ದಾರಿಯ ಅವಲೋಕವಿಲ್ಲದೇ ದಿಕ್ಕು ಸಿಗುವುದು ಹೇಗೆ? ಮಾತು ಜಾಸ್ತಿ, ಮರ ನಾಸ್ತಿ

80ದಶಕದೀಚೆಗೆ ಪರಿಸರ ಸಮ್ಮೇಳನ, ಶಿಬಿರ, ಪಠ್ಯ, ಪುಸ್ತಕ, ಕಾನೂನುಗಳು ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುತ್ತಿವೆ. ಸಾಕ್ಷರತೆಯ ಪ್ರಮಾಣ ಏರುತ್ತ ಹೋಗಿದೆ, ಜನಸಂಖ್ಯೆ ಹೆಚ್ಚಿದೆ. ಹೊಸ ಹೊಸ ನಗರ, ಉದ್ಯಮ ಬೆಳೆದಿದೆ. ನೈಸರ್ಗಿಕ ಸಂಪನ್ಮೂಲ ಬಳಸುತ್ತ ಅಭಿವೃದ್ಧಿಯ ಸಾಧ್ಯತೆಯನ್ನು ಹುಡುಕಿದ ಫಲ ನದಿಗಳು ಒಣಗಿವೆ, ಬೆಟ್ಟಗಳು ಬೋಳಾಗಿವೆ, ಜಲಮಾಲಿನ್ಯವಾಗಿದೆ, ಅಂತರ್ಜಲ ಕುಸಿತವಾಗಿದೆ.

ಎರಡು ಹೆಜ್ಜೆ ಹಿಂದಕ್ಕೆ ನಡೆಯೋಣವೆಂದು ಪರಿಸರದ ಚರ್ಚೆಗಳಲ್ಲಿ ಹೇಳುತ್ತಿದ್ದೇವೆ. ಬಳಕೆಯಲ್ಲಿ ಸ್ವನಿಯಂತ್ರಣ, ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ, ಸುಸ್ಥಿರತೆಯತ್ತ ಗಮನ ಸೆಳೆಯುತ್ತೇವೆ. ಇಂಥ ಗಂಭೀರ ಮಾತುಕಥೆಯಲ್ಲಿ ನಾವು ಮುಳುಗಿದ್ದಾಗಲೇ ನಮ್ಮ ಎಲ್ಲಾ ರಸ್ತೆಗಳು ವೇಗವಾಗಿ ಎಲ್ಲರನ್ನೂ ನಗರಕ್ಕೆ ಜೋಡಿಸಲು ಅಣಿಯಾಗಿವೆ. ದುಡಿಮೆಗೆ ಪೇಟೆಯೇ ಲಾಯಕ್ಕೆಂದು ಯುವ ತಲೆಮಾರು ಮೂರು ದಶಕಗಳಿಂದ ಕಣ್ಣುಮುಚ್ಚಿ ಜಮೆಯಾಗುತ್ತಿದೆ. ಕೆರೆ ನುಂಗಿದ ಬೆಂಗಳೂರಿಗೆ ಭವಿಷ್ಯವೇ ಇಲ್ಲವೆಂದು ನಿತ್ಯ ಬೊಬ್ಬೆ ಹೊಡೆದ ವಿಜ್ಞಾನಿಗಳೂ, ತಜ್ಞರು ಪರ್ಯಾಯ ದಾರಿಯಿಲ್ಲದೇ ನಗರಗಳಲ್ಲಿ ಸೆಮಿನಾರಿಗೆ ನಿಂತಿದ್ದಾರೆ.

ನಗರಗಳ ಕೊಳಚೆಯನ್ನು ಎಷ್ಟೊಂದು ವಿಧದಲ್ಲಿ ಬಣ್ಣಿಸಿಯೂ ಆವಾಸಕ್ಕೆ ನಗರವೇ ಸೂಕ್ತವೆಂದರೆ ಅನಿವಾರ್ಯತೆಗಿಂತ ನಮ್ಮೊಳಗೇನೋ ದೊಡ್ಡ ಐಬಿದೆ. ಸವಾಲು ಸ್ವೀಕರಿಸಿ ನಡೆಯುವ ಛಲವಿಲ್ಲದೇ ಉಪದೇಶ ಆರಾಮಾಗಿದೆ. ವೃಷಭಾವತಿ ನದಿ ಈಗ ಕೊಳಚೆ ಕಾಲುವೆಯಾಗಿದೆ. ಇದರ ಆಸುಪಾಸಿನ ಮನೆಗಳಲ್ಲಿ ಪದವಿ, ತಜ್ಞತೆಗಳೆಲ್ಲ ರಾಶಿಯಿದೆ. ನದಿ ಮಾಲಿನ್ಯ ತಡೆಯುವ ರಚನಾತ್ಮಕ ಮಾರ್ಗ ಸಮುದಾಯದ ಬದಲು ಸರಕಾರೀ ಹೊಣೆಯೆಂದು ಮೂಗಿಗೆ ಕರವಸ್ತ್ರ ಹಿಡಿಯುವ ಪ್ರಜ್ಞೆಯಿದೆ. ಅಸಹನೀಯ ಪರಿಸರದ ಮಧ್ಯೆ ಕಣ್ಣುಮುಚ್ಚಿ ಓಡಾಡುವ ಮಹಾ ತಾಕತ್ತಿಗೆ ಸಾಕ್ಷರರ ನಾಡಿನಲ್ಲಿ ಎಷ್ಟೊಂದು ಸಾಕ್ಷಿಯಿದೆ. ವ್ಯವಸ್ಥೆ ಬೈಯ್ಯುತ್ತ, ಟೀಕಿಸುತ್ತ ಹೊಣೆಯಿಂದ ಹೊರಗೆ ನಡೆಯುವುದೂ ಅಭ್ಯಾಸವೇ!

ಸೆಮಿನಾರು, ಠರಾವು, ವರದಿ ಬಿಡುಗಡೆ ಮಾಡುತ್ತಲೇ ಒಂದು ದಿನ ತಜ್ಞತೆಗೆ ವೃದ್ದಾಪ್ಯ ಆವರಿಸುತ್ತದೆ. ಹೊಸ ತಲೆಮಾರಂತೂ ಎಲ್ಲಿಯೂ ಬೇರು ಬಿಡದೇ ಅಲ್ಲಿಂದಿಲ್ಲಿಗೆ ತೇಲುತ್ತ ಜಾಲತಾಣಗಳಲ್ಲಿ ಜಾಗತಿಕ ತಾಪಮಾನದ ಚರ್ಚೆಗಳಲ್ಲಿ ತಲ್ಲೀನವಾಗಿದೆ. ಮಾತು, ವಿಡಿಯೋ ಬೈಟ್ ಪರಿಸರ ಪರ ನಿಲ್ಲುವ ಸರಳ ದಾರಿಯೆನಿಸಿದೆ. ಪರಿಸರ ನಿತ್ಯ ಕಲಿಕಾ ಸಂಗತಿ, ಇಷ್ಟು ವರ್ಷಗಳ ಪಯಣಕ್ಕೆ ಇನ್ನಷ್ಟು ಪ್ರೌಢಿಮೆ ಬೇಕಿತ್ತಲ್ಲವೇ? ಮಾದರಿಗಳ ಮೂಲಕ ಮಾತಾಡುವ ಕಾರ್ಯ ಮುಖ್ಯ. ಮಾತಾಡುತ್ತ ಬಂದ ನಾವು ಎಷ್ಟು ಮಾದರಿಯಾದೆವೆಂಬ ಪ್ರಶ್ನೆಗಳಿವೆ.

ಅನುಭವದಿಂದ ಪಾಠ ಕಲಿಯಲಾಗದೇ?

ಕುಡಿಯೋಕೆ ನೀರಿಲ್ಲವೆಂದರೆ ಕಾವೇರಿ ಮುಗಿಸಿ ಶರಾವತಿಯನ್ನೋ, ನೇತ್ರಾವತಿಯನ್ನೋ ನೋಡ್ತೇವೆ. ಗುಡ್ಡ ಬಗೆದು ಎತ್ತಿನಹೊಳೆ ತಿರುಗಿಸುವ ಸಾವಿರಾರು ಕೋಟಿ ವ್ಯಯಿಸುವುದು ಗೊತ್ತಾದ ಬಳಿಕವಂತೂ ನದಿಗಳನ್ನು ಬೇರೆ ರೀತಿಯಲ್ಲಿ ನೋಡಲು ಕಲಿತಿದ್ದೇವೆ. ಕೆರೆಗಳಿಗೆ ಪೈಪ್ ಜೋಡಿಸಿ ತುಂಬಿಸುವುದು ಹೆಚ್ಚು ಲಾಭದಾಯವೆನಿಸಿದೆ. ಮಹದಾಯಿ ಪಡೆಯುವುದು ಕಾನೂನು ಹಕ್ಕಾಗಿ ಕಾಣಿಸಿದ ಹೊತ್ತಿನಲ್ಲಿ ಗದಗದ ಬೆಣ್ಣೆಹಳ್ಳದ ಪ್ರತಿ ವರ್ಷದ ಕಾಲುಬುಡದ ಪ್ರವಾಹದಲ್ಲಿ ಹರಿಯುತ್ತಿರುವುದು ನೀರೆಂದು ಗೊತ್ತಾಗುವುದಿಲ್ಲ! ಬೃಹತ್ ಯೋಜನೆಗಳಿಗೆ ನಾಶವಾಗುವ ಹಸಿರು ನಗಣ್ಯವೆಂದು ಬೊಬ್ಬೆ ಹೊಡೆದು ಹೇಳಬಲ್ಲೆವು. ‘ಸಮುದ್ರಕ್ಕೆ ನದಿಗಳೆಲ್ಲ ಪಾಲ್ತು ಹರಿತಾವ’ ಎಂದು ಜನ ಮಾತಾಡುವಷ್ಟು ಪರಿಸರ ಪ್ರಜ್ಞೆ ಬುಡಮೇಲಾದ ಕಾಲಕ್ಕೆ ಬಂದು ನಿಂತಿದ್ದೇವೆ.

ರಾಜ್ಯದ ಪರಿಸ್ಥಿತಿ ಗಮನಿಸಬೇಕು. ಕಳೆದ ಮಳೆಗಾಲ ಅರ್ಧ ರಾಜ್ಯಕ್ಕೆ ನೆರೆಗಾಲವಾಗಿದೆ. 17 ಜಿಲ್ಲೆಗಳು ನೀರಿನಲ್ಲಿ ನಿಂತು ಅಪಾರ ನಷ್ಟವಾಯ್ತೆಂದು ದುಃಖಿಸಿದ ಸಮಯಕ್ಕೆ ಕೆಲವೆಡೆ ಮಳೆ ಕೊರತೆಯೂ ಇತ್ತು. ಕ್ರಿ.ಶ. 2016 ರಲ್ಲಿ ತೀವ್ರ ಬರ ಬಂದಾಗ 40-50 ಕಿಲೋ ಮೀಟರ್ ದೂರದಿಂದ ಟ್ಯಾಂಕರ್ ನೀರು ಪಡೆದು ಬದುಕುವ ಪರಿಸ್ಥಿತಿ ಬಂದಿತ್ತು. ಈಗ ‘ಕರೋನಾ ಕರ್ಪ್ಯೂ’ ಯಾರೂ ಮನೆಯಿಂದ ಹೊರಬೀಳದಂತೆ ಭಯ ಹುಟ್ಟಿಸಿದೆ. ಎರಡು ಹೆಜ್ಜೆಯಲ್ಲ, 50 ವರ್ಷ ಹಿಂದಕ್ಕೆ ಹೋಗಿ ತೆಪ್ಪಗೆ ಮನೆಯಲ್ಲಿ ಕುಳಿತಿರುವ ಸಂದರ್ಭ ಅನುಭವಿಸಿದ್ದೇವೆ.

Acacia Adike

ಮಲೆನಾಡಿನ ಮಂಗನಕಾಯಿಲೆ ಕಾಡಲ್ಲಿ ಬದುಕಿದ್ದವರನ್ನು ಕಂಗಾಲು ಮಾಡಿದೆ. ನೀರ ಭಯ, ರೋಗ ಭಯಗಳಿಂದ ಜನ ನಲುಗುತ್ತಿರುವ ನೋಟಗಳು ತೀರ ನಾಲ್ಕೈದು ವರ್ಷಗಳ ಸಣ್ಣ ಸಮಯದಲ್ಲಿ ನಮಗೆಲ್ಲ ಧಾರಾಳವಾಗಿ ಸಿಕ್ಕಿದೆ. ಅಕಾಲಿಕ ಮಳೆ ತಡೆಯಲು ಮದ್ದಿಲ್ಲ, ಮಳೆಯಿಂದಾಗುವ ಅನಾಹುತ ತಡೆಯಲು ಅರಣ್ಯ ಬೆಳೆಸುವ ದಾರಿಯಿದೆ. ಬಿಸಿಲು ಜಾಸ್ತಿಯಾದರೆ ಕೊಡೆ ಹಿಡಿದು ನಡೆಯುವಂತೆ ಏರುತ್ತಿರುವ ತಾಪಮಾನ ತಡೆಯಲು ಮರ ಹೆಚ್ಚಿಸಲು ದೊಡ್ಡ ಸಂಶೋಧನಾ ವರದಿಯ ಅಗತ್ಯವಿದೆಯೇ?

ಮನೆಯ ಸ್ನಾನದ ನೀರು ಹರಿಯುವಲ್ಲಿ ಮನೆಯ ಸುತ್ತ ಹತ್ತಿಪ್ಪತ್ತು ಬಾಳೆ ಸಸಿ ನೆಟ್ಟರೆ ಮನೆಯೊಳಗಿನ ಉಷ್ಣತೆ ಕಡಿಮೆಯಾಗುವ ಅನುಭವವೂ ಇಲ್ಲವೇ? ಎಲ್ಲವೂ ಹೇಳಿ ಆಗಬೇಕಾಗಿಲ್ಲ, ನೋಡಿ ಕಲಿಯುವುದು ಸಾಕಷ್ಟಿದೆ. ಕಲಿಯುವ ಉಮೇದಿ ಕಣ್ಮರೆಯಾದರೆ ಪರಿಸರ ನಾಶ ತಡೆಯುವುದು ಹೇಗೆ?

ಬೆಂಕಿ ಸುಡುತ್ತದೆಂದು ಎಷ್ಟೇ ಉಪನ್ಯಾಸ ನೀಡಿದರೂ ಪ್ರಯೋಜನವಿಲ್ಲ, ಪುಟ್ಟ ಮಗು ಒಮ್ಮೆ ಕೈಸುಟ್ಟುಕೊಂಡಾಗ ಬೆಂಕಿ ಭಯ ಮೂಡುತ್ತದೆ. ವಿಶೇಷವೆಂದರೆ ಎಲ್ಲ ಸಂಕಷ್ಟ ಅನುಭವಿಸಿಯೂ ನಮ್ಮಲ್ಲಿ ಪಾಠ ಕಲಿತವರೆಷ್ಟು? ಪ್ರಶ್ನೆಯಿದೆ. ಪ್ರವಾಹ ಬಂದ ಊರು ಬೇಸಿಗೆಯಲ್ಲಿ ಟ್ಯಾಂಕರ್ ನೀರು ಬೇಡುತ್ತದೆ, ಐದು ವರ್ಷ ಹಿಂದೆ ನೆರೆಯಲ್ಲಿ ಮುಳುಗಿದ ಹಳ್ಳಿ ಈಗ ನೆರೆ ಬಂದರೆ ಮುಳಗಡೆಯಾಗಿ ಮತ್ತದೇ ರಾಗ ಹಾಡಲು ಸಜ್ಜಾಗಿದೆ. ಅಟ್ಟ ತೆಗೆದು ಗಿರಿಗಿಟ್ಟಿ ಮಾಡಿ, ಗಿರಿಗಿಟ್ಟಿ ತೆಗೆದು ಅಟ್ಟ ಮಾಡುವ ಕಾರ್ಯ ವಿಧಾನದಲ್ಲಿ ಸರಕಾರ, ಸಮುದಾಯದ ಕೆಲಸಗಳು ನಡೆದರೆ ಯಾವ ಬ್ರಹ್ಮ ಯಾರನ್ನೂ ರಕ್ಷಿಸುವುದಿಲ್ಲ.

ರಾಯಚೂರು, ಗದಗಗಳಲ್ಲಿ ನಿರಾಶ್ರಿತರಿಗೆ ಕಟ್ಟಿದ ಸಾವಿರಾರು ಮನೆಗಳನ್ನು ಜಾಲಿಕಂಟಿ  ಆವರಿಸಿದ್ದು ನೋಡಿದರೆ ಯಾರಿಗೆ ಏನು ಬೇಕಾಗಿದೆಯೆಂಬುದೇ ಗೊತ್ತಾಗುವುದಿಲ್ಲ! ಯಾರು ಯಾರ ಮಾತನ್ನೂ ಕೇಳುವುದಿಲ್ಲ. ಹೋರಾಟದ ಗುಂಪು ದೊಡ್ಡದಾದರೆ ಅದು ಕೊನೆಗೆ ಚುನಾವಣೆಯ ಮತವಾಗಿ ಬದಲಾಗುವುದಾದರೆ ಎಲ್ಲ ಪಕ್ಷಗಳಿಗೂ ಅನುಕೂಲ. ಪರಿಸರ ಕಾನೂನು, ಸಂರಕ್ಷಣೆಯೆಲ್ಲ ಹೇಳುವುದಕ್ಕೆ ಚೆಂದವೆಂದು ಸರಕಾರಗಳು, ಜನಪ್ರತಿನಿಧಿಗಳು ಭಾವಿಸಿವೆ.

ಹೈದ್ರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಒಂದೇ ಸಮನೆ ಏರುತ್ತಿರುವ ಉಷ್ಣತೆಗೆ ಕಂಗಾಲಾಗಿದೆಯಲ್ಲವೇ? ಮರ ಬೆಳೆಸಲು ಈಗ ಮಾತಾಡುವವರು ಹಳೆಯ ವರದಿಗಳನ್ನು ಓದಬೇಕು. ಬಯಲುಸೀಮೆ ಪ್ರದೇಶಗಳಲ್ಲಿ ಮರಗಳ ಸಂಖ್ಯೆ ಬಹಳ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಇದರಿಂದ ಕೃಷಿಯ ಮೇಲೆ ಪರಿಣಾಮವಾಗುತ್ತಿದೆಂದು ತೀವ್ರ ಎಚ್ಚರಿಸಿದ್ದು ಕ್ರಿ.ಶ. 1985ರ ಟಿ.ಆರ್.ಸತೀಶ್ಚಂದ್ರನ್ ವರದಿ! ಎಷ್ಟು ಸೊಗಸಾಗಿ ಕೃಷಿ ಪರಿಸರ ಸುಧಾರಣೆಗೆ ಮರ ಬೆಳೆಸಲು ಅದು ಎಚ್ಚರಿಸಿದೆ. ಯಾರೂ ಗಮನ ನೀಡಲಿಲ್ಲ.

ನಂತರ ನೀರಾವರಿ ಕಾಲುವೆಯ ಅಂಚಿನಲ್ಲಿ ಸಸ್ಯ ಬೆಳೆಸುವ ಸಂಗತಿಯ ಕುರಿತು ಕ್ರಿ.ಶ 2001ರಲ್ಲಿ ಇಕೋ ಕಮಿಟಿಯ ಇನ್ನೊಂದು ವರದಿಯೂ ಬಂದಿದೆ. ಈಗ ಗರಿಷ್ಠ ಉಷ್ಣತೆ 45-46 ಡಿಗ್ರಿ ತಲುಪುತ್ತಿದೆ. ಇದನ್ನು ಬದಲಿಸಲು ಮರಗಳ ಅಭಿವೃದ್ಧಿ ಅಗತ್ಯವಿದೆ. ಸಮಿತಿ ರಚಿಸುವುದು, ವರದಿ ಪಡೆಯುವುದು, ವರದಿಯನ್ನು ಮೂಲೆಗೆ ಎಸೆಯುವುದು ಅಭ್ಯಾಸವಾಗಿದೆ. ನಮ್ಮದೇ ಪರಿಸರಪರ ಕಾರ್ಯಕ್ರಮಗಳು ಅನುಸರಣೆಯಿಲ್ಲದೇ ಏನು ಮಾಡಲು ಹೊರಟಿದ್ದೇವೆ? ಉತ್ತರಿಸಲು ಯಾರೂ ಇಲ್ಲ.

 

 

 

ಜನ ಸಹಭಾಗಿತ್ವ ಮರೆತೇ ಹೋಯ್ತು!

ಗುಂಡಿ ತೋಡಿ ಗಿಡ ನೆಡುವ ಕೆಲಸ ಸಾಕು ಜನರ ಜೊತೆ ಅರಣ್ಯ ಬೆಳೆಸಬೇಕು. ಕ್ರಿ.ಶ. 1988ರ ರಾಷ್ಟಿಯ ಅರಣ್ಯ ನೀತಿ ಹೇಳಿದೆ. 85 ಕೋಟಿ ರೂಪಾಯಿಯ ಬ್ರಿಟನ್ ನೆರವಿನ ಪಶ್ಚಿಮಘಟ್ಟ ಅಭಿವೃದ್ಧಿ ಯೋಜನೆಯಲ್ಲಿ ಇದು ಜಾರಿಯಾಯ್ತು. ಗ್ರಾಮ ಅರಣ್ಯ ಸಮಿತಿಗಳು ರಚನೆಯಾದವು. ನಂತರ ಜಪಾನ್ ನೆರವಿನ 565 ಕೋಟಿ ವೆಚ್ಚದ ಬಯಲುಸೀಮೆ ಹಸಿರೀಕರಣ ಯೋಜನೆಯಲ್ಲೂ ಇದೂ ಸುಧಾರಣೆಯಾಗಿ ಜಾರಿಯಾಯ್ತು. ವಿಶ್ವ ಬ್ಯಾಂಕ್ 55 ಕೋಟಿ ರೂಪಾಯಿಯ ಸಾಮಾಜಿಕ ಅರಣ್ಯ ಯೋಜನೆ ರೂಪಿಸಿದ 1984 ರ ಕಾಲಕ್ಕೆ ಗೋಮಾಳಗಳಲ್ಲಿ ಸಸಿ ಬೆಳೆಸುವ ಕಾರ್ಯಕ್ರಮ ನಡೆದವು.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಶಾಲಾ ವನ ಕಾರ್ಯಕ್ರಮ ಬಂದಿತು. ಕಳೆದ 30-40 ವರ್ಷಗಳ ಅರಣ್ಯ ಯೋಜನೆಯ ಕಾರ್ಯಗತಿ, ಅಭಿವೃದ್ಧಿಯ ಪರಿಣಾಮ ಅವಲೋಕಿಸಿದರೆ ಸಸಿ ನೆಡುವ ಕ್ರಮದಲ್ಲಿ ಹಲವು ಕಲಿಕೆಗಳು, ಸುಧಾರಣೆಗಳು ನಡೆದಿವೆ. ಕಡಿಮೆ ನೀರಿನಲ್ಲಿ ಸಸಿ ಬೆಳೆಸುವುದು, ಬರ ನಿರೋಧಕ ಸಸ್ಯ, ಬೆಂಕಿ ಸಹಿಷ್ಣು ತಳಿಗಳು ಸೇರಿದಂತೆ ಸಣ್ಣ ಸಣ್ಣ ಅನುಭವಗಳು ಇಡೀ ರಾಜ್ಯದ ಎಲ್ಲಡೆಯೂ ದೊರಕಿದೆ. ಇವತ್ತು ಜನಸಹಭಾಗಿತ್ವ ಅರಣ್ಯ ಯೋಜನೆಯೆಂದರೆ ರಾಜ್ಯದ ಅರಣ್ಯ ಭವನದ ಅಧಿಕಾರಿಗಳಿಗೆ ಮರೆತು ಹೋಗಿದೆ, ಅವರಿಗೇ ತರಬೇತಿ ಕೊಡಬೇಕಾದ ದುಃಸ್ಥಿತಿಯಿದೆ.

ವ್ಯಾಪಕ ಸಸಿ ನೆಡುವ ಉಮೇದಿಯಲ್ಲಿ ತೇಗ, ಅಕೇಶಿಯಾ, ನೀಲಗಿರಿ, ಗಾಳಿ ಸಸಿಗಳು ಕರಾವಳಿಯಿಂದ ಪಶ್ಚಿಮಘಟ್ಟದ ಸೂಕ್ಷ್ಮ ಕಣಿವೆಗಳಲ್ಲಿ ಬೆಳೆಸಿದ್ದೇವೆ. ಕಡಿಯುವುದು ಉದ್ಯಮಕ್ಕೆ ಮಾರುವುದು ಲಾಭದಾಯವೆನಿಸಿದೆ. ಯಂತ್ರಗಳನ್ನು ಬಳಸಿ ಕೃಷಿ ಭೂಮಿಯಂತೆ ಗುಡ್ಡ ಊಳಿದ ಅರಣ್ಯೀಕರಣ ಯಲ್ಲಪ್ಪರೆಡ್ಡಿಯವರ ಕಾಲದಲ್ಲಿ ಶುರುವಾಗಿದ್ದು. ಅಲ್ಲಿಂದ ಕೆರೆ, ನದಿಗಳಲ್ಲಿ ಗುಡ್ಡದ ಮಣ್ಣು ಸವಕಳಿಯಾಗಿ ಜಮೆಯಾಯ್ತು. ಆ ಕಾಲದಲ್ಲಿ ಒಕ್ಕರಿಸಿದ ಅಕೇಶಿಯಾದಿಂದಲೇ ಪಶ್ಚಿಮ ಘಟ್ಟದ ಅರಣ್ಯ ಇಷ್ಟಾದರೂ ಉಳಿಯಿತೆಂದು ಅಧಿಕಾರಿಗಳು ಹೇಳುತ್ತಾರೆ. ಉದ್ಯಮ, ಉರುವಲಿಗೆ ಅನುಕೂಲ ಅಕೇಶಿಯಾವಾದ್ದರಿಂದ ನೈಸರ್ಗಿಕ ಅರಣ್ಯದ ಮೇಲೆ ಒತ್ತಡ ಕಡಿಮೆಯಾಗಿದೆಯೆಂಬ ಮಾತಿದೆ.

ವಿಚಿತ್ರವೆಂದರೆ ಇಲಾಖೆ ನೆಡುತೋಪಿನ ಕಾಮಗಾರಿಯಲ್ಲಿ ಪಳಗಿದಷ್ಟು ಅಲ್ಲಿಯೇ ಪಕ್ಕದ ನೈಸರ್ಗಿಕ ಅರಣ್ಯ ರಕ್ಷಣೆ ಬಗ್ಗೆ ಗಮನನೀಡಿಲ್ಲ! ಅಕೇಶಿಯಾ ಕಳೆ ಗಿಡವಾಗಿ ಕರಾವಳಿ, ಕಣಿವೆಗಳಲ್ಲಿ ಸಾಮ್ರಾಜ್ಯ ಸ್ಥಾಪಿಸಿದೆ. ಕೆಲವೇ ಕೆಲವು ಸಸ್ಯದ ಮೂಲಕ ಇಡೀ ಪರಿಸರವನ್ನು ಬದಲಿಸಲಾಯ್ತು. ಆಸ್ಟೆಲಿಯನ್ ಮೂಲದ ಸಸ್ಯಕ್ಕೆ ಯಾವ ಕೀಟ, ಪ್ರಾಣಿಗಳ ಕಾಟವಿಲ್ಲ. ದನಕರುವೂ ತಿನ್ನುವುದಿಲ್ಲ. ಹೀಗಾಗಿ ಅಕೇಶಿಯಾ ಗೆದ್ದಿದೆಯೇ ಹೊರತೂ ಇಲಾಖೆಯ ಅರಣ್ಯೀಕರಣದ ತಾಂತ್ರಿಕತೆಯಿಂದಲ್ಲ.

ಅಕೇಶಿಯಾ ಬೆಳೆಸಲು ಅರಣ್ಯ ಇಲಾಖೆಯೇ ಬೇಕಾಗಿರಲಿಲ್ಲ. ಇವತ್ತು ನೆಡುತೋಪಿನ ಪರಿಣಾಮ ಆಹಾರದ ಕೊರತೆಯಿಂದ ವನ್ಯಜೀವಿಗಳು ಕೃಷಿ ನೆಲೆಗೆ ಬರುತ್ತ ಮಾನವ ವನ್ಯಜೀವಿ ಸಂಘರ್ಷ ಬೆಳೆಯಿತು. ಆನೆ, ಹುಲಿ, ಜಿಂಕೆ, ಕಾಡೆಮ್ಮೆ(ಕಾಟಿ) ಕೃಷಿ ಬೆಳೆ ತಿನ್ನುತ್ತ ಮಲೆನಾಡಿನ ಜನಕ್ಕೆ ಕಾಡಿನ ಮೇಲೆ ಸೇಡು ಹುಟ್ಟುವಂತಾಗಿದೆಯಲ್ಲವೇ?

‘ಕಾಡಿಗೂ ಕೃಷಿಗೂ ಅನುಕೂಲವಾಗುವಂತೆ ಅರಣ್ಯಧೋರಣೆಯಲ್ಲಿ ಬದಲಾವಣೆ ತರತಕ್ಕದ್ದೆಂದು’ ಕ್ರಿ.ಶ. 1924ರಲ್ಲಿ ಕೆನರಾ ಕಲೆಕ್ಟರ್ ಟಪ್ಪರ್ ಹೇಳಿದ್ದರು. ಆದರೆ ಬ್ರಿಟಿಷರು ತೇಗದ ತೋಟ ಪ್ರೀತಿಸಿದಂತೆ ಕ್ರಿ.ಶ. 1984ರ ನಂತರ ಅಕೇಶಿಯಾ ನೆಡುತೋಪು ಜಾಸ್ತಿಯಾಯ್ತು. ತೆರೆಮರೆಯಲ್ಲಿ ಉದ್ಯಮಪರ ನೀತಿ ಪ್ರೀತಿಸುವ ಕಾರಣದಿಂದ ಜೀವವೈವಿಧ್ಯದ ನೆಲೆಯಲ್ಲಿ ಮೊನೋಕಲ್ಚರ್ ಮೇಲೆದ್ದಿತು. ಕೃಷಿಕರು ಅಡಿಕೆ, ಕಾಫೀ ಬೆಳೆದಂತೆ ಇಲಾಖೆ ಅಕೇಶಿಯಾ ನಂಬಿತು. ಈಗ ಸ್ಥಳೀಯ ಸಸ್ಯ ಅಭಿವೃದ್ಧಿಗೆ ಮಹತ್ವ ನೀಡಲಾಗುತ್ತಿದೆಯಾದರೂ ನೆಡುವ ಕಾಮಗಾರಿಗೆ ಇರುವಷ್ಟು ಮಹತ್ವ ಸಂರಕ್ಷಣೆಯ ಕಾಳಜಿಯಲ್ಲಿ ಕಾಣುತ್ತಿಲ್ಲ.

ಸಸಿ ನಾಟಿಯಿಲ್ಲದೇ ಅರಣ್ಯ ಬೆಳೆಸಿದ ಉದಾಹರಣೆ 300 ಮಿಲಿ ಮೀಟರ್ ಮಳೆ ಸುರಿಯದ ಚಿತ್ರದುರ್ಗ ಬಾಂಡ್ರಾವಿಯಲ್ಲಿದೆ. ಆದರೆ ಅರಣ್ಯಾಭಿವೃದ್ಧಿಯ ಕಲಿಕೆ ನಿಂತು ಹೋಗಿ ಅದು ಅರಣ್ಯಭವನದ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಒಬ್ಬ ಅಧಿಕಾರಿಯಾದಾಗ ಬಿದಿರು ಎನ್ನುತ್ತಾರೆ, ಇನ್ನೊಬ್ಬರು ಬೀಜದುಂಡೆ ಬಿತ್ತನೆಗೆ ಸೂಚಿಸುತ್ತಾರೆ, ಮತ್ತೊಬ್ಬ ಇನ್ಯಾವುದೋ ಸಸ್ಯಜಾತಿ ತರುತ್ತಾರೆ. ಹೀಗೆ ಪ್ರಯೋಗಕ್ಕೆ ಎಸೆವ ಇವರ ಆಟದ ಅಂಗಳದಂತೆ ಅರಣ್ಯಾಭಿವೃದ್ಧಿ ಕಾಣಿಸುತ್ತಿದೆ.  ಸುಮಾರು 175 ವರ್ಷಗಳ ಅರಣ್ಯೀಕರಣದ ಸುದೀರ್ಘ ಅರಣ್ಯೀಕರಣದ ಅನುಭವವಿರುವ ರಾಜ್ಯ ನಮ್ಮದಾಗಿದೆ. ಇವತ್ತಿನ ಅರಣ್ಯಾಡಳಿತ ನೋಡಿದರೆ ಅನುಭವದಿಂದ ಯಾರೂ ಪಾಠ ಕಲಿತಂತೆ ಕಾಣಿಸುತ್ತಿಲ್ಲ.

ರೈತ ಮಾದರಿಗಳಲ್ಲಿ ವನವಿಸ್ತಾರದ ಬೆಳಕು

ಬೀದರ, ಕಲಬುರಗಿ, ಕೊಪ್ಪಳ, ಗದಗ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ತುಮಕೂರು ಮುಂತಾದ ಪ್ರದೇಶಗಳಲ್ಲಿ ಮರ ಬೆಳೆಸುವ ವಿಚಾರದಲ್ಲಿ ರೈತರು ಇಂದು ಹೆಜ್ಜೆಯಿಟ್ಟಿದ್ದಾರೆ.  ಇದನ್ನು ಗುರುತಿಸಿ ಇನ್ನಷ್ಟು ಪ್ರೋತ್ಸಾಹ ಅಗತ್ಯವಿದೆ. ರಾಜ್ಯದಲ್ಲಿ ಮರಕಾಯ್ದೆಗೆ ಬದಲಾವಣೆ ತಂದು ಹೆಬ್ಬೇವು ಸೇರಿದಂತೆ ಹಲವು ಮರಜಾತಿಗಳ ಕಟಾವಿನ ನಿಯಮ ಸಡಿಲಿಸಲಾಗಿದೆ. ಇದು ಮರ ಬೆಳೆಸುವವರಿಗೆ ಅನುಕೂಲವಾಗಿದೆ.

ಹೆಬ್ಬೇವಿನ 10 ವರ್ಷದ ಒಂದು ಮರಕ್ಕೆ 6-8 ಸಾವಿರ ರೂಪಾಯಿ ರೈತರಿಗೆ ದೊರೆಯುವ ನಿರೀಕ್ಷೆಯಿತ್ತು. ರೈತರಿಗೆ ಮರದ ಲಾಭ ದೊರೆಯಲು ಅರಣ್ಯ ಇಲಾಖೆಯ ಅಧೀನದಲ್ಲಿರುವ ಫಾರೆಸ್ಟ್ ಇಂಡಸ್ಟಿಸ್ ಕಾರ್ಪುರೇಶನ್ ಉತ್ಪಾದಿಸುತ್ತಿರುವ ಪಿಠೋಪಕರಣಗಳಿಗೆ ನಮ್ಮ ರಾಜ್ಯದ ಹೆಬ್ಬೇವು ಬಳಕೆಯಾಗಬೇಕು. ಇದರಿಂದ ಮರಕ್ಕೆ ನಿಶ್ಚಿತ ಬೆಲೆ ದೊರೆಯುತ್ತದೆ. ಈಗ ಹುಣಸೂರು ಪ್ಲೆವುಡ್ ಮರವನ್ನು ಬಳಸುತ್ತಿದೆಯಾದರೂ ಮರ ಉತ್ಪಾದನೆ ಜಾಸ್ತಿಯಿರುವುದರಿಂದ ಸರಕಾರಿ ಕಾರ್ಖಾನೆಯಲ್ಲಿ ಹೆಬ್ಬೇವು ಬಳಕೆಯಿಂದ ರೈತರಿಗೆ ಅನುಕೂಲವಾಗುತ್ತದೆ.

ಪ್ರಸ್ತುತ ಕೇರಳದಿಂದ ಮಾವಿನಮರ ತಂದು ಸರಕಾರಿ ಕಾರ್ಖಾನೆಯಲ್ಲಿ ಬಳಸಲಾಗುತ್ತಿದೆ! ಇದಕ್ಕೂ ಕಡಿಮೆ ಬೆಲೆಗೆ ಹೆಬ್ಬೇವು ರಾಜ್ಯದಲ್ಲಿ ಲಭ್ಯವಿದ್ದು ಇದನ್ನು ಬಳಸಲು ಕ್ರಮ ಜರುಗಿಸಬೇಕು.  ಮರ ಬಳಕೆ ಜಾಸ್ತಿಯಾದರೆ ಬೆಲೆ ಏರಿ ರೈತರಿಗೆ ಅನುಕೂಲವಾಗುತ್ತದೆ. ಕೃಷಿ ಪರಿಸರದಲ್ಲಿ ಹತ್ತು ಹದಿನೈದು ವರ್ಷ ಮರ ಬೆಳೆದ ಸಂದರ್ಭದಲ್ಲಿ ವಾತಾವರಣದ ಬದಲಾವಣೆಗೆ ನೆರವಾಗುತ್ತದೆ.

ರಾಜ್ಯದ ಒಟ್ಟೂ ಕೃಷಿ ಭೂಮಿಯಲ್ಲಿ ಶೇಕಡಾ 45 ರಷ್ಟು ಪ್ರದೇಶ ಎರೆ ಭೂಮಿಯಾಗಿದೆ. ಇಲ್ಲಿ ವಾರ್ಷಿಕ 350-500 ಮಿಲಿ ಮೀಟರ್ ಮಳೆ ಸುರಿಯುತ್ತದೆ. ಇಲ್ಲಿ ಕೃಷಿಹೊಂಡ, ಕೆರೆ ನಿರ್ಮಾಣಕ್ಕೆ ಮಹತ್ವ ನೀಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಹೊಲಗಳಿಗೆ ಬದು ನಿರ್ಮಿಸಿ ಪ್ರದೇಶಕ್ಕೆ ಮರ ಬೆಳೆಸುವ ಕಾರ್ಯ ನಡೆಯಬೇಕು. ಪ್ರತಿ ಎಕರೆಗೆ 20 ಮರ ಬೆಳೆಸಲು ರೈತರಿಗೆ ವಿಶೇಷ ಯೋಜನೆ ರೂಪಿಸಿ ಹುರಿದುಂಬಿಸಬಹುದು.

ರಾಜ್ಯದಲ್ಲಿ ಸಾವಿರಾರು ರೈತರು ಮರ ಬೆಳೆಸಿ ಗೆದ್ದಿದ್ದಾರೆ. ಕೃಷಿ ಅರಣ್ಯ ಶಿಕ್ಷಣ, ಕಾಡಿನಂತೆ ತೋಟ ಬೆಳೆಸುವ ಕಾನ್ತೋಟದ ಪರಿಕಲ್ಪನೆಯ ಜನಜಾಗೃತಿಯ ಮೂಲಕ ಪರಿಸರ ಬದಲಾವಣೆ ಮಾಡಬಹುದಾಗಿದೆ. ಪ್ರತಿ ಜಿಲ್ಲೆಯಲ್ಲಿ ಮಾದರಿ ತೋಟಗಳನ್ನು ಗುರುತಿಸಿ ರೈತರ ಮೂಲಕ ರೈತರಿಗೆ ಪಾಠ, ಪ್ರಾತ್ಯಕ್ಷಿಕೆ ನೀಡುವ ಕಾರ್ಯ ಯೋಜನೆಗಳು ಅಗತ್ಯವಿದೆ. ಪರಿಸರ ಸಮತೋಲನ ಸಾಧಿಸಲು ವಿಶ್ವದ ಯಾವುದೋ ಪಾಠಕ್ಕಿಂತ ನೆಲದ ರೈತರ ಮಾರ್ಗ ಮೊದಲು ಕಲಿಯಬೇಕು.

 

ಪ್ರವಾಹ ನಿರ್ವಹಣೆಯೆಂದರೆ…

ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 36,608 ಕೆರೆಗಳಿರುವ ಮಾಹಿತಿಯಿದೆ. ಇವುಗಳ ಹೂಳು ತೆಗೆಯುವ ಕಾರ್ಯಕ್ಕೆ ಮಹತ್ವ ಬೇಕು. ಇಷ್ಟು ವರ್ಷಗಳಿಂದ ಕೆರೆಯ ಹೂಳು ತೆಗೆಯಲು ನಿಗದಿಯಾದ ಹಣವೆಲ್ಲ ಕಾಲುವೆ ನಿರ್ಮಾಣ, ದಂಡೆಗೆ ಕಲ್ಲುಕಟ್ಟುವುದು, ಕೋಡಿ ದುರಸ್ತಿಯ ಕಾರ್ಯಕ್ಕೆ ವಿನಿಯೋಗವಾಗಿದ್ದೇ ಹೆಚ್ಚು. ಕೆರೆಯನ್ನು ಆಳವಾಗಿಸಿದರೆ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗುತ್ತದೆ. ಮುಖ್ಯವಾಗಿ ನೆರಹಾವಳಿ ಸಂದರ್ಭದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾಲುವೆ ಜಾಲ ಮಾಡಿದರೆ ಬೇಸಿಗೆಯ ಜಲಕ್ಷಾಮವನ್ನೂ ಗೆಲ್ಲಬಹುದು. ನೆರೆಹಾವಳಿಯ ಹಾನಿಯನ್ನು ಬೇಸಿಗೆಯ ನೀರಾವರಿಯಿಂದ ತುಂಬಿಕೊಳ್ಳಬಹುದು. ಮಲೆನಾಡು, ಕರಾವಳಿ, ಅರೆಮಲೆನಾಡು ಪ್ರದೇಶಗಳಲ್ಲಿ ಕಣಿವೆಯ ಸೂಕ್ತ ನೆಲೆಗಳಲ್ಲಿ ಹೊಸ ಕೆರೆ ನಿರ್ಮಾಣ, ಹಳೆಯ ಕೆರೆಗಳ ಪುನರುಜ್ಜೀವನ ಕಾರ್ಯ ನಡೆಯಬೇಕು.

ರಾಜ್ಯದ ನದಿಗಳು ಬೇಸಿಗೆಯ ಆರಂಭದಲ್ಲಿಯೇ ಹರಿವು ನಿಲ್ಲಿಸುತ್ತಿವೆ. ಇದು 20 ವರ್ಷದ ಬದಲಾವಣೆಯಾಗಿದೆ. ಮಳೆ ಕಡಿಮೆಯಾಗಿದ್ದು, ಅರಣ್ಯನಾಶವಾಗಿದ್ದು ಇದಕ್ಕೆ ಕಾರಣವಾಗಿದೆ. ನೀರಿನ ಬಳಕೆ ಹೆಚ್ಚಿರುವುದು ಇನ್ನೊಂದು ಮುಖ್ಯಕಾರಣವಾಗಿದೆ. ನೀರಾವರಿ ಬೆಳೆಗಳ ವಿಸ್ತೀರ್ಣ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಖಾಸಗಿ ಕೊಳವೆ ಬಾವಿಗಳ ಸಂಖ್ಯೆ ಬೆಳೆಯುತ್ತ ವರ್ಷದಿಂದ ವರ್ಷಕ್ಕೆ ನದಿ ಕಣಿವೆಯ ಅಂತರ್ಜಲ ಆಳಕ್ಕೆ ಇಳಿಯುತ್ತಿದೆ. ನಾವು ಎಷ್ಟೇ ಪ್ರಯತ್ನ ಮಾಡಿದರೂ ರಾಜ್ಯದ ಕೃಷಿ ಭೂಮಿಯ ಶೇಕಡಾ 60 ಭಾಗಕ್ಕೆ ನೀರು ನೀಡಲು ಸಾಧ್ಯವೇ ಇಲ್ಲ. ಈ ಸತ್ಯವನ್ನು ಸರಕಾರ ಹೇಳುತ್ತಿಲ್ಲ.

ರಾಜ್ಯದ ಶೇಕಡಾ 70 ಭಾಗ ವಾಡಿಕೆಯ 750 ಮಿಲಿ ಮೀಟರ್ ಮಾತ್ರ ಮಳೆ ಸುರಿಯುವ ಪ್ರದೇಶವಾಗಿದೆ. ಕಬ್ಬು, ಭತ್ತ, ಅಡಿಕೆ, ದಾಳಿಂಬೆ, ಬಾಳೆ, ದ್ರಾಕ್ಷಿ ಮುಂತಾದ ನೀರಾವರಿ ಬೆಳೆಗಳಿಗೆ ಕಡಿಮೆ ನೀರು ಬಳಸುವ ಕ್ರಮಗಳಿಂದ ಇರುವ ನೀರಿನ ಸಂರಕ್ಷಣೆ ಮಾಡಬೇಕು. ಇವತ್ತು 100 ಎಕರೆಗೆ ಬಳಸುವ ನೀರನ್ನು 35 ಎಕರೆಗೆ ಬಳಸಲಾಗುತ್ತದೆ. ಉಚಿತ ವಿದ್ಯುತ್ ಸಂಪರ್ಕದ ಕಾರಣ ಆಳದ ಕೊಳವೆ ಬಾವಿಗಳೂ ವಿದ್ಯುತ್ ಇದ್ದಾಗೆಲ್ಲ ನೀರೆತ್ತುವ ಕಾಯದಲ್ಲಿರುತ್ತವೆ. ಇದನ್ನು ತಪ್ಪಿಸಲು ಸ್ಥಳ ಸಂಬಂಧೀ ನೆಲ ಜಲ ಸಂರಕ್ಷಣಾ ಮಾದರಿಗಳಿಗೆ ಒತ್ತು ನೀಡಬೇಕು. ಏಕಜಾತಿಯ ನೆಡುತೋಪಿನ ಒತ್ತಡ ಕಡಿಮೆಗೊಳಿಸಿ ಸಸ್ಯವೈವಿಧ್ಯ ರಕ್ಷಣೆ, ಅಭಿವೃದ್ಧಿಗೆ ಅರಣ್ಯೀಕರಣ ಹಾಗೂ ತೋಟಗಾರಿಕೆಯಲ್ಲಿ ಒತ್ತು ನೀಡಬೇಕು.

ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳು ಹಾಗೂ ನೀರಾವರಿ ನೆಲೆಯಲ್ಲಿ ಭತ್ತದ ಬೇಸಾಯ ಪ್ರಸ್ತುತ ನಷ್ಟದ ಹಾದಿ ಹಿಡಿದಿದೆ. ಅಧಿಕ ಇಳುವರಿಯ ಒತ್ತಡದಲ್ಲಿ ಪರಿಸರವೂ ಮಾಲಿನ್ಯಕ್ಕೆ ಒಳಗಾಗುತ್ತಿದೆ. ಅಧಿಕ ನೀರು ಬಳಕೆಯಿಂದ ಭೂಮಿ ಸವುಳು ಜವುಳಾದ ಸ್ಥಿತಿಯನ್ನು ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಸೀಮೆಗಳಲ್ಲಿ ನೋಡುತ್ತಿದ್ದೇವೆ. ಭತ್ತದ ಬೆಳೆಯ ಏಕತಾನತೆ ಬದಲಿಸಿ ಕೃಷಿಕರ ಆರೋಗ್ಯ, ಆದಾಯ ಗಮನದಲ್ಲಿರಿಸಿಕೊಂಡ ಕಡಿಮೆ ನೀರು ಬಳಸುವ ಮರ ಆಧಾರಿತ ತೋಟಗಾರಿಕೆ ಬಗ್ಗೆ ಹೆಚ್ಚಿನ ಒತ್ತು ನೀಡುವುದರಿಂದ ಪರಿಸರ ಬದಲಾವಣೆಯೂ ಸಾಧ್ಯವಿದೆ.

ಹಸಿರು ಸಮೃದ್ಧಿಗೊಂದು ದಿಕ್ಕು

ರಾಜ್ಯದಲ್ಲಿ ಜಲ ಸಂರಕ್ಷಣೆಯ ಕುರಿತು ಹಲವು ಯೋಜನೆಗಳು ಜಾರಿಯಲ್ಲಿವೆ. ಜಲ ಸಂರಕ್ಷಣೆ, ಜಾಗೃತಿಯ ಈ ಕಾರ್ಯಕ್ರಮಗಳು ರಾಜ್ಯದ ಜಲತಜ್ಞರ ಮಾರ್ಗದರ್ಶನ ಪಡೆಯದೇ ಕಾರ್ಯಗತವಾಗುತ್ತಿವೆ. ಕಳೆದ 25-30 ವರ್ಷಗಳಿಂದ ವಿವಿಧ ಪರಿಸರಕ್ಕೆ ತಕ್ಕುದಾದ ಅತ್ತುತ್ತಮ ಮಾದರಿಗಳು ನೆಲದಲ್ಲಿದ್ದರೂ ಇಲ್ಲಿನ ತರಬೇತಿಗಳು ಇಸ್ರೇಲ್, ರಾಜಸ್ತಾನ್, ಮಹಾರಾಷ್ಟçದ ಮಾದರಿಗಳ ಬಗ್ಗೆ ಮಾತಾಡುತ್ತಿವೆ. ನೆಲದ ಮಾದರಿಗಳಿಂದ ಜಾಗೃತಿ ಹೆಚ್ಚು ಪರಿಣಾಮಕಾರಿ. ಇಲ್ಲಿನ ಮಣ್ಣು, ಮಳೆ, ಕಾಡಿನ ಸ್ವರೂಪ ಗಮನಿಸಿಕೊಂಡು ಎರಡು ಮೂರು ದಶಕಗಳಿಂದ ಕಲಿತ ಪಾಠಗಳನ್ನು ಆಲಿಸಿ ಸೂಕ್ತ ಕಾರ್ಯಕ್ರಮ ನಡೆಯಬೇಕು.

ಈವರೆಗಿನ ತರಬೇತಿಗಳು ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಕೇಂದ್ರೀಕರಿಸಿ ನಡೆದಿವೆ. ಕಾಗದ ಪತ್ರ ದಾಖಲೆಗಳಿಗಾಗಿ ನಡೆಯುವ ತರಬೇತಿ ಕಾರ್ಯಾಗಾರದ ಹೊರತಾಗಿ ನಿಶ್ಚಿತ ಕಾರ್ಯಗಳ ಮೂಲಕ ಹೆಜ್ಜೆಯಿಡಬೇಕು. ಒಂದು ಕೆರೆ ಹೂಳು ತೆಗೆದರೆ ಸಿಗುವ ಅನುಭವ ನೂರು ಕಾರ್ಯಾಗಾರಕ್ಕಿಂತ ಹೆಚ್ಚಿನದು ಎಂಬುದನ್ನು ಗಮನಿಸಬೇಕು. ಭಾಷಣ, ಉಪನ್ಯಾಸಗಳಿಗಿಂತ ನೇರ ಕೆಲಸಕ್ಕೆ ಇಳಿದು ಅನುಭವ ದಾಖಲಿಸುವ ಕಾರ್ಯ ನಡೆಯಲಿ. ಗ್ರಾಮಗಳ ದರ್ಶನವೇ ಇಲ್ಲದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾಗದ ದಾಖಲೆ ಇಡಲು ಪಳಗಿದ್ದಾರೆಯೇ ಹೊರತೂ ಕೆರೆ, ನದಿ ನೋಡಲು ಹೋಗುತ್ತಿಲ್ಲ. ಇದರ ಪರಿಣಾಮವೇ ಮಳೆ ಸುರಿಯುವ ನೆಲೆಯಲ್ಲಿ ಟ್ಯಾಂಕರ್ ಓಡಿಸುವ ದುಸ್ಥಿತಿ ರಾಜ್ಯಕ್ಕೆ ಬಂದಿದೆ.

ಮಕ್ಕಳಲ್ಲಿ ಜಾಗತಿಕ ಪರಿಸರ ಅರಿವು ಪಾಠಗಳ ಮೂಲಕ ಬೆಳೆಯುತ್ತಿದೆ. ಸ್ಥಳೀಯ ಪಕ್ಷಿ, ಸಸ್ಯ, ನದಿ, ನೀರು, ಕೃಷಿ ಜ್ಞಾನ ಕಡಿಮೆಯಾಗುತ್ತಿದೆ. ದೇಸೀ ಜ್ಞಾನ ಆಧಾರಿತ ಪರಿಸರ ಶಿಕ್ಷಣಕ್ಕೆ ಒತ್ತು ನೀಡಬೇಕು. ಮಲೆನಾಡು, ಕರಾವಳಿ, ಅರೆಮಲೆನಾಡು, ಬಯಲುಸೀಮೆ, ನಗರ ಪ್ರದೇಶಕ್ಕೆ ಸೂಕ್ತವಾದ ಪರಿಸರ ಪಠ್ಯ ಪರೀಕ್ಷೆಯ ಹೊರತಾದ ಜೀವನ ಮಾರ್ಗದ ಅರಿವಿಗಾಗಿ ರೂಪಿಸಬೇಕು. ಹವಾಮಾನ ಬದಲಾವಣೆ, ಉಷ್ಣತೆ ಹೆಚ್ಚಳದ ವಿರುದ್ಧ ಗೆಲ್ಲಲು ಪರಿಸರ ಶಿಕ್ಷಣ ಆದ್ಯತೆ ನೀಡಬೇಕು. ಇದರಲ್ಲಿ ಶಿಕ್ಷಕರು, ಪಾಲಕರು, ಅರಣ್ಯ, ತೋಟಗಾರಿಕೆ, ಕೃಷಿ, ಶಿಕ್ಷಣ ಇಲಾಖೆಗಳು ಜೊತೆಯಾಗಬೇಕು. ಗ್ರಾಮದ ಪರಿಸರ ಸಂಪನ್ಮೂಲದ ಅರಿವಿಗಾಗಿ ಶಾಲೆಗಳಲ್ಲಿ ನಕ್ಷೆ, ಪಠ್ಯಕ್ರಮ ರೂಪಿಸಬೇಕು.

ನದಿ, ಕಾಡು, ಜಲಪಾತ, ಪಕ್ಷಿಗಳ ಕುರಿತು ಈಗಲೂ ಹಲವು ಪಾಠಗಳಿವೆ. ಮಕ್ಕಳು ಪಾಠ ಓದಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಜಾಗತಿಕ ಪರಿಸರದ ಬಗ್ಗೆ ಉತ್ತರಿಸುವ ಮಕ್ಕಳಿಗೆ ಸ್ಥಳೀಯ ಜ್ಞಾನವಿಲ್ಲ. ಕ್ರಿ.ಶ. 2001 ರಿಂದ ಈವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಪರಿಸರ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತಿರುವ ನನ್ನದೇ ಒಂದು ಅನುಭವ ಹೇಳಬೇಕು:

ಬಯಲುಸೀಮೆ, ಮಲೆನಾಡು, ಮೈಸೂರು ಸೀಮೆಯ ಸಹಸ್ರಾರು ಮಕ್ಕಳು ನಮ್ಮ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಕಳೆದ 18 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು 9 ಪ್ರಶ್ನೆಗಳಿಗೆ ಬರೆದ ಲಿಖಿತ ಉತ್ತರ ನನ್ನ ಬಳಿಯಿದೆ. ಸುಮಾರು 35,000 ಮಕ್ಕಳ ಉತ್ತರಗಳವು. ಪ್ರತಿನಿತ್ಯ ಬಳಸುವ ನೀರಿನ ಪ್ರಮಾಣದ ಬಗ್ಗೆ/ತಮ್ಮ ಊರಲ್ಲಿ ಸುರಿಯುವ ಮಳೆಯ ಬಗ್ಗೆ ಪ್ರೌಢ ಶಾಲೆಯ ಬಹುತೇಕ ಮಕ್ಕಳಿಗೆ ಗೊತ್ತಿಲ್ಲ. ಮಳೆ ಅಳೆಯುವ ವಿಧಾನಗಳ ಅರಿವಿಲ್ಲ. ಜಿಲ್ಲೆಯಲ್ಲಿ ಹರಿಯುವ ನದಿಗಳ ಹೆಸರು ಬರೆಯಲು ವಿನಂತಿಸಿದಾಗ ಅವರ ತರಗತಿಯ ಪಾಠದಲ್ಲಿರುವ ನದಿಯ ಹೆಸರು ಮೊದಲು ಬರೆಯುತ್ತಾರೆ. ಅಂದರೆ ಪಾಠದ ಹೊರಗಡೆ ಅವರು ಸ್ವಲ್ಪವೂ ನೋಡುತ್ತಿಲ್ಲ.

ಹುಲಿಯ ಆಹಾರ, ಆನೆಯ ಆಹಾರ, ಪರಿಚಿತ ಕಾಡು ಸಸ್ಯ, ಕಾಡು ಹಣ್ಣಿನ ಕುರಿತ ಜ್ಞಾನ ಕ್ಷೀಣಿಸಿದೆ. ಮುಂದಿನ 20 ವರ್ಷಗಳ ನಂತರ ನಮ್ಮ ಪರಿಸರ ಹೇಗಿರಬಹುದೆಂಬ ಪ್ರಶ್ನೆಗೆ ಬಹಳ ಮಾರ್ಮಿಕ ಉತ್ತರ ನೀಡಿದ್ದಾರೆ. ಮಕ್ಕಳಿಗೆ ಜಲಕ್ಷಾಮ, ಅರಣ್ಯನಾಶದ ಅರಿವಿದೆ. ಆದರೆ ಎಲ್ಲವೂ ಜಾಗತಿಕ ಮಾಹಿತಿಯಾಗಿ ಅಲ್ಲಿಯೂ ಸ್ಥಳೀಯ ಜ್ಞಾನ ಬಡವಾಗಿದೆ.

ಮಕ್ಕಳು ಶಾಲೆ ಸುತ್ತಲಿನ ತೋಟ, ಗದ್ದೆ, ಕಾಡು, ಹಳ್ಳ, ಹಕ್ಕಿ, ಚಿಟ್ಟೆ, ಮರ ಹೀಗೆ ಪರಿಸರದ ಯಾವುದನ್ನೂ ಸರಿಯಾಗಿ ಗಮನಿಸುತ್ತಿಲ್ಲ. ನಿತ್ಯ ನದಿ ದಾಟಿ ಹೋಗುತ್ತಿದ್ದರೂ ಆ ನದಿಯ ಕುರಿತು ಸ್ವಲ್ಪವೂ ಅರಿವಿಲ್ಲ. ಜನಪದ, ಪುರಾಣಗಳಲ್ಲಿ ಪ್ರತಿ ಮರಕ್ಕೆ ಸೊಗಸಾದ ಕಥೆಗಳಿದ್ದರೂ ಆ ಬಗ್ಗೆ ಗೊತ್ತಿಲ್ಲ. ನಮ್ಮ ಪ್ರತಿ ಶಿಬಿರಗಳಲ್ಲಿ ಒಂದಿಬ್ಬರು ಶಿಕ್ಷಕರೂ ಭಾಗವಹಿಸುತ್ತಾರೆ. ಇಲ್ಲಿ ಕಲಿತ ಪಾಠಗಳನ್ನು ಅವರು ಶಾಲೆಯಲ್ಲಿ ಪಾಠವಾಗಿಸಲಿ ಎಂಬುದು ಇದರ ಉದ್ದೇಶವಾಗಿದೆ.

ಮಕ್ಕಳು ಏಕೆ ಬದಲಾದರೆಂದು ಕೆಲವು ಶಿಕ್ಷಕರ ಜೊತೆಗೆ ಸಮಾಲೋಚಿಸಿದಾಗ ಸ್ಪರ್ಧಾತ್ಮಕ ಯುಗವಾದ್ದರಿಂದ ಮಕ್ಕಳು ಅಂಕಗಳಿಗೆ ಹೆಚ್ಚು ಮಹತ್ವ ನೀಡುವಂತೆ ಪಾಲಕರು, ಶಿಕ್ಷಕರ ಒತ್ತಡವಿದೆಯೆಂಬುದು ತಿಳಿಯಿತು. ಪರಿಸರ ಶಿಬಿರದಿಂದ ಏನು ಲಾಭ? ಎಂಬ ಪ್ರಶ್ನೆಯನ್ನು ಪಾಲಕರು ಜೋರಾಗಿ ಕೇಳುತ್ತಾರೆ. ಮಕ್ಕಳ ಶೈಕ್ಷಣಿಕ ಸಾಧನೆ ಮುಖ್ಯ, ಆದರೆ ನಮ್ಮ ಶಿಕ್ಷಣ ಹಾಗೂ ಆರೋಗ್ಯದ ಮೂಲವಾದ ನೆಲ ಜಲದ ಬಗ್ಗೆ ಸಾಕ್ಷರತೆಯಿಲ್ಲದೇ ಈ ತಲೆಮಾರಿನ ಭವಿಷ್ಯ ಕಷ್ಟವಾಗಬಾರದು.

ಎಲ್ಲರಿಗೂ ತಾವು ಈ ಭೂಮಿಗೆ ಸಂಬಂಧಿಸಿದವರೆಂಬ ಪ್ರಜ್ಞೆ ಬೆಳೆಯಬೇಕು. ಊರಿನ ನದಿ, ಕೆರೆ, ಕಾಡು ಉತ್ತಮವಾಗಿಲ್ಲದಿದ್ದರೆ ಕಲಿತ ಶಿಕ್ಷಣವೂ ವ್ಯರ್ಥವಲ್ಲವೇ?

Leave a Reply

Your email address will not be published.