ದಲಿತ ಚಳವಳಿಯ ತಾತ್ವಿಕ ವಿಪರ್ಯಾಸಗಳು

ಇವತ್ತು ದಲಿತ ಚಳವಳಿ ಇಲ್ಲ, ಆದರೆ ಅಲ್ಲಲ್ಲಿ ಬೇಕಾದಷ್ಟು ದಲಿತ ನಾಯಕರು ಅಧಿಕಾರ ವ್ಯವಸ್ಥೆಯ ಸುತ್ತ ತಿರುಗಾಡಿಕೊಂಡಿದ್ದಾರೆ. ಜಾಗತೀಕರಣೋತ್ತರ ಕಾಲದಲ್ಲೀಗ ದಲಿತರು ಜೀತದ ಹಳ್ಳಿಗಳ ಬಿಟ್ಟು ಜಾಗತಿಕ ನಗರಗಳತ್ತ ವಲಸೆ ಹೋಗುತ್ತಲೇ ಇದ್ದಾರೆ. ಇದು ಚಳವಳಿ ಅಲ್ಲ. ಹೊಸ ಬಗೆಯ ಶೋಷಣೆಗೆ ಸ್ವಯಂಸಿದ್ಧ ಹರಾಜಿಗೆ ಹೊರಟಿರುವ ಹೊಸ ಕಾಲದ ದಲಿತ ತಲೆಮಾರು. 

ಕರ್ನಾಟಕದ ಎಪ್ಪತ್ತರ ದಶಕ, ಚಳವಳಿಯ ದಶಕ. ಆ ಕಾಲದಲ್ಲಿ ಮುಖ್ಯವಾಗಿ ತಲೆ ಎತ್ತಿದ್ದು ಎರಡು ಚಳವಳಿಗಳು. ಮೊದಲಿನದು ದಲಿತ ಚಳವಳಿ. ಆನಂತರದ್ದು ರೈತ ಚಳವಳಿ. ಇಲ್ಲಿ ಮೊದಲಿಗೆ ಚಳವಳಿ ಎಂಬ ಪರಿಕಲ್ಪನೆಯನ್ನು ವಿವರಿಸಿಕೊಳ್ಳುವೆ. ಚಳವಳಿ ಮೂಲಕ ಪ್ರತಿರೋಧ, ಪ್ರತಿಭಟನೆ, ನ್ಯಾಯದ ಹಕ್ಕೊತ್ತಾಯ ಮಾನವ ಸ್ವಭಾವ. ಶೋಷಣೆಯ ವಿರುದ್ಧದ ಸಮಷ್ಟಿ ಸಂಕಟದ ದಂಗೆ ಅದು. ಅಲ್ಲಿರುವುದು ಮೂಲವಾಗಿ ದುಃಖ, ಅಪಮಾನ, ಹಿಂಸೆ, ಅನ್ಯಾಯ, ಅಸಮಾನತೆ, ದಬ್ಬಾಳಿಕೆ. ಈ ಸಂಗತಿಗಳು ವಿಶ್ವಾತ್ಮಕವಾದವು. ಯಾವುದೇ ಸಮಾಜಗಳಲ್ಲಿ ಇವು ಇದ್ದೇ ಇರುತ್ತವೆ. ಕಾಲಕಾಲಕ್ಕೆ ಇವು ವಿಕಾಸ ಆಗುತ್ತಲೆ ಇರುತ್ತವೆ. ಅಂದರೆ ಶೋಷಿಸುವ ಒಂದು ವ್ಯವಸ್ಥೆ ಮತ್ತು ಅದರ ವಿರುದ್ಧ ಬಂಡೇಳುವ ಸಮಷ್ಠಿ ಸಂಕಟದ ಸ್ವಭಾವ ಕಾಲದ ಗತಿಶೀಲತೆಯಲ್ಲಿ ಸಹಜವಾದ ಪ್ರಕ್ರಿಯೆಗಳು. ಮಾನವರ ಒಳಗಿನಿಂದಲೆ ಇವೆರಡೂ ವೈರುಧ್ಯ ಸಂಗತಿಗಳು ಹುಟ್ಟಿ ಬೆಳೆದು ಬಂದಿವೆ. ನಿರಂತರವಾಗಿ ಒಂದು ಇನ್ನೊಂದನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಒಳಗೊಳಗೇ ಕಾಲಕ್ಕೆ ತಕ್ಕಂತೆ ತಮಗೆ ಬೇಕಾದ ತಾತ್ವಿಕ ನೆಲೆಗಳನ್ನು ಬಲಪಡಿಸುತ್ತ ಸಾಗುತ್ತವೆ.

ಚಳವಳಿಯ ಒಳಗೊಳಗೆಯೇ ಚಳವಳಿಯ ವಿರುದ್ಧವಾದ ಇನ್ನೊಂದು ಚಳವಳಿ ಸದಾ ಕ್ರಿಯಾಶೀಲವಾಗಿರುತ್ತದೆ. ಆ ವೈರುಧ್ಯದಿಂದಲೇ  ಎಡಪಂಥೀಯ, ಬಲಪಂಥೀಯ ಎಂಬ ಎರಡು ಕೃತಕ ವರ್ಗಗಳು ರೂಢಿಗೆ ಬಂದಿರುವುದು. ಯಾವ ಬಗೆಯ ಚಳವಳಿ ಮಾನವ ಪರ, ಅದರ ವಿರುದ್ಧ ಎಂದು ಇಂದು ವ್ಯತ್ಯಾಸ ಮಾಡಲಾಗದಂತೆ ಇಂದಿನ ಜಗತ್ತಿನ ಚಳವಳಿಗಳ ಮಾನವೀಯ ಭಾಷೆಯೇ ದಿಕ್ಕೆಟ್ಟುಹೋಗಿದೆ.

ತಿರುಗಿಬೀಳದೆಯೂ ಒಪ್ಪಿತ ಶೋಷಣೆಯಲ್ಲಿ ಸಿಲುಕಿದವರೂ ಕೂಡ ಅಮಾಯಕ ದಮನಿತರೇ. ಅಷ್ಟರ ಮಟ್ಟಿಗೆ ‘ಎಚ್ಚರ’ ಒಂದೇ ರೀತಿ ದಮನಿತರೆಲ್ಲರಲ್ಲೂ ಒಂದೇ ಬಗೆಯಾಗಿ ರೂಪುಗೊಂಡಿರುವುದಿಲ್ಲ.

ಇಂತಹ ಸ್ಥಿತಿಯಲ್ಲಿ ‘ದಲಿತ ಚಳವಳಿ’ ಎನ್ನುವುದು ಕೊಂಚ ಬಿಡಿಸಿ ನೋಡುವ. ‘ದಲಿತ’ ಎಂದರೆ ದಮನಿತ. ದಮನಿತರು ಎಂದರೆ ಅನೇಕ ತಳ ಜಾತಿಗಳು ನಿರಂತರ ಹಲ್ಲೆಗೆ ಒಳಗಾಗಿ ಬದುಕಿ ಉಳಿಯಲು ಹೋರಾಟವೇ ಕೊನೆಯ ಒಂದು ಅವಕಾಶ ಎಂದು ತಿಳಿದು ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದವರು. ತಿರುಗಿಬೀಳದೆಯೂ ಒಪ್ಪಿತ ಶೋಷಣೆಯಲ್ಲಿ ಸಿಲುಕಿದವರೂ ಕೂಡ ಅಮಾಯಕ ದಮನಿತರೇ. ಅಷ್ಟರ ಮಟ್ಟಿಗೆ ‘ಎಚ್ಚರ’ ಒಂದೇ ರೀತಿ ದಮನಿತರೆಲ್ಲರಲ್ಲೂ ಒಂದೇ ಬಗೆಯಾಗಿ ರೂಪುಗೊಂಡಿರುವುದಿಲ್ಲ.

ಹಾಗಾದರೆ ಈ ದಲಿತ ಚಳವಳಿಯನ್ನು ಪಶ್ಚಿಮದ ವರ್ಗಕ್ರಾಂತಿಯ ತತ್ವಗಳಿಂದ ವಿವರಿಸುವುದು ಸಾಧ್ಯವೇ.. ಭಾರತದ ಎಲ್ಲ ದಲಿತರಿಗೂ ಒಂದೇ ದಲಿತ ತಾತ್ವಿಕತೆ ಎನ್ನುವುದು ಇದೆಯೇ ಎಂದರೆ ಕಷ್ಟಪಟ್ಟು ತಾತ್ವಿಕವಾಗಿ ಬೌದ್ಧಿಕ ಮಾತುಗಳಿಂದ ನಂಬಿಸಬಹುದು. ಆದರೆ ಭಾರತದ ದಲಿತ ಸಮಸ್ಯೆಯು ಚಳವಳಿಯಾಗಿ ರೂಪುಗೊಳ್ಳುವಾಗ ಒಂದೇ ತರದ ಚಾರಿತ್ರಿಕ ಎಚ್ಚರ ಉಂಟಾಗಿಲ್ಲ. ಹಾಗೆ ನೋಡಿದರೆ; ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಭಾರತದ ಇಡೀ ಮೂಲೆ ಮೂಲೆಯಲ್ಲೂ ಭಕ್ತಿ ಪಂಥ ಚಳವಳಿ ವಿಸ್ತರಿಸಿ, ಹಿಂದೂ ಧರ್ಮದ ಜಾತಿ ಶಾಪವನ್ನು ತೊಳೆಯಲು ಆತ್ಯಂತಿಕವಾಗಿ ಶ್ರಮಿಸಿದ್ದಕ್ಕೆ ಬೇಕಾದಷ್ಟು ಸಂತರ, ಶರಣರ, ಅನುಭಾವಿಗಳ ದಾಖಲೆಗಳಿವೆ. ಬಸವಣ್ಣ ಅವರ ಮೊದಲೇ ಕರ್ನಾಟಕದಲ್ಲಿ ತರಾವರಿ ಶಕ್ತಿ ಆರಾಧಕರು, ಕಾಳಿಯ ಭಕ್ತರು, ಮಾತೃ ಸಂಸ್ಕೃತಿಯ ನಡೆಯವರು ಬಹುಸಂಖ್ಯಾತರಾಗಿದ್ದರು. ಅದರಲ್ಲೂ ‘ದಲಿತ’ರು ಅವೈದಿಕಶಕ್ತಿ ಆರಾಧಕರಾಗಿದ್ದರು.

ಒಂದೆಡೆ ಹಿಂದೂ ಧರ್ಮದ ಬ್ಯಾಹ್ಮಣ್ಯವನ್ನು ಸುಧಾರಿಸಲು ಮುಂದಾಗಿ, ಕೆಲವೊಮ್ಮೆ ಅದರ ವಿರುದ್ಧ ದಂಗೆ ಎದ್ದು ಶೈವತ್ವದ ಇಡೀಯಾದ ನೋಟದಲ್ಲಿ ಸಾಮಾಜಿಕ ಪಲ್ಲಟಗಳಿಗೆ ಮಧ್ಯಯುಗದಿಂದ ಇವತ್ತಿನ ತನಕ ಇಡೀ ಭಾರತದಲ್ಲಿ ಅವೈದಿಕ ಪ್ರತಿರೋಧದ ನೆಲೆಗಳು ಸಂಘಟಿತರಾಗುತ್ತಲೇ ಇವೆ. ಹಾಗೆಯೇ ಈ ಬಗೆಯ ಚಳವಳಿಯ ವಿರುದ್ಧದ ‘ಬಲಪಂಥೀಯ’ ಎನ್ನಬಹುದಾದ ಸಾಂಪ್ರದಾಯಿಕ ಹಿಂದುತ್ವದ ಪರವಾದ ಶ್ರದ್ಧೆಯ ವ್ಯಾಪಕ ಲೋಕ ವಿಸ್ತಾರವಾಗಿದೆ. ಅದು ಬೀದಿಗಿಳಿದು ಬಂದು ಚಳವಳಿ ಮಾಡುವುದಿಲ್ಲ. ತಮ್ಮ ಜೀವನ ವಿಧಾನವನ್ನೇ ಚಳವಳಿಯ ಕ್ರಮವಾಗಿ ರೂಢಿಸಿಕೊಂಡರೆ ಆಗ, ಅಂತಹ ಚಳವಳಿ ಬೀದಿಯಲ್ಲಿ ಘೋಷಣೆ ಕೂಗುವ ಕೆಲವೇ ಕೆಲವರ ಆಕ್ರಂದನಕ್ಕಿಂತಲೂ ಬಲವಾದದ್ದೆನಿಸಿಬಿಡುತ್ತದೆ. ಅನ್ಯಾಯದ ವಿರುದ್ಧದ ಚಳವಳಿಗಳೆಲ್ಲ ಭಾರತದಲ್ಲಿ ಯಾಕೆ ಸೋತಿವೆ ಎಂದರೆ, ಆ ಥರದ ಚಳವಳಿಗಳೆಲ್ಲ ‘ಧರ್ಮ’ವಿರೋಧಿ ಎಂಬ ಹಣೆಪಟ್ಟಿಗೆ ಈಡಾಗಿವೆ. ಹಾಗೆಯೇ ಅವು ರಾಜಕೀಯ ಪ್ರೇರಿತ ಎನಿಸಿವೆ. ವಿಪರ್ಯಾಸ ಎಂದರೆ ಹಿಂದೂ ಧರ್ಮದಷ್ಟು ರಾಜಕೀಯ ದುಷ್ಟವ್ಯೂಹ ಇನ್ನೊಂದಿಲ್ಲ. ಭಗವದ್ಗೀತೆ ಮತ್ತು ಮನುಧರ್ಮಶಾಸ್ತ್ರಗಳು ಹಿಂದುತ್ವದ ರಾಜಕೀಯ ಕೈಪಿಡಿಗಳಲ್ಲದೇ ಮತ್ತೇನು?

ಅದು ತನ್ನ ಅಸ್ಮಿತೆಯನ್ನು ಭಾರತದ ಉದ್ದಕ್ಕೂ ಏಕಕಾಲದಲ್ಲಿ ಯಾವ ಸಂವಹನ ಇಲ್ಲದಿದ್ದರೂ ಪ್ರವೃತ್ತಿ ಸ್ವರೂಪದಲ್ಲಿ ಬದುಕಿ ಉಳಿಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಂಡಿತ್ತು. ಇದು ದಲಿತ ತಾತ್ವಿಕತೆಯ ಮೂಲ ಜೀವ ಪ್ರವೃತ್ತಿ.

ಚಳವಳಿಯೇ ಒಂದು ಜೀವನ ಕ್ರಮವಾಗುವಂತಹ ಒಂದು ಇಡೀಯಾದ ಕೈಪಿಡಿ ಭಾರತದ ಯಾವ ದಮನಿತರಿಗೂ ಸಿಗಲೇ ಇಲ್ಲ. ಕಾಲಕಾಲಕ್ಕೆ ಶಂಕರಾಚಾರ್ಯರಂತಹ ಸುಧಾರಕರು ನಿರಂತರವಾಗಿ ಬಂದರು. ಹಾಗೆಯೇ ಭಕ್ತಿ ಪಂಥದ ಚಳವಳಿಯ ಭಾಗವಾಗಿ ಬಂದ ಎಲ್ಲ ಸುಧಾರಕರೂ ಹಿಂದುತ್ವವನ್ನು ನಿರಾಕರಿಸಲಿಲ್ಲ. ಅದರ ಕೊಳೆ ತೊಳೆಯಲು ಮಾತ್ರ ಹೇಳಿದರು. ಇದು ಒಂದು ಬಗೆಯ ಧೋರಣೆ ಹಾಗೂ ತಾತ್ವಿಕತೆ ಮಾತ್ರವಾಗಿತ್ತೇ ಹೊರತು, ಪ್ರಭುತ್ವದ ಅವತ್ತಿನ ಸಂವಿಧಾನವಾಗಿರಲಿಲ್ಲ.

ಇಷ್ಟೆಲ್ಲ ಸೂಚ್ಯವಾಗಿ ಹೇಳಿದ ನಂತರ ನಾನು ದಿಢೀರನೆ ಗಾಂಧಿ, ಅಂಬೇಡ್ಕರ್ ಕಾಲಕ್ಕೆ ಬಂದು ಹಿಂತಿರುಗಿ ನೋಡುವೆ. ಎಲ್ಲ ಕಾಲದಲ್ಲೂ ದಲಿತ ಸಮಸ್ಯೆ ಬಗೆಹರಿಯದೆ ಹಾಗೇ ಇತ್ತು. ಅದರಲ್ಲೇ ಅದು ತನ್ನ ಅಸ್ಮಿತೆಯನ್ನು ಭಾರತದ ಉದ್ದಕ್ಕೂ ಏಕಕಾಲದಲ್ಲಿ ಯಾವ ಸಂವಹನ ಇಲ್ಲದಿದ್ದರೂ ಪ್ರವೃತ್ತಿ ಸ್ವರೂಪದಲ್ಲಿ ಬದುಕಿ ಉಳಿಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಂಡಿತ್ತು. ಇದು ದಲಿತ ತಾತ್ವಿಕತೆಯ ಮೂಲ ಜೀವ ಪ್ರವೃತ್ತಿ.

ಮಾರ್ಕ್ಸ್, ಏಂಗೆಲ್ಸ್, ಲೆನಿನ್, ಮಾವೋತ್ಸೆ ತುಂಗ್ ಬರುವ ಮೊದಲೇ ಬಡವ ಶ್ರೀಮಂತರ ನಡುವೆ ಹೇಗೆ ವರ್ಗಭೇದ ಉಂಟಾಯಿತು ಎಂಬುದು ನೊಂದವರಿಗೆ ಗೊತ್ತಿತ್ತು. ತಾತ್ವಿಕತೆಯ ಪಾಠ ಕಲಿತು ಪ್ರತಿರೋಧ, ಕ್ರಾಂತಿ ಉಂಟಾಗುತ್ತದೆ ಎಂದಿದ್ದರೆ, ಇಷ್ಟೊತ್ತಿಗಾಗಲೇ ಅದೆಷ್ಟೋ ಕ್ರಾಂತಿಗಳು ಆಗಿ ಆಗಿ ಕ್ರಾಂತಿಗಳೇ ರೇಜಿಗೆ ತರುತ್ತಿದ್ದವೇನೋ. ಮನುಷ್ಯರಾಗಿ ಬಾಳಲು ಏನು ಬೇಕು? ಈ ನಿಸರ್ಗ ಎಲ್ಲ ಕೊಟ್ಟಿದೆ, ಬೆಳೆಸಿದೆ. ಅದರ ನ್ಯಾಯದಲ್ಲಿ ಸಾಗುವ ಎನ್ನುವುದು ನೊಂದವರ ಒಂದು ತತ್ವ. ದುಃಖವೇ ಹೇಳಿಕೊಟ್ಟ ಬದುಕಿನ ಪಾಠವದು. ಅದನ್ನು ಬುದ್ಧನೇ ಹೇಳಿಕೊಟ್ಟ ಎಂದಲ್ಲ. ಅಂತಹ ಸಾಮ್ರಾಟ ಅಶೋಕ ಕಣ್ಣೆದುರಿನ ರಕ್ತಪಾತವನ್ನು ಅಖಂಡ ಹಿಂಸೆಯ ದುರಂತ ಎಂದು ಭಾವಿಸಿದ್ದರಿಂದ ಅವನ ಪ್ರಭುತ್ವ ಬುದ್ಧ ಪ್ರಭುತ್ವವಾಯಿತು. ಜೈನ ಬೌದ್ಧ ತತ್ವಗಳು ಬಹಳ ದೊಡ್ಡ ಮಟ್ಟದ ಪ್ರಭಾವವನ್ನು ಜಾನಪದೀಯವಾಗಿ ಇಡೀ ಭಾರತದ ಎಲ್ಲ ದಮನಿತರ ಮೇಲೂ ಮಾಡಿವೆ. ಆದರೆ ಅವು ಅಗೋಚರವಾಗಿವೆ. ಜೊತೆಗೆ ಆದಿಮಲೋಕದ ಎಲ್ಲ ದಮನಿತರ ನಿಸರ್ಗಾರಾಧನೆಯ ತತ್ವಗಳು ಅವರವರ ಅಸ್ತಿತ್ವವನ್ನು ರೂಪಸಿವೆ.

ಆವರು ಅಪ್ಪಟ ಹೋರಾಟಗಾರರಾಗಿದ್ದರು. ದೇವನೂರ ಮಹದೇವ, ಸಿದ್ಧಲಿಂಗಯ್ಯ ಅವರು ಸೈದ್ಧಾಂತಿಕ ನೇತಾರರಾಗಿರಲಿಲ್ಲ. ಜಾತಿವ್ಯವಸ್ಥೆಯ ವಿರುದ್ಧ ದಂಗೆ, ಎಚ್ಚರ ರೂಪಿಸುವಲ್ಲಿ ತನ್ನ ಜನಾಂಗವನ್ನು ಹೋರಾಟಕ್ಕೆ ಒಗ್ಗೂಡಿಸಿದ್ದರು. ಆ ದನಿಗೆ ಒಗ್ಗೂಡಿ ಬಂದ ಆ ಅನಕ್ಷರಸ್ಥ ದಮನಿತರೆಲ್ಲರು ಅನಾದಿಯಿಂದಲೂ ಶೋಷಣೆಯನ್ನು ಒಪ್ಪಿ ಬದುಕಿದ್ದರೇ ಹೊರತು, ಅದರಿಂದ ಹೇಗೆ ಬಿಡಿಸಿಕೊಳ್ಳಬೇಕು ಎಂದು ಪ್ರಜ್ಞಾವಂತರಾಗಿರಲಿಲ್ಲ.

ಇಪ್ಪತ್ತನೆ ಶತಮಾನದಲ್ಲಿ ವಸಹಾತುಶಾಹಿ ಬಂದುಹೋದ ನಂತರ ಶೋಷಣೆಯ ಸಮಾಧಿಗಳಿಂದ ಎದ್ದು ಬಂದ ದಲಿತರು ದಿಢೀರನೆ ಅಂಬೇಡ್ಕರ್ ಅವರ ತತ್ವವನ್ನೇ ಯಥಾವತ್ತಾಗಿ ಅನುಸರಿಸಿದರೇನೋ ಎಂಬ ಒಂದು ಮೂಢನಂಬಿಕೆ ಇದೆ. ಬಸವಲಿಂಗಪ್ಪನವರ ಬೂಸಾ ಚಳವಳಿ ಒಂದು ಹಂತ. ಆ ಮೊದಲು ಇಂದಿರಾಗಾಂಧಿ ತಂದು ಹೇರಿದ ತುರ್ತು ಪರಿಸ್ಥಿತಿಯ ಒತ್ತಡ, ಆಮೇಲೆ ಉದಾರ ಮಾರ್ಕ್ಸ್ ವಾದ ಮತ್ತು ಸಮಾಜವಾದ ಜಾತಿ ವ್ಯವಸ್ಥೆಯ ಬಗ್ಗೆ ಕಟುವಾಗಿ ಮಾತನಾಡಲು ತೊಡಗಿದ ನಂತರ ಕರ್ನಾಟಕದಲ್ಲಿ ದಲಿತ ಚಳವಳಿ ಹೇಗೆ ಬಿ.ಕೃಷ್ಣಪ್ಪ ಅವರ ಮೂಲಕ ಆರಂಭವಾಯಿತು ಎಂಬುದು ತಿಳಿದಿರುವ ಸಂಗತಿ.

ಆರಂಭದಲ್ಲಿ ‘ದಲಿತ ಚಳವಳಿಗೆ’ ಒಂದು ತಾತ್ವಿಕತೆಯನ್ನು ಒದಗಿಸಿದ್ದು ಯಾವ ಚಿಂತಕರೂ ಅಲ್ಲ. ಸ್ವತಃ ಅಂಬೇಡ್ಕರ್ ಅವರ ಅಪಾರ ಚಿಂತನೆಗಳೇ ಎಪ್ಪತ್ತರ ದಶಕದ ದಲಿತ ಚಳವಳಿಗೆ ಇರಲಿಲ್ಲ. ಆರ್‍ಎಸ್‍ಎಸ್, ಮಾರ್ಕ್ಸ್ ವಾದಿ, ಮಾವೋವಾದಿ ಸಮಾಜವಾದಿಗಳಿಗೆ ಖಚಿತ ಸೈದ್ಧಾಂತಿಕ ನೆಲೆ ಇತ್ತು. ದಲಿತ ಚಳವಳಿಯನ್ನು ಮೂಲದಲ್ಲಿ ರೂಪಿಸಿದ ನಾಯಕರಾರು ಪ್ರಸಿದ್ಧ ಚಿಂತಕರಾಗಿರಲಿಲ್ಲ. ಆವರು ಅಪ್ಪಟ ಹೋರಾಟಗಾರರಾಗಿದ್ದರು. ದೇವನೂರ ಮಹದೇವ, ಸಿದ್ಧಲಿಂಗಯ್ಯ ಅವರು ಸೈದ್ಧಾಂತಿಕ ನೇತಾರರಾಗಿರಲಿಲ್ಲ. ಜಾತಿವ್ಯವಸ್ಥೆಯ ವಿರುದ್ಧ ದಂಗೆ, ಎಚ್ಚರ ರೂಪಿಸುವಲ್ಲಿ ತನ್ನ ಜನಾಂಗವನ್ನು ಹೋರಾಟಕ್ಕೆ ಒಗ್ಗೂಡಿಸಿದ್ದರು. ಆ ದನಿಗೆ ಒಗ್ಗೂಡಿ ಬಂದ ಆ ಅನಕ್ಷರಸ್ಥ ದಮನಿತರೆಲ್ಲರು ಅನಾದಿಯಿಂದಲೂ ಶೋಷಣೆಯನ್ನು ಒಪ್ಪಿ ಬದುಕಿದ್ದರೇ ಹೊರತು, ಅದರಿಂದ ಹೇಗೆ ಬಿಡಿಸಿಕೊಳ್ಳಬೇಕು ಎಂದು ಪ್ರಜ್ಞಾವಂತರಾಗಿರಲಿಲ್ಲ. ದಲಿತ ಚಳವಳಿಯ ನೇತಾರರು ಸಾಂದರ್ಭಿಕ ಹೋರಾಟಗಳಿಂದ ಬಹಿರಂಗವಾಗಿ ಮಾಡಿದ ಪರಿಣಾಮಕಾರಿ ಭಾಷಣಗಳೇ ದಲಿತ ಚಳವಳಿಯ ಹೋರಾಟದ ಆಯಾ ಹೊತ್ತಿನ ತಾತ್ವಿಕತೆಯಾಗಿತ್ತೇ ಹೊರತು ಒಂದು ಪ್ರಬಲವಾದ ಸೈದ್ಧಾಂತಿಕತೆ ಇರಲಿಲ್ಲ.

ಆವತ್ತಿನ ದಲಿತ ಸಂಘರ್ಷ ಸಮಿತಿಯ ಪ್ರಣಾಳಿಕೆಯ ವಿವರ ನೋಡಿದರೆ, ಅದೊಂದು ಮಾನವತಾವಾದಿಗಳು ಜಾತಿ ವ್ಯವಸ್ಥೆಯ ವಿರುದ್ಧ ಮಾಡಿಕೊಂಡ ಒಂದು ಮನವಿಯಂತಿದೆಯಷ್ಟೆ… ಅದು ಕಾಲಕಾಲಕ್ಕೆ ಬದಲಾಗಿದೆ ನಿಜ. ಒಬ್ಬ ಲೇಖಕನಿಗೆ ಮ್ಯಾನಿಫೆಸ್ಟೋ ಹೇಗೆ ಬೇಕಿಲ್ಲವೋ, ದಲಿತ ಚಳವಳಿಗೂ ಆ ಬಗೆಯ ಖಚಿತ ಸೈದ್ಧಾಂ ತಿಕ ನೆಲೆ ಬೇಕಿಲ್ಲ ಎಂದು ಆಗ ಅನಿಸಿದ್ದರಿಂದ ಏಕಕಾಲಕ್ಕೆ ಏಲ್ಲ ಬಗೆಯ ಒಳಿತಿನ ವಿಚಾರಗಳ ಅನುಸರಿಸಿ ಬದುಕಿ ಉಳಿಯುವ ಹೋರಾಟದ ತತ್ವವನ್ನು ಹಂಬಲಿಸಬೇಕಾದ ಬಿಕ್ಕಟ್ಟು ದಲಿತ ಚಳವಳಿಗೆ ಅನಿವಾರ್ಯ ಆಗಿದ್ದರಿಂದ ಅಲ್ಲಿ, ಗಾಂಧಿವಾದ, ಅಂಬೇಡ್ಕರ್ ವಾದ, ಮಾರ್ಕ್ಸ್, ಲೋಹಿಯಾವಾದಗಳೂ ಸೇರಿಕೊಂಡು ದಲಿತ ಚಳವಳಿಯ ತಾತ್ವಿಕತೆಯಲ್ಲೇ ಒಡಕು ಮುಚ್ಚು ಮರೆಯಲ್ಲಿ ಉಂಟಾಯಿತು.

ದುರಂತ ಎಂದರೆ, ದಲಿತ ಚಳವಳಿಗೆ ಆ ಕ್ಷಣದ ಸಾವು ಬದುಕಿನ ಸಮಸ್ಯೇಯೇ ಮುಖ್ಯವಾಗಿದ್ದರಿಂದ ಅದು ವ್ಯವಸ್ಥಿತ ತಾತ್ವಿಕ ಸಂಘರ್ಷದ ಮೂಲಕ ಜಾತಿಶ್ರೇಣಿಯ ಸಮಾಜವನ್ನು ಎದುರಿಸಲಾಗದೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಎಂಬ ಈ ಎಲ್ಲರ ಮಾಸ್ಕಗಳನ್ನು ಧರಿಸಿ ಮುನ್ನುಗ್ಗಿದ್ದರಿಂದ ಕ್ರಾಂತಿಯ ಹಾಡುಗಳಿಗೆ ಮಾತ್ರ ಆ ತಾತ್ವಿಕತೆಯು

ಯಾವತ್ತೂ ಜಗತ್ತಿನ ಚಳವಳಿಗಳು ಇತಿಹಾಸದಲ್ಲಿ ಶೋಷಣೆಯನ್ನು ಬಲವಾಗಿ ಮೆಟ್ಟಿ ನಿಂತದ್ದು ಬಲವಾದ ಒಂದು ತಾತ್ವಿಕ ಬುನಾದಿಯಿಂದ. ದುರಂತ ಎಂದರೆ, ದಲಿತ ಚಳವಳಿಗೆ ಆ ಕ್ಷಣದ ಸಾವು ಬದುಕಿನ ಸಮಸ್ಯೇಯೇ ಮುಖ್ಯವಾಗಿದ್ದರಿಂದ ಅದು ವ್ಯವಸ್ಥಿತ ತಾತ್ವಿಕ ಸಂಘರ್ಷದ ಮೂಲಕ ಜಾತಿಶ್ರೇಣಿಯ ಸಮಾಜವನ್ನು ಎದುರಿಸಲಾಗದೆ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮಾರ್ಕ್ಸ್ ಎಂಬ ಈ ಎಲ್ಲರ ಮಾಸ್ಕಗಳನ್ನು ಧರಿಸಿ ಮುನ್ನುಗ್ಗಿದ್ದರಿಂದ ಕ್ರಾಂತಿಯ ಹಾಡುಗಳಿಗೆ ಮಾತ್ರ ಆ ತಾತ್ವಿಕತೆಯು ಬಳಕೆ ಆಯಿತೆ ಹೊರತು ಅದೊಂದು ಬೃಹತ್ ಸಾಮಾಜಿಕ, ಆರ್ಥಿಕ, ರಾಜಕೀಯ ವಿಮೋಚನೆಯ ತತ್ವವಾಗದೇ ಹೋಯಿತು.

ಕ್ರಾಂತಿಗೆ ಒಂದು ಅಖಂಡ ಇಲ್ಲವೇ ಬಿಡಿಯಾದ ಒಂದು ಚಾರಿತ್ರಿಕ ಸಂದರ್ಭ ಹಾಗೂ ಅದಕ್ಕೆ ಹೊಂದಿಕೆಯಾಗುವ ಒಂದು ತಾತ್ವಿಕತೆ ಬೇಕು. ಕರ್ನಾಟಕದ ದಲಿತ ಚಳವಳಿಗೆ ಬಹುರೂಪಿ ಸೈದ್ದಾಂತಿಕತೆ ಇತ್ತು. ಅದು ಜಾಳಾಗಿತ್ತು. ಅದನ್ನು ಪೊಲಿಟಿಸೈಸ್ ಮಾಡುವ ಒಂದು ಇಂಟಲೆಕ್ಚುವಲ್ ಟೀಂ ದಲಿತ ಚಳವಳಿಗೆ ಇರಲಿಲ್ಲ. ಮಾರ್ಕ್ಸ್  ವಾದಿ ಚಳವಳಿಗೆ ಅಂತಹ ಚಿಂತಕರಿದ್ದರೂ ಅದು ದಮನಿತರನ್ನು ತಲುಪುವಲ್ಲಿ ಸೋತಿದ್ದಕ್ಕೆ ಬೇರೆ ಕಾರಣಗಳುವೆ.

ಇವತ್ತಿಗೂ ಇಡೀ ಭಾರತಕ್ಕೆ ಅಂಬೇಡ್ಕರ್ ಒಬ್ಬರೇ ದಲಿತರ ಪರವಾದ ಯಾವುದೇ ಚಳವಳಿಗೂ ಇರುವ ಏಕಮಾತ್ರ ತಾತ್ವಿಕ. ಇಂದಿಗೂ ಅಂಬೇಡ್ಕರ್ ದಲಿತ ಚಳವಳಿಗಾರರಿಗೆ ಇಡೀಯಾಗಿ ಅರ್ಥ ವಾಗಿಲ್ಲ. ಅಂಬೇಡ್ಕರ್ ಚಿಂತಕರನ್ನು ಹೊರಗಿಟ್ಟೇ ದಲಿತ ಚಳವಳಿ ಈಗ ಬಹುಭಾಗವಾಗಿ ತಮ್ಮ ಹಿತಾಶಕ್ತಿಗಳಿಗೆ ತಕ್ಕಂತೆ ಅಂಬೇಡ್ಕರ್ ವಾದವನ್ನು ಹಂಚಿಕೊಂಡಿದ್ದಾರೆ. ಈ ನಡುವೆ ಜಗಜೀವನರಾಮ್ ಅವರದು ಯಾವ ವಾದವೋ ಏನೋ ಗೊತ್ತಿಲ್ಲ. ಮಾದಿಗ ದಂಡೋರು ಅವರ ಹೆಸರಲ್ಲಿ ಚಳವಳಿಯನ್ನು ಸೀಳಿಕೊಂಡಿದ್ದಾರೆ. ಮಾಯಾವತಿಯ ಬಿಎಸ್‍ಪಿ ರಾಜಕೀಯ ಚಳವಳಿ, ಮೂಲತಃ ದಲಿತ ವಿಮೋಚನೆಯದಲ್ಲ. ಬಹುಜನ ವಿಮೋಚನೆಯ ಬುಟ್ಟಿಯಲ್ಲಿ ಸಮುದ್ರವನ್ನು ದಾಟಲಾಗದು. ದಲಿತ ಚಳವಳಿಯ ಆರಂಭಿಕ ತಾತ್ವಿಕತೆ ಮುಗ್ಧವಾಗಿತ್ತು. ಬದುಕಿಗಾಗಿ ಗುಟುಕು ನೀರು ಕೊಡಿ, ಅಕ್ಷರ ಕೊಡಿ, ನೆರಳು ಕೊಡಿ ಎಂದು ಬೇಡುವಂತಾಗಿತ್ತು. ಈ ಬಗೆಯ ದೈನ್ಯತೆ ಯಾವತ್ತೂ ಕ್ರಾಂತಿಯ ಅಲೆಯ ತಾತ್ವಿಕತೆ ಆಗಲು ಸಾಧ್ಯವಿಲ್ಲ. ತೊಂಬತ್ತರ ದಶಕದಲ್ಲಿ ದಲಿತ ತಾತ್ವಿಕತೆ ರಾಜಕೀಯದತ್ತ ಮುಖ ಮಾಡಿ ಎಡವಿತು. ಆಗಲೇ ಬಿ.ಕೃಷ್ಣಪ್ಪ, ದೇವನೂರ ಮಹದೇವ, ಸಿದ್ಧಲಿಂಗಯ್ಯ ಹಾಗೂ ಅನುಯಾಯಿಗಳು ಬಹಳ ದೊಡ್ಡ ತಪ್ಪು  ಮಾಡಿದ್ದು. ಅಂತಿಮ ಗುರಿ, ದಲಿತರು ರಾಜ್ಯಾಧಿಕಾರಕ್ಕೆ ಬರುವುದು ಎಂದು ಹೇಳಿದ್ದ ಅಂಬೇಡ್ಕರ್ ಅವರ ಆ ಸತ್ಯವನ್ನು ಆತುರದಲ್ಲಿ ಭಾವಿಸಿ, ದಲಿತ ಚಳವಳಿ ಪ್ರಭುತ್ವದ ಪ್ರತಿನಿಧಿಯಾದ ರಾಜಕೀಯ ಪಕ್ಷಗಳಿಗೆ ತಮ್ಮನ್ನು ತಾವೇ ಒತ್ತೇ ಇಟ್ಟುಕೊಂಡರು.

ಹಾಗೆಯೇ ಅದೇ ಒಂದು ಮಿತಿಯೂ ಆಗಿದೆ. ದಲಿತ ಚಳವಳಿಯ ತಳಮಟ್ಟದ ಕಾರ್ಯಕರ್ತರಿಗೆ ಅನ್ಯಾಯದ ವಿರುದ್ಧ ಸಿಡಿದೇಳುವ ಏಕಮಾತ್ರ ನ್ಯಾಯದ ಗುಣವಿತ್ತೇ ಹೊರತು, ಅದರ ಆಚೆಗಿನ ಬೃಹತ್ ಸಮಾಜಗಳ ಮಾನವ ಒಪ್ಪಂದಗಳನ್ನು ಸರಿದೂಗಿಸಿ ರಾಜಕೀಕರಣಗೊಳಿಸುವ ಶಕ್ತಿ ಆ ನೇತಾರರಿಗೂ ಇರಲಿಲ್ಲ.

ಇದರಿಂದಲೇ ತಿಳಿಯುತ್ತದೆ, ದಲಿತ ಚಳವಳಿಯ ತಾತ್ವಿಕತೆಯ ವಿರುದ್ಧದ ಚಳವಳಿ ಹೇಗೆ ಬಲಪಂಥೀಯವಾಗಿ ದಲಿತ ತತ್ವವನ್ನು ಖರೀದಿಸಿಬಿಡುತ್ತದೆ ಎಂದು. ಎಷ್ಟೋ ಬಾರಿ ಅಂಬೇಡ್ಕರ್ ತತ್ವ ಸುಮ್ಮನೆ ಒಂದು ಗುರಾಣಿಯಂತೆ ದಲಿತ ಚಳವಳಿಗೆ ಸಹಾಯ ಮಾಡಿದೆ. ಹಾಗೆಯೇ ಅದೇ ಒಂದು ಮಿತಿಯೂ ಆಗಿದೆ. ದಲಿತ ಚಳವಳಿಯ ತಳಮಟ್ಟದ ಕಾರ್ಯಕರ್ತರಿಗೆ ಅನ್ಯಾಯದ ವಿರುದ್ಧ ಸಿಡಿದೇಳುವ ಏಕಮಾತ್ರ ನ್ಯಾಯದ ಗುಣವಿತ್ತೇ ಹೊರತು, ಅದರ ಆಚೆಗಿನ ಬೃಹತ್ ಸಮಾಜಗಳ ಮಾನವ ಒಪ್ಪಂದಗಳನ್ನು ಸರಿದೂಗಿಸಿ ರಾಜಕೀಕರಣಗೊಳಿಸುವ ಶಕ್ತಿ ಆ ನೇತಾರರಿಗೂ ಇರಲಿಲ್ಲ.

ದಲಿತ ತಾತ್ವಿಕತೆ ಒಂದು ಅಮೂರ್ತವಾಗಿ ಈಗಲೂ ಇದೆ. ಅದು ಅದರ ಸಂಸ್ಕೃತಿಯ ಸಾಮಾಜಿಕ ಸ್ತರದ ದಾಸ್ಯದಿಂದ ಹೊಂದಾಣಿಕೆ ಮಾಡಿಕೊಂಡು ಬಂದದ್ದು. ಅದು ಸಿದ್ಧಾಂತಿ ಒಬ್ಬನ ತತ್ವದಂತೆ ಇರಲಿಲ್ಲ. ತತ್ವಪದಕಾರರು ಬಹುತೇಕ ದಲಿತರು. ಅನ್ಯರು ಕೂಡ ಭಾವದಲ್ಲಿ ದಲಿತರು. ಅವರು ನಶ್ವರವಾದಿಗಳು. ಆದರೆ ಆಕಾಶವಾದಿಗಳು. ನಿಸರ್ಗದ ತಪ್ಪನ್ನು ಆಕಾಶಕ್ಕೆ ಒಪ್ಪಿಸುವವರಾಗಿದ್ದರು. ಆ ಬಗೆಯ ಕೆಚ್ಚಿನಿಂದಲೇ ದಲಿತ ಚಳವಳಿಯ ತಾತ್ವಕತೆ ರೂಪುಗೊಂಡಿದ್ದು. ಅದು ಅವತ್ತಿನವರ ಸಾಂಸ್ಕೃತಿಕ ರಾಜಕಾರಣದ ಸಾತ್ವಿಕ ಪ್ರತಿರೋಧವಾಗಿತ್ತು. ಅಲ್ಲಿ ಎದುರಾಳಿಯನ್ನು ಮಾನವೀಕರಿಸುವ ರಾಜಕಾರಣವಿತ್ತು. ಆದರೆ ದಲಿತ ಹೊಸಕಾಲದಲ್ಲಿ ಸಾಂಸ್ಕೃತಿಕ ರಾಜಕಾರಣದ ಪ್ರತಿಭಟನೆಯನ್ನು ಬಿಟ್ಟು ದಿಢೀರನೆ ಅಧಿಕಾರ ವ್ಯವಸ್ಥೆಯ ರಾಜಕಾರಣದಲ್ಲಿ ಪಾಲು ಕೇಳುವ ರಾಜಕೀಯ ಒಪ್ಪಂದ ಮಾಡಿಕೊಂಡದ್ದು ವಿಪರ್ಯಾಸ.

ದಲಿತ ಚಳವಳಿಯ ತಾತ್ವಿಕತೆಯನ್ನು ಹೀಗೆ ಮೂರು ಹಂತಗಳಲ್ಲಿ ಗುರುತಿಸಬಹುದೇನೋ.

ಮೊದಲಿನದು ಮುಗ್ಧ ದಲಿತತ್ವ. ಇದು ಅನಾದಿ ಕಾಲದ ಜಾತಿ ವ್ಯವಸ್ಥೆಯ ವಿರುದ್ಧದ ಆಕ್ರಂದನ. ಹಾಗಾಗಿಯೇ ಮೊದಲ ಘಟ್ಟದ ದಲಿತ ಚಳವಳಿ ಆಕ್ರಂದನ, ಆಕ್ರೋಶ, ಉರಿವ ಪ್ರತಿರೋಧ ದಟ್ಟವಾಗಿ ಸಹಜವಾಗಿ ವ್ಯಕ್ತವಾದದ್ದು. ಇಲ್ಲಿ ಯಾವ ಇಸಂಗಳೂ ಮುಖ್ಯವಾಗಿರಲಿಲ್ಲ. ಒಡಲ ಕಿಚ್ಚಿಗೆ ತತ್ವದ ಹಂಗು ಬೇಕಿರಲಿಲ್ಲ. ದುಃಖವೇ ದುಃಖದಿಂದ ಪಾರಾಗುವ ದಾರಿಯನ್ನು ತೋರುತ್ತದೆ ಎಂಬ ಒಂದು ವಿಶಾಲ ಭಿತ್ತಿ ತಂತಾನೆ ಇಲ್ಲಿ ಅಮೂರ್ತ ತತ್ವವಾಗಿ ಕೆಲಸ ಮಾಡಿತ್ತು. ಅದಕ್ಕೆ ಸಹನೆಯ ಒಂದು ವಿರಾಟ್ ಪರಂಪರೆ ಇತ್ತು.

ಎರಡನೆ ಹಂತ ತೊಂಬತ್ತರ ದಶಕದ ಜಾಗತೀಕರಣದ ಕಾಲದ ರಾಜಕೀಯ ಪಕ್ಷಗಳು ಅಧಿಕಾರವನ್ನು ತಮಗೆ ಬೇಕಾದಂತೆ ಬಾಚಿಕೊಂಡು ಗದ್ದುಗೆಗೆ ಏರುವ ಕಾಲಘಟ್ಟ. ಈ ಕಾಲಮಾನ ಭಾರತದ ಇಡೀ ಎಲ್ಲ ಎಡಪಂಥೀಯ ಚಳವಳಿಗಳನ್ನು ನುಂಗಿ ಅರಗಿಸಿಕೊಂಡ ಕಾಲ. ಎಡಪಂಥೀಯ ತತ್ವ ಸಮ್ಮಿಶ್ರ ಸರ್ಕಾರಗಳಲ್ಲಿ ಏದುಸಿರು ಬಿಡುತ್ತಿತ್ತು.

ದೇಶದಲ್ಲಿ ಆಡಳಿತಾರೂಢ ಪಕ್ಷಗಳು ಒಕ್ಕೂಟ ಮಾಡಿಕೊಂಡು ಜಾಗತೀಕರಣದ ಬದಲಾವಣೆಗಳಲ್ಲಿ ರಾಜಕೀಯ ಉದ್ಯಮವನ್ನು ಅದ್ಧೂರಿಯಾಗಿ ಬಲಪಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಎಲ್ಲ ಎಡಪಂಥೀಯ ಶಕ್ತಿಗಳು ವಿರಸದಲ್ಲಿ ದೂರ ದೂರ ಉಳಿದ ಅಸಂಗತ ದುರಂತ ಇಡೀ ದೇಶದ ಎಲ್ಲ ದಮನಿತರ ಚಳವಳಿಯನ್ನು ಆತ್ಮಹತ್ಯೆಯತ್ತ ದೂಡಿತು.

ಅವೈದಿಕ ಪ್ರತಿರೋಧಗಳು ಅನಿವಾರ್ಯವಾಗಿ ರಾಜಕೀಯ ಒಪ್ಪಂದಗಳಿಗೆ ಒಳಗಾಗಬೇಕಿತ್ತು. ಅಂತಹ ಕಾನ್ಸಿರಾಮ್ ಅದನ್ನು ಮಾಡಿ ವಿಫಲರಾಗಿದ್ದರು. ಪೊಲಿಟಿಕಲ್ ಐಡಿಯಾಲಜಿ ಅಲ್ಲ ಮುಖ್ಯ, ಧಾರ್ಮಿಕ ತತ್ವವೇ ಭಾರತದ ಪ್ರಜಾಪ್ರಭುತ್ವದ ಅಂತಿಮ ನೀತಿ ಎಂದೆನಿಸಿದಾಗ ದಲಿತ ಚಳವಳಿ ತಬ್ಬಲಿಯಾಗಿತ್ತು. ಅವರ ಜೊತೆಗೆ ಯಾವ ಮಾಕ್ರ್ಸ್‍ವಾದಿಗಳೂ, ಸಮಾಜವಾದಿಗಳೂ, ಜಾತ್ಯಾತೀತ ಹಿಂದುಳಿದ, ಅಲ್ಪ ಸಂಖ್ಯಾತರೂ ಬೆಂಬಲಕ್ಕೆ ನಿಲ್ಲಲಿಲ್ಲ. ರೈತಸಂಘ ತನ್ನ ರೈತರ ಹಿತರಕ್ಷಣೆಯಲ್ಲೇ ಗೂಟಕ್ಕೆ ಹಗ್ಗಕಟ್ಟಿಕೊಂಡಿತು. ಕಾರ್ಮಿಕ ಚಳವಳಿಗಳು, ಹಿಂದುಳಿದ ವರ್ಗಗಳ ಪ್ರತಿರೋಧಗಳು ಜಂಟಿಯಾಗಿದ್ದವು. ದೇಶದಲ್ಲಿ ಆಡಳಿತಾರೂಢ ಪಕ್ಷಗಳು ಒಕ್ಕೂಟ ಮಾಡಿಕೊಂಡು ಜಾಗತೀಕರಣದ ಬದಲಾವಣೆಗಳಲ್ಲಿ ರಾಜಕೀಯ ಉದ್ಯಮವನ್ನು ಅದ್ಧೂರಿಯಾಗಿ ಬಲಪಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಎಲ್ಲ ಎಡಪಂಥೀಯ ಶಕ್ತಿಗಳು ವಿರಸದಲ್ಲಿ ದೂರ ದೂರ ಉಳಿದ ಅಸಂಗತ ದುರಂತ ಇಡೀ ದೇಶದ ಎಲ್ಲ ದಮನಿತರ ಚಳವಳಿಯನ್ನು ಆತ್ಮಹತ್ಯೆಯತ್ತ ದೂಡಿತು. ದಲಿತ ಶಕ್ತಿಯ ಸೋಲು ಇಪ್ಪತ್ತನೆ ಶತಮಾನದಲ್ಲಿ ಬಹುದೊಡ್ಡ ಸೈದ್ಧಾಂತಿಕ ಸೋಲೂ ಹೌದು. ಹಾಗೆಯೇ ಸಾಮಾಜಿಕ ಗತಿಶೀಲತೆಯ ರಾಜಕೀಯ ದುರಂತವೂ ಹೌದು.

ಮೂರನೆಯ ಹಂತ ಚಳವಳಿಗಳ ಅರಾಜಕತೆಯ ಹರಾಜಿನ ಕಾಲಮಾನ. ಆಳುವ ಸರ್ಕಾರಗಳ, ಪಕ್ಷಗಳ, ರಾಜಕಾರಣಿಗಳ ಮುಂದೆ ಸಲಾಮು ಹಾಕಿ ನಿಲ್ಲುವ ವಿಷಾದಘಟ್ಟ. ದಲಿತರು ಆರಂಭದಲ್ಲಿ ತಮಟೆ ಚಳವಳಿ ಎಂದು ಒಂದು ಸಾವಿರ ತಮಟೆಗಳ ಅರೆಬೆತ್ತಲೆ ಮೆರವಣಿಗೆಯಲ್ಲಿ ಲಕ್ಷಾಂತರ ದಲಿತರು ಬಂದು ವಿಧಾನಸೌಧದ ಮುಂದೆ ತಮಟೆ ಬಡಿದಾಗ ಆ ಇಡೀ ದಲಿತ ಸಮಾಜದ ಶತಮಾನಗಳ ಆಕ್ರಂದನವೇ ಪ್ರತಿಫಲಿಸಿ ಸ್ಪಂದಿಸುವಂತೆ ಮಾಡಿತ್ತು. ಮೂರನೇ ಹಂತಕ್ಕೆ ಬರುವಲ್ಲಿ ಅಖಂಡ ದಲಿತ ಚಳವಳಿ ಸ್ವಾರ್ಥಿಗಳ ತವರು ಮನೆಯಾಯಿತು. ರಾಜಕಾರಣಿಗಳ, ಪಕ್ಷಗಳ, ಅಧಿಕಾರಿಗಳ ಜೇಬಿನಲ್ಲಿ ಹೋಗಿ ಸೇರಿಕೊಳ್ಳಲು ಮುಂದಾಯಿತು. ಅಂತಲ್ಲಿ ಚಳವಳಿಯ ತತ್ವ ಕೂಡ ಒಂದು ಮಾರಾಟದ ಸರಕಾಗುವುದು ಕಷ್ಟವೇನಲ್ಲ. ತತ್ವಗಳ ತೂರಿ ತಮ್ಮನ್ನು ತಾವೇ ಮಾರಿಕೊಂಡವರು ದಲಿತ ಚಳವಳಿಯಲ್ಲಿ ಅನೇಕರಿದ್ದಾರೆ. ತತ್ವಗಳನ್ನು ಮಾರಿದವರಿದ್ದಾರೆ. ಅಂಬೇಡ್ಕರ್ ಅಂತವರು ಚಿಲ್ಲರೆ ಬೆಲೆಗೂ ಸಾರಾಸಗಟು ಹರಾಜಿಗೂ ನಿತ್ಯವೂ ಹೇಗೆ ಅಧಿಕಾರಕ್ಕಾಗಿ ಮಾರಾಟವಾಗುತ್ತಲೇ ಇದ್ದಾರೆಂಬುದು ನಮ್ಮ ಕಣ್ಣ ಮುಂದಿನ ವಾಸ್ತವ. ಇವೆಲ್ಲ ಚಳವಳಿಯ ತಾತ್ವಿಕತೆಯ ದುರಂತ ಮತ್ತು ಒಂದು ಉನ್ನತ ಚಳವಳಿಗೆ ತಾತ್ನಿಕತೆ ಎಷ್ಟು ಬೇಕು? ಅದನ್ನು ಹೇಗೆ ಪಾಲಿಸಿ ಕಾಯಬೇಕು ಎಂಬುದೂ ಮುಖ್ಯ ಸಮಸ್ಯೆ.

ತತ್ವಗಳು ಹುಟ್ಟಿದ್ದು ಸಾಮಾಜಿಕ ಚಿಂತನೆಯ ವಿಸಂಗತಿಗಳಿಂದ. ಹಾಗೆಯೇ ಆ ತತ್ವಗಳು ವ್ಯವಸ್ಥೆಗೆ ಮಾರಾಟವಾಗುವುದು ಕೂಡ ಸಾಮಾಜಿಕ ವಿಸಂಗತಿಯೇ ಆಗಿದೆ. ಈ ಮೂರನೇ ಹಂತದ ದಲಿತ ಚಳವಳಿಯ ತಾತ್ವಿಕತೆಗೆ ಈಗ ಯಾವ ಪಾವಿತ್ರ್ಯವೂ ಇಲ್ಲ. ಅದು ಯಾರಿಗೂ ಬೇಕಾಗಿಲ್ಲ. ಸಂವಿಧಾನ ಬದಲಿಸುತ್ತೇವೆ ಎಂದರೂ ಇಡೀ ಕರ್ನಾಟಕದ ಎಲ್ಲ ಮೀಸಲು ಕ್ಷೇತ್ರಗಳು ಬಿಜೆಪಿಗೆ ಮತ ಹಾಕಿವೆ. ಹಾಗಾದರೆ, ದಲಿತ ಚಳವಳಿಯ ನೆಲೆಯಿಂದ ಇದನ್ನು ಹೇಗೆ ಗ್ರಹಿಸಬೇಕು.

ಮುಗ್ಧ ದಮನಿತರಿಗೆ ತಾತ್ವಿಕತೆ ಮುಖ್ಯ ಅಲ್ಲ. ಅದು ಮುಖ್ಯ ಎಂಬ ಎಚ್ಚರ ಉಂಟಾದಾಗ ಅವರ ಆಯ್ಕೆಗಳು ಬದಲಾಗುತ್ತವೆ. ದಲಿತರು ಬಿಜೆಪಿಗೆ ಪ್ರಜ್ಞಾಪೂರ್ವಕವಾಗಿ ಮತ ಹಾಕಿಲ್ಲ. ಬ್ರಾಮಕತೆಯನ್ನು ಬಿತ್ತುವುದೂ ಕೂಡ ಒಂದು ಐಡಿಯಾಲಜಿ. ಅದರ ವಿವರ ಅತ್ತ ಇರಲಿ. ಇಡೀಯಾಗಿ ದಲಿತ ಮತಗಳು ಬಲಪಂಥೀಯರ ವಶವಾಗಿರುವಾಗ, ದಲಿತ ಚಳವಳಿ ಆತ್ಮವಿಮರ್ಶೆ ಮಾಡಿಕೊಂಡಿದೆಯೇ? ಪರ್ಯಾಯ ಚಿಂತನೆ, ಹೋರಾಟಕ್ಕೆ ಮುಂದಾಗಿದೆಯೇ ಎಂದರೆ, ಆ ಯಾವ ವಿವರಗಳು ಕಾಣುತ್ತಿಲ್ಲ. ಆಫ್ರಿಕಾದ ಕಪ್ಪು ಜನಾಂಗದ ಚಳವಳಿ ಜಗತ್ತಿಗೇ ತಿಳಿಯಿತು. ಸುಧಾರಣೆ ಆಯಿತು.

ಜನಾಂಗ ಭೇದಕ್ಕಿಂತಲೂ ಜಾತಿ ಭೇದ ಭಯಾನಕವಾದದ್ದು. ಇದನ್ನು ಏಕಾಂಗಿಯಾಗಿ ಅಂಬೇಡ್ಕರ್ ಜಗತ್ತಿಗೆ ಸಾರಿದ್ದರು. ಭಾರತದ ಅಸ್ಪೃಶ್ಯರ ವಿಮೋಚನೆಯ ಹಾದಿಯಲ್ಲಿ ಆಳವಾಗಿ ಚಿಂತಿಸಿ ಬೌದ್ಧಿಕವಾಗಿ ದೊಡ್ಡ ಚಳವಳಿ ಮಾಡಿದರು. ಅಷ್ಟರ ಮಟ್ಟಿಗೆ ಅಂಬೇಡ್ಕರ್ ಬರಹವೇ ಒಂದು ಮಹಾನ್ ಚಳವಳಿ ಮತ್ತು ಯಾವುದೇ ದಮನಿತರಿಗೆ ಬೇಕಾದ ಒಂದು ವಿರಾಟ್ ಚಳವಳಿಯ ಸಂಹಿತೆ. ಅದರನ್ವಯವೇ ಅವರು ಭಾರತದ ಬಹುಪಾಲು ಎಲ್ಲ ಅವೈದಿಕ ತಳಜಾತಿಗಳಿಗೆ ನ್ಯಾಯ ಸಿಗುವಂತೆ ಸಂವಿಧಾನ ರಚಿಸಿದರು. ವಿಷಾದ ಎಂದರೆ ಇಡೀ ಭಾರತದ ಎಷ್ಟೋ ಮೂಲೆಗಳಲ್ಲಿ ದಮನಿತರಿಗೆ ಅಂಬೇಡ್ಕರ್ ಏನು ಮಾಡಿದ್ದಾರೆ ಎಂಬುದೇ ಗೊತ್ತಿಲ್ಲ.

ಹೊಸ ಬಗೆಯ ಶೋಷಣೆಗೆ ಸ್ವಯಂಸಿದ್ಧ ಹರಾಜಿಗೆ ಹೊರಟಿರುವ ಹೊಸ ಕಾಲದ ದಲಿತ ತಲೆಮಾರು. ಅಂತವರಿಗೆ ಯಾವ ದಲಿತ ಚಳವಳಿಯ ಹಂಗೂ ಇಲ್ಲ. ಆ ವಿಚಾರಗಳು ಬೇಕಿಲ್ಲ.

ಇಪ್ಪತ್ತೊಂದನೆ ಶತಮಾನದಲ್ಲಿ ಅಖಂಡ ದಲಿತ ಭಾರತಕ್ಕೆ ಸಂವಿಧಾನವೇ ಚಳವಳಿಯ ಮ್ಯಾನಿಫೆಸ್ಟೋ ಆಗಬೇಕಿದೆ. ಇದು ಕೂಡ ಒಂದು ಬಗೆಯಲ್ಲಿ ಯುಟೋಪಿಯಾ. ಇವತ್ತು ದಲಿತ ಚಳವಳಿ ಇಲ್ಲ, ಆದರೆ ಅಲ್ಲಲ್ಲಿ ಬೇಕಾದಷ್ಟು ದಲಿತ ನಾಯಕರು ಅಧಿಕಾರ ವ್ಯವಸ್ಥೆಯ ಸುತ್ತ ತಿರುಗಾಡಿಕೊಂಡಿದ್ದಾರೆ. ಜಾಗತೀಕರಣೋತ್ತರ ಕಾಲದಲ್ಲೀಗ ದಲಿತರು ಜೀತದ ಹಳ್ಳಿಗಳ ಬಿಟ್ಟು ಜಾಗತಿಕ ನಗರಗಳತ್ತ ವಲಸೆ ಹೋಗುತ್ತಲೇ ಇದ್ದಾರೆ. ಇದು ಚಳವಳಿ ಅಲ್ಲ. ಹೊಸ ಬಗೆಯ ಶೋಷಣೆಗೆ ಸ್ವಯಂಸಿದ್ಧ ಹರಾಜಿಗೆ ಹೊರಟಿರುವ ಹೊಸ ಕಾಲದ ದಲಿತ ತಲೆಮಾರು. ಅಂತವರಿಗೆ ಯಾವ ದಲಿತ ಚಳವಳಿಯ ಹಂಗೂ ಇಲ್ಲ. ಆ ವಿಚಾರಗಳು ಬೇಕಿಲ್ಲ.

ತತ್ವದ ಅರಿವು ಮತ್ತು ಹೋರಾಟ ಒಂದೇ ದೇಹದ ಎರಡು ಕೈಕಾಲುಗಳಂತೆ ನಡೆದಾಗ ಮಾತ್ರ ತತ್ವಾನ್ವಯ ಕ್ರಾಂತಿ ಆಗುತ್ತದೆ. ದಲಿತತ್ವ, ದಲಿತ ಚಳವಳಿ, ಅದರ ರಾಜಕಾರಣ ಇಂದು ಬಹಳ ದುರ್ಬಲವಾಗಿವೆ. ಅದಕ್ಕೆ ಎಲ್ಲರೂ ಹೊಣೆಗಾರರು. ಆತ್ಯಂತಿಕವಾದ ದಲಿತತ್ವದ ಇವತ್ತಿನ ತಾತ್ವಿಕತೆ ರೂಪುಗೊಳ್ಳುವುದು ಸಾಧ್ಯವೇ ಎಂದರೆ, ಬಹಳ ವಿಷಾದ ಎನಿಸುತ್ತದೆ. ಯಾರು ಅಂಬೇಡ್ಕರ್ ತತ್ವವನ್ನು ಅಂತಿಮ ಗುರಿಗಾಗಿ ಕರೆದೊಯ್ಯಬೇಕಿತ್ತೋ, ಅವರೇ ಅದನ್ನು ಕೈಬಿಟ್ಟಿರುವಂತೆ ಕಾಣುವ ವಿಪರ್ಯಾಸದ ತಾತ್ವಿಕತೆಯಲ್ಲಿ ನಾವೀಗ ಸಿಲುಕಿದ್ದೇವೆ.

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು, ಖ್ಯಾತ ಕಥೆಗಾರರು, ಚಿಂತಕರು.

Leave a Reply

Your email address will not be published.