ದಲಿತ ಚಳವಳಿಯ ದಿಕ್ಕು ಬದಲಾಗಿದೆ

ಚಳವಳಿ ದಿಕ್ಕು ತಪ್ಪಿದೆ ಎನ್ನುವುದಕ್ಕಿಂತಲೂ ದಿಕ್ಕು ಬದಲಾಯಿಸಿದೆ ಮತ್ತು ದುರ್ಬಲಗೊಂಡಿದೆ ಎಂದು ನಾನು ತಿಳಿದಿದ್ದೇನೆ. ದುರ್ಬಲಗೊಂಡಿರುವುದಕ್ಕೆ ಕಾರಣ ಸಂಘಟನೆ ಹಲವು ಹೋಳಾಗಿ ಕವಲೊಡೆದಿರುವುದು.

ನಾನು ದಲಿತ ಚಳವಳಿಯನ್ನು ಹೊರಗಿನಿಂದ ನೋಡಿದವನು. ಚಳವಳಿಯ ಭಾಗವೇ ಆಗಿದ್ದ ಅನೇಕ ಲೇಖಕ ಮಿತ್ರರಿದ್ದಾರೆ. ಅವರಿಂದ ಈ ಪ್ರಶ್ನೆಗೆ ನಿರ್ದಿಷ್ಟ ಹಾಗೂ ಕ್ವಚಿತ್ತಾದ ಉತ್ತರ ದೊರಕಬಹುದು. ದಲಿತ ಚಳವಳಿಯ ಶೃಂಗವಾದ ಬೂಸಾ ಚಳವಳಿ 1973ರಲ್ಲಿ ಪ್ರಾರಂಭವಾದಾಗ ನಾನು ಮೈಸೂರಿನಲ್ಲಿ ಬನುಮಯ್ಯ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಬಸವಲಿಂಗಪ್ಪನವರಿಗೆ ಕುವೆಂಪು ಮತ್ತು ಅನಂತಮೂರ್ತಿಯವರು ಬೆಂಬಲವಾಗಿ ನಿಂತು ಭಾಷಣ ಮಾಡಿದ್ದನ್ನು ಕೇಳಿದ್ದೇನೆ. ಆದರೂ ಚಳವಳಿ ದಿಕ್ಕು ತಪ್ಪಿದೆ ಎನ್ನುವುದಕ್ಕಿಂತಲೂ ದಿಕ್ಕು ಬದಲಾಯಿಸಿದೆ ಮತ್ತು ದುರ್ಬಲಗೊಂಡಿದೆ ಎಂದು ನಾನು ತಿಳಿದಿದ್ದೇನೆ. ದುರ್ಬಲಗೊಂಡಿರುವುದಕ್ಕೆ ಕಾರಣ ಸಂಘಟನೆ ಹಲವು ಹೋಳಾಗಿ ಕವಲೊಡೆದಿರುವುದು. ಅದರ ಕಾರಣವೂ ಸ್ಪಷ್ಟವಾಗಿಯೇ ಇದೆ.

ಯಾವುದೇ ಸಂಘಟನೆ ಬೆಳೆಯುತ್ತಿದ್ದ ಹಾಗೆ, ಬಲಿಷ್ಠವಾಗುತ್ತಿದ್ದ ಹಾಗೆ ಅಧಿಕಾರ ನಾಯಕರನ್ನು ವಿಚಲಿತಗೊಳಿಸುತ್ತದೆ. ಅಲ್ಲಿಗೆ ಹಣವೂ ಸೇರಿಕೊಂಡರೆ ಮುಗಿಯಿತು. ಕಿತ್ತಾಟ ಶುರುವಾಗುತ್ತದೆ. ಇದರಿಂದ ಯಾವ ಸಂಘಟನೆಯೂ ಮುಕ್ತವಾಗಿಲ್ಲ. ಒಂದು ಕಾಲದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಗೆ ಸಾರ್ವತ್ರಿಕ ಮನ್ನಣೆಯಿತ್ತು. ದಲಿತರಷ್ಟೇ  ಅಲ್ಲದೆ ಕೆಳಜಾತಿ ಸವರ್ಣೀಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿತ್ತು. ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಗೆ ಆ ಎಚ್ಚರವಿತ್ತು.

ನಮ್ಮ ಸಂವಿಧಾನದ ಪರಿಚ್ಛೇದ 15 ಮತ್ತು 17ರಲ್ಲಿ ಹಿಂದೂ ಧರ್ಮದೊಳಗೆ ಚಾಲ್ತಿಯಲ್ಲಿರುವ ಜಾತಿಭೇದ ಮತ್ತು ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸಿದೆ, ಆ ಮೂಲಕ ಕಾನೂನಾತ್ಮಕವಾಗಿ ಜಾತಿ ತಾರತಮ್ಯವನ್ನು ಮತ್ತು ಮುಟ್ಟಿಸಿಕೊಳ್ಳದ ಅವಮಾನಕರ ಪದ್ಧತಿಯನ್ನು ಸಮಾಜದಿಂದ ಹೋಗಲಾಡಿಸಿದೆ ಎಂದು ಹೇಳಲಾಗಿದೆ. ಆದರೆ ಶತಮಾನಗಳಿಂದಲೂ ಈ ಮೇಲುಕೀಳಿನ ಆಚರಣೆಯಿಂದ ಆರ್ಥಿಕವಾಗಿ ವಂಚನೆಗೊಳಗಾಗಿದ್ದ ಕೆಳಜಾತಿ ಬಡ ಜನತೆಗೆ ಪರಿಹಾರಾತ್ಮಕ ನೀತಿನಿರೂಪಣೆಗಳು ಸ್ಪಷ್ಟವಾಗಿರಲಿಲ್ಲ. ಅಂಬೇಡ್ಕರ್ ಕಲ್ಪಿಸಿದ ಸಮಾಜವಾದೀ ಪ್ರಜಾಪ್ರಭುತ್ವ ಸಂವಿಧಾನದ ಹೊರಗೇ ಉಳಿಯಿತು. ಅದನ್ನು ಆಳುವ ಸರ್ಕಾರದ ಆಯ್ಕೆಗೆ ಬಿಡಲಾಯಿತು. ಆದ್ದರಿಂದ ಸಾಮೂಹಿಕ ಕೃಷಿ ಪದ್ಧತಿ, ಸರ್ಕಾರದ ಅಧೀನದ ಕೈಗಾರಿಕೆಗಳು, ವಿಮೆ ಇತ್ಯಾದಿ ಕನಸಾಗಿಯೆ ಉಳಿದವು. ಇನ್ನು ಮುಂದೆ ಅವು ನನಸಾಗುವ ಸಾಧ್ಯತೆಗಳು ಕಡಿಮೆ.

ಇಂತಹ ಪರಿಸ್ಥಿತಿಯಲ್ಲಿ ಮೇಲ್ಜಾತಿ ಜನರ ಹಂಗಿನಲ್ಲಿ ಗುಲಾಮೀತನದ ಬದುಕು ಬದುಕುತ್ತಿದ್ದ ಜನರು ಹೇಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕಾಗಿತ್ತು? ದಾಸ್ಯ ಕೊನೆಗೊಳ್ಳಲಿಲ್ಲ. ಶೋಷಣೆ ಮುಂದುವರೆಯಿತು.

ದುಡಿಮೆಗೆ ಭೂಮಿ ಮತ್ತು ವಸತಿಯ ಹಕ್ಕುಗಳಿಲ್ಲದೆ ಮತ್ತೆ ಈ ಅಸಂಖ್ಯಾತ ಅನಕ್ಷರಸ್ಥ ನತದೃಷ್ಟ ಶೋಷಿತ ಸಮುದಾಯ ಭೂಮಾಲಿಕರ ಕೃಪಾಕಟಾಕ್ಷದಲ್ಲಿಯೆ ಬದುಕು ಮುಂದುವರೆಸುವುದು ಅನಿವಾರ್ಯವಾಯಿತು. ಕನಿಷ್ಠ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಲು ಸಂವಿಧಾನ ಕರ್ತೃಗಳಿಗೆ ಸಾಧ್ಯವಾಗಲಿಲ್ಲ [ಆರ್ಥಿಕ ಕಾರಣಗಳಿಂದ ಹೀಗಾಯಿತು ಎಂದು ಸಂವಿಧಾನ ತಜ್ಞ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಭಿಪ್ರಾಯಪಡುತ್ತಾರೆ]. ಇಂತಹ ಪರಿಸ್ಥಿತಿಯಲ್ಲಿ ಮೇಲ್ಜಾತಿ ಜನರ ಹಂಗಿನಲ್ಲಿ ಗುಲಾಮೀತನದ ಬದುಕು ಬದುಕುತ್ತಿದ್ದ ಜನರು ಹೇಗೆ ಸ್ವಂತ ಬದುಕನ್ನು ಕಟ್ಟಿಕೊಳ್ಳಬೇಕಾಗಿತ್ತು? ದಾಸ್ಯ ಕೊನೆಗೊಳ್ಳಲಿಲ್ಲ. ಶೋಷಣೆ ಮುಂದುವರೆಯಿತು.

ದಲಿತ ಚಳವಳಿಯು ಅಂಬೇಡ್ಕರರೊಂದಿಗೇ ಹುಟ್ಟುಪಡೆಯಿತು ಎಂದು ಹೇಳಬೇಕು. ದಲಿತರನ್ನು ರಾಜಕೀಯವಾಗಿ ಒಗ್ಗೂಡಿಸಲು ಮತ್ತು ದಲಿತರ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಕುರಿತು ಹೋರಾಟ ನಡೆಸಲು ಅವರು 1936ರಲ್ಲಿಯೆ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಕಟ್ಟಿದರು. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಪ್ರಚಲಿತವಿದ್ದ ಖೋಟಿ ಪದ್ಧತಿಯನ್ನು ರದ್ದು ಮಾಡಿಸುವಲ್ಲಿ ಯಶಸ್ವಿಯಾದರು. ಸವರ್ಣೀಯರ ಮನೆಗಳಲ್ಲಿ ವಂಶಪಾರಂಪರ್ಯವಾಗಿ ಪುಡಿಗಾಸು ಇಲ್ಲದೆ ಬಿಟ್ಟಿ ಚಾಕರಿ ಮಾಡುತ್ತಿದ್ದವ ರಿಗೆ ಮುಕ್ತಿ ನೀಡಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಮಹರ್ ಜಾತಿಯ ಜನರನ್ನು ಸೈನ್ಯಕ್ಕೆ ಸೇರಿಸಿಕೊಳ್ಳಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಿ ಅದರಲ್ಲಿ ಯಶಸ್ವಿಯೂ ಆದರು. 1941ರಲ್ಲಿ ಮಹರ್ ರೆಜಿಮೆಂಟ್ ಅಸ್ತಿತ್ವಕ್ಕೆ ಬಂದಿತು.

ಶಾಸನ ಸಭೆಗಳಲ್ಲಿ ಸೂಕ್ತ ಪ್ರಾತಿನಿಧ್ಯಕ್ಕಾಗಿ ಹೋರಾಡಿದವರು ಬಾಬಾಸಾಹೇಬ್ ಅಂಬೇಡ್ಕರ್. ಅದರ ಫಲವಾಗಿಯೆ ಭಾರತ ಸರ್ಕಾರದ ಕಾಯಿದೆ, 1919 (Govt. of India Act, 1919) ರಲ್ಲಿ ಕೇಂದ್ರ ಶಾಸನ ಸಭೆಯಲ್ಲಿ ನಿಮ್ನವರ್ಗದ ಪ್ರತಿನಿಧಿಗೆ ಒಂದು ಸ್ಥಾನವನ್ನು ಕಾಯ್ದಿರಿ ಸಲಾಗಿತ್ತು. ಇನ್ನು ಮಹಾಡ್ ಕೆರೆಯ ನೀರಿಗಾಗಿ ಮುತ್ತಿಗೆ ಮತ್ತು ಕಾಳಾರಾಮ್ ದೇವಾಲಯದ ಪ್ರವೇಶ ಸಾಮಾನ್ಯ ಹೋರಾಟಗಳಾಗಿರಲಿಲ್ಲ. ಈ ಸುದೀರ್ಘ ಹೋರಾಟದ ಹಿನ್ನೆಲೆಯಲ್ಲಿ ರಾಮಸೇ ಮೆಕ್‍ಡೊನಾಲ್ಡ್  ನೇತೃತ್ವದ ಬ್ರಿಟಿಷ್ ಸರ್ಕಾರ ‘ಕಮ್ಯುನಲ್ ಅವಾರ್ಡ್’ ಅನ್ನು ಘೋಷಿಸಿತು. ನಿಮ್ನವರ್ಗಗಳಿಗೆ ದ್ವಿಮತದ ಅವಕಾಶದೊಂದಿಗೆ ತಮ್ಮ ನಾಯಕರನ್ನು ತಾವೇ ಆರಿಸಿಕೊಳ್ಳಬಹುದಾಗಿದ್ದ ಆ ಶಕ್ತಿಯುತ ರಾಜಕೀಯ ಅಧಿಕಾರವನ್ನು ಗಾಂಧಿ ಹಠಮಾರಿತನಕ್ಕೆ ಬಿದ್ದು ಆಮರಣಾಂತ ಉಪವಾಸ ಕುಳಿತು ಪೂನಾ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ನಿರ್ವೀರ್ಯಗೊಳಿಸಿಬಿಟ್ಟರು.

ಗಾಂಧಿ ಯಾವ ಮಾಯದಿಂದಲೋ ಹಕ್ಕನ್ನು ಭಿಕ್ಷೆಯಾಗಿ ಪರಿವರ್ತಿಸಿಬಿಟ್ಟಿದ್ದರು. ಭಾರತದಲ್ಲಿ ಚುನಾವಣೆಯು ಜಾತಿ ಆಧಾರಿತವಾದ್ದರಿಂದ ಮೇಲ್ಜಾತಿಯವರು ಮನಸ್ಸು ಮಾಡಿದರೆ ಒಬ್ಬ ದಕ್ಷ, ಪರಿಣತ ರಾಜಕಾರಣಿಯನ್ನು ಒಬ್ಬ ಅನಾಮಿಕ ವ್ಯಕ್ತಿಯ ಮುಂದೆ ನಗಣ್ಯವಾಗಿಸಬಲ್ಲರು ಎಂಬುದಕ್ಕೆ ಇತ್ತೀಚೆಗೆ ನಡೆದ ಚುಣಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಸೋಲು ಒಂದು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತದೆ.

ಸಂವಿಧಾನವೇನೋ ಜಾರಿಯಾಯಿತು. ಭಾರತ ಗಣರಾಜ್ಯವಾಯಿತು. ಶೋಷಿತರಿಗೆ ರಾಜಕೀಯ ಮೀಸಲಾತಿ ಎದ್ದುಕಾಣುವಂತಿದ್ದರೂ ಚುನಾಯಿತ ಶಾಸಕರು, ಸಂಸದರು ದಲಿತರ ಆಯ್ಕೆಯಾಗದಂತೆ ಪೂನಾ ಒಪ್ಪಂದ ನೋಡಿಕೊಂಡಿತು. ಗಾಂಧಿ ಯಾವ ಮಾಯದಿಂದಲೋ ಹಕ್ಕನ್ನು ಭಿಕ್ಷೆಯಾಗಿ ಪರಿವರ್ತಿಸಿಬಿಟ್ಟಿದ್ದರು. ಭಾರತದಲ್ಲಿ ಚುನಾವಣೆಯು ಜಾತಿ ಆಧಾರಿತವಾದ್ದರಿಂದ ಮೇಲ್ಜಾತಿಯವರು ಮನಸ್ಸು ಮಾಡಿದರೆ ಒಬ್ಬ ದಕ್ಷ, ಪರಿಣತ ರಾಜಕಾರಣಿಯನ್ನು ಒಬ್ಬ ಅನಾಮಿಕ ವ್ಯಕ್ತಿಯ ಮುಂದೆ ನಗಣ್ಯವಾಗಿಸಬಲ್ಲರು ಎಂಬುದಕ್ಕೆ ಇತ್ತೀಚೆಗೆ ನಡೆದ ಚುಣಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಸೋಲು ಒಂದು ದೊಡ್ಡ ಉದಾಹರಣೆಯಾಗಿ ನಿಲ್ಲುತ್ತದೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರ ವಹಿಸಿಕೊಂಡ ಮೇಲೆ ಮೀಸಲು ಕ್ಷೇತ್ರಗಳ ಚಹರೆಯೆ ಬದಲಾಯಿತೆನ್ನುವುದು ಗುಟ್ಟಾದ ವಿಷಯವೇನಲ್ಲ. ಪ್ರಸ್ತುತ ಶಾಸನ ಸಭೆಯ 36 ದಲಿತ ಶಾಸಕರಲ್ಲಿ 22 ಮಂದಿ ಸ್ಪೃಶ್ಯ ಶಾಸಕರು. ಇದೂ ಸಹ ಪೂನಾ ಒಪ್ಪಂದದ ಕೊಡುಗೆಯೆ.

ಇಷ್ಟಾದರೂ ಅಲ್ಲಲ್ಲಿ, ಅಷ್ಟಿಷ್ಟು ಅನುದಾನಗಳು, ಶಾಲೆಗಳು, ವಸತಿ ಯೋಜನೆ, ಕುಡಿಯುವ ನೀರು ಇತ್ಯಾದಿ ದಲಿತರಿಗೆಂದು ಮಾಡಿದ ಶಾಸನಗಳು ಮಂದಗತಿಯಲ್ಲಿ ಅನುಷ್ಠಾನ ಗೊಳ್ಳುತ್ತಿದ್ದವು. ಮೇಲ್ಜಾತಿ ಸರ್ಕಾರಗಳು ದಲಿತಪರವಾಗಿರಲು ಸಾಧ್ಯವಿರಲಿಲ್ಲ. ಆದ್ದರಿಂದ ಇತ್ತ ಹೊಲ, ಮನೆ ಇಲ್ಲದೆ ತಮ್ಮ ಮುಂದಿನ ತಲೆಮಾರಿಗೆ ಶಿಕ್ಷಣವನ್ನು ಕೊಡಿಸಲಾಗದೆ ಕೆಳಜಾತಿ, ಅಸ್ಪೃಶ್ಯ ಜನತೆ ಸವರ್ಣೀಯ ಶೋಷಕರ ಕಪಿಮುಷ್ಟಿಯಲ್ಲಿ ಬದುಕು ನಡೆಸುವುದು ಅನಿವಾರ್ಯವಾಯಿತು. ಯಥಾಸ್ಥಿತಿ ಮುಂದುವರೆಯಿತು. ಆಗ ದಲಿತ ಚಳವಳಿ ಚಾರಿತ್ರಿಕ ಅನಿವಾರ್ಯವಾಗಿತ್ತು. ಸುಮಾರು ಎರಡು ದಶಕಗಳ ಕಾಲ ಶೋಷಿತರ ದನಿಯಾಗಿ ಉತ್ತುಂಗದಲ್ಲಿತ್ತು.

ದಲಿತ ಚಳವಳಿ ಶಿಥಿಲಗೊಳ್ಳಲು ಆಳುವ ಸರ್ಕಾರಗಳು, ಪಕ್ಷಗಳು ಕಾರಣವಾಗಿವೆ. ಒಂದು ಕಾಲದಲ್ಲಿ ಅಸ್ಪೃಶ್ಯ ಶಾಸಕ, ಸಂಸದರೇ ಮೀಸಲು ಕ್ಷೇತ್ರಗಳಿಂದ ಆಯ್ಕೆಯಾಗಿ ಬರುತ್ತಿದ್ದರು. ದೇವರಾಜ ಅರಸರ ಕಾಲದಲ್ಲಿ ಹಿಂದುಳಿದ ವರ್ಗ, ಜಾತಿಗಳ ಅಭಿವೃದ್ಧಿಯ ಉದ್ದೇಶದಿಂದ ರಚಿಸಿದ ಹಾವನೂರು ಸಮಿತಿ ಅನುಸೂಚಿತ ಪಟ್ಟಿಯನ್ನು ಪರಿಷ್ಕರಿಸಿ ಕೆಲವು ಸ್ಪೃಶ್ಯ ಜಾತಿಗಳನ್ನು ಸೇರಿಸಿತು. ಅದಾದಮೇಲೂ ರಾಜಕೀಯ ಹಿತಾಸಕ್ತಿಗನುಸಾರವಾಗಿ ಒಂದೊಂದು ಜಾತಿಗಳು ಸೇರ್ಪಡೆಯಾಗುತ್ತಾ ಹೋದವು. ಆಳುವ ಮೇಲ್ಜಾತಿ ವರ್ಗಕ್ಕೆ ಇದು ವರವಾಗಿ ಪರಿಗಣಿಸಿತು. ಅಸ್ಪೃಶ್ಯರೆಂದರೆ ಜಾತೀಯ ಮನಸ್ಸುಗಳಲ್ಲಿ ಈಗಲೂ ಅಸಹ್ಯ ಭಾವನೆ ಇದೆ. ಹೀನಾತಿಹೀನನ ಜಾಗದಲ್ಲಿ ಮತ್ತೊಬ್ಬ ಹೀನ ಜಾತಿಯವನನ್ನು ಕೂರಿಸುವುದು ಮೇಲ್ಜಾತಿ ಮನಸ್ಸಿಗೆ ಸಹ್ಯ, ಅಸ್ಪೃಶ್ಯ ಎಂದಿಗೂ ಅವನಿಗೆ ತಿರಸ್ಕಾರಯೋಗ್ಯ.

ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸದೆ ಅಸ್ಪೃಶ್ಯರು ಉಣ್ಣುತ್ತಿದ್ದ ತಟ್ಟೆಗೆ ಮತ್ತಷ್ಟು ಕೈಗಳನ್ನು ಸೇರಿಸಲಾಯಿತು. ಆಗ ಅಸ್ಪೃಶ್ಯರಾದ ಎಡ, ಬಲ ಜಾತಿಗಳಲ್ಲಿ ಮತ್ತಷ್ಟು ಬಿರುಕು ಹೆಚ್ಚಾಯಿತು. ಮೂಲ ದಲಿತ ಸಂಘಟನೆ ಟಿಸಿಲೊಡೆಯಿತು ಮತ್ತು ಬಡವಾಯಿತು.

ದಲಿತ ಸಂಘಟನೆ ಆಗ ಗೊಂದಲದಲ್ಲಿ ಬಿದ್ದಿತು. ದಲಿತರು ಎಂದರೆ ಯಾರು? ಯಾರನ್ನು ಪ್ರತಿನಿಧಿಸುವುದು. ಆ ಹೊಸ ಪರಿಶಿಷ್ಟ ಜಾತಿಗಳು ದಲಿತ ಪದವನ್ನು ಹಚ್ಚಿಕೊಂಡು ತಮ್ಮ ತಮ್ಮ ಜಾತಿಗೊಂದು ಸಂಘಟನೆಯನ್ನು ಕಟ್ಟಿಕೊಂಡವು. ಆಳುವ ಮೇಲ್ಜಾತಿ ಜನರಿಂದ ಪ್ರೋತ್ಸಾಹವೂ ಸಿಕ್ಕಿತು. ಸಂಘಟನೆಗಳೂ ಬೆಳೆದವು, ಜಾತಿಗಳೂ ಬೆಳೆದವು. ಮೀಸಲಾತಿಗೆ ಕಾರಣೀಭೂತರಾದ ಅಂಬೇಡ್ಕರರನ್ನು ಬದಿಗೆ ಸರಿಸಿ ಅವರವರ ಜಾತಿ ನಾಯಕರನ್ನೇ ಐಕಾನ್‍ಗಳನ್ನಾಗಿ ಮಾಡಿಕೊಂಡರು. ಆ ಜಾತಿಗಳೂ ಕಡು ಬಡ ಜಾತಿಗಳೇ, ಅವರಿಗೂ ವಿಶೇಷ ಪೋಷಣೆ ಬೇಕಾಗುತ್ತದೆ. ಅದನ್ನು ಅಲ್ಲಗಳೆಯಲಾಗದು. ಆದರೆ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸದೆ ಅಸ್ಪೃಶ್ಯರು ಉಣ್ಣುತ್ತಿದ್ದ ತಟ್ಟೆಗೆ ಮತ್ತಷ್ಟು ಕೈಗಳನ್ನು ಸೇರಿಸಲಾಯಿತು. ಆಗ ಅಸ್ಪೃಶ್ಯರಾದ ಎಡ, ಬಲ ಜಾತಿಗಳಲ್ಲಿ ಮತ್ತಷ್ಟು ಬಿರುಕು ಹೆಚ್ಚಾಯಿತು. ಮೂಲ ದಲಿತ ಸಂಘಟನೆ ಟಿಸಿಲೊಡೆಯಿತು ಮತ್ತು ಬಡವಾಯಿತು.

ಮತ್ತೊದು ಕಾರಣ ಮೇಲ್ಜಾತಿ ಜನರು ಸಂಘಟಿತರಾದದ್ದು. ಕುರಿಗಳು ಸಂಘಟಿತರಾಗುವುದು ಆತ್ಮರಕ್ಷಣೆಗಾಗಿ. ತೋಳಗಳು ಸಂಘಟನೆ ಮಾಡಿಕೊಳ್ಳುವುದು ಆಕ್ರಮಣಕ್ಕಾಗಿಯಲ್ಲವೆ? ಆನೆ, ಹುಲಿ, ಸಿಂಹಗಳು ಸಂಘಟಿತರಾದರೆ ಕಾಡನ್ನು ಆಶ್ರಯಿಸಿದ ಉಳಿದ ಪ್ರಾಣಿಗಳ ಗತಿ ಏನು? ಇವರಿಗೆ ಅಧಿಕಾರ, ಹಣ ಅಷ್ಟೇ ಅಲ್ಲ ಆಯಾ ಜಾತಿಯ ಮಠ ಮಾನ್ಯಗಳ ಬೆಂಬಲವೂ ಜೊತೆಗಿರುತ್ತದೆ. 80, 90ರ ದಶಕದಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಗ್ರಾಮೀಣ ಭಾಗದಲ್ಲಿ ಊಳಿಗಮಾನ್ಯ ಪರಿಸ್ಥಿತಿ ಮುಂದುವರೆದಿದ್ದರೂ ಅಧಿಕಾರ ಕೇಂದ್ರಗಳಲ್ಲಿ ಅಷ್ಟಿಷ್ಟು ಅನುಕಂಪವಾದರೂ ಇರುತ್ತಿತ್ತು. ಈಗ ಅದು ಇಲ್ಲವಾಗಿದೆ. ಈರ್ಷ್ಯ ಬೆಳೆದಿದೆ. ಬಡ್ತಿ ಮೀಸಲಾತಿ ವಿರುದ್ಧ ಹೋರಾಟ ಅದೆಷ್ಟು ಸಂಘಟಿತವಾಗಿತ್ತು, ಪ್ರಬಲವಾಗಿತ್ತು ಎಂಬುದು ಈಗಾಗಲೇ ವ್ಯಕ್ತವಾಗಿದೆ. ಕೊನೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಲು ದಲಿತ ಮಂತ್ರಿಗಳ ಮಟ್ಟದಲ್ಲಿ ಬಂಡೇಳಬೇಕಾಯಿತು ಎಂದರೆ ಆಡಳಿತರೂಢ ಮೇಲ್ಜಾತಿ ಮನಸ್ಸಿಗೆ ಅಸ್ಪೃಶ್ಯರನ್ನು ಕಂಡರೆ ಎಷ್ಟು ಅಸಹನೆಯಿದೆ ಎಂಬುದು ತಿಳಿಯುತ್ತದೆ.

ರಾಜಕೀಯ ಒಲವು ತೋರಿಸಿದ್ದು ಸಂಘಟನೆ ಶಿಥಿಲಗೊಳ್ಳುವುದಕ್ಕೆ ಇನ್ನೊಂದು ಕಾರಣ. ಕೃಷ್ಣಪ್ಪನವರೇ ಅದನ್ನು ಮೊದಲು ಮಾಡಿದರು. ಆದರೆ ಯಶಸ್ಸು ಸಿಗಲಿಲ್ಲ. ಅಧಿಕಾರ ಸಿಗಲಿ, ಬಿಡಲಿ ಪಕ್ಷಗಳ ಹಂಗಿಗೆ ಒಳಗಾಗುವುದೇ ಸಂಘಟನೆಯ ದೌರ್ಬಲ್ಯವಾಗುತ್ತದೆ. ಕಾರ್ಯಕರ್ತರು ಹಲವು ಪಕ್ಷಗಳಲ್ಲಿ ಚದುರಿಹೋಗುತ್ತಾರೆ. ಹಾಗೆ ಆಯಿತು ಕೂಡ. ಉತ್ತರ ಪ್ರದೇಶದಲ್ಲಿ ನಡೆದ ಪ್ರಯೋಗ ಮಿಕ್ಕೆಲ್ಲ ಕಡೆ ಯಶಸ್ಸು ಕಾಣುತ್ತದೆ ಎಂದು ನಂಬಿಕೊಳ್ಳಲಾಗದು.

ನಿಜವಾಗಿಯೂ ಹಿರಿಯರನೇಕರು ತಮ್ಮ ಜೀವನವನ್ನು ಸಂಘಟನೆಗಾಗಿ ತ್ಯಾಗ ಮಾಡಿ ಹೋಗಿದ್ದಾರೆ. ಈಗ ಕೆಲವರು ಇನ್ನೋವಾ ಕಾರುಗಳಲ್ಲಿ ಓಡಾಡುತ್ತಿರುವುದು ಅಷ್ಟೇ ನಿಜ. ಅಂಥವರು ರಾಜಕಾರಣದಲ್ಲಿ ತೊಡಗಿಸಿಕೊಂಡು ಇನ್ನೂ ಬೈಸಿಕಲ್ ಹಂತದಲ್ಲಿರುವವರಿಗೆ ನಾಯಕತ್ವವನ್ನು ಬಿಟ್ಟುಕೊಟ್ಟರೆ ಸಂಘಟನೆ ಬೆಳೆಯುವ ಸಾಧ್ಯತೆ ಹೆಚ್ಚು.

ಚಳವಳಿ ಕಾವು ಕಳೆದುಕೊಳ್ಳುವುದಕ್ಕೆ ಆರ್ಥಿಕ ಸ್ವಾವಲಂಬನೆಯನ್ನು ಒಂದು ಕಾರಣವಾಗಿ ಪರಿಗಣಿಸಬಹುದು. ಕಳೆದ ಎರಡು ದಶಕಗಳಿಂದೀಚೆಗೆ ಮಧ್ಯಮ ವರ್ಗ ಬೆಳೆಯುತ್ತಿದೆ. ಅದರಲ್ಲಿ ದಲಿತರೂ ಪಾಲುದಾರರೆ. ಶೈಕ್ಷಣಿಕವಾಗಿಯೂ ಮೊದಲಿಗಿಂತಲೂ ಮುಂದಿದ್ದಾರೆ. ಎಲ್ಲರೂ ತಮ್ಮತಮ್ಮಲ್ಲಿಯೆ ನಾಯಕತ್ವದ ಲಕ್ಷಣಗಳನ್ನು ಶೋಧಿಸತೊಡಗುತ್ತಾರೆ. ಆದ್ದರಿಂದ ಹಿಂಬಾಲಕರಾಗುವವರು ಕಮ್ಮಿ. ಹಿರಿಯ ಮಿತ್ರರಾಗಿದ್ದ ದಸಂಸದ ಚಂದ್ರಪ್ರಸಾದ್ ತ್ಯಾಗಿ ಒಮ್ಮೆ ಹೇಳುತ್ತಿದ್ದರು. ಪ್ರಾರಂಭದ ದಿನಗಳಲ್ಲಿ ಜೇಬಿನಲ್ಲಿ ಬಸ್ ಚಾರ್ಜಿಲ್ಲದೆ ಹೊರಟುಬಿಡುತ್ತಿದ್ದರಂತೆ. ಹಳ್ಳಿಯಿಂದ ಹಳ್ಳಿಗೆ ಕಾಲುನಡಿಗೆಯಲ್ಲೆ ಘೋಷಣೆಗಳನ್ನು ಕೂಗುತ್ತಾ ಹೋಗುತ್ತಿದ್ದರು, ರಾತ್ರಿಯಾದರೆ ರಸ್ತೆಯ ಪಕ್ಕದಲ್ಲಿ ಸುದ್ದಿ ಪತ್ರಿಕೆಗಳನ್ನು ಹಾಸಿಕೊಂಡು ಮಲಗುತ್ತಿದ್ದರಂತೆ. ನಿಜವಾಗಿಯೂ ಹಿರಿಯರನೇಕರು ತಮ್ಮ ಜೀವನವನ್ನು ಸಂಘಟನೆಗಾಗಿ ತ್ಯಾಗ ಮಾಡಿ ಹೋಗಿದ್ದಾರೆ. ಈಗ ಕೆಲವರು ಇನ್ನೋವಾ ಕಾರುಗಳಲ್ಲಿ ಓಡಾಡುತ್ತಿರುವುದು ಅಷ್ಟೇ ನಿಜ. ಅಂಥವರು ರಾಜಕಾರಣದಲ್ಲಿ ತೊಡಗಿಸಿಕೊಂಡು ಇನ್ನೂ ಬೈಸಿಕಲ್ ಹಂತದಲ್ಲಿರುವವರಿಗೆ ನಾಯಕತ್ವವನ್ನು ಬಿಟ್ಟುಕೊಟ್ಟರೆ ಸಂಘಟನೆ ಬೆಳೆಯುವ ಸಾಧ್ಯತೆ ಹೆಚ್ಚು.

ದಲಿತರ ವಿಮೋಚನೆಗೆ ಬಾಬಾಸಾಹೇಬರು ಸ್ಪಷ್ಟವಾದ ನೀಲನಕ್ಷೆಯನ್ನು ಹಾಕಿಕೊಟ್ಟಿದ್ದಾರೆ. ಜಾತಿವಿನಾಶ ಅವರ ಹೋರಾಟದ ಕೇಂದ್ರ ನಿಲುವು. ಅಸ್ಪೃಶ್ಯ ಜಾತಿಗಳು ತಮ್ಮ ಒಳ ಪಂಗಡಗಳನ್ನು ಮರೆತು ಧರ್ಮಾಂತರದಲ್ಲಿ ಒಂದಾಗಿ ಪಾರಂಪರಿಕವಾಗಿ ಬಂದಿರುವ ಕೀಳರಿಮೆಯನ್ನು ಹೋಗಲಾಡಿಸಿಕೊಂಡು, ಸ್ವಾಭಿಮಾನದ ಬದುಕಿನತ್ತ ಹೆಜ್ಜೆ ಹಾಕಿದರೆ ಮಾತ್ರ ಸಾಮಾಜಿಕ ಸಮಾನತೆಯನ್ನು ಗಳಿಸಲು ಸಾಧ್ಯ. ಸಾಮಾಜಿಕ ಸಮಾನತೆಯಿಲ್ಲದೆ ಆರ್ಥಿಕ ಸ್ವಾವಲಂಬನೆ ಗೌರವವನ್ನು ತಂದುಕೊಡುವುದಿಲ್ಲ. ಜಾತಿ ಕಳೆದುಕೊಂಡವರ ತಂಟೆಗೆ ಮೇಲ್ಜಾತಿಯವರು ಬರುವುದಿಲ್ಲ. ಇದನ್ನು ನಾನು ಅನೇಕ ಹಳ್ಳಿಗಳಲ್ಲಿ ಬೌದ್ಧರು ಮತ್ತು ಕ್ರೈಸ್ತರಾಗಿರುವವರ ಘನತೆ ಮತ್ತು ಜೀವನಕ್ರಮವನ್ನು ಕಣ್ಣಾರೆ ನೋಡಿ ಹೇಳುತ್ತಿದ್ದೇನೆ. ದಲಿತರು ದೇವಸ್ಥಾನಕ್ಕೆ ಹೋಗಿ ಹೊರಗೆ ನಿಂತುಕೊಳ್ಳುವವರಾದರೆ ಮೇಲ್ಜಾತಿಯವರಿಗೆ ಅವರು ಕೀಳು. ದೇವಸ್ಥಾನಕ್ಕೆ ಹೋಗದವರಾದರೆ ಅವರಿಗೆ ಸಮಾನರು. ಈ ಒಳಗುಟ್ಟನ್ನು ಅರಿತುಕೊಂಡು ವಚನ ಚಳವಳಿಯ ಮಾದರಿಯಲ್ಲಿ ಹೊಸ ಬಿಸಿರಕ್ತದ ಯುವ ಜನತೆ ದಲಿತ ಚಳವಳಿಯನ್ನು ಮುನ್ನಡೆಸಬೇಕಾಗಿದೆ.

*ಲೇಖಕರು ಚಾಮರಾಜನಗರ ಜಿಲ್ಲೆಯ ಮೂಡ್ನಾಕೂಡು ಗ್ರಾಮದವರು. ಕರ್ನಾಟಕ ಸಾರಿಗೆ ಇಲಾಖೆಯಲ್ಲಿ ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಕಥೆ, ಕವಿತೆ, ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ.

Leave a Reply

Your email address will not be published.