ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್ ಕೊರಿಯಾ ಯುದ್ಧದ ನಿರ್ಣಾಯಕ ಘಟ್ಟ

ಇತ್ತೀಚೆಗೆ ನೆಟ್‍ಫ್ಲಿಕ್ಸ್‍ನಲ್ಲಿ ನೋಡಿದ ‘ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್’ ಸಾಕ್ಷ್ಯಚಿತ್ರವೇ ಈ ಲೇಖನಕ್ಕೆ ಪ್ರೇರಣೆ. ಎಲ್ಲಾ ಯುದ್ಧಗಳು ಭೀಕರವೇ. ಆದರೆ ಕೊರಿಯಾ ಯುದ್ಧ ಸಂದರ್ಭದ ಈ ಹಂತ ಭೀಭತ್ಸವಾದದ್ದು; ಯು.ಎಸ್. ಮರೀನ್ ಪಡೆ ತನ್ನ ಇತಿಹಾಸದ ಪುಟಗಳಲ್ಲಿ ದಪ್ಪ ಅಕ್ಷರಗಳಲ್ಲಿ ದಾಖಲಿಸುವಂತಹದ್ದು.

ಕಳೆದ ವರ್ಷ ನಾವು ಮಾಧ್ಯಮಗಳಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್-ಉನ್ ಹಾಗೂ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ-ಇನ್ ಕೈಮಿಲಾಯಿಸಿ ತಮ್ಮೆರಡೂ ದೇಶಗಳ ನಡುವಿನ ಶಾಂತಿಗೆ ಮುನ್ನುಡಿ ಬರೆದಿರುವುದನ್ನು ನೋಡಿರುತ್ತೇವೆ ಈ ಭೇಟಿ ಮಹತ್ತರವಾದದ್ದು. ಈ ಎರಡೂ ದೇಶಗಳು ಕಳೆದ 68 ವರ್ಷಗಳಿಂದ ಸಂಘರ್ಷಿಸಿಕೊಂಡು ಬಂದಿವೆ. ಕಳೆದ ವರ್ಷ ಉತ್ತರ ಕೊರಿಯಾ ಸಾಲುಸಾಲಾಗಿ ನ್ಯೂಕ್ಲಿಯರ್ ಕ್ಷಿಪಣಿಗಳನ್ನು ಉಡಾಯಿಸಿ ಶ್ವೇತಭವನ ಹಾಗೂ ದಕ್ಷಿಣ ಕೊರಿಯಾದ ನೆಮ್ಮದಿ ಹಾಳುಮಾಡಿತ್ತು. ಅಧ್ಯಕ್ಷ ಮೂನ್‍ನನ್ನು ಭೇಟಿ ಮಾಡಿದಾಗ ತನ್ನ ತಡರಾತ್ರಿ ಕ್ಷಿಪಣಿ ಪರೀಕ್ಷೆಗಳಿಂದ ಮೂನ್ ಅವರ ನಿದ್ರಾಭಂಗಕ್ಕೆ ಕಾರಣವಾಗಿದ್ದಕ್ಕೆ ಕ್ಷಮೆಯಿರಲಿ ಎಂದು ಕಿಮ್ ಜಾಂಗ್ ಹಾಸ್ಯ ಚಟಾಕಿ ಹಾರಿಸಿದನಂತೆ.

1950ರಿಂದ 1953ರವರೆಗೆ ನಡೆದ ಕೊರಿಯಾ ಯುದ್ಧದಲ್ಲಿ ಸೈನಿಕರು  ಹಾಗೂ ನಾಗರಿಕರು ಸೇರಿದಂತೆ ಸುಮಾರು 35 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಈ ಯುದ್ಧ ಯು.ಎಸ್.ಎ. ಹಾಗೂ ಸೋವಿಯತ್ ಒಕ್ಕೂಟದ ನಡುವಿನ ಸಂಬಂಧದ ಮೇಲೆ ಮತ್ತು ಅಮೆರಿಕಾದ ವಿದೇಶಾಂಗ ನೀತಿಯ ಮೇಲೆ ಅಪಾರ ಪ್ರಭಾವ ಬೀರುತ್ತದೆ ಹಾಗೂ ಇಪ್ಪತ್ತನೇ ಶತಮಾನದ 2ನೇ ಮಹಾಯುದ್ಧದ ನಂತರದ ವಿಶ್ವ ರಾಜಕೀಯದ ದಿಕ್ಸೂಚಿಯನ್ನು ಬದಲಿಸುತ್ತದೆ.

ಕೊರಿಯನ್ ಯುದ್ಧ ಆರಂಭವಾದ ನಾಲ್ಕು ತಿಂಗಳುಗಳ ನಂತರ 1950ರ ನವೆಂಬರ್‍ನ ಕೊನೆಯ ದಿನಗಳಲ್ಲಿ ಮುಖ್ಯವಾಗಿ ಯು.ಎಸ್. ಮರೀನ್ ವಿಭಾಗ ಹಾಗೂ ದಕ್ಷಿಣ ಕೊರಿಯಾದ ದಂಡುಗಳನ್ನೊಳಗೊಂಡ ಯು.ಎನ್. ಪಡೆಗಳ ಸುಮಾರು 30,000 ಸೈನಿಕರು ಉತ್ತರ ಕೊರಿಯಾದ ಚೋಸಿನ್ ಜಲಾಶಯದ (ಕೊರಿಯಾ ಭಾಷೆಯಲ್ಲಿ ಚಾಂಗ್‍ಜಿನ್ ಎಂದು ಕರೆಯಲಾಗುತ್ತದೆ) ಬಳಿಯ ಹೆಪ್ಪುಗಟ್ಟಿದ ನೆಲದಲ್ಲಿ, ದುರ್ಗಮ ಪರ್ವತಗಳಲ್ಲಿ ಸುಮಾರು 1,20,000 ಸಂಖ್ಯಾಬಲ ಹೊಂದಿದ್ದ ಚೀನಾ ಸೈನ್ಯದಿಂದ ಸುತ್ತುವರೆದು ಸಿಕ್ಕಿಕೊಳ್ಳುತ್ತಾರೆ. ಯು.ಎನ್. ಪಡೆಗಳನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಲು ಚೀನಾದ ಅಧ್ಯಕ್ಷ ಮಾವೋತ್ಸೆ ತುಂಗ್ ಆದೇಶಿಸಿರುತ್ತಾನೆ. ಆ ಸಂದರ್ಭದಲ್ಲಿ ಘಟಿಸುವ ಘಟನೆಗಳೇ ‘ದಿ ಬ್ಯಾಟಲ್ ಆಫ್ ಚೋಸಿನ್ ರಿಸರ್ವಾಯರ್’. ಇದು ಧೈರ್ಯ, ಸಾಹಸ, ಅಸಹಾಯಕತೆ, ಅಳಿವು-ಉಳಿವುಗಳ ಕಥನ. ಒಂದೊಂದು ಸಂದರ್ಭವು ಮೈನಿಮಿರೇಳಿಸುವಂತಹದ್ದು.

ಕೊರಿಯಾ ದೇಶವು 1910 ರಿಂದ 1945 ರವರೆಗೆ ಜಪಾನ್ ಸಾಮ್ರಾಜ್ಯದ ಭಾಗವಾಗಿರುತ್ತದೆ. ಜಪಾನ್‍ನ ವಸಾಹತು ಆಳ್ವಿಕೆ ದಬ್ಬಾಳಿಕೆಯಿಂದ ಕೂಡಿರುತ್ತದೆ. ಭವಿಷ್ಯದಲ್ಲಿ ಕಮ್ಯೂನಿಸ್ಟ್ ಕೊರಿಯಾದ ನಾಯಕನಾಗುವ ಕಿಮ್ II-ಸಂಗ್ ಸೇರಿದಂತೆ ಹಲವಾರು ಕೊರಿ ಯಾದ ರಾಷ್ಟ್ರೀಯತಾವಾದಿಗಳು ಚೀನಾದ ಆಶ್ರಯ ಪಡೆಯುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಜಪಾನ್ ಸೋಲೊಪ್ಪಿದ ನಂತರ, ಕೊರಿಯಾ ಸ್ವತಂತ್ರ ದೇಶವಾಗಬೇಕೆಂದು ಚೀನಾ, ಯು.ಕೆ. ಹಾಗೂ ಯು.ಎಸ್. ಒಟ್ಟಾಗಿ ನಿರ್ಣಯ ತೆಗೆದುಕೊಳ್ಳುತ್ತವೆ. ಆದರೆ ಯು.ಎಸ್. ದಕ್ಷಿಣ ಕೊರಿಯಾವನ್ನು ಆಕ್ರಮಿಸಿರುತ್ತದೆ. ಉತ್ತರ ಕೊರಿಯಾವನ್ನು ಸೋವಿಯತ್ ಒಕ್ಕೂಟ ಸ್ವತಂತ್ರಗೊಳಿಸುತ್ತದೆ. ಆ ಸಂದರ್ಭದಲ್ಲಿ ಕೊರಿಯಾವನ್ನು ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ಎಂಬ ಎರಡು ದೇಶಗಳನ್ನಾಗಿ ವಿಭಜಿಸಲು ಒಪ್ಪಂದವೇರ್ಪಟ್ಟು 38ನೇ ಸಮಾಂತರ ಎಂದು ಕರೆಯಲ್ಪಡುವ ಗಡಿಗುರುತಿಸುವಿಕೆ ರೇಖೆಯನ್ನು ಎಳೆಯಲಾಗುತ್ತದೆ. ಕಿಮ್ II-ಸಂಗ್ ಸೋವಿಯತ್ ಒಕ್ಕೂಟದಾಶ್ರಯದಲ್ಲಿ  ಉತ್ತರ ಕೊರಿಯಾದ ನಾಯಕನಾಗುತ್ತನೆ. ದಕ್ಷಿಣ ಕೊರಿಯಾದಲ್ಲಿ (ರಿಪಬ್ಲಿಕ್ ಆಫ್ ಕೊರಿಯಾ) ಯು.ಎಸ್. ಬೆಂಬಲಿತ ಸಿಂಗ್ಮನ್-ರ್ಹಿ ಮೊದಲ ಅಧ್ಯಕ್ಷನಾಗುತ್ತಾನೆ.

38ನೇ ಸಮಾಂತರ ರೇಖೆಯು ಯು.ಎಸ್. ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರ ಕಚೇರಿಯ ಇಬ್ಬರು ಕಿರಿಯ ಅಮೆರಿಕಾ ಅಧಿಕಾರಿಗಳು ಆತುರಾತುರವಾಗಿ ಭೂಪಟದಲ್ಲಿ ಎಳೆದ ರೇಖೆಯಾಗಿರುತ್ತದೆ. ಕಿಮ್ IIಸಂಗ್ ಹಾಗೂ ಸಿಂಗ್ಮನ್-ರ್ಹಿ ಸಮಾಂತರ ರೇಖೆಯನ್ನು ತಾತ್ಕಾಲಿಕವೆಂದು ಪರಿಗಣಿಸಿ ಏಕೀಕೃತ ಕೊರಿಯಾದ ನಾಯಕರು ತಾವೇ ಎಂದು ಭಾವಿಸಿಕೊಂಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಮಾಸ್ಕೋ ಸಮ್ಮತಿಯೊಂದಿಗೆ ಉತ್ತರ ಕೊರಿಯಾ 1950ರ ಜೂನ್‍ನಲ್ಲಿ ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡುತ್ತದೆ. ಸುಮಾರು 75,000 ಸಂಖ್ಯಾಬಲದ ಉತ್ತರ ಕೊರಿ ಯಾದ ಸೈನ್ಯ ಸೋವಿಯತ್ ಹಾಗೂ ಚೀನಾದ ಬೆಂಬಲದೊಂದಿಗೆ ಗಡಿ ದಾಟಿದ ಮೂರೇ ದಿನಗಳೊಳಗೆ ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ಪ್ರವೇಶಿಸುತ್ತದೆ.

ಅಮೆರಿಕಾ ನಾಯಕತ್ವದ ದೃಷ್ಟಿಯಲ್ಲಿ ದಕ್ಷಿಣ ಕೊರಿಯಾ ಸೋವಿಯತ್ ಕಮ್ಯೂನಿಸ್ಟ್ ಪ್ರಭಾವವನ್ನು ತಡೆಯಲು ಏಷಿಯಾ ಪೆಸಿಫಿಕ್‍ನಲ್ಲಿರುವ ಕೋಟೆಯಾಗಿರುತ್ತದೆ. ಉತ್ತರ ಕೊರಿಯಾ ಸೈನ್ಯದ ಶೀಘ್ರ ಮುನ್ನಡೆಗೆ ಯು.ಎಸ್. ನಾಯಕರು ಎಚ್ಚೆತ್ತುಕೊಳ್ಳುತ್ತಾರೆ. ಉತ್ತರ ಕೊರಿಯಾ ಅತಿ ಕ್ರಮಣ ಮಾಡಿದ ಎರಡೇ ದಿನಗಳಲ್ಲಿ ಯು.ಎಸ್. ಅಧ್ಯಕ್ಷ ಟ್ರೂಮನ್ ದಕ್ಷಿಣ ಕೊರಿಯಾ ರಕ್ಷಣೆಗೆ ಯು.ಎಸ್.ಎ. ಮಿಲಿಟರಿ ಬದ್ಧವೆಂದು ಘೋಷಿಸುತ್ತಾನೆ. ಹೀಗೆ ಕೊರಿಯಾ ಯುದ್ಧದಲ್ಲಿ ಯು.ಎಸ್.ಎ. ಧುಮುಕುತ್ತದೆ. ಅಮೆರಿಕಾ ಯುದ್ಧಕ್ಕೆ ಧುಮುಕಿದ ಕೆಲವೇ ವಾರಗಳಲ್ಲಿ ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ದಕ್ಷಿಣ ಕೊರಿಯಾದ ನೆರವಿಗೆ ಧಾವಿಸಲು ಹಸಿರು ಚಿಹ್ನೆ ನೀಡುತ್ತದೆ.

ಯುದ್ಧ ಪ್ರವೇಶ ಮಾಡಿದ ಎರಡೇ ತಿಂಗಳಲ್ಲಿ ಅಮೆರಿಕಾ ನೇತೃತ್ವದ ಯು.ಎನ್. ಪಡೆಗಳು ಉತ್ತರ ಕೊರಿಯಾದ ಸೈನ್ಯವನ್ನು ಬಗ್ಗುಬಡಿಯುತ್ತವೆ. ಈ ಯಶಸ್ಸಿನಿಂದ ಪ್ರೇರಿತರಾಗುವ ಯು.ಎನ್. ಪಡೆಗಳು ಉತ್ತರ ಕೊರಿ ಯಾವನ್ನು ಸುಲಭವಾಗಿ ವಶಪಡಿಸಿಕೊಳ್ಳಬಹುದೆಂದು ಭಾವಿಸಿ, ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾವನ್ನು 1950ರ ಅಂತ್ಯಕ್ಕೂ ಮುನ್ನವೇ ಏಕೀಕೃತಗೊಳಿಸುವ ಉದ್ದೇಶದಿಂದ ಉತ್ತರ ಕೊರಿಯಾದೊಳಗೆ ಪ್ರವೇಶ ಮಾಡುತ್ತವೆ.

ಉತ್ತರ ಕೊರಿಯಾವನ್ನು ಪ್ರವೇಶಿಸುವ ಯು.ಎನ್. ಪಡೆಗಳಿಗೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಉತ್ತರ ಕೊರಿಯಾದ ರಕ್ಷಣೆಗಾಗಿ  ಪೂರ್ಣಪ್ರಮಾಣದಲ್ಲಿ ಬರುವುದೆಂಬ ನಿರೀಕ್ಷೆಯಿರುವುದಿಲ್ಲ. ಜೊತೆಗೆ, ಚೀನಾ ಸೈನ್ಯದ ಸಾಮರ್ಥ್ಯದ ಬಗ್ಗೆ ಅವರು ಅಂತಹ ಉನ್ನತ ಅಭಿಪ್ರಾಯವನ್ನು ಹೊಂದಿರುವುದಿಲ್ಲ. ಅಮೆರಿಕಾದ ಅಧ್ಯಕ್ಷ ಹ್ಯಾರಿ ಟ್ರೂಮನ್‍ಗೆ ಕಮ್ಯೂನಿಸ್ಟ್ ಚೀನಾ ಉತ್ತರ ಕೊರಿಯಾದ ಬೆಂಬಲಕ್ಕೆ ಧಾವಿಸುತ್ತದೆಂಬ ಆತಂಕವಿರುತ್ತದೆ. ಆದರೆ ಅಮೆರಿಕಾದ ಜನರಲ್ ಮ್ಯಾಕ್ ಡಗ್ಲಾಸ್ ಆರ್ಥರ್ ಅಂತಹ ಕಳವಳಗಳನ್ನು ತಳ್ಳಿಹಾಕುತ್ತಾನೆ. ಕೊರಿಯಾದಲ್ಲಿ ಯುದ್ಧದಲ್ಲಿ ತೊಡಗಿದ್ದ ಯು.ಎಸ್. ಮಿಲಿಟ ರಿಯ ಹಿರಿಯ ಅಧಿಕಾರಿಗಳಿಗೂ ಚೀನಾ ಸೈನ್ಯದ ಸಾಮರ್ಥ್ಯದ ಬಗ್ಗೆ ತಾತ್ಸಾರ ಮನೋಭಾವವಿರುತ್ತದೆ. ತನ್ನ ಸೈನ್ಯವು ಆರ್ಟಿಲರಿ, ಟ್ಯಾಂಕ್‍ಗಳು, ಆಯುಧಗಳು, ಇತ್ಯಾದಿ ವಿಷಯಗಳಲ್ಲಿ ಅಮೆರಿಕಾ ಸೈನ್ಯಕ್ಕಿಂತ ಕೆಳಮಟ್ಟದೆಂಬ ಅರಿವಿರುವ ಮಾವೋ ತ್ಸೆ ತುಂಗ್‍ಗೆ ಅಮೆ ರಿಕಾದ ಜನರಲ್ ಮ್ಯಾಕ್ ಡಗ್ಲಾಸ್ ಆರ್ಥರ್‍ನ ಅಹಂಕಾರವೇ ಅವನ ದುರ್ಬಲತೆಯೆಂದು ತಿಳಿದಿರುತ್ತದೆ.

ಭೌಗೋಳಿಕವಾಗಿ ಉತ್ತರ ಕೊರಿಯಾವನ್ನು ದುಸ್ತರ ಟೇಬೀಕ್ ಪರ್ವತಗಳು ಮಧ್ಯದಲ್ಲಿ ಸೀಳುತ್ತವೆ. ಇದರಿಂದ ಯು.ಎನ್. ಪಡೆಗಳು ಎರಡು ಭಾಗಗಳಾಗಿ ಮುಂದುವರೆಯುತ್ತವೆ. ಯು.ಎಸ್. ಎಂಟನೇ ಸೈನ್ಯ ಕೊರಿಯಾ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಯ ಮೂಲಕ ಉತ್ತರ ದಿಕ್ಕಿನಲ್ಲಿ ಮುನ್ನಡೆದರೆ ರಿಪಬ್ಲಿಕ್ ಆಫ್ ಕೊರಿಯಾದ 1ನೇ ದಳ ಹಾಗೂ ಯು.ಎಸ್. ಎಕ್ಸ್ ದಳ ಪೂರ್ವ ಕರಾವಳಿಯ ಮೇಲೆ ಉತ್ತರದ ದಿಕ್ಕಿನೆಡೆಗೆ ಮುನ್ನಡೆಯುತ್ತವೆ. ಈ ಯುದ್ಧಕ್ಕಾಗಿ ಅಮೇರಿಕಾ ತನ್ನಲ್ಲಿರುವ ಎಲ್ಲಾ ಮರೀನ್ ಯೋಧರನ್ನು ಸಕ್ರಿಯಗೊಳಿಸಿರುತ್ತದೆ. ಯು.ಎನ್.ಸೈನ್ಯದ ಜನರಲ್ ಮ್ಯಾಕ್ ಡಗ್ಲಾಸ್ ಆರ್ಥರ್‍ನ ಅಮೆರಿಕಾದಲ್ಲಿನ ಮೇಲಧಿಕಾ ರಿಗಳು ಉತ್ತರ ಕೊರಿಯಾವನ್ನು ಎಚ್ಚರಿಕೆಯಿಂದ ಪ್ರವೇಶಿಸಬೇಕೆಂದು ಹಾಗೂ ಚೀನಾ ಗಡಿಯವರೆಗೂ ಕೇವಲ ರಿಪಬ್ಲಿಕ್ ಆಫ್ ಕೊರಿಯಾದ ಸೈನಿಕರು ಮಾತ್ರ ಹೋರಾಡಬೇಕೆಂದು ಸೂಚಿಸಿರುತ್ತಾರೆ. ಆದರೆ ಎಲ್ಲವೂ ತನಗೆ ತಿಳಿದಿದೆಯೆಂಬ ಭಾವನೆಯನ್ನು ಹೊಂದಿದ್ದ ಮ್ಯಾಕ್ ಡಗ್ಲಾಸ್ ಆರ್ಥರ್ ಉತ್ತರ ಕೊರಿಯಾದ ರಾಜಧಾನಿ ಪ್ಯೂಯಾನ್‍ಯಾಂಗ್ ವಶಪಡಿಸಿಕೊಂಡ ಮೂರು ದಿನಗಳ ನಂತರ, ಸೈನ್ಯಕ್ಕೆ ತ್ವರಿತವಾಗಿ ಮನ್ನಡೆಯಲು ಆದೇಶಿಸುತ್ತಾನೆ. ಈಗಾಗಲೇ ದಮನೀಯವಾಗಿ ಶತ್ರುವನ್ನು ಸೋಲಿಸಿದ್ದ ಯು.ಎಸ್. ನೇತೃತ್ವದ ಸೈನಿಕರು ಮುಂದಿನ ಕಾರ್ಯಾಚರಣೆಗಳ ಯಶಸ್ಸಿನ ಬಗ್ಗೆ ಖಚಿತ ಭರವಸೆ ಹೊಂದಿರುತ್ತಾರೆ.

ಚೀನಾದ ಅಧ್ಯಕ್ಷ ಮಾವೋತ್ಸೆ ತುಂಗ್ ತನ್ನ ಉತ್ತರ ಗಡಿಯಲ್ಲಿನ ಸೋವಿಯತ್ ಒಕ್ಕೂಟದ ಪ್ರಭಾವದ ಬಗ್ಗೆ ಎಚ್ಚರಿಕೆಯಿಂದಿರುತ್ತಾನೆ. ಚೀನಾದ ಆಂತರಿಕ ಯುದ್ಧದಲ್ಲಿ ತನ್ನ ಶತ್ರುವನ್ನು ಬೆಂಬಲಿಸಿದ ಅಮೆರಿಕಾದ ಬಗ್ಗೆ ಇನ್ನೂ ಹೆಚ್ಚು ಜಾಗರೂಕನಾಗಿರುತ್ತಾನೆ.

ಜನರಲ್ ಮ್ಯಾಕ್ ಡಗ್ಲಾಸ್ ಆರ್ಥರ್ ಚೀನಾ ಹಾಗೂ ಉತ್ತರ ಕೊರಿಯಾದ ಗಡಿಯಲ್ಲಿರುವ ಯಾಲು ನದಿಯನ್ನು ಲಕ್ಷ್ಯದಲ್ಲಿಟ್ಟುಕೊಂಡಿರುತ್ತಾನೆ. ಅತನ ಸಂಚಲನೋಪಾಯದ ಪ್ರಕಾರ ಟೇಬೀಕ್ ಪರ್ವತಗಳ ಇಕ್ಕೆಡೆಗಳಲ್ಲಿ ವಿಭಜಿತಗೊಂಡು ಸಾಗುತ್ತಿರುವ  ಯು.ಎನ್. ಪಡೆಗಳು ಶಸ್ತ್ರಸಜ್ಜಿತ ಚಿಮ್ಮಟದಂತೆ ಮುನ್ನಡೆದು ಮತ್ತೆ ಒಟ್ಟಾಗಿ ದೊಡ್ಡ ಸೈನ್ಯವಾಗಿ ಕೊರಿಯಾದ ದೀರ್ಘ ಹಾಗೂ ಕ್ರೂರ ಚಳಿಗಾಲ ಪ್ರಾರಂಭವಾಗುವ ಮುನ್ನ ಯಾಲು ನದಿಯವರೆಗೆ ಹೋಗುವುದಾಗಿರುತ್ತದೆ. ಅಲ್ಲಿಗೆ ಕೊರಿಯನ್ ಯುದ್ಧ ಮುಗಿಯತ್ತದೆ ಎಂಬುದು ಡಗ್ಲಾಸ್ ಆರ್ಥರ್‍ನ ಲೆಕ್ಕಾಚಾರವಾಗಿರುತ್ತದೆ.

ಚೀನಾದ ಅಧ್ಯಕ್ಷ ಮಾವೋತ್ಸೆ ತುಂಗ್ ತನ್ನ ಉತ್ತರ ಗಡಿಯಲ್ಲಿನ ಸೋವಿಯತ್ ಒಕ್ಕೂಟದ ಪ್ರಭಾವದ ಬಗ್ಗೆ ಎಚ್ಚರಿಕೆಯಿಂದಿರುತ್ತಾನೆ. ಚೀನಾದ ಆಂತರಿಕ ಯುದ್ಧದಲ್ಲಿ ತನ್ನ ಶತ್ರುವನ್ನು ಬೆಂಬಲಿಸಿದ ಅಮೆರಿಕಾದ ಬಗ್ಗೆ ಇನ್ನೂ ಹೆಚ್ಚು ಜಾಗರೂಕನಾಗಿರುತ್ತಾನೆ. ಅಮೆ ರಿಕಾದ ಸೇನೆ ಚೀನಾದ ಗಡಿಯಲ್ಲಿ ಬೆದರಿಕೆಯೊಡ್ಡಿದರೆ ಮಾವೋ ಸುಮ್ಮನಿರುವನೇ? ಯಾವಾಗ ಮ್ಯಾಕ್ ಡಗ್ಲಸ್ ಆರ್ಥರ್ ಕೊರಿಯಾದ ಉತ್ತರಕ್ಕೆ ಮುನ್ನಡೆಯಲು ಆರಂಭಿಸುತ್ತಾನೋ ಆಗಲೇ ಮಾವೋ ತನ್ನ ಯುದ್ಧೋಪಾಯಗಳಿಗೆ ರೂಪ ಕೊಡಲು ಆರಂಭಿಸುತ್ತಾನೆ. ಯು.ಎಸ್. ಸೈನ್ಯ ಪೂರ್ವ ಕರಾವಳಿ ಪ್ರವೇಶಿಸುವ ಸಂದರ್ಭದಲ್ಲೇ, ವಿಶ್ವ ಸಂಸ್ಥೆಗೆ ಚೀನಾ ಹಲವಾರು ಬಾರಿ ಎಚ್ಚರಿಕೆಗಳನ್ನು ಕೊಡುತ್ತದೆ. ಆದರೆ ಇವು ಯಾವುವು ಫಲಕಾರಿಯಾಗುವುದಿಲ್ಲ. ಇದರ ಪರಿಣಾಮ 1950ರ ಅಕ್ಟೋಬರ್ 19ರಂದು ಚೀನಾ ಸೈನ್ಯದ ಬೃಹತ್ ದಂಡುಗಳು ರಹಸ್ಯವಾಗಿ ಉತ್ತರ ಕೊರಿಯ ಪ್ರವೇಶ ಮಾಡುತ್ತವೆ. ಅಮೆರಿಕಾದ ವಾಯುಪಡೆಯ ಕಣ್ತಪ್ಪಿಸಿಕೊಳ್ಳಲು ಚೀನಾ ಸೈನಿಕರು ರಾತ್ರಿಯ ವೇಳೆ ಪ್ರಯಾಣ ಮಾಡುತ್ತಾರೆ. ಪೀಪಲ್ಸ್ ವಾಲಂಟರಿ ಆರ್ಮಿಯ (ಪಿ.ವಿ.ಎ.) 42ನೇ ದಳ ಚೋಸಿನ್ ಜಲಾಶಯ ಪ್ರದೇಶ ತಲುಪುವ ಮೊದಲ ದಂಡಾಗಿದ್ದು ಅದರ ಉದ್ದೇಶ ಯು.ಎನ್. ಸೈನ್ಯದ ಪೂರ್ವ ದಿಕ್ಕಿನೆಡೆಗಿನ ಮುನ್ನಡೆಯನ್ನು ತಡೆಯುವುದಾಗಿರುತ್ತದೆ.

ಅಕ್ಟೋಬರ್ 25ರಂದು ರಿಪಬ್ಲಿಕ್ ಆಫ್ ಕೊರಿಯಾ ಹಾಗೂ  ಚೀನಾ ಸೈನ್ಯಗಳು ಚೋಸಿನ್ ಜಲಾಶಯದ ದಕ್ಷಿಣದಲ್ಲಿ ಸಣ್ಣ ಮಟ್ಟದಲ್ಲಿ ಘರ್ಷಿಸುತ್ತವೆ. ನವೆಂಬರ್ 2ರಂದು ವೋನ್ಸಾನ್‍ನಲ್ಲಿ ಬಂದಿಳಿಯುವ ಯು.ಎಸ್. ಎಕ್ಸ್ ದಳದ ಮೊದಲನೇ ಮರೀನ್ ವಿಭಾಗ ಹಾಗೂ ಪಿ.ವಿ.ಎ.ಯ 124ನೇ ವಿಭಾಗದ ನಡುವೆ ನಡೆಯುವ ಕದನದಲ್ಲಿ ಚೀನಾ ಸೇನೆಗೆ ಅಪಾರ ನಷ್ಟಗಳುಂಟಾಗುತ್ತವೆ. ನವೆಂಬರ್ 6 ರಂದು ಪಿ.ವಿ.ಎ.ಯ 42ನೇ ದಳವು ಯು.ಎನ್. ದಳಗೊಳಡನೆ ಚೋಸಿನ್ ಜಲಾಶಯದ ಬಳಿ ಸಣ್ಣ ಪ್ರಮಾಣದಲ್ಲಿ ಕಾಳಗ ಮಾಡಿ, ಶತ್ರುವನ್ನು ಇನ್ನೂ ಒಳಸೆಳೆಯುವ ದೃಷ್ಟಿಯಿಂದ ಹಿಂದೆ ಸರಿಯುತ್ತವೆ. ಚೀನಾ ಸೈನ್ಯ ಸಣ್ಣ ಸಣ್ಣ ಕಾಳಗಗಳನ್ನು ಮಾಡಿ ಹಿಂದಕ್ಕೆ ಸರಿಯುತ್ತಿದ್ದು, ಅದರ ಉದ್ದೇಶ ಯು.ಎನ್. ಪಡೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ಉತ್ತರ ಕೊರಿ ಯಾದೊಳಗೆ ಒಳಭಾಗಕ್ಕೆ ಸೆಳೆಯುವುದಾಗಿರುತ್ತದೆ. ನವೆಂಬರ್ 24 ರ ವೇಳೆಗೆ ಮೊದಲನೇ ಮರೀನ್ ವಿಭಾಗ ಚೋಸಿನ್ ಜಲಾಶಯದ ಪೂರ್ವ ಭಾಗದಲ್ಲಿ ಸಿನ್‍ಹುಂಗ್-ನಿ ಹಳ್ಳಿಯನ್ನು ಹಾಗೂ ಪಶ್ಚಿಮ ಭಾಗದಲ್ಲಿ ಯುಡಾಮ್-ನಿ ಹಳ್ಳಿಯನ್ನು ಆಕ್ರಮಿಸಿಕೊಳ್ಳುತ್ತದೆ.

ಚೀನಿ ಸೈನ್ಯದ ಹಠಾತ್ ಆಕ್ರಮಣಗಳ ಪರಿಣಾಮದಿಂದ ಜನರಲ್ ಡಗ್ಲಾಸ್ ಪ್ರಮುಖ ಸರಬರಾಜು ದಾರಿಯಾದ ಮಾಂಫೋಜಿನ್‍ ಕಂಗ್ಯೆ-ಹುಯಿಚಾನ್ ಅನ್ನು ಕಡಿಯುವ ಉದ್ದೇಶದಿಂದ ಚೋಸಿನ್ ಜಲಾಶಯದ ಪಶ್ಚಿಮ ದಿಕ್ಕಿನಲ್ಲಿ ದಾಳಿ ಮಾಡಲು ಸೂಚಿಸುತ್ತಾನೆ. ಈ ಸೂಚನೆಯ ಮೇರೆಗೆ ಯು.ಎಸ್. ಎಕ್ಸ್ ದಳ ಯುಡಾಮ್-ನಿ ಮೂಲಕ ಪಶ್ಚಿಮಕ್ಕೆ ಹೋಗಬೇಕಾಗುತ್ತದೆ. ಇದೇ ವೇಳೆಗೆ ವೋನ್ಸಾನ್‍ನಲ್ಲಿ ಮ ರೀನ್ ಸೈನ್ಯ ಬಂದಿಳಿದುದನ್ನು ಕಂಡು ಚಕಿತನಾಗುವ ಮಾವೋ ತ್ಸೆ ತುಂಗ್ 9ನೇ ಸೈನ್ಯವನ್ನು ನವೆಂಬರ್ 17ರಂದು ಸದ್ದಿಲ್ಲದೆ ಚೋಸಿನ್ ಜಲಾಶಯದ ಬಳಿ ಕಳುಹಿಸುತ್ತಾನೆ. ಪಿ.ವಿ.ಎ.ಯ 42ನೇ ದಳವನ್ನು ಹಿಂದಕ್ಕೆ ಕರೆಸಿಕೊಂಡು ಪಿ.ವಿ.ಎ.ಯ 9ನೇ ಸೈನ್ಯದ ಒಂದು ದಳವನ್ನು ಯುಡಾಮ್-ನಿ ಪ್ರದೇಶಕ್ಕೆ ಕಳುಹಿಸುತ್ತಾನೆ.

ವೇಗಕ್ಕಾಗಿ ಎಚ್ಚರಿಕೆಯನ್ನು ತ್ಯಾಗಮಾಡುವ ಮ್ಯಾಕ್ ಡಗ್ಲಾಸ್ ಆರ್ಥರ್‍ನ ನಿರ್ಧಾರದ ಪರಿಣಾಮಗಳು ತೀವ್ರವಾಗಿದ್ದು ಅದರ ಬೇಗುದಿಯನ್ನು ಯು.ಎನ್. ದಳಗಳು ಅನುಭವಿಸಬೇಕಾಗುತ್ತದೆ. ಚೋಸಿನ್ ಜಲಾಶಯದ ಸುತ್ತ ಹವಾಮಾನ ಪ್ರತಿಕೂಲವಾಗಿರುತ್ತದೆ. ಮಂಚೂರಿಯಾದಿಂದ ವಾಯುವ್ಯ ಗಾಳಿ 20 ರಿಂದ 30 ಕಿ.ಮೀ. ವೇಗದಲ್ಲಿ ಬೀಸುತ್ತಿರುತ್ತದೆ.

ವೇಗಕ್ಕಾಗಿ ಎಚ್ಚರಿಕೆಯನ್ನು ತ್ಯಾಗಮಾಡುವ ಮ್ಯಾಕ್ ಡಗ್ಲಾಸ್ ಆರ್ಥರ್‍ನ ನಿರ್ಧಾರದ ಪರಿಣಾಮಗಳು ತೀವ್ರವಾಗಿದ್ದು ಅದರ ಬೇಗುದಿಯನ್ನು ಯು.ಎನ್. ದಳಗಳು ಅನುಭವಿಸಬೇಕಾಗುತ್ತದೆ. ಚೋಸಿನ್ ಜಲಾಶಯದ ಸುತ್ತ ಹವಾಮಾನ ಪ್ರತಿಕೂಲವಾಗಿರುತ್ತದೆ. ಮಂಚೂರಿಯಾದಿಂದ ವಾಯುವ್ಯ ಗಾಳಿ 20 ರಿಂದ 30 ಕಿ.ಮೀ. ವೇಗದಲ್ಲಿ ಬೀಸುತ್ತಿರುತ್ತದೆ. ಪ್ರತಿಕೂಲ ಶೀತಲ ಹವಾಮಾನದ ಜೊತೆಗೆ ನೆಲವು ಹೆಪ್ಪುಗಟ್ಟಿರುತ್ತದೆ. ಉತ್ತರಕ್ಕೆ ಯಾಲು ನದಿಯೆಡೆಗೆ ಪರ್ವತಗಳ ಮೂಲಕ ಹಾದುಹೋಗುವ ರಸ್ತೆಗಳು ಬೆಟ್ಟ-ಗುಡ್ಡಗಳಲ್ಲಿ ಕಡಿದು ನಿರ್ಮಿಸಿದ ರಸ್ತೆಗಳಾಗಿದ್ದು ಕಳಪೆ ಗುಣಮಟ್ಟದ್ದಾಗಿರುತ್ತದೆ. 1950 ರ ನವೆಂಬರ್ 14 ರ ವೇಳೆಗೆ ಸೈಬೀರಿಯಾದ ಶೈತ್ಯ ಹವೆ ಚೋಸಿನ್ ಜಲಾಶಯದ ಮೇಲೆ ಬಂದಿರುತ್ತದೆ. ಉಷ್ಣಾಂಶ ಶೂನ್ಯಕ್ಕಿಂತ 35 ಡಿಗ್ರಿ ಕೆಳಗಿರುತ್ತದೆ.

ಈ ಕದನದ ಕೇಂದ್ರಬಿಂದು ಚೋಸಿನ್ ಜಲಾಶಯ ಹಾಗೂ ಹುಂಗ್‍ನಾಮ್ ಬಂದರನ್ನು ಜೋಡಿಸುವ 126 ಕಿಮೀ ಉದ್ದದ ರಸ್ತೆಯಾಗಿರುತ್ತದೆ. ಈ ರಸ್ತೆಯ ಮೂಲಕ ಮಾತ್ರ ಯು.ಎನ್. ಪಡೆಗಳು ಮುಂದಕ್ಕೆ ಆಥವಾ ಹಿಂದಕ್ಕೆ ಚಲಿಸಲು ಸಾಧ್ಯ. ಈ ರಸ್ತೆ ಚೋಸಿನ್ ಜಲಾಶಯದ ಪಶ್ಚಿಮಕ್ಕಿರುವ ಸಿನ್‍ಹುಂಗ್-ನೀ ಹಾಗೂ ಪೂರ್ವಕ್ಕಿರುವ ಯುಡಾಮೀ-ನೀ ಹಳ್ಳಿಗಳ ನಡುವೆ ಹಾಗೂ ಚೋಸಿನ್ ಜಲಾಶಯದ ದಕ್ಷಿಣಕ್ಕಿರುವ ಹಗರು-ರೀ ಹಳ್ಳಿಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಹಗರು-ರಿ ನಿಂದ ರಸ್ತೆ ಮುಂದುವರೆದು ಹುಂಗ್‍ನಾಮ್ ಬಂದರಿಗೆ ಸಾಗುತ್ತದೆ.

ಯು.ಎನ್. ದಳಗಳಿಗೆ ಹಗರು-ರಿ ಯುದ್ಧೋಪಾಯದ ದೃಷ್ಟಿಯಿಂದ ಪ್ರಮುಖವಾಗಿರುತ್ತದೆ. ಇಲ್ಲಿ ಸಿ-47 ವಿಮಾನಗಳನ್ನು ಹಾರಿಸಬಹುದಾದ ವಿಮಾನ ನಿಲ್ದಾಣವನ್ನು ಹಾಗೂ ಸರಬರಾಜು  ಕೇಂದ್ರವನ್ನು ನಿರ್ಮಿಸಲಾಗುತ್ತಿರುತ್ತದೆ. ಈ ಪ್ರದೇಶವನ್ನು ಯು.ಎಸ್. 1ನೇ ಮತ್ತು 7ನೇ ಮರೀನ್ ದಳಗಳು ರಕ್ಷಣೆ ಮಾಡುತ್ತಿರುತ್ತವೆ. ಅಮೆರಿಕಾದ ಹೆಚ್ಚು ಪಡೆಗಳು ಯುಡಾಮ್-ನಿ ಹಾಗೂ ಸಿನ್‍ಹುಂಗ್-ನಿ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿರುತ್ತದೆ. ಅದರಲ್ಲೂ ಯು.ಎಸ್. ಮರೀನ್‍ನ 5,7 ಹಾಗೂ 11ನೇ ದಳಗಳು ಹೆಚ್ಚು ಸಂಖ್ಯೆಯಲ್ಲಿ ಯುಡಾಮ್-ನಿಯಲ್ಲಿರುತ್ತವೆ.

ಚೀನಾದ 9ನೇ ಸೈನ್ಯದ ಯುದ್ಧೋಪಾಯ ಯಡಾಮ್-ನಿ ಹಾಗೂ ಸಿನ್‍ಹುಂಗ್‍ಗಳಲ್ಲಿನ ಯು.ಎನ್. ರಕ್ಷಕದಳಗಳನ್ನು ನಾಶಪಡಿಸಿ ಈ ಸೈನ್ಯಗಳನ್ನು ಹಗರು-ರಿ ಕಡೆ ಹೋಗುವಂತೆ ಮಾಡುವುದು. ಆಗ ಯು.ಎಸ್. ಎಕ್ಸ್ ದಳದ ಬಹುಪಾಲು ಸೈನಿಕರು ನಾಶಗೊಳ್ಳುತ್ತಿರುವ ದಂಡುಗಳ ರಕ್ಷಣೆಗೆ ಬರುತ್ತಾರೆ. ಆಗ ಅವರನ್ನು ಹಗರು-ರಿ ಹಾಗೂ ಹುಂಗ್‍ನಾಮ್ ರಸ್ತೆಯ ಮಧ್ಯೆ ಸಿಕ್ಕಿಹಾಕಿಕೊಳ್ಳುವಂತೆ ಮಾಡುವುದು. ಈ ತಂತ್ರದೊಂದಿಗೆ ಚೀನಾ ಯು.ಎನ್. ದಳಗಳ ಮೇಲೆ ದಾಳಿಗೆ ತಯಾರಾಗುತ್ತವೆ.

ನವೆಂಬರ್ 27ರಂದು ಸುಮಾರು 3,600 ಸೈನಿಕರು ಚೋಸಿನ್ ಜಲಾಶಯದ ದಕ್ಷಿಣದಲ್ಲಿರುವ ಹಗರು-ರಿಯಲ್ಲಿರುತ್ತಾರೆ. ಇಲ್ಲಿಂದ ಸುಮಾರು 8 ಕಿ.ಮೀ. ಮುಂದೆ ಜಲಾಶಯದ ಪಶ್ಚಿಮ ಭಾಗದಲ್ಲಿ 400 ಮರೀನ್ ಯೋಧರು ರಸ್ತೆಯ ಮೇಲಿನ ಎತ್ತರದ ಪ್ರದೇಶವನ್ನು ರಕ್ಷಣೆ ಮಾಡುತ್ತಿರುತ್ತಾರೆ. ಯುಡಾಮ್-ನಿಯಲ್ಲಿ ಸುಮಾರು 8.500 ಮರೀನ್ ಯೋಧರು ಮಾರನೇ ದಿನದ ಯಾಲು ನದಿಯೆಡೆಗಿನ ದಾಳಿಗೆ ತಯಾರಿ ನಡೆಸುತ್ತಿರುತ್ತಾರೆ. ಪೂರ್ವದಲ್ಲಿ 2,500 ಯು.ಎಸ್. ಸೈನ್ಯದ ಸೈನಿಕರು ಹಾಗೂ ನೂರಾರು ದಕ್ಷಿಣ ಕೊರಿಯಾದ ಸೈನಿಕರನ್ನು ಮರೀನ್ ವಿಭಾಗದ ಬಲ ಪಾರ್ಶ್ವವನ್ನು ರಕ್ಷಿಸಲು ಇರಿಸಲಾಗಿರುತ್ತದೆ. ಹೀಗೆ ನವೆಂಬರ್ 27 ರಂದು ರಾತ್ರಿಯಾಗುತ್ತಿದ್ದಂತೆ ಜಲಾಶಯದ ಎರಡು ಬದಿಗಳಲ್ಲಿನ ಯು.ಎನ್. ಪಡೆಗಳು ತಾವು ಯೋಜಿಸಿರುವ ಯಾಲುವಿನವರೆಗಿನ ದೊಡ್ದ ದಾಳಿಗೂ ಮುಂಚಿನ ಕಡೆಯ ರಾತ್ರಿಯನ್ನು ಕಳೆಯಲು ಸಿದ್ಧತೆ ನಡೆಸುತ್ತಿರುತ್ತಾರೆ. ಆ ರಾತ್ರಿ ಚೀನಿ ಪಡೆಗಳು ಸಹಸ್ರಾರು ಸಂಖ್ಯೆಯಲ್ಲಿ ಅನಿರೀಕ್ಷಿತವಾಗಿ ಯು.ಎನ್. ಪಡೆಗಳ ಮೇಲೆ ದಾಳಿ ಮಾಡುತ್ತವೆ. ಆ ರಾತ್ರಿ ನಡೆಯುವ ಕದನವನ್ನು ಯು.ಎಸ್. ಮರೀನ್‍ಗಳ ಮಾತಿನಲ್ಲೇ ಕೇಳಬೇಕು.

ಯು.ಎಸ್. ಮರೀನ್ ಪಾರ್ಕಿನ್‍ಸನ್: “ಹಠಾತ್ತಾಗಿ, ಬೃಹತ್ ಸಂಖ್ಯೆಯಲ್ಲಿ ನಮ್ಮ ಪರಿಧಿಯೊಳಗೆ ಚೀನಾ ಸೈನಿಕರು ಬರುತ್ತಿದ್ದರು. ನಮ್ಮ ಬಳಿ ಇರುವ ಆಯುಧಗಳನ್ನೆಲ್ಲಾ ಉಪಯೋಗಿಸಿದೆವು… ನಮ್ಮ ಎಮ್-1 ಗಳು, ಕಾರ್ಬಿನ್‍ಗಳು…ಮಶೀನ್ ಗನ್‍ಗಳು. ಅವರು ಬರುತ್ತಿದ್ದಾಗ ಅದೊಂದು ಬೆಂಕಿಯಿಂದ ತುಂಬಿದ ಕ್ಷೇತ್ರವಾಗಿತ್ತು. ಚೀನಾ ಸೈನಿಕರು ಎಲ್ಲಿದ್ದಾರೆಂದು ನೋಡುವ ಅಗತ್ಯವಿರಲಿಲ್ಲ. ಅವರು ನಿಮ್ಮ ಹಿಂದೆ ಇದ್ದರು. ಮುಂದೆ ಇದ್ದರು. ಸುತ್ತಾ ಇದ್ದರು, ನಿಮ್ಮ ಮಧ್ಯದಲ್ಲೇ ಇದ್ದರು.”

ಯು.ಎಸ್. ಮರೀನ್ ಬಾಬ್ ಬೋಲ್ಡನ್: “ನೀವು ಗುಂಡು ಹಾರಿಸುತ್ತಿದ್ದಿರಿ, ಚಾಕುವಿನಿಂದ ಇರಿಯುತ್ತಿದ್ದಿರಿ. ನಿಮ್ಮ ರೈಫಲನ್ನು ದೊಣ್ಣೆಯಾಗಿ ಉಪಯೋಗಿಸುತ್ತಿದ್ದಿರಿ. ಕೆಲವೊಮ್ಮೆ ಅವರು ನಿಮ್ಮಿಂದ ಆರು ಅಥವಾ ಎಂಟು ಅಡಿ ದೂರದಲ್ಲಿರುತ್ತಿದ್ದರು…ಆ ಸಂದರ್ಭದಲ್ಲಿ ನಿಮ್ಮ ರೈಫಲ್‍ನ ಬಯೋನೆಟ್ಟನ್ನು ದೊಣ್ಣೆಯಾಗಿ ಉಪಯೋಗಿಸುತ್ತಿದ್ದಿರಿ…”

ಈ ಕದನಗಳಲ್ಲಿ ಎರಡು ಕಡೆ ಅಪಾರ ಸಾವು-ನೋವುಗಳು ಸಂಭವಿಸುತ್ತವೆ. ಚೋಸಿನ್ ಜಲಾಶಯದ ಬಳಿ ನಡೆಯುವ ಕದನದಲ್ಲಿ ಚೀನಾ ಸೈನ್ಯ ಯು.ಎನ್. ದಳಗಳ ಸಾಮರ್ಥ್ಯವನ್ನು ಸರಿಯಾಗಿ ಅಂ ದಾಜು ಮಾಡಿರುವುದಿಲ್ಲ. ಈ ಕದನದ ಆರಂಭದಲ್ಲಿ ಯು.ಎನ್. ದಳಗಳ ಮೊದಲನೇ ಮರೀನ್ ವಿಭಾಗ 25,473 ಸೈನಿಕರನ್ನು ಹೊಂದಿರುತ್ತದೆ. ಜೊತೆಗೆ ಬ್ರಿಟಿಶ್ ರಾಯಲ್ ಮರೀನ್ ಕಮಾಂಡೋ ಹಾಗೂ ಪದಾತಿ ದಳಗಳ ನೆರವು ಸೇರಿ ಒಟ್ಟು 30,000 ಸೈನಿಕರ ಸೈನ್ಯವನ್ನು ಯು. ಎನ್. ಪಡೆ ಹೊಂದಿರುತ್ತದೆ. ಇವಲ್ಲದೆ ಚೋಸಿನ್‍ನಲ್ಲಿದ್ದ ಯು.ಎನ್. ಸೈನ್ಯಕ್ಕೆ ಏರ್-ಫೋರ್ಸ್ ನಿಂದ (ಯೋನ್ಪೋ ವಿಮಾನ ನಿಲ್ದಾಣದಲ್ಲಿದ್ದ ಮೊದಲನೇ ಮರೀನ್ ಏರ್‍ಕ್ರಾಫ್ಟ್ ವಿಂಗ್ ಹಾಗೂ ಯು.ಎಸ್. ನೇವಿ ಟಾಸ್ಕಫೋರ್ಸ್ 77ರ ಐದು ಏರ್‍ಕ್ರಾಫ್ಟ್ ಕ್ಯಾರಿಯರ್ಸ್ ಮುಲಕ) ಬಲಿಷ್ಠ ನೆರವು ದೊರೆಯುತ್ತಿರುತ್ತದೆ. ಯು.ಎಸ್. ವಿಮಾನಗಳು ಪ್ರತಿದಿನ 230 ದಾಳಿಗಳನ್ನು ನಡೆಸುತ್ತಿರುತ್ತದೆ.

ಮುಂದಿನ ಹಲವು ದಿನಗಳಲ್ಲಿ ಚೀನಾ ಪಡೆಗಳು ಚೋಸಿನ್ ಜಲಾಶಯದ ಬಳಿ ಯುಡಾಮ್-ನಿ, ಸಿನ್‍ಹುಂಗ್-ನಿ, ಹಗರು-ರಿ ಹಾಗೂ ವಿವಿಧೆಡೆ ದಾಳಿ ಮಾಡುತ್ತವೆ. ಚೀನಾ ಸೈನ್ಯ ಸಮರ್ಪಕ ಪೂರ್ವತಯಾರಿಯೊಂದಿಗೆ ಯುದ್ಧ ಪ್ರವೇಶ ಮಾಡಿರುವುದಿಲ್ಲ. ಇದರ ಪರಿಣಾಮ ಚೀನಾ ಸೈನಿಕರು ಸಹ ಅತ್ಯಂತ ಕಷ್ಟಕರ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ ಹಾಗೂ ಅಪಾರ ಹಾನಿ ಭರಿಸಬೇಕಾಗುತ್ತದೆ.

ಚೀನಾ ಸೈನಿಕರು ರಾತ್ರಿ ವೇಳೆ ಹೆಚ್ಚು ದಾಳಿಗಳನ್ನು ಮಾಡುತ್ತಿರುತ್ತಾರೆ. ಈ ಯುದ್ಧದ ಪ್ರಮುಖ ಘಟನೆಯೊಂದನ್ನು ಇಲ್ಲಿ ಉಲ್ಲೇಖಿಸಬೇಕು. ಯುದ್ಧ ಪ್ರಗತಿಯಲ್ಲಿದ್ದಾಗ ಪಿ.ವಿ.ಎ.ಯ 59ನೇ ವಿಭಾಗ ಯುಡಾಮ್-ನಿ ಹಾಗೂ ಹಗರು-ರಿ ನಡುವಿನ ರಸ್ತೆಯನ್ನು ಅಡ್ಡಗಟ್ಟುತ್ತದೆ. ಇದ ರಿಂದ ಕ್ಯಾಪ್ಟನ್ ವಿಲಿಯಂ ಇ. ಬಾರ್ಬರ್ ನೇತೃತ್ವದ ಫಾಕ್ಸ್ ಕಂಪನಿ ಪ್ರಮುಖ ರಸ್ತೆಯಾದ ಟೋಟ್ಕಾಂಗ್ ಮಾರ್ಗದ ಮೇಲಿರುವ ಬೆಟ್ಟದಲ್ಲಿ ಪ್ರತ್ಯೇಕಿಸಲ್ಪಡುತ್ತದೆ. ನವೆಂಬರ್ 29 ರಂದು 7ನೇ ಮರೀನ್ ದಳ ಚೀನಾ ಸೈನ್ಯಕ್ಕೆ ಎಷ್ಟೇ ನಷ್ಟಗಳನ್ನು ಉಂಟು ಮಾಡಿದರೂ ಫಾಕ್ಸ್ ಕಂಪನಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಫಾಕ್ಸ್ ಕಂಪನಿಯು ಹಗರು-ರಿ ಹಾಗೂ ಮರೀನ್ ಕಾನ್ಸೇರ್ ಫೈಟರ್‍ಗಳ ಆರ್ಟಿಲರಿ ಸಹಾಯದಿಂದ ಐದು ದಿನಗಳ ಕಾಲ ಅಲ್ಲಿ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಐದು ದಿನಗಳ ಕಾಲ ಪಿ.ವಿ.ಎ. 59ನೇ ವಿಭಾಗ ಸತತವಾಗಿ ದಾಳಿ ಮಾಡುತ್ತಿರುತ್ತದೆ.

ದಾರಿಯುದ್ಧಕ್ಕೂ ಚೀನಾ ಸೈನಿಕರಿಂದ ಅವಿರತವಾಗಿ ದಾಳಿಗಳು ನಡೆಯುತ್ತಿರುತ್ತವೆ. ದಾರಿಯ ಮಧ್ಯದಲ್ಲಿ ಸೇತುವೆಯೊಂದು ಕುಸಿದು ಬಿದ್ದು ಹಿಂದೆ ಸರಿಯುವುದು ದುಸ್ಸಾಧ್ಯವಾದಾಗ ಸೇತುವೆಯ ಪೂರ್ವಜೋಡಿತ ಭಾಗಗಳನ್ನು ಯು.ಎಸ್. ಸೈನ್ಯದ ಪರಿಧಿಯೊಳಗೆ ಯು.ಎಸ್. ವಿಮಾನಗಳು ಕೆಳಗೆ ಹಾಕುತ್ತವೆ.

ಯುಡಾಮ್-ನಿ ಪ್ರದೇಶದಲ್ಲಿ 1ನೇ ಮರೀನ್ ವಿಭಾಗ ತಾನಂದುಕೊಂಡದ್ದಕ್ಕಿಂತ ದುಪ್ಪಟ್ಟು ಸಂಖ್ಯೆಯ ರಕ್ಷಕದಳವನ್ನು ಹೊಂದಿದೆಯೆಂದು ಅರಿತ ಚೀನಾ ಸೇನೆ ಸಿನ್‍ಹುಂಗ್-ನಿ ಹಾಗೂ ಹಗರು-ರಿ ಮೇಲೆ ದಾಳಿ ನಡೆಸಲು ಆದೇಶ ಪಡೆಯುತ್ತದೆ. ಇದೇ ಸಂದರ್ಭದಲ್ಲಿ ಕೊರಿಯಾದ ಪಶ್ಚಿಮ ಮುಂಭಾಗದಲ್ಲಿ ಯುದ್ಧ ಮಾಡುತ್ತಿದ್ದ ಯು.ಎಸ್. ಎಂಟನೇ ಸೈನ್ಯ ಚಾಂಗ್‍ಜಾ ನದಿಯ ಬಳಿ ನಡೆಯುತ್ತಿದ್ದ ಯುದ್ಧದಿಂದ ಹಿಂದಕ್ಕೆ ಸರಿಯುತ್ತದೆ. ಮ್ಯಾಕ್ ಆರ್ಥರ್ ಯು.ಎಸ್. ಎಕ್ಸ್ ದಳಕ್ಕೆ ಸಹ ಹಿಂದಕ್ಕೆ ಸರಿದು ಹುಂಗ್‍ನಾಮ್ ಬಂದರಿಗೆ ಹೋಗಲು ಸೂಚಿಸುತ್ತಾನೆ.

ಈ ಯುದ್ಧದಲ್ಲಿ ಯು.ಎನ್. ಪಡೆಗಳು ಹುಂಗನಾಮ್ ಬಂದರಿನೆಡೆಗೆ ಹಿಂದೆ ಸರಿಯುವವರೆಗೂ ಹಲವಾರು ಘಟನೆಗಳು ನಡೆಯುತ್ತವೆ.  ದಾರಿಯುದ್ಧಕ್ಕೂ ಚೀನಾ ಸೈನಿಕರಿಂದ ಅವಿರತವಾಗಿ ದಾಳಿಗಳು ನಡೆಯುತ್ತಿರುತ್ತವೆ. ದಾರಿಯ ಮಧ್ಯದಲ್ಲಿ ಸೇತುವೆಯೊಂದು ಕುಸಿದು ಬಿದ್ದು ಹಿಂದೆ ಸರಿಯುವುದು ದುಸ್ಸಾಧ್ಯವಾದಾಗ ಸೇತುವೆಯ ಪೂರ್ವಜೋಡಿತ ಭಾಗಗಳನ್ನು ಯು.ಎಸ್. ಸೈನ್ಯದ ಪರಿಧಿಯೊಳಗೆ ಯು.ಎಸ್. ವಿಮಾನಗಳು ಕೆಳಗೆ ಹಾಕುತ್ತವೆ. ಈ ಭಾಗಗಳಿಂದ ಸೇತುವೆ ನಿರ್ಮಿಸಿ ಆ ಮೂಲಕ ಯು.ಎನ್. ಪಡೆಗಳು ಹುಂಗ್‍ನಾಮ್ ಬಂದರಿನೆಡೆಗೆ ಸಾಗುತ್ತವೆ.

ಯುದ್ಧದಲ್ಲಿ ಸಂಕಷ್ಟಗಳು, ಸಾವು-ನೋವುಗಳು ಸಹಜವೇ. ಆದ ರೆ ಈ ಯುದ್ಧದಲ್ಲಿ ಸೈನಿಕರು ಎದುರಿಸುವ ಪ್ರತಿಕೂಲ ಹವಾಮಾನ, ಶೂನ್ಯಕ್ಕಿಂತ 30 ಡಿಗ್ರಿಗಳಷ್ಟು ಕೆಳಗಿನ ಉಷ್ಣಾಂಶ, ಹೆಪ್ಪುಗಟ್ಟಿದ ನೆಲಗಳು ಹಾಗೂ ಬಹಳಷ್ಟು ಸೈನಿಕರು ಅನುಭವಿಸುವ ಹಿಮವ್ರಣಗಳು ಚೋಸಿನ್ ಕದನವನ್ನು ಒಂದು ದುರಂತಕರ ನೆನಪಾಗಿ ಉಳಿಸಿಬಿಡುತ್ತದೆ. ಚೋಸಿನ್ ಜಲಾಶಯ ಪ್ರದೇಶಗಳಿಂದ ಹಿಂತಿರುಗುವ ದಾರಿಯಲ್ಲಿ ಸಾವಿರಾರು ಸೈನಿಕರು ಆಹಾರ-ನೀರಿಲ್ಲದೆ ಕಂಗೆಡುತ್ತಾರೆ. ನೂರಾರು ಸೈನಿಕರು ಮಾರ್ಗಮಧ್ಯದಲ್ಲೇ ಪ್ರಾಣ ಕಳೆದುಕೊಳ್ಳುತ್ತಾರೆ.

ಯುದ್ಧದ ಅನುಭವವನ್ನು ನೆನಪಿಸಿಕೊಳ್ಳುತ್ತ, ಚೋಸಿನ್ ಕದನದಲ್ಲಿ ಬದುಕುಳಿದ ಮರೀನ್ ಯೋಧ ಸಾರ್ಜೆಂಟ್ ವರ್ನರ್ ಡಬ್ಲ್ಯೂ ರೇಇನಿಂಗರ್ ಹೀಗೆ ದಾಖಲಿಸುತ್ತಾನೆ, “ಕುಳಿಗೆ ನೇರವಾಗಿ ಮೋರ್ಟಾರ್ (ಸಣ್ಣ ಪಿರಂಗಿ) ಬಡಿಯಿತೆನ್ನಿಸುತ್ತದೆ. ನಾನು ಗಾಳಿಗೆ ಎಸೆಯಲ್ಪಟ್ಟು ಮತ್ತೆ ನೆಲದ ಮೇಲೆ ಬಿದ್ದೆ. ನಾನು ಸುತ್ತ ನೋಡಿದಾಗ ನನಗನ್ನಿಸಿತು ಯಾರೋ ಒಬ್ಬ ಬಡಪಾಯಿ ತನ್ನ ಕಾಲು ಕಳೆದುಕೊಂಡಿದ್ದಾನೆಂದು. ನಾನು ಏಳಲು ಹೋದಾಗ ನನ್ನ ಮುಖದ ಮೇಲೆ ರಪ್ಪನೆ ಬಿದ್ದೆ. ಕೆಳಗೆ ನೋಡಿದೆ. ಕಾಲು ಅಲ್ಲಿ ಬಿದ್ದಿತು. ಆ ಬಡಪಾಯಿ ಬೇರಾರೂ ಆಗಿರಲಿಲ್ಲ. ನಾನೇ ಆಗಿದ್ದೆ. ನನ್ನ ಬಲಗಾಲು ಮಂಡಿಯವರೆಗೂ ತುಂಡಾಗಿತ್ತು.”

ಯು.ಎಸ್. ಮರೀನ್ ಯೋಧ ಪಾರ್ಕಿನ್‍ಸನ್ ಹೇಳುತ್ತಾರೆ, “ಮೊದಲ ಬಾರಿಗೆ ಅಂದು ನಾನು ದೇವರಿಗೆ ಬೇಡಿಕೊಂಡೆ. ಓ ದೇವರೆ ನನ್ನನ್ನು ಸಾಯಲು ಬಿಡಬೇಡ. ಇಲ್ಲಿ ಬೇಡ. ಮನೆಯಿಂದ ಇಷ್ಟು ದೂರ ಬೇಡ. ನಾನು ಸೂರ್ಯ ಉದಯಿಸುವುದನ್ನು ಮತ್ತೊಮ್ಮೆ ನೋಡಬೇಕು. ದೇವರೆ ನನಗೆ ಮತ್ತೊಂದು ದಿನ ನೀಡು.”

ಪಾರ್ಕಿನ್‍ಸನ್ ಆ ಯುದ್ಧದಲ್ಲಿ ಗಾಯಗೊಂಡವರಿಗೆ ಹೆಪ್ಪುಗಟ್ಟಿಸುವ ಚಳಿಯಿಂದಾದ ಸಹಾಯದ ಬಗ್ಗೆ ಹೀಗೆ ಹೇಳುತ್ತಾರೆ, “ಕರುಳಿಗೆ ಕೆಟ್ಟದಾಗಿ ಗುಂಡುಗಳು ಬಿದ್ದವರಿದ್ದರು. ಎಷ್ಟು ಚಳಿಯಿತ್ತೆಂದರೆ ರಕ್ತ ಹೆಪ್ಪುಗಟ್ಟಿತ್ತು. ಈ ಗಾಯಾಳುಗಳು ಬದುಕುಳಿಯುವಲ್ಲಿ ಯಶಸ್ವಿಯಾದರು. ಮಂಡಿಯಿಂದ ಕೆಳಗೆ ಕಾಲಿಲ್ಲದವರಿದ್ದರು. ಎಷ್ಟು ಚಳಿಯಿತ್ತೆಂದರೆ ಪ್ರತಿಯೊಂದು ಹೆಪ್ಪುಗಟ್ಟಿತ್ತು. ಅವರೆಲ್ಲಾ ಬದುಕುಳಿದರು.”

ಮರಗಟ್ಟಿಹೋಗಿರುವ ಮೃತ ಸೈನಿಕರನ್ನು ಏನು ಮಾಡಬೇಕೆಂದು ತೋಚದಿದ್ದಾಗ ಯು.ಎನ್. ಪಡೆಗಳು ಹಗರು-ರಿಯಲ್ಲಿ sಸ್ಫೋಟಕಗಳನ್ನು ಉಪಯೋಗಿಸಿ ದೊಡ್ಡ ಹಳ್ಳ ಮಾಡಿ ಹೂಳುತ್ತಾರೆ. ಹಗರು-ರಿಗೆ ಹಿಂತಿ ರುಗುವ ಹಲವಾರು ಸೈನಿಕರಿಗೆ ತಮ್ಮ ಬೂಟುಗಳನ್ನು ತೆಗೆದುಹಾಕಿದಾಗಲೇ ತಾವು ಹಿಮವ್ರಣಗಳಿಂದ ಬೆರಳುಗಳನ್ನು ಕಳೆದುಕೊಂಡಿರುವುದರ ಅರಿವಾಗುತ್ತದೆ. ಹಲವಾರು ದಿನಗಳು ಉಪವಾಸವಿದ್ದ ಸೈನಿಕರಿಗೆ ಮೊದಲು ಆಹಾರ ಸಿಕ್ಕಿದಾಗ ಅದು ಅವರ ಜೀವನದ ಅತ್ಯಂತ ರುಚಿಕರ ಹಾಗೂ ನೆನಪಿನಲ್ಲಿಡುವ ಭೋಜನವೆಂದೆನಿಸುತ್ತದೆ.

ಸರಿಯಾದ ಸಿದ್ಧತೆ, ಉಡುಪುಗಳು, ಆಯುಧಗಳು ಹಾಗೂ ಆಹಾರವಿಲ್ಲದ ಚೀನಾ ಸೈನಿಕರು ಯು.ಎನ್. ಪಡೆಗಳಿಗಿಂತ ಹೆಚ್ಚು ಸಾವು-ನೋವುಗಳನ್ನು ಅನುಭವಿಸುತ್ತಾರೆ. ಪ್ರತಿಕೂಲ ಹವಾಮಾನದಲ್ಲೂ ಮಾವೋ ಚೀನಾ ಸೈನ್ಯ ಕಾರ್ಯಾಚರಣೆಯನ್ನು ಮುಂದುವರಿಸಬೇಕೆಂದು ಆದೇಶಿಸಿರುತ್ತಾನೆ. ಮೊದಲನೇ ಮರೀನ್ ಪಡೆಯನ್ನು ಎದುರಿಸುವ 60,000 ಸೈನಿಕರ ಪೈಕಿ ಸುಮಾರು 30,000 ಚೀನಾ ಸೈನಿಕರು ಮೃತಪಡುತ್ತಾರೆ ಅಥವಾ ಗಾಯಗೊಳ್ಳುತ್ತಾರೆ. ಸಾವಿರಾರು ಸೈನಿಕರು ಚಳಿಯ ತೀವ್ರತೆಯಿಂದ ಹೆಪ್ಪುಗಟ್ಟಿ ಅಳಿದುಹೋಗುತ್ತಾರೆ.

ಚೀನಾ ಸೈನಿಕರ ಪರಿಸ್ಥಿತಿ ಬಗ್ಗೆ ಒಬ್ಬ ಯು.ಎಸ್. ಮರೀನ್ ಹೀಗೆ ಹೇಳುತ್ತಾರೆ, “ಅವರು ಸ್ನೀಕರ್ಸ್ (ಮೆತ್ತನೆಯ ಶೂಗಳು) ಧರಿಸಿದ್ದರು. ಒಬ್ಬ ಚೀನಾ ಖೈದಿಯ ಕಾಲು ಮಂಜಿನ ಕಲ್ಲಿನಂತಿತ್ತು. ನಾನು ಒಬ್ಬ ಖೈದಿಯನ್ನು ನೋಡಿದ್ದು ನೆನೆಪಿದೆ. ಅವನ ಕಿವಿಗಳು ಆಲೂಗಡ್ಡೆಯಷ್ಟು ದಪ್ಪಕ್ಕೆ ಊತಗೊಂಡಿದ್ದವು. ಮುಖದ ಎರಡು ಬದಿಗಳಲ್ಲಿ ಆಲೂಗಡ್ಡೆಗಳನ್ನು ಇಟ್ಟಂತಿತ್ತು.”

ಕೊರಿಯನ್ ಯುದ್ಧ ಮುಗಿದಾಗ ಯುದ್ಧದಲ್ಲಿ ಭಾಗಿಯಾದ ಎಲ್ಲಾ ದೇಶಗಳು ಆಪಾರ ನಷ್ಟ ಅನುಭವಿಸುತ್ತವೆ. ಸುಮಾರು 10 ಲಕ್ಷ ಸೈನಿಕರು ಹಾಗೂ 25 ಲಕ್ಷ ಕೊರಿಯನ್ ನಾಗರಿಕರು ಸಾವನ್ನಪ್ಪುತ್ತಾರೆ. ಚೋಸಿನ್ ಜಲಾಶಯನದ ಕದನದಲ್ಲಿ ಯು.ಎಸ್. ಎಕ್ಸ್ ದಳ ಹಾಗೂ ರಿಪಬ್ಲಿಕ್ ಆಫ್ ಕೊರಿಯಾದ 1ನೇ ದಳ ಸೇರಿದಂತೆ ಒಟ್ಟು 10,495 ಸೈನಿಕರು ಮಡಿದರೆಂದು ಅಧಿಕೃತವಾಗಿ ವರದಿ ಮಾಡಲಾಗುತ್ತದೆ. ಚೀನಾದ ಪಿ.ವಿ.ಎ. 9ನೇ ಸೈನ್ಯ ಒಟ್ಟು 48,156 ಸೈನಿಕರು ಮಡಿದರೆಂದು ವರದಿ ಮಾಡುತ್ತದೆ. ಈ ಪೈಕಿ 19,202 ಸೈನಿಕರು ಕಾಳಗಗಳಲ್ಲಿ ಅಸುನೀಗಿದರೆ, 28,954 ಸೈನಿಕರು ಪ್ರತಿಕೂಲ ಕೊರಿಯಾ ಹವಾಮಾನ ಹಾಗೂ ಆಹಾರದ ಕೊರತೆಯಿಂದ ಮೃತಹೊಂದುತ್ತಾರೆ.

ಚೋಸಿನ್ ಜಲಾಶಯದ ಕದನ ಅಮೆರಿಕಾದ ಸೋಲಾಗಲೀ ಅಥವಾ ಚೀನಾದ ಗೆಲುವಾಗಲಿ ಆಗುವುದಿಲ್ಲ. ಚೀನಾ ಪಿ.ವಿ.ಎ.ಯ 9ನೇ ಸೈನ್ಯ ಯುದ್ಧಭೂಮಿಯನ್ನು ಕಡೆಗೆ ಉಳಿಸಿಕೊಂಡರೂ ಸಹ ಅಲ್ಲಿ ನಡೆದ ಹಲವಾರು ಸಂಘರ್ಷಗಳಲ್ಲಿ ಯು.ಎನ್. ಪಡೆಗಳು ಚೀನಾದ 9ನೇ ಸೈನ್ಯವನ್ನು ಸೋಲಿಸುತ್ತವೆ ಹಾಗೂ ತನ್ನ ಸೈನ್ಯದ ಬಹುಪಾಲು ಸೈನಿಕರನ್ನು ಉಳಿಸಿಕೊಂಡು ಹಿಂದಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಚೀನಾಗೆ ಭೌಗೋಳಿಕವಾಗಿ ಜಯ ಲಭಿಸುತ್ತದೆ. ಆದರೆ ಇದಕ್ಕಾಗಿ ಪಿ.ವಿ.ಎ.ಯ 9ನೇ ಸೈನ್ಯ ತೆರುವ ಬೆಲೆ ಅಪಾರವಾದದ್ದು.

ಚೋಸಿನ್ ಯುದ್ಧದಿಂದ ಸಂಪೂರ್ಣ ಜಯ ಹೊಂದುವ ಹಾಗೂ ಉತ್ತರ ಕೊರಿಯಾವನ್ನು ಸ್ವತಂತ್ರಗೊಳಿಸಿ ಕೊರಿಯಾ ಪರ್ಯಾಯದ್ವೀಪವನ್ನು ಏಕೀಕೃತಗೊಳಿಸುವ ಯು.ಎನ್. ಆಕಾಂಕ್ಷೆಗಳಿಗೆ ತೆರೆಬೀಳುತ್ತದೆ. ಆದರೆ ಉತ್ತರ ಕೊರಿಯಾವನ್ನು ಗೆಲ್ಲದಿದ್ದರೂ ಸಹ, ಚೋಸಿನ್‍ನಲ್ಲಿ ಚೀನಾ ಸೈನ್ಯಕ್ಕೆ ಆಗುವ ಅಪಾರ ನಷ್ಟದಿಂದ ಯು.ಎನ್. ಪಡೆಗಳು ದಕ್ಷಿಣದಲ್ಲಿ ಭದ್ರವಾಗಿ ಕಾಲೂರಿ ದಕ್ಷಿಣ ಕೊರಿಯಾವನ್ನು ಉತ್ತರ ಕೊರಿಯಾದ ಆಕ್ರಮಣದಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

Leave a Reply

Your email address will not be published.