ದೇವಲೋಕದಲ್ಲಿ ಗುಂಡಣ್ಣ- ಮಂಗಮ್ಮ!

ದೇವರು ಅಲಾಟ್ ಮಾಡಿದ್ದ ನರಕದಿಂದ ಗಂಡ ಗುಂಡಣ್ಣನನ್ನು ಬಿಡಿಸಿಕೊಂಡು ಸ್ವರ್ಗಕ್ಕೆ ಕರೆದೊಯ್ದಳು ಮಂಗಮ್ಮ. ಸತ್ತರೂ ಹೆಂಡತಿ ಗಂಗಮ್ಮನಿಂದ ಬಿಡುಗಡೆ ಸಿಗದ ಬೇಸರದಲ್ಲಿ ಹಿಂಬಾಲಿಸಿದ ಗುಂಡಣ್ಣ!

ಎಲ್.ಚಿನ್ನಪ್ಪ

ಮೇಲಣ ಸ್ವರ್ಗಲೋಕವು ಸಕಲ ವೈಭೋಗ ಹಾಗೂ ವಿಭಿನ್ನತೆಯಿಂದ ಕೂಡಿತ್ತು. ಬೃಹತ್ ದೈವ ಭವನದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ದೇವರು ಆಸೀನರಾಗಿದ್ದರು. ಅವರ ಮುಂದೆ ಮಾನವ ಪ್ರೇತಾತ್ಮಗಳ ಉದ್ದನೆಯ ಸಾಲು. ಸರತಿ ಸಾಲಿನಲ್ಲಿ ಸಾಗಿ ಬರುತ್ತಿದ್ದ ಪ್ರತಿಯೊಬ್ಬ ಜೀವಿಯ ನೊಸಲನ್ನು ಮುಟ್ಟಿ ನೋಡುತ್ತಿದ್ದ ದೇವರು, ಪಾಪ-ಪುಣ್ಯಗಳ ಲೆಕ್ಕವನ್ನು ಅಲ್ಲೇ ತಾಳೆ ಮಾಡಿ ಅವರವರ ಅರ್ಹತೆಗೆ ತಕ್ಕಂತೆ, ಸ್ವರ್ಗ ಅಥವಾ ನರಕವೆಂದು ತೀರ್ಪು ನೀಡಿ ಕಳುಹಿಸುತ್ತಿದ್ದರು.

ಹಿಂದೆಂದೂ ಕಾಣದ ಮಾನವ ಪ್ರೇತಾತ್ಮಗಳ ಬಹು ಉದ್ದನೆಯ ಸಾಲನ್ನು ಕಂಡು ದೇವರಗೂ ಅಚ್ಚರಿಯಾಗದಿರಲಿಲ್ಲ! ಏಕೆಂದರೆ ದೇವಲೋಕದಲ್ಲಿ ಒಮ್ಮೆಲೆ ಅಷ್ಟೊಂದು ಮಾನವ ಜೀವಿಗಳ ಉದ್ದನೆಯ ಸಾಲನ್ನು ಅವರು ಕಂಡು ಬಹಳ ವರ್ಷಗಳೇ ಕಳೆದಿದ್ದವು. ಸರತಿ ಸಾಲಿನಲ್ಲಿದ್ದ ಶೇ.90ರಷ್ಟು ಮಂದಿ ಭೂಲೊಕದಲ್ಲಿ ಅವತರಿಸಿದ್ದ ಕೋವಿಡ್‌ಗೆ ಕೊರಳೊಡ್ಡಿ ದೇವಲೋಕಕ್ಕೆ ಪಾಸ್‌ಪೋರ್ಟ್ ಪಡೆದು ಬಂದವರೇ.

ಇಷ್ಟೊಂದು ಮಾನವ ಜೀವಿಗಳಲ್ಲಿ ತನ್ನ ಸಾಮ್ರಾಜ್ಯಕ್ಕೆ ಎಷ್ಟು ಮಂದಿ ಅರ್ಹರಾಗುತ್ತಾರೋ ಎಂದು ನರಕಾಧಿಪತಿ ಯಮ ತನ್ನ ಹೆಗಲಲ್ಲಿದ್ದ ಗದೆಯನ್ನು ಝಳಪಿಸುತ್ತ, ಕೈಯಲ್ಲಿ ಮೀಸೆಯನ್ನು ತಿರುಗಿಸುತ್ತ ಕಾತುರದಿಂದ ಮಾನವ ಜೀವಿಗಳ ಸಮೀಕ್ಷೆ ಮಾಡುತ್ತಿದ್ದ. ಅದೇ ಕೋವಿಡ್‌ನ ಮೃತ್ಯುಪಾಶಕ್ಕೆೆ ತಮ್ಮ ಪ್ರಾಣಗಳನ್ನು ಒಪ್ಪಿಸಿ ಬಂದಿದ್ದ ಗುಂಡಣ್ಣ-ಮಂಗಮ್ಮ ದಂಪತಿ ತಮ್ಮ ಪಾಪ ಪುಣ್ಯಗಳ ತೀರ್ಪಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು.

ಮೊದಲು ಮಂಗಮ್ಮಳ ಸರದಿ ಬಂತು. ದೇವರು ಆಕೆಯ ಹಣೆಯನ್ನು ಮುಟ್ಟಿನೋಡಿ, “ಮಂಗಮ್ಮ, ನಿನ್ನ ಜೀವಿತಾವಧಿಯಲ್ಲಿ ಶೇ.90ರಷ್ಟು ಪುಣ್ಯ, ಶೇ.10ರಷ್ಟು ಪಾಪಗಳನ್ನು ಮಾಡಿರುವಿ. ನಿನ್ನ ಪಾಪಗಳನ್ನು ಕ್ಷಮಿಸಿ ಆದ್ಯತೆ ಮೇರೆಗೆ ನಿನಗೆ ನಾನು ಸ್ವರ್ಗವನ್ನೇ ನೀಡುತ್ತಿದ್ದೇನೆ. ನಿನ್ನ ಹರೆಯದಲ್ಲಿದ್ದ ಅದೇ ಮೋಹಕ ಚೆಲುವನ್ನು ನೀನು ಸ್ವರ್ಗದಲ್ಲಿಯೂ ಹೊಂದುವಿ. ಇಲ್ಲಿನ ಸಕಲ ಸುಖಭೋಗಗಳಿಗೆ, ರಾಗ ವಿಲಾಸಗಳಿಗೆ ನೀನು ಭಾಜನಳಾಗಿರುವೆ” ಎಂದರು.

“ಧನ್ಯವಾದಗಳು ದೇವರೇ! ಹಾಗೆಯೇ ಸ್ವಲ್ಪ ನನ್ನ ಗಂಡನ ಪಾಪ-ಪುಣ್ಯಗಳನ್ನೂ ನೋಡಿ ಬಿಡಿ” ಎಂದಳು. ಗುಂಡಣ್ಣನ ಹಣೆ ಮುಟ್ಟಿನೋಡಿದ ದೇವರು, “ನಿನ್ನ ಜೀವನದಲ್ಲಿ ಶೇ.80ರಷ್ಟು ಪಾಪ, ಶೇ.20ರಷ್ಟು ಪುಣ್ಯ ಮಾಡಿರುವೆ. ನಿನ್ನಲ್ಲಿ ಪುಣ್ಯಕ್ಕಿಂತ ಪಾಪವೇ ಹೆಚ್ಚು ಇರುವುದರಿಂದ ನಿನಗಿಲ್ಲಿ ನರಕವೇ ಗತಿ. ಭೂಲೋಕದಲ್ಲಿ ನೀನು ಪಾಪಕೃತ್ಯಗಳಲ್ಲಿದ್ದಾಗ ನಿನಗೆ ಎಂತಹ ದುಷ್ಟತನದ ಮುಖವಿತ್ತೊ, ಅದೇ ಮುಖದ ಪ್ರತೀಕವನ್ನು ಇಲ್ಲಿ ಈ ನರಕದಲ್ಲಿಯೂ ಹೊಂದುವಿ. ನಿನಗೆ ಇಲ್ಲಿ ಸದಾ ಧಗಧಗಿಸುವ ನಿಗಿನಿಗಿ ಕೆಂಡಗಳ ಮೇಲೆ ಬಿದ್ದು ಒದ್ದಾಡುವ ಶಿಕ್ಷೆ” ಎಂದರು, ದೇವರು.

ದೇವರು ತನ್ನ ಗಂಡನಿಗೆ ನೀಡಿದ ತೀರ್ಪನ್ನು ಕೇಳಿದ ಮಂಗಮ್ಮ ಒಂದು ಕ್ಷಣ ದಂಗಾಗಿಬಿಟ್ಟಳು. ತಕ್ಷಣ ಅವಳು “ದೇವರೇ, ನಮ್ಮ ದಾಂಪತ್ಯ ಬದುಕಲ್ಲಿ ನನ್ನ ಗಂಡ ಒಂದು ಸಣ್ಣ ತಪ್ಪು ಮಾಡಿದರೂ ನಾನು ಖಂಡಿಸುತ್ತ “ಏ ಪಾಪಿ, ನೀನು ಸತ್ರೆ, ಖಂಡಿತ ನರ್ಕಕ್ಕೆ ಹೋಗ್ತೀಯ” ಎಂದು ನನ್ನ ಗಂಡನನ್ನು ಶಪಿಸುತ್ತಿದ್ದೆ. ನಾನು ಹಾಕಿದ ಶಾಪದಿಂದಲೇ ನನ್ನ ಗಂಡ ನರಕದ ಪಾಲಾದ ಎಂದು ನಾನು ಈಗ ಭಾವಿಸಬೇಕಾಗುತ್ತೆ. ನನ್ನ ಗಂಡನೂ ಹಾಗೆಯೇ ಅಂದುಕೊಳ್ಳುವುದು ಸಹಜ. ಅಷ್ಟು ಮಾತ್ರವಲ್ಲದೆ ಅವನು ಇಲ್ಲಿ ಶಿಕ್ಷೆ ಅನುಭವಿಸುತ್ತಲೇ ನನಗೆ ಶಾಪ ಹಾಕ್ತಾ ರ‍್ತಾನೆ. ಇಂತಹ ಅಪರಾಧ ಮನೋಭಾವವನ್ನು ಹೊತ್ತುಕೊಂಡು ನಾನು ಸ್ವರ್ಗಸುಖವನ್ನು ಅನುಭವಿಸುವುದಾದರೂ ಹೇಗೆ?” ಎಂದು ದೇವರಿಗೆ ಮರುಪ್ರಶ್ನೆ ಹಾಕಿದಳು, ಮಂಗಮ್ಮ.

ದೇವರು ದೇಶಾವರಿ ನಗೆ ಬೀರುತ್ತ “ನಿನ್ನ ಗಂಡನ ಮೇಲಿನ ಅನುಕಂಪ ನನ್ಮುಂದೆ ತರ‍್ಸ್ಬೇಡ ಮಂಗಮ್ಮ! ನಾನು ಹೇಳಿದ್ದೇ ಅಂತಿಮ. ನನ್ನ ತೀರ್ಪಿನಲ್ಲಿ ಯಾವುದೇ ಬದಲಾವಣೆ ಇಲ್ಲ” ಎಂದರು. “ಹಾಗಿದ್ದರೆ ಸ್ವಾಮಿ, ದಯವಿಟ್ಟು ಅನ್ಯಥಾ ಭಾವಿಸ್ಬೇಡಿ. ನಮ್ಮಿಬ್ಬರಿಗೂ ನರಕಾನೇ ಕೊಟ್ಬಿಡಿ. ಅಲ್ಲೇ ಹೇಗೋ ಇದ್ಕೊತೇವೆ” ಎಂದಳು ಮಂಗಮ್ಮ.

“ಹಾಗೆಲ್ಲ ನೀನು ಕೇಳ್ದಂಗೆ ನಾನು ಕೊಡೋಕಾಗಲ್ಲ, ಮಂಗಮ್ಮ. ಇಲ್ಲೂ ಶಿಸ್ತು ನಿಯಮಗಳಿವೆ. ಅವುಗಳ ಪರಿಪಾಲಕ ನಾನು. ಅವರವರ ಪಾಪಕರ್ಮಗಳಿಗೆ ಪ್ರಾರಬ್ಧಗಳಿಗೆ ಅವರು ತಕ್ಕ ಶಿಕ್ಷೆ ಅನುಭವಿಸಲೇಬೇಕು” ಎಂದರು ದೇವರು. “ನಮ್ಮ ಮೇಲೂ ತುಸು ಅನುಕಂಪವಿರಲಿ, ದೇವರೇ. ನಾವು ಮೂವತ್ತು ವರ್ಷಗಳ ಕಾಲ ದಂಪತಿಯಾಗಿ ಬಾಳಿದ್ದೇವೆ. ನಿಮ್ಮ ತೀರ್ಪಿನಂತೆ ನಾನು ಹೆಚ್ಚು ಪುಣ್ಯ ಮಾಡಿರಬಹುದು, ಆದರೆ ನನ್ನ ಜೊತೆಯಲ್ಲೇ ಇದ್ದ ನನ್ನ ಗಂಡನ ತಪ್ಪುಗಳನ್ನೆಲ್ಲ ತಿದ್ದುವಲ್ಲಿ ನಾನು ವಿಫಲಳಾಗಿದ್ದು, ನನ್ನ ಗಂಡ ಈಗ ನರಕದ ಪಾಲಾಗಿದ್ದು, ನನ್ನ ತಪ್ಪೂ ಅಲ್ಲವೆ ಸ್ವಾಮಿ?” ಎಂದಳು ಮಂಗಮ್ಮ.

“ಹೋ, ಮಂಗಮ್ಮ! ನೀನು ಅತಿ ಬುದ್ಧಿವಂತೆ! ನಿನ್ನ ಗಂಡ ನಿನ್ನಷ್ಟು ಬುದ್ಧಿವಂತನಲ್ಲ ಬಿಡು. ದಡ್ಡನಾಗಿ ಯಾವುದ್ಯಾವುದೋ ಪಾಪವನ್ನೆಲ್ಲ ತಾನಾಗಿಯೇ ಮೇಲೆಳೆದ್ಕೊಂಡ. ಅದರಿಂದ ಇವನು ನರಕಕ್ಕೆ ಹೋಗುವಂತಾಯಿತು. ಅದಿರಲಿ, ನಿನ್ನ ಗಂಡ ನಿನಗೇ ದ್ರೋಹ ಮಾಡಿ ನಿನ್ನ ಸಹೋದರಿ ಮೇಲೂ ಅತ್ಯಾಚಾರ ಮಾಡಿದ್ದಾನಲ್ಲ” ಎಂದರು ದೇವರು. “ಹೌದು ದೇವರೇ, ಅದರಲ್ಲಿ ನಿಮ್ದೂ ತಪ್ಪಿದೆ. ನನಗಿಂತಲೂ ನನ್ನ ಸಹೋದರಿಯನ್ನು ಹೆಚ್ಚು ಸೌಂದರ್ಯವತಿಯನ್ನಾಗಿ ಸೃಷ್ಟಿಸಿದ್ದು ನಿಮ್ಮ ತಪ್ಪಲ್ಲವೆ? ನಿಮ್ಮ ತಪ್ಪು ಹಾಗು ನನ್ನ ಗಂಡನ ಕಾಮಕ್ಕೆ ಅವಳು ಬಲಿಯಾಗಿದ್ದೊಂದು ದುರ್ವಿಧಿ” ಎಂದಳು ಮಂಗಮ್ಮ.

“ಹೋ ಮಂಗಮ್ಮ, ನೀನು ಬಲು ಚಾಣಾಕ್ಷೆ! ಹೌದು, ನಿನ್ನ ತಂದೆ-ತಾಯಿ ನಿನ್ನ ಒಡಹುಟ್ಟಿದವರೆಲ್ಲರೂ ಇಲ್ಲೇ ನರಕದಲ್ಲೇ ಇದ್ದಾರಲ್ಲ, ಅವರ ಪರವಾಗಿ ನೀನೇಕೆ ಮಾತಾಡ್ತಿಲ್ಲ?” ಎಂದರು, ದೇವರು.

“ಏನ್ ಸ್ವಾಮಿ ಹೀಗೆ ಹೇಳ್ತಿದ್ದೀರಿ? ಜಗತ್ತಿನ ಎಲ್ಲಾ ಸಂಬಂಧಗಳಿಗಿಂತ ದಾಂಪತ್ಯ ಸಂಬಂಧವೇ ಅತಿ ಶ್ರೇಷ್ಠವೆಂದು ನೀವೇ ಹೇಳಿದ್ದೀರಲ್ಲ. ನನ್ನ ಪತಿಯ ಪರವಾಗಿ ನಾನು ಮಾತಾಡದಿದ್ದರೆ, ಬೇರೆ ಯಾರು ಮಾತಾಡ್ತಾರೆ? ನನ್ನ ತಂದೆಯ ಪರವಾಗಿ ನನ್ನ ತಾಯಿ, ನನ್ನ ಸಹೋದರರ ಪರವಾಗಿ ಅವರವರ ಪತ್ನಿಯರು ವಕಾಲತ್ತು ವಹಿಸಬೇಕಷ್ಟೆ” ಎಂದಳು ಮಂಗಮ್ಮ.

“ಹೋ ಮಂಗಮ್ಮ, ನಿನ್ನಲ್ಲಿ ಅತ್ಯಂತ ವಾಕ್ ಚಾತುರ್ಯವಿದೆ! ಅದಿರಲಿ, ನಾನೀಗ ನಿನ್ನ ಕೋರಿಕೆಯನ್ನು ತಿರಸ್ಕರಿಸಿದರೆ, ನೀನೇನು ತಾನೆ ಮಾಡಬಲ್ಲೆ?” ಎಂದರು, ದೇವರು. “ಹೋ ದೇವರೇ! ಈಗಲೇ, ಈ ಕೂಡಲೆ ನಾನಿಲ್ಲಿ ಹೋರಾಟ ಪ್ರಾರಂಭಿಸುತ್ತೇನೆ. ಜಗತ್ತಿನಲ್ಲಿ ಎಷ್ಟೊಂದು ಸ್ತ್ರೀಯರನ್ನು ಹಠಮಾರಿ, ಗಯ್ಯಾಳಿಯನ್ನಾಗಿ ನೀವೇ ಸೃಷ್ಟಿಸಿದ್ದೀರಲ್ಲ. ಅಂತಹ ಶತಕೋಟಿ ಸ್ತ್ರೀಯರ ಪೈಕಿ ನಾನೂ ಒಬ್ಬಳು. ಇಲ್ಲಿ ನನ್ನ ಹೋರಾಟ ಪ್ರಾರಂಭಿಸುವ ಮುನ್ನ ನಿಮ್ಮ ಪಾದಗಳಿಗೆ ಬಿದ್ದು ಬೇಡಿಕೊಳ್ಳುತ್ತೇನೆ. ದಯಮಾಡಿ ನನ್ನ ಗಂಡನಿಗೆ ಸ್ವರ್ಗವನ್ನೇ ಕೊಟ್ಟು ಬಿಡಿ” ಎನ್ನುತ್ತ ಮಂಗಮ್ಮ ದೇವರ ಪಾದಗಳಿಗೆ ಸಾಷ್ಟಾಂಗ ಎರಗಿದಳು. ದೇವರು ಸ್ವಲ್ಪವೂ ವಿಚಲಿತರಾಗಲಿಲ್ಲ ಅಥವಾ ಬದಲಾಗಲಿಲ್ಲ. ನೆಟ್ಟಿದ್ದ ದೃಷ್ಟಿಯನ್ನು ಕದಲಿಸದೆ ಅವಳ ಮುಖ ನೋಡಿ ಮುಗುಳ್ನಕ್ಕರಷ್ಟೆ.

ಇಷ್ಟೆಲ್ಲ ಆದರೂ ಗುಂಡಣ್ಣ ಮಾತ್ರ ದೇವರ ಮುಂದೆ ಕೈಕಟ್ಟಿಕೊಂಡು ತುಟಿ ಪಿಟಕ್ಕೆನ್ನದೆ ತಾನೊಬ್ಬ ಅಪರಾಧಿಯಂತೆಯೇ ನಿಂತಿದ್ದ. ದೇವರು ಮಂಗಮ್ಮನನ್ನು ನೋಡಿ, “ಏಕೋ ಮಂಗಮ್ಮ, ನಿನ್ಮೇಲೆ ಕೋಪಾನೇ ಬರ‍್ತಿಲ್ಲ ನಿನಗೋಸ್ಕರ ನನ್ನ ಮನಸ್ಸನ್ನು ಸ್ವಲ್ಪ ಮೃದು ಮಾಡಿಕೊಳ್ತೇನೆ. ನಿನ್ನ ಗಂಡ ಸ್ವಲ್ಪ ಸಮಯ ನರಕದಲ್ಲೇ ಇರಲಿ, ಅವನು ಮಾಡಿದ ಪಾಪಗಳಿಗೆ ಅಲ್ಲೇ ಶಿಕ್ಷೆ ಅನುಭವಿಸಲಿ, ಆಮೇಲೆ ನಿನ್ನ ಜೊತೆ ಸ್ವರ್ಗ ಸೇರಿಕೊಳ್ಳಲಿ” ಎಂದರು. ಬಾಯಿ ತೆರೆಯದೆ ತಲೆಯಾಡಿಸದೆ ಮಂಗಮ್ಮ ನಿರ್ವಿಣ್ಣಳಾಗಿ ನಿಂತುಬಿಟ್ಟಳು. ಇದ್ದಕ್ಕಿದ್ದಂತೆ ದೇವರ ಮುಖದಲ್ಲಿ ಏನೋ ಬದಲಾವಣೆ ಕಂಡು ಬಂತು. ಗುಂಡಣ್ಣನನ್ನು ಹತ್ತಿರಕ್ಕೆ ಕರೆದ ದೇವರು ಅವನ ಕೆನ್ನೆಗೆ ಚಟಾರನೆ ಬಾರಿಸಿ, “ನಿನ್ನ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ, ನೀವಿನ್ನು ಸ್ವರ್ಗಕ್ಕೆ ಹೋಗಬಹುದು” ಎಂದರು.

ದೇವರು ಕೆನ್ನೆಗೆ ಭಾರಿಸಿದ ಏಟಿನಿಂದ ಗುಂಡಣ್ಣ ತತ್ತರಿಸಿಹೋದ. ‘ಮೂವತ್ತು ವರ್ಷಗಳ ಕಾಲ ಇವಳೊಡನೆ ಸಂಸಾರ ಮಾಡಿ ಅನುಭವಿಸಿದ ಭಯಂಕರ ಹಿಂಸೆಗಿಂತಲೂ ಇಲ್ಲಿನ ನರಕ ವಾಸವೇ ಎಷ್ಟೋ ಮೇಲಾಗಿತ್ತು! ಇಲ್ಲಾದರೂ ಸ್ವತಂತ್ರವಾಗಿ ಇರಬಹುದಾಗಿತ್ತಲ್ಲ’ ಎಂದುಕೊಂಡಿದ್ದ ಗುಂಡಣ್ಣನಿಗೆ, ದೇವರು ಕೊಟ್ಟ ತೀರ್ಪು, ಕಪೋಲಕ್ಕೆ ಬಾರಿಸಿದ ಏಟು ಒಮ್ಮೆಲೆ ಹತ್ತು ಸಾವಿರ ವೋಲ್ಟೇಜ್ ಶಾಕ್ ರಪ್ಪನೆ ಬಡಿದಂತಾಯಿತು! ‘ಇಲ್ಲೂ ನನ್ನ ಗಯ್ಯಾಳಿ ಪತ್ನಿಯೇ ಗೆದ್ದು ಬಿಟ್ಟಳಲ್ಲ, ಇದೆಲ್ಲ ನನ್ನ ಪೂರ್ವಜನ್ಮದ ಕರ್ಮಫಲ’ ಎಂದುಕೊಳ್ಳುತ್ತ ಗುಂಡಣ್ಣ ತನ್ನನ್ನು ತಾನೇ ಶಪಿಸಿಕೊಂಡ.

ನಂತರ ಮಂಗಮ್ಮ-ಗುಂಡಣ್ಣ ದಂಪತಿ ಪರಸ್ಪರ ಕೈಹಿಡಿದುಕೊಂಡು ಸ್ವರ್ಗದತ್ತ ಹೆಜ್ಜೆ ಹಾಕಿದರು. ಸ್ವರ್ಗದ ಮಹಾದ್ವಾರ ಅವರಿಗಾಗಿಯೇ ತೆರೆದುಕೊಂಡಿತು. ಒಳಕ್ಕೆ ಪ್ರವೇಶಿಸಿದ ತಕ್ಷಣ ಮಂಗಮ್ಮ ತನ್ನ ಗಂಡನಿಂದ ಕೈ ಕೊಡವಿಕೊಂಡು, ಮೆಲ್ಲಗೆ ಅವನ ಕಿವಿಯಲ್ಲಿ ಪಿಸುಗುಟ್ಟಿದಳು.

“ನೋಡ್ದಾ ಪತಿರಾಯ! ನಾನಲ್ಲಿ ನಿನಗೆ ಶಪಿಸಿದಂತೆ ನಿನಗಿಲ್ಲಿ ನರಕವೇ ಲಭಿಸಿತ್ತು. ಏನೋ ಹೋದರೆ ಹೋಗಲಿ ಅಂತ ದೇವರ ಹತ್ತಿರ ಕಾಡಿಬೇಡಿ ನಿನಗೆ ಸ್ವರ್ಗ ಸಿಗುವಂತೆ ಮಾಡಿದ್ದೀನಿ. ನನ್ನ ಸಹಾಯ, ನಿನ್ನ ಕೃತಜ್ಞತೆ ಎರಡು ಮರಿಬೇಡ. ಇನ್ಮುಂದೆ ಮಾತಾಡದೆ, ತಲೆಯಾಡಿಸದೆ, ಮುದ್ದುಮಾಡಿ ಸಾಕಿದ ಬೆಕ್ಕಿನಂತೆ ‘ನಿನ್ನ ಪಾದವೇ ಗತಿ’ ಅಂತ ನನ್ನ ಕಾಲಡಿ ಬಿದ್ಕೊಂಡು ನಾನು ಹೇಳ್ದಂಗೆ ಕೇಳ್ಕೊಂಡರ‍್ಬೇಕು, ಗೊತ್ತಾಯ್ತು ತಾನೆ?” ಎಂದು ಎಚ್ಚರಿಸಿದಳು.

“ಅಯ್ಯೋ, ಯಾವೊತ್ತು ತಾನೆ ನಿನಗೆ ವಿರುದ್ಧವಾಗಿ ನಾನು ನಡ್ಕೊಂಡಿದ್ದೀನಿ” ಎಂದು ಪತ್ನಿಯ ಹಿಂದೆ ಬಾಯಿ ಕಿಸಿದು ಬೆಕ್ಕಿನಂತೆ ಹೆಜ್ಜೆ ಹಾಕಿದ, ಗುಂಡಣ್ಣ.

Leave a Reply

Your email address will not be published.