ದಿಢೀರ್ ದುಡ್ಡು ಈಗಿನ ಟ್ರೆಂಡ್!

ಸಂಗೀತ ಕ್ಷೇತ್ರ ಬದಲಾಗಬೇಕಂದ್ರೆ ಸಂಗೀತ ಬದಲಾಗಬೇಕಿಲ್ಲ, ಕೇಳುಗರು ಬದಲಾಗಬೇಕಿಲ್ಲ; ಆದರೆ ಕೇಳುಗರ, ಹಾಡುವವರ ಮನಃಸ್ಥಿತಿ ಬದಲಾಗಬೇಕು.

-ಮನೋಜವಂ ಆತ್ರೇಯ

ಈಗಿನ ಕಾಲದಲ್ಲಿ ಸಂಗೀತಕ್ಕಿಂತ ಸೌಂಡ್‍ಗೆ ಹೆಚ್ಚು ಬೆಲೆ ಸಿಗ್ತಾ ಇದೆ. ಅಂದ್ರೆ ಹೀಗೆ ಕೇಳಿಸ್ಬೇಕು, ಇಷ್ಟು ಚೆನ್ನಾಗಿ ಕೇಳಿಸಬೇಕು, 5.1ನಲ್ಲಿ ಕೇಳಿಸಬೇಕು, ಸ್ಟೀರಿಯೋ ಹಿಂಗಿರಬೇಕು. ಹೀಗಾಗಿ ಈಗ ತಾಂತ್ರಿಕತೆಗೆ ಹೆಚ್ಚಿನ ಆದ್ಯತೆ ಇದೆ. ಸಂಗೀತಕ್ಕೆ ಹಿಂದೆ ಇದ್ದ ಒತ್ತು ಕಡಿಮೆಯಾಗಿದೆ. ಲಿರಿಕ್ಸ್ ಸರಿಯಾಗಿ ಕೇಳ್ಸೋದಿಲ್ಲ, ಲಿರಿಕ್ಸ್‍ಗೆ ಇಂಥದೇ ಆದ ಅರ್ಥ ಇರೋಲ್ಲ.

ಈಗ ಎಲ್ಲವನ್ನೂ ನೇರವಾಗಿ ಹೇಳುವ ಸಾಹಿತ್ಯ. ನಿನ್ನ ಮುಖ ಚಂದ್ರನ ಥರ ಇದೆ, ಹೂ ಅರಳಿದಂತೆ ನಿನ್ನ ನಗು ಕಾಣಿಸ್ತು ಹೀಗೆ ಉಪಮಾನಗಳನ್ನು ಬಳಸಿ ಹೋಲಿಸಿ ಬರೆಯೋದೆಲ್ಲ ಕಡಿಮೆಯಾಗಿದೆ. ಅವುಗಳಲ್ಲಿಯ ಸೂಕ್ಷ್ಮಗಳು, ಅದನ್ನು ಗ್ರಹಿಸಿ ಸಂಗೀತ ನಿರ್ದೇಶಕರು ಸಾಹಿತ್ಯದ ಭಾವವನ್ನು ಹೊರಹೊಮ್ಮಿಸುವಂತೆ ಸಂಗೀತವನ್ನು ಮಾಡೋದು ವಿರಳವಾಗಿದೆ. ಹೀಗಾಗಿ ಸಂಗೀತ ನಿರ್ದೇಶಕನ ಸಂಗೀತಕ್ಕಿರೋ ಮಹತ್ವ ಕುಂಠಿತವಾಗ್ತಿದೆ. ನಿಜವಾದ ಸಂಗೀತದಿಂದ ಹೊರಹೊಮ್ಮುವ ಇಂಪು ಕಣ್ಮರೆಯಾಗ್ತಿದೆ.

ಇತ್ತೀಚಿನ ಯುವಜನತೆ ನಮ್ಮ ಭವ್ಯ ಪರಂಪರೆಯ ಸಂಗೀತದ ಕುರಿತು ತಿಳಿಯುವದಕ್ಕಿಂತ ಪಾಶ್ಚಾತ್ಯ ಸಂಗೀತದ ಕಡೆಗೆ ವಾಲ್ತಿದಾರೆಯೇ ಹೊರತೂ ಪಾಶ್ಚಾತ್ಯ ಸಂಗೀತದ ಬಗ್ಗೆಯೂ ಸರಿಯಾಗಿ ತಿಳಿದುಕೊಂಡಿಲ್ಲ. ಯಾರೋ ಒಬ್ಬ ಪಾಪ್ ಮ್ಯೂಸಿಕ್, ಹಿಪಾಪ್ ಮ್ಯೂಸಕ್ ಕೇಳ್ತಾನೆ ಹೊರತು ಅದರ ಬುಡ ಆತನಿಗೆ ಗೊತ್ತೇ ಇರೋಲ್ಲ. ಯಾವುದರ ಬಗ್ಗೆಯಾದರೂ ತಿಳಿದುಕೊಂಡು ಇಷ್ಟ ಪಡೋದೇ ಬೇರೆ. ಸುಮ್ಮನೆ ಎಲ್ಲರ ಹೈ_ಫೈಗಳ ಜೊತೆ ನಾನೂ ಕೈಜೋಡಿಸಿದ್ದೇನೆ ಎಂಬ ಭಾವನೆ ಬರೋದಕ್ಕೋಸ್ಕರ, ಇಷ್ಟವಿದೆಯೋ ಇಲ್ಲವೋ ಇಷ್ಟಪಟ್ಟಂತೆ ಕೇಳುವ ನಟನೆ ಮಾಡಿ ಪೂರ್ವಗ್ರಹ ಪೀಡಿತರಂತೆ ವರ್ತಿಸುವ ಧೋರಣೆ ಈಗೀಗ ಹೆಚ್ಚಾಗಿದೆ. ಇದು ತಪ್ಪು.

ಎಲ್ಲ ಪ್ರಾಕಾರದ ಮ್ಯೂಸಿಕ್ ಕೇಳುವುದು ತಪ್ಪಲ್ಲ; ಸಂಗೀತ ಒಂದೇ. ನಾವಿಲ್ಲಿ ಸರಿಗಮಪದನಿ ಅಂತ ಹೇಳ್ತೀವಿ, ಪಾಶ್ಚಾತ್ಯರು ದೊರೆಮಿಪಸೊಲೆಟಿ ಅಂತಾರೆ. ಸರಿಗಮಪದನಿಯ ನೊಟೇಶನ್ ನಾವು ಬರೆದರೆ, ಅವರು ರೋಚೆಟ್, ಮಿನಿ ಅಂತ ಸ್ಟಾಫ್ ನೊಟೇಶನ್ ಬರೀತಾರೆ. ಭಾರತೀಯನಾಗಿ ನಮ್ಮ ಸಂಸ್ಕøತಿಯ ಸಂಗೀತದ ಬಗ್ಗೆ ತಿಳಿದುಕೊಳ್ಳುವುದು ಲೇಸು. ಆಗ ಆ ಸಂಗೀತವನ್ನು ಬೆಳೆಸುವುದಕ್ಕೆ ಸಾಧ್ಯವಾಗ್ತದೆ. ಈ ವಿಚಾರಗಳನ್ನೆಲ್ಲಾ ಇಂದಿನ ಯುವ ಜನತೆಗೆ ತಿಳಿಹೇಳಬೇಕಾಗಿದೆ, ಜಾಗೃತಿ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕಲಾವಿದರೆಲ್ಲ ಸಕ್ರಿಯವಾಗಿ ತೊಡಗಿಸಿಕೊಂಡು ಯುವಜನತೆಗೆ ಮಾರ್ಗದರ್ಶನ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಹೊಸ ಪೀಳಿಗೆಯ ಸಮರ್ಥ ಶಾಸ್ತ್ರೀಯ ಹಾಡುಗಾರರು, ವಾದ್ಯಗಾರರನ್ನು ಗುರುತಿಸುವಲ್ಲಿ ಕರ್ನಾಟಕ ಎಡವಿದ್ದು ಸತ್ಯ. ನಮ್ಮ ಸಂಗೀತದ ಪ್ರಯೋಗಗಳನ್ನು ನೋಡಿ, ಕೇಳಿ, ಮೆಚ್ಚುಗೆ ವ್ಯಕ್ತಪಡಿಸುವಷ್ಟು ತಾಳ್ಮೆ ಈಗಿನ ಯುವ ಪೀಳಿಗೆಗೆ ಇಲ್ಲವೇ ಇಲ್ಲ. ಬಡಾ ಖಯಾಲ್, ಚೋಟಾ ಖಯಾಲ್‍ನಂತ ಸಂಗೀತದ ಪ್ರಕಾರಗಳನ್ನು ಎರಡೂವರೆ ಗಂಟೆ ಕೇಳಿ ಆಸ್ವಾದಿಸುವಷ್ಟು ವ್ಯವಧಾನ ಜನಕ್ಕೆ ಖಂಡಿತವಾಗಿಯೂ ಇಲ್ಲ. ಈಗೇನಿದ್ದರೂ 10-15 ಸೆಕೆಂಡುಗಳವರೆಗೆ ಅವರ ತಾಳ್ಮೆ ಬಂದು ನಿಂತಿದೆ. ಇದು ತುಂಬ ಬೇಸರದ ಸಂಗತಿ.

ಪೀಪಲ್ ವಿಲ್ ಸಪೋರ್ಟ್ ಯು, ವೆನ್ ಯು ಆರ್ ಫೇಮಸ್. ದಿಢೀರ್ ಹೆಸರು ಮಾಡುವುದು, ದುಡ್ಡು ಮಾಡುವುದೇ ಈಗ ಟ್ರೆಂಡ್ ಆಗಿದೆ. ಮನಸ್ಥಿತಿಯೂ ಕೂಡ. ನಾನೇನಾದರೂ ಒಂದು ಸಾಧನೆ ಮಾಡಬೇಕು, ಸಾಧನೆಗೆ ಸಮಯ ಮೀಸಲಿಡಬೇಕು ಎಂಬ ಶ್ರದ್ಧೆ ಬಹುತೇಕರಲ್ಲಿ ಇಲ್ಲ. ಸಂಗೀತ ದಿಗ್ಗಜರ ಸಾಧನೆಗಳನ್ನು ಯುವಜನತೆಗೆ ತಲುಪಿಸುವಲ್ಲಿ ವಿಫಲವಾಗಿದ್ದೇವೆ. ಈ ಕಾರಣಗಳಿಂದಲೇ ಈ ಕಾಲದಲ್ಲಿ ಸಂಗೀತ ಸಾಧಕರ ಕೊರತೆಯಾಗಿದೆ. ಇರುವ ಕೆಲವೇ ಸಾಧಕರಿಗೂ ಕರ್ನಾಟಕದಲ್ಲಿ ವೇದಿಕೆ ಸಿಗ್ತಿಲ್ಲ. ಪ್ರತಿಭೆಗೆ ಅವಕಾಶ, ಮನ್ನಣೆಯಿದ್ದ ಕಡೆ ಪ್ರತಿಭಾವಂತರ ವಲಸೆಯಾಗ್ತಿದೆ. ಹೊಸಬರನ್ನು ಗುರುತಿಸಿ ಗೌರವಿಸುವುದನ್ನು ನಾವು ಬೆಳೆಸಿಕೊಳ್ಳಬೇಕು. ಹೊಸಬರು ಹೇಳುವುದನ್ನು ತಾಳ್ಮೆಯಿಂದ ಕೇಳಬೇಕು.

ಸಂಗೀತದ ಕುರಿತು ಸಂಶೋಧನೆಗಳಾಗಬೇಕು ಎನ್ನುವುದು ಅತ್ಯಂತ ಅವಶ್ಯಕವಾದ ಸಂಗತಿ. ಶಬ್ದಗಳ ಅಬ್ಬರಗಳ ನಡುವೆ ಸಂಗೀತದ ನಿಜವಾದ ಮಜಲುಗಳನ್ನು ಮುಟ್ಟಲು ಸಾಧ್ಯವಾಗ್ತಿಲ್ಲ. ಆದರೆ ಬೇರೆ ಭಾಷೆಯ ಟೆಲಿವಿಷನ್ ಸ್ಪರ್ಧೆಗಳಲ್ಲಿ ಕಂಡು ಬರುವ ಪ್ರತಿಭೆ ಕನ್ನಡದ ಚಾನೆಲ್‍ಗಳಲ್ಲಿ ಅಪರೂಪವಾಗಿದೆ ಅನ್ನೋ ಮಾತನ್ನು ನಾನು ನ್ಯೂಟ್ರಲ್ ಆಗಿ ಪರಿಗಣಿಸ್ತೇನೆ. ಕಾರಣವೇನೆಂದರೆ ಬೇರೆ ಚಾನಲ್ಲಿನಲ್ಲಿ ಬರುವ ಪ್ರತಿಭೆಗಳನ್ನು ನಾವು ನೋಡಿ ವಾವ್ ಅಂತ ಹೊಗಳ್ತೇವೆಯೇ ಹೊರತು ನಮ್ಮ ಚಾನಲ್ಲುಗಳನ್ನು ನೋಡುತ್ತಿಲ್ಲ.

ಕನ್ನಡದಲ್ಲಿ ಸಂಗೀತದ ಎಷ್ಟೊಂದು ರಿಯಾಲಿಟಿ ಶೋಗಳಾಗಿವೆ. ಒಂದೊಂದು ಶೋದಿಂದ ಒಬ್ಬೊಬ್ಬ ಸಿಂಗರ್ ಅಂತ ಇಟ್ಕೊಂಡ್ರು ಇಷ್ಟೊತ್ತಿಗೆ ಕರ್ನಾಟಕ ಹಾಡುಗಾರರಿಂದ ತುಂಬಿ ತುಳುಕಬೇಕಾಗಿತ್ತು. ಆದರೆ ಅವರೆಲ್ಲರನ್ನು ಬದಿಗೊತ್ತಿ ಹೊರಗಡೆಯಿಂದಲೇ ಬಂದು ಹಾಡಬೇಕು ಎಂಬ ಧೋರಣೆ ಮೊದಲು ಹೋಗಲಾಡಿಸಬೇಕು.

*ಲೇಖಕರು ಉದಯೋನ್ಮುಖ ಸಂಗೀತ ಕಲಾವಿದ, ಸಿನಿಮಾ ನಟ; ಎದೆ ತುಂಬಿ ಹಾಡಿದೆನು, ಸರಿಗಮಪ, ಚಾಂಪಿಯನ್ ಆಫ್ ಚಾಂಪಿಯನ್ಸ್ ಹಾಗೂ ಕನ್ನಡ ಕೋಗಿಲೆ ಸೂಪರ್ ಸೀಸನ್‍ನಲ್ಲಿ ಭಾಗವಹಿಸಿದ್ದಾರೆ. ಮುಂಬರುವ ಸ್ಟೀಲ್ ಪಾತ್ರೆ ಸಾಮಾನ್ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿದ್ದಾರೆ. ಆತ್ರೇಯ ಸ್ಟುಡಿಯೋಸ್ ಸಂಸ್ಥೆ ಸ್ಥಾಪಿಸಿದ್ದಾರೆ.

ಭರವಸೆಯ ಗಾಯಕಿ ಮಮತಾ ನಂದಿಹಳ್ಳಿ

ಬದುಕಿನಲ್ಲಿ ದಿಢೀರೆಂದು ಎದುರಾಗುವ ಕೆಲವು ಆಘಾತಗಳು ಕೆಲವರ ಬದುಕಿನ ಪಥವನ್ನೇ ಬದಲಿಸುತ್ತವೆ. ಕೆಲವರು ಆಘಾತಗಳಿಗೆ ಅದರಿ ಹೋಗುತ್ತಾರೆ. ಇನ್ನು ಕೆಲವರು ತಮ್ಮ ಸಾಧನೆಯ ಮೂಲಕ ಆಘಾತಗಳನ್ನು ಮೆಟ್ಟಿ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಈ ಎರಡನೆ ಸಾಲಿಗೆ ಸೇರಿದವರು ಮಮತಾ ನಂದಿಹಳ್ಳಿ; ತಮ್ಮ ಜೀವನದಲ್ಲಿ ಎದುರಾದ ಆಘಾತವನ್ನು ಮೆಟ್ಟಿ ನಿಂತು ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಗಾಯನ, ತತ್ವಪದ, ಜಾನಪದಗೀತೆಗಳನ್ನು ಹಾಡುವ ಮೂಲಕ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಭರವಸೆ ಮೂಡಿಸಿದ್ದಾರೆ.

ಹಾವೇರಿ ಸಮೀಪದ ಚಿಕ್ಕಲಿಂಗದಹಳ್ಳಿಯ ರಾಜಣ್ಣ ಮತ್ತು ಆಶಾಬಿ ದಂಪತಿಯ ಐವರು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ಮಮತಾ ಚಿಕ್ಕ ವಯಸ್ಸಿನಿಂದಲೇ ಸಂಗೀತ, ಹಾಡುಗಾರಿಕೆಯ ಆಕರ್ಷಣೆಗೆ ಒಳಗಾದವರು. “ಹಾಡ್ತಾ ಹಾಡ್ತಾ ರಾಗ” ಎನ್ನುವಂತೆ ಎಡಬಿಡದ ಹಾಡುಗಾರಿಕೆಯ ಹವ್ಯಾಸವೇ ಇಂದು ಇವರನ್ನು ಉತ್ತಮ ಹಾಡುಗಾರ್ತಿಯನ್ನಾಗಿ ಮಾಡಿದೆ. ಹಲವಾರು ಧ್ವನಿ ಸುರಳಿಗಳಿಗೆ ಧ್ವನಿ ನೀಡುವ ಮೂಲಕ ಜಿಲ್ಲೆಯಲ್ಲಿ ಮಮತಾ ಹೆಸರುವಾಸಿಯಾಗಿದ್ದಾರೆ, ಸಂಗೀತ ದಿಗ್ಗಜರಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಮಮತಾ ಹಾವೇರಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.  

ಇವರು ಸಂಗೀತ ಕ್ಷೇತ್ರದ ಜ್ಯುನಿಯರ, ಸೀನಿಯರ್, ವಿದ್ವತ್ ಹಾಗೂ ವಿದ್ವತ್ ಅಂತಿಮ ಪರೀಕ್ಷೆ ಪಾಸಾಗಿದ್ದಾರೆ. ಡಾ.ಹಂಸಲೇಖ ದೇಸಿ ಕಾಲೇಜಿನಲ್ಲಿ ಸಂಗೀತ ಪದವಿ ಪಡೆದಿದ್ದಾರೆ. ಜನಪದ ವಿಶ್ವವಿದ್ಯಾಲಯದಿಂದ ಜನಪದ ಟ್ರೆಡಿಶನಲ್ ಸರ್ಟಿಪಿಕೇಟ್ ಕೋರ್ಸ್ ಪ್ರಮಾಣಪತ್ರ ಪಡೆದಿದ್ದಾರೆ. ಇಲ್ಲಿವರೆಗೂ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ನೂರಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಭಕ್ತಿಗೀತೆಗಳ ಹಾಡುಗಾರಿಕೆಯಲ್ಲಿಯೂ ಸೈ ಎನಿಸಿಕೊಂಡಿರುವ ಮಮತಾ ಹಲವಾರು ಭಕ್ತಿಗೀತೆಗಳ ಧ್ವನಿಸುರಳಿಗಳನ್ನು ಹೊರತಂದಿದ್ದಾರೆ. ಹಾವೇರಿಯ ಹುಕ್ಕೇರಿಮಠದ ಶಿವಬಸವಶ್ರೀಗಳ ಸುಪ್ರಭಾತಕ್ಕೆ ಹಾಗೂ ಸಾಹಿತಿ ಗಂಗಾಧರ ನಂದಿ ಅವರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖಾ ಅವರ ಗರಡಿಯಲ್ಲಿ ಸಂಗೀತ ಅಧ್ಯಯನ ಮಾಡಿರುವ ಮಮತಾ ನಂದಿಹಳ್ಳಿಯವರು ಸಂಗೀತಪ್ರಿಯರನ್ನು ರಂಜಿಸುತ್ತಿದ್ದಾರೆ. 

ಶಿಕ್ಷಣ ಇಲಾಖೆ ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ನಡೆಸುವ ಪ್ರತಿಭಾ ಕಾರಂಜಿ, ಕಲಿಕೋತ್ಸವ ಹಾಗೂ ಜಿಲ್ಲಾಮಟ್ಟದ ಸಾಂಸ್ಕøತಿಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಲ್ಲಿನ ಸಂಗೀತ ಪ್ರತಿಭೆ ಗುರುತಿಸುವ ಮಹತ್ವದ ಕಾರ್ಯವನ್ನು ನಂದಿಹಳ್ಳಿಯವರು ನಿರ್ವಹಿಸುತ್ತಾ ಬಂದಿದ್ದಾರೆ. ಬೆಂಗಳೂರಿನ ದೂರದರ್ಶನ ಕೇಂದ್ರದ ‘ಮಧುರ ಮಧುರವಿ ಮಂಜುಳಗಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

-ಮಾಲತೇಶ ಅಂಗೂರ

 

ಕೊಳಲು ವಾದಕ ಪ್ರಕಾಶ್ ಹೆಗಡೆ ಕಲ್ಲಾರೆಮನೆ

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲ್ಲಾರೆಮನೆಯಲ್ಲಿ ಜನಿಸಿದ ಪ್ರಕಾಶ ಹೆಗಡೆ ಪ್ರಭಾಕರ ಮತ್ತು ಗಂಗಾ ದಂಪತಿಯ ಪ್ರಥಮಪುತ್ರರು. ಕೊಳಲು ವಾದಕರಲ್ಲಿ ಜಿಲ್ಲೆಯ ಪ್ರಥಮ ಎ ಗ್ರೇಡ್ ಕಲಾವಿದರು.

ತಮ್ಮ ಸಾಂಪ್ರದಾಯಿಕ ಶಿಕ್ಷಣವನ್ನು ಪ್ರೌಢಶಾಲೆಯವರೆಗೆ ಸ್ಥಳೀಯವಾಗಿ ಪೂರೈಸಿದ ಇವರು ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ಪಂಡಿತ್ ಪ್ರಭಾಕರ ಭಟ್ಟ, ಪಂಡಿತ್ ವೆಂಕಟೇಶ್ ಗೋಡಕಿಂಡಿ ಇವರಲ್ಲಿ ಪಡೆದು ನಂತರ ಮುಂಬಯಿಯ ಖ್ಯಾತ ಕೊಳಲುವಾದಕರಾದ ಪಂಡಿತ್ ರಘುನಾಥ್ ಸೇಟ್ ಬಳಿ ಹೆಚ್ಚಿನ ಅಧ್ಯಯನ ಮಾಡಿರುತ್ತಾರೆ. ದೇಶದ ಹಲವು ವೇದಿಕೆಗಳಲ್ಲಿ ಕೊಳಲು ನುಡಿಸಿ ಸೈ ಎನಿಸಿಕೊಂಡಿದ್ದಾರೆ.

ಅಮೆರಿಕ, ಆಸ್ಟ್ರೇಲಿಯಾ, ಲಂಡನ್, ದುಬೈ ದೇಶಗಳಲ್ಲಿ ಸ್ವತಂತ್ರ ಕೊಳಲುವಾದನದ ಜೊತೆಗೆ ಹಲವು ನಾಮಾಂಕಿತ ಕಲಾವಿದರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ದೇಶದ ಖ್ಯಾತ ಕಲಾವಿದರಾದ ಬಿರ್ಜು ಮಹಾರಾಜ್ (ಕಥಕ್), ಅನುಪ್ ಜಲೋಟ (ಭಜನ್) ಹೇಮಾಮಾಲಿನಿ, ಮಾಯಾರಾವ್ (ನೃತ್ಯ) ಬ್ಯಾಲೆ ಗಳೊಂದಿಗೆ ಭಾಗವಹಿಸಿರುತ್ತಾರೆ. ಪ್ರಯೋಗಶೀಲತೆಯುಳ್ಳ ಇವರು ಅನೇಕ ಯೋಗ ಮತ್ತು ಧ್ಯಾನ ಶಿಬಿರಗಳಲ್ಲಿ ಕೊಳಲಿನ ಪ್ರಭಾವದ ಪ್ರಯೋಗ ನಡೆಸಿರುತ್ತಾರೆ.

ಪ್ರಕಾಶ್ ಹೆಗಡೆಯವರು ಸದ್ಯ ಬೆಂಗಳೂರಿನಲ್ಲಿ `ಸ್ವರ ಸಂಗೀತ ವಿದ್ಯಾಲಯ’ ಹೆಸರಿನಲ್ಲಿ ಅನೇಕ ಶಿಷ್ಯರಿಗೆ ತರಗತಿಯನ್ನು ನಡೆಸಿ ತರಬೇತಿ ನೀಡುತ್ತಿದ್ದಾರೆ ಹಾಗೂ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನ ಹಾಗೂ ತಾಳಮದ್ದಳೆಯಲ್ಲಿ ಕೊಳಲನ್ನು ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

-ಎಂ.ಕೆ.ನಾಯ್ಕ, ಶಿರಸಿ

 

 

ಬೆಳಗುತ್ತಿದ್ದಾರೆ ವಿದ್ವಾನ್ ಪ್ರಕಾಶ

ತಮ್ಮ ಸಂಪೂರ್ಣ ಜೀವನವನ್ನು ಸಂಗೀತಕ್ಕಾಗಿಯೇ ಮುಡುಪಾಗಿಟ್ಟವರು ಅನೇಕರು. ಅಂತಹವರಲ್ಲಿ ಶಿರಸಿ ತಾಲೂಕಿನ ಯಡಳ್ಳಿ ಗ್ರಾಮದ ವಿದ್ವಾನ್ ಪ್ರಕಾಶ ಹೆಗಡೆಯವರೂ ಒಬ್ಬರು.

ಭಾಗೀರಥಿ ಮತ್ತು ಮಂಜುನಾಥ ಹೆಗಡೆ ಇವರ ಸುಪುತ್ರರಾದ ಪ್ರಕಾಶ ಹೆಗಡೆ ಬಾಲ್ಯದಿಂದಲೇ ಸಂಗೀತ ಸೆಳೆತಕ್ಕೆ ಒಳಗಾದವರು. ಮನೆಯಲ್ಲಿ ಹೆಚ್ಚಿನ ಪೆÇ್ರೀತ್ಸಾಹ ಸಿಗದೇ ಇದ್ದರೂ ಸ್ವಂತ ಪರಿಶ್ರಮದಿಂದ ಸಂಗೀತ ಕಲಿಕೆಗೆ ಸೇರಿಕೊಂಡರು. ಇವರು ತಮ್ಮ ಪ್ರೌಢಶಿಕ್ಷಣವನ್ನು ಶ್ರೀ ಶಾರದಾಂಬಾ ಪ್ರೌಢಶಾಲೆ ಭೈರುಂಬೆ ಹಾಗೂ ಪಿಯುಸಿ ಮತ್ತು ಬಿ.ಎ. ಪದವಿಯನ್ನು ಉಡುಪಿಯ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜಿನಲ್ಲಿ ಪಡೆದುಕೊಂಡರು.

ಶಿಕ್ಷಣದ ಜೊತೆಗೆ ಹಿಂದೂಸ್ತಾನಿ ಸಂಗೀತ ಗಾಯನ ಹಾಗೂ ವಾದನದ ಪ್ರಾರಂಭಿಕ ಶಿಕ್ಷಣವನ್ನು ಪಂ.ಮಹಾಬಲೇಶ್ವರ ಭಾಗ್ವತರವರಲ್ಲಿ, ತದನಂತರ ಗಾಯನವನ್ನು ಪಂ.ಎಂ.ಪಿ.ಹೆಗಡೆ ಪಡಿಗೆರಿಯವರಲ್ಲಿ ಹಾಗೂ ನಂತರದ 14 ವರ್ಷಗಳ (2000-2014) ಕಾಲ ಹಾರ್ಮೊನಿಯಮ್ ಮಾಂತ್ರಿಕರಾದ ಪಂ.ವಸಂತ ಕನಕಾಪುರ ಇವರಲ್ಲಿ ಹಾರ್ಮೊನಿಯಮ್ ಶಿಕ್ಷಣ ಪಡೆದು ಸುದೀರ್ಘ 21 ವರ್ಷಗಳ  ಸಂಗೀತ ತಪಸ್ಸಿನೊಂದಿಗೆ  ಹಾರ್ಮೊನಿಯಮ್ ನಲ್ಲಿ ಪದವಿಯನ್ನು ಪೂರೈಸಿದರು.

1991 ರಲ್ಲಿ ಶಿರಸಿಯಲ್ಲಿ `ಮಿತ್ರಾ ಮ್ಯೂಸಿಕಲ್ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಗಾಯನ, ವಾದನ ತರಬೇತಿ, ಸಂಗೀತೋಪಕರಣಗಳ ಮಾರಾಟ, ರಿಪೇರಿ ಹೀಗೆ ಸಂಗೀತ ಸೇವೆಗಳನ್ನು ಜನಗಳಿಗೆ ತೆರೆದಿಟ್ಟರು. `ರಾಗಿಣಿ ಸಂಗೀತ ವೇದಿಕೆ’ ಮೂಲಕ ಸುಮಾರು 75ಕ್ಕೂ ಹೆಚ್ಚು ಕಾರ್ಯಕ್ರಮಗಳ ಮೂಲಕ ಜನರ ಮನಸೂರೆಗೊಂಡರು. ಅನೇಕ ಪ್ರತಿಷ್ಠಿತ ಕಲಾವಿದರಿಗೆ, ಎಲ್ಲ ಹಿರಿಯ ಕಿರಿಯ ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಟ್ಟಿದ್ದು ಇವರ ಹೆಗ್ಗಳಿಕೆ. ಪ್ರಸ್ತುತ ರಾಗಮಿತ್ರಾ ಪ್ರತಿಷ್ಠಾನ -ಮಿತ್ರಾ ಮ್ಯೂಸಿಕಲ್ಸ್ ಎಂಬ ಹೆಸರಿನಡಿ ಅನೇಕ ವಿದ್ಯಾರ್ಥಿಗಳಿಗೆ ಮುಕ್ತ ಹೃದಯದಿಂದ ಸಂಗೀತ ತರಬೇತಿಯನ್ನು ನೀಡುತ್ತಿದ್ದಾರೆ. ಎಷ್ಟೋ ಬಡ ಮಕ್ಕಳಿಗೆ ಪ್ರತಿಫಲಾಪೇಕ್ಷೆಯಿಲ್ಲದೇ ಉಚಿತ ಸಂಗೀತ ಶಿಕ್ಷಣವನ್ನು ಕೊಡುತ್ತಾ ಅವರು ಬೆಳೆಯುವಲ್ಲಿ ಬೆನ್ನೆಲುಬಾಗಿರುವುದು ಗಮನಾರ್ಹ.

ಕಳೆದ 30 ವರ್ಷಗಳಿಂದಲೂ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಾ ಬಂದಿರುವ ಇವರು 6000 ಕ್ಕೂ ಅಧಿಕ ಕಾರ್ಯಕ್ರಮಗಳನ್ನು ರಾಜ್ಯ-ರಾಷ್ಟ್ರದಲ್ಲೆಡೆ ನೀಡಿದ್ದಾರೆ. 300ಕ್ಕೂ ಅಧಿಕ ದಾಸರ ಪದಗಳಿಗೆ, ನಾಡು-ನುಡಿ ಗೀತೆಗಳಿಗೆ, ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. ಸಂಗೀತವನ್ನು ತಪಸ್ಸಿನಂತೆ ಆಚರಿಸುತ್ತಾ ಬಂದ ಇವರು ಉತ್ತರ ಕನ್ನಡ ಜಿಲ್ಲೆಗೆ ಮೊದಲ ಹಾರ್ಮೊನಿಯಮ್ ವಾದಕರಾಗಿ ಗುರುತಿಸಿಕೊಂಡಿದ್ದು ಸಂತಸದ ವಿಷಯ.

ಪ್ರಕಾಶ್ ಹೆಗಡೆಯವರ ವಾದನ ವೈಖರಿ ಬಹಳ ವಿಶಿಷ್ಟವಾದುದು. ಇವರು 1 ಸೆಕೆಂಡ್ ನಲ್ಲಿ 15 ಸ್ವರಗಳನ್ನು ನುಡಿಸಬಲ್ಲರು. ಟಚಸ್, ಝಾಲಾ, ಜೋಡು ಮುಂತಾದವುಗಳನ್ನು ಬೇರೆ ಕಲಾವಿದರು ನುಡಿಸುವುದನ್ನು ನೋಡಿ ಕಲಿತಿರುವುದು ಸಂಗೀತದ ಬಗ್ಗೆ ಇವರಿಗಿದ್ದ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇವರು ಪುರುಷ ಹಾಗೂ ಮಹಿಳಾ ಕಲಾವಿದರು ಯಾವ ಶ್ರುತಿಯಲ್ಲಿ ಹಾಡಿದರೂ ಬಹಳ ನಿಪುಣತೆಯಿಂದ ನುಡಿಸಬಲ್ಲರು.

ಗಾಯಕಿ ಅಂಗದಲ್ಲಿ ನುಡಿಸುವುದು ಇವರ ಇನ್ನೊಂದು ವಿಶೇಷತೆಯಾಗಿದೆ. ಗಾಯನದ ಹಾಗೆಯೇ ಹಾರ್ಮೊನಿಯಮ್ ನಲ್ಲಿ ಮೀಂಡ್, ಆಲಾಪ, ತಾನ್ ನುಡಿಸುವಲ್ಲಿ ನಿಷ್ಣಾತರು. ಹಾರ್ಮೊನಿಯಮ್ ಸೋಲೋ ವನ್ನು ಅದ್ಭುತವಾಗಿ ನುಡಿಸಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ವಾದ್ಯ ಪಂಚಕ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಅದರಲ್ಲಿ ಹಾರ್ಮೊನಿಯಮ್, ವಯೋಲಿನ್, ಕೊಳಲು, ಸಿತಾರ್, ಜಲತರಂಗ ವಾದನಗಳ ಸಮ್ಮಿಳಿಸಿ ರಂಜಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.

-ಗೀತಾ ಜೋಶಿ

ಸಂಗೀತದ ಪುಣ್ಯಭೂಮಿ ಉತ್ತರಕನ್ನಡ

ಕರ್ನಾಟಕದಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕುರಿತು ಮಾತನಾಡುವಾಗ ಉತ್ತರ ಕನ್ನಡ ಜಿಲ್ಲೆಯನ್ನು ಪರಿಗಣಿಸದೆ ಮುಂದೆಹೋಗಲು ಸಾಧ್ಯವೇ ಇಲ್ಲ. ಈ ಜಿಲ್ಲೆಯಲ್ಲಿ ಅಷ್ಟು ಸಂಗೀತ ಕಲಾವಿದರಿದ್ದಾರೆ, ಸಂಗೀತ ಶಾಲೆಗಳಿವೆ ಮತ್ತು ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸಂಗೀತವನ್ನೇ ಜೀವನವನ್ನಾ ಸ್ವೀಕರಿಸಿ ಕಲಾರಾಧನೆ ಮಾಡುತ್ತಿರುವ ಅನೇಕರಿದ್ದಾರೆ. ಹಿಂದೆ ಉತ್ತರಕನ್ನಡ ಜಿಲ್ಲೆ ಮುಂಬೈ ಆಡಳಿತದಲ್ಲಿದ್ದರಿಂದ ಸ್ವಾಭಾವಿಕವಾಗೇ ಹಿಂದುಸ್ತಾನಿ ಸಂಗೀತ ಪ್ರಭಾವಕ್ಕೆ ಬಂತು. ಉತ್ತರ ಕನ್ನಡಜಿಲ್ಲೆಯ ಹಿಂದುಸ್ತಾನಿ ಪರಂಪರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಆನೇಕ ಮಹನೀಯರು ಸಂಗೀತ ಶಾಲೆಗಳನ್ನು ಸ್ಥಾಪಿಸಿ ಸಂಗೀತ ಪ್ರಸರಣಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಜಿಲ್ಲೆಯ ಮನೆಮನೆಗಳಲ್ಲಿ ಸಂಗೀತ ಪ್ರೇಮಿಗಳಿದ್ದಾರೆ.

ಇಂದು ಕಾಲ ಬದಲಾಗಿದೆ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆ ತನ್ನ ಸಾಂಪ್ರದಾಯಿಕ ಸತ್ವವನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಹಾಗಿದ್ದೂ ಕೂಡ ಉತ್ತರಕನ್ನಡ ಜಿಲ್ಲೆಯಲ್ಲಿ ಸಂಗೀತವನ್ನೇ ಜೀವನವನ್ನಾಗಿ ಸ್ವೀಕರಿಸಿಕೊಂಡೂ ಹಿಂದುಸ್ತಾನಿ ಸಂಗೀತದ ಘನತೆಯನ್ನು ಎತ್ತಿಹಿಡಿಯಲು ಹೆಣಗುತ್ತಿರುವ ಅನೇಕ ಕಲಾವಿದರಿದ್ದಾರೆ. ಇಲ್ಲಿ ಅಂತಹ ಕೆಲವು ಕಲಾವಿದರ ಸಂಕ್ಷಿಪ್ತ ಪರಿಚಯ ನೀಡಲಾಗಿದೆ.

-ರಮಾನಂದ ಐನಕೈ

ಸಂಗೀತವೇ ಆವರಿಸಿಕೊಂಡ ಸ್ನೇಹಾ ಹೆಗಡೆ

ಹಿಂದುಸ್ತಾನಿ ಸಂಗೀತ ಸಾಮ್ರಾಜ್ಯದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಭರವಸೆ ಮೂಡಿಸುತ್ತಿರುವ ಅಪರೂಪದ ಯುವ ಕಲಾವಿದೆ ಸ್ನೇಹಾ ಹೆಗಡೆ. ಸ್ವರ-ಲಯ-ತಾಳದ ನಿಖರತೆಯ ಜೊತೆಗೆ ಸಂಗೀತದ ಸಂಯಮ ಈಕೆಯಲ್ಲಿ ಎದ್ದುಕಾಣುತ್ತದೆ. ಸಂಗೀತವನ್ನೇ ಉಸಿರಾಗಿಸಿಕೊಂಡು ಸಂಗೀತಕ್ಕಾಗಿಯೇ ಸಾವಿರಾರು ಮೈಲು ಸುತ್ತಾಡಿದವಳು ಈಕೆ. ಇಪ್ಪತ್ತಾರರ ಪುಟ್ಟ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿದ್ದಾಳೆ. ದÉೀಶವಿದೇಶಗಳನ್ನು ಸುತ್ತಾಡಿದ್ದಾಳೆ. ಬಿರುದು ಸಮ್ಮಾನಗಳನ್ನು ಪಡೆದಿದ್ದಾಳೆ. ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾಳೆ. ಟುಮ್ರಿ, ದಾದ್ರಾ, ಲಘುಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಕನ್ನಡ ಮರಾಠಿ ಮತ್ತು ಹಿಂದಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡುವ ಸ್ನೇಹಾ ಸಾಕಷ್ಟು ಸಾಧನೆ ಮತ್ತು ಪ್ರಯೋಗಶೀಲತೆಯ ಕನಸು ಹೊತ್ತಿದ್ದಾಳೆ.

ಈಕೆ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಾತನಕೇರಿಯ ಗಾಯತ್ರಿ ಮತ್ತು ಅನಂತ ದಂಪತಿಯ ಪುತ್ರಿ. ತಂದೆ ಅನಂತ ಹೆಗಡೆ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ. ಬಾಲ್ಯದಿಂದಲೂ ಸ್ನೇಹಾಳಿಗೆ ಸಂಗೀತದಲ್ಲಿ ಆಸಕ್ತಿ. ಬಿಜಾಪುರೆ ಮಾಸ್ತರಿಂದ ಸಂಗೀತದ ಸರಳ ಪಾಠಗಳನ್ನು ಪ್ರಾರಂಭಿಸಿದ ಸ್ನೇಹಾ ರೇಖಾ ದಿನೇಶರಲ್ಲಿ ಪ್ರಾಥಮಿಕ ಪಾಠಗಳನ್ನು ಅಭ್ಯಸಿಸಿದಳು. ನಂತರ ಗೋವಾದ ಪ್ರಸಿದ್ಧ ಗಾಯಕಿ ಡಾ.ಅಲ್ಕಾ ದೇವ್ ಮಾರುಳಕರ್ ಅವರಲ್ಲಿ ಹೆಚ್ಚಿನ ತರಬೇತಿ ಪಡೆದಳು.

ಶಿರಸಿಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆಯುತ್ತಿದ್ದ ಸ್ನೇಹಾ 250 ಕೀ.ಮಿ. ದೂರದ ಗೋವಾಕ್ಕೆ ತಿಂಗಳಿಗೊಮ್ಮೆ ಹೋಗಿ ತರಬೇತಿ ಪಡೆಯುತ್ತಿದ್ದದ್ದು ಸಂಗೀತ ಕಲಿಕೆಯ ಕುರಿತಾಗಿ ಈಕೆಗಿದ್ದ ಬದ್ಧತೆಯನ್ನು ತೋರಿಸುತ್ತದೆ. ಈಕೆಗೆ ಎಸ್‍ಎಸ್‍ಎಲ್‍ಸಿ ಮುಗಿಯುವಷ್ಟರಲ್ಲಿ ಗುರು ಅಲ್ಕಾ ದೇವ್ ಗೋವಾ ಬಿಟ್ಟು ನಾಸಿಕಕ್ಕೆ ಹೋಗಿ ನೆಲೆಸುವ ತೀರ್ಮಾನ ಮಾಡಿದರು. ಸ್ನೇಹಾ ಅವರ ಜೊತೆಯೇ ಹೋಗಿ ನಾಸಿಕದಲ್ಲೆ ಸಂಗೀತದ ಜೊತೆಗೆ ಪಿಯುಸಿ ಶಿಕ್ಷಣ ಪಡೆದಳು. ಮುಂದೆ ಬೆಳಗಾವಿಗೆ ಬಂದು ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಗೆ ಸೇರಿಕೊಂಡಳು. ಆದರೆ ಸಂಗೀತದ ದಾಹ ತಣಿಯಲಿಲ್ಲ. ಬೆಳಗಾವಿಯಿಂದ ನಾಸಿಕಕ್ಕೆ ಕಲಿಕಾಪಯಣ ಮುಂದುವರಿಯಿತು.

ಬಿಕಾಂ ಡಿಗ್ರಿ ಮುಗಿದಾಕ್ಷಣ ಸ್ನೇಹಾ ಮುಂಬೈಗೆ ಹೋಗಿ ಮುಂಬೈ ವಿಶ್ವವಿದ್ಯಾಲಯದ ಸಂಗೀತದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಳು. ಅಲ್ಲಿಂದ ಈ ಯುವತಿಗೆ ಸಂಗೀತದ ಹೊಸ ಸಾಧ್ಯತೆಗಳು ನಿರ್ಮಾಣವಾಗುತ್ತ ಹೋದವು. ಎಂಮ್ಯೂಸಿಕ್ ನಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ್ಯಾಂಕ್ ಪಡೆದಳು. ದೆಹಲಿಯ ಸಿಸಿಆರ್‍ಟಿ ಯಿಂದ ಶಿಷ್ಯವೇತನ ದೊರೆಯಿತು. ಅದೇ ವಿಶ್ವವಿದ್ಯಾಲಯದಲ್ಲಿ ಸಂಗೀತದಲ್ಲಿ ಎಂ.ಫಿಲ್ ಪದವಿಯನ್ನೂ ಪಡೆದಳು. ಪ್ರಸ್ತುತ ಸಂಗೀತದಲ್ಲಿ ಡಾಕ್ಟರೇಟ್ ಪಡೆಯಲು ಸಂಶೋಧನೆಯ ತಯಾರಿಯಲ್ಲಿದ್ದಾಳೆ.

ದೇಶಾದ್ಯಂತ ನಡೆಯುವ ಹಿಂದುಸ್ತಾನಿ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಪ್ರತೀ ವರ್ಷವೂ ರಷ್ಯಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸುವ ಸಲುವಾಗಿ ಒಂದು ಸ್ಪರ್ಧೆ ನಡೆಯುತ್ತದೆ. ಸ್ನೇಹಾ ಈ ಸ್ಪರ್ಧೆಯಲ್ಲಿ ಗೆದ್ದು 2019 ಅಕ್ಟೋಬರ್ 14 ರಂದು ರಷ್ಯಾದ ಬುರ್ಯಾಟ್ ಒಪೆರಾ ಹೌಸಿನಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಸ್ವರ, ರಿದಮ್, ರಾಗ, ಚರಣ, ಬಂದಿಷ್, ಠುಮರಿ ಹೀಗೆ ಸಂಗೀತದ ಚಿಕ್ಕಚಿಕ್ಕ ಅಂಗಗಳನ್ನು ಅಧ್ಯಯನಪೂರ್ಣವಾಗಿ ಸಂಗೀತಾಸಕ್ತರಿಗೆ ಮುಟ್ಟುವಂತೆ ವಿವರಿಸುವ ಕಲೆ ಇವಳಿಗಿದೆ. ಕೋವಿಡ್ ಕಾರಣದಿಂದ ಸಧ್ಯ ಸಿದ್ದಾಪುರದಲ್ಲೇ ವಾಸವಾಗಿರುವ ಸ್ನೇಹಾ ಆನ್‍ಲೈನ್ ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾಳೆ.

ತಾನ್‍ಗಳ ಮಾಂತ್ರಿಕ ಪಂ.ನಾಗಭೂಷಣ ಬಾಳೆಹದ್ದ

ಕರ್ನಾಟಕದ ಈ ತಲೆಮಾರಿನ ಹಿಂದುಸ್ತಾನಿ ಹಾಡುಗಾರರಲ್ಲಿ ನಾಗಭೂಷಣ ಹೆಗಡೆ ಬಾಳೆಹದ್ದ ಮುಂಚೂಣಿಯಲ್ಲಿದ್ದಾರೆ. ನಾಗಭೂಷಣರ ಧ್ವನಿಗೇ ಅಂತಹ ಮಾಧುರ್ಯವಿದೆ. ಇದು ಅವರಿಗೆ ಆನುವಂಶಿಕವಾಗಿ ಬಂದದ್ದು. ಇವರ ಸಂಗೀತವನ್ನು ಕೇಳಿ ತಲೆದೂಗದವರೇ ಇಲ್ಲ. ರಾಗದೊಡನೆ ತಲ್ಲೀನತೆ, ಭಾವಪೂರ್ಣ ಪ್ರಸ್ತುತತೆ, ಅರಳು ಹುರಿದೆಸೆಯುವಂತಹ ತಾನ್‍ಗಳು, ಎಷ್ಟು ಮೇಲ್‍ಸ್ತÀರಕ್ಕಾದರೂ ಶೃತಿಬದ್ದವಾಗಿ ಏರಿಸಬಲ್ಲ ಸ್ವರ ಶಕ್ತಿ ನಾಗಭೂಷಣರ ವಿಶೇಷತೆಗಳು. ಥಟ್ಟನೆ ಶೋತೃಗಳ ಹೃದಯ ಮೀಟಬಲ್ಲ ದಿಟ್ಟತನ ಅವರ ಪ್ರಸ್ತುತಿಯಲ್ಲಿದೆ. ಹೀಗಾಗಿಯೇ ವರ್ತಮಾನದ  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಲಯದಲ್ಲಿ ನಾಗಭೂಷಣರು ತಮ್ಮನ್ನು ಸ್ಥಾಪಿಸಿಕೊಂಡಿದ್ದು ಭವಿಷ್ಯದ ಭರವಸೆಯ ಕಲಾವಿದರೆನಿಸಿಕೊಂಡಿದ್ದಾರೆ.

ಉತ್ತರಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಬಾಳೆಹದ್ದದ ಕೃಷಿಕುಟುಂಬದಲ್ಲಿ ಇವರ ಜನನ. ಯಕ್ಷಗಾನದ ಹಿನ್ನೆಲೆಯಿದ್ದರಿಂದ ಈ ಕುಟುಂಬದಲ್ಲಿ ಸಂಗೀತದ ಸ್ವರಶುದ್ಧತೆ ಮತ್ತು ಮಾಧುರ್ಯತೆ ಎಲ್ಲರಿಗೂ ಒಲಿದಿದೆ. ಚಿಕ್ಕವರಿದ್ದಾಗಲೇ ಒಳ್ಳೆಯ ಹಾಡುಗಾರರೆಂದು ಗುರುತಿಸಿಕೊಂಡವರು. ಪಂ. ಶ್ರೀಪಾದ ಹೆಗಡೆ ಕಂಪ್ಲಿಯವರು ಹಿಂದುಸ್ತಾನಿ ಸಂಗೀತದ ತರಬೇತಿ ನೀಡಿದರು. ನಂತರ ಶಿರಸಿಯ ಪಂ. ಎಂ.ಪಿ.ಹೆಗಡೆ ಹಾಗೂ ಮುಂಬೈ ಪಂ. ರಾಜಾ ಕಾಳೆಯವರಲ್ಲಿ ವಿಶೇಷ ಮಾರ್ಗದರ್ಶನ ಪಡೆದರು. 1991 ರಲ್ಲಿ ಖ್ಯಾತ ಹಿಂದುಸ್ತಾನಿ ಗಾಯಕ ಪಂ. ಗಣಪತಿಭಟ್ ಹಾಸಣಗಿಯವರಲ್ಲಿ ಗುರುಕುಲ ಮಾದರಿಯ ಸಂಗೀತ ಕಲಿಕೆ ಪ್ರಾರಂಭಿಸಿದರು. ಸಂಗೀತಕ್ಕೆ ತಮ್ಮನ್ನು ಅರ್ಪಿಸಿಕೊಂಡು ಗುರುಗಳ ಮನೆಯಲ್ಲೇ ವಾಸ್ತವ್ಯ ಮಾಡಿ ಕಿರಾನಾ ಘರಾಣೆಯ ಗಾಯನ ಶೈಲಿಯಲ್ಲಿ ಪರಿಣತಿ ಪಡೆದುಕೊಂಡರು. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಇವರ ಹಾಡುಗಳು ನಿರಂತರವಾಗಿ ಬಿತ್ತರವಾಗುತ್ತವೆ.

ಶಾಸ್ತ್ರೀಯ, ಲಘುಶಾಸ್ತ್ರೀಯ, ಅಭಂಗ್, ನಾಟ್ಯಗೀತೆ, ಭಾವಗೀತೆ, ಭಕ್ತಿಗೀತೆ ಮುಂತಾಗಿ ಎಲ್ಲಾ ಸಂಗೀತ ಪ್ರಕಾರಗಳಲ್ಲೂ ಜನಪ್ರಿಯರಾಗಿದ್ದಾರೆ. ಹಲವು ನಾಟಕಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಸ್ವತಃ ಹಾಡಿದ್ದಾರೆ. ಅಂಧಯುಗ ನಾಟಕದ ಇವರ ಹಾಡುಗಾರಿಕೆ ಇಂದಿಗೂ ಜನಪ್ರಿಯ. ಕೃಷ್ಣಲೀಲಾಮೃತ ನಾಟಕದಲ್ಲಿನ ಪ್ರೊ. ನಾರಾಯಣಾಚಾರ್ಯರ ಹಾಡುಗಳಿಗೆ ಇವರೇ ಸಂಗೀತ ಸಂಯೋಜನೆ ಮಾಡಿದ್ದು ಹಲವಾರು ಪ್ರದರ್ಶನಗಳನ್ನು ಕಂಡಿದೆ. ಲಹರಿ ಕಂಪನಿಯಿಂದ ಇವರ ಶಾಸ್ತ್ರೀಯ ಸಂಗೀತದ ಹಲವಾರು ಸಿಡಿ  ಮತ್ತು ಆಡಿಯೋ ಕ್ಯಾಸೆಟ್ ಬಿಡುಗಡೆಯಾಗಿವೆ.

ಪ್ರಸ್ತುತ ಶಿವಮೊಗ್ಗದ ಬೆಕ್ಕಿನಕಲ್ಮಟ ಹೈಸ್ಕೂಲಿನಲ್ಲಿ ಸಂಗೀತ ಶಿಕ್ಷಕರು. ವಾರಾಂತ್ಯದಲ್ಲಿ ಬೆಂಗಳೂರಿನಲ್ಲೂ ಸಂಗೀತ ಕ್ಲಾಸ್ ನಡೆಸುತ್ತಾರೆ.

ಜನನೀ ಮ್ಯೂಸಿಕ್ ವಿದೂಷಿ ರೇಖಾ ದಿನೇಶ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಗೀತದ ಕುರಿತು ಜನರನ್ನು ಆಕರ್ಷಿಸಲು ವಿಭಿನ್ನ ಪ್ರಯತ್ನ ಮಾಡಿದವರು ರೇಖಾ ದಿನೇಶ. ಮೂಲತಃ ಇವರು ಸಂಗೀತದ ನೆಲವಾದ ಮಂಚಿಕೇರಿ ಸಮೀಪದ ಮಾಳಕೊಪ್ಪದವರು. ಇವರ ತಂದೆ ಹಾರ್ಮೋನಿಯಂ ವಾದಕರಾಗಿದ್ದರು. ಆ ಕಾಲದಲ್ಲೇ ಆರ್.ಪಿ.ಅಸುಂಡಿ ಎನ್ನುವ ಸಂಗೀತ ಶಿಕ್ಷಕರು ಗದಗದಿಂದ ಇಲ್ಲಿಗೆ ಬಂದು ನಾಲ್ಕಾರು ಜನರಿಗೆ ಸಂಗೀತ ಪಾಠ ಮಾಡುತ್ತಿದ್ದರು. ಹೀಗೆ ಹುಟ್ಟಿನಿಂದಲೇ ಸಂಗೀತದ ನಾದವನ್ನು ಆಲಿಸಿದ ರೇಖಾ ಸಂಗೀತದತ್ತ ಒಲವು ಮೂಡಿಸಿಕೊಂಡರು. ಪಂ.ಗಣಪತಿಭಟ್ ಹಾಸಣಗಿಯವರಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡರು. ಮುಂದೆ ಡಾ. ಅಲ್ಕಾ ದೇವ್ ಮಾರೂಳ್‍ಕರ ಅವರಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದರು.

ಇವರ ಪತಿ ದಿನೇಶ್ ಹೆಗಡೆ ಸಂಗೀತದಲ್ಲಿ ಆಸಕ್ತಿಯಿದ್ದವರಾಗಿದ್ದು ಜನನಿ ಮ್ಯೂಸಿಕ್ ಎಂಬ ಸಂಸ್ಥೆ ನಡೆಸುತ್ತಲಿದ್ದಾರೆ. ಉತ್ತಮ ಸಂಘಟಕರು. ದೊಡ್ಡದೊಡ್ಡ ಅಪರೂಪದ ಸಂಗೀತ ಕಾರ್ಯಕ್ರಮಗಳನ್ನು ಉಣ ಬಡಿಸುತ್ತಾರೆ. ಶಿರಸಿ, ಹುಬ್ಬಳ್ಳಿ ಮತ್ತು ಯಲ್ಲಾಪುರದಲ್ಲಿ ಅವರ ಸಂಗೀತ ತರಗತಿಗಳು ನಡೆಯುತ್ತವೆ. ರೇಖಾ ಅವರ ಪುತ್ರಿ ಭೂಮಿ ದಿನೇಶ್ ಕೂಡ ಸಂಗೀತ ಕಲಿಕೆ ಮಾಡುತ್ತಿದ್ದಾಳೆ. ಒಳ್ಳೆಯ ಹಾಡುಗಾರ್ತಿ.

ಸುಮಧುರವಾದ ಕಂಠ ರೇಖಾ ಅವರಿಗೆ ವರದಾನ. ಶಾಸ್ತ್ರೀಯ ಮತ್ತು ಲಘು ಸಂಗೀತದ ಜೊತೆಗೆ ಆಯ್ದ ಸಿನೇಮಾ ಹಾಡುಗಳನ್ನು ಮತ್ತು ಆ ಕುರಿತು ತರಬೇತಿ ನೀಡುವುದು ಇವರ ವಿಶೇಷತೆ. ಇವರು ಆಕಾಶವಾಣಿ ‘ಎ’ ಶ್ರೇಣಿ ಕಲಾವಿದರು. ಈಟಿವಿಯ ಎದೆತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ಭಾಗವಹಿಸಿ ಡಾ.ಎಸ್.ಪಿ.ಬಿ. ಅವರಿಂದ ಪ್ರಶಂಸೆ ಪಡೆದಿದ್ದಾರೆ. ಸುವರ್ಣಾ ಟೀವಿಯ ಸ್ಟಾರ್ ಸಿಂಗರ್ಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಕಸ್ತೂರಿ, ಉದಯ, ಹಾಗೂ ಚಂದನ ಟೀವಿಯಲ್ಲಿ ಕಾರ್ಯಕ್ರಮ ಬಿತ್ತರವಾಗಿದೆ. ಗಾನಕೋಗಿಲೆ ಲತಾ ಮಂಗೇಷ್ಕರ್ ಸಮ್ಮುಖದಲ್ಲಿ ಹಿಂದಿಯ ‘ಮೇರಿ ಆವಾಜ್ ಸುನೋ’ ಕಾರ್ಯಕ್ರಮದಲ್ಲಿ ಹಾಡಿ ಮೆಚ್ಚುಗೆ ಪಡೆದಿದ್ದಾರೆ.

ಸವಿನಯ ಹಾಡುಗಾರ ವಿನಾಯಕ ಹಿರೇಹದ್ದ

ಉತ್ತರಕನ್ನಡ ಜಿಲ್ಲೆಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದರಲ್ಲಿ ಹೆಚ್ಚು ಗಮನಸೆಳೆದವರಲ್ಲಿ ವಿನಾಯಕ ಹಿರೇಹದ್ದ ಅವರೂ ಒಬ್ಬರು. ಇವರ ವ್ಯಕ್ತಿತ್ವವೇ ವಿನಯ. ಹಾಡುಗಾರಿಕೆಯಂತೂ ಇನ್ನೂ ಸವಿನಯ. ಕೇವಲ ಸಂಗೀತದ ವ್ಯಾಕರಣವನ್ನು ಕಲಿತಾಕ್ಷಣ ಉತ್ತಮ ಕಲಾವಿದರಾಗಲು ಸಾಧ್ಯವಿಲ್ಲ. ಕಲಿತಿದ್ದನ್ನು ತಮ್ಮ ಜೀವನಾನುಭವದ ಮೂಲಕ ಸಮರ್ಥವಾಗಿ ಸಾದರಪಡಿಸುವ ಹೃದಯವಂತಿಕೆ ಬೇಕು. ವಿನಾಯಕ ಅವರ ಹಾಡುಗಳಲ್ಲಿ ನಾವು ಈ ಭಾವನಾತ್ಮಕ ತುಡಿತ ಕಾಣಬಹುದಾಗಿದೆ. ಸ್ವರಗಳಿಗೆ ಭಾವನೆ ತುಂಬುವುದೇ ಇವರ ವಿಶೇಷತೆ.

ಶಾಸ್ತ್ರೀಯ, ಲಘುಶಾಸ್ತ್ರೀಯ, ಸುಗಮ ಸಂಗೀತ, ಭಜನ್‍ಗಳನ್ನು ಹಾಡುವುದರಲ್ಲಿ ಇವರು ಪರಿಣತರು. ಇಂಪಾದ ಧ್ವನಿ, ನಿಖರವಾದ ಶೃತಿ ಹಾಗೂ ಭಾವತಲ್ಲೀನತೆಯ ಕಾರಣದಿಂದಾಗಿ ಎಂಥವರನ್ನೂ ತಮ್ಮ ಸಂಗೀತದತ್ತ ಆಕರ್ಷಿಸುವಂತ ಚುಂಬಕಶಕ್ತಿ ಇವರ ಹಾಡುಗಾರಿಕೆಯಲ್ಲಿದೆ.

ಹಿರೇಹದ್ದ ಸಿದ್ದಾಪುರ ತಾಲೂಕಿನ ಒಂದು ಒಳಹಳ್ಳಿ. ಗುಡ್ಡ ಬೆಟ್ಟ ಝರಿಗಳಿಂದ ಕೂಡಿದ ಸದಾ ಹಸಿರು ಪ್ರದೇಶ. ಕಲಾವಿದರ ನೆಲ. ಆಗಲೇ ಇವರ ತಂದೆ ಸಂಗೀತದ ಆಸಕ್ತಿ ಹೊಂದಿ ಮನೆಯಲ್ಲೇ ಸಂಗೀತ ಶಾಲೆಗೆ ಆಶ್ರಯ ನೀಡಿದವರು. ಇದು ಬಾಲ್ಯದಿಂದಲೇ ವಿನಾಯಕರಿಗೆ ಸಂಗೀತದಲ್ಲಿ ಆಸಕ್ತಿ ಮೂಡಲು ಕಾರಣವಾಯಿತು. ಇವರ ಮಾವ, ಚಿಕ್ಕಮ್ಮ ಹಾಡುಗಾರರಾಗಿದ್ದರು. ಎಂ.ಪಿ.ಹೆಗಡೆ ಮುರೂರು, ಪ್ರಭಾಕರ ಭಟ್ ಕೆರೆಕೈ, ವಿಘ್ನೇಶ್ವರ ಹೆಗಡೆ ಅವರಲ್ಲಿ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಗಣಪತಿ ಭಟ್ಟರಲ್ಲಿ 22 ವರ್ಷ ಮಾರ್ಗದರ್ಶನ ಪಡೆದರು.

ವಿನಾಯಕ ಹಿರೇಹದ್ದ ಅವರು ಹಾರ್ಮೋನಿಯಂ ಮತ್ತು ತಬಲಾವನ್ನೂ ನುಡಿಸುತ್ತಾರೆ. ಒಂದು ಹಂತದಲ್ಲಿ ತಬಲಾವನ್ನೇ ಮುಂದುವರಿಸಬೇಕೆಂದು ಪುಣಾಕ್ಕೆ ಹೋಗಲು ತಯಾರಿ ನಡೆಸಿ ಅನಿವಾರ್ಯ ಕಾರಣಗಳಿಂದ ಕೈಬಿಟ್ಟಿದ್ದರು. ಅವರ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಹಾರ್ಮೋನಿಯಂ ನುಡಿಸುತ್ತಾನೆ ಇನ್ನೊಬ್ಬ ತಬಲಾ ಬಾರಿಸುತ್ತಾನೆ. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅವರ ಅನೇಕ ಕಾರ್ಯಕ್ರಮಗಳು ಬಿತ್ತರವಾಗಿವೆ. ಗುರು ಗಣಪತಿ ಭಟ್ಟರ ಜೊತೆ ದೇಶದ ಬಹುತೇಕ ಎಲ್ಲಾ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲೂ ಸಹ ಗಾಯಕರಾಗಿ ಪಾಲ್ಗೊಂಡಿದ್ದಾರೆ. ಶಿರಸಿಯಲ್ಲಿ ಸಂಗೀತಶಾಲೆಯನ್ನು ನಡೆಸುತ್ತ ತಮ್ಮ ಶಿಷ್ಯ ಪರಂಪರೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ‘ಆಧಾರ ಷಡ್ಜ’ ಎಂಬುದು ಇವರ ಕಲಾ ಸಂಸ್ಥೆ. ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಉದಯೋನ್ಮುಖರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ.

Leave a Reply

Your email address will not be published.