿದ್ದರು. ನಂತರ 1927ರಲ್ಲಿ ಬಾಂಬೆ ನಗರಸಭೆಯು ಆಸ್ತಿಹಕ್ಕನ್ನು ಕೇವಲ ಮೊದಲ ಸಂಜಾತ ಮಗನಿಗೆ ಕೊಡಬೇಕೆನ್ನುವ ಪ್ರಸ್ತಾಪವನ್ನೂ ವಿರೋಧಿಸುತ್ತಾ ಇದು ಕೆಲವೇ ಕೆಲವು ಶ್ರೀಮಂತ ಜಮೀನ್ದಾರರನ್ನು ಹಾಗೂ ದೊಡ್ಡಸಂಖ್ಯೆಯ ಭೂವಂಚಿತ ದರಿದ್ರರನ್ನು ನಿರ್ಮಿಸುತ್ತದೆ ಎಂದೂ ಹೇಳಿದ್ದರು.
  •  ಕೃಷಿ ವಲಯದ ಬಿಕ್ಕಟ್ಟಿಗೆ ಪರಿಹಾರವಾಗಿ ಅಂಬೇಡ್ಕರ್‍ರವರು ಸಹಕಾರಿ ಕೃಷಿ (ಕೋಆಪರೇಟಿವ್ ಫಾರ್ಮಿಂಗ್) ಪ್ರತಿಪಾದಿಸಿದ್ದರು. ಇದರಿಂದ ರೈತರು ಆಸ್ತಿಯ ಹಕ್ಕನ್ನು ಉಳಿಸಿಕೊಳ್ಳುವುದಲ್ಲದೆ ದೊಡ್ಡಮಟ್ಟದಲ್ಲಿ ಕೃಷಿಯನ್ನು ಉದ್ಯಮದಂತೆ ನಡೆಸಲು ಅನುಕೂಲವಾಗುತ್ತದೆಯೆಂದು ನಂಬಿದ್ದರು. ನಂತರದಲ್ಲಿ 50ರ ದಶಕದಲ್ಲಿ ಕಲೆಕ್ಟಿವ್ ಫಾರ್ಮಿಂಗ್ ಪದ್ಧತಿಯ ಪ್ರಯೋಗವನ್ನು ಬಯಸಿದರೂ ಖಾಸಗಿ ಆಸ್ತಿಯ ಹಕ್ಕನ್ನು ಬಿಟ್ಟುಕೊಡಲು ಒಪ್ಪದೇಹೋದರು.
  • ಅಂಬೇಡ್ಕರ್ ರವರು ವ್ಯಾಪಕ ಕೈಗಾರೀಕರಣ ಮತ್ತು ನಗರೀಕರಣದ ಪ್ರತಿಪಾದಿಯಾಗಿದ್ದರು. ಬಂಡವಾಳಶಾಹಿಯ ಅನಾಹುತಗಳ ಬಗ್ಗೆಯೂ ಜಾಗರೂಕತೆ ವಹಿಸಿದ್ದರು. ಅನಿಯಂತ್ರಿತ ಬಂಡವಾಳಶಾಹಿಯು ದಮನದ ಮತ್ತು ಶೋಷಣೆಯ ಮಾಧ್ಯಮವಾಗುವ ಸಾಧ್ಯತೆಯನ್ನು ಅವರು ಎಚ್ಚರಿಸಿದ್ದರು. ಇದಕ್ಕಾಗಿಯೇ ಅವರು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಜೊತೆಯಲ್ಲಿ ನಾಗರೀಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ-ಆರ್ಥಿಕ ನ್ಯಾಯಕ್ಕಾಗಿ ಹಲವು ವಿಶೇಷ ಕಲಮುಗಳನ್ನು ಸೇರಿಸಿದ್ದರು.
  • ಅಂಬೇಡ್ಕರ್‍ರವರು ವೈಯಕ್ತಿಕ ಸ್ವಾತಂತ್ರ್ಯದ ಅತಿಮುಖ್ಯ ಪ್ರಚಾರಕರಾಗಿದ್ದರೂ ಕಡಿಮೆ ಸರ್ಕಾರಿ ಹಸ್ತಕ್ಷೇಪದ ಪರವಾಗಿರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಹಿಂದೆಗೆತದಿಂದ ಜಮೀನ್ದಾರರಿಗೆ ಸ್ವಾತಂತ್ರ್ಯ ಸಿಗಬಹುದೆಂದು ಹೆದರಿಕೆ ವ್ಯಕ್ತಪಡಿಸಿದ್ದರು. ಅಭಿವೃದ್ಧಿಶೀಲ ಆರ್ಥಿಕ ಪರಿಸ್ಥಿತಿಯಲ್ಲಿ ಬಂಡವಾಳಶಾಹಿ ಹಾಗೂ ಕಾರ್ಮಿಕರ ಮತ್ತು ಜಮೀನ್ದಾರ ಹಾಗೂ ಕೂಲಿಕಾರರ ನಡುವೆ ಸರ್ಕಾರಿ ಹಸ್ತಕ್ಷೇಪದ ಅಗತ್ಯವನ್ನು ಒತ್ತಿಹೇಳಿದ್ದರು. ಜೊತೆಗೆ ಕೆಲವು ಪ್ರಮುಖ ಕೈಗಾರಿಕೆಗಳನ್ನು ಸರ್ಕಾರಿವಲಯದಲ್ಲಿಯೇ ಇಟ್ಟುಕೊಳ್ಳುವುದನ್ನು ಅವರು ಬೆಂಬಲಿಸಿದ್ದರು. ಈ ಸೀಮಿತ ವಿಷಯದಲ್ಲಿ ಅಂಬೇಡ್ಕರ್ ಹಾಗೂ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ನಡುವೆ ವೈಚಾರಿಕ ಸಾಮ್ಯ ಇತ್ತು.
  • ಖಾಸಗಿ ಸ್ವತ್ತಿನ ವ್ಯಾಮೋಹವು ದುಃಖ ಹಾಗೂ ನೋವನ್ನು ತಂದುಕೊಡುವ ವಿಷಯದಲ್ಲಿ ಅಂಬೇಡ್ಕರ್‍ರವರು ಬುದ್ಧನ ಹಾಗೂ ಕಾರ್ಲ್‍ಮಾಕ್ರ್ಸ ಸಿದ್ಧಾಂತವನ್ನು ತುಲನೆ ಮಾಡಿದ್ದರು. ಆದರೆ ಬುದ್ಧಧರ್ಮವು ಈ ವ್ಯಾಮೋಹದಿಂದ ದೂರವಾಗಲು ಮಾನವನ
    ಪರಿವರ್ತನೆ ಬಯಸಿದರೆ ಮಾರ್ಕ್ಸ್ ವಾದವು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರ ಸರ್ವಾಧಿಕಾರದಿಂದ ಈ ವ್ಯಾಮೋಹವನ್ನು ದೂರಮಾಡಲು ಬಯಸಿದೆಯೆಂದು ಹೇಳಿದ್ದರು. ನಂತರದಲ್ಲಿ ಮಾಕ್ರ್ಸ್‍ವಾದವು ಮಾನವಜೀವದ ಮೌಲ್ಯವನ್ನು ಕಡೆಗಣಿಸುತ್ತಿದೆಯೆಂದು ಅಂಬೇಡ್ಕರ್ ಬೌದ್ಧಧರ್ಮಕ್ಕೆ ಶರಣಾಗಿದ್ದರು.
  •  ಅಂಬೇಡ್ಕರ್ ರವರು ಸಂವಿಧಾನದಲ್ಲಿ ‘ಸೋಶಿಯಲಿಸಂ’ ಪದವನ್ನು ಸೇರಿಸುವ ವಿರೋಧಿಯಾಗಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಈ ಸಮಾಜವಾದಿ ಪದವನ್ನು ತಿದ್ದುಪಡಿಯೊಂದಿಗೆ 1976ರಲ್ಲಿ ಸೇರ್ಪಡೆ ಮಾಡಲಾಗಿತ್ತು. ಅಂಬೇಡ್ಕರ್‍ರವರ ಇಂದಿನ ಶಿಷ್ಯ ಪೀಳಿಗೆಯ ಬಹುತೇಕರಲ್ಲಿ ಆರ್ಥಿಕ ಚಿಂತನೆಯ ಬಗ್ಗೆ ಸ್ಪಷ್ಟತೆಯಿಲ್ಲದಿರುವುದು ದುರದೃಷ್ಟದ ಸಂಗತಿ. ಖಾಸಗಿ ಆಸ್ತಿಯ ಹಕ್ಕು, ಮುಕ್ತ ಮಾರುಕಟ್ಟೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತಿತರ ಲಿಬರಲ್ ಚಿಂತನೆಯ ಅಂಬೇಡ್ಕರ್‍ರವರನ್ನು ಕೇವಲ ಮೀಸಲಾತಿಯ ಪ್ರವಾದಿಯಾಗಿ ಮಾಡಿರುವುದು ಅತೀವ ದುಃಖದ ಸಂಗತಿ. 20ನೇ ಶತಮಾನದ ಅತ್ಯಂತ ಮೇಧಾವಿ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದ ಅಂಬೇಡ್ಕರ್‍ರವರ ಆರ್ಥಿಕ ಚಿಂತನೆಯನ್ನು ಶಾಸ್ತ್ರೀಯವಾಗಿ ಹಾಗೂ ಸ್ಪಷ್ಟವಾಗಿ ಗುರುತಿಸುವಂತಾಗಲಿ ಎಂದು ಬಯಸಬೇಕಿದೆ.

Leave a Reply

Your email address will not be published.