ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ

2019 ಮೇ 2ನೇ ತಾರೀಖಿಗೆ ಲಿಯೋನಾರ್ಡೋ ಡ ವಿಂಚಿ ತೀರಿಕೊಂಡು ಐನೂರು ವರ್ಷಗಳು ಗತಿಸಿದವು. ಈ ಸಂದರ್ಭದಲ್ಲಿ ಕಾಲಾತೀತ ಕಲಾವಿದನನ್ನು ಪ್ರವೇಶಿಸಲು ಬೇಕಾದ ವ್ಯಕ್ತಿ ಮತ್ತು ಕಲಾಕೃತಿಗಳ ಪರಿಚಯ ಇಲ್ಲಿದೆ.

ಲಿಯೊನಾರ್ಡೋ ಡ ವಿಂಚಿ ಕಾಲದಾಚೆಗೆ ಪಯಣಿಸಿದ ಕಲಾವಿದ. ಕಾಲ-ದೇಶದ ಸಂಕೀರ್ಣ ರಚನೆ ಮಹತ್ವದ ಚಿಂತನೆಗೆ ತನ್ನನ್ನು ತಾನು ಒಡ್ಡಿಕೊಂಡ ಮಹರ್ಷಿ. ಈತನ ತಂದೆ ಸೆರ್ ಪಿಯರೊ ಇಟಲಿಯ ಪ್ರಖ್ಯಾತ ನೋಟರಿ; ತಾಯಿ ಕ್ಯಾಥರಿನಾ. ಲಿಯೋನಾರ್ಡೊ ಹುಟ್ಟಿದಾಗ ತಂದೆತಾಯಿ ಮದುವೆಯಾಗಿರುವುದಿಲ್ಲ. ಶ್ರೀಮಂತ ಮನೆತನದ ಪಿಯರೊ ಕುಟುಂಬದೊಂದಿಗೆ ವಾಸಿಸುತ್ತಿದ್ದ ಕ್ಯಾಥರಿನ್ ಕೃಷಿಕಾರ್ಮಿಕಳು. ಲಿಯೋನಾರ್ಡೊ ಹುಟ್ಟಿ ಐದು ವರ್ಷದಲ್ಲೇ ಪತಿಯನ್ನು ತೊರೆದು ಮತ್ತೊಂದು ಮದುವೆಯಾಗುತ್ತಾಳೆ. ಲಿಯೋನಾರ್ಡೊ ತನ್ನ ತಂದೆಯ ಆಶ್ರಯದಲ್ಲಿಯೇ ಬೆಳೆಯುತ್ತಾನೆ. ಚಿಕ್ಕಪ್ಪನ ಪ್ರೋತ್ಸಾಹದಿಂದ ಸಾಂಪ್ರದಾಯಿಕ ವಿದ್ಯಾಬ್ಯಾಸವಿಲ್ಲದೆ ತನ್ನ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಬೇಕಾದ ಎಲ್ಲಾ ತಾಲೀಮುಗಳನ್ನು ಮಾಡುತ್ತಾನೆ. ನಂತರ ಫ್ಲಾರೆನ್ಸ್ ನ ಪ್ರಖ್ಯಾತ ಶಿಲ್ಪಿ-ಚಿತ್ರಕಲಾವಿದ ಆಂದ್ರೆ ದೆ ವೆರೋಚಿಯೊ ಸಹಾಯಕನಾಗಿ ಒಂದು ದಶಕ ವರ್ಣಚಿತ್ರ ರಚನೆ ಶಿಲ್ಪಕಲೆಯ ನೈಪುಣ್ಯವನ್ನು ಕರಗತ ಮಾಡಿಕೊಳ್ಳುತ್ತಾನೆ. ಡ ವಿಂಚಿಯ ಸಮಕಾಲೀನ ಕಲಾವಿದ ಮೈಕೆಲಾಂಜೆಲೋಗೆ ಹೋಲಿಸಿದಲ್ಲಿ ಡ ವಿಂಚಿ ತನ್ನ 67 ವರ್ಷಗಳ ಜೀವಿತಾವಧಿಯಲ್ಲಿ ರಚಿಸಿದ ಕಲಾಕೃತಿಗಳ ಸಂಖ್ಯೆ ತೀರಾ ಕಡಿಮೆ.

ಡ ವಿಂಚಿ ತನ್ನ ರಚನಾ ಸಾಮಥ್ರ್ಯವನ್ನು ಹೊಸ ಪ್ರಯೋಗ, ಅನ್ವೇಷಣೆ, ಆವಿಷ್ಕಾರಗಳಿಗೆ ವಿಸ್ತರಿಸಿಕೊಂಡವನು. ಕಲೆ-ವಿಜ್ಞಾನ ಎರಡನ್ನೂ ಸಮೀಕರಿಸಿ ಹೊಸ ಆಯಾಮಗಳಿಗೆ ತನ್ನ ಚಿಂತನೆಗಳನ್ನೂ, ಕಲ್ಪನೆಗಳನ್ನೂ ಹರಿಯಬಿಟ್ಟವನು. ಬಣ್ಣ, ರೇಖೆ, ಕಲಾಕೃತಿ ರಚನೆಗಳು ಮಾತ್ರ ತನ್ನ ಅಭಿವ್ಯಕ್ತಿಗೆ ಸಾಕಾಗುವ ಪರಿಕರಗಳಲ್ಲ ಎಂಬಂತೆ ತನ್ನ ಕಲ್ಪನೆಯ ಮೂಸೆಯಲ್ಲಿ ಒಡಮೂಡಿದ ಎಲ್ಲ ವಿಷಯಗಳನ್ನು ಪ್ರಯೋಗಕ್ಕೆ ಒಳಪಡಿಸಿದವನು. ವಿಜ್ಞಾನ, ವಾಸ್ತುಶಿಲ್ಪ, ಗಣಿತಶಾಸ್ತ್ರ, ಭೌತಶಾಸ್ತ್ರ, ಬಾಹ್ಯಾಕಾಶ, ಗಾಳಿಪಟ, ಪ್ಯಾರಾಚೂಟ್, ಹೆಲಿಕಾಪ್ಟರ್, ಭೂಪಟ ಇತ್ಯಾದಿ ಹತ್ತುಹಲವಾರು ವಿಷಯ, ವಸ್ತುಗಳ ಆಕಾರಗಳನ್ನು ಅರಿಯುವ ಅಗಾಧ ಶ್ರದ್ಧೆ, ಕುತೂಹಲ ಈತನಿಗಿತ್ತು. ಎಲ್ಲ ಸೃಜನಶೀಲರಿಗೂ ಅನ್ವಯಿಸುವಂತೆ ಡ ವಿಂಚಿಯ ಕೃತಿಗಳ ಬಗ್ಗೆಯೂ ಅನೇಕ ಟೀಕೆಗಳು ಬಂದಿವೆ. ಈತನ ಕಲಾರಚನೆಗಳು ಪೂರ್ಣಗೊಂಡಂತೆ ಕಂಡರೂ ಒಂದು ಹಂತದಲ್ಲಿ ಇನ್ನೂ ಅಪರಿಪೂರ್ಣ ಎಂಬ ಆರೋಪವು ಡ ವಿಂಚಿಯ ಮೋನಾಲೀಸಾದಿಂದ ಹಿಡಿದು ಅನೇಕ ಕೃತಿಗಳ ಬಗ್ಗೆಯೂ ಇದೆ.

ಮೋನಾಲೀಸಾ

ಲಿಯೋನಾರ್ಡೊ ಮಿಲಾನ್ ತೊರೆದು ವೆನಿಸ್ ಮತ್ತು ಪ್ಲಾರೆನ್ಸ್‍ಗೆ ವಲಸೆ ಬಂದು ನೆಲೆಸುತ್ತಾನೆ. ಅಲ್ಲಿ 1503-1506ರ ಅವಧಿಯಲ್ಲಿ ಅನೇಕ ಭಾವಚಿತ್ರಗಳನ್ನು ರಚಿಸುತ್ತಾನೆ. ಅವುಗಳಲ್ಲಿ ‘ಲಾ ಗಿಯೋಕೊಂಡ’ ಎಂಬ ಭಾವಚಿತ್ರ ಅಲ್ಲಿನ ಅನೇಕ ಕಲಾರಚನೆಕಾರರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಈ ಕಲಾಕೃತಿಯೇ ಇಂದಿಗೂ ಲಿಯೋನಾರ್ಡೋ ಡ ವಿಂಚಿಯ ಹೆಸರನ್ನು ಜಗತ್ತಿನಲ್ಲಿ ಸ್ಥಿರಸ್ಥಾಯಿಯಾಗಿಸಿದ ‘ಮೋನಾಲೀಸಾ’.

ಕೇವಲ ಎರಡು-ಒಂದೂವರೆ ಅಡಿಯ ತೈಲವರ್ಣದ ಈ ಕೃತಿಯಲ್ಲಿ ಏನಿದೆ? ಸುಮಾರು 500 ವರ್ಷಗಳ ಹಿಂದೆ ರಚಿತವಾದ ಕೇವಲ ಒಂದು ಹೆಣ್ಣಿನ ಭಾವಚಿತ್ರದಲ್ಲಿ ಅಂತಹ ವಿಸ್ಮಯವೇನಿದೆ? ಎಂಬ ಪ್ರಶ್ನೆ ನೂರಾರು ವರ್ಷಗಳಿಂದ ಕಲಾವಿದರನ್ನು, ಕಲಾಸಕ್ತರನ್ನು ಮತ್ತು ವಿಮರ್ಶಕರನ್ನು ಕಾಡಿದೆ. ಸ್ಪಷ್ಟ ಉತ್ತರವಿಲ್ಲದ ಈ ಪ್ರಶ್ನೆಯೇ ಶತಮಾನಗಳಿಂದ ಕುತೂಹಲ ಉಳಿಸಿರಬಹುದು.

ಈ ಕೃತಿ ಎಲ್ಲಾ ವಿಶ್ಲೇಷಣೆ, ತರ್ಕವನ್ನು ಮೀರಿ ಜನಪ್ರಿಯವಾಗುತ್ತಲೇ ಇದೆ. ಬೇರೆಬೇರೆ ಕಾರಣಕ್ಕಾಗಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಕಲಾಸಂಗ್ರಹಕಾರರ ಕುಮ್ಮಕ್ಕಿನಿಂದ ಅನೇಕ ಸಲ ‘ಮೋನಾಲೀಸಾ’ ಕೃತಿ ಕದಿಯಲ್ಪಡುತ್ತದೆ. ಮತ್ತೆ ಹುಡುಕಿ ಸುಭದ್ರವಾಗಿ ರಕ್ಷಣೆಯಲ್ಲಿಟ್ಟಿದ್ದರೂ ಕಳುವಾದ ಉದಾಹರಣೆಗಳಿವೆ. ಆಧುನಿಕ ಕಲಾವಿದರು ‘ಮೋನಾಲೀಸಾ’ ಕೃತಿಯನ್ನು ನಕಲು ಮಾಡಿ, ವಿಕೃತಗೊಳಿಸಿ, ಮರುಸೃಷ್ಟಿ ಮಾಡಿ ಜನಪ್ರಿಯವಾಗಿದ್ದಾರೆ.

ಸರಳ ವಿವರಣೆ ಮೂಲಕ ಹೇಳುವುದಾದರೆ ಇದೊಂದು ಉತ್ತಮ ಕಲಾಕೃತಿ. ಅನುಭವಿ ಕಲಾವಿದ ತನ್ನ ಅಧ್ಯಾತ್ಮದಿಂದ ತನ್ನೆಲ್ಲವನ್ನು ಧಾರೆಯೆರೆದು ಸೃಷ್ಟಿಸಿದ ಭಾವಚಿತ್ರ. ಈ ಭಾವಚಿತ್ರದ ಸೌಂದರ್ಯದ ಬಿಂದು ಆ ಹೆಣ್ಣಿನ ತುಟಿ, ಕಣ್ಣುಗಳಲ್ಲಿ ಸ್ಥಾಪಿತವಾಗಿವೆ. ಚುಂಬಕ ಶಕ್ತಿ ತುಂಬಿದ ಬಾವುಕ ಸೌಂದರ್ಯದ ಹೆಣ್ಣು ಸಹಜವಾಗಿ ಎಲ್ಲರನ್ನೂ ಸೆಳೆಯುವ ರೀತಿಯಲ್ಲಿ ಸೃಷ್ಟಿಯಾಗಿದೆ. ಈ ಹೆಣ್ಣಿನ ಮುಖಾರವಿಂದದ ಆಕಾರ, ರೂಪಗಳು ‘ಸುವರ್ಣ ಅನುಪಾತ’ ಸಮೀಕರಣದ ತತ್ವದೊಂದಿಗೆ ಮೇಳೈಸಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

‘ಸುವರ್ಣ ಅನುಪಾತ’ದ ಸಿದ್ಧಮಾದರಿಯ ಆಧಾರದ ಪ್ರಕಾರ ‘ಮೋನಾಲೀಸಾ’ ಹೆಣ್ಣಿನ ಮುಖವು, ಪರಿಪೂರ್ಣವಾದ ಸುಂದರ ಹೆಣ್ಣಿನ ಮುಖವೆಂದು ತೀರ್ಮಾನಿಸಲಾಗಿದೆ. ‘ಮೋನಾಲೀಸಾ’ ಕಲಾಕೃತಿಯ ಮೂಲಕ ಕಲಾವಿದ ನಿಗೂಢ ಸಂದೇಶವನ್ನೇನಾದರೂ ನೀಡಿದ್ದಾನೆಯೇ ಎಂದು ತಿಳಿಯಲು ಕ್ಷ-ಕಿರಣದ ಪ್ರಯೋಗದ ಮೂಲಕ ಪರೀಕ್ಷೆ ಮಾಡಿದ್ದಾರೆ.

‘ಸುವರ್ಣ ಅನುಪಾತ’ ಎಂದರೆ ಸೌಂದರ್ಯದ ಮೂಲವನ್ನು ಅಳೆಯಲು ರೇಖಾಗಣಿತ ಮತ್ತು ಭೌತವಿಜ್ಞಾನದ ತರ್ಕ, ಆಧಾರದಿಂದ ಸಿದ್ಧಪಡಿಸಿದ ನಕ್ಷೆ. ಇದರಲ್ಲಿ ಮೂಲತಃ ‘ಪೈ’ ಎಂಬ ಗ್ರೀಕ್ ತತ್ವ ಅಡಕವಾಗಿದೆ. ‘ಸುವರ್ಣ ಅನುಪಾತ’ದ ಸಿದ್ಧಮಾದರಿಯ ಆಧಾರದ ಪ್ರಕಾರ ‘ಮೋನಾಲೀಸಾ’ ಹೆಣ್ಣಿನ ಮುಖವು, ಪರಿಪೂರ್ಣವಾದ ಸುಂದರ ಹೆಣ್ಣಿನ ಮುಖವೆಂದು ತೀರ್ಮಾನಿಸಲಾಗಿದೆ. ‘ಮೋನಾಲೀಸಾ’ ಕಲಾಕೃತಿಯ ಮೂಲಕ ಕಲಾವಿದ ನಿಗೂಢ ಸಂದೇಶವನ್ನೇನಾದರೂ ನೀಡಿದ್ದಾನೆಯೇ ಎಂದು ತಿಳಿಯಲು ಕ್ಷ-ಕಿರಣದ ಪ್ರಯೋಗದ ಮೂಲಕ ಪರೀಕ್ಷೆ ಮಾಡಿದ್ದಾರೆ.

ಈ ಬಗ್ಗೆ ಜಗತ್ತೇ ಏನೆಲ್ಲಾ ಮಾತನಾಡುತ್ತಿದ್ದರೆ, ‘ಮೋನಾಲೀಸಾ’ ಮಾತ್ರ ಎಲ್ಲವನ್ನೂ ಕೇಳಿಸಿಕೊಳ್ಳುತ್ತ, ಸ್ಥಿತಪ್ರಜ್ಞ ಸ್ಥಿತಿಯಲ್ಲಿ ಪ್ಯಾರಿಸಿನ ಲೂರ್ವ್ ಮ್ಯೂಸಿಯಂನ ಬಿಗಿಭದ್ರತೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದಾಳೆ. ಒಂದು ಕಲಾಕೃತಿಯಲ್ಲಿ ವಿಜ್ಞಾನ-ಗಣಿತ ತರ್ಕಗಳನ್ನು ಸಮೀಕರಿಸಿ ಎಲ್ಲರನ್ನೂ ಸೆಳೆದ ಡ ವಿಂಚಿಯೂ ಹುಡುಕಿದಷ್ಟು ನಿಗೂಢ ವಿಸ್ಮಯ ವ್ಯಕ್ತಿತ್ವವಾಗಿ ಕಾಣುತ್ತಾನೆ.

ಕೊನೆಯ ಭೋಜನ

ಮಿಲಾನ್ ಪಟ್ಟಣದ ಎಲ್ಲಾ ಅನಿರೀಕ್ಷಿತ ತಿರುವುಗಳನ್ನು ಎದುರಿಸಿ ಡ ವಿಂಚಿ ಅಲ್ಲಿನ ಸಂತ ಮಾರಿಯಾ ಡೆಲ್ಲಾ ಗ್ರೌಜ್ಹಿಯಾ ಚರ್ಚ್‍ಗಾಗಿ ‘ಕೊನೆಯ ಭೋಜನ’ (ಲಾಸ್ಟ್ ಸಪ್ಪರ್) ಕಲಾಕೃತಿಯನ್ನು ರಚಿಸುತ್ತಾನೆ. 15 x 29 ಅಡಿ ಅಳತೆಯ ಗೋಡೆಯ ಮೇಲೆ ರಚಿತವಾದ ಬೃಹತ್ ಕಲಾಕೃತಿಯಿದು. ಕತ್ತಲಕೋಣೆಯ ಆವರಣದಲ್ಲಿ ವರ್ಣಯುತವಾದ ಸಂಯೋಜನೆಯು ಚೆಂಪಕಾ, ತೈಲ ವರ್ಣಗಳ ಮುದ್ರಣದಲ್ಲಿ ರಚಿತವಾಗಿದೆ. ವಿಶಾಲವಾದ ಕೋಣೆಯಲ್ಲಿ ಸಾಲಾಗಿ ಕುಳಿತ ಶಿಷ್ಯರೊಂದಿಗೆ ಮಧ್ಯದಲ್ಲಿ ಕುಳಿತ ಯೇಸು ನಿರ್ಲಿಪ್ತತೆಯಿಂದ ಭೋಜನ ಸ್ವೀಕರಿಸುತ್ತಿರುತ್ತಾನೆ. ನಾಟಕೀಯ ಪರಿಣಾಮದ ಈ ಸಂಯೋಜನೆಯಲ್ಲಿ ವಂಚನೆ, ದ್ರೋಹ ಮತ್ತು ಏಸುವಿನ ಕರುಣೆಯ ಎರಡು ತುದಿಗಳ ನಡುವೆ ಏನೊಂದೂ ಅರಿಯದ ಮುಗ್ಧತೆಯಿದೆ. ಒಟ್ಟಾರೆಯಾಗಿ ನೆರಳು-ಬೆಳಕುಗಳ ಪರಿಣಾಮ, ವ್ಯಕ್ತಿತ್ವಗಳ ಭಾವತೀವ್ರತೆ, ವರ್ಣಸಂಯೋಜನೆ, ಸಮತೋಲನಗಳ ಮೂಲಕ ಯಶಸ್ವೀ ಕೃತಿಯಾದ ‘ಕೊನೆಯ ಭೋಜನ’ದಲ್ಲಿ ಡ ವಿಂಚಿಯ ಅನನ್ಯ ಶೈಲಿ ಸಾಕಾರಗೊಂಡಿದೆ.

ಬಂಡೆಯ ಮೇಲೆ ಕುಳಿತ ಕನ್ಯೆ

ಮಿಲಾನಿನ ರಾಜಕೀಯ, ಸಾಮಾಜಿಕ ಪ್ರಕ್ಷುಬ್ದತೆಯ ಸಂದರ್ಭದಲ್ಲೇ ಡ ವಿಂಚಿಯ ‘ದಿ ವರ್ಜಿನ್ ಆಫ್ ದಿ ರಾಕ್ಸ್’ (1508) ಕೃತಿ ಸೃಷ್ಟಿಯಾಗುತ್ತದೆ. ಮಿಲಾನಿನ ಸೆ ಪ್ರಾನ್ಸಿಸ್‍ಕೊ ಗ್ರೌಥ್ ಎಂಬ ಪಾದ್ರಿಯ ಆದೇಶದ ಮೇರೆಗೆ ರಚಿಸಿದ ಈ ಕೃತಿಯಲ್ಲಿ ಡ ವಿಂಚಿಯ ದೃಶ್ಯ ನಿರೂಪಣೆಗೆ ಸಾಕ್ಷಿಯಾದ ಅನೇಕ ಆಯಾಮಗಳನ್ನು ಕಾಣಬಹುದು. ಬಂಡೆಯ ಮೇಲೆ ಕುಳಿತ ಮೇರಿಕನ್ಯೆಯಲ್ಲಿ ತಾಯ್ತನದ ಎಲ್ಲಾ ಭಾವಮಾಧುರ್ಯ, ಮಮತೆ, ಅಂತಃಕರಣ, ಘನತೆ ತುಂಬಿಕೊಂಡ ವ್ಯಕ್ತಿತ್ವ ಅನಾವರಣಗೊಂಡಿದೆ. ಅಕ್ಕಪಕ್ಕದಲ್ಲಿ ಇಬ್ಬರು ಪುಟ್ಟ ಮಕ್ಕಳು ಮೇರಿಯನ್ನು ಆತುಕೊಂಡಿವೆ. ಮೇರಿಯ ಬಲಕ್ಕೆ ಬಾಲಯೇಸುವನ್ನು ಬಲಗೈಯಿಂದ ಹಿಡಿದ ರೀತಿ, ಮಗು ತಾಯಿಯನ್ನು ಆಶ್ರಯಿಸುವಂತೆ, ಮಗುವೇ ಏಸು ಎಂಬ ಸೂಚನೆ ನೀಡುವ ಸಂಕೇತ ಇಲ್ಲಿದೆ. ಮೇರಿಯ ಪಕ್ಕದಲ್ಲಿನ ಇನ್ನೊಂದು ಕನ್ಯೆಯೂ ಕೂಡ ಅಷ್ಟೇ ವಿವರವಾಗಿ ಸುಂದರವಾಗಿ ರಚಿತವಾಗಿದೆ. ಈ ವ್ಯಕ್ತಿಚಿತ್ರಗಳ ಸಂಯೋಜನೆಯ ಹಿನ್ನೆಲೆಯ ಪ್ರಕೃತಿ ದೃಶ್ಯ ಕೂಡ ನಿರ್ಲಕ್ಷ್ಯಗೊಳ್ಳದೆ ಮೂಲ ವಸ್ತುವಿನಷ್ಟೇ ಪ್ರಾಶಸ್ತ್ಯ ನೀಡಿ, ವಿವರಣಾತ್ಮಕವಾಗಿ ಬಣ್ಣಿಸಿರುವುದು ಡ ವಿಂಚಿಯು ತನ್ನ ಕಸುಬುಗಾರಿಕೆಯನ್ನು ಸಮರ್ಥವಾಗಿ ದುಡಿಸಿಕೊಂಡಿರುವುದಕ್ಕೆ ಸಾಕ್ಷಿಯಾದಂತಿದೆ.

 

ಸಲ್ವಟೊರ್ ಮಂಡಿ

ಇತ್ತೀಚೆಗೆ 1917ರಲ್ಲಿ ಬಹಳ ಸುದ್ದಿಯಾದ ಡ ವಿಂಚಿಯ ಮಹತ್ವ ಕೃತಿ – ‘ಸಲ್ವಟೊರ್ ಮಂಡಿ’. ಹನ್ನೆರಡೆನೆ ಲೂಯಿ ನೀಡಿದ ಕರಾರಿನಂತೆ 1500ರಲ್ಲಿ ರಚಿಸಿದ ಯೇಸುವು ಸಂದೇಶ ಸಾರುವಂತೆ ತೋರುವ ಕಲಾಕೃತಿಯಿದು. ಅಂದಾಜು 2 x 2.5 ಅಡಿ ಅಳತೆಯ ಈ ತೈಲವರ್ಣದ ಕಲಾಕೃತಿಗೆ ಡ ವಿಂಚಿ ಸಂಪೂರ್ಣಗಳೊಡನೆ ಸಹಿ ಹಾಕಿದ ಏಕೈಕ ಯಶಸ್ವಿ ಕೃತಿಯೆಂಬ ಹೆಗ್ಗಳಿಕೆ ಇದೆ. ಡ ವಿಂಚಿಯು ಯಾವ ಕೃತಿಯನ್ನು ಪೂರ್ಣಗೊಳಿಸಿಲ್ಲ ಎಂಬ ಆರೋಪವು ಇರುವುದರಿಂದ ಈ ಕೃತಿಗೆ ಹೆಚ್ಚಿನ ಮಹತ್ವವಿದೆ. 1917ರಲ್ಲಿ 450.3 ಮಿಲಿಯನ್ ಡಾಲರುಗಳ ದೊಡ್ಡ ಮೊತ್ತ ಗಳಿಸಿ ಮಾರಾಟವಾದ ಕೃತಿಯಿದು. ಹರಾಜಿನಲ್ಲಿ ಕೊಂಡ ಅಪರಿಚಿತ ಕಲಾಸಂಗ್ರಹಕಾರ ಈ ಕೃತಿಯನ್ನು ಅಬುಧಾಬಿಯ ಲೂರ್ವ್ ಮ್ಯೂಸಿಯಂಗೆ ಪ್ರದರ್ಶನಕ್ಕಾಗಿ ಎರವಲು ನೀಡಿದ್ದಾನೆ.

One Response to " ದೃಶ್ಯಕಲೆಯ ಮಹರ್ಷಿ ಲಿಯೋನಾರ್ಡೋ ಡ ವಿಂಚಿ

-ಡಾ.ಎಂ.ಎಸ್.ಮೂರ್ತಿ

"

Leave a Reply

Your email address will not be published.