ದುರಂತನಾಯಕನಾದ ’ಮಹಾನಾಯಕ’ನ ಕಥೆ

ಈ ಪುಸ್ತಕದ ಮಹತ್ವ ಇರುವುದು ಇದು ಕೇವಲ ಎನ್ಟಿಆರ್ ಕತೆಯನ್ನು ಮಾತ್ರ ಹೇಳುವುದಿಲ್ಲ ಎನ್ನುವುದರಲ್ಲಿ. ಇದು ಸರಿಸುಮಾರು 40-45 ವರ್ಷಗಳ ತೆಲುಗು ಚಿತ್ರರಂಗದ ಕತೆಯನ್ನು, ಕಾಂಗ್ರೆಸ್ಸೇತರ ಪಕ್ಷಗಳು ಒಂದಾದ ನ್ಯಾಶನಲ್ ಫ್ರಂಟ್ ಕಥೆಯನ್ನು, ಸಮರ್ಥವಾದ ಪ್ರಾಂತೀಯ ಪಕ್ಷವೊಂದು ಹೇಗೆ ತನ್ನ ಮತ್ತು ತನ್ನ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನೂ ಹೇಳುತ್ತದೆ.

’ನಮೋ ವೆಂಕಟೇಶ, ನಮೋ ತಿರುಮಲೇಶ…’ -ಊರಾಚೆಯ ಟೂರಿಂಗ್ ಟಾಕೀಸಿನಿಂದ ಕೇಳಿಬರುತ್ತಿದ್ದ ಈ ಹಾಡು ಮಾಯಾಬಜಾರ್ ತೆರೆಸರಿಸಲು ಹೊಡೆಯುತ್ತಿದ್ದ ಥರ್ಡ್ ಬೆಲ್! ಆ ಹಾಡಷ್ಟೇ ಅಲ್ಲ, ತೆಲುಗಿನ ಯಾವ ಪೌರಾಣಿಕ ಹಾಡನ್ನು ಕೇಳಿದರೂ ನನ್ನ ಮನಸ್ಸಿನಲ್ಲಿ ಬರುತ್ತಿದ್ದ ಒಂದೇ ಚಿತ್ರ ಎನ್.ಟಿ.ಆರ್., ನಂದಮೂರಿ ತಾರಕ ರಾಮರಾವ್ ಅವರದು.

ಅವರ ವ್ಯಕ್ತಿತ್ವ, ನಿಲುವು, ಸಂಭಾಷಣೆಯ ಏರಿಳಿತ, ರಾಮನಾಗಿದ್ದಾಗ ಕಣ್ಣುಗಳಲ್ಲಿರುತ್ತಿದ್ದ ಕಾರುಣ್ಯ ಮತ್ತು ಕೃಷ್ಣನಾಗಿದ್ದಾಗ ಅದೇ ಕಣ್ಣುಗಳ ತುಂಟತನ ವಾಹ್! ಅವರು ಯಾವುದೇ ಪಾತ್ರ ಮಾಡಿದರೂ ವೀಕ್ಷಕರು ಅವರಿಗೇ ಗೊತ್ತಿಲ್ಲದಂತೆ ಆ ಪಾತ್ರದ ಪರವಾಗಿಬಿಡುತ್ತಿದ್ದರು. ಭೂಕೈಲಾಸ ಬರುವವರೆಗೂ ವಿಲನ್ ಆಗಿದ್ದ ರಾವಣ, ಇವರ ನಟನೆಯಲ್ಲಿ ದುರಂತ ನಾಯಕನಾಗಿ, ಮಹಾ ಭಕ್ತನಾಗಿ ಕಾಣುತ್ತಾನೆ. ಕೋಲಾರ ಜಿಲ್ಲೆಯಲ್ಲಿ ಬೆಳೆದ ನನಗೆ ರಾಜ್ ಕುಮಾರ್ ಅಷ್ಟೇ ಪ್ರೀತಿ ಎನ್ಟಿಆರ್ ಕಂಡರೆ. ಪಾಂಡವ-ಕೌರವರ ನಡುವೆ ಅವರ ಕೌಶಲದ ಪರೀಕ್ಷೆಯಾಗುವಾಗ ಅರ್ಜುನನಿಗೆ ಸವಾಲು ಹಾಕುವ ಕರ್ಣನನ್ನು, ಅವನ ಜಾತಿಯ ಕಾರಣಕ್ಕೆ ನಿರಾಕರಿಸುವಾಗ ದುರ್ಯೋಧನ ಅಬ್ಬರಿಸಿ ’ಏಮಂಟಿವೇಮಂಟಿವಿ, ಇದಿ ಕ್ಷಾತ್ರ ಪರೀಕ್ಷಮೇ ಕಾನಿ ಕ್ಷತ್ರಿಯ ಪರೀಕ್ಷ ಕಾದು ಕದಾ? ಕಾದು ಕಾಕೂಡದು…’ ಎನ್ನುವ ಸಂಭಾಷಣೆ ಇಂದಿಗೂ ಬಾಯಿಪಾಠ.

ಪೌರಾಣಿಕ ಪಾತ್ರಗಳೆಂದರೆ ಇಂದಿಗೂ ಅದು ಎನ್ಟಿಆರ್ ಮಾತ್ರ. ಇಂತಹ ಎನ್ಟಿಆರ್ ಆಮೇಲೆ ರಾಜಕೀಯಕ್ಕೆ ಬಂದಿದ್ದು, ಮುಖ್ಯಮಂತ್ರಿಯಾಗಿದ್ದು ಇತಿಹಾಸ. ಇವನ್ನೆಲ್ಲಾ ಬಿಡಿಬಿಡಿಯಾಗಿ ಓದಿದ್ದ ನನಗೆ, ಬಾಲಕೃಷ್ಣ ತಂದೆಯ ನೆನಪಿನಲ್ಲಿ ನಿರ್ಮಿಸಿದ ’ಕಥಾನಾಯಕುಡು’ ಮತ್ತು ’ಮಹಾನಾಯಕುಡು’ ಚಿತ್ರಗಳನ್ನು ನೋಡಿದ ಮೇಲೆ ಮತ್ತೊಮ್ಮೆ ಆ ಅದ್ಭುತ ಯಾನದ ಬಗ್ಗೆ ತಿಳಿದುಕೊಳ್ಳಬೇಕು ಅನ್ನಿಸಿತು. ಇಂಗ್ಲೀಷ್ ನಲ್ಲಿ ಯಾವುದಾದರೂ ಪುಸ್ತಕ ಇರಬಹುದೆ ಎಂದು ಹುಡುಕುತ್ತಾ ಹೋದಾಗ ಸಿಕ್ಕಿದ್ದು,NTR – A Biographyಎನ್ನುವ ಪುಸ್ತಕ. ಸುಮಾರು 635 ಪುಟಗಳ, ಹಾರ್ಡ್ ಬೌಂಡ್ ಪುಸ್ತಕ. ಓದುವುದಿರಲಿ, ಬಹಳ ಹೊತ್ತು ಕೈಯಲ್ಲಿ ಹಿಡಿದರೂ ಕೈ ನೋವು ಬರುತ್ತಿತ್ತು! ಆದರೆ ಆ ನೋವನ್ನೂ ಮೀರಿದ್ದು ಎನ್ಟಿಆರ್ ಬಗೆಗಿನ ಆಕರ್ಷಣೆ. ಪುಸ್ತಕ ಓದುತ್ತಾ ಹೋದೆ, ಕಡೆಯ ದಿನ ಇಡೀ ರಾತ್ರಿ ಓದಿ, ಮುಂಜಾನೆ ಐದಕ್ಕೆ ಪುಸ್ತಕ ಕೆಳಗಿಟ್ಟಾಗ ಕಣ್ಣುಗಳು ತುಂಬಿ ಬಂದಿದ್ದವು.

ಆಂಧ್ರಪ್ರದೇಶದ ವಿಜಯವಾಡ ಸಮೀಪದ ನಿಮ್ಮಕೂರು ಇಂದಿಗೂ ಒಂದು ಸಣ್ಣ ಹಳ್ಳಿ. 1923ರಲ್ಲಿ ಲಕ್ಷ್ಮಯ್ಯ ಮತ್ತು ವೆಂಕಟರಾವಮ್ಮ ದಂಪತಿಗೆ ಹುಟ್ಟುವ ಗಂಡುಮಗುವಿಗೆ ಮಕ್ಕಳಿಲ್ಲದ ಅದರ ದೊಡ್ಡಪ್ಪ ’ತಾರಕರಾಮ’ ಎಂದು ಹೆಸರಿಡುತ್ತಾರೆ. ಮಗುವಿನ ಅಮ್ಮನ ಮನಸ್ಸಿನಲ್ಲಿ ಮಗನಿಗೆ ಕೃಷ್ಣ ಎಂದು ಹೆಸರಿಡಬೇಕು ಎನ್ನುವ ಆಸೆ ಇರುತ್ತದೆ. ವರ್ಷಗಳ ನಂತರ ಆ ಮಗು ರಾಮನೂ ಆಗಿ, ಕೃಷ್ಣನೂ ಆಗಿ ವಿಶಾಲಾಂಧ್ರದ ಮನೆಮಗನಂತೆ ಬೆಳೆಯುತ್ತಾನೆ. ಎಷ್ಟೆಂದರೆ ಮುಂದೆ ಚುನಾವಣಾ ಪ್ರಚಾರಕ್ಕೆಂದು ಹೋದ ಎನ್ಟಿಆರ್ ಗೆ ಎಷ್ಟೋ ಗುಡಿಸಲುಗಳಲ್ಲಿ ಅವರ ಸಿನಿಮಾ ಫೋಟೋಗೆ ಕಟ್ಟುಹಾಕಿಸಿ ಪೂಜೆ ಮಾಡುತ್ತಿರುವುದು ಕಾಣುತ್ತದೆ. ಆ ಮಟ್ಟಿಗೆ ಆತ ತೆಲುಗರ ಆರಾಧ್ಯದೈವ.

ಬಿಎ ಓದಿದ್ದ ಎನ್ಟಿಆರ್ ಸರ್ಕಾರಿ ಕೆಲಸ ಬಿಟ್ಟು, ಚಿತ್ರರಂಗದಲ್ಲಿ ತನ್ನ ಅದೃಷ್ಟ ಹುಡುಕಲು ಬಂದಾಗ ಆ ಹೊತ್ತಿಗೆ ಅಕ್ಕಿನೇನಿ ನಾಗೇಶ್ವರ ರಾವ್ ದೊಡ್ಡ ನಟ. ಅವಕಾಶಗಳಿಗಾಗಿ ಹುಡುಕಾಟ, ಊಟ ಇಲ್ಲದೆ ನೀರು ಕುಡಿದು ಬದುಕಿದ ದಿನಗಳು, ಬಸ್ಸಿಗೆ ಕಾಸಿಲ್ಲದೆ ಮೈಲುಗಟ್ಟಲೆ ಕಾಲ್ನಡಿಗೆ, ಆದರೂ ಕೈಚಾಚದ ಸ್ವಾಭಿಮಾನ. ಎಲ್ಲದಕ್ಕೂ ಫಲ ಸಿಗುವ ಕಾಲ ಬರುತ್ತದೆ. ವಾಹಿನಿ ಪಿಕ್ಚರ್ಸ್ ಎನ್ಟಿಆರ್ ಗೆ ಚಿಮ್ಮುಹಲಗೆ ಆಗುತ್ತದೆ. ಪಾತಾಳಭೈರವಿ ಚಿತ್ರ ನೋಡುಗರ ಮನಗೆಲ್ಲುತ್ತದೆ. ನಾಗಿರೆಡ್ಡಿ, ಚಕ್ರಪಾಣಿಯಂತಹ ಶಿಸ್ತಿನ ಸಿಪಾಯಿ ನಿರ್ದೇಶಕರು, ಅಣ್ಣನ ಬೆನ್ನಿಗೆ ನಿಂತ ತ್ರಿವಿಕ್ರಮ ರಾವ್ ಒತ್ತಾಸೆ, ಒಂದಾದ ಮೇಲೊಂದರಂತಾಗುತ್ತಿದ್ದ ಮಕ್ಕಳ ಜವಾಬ್ದಾರಿಯನ್ನು ಹೊತ್ತು ಗಂಡನ ಅನುಪಾನ ನೋಡಿಕೊಳ್ಳುತ್ತಿದ್ದ ಬಸವರಾಮ ತಾರಕಂ ಪ್ರೀತಿ, ಎದೆಯಲ್ಲಿ ಕುದಿಯುತ್ತಿದ್ದ ಜಯಶಾಲಿಯಾಗಲೇಬೇಕು ಎನ್ನುವ ತಪನ…ಎನ್ಟಿಆರ್ ಹಿಂದಿರುಗಿ ನೋಡಲೇ ಇಲ್ಲ.

1952ರಲ್ಲಿ ರಾಯಲಸೀಮದಲ್ಲಿ ಭೀಕರ ಬರಗಾಲ. ಜನಗಳ ನೋವಿಗೆ ಸದಾ ಮಿಡಿಯುವ ಎನ್ಟಿಆರ್ ಸುಮ್ಮನೆ ಕೂರುವುದಿಲ್ಲ. ತನ್ನದೊಂದು ತಂಡ ಕಟ್ಟಿಕೊಂಡು ಜೋಳಿಗೆ ಹಿಡಿದು ಹಣಸಂಗ್ರಹಕ್ಕೆ ಹೊರಟುಬಿಡುತ್ತಾರೆ. ಊರೂರು ಸುತ್ತುತ್ತಾರೆ. ಆ ಕಾಲಕ್ಕೆ ಅವರು ಸಂಗ್ರಹಿಸಿ ಪರಿಹಾರನಿಧಿಗೆ ಕೊಡುವ ಹಣ 1.25 ಲಕ್ಷಗಳು. ಆದರೆ ನಾಗಿರೆಡ್ಡಿಗೆ ಚಿತ್ರದ ಹೀರೋ ಒಬ್ಬ ಹಾಗೆ ಜನಗಳ ನಡುವೆ ಹೋಗುವುದು ಸಹನೀಯವಾಗುವುದಿಲ್ಲ. ವಾದಕ್ಕೆ ಬಿದ್ದ ಎನ್ಟಿಆರ್ ಹಾಗಾದರೆ ಚಿತ್ರರಂಗದ ಸಹವಾಸವೇ ಬೇಡ ಎಂದು ಬಂದುಬಿಡುತ್ತಾರೆ. ಆಮೇಲೆ ಚಿತ್ರರಂಗದವರೆಲ್ಲಾ ಸೇರಿ ರಾಜಿಕಬೂಲಿ ಮಾಡಿಸುತ್ತಾರೆ, ಆ ಮಾತು ಬೇರೆ. ಆದರೆ ಜನಗಳ ನಡುವೆ ಎನ್ಟಿಆರ್ ಗಿದ್ದ ಸಂಬಂಧ ಅದು.

ಎನ್‍ಟಿಆರ್
-ಎ ಬಯೋಗ್ರಫಿ
ಕೆ.ಚಂದ್ರಹಾಸ ಮತ್ತು
ಕೆ.ಲಕ್ಷ್ಮೀನಾರಾಯಣ
ಪುಟಗಳು: 636 ಬೆಲೆ: ರೂ.650
ಪ್ರಕಾಶಕ: ಸಿಎಲ್‍ಎಸ್ ಪಬ್ಲಿಷರ್ಸ್
ಎಲ್‍ಎಲ್‍ಪಿ

ಮುಂದೆ ಮುಖ್ಯಮಂತ್ರಿ ಆಗಿದ್ದಾಗ ಸಹ ಮುಖ್ಯಮಂತ್ರಿಯ ಭೇಟಿಗೆ ಎಂಎಲ್ಯೆ, ಮಂತ್ರಿಗಳು ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕಾಗಿದ್ದಾಗಲೂ ಅಭಿಮಾನಿಗಳು ನೇರ ಹೋಗಿ ಭೇಟಿ ಮಾಡಬಹುದಾಗಿತ್ತು. ಎನ್ಟಿಆರ್ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಹೋಗುತ್ತಾರೆ. ಅವರ ಶಿಸ್ತಾದರೂ ಎಂತಹುದು? ಬೆಳಗ್ಗೆ ಎರಡೂವರೆಗೆ ಏಳುವುದು, ವ್ಯಾಯಾಮ, ಸ್ನಾನ, ಪೂಜೆ, ಊಟ, ಚಿತ್ರಕ್ಕಾಗಿ ಕತೆಗಳ ಸೆಷನ್ ಮುಗಿಸಿ, ಐದಕ್ಕೆ ಮೇಕಪ್ ಗೆ ಕೂರುವುದು. ಇದು ವರ್ಷಾನುಗಟ್ಟಲೆ ನಡೆದು ಬಂದ ಶಿಸ್ತು.

ಸಾಮಾಜಿಕ ಚಿತ್ರಗಳಲ್ಲಿ ’ರಾಮುಡು’ ಹೆಸರಿನ ಚಿತ್ರಗಳ ಪರ್ವವೇ ಶುರುವಾದರೆ, ಪೌರಾಣಿಕ ಚಿತ್ರಗಳಲ್ಲಿ ರಾಮನಾಗಿ, ರಾವಣನಾಗಿ, ದುರ್ಯೋಧನನಾಗಿ, ಕೀಚಕನಾಗಿ, ಕರ್ಣನಾಗಿ, ಭೀಷ್ಮನಾಗಿ, ಕೃಷ್ಣನಾಗಿ ಎನ್ಟಿಆರ್ ಮಿಂಚುತ್ತಾರೆ. ಅದು ಯಾವ ಹಂತಕ್ಕೆ ಎಂದರೆ ತಿರುಪತಿ ಯಾತ್ರೆಗೆ ಬಂದ ತೆಲುಗರು ಅಲ್ಲಿ ಮುಡಿಕೊಟ್ಟು, ಶ್ರೀನಿವಾಸನಿಗೆ ನಮಸ್ಕರಿಸಿದರೆ ಯಾತ್ರೆ ಮುಗಿಯಿತು ಎಂದಲ್ಲ. ಅವರು ಅಲ್ಲಿಂದ ಬಸ್ ಗಳಲ್ಲಿ ಎನ್.ಟಿ.ಆರ್. ಮನೆಗೆ ಬರುತ್ತಾರೆ, ದರ್ಶನಕ್ಕಾಗಿ ಕಾದು ನಿಲ್ಲುತ್ತಾರೆ. ಹೀಗೆ ಎರಡು ಮೂರು ಬಸ್ ಗಳ ಜನ ಬಂದ ಮೇಲೆ ಎನ್ಟಿಆರ್ ಹೊರಗೆ ಬಂದು, ಅವರೆಲ್ಲರೊಡನೆ ಬೆರೆತು, ಮಾತಾಡಿ, ಕುಶಲ ವಿಚಾರಿಸಿ, ನಮಸ್ಕರಿಸಿ ಬೀಳ್ಕೊಟ್ಟ ಮೇಲೆ ಅವರ ಯಾತ್ರೆ ಸಂಪೂರ್ಣ. ಒಂದೇ ಸಮಯಕ್ಕೆ ಅವರ ಸಾಲುಸಾಲು ಚಿತ್ರಗಳು ಬಿಡುಗಡೆ ಆಗುತ್ತವೆ, 20-25 ಥಿಯೇಟರ್ ಗಳಲ್ಲಿ ಶತದಿನೋತ್ಸವ ಆಚರಿಸಿಕೊಳ್ಳುತ್ತವೆ. ಒಂದು ಚಿತ್ರವನ್ನು ನೂರು ಪ್ರಿಂಟ್ ಹಾಕಿಸಿದ ಉದಾಹರಣೆಯೂ ಇದೆ.

ಇದು ಒಂದು ಭಾಗವಾದರೆ, ಪುಸ್ತಕದ ನಂತರದ ಭಾಗ ಎನ್ಟಿಆರ್ ರಾಜಕೀಯಕ್ಕೆ ಬಂದ ಕಥೆ. 60ನೆಯ ವಯಸ್ಸಿನಲ್ಲಿ ಎನ್ಟಿಆರ್ ರಾಜಕೀಯಕ್ಕೆ ಬರುವ ಬಗ್ಗೆ ಯೋಚಿಸುತ್ತಾರೆ. ಈಗಿನಂತೆ ಆಗಲೂ ದಕ್ಷಿಣದ ರಾಜ್ಯಗಳೆಂದರೆ ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ. ತೆಲುಗರ ಆತ್ಮಾಭಿಮಾನವನ್ನು ಮುಂದಿಟ್ಟುಕೊಂಡು ಎನ್ಟಿಆರ್ ರಾಜಕೀಯ ಪ್ರವೇಶಿಸುತ್ತಾರೆ. ಅವರಿಗೆ ಜೊತೆಯಾಗುವುದು ನಾದೇಂಡ್ಲ ಭಾಸ್ಕರರಾವ್.

ಸಂಜಯ್ ಗಾಂಧಿಗೆ ಆಪ್ತನಾಗಿದ್ದ ನಾದೇಂಡ್ಲ, ರಾಜೀವ್ ಗಾಂಧಿ ದಿನಗಳಲ್ಲಿ ಇಂದಿರಮ್ಮನ ಕೃಪಾದೃಷ್ಟಿಯಿಂದ ದೂರಾಗುತ್ತಾರೆ. ಎನ್ಟಿಆರ್ ಹೇಗೂ ಅನನುಭವಿ, ಅವರ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ಚುನಾವಣೆ ಗೆದ್ದರೆ ರಾಜ್ಯ ತನ್ನದೇ ಎನ್ನುವ ಲೆಕ್ಕಾಚಾರದಲ್ಲಿ ಆತ ಎನ್ಟಿಆರ್ ಜೊತೆಗೆ ಕೈಜೋಡಿಸುತ್ತಾರೆ. ಆದರೆ ಎನ್ಟಿಆರ್ ರಾಜಕೀಯ ಎನ್ನುವುದನ್ನು ಶೋಕಿಗಾಗಿ ಮಾಡುವುದಿಲ್ಲ. ರಾಮಕೃಷ್ಣ ಸ್ಟುಡಿಯೋ ಮೂಲೆಯಲ್ಲಿ ವರ್ಷಗಳಿಂದ ಉಪಯೋಗಿಸದೆ ಬಿದ್ದಿದ್ದ ವ್ಯಾನ್ ಹೊರಬರುತ್ತದೆ, ಮೆಕ್ಯಾನಿಕ್ ಅಲೆನ್ ಅದಕ್ಕೊಂದು ಹೊಸ ರೂಪ ಕೊಡುತ್ತಾರೆ. ಅಲ್ಲೇ ಮೂಲೆಯಲ್ಲಿ ಇಕ್ಕಟ್ಟಾದ ಹಾಸಿಗೆ, ಕುರ್ಚಿಗಳು, ಹಿಂಭಾಗದಲ್ಲಿ ಪೋಸ್ಟರ್, ಪಾಂಪ್ಲೆಟ್ ಗಳ ರಾಶಿ, ಮೇಲ್ಭಾಗದಲ್ಲಿ ತೆರೆದ ಛಾವಣಿ, ಹತ್ತಲು ಏಣಿ. ಅದೇ ಎನ್ಟಿಆರ್ ಚೈತನ್ಯರಥ. ಅದರ ಸಾರಥಿ ಮಗ ಹರಿಕೃಷ್ಣ. ಜೊತೆಗೆ ಅಳಿಯ ದಗ್ಗುಬಾಟಿ ವೆಂಕಟೇಶ್ವರ ರಾವ್.

ನೂರಾರು, ಸಾವಿರಾರು, ಲಕ್ಷಾಂತರ ಜನ ಓಡಿ ಬರುತ್ತಿದ್ದರು. ಆ ಉನ್ಮಾದ, ಘೋಷಣೆಗಳು, ಅವರ ಸಂಭ್ರಮ…ಭೂಮಿ ಕಂಪಿಸುತ್ತಿತ್ತು’ ಎಂದು ಆ ಎಲೆಕ್ಷನ್ ಮೀಟಿಂಗ್ ಕವರ್ ಮಾಡಿದ ಚಿದಾನಂದ ರಾಜಘಟ್ಟ ಬರೆಯುತ್ತಾರೆ.

ಆ ಹಳೆಯ ವ್ಯಾನಿನಲ್ಲಿ, 60 ವರ್ಷದ ಎನ್ಟಿಆರ್ ಸುಮಾರು 35000 ಕಿಮೀಗಳಷ್ಟು ಸುತ್ತುತ್ತಾರೆ. ಊರು ದಾಟಿದ ಮೇಲೆ, ರಾತ್ರಿ ಹೊತ್ತು ಅಲ್ಲೇ ಪಕ್ಕದಲ್ಲಿ ಗಾಡಿ ನಿಲ್ಲಿಸುವುದು, ಬೆಳಗ್ಗೆ ಎದ್ದು, ಇರುವ ಎರಡು ಜೊತೆ ಖಾಕಿ ಪ್ಯಾಂಟ್ ಶರ್ಟ್ ಗಳಲ್ಲಿ ಒಂದನ್ನು ಒಗೆದುಹಾಕಿ, ಇನ್ನೊಂದನ್ನು ಧರಿಸುವುದು, ರಸ್ತೆ ಪಕ್ಕದಲ್ಲೇ ಒಂದು ಬಕೆಟ್ ಇಟ್ಟುಕೊಂಡು ಸ್ನಾನ. ಹಳ್ಳಿಹಳ್ಳಿಗಳಲ್ಲಿ ಜನ ದಿನಗಟ್ಟಲೆ ಅವರ ಬರುವಿಕೆಗಾಗಿ ಕಾಯುತ್ತಿರುತ್ತಾರೆ. ’ಮಾ ತೆಲುಗು ತಲ್ಲಿಕಿ…. ಎಂದು ಲೌಡ್ ಸ್ಪೀಕರ್ ಅರಚುತ್ತಾ, ಚೈತನ್ಯ ರಥ ಮೈದಾನದೊಳಗೆ ಬರುತ್ತಿತ್ತು. ನೂರಾರು, ಸಾವಿರಾರು, ಲಕ್ಷಾಂತರ ಜನ ಓಡಿ ಬರುತ್ತಿದ್ದರು. ಆ ಉನ್ಮಾದ, ಘೋಷಣೆಗಳು, ಅವರ ಸಂಭ್ರಮ…ಭೂಮಿ ಕಂಪಿಸುತ್ತಿತ್ತು’ ಎಂದು ಆ ಎಲೆಕ್ಷನ್ ಮೀಟಿಂಗ್ ಕವರ್ ಮಾಡಿದ ಚಿದಾನಂದ ರಾಜಘಟ್ಟ ಬರೆಯುತ್ತಾರೆ. ಎಲ್ಲರ ನಿರೀಕ್ಷೆಯನ್ನೂ ಮೀರಿ ಎನ್ಟಿಆರ್ ಅಭೂತಪೂರ್ವ ವಿಜಯ ಸಾಧಿಸುತ್ತಾರೆ. ಸ್ಥಾಪನೆಯಾದ ಏಳು ತಿಂಗಳೊಳಗೆ ಅಧಿಕಾರ ಹಿಡಿದ ಇನ್ನೊಂದು ಪಕ್ಷ ಇರಲಾರದು.

ಜನಗಳನ್ನು ಆಕರ್ಷಿಸುವುದು ಬೇರೆ, ಅಧಿಕಾರ ನಡೆಸುವುದು ಬೇರೆ. ಅವರಲ್ಲಿ ಬಹಳಷ್ಟು ಜನ ಮೊದಲ ಸಾರಿ ಗೆದ್ದವರು. ಅಲ್ಲದೆ, ಎನ್ಟಿಆರ್ ಗೆ ಎಂಜಿಆರ್ ಗಿದ್ದಂತಹ ಚಾಣಾಕ್ಷತನ ಇರಲಿಲ್ಲ. ಎರಡು ರೂಗಳಿಗೆ ಕೇಜಿ ಅಕ್ಕಿ, ತೆಲುಗು ಗಂಗ, ಕೃಷಿಗೆ ಕಡಿಮೆ ದರದಲ್ಲಿ ವಿದ್ಯುತ್ ನಂತಹ ಜನಪ್ರಿಯ ಯೋಜನೆಗಳ ನಡುವೆಯೂ ಕೆಲವು ಯೋಜನೆಗಳು ಜನರ ಅದರಲ್ಲಿಯೂ ಮುಖ್ಯವಾಗಿ ಸರ್ಕಾರಿ ನೌಕರರ ಸಿಟ್ಟಿಗೆ ಕಾರಣವಾಗುತ್ತವೆ. ಚಲನಚಿತ್ರಗಳಲ್ಲಿ ಹೀರೋ ಆಗುವುದು ಬೇರೆ, ಅಲ್ಲಿ ಆತನನ್ನು ಹೀರೋ ಮಾಡಲೆಂದೇ ತಂಡದ ಎಲ್ಲರೂ ಕಷ್ಟ ಪಡುತ್ತಾರೆ, ಆದರೆ ರಾಜಕೀಯ ಒಂದು ಟೀಂ ಗೇಮ್. ಅದು ಎನ್ಟಿಆರ್ ಗೆ ಎಂದೂ ಸಾಧ್ಯವಾಗಲಿಲ್ಲ ಎನ್ನುವುದು ದುರಂತ. ಅವರ ನಿರಂಕುಶಕಾರಿ ಧೋರಣೆ ಅಧಿಕಾರಿಗಳಿಗೆ, ಎಂಎಲ್ಯೆ, ಮಂತ್ರಿಗಳಿಗೆ ಅಸಹನೀಯವಾಯಿತು. ಅವರ ಅಸಂತೃಪ್ತಿಯನ್ನೇ ಬಂಡವಾಳ ಮಾಡಿಕೊಂಡ ನಾದೇಂಡ್ಲ ಕೇಂದ್ರಸರ್ಕಾರದ ಜೊತೆ ಕೈಜೋಡಿಸಿ, ಹೃದಯ ಶಸ್ತ್ರಚಿಕಿತ್ಸೆಗಾಗಿ ಅಮೆರಿಕೆಗೆ ಹೋದ ಎನ್ಟಿಆರ್ ವಿರುದ್ಧ ಸಂಚು ಹೂಡುತ್ತಾರೆ. ಆಗಿನ ಘಟನಾವಳಿಗಳು ಯಾವುದೇ ಥ್ರಿಲ್ಲರ್ ಸಿನಿಮಾಗಿಂತಲೂ ಕಡಿಮೆಯಿಲ್ಲ. ಪುಸ್ತಕ ಆ ದಿನಗಳ ಚದುರಂಗದಾಟ, ಶಕ್ತಿ ಮತ್ತು ಅಧಿಕಾರ ಸಂಘರ್ಷವನ್ನು ಅತ್ಯಂತ ಗಟ್ಟಿಯಾಗಿ ಕಟ್ಟಿಕೊಡುತ್ತದೆ.

ತಾನು ಕರೆದರೆ ತನ್ನ ಎಂಎಲ್ಯೆಗಳು ಬಂದೇ ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ಚೈತನ್ಯರಥ ಹತ್ತಿ ಎನ್ಟಿಆರ್ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಘೋಷಣೆ ಪ್ರತಿ ಘೋಷಣೆಗಳ ನಡುವೆ ಎನ್ಟಿಆರ್ ಮೇಲೆ ಚಪ್ಪಲಿ ಎಸೆಯಲಾಗುತ್ತದೆ.

ಈ ಪ್ರಸಂಗದಷ್ಟೇ ಧ್ವನಿಪೂರ್ಣವಾಗಿ ಬಂದಿರುವುದು ಲಕ್ಷ್ಮೀಪಾರ್ವತಿಯ ಪ್ರವೇಶದ ನಂತರ ಎನ್ಟಿಆರ್ ಬದುಕು, ತೆಲುಗುದೇಶಂ ಪಕ್ಷ ಮತ್ತು ಆಂಧ್ರದ ರಾಜಕೀಯ ಬದಲಾದ ಬಗೆ. ಲಕ್ಷ್ಮಿಪಾರ್ವತಿ ಮಹತ್ವಾಕಾಂಕ್ಷಿ ಮಹಿಳೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ವೃದ್ಧಾಪ್ಯದಲ್ಲಿದ್ದ ಎನ್ಟಿಆರ್ ಮತ್ತು ಲಕ್ಷ್ಮಿಪಾರ್ವತಿ ಮರುಮದುವೆ ಆಗುವುದು ಅವರಿಬ್ಬರ ವೈಯಕ್ತಿಕ ವಿಷಯ. ಆದರೆ ಎನ್ಟಿಆರ್ 12 ಮಕ್ಕಳ ತಂದೆ, ತಾಯಿಯ ಸ್ಥಾನವನ್ನು ಇನ್ನೊಂದು ಹೆಣ್ಣು ತೆಗೆದುಕೊಳ್ಳುತ್ತಾಳೆ ಎಂದಾಗ ಮಕ್ಕಳಲ್ಲಿ ಅಸಹನೆ ಬರುವುದು ಸಹಜವೆ. ಆದರೆ ಇಲ್ಲಿ ಸಂದರ್ಭ ಅಷ್ಟೇ ಅಲ್ಲ. ಅಲ್ಲಿ ಸ್ಥಾನಕ್ಕಿಂತಲೂ ಮುಖ್ಯಪಾತ್ರ ವಹಿಸುವುದು ಅಧಿಕಾರ ಮತ್ತು ಎನ್ಟಿಆರ್ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆ.

ವಂಶಾಧಿಕಾರವನ್ನು ಸದಾ ವಿರೋಧಿಸುತ್ತಿದ್ದ, ತನ್ನ ಮಕ್ಕಳು ರಾಜಕೀಯ ಜಗಲಿಯೊಳಕ್ಕೆ ಬರದಂತೆ ನೋಡಿಕೊಂಡಿದ್ದ ಎನ್ಟಿಆರ್ ಗೆ, ಚಿಕ್ಕ ವಯಸ್ಸಿನ ಹೆಂಡತಿಯನ್ನು ರಾಜಕೀಯದಿಂದ ದೂರವಿಡುವುದು ಸಾಧ್ಯವಾಗಲಿಲ್ಲ. ಕೇವಲ ಎನ್ಟಿಆರ್ ಗೆ ಹತ್ತಿರವಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಆತನ ರಾಜಕೀಯ ಉತ್ತರಾಧಿಯಾಗಿ ಈಕೆ ಬೆಳೆಯುವುದು ಕುಟುಂಬಕ್ಕೆ ಸಹನೀಯವಾಗಲಿಲ್ಲ. ಈ ಸಲದ ದಂಗೆ ಕುಟುಂಬದೊಳಗೆ ಶುರುವಾಗುತ್ತದೆ. ಚಂದ್ರಬಾಬು ನಾಯ್ಡು ನೇತ್ರತ್ವದಲ್ಲಿ ವೈಸ್ ರಾಯ್ ಹೋಟೆಲ್ ಈ ದಂಗೆಯ ಕುರುಕ್ಷೇತ್ರವಾಗುತ್ತದೆ. ತಾನು ಕರೆದರೆ ತನ್ನ ಎಂಎಲ್ಯೆಗಳು ಬಂದೇ ಬರುತ್ತಾರೆ ಎನ್ನುವ ನಂಬಿಕೆಯಲ್ಲಿ ಚೈತನ್ಯರಥ ಹತ್ತಿ ಎನ್ಟಿಆರ್ ಅಲ್ಲಿಗೆ ಹೋಗುತ್ತಾರೆ. ಅಲ್ಲಿ ಘೋಷಣೆ ಪ್ರತಿ ಘೋಷಣೆಗಳ ನಡುವೆ ಎನ್ಟಿಆರ್ ಮೇಲೆ ಚಪ್ಪಲಿ ಎಸೆಯಲಾಗುತ್ತದೆ. ಯಾವ ಎನ್ಟಿಆರ್ ತೆರೆಯ ಮೇಲೆ ಬಂದರೂ ನಮಿಸಿ ಮಂಗಳಾರತಿ ಮಾಡುತ್ತಿದ್ದರೋ, ಯಾವ ಎನ್ಟಿಆರ್ ದರ್ಶನವಾಗದಿದ್ದರೆ ತಿರುಪತಿ ಯಾತ್ರೆಯೂ ಅಪೂರ್ಣ ಎಂದುಕೊಳ್ಳುತ್ತಿದ್ದರೋ, ಯಾವ ಎನ್ಟಿಆರ್ ಸುಮಾರು ನಲವತ್ತು ವರ್ಷಗಳ ಕಾಲ ತೆಲುಗರ ಹೃದಯಸಾಮ್ರಾಜ್ಯ ಸಿಂಹಾಸನದ ಚಕ್ರವರ್ತಿಯಾಗಿದ್ದರೋ ಅವರ ಮೇಲೆ ಚಪ್ಪಲಿ ಎಸೆಯಲಾಗಿತ್ತು, ’ಎನ್ಟಿಆರ್ ಈ ದಿನ ಸತ್ತ…’ ಎಂದು ಎನ್ಟಿಆರ್ ಗದ್ಗದಿತರಾಗಿ ಹೇಳುತ್ತಾರೆ.

ಈ ಪುಸ್ತಕದ ಮಹತ್ವ ಇರುವುದು ಇದು ಕೇವಲ ಎನ್ಟಿಆರ್ ಕತೆಯನ್ನು ಮಾತ್ರ ಹೇಳುವುದಿಲ್ಲ ಎನ್ನುವುದರಲ್ಲಿ. ಇದು ಸರಿಸುಮಾರು 40-45 ವರ್ಷಗಳ ತೆಲುಗು ಚಿತ್ರರಂಗದ ಕತೆಯನ್ನು, ಕಾಂಗ್ರೆಸ್ಸೇತರ ಪಕ್ಷಗಳು ಒಂದಾದ ನ್ಯಾಶನಲ್ ಫ್ರಂಟ್ ಕಥೆಯನ್ನು, ಸಮರ್ಥವಾದ ಪ್ರಾಂತೀಯ ಪಕ್ಷವೊಂದು ಹೇಗೆ ತನ್ನ ಮತ್ತು ತನ್ನ ರಾಜ್ಯದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಬಹುದು ಎನ್ನುವುದನ್ನೂ ಹೇಳುತ್ತದೆ. ಪುಸ್ತಕದ ಲೇಖಕರು ಕೆ.ಚಂದ್ರಹಾಸ್ ಮತ್ತು ಕೆ.ಲಕ್ಷ್ಮಿನಾರಾಯಣ. ಇಬ್ಬರೂ ಸರ್ಕಾರದ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದವರು. ಅವರಲ್ಲಿ ಒಬ್ಬರಂತೂ ಎನ್ಟಿಆರ್ ಮತ್ತು ಚಂದ್ರಬಾಬು ನಾಯ್ಡು ಇಬ್ಬರ ಜೊತೆಯೂ ಕೆಲಸ ಮಾಡಿದವರು. ಹೀಗಿರುವಾಗ ಅವರು ತೆರೆಯ ಪಕ್ಕದಲ್ಲೇ ನಿಂತಿರುವುದು ಒಂದು ಬಗೆಯಲ್ಲಿ ಧನಾತ್ಮಕವಾದರೂ, ಇನ್ನೊಂದು ರೀತಿಯಲ್ಲಿ ಆ ಕಾರಣಕ್ಕೆ ಅವರು ಹೆಚ್ಚು ಪಕ್ಷಪಾತಿಗಳಾಗಿರಬಹುದೆ ಎನ್ನುವ ಸಂದೇಹವೂ ಬರುತ್ತದೆ. ಈ ಎಚ್ಚರವನ್ನು ಇಟ್ಟುಕೊಂಡೇ ನಾವು ಪುಸ್ತಕವನ್ನು ಓದಬೇಕಾಗುತ್ತದೆ. ಈ ಎಲ್ಲದರ ನಡುವೆಯೂ ಇದೊಂದು ಓದಬೇಕಾದ ಪುಸ್ತಕ ಎನ್ನುವುದರಲ್ಲಿ ಅನುಮಾನವಿಲ್ಲ.

Leave a Reply

Your email address will not be published.