ದಲಿತ ಜಗತ್ತಿನ ಒಡಕು ಬಿಂಬಗಳು

ದಲಿತ ಚಳವಳಿಯ ಹಿಂದಿನ ನಡೆಗಳು ಎಬ್ಬಿಸಿದ್ದ ವೈರುಧ್ಯಗಳನ್ನು ಸಹ ತಣ್ಣಗೆ ಕೂತು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ದಲಿತೇತರ ಜಗತ್ತನ್ನು ತಾತ್ವಿಕ ಹಾಗೂ ವೈಚಾರಿಕ ಕಾರಣಗಳಿಗಾಗಿ ಸದಾ ವಿರೋಧಿಸುತ್ತಲೇ ಅಮಾನತ್ತಿನಲ್ಲಿ ಇಟ್ಟು ನೋಡುವ ತೀವ್ರವಾದಿತನದ ದಲಿತತ್ವವು ಈಗ ಅಗತ್ಯವಿಲ್ಲ.

ದಲಿತರು ಬಂದರು ದಾರಿ ಬಿಡಿ ದಲಿತರ ಕೈಗೆ ರಾಜ್ಯ ಕೊಡಿ ಎಂಬ ಮೂರು ದಶಕಗಳ ಹಿಂದೆ ಎದ್ದ ಘೋಷಣೆಯನ್ನು ಈಗ ಎಲ್ಲಾದರೂ ನಾವು ಕೇಳಿಸಿಕೊಂಡರೆ ಇದು ಯಾವ ಬಣದ ಸಂಘಟನೆಯವರ ಕೂಗು, ಎಡವೋ, ಬಲವೋ ಎಂದು ಪ್ರತ್ಯೇಕವಾಗಿ ನೋಡುವ ಸೀಳುತನ ನಮ್ಮೊಂದಿಗಿರುತ್ತದೆ. ಇಷ್ಟು ಪ್ರಮಾಣದಲ್ಲಿ ಈ ದಲಿತತ್ವವು ಸಾರ್ವಜನಿಕವಾಗಿ ಛಿದ್ರಗೊಳ್ಳುತ್ತಿದೆ. ದಲಿತತ್ವ ಎಂಬುದರ ಒಳ ವಿರೋಧಾಭಾಸಗಳು ಏನೇ ಇದ್ದರೂ ಆರೋಗ್ಯಕರವಾಗಿ ಚರ್ಚಿಸಬಹುದು. ಆದರೆ ಅದೇ ಒಡಕಿನ ಬಿಂಬಗಳ ಆಗರವಾದರೆ ಹೇಗೆ ಸಹಿಸುವುದು?

ದಲಿತ ಜನಾಂಗಗಳು ಮತ್ತಷ್ಟು ನತದೃಷ್ಟ ಸಮುದಾಯಗಳಾಗಿ ಅಂಚಿಗೆ ಸರಿಯುತ್ತಿವೆ ಎನ್ನಬಹುದು. ಈ ಸಮುದಾಯಗಳು ತಮ್ಮ ರಾಜಕೀಯ ವೈಪರೀತ್ಯಗಳಿಂದಾಗಿಯೇ ಹೀಗಾಗುತ್ತಿವೆ ಎಂಬುದು ಸರಿಯೇ ಆದರೂ ಈ ಸಮಾಜದ ರಾಜಕಾರಣವು ಸಹ ಇಂತಹ ಒಡಕಿನ ಕಿಚ್ಚಿಗೆ ಚಿತಾವಣೆ ಮಾಡುತ್ತ ಬರುತ್ತಿದೆ. ಈಗೀಗಂತೂ ಈ ದಲಿತತ್ವದ ಅರ್ಥ ವಿವರಣೆಗಳು ಒಡಕಿನ ಬಿಂಬಗಳ ಕೊಲ್ಯಾಜ್ಡ್ ಕ್ಯಾನ್ವಾಸ್ ನಂತೆ ಕಾಣುತ್ತಿವೆ. ಈ ವಿಚಾರದಲ್ಲಿ ದಲಿತಲೋಕ ತನ್ನ ಆಂತರಿಕ ವಿಕ್ಷಿಪ್ತತೆಗಳಿಂದಲೇ ಈಗ ಹೆಚ್ಚು ಭಗ್ನತೆಗೆ ಒಳಗಾಗುತ್ತಿದೆ ಎಂಬುದು ಸಹ ಪ್ರಧಾನ ಕಾರಣವಾಗಿದೆ.

ಕಳೆದ ಒಂದು ದಶಕದ ನಂತರದಲ್ಲಿ ದಲಿತ ಪದ ಪರಿಕಲ್ಪನೆಗಳ ಬಗ್ಗೆ ಮೂಡಿದ ಗುಮಾನಿ, ಅಪಸ್ವರ ಹಾಗೂ ಎದ್ದ ವಿಮರ್ಶೆಗಳನ್ನು ಗಮನಿಸಿದರೆ, ಈಗ ಇದು ಹೊಸ ಕಾಲದ ಹೊಸ ರಾಜಕೀಯ ಹಾಗೂ ಸಾಂಸ್ಕೃತಿಕ ಒಳಗೊಳ್ಳುವಿಕೆಯ ಒತ್ತಾಸೆಗಳಿಂದ ಮರುರೂಪ ಪಡೆಯಬೇಕಿದೆ ಎಂಬುದ್ದನ್ನು ಯಾರೂ ಅಲ್ಲಗಳೆಯಲಾರರು. ಆದರೆ ಈ ವಿಚಾರ ಹೇಗಿದೆ ಎಂದರೇ, ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನು ವಂತಾಗಿದೆ.

ಈಗಂತೂ ಈ ಸಮಾಜದಲ್ಲಿ ಇವು ಸಹಜವೆನ್ನುವಂತಾಗಿಬಿಟ್ಟಿವೆ. ದುರಂತವೆಂದರೆ ದಲಿತತ್ವ ಎಂಬ ಏಕತ್ವದ ನೆರಳಲಲ್ಲಿ ಸ್ವತಃ ದಲಿತರಲ್ಲಿಯೇ ಈ ವಿದ್ಯಮಾನಗಳಿಗೆ ಪ್ರಬಲವಾದ ಪ್ರತಿರೋಧವಾಗಲೀ, ಪ್ರತಿಭಟನೆಯಾಗಲೀ ಒಡಮೂಡುವ ಸಾಧ್ಯತೆಗಳೇ ಗೋಚರವಾಗುತ್ತಿಲ್ಲ.

ಒಂದೆಡೆ ಆಧುನಿಕೋತ್ತರ ಸಮಾಜವೆಂದು ಸಮಾಜ ವಿಜ್ಞಾನಿಗಳು  ಸಿದ್ಧಾಂತಗಳನ್ನು ಹೊಸೆಯುತ್ತಿದ್ದರೆ, ಮತ್ತೊಂದೆಡೆ ಈ ಜಾತಿ ಸಮಾಜದಲ್ಲಿ ದಲಿತರ ಬಹಿಷ್ಕಾರ, ಕಗ್ಗೊಲೆ ಮತ್ತು ಸಾಮಾಜಿಕ ಅವಮಾನದ ವಿದ್ಯಮಾನಗಳು ನಿರಾತಂಕವಾಗಿ ನಡೆಯುತ್ತಲೇ ಇರುತ್ತವೆ. ಈಗಂತೂ ಈ ಸಮಾಜದಲ್ಲಿ ಇವು ಸಹಜವೆನ್ನುವಂತಾಗಿಬಿಟ್ಟಿವೆ. ದುರಂತವೆಂದರೆ ದಲಿತತ್ವ ಎಂಬ ಏಕತ್ವದ ನೆರಳಲಲ್ಲಿ ಸ್ವತಃ ದಲಿತರಲ್ಲಿಯೇ ಈ ವಿದ್ಯಮಾನಗಳಿಗೆ ಪ್ರಬಲವಾದ ಪ್ರತಿರೋಧವಾಗಲೀ, ಪ್ರತಿಭಟನೆಯಾಗಲೀ ಒಡಮೂಡುವ ಸಾಧ್ಯತೆಗಳೇ ಗೋಚರವಾಗುತ್ತಿಲ್ಲ. ಅದರಲ್ಲೂ ಸ್ಪ್ರಶ್ಯ ದಲಿತರು ಹಾಗೂ ಅಸ್ಪೃಶ್ಯ ದಲಿತರ ಜಗತ್ತಿನ ನಡುವೆ ಸಾಮಾಜಿಕ ಬಾಂಧವ್ಯವೇ ಭ್ರಮೆ ಎನ್ನುವಂತಾಗಿದೆ. ಮೇಲಾಗಿ ದಲಿತ ಜಾತಿಗಳ ಒಳಪಂಗಡೀಕರಣಗಳು ರಾಜಕೀಯ ದನಿಯ ನೆಪದಲ್ಲಿ ನಯವಾಗಿಯೇ ಈ ಸಮಾಜದ ಐಕ್ಯತೆಯನ್ನು ಒಡೆದು ಹಾಕುತ್ತಿವೆ. ಈ ಸಮಾಜದ ಜಾತಿ ರಾಜಕಾರಣವು ಇಂತಹ ವಿಪರೀತಗಳನ್ನು ತಣ್ಣಗೆ ಪೋಷಿಸುತ್ತಿದೆ ಕೂಡ.

ಮಾಂಸದಂಗಡಿಯಲ್ಲಿ ನವಿಲುಗಳು ಎಂಬ ಕವಿ ಎನ್ಕೆ ಹನುಮಂತಯ್ಯನವರ ಕಾವ್ಯ ಪ್ರತಿಮೆ ಆಂತರಿಕವಾಗಿ ಘಾಸಿಗೊಂಡಿರುವ ದಲಿತ ಲೋಕದ ದುರಂತವನ್ನು ಸೂಚಿಸುತ್ತಿರಬಹದು. ಈ ಬಗ್ಗೆ ಹೊಸ ತಲೆಮಾರು ಹಾಗೂ ಹಳೆಯ ತಲೆಮಾರಿನ ದಲಿತರಲ್ಲಿ ಎದ್ದಿರುವ ವಿಷಾದದ ಜೊತೆಗಿನ ಗೊಂದಲಗಳು ಸಹ ಅಂತರವನ್ನು ಸೃಷ್ಟಿಸುತ್ತಿದ್ದು, ದಲಿತ ನಾಯಕತ್ವದ ವಿಚಾರದಲ್ಲಿ ಶೂನ್ಯತೆ ಆವರಿ ಸುತ್ತಿರುವುದರ ಮುನ್ಸೂಚನೆಯಂತೆ ಈ ಎಲ್ಲ ಬೆಳವಣಿಗೆಗಳು ದಿಗಿಲನ್ನು ಇಮ್ಮಡಿಗೊಳಿಸುತ್ತಿವೆ. ಈ ಕಾಲದ ಸಾಮಾಜಿಕ ಐಕ್ಯತೆಯ ನುಡಿ ಮತ್ತು ನಡೆಗಳನ್ನು ಮತ್ತೆ ಪುಟಿದೇಳಿಸುವುದರ ಮೂಲಕ ಈ ದಲಿತತ್ವವನ್ನು ಸಶಕ್ತಗೊಳಿಸುತ್ತದೆ ಎಂದು ನಿರೀಕ್ಷಿಸಿದಾಗ ಸದ್ಯಕ್ಕಂತೂ ಈ ಆಶಾವಾದದ ಮೂರ್ತರೂಪಗಳು ವಿರಳವೆನ್ನುವಂತಾಗಿದೆ. ಮೇಲಾಗಿ ಈ ಎರಡು ತಲೆಮಾರುಗಳ ನಡುವೆ ಸಾಮರಸ್ಯ ಹಾಗೂ ಹೊಂದಾಣಿಕೆಯ ಸಂದರ್ಭಗಳೇ ಸೃಷ್ಟಿಯಾಗುತ್ತಿಲ್ಲ ಎಂಬ ನಿರಾಸೆಯು ನಮ್ಮನ್ನು ಮತ್ತಷ್ಟು ಅಸಹಾಯಕರನ್ನಾಗಿಸುತ್ತದೆ.

ವಿಚಿತ್ರವೆಂದರೆ ದಲಿತ ಚಳವಳಿಯು ತೀವ್ರವಾಗಿದ್ದ ಕಾಲದಲ್ಲಿ ದಲಿತ ಸಮುದಾಯಗಳ ಬಗ್ಗೆ ದಲಿತೇತರರಲ್ಲಿ ಸಾರ್ವಜನಿಕವಾಗಿದ್ದ ನೈತಿಕ ಹಾಗೂ ಕಾನೂನಾತ್ಮಕ ಭಯ ಕೂಡ ಈಗ ಇಲ್ಲವಾಗಿದೆ. ಮೇಲಾಗಿ ಎಲ್ಲ ಪಕ್ಷದಲ್ಲೂ ದಲಿತ ಪಕ್ಷ ರಾಜಕಾರಣಿಗಳು ಇದ್ದರೂ ಅವರ್ಯಾರೂ ದಲಿತ ರಾಜಕಾರಣಿಗಳಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಿಲ್ಲ.

ಒಡಕು ಈಗ ರಾಜಕೀಯ ಬಂಡವಾಳವಾಗಿ ಹೆಚ್ಚು ಕ್ರಿಯಾಶೀಲವಾಗುತ್ತಿದೆ. ಪ್ರಸಕ್ತ ಜಾತಿ ಹಾಗೂ ಫ್ಯೂಡಲ್ ರಾಜಕಾರಣವು ಸಹ ದಲಿತ ರಾಜಕಾರಣದ ಸ್ವಾಯತ್ತತೆಯನ್ನೆ ಬುಡಮೇಲು ಮಾಡುತ್ತಿದೆ. ಈ ವಿಚಾರದಲ್ಲಿ ವಿಘಟನೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿದೆ ಎನ್ನಬಹದು. ಹಾಗೆಯೇ ಈ ದಲಿತ ಎಂಬುದು ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯ ಅಂತಃಸತ್ವ ಎಂಬ ಎಪ್ಪತ್ತರ ದಶಕದ ಪ್ರತಿಪಾದನೆಗಳು ಈಗ ತೀರಾ ಸರಳವಾದ ರಾಜಕೀಯ ಒಡಕುಗಳಿಗೆ ಬಲಿಯಾಗುತ್ತಿವೆ ಎಂದೇ ಹೇಳಬೇಕು. ವಿಚಿತ್ರವೆಂದರೆ ದಲಿತ ಚಳವಳಿಯು ತೀವ್ರವಾಗಿದ್ದ ಕಾಲದಲ್ಲಿ ದಲಿತ ಸಮುದಾಯಗಳ ಬಗ್ಗೆ ದಲಿತೇತರರಲ್ಲಿ ಸಾರ್ವಜನಿಕವಾಗಿದ್ದ ನೈತಿಕ ಹಾಗೂ ಕಾನೂನಾತ್ಮಕ ಭಯ ಕೂಡ ಈಗ ಇಲ್ಲವಾಗಿದೆ. ಮೇಲಾಗಿ ಎಲ್ಲ ಪಕ್ಷದಲ್ಲೂ ದಲಿತ ಪಕ್ಷ ರಾಜಕಾರಣಿಗಳು ಇದ್ದರೂ ಅವರ್ಯಾರೂ ದಲಿತ ರಾಜಕಾರಣಿಗಳಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಿಲ್ಲ. ಹಾಗಾಗಿ ದಲಿತರ ಸಾಮಾಜಿಕ ತಬ್ಬಲಿತನ ದಿನೇ ದಿನೇ ತೀವ್ರವಾಗುತ್ತಿದೆ.

ರಾಜಕೀಯ ಅಧಿಕಾರದ ನೆಪದಲ್ಲಿ ಹುಟ್ಟಿರುವ ಬಹುಜನ ಚಳವಳಿಯ ಸೈದ್ಧಾಂತಿಕತೆ ಸಹ ಈ ದಲಿತತತ್ವವನ್ನೆ ದೊಡ್ಡ ದೌರ್ಬಲ್ಯವೆಂದು ಹೇಳುತ್ತಲೇ ತಾನು ಸಕ್ರಿಯವಾಗಲು ಹೊರಟಿದೆ. ಆದರೆ ಇದು ಕೂಡ ಕರ್ನಾಟದ ದಸಂಸದ ಫಸಲು ಎಂಬುದು ಈ ಚಳವಳಿಯ ನೇತಾರರಿಗೆ ಗೊತ್ತಿಲ್ಲ ಉತ್ತರದ ಕಾನ್ಸಿರಾಮರ ಪ್ರಯೋಗಗಳನ್ನು ಬಹುಜನತ್ವದ ಮೇಲೆ ಕರ್ನಾಟಕದಲ್ಲಿ ಸೃಷ್ಟಿಸುವಲ್ಲಿ ಎಡವುತ್ತಿರುವ ಬಿಎಸ್ಪಿಯು ಸಾಮಾಜಿಕ ಅವಮಾನಗಳ ವಿಚಾರದಲ್ಲಿ ಯಾವುದೇ ನಡೆಯನ್ನು ದಸಂಸದ ಹಾಗೆ ನಿರ್ವಹಿಸುತ್ತಿಲ್ಲ.

ಇತ್ತೀಚಿನ ದಸಂಸದ ಬಣಗಳು ಈ ವಿಚಾರದಲ್ಲಿ ತಮ್ಮ ಪ್ರಖರತೆಯನ್ನು ಕಳೆದುಕೊಂಡಿವೆ ಎನ್ನಬಹದು. ಈ ವಿಚಾರದಲ್ಲಿ ಸಾಮಾಜಿಕವಾಗಿ ದಿಟ್ಟ ಮತ್ತು ವಾಸ್ತವದ ಮೇಲೆ ಸಮತೆಯನ್ನು ಸಾಧಿಸುವ ಆಕಾಂಕ್ಷೆಗಳು ಸ್ವತಃ ಈ ಸಮುದಾಯದ ರಾಜಕೀಯ ಚಿಂತಕರು, ಹೋರಾಟಗಾರರಲ್ಲಿ ಇಲ್ಲವೆನ್ನುವಂತಾಗುತ್ತಿದೆ. ಹಾಗೆಯೇ ಚುಣಾವಣಾ ರಾಜಕಾರಣದ ಅಧಿಕಾರ ಕೇಂದ್ರ ಹಿಡಿಯುವುರಲ್ಲಿಯೇ ಡೆಮಾಕ್ರಸಿಯನ್ನು ನೋಡುವ ಬಹುಜನ ಚಳವಳಿಗೆ ದಸಂಸದ ದಲಿತತ್ವದ ಸಾಮಾಜಿಕ ಆಕ್ರೋಶವಾಗಲೀ ಮತ್ತು ಪ್ರಜ್ಞೆಯಾಗಲೀ ಇಲ್ಲವೆಂದೇ ಹೇಳಬೇಕು. ಬೀದಿ ಹೋರಾಟಗಳಿಗಿಂತಲೂ ರಾಜಕೀಯವಾಗಿ ಟ್ರಿಮ್ ಆಗಬೇಕಾದ್ದು ಅಗತ್ಯವೇ ಆದರೂ ಈ ವಿಚಾರವು ಅಷ್ಟು ಸುಲಭವಲ್ಲವೆಂಬುದ್ದನ್ನು ಸಹ ಮನಗಾಣಬೇಕಿದೆ. ಯಾಕಂದರೆ ಅಂಬೇಡ್ಕರರಿಗೆ ಸಾಮಾಜಿಕ ಪ್ರಜಾಪ್ರಭುತ್ವವೇ ಮುಖ್ಯವಾಗಿತ್ತು ಎಂಬುದ್ದನ್ನು ನಾವು ಮರೆಯುತ್ತಿದ್ದೇವೆ.

ಅದರಲ್ಲೂ ಪ್ರಜ್ಞಾವಂತರಾದ ಈ ಎಚ್ಚರದ ದಲಿತರು ದಲಿತೇತರರು ದಲಿತರ ಬಗ್ಗೆ ಹೊಂದಿರುವ ಸಹಾನುಭೂತಿಯನ್ನೆ ನಿರ್ಲಕ್ಷಿಸುವ ಹಳೆಯ ಪ್ರವೃತ್ತಿಗಳ ಹಿಂದಿರುವ ಅಸೂಕ್ಷ್ಮತೆಗಳಿಂದ ಮೊದಲು ಹೊರಬರಬೇಕಿದೆ.

ಸಾಹಿತ್ಯಕವಾಗಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ದಲಿತ ಕೆನೆಪದರದ ಜನವರ್ಗವು ಸಾಮಾಜಿಕ ನ್ಯಾಯ ಕೇಳುವ ನೆಪದಲ್ಲಿ ದಲಿತತ್ವವನ್ನು ಭ್ರಷ್ಟಗೊಳಿಸುತ್ತಿರುವ ರೀತಿಯಂತು ಇಡೀ ದಲಿತತ್ವದ ತತ್ವ ಹಾಗೂ ಅದರ ಆಳದ ನ್ಯಾಯ ಬದ್ಧತೆಯ ನೈತಿಕತೆಯ ತಳಬುಡವನ್ನೆ ಅಲ್ಲಾಡಿಸುವ ಹಾಗೆ ನಡೆದುಕೊಳ್ಳುತ್ತಿದೆ. ಅದರಲ್ಲೂ ಪ್ರಜ್ಞಾವಂತರಾದ ಈ ಎಚ್ಚರದ ದಲಿತರು ದಲಿತೇತರರು ದಲಿತರ ಬಗ್ಗೆ ಹೊಂದಿರುವ ಸಹಾನುಭೂತಿಯನ್ನೆ ನಿರ್ಲಕ್ಷಿಸುವ ಹಳೆಯ ಪ್ರವೃತ್ತಿಗಳ ಹಿಂದಿರುವ ಅಸೂಕ್ಷ್ಮತೆಗಳಿಂದ ಮೊದಲು ಹೊರಬರಬೇಕಿದೆ.

ಮತ್ತೊಂದೆಡೆ ಜಾತಿ ವಿನಾಶ, ಸಾಮಾಜಿಕ ನ್ಯಾಯ ಹಾಗೂ ಜಾತಿ ದೌರ್ಜನ್ಯ ವಿರೋಧದ ಲವಲೇಶದ ಹಂಗಿಲ್ಲದೆ ಜೀವಿಸಲು ಹೊರಟಿರುವ ನಗರದ ದಲಿತವರ್ಗವು ನಿರ್ಲಿಪ್ತವಾಗಿ ಉಳಿಯುತ್ತಲೇ ಹಿಂದುತ್ವದ ತೆಕ್ಕೆಗೆ ಆಕರ್ಷಿತವಾಗುತ್ತಿದೆ. ಹಾಗೆಯೇ ಈ ಎಚ್ಚೆತ್ತವರು ಎಂದು ಆರೋಪಿಸಿಕೊಂಡು ದಲಿತತ್ವವನ್ನು ತಮ್ಮ ಹಿತಾಶಕ್ತಿಗೆ ಕ್ಲೇಮು ಮಾಡಿಕೊಳ್ಳುತ್ತಿರುವ ಈ ಕೆನೆಪದರದ ವರ್ಗದ ಭಾಷೆ ಹಾಗೂ ನಡವಳಿಕೆಯಲ್ಲಿನ ವ್ಯಗ್ರತೆಯನ್ನು ನಾವು ಸಾಮಾಜಿಕ ಆಕ್ರೋಶವೆಂದು ಈಗ ಮನ್ನಿಸುವ ಅಗತ್ಯವಿಲ್ಲ.

ಅದರಲ್ಲಿಯೂ ನಗರದಲ್ಲಿ ಜಾಂಡ ಹೂಡಿರುವ ದಲಿತರ ಸಾಂಸ್ಕೃತಿಕತೆಯಂತೂ ಅಸಲಿಯಾಗಿ ಬೌದ್ಧತ್ವದಂತೆ ಕಂಡರೂ ಅದು ಕೂಡ ಸಾಮುದಾಯಿಕವಾಗಿ ದಲಿತತ್ವವನ್ನು ಸಾವಯವ ಸಂಬಂಧದ ಅರ್ಥ ದಲ್ಲಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವುದಿಲ್ಲ. ಜೊತೆಗೆ ಈ ನಗರ ಹಾಗೂ ಗ್ರಾಮವೆಂಬ ಎರಡು ಸಾಮಾಜಿಕ ಸಂದರ್ಭಗಳು ಅಸ್ಪೃಶ್ಯತೆಯ ಕುರುಹನ್ನು ಮಾತ್ರ ಉಳಿಸುತ್ತಲೇ ಹೋಗುತ್ತಿವೆ.

ಇದಕ್ಕೆ ಪರ್ಯಾಯವೆಂದು ಬೌದ್ಧಮತ ಅನುಯಾಯಿಗಳಾಗುವುದರಿಂದ ನಗರದಲ್ಲಿನ ನವ ಬೌದ್ಧರನ್ನೆಲ್ಲ ಬಹಳ ಸುಲಭವಾಗಿ ಅಸ್ಪೃಶ್ಯರು ಎಂದು ಗುರುತಿಸುವ ದ್ವೀಪಗಳಾಗುತ್ತವೆ ಎಂಬ ಸಾಮಾಜಿಕ ವೈಚಿತ್ರ್ಯವನ್ನು ಈ ಕೆನೆಪದರು ಅರ್ಥಮಾಡಿಕೊಳ್ಳಬೇಕಿದೆ.

ಎಲ್ಲರೂ ದಲಿತ ಜನಾಂಗವೆಂದು ಸಾರಿಕೊಂಡು ಸಾಮಾಜಿಕವಾಗಿ ಒಗ್ಗೂಡುವ ವರ್ಗಪ್ರಜ್ಞೆಯತ್ತ ಚಲಿಸುವುದರಲ್ಲಿಯೇ ನಿಜವಾದ ಈ ಕಾಲಕ್ಕೆ ಬೇಕಾದ ದಲಿತಪ್ರಜ್ಞೆಯ ನೈಜತೆ ಇದೆ. ಇದಕ್ಕೆ ಪರ್ಯಾಯವೆಂದು ಬೌದ್ಧಮತ ಅನುಯಾಯಿಗಳಾಗುವುದರಿಂದ ನಗರದಲ್ಲಿನ ನವ ಬೌದ್ಧರನ್ನೆಲ್ಲ ಬಹಳ ಸುಲಭವಾಗಿ ಅಸ್ಪೃಶ್ಯರು ಎಂದು ಗುರುತಿಸುವ ದ್ವೀಪಗಳಾಗುತ್ತವೆ ಎಂಬ ಸಾಮಾಜಿಕ ವೈಚಿತ್ರ್ಯವನ್ನು ಈ ಕೆನೆಪದರು ಅರ್ಥಮಾಡಿಕೊಳ್ಳಬೇಕಿದೆ. ಅಂದರೆ ಸಾಮಾಜಿಕವಾಗಿ ಯಾವುದೇ ವಿಮೋಚನೆಯು ನಗರದ ದಲಿತರಿಗೆ ದೊರಕುತ್ತಿಲ್ಲವೆಂಬ ಆಧುನಿಕ ಸಮಾಜದ ವಿರೋಧಾಭಾಸಗಳನ್ನು ಮತ್ತಷ್ಟು ವ್ಯವಧಾನಿಸಿ ನೋಡುವ ಅಗತ್ಯವಿದೆ.

ಮೇಲಾಗಿ ದಲಿತರ ವೈಚಾರಿಕತೆಯು ದಲಿತೇತರರಿಂದ ದೂರವಾಗುವುದ್ದಕ್ಕೆ ಕಾರಣವಾಯಿತೇ ಹೊರತು ಈ ಸಮಾಜದ ದಲಿತೇತರರನ್ನು ಆಕರ್ಷಿಸುವಲ್ಲಿ ವಿಫಲವಾಯಿತೆನ್ನಬಹುದು. ಹಾಗೆಯೇ ಈ ವಿಚಾರದಲ್ಲಿ ದಲಿತರನ್ನು ಒಳಗು ಮಾಡಿಕೊಳ್ಳಲು ಮುಂದಾದ ಸಾಮಾಜಿಕ ವಿದ್ಯಮಾನಗಳನ್ನು ಸಹ ಸೌಜನ್ಯದಿಂದ ನೋಡುವುದ್ದನ್ನು ಬೆಳೆಸಿಕೊಳ್ಳಬೇಕಿತ್ತು. ವಿರೋಧದ ತಾತ್ವಿಕತೆಯು ದಲಿತರೊಳಗೆ ಸಂವಾದ ಗುಣದ ದ್ವೇಷರಹಿತವಾದ ವಿಚಾರಶೀಲತೆಯ ಸಹ್ಯಗುಣವಾಗಬೇಕೆ ಹೊರತು ಮನುಷ್ಯ ದ್ವೇಷದ ಅಂಗಡಿಯಾಗಿ ದಲಿತತ್ವವು ಬದಲಾಗಲೇಬಾರದು. ಬುದ್ಧನ ಮೈತ್ರಿ ತತ್ವವನ್ನು ಸಾಮಾಜಿಕ ಅನುಷ್ಠಾನಗೊಳಿಸಬೇಕಿದೆ.

ಇಂತಹ ದಲಿತವರ್ಗ ಅಂಬೇಡ್ಕರವರ ಕೋಟು ಧರಿಸಿದ ಕತೆ ಹಾಗೂ ಇಂಗ್ಲಿಷ್ ವ್ಯಾಮೋಹವನ್ನೆ ನೆಚ್ಚಿ ತಾನೇ ಒಂದು ದ್ವೀಪವಾಗಲೂ ಹೊರಟಿದೆ.

ಮೇಲಾಗಿ ಈ ನವಬೌದ್ಧರಿಗೆ ದಲಿತತ್ವವನ್ನು ಬೌದ್ಧತ್ವದ ನೆಪದಲ್ಲಿ ಬಚ್ಚಿಡುವುದ್ದಕ್ಕೆ ಟೂಲಾಯಿತೆ ಹೊರತು, ಸಾಮಾಜಿಕ ಬಿಡುಗಡೆಯನ್ನು ಸಾಧ್ಯವಾಗಿಸಲಿಲ್ಲ. ಅಲ್ಲದೆ ಮೇಲ್ವರ್ಗದ ಜೀವನ ಪ್ರವೃತ್ತಿಗಳನ್ನು ಅಭ್ಯಾಸ ಮಾಡುವುದ್ದನ್ನೆ ತಮ್ಮ ಜೀವನ ಮೌಲ್ಯವೆಂದು ಭಾವಿಸಿರುವ ಈ ಬೋಳೆ ಜನವರ್ಗ ತಮ್ಮ ನಗರದ ಖಯಾಲಿಗಳಲ್ಲಿ ಕೇರಿಗಳನ್ನು ಹಂಗಿಸುವ ಅತಿಭ್ರಷ್ಟ ಸಾಂಸ್ಕೃತಿಕ ದ್ರೋಹವನ್ನು ಎಸಗುತ್ತಿದೆ. ಇಂತಹ ದಲಿತವರ್ಗ ಅಂಬೇಡ್ಕರವರ ಕೋಟು ಧರಿಸಿದ ಕತೆ ಹಾಗೂ ಇಂಗ್ಲಿಷ್ ವ್ಯಾಮೋಹವನ್ನೆ ನೆಚ್ಚಿ ತಾನೇ ಒಂದು ದ್ವೀಪವಾಗಲೂ ಹೊರಟಿದೆ. ಅದರಲ್ಲೂ ಹೊಲೆಯ ಸಮುದಾಯದ ಈ ನಗರದ ಮಧ್ಯಮ ವರ್ಗ ತನ್ನ ಪೆಡಸುತನದ ಅತಿರೇಕಗಳನ್ನು ದಲಿತತ್ವ ಹಾಗೂ ಅಂಬೇಡ್ಕರ್ ದಾರಿ ಎಂದು ಭ್ರಮಿಸುತ್ತಲೇ ಸಾರ್ವಜನಿಕವಾಗಿ ಈ ದಲಿತತ್ವದ ವ್ಯಾಪಕತೆಗಳನ್ನು ದಿಕ್ಕುಗೆಡಿಸುತ್ತಿದೆ. ವಿಚಿತ್ರವೆಂದರೆ ಈ ವರ್ಗದೊಳಗೆಯೇ ಒಳಪಂಗಡದ ಕುಲದ ವಿಚಿತ್ರವಾದ ಫ್ಯೂಡಲ್ ಕುಲಗಳ ಪ್ರತಿಷ್ಠೆಗಳು ಹರಳುಗಟ್ಟುತ್ತಿವೆ.

ದಲಿತತ್ವ ಕೇವಲ ಪ್ರಜಾಸತ್ತೆಯ ವ್ಯವಸ್ಥೆಯಲ್ಲಿ ಕ್ಲೇಮುಗಳಿಗಾಗಿ ಇರುವ ಉಪಾದಿ ಎಂದೇ ಸರಳೀಕರಿಸಿರುವ ಈ ದಲಿತಬಲಿತ ವರ್ಗವು ಸಂಕೀರ್ಣವಾಗಿರುವ ಸಾಮಾಜಿಕ ಸಂಕಟಗಳನ್ನೆ ಮರೆತುಬಿಡುತ್ತಿದೆ. ಆರೋಗ್ಯಕರ ಸಾಮಾಜಿಕ ಆಕಾಂಕ್ಷೆಗಳನ್ನೆ ಅನುಮಾನಿಸುತ್ತಿರುವ ವರ್ಗದಿಂದ ಬರುತ್ತಿರುವ ಸಾಹಿತಿಗಳು ಹಾಗೂ ರಾಜಕಾರಣಿಗಳು ತಾವೇ ವಕ್ತಾರರು ಹಾಗೂ ಅಣ್ಣಾಬಾಂಡ್ ಗಳ ರೀತಿ ವರ್ತಿಸುತ್ತಿದ್ದಾರೆ. ಅದರಲ್ಲೂ ಸಾಹಿತ್ಯ ಹಾಗೂ ಅಕಾಡೆಮಿಕ್ ವಲಯದ ಹೊಸ ಕಾಲದ ತರುಣರು ಸಾಮುದಾಯಿಕವಾಗಿ ಪ್ರತ್ಯೇಕಗೊಳ್ಳುವಿಕೆಯನ್ನು ರಾಜಕೀಯವಾಗಿ ಸಮರ್ಥಿಸಿಕೊಳ್ಳುವುದು ಸರಿಯೇ ಆದರೂ ಸಾಮಾಜಿಕವಾಗಿ ಜಾತಿಯ ನೆರಳಲ್ಲಿಯೇ ಜೀವಿಸುತ್ತಿರುವ ಸಮಾಜದ ನಾಡಿಮಿಡಿತವನ್ನು ಅದರ ಸಂಕೀರ್ಣತೆಗಳಲ್ಲಿ ಗ್ರಹಿಸುವ ವ್ಯವಧಾನವನ್ನೇ ತೋರುತ್ತಿಲ್ಲ. ಮೇಲಾಗಿ ಈ ತರುಣರು ಹೀಗೆ ಸೀಳುವಿಕೆಯನ್ನೆ ಸಾಮಾಜಿಕ ನ್ಯಾಯವೆಂದು ಪ್ರತಿಪಾದಿಸುವ ಅತಿಗಳಿಗೂ ಒಳಗಾಗಿಬಿಟಿದ್ದಾರೆ. ಅದರಲ್ಲೂ ಈ ಅತಿರೇಕಗಳು ಹೊಲೆಮಾದಿಗರಲ್ಲಿ ದ್ವೇಷದ ವಾತಾವರಣವಾಗಿ ಬದಲಾಗಿಹೋಗಿದೆ.

ಸಮಾಜವಾದ ಹಾಗೂ ಲೋಹಿಯಾವಾದಿಯ ನಿಲುವುಗಳಲ್ಲಿಯೇ ದೇವನೂರ ಮಹಾದೇವ ಅವರು ದಲಿತತ್ವವನ್ನು ಹೊಸ ಕಾಲದ ಸಾಮಾಜಿಕ ಪ್ರಜ್ಞೆಯ ಧಾತುವಾಗಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಿರುವುದು ಸರಿಯೇ.

ದಲಿತತ್ವವು ಸಾಹಿತ್ಯದ ರಾಜಕಾರಣದ ನಡುವೆ ನಡುಗಡ್ಡೆಯ ದ್ವೀಪವಾಗುತ್ತಿದೆ. ಈ ನಡುವೆ ದಲಿತ ಸಂಘಟನೆಗಳು ಛಿದ್ರಗೊಂಡಿದ್ದು, ಈ ನಾಯಕರ ಪ್ರಕಾರ ಚಳವಳಿಗಳು ಇವೆ ಆದರೆ ವಿಘಟನೆಗೊಂಡಿವೆ. ಆದರೆ ಈ ಸಂದರ್ಭದ ಒಡಕಿನ ನಡುವೆ ನಮಗೆ ಸದಾ ಭರವಸೆಯಂತಿ ರುವ ಕೆ.ರಾಮಯ್ಯನವರು ದಸಂಸವನ್ನೇ ಬರ್ಕಾಸ್ತು ಮಾಡುವುದು ಉಚಿತವೆಂದು ಹಲವು ಬಾರಿ ಮಾತಾಡಿದ್ದಾರೆ. ಸಮಾಜವಾದ ಹಾಗೂ ಲೋಹಿಯಾವಾದಿಯ ನಿಲುವುಗಳಲ್ಲಿಯೇ ದೇವನೂರ ಮಹಾದೇವ ಅವರು ದಲಿತತ್ವವನ್ನು ಹೊಸ ಕಾಲದ ಸಾಮಾಜಿಕ ಪ್ರಜ್ಞೆಯ ಧಾತುವಾಗಿಸುವ ಇರಾದೆಯನ್ನು ವ್ಯಕ್ತಪಡಿಸುತ್ತಿರುವುದು ಸರಿಯೇ. ಆದರೆ ಈ ಆಶಯಗಳು ಸಂಘಟನಾತ್ಮಕವಾಗಿ ಮೂರ್ತಗೊಳ್ಳುವ ಕ್ರಿಯೆಯ ಸ್ವರೂಪ ಪಡೆಯುತ್ತಿಲ್ಲವೆನ್ನಬಹುದು. ಆದರೆ ದಲಿತತ್ವವೇ ನಿಜವಾದ ಕರ್ನಾಟಕದ ಸಮಾಜವಾದಿ ಆಂದೋಲನವಾಗುವುದಾದರೆ ಎಷ್ಟು ಚಂದಿರುತ್ತಿತ್ತು!

ಒಳಮೀಸಲಾತಿ ಚಳವಳಿಯಲ್ಲಿ ಎಡಗೈ ಸಮುದಾಯವು ಈ ವಿಚಾರದಲ್ಲಿ ಆತ್ಯಂತಿಕವಾಗಿ ನಿಂತಿದ್ದು, ಈ ವಿಚಾರ ಹಾಗೂ ವಿದ್ಯಮಾನಗಳಿಗೆ ವಿರುದ್ಧವಾಗಿರುವವರನ್ನೆಲ್ಲ ಮಾದಿಗರ ವಿರೋಧಿ ಎಂದೆ ಹಣೆಪಟ್ಟಿ ಹಚ್ಚುತ್ತಿದೆ. ಕೆಲವೊಮ್ಮೆ ಮಾತಂಗಮುನಿ ಎಂಬ ತನ್ನ ಸಂಸ್ಕೃತಿ, ಪರಂಪರೆಯ ಐಕಾನುಗಳನ್ನೆ ಸಾರ್ವಜನಿಕವಾಗಿ ಆತ್ಯಂತಿಕವೆಂದು ಬಿಂಬಿಸುತ್ತಿರುವ ಮಾದಿಗ ದಂಡೋರ ಹೋರಾಟ ಸಮಿತಿಯು ಅಂಬೇಡ್ಕರರನ್ನೂ ಸಹ ಮಹರ್ ಎಂದೇ ನೋಡುವ ಅತಿರೇಕದ ಬೆಳವಣಿಗೆಗಳಿಗೂ ಕಾರಣವಾಗುತ್ತಿದೆ. ಖಂಡಿತ ಮಾತಂಗಮುನಿ ದಲಿತ ಸಂಸ್ಕೃತಿಯ ಹೆಮ್ಮೆ. ಆದರೆ ರಾಜಕೀಯ ಚೌಕಾಶಿಗಳಿಗೆಲ್ಲ ದಲಿತ ಪರಂಪರೆಯ ಐಕ್ಯತೆಗಾಗಿ ಶ್ರಮಿಸಿದ ಮಹಾಶಯರನ್ನು ಸಂಕುಚಿತವಾಗಿಸುವುದು ಶೋಭೆಯಾಗದು.

ಇದರ ನಡುವೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಾತಿನಿಧ್ಯ ಹಾಗೂ ಐಕ್ಯತೆಯನ್ನು ಸಾಧಿಸಲಾಗದೆ ಈ ಎಡಬಲದ ದಲಿತರು ಸಾರ್ವಜನಿಕವಾಗಿ ದಿವಾಳಿಯಾಗುವ ಹೀನ ಸ್ಥಿತಿಗೆ ತಲುಪುತ್ತಿದ್ದಾರೆ.

ಇನ್ನು ಸ್ಪ್ರಶ್ಯ ದಲಿತವರ್ಗವು ಮೀಸಲಾತಿಯನ್ನೆ ನೆಚ್ಚಿ ಕೂತಿದ್ದು, ಸಾಮಾಜಿಕವಾಗಿ ಅಸ್ಪೃಶ್ಯ ದಲಿತರ ಜೊತೆ ಬಾಂಧವ್ಯ ಸ್ಥಾಪಿಸುವ ವಿಚಾರಗಳನ್ನು ಅಮಾನತ್ತಿನಲ್ಲಿಟ್ಟಿದೆ. ಈ ಸಂಬಂಧವಾಗಿ ಎಡ ಮತ್ತು ಬಲಗೈ ಸಮುದಾಯಗಳಿಗೂ ವಿರುದ್ಧವಾದ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಬಹುಸಂಖ್ಯಾತ ಹಿಂದುತ್ವದ ತೆಕ್ಕೆಗೆ ಹೊರಳುತ್ತಿದೆ. ಈ ವಿಚಾರದಲ್ಲಿ ದಲಿತತ್ವವನ್ನು ಸಾಮಾಜಿಕ ದೈನಂದಿನ ಲಯದೊಳಗೆ ಪ್ರಕಟಿಸಲು ಹಿಂಜರಿವ ಈ ಸ್ಪ್ರಶ್ಯ ಸಮುದಾಯಗಳು ರಾಜಕೀಯ ಹಾಗೂ ಶೈಕ್ಷಣಿಕ ಸೌಲಭ್ಯದ ಆಕಾಂಕ್ಷೆಗಳಿಗಾಗಿ ಮಾತ್ರ ಕ್ಲೇಮು ಮಾಡಿಕೊಳ್ಳಲು ಸಜ್ಜಾಗುತ್ತಿವೆ. ಇದರ ನಡುವೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಪ್ರಾತಿನಿಧ್ಯ ಹಾಗೂ ಐಕ್ಯತೆಯನ್ನು ಸಾಧಿಸಲಾಗದೆ ಈ ಎಡಬಲದ ದಲಿತರು ಸಾರ್ವಜನಿಕವಾಗಿ ದಿವಾಳಿಯಾಗುವ ಹೀನ ಸ್ಥಿತಿಗೆ ತಲುಪುತ್ತಿದ್ದಾರೆ. ಈ ಕಾರಣದಿಂದಾಗಿ ಈ ಎರಡು ಸಮುದಾಯಗಳ ಆತ್ಮಬಲವಾಗಲೀ, ಸಾಮಾಜಿಕ ಘನತೆಯಾಗಲಿ ಕಳೆದ ಎರಡು ದಶಕಗಳಲ್ಲಿ ವೃದ್ಧಿಯಾದಂತೇನೂ ಕಾಣುತ್ತಿಲ್ಲ.

ಉಡುಪಿ ಚಲೋ ಹಾಗೂ ಗುಡಿಬಂಡೆ ಚಲೋಗಳು ಹೊಸಕಾಲದ ದಲಿತ ಹಾಗೂ ಪ್ರಗತಿಪರ ಮನಸ್ಸುಗಳಿಂದ ರೂಪುಗೊಂಡ ಚಳವಳಿಗಳು. ಆದರೆ ಸಾಮಾಜಿಕವಾಗಿ ಎಡಬಲದ ದಲಿತರು ಈ ಚಳವಳಿಗೆ ತೀವ್ರವಾಗಿ ಸ್ಪಂದಿಸುವ ಸೌಜನ್ಯವನ್ನು ತೋರಲಿಲಲ್ಲ. ಉಡುಪಿ ಚಲೋ ಸಂದರ್ಭದಲ್ಲಿ ಮುಸ್ಲೀಮ್ ಯುವಕರು ಜೈ ಜೈ ಜೈ ಭೀಮ್ ಎಂದು ಘೋಷಣೆ ಮೊಳಗಿಸುತ್ತಿದ್ದರೆ, ಎಡಬಲದ ದಲಿತರು ಅಂಬೇಡ್ಕರರನ್ನೇ ಪಕ್ಕಕ್ಕೆ ಸರಿಸಿಬಿಡುವ ಅಪಾಯಗಳನ್ನು ಸಹ ತರುತ್ತಿದ್ದಾರೆ. ಈ ವಿಚಾರದಲ್ಲಿ ದಸಂಸದ ಪ್ರತಿಷ್ಠಿತ ನಾಯಕರೂ ಈ ವಿದ್ಯಮಾನಗಳಿಗೆ ಕನಿಷ್ಠ ಸೌಜನ್ಯವನ್ನು ತೋರಲಿಲ್ಲವೆಂಬುದೇ ದುಃಖಕರ. ಒಟ್ಟಾರೆ ದಲಿತತ್ವವು ತನ್ನ ಅಖಂಡತ್ವದ ಸಮುದಾಯಿಕತೆಯ ಅಂತಃಸತ್ವವನ್ನು ಕಳೆದುಕೊಳ್ಳುತ್ತಿದೆ. ಯಾಕಂದರೆ ಇದು ಇಂದು ಒಡಕಲು ಬಿಂಬಗಳ ಜಗತ್ತಾಗಿ ಗೋಚರಿಸುತ್ತಿದೆ.

ಈ ವಿಚಾರದಲ್ಲಿ ದಲಿತ ಚಳವಳಿಯ ಹಿಂದಿನ ನಡೆಗಳು ಎಬ್ಬಿಸಿದ್ದ ವೈರುಧ್ಯಗಳನ್ನು ಸಹ ತಣ್ಣಗೆ ಕೂತು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ದಲಿತೇತರ ಜಗತ್ತನ್ನು ತಾತ್ವಿಕ ಹಾಗೂ ವೈಚಾರಿಕ ಕಾರಣಗಳಿಗಾಗಿ ಸದಾ ವಿರೋಧಿಸುತ್ತಲೇ ಅಮಾನತ್ತಿನಲ್ಲಿ ಇಟ್ಟು ನೋಡುವ ತೀವ್ರವಾದಿತನದ ದಲಿತತ್ವವು

ಈಗೀಗಂತೂ ದಲಿತ ಯುವ ತಲೆಮಾರು ಹೆಚ್ಚೆಚ್ಚು ಸೋಷಿಯಲ್ ಮಿಡಿಯಾವನ್ನು ನೆಚ್ಚಿಕೊಂಡಿದೆ. ಇದರ ಸಾಧ್ಯತೆಗಳು ಏನೇ ಇರಬಹುದು, ಆದರೆ ಸಾಮುದಾಯಿಕ ಕ್ರಿಯಾಶೀಲತೆ ಹಾಗೂ ಐಕ್ಯದ ನಡೆಗಳಿಗೆ ಇವು ಅಷ್ಟೇನೂ ಪ್ರಯೋಜನಕ್ಕೆ ಬರುತ್ತಿಲ್ಲ. ಅದರಲ್ಲೂ ನಗರದ ಮಧ್ಯಮ ವರ್ಗದ ದಲಿತರ ಹಳಹಳಿಕೆಗಳಿಗೆ ಹೆಚ್ಚು ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಮೌಲ್ಯ ತಂದುಕೊಡುವುದೇ ಈ ಸೋಷಿಯಲ್ ಮಿಡಿಯಾದಲ್ಲಿರುವವರ ಕಾಳಜಿಯಾಗಿಬಿಟ್ಟಿದೆ. ವಿಚಿತ್ರವೆಂದರೆ ಈ ಸಾಹಿತಿ ಹಾಗೂ ಬರಹಗಾರರ ಸುತ್ತ ದಲಿತತ್ವವು ಗಿರಕಿ ಹೊಡೆಯುತ್ತಿರುವುದೇ ಈ ಹೊತ್ತಿನ ದಲಿತ ಸಾಹಿತ್ಯ ಹಾಗೂ ಚಳವಳಿ ಎನ್ನುವಂತಾಗಿಬಿಟ್ಟಿದೆ.

ಮನ್ನಣೆ ಹಾಗೂ ಮಾನ್ಯತೆಯ ಆಕಾಂಕ್ಷೆಗಳು ಶೋಷಿತರು ಹಾಗೂ ಶೋಷಕರ ನಡುವಿನ ಅಪನಂಬಿಕೆ ಹಾಗೂ ಅಜ್ಞಾನಗಳನ್ನು ಹೋಗಲಾಡಿಸುವ ಇರಾದೆಯ ಎಡೆಗೆ ಕೊಂಡೊಯ್ಯಬೇಕಿದೆ. ಈ ವಿಚಾರದಲ್ಲಿ ದಲಿತ ಚಳವಳಿಯ ಹಿಂದಿನ ನಡೆಗಳು ಎಬ್ಬಿಸಿದ್ದ ವೈರುಧ್ಯಗಳನ್ನು ಸಹ ತಣ್ಣಗೆ ಕೂತು ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ದಲಿತೇತರ ಜಗತ್ತನ್ನು ತಾತ್ವಿಕ ಹಾಗೂ ವೈಚಾರಿಕ ಕಾರಣಗಳಿಗಾಗಿ ಸದಾ ವಿರೋಧಿಸುತ್ತಲೇ ಅಮಾನತ್ತಿನಲ್ಲಿ ಇಟ್ಟು ನೋಡುವ ತೀವ್ರವಾದಿತನದ ದಲಿತತ್ವವು ಈಗ ಅಗತ್ಯವಿಲ್ಲ. ಈ ಸಂಬಂಧವಾಗಿ ಈ ದಲಿತತ್ವವು ಹೊಸ ಕಾಲದ ಸ್ಥಿತ್ಯಂತರಗಳ ಹಿನ್ನಲೆಯಿಂದಲೂ ರೂಪಿಸುವ ಅಗತ್ಯವಿದೆ.

*ಲೇಖಕರು ರಾಮನಗರದವರು; ದೊಡ್ಡಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು.  

Leave a Reply

Your email address will not be published.