ದುರ್ಗಸಿಂಹ ಕವಿಯ ಕರ್ನಾಟಕ ಪಂಚತಂತ್ರಂ

ಇದು ಕನ್ನಡ ಸಾಹಿತ್ಯದ ಉತ್ತಮ ಚಂಪೂ ಕೃತಿ ಮಾತ್ರವಲ್ಲ; ಉತ್ತಮ ನೀತಿ ಪ್ರತಿಪಾದಕ ಕಾವ್ಯವಾಗಿದೆ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡದಲ್ಲಿ ಮೊದಲಬಾರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ.

ಡಾ.ತಿಪ್ಪೇರುದ್ರ ಸಂಡೂರು

ಕನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ದುರ್ಗಸಿಂಹನೂ ಒಬ್ಬ. ಬಹುಪಾಲು ಗದ್ಯವನ್ನೇ ಬಳಸಿಕೊಂಡು ವಿಶಿಷ್ಟ ಚಂಪೂ ಶೈಲಿಯನ್ನು ಕನ್ನಡ ಸಾಹಿತ್ಯ ಪರಂಪರೆಗೆ ನೀಡಿದ ಪ್ರಮುಖ ಕವಿ. ಹತ್ತನೇ ಶತಮಾನದಲ್ಲಿ ಲೌಕಿಕ ಮತ್ತು ಆಗಮಿಕ ಕಾವ್ಯಗಳ ಮಾರ್ಗವನ್ನು ತುಳಿಯದೇ ತನ್ನದೇ ಆದ ದಾರಿಯನ್ನು ಸೃಷ್ಟಿಸಿಕೊಂಡವನು ದುರ್ಗಸಿಂಹ. ಈತ ರಚಿಸಿದ ಕೃತಿ ‘ಕರ್ನಾಟಕ ಪಂಚತಂತ್ರಂ’. ಇದು ಕನ್ನಡ ಸಾಹಿತ್ಯದ ಬಹು ಜನಪ್ರಿಯವಾದ ಕೃತಿ.

ಕರ್ಣಾಟಕದ ಕಿಸುಕಾಡು ನಾಡಿನ ಸಯ್ಯಡಿ ಎಂಬ ಅಗ್ರಹಾರದವನು ಎಂದು ಕವಿಯೇ ಹೇಳಿಕೊಂಡಿದ್ದಾನೆ. ಆ ಊರು ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸಯ್ಯಡಿ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಈಶ್ವಾರಾರ್ಯ ಮತ್ತು ರೇವಾಂಬಿಕೆಯರ ಮಗನಾದ ದುರ್ಗಸಿಂಹನು ಚಾಲುಕ್ಯರ ದೊರೆ ಜಗದೇಕಮಲ್ಲ ಜಯಸಿಂಹನ ಆಸ್ಥಾನದಲ್ಲಿ ಸಂಧಿವಿಗ್ರಹಿಯಾಗಿದ್ದನು.

ದುರ್ಗಸಿಂಹನು ಬರೆದ ‘ಕರ್ನಾಟಕ ಪಂಚತಂತ್ರಂ’ ಕೃತಿಯನ್ನು ಮೊದಲ ಬಾರಿಗೆ ಎಸ್.ಜಿ.ನರಸಿಂಹಾಚಾರ್ ಹಾಗೂ ಮ.ಆ.ರಾಮನುಜಯ್ಯಂಗಾರ್ ಕ್ರಿ.ಶ.1898ರಲ್ಲಿ ಗ್ರಂಥಸಂಪಾದನೆ ಮೂಲಕ ಶಾಸ್ತ್ರೀಯವಾಗಿ ಸಂಪಾದಿಸಿದರು. ನಂತರ 1976ರಲ್ಲಿ ಗುಂಡ್ಮಿ ಚಂದ್ರಶೇಖರ ಐತಾಳರು ಇದರ ಗದ್ಯಾನುವಾದವನ್ನು ಮಾಡಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಳಿಸಿದರು.

‘ಕರ್ನಾಟಕ ಪಂಚತಂತ್ರಂ’ ಕೃತಿಯು ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿ ರಚಿತವಾದ ಕನ್ನಡ ಸಾಹಿತ್ಯದ ಒಂದು ಉತ್ತಮ ಅನುವಾದ ಗ್ರಂಥವಾಗಿದ್ದು ಕೃತಿಯ ವಸ್ತು, ಕಥಾನಿರೂಪಣೆ, ಶೈಲಿ, ಭಾಷೆ, ಇತ್ಯಾದಿ ಅಂಶಗಳಿಂದ ಕನ್ನಡದ ಮಹತ್ವದ ಕೃತಿಗಳಲ್ಲಿ ಪ್ರಮುಖವಾದುದಾಗಿದೆ. ಪೈಶಾಚಿಕ ಭಾಷೆಯಲ್ಲಿ ರಚನೆಯಾಗಿದೆ ಎನ್ನಲಾದ ವಸುಭಾಗಭಟ್ಟನ ಪಂಚತಂತ್ರವು ದಾಕ್ಷಿಣಾತ್ಯ ಪಾಠಸಂಪ್ರದಾಯಕ್ಕೆ ಸೇರಿದ್ದು, ಇದನ್ನು ನಾನು ಅನುಸರಿಸಿದ್ದೇನೆಂದು ಈ ಕೆಳಕಂಡ ಪದ್ಯದಲ್ಲಿ ದುರ್ಗಸಿಂಹ ಹೇಳಿದ್ದಾನೆ.

ವಸುಭಾಗಭಟ್ಟ ಕೃತಿಯಂ
ವಸುಧಾಧಿಪತಿಮನಖಿಲವಿಭುಧಸ್ತುತಮಂ |
ಪೊಸತಾಗಿರೆ ವಿರಚಿಸುವೆಂ
ವಸುಮತಿಯೊಳ್ ಪಂಚತಂತ್ರಮಂ ಕನ್ನಡದಿಂ ||

ಪಂಚತಂತ್ರ ಹೆಸರೇ ಸೂಚಿಸುವಂತೆ ಭೇದ, ಪರೀಕ್ಷೆ, ವಿಶ್ವಾಸ, ವಂಚನೆ ಮತ್ತು ಮಿತ್ರ ಕಾರ್ಯ ಎಂಬ ಐದು ತಂತ್ರಗಳಿದ್ದು, ಅವು ಈ ಕೃತಿಗೆ ‘ಪಂಚತಂತ್ರ’ ಎಂಬ ಹೆಸರನ್ನೂ ಸಾರ್ಥಕಗೊಳಿಸಿವೆ. ಇಲ್ಲಿಯ ಕತೆಗಳು ಗದ್ಯಪದ್ಯ ಮಿಶ್ರಿತ ಚಂಪೂ ಶೈಲಿಯಲ್ಲಿವೆ. ‘ಕರ್ನಾಟಕ ಪಂಚತಂತ್ರಂ’ ಕೃತಿಯು 216 ಶ್ಲೋಕಗಳು, 448 ಕಂದ, ವೃತ್ತ ಪದ್ಯಗಳು ಹಾಗೂ ನಡುನಡುವೆ ಬರುವ ಗದ್ಯವಿರುವ 67 ಕಥೆಗಳನ್ನೊಳಗೊಂಡ ಮಧ್ಯಮಗಾತ್ರದ ಕೃತಿಯಾಗಿದ್ದು, ಪ್ರತಿಯೊಂದು ತಂತ್ರಕ್ಕೂ ‘ಒಂದು ಮುಖಕಥೆಯಿದ್ದು, ಅದರೊಳಗೆ ಅನೇಕ ಉಪಕಥೆಗಳು ಬಂದಿವೆ. ಪಶು, ಪಕ್ಷಿ, ಬ್ರಾಹ್ಮಣ, ಬೇಡ, ಮುನಿ, ರಾಜರನ್ನೊಳಗೊಂಡ ಈ ಕಥೆಗಳು ಆಕರ್ಷಕವೂ ನೀತಿ ಬೋಧಕವೂ ಆಗಿದ್ದು, ಓದುಗರ ಮನಸ್ಸನ್ನು ಆಕರ್ಷಿಸುತ್ತವೆ. ಪ್ರಾಣಿಪ್ರಪಂಚದ ಮೂಲಕ ರಾಜನೀತಿ, ವ್ಯವಹಾರ ನೀತಿಯನ್ನು ದುರ್ಗಸಿಂಹನು ಈ ಕೃತಿಯಲ್ಲಿ ತಿಳಿಸಿದ್ದಾನೆ.

ಜಂಬೂದ್ವೀಪದ ಭರತವರ್ಷದಲ್ಲಿ ದಾಕ್ಷಿಣಾಥ್ಯವೆಂಬ ಜನಪದ ಅಲ್ಲಿ ಸೌರೂಪ್ಯವೆಂಬ ಪುರದ ರಾಜ ಅಮರಶಕ್ತಿ. ಈತನಿಗೆ ಅನೇಕಶಕ್ತಿ, ವಸುಶಕ್ತಿ, ರುದ್ರಶಕ್ತಿ ಎಂಬ ಮೂವರು ಪುತ್ರರು. ಅಜ್ಞಾನಿಗಳಾದ ಇವರಿಗೆ ಐದು ತಂತ್ರಗಳನ್ನೊಳಗೊಂಡ ಕಥೆಗಳ ಮೂಲಕ ವಸುಭಾಗಭಟ್ಟರು ಜ್ಞಾನಿಗಳನ್ನಾಗಿ ಮಾಡಿದ ವಿವರವಿದೆ.

‘ಕರ್ನಾಟಕ ಪಂಚತಂತ್ರಂ’ ಕೃತಿಯಲ್ಲಿ ಭೇದ ಪ್ರಕರಣವು ಮೊದಲನೆಯದಾಗಿದ್ದು, ಅನೇಕ ಕಪಟೋಪಾಯಗಳಿಂದ ಆತ್ಮೀಯ ಸ್ನೇಹಿತರಲ್ಲಿ ಒಡಕನ್ನು ಹುಟ್ಟಿಸುವುದೇ ‘ಬೇಧ ತಂತ್ರ’. ಈ ಪ್ರಕರಣದಲ್ಲಿ ‘ಸಿಂಹ-ವೃಷಭದ ಸ್ನೇಹದ ಕಥೆ’ ಮುಖಕಥೆಯಾಗಿದ್ದು ಇದನ್ನೊಳಗೊಂಡಂತೆ ಒಟ್ಟು ಇಪ್ಪತ್ತೇಳು ಕಥೆಗಳಿವೆ. ಉಜ್ಜಯಿನಿಪುರದ ವರ್ಧಮಾನ ಎಂಬ ವ್ಯಾಪಾರಿಯು ಐಶ್ವರ್ಯ ಸಂಪಾದನೆಗೆಂದು ಸಂಜೀವಕ, ನಂದಕ ಎಂಬ ಹೆಸರಿನ ಎತ್ತುಗಳ ಬಂಡಿಯೊಂದಿಗೆ ಮಧುರಾಪುರಕ್ಕೆ ಹೋಗುತ್ತಾನೆ. ಸಂಪತ್ತು ಕ್ರೋಢೀಕರಿಸಿಕೊಂಡು ಹಿಂದಿರುಗುವಾಗ ದಾರಿಮಧ್ಯೆ ಬಸವಳಿದು ಸಂಜೀವಕ ಎತ್ತು ನಿಂತುಬಿಡುತ್ತದೆ.

ಕಾಡಿಗೆ ಮೃಗಾಧಿಪತಿಯಾಗಿದ್ದ ಪಿಂಗಳನೆಂಬ ಸಿಂಹವು ವಾಸವಾಗಿತ್ತು. ಆಹಾರಕ್ಕಾಗಿ ಅಲೆದಾಡುತ್ತಿರುವಾಗ ಎತ್ತಿನ ಸಿಡಿಲಿನಂತಹ ಧ್ವನಿಯನ್ನು ಕೇಳಿ, ಅದು ಹೆದರಿಕೊಂಡು ಹಿಂತಿರುಗಿತು. ಅದನ್ನು ನೋಡಿದ ಕರಟಕ, ದಮನಕ ಎಂಬೆರಡು ನರಿಗಳು, ಮೃಗೇಂದ್ರನಂತಿದ್ದ ಸಿಂಹವನ್ನು ಅಪಮಾನಿಸಿದವು.

ಬಂಡಿಯಲ್ಲಿನ ಸಂಪತ್ತಿನ ಕಾವಲಿಗೆಂದು ಆಳುಗಳನ್ನು ಇರಿಸಿದ್ದನು. ಅವರು ಕಾಡಿನಲ್ಲಿನ ಮೃಗಗಳಿಗೆ ಹೆದರಿ ಜೀವಭಯದಿಂದ ಸಂಜೀವಕ ಸತ್ತಿತು, ಅದಕ್ಕಾಗಿ ತಾವು ಹಿಂತಿರುಗಿ ಬಂದೆವು ಎಂದು ವರ್ಧಮಾನನಿಗೆ ಸುಳ್ಳು ಹೇಳಿದರು. ಕಾಡಿನಲ್ಲಿದ್ದ ಹುಲ್ಲು, ಯಮುನಾ ನದಿಯ ನೀರನ್ನು ಸೇವಿಸುತ್ತ ಸಂಜೀವಕ ಎತ್ತು ಚಂದ್ರಶೇಖರನ ನಂದಿಯಂತೆ ಬೆಳೆಯಿತು. ಅದೇ ಕಾಡಿಗೆ ಮೃಗಾಧಿಪತಿಯಾಗಿದ್ದ ಪಿಂಗಳನೆಂಬ ಸಿಂಹವು ವಾಸವಾಗಿತ್ತು. ಆಹಾರಕ್ಕಾಗಿ ಅಲೆದಾಡುತ್ತಿರುವಾಗ ಎತ್ತಿನ ಸಿಡಿಲಿನಂತಹ ಧ್ವನಿಯನ್ನು ಕೇಳಿ, ಅದು ಹೆದರಿಕೊಂಡು ಹಿಂತಿರುಗಿತು. ಅದನ್ನು ನೋಡಿದ ಕರಟಕ, ದಮನಕ ಎಂಬೆರಡು ನರಿಗಳು, ಮೃಗೇಂದ್ರನಂತಿದ್ದ ಸಿಂಹವನ್ನು ಅಪಮಾನಿಸಿದವು.

ಕಾಲಾಂತರದಲ್ಲಿ ಸಂಜೀವಕ ಎತ್ತಿಗೂ ಮತ್ತು ಪಿಂಗಳಕನೆಂಬ ಸಿಂಹಕ್ಕೂ ಉಂಟಾಗಿದ್ದ ಸ್ನೇಹವನ್ನು ಕೆಡಿಸುವ ಉಪಾಯವನ್ನು ದಮನಕ ನರಿಯು ಮಾಡಿ ಸೋಲುತ್ತದೆ. ಈ ಮುಖಕಥೆಯು ವಿರುದ್ಧ ಗುಣಗಳ ಎತ್ತು-ಸಿಂಹಗಳು ಸ್ನೇಹದ ಸೌಜನ್ಯವನ್ನು ಕೆಡಿಸಲು ಬಂದ ನರಿಯ ದಮನ ಬುದ್ಧಿಯನ್ನು ಅರಿತು, ಭೇದವನ್ನು ಮರೆತು ಒಂದಾಗಿ ಕಾಡಿನಲ್ಲಿ ವಾಸಿಸುತ್ತವೆ. ಮೊಲಂ ಸಿಂಹಮಂ ಕೊಂದ ಕಥೆ, ನಾಲ್ವರು ದೂರ್ತರು ಓರ್ವಬ್ರಾಹ್ಮಣನಂ ವಂಚಿಸಿದ ಕಥೆ, ಸೊಸೆಯಂ ಮಾತಂ ಕೇಳದತ್ತೆಯ ಕಥೆ, ದೇವದತ್ತನ ಕಥೆ ಮೊದಲಾದವುಗಳು ಭೇದ ತಂತ್ರದ ಆಶಯವನ್ನು ತಿಳಿಸುವ ಉಪಕಥೆಗಳಾಗಿವೆ.

‘ಪರೀಕ್ಷಾ ವ್ಯಾವರ್ಣನಂ’ ಎಂಬುವುದು ಎರಡನೆಯ ಪ್ರಕರಣವಾಗಿದೆ. ಅದರಲ್ಲಿ ಮುಖಕಥೆಯೊಂದಿಗೆ ಐದು ಉಪಕಥೆಗಳಿವೆ. ಯಾವ ವಿಚಾರವನ್ನು ಪರೀಕ್ಷಿಸದೆ ಸ್ವೀಕರಿಸಬಾರದೆಂಬುದನ್ನು ಬೋಧಿಸುವುದೇ ಪರೀಕ್ಷಾ ತಂತ್ರವಾಗಿದ್ದು, ಈ ಆಶಯವನ್ನು ಬ್ರಾಹ್ಮಣಂ ಮುಂಗುರಿಯಂ ಕೊಂದ ಕಥೆ, ಪರದನ ಕಥೆ, ವೃದ್ಧ ಗೌತಮಿಯ ಕಥೆಗಳು ಪ್ರತಿನಿಧಿಸುತ್ತವೆ.

ಕಾಗೆಗಳ ಕರ್ಕಶ ಸ್ವರವನ್ನು ಕೇಳಲಾಗದೇ, ಗೂಗೆಗಳು ಇರುಳಿನಲ್ಲಿ ಕಣ್ಣುಕಾಣದ ಕಾಗೆಗಳ ಮೇಲೆ ರಾತ್ರಿ ದಾಳಿಮಾಡಿ ನಾಶಮಾಡಿದವು. ಇರುಳಿನಲ್ಲಿ ಕಣ್ಣು ಕಾಣದ ಕಾಗೆಗಳು ಸೋತು ಸತ್ತವು.

‘ವಿಶ್ವಾಸ ಪ್ರಕರಣಂ’ ಎನ್ನುವ ಮೂರನೇ ಪ್ರಕರಣದಲ್ಲಿ ಮುಖ್ಯ ಕಥೆಯೊಂದಿಗೆ ಹದಿನಾಲ್ಕು ಉಪಕಥೆಗಳಿವೆ. ನಂಬದವರನ್ನು ನಂಬುವಂತೆ ಮಾತನಾಡಿ ಅವರ ಒಳಹೊಕ್ಕು ನಾಶಪಡಿಸುವುದೇ ‘ವಿಶ್ವಾಸ ತಂತ್ರ’ ಈ ಆಶಯವನ್ನು ‘ಗೂಗೆಗಳ ತುಂಬಿರ್ದ ಗುಹೆಯಂ ಕಾಗೆಗಳ್ ಸುಟ್ಟಕಥೆ’ಯು

ತಿಳಿಸುತ್ತದೆ. ಕಾಡಿನ ಮರವೊಂದರಲ್ಲಿದ್ದ ಕಾಗೆಗಳಿಗೆಲ್ಲಾ ಮೇಘವರ್ಣ ಎನ್ನುವುದು ಕಾಕವೃಂದಾರಕಪತಿಯಾಗಿತ್ತು. ಆ ಮರದ ಸಮೀಪದಲ್ಲಿದ್ದ ಗುಹೆಯೊಳಗಿನ ಗೂಗೆಗಳಿಗೆಲ್ಲಾ ಅರಿಮರ್ದನ ಎಂಬುದು ರಾಜನಾಗಿತ್ತು. ಕಾಗೆಗಳ ಕರ್ಕಶ ಸ್ವರವನ್ನು ಕೇಳಲಾಗದೇ, ಗೂಗೆಗಳು ಇರುಳಿನಲ್ಲಿ ಕಣ್ಣುಕಾಣದ ಕಾಗೆಗಳ ಮೇಲೆ ರಾತ್ರಿ ದಾಳಿಮಾಡಿ ನಾಶಮಾಡಿದವು. ಇರುಳಿನಲ್ಲಿ ಕಣ್ಣು ಕಾಣದ ಕಾಗೆಗಳು ಸೋತು ಸತ್ತವು.

ಅದಕ್ಕೆ ಪ್ರತಿದಾಳಿ ಮಾಡಲು ರಾಜ ಕಾಗೆ ಆಲೋಚಿಸಲು, ಒಂದು ಕಾಗೆ ಹೀಗೆನ್ನುತ್ತದೆ. ‘ನಾವಿರುಳಿನ ಕಾಳೆಗಕ್ಕಲ್ಲೆವು, ಅಂತುಮಲ್ಲದೆ ನಮ್ಮ ಬಲಮುಮಂ ಪಗೆವರ ಬಲಮುಮನರಿಯದೆ ಪೆರದೆಗೆದಿರ್ದೆವು’, ನಮ್ಮ ಬಲದೊಳ್ ಸೇನಾನಾಯಕಾದಿ ವೀರಾಗ್ರಣಿಗಳೆಲ್ಲಂ ಗೂಗೆಗಳ ಕೈಯೊಳಕಾರಣಂ ಸತ್ತರ್, ಕೆಲರ್ ತಳಲಸಂದರಳಿಯೆ ನೊಂದರ್ ಏತರ್ಕಂ ಕ್ಷಮರಲ್ಲದೆ ನಿಂದರ್. ಕಾಳಗಮೆಂಬುದು ಕಿಡದ ದೋಷಮನುಳ್ಳದು, ಪ್ರಧಾನಪುರುಷರುಂ ಕಿಡಿಸುವುದು ಎಂಬೀ ನೀತಿಯುಂಟು. ನೀವು ಸಹಿಷ್ಣುವಾಗಿ ಪಗೆಯಂ ಬಗೆಗೊಳೆ ಕಾದಿಕೊಲ್ಲುದೆಂದು ಭಿನ್ನಪಂಗೆಯ್ವುದುಂ’ ಎಂಬುವ ಮಾತುಗಳನ್ನು ಹೇಳುತ್ತದೆ. ಈ ಪ್ರಕರಣದಲ್ಲಿ ಬ್ರಹ್ಮರಾಕ್ಷಸನುಂ ತಸ್ಕರನುಂ ಕಥೆ, ಸತ್ತಪುಲಿಯನೆತ್ತಿದ ಗಾರುಡಿಗನ ಕಥೆಗಳು ಸಹೃದಯರ ಗಮನ ಸೆಳೆಯುತ್ತವೆ.

ತನಗೆ ವಂಚಿಸಿ, ಬಲೀಮುಖಿಯು ಹೆಂಡತಿಗೆ ಆಹಾರವಾಗಿಸುತ್ತದೆಂದು ಅರಿತ ಕಪಿಯು ಹೀಗೆ ಹೇಳುತ್ತದೆ. ‘ಕೋಡಗದೆರ್ದೆ ಕೊಂಬಿನ ಮೇಲೆ ಎಂಬುದು ಪ್ರಸಿದ್ಧಮಿದಂ,

ಈ ಕೃತಿಯ ನಾಲ್ಕನೇ ಭಾಗ ‘ವಂಚನಾ ಪ್ರಕರಣಂ’ ಎನ್ನುವುದರಲ್ಲಿ ಮುಖ್ಯ ಕಥೆಯೊಂದಿಗೆ ಎರಡು ಕಥೆಗಳಿವೆ. ಬೇರೆಯವರ ಮನಸ್ಸನ್ನು ತಿಳಿದುಕೊಂಡು ಸಂಧಾನದಿಂದ ಮೋಸ ಮಾಡುವುದೇ ‘ವಂಚನಾ ತಂತ್ರ’. ಈ ಆಶಯವನ್ನು ‘ಮೊಸಳೆಯಂ ಕಪಿ ವಂಚಿಸಿದ ಕಥೆ’ಯು ತಿಳಿಸುತ್ತದೆ. ಕೃಷ್ಣವರ್ಣನೆಂಬ ಕಪಿರಾಜನು ಸರೋವರ ತೀರದ ಅತ್ತಿಯ ಮರದಲ್ಲಿ ವಾಸವಾಗಿತ್ತು. ಅದೇ ಸರೋವರದಲ್ಲಿ ಕಕುದ್ಬಲಿ ಎನ್ನುವ ಮೊಸಳೆ ಕೂಡ ಇತ್ತು. ಒಂದು ದಿನ ಮುದಿ ಮಂಗಕ್ಕೆ ವಾನರನಾರಿಯರ ಆಸೆತೋರಿಸಿ, ಸರೋವರದೊಳಕ್ಕೆ ಮೊಸಳೆಯು ಕರೆದೊಯ್ಯುತ್ತಿರುತ್ತದೆ. ತನಗೆ ವಂಚಿಸಿ, ಬಲೀಮುಖಿಯು ಹೆಂಡತಿಗೆ ಆಹಾರವಾಗಿಸುತ್ತದೆಂದು ಅರಿತ ಕಪಿಯು ಹೀಗೆ ಹೇಳುತ್ತದೆ. ‘ಕೋಡಗದೆರ್ದೆ ಕೊಂಬಿನ ಮೇಲೆ ಎಂಬುದು ಪ್ರಸಿದ್ಧಮಿದಂ, ನೀ ಮುನ್ನಂ ಕೇಳ್ದರಿವುದಿಲ್ಲಕ್ಕುಮೆ ಪೇಳ್ದಯಪ್ಪೊಡೆ ಎನ್ನೆರ್ದೆಯನಾಗಳೆ ಕೊಂಡು ತರ್ಪನೆಂ ಅಲ್ಲದೆನ್ನ ಪ್ರಾಣಮುಂಎಂದಿತು. ಉಪಕಾರಕ್ಕೆ ಅಪಕಾರಗೈಯುವ ಮೊಸಳೆಯನ್ನು ವಂಚಿಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಕಪಿಯು ಯಶಸ್ವಿಯಾಗುತ್ತದೆ. ಈ ಭಾಗದಲ್ಲಿ ಬರುವ ‘ನರಿಯಂ ಮಾತಂ ನಂಬಿ ಸತ್ತ ಬೆಳ್ಗತ್ತೆಯ ಕಥೆ’ಯು ವಂಚನಾ ತಂತ್ರದ ಆಶಯವನ್ನು ಬಹು ಸೊಗಸಾಗಿ ತಿಳಿಸುವ ಕಥೆಯಾಗಿದೆ.

‘ಮಿತ್ರಕಾರ್ಯ ಪ್ರಕರಣಂ’ವು ಈ ಕೃತಿಯ ಕೊನೆಯ ಪ್ರಕರಣವಾಗಿದ್ದು, ಎಲ್ಲರನ್ನು ಅತಿ ಸ್ನೇಹದಿಂದ ತನ್ನವರನ್ನಾಗಿ ಮಾಡಿಕೊಳ್ಳುವುದೇ ‘ಮಿತ್ರಕಾರ್ಯ ತಂತ್ರ’ವಾಗಿದೆ. ‘ಕಾಗೆಯುಂ ಆಮೆಯುಂ ಸಾರಂಗಮುಂ ಇಲಿಯುಂ ಕಥೆ’ಯು ಮುಖಕಥೆಯಾಗಿದ್ದು, ಇದಕ್ಕೆ ಪೂರಕವಾಗಿ ಐದು ಉಪಕಥೆಗಳಿವೆ. ಕಾಂಚೀಪಟ್ಟಣದ ಹೊರಭಾಗದ ಕಾಡಿನಲ್ಲಿ ಲಘುಪತಕನೆಂಬ ಕಾಗೆ, ಕಪೋತರಾಜನೆಂಬ ಚಿತ್ರಗ್ರೀವ (ಆಮೆ), ಹಿರಣ್ಯರೋಮನೆಂಬ ಮೂಷಿಕ (ಇಲಿ), ಸಾರಂಗಗಳು ವಾಸವಾಗಿವೆ. ಬೇಟೆಗಾರನಿಂದ ಒದಗಿದ ಸಂಕೋಲೆಯನ್ನು ಒಂದರ ಸಹಾಯದಿಂದ ಮತ್ತೊಂದು ಬದುಕುವ ಉಪಾಯವನ್ನು ಕಂಡುಕೊಳ್ಳುತ್ತವೆ. ಈ ಪ್ರಾಣಿ, ಪಕ್ಷಿಗಳು ತಮ್ಮ ಸಹಕಾರದ ಸ್ನೇಹಕಾರ್ಯದಿಂದ ಅವುಗಳನ್ನು ಹಿಡಿಯಲು ಬಂದ ಬೇಡನೊಬ್ಬನ ಬಲೆಯಿಂದ ಬಲೆಸಮೇತ ಹಾರಿಹೋಗುವ ಚಿತ್ರಣವಿದೆ. ಈ ಕಥೆಯು ಪ್ರಾಣಿ-ಪಕ್ಷಿಗಳ ನಡುವಣ ಗೆಳೆತನವನ್ನು ತಿಳಿಸುತ್ತದೆ.

ಒಟ್ಟಾರೆಯಾಗಿ, ದುರ್ಗಸಿಂಹನ ‘ಕರ್ನಾಟಕ ಪಂಚತಂತ್ರಂ’ ಕನ್ನಡ ಸಾಹಿತ್ಯದ ಉತ್ತಮ ಚಂಪೂ ಕೃತಿ ಮಾತ್ರವಲ್ಲ. ಅದೊಂದು ಉತ್ತಮ ನೀತಿ ಪ್ರತಿಪಾದಕ ಕಾವ್ಯವಾಗಿದೆ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡದಲ್ಲಿ ಮೊದಲಬಾರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ದುರ್ಗಸಿಂಹನಿಗೆ ಸಲ್ಲುತ್ತದೆ.

* ಲೇಖಕರು ಸಂಡೂರಿನವರು; ಬಳ್ಳಾರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಲೇಖನ, ಕವನ ರಚನೆ, ಚಾರಣ, ನಾಣ್ಯ ಸಂಗ್ರಹಣೆ ಇತ್ಯಾದಿ ಹವ್ಯಾಸಗಳಿವೆ. 

Leave a Reply

Your email address will not be published.