ದೈನಂದಿನ ಬದುಕಿನ ರಾಜಕೀಯ

ಸಾಮೂಹಿಕ ಪ್ರತಿಭಟನೆಯನ್ನು ತೀವ್ರಗೊಳಿಸುವುದರಿಂದ ಮಾತ್ರ ವರ್ತಮಾನಕಾಲದ ಅಸಹನೀಯ ಪರಿಸ್ಥಿತಿಯನ್ನು ಸುಧಾರಿಸಬಹುದು.

– ರಾಜೀವ್ ಭಾರ್ಗವ

ದೈನಂದಿನ ಬದುಕಿನ ಮಹತ್ವವನ್ನು, ನಮ್ಮ ಹಿಂದಿನ ಸಮಾಜಗಳು ಬಹುಪಾಲು ಅಲ್ಲಗಳೆದಿವೆ. ಉದಾತ್ತ ಜೀವನದ ವ್ಯಾಖ್ಯಾನ ಕೊಟ್ಟಿರುವ ಅನೇಕ ದಾರ್ಶನಿಕರು, ಮನುಷ್ಯ ಜೀವನವನ್ನು ಎರಡು ರೀತಿಯಲ್ಲಿ ವಿಂಗಡಿಸುತ್ತಾರೆ; ಒಂದು, ಜೀವನದ ಉದಾತ್ತ ಮೌಲ್ಯವನ್ನು ಅನ್ವೇಷಿಸುವ ಬದುಕು. ಇನ್ನೊಂದು, ಮೌಲ್ಯರಹಿತ ಬದುಕು. ನಮ್ಮ ದೈನಂದಿನ ಬದುಕನ್ನು, ಈ ಎರಡನೆಯ ವರ್ಗಕ್ಕೆ ಸೇರಿಸಲಾಗಿದೆ. ಇಂತಹ ಬದುಕು ಸಾರ್ವತ್ರಿಕ, ಆದರೆ, ಅರ್ಥಹೀನವೆಂದೇ ತಿಳಿಯಲಾಗುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಚಿಂತನಪರ ಬದುಕು, ಸಾಹಸಯುಕ್ತ ಬದುಕು, ಯುದ್ಧ, ಗೆಲುವು, ರಾಜಕೀಯ, ಉನ್ನತ ಕಲೆ ಅಥವಾ ಧಾರ್ಮಿಕ ಸೇವೆ ಇತ್ಯಾದಿಗಳು ಮನುಷ್ಯನಿಗೆ ಉದಾತ್ತ ಮೌಲ್ಯಗಳನ್ನು ಗಳಿಸಿಕೊಡುವುದಲ್ಲದೆ, ಜೀವನವನ್ನು ಸಾರ್ಥಕಗೊಳಿಸುತ್ತದೆ ಎನ್ನಲಾಗುತ್ತದೆ.

ಹಾಗೆ ನೋಡಿದರೆ, ಎಲ್ಲಾ ಸಂಪ್ರದಾಯಗಳು ದೈನಂದಿನ ಬದುಕನ್ನು ಗೌಣವೆಂದೇನೂ ಹೇಳುವುದಿಲ್ಲ. ಉದಾಹರಣೆಗೆ, ಬ್ರಾಹ್ಮಣ ಸಂಪ್ರದಾಯದಲ್ಲಿ, ಗ್ರಹಸ್ಥ ಜೀವನವೆಂಬುದು ಶ್ರೇಷ್ಠ ಹಾಗು ಪರಿಪೂರ್ಣ. ಮಾತ್ರವಲ್ಲದೆ, ಧಾರ್ಮಿಕ ಮತ್ತು ತಾತ್ವಿಕವಾಗಿ ಮಹತ್ವದೆನಿಸಿಕೊಂಡಿದೆ. ಅಂತೆಯೇ, ಬೌದ್ಧ ಮತ್ತು ಜೈನ ವ್ಯಾಪಾರಿಗಳು, ತಮ್ಮ ವಾಣಿಜ್ಯ ಜೀವನದಲ್ಲಿಯೇ ಜೀವನಮೌಲ್ಯ ಕಂಡುಕೊಂಡಿದ್ದರು. ಅದೇ ರೀತಿ, ಯೂರೋಪಿನ ಮಧ್ಯಮವರ್ಗ ಕ್ರಿಶ್ಚಿಯನ್ ನೈತಿಕತೆಗೆ ಬೆಲೆಕೊಟ್ಟಿತ್ತು. ಆದಾಗ್ಯೂ, ಈ ಎಲ್ಲಾ ಸಂಪ್ರದಾಯಗಳು, ಕಾರ್ಮಿಕವರ್ಗದ ದೈನಂದಿನ ಬದುಕನ್ನು ನಗಣ್ಯವೆಂದೇ ಪರಿಗಣಿಸಿವೆ.
ದೈನಂದಿನ ಬದುಕಿನ ವೈಶಿಷ್ಟ್ಯಗಳು

ಮೇಲ್ನೋಟಕ್ಕೆ, ದೈನಂದಿನ ಬದುಕು ಕ್ಷುಲ್ಲಕವೆಂದು ಹೇಳುವುದರಲ್ಲಿ ಸ್ವಲ್ಪ ಸತ್ಯಾಂಶಯಿದೆ ಎನಿಸುತ್ತದೆ. ದಿನಂಪ್ರತಿ ಪುನರಾವರ್ತನೆಯಾಗುವ ಚಟುವಟಿಕೆಗಳು ಸಪ್ಪೆಯಾಗಿ ಕಾಣಿಸುವುದೇನೋ ಸಹಜ. ಯಾಕೆಂದರೆ, ಇವು ಯಾವುದೇ ಉತ್ಸಾಹ ಮತ್ತು ಆಶ್ಚರ್ಯ ತರದಷ್ಟು ಪರಿಚಿತವಾಗಿಬಿಡುತ್ತವೆ. ದೈನಂದಿನ ಬದುಕು ಕೇವಲ ದಿನಚರಿಯೆನಿಸಿ ನಮ್ಮ ಅನುಭವದಿಂದ ಹೊರಗುಳಿದು ಅರ್ಥಹೀನವೆನಿಸಿಬಿಡುತ್ತದೆ. ಉದಾಹರಣೆಗೆ, ಪ್ರತಿದಿನ ಹಲ್ಲುಜ್ಜುವುದರಲ್ಲಿ, ಮನೆ ಸ್ವಚ್ಛಗೊಳಿಸುವುದರಲ್ಲಿ, ಅಡುಗೆ ಮಾಡುವುದರಲ್ಲಿ, ಪಾತ್ರೆ ತಿಕ್ಕುವುದರಲ್ಲಿ ಅಥವಾ ಬಟ್ಟೆ ಒಗೆಯುವುದರಲ್ಲಿ ಯಾವ ಉತ್ಸಾಹ, ಆನಂದ ನಾವು ಕಾಣಬಹುದು? ನಿಜ ಹೇಳಬೇಕೆಂದರೆ, ಆರಂಭಿಕ ಖುಷಿಕೊಡುವ ಕೆಲವೊಂದು ಚಟುವಟಿಕೆಗಳು ಕಾಲಕ್ರಮೇಣ ಬೇಸರಹುಟ್ಟಿಸಿ, ಅವುಗಳಿಂದ ಬಿಡುಗಡೆ ಪಡೆಯುವುದಕ್ಕೋಸ್ಕರ ರಜೆಯ ಮೊರೆಹೋಗುತ್ತೇವೆ.

ಈ ಮೇಲಿನ ಕಾರಣಗಳಿಗಾಗಿಯೇ, ದೈನಂದಿನ ಚಟುವಟಿಕೆಗಳನ್ನು, ಮನುಷ್ಯನ ಉದಾತ್ತ ಜೀವನದ ಪರಕೀಯ ಅಥವಾ ನಿರುಪಯುಕ್ತತೆಯ ಅಂಶವೆಂದು, ಹಲವಾರು ದಾರ್ಶನಿಕರು ಗುರುತಿಸಿದ್ದಾರೆ. ಉದಾಹರಣೆಗೆ, ಪುನರಾವರ್ತಿತವಾಗುವ ಮನೆಕೆಲಸ, ಮಕ್ಕಳ ಪಾಲನೆ, ಅದರಿಂದಾಗುವ ಆಯಾಸ, ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡೇ, ಮಾರ್ಟಿನ್ ಹೈಡ್ಡೇಗರ್ ಮುಂತಾದ ಚಿಂತಕರು ದೈನಂದಿನ ಬದುಕನ್ನು, ‘ನಿಷ್ಪ್ರಯೋಜಕ, ಕ್ಷುಲ್ಲಕ, ದೋಷಪೂರಿದ’ವೆಂದು ಕರೆದರು. ಆದರೆ, ಬಡಜನರಿಗೆ ಮಾತ್ರ, ದೈನಂದಿನ ಬದುಕು ನೀರಸವೆನ್ನುವುದಕ್ಕಿಂತ ಮಿಗಿಲಾದ ಅರ್ಥಹೊಂದಿದೆ. ಅವರ ದೃಷ್ಟಿಯಲ್ಲಿ ಇದೊಂದು; ಶ್ರಮದಾಯಕ ನಿರಂತರ ಕೆಲಸ, ಕೆಳಸ್ತರದ ಜೀವನ ನಿರ್ವಹಣೆ, ಉಸಿರುಗಟ್ಟಿಸುವ ಆದರೆ ಅನಿವಾರ್ಯವಾದ ಸಾರ್ವಜನಿಕ ಸಾರಿಗೆಯ ಬಳಕೆ, ಒಪ್ಪೊತ್ತಿನ ಕೂಳಿಗಾಗಿ ಹೋರಾಟ, ಇನ್ನೂ ಹೇಯವಾದ, ಕೈಯಿಂದ ಪಾಯಿಖಾನೆ ಸ್ವಚ್ಛತೆ ಮಾಡುವ ಭಂಗಿ ಕೆಲಸ ಇತ್ಯಾದಿ. ಒಂದು ವೇಳೆ ಮನುಷ್ಯನಿಗೆ ಅದಮ್ಯ ಚೈತನ್ಯವಿಲ್ಲದಿದ್ದಲ್ಲಿ, ಇಂತಹ ನಿಕೃಷ್ಟ ಜೀವನಕ್ರಮ, ಮನುಷ್ಯನ ಕಲ್ಪನೆ ಮತ್ತು ಯೋಚನಾಶಕ್ತಿಯನ್ನು ಕುಗ್ಗಿಸುವುದಲ್ಲದೆ, ಇಂದ್ರಿಯ ಮತ್ತು ಮನಸ್ಸನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸುತ್ತಿತ್ತು.

ಮೇ 1968ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಕಾರ್ಮಿಕ ವಿದ್ಯಾರ್ಥಿಗಳ ಹಿಂಸಾತ್ಮಕ ದಂಗೆಯ ಸಂದರ್ಭದಲ್ಲಿ ದೈನಂದಿನ ಚಟುವಟಿಕೆಗಳನ್ನು ಕೆಲವು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು.

ಯೂರೋಪಿನಲ್ಲಿ ಸಹ, ಭಯಾನಕ ಮಹಾಯುದ್ಧಗಳು ಕೊನೆಗೊಂಡ ನಂತರವೇ, ದೈನಂದಿನ ಬದುಕಿನ ಮಹತ್ವವನ್ನು ಅರಿಯಲಾಯಿತು. ಫ್ರಾನ್ಸ್ ದೇಶ ನಿಶಸ್ತ್ರಗೊಂಡು, ಸಾಮಾನ್ಯ ಜನರಿಗೆ ದಿನನಿತ್ಯದ ಅಗತ್ಯಗಳ ಸರಬರಾಜು ಸಲೀಸಾದ ಮೇಲೆ, ದೈನಂದಿಕತೆ ಅಲ್ಲಿ ಒಂದು ಪ್ರಮುಖ ಚಿಂತನ ಕ್ರಮವಾಗಿ ಹೊರಹೊಮ್ಮಿತು. ಮೇ 1968ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಕಾರ್ಮಿಕ ವಿದ್ಯಾರ್ಥಿಗಳ ಹಿಂಸಾತ್ಮಕ ದಂಗೆಯ ಸಂದರ್ಭದಲ್ಲಿ ದೈನಂದಿನ ಚಟುವಟಿಕೆಗಳನ್ನು ಕೆಲವು ವಾರಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದು ಸಮರ್ಥನೀಯವಲ್ಲವೆಂದು ಅರಿವಾದ ನಂತರ, ದೈನಂದಿನ ಬದುಕಿನ ಆಸಕ್ತಿ ಪುನರುಜ್ಜೀವನಗೊಳಿಸಲಾಯಿತು.

ಇದಕ್ಕೆ ಭಿನ್ನವಾಗಿ, ಭಾರತದಲ್ಲಿ ಮಾತ್ರ ದೈನಂದಿನ ಬದುಕು ಪ್ರತಿ ಸೆಕೆಂಡಿಗೂ ಕಣ್ಣೆದುರು ಗೋಚರಿಸುತ್ತದೆ. ಇಲ್ಲಿ ಜನಸಾಮಾನ್ಯರಿಗೆ, ದೈನಂದಿನ ಬದುಕಿನ ಯಾವುದಾದರೊಂದು ರೂಪ ಅನುಭವಕ್ಕೆ ಬರುತ್ತಲೇ ಇರುತ್ತದೆ. ಇದರಿಂದ ನಾವು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಬಹಳ ಜನರನ್ನು ದಿನಂಪ್ರತಿ ಹಿಂಡಿ ಹಿಪ್ಪೆಯಾಗಿಸುತ್ತದೆ, ಮಾತ್ರವಲ್ಲ, ಅವರ ಆಸೆಗಳನ್ನು ಸಹ ಕಮರಿಸುತ್ತದೆ. ಇನ್ನೂ ಮುಂದುವರಿದು, ಅವರನ್ನು ಹತಾಶೆಗೆ ತಳ್ಳಿ, ಪರಿಸ್ಥಿಯ ಬಗ್ಗೆ ಕೋಪ ಆವೇಶ ಜಾಗ್ರತಗೊಳಿಸಿ ದಂಗೆ ಏಳುವಂತೆ ಪ್ರೇರೇಪಿಸುತ್ತದೆ. ಬಹುಶಃ, ನಮಗೆ ದೈನಂದಿನ ನೋವುಗಳಿಂದ ಮುಕ್ತಿ ಸಿಕ್ಕಾಗ ಅಥವಾ ನಮ್ಮ ಕನಸುಗಳು ವಾಸ್ತವದಲ್ಲಿ ಸಾಕಾರಗೊಂಡಾಗ, ದಂಗೆ ಅಥವಾ ಯುದ್ಧದಿಂದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ಅಗತ್ಯ ನಮಗಿರುವುದಿಲ್ಲ.

ನನಗನಿಸುವಂತೆ, ನಿರ್ಗತಿಕರಿಗೆ ದೈನಂದಿನ ಬದುಕು ಒಂದು ನರಕ ಯಾತನೆ. ಇವರನ್ನು ಹೊರತುಪಡಿಸಿ, ಭಾರತದ ಮಧ್ಯಮ ವರ್ಗದ ನಗರವಾಸಿಗಳ ಬದುಕನ್ನು ಗಮನಿಸೋಣ. ಕೆಲವು ಸಮಸ್ಯೆಗಳನ್ನು ಉದಾಹರಿಸುವುದಾದರೆ, ಬಾರದ ಬಸ್ ಗಾಗಿ ನಿಲ್ದಾಣದಲ್ಲಿ ದೀರ್ಘ ಸಮಯ ಕಾಯುವಿಕೆ, ಮೀಟರ್ ಗೆ ಅನುಗುಣವಾಗಿ ಒಡಿಸದ ಆಟೋಗಳು, ಸಮಯಕ್ಕೆ ಸರಿಯಾಗಿ ಬಾರದ ರೈಲುಗಳು, ನೀರು ಬಾರದ ನಲ್ಲಿಗಳು, ಸುಡು ಬೇಸಿಗೆಯಲ್ಲಿ ಅಸಹನೀಯವೆನಿಸುವ ವಿದ್ಯುತ್ ಕಡಿತ, ಮನರಂಜನೆಯ ಏಕೈಕ ಮಾಧ್ಯಮ ಟೆಲಿವಿಷನ್ ಇಲ್ಲದ ಸಂಜೆಗಳು, ಬಿಲ್ ಕಟ್ಟಲು ಪ್ರತಿ ತಿಂಗಳು ನಿಲ್ಲಬೇಕಾದ ಉದ್ದನೆಯ ಸರದಿ ಸಾಲುಗಳು, ತಪ್ಪಾಗಿ ಹೇರಿದ ತೆರಿಗೆ ಸರಿಪಡಿಸಲು ಸರ್ಕಾರಿ ಮೇಜಿನಿಂದ ಮೇಜಿಗೆ ವ್ಯರ್ಥ ತಿರುಗಾಟ, ಅಪರೂಪದ ಮನೋರಂಜನೆ ಆಸ್ವಾದಿಸುತ್ತಿರುವಾಗ ಅಡ್ಡಿಪಡಿಸುವ ರಿಪೇರಿ ಕೆಲಸದವರು, ವಿಧಿಯಿಲ್ಲದೆ ಉಪಯೋಗಿಸಬೇಕಾದ ಕೊಳಕು ಸಾರ್ವಜನಿಕ ಶೌಚಾಲಯಗಳು, ಸೆಗಣಿ ಅಥವಾ ಗುಂಡಿಗಳಿಂದ ತಪ್ಪಿಸಿಕೊಳ್ಳಲು ಬಹಳ ಜಾಗ್ರತೆಯಿಂದ ನಡೆಯಬೇಕಾದ ಕಾಲುದಾರಿಗಳು, ಮಬ್ಬುಕತ್ತಲು ದಾರಿಯಲ್ಲಿ ಮಗಳು ಮನೆಗೆ ವಾಪಸಾಗುತ್ತಾಳೋ ಇಲ್ಲವೋ ಎನ್ನುವ ಆತಂಕ, ಆಡಲು ಬೇರೆ ಸ್ಥಳವಿಲ್ಲದೆ ಅಪಘಾತ ಭೀತಿಯ ನಡುವೆ ಬೀದಿಯಲ್ಲಿ ಆಡುವ ಮಕ್ಕಳು, ಸದಾ ಡೆಂಗ್ಯೂ, ಮಲೇರಿಯಾದ ಭೀತಿ, ಯಾವಾಗಲೂ ಹಾಸಿಗೆ ಕೊರತೆಯಿರುವ ಸಾರ್ವಜನಿಕ ಆಸ್ಪತ್ರೆಗಳು, ಸಮಯಕ್ಕೆ ಸರಿಯಾಗಿ ತಲುಪದ ಆಂಬುಲೆನ್ಸ್ ಗಳು, ತುಸು ಮಳೆಯಾದರೆ ಕಾರಂಜಿಯಾಗುವ ರಸ್ತೆಗಳ ಟ್ರಾಫಿಕ್ ಮಧ್ಯೆ ಸಿಕ್ಕಿ ಒದ್ದಾಟ…

ಗಮನಿಸಿದರೆ, ಭಾರತದಲ್ಲಿರುವ ಸುಮಾರು 800 ಮಿಲಿಯನ್ ಮೊಬೈಲ್ ಬಳಕೆದಾರರು ಸದಾ ಸರಕಾರೀ ಸಂಸ್ಥೆಗಳ ಸರ್ಪಗಾವಲು, ಮತ್ತು ಕೊಳ್ಳೆಹೊಡೆಯುವ ಖಾಸಗಿ ಸಂಸ್ಥೆಗಳ ಗುರಿಯ ಬಲಿಪಶುಗಳಲ್ಲವೇ?

ಇವುಗಳೊಂದಿಗೆ, ಕಲುಷಿತ ನೀರು, ಕಲುಷಿತ ಗಾಳಿ, ಹೀಗೆ ಸಮಸ್ಯೆಗಳು ಲೆಕ್ಕವಿಲ್ಲದಷ್ಟು. ಹಾಗೆ ಗಮನಿಸಿದರೆ, ಇವುಗಳಲ್ಲಿ ಅನೇಕ ಸಮಸ್ಯೆಗಳು ಮೇಲ್ವರ್ಗದವರನ್ನೂ ತಟ್ಟುತ್ತವೆ, ಅವರೆಷ್ಟು ಉತ್ತಮ ಆರೋಗ್ಯ, ಶುದ್ಧ ಗಾಳಿ ಅಥವಾ ವೇಗದ ಕಾರುಗಳನ್ನು ಖರೀದಿಸಿದರೂ ಕೂಡ. ಹಾಗೆ ಗಮನಿಸಿದರೆ, ಭಾರತದಲ್ಲಿರುವ ಸುಮಾರು 800 ಮಿಲಿಯನ್ ಮೊಬೈಲ್ ಬಳಕೆದಾರರು ಸದಾ ಸರಕಾರೀ ಸಂಸ್ಥೆಗಳ ಸರ್ಪಗಾವಲು, ಮತ್ತು ಕೊಳ್ಳೆಹೊಡೆಯುವ ಖಾಸಗಿ ಸಂಸ್ಥೆಗಳ ಗುರಿಯ ಬಲಿಪಶುಗಳಲ್ಲವೇ? ಅಂತೆಯೇ, ಸರಕಾರೀ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಅಸಮರ್ಥತೆ, ಅತಿಯಾದ ಯಾಂತ್ರೀಕರಣ, ಜೊತೆಗೆ, ನಮ್ಮ ಅಸ್ಪಷ್ಟ ಚಿಂತನಾಕ್ರಮದಿಂದಾಗಿ, ದೈನಂದಿನ ಬದುಕು ನಿರಂತರವಾಗಿ ತೊಂದರೆಗೊಳಗಾಗುತ್ತಿದೆ.

ಸಾಮೂಹಿಕ ಕ್ರಮ

ಮೇಲೆ ಗುರುತಿಸಿದ ದೈನಂದಿನ ಸಮಸ್ಯೆಗಳು ತಮ್ಮಷ್ಟಕ್ಕೆ ಅಥವಾ ಆಯಾಯ ಫಲಾನುಭವಿಗಳ ಆಶಯದಂತೆ ಕಣ್ಮರೆಯಾಗುವುದಿಲ್ಲ. ಅಲ್ಲದೆ, ವೈಯಕ್ತಿಕ ಪ್ರಯತ್ನಗಳಿಂದ ಅವುಗಳನ್ನು ತಡೆಗಟ್ಟಲು ಸಾಧ್ಯವೂ ಇಲ್ಲ. ಮಾತ್ರವಲ್ಲ, ಈಗಾಗಲೇ ಆಗಿರುವ ಹಾನಿ ಸರಿಪಡಿಸಲು, ಸದುದ್ದೇಶ ಹೊಂದಿದ ಒಬ್ಬೊಂಟಿ ಹೋರಾಟಗಾರರಿಂದಲೂ ಸಾಧ್ಯವಿಲ್ಲ. ಬಹುಮಟ್ಟಿಗೆ ಖಾಸಗಿಯಾಗಿ ಅನುಭವಿಸುವ ವಿಶೇಷ ಸೌಲಭ್ಯಗಳನ್ನು ಎಲ್ಲರೂ ಪಡೆಯುವಂತಾಗಲು, ಸಾಮೂಹಿಕ ಪ್ರಯತ್ನಗಳ ಅಗತ್ಯವಿದೆ. ಸಾರ್ವಜನಿಕ ಪ್ರತಿಭಟನೆಗಳ ಹೊರತು, ಈ ಅಸಹನೀಯ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಹೇಗೆ ಸಾಧ್ಯ? ಕೇವಲ ಸಾಮೂಹಿಕ ರಾಜಕಾರಣದಿಂದ ಮಾತ್ರ ದೈನಂದಿನ ಬದುಕನ್ನು ಉಳಿಸಿಕೊಳ್ಳಬಹುದು.

ಈ ನಿಟ್ಟಿನಲ್ಲಿ, ನಮ್ಮ ನಡುವಿನ ಪ್ರಾದೇಶಿಕ, ಧಾರ್ಮಿಕ ಮತ್ತು ಜಾತಿ ಭಿನ್ನತೆಗಳನ್ನೆಲ್ಲಾ ಬದಿಗಿಟ್ಟು ಮೈತ್ರಿಯ ಮೂಲಕ ದೈನಂದಿನ ಬದುಕಿನ ಘನತೆ ಪುನಃ ಎತ್ತಿಹಿಡಿಯಬೇಕಿದೆ. ನಾವು ದೈನಂದಿನ ಬದುಕಿನ ಲಯ ವಿನ್ಯಾಸಗಳನ್ನು ಸವಿಯಲು, ನಮ್ಮ ದಿನನಿತ್ಯದ ಆಗುಹೋಗುಗಳ ಸಂಪೂರ್ಣ ಚಿತ್ರಣ ಬದಲಾಯಿಸುವ ರಾಜಕೀಯದ ಅಗತ್ಯವಿದೆ. ಮುಂಬರುವ ದಶಕಗಳ ರಾಜಕೀಯವು, ದೈನಂದಿನ ಬದುಕಿನ ಘನತೆ, ದಿನ ನಿತ್ಯದ ಅಗತ್ಯಗಳ ಸುಗಮ ಮತ್ತು ನಿರಂತರ ಪೂರೈಕೆಯ ಸುತ್ತ ಗಮನಹರಿಸುವ ಅಗತ್ಯವಿದೆ-ಶುದ್ಧ ಗಾಳಿ, ನೀರು, ನೈರ್ಮಲ್ಯ, ಉತ್ತಮ ರಸ್ತೆ ಮತ್ತು ಸಾರಿಗೆ ವ್ಯವಸ್ಥೆ, ಶುದ್ಧ ಆಹಾರ, ಸುರಕ್ಷಿತ ಖಾಸಗಿ ಜೀವನ ಇತ್ಯಾದಿಗಳು.

ರಾಜಕೀಯವು, ಜನರ ಮೂಲಭೂತ ಅಗತ್ಯಗಳ ಪೂರೈಕೆ ಮತ್ತು ಸಾಮಾನ್ಯ ಮಟ್ಟದ ಜೀವನ ಭದ್ರಪಡಿಸುವುದನ್ನು ಒಳಗೊಂಡಿರುತ್ತದೆ. ನಾವೆಲ್ಲರೂ ಒಂದು ಸರಳ ಜೀವನ ಮತ್ತು ನಮಗೆ ಅದನ್ನು ಒದಗಿಸುವ ಸರಕಾರದ ನಿರೀಕ್ಷೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ರಾಜಕೀಯವು, ಸುಖೀರಾಜ್ಯದ ಹುಸಿಕನಸು ಕೊಡುವ ಬದಲು, ದೈನಂದಿನ ಬದುಕಿನ ಕಷ್ಟಗಳತ್ತ ಗಮನ ಹರಿಸಬೇಕಿದೆ. ಕೊನೆಯದಾಗಿ, ಉಜ್ವಲ ಭವಿಷ್ಯದ ಟೊಳ್ಳು ಭರವಸೆ ಗಳಿಂದ ಹಾಗು ಮತ್ತೆ ಮತ್ತೆ ಬರುವ ಚುನಾವಣೆಗಳೆಂಬ ವೈಭವೀಕೃತ ಹಬ್ಬಗಳಿಂದ, ದೈನಂದಿನ ಬದುಕನ್ನು ಎಷ್ಟು ಕಾಲದವರೆಗೆ ಮೂಲೆಗುಂಪಾಗಿಸಬಹುದು?

*ಲೇಖಕರು ನವದೆಹಲಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರು.

ಸೌಜನ್ಯ: ದಿ ಹಿಂದೂ
ಅನುವಾದ: ಡಾ.ಜ್ಯೋತಿ

Leave a Reply

Your email address will not be published.