ದಿ ವರ್ಡಿಕ್ಟ್ ಚುನಾವಣೆ ವ್ಯವಸ್ಥೆಗೆ ಹಿಡಿದ ಕನ್ನಡಿ

ಪ್ರಣಯ್ ರಾಯ್ ಅವರು 80 ರ ದಶಕದಷ್ಟು ಹಿಂದಿನಿಂದ, ಭಾರತದ ಚುನಾವಣಾ ಅಂಕಿ ಅಂಶಗಳ ವಿಶ್ಲೇಷಣೆಗೆ ಅಗ್ರಶ್ರೇಣಿಯ ಹೆಸರು ಎನಿಸಿದವರು. ಈಗಿನ ಅಬ್ಬರದ ಟೀವಿ ಪತ್ರಿಕೋದ್ಯಮದ ನಡುವೆ ಮೆಲುದನಿಯ, ಸ್ವತಂತ್ರ ಮತ್ತು ಹರಿತ ಪತ್ರಿಕೋದ್ಯಮಕ್ಕೆ ಹೆಚ್ಚಿನ ಅವಕಾಶವಿದೆ ಎಂದು ತೋರಿಸಿ ಕೊಟ್ಟವರು. ಈಗ ತುಂಬಾ ಜನಪ್ರಿಯವಾಗಿರುವ ಆದರೆ, ಅಷ್ಟೇನು ನಿಜವಲ್ಲ ಎಂದು ಜನರಿಗೆ ಅನಿಸುತ್ತಿರುವ, ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಅವರೇ ಹರಿಕಾರರು. ದೇಶದ ಹೆಸರಾಂತ ಪತ್ರಕರ್ತರಲ್ಲಿ ಒಬ್ಬರಾದ ರಾಯ್, ಮೂಲತಃ ಅರ್ಥಶಾಸ್ತ್ರದ ವಿದ್ಯಾರ್ಥಿ. ಚುನಾವಣಾ ಸಮಯದಲ್ಲಿ ಪ್ರಣಯ್ ಜೊತೆ ಕುಳಿತು ಫಲಿತಾಂಶ ವಿಶ್ಲೇಷಿಸುವ ದೋರಬ್ ಆರ್.ಸೋಪಾರಿವಾಲ ಮಾರುಕಟ್ಟೆ ಸಂಶೋಧನೆಯಲ್ಲಿ ಬಹಳ ದೊಡ್ಡ ಹೆಸರು ಮಾಡಿದವರು; ‘ಮಾರ್ಗ’ ಸಂಸ್ಥೆಯ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾಗಿದ್ದವರು. ದೋರಬ್ ಕೂಡ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಓದಿದವರು. ಇಬ್ಬರೂ ಕೂಡಿ ಬರೆದಿರುವ ‘ದಿ ವರ್ಡಿಕ್ಟ್’ ಪುಸ್ತಕ ಭಾರತದ ಚುನಾವಣೆಗಳಲ್ಲಿ ಆಸಕ್ತಿಯಿರುವ ಎಲ್ಲರೂ ಓದಬೇಕಾದ ಒಂದು ಮಹತ್ವದ ಕೃತಿ.

1952ರಿಂದ 2019ರವರೆಗಿನ 17 ಲೋಕಸಭಾ ಚುನಾವಣೆಗಳನ್ನು ಮುಖ್ಯವಾಗಿ ಗಮನದಲ್ಲಿ ಇಟ್ಟುಕೊಂಡು ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳ ಜನಾದೇಶದ ಅಪಾರ ಅಂಕಿ ಅಂಶಗಳನ್ನು ಮುಂದೆ ಇಟ್ಟುಕೊಂಡು ಅವರು ಈ ಕೃತಿಯನ್ನು ರಚಿಸಿದ್ದಾರೆ. ‘ಪ್ರತಿ ಚುನಾವಣೆಯಲ್ಲಿಯೂ ಗೆದ್ದವರು ರಾಜಕಾರಣಿಯಲ್ಲ, ಅದು ಮತದಾರ’ ಎಂದು ಬಲವಾಗಿ ಪ್ರತಿಪಾದಿಸಿರುವ ಲೇಖಕರು, ‘ಪ್ರತಿ ಸಾರಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದಾಗಲೂ ಭಾರತೀಯ ಮತದಾರ, ಚುನಾವಣೆ ಸಮಯದಲ್ಲಿ, ಪ್ರತಿ ಹೋರಾಟ ಮಾಡಿದ್ದಾನೆ. ಭಾರತದ ಚುನಾವಣೆಯ ಸಾಹಸಗಾಥೆ ಎನ್ನುವುದು ಸ್ವಾತಂತ್ರ್ಯದ ಗೆಲುವಿನ ಕಥೆ’ ಎಂಬ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಮೊದಲ ಲೋಕಸಭಾ ಚುನಾವಣೆಗೂ (1952) ಈಗ ನಡೆಯುತ್ತಿರುವ ಚುನಾವಣೆಗೂ ಹೋಲಿಸಿದಾಗ ಪ್ರಮಾಣ ಹಾಗೂ ಗುಣಮಟ್ಟ ಎರಡರಲ್ಲೂ ಮಹತ್ತರ ಎನ್ನುವಂಥ ಬದಲಾವಣೆ ಆಗಿದೆ. 1952ರಲ್ಲಿ ಇದ್ದುದಕ್ಕಿಂತ ಐದು ಪಟ್ಟು ಹೆಚ್ಚು (90 ಕೋಟಿ) ಮತದಾರರು ಈಗ ಮತದಾನ ಮಾಡಲಿದ್ದಾರೆ. ಪೂರಕವಾಗಿ, ಯುವ ಮತದಾರರ ಸಂಖ್ಯೆಯೂ ಪ್ರತಿ ಚುನಾವಣೆಯಲ್ಲಿ ಹೆಚ್ಚುತ್ತಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕಳೆದ ಐದು ವರ್ಷಗಳಲ್ಲಿ ಯುವ ಮತದಾರರ ಸಂಖ್ಯೆ 1.30 ಕೋಟಿಯಷ್ಟು ಹೆಚ್ಚಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟ, ಅದಕ್ಕೆ ಕಾಂಗ್ರೆಸ್ ಪಕ್ಷದ ಕಾಣಿಕೆ ಇತ್ಯಾದಿ ಯಾವುದರ ನೆನಪೂ ಇಲ್ಲದ ಯುವ ಜನಾಂಗದ ಸಂಖ್ಯೆ ಹೆಚ್ಚುತ್ತಿದ್ದಂತೆ ಭಾರತದ ರಾಜಕೀಯ ಚಿತ್ರಣವೂ ಬದಲಾಗುತ್ತ ನಡೆದಿದೆ.

ಲೇಖಕರು ಭಾರತದಲ್ಲಿ ನಡೆದ ಮೊದಲ ಚುನಾವಣೆಯಿಂದ 2014ರ ಚುನಾವಣೆ ಫಲಿತಾಂಶ ಗಮನಿಸಿ ಜನಾದೇಶವನ್ನು ವಿಶ್ಲೇಷಿಸಿರುವ ರೀತಿ ಕುತೂಹಲಕರವಾಗಿದೆ. 1952-77ರ ನಡುವಿನ ಅವಧಿಯಲ್ಲಿ ಅಧಿಕಾರದಲ್ಲಿ ಇದ್ದ ಪಕ್ಷವನ್ನೇ ಜನರು ಮತ್ತೆ ಚುನಾಯಿಸಿದರು. ಇದು The Pro Incumbency Era. ಸ್ವಾತಂತ್ರ್ಯಕ್ಕೆ ಹೋರಾಡಿದ ಕಾಂಗ್ರೆಸ್ ಪಕ್ಷದ ಮೇಲೆ ಜನರು ಇಟ್ಟ ನಂಬಿಕೆಯ ಪ್ರತೀಕ ಈ ಕಾಲು ಶತಮಾನದ ಫಲಿತಾಂಶ. ಇದು ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯದ ಕಾಲಘಟ್ಟವೂ ಹೌದು. ಇದನ್ನು ‘ಆಶಾವಾದದ ಕಾಲ’ ಎಂದು ಲೇಖಕರು ಕರೆದಿದ್ದಾರೆ.

ಕುಪಿತ ಮತದಾರನ ಕಾಲಘಟ್ಟ

1977ರಲ್ಲಿ ತುರ್ತುಸ್ಥಿತಿ ರದ್ದುಪಡಿಸಿದ ನಂತರ ನಡೆದ ಲೋಕಸಭಾ ಚುನಾವಣೆಗಳನ್ನು ಆಕಾಶವಾಣಿಯಲ್ಲಿ ಪ್ರಸಾರ ಮಾಡಿದ ರೀತಿ ವಿಚಿತ್ರವಾಗಿತ್ತು. ಅದು ಆಕಾಶವಾಣಿಯ ಮೇಲೆ ಪ್ರಭುತ್ವದ ಬಿಗಿ ಹಿಡಿತವನ್ನು ತೋರಿಸುವಂತೆ ಇತ್ತು. ಮೊದಲ ನೂರು ಸೀಟುಗಳ ಫಲಿತಾಂಶ ಪ್ರಕಟವಾಗುವ ವರೆಗೆ ಆಡಳಿತ ಹಾಗೂ ವಿರೋಧ ಪಕ್ಷಗಳು ತಲಾ ಅರ್ಧದಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ ಎಂದು ಫಲಿತಾಂಶ ಪ್ರಕಟಿಸಿದ ಆಕಾಶವಾಣಿ, ವಿರೋಧ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಆರಂಭಿಸಿದಾಗ ಫಲಿತಾಂಶ ಪ್ರಕಟಣೆಯನ್ನೇ ತಡೆ ಹಿಡಿಯಿತು (ಪುಟ 16). ಆದರೆ, ‘ಭಾರತೀಯ ಮತದಾರ, ತಾನು ಸರ್ವಾಧಿಕಾರಿಗಳು ಮತ್ತು ಭ್ರಷ್ಟರು ಎನಿಸಿದ ರಾಜಕಾರಣಿಗಳ ವಿರುದ್ಧ ದಿಗ್ವಿಜಯ ಸಾಧಿಸಿದ್ದ. ಗಣ್ಯರು ಎನಿಸಿಕೊಂಡವರನ್ನು ಸಾಮಾನ್ಯ ಜನರು ಬಡಿದು ಬಿಸಾಕಿದ್ದರು. ಭಾರತದ ಪ್ರಜಾಸತ್ತೆಗೆ (ಫಲಿತಾಂಶ ಪ್ರಕಟವಾಗುತ್ತಿದ್ದ) ಆ ರಾತ್ರಿ ಅತ್ಯುತ್ತಮವಾದುದು ಎನ್ನುವುದು ನಿಸ್ಸಂಶಯ’ (ಪುಟ 19). ಹೊಸ ಮತದಾರರು ಸೇರ್ಪಡೆಯಾದ ಸಂದರ್ಭವನ್ನು ಕುಪಿತ ಮತದಾರನ ಕಾಲಘಟ್ಟ ಎಂದು ಅವರು ಅರ್ಥೈಸುತ್ತಾರೆ.

1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ತುರ್ತುಸ್ಥಿತಿಯನ್ನು ಹೇರುವ ಮೂಲಕ ಈ ಏಕಸ್ವಾಮ್ಯದ ಕಾಲಘಟ್ಟದಲ್ಲಿಯೇ ಇದ್ದ ಅತೃಪ್ತಿ ದೊಡ್ಡದಾಗಲು ಕಾರಣವಾದರು. 1977ರಿಂದ 2002ರ ವರೆಗಿನ ಕಾಲಘಟ್ಟವನ್ನು Anti -Incumbency Era (ಅಧಿಕಾರದಲ್ಲಿ ಇರುವ ಪಕ್ಷದ ಸರ್ಕಾರದ ವಿರುದ್ಧವಾಗಿ ಮತ ಹಾಕುವುದು) ಎಂದು ಗ್ರಂಥ ಕರ್ತರು ಅರ್ಥೈಸಿದ್ದಾರೆ.Anti -Incumbency ಪದವನ್ನು ಮೊದಲು ಬಳಸಿದವರು ದೋರಬ್ ಸೊಪಾರಿವಾಲ (ಪುಟ 15)! ರಾಜಕಾರಣಿಗಳು ಹಾಗೂ ಮತದಾರರ ನಡುವಣ ಮಧುಚಂದ್ರ ಮುಗಿದ ಕಾಲಘಟ್ಟವಿದು. ಮತದಾರರು ಮೊದಲ 25 ವರ್ಷಗಳ ಹಾಗೆ ಒಂದು ಪಕ್ಷದ ಅಭ್ಯರ್ಥಿಗೆ ಕಣ್ಣು ಮುಚ್ಚಿಕೊಂಡು ಮತ ಹಾಕುವ ಕಾಲ ಈಗ ಹೊರಟು ಹೋಗಿ ತ್ತು. ಈ ಅವಧಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಶೇಕಡ 94ರಷ್ಟು ರಾಜ್ಯಗಳ ಸರ್ಕಾರಗಳನ್ನು ಜನರು ಕಿತ್ತೆಸೆದರು (ಅದೇ ಪುಟ).

2002 ರಿಂದ 2019 ರ ಕಾಲಘಟ್ಟವನ್ನು The Fifty-Fifty Era ಎಂದು ಅವರು ಗುರುತಿಸಿ, ಕೆಲಸ ಮಾಡಿದ ಸರ್ಕಾರಗಳನ್ನು ಮರು ಆಯ್ಕೆ ಮಾಡಿರುವ ಮತದಾರರು ಕೆಲಸ ಮಾಡದ ಸರ್ಕಾರಗಳನ್ನು ಮನೆಗೆ ಕಳಿಸಿದ್ದಾರೆ ಎಂದಿದ್ದಾರೆ. ಇದು ರಾಜಕಾರಣಿಗಳಿಗೆ ‘ಕೆಲಸ ಮಾಡಿ ಇಲ್ಲವೇ ಮನೆಗೆ ಹೋಗಿ’ ಎಂದು ಯಾವ ಮುಲಾಜೂ ಇಲ್ಲದೇ ಹೇಳಿದ ಕಾಲಘಟ್ಟ. 2019ರ ಚುನಾವಣೆಯಲ್ಲಿ ಇದು ಆಡಳಿತ ಪಕ್ಷವನ್ನು ನಿಕಷಕ್ಕೆ ಒಡ್ಡುವಂಥ ಸನ್ನಿವೇಶ ಇತ್ತು. ಕಳೆದ ನವೆಂಬರಿನಲ್ಲಿ ಐದು ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಮತದಾರನು ಆ ಇಂಗಿತವನ್ನು ಕೊಟ್ಟಿದ್ದ. ಈಗ ಬರುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಆಡಳಿತ ಪಕ್ಷಕ್ಕೆ ದೊಡ್ಡ ಗೆಲುವಿನ ಇಂಗಿತವನ್ನು ನೀಡುತ್ತಿಲ್ಲ ಎಂಬುದು ಇದು  Fifty-Fifty Era  ಮುಂದುವರಿಕೆಯಂತೆಯೇ ಈಗ ಅನಿಸುತ್ತಿದೆ. ಫಲಿತಾಂಶ ಬಂದ ಮೇಲೆ ಮತದಾರ ಹೇಗೆ ತನ್ನ ತೀರ್ಪು ಕೊಟ್ಟ ಎಂದು ತಿಳಿಯುತ್ತದೆ.

ಪುಸ್ತಕದ ಎರಡು ಮತ್ತು ಮೂರನೇ ಭಾಗದಲ್ಲಿ ಚುನಾವಣಾ ಸಮೀಕ್ಷೆಗಳ ಬಗೆಗೆ ತುಂಬಾ ವಿವರವಾಗಿ ಬರೆದಿರುವ ಲೇಖಕರು, ಚುನಾವಣಾ ಫಲಿತಾಂಶವನ್ನು ಹೇಗೆ ಊಹಿಸುವುದು, ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಳಸಿದ ಸ್ಯಾಂಪಲ್ಲುಗಳನ್ನು ಇಟ್ಟುಕೊಂಡು ಆಯಾ ಪಕ್ಷ ಗಳಿಸಬಹುದಾದ ಸೀಟುಗಳ ಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು, ಹಾಗೆ ನೋಡಿದರೆ ಎರಡನೆಯದೇ ದೊಡ್ಡ ಸವಾಲು, ಎಂಬುದನ್ನು ಉಲ್ಲೇಖಿಸಿದ್ದಾರೆ. 1980ರ ದಶಕದಲ್ಲಿ ‘ಇಂಡಿಯಾ ಟುಡೆ’ ಪತ್ರಿಕೆಯ ಸಂಪಾದಕ ಅರುಣ್ ಪುರಿ ಅವರಿಗಾಗಿ ಪ್ರಣಯ್ ರಾಯ್ ಅವರು ಚುನಾವಣಾ ಪೂರ್ವ ಸಮೀಕ್ಷೆ ಮಾಡಲು ತೊಡಗುತ್ತಾರೆ. ಅದು ಜನರಲ್ಲಿ ತೀವ್ರ ಆಸಕ್ತಿ ಕೆರಳಿಸುತ್ತದೆ.

ಚುನಾವಣೆಗಳು ನಿಜವಾಗಿಯೂ ಪ್ರಾತಿನಿಧಿಕವೇ ಎಂಬ ಪ್ರಶ್ನೆಯನ್ನು ಪುಸ್ತಕದ ಕೊನೆಯಲ್ಲಿ ಎತ್ತುವ ಅವರು ಒಟ್ಟು ಜನಸಂಖ್ಯೆಯ ಶೇಕಡ 14 ರಷ್ಟು ಇರುವ ಮುಸ್ಲಿಂರು ತಮ್ಮ ಜನಸಂಖ್ಯೆಗೆ ತಕ್ಕ ಪ್ರಾತಿನಿಧ್ಯವನ್ನು ಪಡೆಯುತ್ತಿದ್ದಾರೆಯೇ ಎಂದು ಆ ಪ್ರಶ್ನೆಯನ್ನು ಮುಂದುವರಿಸುತ್ತಾರೆ. 1952ರಿಂದ 2014ರ ವರೆಗಿನ 16 ಲೋಕಸಭಾ ಚುನಾವಣೆಗಳನ್ನು ಗಮನಿಸಿದರೆ 1984ರ ಚುನಾವಣೆ ಹೊರತುಪಡಿಸಿದರೆ ಉಳಿದ ಎಲ್ಲ ಚುನಾವಣೆಗಳಲ್ಲಿ ಅವರ ಪ್ರಾತಿನಿಧ್ಯ ಕಡಿಮೆಯಾಗಿದೆ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಅದು ಪಾತಾಳಕ್ಕೆ ಮುಟ್ಟಿತು. ಈ ಚುನಾವಣೆಯಲ್ಲಿ ಲೋಕಸಭಾ ಸದಸ್ಯರ ಪೈಕಿ ಮುಸ್ಲಿಂ ಸಂಸದರ ಸಂಖ್ಯೆ ಶೇಕಡ 4ಕ್ಕೆ ಇಳಿಯಿತು (ಪುಟ 225). ಇದೇ ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಎನ್ನುವಂಥ ಗೆಲುವು ಸಿಕ್ಕುದಕ್ಕೂ ಮುಸ್ಲಿಂ ಸಂಸದರ  ಸಂಖ್ಯೆ ಕಡಿಮೆಯಾದುದಕ್ಕೂ ನೇರ ಸಂಬಂಧವಿದೆ. ಉತ್ತರ ಪ್ರದೇಶದಂಥ ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ರಾಜ್ಯದಲ್ಲಿ ಬಿಜೆಪಿಯು ಉಳಿದೆಲ್ಲ ಪಕ್ಷಗಳನ್ನು ಗುಡಿಸಿ ಹಾಕಿತು (ಅದೇ ಪುಟ). ಸ್ವತಂತ್ರ ಭಾರತದಲ್ಲಿ ಇದೇ ಮೊದಲ ಬಾರಿ ಉತ್ತರ ಪ್ರದೇಶದಿಂದ ಲೋಕಸಭೆಗೆ ಒಬ್ಬರೇ ಒಬ್ಬ ಮುಸ್ಲಿಂ ಅಭ್ಯರ್ಥಿಯೂ ಗೆದ್ದು ಬರಲಿಲ್ಲ (ಅದೇ ಪುಟ).

ಕಳೆದ ಲೋಕಸಭಾ ಚುನಾವಣೆ ದೇಶದ ರಾಜಕೀಯ ಸಂಕಥನದ ಮೇಲೆ ಮಾಡಿದ ಪರಿಣಾಮ ಅಗಾಧ. ‘ಮುಸ್ಲಿಂರ ಪರವಾಗಿ ನಿಂತುದಕ್ಕಾಗಿ ನಮ್ಮ ಪಕ್ಷ ಬಹಳ ದೊಡ್ಡ ಬೆಲೆ ಕೊಟ್ಟಿದೆ’ ಎಂಬ ಮಾತನ್ನು ಎಐಸಿಸಿಯ ಆಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಬಾಯಿ ಬಿಟ್ಟು ಹೇಳಿದರೆ ರಾಹುಲ್ ಗಾಂಧಿಯವರು ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಕೂಡ ಒಬ್ಬ ಹಿಂದೂ ಎಂದು ಸಾಬೀತು ಮಾಡಲು ಹೆಣಗಿದ ರೀತಿ ನಮ್ಮ ಕಣ್ಣ ಮುಂದಿನ ಇತಿಹಾಸ. ಹಾಗೆ ನೋಡಿದರೆ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿಯವರು ಕೂಡ ಮೃದು ಹಿಂದುತ್ವದ ಕಡೆಗೆ ವಾಲಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಈ ಸಾರಿಯ ಲೋಕಸಭೆ ಚುನಾವಣೆಯಲ್ಲಿ, ಕರ್ನಾಟಕದಲ್ಲಿ, ಕಾಂಗ್ರೆಸ್ ಪಕ್ಷವು ಅಳೆದೂ ಸುರಿದೂ ಒಬ್ಬ ಮುಸ್ಲಿಂ ಅಭ್ಯರ್ಥಿಗೆ ಮಾತ್ರ ಟಿಕೆಟ್ ಕೊಟ್ಟಿದೆ. ಮುಸ್ಲಿಂರ ಪ್ರಾತಿನಿಧ್ಯ ಕಡಿಮೆ ಆಗಲು ಅವರ ಜನಸಂಖ್ಯೆ ಚದುರಿ ಹೋಗಿರುವುದು, ತಮಗೆ ಅವಕಾಶ ಸಿಕ್ಕರೂ ಅದನ್ನು ಗೆಲುವಾಗಿ ಪರಿವರ್ತಿಸಿಕೊಳ್ಳಲು ಅವರಿಗೆ ಸಾಮರ್ಥ್ಯ ಇಲ್ಲದೇ ಇರುವುದು ಕೂಡ ಕಾರಣ. ‘ಒಂದೆಡೆ ಸಾಂದ್ರವಾಗಿ ಇರದ ಅಲ್ಪಸಂಖ್ಯಾತರನ್ನು ‘ಶಿಕ್ಷಿಸುವ’ ಈಗಿನ first -past-the-post ಚುನಾವಣೆ ವ್ಯವಸ್ಥೆ ಕಾರಣ (ಪುಟ 230)’ ಎಂದು ಲೇಖಕರು ವಿಶ್ಲೇಷಿಸುತ್ತಾರೆ.

ಕ್ಷಮೆ ಕೇಳಿದ ಹೆಗಡೆ

1984ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷಕ್ಕೆ ಸೋಲಾಗುತ್ತದೆ ಎಂದು ಇವರ ಸಮೀಕ್ಷೆ ಹೇಳಿದಾಗ ಆಗಿನ ಜನತಾ ಪಕ್ಷದ ಅನೇಕ ಧುರೀಣರು ಕುಪಿತರಾಗಿ ಇವರನ್ನು ಮಾತುಕತೆಗೆ ಕರೆಸುತ್ತಾರೆ. ಆ ಸಭೆಯಲ್ಲಿ ಇದ್ದ ಆಗಿನ ಕರ್ನಾಟಕ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು, ‘ನನ್ನ ಮಾತುಗಳನ್ನು ನೆನಪು ಇಟ್ಟುಕೊಳ್ಳಿ, ನಿಮ್ಮ ಜನಮತ ಸಮೀಕ್ಷೆಗಳು ರಬಿಷ್’ (ಪುಟ 86) ಎಂದಿದ್ದರು.

ಹೆಗಡೆಯವರು ಹಾಗೆ ಹೇಳಲು ಕಾರಣ ಕರ್ನಾಟಕದ 28 ಸೀಟುಗಳಲ್ಲಿ ಅವರ ಪಕ್ಷಕ್ಕೆ ಬಹಳ ಕಡಿಮೆ ಸೀಟುಗಳಲ್ಲಿ ಗೆಲುವಾಗುತ್ತದೆ ಎಂದು ಪ್ರಣಯ್ ರಾಯ್ ಸಮೀಕ್ಷೆ ಹೇಳಿತ್ತು. ಆದರೆ, ಈ ಸಮೀಕ್ಷೆಯಂತೆಯೇ ಜನತಾ ಪಕ್ಷಕ್ಕೆ ಬಹಳ ಕಡಿಮೆ ಸೀಟುಗಳಲ್ಲಿ ಗೆಲುವಾಯಿತು. ಹೆಗಡೆ ಸರ್ಕಾರ ರಾಜೀನಾಮೆ ನೀಡಬೇಕಾಯಿತು. ಪ್ರಣಯ್ ಗೆ ಕರೆ ಮಾಡಿದ ಹೆಗಡೆ ಕ್ಷಮೆ ಕೇಳಿದರು ಹಾಗೂ 1985ರ ವಿಧಾನಸಭೆ ಚುನಾವಣೆಯನ್ನು ಎದುರಿಸುವುದು ಹೇಗೆ ಎಂದು ತಮಗೆ ಸಲಹೆ ಮಾಡುವಂತೆ ಕೋರಿದರು.

ರಾಯ್ ಅವರು ಮೊದಲ ಬಾರಿಗೆ ಒಂದು ಪಕ್ಷಕ್ಕಾಗಿ ಸಮೀಕ್ಷೆ ಮಾಡಿದರು. ಸಮೀಕ್ಷೆಯಲ್ಲಿ, ಜನತಾ ಪಕ್ಷಕ್ಕೆ ಮಹಿಳೆಯರ ಬೆಂಬಲ ಕಡಿಮೆ ಇರುವುದು ಬೆಳಕಿಗೆ ಬಂತು. ಅದನ್ನು ತಿಳಿದ ಹೆಗಡೆಯವರು ಹೆಣ್ಣುಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಪ್ರಕಟಿಸಿದರು ಮತ್ತು ಎಲ್ಲ ಸಭೆಗಳಲ್ಲಿ ಮಹಿಳೆಯರನ್ನು ‘ಮುಂದೆ ಬನ್ನಿ’ ಎಂದು ಕರೆಯಲು ತೊಡಗಿದರು. ಆ ಚುನಾವಣೆಯಲ್ಲಿ ಅವರ ಪಕ್ಷಕ್ಕೆ 139 ಸೀಟುಗಳಲ್ಲಿ ಗೆಲುವು ಸಿಕ್ಕಿತು. ಅಂದಹಾಗೆ ಕರ್ನಾಟಕದ ಜನರು ಆಡಳಿತ ಪಕ್ಷವನ್ನು ಮರಳಿ ಅಧಿಕಾರಕ್ಕೆ ತಂದುದು ಇದೇ ಕಡೆ ಚುನಾವಣೆ. ನಂತರ ಅವರು ಪಕ್ಷಗಳನ್ನು ಬದಲಿಸತೊಡಗಿದರು. ಅದು anti-incumbency ಪ್ರಬಲ ಸಂಕೇತ.

ಅಲ್ಪಸಂಖ್ಯಾತರಿಗೆ ಆದ ಅನ್ಯಾಯ ಮಹಿಳೆಯರಿಗೂ ಆಗಿದೆ. ಎಲ್ಲ ಪಕ್ಷಗಳು ಕೂಡಿ ಮಾಡಿದ ಹುನ್ನಾರ ಎನಿಸುವಂತೆ 1952ರಲ್ಲಿ ಲೋಕಸಭೆಯಲ್ಲಿ ಶೇಕಡ 5 ರಷ್ಟು ಮಾತ್ರ ಇದ್ದ ಸಂಸದೆಯರ ಸಂಖ್ಯೆ ಈಗ ಶೇ 10ಕ್ಕೆ ಏರಿದೆ. ಪುರುಷ ಸಂಸದರ ಸಂಖ್ಯೆ ಶೇಕಡ 90 ರಷ್ಟು ಅಥವಾ ಅದಕ್ಕಿಂತ ಹೆಚ್ಚು ಹಾಗೆಯೇ ಉಳಿದುಕೊಂಡಿದೆ. ‘ಗೆಲುವಿನ ಪ್ರಮಾಣದಲ್ಲಿ ಪುರುಷರಿಗಿಂತ ಹೆಣ್ಣು ಮಕ್ಕಳ ಪ್ರಮಾಣ ಹೆಚ್ಚು ಇದ್ದಾಗಲೂ ಅವರಿಗೆ ಕೊಡುತ್ತಿರುವ ಪ್ರಾತಿನಿಧ್ಯ ಕಡಿಮೆ ಆಗುತ್ತಿರುವುದು ಈ ದೇಶಕ್ಕೆ ನಾಚಿಕೆಯ ಸಂಗತಿ’ (ಪುಟ 237). ಈ ಕೃತಿ ಎತ್ತಿ ಹೇಳುವ ಮೂರನೇ ಮುಖ್ಯ ವಿಪರ್ಯಾಸ ಎಂದರೆ ಮತದಾರರಲ್ಲಿ ಒಂದು ಕಡೆ ಯುವಕರ ಸಂಖ್ಯೆ ಹೆಚ್ಚುತ್ತಿದ್ದರೆ (ಶೇ 60) ಇನ್ನೊಂದು ಕಡೆ ಸಂಸತ್ತಿನಲ್ಲಿ ವೃದ್ಧರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ‘ಮೊದಲ ಚುನಾವಣೆಯಲ್ಲಿ ನಮ್ಮ ಸಂಸದರ ಸರಾಸರಿ ವಯಸ್ಸು 47 ಆಗಿದ್ದರೆ ಈಗಿನ ಸಂಸದರ ವಯಸ್ಸು 60ರ ಆಸುಪಾಸು’ (ಪುಟ 243).

ಅನೇಕ ವರ್ಷಗಳ ಸತತ ಶ್ರಮ ಹಾಗೂ ಅಧ್ಯಯನದಿಂದ ಮಾತ್ರ ಇಂಥ ಕೃತಿ ರೂಪುಗೊಳ್ಳಲು ಸಾಧ್ಯ. ಚುನಾವಣಾ ಸಮೀಕ್ಷೆ ಪ್ರಣಯ್ ರಾಯ್ ಅವರ ತೀವ್ರ ಆಸಕ್ತಿಯ ಕ್ಷೇತ್ರ. ಹೀಗಾಗಿ ಅದಕ್ಕೆ ಕೃತಿಯಲ್ಲಿ ಹೆಚ್ಚಿನ ಒತ್ತು ಸಿಕ್ಕಿರುವುದು ಎದ್ದು ಕಾಣುತ್ತದೆ. ಭಾರತದ ಚುನಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಕೈಪಿಡಿ ಈಚಿನ ವರ್ಷಗಳಲ್ಲಿ ಮತ್ತೊಂದು ಬಂದಿಲ್ಲ. ಅನೇಕ ಚುನಾವಣೆಗಳ ಅಂಕಿ ಅಂಶಗಳನ್ನು ಇಟ್ಟುಕೊಂಡು ಫಲಿತಾಂಶದ ಗತಿಯನ್ನು ವಿಶ್ಲೇಷಿಸಲು ಹಲವರ ಶ್ರಮ ಒಗ್ಗೂಡಬೇಕಾಗುತ್ತದೆ. ಪುಸ್ತಕದ ಕೊನೆಯಲ್ಲಿ ಸಲ್ಲಿಸಿರುವ ಉಪಕಾರ ಸ್ಮರಣೆ (acknowledgement) ಈ ಕೃತಿ ಈ ರೀತಿ ರೂಪುಗೊಳ್ಳಲು ಯಾರೆಲ್ಲ ಕೈಜೋಡಿಸಿದ್ದಾರೆ ಎಂಬುದನ್ನು ತಿಳಿಸುತ್ತದೆ. ನಿಜವಾಗಿಯೂ Psephologist ಆಗುವುದು ಅಷ್ಟು ಸುಲಭವಲ್ಲ.

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕರು. ನಾಲ್ಕನೇ ಆಯಾಮ (ಆರು ಸಂಪುಟಗಳು), ಹೆಜ್ಜೆ ಮೂಡಿಸಿದ ಹಾದಿ, ಚೌಕಟ್ಟಿನಾಚೆ, ಅವಲೋಕನ, ಆರಂಭ, ಗೊಮ್ಮಟ, ಪತ್ರಿಕಾ ಭಾಷೆ, ರಿಪೋರ್ಟಿಂಗ್, ಮಾಧ್ಯಮ ಮಾರ್ಗ ಮತ್ತು ಸುರಂಗದ ಕತ್ತಲೆ… ಅವರ ಪ್ರಕಟಿತ ಕೃತಿಗಳು.

Leave a Reply

Your email address will not be published.