ದೀರ್ಘಾವಧಿಯಲ್ಲೂ ಖರೀದಿಗೆ ಪೂರಕ ಇ-ಕಾಮರ್ಸ್

ಇ-ಕಾಮರ್ಸ್ ಈಗಾಗಲೇ ನಮ್ಮ ಮೂಲ ಅಗತ್ಯವಾಗಿದೆ. ದಿನಗಳೆದಂತೆ ಇ-ಕಾಮರ್ಸ್ ಇಡೀ ಸಾಂಪ್ರಾದಾಯಿಕ ಮಾರಾಟ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ, ನಮ್ಮ ಮುಂದೆ ಹೊಸ ಹೊಸ ಪ್ರಪಂಚಗಳನ್ನು ತೆರೆಯುತ್ತ ತನ್ನ ದಂಡಯಾತ್ರೆಯನ್ನು ಮುಂದುವರೆಸಲಿದೆ.

 

 

ಜ್ಯಾಕ್ ಮಾ ಹೇಳಿದ್ದು

1995ರಲ್ಲಿ ಅಮೆeಜಾನ್ ಪ್ರಾರಂಭವಾದಾಗ ಅದರ ಮೊದಲ ಮಾರಾಟ ಒಂದು ಪುಸ್ತಕವಾಗಿತ್ತು. ಕಳೆದ 25 ವರ್ಷಗಳಲ್ಲಿ ಇ-ಕಾಮರ್ಸ್ ಯಾವ ಪರಿ ಬೆಳೆದಿದೆಯೆಂದರೇ, ಕೋಟ್ಯಂತರ ರೂಪಾಯಿ ಮೌಲ್ಯದ ಯಂತ್ರಗಳನ್ನು ಈಗ ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಆಲಿಬಾಬಾ ಇ-ಕಾಮರ್ಸ್ ಸಂಸ್ಥೆಯ ಸಹ ಸಂಸ್ಥಾಪಕ ಜ್ಯಾಕ್ ಮಾ 2015 ರಲ್ಲಿ ದಾವೋಸ್‌ನಲ್ಲಿ  ಮಾತನಾಡುತ್ತ  “ಇನ್ನು 15 ವರ್ಷಗಳ ನಂತರ ಜನ ಇ-ಕಾಮರ್ಸ್ ಪದವನ್ನು ಮರೆಯುತ್ತಾರೆ ಎಂದು ನನಗೆ ನಂಬಿಕೆಯಿದೆ. ಏಕೆಂದೆರೆ ಅದು ವಿದ್ಯುತ್ ಎಂಬಂತೆ ಯೋಚಿಸುತ್ತಾರೆ,” ಎಂದು ಹೇಳಿದ್ದರು. ಅವರ ಮಾತಿನ ಅರ್ಥ ವಿದ್ಯುತ್ ಹಾಗೂ ನೀರಿನಂತೆ ಇ-ಕಾಮರ್ಸ್ ಕೂಡ ಅತ್ಯಗತ್ಯ ವಸ್ತುವಾಗುತ್ತದೆ ಎಂಬುದಾಗಿತ್ತು. ಆದರೆ ಇ-ಕಾಮಸ್ ನ ಸದ್ಯದ ಬೆಳವಣಿಗೆ ನೋಡಿದರೆ ಆ ಘಟ್ಟ ತಲುಪಲು ಅವರು ಹೇಳಿದಷ್ಟು ಸಮಯದ ಅಗತ್ಯವಿಲ್ಲವೆಂದನಿಸುತ್ತದೆ. ಈಗಾಗಲೇ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಇ-ಕಾಮರ್ಸ್ ವಿದ್ಯುತ್ ಹಾಗೂ ನೀರಿನಷ್ಟೇ ಅತ್ಯಗತ್ಯವಾಗಿದೆ. ಇ-ಕಾಮರ್ಸ್ ವಲಯದ ನಾಗಾಲೋಟಕ್ಕೆ ಈ ವರ್ಷ ಕೋವಿಡ್19 ವೇಗವರ್ಧಕವಾಗಿದೆ.

 

ದೈತ್ಯ ಸಂಸ್ಥೆಗಳಲ್ಲಿ ಏರುಪೇರು

ನಮ್ಮ ಕಣ್ಣಿಗೂ ಕಾಣದ ವೈರಾಣುವೊಂದು ನಮಗೆ ದುಃಸ್ವಪ್ನವಾಗುವುದೆಂಬ ಹಾಗೂ ನಾವು ಶಾಪಿಂಗ್ ಮಾಡುವ ರೀತಿಗೆ ಹೊಸ ದಿಕ್ಸೂಚಿ ನೀಡಬಹುದೆಂಬ ಕನಸು ಯಾರಿಗೆ ಬಿದ್ದಿರಲು ಸಾಧ್ಯ? ಕಳೆದ ಹಣಕಾಸಿನ ವರ್ಷದ ಮೊದಲ ತ್ರೆöÊಮಾಸಿಕದಲ್ಲಿ 35.8 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ಮಾರಾಟ ವಹಿವಾಟು ನಡೆಸಿದ್ದ ಜಗತ್ತಿನ ದೈತ್ಯ ಇ-ಕಾಮರ್ಸ್ ಕಂಪನಿಯಾದ ಅಮೆಜಾನ್ ಕಂಪನಿಯ ವಹಿವಾಟು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 46 ಬಿಲಿಯನ್ ಯುಎಸ್ ಡಾಲರ್‌ಗಳಿಗೆ ಏರಿದೆ. ಆದರೆ ಕೋವಿಡ್19ಗೆ ಸಂಬಂಧಿಸಿದಂತೆ ಆಗಿರುವ ವೆಚ್ಚಗಳಿಂದ ನಷ್ಟವೂ ಸಹ ಹೆಚ್ಚಾಗಿದೆ ಎಂದು ಅಮೆಜಾನ್ ಸಂಸ್ಥೆ ಹೇಳಿಕೆ ನೀಡಿದೆ. “ಇದು ವೈಯಕ್ತಿಕ ಸುರಕ್ಷಾ ಕವಚಗಳ ಮೇಲಿನ ಹೂಡಿಕೆ, ಸಂಸ್ಥೆಯ ಸೌಕರ್ಯಗಳನ್ನು ಸ್ವಚ್ಛವಾಗಿಡುವುದಕ್ಕೆ, ಹೆಚ್ಚು ಕೂಲಿ ನೀಡುವುದಕ್ಕಾಗಿ ಹಾಗೂ ನಮ್ಮದೇ ಸ್ವಂತ ಕೋವಿಡ್19 ಪರೀಕ್ಷೆ ಸಾಮರ್ಥ್ಯಗಳನ್ನು ಅಭಿವೃದ್ಧಿ ಮಾಡಲು ಖರ್ಚು ಮಾಡಿರುವ ನೂರಾರು ಮಿಲಿಯನ್ ಡಾಲರ್‌ಗಳನ್ನು ಒಳಗೊಂಡಿದೆ,” ಎಂದು ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಹೇಳುತ್ತಾರೆ.

ಕೋವಿಡ್19ಗೆ ಸಂಬಂಧಿಸಿದಂತೆ ಅಮೆಜಾನ್ ವೆಚ್ಚ ಮಾಡಿರುವ 4 ಬಿಲಿಯನ್ ಯುಎಸ್ ಡಾಲರ್‌ಗಳು ಅದರ ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಪೂರ್ಣ ಲಾಭಕ್ಕೆ ಸಮನಾಗಿರುತ್ತದೆ. ಈ ಸುದ್ದಿ ಕೇಳುತ್ತಿದ್ದಂತೆ ಅಮೆಜಾನ್ ಶೇರುಗಳಲ್ಲಿ ಕುಸಿತವಾಗಿದೆ. ಅದರೆ ಕಡೆಯ ನಗು ಜೆಫ್ ಬೆಜೋಸ್ ಅವರದಾಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಸಾಮಾನ್ಯ ಗ್ರಾಹಕನ ಹಾಗೂ ಇ-ಕಾಮರ್ಸ್ ನಡುವಿನ ಬೆಸುಗೆಯನ್ನು ಕೋವಿಡ್19 ಮತ್ತಷ್ಟು ಗಟ್ಟಿಗೊಳಿಸಿದೆ ಎಂಬ ವಾದಕ್ಕೆ ಸರ್ವಸಮ್ಮತಿಯಿದೆ.

ಕೋವಿಡ್19 ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಇತರೇ ಇ-ಕಾಮರ್ಸ್ ಸಂಸ್ಥೆಗಳಿಗೆ ಅಮೆಜಾನ್ ಸಂಸ್ಥೆಯ ಬೆಳವಣಿಗೆಗೆ ಸಮನಾಗಿ ನಿಲ್ಲಲು ಸಾಧ್ಯವಾಗಿಲ್ಲ. ಭಾರತ ಮೂಲದ ಫ್ಲಿಪ್‌ಕಾರ್ಟ್ ನ ಪೋಷಕ ಸಂಸ್ಥೆಯಾದ ವಾಲ್‌ಮಾರ್ಟ್ ಸಂಸ್ಥೆ ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ತನ್ನ ಆದಾಯದಲ್ಲಿ ಶೇ.9.2 ರಷ್ಟು ಹೆಚ್ಚಳ ಸಾಧಿಸುತ್ತಿದೆ. ಆದರೆ ಕೋವಿಡ್19 ಲಾಕ್‌ಡೌನ್ ಸಂದರ್ಭದಲ್ಲಿ ಭಾರತದಲ್ಲಿ ಹೇರಿದ್ದ ನಿರ್ಬಂಧಗಳು ಫ್ಲಿಪ್‌ಕಾರ್ಟ್ ಮೇಲೆ ಬೀರಿದ ಪ್ರತಿಕೂಲ ಪರಿಣಾಮದ ಫಲವಾಗಿ ತನ್ನ ಲಾಭಕ್ಕೆ ಹೊಡೆತ ಬಿದ್ದಿದೆ ಎಂದು ವಾಲ್‌ಮಾರ್ಟ್ ಸಂಸ್ಥೆ ಹೇಳಿಕೆ ನೀಡಿದೆ.

ಪ್ರಪಂಚದ ಮತ್ತೊಂದು ದೈತ್ಯ ಇ-ಕಾಮರ್ಸ್ ಸಂಸ್ಥೆ ಚೈನಾ ಮೂಲದ ಆಲಿಬಾಬ ಗ್ರೂಪ್ ಹೋಲ್ಡಿಂಗ್ ಲಿ. ತನ್ನ ಈ ವರ್ಷದ ಬೆಳವಣಿಗೆ ಕುಂಠಿತವಾಗಲಿದೆ ಎಂದು ಈಗಾಗಲೇ ಹೇಳಿಕೆ ನೀಡಿದೆ. ಅದರ ಶೇರುಗಳ ಮೌಲ್ಯ ಶೇ 4 ರಷ್ಟು ಕುಸಿದಿದೆ. ಈ ವರ್ಷದಲ್ಲಿ  ಶೇಕಡ 35 ರಷ್ಟು ಬೆಳೆಯುವುದಾಗಿ ಹೇಳಿದ್ದ  ಆಲಿಬಾಬ ಸಂಸ್ಥೆ  ಈಗ ಶೇಕಡ 27.5 ರಷ್ಟು ಬೆಳೆಯುವುದಾಗಿ ಹೇಳುತ್ತಿದೆ. ಚೀನಾ ಇನ್ನೂ ಕೋವಿಡ್19 ಅನ್ನು ಸಂಪೂರ್ಣವಾಗಿ ಹೊರಹಾಕಲು ಸಾಧ್ಯವಾಗಿಲ್ಲ. ಸ್ಪಷ್ಟ ಚಿತ್ರಣ ದೊರಕುವವರೆಗೂ ಈ ಸಂಸ್ಥೆಗಳ ಮೌಲ್ಯದಲ್ಲಿ ಹೆಚ್ಚಿನ ಏರುಪೇರುಗಳಿತ್ತವೆ.

ಇವು ಕೆಲವೊಂದು ಕಂಪನಿಗಳ ಅಂತರಿಕ ಏರುಪೇರುಗಳ ಚಿತ್ರಣ. ಕೆಲವು ಇ-ಕಾಮರ್ಸ್ ಕಂಪನಿಗಳ ವಹಿವಾಟಿನಲ್ಲಿ ಹೆಚ್ಚಳವಾಗಿದ್ದರೆ, ಕೆಲವು ಕಂಪನಿಗಳ ವಹಿವಾಟಿನಲ್ಲಿ ಇಳಿಮುಖವಾಗಿದೆ. ಆದರೆ ಒಟ್ಟಾರೆಯಾಗಿ ಇ-ಕಾಮರ್ಸ್ ವಲಯದ ಬೆಳವಣಿಗೆಗೆ ಕೋವಿಡ್19 ಬೂಸ್ಟರ್ ಡೋಸ್ ನೀಡಿದೆ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.

 

ಕೋವಿಡ್-19 ಬೂಸ್ಟರ್ ಡೋಸ್

ಕೋವಿಡ್19 ಪಿಡುಗಿಗೂ ಮುನ್ನ, ಜಾಗತಿಕ ಇ-ಕಾಮರ್ಸ್ ಮಾರ್ಕೆಟ್‌ನ 2020ರ ಗುರಿ 2,405 ಬಿಲಿಯನ್ ಯುಎಸ್ ಡಾಲರ್‌ಗಳಾಗಿತ್ತು. ಅಗತ್ಯ ವಸ್ತುಗಳಾದ ಆಹಾರ, ಔಷಧಿ, ಹ್ಯಾಂಡ್ ಸ್ಯಾನಿಟೈಸರ್, ಸೋಂಕುನಿವಾರಕಗಳು, ಇತ್ಯಾದಿಗಳಿಗೆ ಗಮನಾರ್ಹವಾಗಿ ಹೆಚ್ಚಾದ ಬೇಡಿಕೆಯಿಂದ ಹಾಗೂ ಲಾಕ್‌ಡೌನ್ ಕಾರಣದಿಂದ ಇ-ಕಾಮರ್ಸ್ ವಲಯವು ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದು ಸ್ಥಿರವಾಗಿ ವಾರ್ಷಿಕ ಸಂಯುಕ್ತ ಬೆಳವಣಿಗೆ ದರ ಶೇಕಡ 14 ಸಾಧಿಸಿ 2023ರ ವೇಳೆಗೆ 3,056 ಬಿಲಿಯನ್ ಯುಎಸ್ ಡಾಲರ್‌ಗಳ ವಹಿವಾಟು ಗಾತ್ರ ತಲುಪಲಿದೆ.

ಸ್ವಲ್ಪಮಟ್ಟಿಗೆ ಕೋವಿಡ್ ಪರಿಣಾಮ ಹಾಗೂ ಬದಲಾಗುತ್ತಿರುವ ಗ್ರಾಹಕ ವರ್ತನೆ ಹಾಗೂ ಜೀವನಶೈಲಿಯಿಂದ ಆನ್‌ಲೈನ್ ಶಾಪಿಂಗ್‌ಗೆ ದೀರ್ಘಾವಧಿಯಲ್ಲಿ ಪೂರಕ ವಾತಾವರಣ ಸೃಷ್ಟಿಯಾಗಲಿದೆ. ಗ್ಲೋಬಲ್‌ಡೇಟಾ ಎಂಬ ಸಂಸ್ಥೆ ಪ್ರಕಟಿಸಿರುವ ಸಂಶೋಧನಾ ವರದಿಯ ಪ್ರಕಾರ ಮೊದಲು ಇ-ಕಾಮರ್ಸ್ ಬಗ್ಗೆ ಸಂದೇಹಗಳನಿಟ್ಟುಕೊಂಡಿದ್ದ, ಆದರೆ ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಶಾಪಿಂಗ್‌ಗೆ ಮೊರೆಹೋಗಿದ್ದ ಗ್ರಾಹಕರು ಲಾಕ್‌ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿದ ನಂತರವೂ ಆನ್‌ಲೈನ್ ಶಾಪಿಂಗ್ ಮುಂದುವರೆಸಲಿದ್ದಾರೆ.

‘ಇ-ಕಾಮರ್ಸ್ ಮೇಲೆ ಕೋವಿಡ್19 ಪರಿಣಾಮ’ ಎಂಬ ಶೀರ್ಷಿಕೆಯ ಈ ಸಂಶೋಧನಾ ವರದಿಯ ಪ್ರಕಾರ ದಿನಸಿ ವಲಯದ ಮೇಲೆ ಈ ಪರಿಣಾಮ ಹೆಚ್ಚಾಗಲಿದೆ. ಬೇರೆಲ್ಲಾ ವಲಯಗಳಿಗೆ ಹೋಲಿಸಿದರೆ ದಿನಸಿ ವಲಯದಲ್ಲಿ ಆನ್‌ಲೈನ್ ಶಾಪಿಂಗ್ ಪ್ರಸ್ತುತ ಕಡಿಮೆಯೇ ಇದೆ ಎಂದು ಹೇಳಬಹುದು. ಕೋವಿಡ್19 ಪರಿಣಾಮದಿಂದ ದಿನಸಿಗಾಗಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದೆ ಹಾಗೂ ಹೆಚ್ಚಾಗಲಿದೆ. ಕೋವಿಡ್19 ಬಿಕ್ಕಟ್ಟಿನ ಆರಂಭದ ಸಂದರ್ಭದಲ್ಲಿ ಇ-ಕಾಮರ್ಸ್ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿ ಸೂಪರ್‌ಮಾರ್ಕೆಟ್‌ಗಳು ಹೋಮ್ ಡಿಲಿವರಿ ಸೇವೆಗಳನ್ನು ಪೂರೈಸಲು ಹೆಣಗಾಡುತ್ತಿದ್ದವು. ಗ್ಲೋಬಲ್‌ಡೇಟಾ ಸಂಸ್ಥೆಯ ವಿಶ್ಲೇಷಕ ಲ್ಯೂಕ್ ಗ್ಲೋವ್‌ಲ್ಯಾಂಡ್, “ಕೋವಿಡ್19 ಇ-ಕಾಮರ್ಸ್ ವಲಯವನ್ನು ಇನ್ನಷ್ಟು ಮೇಲೆತ್ತಲು ಸಹಕಾರಿಯಾಗಿದೆ. ಅದರಲ್ಲೂ, ದಿನಸಿ ಬಿಡಿ ವರ್ತಕರು ಮುಖ್ಯ ಫಲಾನುಭವಿಗಳಾಗಿದ್ದಾರೆ. ಸೂಪರ್ ಮಾರ್ಕೆಟ್‌ಗಳ ಸೇವೆಗಳಿಗೆ ಹಿಂದೆಂದೂ ಇಲ್ಲದ ಬೇಡಿಕೆಯಿದೆ. ಈ ವಲಯ 2020ರಲ್ಲಿ ಶೇಕಡ 20ರ ಬೆಳವಣಿಗೆ ಸಾಧಿಸಿ 13.2 ಬಿಲಿಯನ್ ಯುಎಸ್ ಡಾಲರ್‌ಗಳ ವಹಿವಾಟು ಹೊಂದಲಿದೆ” ಎಂದು ಹೇಳುತ್ತಾರೆ.

2027ಕ್ಕೆ 15 ಟ್ರಿಲಿಯನ್ ವಹಿವಾಟು

ಭಾರತದಲ್ಲಿ 2019 ಹಾಗೂ 2023ರ ಅವಧಿಯಲ್ಲಿ ಇ-ಕಾಮರ್ಸ್ ವಲಯದ ಸಂಯುಕ್ತ ವಾರ್ಷಿಕ ಬೆಳವಣೆಗೆ ದರ 19.6% ಆಗಲಿದೆ. ಹಾಗೂ ಇ-ಕಾಮರ್ಸ್ ಪಾವತಿಗಳು 2020ರಲ್ಲಿ ಕೋವಿಡ್19 ಕಾರಣದಿಂದ ಶೇ 25.9 ರಷ್ಟು ಹೆಚ್ಚಾಗಲಿದೆ. ಆನ್‌ಲೈನ್ ಪಾವತಿ ಪರಿಹಾರ ನೀಡುವ ಸಂಸ್ಥೆಗಳಾದ ಪೇಟಿಎಮ್, ಫೋನ್‌ಪೇ, ಅಮೆಜಾನ್ ಪೇ ಹಾಗೂ ಪೇಪಾಲ್ ಸಂಸ್ಥೆಗಳು ಸಹ ಕೋವಿಡ್19 ಬಿಕ್ಕಟ್ಟಿನ ಸಂದರ್ಭದಲ್ಲಿ ಲಾಭ ಪಡೆದಿರುವ ಸಂಸ್ಥೆಗಳಾಗಿವೆ. ಗ್ಲೋಬಲ್ ಡೇಟಾ ಸಂಸ್ಥೆಯ ಪ್ರಕಾರ ಕೋವಿಡ್19 ಪಿಡುಗು ಭಾರತದಲ್ಲಿ 2023ರ ವೇಳೆಗೆ ಇ-ಕಾಮರ್ಸ್ ವಲಯದ ಒಟ್ಟು ವಹಿವಾಟು ಏಳು ಟ್ರಿಲಿಯನ್ ರೂಪಾಯಿಗಳಿಗೆ (ಏಳು ಲಕ್ಷ ಕೋಟಿ) ಹೆಚ್ಚಿಸಲು ಕಾರಣವಾಗಲಿದೆ. ಕೆಲವು ಮುನ್ಸೂಚನೆಗಳ ಪ್ರಕಾರ ಭಾರತದ ಇ-ಕಾಮರ್ಸ್ ವಲಯದ ಒಟ್ಟು ವಹಿವಾಟು 2027ರ ವೇಳೆಗೆ 200 ಬಿಲಿಯನ್ ಯುಎಸ್ ಡಾಲರ್‌ಗಳು ಅಥವಾ 15 ಟ್ರಿಲಿಯನ್ ರೂಪಾಯಿಗಳಾಗಿರುತ್ತವೆ (15 ಲಕ್ಷ ಕೋಟಿ ರೂ.).

ಮುಖೇಶ್ ಅಂಬಾನಿಯ ಜಿಯೋ ಸಂಸ್ಥೆ ಸಹ ಭಾರತದಲ್ಲಿ ಇ-ಕಾಮರ್ಸ್ ಬೆಳವಣಿಗೆಗೆ ತನ್ನ ಕೊಡುಗೆ ನೀಡಲು ಸನ್ನದ್ಧವಾಗುತ್ತಿದೆ. ಈಗಾಗಲೇ ಸುಮಾರು 400 ಮಿಲಿಯನ್ ಚಂದಾದಾರರನ್ನು ಹೊಂದಿರುವ (ಭಾರತ ಜನಸಂಖ್ಯೆಯ ಶೇಕಡ 30 ರಷ್ಟು) ಜಿಯೋ ಸಂಸ್ಥೆ ಈ ಚಂದಾದಾರರಿಗೆ ದಿನಸಿ ಶಾಪಿಂಗ್, ಡಿಜಿಟಲ್ ಪಾವತಿ ಹಾಗೂ ವಿಡೀಯೋ ಸ್ಟ್ರೀಮಿಂಗ್ ಇತ್ಯಾದಿ ಸೇವೆಗಳನ್ನು ನೀಡುತ್ತಿದೆ. ವಿಶ್ಲೇಷಕರ ಪ್ರಕಾರ ಅಂಬಾನಿಯ ಆಕಾಂಕ್ಷೆ ಮುಂದಿನ ಜಾಗತಿಕ ತಂತ್ರಜ್ಞಾನ ಕಂಪನಿ ನಿರ್ಮಿಸಿ ಗೂಗಲ್, ಟೆನ್ಸೆಟ್, ಅಮೆಜಾನ್ ಹಾಗೂ ಆಲಿಬಾಬದಂತಹ ಕಂಪನಿಗಳಿಗೆ ಸ್ಪರ್ಧೆ ನೀಡುವುದಾಗಿದೆ.

ಚಿಲ್ಲರೆ ವ್ಯಾಪಾರದಲ್ಲಿ ಸಂಚಲನ

ಕಿರಾಣಿ ಅಂಗಡಿಗಳಲ್ಲಿ ಕೋವಿಡ್19 ಭಾರಿ ಸಂಚಲನ ಮೂಡಿಸಿದೆ. ಡಿಜಿಟಲ್ ಆಗಬೇಕೆ ಇಲ್ಲವೇ ಎಂದು ತೊಯ್ದಾಡುತ್ತಿದ್ದ ಅವರ ಮನಸ್ಸುಗಳಿಗೆ ಸ್ಪಷ್ಟ ಸಂದೇಶ ಸಿಕ್ಕಿದೆ. ಈ ಅಂಗಡಿಗಳು ಇ-ಕಾಮರ್ಸ್ ಮಾದರಿಗಳಿಗೆ ಮೊರೆ ಹೋಗಿದ್ದು ತಮ್ಮ ಅಂಗಡಿಯ ಸುತ್ತಲಿನ ಹಲವು ಕಿಲೊಮೀಟರ್‌ಗಳಷ್ಟು ದೂರದವರೆಗೆ ವಿಲೇವಾರಿ ಆರಂಭಿಸಿದ್ದಾರೆ. ನೈರ್ಮಲ್ಯೀಕರಣಕ್ಕೆ ಸಹ ಆದ್ಯತೆ ಸಿಕ್ಕಿದ್ದು, ಈ ಬದಲಾವಣೆಯಿಂದ ಕಿರಾಣಿ ಅಂಗಡಿ ಮಾಲೀಕರು ಹಾಗೂ ಗ್ರಾಹಕರು ಇಬ್ಬರಿಗೂ ಪ್ರಯೋಜನವಾಗಿದೆ.

ಕೋವಿಡ್19 ಬಿಕ್ಕಟ್ಟಿನ ಪರಿಣಾಮ, ವಿಶ್ಲೇಷಕರ ಪ್ರಕಾರ, ಕೆಲವೊಂದು ಚಿಲ್ಲರೆ ವ್ಯಾಪಾರಿ ಕ್ಷೇತ್ರಗಳಲ್ಲಿ ಆನ್‌ಲೈನ್ ಮಾರಾಟ ಕಡಿಮೆಯಾಗಿದೆ. ಆದರೆ ಇ-ಕಾಮರ್ಸ್ ಮೂಲಕವೇ ಈ ಕುಸಿದಿರುವ ಕ್ಷೇತ್ರಗಳನ್ನು ಮೇಲಕ್ಕೆತ್ತಿ ನಿಲ್ಲಿಸಬೇಕಾಗುತ್ತದೆ. ಗ್ಲೋವ್‌ಲ್ಯಾಂಡ್ ಮುಂದುವರೆದು ಹೇಳುತ್ತಾರೆ, “ಕಂಪನಿಗಳು ಸರಬರಾಜು ಸರಪಣಿಯ ಮೇಲೆ ಹಾಗೂ ಹೇಗೆ ಕ್ಲೌಡ್, 5ಜಿ, ದಿ ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್‌ಚೈನ್ ಇತ್ಯಾದಿ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಕ್ಷಮತೆ ಮತ್ತು ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ನಿಗಾ ಇಡಬೇಕಾಗುತ್ತದೆ. ಕಡೆಯದಾಗಿ, ಇ-ಕಾಮರ್ಸ್ ಕೋವಿಡ್-19 ನಿಂದ ಪ್ರಯೋಜನ ಪಡೆಯುತ್ತದೆ ಹಾಗೂ ಎಲ್ಲಾ ಕಡೆ ಲಾಕ್‌ಡೌನ್ ನಿರ್ಬಂಧಗಳು ಕಡಿಮೆಯಾಗುತ್ತಿದ್ದಂತೆ ತನ್ನ ಚಲನಗತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ.

ಜೀವನಶೈಲಿಯಲ್ಲಿ ಬದಲಾವಣೆ

ಕೋವಿಡ್19 ಪಿಡುಗು ವಿಶ್ವವನ್ನು ಹಿಂದೆAದೂ ಕಂಡರಿಯದ ಆರೋಗ್ಯ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿರುವುದು ಮಾತ್ರವಲ್ಲದೇ, ನಮ್ಮ ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಬದಲಾವಣೆ ದೀರ್ಘಾವಧಿಯಲ್ಲಿ ಸಹ ಮುಂದುವರೆಯುತ್ತದೆಯೇ ಎಂಬುದು ಪ್ರಶ್ನೆಯಾಗಿದೆ. ಕೋವಿಡ್19 ಪಿಡುಗಿನ ಪ್ರಸ್ತುತ ಸಂದರ್ಭದಲ್ಲಿ ನಾವು ಶಾಪಿಂಗ್ ಅನ್ನು ಸುರಕ್ಷಿತವಾಗಿ ಮನೆಯಿಂದ ಹೊರಗೆ ಬರದೇ ಮಾಡಲು ಬಯಸುವ ನಮ್ಮ ಅಗತ್ಯವನ್ನು ಇ-ಕಾಮರ್ಸ್ ಯಶಸ್ವಿಯಾಗಿ ಪೂರೈಸುತ್ತಿದೆ. ಇ-ಕಾಮರ್ಸ್ ವಲಯ ಜಾಗತಿಕ ಮಟ್ಟದಲ್ಲಿ ಅತೀ ವೇಗದಲ್ಲಿ ಬೆಳೆಯುತ್ತಿರುವುದು ಮಾತ್ರವಲ್ಲದೇ ಭಾರತದಲ್ಲಿ ಸಹ ಭದ್ರವಾಗಿ ತಳವೂರುತ್ತಿದೆ. ಹಿಂದೆ ಆನ್‌ಲೈನ್ ಅಂದರೆ ಮೂಗುಮುರಿಯುತ್ತಿದ್ದ ಗ್ರಾಹಕ ವರ್ಗ ಸಹ ಇ-ಕಾಮರ್ಸ್ ನ ಪ್ರಯೋಜನಗಳ ರುಚಿ ಅನುಭವಿಸಿರುವುದು ಆನ್‌ಲೈನ್ ಶಾಪಿಂಗ್ ಗ್ರಾಹಕರ ಸಂಖ್ಯೆ ಹೆಚ್ಚಾಗಲೂ ಪುಷ್ಟಿ ನೀಡಿದೆ.

ದೊಡ್ಡ ಪದ ‘ಪರಿವರ್ತನೆ’

ಆದರೆ ಇ-ಕಾಮರ್ಸ್ ಈಗಾಗಲೇ ಶೀಘ್ರವಾಗಿ ಬೆಳೆಯುತ್ತಿದ್ದ ವಲಯವಾಗಿದ್ದು, ಕೋವಿಡ್-19 ನಿಂದ ಅದರ ಮೇಲಾಗಿರುವ ಪ್ರಭಾವ ತಾತ್ಕಾಲಿಕವಾದದ್ದು ಹಾಗೂ ಇ-ಕಾಮರ್ಸ್ ವಲಯದ ಸ್ವಾಭಾವಿಕ ಬೆಳವಣಿಗೆಯೇ ಎರಡಂಕಿಗಳಲ್ಲಿದ್ದು ಅದು ತನ್ನ ಬೆಳವಣಿಗೆಗೆ ಕೋವಿಡ್-19 ಅಥವಾ ಲಾಕ್‌ಡೌನ್ ಅನ್ನು ಅವಲಂಬಿಸಬೇಕಾಗಿಲ್ಲ ಎಂದು ವಾದಿಸುವವರೂ ಇದ್ದಾರೆ. ಆದರೆ, ಈ ಹಿಂದೆ ಇ-ಕಾಮರ್ಸ್ ಪ್ರಯೋಜನದ ಅನುಭವ ಪಡೆಯದೇ ಸಾಂಪ್ರಾದಾಯಿಕ ಶಾಪಿಂಗ್ ಬಿಟ್ಟು ಬರಲು ಸಿದ್ಧವಿಲ್ಲದಿದ್ದ ಗ್ರಾಹಕ ವರ್ಗವನ್ನು ಕೋವಿಡ್-19 ಆನ್‌ಲೈನ್ ಗ್ರಾಹಕರನ್ನಾಗಿ ಪರಿವರ್ತನೆ ಮಾಡಿರುವುದು ಸ್ಪಷ್ಟವಾಗಿದೆ. ಮಾರ್ಕೆಟಿಂಗ್‌ನಲ್ಲಿ ಪರಿವರ್ತನೆ ಅಥವಾ ಕನ್‌ವರ್ಷನ್ ಬಹಳ ದೊಡ್ಡ ವಿಷಯ. ಒಮ್ಮೆ ಪರಿವರ್ತನೆಗೊಂಡ ಗ್ರಾಹಕರನ್ನು ಹೇಗೆ ನಿರಂತರವಾಗಿ ಗ್ರಾಹಕರನ್ನಾಗಿ ಮುಂದುವರೆಸಿಕೊAಡು ಹೋಗಬೇಕೆಂಬ ಕಲೆ ಇ-ಕಾಮರ್ಸ್ ಸಂಸ್ಥೆಗಳಿಗೆ ಚೆನ್ನಾಗಿ ತಿಳಿದಿದೆ.

ಇ-ಕಾಮರ್ಸ್ನ ಮಾರ್ಕೆಟ್ ಭೇದನ ಪ್ರಸ್ತುತ ಶೇಕಡ 15ರಷ್ಟಿದ್ದು, ಇದು 2025ರ ವೇಳೆಗೆ ಶೇ.25ರಷ್ಟಾಗಲಿದೆ. ಅಂದರೆ ಒಟ್ಟಾರೆಯಾಗಿ ಮುಂದಿನ ಐದು ವರ್ಷಗಳಲ್ಲಿ ಮಾರ್ಕೆಟ್ ಭೇದನ ಶೇಕಡ 67ರಷ್ಟು ಹೆಚ್ಚಾಗಲಿದೆ. ಇ-ಕಾಮರ್ಸ್ನ ಈ ಬೆಳವಣಿಗೆಗೆ ಮೊಬೈಲ್ ಕಾಮರ್ಸ್ ಸಹ ನೆರವಾಗಿದೆ. 2021ರ ವೇಳೆಗೆ ಶೇಕಡ 73ರಷ್ಟು ಇ-ಕಾಮರ್ಸ್ ಚಟುವಟಿಕೆಗಳು ಮೊಬೈಲ್ ಉಪಕರಣಗಳ ಮೂಲಕ ಆಗಲಿದೆ. ಖರೀದಿಗೆ ಮುನ್ನ ಮಾರುಕಟ್ಟೆ ಸಂಶೋಧನೆ ಮಾಡಿ ಸರಿಯಾದ ಖರೀದಿ ನಿರ್ಧಾರಕ್ಕೆ ಬರಲು ಅಂತರ್ಜಾಲ ನೆರವಾಗುತ್ತಿರುವುದರಿಂದ ಜನ ಆನ್‌ಲೈನ್ ಶಾಪಿಂಗ್‌ನಲ್ಲಿ ಹೆಚ್ಚಿನ ವಿಶ್ವಾಸವಿಡುತ್ತಿದ್ದಾರೆ. ಇ-ಕಾಮರ್ಸ್ನ ಈ ಬೆಳವಣಿಗೆಯಿಂದ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 24,000 ಬಟ್ಟೆ ಅಂಗಡಿಗಳು, 12,000 ಎಲೆಕ್ಟ್ರಾನಿಕ್ ಅಂಗಡಿಗಳು, 11,000 ಪಿಠೋಪಕರಣ ಅಂಗಡಿಗಳು ಹಾಗೂ 11,000 ಕಿರಾಣಿ ಅಂಗಡಿಗಳನ್ನೊಳಗೊಂಡಂತೆ, ಸುಮಾರು 1,00,000 ಅಂಗಡಿ-ಮುಗ್ಗಟ್ಟುಗಳು ಬಾಗಿಲು ಮುಚ್ಚುವ ಅಂದಾಜಿದೆ.

ಸಾಮಾಜಿಕ ಮಾಧ್ಯಮಗಳ ಪ್ರಭಾವ

ಇ-ಕಾಮರ್ಸ್ನ ಈ ಸದೃಢ ಬೆಳವಣಿಗೆಯ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಸಾಕಷ್ಟಿದೆ. ಫೇಸ್‌ಬುಕ್‌ನಲ್ಲಿ ಹಾಗೂ ಇನ್ಸ್ಟಾಗ್ರಾಂನಲ್ಲಿ ‘ಶಾಪ್ ನೌ’ ಆರಂಭಿಸಿದ ನಂತರ, ಇ-ಕಾಮರ್ಸ್ ನಲ್ಲಿ ಸಾಮಾಜಿಕ ಮಾಧ್ಯಮ ಗಮನಾರ್ಹವಾದ ಪಾತ್ರ ವಹಿಸುತ್ತಿದೆ. ಸಾಮಾಜಿಕ ಮಾಧ್ಯಮ ನಾವು ಬದುಕುವ ರೀತಿಯನ್ನು ಬದಲಿಸುತ್ತಿರುವುದು ಮಾತ್ರವಲ್ಲ, ನಾವು ಪದಾರ್ಥಗಳು ಹಾಗೂ ಸೇವೆಗಳನ್ನು ಖರೀದಿಸುತ್ತಿರುವ ರೀತಿಯನ್ನು ಸಹ ಬದಲಿಸುತ್ತಿದೆ. ಜನ ಈಗ ಹೆಚ್ಚು ಹೆಚ್ಚು ಸಮಯವನ್ನು ಸಾಮಾಜಿಕ ಮಾಧ್ಯಮದ ಮೇಲೆ ಕಳೆಯುತ್ತಿದ್ದು, ಉತ್ಪಾದಕರು ಸಾಮಾಜಿಕ ಮಾಧ್ಯಮವನ್ನು ಪದಾರ್ಥಗಳ ಮಾರಾಟಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಆರಂಭಿಸಿದ್ದಾರೆ.

ಕ್ಲೌಡ್ ಆಧಾರಿತ ಇ-ಕಾಮರ್ಸ್ ಪ್ಲಾಟ್‌ಫಾರ್ಮ ಆಗಿರುವ ಶಾಪಿಫೈ ಆನ್‌ಲೈನ್ ಸ್ಟೋರ್ ಸೃಷ್ಟಿಸಲು ಬೇಕಾದ ತಂತ್ರಾಶಗಳನ್ನು ಒದಗಿಸುತ್ತದೆ. ಇಲ್ಲಿ ಆನ್‌ಲೈನ್ ಸ್ಟೋರ್ ಆರಂಭಿಸುವವರು ಯಾವುದೇ ಕೋಡಿಂಗ್ ಅಥವಾ ಸಿಎಂಎಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆಯಿರುವುದಿಲ್ಲ. ಇದು ಇ-ಕಾಮರ್ಸ್ ಪ್ರವೇಶವನ್ನು ಮತ್ತಷ್ಟು ಸರಾಗಗೊಳಿಸಿದೆ. ಬೇಕಾಗಿರುವುದು ಸ್ವಲ್ಪ ವ್ಯವಹಾರ ಹಾಗೂ ಮಾರಾಟ ಜ್ಞಾನ ಹಾಗೂ ಮಾರಲು ಬೇಕಾದ ಪದಾರ್ಥಗಳು. ಮುಂಬರುವ ದಿನಗಳಲ್ಲಿ ವಾಯ್ಸ್ ಕಾಮರ್ಸ್, ಆಗ್‌ಮೆಂಟೇಟಿವ್ ರಿಯಾಲಿಟಿ, ಇತ್ಯಾದಿ ಹೊಸ ಬೆಳವಣಿಗೆಗಳು ಇ-ಕಾಮರ್ಸ್ ಸ್ವರೂಪವನ್ನೇ ಬದಲಿಸಲಿವೆ.

ಈ ಎಲ್ಲಾ ಅಂಶಗಳನ್ನು ಅವಲೋಕಿಸಿದರೆ ಒಂದಂತೂ ಸ್ಪಷ್ಟವಾಗುತ್ತದೆ. ಇ-ಕಾಮರ್ಸ್ ಈಗಾಗಲೇ ನಮ್ಮ ಮೂಲ ಅಗತ್ಯವಾಗಿದೆ. ಕೋವಿಡ್19 ಇ-ಕಾಮರ್ಸ್ನ ಪ್ರಾಧಾನ್ಯದ ಮೇಲೆ ನಾವು ಒಂದಷ್ಟು ಹೆಚ್ಚು ಗಮನ ಹರಿಸುವಂತೆ ಮಾಡಿದೆಯಷ್ಟೇ. ಕೋವಿಡ್19 ಇರಲಿ ಅಥವಾ ಬಿಡಲಿ, ದಿನಗಳೆದಂತೆ ಇ-ಕಾಮರ್ಸ್ ಇಡೀ ಸಾಂಪ್ರಾದಾಯಿಕ ಮಾರಾಟ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತ, ನಮ್ಮ ಮುಂದೆ ಹೊಸ ಹೊಸ ಪ್ರಪಂಚಗಳನ್ನು ತೆರೆಯುತ್ತ ತನ್ನ ದಂಡಯಾತ್ರೆಯನ್ನು ಮುಂದುವರೆಸಲಿದೆ.  

 

Leave a Reply

Your email address will not be published.