ದೆಹಲಿ ರೈತ ಚಳವಳಿಯ ಪ್ರತ್ಯಕ್ಷ ದರ್ಶನ

-ಎಚ್.ಆರ್.ನವೀನ್ ಕುಮಾರ್

ಇಂದು ದೇಶದ ಗಮನ ಸೆಳೆಯುತ್ತಿರುವ ಸಂಗತಿಗಳಲ್ಲಿ ದೆಹಲಿಯ ಗಡಿಭಾಗಗಳಲ್ಲಿ ನಡೆಯುತ್ತಿರುವ ರೈತ ಚಳವಳಿಯೂ ಒಂದು. ಚಳವಳಿ ಮೂಡಿಸಿರುವ ಸಂಚಲನದ ಕುರಿತು ಪ್ರತ್ಯಕ್ಷ ದರ್ಶನ ಮಾಡುವ ಸಲುವಾಗಿ ಕರ್ನಾಟಕದಿಂದ ಸರಿಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ದೂವಿರುವ ದೆಹಲಿಗೆ ಹೋಗಿ 5 ಗಡಿಭಾಗಗಳಿಗೂ ಭೇಟಿ ನೀಡಿ ಅಲ್ಲಿನ ನೇರ ಅನುಭವವನ್ನು ಹಂಚಿಕೊAಡಿದ್ದಾರೆ ಲೇಖಕರು.

ಚಳವಳಿ ನಿರತ ರೈತರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಮೂರು ಕೃಷಿ ಕಾಯ್ದೆಗಳು, ವಿದ್ಯುತ್ ಖಾಸಗೀಕರಣ ಮಸೂದೆ ರದ್ದು ಮಾಡಬೇಕು ಮತ್ತು ಕೃಷಿ ಉತ್ಪನ್ನಗಳಿಗೆ ಕೃಷಿತಜ್ಞ ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯ ಆಧಾರದಲ್ಲಿ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವ ಕಾನೂನನ್ನು ಅಂಗೀಕರಿಸಬೇಕೆAಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ದೆಹಲಿಯಲ್ಲಿರುವ ಆಳುವ ಸರ್ಕಾರಕ್ಕೆ ತಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿಕೊಡಲು ಕೃಷಿಯಲ್ಲಿ ತಮ್ಮೊಂದಿಗೆ ಸಾಥ್ ನೀಡುತ್ತಿದ್ದ ಟ್ರಾö್ಯಕ್ಟರ್‌ಗಳನ್ನೇ ವಾಹನಗಳನ್ನಾಗಿ ಮಾಡಿಕೊಂಡು ಹೊರಟರು. ಅಹವಾಲನ್ನು ಕೇಳಿಸಿಕೊಳ್ಳಬೇಕಾದ ಸರ್ಕಾರ ಪೊಲೀಸ್ ಬಲಪ್ರಯೋಗದ ಮೂಲಕ ಅನ್ನದಾತ ರೈತರನ್ನು ದೆಹಲಿಯ 5 ಪ್ರಮುಖ ರಾಷ್ಟಿçÃಯ ಹೆದ್ದಾರಿಯಲ್ಲೇ ತಡೆಯಿತು.

 

ದೇಶದ ಒಳಗಿನ ಗಡಿಗಳು

ತಂತಿಬೇಲಿಗಳು, ದೊಡ್ಡ ದೊಡ್ಡ ಸಿಮೆಂಟ್ ಬ್ಲಾಕ್‌ಗಳು, ಕಂಟೈನರ್‌ಗಳು, ಮಣ್ಣು ತುಂಬಿದ ಟ್ರಕ್‌ಗಳಿಂದ ಗಡಿಗಳನ್ನು ನಿರ್ಮಿಸಲಾಗಿದೆ. ಮಾತ್ರವಲ್ಲ ಹೆದ್ದಾರಿಗಳಲ್ಲಿ ಜೆಸಿಬಿ ಬಳಸಿ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಾಣ ಮಾಡಲಾಗಿದೆ. ಇವು ದೇಶದ ಗಡಿಭಾಗಗಳಲ್ಲಿ ನಿರ್ಮಾಣಗೊಂಡವುಗಳಲ್ಲ ಬದಲಿಗೆ ದೇಶದ ಒಳಗೆ, ದೇಶದ ರಾಜಧಾನಿ ದೆಹಲಿಗೆ ಅನ್ನದಾತ ರೈತರು ಬರಬಾರದೆಂದು ಮೋದಿ ಸರ್ಕಾರ ನಿರ್ಮಾಣ ಮಾಡಿರುವ ಗಡಿಗಳಿವು.

ದೆಹಲಿಯಿಂದ ಪ್ರವೇಶ ಪಡೆಯುವವರಿಗೆ ಇವುಗಳೇ ಮೊದಲಿಗೆ ಸ್ವಾಗತವನ್ನು ಕೋರುತ್ತವೆ. ಇವುಗಳ ಅಕ್ಕಪಕ್ಕದಲ್ಲಿ ನಿಂತಿರುವ ದೆಹಲಿ ಪೊಲೀಸರು ಮತ್ತು ಸಿಆರ್‌ಪಿಎಫ್ ತಮ್ಮ ವಾಹನಗಳ ಜೊತೆ ಟಿಯರ್ ಶೆಲ್ಸ್ ಮತ್ತು ಜಲಫಿರಂಗಿ ವಾಹನಗಳೊಂದಿಗೆ ಶಸ್ತçಸಜ್ಜಿತರಾಗಿ ನಿಂತಿದ್ದರು. ಇವರ ಲಾಠಿಗಳು, ಬಂದೂಕುಗಳು ದೇಶಕ್ಕೆ ಅನ್ನ ಬೆಳೆದು ಕೊಡುವ ಅನ್ನದಾತನ ಎದೆಯಕಡೆಗೆ ಗುರಿಮಾಡಿದ್ದವು. ಹೀಗಿದೆ ಭಾರತದ ವಾಸ್ತವ. ಒಂದು ಮಾಹಿತಿಯ ಪ್ರಕಾರ ದೆಹಲಿ ಪೊಲೀಸರ ಸಂಖ್ಯೆ ಸುಮಾರು 85 ಸಾವಿರ, 5 ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ನಿಯಂತ್ರಿಸಲು ಸುಮಾರು 65 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಪ್ರತೀ ಗಡಿಗಳಲ್ಲೂ ಇಂತಹ ಅಡ್ಡಗೋಡೆಗಳನ್ನ ದಾಟಿಕೊಂಡು ಮುಂದೆ ಹೋದರೆ ಮೊದಲಿಗೆ ಒಂದು ಪ್ರಧಾನ ವೇದಿಕೆ ಸಿಗುತ್ತದೆ. ಈ ವೇದಿಕೆಗಳಲ್ಲಿ ಭಾಷಣಗಳು ನಡೆಯುತ್ತಿರುತ್ತವೆ. ನೂರಾರು ಜನ ಕುಳಿತು ಎಲ್ಲರ ಮಾತುಗಳನ್ನು ತದೇಕಚಿತ್ತದಿಂದ ಕೇಳುತ್ತಿರುತ್ತಾರೆ. ಸಿಂಗು ಗಡಿಯಲ್ಲಿ ನಾವು ಪ್ರವೇಶಿಸಿದಾಗ ವೇದಿಕೆಯಲ್ಲಿ ಒಬ್ಬ ಹೆಣ್ಣು ಮಗಳು ಮಾತನಾಡುತ್ತಿದ್ದಳು. ಅವಳ ಒಂದು ಮಾತು ನನ್ನ ಗಮನ ಸೆಳೆಯಿತು: “ಇಲ್ಲಿ ಪ್ರಧಾನಿ, ರಾಷ್ಟçಪತಿಗಳು ಎಷ್ಟು ಜನ ಬೇಕಾದರು ಬಂದು ಹೋಗಬಹುದು. ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶದ ಉಳಿವಿಗಾಗಿ ನಮ್ಮ ಹೋರಾಟ” ಎಂದಳು.

ಹೆದ್ದಾರಿಯಲ್ಲಿ ಗ್ರಾಮ!

ಅಲ್ಲಿಂದ ಮುಂದೆ ಹೋದರೆ ಪ್ರತಿಭಟನೆಯ ನಿಜವಾದ ದರ್ಶನ ನಮಗಾಗುತ್ತದೆ. ನಾಲ್ಕು ಪಥಗಳ ರಾಷ್ಟಿçÃಯ ಹೆದ್ದಾರಿಯನ್ನ ಸಂಪೂರ್ಣ ತಮ್ಮ ವಶಕ್ಕೆ ಪಡೆದಿರುವ ರೈತರು ಆ ರಸ್ತೆಗಳ ಮೇಲೆ ತಮ್ಮ ಟ್ರ‍್ಯಾಕ್ಟರ್‌ಗಳನ್ನು ನಿಲ್ಲಿಸಿಕೊಂಡು ಅವುಗಳನ್ನೇ ಮನೆಗಳನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಇಡೀ ಪ್ರತಿಭಟನೆಯ ಜಾಗ ಅಕ್ಷರಶಃ ಕದನಕಣವಾಗಿ ಮಾರ್ಪಟ್ಟಿದೆ. ಈ ಕದನಕಣ ನಿರ್ಮಾಣವಾಗಿ ಈ ಲೇಖನ ಬರೆಯುವ ಹೊತ್ತಿಗೆ ಸರಿಯಾಗಿ 56 ದಿನಗಳು ಕಳೆದಿವೆ.…ಇಲ್ಲಿ ಸಾವಿರಾರು ಟ್ರಾö್ಯಕ್ಟರ್, ಶೆಡ್‌ಗಳನ್ನು ಹೊಂದಿರುವ ಲಕ್ಷಾಂತರ ಜನರಿರುವ ಒಂದು ಬೃಹತ್ ಗ್ರಾಮ ನಿರ್ಮಾಣವಾಗಿದೆ.

ಚಳವಳಿಯ ಸಂಭ್ರಮ

ಚಳವಳಿಯನ್ನೂ ಸಂಭ್ರಮಿಸಬಹುದೆAದು ನನಗೆ ಗೊತ್ತಾಗಿದ್ದೇ ಇಲ್ಲಿಗೆ ಬಂದು ಎಲ್ಲವನ್ನು ನೋಡಿದ ಮೇಲೆ. ನಮ್ಮ ಊರುಗಳಲ್ಲೆಲ್ಲ ಕೇವಲ ಜಾತ್ರಾ ಮಹೋತ್ಸವಗಳಲ್ಲಿ ಮಾತ್ರ ನಾನು ಇಂತಹ ವಾತಾವರಣವನ್ನು ನೋಡಿದ್ದೇನೆ. ಅದು ಬಿಟ್ಟರೆ ಇಲ್ಲಿಯೇ ಈ ರೀತಿಯ ಅನುಭವವಾಗಿದ್ದು. ಪ್ರತೀ ಗಡಿಗಳಲ್ಲೂ ನಿರಂತರ ಅನ್ನ ದಾಸೋಹ ನಡೆಸಲು ಲೆಕ್ಕವಿಲ್ಲದಷ್ಟು ಸಾಮೂಹಿಕ ಅಡುಗೆ ಮನೆಗಳನ್ನು (ಲಂಗರ್) ನಿರ್ಮಿಸಿಕೊಳ್ಳಲಾಗಿದೆ. ಇಡೀ ಸಿಂಗು ಬಾರ್ಡರ್‌ನಲ್ಲಿ ಸರಿ ಸುಮಾರು 22 ಕಿಲೋಮೀಟರ್‌ಗಳ ಉದ್ದಕ್ಕೆ ಸುಮಾರು 60 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಬೀಡು ಬಿಟ್ಟಿವೆ. ಇದರಲ್ಲಿ ಬಂದಿರುವ ರೈತರು ತಮ್ಮ ತಮ್ಮ ಟ್ರ‍್ಯಾಕ್ಟರ್‌ಗಳನ್ನು ಚಿಕ್ಕ ಮತ್ತು ಚೊಕ್ಕವಾದ ಮನೆಗಳನ್ನಾಗಿ ಪರಿವರ್ತಿಸಿಕೊಂಡು ಅವರ ವಾಸಕ್ಕೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ಇಲ್ಲಿ ಹೆಜ್ಜೆ ಹೆಜ್ಜೆಗೂ ಕೇವಲ ಅಡುಗೆಯ ಲಂಗರ್‌ಗಳು ಮಾತ್ರವಲ್ಲ, ಆರೋಗ್ಯ ಚಿಕಿತ್ಸಾ ಕೇಂದ್ರಗಳು, ಮೆಡಿಕಲ್ ಶಾಪ್, ಟೀ ಸ್ಟಾಲ್, ಪಾಯಸದ ಸ್ಟಾಲ್, ಬಟ್ಟೆಗಳನ್ನ ತೊಳೆದುಕೊಡುವುದು, ಸಾಮೂಹಿಕವಾಗಿ ಉಳಿದುಕೊಳ್ಳುವವರಿಗೆ ವ್ಯವಸ್ಥೆ, ಹೀಗೆ ಇವೆಲ್ಲವುಗಳನ್ನು ಮಾಡುತ್ತಿರುವವರು ಸ್ವಯಂ ಸೇವಕರು, ಸೇವೆಯ ಹೆಸರಿನಲ್ಲಿ. ಸಿಂಗು ಮತ್ತು ಟಿಕ್ರಿ ಗಡಿಗಳಲ್ಲಿ ಪಂಜಾಬ್ ಮತ್ತು ಹರಿಯಾಣದ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿಕ್ ಸಮುದಾಯದಲ್ಲಿ ಸೇವೆ ಮಾಡುವುದೆಂದರೆ ಅದೊಂದು ಪುಣ್ಯದ ಕೆಲಸವಿದ್ದಂತೆ. ಅದಕ್ಕಾಗಿ ಜನ ಸ್ವಯಂಸ್ಫೂರ್ತಿಯಿAದ ಈ ಹೋರಾಟದಲ್ಲಿ ಭಾಗವಹಿಸಿ ತಮ್ಮ ಕೈಲಾದ ರೀತಿಯಲ್ಲಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ತಮ್ಮ ಮನೆಮಂದಿ ಮಕ್ಕಳನ್ನೆಲ್ಲಾ ತೊಡಗಿಸುತ್ತಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಸೇವಾ ಮನೋಭಾವವನ್ನು ಕಲಿಸುತ್ತಾರೆ.

ಪ್ರಧಾನ ವೇದಿಕೆಯ ಜೊತೆ ಪರ್ಯಾಯ ವೇದಿಕೆಗಳಲ್ಲಿ ಭಾಷಣಗಳಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಪ್ರವಚನ ನಡೆಯುತ್ತಿತ್ತು. ಹಲವು ಕಡೆಗಳಲ್ಲಿ ಪುಸ್ತಕದ ಅಂಗಡಿಗಳು, ಸಾರ್ವಜನಿಕ ಗ್ರಂಥಾಲಯಗಳು, ತಾತ್ಕಾಲಿಕ ಶೌಚಾಲಯಗಳ ನೂರಾರು ಗಾಡಿಗಳನ್ನು ನಿಲ್ಲಿಸಲಾಗಿತ್ತು. ಇವೆಲ್ಲವುಗಳ ಮಿಶ್ರಣ ಒಂದು ಪರಿಪೂರ್ಣತೆಯನ್ನು ತೋರಿಸುತ್ತಿತ್ತು. ಬಹುಶಃ ಟ್ರ‍್ಯಾಕ್ಟರುಗಳಲ್ಲಿರುವವರೆಲ್ಲ ಒಂದು ಕಡೆ ಬಂದರೆ ಅವರನ್ನೆಲ್ಲ ಸಮಾವೇಶಗೊಳಿಸಲು ಜಾಗವೇ ಸಾಲುವುದಿಲ್ಲ. ಅಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರಿದ್ದಾರೆ. ಇದು ಲಕ್ಷಗಳ ಗಡಿಗಳನ್ನು ಯಾವತ್ತೋ ದಾಟಿದೆ.

ಒಂದು ಟ್ರ‍್ಯಾಕ್ಟರ್ ಟೆಂಟ್‌ನ ಬಳಿ ಹೋಗಿ ಕೆಲವರನ್ನು ಮಾತನಾಡಿಸಿದೆವು. ಅದರಲ್ಲಿ ಕುಳಿತಿದ್ದ ಹಿರಿಯರಿಗೆ 71 ವರ್ಷಗಳು. ಅವರು ಈ ಪ್ರತಿಭಟನೆ ಪ್ರಾರಂಭವಾದ ನವೆಂಬರ್ 26ರಿಂದ ಇಲ್ಲಿದ್ದಾರೆ. ಅವರು ತಮ್ಮ ಕೈಯಲ್ಲಿ ಭಗತ್‌ಸಿಂಗ್‌ನ ಒಂದು ಪೋಸ್ಟರ್ ಹಿಡಿದಿದ್ದರು. ಅವರ ಮಾತು ಎಷ್ಟು ಸ್ಪಷ್ಟವಾಗಿತ್ತೆಂದರೆ ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವವರೆಗೂ ನಾವು ಇಲ್ಲಿಂದ ಒಂದಿಚೂ ಹಿಂದೆ ಸರಿಯುವುದಿಲ್ಲ. ಬದಲಾಗಿ ಶಾಂತಿಯುತವಾಗಿ ಮುಂದೆ ಹೋಗಲು ಪ್ರಯತ್ನಿಸುತ್ತೇವೆ ಎಂದರು. ನಮ್ಮನ್ನು ಅವರ ಟ್ರ‍್ಯಾಕ್ಟರ್ ಟೆಂಟ್‌ನ ಮನೆಯೊಳಗೆ ಕರೆದು ಗೌರವಿಸಿ ತಿನ್ನಲು ಸಿಹಿಯನ್ನು (ಲಡ್ಡು) ಕೊಟ್ಟು ನಮ್ಮ ಮೂಲಕ ಮಾಡಿಕೊಂಡ ಮನವಿ: “ಇದು ದೇಶಪ್ರೇಮಿ ಹೋರಾಟ, ಅನ್ನ ತಿನ್ನುವವರು, ರೈತರ ಬಗ್ಗೆ ಪ್ರೀತಿ ಇರುವವರು, ಭಾರತದಲ್ಲಿ ಕೃಷಿ ಉಳಿಸಬೇಕು ಎನ್ನುವವರೆಲ್ಲ ಈ ಹೋರಾಟಕ್ಕೆ ಕೈ ಜೋಡಿಸಿ”.

ಬಹುತೇಕರು ಮಾತನಾಡುವ ಹಾಗೆ ಮತ್ತು ಇಲ್ಲಿ ಖುದ್ದು ಕಣ್ಣಾರೆ ನೋಡಿದ ಮೇಲಂತೂ ನನಗೆ ಮನವರಿಕೆಯಾದ ವಿಷಯವೆಂದರೆ ಭಾರತದ ಸ್ವಾತಂತ್ರ‍್ಯ ನಂತರದ ಇತಿಹಾಸದಲ್ಲಿ ಇಂತಹ ರೈತ ಚಳವಳಿಯನ್ನು ದೇಶ ಕಂಡಿಲ್ಲ. ಅದಕ್ಕಾಗಿಯೇ ಇದನ್ನ ಐತಿಹಾಸಿಕ ಚಳವಳಿ ಎಂದು ಕರೆಯಲಾಗುತ್ತಿದೆ. ಕೇವಲ ಮನವಿ ಪತ್ರಗಳಿಗೆ ಹೋರಾಟಗಳು ಸೀಮಿತವಾಗುತ್ತಿರುವ ಸಂದರ್ಭದಲ್ಲಿ ಚಳವಳಿ ಎಂದರೆ ಹೀಗೂ ನಡೆಸಬಹುದು ಮತ್ತು ಹೀಗೆ ನಡೆಸಿದರೆ ಮಾತ್ರ ಆಳುವ ವರ್ಗವನ್ನ ಮಣಿಸಲು ಸಾಧ್ಯ ಎಂಬುದನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಆದರೆ ಈ ಚಳವಳಿ ದೇಶಾದ್ಯಂತ ಮಾಧ್ಯಮಗಳಲ್ಲಿ ಪಡೆದುಕೊಳ್ಳಬೇಕಾದ ಸ್ಥಾನವನ್ನು ಪಡೆದುಕೊಳ್ಳುತ್ತಿಲ್ಲ. ಮಾಧ್ಯಮಗಳು ಒಂದು ರೀತಿ ಸರ್ಕಾರದ ಪರವಾದ ಧೋರಣೆಯನ್ನು ತಾಳುತ್ತಿವೆ. ಅವು ತನ್ನ ವಿರೋಧ ಪಕ್ಷದ ಕೆಲಸವನ್ನು ಸಂಪೂರ್ಣ ಮರೆತಿವೆ ಎಂದು ಚಳವಳಿಯಲ್ಲಿರುವ ರೈತರು ಮಾತನಾಡಿಕೊಳ್ಳುತ್ತಿದ್ದಾರೆ.

ಬೆಳಿಗ್ಗೆ 6 ಗಂಟೆ ಸುಮಾರಿಗೆ ಆ ಕೊರೆವ ಚಳಿಯಲ್ಲಿ (3-4 ಡಿಗ್ರಿ) ಪ್ರತೀ ಟೆಂಟಿಗೂ ಹಿಂದಿನ ದಿನದ ಸುದ್ದಿಗಳು, ಬೆಳವಣಿಗೆಗಳು ಮತ್ತು ಇಡೀ ಚಳವಳಿಗೆ ನೇತೃತ್ವ ನೀಡಿರುವ 500ಕ್ಕೂ ಹೆಚ್ಚು ಸಂಘಟನೆಗಳ ವಿಶಾಲ ವೇದಿಕೆ ‘ಸಂಯುಕ್ತ ಕಿಸಾನ್ ಮೋರ್ಚಾ’ದ ತೀರ್ಮಾನಗಳ ಕುರಿತು ಪತ್ರಿಕೆಯೊಂದು ಬರುತ್ತದೆ. ಅದೇ ಬೆಳಗಿನ ಅಲಾರಾಮ್. ಈ ಪತ್ರಿಕೆಯನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದೆ. ಈ ಪತ್ರಿಕೆಯನ್ನು ಹಿಡಿದು ಟೆಂಟ್‌ನ ಮುಂದಿರುವ ಸೌದೆಗಳಿಂದ ನಿರ್ಮಿಸಿರುವ ಬೆಂಕಿಯ ಸುತ್ತಲೂ 5-6 ಜನ ಕುಳಿತುಕೊಂಡು ಹುಕ್ಕ ಸೇದುತ್ತ ಉರಿವ ಬೆಂಕಿಯ ಎದುರು ಸುದ್ದಿಯನ್ನು ಓದುತ್ತಾ ಬಿಸಿ ಬಿಸಿ ಚರ್ಚೆ ನಡೆಸುತ್ತಾರೆ. ಇದು ಸುಮಾರು ಎರಡು ಮೂರು ಗಂಟೆಗಳ ಕಾಲ ನಡೆಯುತ್ತದೆ. ನಂತರ ಪ್ರತಿಭಟನಾ ಸ್ಥಳಗಳಲ್ಲಿ ನಿರ್ಮಿಸಿರುವ ಮೊಬೈಲ್ ಟಾಯ್ಲೆಟ್‌ಗಳಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿ ಲಂಗರ್‌ಗಳ ಕಡೆಗೆ ಧಾವಿಸುತ್ತಾರೆ. ಅಲ್ಲಿ ಚಹಾ, ಬಿಸ್ಕೆಟ್, ರಸ್ಕ್, ಬಜ್ಜಿ, ವಿವಿಧ ಬಗೆಯ ಪಾಯಸಗಳನ್ನು ಕೊಡಲಾಗುತ್ತದೆ.

ಈ ಭಾಗದ ಜನ ಬೆಳಗಿನ ತಿಂಡಿ ಎಂದು ಪ್ರತ್ಯೇಕವಾಗಿ ಮಾಡುವ ಅಭ್ಯಾಸವಿದ್ದಂತಿಲ್ಲ. ನಂತರ 11 ಗಂಟೆಯಷ್ಟರಲ್ಲಿ ಪ್ರಧಾನ ವೇದಿಕೆಯ ಮೈಕ್ ಮೂಲಕ ಎಲ್ಲರನ್ನು ಸ್ವಾಗತಿಸಲಾಗುತ್ತದೆ. ಎಲ್ಲರೂ ಕೈಯಲ್ಲಿ ಭಾವುಟಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಗುಂಪು ಗುಂಪಾಗಿ ವೇದಿಕೆಗಳತ್ತ ತೆರಳುತ್ತಾರೆ. ಅಲ್ಲಿ ಬೆಳಿಗ್ಗೆ ಆರಂಭವಾದ ಭಾಷಣಗಳು ಇಡೀ ದಿನ ಬಿಡುವಿಲ್ಲದಂತೆ ನಡೆಯುತ್ತವೆ. ಸಂಘಟನೆಯ ಪ್ರಮುಖರೊಬ್ಬರು ಹಿಂದಿನ ದಿನದ ಎಲ್ಲ ಬೆಳವಣಿಗೆಗಳನ್ನು ವರದಿ ಮಾಡುತ್ತಾರೆ. ವಿವಿಧ ಸಂಘಟನೆಗಳ ಮುಖಂಡರುಗಳು ಬಂದು ಬೆಂಬಲ ಸೂಚಿಸಿ ಮಾತನಾಡುತ್ತಾರೆ.

12 ಗಂಟೆಗೆ ಲಂಗರ್‌ಗಳಲ್ಲಿ ಊಟ ಪ್ರಾರಂಭವಾದರೆ ಅದು ರಾತ್ರಿ 11 ರವರೆಗೆ ನಡೆಯುತ್ತದೆ. ಈ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ಮಲಗುವ ಮುನ್ನ ಟೆಂಟ್‌ನ ಮುಂದಿರುವ ಬೆಂಕಿಯ ಸುತ್ತ ನಿಂತುಕೊAಡು ತಮ್ಮ ಟ್ರ‍್ಯಾಕ್ಟರ್‌ಗಳಲ್ಲಿರುವ ಸ್ಪೀಕರ್‌ಗಳಲ್ಲಿ ಚಳವಳಿಗಾಗಿ ರಚನೆಯಾಗಿರುವ ಮೋದಿ ವಿರೋಧಿ ಹಾಡುಗಳಿಗೆ ನೃತ್ಯ ಮಾಡುತ್ತಾ ದಿನ ಕಳೆಯುತ್ತಾರೆ. ಪ್ರತಿ ದಿನ ಒಂದೊAದು ವಿಶೇಷ ಕಾರ್ಯಕ್ರಮಗಳಿರುತ್ತವೆ. ಪಂಜಿನ ಮೆರವಣಿಗೆ, ಮಾನವ ಸರಪಳಿ ಹೀಗೆ. ಜೊತೆಗೆ ಪ್ರತೀ ಗಡಿಗಳಲ್ಲೂ ಸರದಿ ಪ್ರಕಾರ ಒಂದೊAದು ದಿನ ಒಂದೊAದು ಸಂಘಟನೆಯ ರೈತರು 24 ಗಂಟೆಗಳ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಾರೆ.

ಈ ಹೋರಾಟವನ್ನು ಪಂಜಾಬ್ ಮತ್ತು ಹರಿಯಾಣ ರಾಜ್ಯದ ರೈತರು ಪ್ರಾರಂಭಿಸಿದರೂ ನಂತರದ ದಿನಗಳಲ್ಲಿ ಇದು ದೇಶವ್ಯಾಪಿಯಾಗಿ ಹರಡಿಕೊಂಡಿದೆ. ದೆಹಲಿಯ ಸುತ್ತಮುತ್ತಲ ರಾಜ್ಯಗಳಾದ ಪಂಜಾಬ್, ಹರಿಯಾಣ, ಚತ್ತಿಸ್‌ಘಡ, ರಾಜಸ್ಥಾನ್, ಉತ್ತರ ಪ್ರದೇಶ, ಮಹಾರಾಷ್ಟç, ಮಧ್ಯಪ್ರದೇಶ ರಾಜ್ಯಗಳ ರೈತರು ದೊಡ್ಡಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದರೆ. ದಕ್ಷಿಣ ರಾಜ್ಯಗಳಾದ ಕೇರಳ, ಆಂಧ್ರ, ತೆಲಂಗಾಣದಿAದಲೂ ದೊಡ್ಡಸಂಖ್ಯೆಯಲ್ಲಿ ರೈತರು ಈ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಅವರದೇ ರಾಜ್ಯಗಳಲ್ಲಿ ಈ ಕುರಿತು ವ್ಯಾಪಕ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ.

ನಿರಂತರವಾಗಿ ಇಷ್ಟು ದಿನಗಳ ಕಾಲ ಇಂತಹ ಚಳವಳಿಯನ್ನು ನಡೆಸುವುದು ಅಷ್ಟು ಸುಲಭದ ಮಾತಲ್ಲ, ಆದರೆ ಅಲ್ಲಿಗೆ ಹೋಗಿ ಅಲ್ಲಿಯ ರೈತರನ್ನು ಮಾತನಾಡಿಸಿದರೆ ಗೊತ್ತಾಗುವುದು ಅವರಿಗೆ ಇನ್ನೂ ಸ್ಫೂರ್ತಿ ಕಡಿಮೆಯಾಗಿಲ್ಲ, ಬದಲಾಗಿ ದಿನದಿಂದ ದಿನಕ್ಕೆ ಚಳವಳಿಯಲ್ಲಿ ನೇರವಾಗಿ ಭಾಗವಹಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜೊತೆ ಜೊತೆಗೆ ನಮ್ಮ ಉತ್ಸಾಹವೂ ಹಿಮ್ಮಡಿಗೊಳ್ಳುತ್ತಿದೆ ಎಂದು 30 ವರ್ಷದ ಒಬ್ಬ ಯುವ ರೈತ ಮತ್ತು 74 ವರ್ಷದ ಒಬ್ಬ ಹಿರಿಯ ರೈತ ಹೇಳುತ್ತಾರೆ. ಈ ಚಳವಳಿಯಲ್ಲಿ ಇವರು ತೋರಿಸುತ್ತಿರುವ ಬದ್ಧತೆಯನ್ನು ನೋಡಿದರೆ ಇವರು ಯಾರದ್ದೋ ಮಾತನ್ನ ಕೇಳಿಕೊಂಡು ಚಳವಳಿಗೆ ಧುಮುಕಿದವರಲ್ಲ. ಇವರಿಗೆ ಕೃಷಿ ಕಾನೂನುಗಳಿಂದಾಗುವ ಸಮಸ್ಯೆಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇದ್ದೇ ಈ ಚಳವಳಿಯಲ್ಲಿ ತಮ್ಮನ್ನ ತಾವು ಅರ್ಪಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಇದುವರೆಗೂ ಸುಮಾರು 108 ರೈತರು ಹೋರಾಟದ ಕಣದಲ್ಲಿ ಹುತಾತ್ಮರಾಗಿದ್ದಾರೆ.

ಹೋರಾಟದ ಸ್ಥಳದಲ್ಲಿ ನನಗೆ ಭೇಟಿಯಾಗಿದ್ದ, ದೆಹಲಿಯಲ್ಲಿ ನೆಲೆಸಿರುವ ಕನ್ನಡಿಗ ಪ್ರಾಧ್ಯಾಪಕರು ಹೇಳುವಂತೆ, “ಈ ಚಳವಳಿ ಒಂದು ಬಯಲು ವಿಶ್ವವಿದ್ಯಾಲಯವಿದ್ದಂತೆ. ಇಲ್ಲಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಈ ಚಳವಳಿ ಗೆಲ್ಲಬೇಕು, ಇದೊಂದು ದೇಶಪ್ರೇಮಿ ಹೋರಾಟ. ಈ ಮೂಲಕ ದೇಶದ ಸಂವಿಧಾನದ ರಕ್ಷಣೆಯಾಗಬೇಕಾಗಿದೆ”.

*ಲೇಖಕರು ಹಾಸನದವರು; ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ.

Leave a Reply

Your email address will not be published.