ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ರಾಷ್ಟ್ರವ್ಯಾಪಿ ಪರಿಣಾಮ ಬೀರಬಹುದೇ?

ಧ್ರುವೀಕರಣದ ರಾಜಕಾರಣ, ರಾಷ್ಟ್ರವಾದಿ ರಾಜಕಾರಣ, ಜಾತಿ ರಾಜಕಾರಣ, ಓಟುಗಳ ಕ್ರೋಡೀಕರಣದ ರಾಜಕಾರಣಗಳನ್ನು ‘ಕಾಮ್ ಕಾ ರಾಜಕಾರಣ ಮಾದರಿ ಮೀರಿನಿಲ್ಲುವ ಶಕ್ತಿಹೊಂದಿದೆ ಎಂಬುದನ್ನು ಈ ಚುನಾವಣೆ ಸಾಬೀತುಪಡಿಸಿದೆ.

-ಡಾ.ಹರೀಶ್ ರಾಮಸ್ವಾಮಿ

ಚುನಾವಣೆಗಳು ದೇಶದ ಹಣೆಬರಹ ಬದಲಿಸುವ ದಿಕ್ಸೂಚಿಗಳು. ಆದರೆ ಎಲ್ಲಾ ಚುನಾವಣೆಗಳು ಈ ನಿಟ್ಟಿನಲ್ಲಿ ಪ್ರಭಾವಿಯಾಗಿರದೆ ದೇಶಕ್ಕೆ ಮಾರಕವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಫೆಬ್ರವರಿ 11, 2020ರಂದು ಹೊರಬಿದ್ದ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಭಾರತದ ಪಾಲಿಗೆ ದಿಕ್ಸೂಚಿಯಾದಂತಿದ್ದರೂ, ಇದು ರಾಷ್ಟ್ರವ್ಯಾಪಿ ಪರಿಣಾಮ ಬೀರಿ ಭಾರತದ ಪ್ರಸಕ್ತ ಸಾಂಸ್ಕತಿಕ ಹಾಗೂ ಪಂಥನಿರಪೇಕ್ಷತಾ ಚರ್ಚೆಗಳ ಬಿಕ್ಕಟ್ಟನ್ನು ಸುಧಾರಿಸುವಷ್ಟು ಪರಿಣಾಮಕಾರಿಯಲ್ಲ.

ಮೂಲತಃ ಈ ಚುನಾವಣೆ ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ವಿವಿಧ ಮುಖಗಳ ನಡುವಿನ ಹೋರಾಟ. ಅದರೊಂದಿಗೆ, ಇದೊಂದು ನವತಳಿ ನಾಯಕತ್ವದ ಆಮ್ಲ ಪರೀಕ್ಷೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಿಂತನೆಯ ಚಳವಳಿಯಿಂದ ಜನ್ಮತಾಳಿದ ಆಮ್ ಆದ್ಮಿ ಪಕ್ಷ, ಆದರ್ಶಮಯ ‘ಪರ್ಯಾಯ ರಾಜಕಾರಣ’ ಹೇಗಿರಬೇಕೆಂಬುದಕ್ಕೆ; ಹದಗೆಡುತ್ತಿದ್ದ ಸಂಪ್ರದಾಯವಾದಿ, ಪಿತೃಪ್ರಧಾನ, ಊಳಿಗಮಾನ್ಯ ಹಾಗೂ ವೈದಿಕ ಪೂರ್ವಾಲೋಚನೆ ಹೊಂದಿದ ರಾಷ್ಟ್ರೀಯವಾದಿ ಚಿಂತನೆಗಳಿಗೆ ಸವಾಲು ಹಾಕುವಂತೆ ಅಸ್ತಿತ್ವಕ್ಕೆ ಬಂದಿತ್ತು. ಬಂದ ಮೊದಲೆರಡು ಚುನಾವಣೆಯಲ್ಲಿ ದಿಲ್ಲಿಯ ನಾಯಕತ್ವಕ್ಕೆ ಹೋರಾಡಿ ಉಚ್ಚ ನ್ಯಾಯಾಲಯದ ಮುಖಾಂತರ ತನ್ನ ಉದ್ದೇಶಗಳಿಗೆ ಮೂರ್ತರೂಪ ಕೊಡತೊಡಗಿದ್ದು, ಈ ಬ್ರಾಂಡ್ ರಾಜಕಾರಣವನ್ನು ‘ಕಾಮ್-ಕ-ರಾಜಕಾರಣ’ ಎಂದು ಪ್ರತಿಪಾದಿಸಿತ್ತು.

ಈ ಪ್ರತಿಪಾದನೆಯನ್ನು ಸಂಪೂರ್ಣವಾಗಿ ನಂಬಿ ಕಾರ್ಯನಿರ್ವಹಿಸಿ ಬದಲಾವಣೆಯನ್ನು ‘ಅಭಿವೃದ್ಧಿ ಮಿಶ್ರಿತ’ವಾಗಿ ನೀಡಿ, ಬದಲಾವಣೆ ಮೂಲಕ ಭ್ರಷ್ಟತೆ, ನೌಕರಶಾಹಿ ಹಿಡಿತಗಳಿಂದ ರಾಜ್ಯಕ್ಕೆ ಮುಕ್ತಿ ನೀಡುವ ಪ್ರಯತ್ನ ಇದರದ್ದಾಗಿತ್ತು. ಸರ್ಕಾರಿ ಶಾಲೆಗಳ ಜೀರ್ಣೋದ್ದಾರದಿಂದ ಹಿಡಿದು ಮುಂಗಡಪತ್ರದ ದ್ವಿಗುಣಗೊಳಿಸುವಿಕೆವರೆಗೆ ಮಾಡಿದ ಈ ‘ಪರ್ಯಾಯ ರಾಜಕಾರಣ’, ಇಂದು ರಾಷ್ಟ್ರಕ್ಕೆ ಮಾದರಿಯಾದ ಉತ್ತಮ ರಾಜಕಾರಣ. ಉತ್ತಮ ಆಳ್ವಿಕೆ, ಕಲ್ಯಾಣ ರಾಜ್ಯ, ಮಾನವತಾ ಮೌಲ್ಯಗಳ ವೃದ್ಧಿಗೆ ಇದೊಂದು ಮಾದರಿ ಹಾಗೂ ದಿಕ್ಸೂಚಿ ಆಗಿದೆ. ಈಗಾಗಲೇ ಹಲವಾರು ರಾಜ್ಯಗಳು ಈ ‘ಶ್ರೇಷ್ಠತಾದ್ವೀಪ’ ಮಾದರಿಯನ್ನು ತಮ್ಮ ರಾಜ್ಯಗಳಲ್ಲಿ ಪುನರಾವರ್ತಿಸಿ ಪ್ರಯೋಜನ ಪಡೆಯುತ್ತಿದ್ದಾರೆ.

ಸರ್ಕಾರಿ ಶಾಲೆಗಳ ಜೀರ್ಣೋದ್ದಾರದಿಂದ ಹಿಡಿದು ಮುಂಗಡಪತ್ರದ ದ್ವಿಗುಣಗೊಳಿಸುವಿಕೆವರೆಗೆ ಮಾಡಿದ ಈ ‘ಪರ್ಯಾಯ ರಾಜಕಾರಣ’, ಇಂದು ರಾಷ್ಟ್ರಕ್ಕೆ ಮಾದರಿಯಾದ ಉತ್ತಮ ರಾಜಕಾರಣ.

ಇವೆಲ್ಲಾ ಈ ಚುನಾವಣಾ ಪ್ರಕ್ರಿಯೆ, ಫಲಿತಾಂಶಗಳಿಂದ ಹೊರಬಿದ್ದ ಪರ್ಯಾಯ ಮಾದರಿ ಎನಿಸಿದರೂ, ಭಾರತದ ಮತದಾರ ತನ್ನ ಭಾವನಾತ್ಮಕ ಅಂಧತನದ ಫಲವಾಗಿ ಸೃಷ್ಟಿಸಿಕೊಂಡ ಪೆಡಂಭೂತದಂತಹ ಧರ್ಮಾಧಾರಿತ ಸಂಕಟಗಳು, ದ್ವೇಷಗಳು ಹಾಗೂ ಸಮಾಜದಲ್ಲಿ ಬಿರುಕುಬೀಳಲು ಕಾರಣವಾದ ಭಾವೋದ್ವೇಗಗಳನ್ನು ಮೆಟ್ಟಿನಿಲ್ಲುವುದು ಸುಲಭಸಾಧ್ಯವಲ್ಲ. ಹಾಗಾಗಿ ಈ ಚುನಾವಣೆ ಯಾವುದೇ ಪ್ರತಿರೋಧಶಕ್ತಿ ಹೊಂದಿರದ ಕಾಂಗ್ರೆಸ್‍ನ್ನು ಬಸವಳಿಸುವುದಕ್ಕಿಂತ, ಕಾಲದಿಂದ ಕಾಲಕ್ಕೆ ಬಲಿಷ್ಠವಾಗಿ ಬೇರೂರುತ್ತಿರುವ ಭಾವನಾತ್ಮಕ ಧರ್ಮಾಧಾರಿತ ಹಿಂದೂ ಭಾಂಧವ್ಯವನ್ನು ಪೋಷಿಸುತ್ತಿರುವ ಬಿ.ಜೆ.ಪಿಯನ್ನು ಅಪಜಯಗೊಳಿಸಲು ಅಸಾಧ್ಯವಾದದ್ದು ಈ ಚುನಾವಣೆಯ ಸಂದರ್ಭದಲ್ಲಿ ಗಮನಾರ್ಹ. ಹಾಗಾಗಿ, ಈ ಚುನಾವಣೆ ರಾಷ್ಟ್ರ ರಾಜಕಾರಣದಲ್ಲಿ ಹಾಗೂ ಜನರ ಮನದಲ್ಲಿ ಬಹಳಷ್ಟು ಅತೃಪ್ತಿಗೆ ಒಳಗಾಗಿರಲೂಬಹುದು.

ಆದರೆ, ಈ ಚುನಾವಣಾ ಫಲಿತಾಂಶ ಆಪ್ ಪಕ್ಷಕ್ಕೆ ಹೆಚ್ಚಿನ ಸ್ಥಾನವನ್ನು ದಿಲ್ಲಿಯ ವಿಧಾನ ಸಭೆಯಲ್ಲಿ ತಂದುಕೊಟ್ಟರೂ, ‘ಪರ್ಯಾಯ ರಾಜಕಾರಣ’ದ ಗೆಲುವೆನಿಸಿದರೂ, ರಾಷ್ಟ್ರ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರುವ ಚುನಾವಣೆಯಾಗಲಿಲ್ಲ. ಈ ಚುನಾವಣೆಯನ್ನು ತೀರಾ ಹತ್ತಿರದಲ್ಲಿ ಗಮನಿಸಿದಲ್ಲಿ ಕೇಜ್ರೀವಾಲರ ಹನುಮಾನ್ ಚಾಲೀಸ್ ಬಿತ್ತರಿಸುವ ಪರಿ ಹಾಗೂ ‘ಜೈ ಹನುಮಾನ್’ ಹೇಳಿಕೆಗಳು ಮತ್ತು ತನ್ನ ಗೆಲುವಿನ ನಂತರದಲ್ಲಿ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಎದ್ದು ಕಾಣಿಸುತ್ತದೆ. ಇದರಲ್ಲಿ ‘ಸಾಫ್ಟ್ ಹಿಂದುತ್ವ’ದ ಬಣ್ಣ ಬೆರೆತಿರುವಂತೆ ಕಾಣುತ್ತದೆ. ಧರ್ಮಾಧಾರಿತ ಹಾಗೂ ರಿಲಿಜನ್ ಸಂಬಂಧಿತವಾದ ಅಂಶಗಳನ್ನು ಪ್ರಜ್ಞಾಪೂರ್ವಕವಾಗಿ ದೂರ ಸರಿಸುವ ಅರವಿಂದ ಕೇಜ್ರೀವಾಲರ ತಂತ್ರದ ಉದ್ದೇಶ ಬಿಜೆಪಿ ಹಾಕಿದ ಮಣೆ-ಖೆಡ್ಡಾಗಳಿಂದ ದೂರವಿರುವುದಾಗಿತ್ತು.

ರಾಷ್ಟ್ರೀಯತೆಯ ಚರ್ಚೆಗಳು, ಶಾಹೀನ್‍ಬಾಗ್‍ನ ವಿರೋಧಿ ಮಾತುಗಳು, ಅಲ್ಲಿ ಗುಂಡು ಹಾರಿಸಿ ಭಯ ಹುಟ್ಟಿಸಿದ ಸಂದರ್ಭದಲ್ಲಿ ಪ್ರತಿಕ್ರಿಯಿಸುವುದನ್ನೂ ಇವರು ತಪ್ಪಿಸಿದ್ದು ಕಂಡುಬರುತ್ತದೆ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಪ್ರಾರಂಭವಾಗಿ ದಿಲ್ಲಿ ವಿಶ್ವವಿದ್ಯಾಲಯಗಳಲ್ಲಾದ ಘಟನೆಗಳ ವಿಷಯದಲ್ಲಿ ಕೇಜ್ರೀವಾಲರು ತಾಂತ್ರಿಕವಾಗಿ ಮೂಕತನ ತೋರಿದರು. ಇವರು ಆಡಿದ್ದು ಅತ್ಯಂತ ಕಡಿಮೆ ಮಾತುಗಳು. ದಿಲ್ಲಿ ಆರಕ್ಷಕರನ್ನು ದೂರದೇ ಜನಸಾಮಾನ್ಯರಿಗಾಗಿ ತಾನು ಮಾಡಿರುವ ಸೌಕರ್ಯದ ಚರ್ಚೆ, ಟೌನ್ ಹಾಲ್‍ಗಳಲ್ಲಿ ಪ್ರಶಾಂತ ಕಿಶೋರ್‍ರವರ ನಿರ್ದೇಶನದಂತೆ ತನ್ನ ಕಾರ್ಯದ ಬಗ್ಗೆ ಮಾತ್ರ ಮಾತನಾಡುತ್ತಾ ‘ಕೆಲಸ ಮಾಡಿದ್ದಲ್ಲಿ ಮಾತ್ರ ಓಟು ಕೊಡಿ’ ಎಂಬ ಸಾಧಿಸಿದ್ದ ಕೆಲಸದ ಪ್ರಾತ್ಯಕ್ಷತೆಯನ್ನು ಮುಂದಿಟ್ಟುಕೊಂಡು ಚುನಾವಣೆ ನಡೆಸಿದರು. ಇದು ನಿಜಕ್ಕೂ ‘ಅಭಿವೃದ್ಧಿ’. ಹಾಗಾಗಿ ಈ ಮಾದರಿಯನ್ನು ಇವರನ್ನು ವಿರೋಧಿಸುವವರೂ ಶ್ಲಾಘಿಸುವಂತಾಯಿತು.

ಈ ಚುನಾವಣೆ ಯಾವುದೇ ಪ್ರತಿರೋಧಶಕ್ತಿ ಹೊಂದಿರದ ಕಾಂಗ್ರೆಸ್‍ನ್ನು ಬಸವಳಿಸುವುದಕ್ಕಿಂತ, ಕಾಲದಿಂದ ಕಾಲಕ್ಕೆ ಬಲಿಷ್ಠವಾಗಿ ಬೇರೂರುತ್ತಿರುವ ಭಾವನಾತ್ಮಕ ಧರ್ಮಧಾರಿತ ಹಿಂದೂ ಭಾಂಧವ್ಯವನ್ನು ಪೋಷಿಸುತ್ತಿರುವ ಬಿ.ಜೆ.ಪಿಯನ್ನು ಅಪಜಯಗೊಳಿಸಲು ಅಸಾಧ್ಯವಾದದ್ದು ಈ ಚುನಾವಣೆಯ ಸಂದರ್ಭದಲ್ಲಿ ಗಮನಾರ್ಹ.

ರಾಷ್ಟ್ರೀಯ ಮಟ್ಟದಲ್ಲಿ ಸಿ.ಎ.ಎ, ಎನ್.ಆರ್.ಸಿ. ಹಾಗೂ ಎನ್.ಡಿ.ಪಿ. ಚರ್ಚೆಗಳಿದ್ದರೂ, ಬಿಜೆಪಿ ಇವರನ್ನು ಈ ವಿಷಯವಾಗಿ ವಿಚಲಿತರಾಗಿಸಲು ಪ್ರಯತ್ನಿಸಿದರೂ, ಅಮಿತ್ ಶಾ ಹಾಗೂ ಮೋದಿಯವರ ಸೂತ್ರಗಳಿಗೆ ಇವರು ಸಿಗಲಿಲ್ಲ. ಹಾಗಾಗಿ ಈ ಚುನಾವಣೆ ಈ ದೇಶದ ಕೋಟಿಗಟ್ಟಲೆ ಜನರ ‘ಅವಶ್ಯಕತೆ’ಯಾದ ‘ಬಿಜಲಿ-ಸಡಕ್-ಪಾನಿ’ ಚುನಾವಣೆ ಆಗಿಯೇ ಉಳಿಯಿತು. ಅಲ್ಲದೆ ಆಪ್ ಪಕ್ಷದವರು ಇಡೀ ಚುನಾವಣೆಯಲ್ಲಿ ಅಮಿತ್ ಶಾ-ಮೋದಿ ಅವರನ್ನು ದೂಷಿಸುವ ಯಾವುದೇ ಮಾತುಗಳನ್ನೂ ಆಡಲಿಲ್ಲ. ಈ ತಂತ್ರ ಬಿಜೆಪಿಗೂ ಅರ್ಥವಾಗುವುದಕ್ಕೆ ಕ್ಲಿಷ್ಟವಾಯಿತು. ಪ್ರತೀ ಚುನಾವಣೆಯಲ್ಲಿಯೂ ಬಡಿದೆಬ್ಬಿಸಿದ ರಾಷ್ಟ್ರೀಯತೆಯ ಅಥವಾ ಸಾಂಸ್ಕತಿಕ ರಾಷ್ಟ್ರೀಯತೆ, ಅಥವಾ ಹಿಂದೂ ಅಸ್ಮಿತೆಗಳ ಮೂಲಕವೇ ‘ಊಹಾ ರಾಷ್ಟ್ರ’ದ ಕಡೆ ಸೆಳೆಯುವ ಪ್ರಯತ್ನ ಸತತ 8ನೇ ಬಾರಿಗೆ ಕೈಕೊಟ್ಟಿದ್ದು ಬಿಜೆಪಿಗೆ ಅಂತರ್‍ಮುಖಿ ಚಿಂತನೆಗೂ ಅವಕಾಶ ಮಾಡಿದೆ ಎಂದರೆ ತಪ್ಪಾಗಲಾರದು.

ಮುಖ್ಯಮಂತ್ರಿ ಅಭ್ಯರ್ಥಿ ಮುಖವಿಲ್ಲದೇ ಹೋರಾಡಿದ ಬಿಜೆಪಿ ‘ಆಪ್’ ಪಕ್ಷದ ಕಾರ್ಯಗಳನ್ನು ಟೀಕಿಸುವಲ್ಲಿಯೂ ಯಶಸ್ಸುಗಳಿಸದಿದ್ದದ್ದು ಮತ್ತೊಂದು ಸತ್ಯ. ‘ಆಪ್’ನ ಪ್ರತೀ ಅಭಿವೃದ್ಧಿಯ ವಿಚಾರದಲ್ಲಿ ಪ್ರೂಫ್ ಕೇಳುತ್ತಿದ್ದ ಬಿಜೆಪಿಗೆ ಪ್ರೂಫ್‍ಗಳ ಮಹಾಪೂರ ಒದಗಿಸುತ್ತಿತ್ತು ‘ಆಪ್’. ಬಿಜೆಪಿ ತನ್ನ ಹಿಂದಿನ ವರ್ಷಗಳಲ್ಲಿ ಹಾಗೂ ಪಾರ್ಲಿಮೆಂಟ್ ಚುನಾವಣೆಯಲ್ಲಿ ಗೆಲ್ಲುವಾಗ 65 ಚುನಾವಣಾ ಕ್ಷೇತ್ರಗಳಲ್ಲಿ ಬಲಿಷ್ಠವಾಗಿದ್ದ ಜನ ಬೆಂಬಲವನ್ನು ಈ ಚುನಾವಣೆಯಲ್ಲಿ ‘ಆಪ್’ ಕಸಿದುಕೊಂಡಿತ್ತು. ಶೇ.55ರಷ್ಟು ಪೂರ್ವಾಂಚಲಿಗಳು ಬಿಜೆಪಿ ಬೆಂಬಲಿಗರಾಗಿದ್ದಾರೆ ಎಂಬ ಮಾತು ಸುಳ್ಳಾಯಿತು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಪ್ರಾರಂಭವಾಗಿ ದಿಲ್ಲಿ ವಿಶ್ವವಿದ್ಯಾಲಯಗಳಲ್ಲಾದ ಘಟನೆಗಳ ವಿಷಯದಲ್ಲಿ ಕೇಜ್ರೀವಾಲರು ತಾಂತ್ರಿಕವಾಗಿ ಮೂಕತನ ತೋರಿದರು. ಇವರು ಆಡಿದ್ದು ಅತ್ಯಂತ ಕಡಿಮೆ ಮಾತುಗಳು.

ಶೇ.56 ರಿಂದ ಶೇ.59 ಮಹಿಳೆಯರು ‘ಆಪ್’ ಪರವಾಗಿದ್ದದ್ದು ಆ ಪಕ್ಷಕ್ಕೆ ಆನೆಬಲ ಬಂದಂತಾಗಿ ಬಿಜೆಪಿಗೆ ಬಲವಾದ ಹೊಡೆತವಾಯಿತು. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಜೀವನ ಸುಲಭವಾಗಿ ನಡೆಯಲು ಅವಶ್ಯವಾದ 20,000 ಲೀಟರು ಉಚಿತ ನೀರು, 200 ಯೂನಿಟ್ ಉಚಿತ ವಿದ್ಯುತ್ತು ಈ ಮಹಿಳೆಯರ ಬೆಂಬಲ ಸಹಜವಾಗಿಯೇ ‘ಆಪ್’ ಪರವಾಗಿ ತಿರುಗುವಂತೆ ಮಾಡಿದವು. ಮಹಿಳಾ ಸನ್ಮಾನ ಹಾಗೂ ‘ಮನೆಬಾಗಿಲಿಗೇ’ ರಾಜ್ಯದ ಸೇವೆಗಳು, ಅಪಘಾತವಾದವರಿಗೆ ಸಹಾಯ, ಸಹಾಯ ಮಾಡಿದವರಿಗೆ ಗೌರವಧನ, ಸಿಸಿಟಿವಿ ಅಳವಡಿಕೆ -ಹೀಗೆ ಹತ್ತಾರು ಸೇವೆಗಳು ‘ಜನಪರ’ವಾಗಿದ್ದು ‘ಆಪ್’ಗೆ ಭಾವನಾತ್ಮಕ ವಿಷಯಗಳಿಗಿಂತ ಮೇಲುಗೈ ಸಾಧಿಸಲು ಅನುಕೂಲವಾಯಿತು.

ಚುನಾವಣಾ ಸಮೀಕ್ಷೆ ತಿಳಿಸಿದಂತೆ ಶೇ. 3ರಷ್ಟು ಮತದಾರರು ರಾಷ್ಟ್ರೀಯತೆಗೆ ಬೆಂಬಲಿಸಿದರೆ, ಶೇ. 2ರಷ್ಟು ಸಿ.ಎ.ಎ.ಗೆ ಬೆಂಬಲಿಸಿದ್ದು ಇಲ್ಲಿ ಗಮನಾರ್ಹ. ಶೇ.57ರಷ್ಟು ವಿದ್ಯಾರ್ಥಿಗಳು, ವ್ಯಾಪಾರಿಗಳು, ಸ್ಲಂವಾಸಿಗಳು, ಯುವಕರು ‘ಆಪ್’ಗೆ ಸಹಾಯಕರಾದರು. ಶೇ.11-13 ಮುಸ್ಲಿಮರ ಬೆಂಬಲದ ಫಲವಾಗಿ 20-25 ವಿಧಾನಸಭಾ ಕ್ಷೇತ್ರಗಳಲ್ಲಿ ‘ಆಪ್’ ಮುನ್ನಡೆ ಸಾಧಿಸಲು ಸಾಧ್ಯವಾಯ್ತು. ಆದರೆ ಬ್ರಾಹ್ಮಣರು, ಗುಜ್ಜಾರರು, ಜಾಟ್‍ಗಳು, ಮೇಲ್ಜಾತಿ ಎನಿಸುವವರು ಬಿಜೆಪಿಗೆ ಬೆಂಬಲಿಸಿದರು. ಇಡೀ ದಿಲ್ಲಿಯ ಈ ಸಮಾಜದಲ್ಲಿನ ರಾಜಕೀಯವಾದ ಒಡಕನ್ನು ಇದು ಪ್ರತಿಬಿಂಬಿಸುವಂತಾಯಿತು. 40ಕ್ಕೂ ಹೆಚ್ಚು ರ್ಯಾಲಿಗಳನ್ನು ಮಾಡಿದ್ದ ಬಿಜೆಪಿಗೆ ಈ ಫಲಿತಾಂಶ ನಿಜಕ್ಕೂ ಆತ್ಮಾವಲೋಕನ ಮಾಡಿಕೊಳ್ಳಲು ದೊರಕಿರುವ ಸಕಾರಣವೇ ಸರಿ.

ಶೇ.56 ರಿಂದ ಶೇ.59 ಮಹಿಳೆಯರು ‘ಆಪ್’ ಪರವಾಗಿದ್ದದ್ದು ಆ ಪಕ್ಷಕ್ಕೆ ಆನೆಬಲ ಬಂದಂತಾಗಿ ಬಿಜೆಪಿಗೆ ಬಲವಾದ ಹೊಡೆತವಾಯಿತು. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಜೀವನ ಸುಲಭವಾಗಿ ನಡೆಯಲು ಅವಶ್ಯವಾದ 20,000 ಲೀಟರು ಉಚಿತ ನೀರು, 200 ಯೂನಿಟ್ ಉಚಿತ ವಿದ್ಯುತ್ತು ಈ ಮಹಿಳೆಯರ ಬೆಂಬಲ ಸಹಜವಾಗಿಯೇ ‘ಆಪ್’ ಪರವಾಗಿ ತಿರುಗುವಂತೆ ಮಾಡಿದವು.

ಈ ಮೇಲಿನ ಎಲ್ಲಾ ಅಂಶಗಳು ಸಹ ನಿರ್ದಾಕ್ಷಿಣ್ಯವಾಗಿ ಭಾರತದ ಪ್ರತೀ ಪ್ರಜೆ ಬಯಸುತ್ತಿರುವ ‘ಅಭಿವೃದ್ಧಿ’ಯ ಬಗ್ಗೆ ಹಾಗೂ ಅದರ ಅವಶ್ಯಕತೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ವೈಜ್ಞಾನಿಕವಾಗಿ ಯಾವುದೇ ಚುನಾವಣೆ ಇದೇ ಅಥವಾ ಇದೊಂದೇ ಕಾರಣಕ್ಕಾಗಿ ಗೆಲ್ಲಲಾಯಿತೆಂದು ಯಾರೂ, ಯಾವಕಾಲದಲ್ಲೂ ಹೇಳಲಾಗುವುದಿಲ್ಲ. ಆದರೆ, ರಾಜಕಾರಣಿಗಳು ಜನ ಬಯಸಿದಂತೆ ‘ಕೆಳಮುಖ’ವಾಗಿ ಜನರನ್ನು ಅರ್ಥಮಾಡಿಕೊಂಡು ಅವರ ಅವಶ್ಯಕತೆಗೆ ಸ್ಪಂದಿಸಿದರೆ ‘ಜಯ’ ನಿಶ್ಚಿತ. ಹಾಂಗತ ‘ರಾಷ್ಟ್ರೀಯತೆ’ ಅಥವಾ ಸಿ.ಎ.ಎ. ಬಡಿದೆಬ್ಬಿಸಿರುವ ರಾಷ್ಟ್ರೀಯ ಭಾವನೆಗಳನ್ನು ಬೇಡವೆಂದು ತಿರಸ್ಕರಿಸಲೂ ಸಾಧ್ಯವಿಲ್ಲ.

ಆದರೆ ದೇಶದ ‘ಚರಿತ್ರೆ’ಯನ್ನು ಯಾವುದೋ ಕಾರಣಗಳಿಂದ ವಿಭಿನ್ನವಾಗಿ ವಿವರಿಸುವ ಪ್ರಯತ್ನ ಮಾಡುವಾಗ ಅದು ವೈಚಾರಿಕತೆಯ ಬದಲು ಭಾವನಾತ್ಮಕ ಕಾರಣಗಳಿಂದಾಗಿ ಪ್ರಭಾವಿ ಆಗಿದ್ದರೆ ಹಾಗೂ ಅದು ಎಲ್ಲ ಜನರನ್ನೂ ಧರ್ಮ, ಜಾತಿ ಹಾಗೂ ವರ್ಗಗಳನ್ನೂ ಒಳಗೊಂಡಿರದಿದ್ದರೆ, ಅದು ಜನರಿಂದ ‘ಪ್ರತಿರೋಧ’ಕ್ಕೆ ಒಳಪಡುತ್ತದೆ ಎಂಬುದೂ ಸತ್ಯ. ಹೀಗಾಗಿ ಈ ಚುನಾವಣೆಯ ಫಲಿತಾಂಶ ಎಷ್ಟೇ ರೋಚಕವಾಗಿದ್ದರೂ, ಇದು ರಾಷ್ಟ್ರವ್ಯಾಪಿಯಾಗಿ ಪರಿಣಾಮ ಬೀರುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ.

ವೈಜ್ಞಾನಿಕವಾಗಿ ಯಾವುದೇ ಚುನಾವಣೆ ಇದೇ ಅಥವಾ ಇದೊಂದೇ ಕಾರಣಕ್ಕಾಗಿ ಗೆಲ್ಲಲಾಯಿತೆಂದು ಯಾರೂ, ಯಾವಕಾಲದಲ್ಲೂ ಹೇಳಲಾಗುವುದಿಲ್ಲ. ಆದರೆ, ರಾಜಕಾರಣಿಗಳು ಜನ ಬಯಸಿದಂತೆ ‘ಕೆಳಮುಖ’ವಾಗಿ ಜನರನ್ನು ಅರ್ಥಮಾಡಿಕೊಂಡು ಅವರ ಅವಶ್ಯಕತೆಗೆ ಸ್ಪಂದಿಸಿದರೆ ‘ಜಯ’ ನಿಶ್ಚಿತ.

ಭಾರತದ ಒಂದು ‘ಕಲ್ಪಿತ-ಸಮುದಾಯ’ದಲ್ಲಿ ‘ವಿಭಿನ್ನತೆ’, ‘ವಿವಿಧತೆ’, ‘ಅಸ್ಮಿತೆ’ ಇವುಗಳು ಸತ್ಯವಾದವು. ಈ ದೇಶದಲ್ಲಿರುವ ಪ್ರತೀ ಸಂಸಾರವೂ-ಹಳ್ಳಿಯೂ ತನ್ನದೇ ಆದ ‘ಅಸ್ಮಿತೆ’ ಹೊಂದಿದೆ. ಈ ಕಾರಣ ಈ ದೇಶದ ರಾಜ್ಯಗಳ ಚುನಾವಣೆ ಪ್ರತೀ ರಾಜ್ಯಕ್ಕೂ ವಿಭಿನ್ನವಾಗಿದ್ದು ಮತ್ತೊಂದು ರಾಜ್ಯದ ಚುನಾವಣೆಯನ್ನು ಪ್ರಭಾವಿಸುತ್ತದೆ ಎಂಬುದು ಸಾಧ್ಯ ಆದರೆ ಸತ್ಯವಲ್ಲಾ. ಹಾಗಾಗಿ ಇದೊಂದು ನವ್ಯ ಮಾದರಿ ಚುನಾವಣೆ. ಒಂದು ಚಳವಳಿಯಿಂದ ರಾಜಕೀಯ ಪಕ್ಷವಾಗಿ ಬೆಳೆದ ಆಪ್ ‘ಪರ್ಯಾಯ’ ರಾಜಕೀಯ-ರಾಜಕಾರಣವನ್ನು ಪ್ರತಿಬಿಂಬಿಸಿರುವುದು ‘ಕಾಮ್ ಕಾ ರಾಜಕಾರಣ’ ಎಂಬುದರಿಂದ.

ಹಾಗಾಗಿ, ಇದೊಂದು ದಿಕ್ಸೂಚಿಯಾಗಿ, ‘ಅಭಿವೃದ್ಧಿ-ರಾಜಕಾರಣ’ದಿಂದ ರಾಷ್ಟ್ರದ ಬೆಳವಣಿಗೆ ಧನಾತ್ಮಕವಾಗಿ ಸಾಧ್ಯವಾಗುವುದೇ ಆದರೆ, ಈ ‘ಮಾದರಿ’ ಚುನಾವಣೆಯಲ್ಲಿ ಗೆಲುವನ್ನು ತಂದುಕೊಡುವುದರಲ್ಲಿ ಅನುಮಾನ ಬೇಡ ಎಂಬುದನ್ನು ಖಚಿತಪಡಿಸಿದೆ. ಧ್ರುವೀಕರಣದ ರಾಜಕಾರಣ, ರಾಷ್ಟ್ರವಾದಿ ರಾಜಕಾರಣ, ಜಾತಿ ರಾಜಕಾರಣ, ಓಟುಗಳ ಕ್ರೋಡೀಕರಣದ ರಾಜಕಾರಣಗಳನ್ನು ‘ಅಭಿವೃದ್ಧಿ’, ‘ಕಾಮ್-ಕ-ರಾಜಕಾರಣ’ದ ಮಾದರಿ ಮೀರಿನಿಲ್ಲುವ ಶಕ್ತಿಹೊಂದಿದೆ ಎಂಬುದು ಈ ಸಂದರ್ಭದಲ್ಲಿ ಸತ್ಯ.

ಆದರೆ, ಈ ಮಾದರಿಯನ್ನು ಕೇವಲ ಸಣ್ಣ ರಾಜ್ಯಗಳಲ್ಲಿ ಪುನರಾವರ್ತಿಸಬಹುದೇ ಹೊರತು, ಈಗಾಗಲೇ ಬಲಿತ ರಾಜಕಾರಣ ಹೊಂದಿರುವ ‘ದೊಡ್ಡ’ ರಾಜ್ಯಗಳಲ್ಲಿ ಈ ಮಾದರಿ ‘ಸಾರಗುಂದಬಹುದಾದ’ ಅಪಾಯ ಇರುವುದರಿಂದ ಇದರ ಪರಿಣಾಮ ರಾಷ್ಟ್ರವ್ಯಾಪಿಯಾಗುವ ಸಾಧ್ಯತೆ ಕಡಿಮೆ. ಆದರೂ ಭಾರತದ ರಾಷ್ಟ್ರೀಯ ಚರಿತ್ರೆಯಲ್ಲಿ ಇದೊಂದು ‘ಮೈಲಿಗಲ್ಲು ಚುನಾವಣೆ’. ಇದರಲ್ಲಿ ಗೆಲುವಿನ ಒಂದು ಸೂತ್ರ ಅಡಗಿದೆ ಎಂಬುದರಲ್ಲಿ ಅನುಮಾನವಿಲ್ಲ.

*ಲೇಖಕರು ರಾಜಕೀಯ ವಿಜ್ಞಾನ ಬೋಧಕರಾಗಿ 32 ವರ್ಷಗಳ ಅನುಭವ ಹೊಂದಿದ್ದು, ಪ್ರಸ್ತುತ ಕರ್ನಾಟಕ ವಿವಿಯಲ್ಲಿ ಪ್ರಾಧ್ಯಾಪಕರು. ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಸುದ್ದಿವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published.