ದಿನಚರಿಗೆ ಸಾಕ್ಷಿ

 

 

 

-ಕಿರಸೂರ ಗಿರಿಯಪ್ಪ

 

 

 

ಹೆಜ್ಜೆ ಊರಲು ಸಾಧ್ಯವಾಗದ

ತಗ್ಗುದಿನ್ನೆಗಳ ನಡುವೆ

ರಸ್ತೆಯ ಗುರುತೇ ಸಿಗದಷ್ಟು ತಿರುವುಗಳು

ಕಾಲು ಮಡಚಿಕೊಂಡು ಬಿದ್ದ ಎಲೆಗಳ ದನಿಯೊಳಗೆ

ನೆಲದ ಪಿಸುಮಾತಿನ ಸಂಚಾರ

ದೀಪದ ಬುಡ್ಡೆಯಾಗಿ

ಗೋಚರಿಸುವ ಚುಕ್ಕಿಗಳ ಹೊಕ್ಕಳೀಗ

ಗತ್ತಿನಿಂದ ಸುರುಳಿ ಸುತ್ತಿದ

ಮೋಡದ ಮಾಯಾ ಬಜಾರಿನ ಸೆಳೆತದಲಿ

ಚಂದಿರನ ಜೋಗುಳದಲಿ ಕರಗಿ ಕಣ್ಣೀರಾದ

ಮೋಡದ ತೆಕ್ಕೆಗಳಲ್ಲೀಗ

ನಿದ್ದೆ ಬಾರದ ರೆಪ್ಪೆಗಳ ನಿಟ್ಟುಸಿರ ಧ್ಯಾನ

ಮಿಂಚಿನ ನಡುವೆ

ಮಣ್ಣಿನ ಗೋಡೆಯಲಿ ದಿಕ್ಕು ಕಾಣದ

ದೀಪದ ರೆಕ್ಕೆಯೊಂದು

ಹಸಿದ ಹೆಜ್ಜೆಯ ಕೊರಳಿಗೆ ಕಸಿ ತುಂಬೋ ನಡಿಗೆ

ನಾಲಗೆ ಚಾಚಿ ಮೈ ಕೆಬರುವ

ಕತ್ತಲ ಇರಿತದಲಿ 

ಕಾಣದ ಗವಿಯ ಹೊಕ್ಕ

ಮಿನುಕು ದೀಪದ ಹುಳುಗಳು

ಸಾಲು ದೀಪದ ದಿನಚರಿಗೆ ಸಾಕ್ಷಿ

-ಕಿರಸೂರ ಗಿರಿಯಪ್ಪ

Leave a Reply

Your email address will not be published.